Friday, 30 December 2016

ಕುಮಾರ್ ಬಂಗಾರಪ್ಪ ಆರೋಪ : ಕಾಗೋಡು ಮೌನಕ್ಕೆ ಶರಣು 
 ಶಮನಕ್ಕೆ ಮುಂದಾಗದ ವರಿಷ್ಠರು * ಸೊರಬ ಕಾಂಗ್ರೆಸ್‌ಗೆ ತೀವ್ರ ಪೆಟ್ಟು





ಶಿವಮೊಗ್ಗ :  ಮಾಜಿ ಸಚಿವ ಕುಮಾರ್ ಬಂಗಾರಪ್ಪ ಪಕ್ಷದ ಹಿರಿಯ ಮುಖಂಡ,  ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ವಿರುದ್ದ ನಡೆಸುತ್ತಿರುವ ವಾಗ್ದಾಳಿ ಮುಂದುವರೆಸಿದ್ದಾರೆ. ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ  ಕಾಗೋಡು ಮೌನಕ್ಕೆ ಶರಣಾಗಿದ್ದಾರೆ. ಪಕ್ಷದ ಸ್ಥಳೀಯ ಮುಖಂಡರು ಕುಮಾರ್‌ಗೆ ಬುದ್ಧಿ ಹೇಳಿದ್ದರೂ ಅವರು ಸಮಾಧಾನಗೊಳ್ಳುವ ಲಕ್ಷಣ ಕಂಡುಬರುತ್ತಿಲ್ಲ. ಇದು ಕುಮಾರ್ ತಮ್ಮ ಭವಿಷ್ಯಕ್ಕೆ ಕಂಟಕ ತಂದುಕೊಳ್ಳುತ್ತಿರುವುದರ ಮುನ್ಸೂಚನೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ೆ ಪಕ್ಷದ ರಾಜ್ಯ ಮುಖಂಡರಿಗೆ ಜಿಲ್ಲಾ ಕಾಂಗ್ರೆಸ್ ಎಲ್ಲ ಬೆಳವಣಿಗೆಗಳ ಮಾಹಿತಿಯನ್ನು ಕೆಲವು ದಿನಗಳ ಹಿಂದೆಯೇ ಇದೇ ರೀತಿ ವಿವಾದ ಸೃಷ್ಟಿಯಾದಾಗಲೇ ನೀಡಿದೆ.  ಪಕ್ಷದ ಮುಖಂಡರು ಕುಮಾರ್ ಜೊತೆ ಮಾತನಾಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ. ನ. ಶ್ರೀನಿವಾಸ ಸಹ ಕುಮಾರ್‌ಗೆ ಆಗಿರುವ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ್ದರು. ಇಷ್ಟಾದರೂ ಕುಮಾರ್ ಸುಮ್ಮನಿರುವ ಲಕ್ಷಣ ಕಂಡುಬರುತ್ತಿಲ್ಲ. ಇದರರ್ಥ ಪಕ್ಷದಿಂದ ಹೊರಹೋಗಲು ಅವರೇನಾದರೂ ಯೋಚನೆ ಮಾಡಿದ್ದಾರೆಯೇ, ಬೇರೆ ಪಕ್ಷದವರು ಬಲೆ ಬೀಸಿದ್ದಾರೆಯೇ, ಟಿಕೆಟ್ ಆಮಿಷವೇನಾದರೂ  ನೀಡಲ್ಪಟ್ಟಿದೆಯೇ ಎಂಬೆಲ್ಲ ಚರ್ಚೆಗೆ ಇದು ಗ್ರಾಸವಾಗಿದೆ.
ಕೆಲವು ದಿನಗಳ ಹಿಂದೆ ಕುಮಾರ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆಂಬ ವರದಿ ಕೇಳಿಬಂದಿತ್ತು. ಆದರೆ ಅದನ್ನು ಅವರೇ ನಿರಾಕರಿಸಿದ್ದರು. ಇದು ಎಷ್ಟರ ಮಟ್ಟಿಗೆ ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೆ ಮತ್ತೆ ಮತ್ತೆ ಪಕ್ಷದ ಹಿರಿಯ ನಾಯಕನ ವಿರುದ್ಧವೇ ಗುಟುರು ಹಾಕುತ್ತಿರುವುದರ ಹಿಂದೆ ಏನಾದರೂ ಕೈವಾಡ ಇರಬಹುದೇ ಎಂಬ ಶಂಕೆಯೂ ಕಾಂಗ್ರೆಸಿಗರಲ್ಲಿ ಈಗ ವ್ಯಕ್ತವಾಗುತ್ತಿದೆ. ಎರಡನೆಯದಾಗಿ, ಈಡಿಗ ಜನಾಂಗದ ನಾಯಕನಾಗಿ ಕಾಗೋಡು ಬೆಳೆದಿದ್ದಾರೆ. ಕುಮಾರ್‌ಗೆ ಇದು ಸಾಧ್ಯವಾಗಲೇ ಇಲ್ಲ. ಇದೇ ವೇಳೆ ಮಧು ಸಹ ಕಾಗೋಡು ನಂತರ ನಾಯಕನಾಗಬಲ್ಲ ವರ್ಚಸ್ಸು ಹೊಂದಿದ್ದಾರೆ. ಸದ್ಯದ ಮಟ್ಟಿಗೆ ಸೊರಬದಲ್ಲಿ ಮಧುಗೆ ಸಮಾನವಾಗಿ ಪೈಪೋಟಿ ಕೊಡಬಲ್ಲವರು ಯಾವ ಪಕ್ಷದಲ್ಲೂ ಇಲ್ಲ.
 ಬಿಜೆಪಿಯವರಿಗೂ ಉತ್ತಮ ಉಮೇದುವಾರನ ಅವಶ್ಯಕತೆ ಅಲ್ಲಿದೆ.  ಕಾಂಗ್ರೆಸ್‌ಗೆ ಕುಮಾರ್ ಬಿಟ್ಟರೆ ಉಮೇದುವಾರರೇ ಇಲ್ಲದ ಸ್ಥಿತಿ. ಕುಮಾರ್ ಪರಿಸ್ಥಿತಿಯೂ ಅಲ್ಲಿ ಚೆನ್ನಾಗಿಲ್ಲ. ಇದು ಅಲ್ಲಿನ ವಿಚಿತ್ರ ರಾಜಕೀಯ ಬೆಳವಣಿಗೆಯೂ ಹೌದು. ಬೇರೆ ಬೇರೆ ಪಕ್ಷಗಳಲ್ಲಿದ್ದರೂ ಮಧು ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪ ನಡುವಿನ ವೈಯಕ್ತಿಕ ಸಂಬಂಧ ಮೊದಲಿನಿಂದಲೂ ಚೆನ್ನಾಗಿದೆ. ಇದು ಕುಮಾರ್ ಕೆರಳಲು ಮೂಲ ಕಾರಣ ಎನ್ನುವುದು ಸೂರ್ಯನಷ್ಟೇ ಸತ್ಯ. ಜೊತೆಗೆ, ಮಧು ಹೇಳಿದ ಕೆಲಸಗಳನ್ನು ಕಾಗೋಡು ಮಾಡಿಕೊಡುತ್ತಿದ್ದಾರೆ. ಆ ಮೂಲಕ ತನ್ನನ್ನು ತುಳಿಯುತ್ತಿದ್ದಾರೆ ಎನ್ನುವ ಆರೋಪ ಕುಮಾರ್ ಅವರದ್ದು. ಕೆಲವು ವರ್ಷಗಳಿಂದ, ನಾನಾ ಕಾರಣಗಳಿಂದ ಕಾಗೋಡು ಹಾಗೂ ಕುಮಾರ್ ನಡುವಿನ ಸಂಬಂಧ ಹಳಸಿರುವುದು ಇತಿಹಾಸ.
 ಇತ್ತೀಚಿನ ದಿನಗಳಲ್ಲಿ ಈ ಇಬ್ಬರು ಮುಖಂಡರು ಪಕ್ಷದ ವೇದಿಕೆಗಳಲ್ಲಿ ಕಾಣಿಸಿಕೊಂಡಿಲ್ಲ. ಇದು ಇವರಿಬ್ಬರ ನಡುವೆ ಹಳಸಿರುವ ಸಂಬಂಧಕ್ಕೆ ನಿದರ್ಶನವಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಾಗೋಡು ತಿಮ್ಮಪ್ಪ ಹಾಳುಗೆಡುವುತ್ತಿದ್ದಾರೆ. ಪರೋಕ್ಷವಾಗಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇವರನ್ನು ಪಕ್ಷದಿಂದ ಉಚ್ಛಾಟಿಸಿ ಎಂದು ಮುಖಂಡರಿಗೆ ಆಗ್ರಹಿಸುತ್ತಿದ್ದಾರೆ. ಮೊನ್ನೆ ಎಂಎಲ್‌ಸಿ ಆರ್. ಪ್ರಸನ್ನಕುಮಾರ್ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವಿವಾದ ಹೇಗೆ ಅಂತ್ಯಗೊಳ್ಳುತ್ತದೆ ಎನ್ನುವುದು ಕಾಂಗ್ರೆಸ್ಸಿಗರಿಗೇ ಗೊತ್ತಿಲ್ಲ. ಹಾಗಂತ ಇದು ಇಡೀ ಜಿಲ್ಲೆಗೇನೂ ಬಾಧಿತವಾಗದು. ಏಕೆಂದರೆ ಸೊರಬ, ಸಾಗರದಲ್ಲಿ ಇವರಿಬ್ಬರ ಗಲಾಟೆಗೆ ಮಹತ್ವವಿದೆ. ಆದರೆ ಕುಮಾರ್ ಇದೇ ರೀತಿ ಮುಂದುವರೆದರೆ ಅವರ ಭವಿಷ್ಯಕ್ಕೇ ಮುಳುವು ಖಚಿತ ಎನ್ನಲೇನೂ ಅಡ್ಡಿಯಿಲ್ಲ.    


ಮಧ್ಯಪ್ರವೇಶಿಸುತ್ತಿಲ್ಲ
 ಕುಮಾರ್ ಕಾಗೋಡು ವಿರುದ್ದ ಬಹಿರಂಗವಾಗಿ ನಿರಂತರ ವಾಗ್ದಾಳಿ ನಡೆಸುತ್ತಿರುವುದು ಜಿಲ್ಲಾ ಕಾಂಗ್ರೆಸ್ ಮುಖಂಡರಿಗೆ ತೀವ್ರ ಇರುಸುಮುರುಸು ಉಂಟು ಮಾಡಿದೆ. ಅವರನ್ನು ಸಮಾಧಾನಗೊಳಿಸುವ ಎಲ್ಲ ಪ್ರಯತ್ನಗಳು ವಿಫಲವಾಗಿದ್ದು, ವರಿಷ್ಠರಿಗೆ ವರದಿ ರವಾನಿಸಿ ಮೌನಕ್ಕೆ ಶರಣಾಗಿದ್ದಾರೆ. ಏನೂ ಹೇಳಲಾಗದ ಸ್ಥಿತಿಯಲ್ಲಿ ಮುಖಂಡರಿದ್ದು, ಈ ಗೊಂದಲದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಚುನಾವಣೆಗೆ ಒಂದು ವರ್ಷ 4 ತಿಂಗಳು ಬಾಕಿ ಇರುವಂತೆಯೇ ಕುಮಾರ್ ಈ ರೀತಿ ಹೇಳಿಕೆ ಮೂಲಕ ಸಕ್ರಿಯರಾಗುತ್ತಿದ್ದಾರೆ.


ಕುಮಾರ್ ಆರೋಪ
  ಕೆಲವು ತಿಂಗಳ ಹಿಂದೆ ಸೊರಬ ತಾಲೂಕಿನ ಬಗರ್‌ಹುಕುಂ ಸಮಿತಿಗೆ ಸದಸ್ಯರ ನೇಮಕವನ್ನು ರಾಜ್ಯ ಸರ್ಕಾರ ಮಾಡಿತ್ತು. ಸಮಿತಿಯ ಸದಸ್ಯರು ಜೆಡಿಎಸ್ ಪಕ್ಷಕ್ಕೆ ಸೇರಿದವರಾಗಿದ್ದಾರೆ ಎಂಬುವುದು ಕುಮಾರ್ ಬಂಗಾರಪ್ಪರ ಆರೋಪವಾಗಿತ್ತು. ಸೊರಬ ಶಾಸಕ ಮಧು ಬಂಗಾರಪ್ಪರವರು ಸೂಚಿಸಿದ ವ್ಯಕ್ತಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪರವರು ಮಣೆ ಹಾಕಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎಂದು ಕುಮಾರ್ ದೂರಿದ್ದರು. ಸಮಿತಿಯ ಸದಸ್ಯರ ಬದಲಾವಣೆಗೆ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಹಾಗೂ ಪಕ್ಷದ ಮುಖಂಡರಿಗೆ ಒತ್ತಾಯಿಸಿದ್ದರು. ಇದರ ಹೊರತಾಗಿಯೂ ಸಮಿತಿಯ ಸದಸ್ಯರ ಬದಲಾವಣೆ ಮಾಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ಕುಮಾರ್‌ರವರು ಕಾಗೋಡು ತಿಮ್ಮಪ್ಪ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದಾರೆ. 
....................................... 

 ಮರಳಿನ ಹಾಹಾಕಾರ ಮುಗಿಯುವುದೆಂದು?

ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಬಡ - ಮಧ್ಯಮ ವರ್ಗದ ನಾಗರಿಕರಿಗೆ ಸುಲಭವಾಗಿ ಮರಳ ಲಭ್ಯವಾಗುವ ವ್ಯವಸ್ಥೆ ಜಾರಿಗೊಳಿಸಬೇಕು. ಹೊಸ ಮರಳು ನೀತಿಯನ್ನು ಜಿಲ್ಲೆಯಲ್ಲಿ ಕೂಡಲೇ ಜಾರಿಗೊಳಿಸಬೇಕು. ಕಾಳಸಂತೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಮರಳು ವಿತರಣೆಯಲ್ಲಿ ಈ ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಕಾನೂನುಬಾಹಿರ ಮಾರ್ಗಗಳಿಗೆ ಬ್ರೇಕ್ ಹಾಕಬೇಕಿದೆ.

ಶಿವಮೊಗ್ಗ, ಡಿ. 23: ’ದೀಪದ ಬುಡದಲ್ಲಿ ಕತ್ತಲು’ ಎಂಬ ಮಾತಿನಂತೆ ರಾಜ್ಯದಲ್ಲಿ ಅತಿ ಹೆಚ್ಚು ಮರಳು ಲಭ್ಯವಾಗುವ ಜಿಲ್ಲೆಗಳಲ್ಲೊಂದಾದ ಶಿವಮೊಗ್ಗದಲ್ಲಿ ಮರಳಿನ ತೀವ್ರ ಅಭಾವ ತಲೆದೋರಿದೆ. ಇದರಿಂದ ಮನೆ, ಇತರೆ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಬಡ - ಮಧ್ಯಮ ವರ್ಗದವರ ಪಾಡು ಹೇಳತೀರದಾಗಿದೆ. ಕೆಲವರು ಅರ್ಧಕ್ಕೆ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿದ್ದಾರೆ.
ಡಿಸೆಂಬರ್ ತಿಂಗಳು ಅಂತ್ಯಗೊಂಡು ಹೊಸ ವರ್ಷದ ಆಗಮನಕ್ಕೆ ದಿನಗಣನೆ ಆರಂಭವಾಗಿದೆ. ಆದಾಗ್ಯೂ ಜಿಲ್ಲಾಡಳಿತದಿಂದ ಮರಳು ವಿತರಣೆ ಪ್ರಕ್ರಿಯೆ ಆರಂಭವಾಗಿಲ್ಲ. ಸದ್ಯದ ಸ್ಥಿತಿಗತಿ ಗಮನಿಸಿದರೆ ಸಾರ್ವಜನಿಕರಿಂದ ಜಿಲ್ಲಾಡಳಿತದಿಂದ ಮರಳು ಲಭ್ಯವಾಗುವ ಸಾಧ್ಯತೆಯೂ ಇಲ್ಲವಾಗಿದೆ. ಮತ್ತೊಂದೆಡೆ, ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಕೆಲವು ಬಡ, ಮಧ್ಯಮ ವರ್ಗದವರು ಜಿಲ್ಲಾಡಳಿತದಿಂದ ವಿತರಣೆಯಾಗುವ ಮರಳು ಪಡೆಯಲು ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ.
 ಒಂದೆಡೆ ಜಿಲ್ಲಾಡಳಿತ ಇಲ್ಲಿಯವರೆಗೂ ಮರಳು ವಿತರಣೆ ಪ್ರಕ್ರಿಯೆ ಆರಂಭಿಸಿಲ್ಲ. ಆದರೆ ಇನ್ನೊಂದೆಡೆ ಜಿಲ್ಲೆಯ ವಿವಿಧೆಡೆ ನದಿ ಪಾತ್ರಗಳಿಂದ ಯದ್ವತದ್ವಾ ಪ್ರಮಾಣದಲ್ಲಿ ಮರಳು ಲೂಟಿಯಾಗುತ್ತಿರುವ ಮಾಹಿತಿಗಳು ಕೇಳಿಬರುತ್ತಿವೆ. ಕೆಲ ದಂಧೆಕೋರರು ರಾತ್ರಿ-ಹಗಲುಗಳ ಪರಿವೆಯೇ ಇಲ್ಲದೆ ನದಿ ಪಾತ್ರಗಳಿಂದ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ, ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಶಿವಮೊಗ್ಗ ನಗರದಲ್ಲಿ 6 ರಿಂದ 8 ಗಜದ ಲೋಡ್ ಮರಳಿಗೆ 35 ರಿಂದ 45 ಸಾವಿರಕ್ಕೆ ಕಾಳಸಂತೆಕೋರರು ಮಾರಾಟ ಮಾಡುತ್ತಿದ್ದಾರೆ. ಕಟ್ಟಡ ನಿರ್ಮಾಣ ಮಾಡುತ್ತಿರುವವರು ಇದೇ ಮೊತ್ತ ಪಾವತಿಸಿ ಮರಳು ಖರೀದಿಸುತ್ತಿದ್ದಾರೆ. ಇಷ್ಟೊಂದು ಮೊತ್ತ ಪಾವತಿಸಿ ಮರಳು ಖರೀದಿಸಲಾಗದವರು ಎಂ ಸ್ಯಾಂಡ್ ಮತ್ತೀತರ ಪರ್ಯಾಯ ಮಾರ್ಗಗಳತ್ತ ಗಮನಹರಿಸುತ್ತಿದ್ದಾರೆ. ಇನ್ನೂ ಕೆಲವರು ಜಿಲ್ಲಾಡಳಿತ ವಿತರಣೆ ಮಾಡುವ ಮರಳಿಗಾಗಿ ಕಾದು ಕುಳಿತಿದ್ದಾರೆ.
  ಮಳೆಗಾಲ ಮುಗಿದು ಚಳಿಗಾಲದ ಅವಧಿ ಪೂರ್ಣಗೊಳ್ಳುವ ಹಂತದಲ್ಲಿದೆ. ಆದಾಗ್ಯೂ ಇಲ್ಲಿಯವರೆಗೂ ಜಿಲ್ಲಾಡಳಿತದಿಂದ ಮರಳು ವಿತರಣೆ ಕಾರ್ಯ ಆರಂಭವಾಗಿಲ್ಲ. ಇನ್ನೊಂದೆಡೆ ಎಂ ಸ್ಯಾಂಡ್‌ನ ಬೆಲೆ ಕೂಡ ದುಬಾರಿಯಾಗಿದೆ. ಕಾಳಸಂತೆಯಲ್ಲಿ ದುಬಾರಿ ದರ ತೆತ್ತು ಮರಳು ಖರೀದಿಸಲು ಬಡವರ ಕೈಯಲ್ಲಿ ಸಾಧ್ಯವಿಲ್ಲ. ಇದರಿಂದ ಮನೆ ನಿರ್ಮಾಣ ಮಾಡುವುದೇ ಕಷ್ಟವಾಗಿದೆ.
ಕಾಳಸಂತೆಯಲ್ಲಿ ಬೇಕಾದಷ್ಟು ಮರಳು ಸಿಗುತ್ತಿದೆ. ನಿಯಮಾನುಸಾರ ಮರಳು ಸಿಗುತ್ತಿಲ್ಲ. ಜಿಲ್ಲಾಡಳಿತದಿಂದ ರಿಯಾಯ್ತಿ ದರದಲ್ಲಿ ಮರಳು ಲಭ್ಯವಾಗುವುದರಿಂದ ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಬಡ, ಮಧ್ಯಮ ವರ್ಗದವರು ಮರಳಿಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಮರಳು ವಿತರಣೆಯಲ್ಲಿ ಸಾಕಷ್ಟು ವಿಳಂಬವಾಗಿದ್ದು, ಇನ್ನಾದರೂ ಜಿಲ್ಲಾಡಳಿತ ನಾಗರಿಕರಿಗೆ ಕಾಲಮಿತಿಯಲ್ಲಿ ಮರಳು ವಿತರಣೆಗೆ ಸೂಕ್ತ ಕ್ರಮಕೈಗೊಳ್ಳಬೇಕಿದೆ.

  
ನೋಟು ನಿಷೇಧಕ್ಕೆ 50 ದಿನ
ಹಳಿಗೆ ಬಾರದ ಜನಸಾಮಾನ್ಯರ ಬದುಕು

ನಮ್ಮ ಹಣವನ್ನು ನಾವು ಹೇಗೆ ಮತ್ತು ಎಷ್ಟು ಬಳಸಬೇಕು ಎನ್ನುವುದನ್ನು ಕೇಂದ್ರ ಸರ್ಕಾರ ನಿರ್ಧರಿಸುವುದಾದರೆ ಜನರ ಆರ್ಥಿಕ ಸ್ವಾತಂತ್ರ್ಯಕ್ಕೆ ಬೆಲೆ ಎಲ್ಲಿದೆ.  ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಈ ದೇಶದಲ್ಲಿ ತರಲು ಸಾಧ್ಯವಿದೆಯೇ, ಗ್ರಾಮೀಣ ಭಾರತದಲ್ಲಿ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾದಿತು, ಮೊಬೈಲ್ ಆಪ್ ಬಳಸಿ ವ್ಯವಹಾರ ಮಾಡಲು ಎಷ್ಟು ಜನರಿಂದ ಸಾಧ್ಯ ಎನ್ನುವುದನ್ನು ಗಮನಿಸದೆ ಆರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಖಂಡಿತ ಸಾಧ್ಯವಿಲ್ಲ. ಒಂದೆಡೆ ಆರ್‌ಬಿಐಗೆ ಹೊಸ ನೋಟನ್ನು ಸರಿಯಾಗಿ ಇದುವರೆಗೂ ವಿತರಿಸಲು ಸಾಧ್ಯವಾಗಿಲ್ಲ. ಇದನ್ನು ಮರೆಮಾಚಲು  ದಿನನಿತ್ಯ ಒಂದೊಂದು ಆದೇಶವನ್ನು ಹೊರಡಿಸುತ್ತಿದೆ. ಒಟ್ಟಾರೆ, ಜನಸಾಮಾನ್ಯರನ್ನು ಸಂಕಟದಿಂದ ಹೊರತರುವ ಕೆಲಸವನ್ನು ಮಾಡಿಲ್ಲ.


ನ. 8ರಂದು 500 ಮತ್ತು 1000 ರೂ. ನೋಟು ರದ್ದು ಮಾಡಿದ ನಂತರ ಇಡಿ ದೇಶದಲ್ಲಿ ನಗದು ಕೊರತೆಯಾಗಿದೆ. ಇದರಿಂದ ಅಲ್ಲ್ಲೋಲಕಲ್ಲೋಲ ಎನ್ನುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಸಂದರ್ದಲ್ಲಿ ನಗದುರಹಿತ ಅರ್ಥ ವ್ಯವಸ್ಥೆಯ ಪರಿಕಲ್ಪನೆಯನ್ನು ಹುಟ್ಟುಹಾಕಲಾಗಿದೆ. ನೋಟು ಚಲಾವಣೆ ರದ್ದು ಮಾಡುವ ಮುನ್ನ  ಅದರಿಂದ ಉಂಟಾಗಬಹುದಾದ ಪರಿಣಾಮವನ್ನು ಸಮಗ್ರವಾಗಿ ಗ್ರಹಿಸದೇ ಇದ್ದುದರಿಂದ  ಇಂದು  ಹಣದ ಗಂಭೀರ ಸಮಸ್ಯೆ ಎದುರಾಗಿದೆ.
500 ರೂ ಮತ್ತು ಸಾವಿರ ರೂ. ನೋಟು ರದ್ದುಗೊಳಿಸಿ 2000 ರೂ. ಮುಖಬೆಲೆಯ ನೋಟನ್ನು ಮಾರುಕಟ್ಟೆಗೆ ಬಿಟ್ಟಿರುವ ತರ್ಕರಹಿತ ನಿರ್ಧಾರದಿಂದ ದಿನನಿತ್ಯ ಆದಾಯ ತೆರಿಗೆ ಇಲಾಖೆಯವರು ನೂರಾರು ಕೋಟಿಯ 2000 ರೂ.ನ ನೋಟನ್ನು ವಶಪಡಿಸಿಕೊಳ್ಳುವಂತಾಗಿದೆ. ನಮ್ಮ ಅರ್ಥ ವ್ಯವಸ್ಥೆಯಲ್ಲಿ ಚಲಾವಣೆೆಯಲ್ಲಿದ್ದ ಶೇ. 86ರಷ್ಟು ನೋಟುಗಳನ್ನು ರದ್ದು ಮಾಡಿ ಶೇ. 99ರಷ್ಟು ಜನರು ಸಂಕಷ್ಟಕ್ಕೆ ಸಿಲುಕುವಂತೆ ಮಾಡುವ ಅವಶ್ಯಕತೆ ಇತ್ತೇ ಎನ್ನುವ ಪಶ್ನೆ ಈಗ ಸಾರ್ವಜನಿಕರದ್ದು.
ನೋಟು ರದ್ದಾಗಿ ಇಂದಿಗೆ 50 ದಿನವಾಗುತ್ತಿದೆ. ಇಷ್ಟರಲ್ಲೇ ಸುಮಾರು 59  ನಿಯಮವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ಸಚಿವಾಲಯ ಪ್ರಕಟಿಸಿದೆ.  ಹೆಚ್ಚುಕಡಿಮೆ ಪ್ರತಿನಿತ್ಯ ಈ ನಿಯಮ ಪಕ್ರಟವಾಗುವುದರಿಂದ ಗ್ರಾಹಕರು ಎಷ್ಟು ಗೊಂದಲಕ್ಕೀಡಾಗುತ್ತಿದ್ದಾರೋ ಬ್ಯಾಂಕ್‌ನವರೂ  ಅಷ್ಟೇ ಗೊಂದಲಕ್ಕೀಡಾಗಿದ್ದಾರೆ.
 ಉದಾಹರಣೆಗೆ, ಡಿ. 19ರಂದು 5000ರೂ.ವರೆಗೆ ಮಿತಿ ವಿಧಿಸಿ ಆರ್‌ಬಿಐ ಆದೇಶ ಹೊರಡಿಸಿತ್ತು. ನಂತರ ಡಿ. 30ರೊಳಗೆ ನಿತ್ಯ ಗರಿಷ್ಠ 5 ಸಾವಿರ ರೂ. ಮಾತ್ರ  ಹಳೆ ನೋಟು ಜಮಾ ಮಾಡಬಹುದು. ಆದರೆ ಒಮ್ಮೆ ಮಾತ್ರ ಇದನ್ನು ಜಮಾ ಮಾಡಬಹುದು. ಇದಕ್ಕೆ ಸಮಜಾಯಿಸಿ ನೀಡಬೇಕು ಎಂಬ ಶರತ್ತು ಹಾಕಲಾಯಿತು.  ಹಳೆಯ ನೋಟನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಆರ್‌ಬಿಐ ಮತ್ತು ವಿತ್ತ ಸಚಿವಾಲಯ ಎಷ್ಟು ಲಘುವಾಗಿ ಪರಿಗಣಿಸಿವೆ, ತಮ್ಮ ಅಪ್ರಬುದ್ಧತೆ ಪ್ರದರ್ಶಿಸಿವೆ  ಎನ್ನುವುದಕ್ಕೆ ಇದು ಉದಾಹರಣೆ ಮಾತ್ರ.
ರಿಸರ್ವ್ ಬ್ಯಾಂಕ್ ಸಕಾಲದಲ್ಲಿ ನೋಟು ಪೂರೈಸುವಲ್ಲಿ ವಿಫಲವಾಗಿದೆ. ಇದರಿಂದ ದೇಶದ ಆರ್ಥಿಕ ವಹಿವಾಟು ಸ್ಥಬ್ಧಗೊಳ್ಳುವ  ಹಂತಕ್ಕೆ  ಬರಲಿತ್ತು. ಇದನ್ನರಿತು ಕೂಡಲೇ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಬಳಕೆದಾರರು ಮತ್ತು ವ್ಯಾಪಾರಸ್ಥರು ನೋಟು ರದ್ದತಿಯಿಂದ ಏನೂ ತೊಂದರೆ ಆಗಿಲ್ಲ ಎಂದು ಮೊದಲ ವಾರ ಹೇಳಿಕೆ ಕೊಟ್ಟಿದ್ದರು. ಆದರೆ ಈ ಪ್ರಮಾಣ ನಮ್ಮ ಜನಸಂಖ್ಯೆಯ ಶೇ. 1ರಷ್ಟು ಮಾತ್ರವಾಗಿತ್ತು. ಇದನ್ನೇ ಇಡಿ ದೇಶದ ಅಭಿಪ್ರ್ರಾಯ ಎಂಬಂತೆ ಬಿಂಬಿಸಲಾಯಿತು. ಇದರಿಂದ ಕೇಂದ್ರ ಸರ್ಕಾರ ನಗದುರಹಿತ ಆರ್ಥಿಕ ವ್ಯವಸ್ಥೆ ಜಾರಿಗೊಳಿಸಲು ಮುಂದಾಯಿತು. ಇದನ್ನು  ಲಾಭಮಡಿಕೊಂಡಿದ್ದು ಪೇಟಿಎಂ ಮತ್ತು ಡಿಜಿಟಲ್ ಸೇವೆ ಒದಗಿಸುವ ಸಂಸ್ಥೆಗಳು ಮಾತ್ರ. ಬ್ಯಾಂಕುಗಳು ದಿನನಿತ್ಯದ ವಹಿವಾಟು ನಡೆಸಲಾಗದ ಸ್ಥಿತಿಗೆ ಬಂದವು. ಜನರೂ ಸಹ ಬ್ಯಾಂಕಿಂಗ್ ಮೇಲೆ ಇಟ್ಟುಕೊಂಡಿದ್ದ ವಿಶ್ವಾಸ ಬದಲಾಗುವಂತಾಯಿತು.
ಆನಂತರ ಬೆರಳೆಣಿಕೆಯಷ್ಟು  ಬ್ಯಾಂಕ್ ಅಧಿಕಾರಿಗಳು ನೋಟು ಬದಲಾವಣೆಯಲ್ಲಿ ಮಾಡಿದ್ದ ಅವ್ಯವಹಾರವನ್ನು ದೊಡ್ಡದಾಗಿ ಬಿಂಬಿಸಲಾಯಿತು. ಇದೂ ಸಹ ಬ್ಯಾಂಕಿಂಗ್ ವ್ಯವಹಾರದ ಮೇಲೆ ಕಪ್ಪುಚುಕ್ಕೆ ಮೂಡಿಸುವಂತಾಯಿತು. ಇಡಿ ಬ್ಯಾಂಕಿನವರೇ ಈ ರೀತಿ ಕೃತ್ಯ ಮಾಡಿದಂತೆ ಪ್ರಚಾರ ಮಾಡಿದ್ದು ಅವರ ವಿಶ್ವಾಸಕ್ಕೆ
ಧಕ್ಕೆಯನ್ನುಂಟು ಮಾಡಿತು.
ನೋಟು ನಿಷೇಧವನ್ನು ಆರಂಭದಲ್ಲಿ ಸ್ವಾಗತಿಸಿದ್ದ ಆಂದ್ರ ಸಿಎಂ ಚಂದ್ರಬಾಬು ನಾಯ್ಡು ನಂತರ ಇದರ ಬಗ್ಗೆ ಅಸಮಾಧಾನ ಹೊರಹಾಕಿದರು. 50 ದಿನ ಕೊಡಿ, ಎಲ್ಲ ಬದಲಾಗುತ್ತದೆ ಎಂದು ಪ್ರಧಾನಿ ಹೇಳಿದ್ದರೂ ಏನೂ ಬದಲಾಗದೆ ಜನ ಸಂಕಟದಲ್ಲೇ ಸಿಲುಕಿ ಒದ್ದಾಡುವಂತಾಗಿದ್ದು ಮಾತ್ರ ಬದಲಾವಣೆ ಎಂದು ಹೇಳಬಹುದಾಗಿದೆ.
ಹಳೆಯ ನೋಟು ಬದಲಾಯಿಸುವ ಆರಂಭದ ಸುಮಾರು 15-20 ದಿನಗಳ ಕಾಲ ಬ್ಯಾಂಕ್ ಸಿಬ್ಬಂದಿಗಳ ಅನುಭವಿಸಿದ ಮಾನಸಿಕ ಯಾತನೆ ಅಷ್ಟಿಷ್ಟಲ್ಲ. ಆದರೂ ಒತ್ತಡವನ್ನು ಸಹಿಸಿ ಕೆಲಸ ಮಾಡಿದರು. ಇಷ್ಟಾದರೂ ಸಮಸ್ಯೆ ಬಹೆಗರಿಸಲು ಸಾಧ್ಯವಾಗಿಲ್ಲ. ನೋಟು ಚಲಾವಣೆ ರದ್ದು ಯೋಜನೆಯನ್ನು ಶತಾಯಗತಾಯ ಯಶಸ್ವಿಗೊಳಿಸಲೇಬೇಕೆಂದು ಹಠಕ್ಕೆ ಬಿದ್ದಂತಿರುವ ಸರ್ಕಾರ ಜನಸಾಮಾನ್ಯರ ಗೋಳಿಗೆ ಮಾತ್ರ ಸ್ಪಂದಿಸದಿರುವುದು ಸರಿಯಲ್ಲ.


ಆರ‌್ಬಿಐ ಮತ್ತು ವಿತ್ತ ಸಚಿವಾಲಯ ಪದೇ ಪದೇ ಹೊಸ ಹೊಸ ನಿಯಮ ಜಾರಿಗೊಳಿಸುವುದನ್ನು ಬಿಟ್ಟು ಗ್ರಾಹಕರಿಗೆ ಸಮರ್ಪಕವಾಗಿ ಹಣ ಸಿಗುವಂತೆ ಮಾಡಬೇಕಿದೆ. ಜನರು ಹಣ ಸಿಗದೆ ಪರದಾಡುತ್ತಿರುವುದರಿಂದ ಅವರ ಬಗ್ಗೆ ಕಾಳಜಿ ವಹಿಸಿ ಬ್ಯಾಂಕಿಗೆ ಹಣ ಒದಗಿಸಬೇಕು. ಪ್ರತಿದಿನ ಬ್ಯಾಂಕಿಗೆ ಬೇಕಾದ ಹಣದ ಬದಲು ಈಗ ಶೇ. 30ರಷ್ಟು ಮಾತ್ರ ಕೊಡುತ್ತಿರುವುದನ್ನು ಹೆಚ್ಚಿಸಬೇಕು. ಕಪ್ಪು ಹಣ ಹೊರತರುವುದು, ಭಯೋತ್ಪಾದನೆಗೆ, ಡ್ರಗ್ ಮಾಫಿಯಾಕ್ಕೆ ಹಣ ಸಿಗದಂತೆ ಮಾಡಲು ಕೈಗೊಂಡ ಈ ಯೋಜನೆಯನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಆದರೆ ಆರ್ಥಿಕ ವ್ಯವಸ್ಥೆಯ ಮೇಲೆ ಈ ರೀತಿ ದಾಳಿ ನಡೆದಿದ್ದು ಮಾತ್ರ ಎಲ್ಲರನ್ನೂ ಆಕ್ರೋಶಕ್ಕೆ ಸಿಲುಕಿಸಿದೆ. 
ಪ್ರಧಾನಿಯವರ ನಗದುರಹಿತ ಪರಿಕಲ್ಪನೆ ಒಳ್ಳೆಯದೆ. ಆದರೆ ಅದಕ್ಕೆ ಇನ್ನೂ ಕಾಲಪಕ್ವವಾಗಿಲ್ಲ ಎನ್ನುವುದನ್ನು ಮೊದಲು ನೆನೆಪಿಡಬೇಕು. ಇದೆಲ್ಲವನ್ನು ಬಿಟ್ಟು ಸುಲಭದಲ್ಲಿ ಪ್ರಚಾರ ಪಡೆಯುತ್ತ ಅದನ್ನು ರಾಜಕೀಯವಾಗಿ ನಗದೀಕರಿಸಿಕೊಳ್ಳುತ್ತಿರುವುದು ಸಲ್ಲದು.
.............................

Thursday, 22 December 2016

ಕಾನೂನು, ಆದೇಶ ಪಾಲಿಸದ ಪೊಲೀಸ್, ಆರ್‌ಟಿಓ, ಶಿಕ್ಷಣ ಇಲಾಖೆ 
  ಶಾಲಾ ವಾಹನ ಸುರಕ್ಷತೆ * ಸಕಾಲದಲ್ಲಿ ತಪಾಸಣೆ ನಡೆಸದ ಅಧಿಕಾರಿಗಳು* 

 ಆರ್‌ಟಿಓ, ಪೊಲೀಸ್ ಇಲಾಖೆಯೊಂದಿಗೆ ಸಭೆ : ಡಿಡಿಪಿಐ
’ಶಾಲಾ ವಾಹನಗಳ ಸುರಕ್ಷತೆಗೆ ಸಂಬಂಧಿಸಿದಂತೆ ಕೆಲವು ತಿಂಗಳ ಹಿಂದೆ ಶಾಲಾ ಆಡಳಿತ ಮಂಡಳಿಯವರ ಸಭೆ ನಡೆಸಿ ಸೂಕ್ತ ಸಲಹೆ - ಸೂಚನೆ ನೀಡಲಾಗಿದೆ. ಇಲಾಖೆಯ ಕೆಳಹಂತದ ಅಧಿಕಾರಿಗಳ ಸಭೆ ನಡೆಸಿ ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಈ ನಿಟ್ಟಿನಲ್ಲಿ ಸೂಕ್ತ ಎಚ್ಚರಿಕೆ ನೀಡಿ ಎಂದು ಹೇಳಲಾಗಿದೆ. ಮತ್ತೊಮ್ಮೆ ಎಲ್ಲ ಶಾಲೆಗಳಿಗೂ ಶಾಲಾ ವಾಹನಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ವಿಧಿವಿಧಾನಗಳ ಬಗ್ಗೆ ಸುತ್ತೋಲೆ ಕಳುಹಿಸಿ ಕೊಡಲಾಗುವುದು. ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚಿಸಲಾಗುವುದು. ನಿಯಮ ಉಲ್ಲಂಘಿಸುವವರ ವಿರುದ್ದ ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗುವುದು. ಶಾಲಾ ವಾಹನಗಳಳಲ್ಲಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ಆರ್.ಟಿ.ಓ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಲಾಗುವುದು.
-ಡಿಡಿಪಿಐ ಪಿ.ಎಸ್. ಮಛಾಡೊ.  
 
ಶಿವಮೊಗ್ಗ  : ಶಾಲಾ ವಾಹನ ಹಾಗೂ ಅದರಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಸುಪ್ರೀಂ, ಹೈ ಕೋರ್ಟ್ ಹಾಗೂ ರಾಜ್ಯ ಸರ್ಕಾರ ಹತ್ತು ಹಲವು ಆದೇಶಗಳನ್ನು ಹೊರಡಿಸಿವೆ. ಇದನ್ನು ಶಿವಮೊಗ್ಗ ನಗರದ ಕೆಲವು ಖಾಸಗಿ ಶಾಲೆಗಳು ಈ ಆದೇಶಗಳ ಸಮರ್ಪಕ ಪಾಲನೆ ಮಾಡುತ್ತಿಲ್ಲ. ಸಂಪೂರ್ಣ ನಿರ್ಲಕ್ಷ್ಯ ವಹಿಸಿವೆ. ಈ ವಾಹನಗಳ ಸುರಕ್ಷತೆಯ ಬಗ್ಗೆ ಎಚ್ಚರವಹಿಸಬೇಕಾದ ಸಾರ್ವಜನಿಕ  ಶಿಕ್ಷಣ ಇಲಾಖೆ, ಆರ್‌ಟಿಓ ಹಾಗೂ ಪೊಲೀಸ್ ಇಲಾಖೆಯವರು ಏನು ಮಾಡುತ್ತಿದ್ದಾರೆ ಎನ್ನುವುದು ಸಾರ್ವಜನಿಕರ ಪಶ್ನೆಯಾಗಿದೆ.
ಶಾಲಾ ವಾಹನಗಳಲ್ಲಿ ಮಕ್ಕಳ ಸುರಕ್ಷತೆಗೆ ಒತ್ತು ನೀಡುವ ಉದ್ದೇಶದಿಂದ ಹಲವು ನಿಯಾಮಾವಳಿ ರೂಪಿಸಲಾಗಿದೆ. ಆದರೆ ಇವುಗಳ ಪರಿಣಾಮಕಾರಿ ಪಾಲನೆಯಾಗುತ್ತಿಲ್ಲ. ಇಂದಿಗೂ ಕೆಲವು ಶಾಲಾ ವಾಹನಗಳಲ್ಲಿ ಕನಿಷ್ಠ ಸುರಕ್ಷತಾ ಕ್ರಮಗಳ ಅಳವಡಿಕೆಯೂ ಆಗಿಲ್ಲ. ಇದನ್ನು ಗಮನಿಸಿ ಕ್ರಮಕೈಗೊಳ್ಳಬೇಕಾದ ಆಡಳಿತ ವ್ಯವಸ್ಥೆ ಮೈಮರೆತು ಕುಳಿತಿದೆ. ಇದರಿಂದ ಶಾಲಾ ವಾಹನ ಸುರಕ್ಷತೆಯ ಬಗ್ಗೆ ಹೇಳುವವರು ಕೇಳುವವರ‌್ಯಾರು ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚೆಗೆ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿಯೇ ಹಲವು ಶಾಲಾ ವಾಹನಗಳು ಅಪಘಾತಕ್ಕೀಡಾಗುತ್ತಿರುವ ವರದಿಗಳು ಬರುತ್ತಿವೆ. ಹಾಗೆಯೇ ಕೆಲವು ಶಾಲಾ ವಾಹನ ಚಾಲಕರು ವಾಹನಗಳನ್ನು ಮಿತಿಮೀರಿದ ವೇಗ, ನಿರ್ಲಕ್ಷ್ಯದಿಂದ ಚಲಾಯಿಸುತ್ತಿರುವ ಆರೋಪಗಳಿವೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲಾ-ಕಾಲೇಜಿಗೆ ಸೇರಿದ 5 ವಾಹನಗಳು ಅಪಘಾತವಾಗಿವೆ ಎಂದು ಪೊಲೀಸ್ ಇಲಾಖೆ ಮಾಹಿತಿ ವಿವರಿಸಿದೆ.
ಟ್ರಿಪ್‌ಗಳ ಸಂಖ್ಯೆ ಹೆಚ್ಚಿರುವುದರಿಂದ ಸಮಯ ಹೊಂದಾಣಿಕೆ ಮಾಡಲು ವೇಗದಲ್ಲಿ ವಾಹನ ಓಡಿಸುವುದು ಅನಿವಾರ್ಯ ಎಂದು ಒಮ್ಮೊಮ್ಮೆ ಚಾಲಕರು ಹೇಳುತ್ತಾರೆ. ಈ ಬಗ್ಗೆ ಪೋಷಕರು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಇನ್ನಾದರೂ ಶಾಲಾ ಆಡಳಿತ ಮಂಡಳಿಯವರು ಈ ಬಗ್ಗೆ ಗಮನಹರಿಸಬೇಕು’ ಎನ್ನುವುದು ಪೋಷಕರ ಆಗ್ರಹ.
ಇಲಾಖೆಗಳ ಆದೇಶಗಳ ಪಾಲನೆಯತ್ತ ಕೆಲವು ಖಾಸಗಿ ಶಾಲೆಗಳು ಚಿತ್ತ ಹರಿಸಿಲ್ಲ. ಇದು ನಮಗೆ ದುಬಾರಿಯಾಗಿ ಪರಿಣಮಿಸುತ್ತದೆ ಎಂದು ಹೇಳುತ್ತಾರೆ. ಆದರೆ ಪೋಷಕರಿಂದ ಡೊನೇಶನ್ ವಸೂಲಿ ಮಾಡಿಯೇ ಮಕ್ಕಳಿಗೆ ಪ್ರವೇಶ ನೀಡುವ ಪ್ರತಿಷ್ಠಿತ ಶಾಲೆಗಳು ಕೂಡ ಶಾಲಾ ವಾಹನಗಳಲ್ಲಿ ಕನಿಷ್ಠ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿಲ್ಲ. ಇದು ಮಕ್ಕಳ ಸುರಕ್ಷತೆಯ ಬಗ್ಗೆ ಇವರಿಗಿರುವ ಕಾಳಜಿಗೆ ಸಾಕ್ಷಿಯಾಗಿದೆ. ಶಾಲೆಯವರ ಲೋಪದೋಷ ಪ್ರಶ್ನಿಸಿದರೆ ಎಲ್ಲಿ ತಮ್ಮ ಮಕ್ಕಳಿಗೆ ಶಾಲೆಗಳಲ್ಲಿ ತೊಂದರೆಯಾಗಲಿದೆಯೋ ಎಂಬ ಏಕೈಕ ಕಾರಣದಿಂದ ಬಹುತೇಕ ಪೋಷಕರು ಶಾಲಾ ಆಡಳಿತ ಮಂಡಳಿಯವರನ್ನು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ.
ಇನ್ನೊಂದು ಮಹತ್ವದ ವಿಚಾರವೆಂದರೆ, ಶಿಕ್ಷಣ, ಪೊಲೀಸ್ ಮತ್ತು ಆರ್‌ಟಿಓ ಏನು ಮಾಡುತ್ತಿವೆ ಎನ್ನುವುದು. ಶಾಲಾ ವಾಹನಗಳನ್ನು ಇವರು ಒಂದು ದಿನವೂ ಹಿಡಿದು ತಪಾಸಣೆ ನಡೆಸಿದ ಉದಾಹರಣೆ ಇಲ್ಲ. ಶಾಲಾ ವಾಹನ ಹಿಡಿದರೆ ಮಕ್ಕಳಿಗೆ ತೊಂದರೆ ಎದುರಾಗುತ್ತದೆ ಎನ್ನುವ ನೆಪ ಒಂದೆಡೆಯಾದರೆ, ಎಲ್ಲಿ ತಮ್ಮ ಸ್ಥಾನಕ್ಕೆ ಸಂಚಕಾರ ಬರುತ್ತದೆಯೋ ಎನ್ನುವ ಭಯವೂ ಕಾರಣವಾಗಿದೆ. ಏಕೆಂದರೆ ಈ ಶಾಲೆಯವರೆಲ್ಲ ರಾಜಕಾರಣಿಗಳ, ಪ್ರಭಾವಿಗಳ ಕೃಪಾಶೀರ್ವಾದ ಹೊಂದಿರುತ್ತವೆ.
 ಏನಾದರೂ ದುರಂತ ಸಂಭವಿಸಿದ ನಂತರವಷ್ಟೆ ಈ ಇಲಾಖೆಯವರು ಕಾರ್ಯಪ್ರವೃತ್ತರಾಗಬೇಕೇ, ದುರಂತಕ್ಕೆ ಆಸ್ಪದವಾಗದಂತೆ ನಿರಂತರ ಎಚ್ಚರಿಕೆಯ ಕ್ರಮಗಳನ್ನು ಈ ಇಲಾಖೆಯವರು ಕೈಗೊಳ್ಳಬೇಕಲ್ಲವೇ. ಈ ವಷರ್ದ ಆರಂಭದಲ್ಲಿ ಕುಂದಾಪುರ ಸಮೀಪ ಶಾಲಾ ಮಕ್ಕಳು ಅಪಘಾತಕ್ಕೆ ಬಲಿಯಾದ ನಂತರ ರಾಜ್ಯದಾದ್ಯಂತ ಆಕ್ರೋಶ ಎದ್ದಿದ್ದರಿಂದ ಈ ಇಲಾಖೆಯವರು ಶಾಲೆಯವರನ್ನೆಲ್ಲ ಕರೆದು ಸಭೆ ನಡೆಸಿದರು. ಆದರೆ ಅದರ ಫಲಿತಾಂಶ ಏನೆನ್ನುವುದುನ್ನು ಅವರೇ ಹೇಳಬೇಕಿದೆ.
ಒಟ್ಟಾರೆ, ಶಾಲಾ ವಾಹನಗಳ ಸುರಕ್ಷತೆಯ ಬಗ್ಗೆ ಇನ್ನಾದರೂ ಶಾಲಾ ಆಡಳಿತ ಮಂಡಳಿಗಳು ಹಾಗೂ ಆಡಳಿತ ವ್ಯವಸ್ಥೆಗಳು ಎಚ್ಚೆತ್ತುಕೊಳ್ಳಬೇಕು.
----------------------------------------------

Wednesday, 21 December 2016

ಶಾಲಾ ಬಸ್ ಕಾಳಜಿ: ಆಡಳಿತ ಮಂಡಳಿಗೂ ಇರಲಿ 
* ಪೋಷಕರ ಆತಂಕ, ದುಗುಡ ತಪ್ಪಿಸಿ* ಚಾಲಕರನ್ನು ಗೌರವದಿಂದ ಕಾಣಲಿ



ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರು ಸಂಸ್ಥೆಯ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಶಾಲೆ ಮಗುವಿಗೆ ಅನುಕೂಲಕರ ದೂರದಲ್ಲಿದೆಯೇ ಎನ್ನುವುದನ್ನೂ ಸಹ ಗಮನಿಸದೆ ಕಳುಹಿಸುತ್ತಾರೆ. ಇದರ ಜೊತೆಗೆ ಶಾಲಾ ಬಸ್‌ಗಳ ಹೆಸರಲ್ಲೂ ಈ ಸಂಸ್ಥೆಗಳು ಹಣ ಗಳಿಸುತ್ತಿವೆ. ಆದರೆ ಚಾಲಕರನ್ನು ಮಾತ್ರ ಗೌರವದಿಂದ ಕಾಣದೆ, ಸರಿಯಾಗಿ ಸೌಲಭ್ಯ ಕೊಡದೆ, ಎಲ್ಲ ತಪ್ಪಿಗೂ ಅವರನ್ನೇ ಹೊಣೆ ಮಾಡುವ ಪ್ರವೃತ್ತಿ  ಕಂಡುಬರುತ್ತಿದೆ. ಇದರಿಂದ ಚಾಲಕರ ಮನಃಸ್ಥಿತಿ ಕುಸಿಯುತ್ತಿದೆ. ತಾಂತ್ರಿಕ ಕಾರಣ ಹೊರತುಪಡಿಸಿದರೆ ಬಹುತೇಕ ಚಾಲಕರು ಬಸ್‌ನಲ್ಲಿ ಮಕ್ಕಳಿರುವ ವೇಳೆ ಯಾವುದೇ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ. ಆದರೂ ಚಾಲಕರನ್ನು ಪರೀಕ್ಷಿಸುವ ಕೆಲಸವನ್ನು ಮಾಡುತ್ತಲೇ ಇರಬೇಕು.  
ಚಾಲಕರೂ ಸಹ ಬೇಜವಾಬ್ದಾರಿ ಚಾಲನೆ ಮಾಡದೆ ಬಸ್‌ನಲ್ಲಿರುವ ಮಕ್ಕಳು ತಮ್ಮ ಮಕ್ಕಳು ಎಂಬ ಭಾವನೆಯಲ್ಲೇ ಚಾಲನೆ ಮಾಡಿದರೆ ಪೋಷಕರ, ಪಾಲಕರ ಆತಂಕವನ್ನು ತಪ್ಪಿಸಬಹುದು.

ಶಿವಮೊಗ್ಗ; ಶಾಲೆಗೆ ಮಕ್ಕಳನ್ನು ವಿವಿಧ ಬಡಾವಣೆಗಳಿಂದ ಕರೆದೊಯ್ಯಲು ಬಹುತೇಕ ವಿದ್ಯಾಸಂಸ್ಥೆಗಳು ಸ್ಪರ್ಧೆಯೆಂಬಂತೆ ಬಸ್‌ಗಳನ್ನು ಓಡಿಸುತ್ತಿದ್ದಾರೆ. ಬಸ್ ಚಾಲಕರು ಸ್ವಲ್ಪ ಎಡವಟ್ಟು ಮಾಡಿದರೂ ಬಸ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಅಪಾಯ ಕಟ್ಟಿಟ್ಟದ್ದು. ಇದರಿಂದ ಪೋಷಕರು, ಪಾಲಕರು  ಆತಂಕ, ದುಗುಡದಿಂದ ಮಕ್ಕಳನ್ನು ಕಳುಹಿಸುವ ಸ್ಥಿತಿ ಎದುರಾಗುತ್ತದೆ.
ನಿನ್ನೆ ನಗರದ ಖಾಸಗಿ ವಿದ್ಯಾಸಂಸ್ಥೆಯೊಂದರ ಬಸ್‌ಗಳೆರಡು ಡಿಕ್ಕಿ ಹೊಡೆದುಕೊಂಡು ಹಲವು ಮಕ್ಕಳು ಗಾಯಗೊಂಡಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಪಾಲಕರು ಎಚ್ಚರದಿಂದ ಇರುವಂತಾಗಿದೆ. ಶಾಲಾ ಬಸ್‌ಗಳು ಮಿತಿಮೀರಿದ ವೇಗ, ಓವರ್‌ಟೇಕ್ ಮಾಡುವಂತಹ ಸಾಹಸಕ್ಕೆ ಕೈ ಹಾಕಬಾರದು. ಚಾಲಕನೂ ಸಹ ತನ್ನ ಕೈಲಿ ಮಕ್ಕಳ ಜೀವವಿದೆ ಎನ್ನುವುದನ್ನು ಮೊದಲು ಅರಿಯಬೇಕಿದೆ. ಇವುಗಳ ಜೊತೆಗೆ, ಶಾಲಾ ಬಸ್ ಹೇಗಿರಬೇಕೆನ್ನುವ ಬಗ್ಗೆ ಶಿಕ್ಷಣ ಇಲಾಖೆ, ಆರ್‌ಟಿಓದಲ್ಲಿ ನಿಯಮವಿದೆ. ಈ ನಿಯಮ ಎಷ್ಟರ ಮಟ್ಟಿಗೆ ಪಾಲನೆಯಾಗುತ್ತಿದೆ ಎನ್ನುವ ಪ್ರಶ್ನೆ ಇಂತಹ ಸಂದರ್ದಲ್ಲಿ ಉದ್ಭವಿಸುತ್ತದೆ.
ಎರಡನೆಯದಾಗಿ, ಎಲ್ಲಾ ಅಪಘಾತದ ಸಂದರ್ಭದಲ್ಲೂ ಶಾಲಾ ಬಸ್ ಚಾಲಕರದ್ದೇ ತಪ್ಪಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಬಸ್ ಚಾಲಕರು ಬಹುತೇಕ ಅನುಭವಿಗಳೇ ಆಗಿರುವುದು ಕಂಡುಬರುತ್ತಿದೆ. ಇದರಿಂದ ಅವರಿಗೆ ಬಸ್ ಓಡಿಸುವ ಪರಿ, ಮಕ್ಕಳೊಂದಿಗೆ ವರ್ತನೆ ಮೊದಲಾದವುಗಳ ಅರಿವಿರುತ್ತದೆ. ಆದರೆ ಈ ಬಸ್ ಚಾಲಕರಿಗೆ ನೆಮ್ಮದಿ ಹಾಳುಮಾಡುವವರೇ ವಿದ್ಯಾಸಂಸ್ಥೆಯವರು ಅಥವಾ ಶಾಲಾ ಮುಖ್ಯಸ್ಥರು ಎಂದು ವಿಷಾದದಿಂದ ಹೇಳಬೇಕಾಗಿದೆ.
ವಿದ್ಯಾಸಂಸ್ಥೆಗಳು ರೂಟ್ ಲೆಕ್ಕದಲ್ಲಿ ಬಸ್ ಓಡಿಸುತ್ತಾರೆ. ಶಾಲೆಗೆ ನಿಗದಿತ ವೇಳೆಗೆ ಬರಬೇಕೆಂದು ಗಡುವು ವಿಧಿಸುತ್ತಾರೆ. ಈಗಿನ ಟ್ರಾಫಿಕ್ ಒತ್ತಡದಿಂದ ಬಸ್ ಸ್ವಲ್ಪ ವಿಳಂಬವಾದರೂ ಚಾಲಕನಿಗೆ ಬರೆ ಹಾಕುತ್ತಾರೆ. ಇನ್ನೊಂದೆಡೆ, ಚಾಲಕ ಮಕ್ಕಳನ್ನು ಬಿಟ್ಟು ಬರುವಂತಿಲ್ಲ. ಒಂದು ವೇಳೆ ಬಿಟ್ಟು ಬಂದರೆ ಮತ್ತ್ತೆ ಅದೇ ಚಾಲಕ ತಪ್ಪಿತಸ್ಥನಾಗುತ್ತಾನೆ. ಪೋಷಕರು ಬಂದು ದೂರು ಕೊಡುತ್ತಾರೆ. ಅದರ ಪರಿಣಾಮ ಚಾಲಕನ ಮೇಲೆ.
ಮತ್ತೊಂದೆಡೆ, ಮಕ್ಕಳು ಒಂದು ನಿಮಿಷ ತಡವಾಗಿ ಬಂದರೂ ಅವರನ್ನು ಕರೆತರುವ ಸ್ಥಿತಿ ಚಾಲಕನದ್ದು. ಪ್ರತಿ ಸ್ಟಾಪ್‌ನಲ್ಲಿ ನಿಗದಿತ ಮಕ್ಕಳಿರುತ್ತಾರೆ. ಅವರು ಬಂದಿಲ್ಲ ಎಂದರೆ ಬಿಟ್ಟು ಬಂದರೂ ಕಷ್ಟ. ಮತ್ತದೇ ದೂರು  ಶಾಲಾ ಆಡಳಿತ ಮಂಡಳಿಗೆ ಬರುತ್ತದೆ. ಇಂತಹ ಸ್ಥಿತಿಯಲ್ಲಿ ಶಾಲಾವೇಳೆಗೆೆ ಬಸ್ ತರುವುದು ಕಷ್ಟವಾಗುತ್ತದೆ ಎನ್ನುವುದನ್ನು ಸ್ವತಃ ಚಾಲಕರೇ ಹೇಳುತ್ತಾರೆ. ಆದರೆ ಆಡಳಿತ ಮಂಡಳಿಯಾಗಲಿ, ಪ್ರಾಚಾರ್ಯರಾಗಲಿ ಚಾಲಕರ ಸಮಸ್ಯೆ ಬಗ್ಗೆ ಗಮನಹರಿಸುವುದೇ ಇಲ್ಲ. ಪಾಲಕರ ದೂರಿಗೆ ಗಮನ ಕೊಡುವಾಗ ಇದರಲ್ಲಿ ಸತ್ಯಾಂಶ ಇದೆಯೇ ಎನ್ನುವುದನ್ನೂ ಸಹ ಗಮನಿಸಬೇಕು. ಶಿಸ್ತಿನ ಹೆಸರಲ್ಲಿ ಚಾಲಕನನ್ನೇ  ತಪ್ಪಿತಸ್ಥ ಎಂದು ನಿರ್ಣಯಿಸಿಬಿಡುವುದು, ಆತನಿಗೆ ಬೇರೆ ಬೇರೆ ತರಹದ ತೊಂದರೆ, ಕಿರುಕುಳ ಕೊಡುವುದು ಸರಿಯಲ್ಲ. ಇದನ್ನೆಲ್ಲ ಸಹಿಸಿಕೊಂಡ ಚಾಲಕ ಮಾನಸಿಕವಾಗಿ ಕುಗ್ಗಿಹೋಗುತ್ತಾನೆ. ಕೆಲವು ವೇಳೆ ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ವೇಳೆ ಸಂಸ್ಥೆ ಆತನ ಬಗ್ಗೆ ಗಮನಹರಿಬೇಕಾಗುತ್ತದೆ.
ಮೂರನೆಯದಾಗಿ,  ಪಾಲಕರೂ ಸಹ ತಮ್ಮ ಮಕ್ಕಳನ್ನು ಬಸ್ ಸ್ಟಾಪ್‌ಗೆ ನಿಗದಿತ ವೇಳೆಗೆ ಕಳುಹಿಸುವುದು ತಮ್ಮ ಜವಾಬ್ದಾರಿ ಎನುವುದನ್ನು ಮರೆತುಬಿಟ್ಟಿದ್ದಾರೆ. ಕೇವಲ ದೂರುವುದನ್ನೇ ಕೆಲವರು ಕೆಲಸವನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ಚಾಲಕರೂ ಸಹ ಸಹಜವಾಗಿಯೇ  ಕರ್ತವ್ಯದ ಬಗ್ಗೆ ನಿರಾಸಕ್ತರಾಗುವಂತಾಗುತ್ತದೆ. ಇದೆಲ್ಲವುಗಳಿಗೆ ಪರಿಹಾರವೆಂದರೆ, ವಿದ್ಯಾಸಂಸ್ಥೆಗಳು ಚಾಲಕರ ಬಗ್ಗೆ ತಮ್ಮ ಸಿಬ್ಬಂದಿ ಎಂಬ ಹೆಮ್ಮೆಯನ್ನು ಮೊದಲು ತಾಳಬೇಕಿದೆ. ಅವರ ಕಷ್ಟ-ಸುಖಗಳಿಗೆ ಸ್ಪಂದಿಸಲು ಒಂದಷ್ಟು ವೇಳೆಯನ್ನಿಟ್ಟುಕೊಳ್ಳಬೇಕು. ವೃತ್ತಿಗೆ ಸಂಬಂಧಿಸಿ ಎಲ್ಲ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ಅವರು ತಪ್ಪು ಮಾಡಿದಲ್ಲಿ ಮಾತ್ರ ಕ್ರಮ ಜರುಗಿಸಬೇಕೇ ವಿನಾ ಸಂಬಳ ಕೊಡುತ್ತೇವೆಂಬ ಏಕೈಕ ಕಾರಣಕ್ಕೆ ಕೇಳಿಬಂದ ಆರೋಪಕ್ಕೆಲ್ಲಾ ಅವರನ್ನೇ ಗುರಿಮಾಡಬಾರದು. ತಮ್ಮ ಸಂಸ್ಥೆಯ ವಾಹನದ ಗುಣಮಟ್ಟದ ಬಗ್ಗೆ ಆಗಾಗ ಗಮನ ಹರಿಸುವಂತಹ ಕೆಲಸವನ್ನು ಕೇವಲ ಚಾಲಕನಿಗೆ ಮಾತ್ರ ವಹಿಸದೆ ಸಂಸ್ಥೆಯವರೂ ಜವಾಬ್ದಾರಿ ಹೊರಬೇಕು. ಅಂದರೆ ಮಾತ್ರ ಉತ್ತಮ ವಾಹನ, ಉತ್ತಮ ಚಾಲಕನನ್ನು ಹೊಂದುವ ಮೂಲಕ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ.
.........................................      

Tuesday, 20 December 2016

ಕೆರೆ ಒತ್ತುವರಿ ತೆರವು ನಾಟಕ ಅಂತ್ಯ?
  **ಕಠಿಣ ಕ್ರಮಕ್ಕೆ ಮುಂದಾಗದ ಜಿಲ್ಲಾಡಳಿತ **  ನಗರದ ಕೆರೆಗಳ ಶಾಪ ವಿಮೋಚನೆ ಎಂದು?

ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಕೆರೆಗಳ ಒತ್ತುವರಿ ಅತಿ ಹೆಚ್ಚಿನ ಪ್ರಮಾಣದಲ್ಲಿ ನಡೆದಿದ್ದು, ಅವುಗಳನ್ನು ತೆರವುಗೊಳಿಸಿ ಮತ್ತೆ ಕೆರೆಗಳು ನಳನಳಿಸುವಂತೆ ಮಾಡಬೇಕೆನ್ನುವ ಸದುದ್ದೇಶದಿಂದ ಹೋರಾಟ ಆರಂಭವಾದಾಗ ಅದಕ್ಕೆ ಜಿಲ್ಲಾಡಳಿತ ಸಕಾರಾತ್ಮಕವಾಗಿ ಸ್ಪಂದಿಸಿ ತೆರವು ಕಾರ್ಯಾಚರಣೆಗೆ ಮುಂದಾಗಿತ್ತು. ಕಳೆದ ಮಳೆಗಾಲಕ್ಕೆ ಸ್ವಲ್ಪ ದಿನ ಮುಂಚೆ ಅಂದಿನ ಜಿಲ್ಲಾಧಿಕಾರಿಯವರೂ ಸಹ ಶಿವಮೊಗ್ಗ ಪಾಲಿಕೆ ಮತ್ತು ತಾಲೂಕು ವ್ಯಾಪ್ತಿಯ ಹಲವು ಕೆರೆಗಳ ಸಮೀಕ್ಷೆ ನಡೆಸಿ ಒತ್ತುವರಿ ತೆರವಿಗೆ ಮುಂದಾಗಿದ್ದರು. ಈ ಪ್ರಕಾರ ಕೆಲಸವೂ ನಡೆದಿತ್ತು. ಆದರೆ ಮಳೆಗಾಲದ ಹಿನ್ನೆಲೆಯಲ್ಲಿ ಕೆಲಸ ನಿಂತಿತ್ತು. ಎರಡನೆಯ ಹಂತದ ಕೆಲಸ ಆರಂಭವಾಗಿದ್ದು ಕಳೆದ ತಿಂಗಳು ನೂತನ ಜಿಲ್ಲಾಧಿಕಾರಿಯಾಗಿ ಡಾ. ಲೋಕೇಶ್ ಆಗಮಿಸಿದ ನಂತರ.  
ತೆರವು ಕಾರ್ಯಾಚರಣೆಗೆ ಜಿಲ್ಲಾಡಳಿತ ಮುಂದಾದಾಗ ಭಾರೀ ಪ್ರಚಾರ ಕೂಡ ದೊರಕಿತ್ತು. ಒತ್ತುವರಿದಾರರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಅಧಿಕಾರಿಗಳು ಘೋಷಿಸಿದ್ದರು. ನೆಪಮಾತ್ರಕ್ಕೆ ಒಂದೆರೆಡು ಕೆರೆಗಳ ಒತ್ತುವರಿ ತೆರವು ಮಾಡಿದ ಅಧಿಕಾರಿಗಳ ತಂಡವು ನಂತರ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸಲಿಲ್ಲ. ಪ್ರಭಾವಿಗಳಿಂದ ಒತ್ತುವರಿಯಾಗಿದ್ದ ಕೆರೆಗಳತ್ತ ಕಾಲು ಇಡಲಿಲ್ಲವೆಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
   ಡಾ. ಎಂ. ಲೋಕೇಶ್ ಜಿಲ್ಲಾಧಿಕಾರಿಯಾಗಿ ಆಗಮಿಸಿದ ನಂತರ ಕೆರೆಗಳ ಸಂರಕ್ಷಣೆಗೆ ಒತ್ತು ನೀಡಿದ್ದು, ತಿಂಗಳಲ್ಲಿ ಇಂತಿಷ್ಟು ದಿನಗಳ ಕಾಲ ತಮ್ಮ ತಾಲೂಕು ವ್ಯಾಪ್ತಿಯಲ್ಲಾಗಿರುವ ಕೆರೆಗಳ ಒತ್ತುವರಿ ತೆರವುಗೊಳಿಸುವಂತೆ ತಹಶೀಲ್ದಾರ್, ಉಪ ವಿಭಾಗಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದರ ಪರಿಣಾಮವಾಗಿ ಇಷ್ಟು ದಿನ ಅಕ್ಷರಶಃ ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯನ್ನೇ ಮರೆತಂತಿದ್ದ ತಾಲೂಕು ಆಡಳಿತಗಳು, ತಮ್ಮ ವ್ಯಾಪ್ತಿಯಲ್ಲಾಗಿರುವ ಕೆರೆಗಳ ಒತ್ತುವರಿ ತೆರವಿಗೆ ಕಾರ್ಯೋನ್ಮುಖವಾಗಿದ್ದವು.  ಇದಕ್ಕೆ ಜಿಲ್ಲೆಯ ನಾಗರಿಕ ವಲಯದಿಂದ ಮುಕ್ತಕಂಠದ ಶ್ಲಾಘನೆ ಕೂಡ ವ್ಯಕ್ತವಾಗಿತ್ತು. ಕೆರೆಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಮಹತ್ತರ ನಿರ್ಧಾರ ಕೈಗೊಂಡಿರುವ ಕ್ರಮ ಸ್ವಾಗತಾರ್ಹವಾದುದಾಗಿದೆ ಎಂದು ನಾಗರಿಕರು ಸಂತಸಪಟ್ಟಿದ್ದರು.
 ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ನಡೆದಿರುವ ಕೆರೆಗಳ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಜರುಗಿಸದಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ತಾಲೂಕು ಆಡಳಿತವಾಗಲಿ, ಮಹಾನಗರ ಪಾಲಿಕೆ ಆಡಳಿತವಾಗಲಿ ಈ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಳ್ಳದಿರುವುದು, ಸಂಬಂಧಿಸಿದ ಅಧಿಕಾರಿಗಳು ಜಾಣ ಮೌನಕ್ಕೆ ಶರಣಾಗಿರುವುದು ಹಲವು ರೀತಿಯ ಚರ್ಚೆಗಳಿಗೆ ಆಸ್ಪದವಾಗಿದೆ.
 ಜಿಲ್ಲೆಯ ಇತರೆ ನಗರ-ಪಟ್ಟಣಗಳಿಗೆ ಹೋಲಿಕೆ ಮಾಡಿದರೆ, ಶಿವಮೊಗ್ಗ ನಗರದಲ್ಲಿ ದೊಡ್ಡ ಪ್ರಮಾಣದ ಕೆರೆಗಳನ್ನು ಕಬಳಿಸಲಾಗಿದೆ. ಹಲವೆಡೆ ಕೆರೆಗಳಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ನಿರ್ಮಾಣವಾಗಿವೆ. ಎಲ್ಲದಕ್ಕಿಂತ ವಿಶೇಷವೆಂದರೆ ಕೆರೆಗಳನ್ನು ಉಳಿಸಿ, ಸಂರಕ್ಷಣೆ ಮಾಡಬೇಕಾದ ಗುರುತರ ಜವಾಬ್ದಾರಿ ಹೊತ್ತಿರುವ ಜಿಲ್ಲಾಡಳಿತವೇ ಹಲವು ಸರ್ಕಾರಿ ಕಚೇರಿ, ಸಂಘಸಂಸ್ಥೆಗಳಿಗೆ ಕೆರೆಗಳನ್ನು ಧಾರೆ ಎರೆದು ಕೊಟ್ಟಿದ್ದು, ಇಂತಹ ಕೆರೆಗಳ ಪ್ರದೇಶಗಳಲ್ಲಿ ಬೃಹದಾಕಾರದ ಕಟ್ಟಡಗಳು ತಲೆಎತ್ತಿವೆ.
ಇನ್ನೊಂದೆಡೆ, ಕೆಲವು ಭೂಗಳ್ಳರು ವ್ಯವಸ್ಥಿತವಾಗಿ ಕೆರೆಗಳನ್ನು ಮುಚ್ಚಿ ಲೇಔಟ್ ನಿರ್ಮಿಸುತ್ತಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಕೆರೆ ಜಾಗಗಳಲ್ಲಿ ನಿವೇಶನ ರಚಿಸಿ ಪರಭಾರೆ ಮಾಡುತ್ತಿದ್ದಾರೆ.  ನಗರದ ಹೊರವಲಯ ಗಾಡಿಕೊಪ್ಪದಲ್ಲಿ ಜಿಲ್ಲಾಧಿಕಾರಿಗಳೇ ಗೌರವಾಧ್ಯಕ್ಷರಾಗಿರುವ ಪ್ರತಿಷ್ಠಿತ ಕ್ಲಬ್‌ವೊಂದಕ್ಕೆ ಕಳೆದ ಹಲವು ವರ್ಷಗಳ ಹಿಂದೇ ನೀರಿನಿಂದ ತುಂಬಿ ತುಳುಕುತ್ತಿದ್ದ ಕೆರೆಯ ಪ್ರದೇಶವನ್ನು ಲೀಸ್ ಆಧಾರದ ಮೇಲೆ ನೀಡಲಾಗಿತ್ತು. ಕ್ಲಬ್‌ನವರು ಕೆರೆಗೆ ಮಣ್ಣು ತುಂಬಿಸಿ ಬೃಹತ್ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಈ ಕೆರೆಯ ಇಕ್ಕೆಲಗಳಲ್ಲಿ ಖಾಸಗಿಯವರು ಒತ್ತುವರಿ ಮಾಡುತ್ತಿದ್ದು, ಹೇಳುವವರು ಕೇಳುವವರ‌್ಯಾರೂ ಇಲ್ಲದಂತಾಗಿದೆ.
ಇದೇ ಗಾಡಿಕೊಪ್ಪದ ಗೋಪಾಲಗೌಡ ಬಡಾವಣೆಗೆ ಹೊಂದಿಕೊಂಡಂತೆ ಜಿಲ್ಲಾಡಳಿತವೇ ಕೆರೆಯ ಪ್ರದೇಶವನ್ನು ಸರ್ಕಾರಿ ಕಚೇರಿಗಳಿಗೆ ನೀಡಿದೆ. ಕೆಆರ್‌ಐಡಿಎಲ್ ಕಚೇರಿ ಕಟ್ಟಡ ಸೇರಿದಂತೆ ಹಲವು ಕಟ್ಟಡಗಳು ನಿರ್ಮಾಣವಾಗುತ್ತಿವೆ. ಮತ್ತೊಂದೆಡೆ ಪುರಲೆ ಗ್ರಾಮದಲ್ಲಿರುವ ಕೆರೆಯನ್ನು ಕೆಲವು ಪ್ರಭಾವಿಗಳು ಅತಿಕ್ರಮಿಸಿದ್ದಾರೆ. ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಕೆರೆಗಳು ಲೇಔಟ್‌ಗಳಾಗಿ ಪರಿವರ್ತಿತವಾಗಿವೆ. ಆಲ್ಕೋಳ, ಕಾಶೀಪುರ, ಸೋಮಿನಕೊಪ್ಪ ಸೇರಿದಂತೆ ನಗರಪಾಲಿಕೆ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಭಾರೀ ಪ್ರಮಾಣದಲ್ಲಿ ಕೆರೆಗಳು ಒತ್ತುವರಿಯಾಗಿವೆ.

ಬಾಕ್ಸ್
110 ರಲ್ಲಿ ಉಳಿದಿರುವುದು ಕೆಲವೇ ಕೆರೆಗಳು!
ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸುಮಾರು 110 ಕ್ಕೂ ಅಧಿಕ ಕೆರೆಗಳಿವೆ ಎಂದು ಮಹಾನಗರ ಪಾಲಿಕೆ ಆಡಳಿತ ಹೇಳುತ್ತದೆ. ಆದರೆ ಜೀವಂತವಾಗಿರುವುದು 20 ರಿಂದ 30 ಕೆರೆಗಳು ಮಾತ್ರ. ಮುಕ್ಕಾಲು ಪಾಲು ಕೆರೆಗಳು ಒತ್ತುವರಿಯಾಗಿವೆ. ಮತ್ತೆ ಕೆಲವು ಒತ್ತುವರಿಯ ಹಂತದಲ್ಲಿವೆ. ಮಹಾನಗರ ಪಾಲಿಕೆ ಆಡಳಿತಕ್ಕಂತೂ ಕೆರೆ ಸಂರಕ್ಷಣೆಯ ಯಾವುದೇ ಆಸಕ್ತಿ ಇಲ್ಲವಾಗಿದೆ. ಉಳಿದಂತೆ ತಾಲೂಕು ಆಡಳಿತವು ಗಮನಹರಿಸುತ್ತಿಲ್ಲ. ಇನ್ನೊಂದೆಡೆ ಭೂಗಳ್ಳರು ಕೆರೆಗಳ ಕಬಳಿಕೆ ಮುಂದುವರಿಸಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಶಿವಮೊಗ್ಗದಲ್ಲಿ ಕೆರೆಗಳೇ ಇಲ್ಲದಂತಹ ಪರಿಸ್ಥಿತಿ ಸೃಷ್ಟಿಯಾಗಲಿದೆ. ಇನ್ನಾದರೂ ಜಿಲ್ಲಾಧಿಕಾರಿ ನಗರ ವ್ಯಾಪ್ತಿಯಲ್ಲಿ ಕೆರೆಗಳ ಸಂರಕ್ಷಣೆಗೆ ಒತ್ತು ನೀಡಬೇಕಿದೆ.
-----------------------------------------------------

Monday, 19 December 2016


ಹೆದ್ದಾರಿ ಮದ್ಯದಂಗಡಿ ಬಂದ್ ಆದೇಶ: 
ರಾಜ್ಯ ಸರ್ಕಾರಗಳಿಗೆ ಮರ್ಮಾಘಾತ 

ಈಗ ಸುಪ್ರೀಂ ಖಡಕ್ಕಾಗಿ ಈ ಆದೇಶ ಜಾರಿಗೊಳಿಸಲು ಸೂಚಿಸಿದೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯ 500 ಮೀಟರ್ ವ್ಯಾಪ್ತಿಯೊಳಗೆ ಇರುವ ಮದ್ಯದಂಗಡಿ ಬಂದ್ ಮಾಡಿಸಿ ಎಂದಿದೆ. ಇದನ್ನು ಜೀರ್ಣಿಸಿಕೊಳ್ಳಲಾಗದ ಸರಕಾರಗಳು ಒದ್ದಾಡಲಾರಂಭಿಸಿವೆ. ಸಾವಿರಾರು ಮದ್ಯದಂಗಡಿಗಳು ರಾಜ್ಯದಲ್ಲಿ 500 ಮೀ ಗಿಂತ ಒಳಗಿವೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ  ಸದ್ಯ ಅಬಕಾರಿ ಇಲಾಖೆ ಬಳಿ ನಿಖರ ಲೆಕ್ಕವಿಲ್ಲ. ಸಮೀಕ್ಷೆ ನಡೆಸಿ ಎಷ್ಟಿವೆ ಎಂದು ಲೆಕ್ಕಾಚಾರಕ್ಕೆ ಮುಂದಾಗಿದೆ.


ಹೆೆದ್ದಾರಿ  ಅಂಚಿನಲ್ಲಿರುವ ಮದ್ಯದಂಗಡಿಗಳನ್ನು  ಮಾರ್ಚ್ 31ರೊಳಗೆ ಬಂದ್ ಮಾಡಬೇಕೆಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಬಹುತೇಕ ಎಲ್ಲ ರಾಜ್ಯ ಸರ್ಕಾರಗಳಿಗೆ ಮರ್ಮಾಘಾತ ನೀಡಿದೆ. ಏಕೆಂದರೆ, ಅಬಕಾರಿಯೇ ರಾಜ್ಯ ಸರ್ಕಾರಗಳಿಗೆ ಆದಾಯದ ಬಹುದೊಡ್ಡ ಮೂಲ. ಹಾಗಾಗಿ ಯಾವ ಸರ್ಕಾರವೂ ಅದನ್ನು ನಿಷೇಧಿಸಿರಲಿಲ್ಲ. ಮದ್ಯದಂಗಡಿಗೆ ಪರವಾನಿಗೆ ನೀಡಬೇಡಿ ಎಂದು ಗ್ರಾಮಸ್ಥರು, ಸುತ್ತಮುತ್ತಲ ವಾಸಿಗಳು ಗೋಗರೆದಿದ್ದರೂ ಆಡಳಿತ ವ್ಯವಸ್ಥೆ  ತಲೆಕೆಡಿಸಿಕೊಂಡಿರಲಿಲ್ಲ. ಈಗ ಸುಪ್ರೀಂ ಕೋರ್ಟು ಸರಿಯಾಗಿ ಚಾಟಿ ಬೀಸಿದೆ. ಈ ಆದೇಶವನ್ನು ಸರಕಾರಗಳು ಎಷ್ಟರಮಟ್ಟಿಗೆ ಚಾಲ್ತಿಗೆ ತರಲಿವೆ ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ. ಆದರೆ ಜಾರಿಗೊಳಿಸದಿದ್ದರೆ ಸುಪ್ರೀಂನ ಕೆಂಗಣ್ಣಿಗೆ ಅಧಿಕಾರಿಗಳು ತುತ್ತಾಗಬೇಕಾಗುತ್ತದೆ.
ಕುಡುಕ ಚಾಲಕರಿಂದ ವಾಹನಗಳ ಅಪಘಾತಗಳು ಹೆಚ್ಚುತ್ತಿವೆ. ಈ ಚಾಲಕರು ಕುಡಿಯುವುದೇ ರಸ್ತೆ ಬದಿಯಲ್ಲಿರುವ ಬಾರ್‌ಗಳಲ್ಲಿ. ಇದನ್ನೇ ನಿಷೇಧಿಸಿದರೆ ಎಷ್ಟೋ ಅಪಘಾತ ತಪ್ಪಿಸಬಹುದು, ಎಷ್ಟೋ ಜೀವ ಉಳಿಸಬಹುದೆನ್ನುವ ಸುಪ್ರೀಂ ನಿರ್ಧಾರ ಒಪ್ಪತಕ್ಕದ್ದು. ಒಂದು ಅಂದಾಜಿನ ಪ್ರಕಾರ, ಪ್ರತಿವರ್ಷ 1.5 ಲಕ್ಷ ಜನ ಹೆದ್ದಾರಿ ಅಪಘಾತದಿಂದ ಸಾಯುತ್ತಿದ್ದಾರೆ. ಇದು ಸರಕಾರಗಳಿಗೆ ಗೊತ್ತಿದ್ದರೂ ಏನೂ ಕ್ರಮ ಜರುಗಿಸಿರಲಿಲ್ಲ. ಜೊತೆಗೆ ಅಪಘಾತದಿಂದ ಸತ್ತ ವ್ಯಕ್ತಿಗೆ ಒಂದು ಅಥವಾ 2 ಲಕ್ಷ ರೂ. ಪರಿಹಾರ ನೀಡಿ ಕೈ ತೊಳೆದುಕೊಳ್ಳುವ ಕೆಲಸವನ್ನು ಮಾತ್ರ ಅಧಿಕಾರಿಗಳು ಅಥವಾ ಸಂಬಂಧಿತ ಮೋಟಾರು ಸಂಸ್ಥೆ ಮಾಡುತ್ತಿದೆ.
ಈಗ ಸುಪ್ರೀಂ ಖಡಕ್ಕಾಗಿ ಈ ಆದೇಶ ಜಾರಿಗೊಳಿಸಲು ಸೂಚಿಸಿದೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯ 500 ಮೀಟರ್ ವ್ಯಾಪ್ತಿಯೊಳಗೆ ಇರುವ ಮದ್ಯದಂಗಡಿ ಬಂದ್ ಮಾಡಿಸಿ ಎಂದಿದೆ. ಇದನ್ನು ಜೀರ್ಣಿಸಿಕೊಳ್ಳಲಾಗದ ಸರಕಾರಗಳು ಒದ್ದಾಡಲಾರಂಭಿಸಿವೆ. ಮದ್ಯದ ಲಾಬಿ ಪ್ರತಿ ರಾಜ್ಯದಲ್ಲೂ ಪ್ರಭಾವಶಾಲಿಯಾಗಿದೆ. ಜೊತೆಗೆ ಮದ್ಯದ ದೊರೆಗಳೇ ಸರಕಾರವನ್ನು ನಿಯಂತ್ರಿಸುವ ಮಟ್ಟದಲ್ಲಿದ್ದಾರೆ. ಇದು ಎಲ್ಲ ಜನಪ್ರತಿನಿಧಿಗಳಿಗೂ ಖುಷಿ ಕೊಡುತ್ತಿದೆ. ಆದರೆ ಮದ್ಯದಿಂದ ಆಗುತ್ತಿರುವ ಹಾನಿ ಬಗ್ಗೆ ಇವುಗಳಿಗೆ ಗೊತ್ತಿದ್ದರೂ ಜಾಣ ಮೌನ ಮೆರೆದಿದ್ದಾರೆ. ಇದು ತಮ್ಮ ಸಾಂವಿಧಾನಿಕ ಹೊಣೆ ಎನ್ನುವುದನ್ನೇ ಮರೆತುಬಿಟ್ಟಿವೆ.
ಒಂದು ಅಂಕಿ ಅಂಶದ ಪ್ರಕಾರ, ಕರ್ನಾಟಕದಲ್ಲಿ ಹೆದ್ದಾರಿಯ 220  ಮೀಟರ್ ವ್ಯಾಪ್ತಿಯಲ್ಲಿ 280 ಮದ್ಯದಂಗಡಿಗಳಿವೆ. ಇವುಗಳನ್ನು ಒಂದೋ ಸ್ಥಳಾಂತರಗೊಳಿಸಬೇಕು, ಇಲ್ಲವೇ ಮುಚ್ಚಿಸಬೇಕು. ಇನ್ನೂ ಒಂದು ಸಂಕಷ್ಟವೆಂದರೆ, ರಾಜ್ಯದಲ್ಲಿ ಅಬಕಾರಿ ಪರವಾನಿಗೆ ನವೀಕರಣ ಜೂನ್‌ನಲ್ಲಿ ಮಾತ್ರ. ಈಗಿರುವ ಮದ್ಯದಂಗಡಿಗಳ ಪರವಾನಿಗೆ ರದ್ದು ಮಾಡುವುದಾದರೆ ಅದು ಜೂನ್  ಮುಗಿದ ನಂತರವೆ. ಇಲ್ಲವಾದಲ್ಲಿ ಅವರೇ ಸ್ಥಳಾಂತರಗೊಳಿಸಿಕೊಳ್ಳಬೇಕು. ಆದರೆ, ಸುಪ್ರೀಂ ಕೋರ್ಟ್ ಮಾರ್ಚ್ ಅಂತ್ಯದವರೆಗೆ ಮಾತ್ರ ಅನುಮತಿ ಕೊಟ್ಟಿದೆ. ಹಾಗಂತ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಕೈಚೆಲ್ಲಿದರೆ ಸುಪ್ರೀಂ ತಪರಾಕಿ ನೀಡುವುದು ಖಚಿತ.
ಸಾವಿರಾರು ಮದ್ಯದಂಗಡಿಗಳು ರಾಜ್ಯದಲ್ಲಿ 500 ಮೀ ಗಿಂತ ಒಳಗಿವೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ  ಸದ್ಯ ಅಬಕಾರಿ ಇಲಾಖೆ ಬಳಿ ನಿಖರ ಲೆಕ್ಕವಿಲ್ಲ. ಸಮೀಕ್ಷೆ ನಡೆಸಿ ಎಷ್ಟಿವೆ ಎಂದು ಲೆಕ್ಕಾಚಾರಕ್ಕೆ ಮುಂದಾಗಿದೆ. ರಾಜ್ಯದಲ್ಲಿ ಹೆದ್ದಾರಿಯಿಂದ 220 ಮೀಟರ್ ಅಂತರದಲ್ಲಿ  ಮದ್ಯದಂಗಡಿ ತೆರೆಯಬಹುದು ಎಂಬ ನಿಯಮ ಈವರೆಗೆ ಇತ್ತು. ಇದರ ಪ್ರಕಾರ ಪರವಾನಿಗೆ ಕೊಡಲಾಗುತ್ತಿತ್ತು. ಈ ಅಂತರದೊಳಗೆ ಇರುವ ಹಲವು ಮದ್ಯದಂಗಡಿಗಳಿಗೆ ತೆರವುಗೊಳಿಸುವಂತೆ ನೋಟೀಸ್ ನೀಡಿದ್ದರೂ ಅವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿವೆ. ಆದರೆ ಈಗ ಅನಿವಾರ್ಯವಾಗಿ ಸ್ಥಳಾಂತರಗೊಳ್ಳಲೇಬೇಕಿದೆ ಎನ್ನುತ್ತಾರೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.
ಈಗ ಎದುರಾಗುವ ದೊಡ್ಡ ಸಮಸ್ಯೆ ಎಂದರೆ ಸ್ಥಳಾಂತರದ್ದು. ಮದ್ಯದಂಗಡಿಗಳು ತಾಲೂಕಿನೊಳಗೆ ಮಾತ್ರ ಸ್ಥಳಾಂತರಗೊಳ್ಳಬಹುದು, ಪಕ್ಕದ ತಾಲೂಕಿಗೆ ಹೋಗುವಂತಿಲ್ಲ.  ಆದರೆ ಹೊಸದಾಗಿ ಹೋಗುವ ಜಾಗಕ್ಕೆ ಸಾರ್ವಜನಿಕರ ವಿರೋಧ ಜಾಸ್ತ್ತಿಯಾಗುವ ಸಂಭವವಿದೆ. ಈಗಾಗಲೆ ಸಾಕಷ್ಟು ಜಾಗೃತಿಯನ್ನು ಸ್ತ್ರೀಶಕ್ತಿ ಮತ್ತು ಹಲವು ಮಹಿಳಾ ಸಂಘಟನೆಗಳು, ಮತ್ತಿತರ ಸಂಘಗಳು ಮೂಡಿಸುತ್ತಿರುವುದರಿಂದ ಸ್ಥಳಾಂತರಕ್ಕೂ ಗಂಡಾಂತರ ಎದುರಾಗುವ ಸಮಸ್ಯೆಯೇ ಹೆಚ್ಚಿದೆ. ಜೊತೆಗೆ ಏಕಾಏಕಿ ಸ್ಥಳಾಂತರ ಸಾಧ್ಯವಿಲ್ಲ ಇದಕ್ಕೆ ಕನಿಷ್ಠ 3 ತಿಂಗಳಾದರೂ ಬೇಕಾಗಬಹುದು.
ಈಗಾಗಲೇ ಬಹಿರಂಗವಾಗಿ ಕಾನೂನು ಉಲ್ಲಂಘಿಸಿ ಅಧಿಕಾರಿಗಳು ಯಾವುದೋ ಪ್ರಭಾವ ಅಥವಾ ಮುಲಾಜಿಗೆ ಒಳಗಾಗಿ ಧಾರ್ಮಿಕ ಸ್ಥಳ, ಶೈಕ್ಷಣಿಕ ವಲಯ, ವಸತಿ ಪ್ರದೇಶಗಳಲ್ಲಿ ಪರವಾನಿಗೆ ಕೊಟ್ಟಿದ್ದಾರೆ. ಇದು ಕಾನೂನುಬಾಹಿರ ಎಂದು ಗೊತ್ತಿದ್ದೂ ಈ ಕೆಲಸ ಮಾಡಿದ್ದಾರೆ. ಈಗ ಸಾರ್ವಜನಿಕರೇ ಮದ್ಯದಂಗಡಿಗಳನ್ನು ತಮ್ಮ ಭಾಗಕ್ಕೆ  ಸ್ಥಳಾಂತರ ಮಾಡದಂತೆ ಹೋರಾಟ ರೂಪಿಸಲು ಮುಂದಾಗಬಹುದು. ಏಕೆಂದರೆ ಸುಪ್ರೀಂನ ಆದೇಶ ಪ್ರತಿ ಎಲ್ಲರ ಕೈಲೂ ಓಡಾಡತೊಡಗಿದೆ. ಮದ್ಯಪ್ರಿಯರಿಗೆ ಅಮಲೇರದಂತೆ ಮಾಡಲು ಹಲವರು ಜಾಗೃತರಾಗುತ್ತಿದ್ದಾರೆ. ಆದರೆ ಅನುಷ್ಠಾನಗೊಳಿಸುವ ಬಗ್ಗೆ ಸರ್ಕಾರಗಳಿಗೆ ಇಚ್ಛಾಶಕ್ತಿ ಬೇಕಿದೆ. ಕಾನೂನನ್ನು ಮೀರುವುದೇ  ಮದ್ಯದಂಗಡಿಗಳ ಗುರಿಯಾಗಿರುವಾಗ ಸುಪ್ರೀಂ ಆದೇಶ ಎಷ್ಟರ ಮಟ್ಟಿಗೆ ಪಾಲನೆಯಾದೀತು ಎನ್ನುವುದನ್ನು ಎಲ್ಲರೂ ಕಾಯುತ್ತಿದ್ದಾರೆ.  
 ......................................

Thursday, 15 December 2016

ರಾಸಲೀಲೆಯಿಂದ ರಾಡಿಯಾದ ರಾಜಕಾರಣ



ಸಾರ್ವಜನಿಕ ಕ್ಷೇತ್ರದಲ್ಲಿರುವವರು ತಮ್ಮ ಖಾಸಗಿ ಜೀವನವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾಗುತ್ತದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಮಾಜಕ್ಕೆ ಮಾದರಿಯಾಗಿರಬೇಕೇ ವಿನಾ ಇತರರು ಅಸಹ್ಯಪಡುವಂತಹ ರೀತಿಯಲ್ಲಿ ನಡೆದುಕೊಳ್ಳಬಾರದು. ಆದರಿಂದು ಅಧಿಕಾರ ಮತ್ತು ಹಣ  ಬಂದಾಕ್ಷಣ ಮೈಮರೆಯುವವರೇ ಜಾಸ್ತಿಯಾಗುತ್ತಿದ್ದಾರೆ. ರಾಜಕಾರಣಿಗಳು ಮತ್ತು ಅಧಿಕಾರಿಗಳಲ್ಲಿ ವಿಶೇಷವಾಗಿ ಇಂತಹ ಗುಣ ರಾರಾಜಿಸುತ್ತಿರುವುದು ಇತ್ತೀಚೆಗೆ ಹೆಚ್ಚುತ್ತಿವುದು ಆತಂಕದ ವಿಚಾರವಾಗಿದೆ.
 ಕೆಟ್ಟ ಕೆಲಸ ಮಾಡುವವರಿಗೆ ಜಾತಿ , ಪಕ್ಷ, ಪಂಗಡ, ಧರ್ಮ ಯಾವುದೂ ಇಲ್ಲ. ಜನರು ಮಾತ್ರ ಆ ಪಕ್ಷ, ಈ ಪಕ್ಷ ಎಂದು ಟೀಕಿಸುತ್ತ, ಕೆಸರೆರಚಿಕೊಳ್ಳುತ್ತಾರೆಯೇ ವಿನಾ ಅದನ್ನು ಮಾಡುವವನಿಗೆ ತನ್ನ ಮೈಮೇಲಿನ ಪರಿವೆಯೂ ಇರುವುದಿಲ್ಲ. ಎಲ್ಲಾ ಮೌಲ್ಯ ಮತ್ತು ಬದ್ಧತೆಯನ್ನು ಮರೆಯುತ್ತಾನೆ. ಅಧಿಕಾರ ಮತ್ತು ಹಣವೇ ಸರ್ವಸ್ವವಾಗುತ್ತದೆ. ಆ ಮದದಲ್ಲಿ ತಾನು ಏನು ಮಾಡಿದರೂ ದಕ್ಕಿಸಿಕೊಳ್ಳಬಲ್ಲೆ ಎನ್ನುವ ಅಹಂಭಾವದ ಅಮಲು ಆತನ ತಲೆಗೇರುತ್ತದೆ. ಕೊನೆಗೆ ಇದೇ ಆತನನ್ನು ಬಲಿತೆಗೆದುಕೊಳ್ಳುತ್ತದೆ.
ಇದಕ್ಕೆ ರಾಜ್ಯದ ಹಲವು ರಾಜಕಾರಣಿಗಳನ್ನು ಉದಾಹರಿಸಬಹುದು. ನಿನ್ನೆಯಷ್ಟೇ ರಾಸಲೀಲೆ ಮೂಲಕ ‘ಹೆಸರುವಾಸಿಯಾದ’ ಮಾಜಿ ಸಚಿವ  ಎಚ್. ವೈ. ಮೇಟಿ ತಮ್ಮ ಇಳಿವಯಸ್ಸಿನಲ್ಲಿ ಇಂತಹ ಅನಾಚಾರಕ್ಕೆ ಕೈಹಾಕಿ ಭವಿಷ್ಯದ ಮೇಲೆ ಬರೆ ಎಳೆದುಕೊಂಡಿದ್ದಾರೆ. ಪದೇ ಪದೇ ಇಂತಹ ಘಟನೆಗಳು ಘಟಿಸುತ್ತಿದ್ದರೂ ರಾಜಕಾರಣಿಗಳು ಮಾತ್ರ ಎಚ್ಚೆತ್ತುಕೊಳ್ಳದಿರುವುದು ದುರಂತವೇ ಸರಿ.
ಈ ಹಿಂದೆ ಮಂತ್ರಿಯಾಗಿದ್ದ ಹರತಾಳು ಹಾಲಪ್ಪ, ರೇಣುಕಾಚಾರ್ಯ, ಎಸ್.ಎಸ್. ಪಾಟೀಲ್, ಲಕ್ಷ್ಮಣ ಸವದಿ, ಮಾಜಿ ಸಚಿವ ರಾಮದಾಸ್, ಹಾಲಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಇವರೆಲ್ಲ ವಿವಿಧ ರೀತಿಯಲ್ಲಿ ರಾಸಲೀಲೆ ಅಥವಾ ಬ್ಲೂಫಿಲ್ಮ್ ಮೂಲಕ ಸುದ್ದಿ ಮಾಡಿದವರೇ. ಇದು ಗೊತ್ತಿದ್ದೂ ಸಹ ರಾತ್ರಿ ಕಂಡ ಬಾವಿಯಲ್ಲಿ ನಮ್ಮ  ರಾಜಕಾರಣಿಗಳು ಬೀಳುತ್ತಿದ್ದಾರೆ.
ಮೇಟಿ ವಿಚಾರ ಒಂದು ವಾರದಿಂದ ಗುಲ್ಲೆಬ್ಬಿಸಿದರೂ, ನಿನ್ನೆಯಷ್ಟೇ ರಾಜಿನಾಮೆ ಕೊಡುವ ಮಟ್ಟಕ್ಕೆ ತಲುಪಿದೆ. ರಾಸಲೀಲೆಯ ಸಿಡಿಯನ್ನು ಬಿಡುಗಡೆ ಮಾಡುವುದಾಗಿ ಹೇಳುತ್ತ ಕೊನೆಗೂ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಮೇಟಿ ಮಹಿಳೆಯೊಂದಿಗೆ ಕೃಷ್ಣಲೀಲೆ ನಡೆಸಿರುವುದು ಸಾಬೀತಾಗಿದೆ. ನಮ್ಮ ರಾಜಕಿಯ ಪಕ್ಷಗಳು ಆರೋಪ ಬಂದೊಡನೆ ಅದರ ಬಗ್ಗೆ ಕೂಡಲೇ ವಿಚಾರಣೆ ನಡೆಸಿ, ವರದಿ ತರಿಸುವುದನ್ನು ಬಿಟ್ಟು ಅವರನ್ನು ಸಮರ್ಥಿಸಿಕೊಳ್ಳುವುದಕ್ಕೆ ಮಹತ್ವ ಕೊಡುವ ಮೂಲಕ ಪ್ರಕರಣ ಇನ್ನಷ್ಟು ಬೆಳೆಯಲು, ಪ್ರತಿಪಕ್ಷಗಳಿಗೆ ಆಹಾರವಾಗಲು ಬಿಡುತ್ತಿವೆ. ಮೇಟಿ ವಿಚಾರದಲ್ಲಿ ಕಾಂಗ್ರೆಸ್ ಅಂದೇ ಕ್ರಮ ಜರುಗಿಸಿದ್ದರೆ ಇಷ್ಟೆಲ್ಲ ಸುದ್ದಿಯಾಗುತ್ತಿರಲಿಲ್ಲ.
ಜನಪ್ರತಿನಿಧಿಗಳು ತಮ್ಮ ಚಾರಿತ್ರ್ಯವನ್ನು ಉಳಿಸಿಕೊಳ್ಳುವತ್ತ ಗಮನಹರಿಸಬೇಕಿದೆ. ನೈತಿಕತೆ ಬಗ್ಗೆ ಭಾಷಣ ಮಾಡುವವರು ಅದರ ಅರ್ಥವನ್ನು ಅರಿಯದಾಗಿದ್ದಾರೆ. ಅಥವಾ ತಮಗೆ ಮಾತ್ರ ಅದು ಸಂಬಂಧಿಸಿದ್ದಲ್ಲ ಎಂದುಕೊಂಡಿದ್ದಾರೋ ಏನೋ....?. ಏಕೆಂದರೆ  ಇಂಗ್ಲಿಷ್‌ನಲ್ಲಿ ಒಂದು ಮಾತಿದೆ: ‘‘ ನಡತೆ ಕೆಟ್ಟರೆ ಎಲ್ಲವನ್ನೂ ಕಳೆದುಕೊಡಂತೆ’’ ಎಂದು. ನಮ್ಮ ಜೀವನ ಪೂರ್ತಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಕೆಲವು ರಾಜಕಾರಣಿಗಳು ಇಂತಹ ಚಟಗಳಿಂದಾಗಿಯೇ ತಮ್ಮ ಸ್ಥಾನ, ಮಾನ ಕಳೆದುಕೊಂಡು, ರಾಜಕೀಯ ಜೀವನವನ್ನೇ ನಾಶಮಾಡಿಕೊಂಡ  ಉದಾಹರಣೆ ಕಣ್ಮುಂದಿದೆ.
ಈ ಸಂದರ್ಭದಲ್ಲಿ ಸರ್ವಜ್ಞನ ತ್ರಿಪದಿಯೊಂದು ನೆನಪಾಗುತ್ತಿದೆ.
"ಕಚ್ಚೆ, ಕೈ, ಬಾಯಿ ಇಚ್ಛೆಯಲಿ ಇದ್ದಿಹರೆ
ಅಚ್ಯುತನಪ್ಪ ಅಜನಪ್ಪ, ಲೋಕದಲಿ
ನಿಶ್ಚಿಂತನಪ್ಪ ಸರ್ವಜ್ಞ"
 -ಇವು ಮೂರು ಸರಿಯಾಗಿದ್ದರೆ ಲೋಕದಲ್ಲಿ ನಿಶ್ಚಿಂತೆಯಿಂದಿರಬಹುದೆನ್ನುವ ಅರ್ಥವನ್ನು ಈ ತ್ರಿಪದಿ ನೀಡುತ್ತದೆ.  ಆದರೆ ಕೈ, ಬಾಯಿಯನ್ನು ಶುದ್ಧವಿಟ್ಟುಕೊಳ್ಳುವವರನ್ನು ಇಂದು ಜರಡಿ ಹಿಡಿದು ನೋಡಬೇಕಿದೆ. ಕಚ್ಚೆ ಹರಕುತನವೂ ಈಗ ಜೋರಾಗುತ್ತಿದೆ. ಸರ್ವಜ್ಞ ಇಂತಹವರನ್ನು ಗಮನಿಸಿಯೇ ಎಚ್ಚರಿಕೆ ಕೊಟ್ಟಿರಬಹುದು. ಅಥವಾ ಈ ಮಾತನ್ನು ಸಾಬೀತುಪಡಿಸಲೆಂದೇ ಇಂತಹ ರಾಜಕಾರಣಿಗಳು ಹುಟ್ಟಿರಬಹುದು.  
್ದ ಎಚ್. ವೈ ಮೇಟಿ ಎಷ್ಟೇ ಒಳ್ಳೆಯವರಿದ್ದರೂ ರಾಸಲೀಲೆ ನಡೆಸುವ ಮೂಲಕ ತಮ್ಮ ಎಲ್ಲ ಒಳ್ಳೆಯತನವನ್ನು ರಾಸಲೀಲೆ ಮೂಲಕ ಕಳೆದುಕೊಂಡಿದ್ದಾರೆ. ಜೆಡಿಎಸ್‌ನಲ್ಲಿದ್ದು, ನಂತರ ಸಿದ್ದರಾಮಯ್ಯ ಜೊತೆಗೆ ಕಾಂಗ್ರೆಸ್‌ಗೆ ಕಾಲಿಟ್ಟು, ಮೂರು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿದ್ದ ಇವರಿಗೆ ಇಳಿವಯಸ್ಸಿನಲ್ಲಿ ಇಂತಹ ಕೆಲಸ ಬೇಕಿತ್ತೇ ಎನ್ನುವ ಪ್ರಶ್ನೆ ಎದುರಾಗುತ್ತಿದೆ. ಪ್ರಾಯಶಃ "ಮರ ಮುಪ್ಪಾದರೂ ಹುಳಿ ಮುಪ್ಪೇ" ಎನ್ನುವ ಮಾತು ಇಂಥವರನ್ನು ನೋಡಿಯೇ ಹುಟ್ಟಿಕೊಂಡಿರಬೇಕು. ಇದರ ಜೊತೆಗೆಯೇ ಅವರ ಗನ್‌ಮ್ಯಾನ್ ಮತ್ತು ರಾಸಲೀಲೆಯಲ್ಲಿ ಪಾಲ್ಗೊಂಡ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಮಸಾಜ್ ಥೆರಪಿಸ್ಟ್  ಕೈವಾಡ ಇದರಲ್ಲಿದೆಯೇ ಎನ್ನುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
"ಎನ್ನ ನಡೆಯೊಂದು ಪರಿ, ನುಡಿಯೊಂದು ಪರಿ
ಎನ್ನೊಳಗೇನೂ ಶುದ್ಧವಿಲ್ಲವಯ್ಯಾ"
-ಇದು ಸಮಾಜ ಸುಧಾರಕ ಬಸವಣ್ಣನವರು ತನ್ನನ್ನು ತಾನೇ ವಿಮರ್ಶೆಗೊಡ್ಡಿದ ವಚನದ ಸಾಲು. ನಮ್ಮ ರಾಜಕಾರಣಿಗಳಿಗೆ  ಅದಾವ ಕಾಲಕ್ಕೆ ಈ ಮಾತಿನ ಮರ್ಮ ತಿಳಿದೀತು?
ಮೇಟಿಯವರ ರಾಸಲೀಲೆ ಬಯಲಾಗಿದೆ. ಇಂತಹ ರಾಜಕಾರಣಿಗಳಿಗೆ ಆಯಾಯ ಪಕ್ಷದವರು ಮೊದಲು ಗೇಟ್‌ಪಾಸ್ ಕೊಟ್ಟು ಮನೆಗಟ್ಟುವುದರ ಜೊತೆಗೆ ಮುಂದೆಯೂ ಇಂತಹ ಕೃತ್ಯ ಎಸಗುವವರಿಗೆ ಎಚ್ಚರಿಕೆ ಕೊಡಬೇಕಿದೆ. ರಾಜೀನಾಮೆ ಪಡೆಯುವುದಷ್ಟೇ ಶಿಕ್ಷೆಯಲ್ಲ ಎನ್ನುವುದನ್ನು  ಪಕ್ಷಗಳು ಮನಗಾಣಬೇಕಾಗಿದೆ. ರಾಜಕಾರಣಿಗಳೆಂದರೆ ಕೆಟ್ಟ ಭಾವನೆ ಬರುವಂತಾಗದಿರಲು ಪಕ್ಷಗಳು ಸದ್ಗುಣಗಳ ಪಾಠ ಮಾಡಬೇಕಾದ ಸ್ಥಿತಿ ಎದುರಾಗಿರುವುದು ದುರಂತವೇ ಸರಿ.  
,,,,,,,,,,,,,,,,,,,,,,,,,,,,,,,,

Monday, 12 December 2016

ಅಡಿಕೆಗೆ ಬೆಂಬಲ ಬೆಲೆ: ಯಾರಿಗೆ ಪ್ರಯೋಜನ?



ಶಿವಮೊಗ್ಗ: ಮಲೆನಾಡು, ಅರೆಮಲೆನಾಡು ಮತ್ತು ಕರಾವಳಿ ಭಾಗದಲ್ಲಿ  ಅತಿ ಹೆಚ್ಚು ಪ್ರಮಾಣದಲ್ಲಿ ಬೆಲೆಯುತ್ತಿರುವ ಅಡಿಕೆಗೆ ಬೆಂಬಲ ಬೆಲೆಯನ್ನು ಕೇಂದ್ರ ಸರಕಾರ ಪ್ರಕಟಿಸಿದೆ. ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಡಿ ಅಡಿಕೆಗೆ ಸೂಕ್ತ ಪ್ರೋತ್ಸಾಹಕ ಕ್ರಮಗಳನ್ನು 2016 ನೆಯ ಸೀಸನ್‌ಗೆ ಮಾತ್ರ ಇದನ್ನು ಸೀಮಿತಗೊಳಿಸಿದೆ. ಈ ಯೋಜನೆಯು ಡಿ. 7 ರಿಂದ 31 ರವರೆಗಿನ ಅವಧಿಯಲ್ಲಿ ಜಾರಿಯಲ್ಲಿರುತ್ತದೆ. ಆದರೆ ಇದರ ಪ್ರಯೋಜನ ಬಹುತೇಕ ಬೆಳೆಗಾರರಿಗೆ ಸಿಗದಂತಾಗಿದೆ.
   ಗರಿಷ್ಠ 40 ಸಾವಿರ ಮೆಟ್ರಿಕ್ ಟನ್ (28 ಸಾವಿರ ಚಾಲಿ ಅಡಿಕೆ ಮತ್ತು 12 ಸಾವಿರ ಕೆಂಪಡಿಕೆ) ಅಡಿಕೆಯನ್ನು ರಾಜ್ಯದ ಏಜನ್ಸಿಯ ಮೂಲಕ ಖರೀದಿಸಬಹುದಾಗಿದೆ.  ಕೇಂದ್ರದ  ಈ ಬೆಂಬಲ ಬೆಲೆಯ ಖರೀದಿ ಡಿ. 31ರವರೆಗೆ. ಈ ಅವಧಿಯನ್ನು ಇನ್ನೂ ಹೆಚ್ಚು ಅವಧಿಗೆ ವಿಸ್ತರಿಸಬೇಕಾದ ಅನಿವಾರ್ಯತೆ ಇದೆ.
 ಕೆಂಪು ಅಡಿಕೆಗೆ 27 ಸಾವಿರ ಹಾಗೂ ಚಾಲಿ ಅಡಿಕೆಗೆ (ಪ್ರತಿ ಕ್ವಿಂಟಾಲ್‌ಗೆ) 25,100 ರೂ. ಘೋಷಣೆ ಮಾಡಿದೆ. ಮಲೆನಾಡಿನ ತೀರ್ಥಹಳ್ಳಿ, ಹೊಸನಗರ, ಶಿವಮೊಗ್ಗ, ಸಾಗರ ಮತ್ತು ಅರೆಮಲೆನಾಡಿನಲ್ಲಿ ಮಾತ್ರ ಈಗ ಅಡಿಕೆ ಕೊಯ್ಲು ನಡೆಯುತ್ತಿದೆ. ಇದು  ಸುಲಿದು, ಒಣಗಿ, ಸಂಸ್ಕರಣೆಯಾಗುವವರೆಗೆ ಡಿಸೆಂಬರ್ ಮುಗಿದಿರುತ್ತದೆ. ಅಂದರೆ ಈಗಿನ ಗಡುವು ಯಾತಕ್ಕೂ ಸಾಲದು .
ಇನ್ನು ಶಿರಸಿ, ಸಿದ್ದಾಪುರ, ಯಲ್ಲಾಪುರ ಮತ್ತು ಕರಾವಳಿ ಭಾಗದಲ್ಲಿ ಅಡಿಕೆ ಕೊಯ್ಲು ಆರಂಭವಾಗುವುದೇ ಡಿಸೆಂಬರ್ ಮಧ್ಯಭಾಗ ಅಥವಾ ಕೊನೆಯ ವಾರದಲ್ಲಿ. ಇದು ಫೆಬ್ರವರಿ ಅಂತ್ಯದವರೆಗೂ ಸಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಕೊಯ್ಯುವವರು ಸಿಗದ ಕಾರಣ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಆದ್ದರಿಂದ ಈ ಬೆಂಬಲ ಬೆಲೆಯಿಂದ ಉತ್ತರ ಕನ್ನಡ ಮತ್ತು ಕರಾವಳಿಯವರಿಗೆ ಎಳ್ಳಷ್ಟೂ ಪ್ರಯೋಜನವಿಲ್ಲ.
ಎರಡನೆಯದಾಗಿ, ಬೆಂಬಲ ಬೆಲೆ ಕಡಿಮೆಯಾಯಿತೆಂದೇ ಹೇಳಬಹುದು. ಏಕೆಂದರೆ ಕ್ವಿಂಟಾಲ್‌ಗೆ ಸುಮಾರು 90 ಸಾವಿರವದವರೆಗೆ ರೇಟನ್ನು ಅಡಿಕೆ ಬೆಳೆಗಾರರು ಪಡೆದಿದ್ದಾರೆ. ಆದರೆ ಇತ್ತೀಚಿನ ಒಂದೆರಡು ವರ್ಷಗಳಲ್ಲಿ ದರ ಪಾತಾಳ ಕಂಡಿದ್ದರಿಂದ ಬೆಂಬಲ ಬೆಲೆಯ ಆಗ್ರಹ ಮಾಡಿದ್ದರು. ಹಿಂದೆಂದೂ ಇಂತಹ ಸ್ಥಿತಿ ಬಂದಿರಲಿಲ್ಲ. ಈಗ  ಸತತ ದರ ಕುಸಿತದ ಹಿನ್ನೆಲೆಯಲ್ಲಿ  ಬೆಂಬಲ ಬೆಲೆ ಕೇಳಿದ್ದರು. ಪ್ರಸ್ತುತ ಸಾಲಿನಲ್ಲಿ ಸುಮಾರು 30 ಸಾವಿರ ರೂ ಪ್ರತಿ ಕ್ವಿಂಟಾಲ್‌ಗೆ ಅಡಿಕೆ ದರವಿದೆ. ಆದ್ದರಿಂದ ಕನಿಷ್ಠ 35 ಸಾವಿರ ರೂ. ವಾದರೂ ಬೆಂಬಲ ಬೆಲೆ ಘೋಷಿತವಾಗಬಹುದೆನ್ನುವ ಲೆಕ್ಕಾಚಾರ ಅಡಿಕೆ ಬೆಳೆಗಾರರದ್ದಾಗಿತ್ತು. ಆದರೆ ಇದು ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ. ಸಮಾಧಾನಕರ ಸಂಗತಿ ಎಂದರೆ, ಇನ್ನೂ ದರ ಕುಸಿತವಾಗುವ  ಸಾಧ್ಯತೆ ಕಡಿಮೆಯಾಗಿದೆ. ಸ್ಥಿರತೆ ಬರಬಹುದೆನ್ನುವುದೊಂದೇ ನಿಟ್ಟುಸಿರು ಬಿಡುವಂತಹ ವಿಚಾರ.      
ಬೆಂಬಲ ಬೆಲೆಯನ್ನು ಸರಕಾರ ಕನಿಷ್ಟ ಎಪ್ರಿಲ್‌ವರೆಗಾದರೂ ಮುಂದುವರೆಸಿದರೆ ಮಾತ್ರ ಎಲ್ಲ ಅಡಿಕೆ ಬೆಳೆಗಾರರಿಗೆ ಲಾಭವಾಗುತ್ತದೆ. ಇಲ್ಲವಾದರೆ  ಕೆಲವೇ ಬೆಳೆಗಾರರು ಮಾತ್ರ ಇದರ ಲಾಭ ಪಡೆಯುವಂತಾಗುತ್ತದೆ. ಅಕ್ಕಪಕ್ಕದ ಜಿಲ್ಲೆಯಲ್ಲಿ ದೊಡ್ಡ ಹಿಡುವಳಿದಾರರ ಅಡಿಕೆ ಕೊಯ್ಲು ಮುಗಿಯುವಾಗಲೇ ಫೆಬ್ರುವರಿ ದಾಟುತ್ತದೆ. ಸಂಸ್ಕರಣೆಗೆ ಕೆಲವು ಕಾಲ ತಗುಲುತ್ತದೆ. ಹೀಗಾಗಿ ಅವಧಿಯನ್ನು ವಿಸ್ತರಿಸಿದರೆ ಮಾತ್ರ  ಅನುಕೂಲವಾಗಲು ಸಧ್ಯ.
ಬೆಂಬಲ ಬೆಲೆಯಲ್ಲಿ ಖರೀದಿ ಮಿತಿಯನ್ನು  40 ಸಾವಿರ ರೂ. ಮೆಟ್ರಿಕ್ ಟನ್‌ಗೆ ನಿಗದಿಗೊಳಿಸಿದೆ. ಇದು ಅಡಿಕೆ ಬೆಳೆಗಾರರಿಗೆ ಬೆಂಬಲ ಬೆಲೆಯನ್ನು ಮಾರಾಟ ಮಾಡುವ ಅವಕಾಶವನ್ನು ಕ್ಷೀಣಿಸುವಂತೆ ಮಾಡಿದೆ. ರಾಜ್ಯದಲ್ಲಿ ವಾರ್ಷಿಕ 4.50 ಮೆಟ್ರಿಕ್ ಟನ್‌ನಷ್ಟು ಅಡಿಕೆ ಬೆಳೆಯಲಾಗುತ್ತಿದೆ. ಅಂದರೆ ಶೇ. 10ರಷ್ಟು ಮಾತ್ರ ಖರೀದಿಗೆ ಅವಕಾಶ ಕಲ್ಪಿಸಿದಂತಾಗಿದೆ.
 ಅನಾವೃಷ್ಟಿ, ಬೆಲೆಯಲ್ಲಿ ಅಸ್ಥಿರತೆ, ಮಧ್ಯವರ್ತಿಗಳ ಹಾವಳಿ ಮೊದಲಾದವುಗಳಿಂದ ಕಂಗೆಟ್ಟಿದ್ದ  ರಾಜ್ಯದ ಅಡಿಕೆ ಬೆಳೆಗಾರರಿಗೆ ಸಮಾಧಾನ ನೀಡುವ ಪ್ರೋತ್ಸಾಹಕ ಕ್ರಮಗಳನ್ನು ಕೇಂದ್ರದ  ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಪ್ರಕಟಿಸಿದೆ. ಇದರಿಂದ ಅತಿ ಹೆಚ್ಚಿನ ಅಡಿಕೆ ಬೆಳೆಗಾರರಿರುವ ಮಲೆನಾಡು ಭಾಗವೂ ಸೇರಿದ0ತೆ ರಾಜ್ಯದ ಎಲ್ಲಾ ಭಾಗಗಳಲ್ಲಿರುವ ಅಡಿಕೆ ಬೆಳೆಯುವ ರೈತರಿಗೆ ಅನುಕೂಲವಾಗಲಿದೆ ಎನ್ನುವುದು ಮಾತ್ರ ಸರಿಯಲ್ಲ.


ಕರಾವಳಿ, ಮಲೆನಾಡು ಮತ್ತು ಬಯಲುಸೀಮೆಯ ಪ್ರಮುಖ ವಾಣಿಜ್ಯ ಬೆಳೆ ಎನ್ನಬಹುದು. ರಾಜ್ಯದ 22 ಜಿಲ್ಲೆಯಲ್ಲಿ 2.15 ಹೆಕ್ಟೇರ್‌ನಲ್ಲಿ ಇದನ್ನು ಬೆಳೆಯಲಾಗುತ್ತಿದೆ. ಉತ್ಪಾದನೆ 3.16 ಲಕ್ಷ ಟನ್‌ನಷ್ಟಿದೆ. ದೇಶದ ಅಡಿಕೆ ಉತ್ಪಾದನೆಯ ಶೇ. 47 ಭಾಗವನ್ನು ಕರ್ನಾಟಕವೊಂದೇ ಬೆಳೆಯುತ್ತಿದೆ. ಅಡಿಕೆ ಉತ್ಪಾದನೆ ಈಗ ಬೇಡಿಕೆಗಿಂತ ಹೆಚ್ಚಿದೆ.  ನ್ಯಾಯಸಮ್ಮತ ಬೆಲೆ ಬೆಳೆಗಾರರಿಗೆ ಸಿಗಬೇಕು ಎಂಬ ಹಿನ್ನೆಲೆಯಲ್ಲಿ ಅಡಿಕೆ ಮಂಡಳಿ ಸ್ಥಾಪಿಸುವ ಚಿಂತನೆ ಆರಂಭವಾಗಿದೆ. ಅಡಿಕೆ  ಬೆಳೆ ಮತ್ತು ಮಾರುಕಟ್ಟೆ ಇತ್ತೀಚಿನ ವರ್ಷಗಳಲ್ಲಿ ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿದೆ.  ಈ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರ ಹಿತವನ್ನು ರಕ್ಷಿಸುವ ಏಕೈಕ ಉದ್ದೇಶದಿಂದ ಅಡಿಕೆ ಮಂಡಳಿ ಸ್ಥಾಪನೆಯಾಗುವುದು ಒಳ್ಳೆಯದು ಎಂದು ಬೆಳೆಗಾರರು, ಸಹಕಾರಿಗಳು, ಸಂಶೋಧಕರು ಅಭಿಪ್ರಾಯಪಡುತ್ತಿದ್ದಾರೆ.
..............................

Friday, 2 December 2016



ತೀವ್ರ ಚಳಿ, ಬಿಸಿಲಿನ ಹೊಡೆತಕ್ಕೆ ಮಲೆನಾಡು ತತ್ತರ
ಶಿವಮೊಗ್ಗ : ಕಳೆದ ಒಂದು ವಾರದಿಂದ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಚಳಿಯ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ನಾಗರಿಕರು ಗಡಗಡ ನಡುಗುವಂತೆ ಮಾಡಿದೆ. ಮತ್ತೊಂದೆಡೆ, ಬಿಸಿಲ ಬೇಗೆ ಕೂಡ ಏರುಗತಿಯಲ್ಲಿದ್ದು, ಏದುಸಿರುವ ಬಿಡುವಂತಾಗಿದೆ. ಚಳಿ - ಬಿಸಿಲಿನ ಹೊಡೆತಕ್ಕೆ ಮಲೆನಾಡಿಗರು ತತ್ತರಿಸಿ ಹೋಗುವಂತಾಗಿದ್ದು, ಆತಂಕಿತರನ್ನಾಗಿಸಿದೆ.
 ಸಂಜೆಯಾಗುತ್ತಿದ್ದಂತೆ ತಾಪಮಾನದಲ್ಲಿ ದಿಢೀರ್ ಕುಸಿತವಾಗುತ್ತಿದ್ದು, ತಣ್ಣನೆಯ ವಾತಾವರಣ ಆವರಿಸುತ್ತಿದೆ. ಮಧ್ಯರಾತ್ರಿ ಹಾಗೂ ಮುಂಜಾನೆಯ ವೇಳೆಯಂತೂ ಮನೆಯಿಂದ ಹೊರಬರಲು ಸಾಧ್ಯವಾಗದಷ್ಟು ಚಳಿ ಬಿದ್ದಿರುತ್ತದೆ. ಹಲವೆಡೆ ಚಳಿಯ ಜೊತೆಗೆ ಕುಳಿರ್ಗಾಳಿ ಕೂಡ ಬೀಸುತ್ತಿದ್ದು, ಇದು ನಾಗರಿಕರ ನಿದ್ದೆಗೆಡಿಸಿದೆ.  ನಗರದಲ್ಲಿ ಮುಂಜಾನೆಯ ವೇಳೆ ಕನಿಷ್ಠ ತಾಪಮಾನ 15 ರಿಂದ 18 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ದಾಖಲಾಗುತ್ತಿದೆ. ಕಳೆದ  ನವೆಂಬರ್‌ಗೆ ಹೋಲಿಕೆ ಮಾಡಿದರೆ ಪ್ರಸ್ತುತ ವರ್ಷ ಬೀಳುತ್ತಿರುವ ಚಳಿಯ ಪ್ರಮಾಣ ಅತ್ಯಧಿಕವಾಗಿದೆ. ಮುಂದಿನ ದಿನಗಳಲ್ಲಿ ಚಳಿಯ ಪ್ರಮಾಣದಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆಯ ಮೂಲಗಳು ಹೇಳುತ್ತಿವೆ.
ಮುಂಜಾನೆಯ ವೇಳೆ ಚಳಿಯ ಪ್ರಮಾಣ ಹೆಚ್ಚಿರುವುದರಿಂದ ನಗರದ ವಿವಿಧ ರಸ್ತೆ, ಪಾರ್ಕ್, ಕ್ರೀಡಾಂಗಣಗಳಲ್ಲಿ ಜಾಗಿಂಗ್, ವಾಕಿಂಗ್ ಹೋಗುವವರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಕೆಲವರು ಮುಂಜಾನೆಗೆ ಬದಲಾಗಿ ಸಂಜೆಯ ವೇಳೆ ವಾಯುವಿಹಾರ ನಡೆಸಲಾರಂಭಿಸಿದ್ದಾರೆ. ಮತ್ತೆ ಕೆಲವರು ಮಫ್ಲರ್, ಟೋಪಿ, ಸ್ವೆಟರ್ ತೊಟ್ಟು ಮುಂಜಾನೆಯ ಚಳಿಯಲ್ಲಿಯೇ ಎಂದಿನಂತೆ ವಾಕಿಂಗ್-ಜಾಗಿಂಗ್ ನಡೆಸುತ್ತಿದ್ದಾರೆ.
ಮುಂಜಾನೆಯ ವೇಳೆ ಕೆಲಸಕ್ಕೆ ಹೋಗುವವರ ಸ್ಥಿತಿಯಂತೂ ಹೇಳತೀರದಾಗಿದೆ. ಹಾಗೆಯೇ ವಾಹನ ಚಾಲಕರು ಕೂಡ ಮೈ ನಡುಗಿಸುವ ಚಳಿಯಲ್ಲಿಯೇ ವಾಹನ ಚಲಾಯಿಸುವಂತಾಗಿದೆ. ರಾತ್ರಿ ಹಾಗೂ ಮುಂಜಾನೆಯ ವೇಳೆ ಚಾಲನೆ ಮಾಡಲಾಗದಂತಹ ಸ್ಥಿತಿಯಿದೆ. ತಣ್ಣನೆಯ ಕುಳಿರ್ಗಾಳಿ ಮುಖ, ಮೈಗೆ ರಾಚುತ್ತಿರುತ್ತದೆ. ಎಷ್ಟೆ ಬೆಚ್ಚನೆಯ ಹೊದಿಗೆ ಹೊದ್ದುಕೊಂಡರೂ ಚಳಿಯ ಹೊಡೆತದಿಂದ ಪಾರಾಗಲು ಸಾಧ್ಯವಾಗದಂತಾಗಿದೆ ಎಂದು ಚಾಲಕರು ಚಳಿಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
 ರಾತ್ರಿ ಮತ್ತು ಮುಂಜಾನೆ ಚಳಿಯ ತೀವ್ರತೆ ಹೆಚ್ಚಿದ್ದರೆ, ಮಧ್ಯಾಹ್ನದ ವೇಳೆ ಬಿಸಿಲ ತಾಪ ತೀವ್ರವಾಗಿರುವುದು ಕಂಡುಬರುತ್ತಿದೆ. ನಗರದಲ್ಲಿ ಇತ್ತೀಚೆಗೆ ಮಧ್ಯಾಹ್ನದ ವೇಳೆ ದಾಖಲಾಗುವ ಉಷ್ಣಾಂಶದ ಪ್ರಮಾಣ 35 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕವಾಗಿರುತ್ತದೆ. ಬೇಸಿಗೆಯ ಏಪ್ರಿಲ್, ಮೇ ತಿಂಗಳಲ್ಲಿ ದಾಖಲಾಗುವ ಉಷ್ಣಾಂಶ ಈಗಲೇ ಕಂಡುಬರುತ್ತಿದ್ದು, ಬಿಸಿಲು ನಾಗರಿಕರ ನೆತ್ತಿ ಸುಡುತ್ತಿದೆ. ಮಧ್ಯಾಹ್ನದ ವೇಳೆ ಮನೆಯಿಂದ ಹೊರಬರಲು ಆಗದಷ್ಟು ಬಿಸಿಲು ಬೀಳುತ್ತಿರುತ್ತದೆ. ಬೇಸಿಗೆಯ ಅವಧಿಯಲ್ಲಿಯೂ ಕಂಡುಬರದಷ್ಟು ಬಿಸಿಲು ಬೀಳುತ್ತಿದೆ. ಸಂಜೆ-ಮುಂಜಾನೆ ಚಳಿಯಿಂದ ನಡುಗುವಂತಾಗಿದ್ದರೆ, ಮಧ್ಯಾಹ್ನದ ವೇಳೆ ಸುಡು ಬಿಸಿಲಿಗೆ ಬಸವಳಿಯುವಂತಾಗಿದೆ. 24 ಗಂಟೆಯ ಅವಧಿಯಲ್ಲಿಯೇ ಕಂಡುಬರುತ್ತಿರುವ ತೀವ್ರ ಚಳಿ - ಬಿಸಿಲಿನ ಹವಮಾನದ ವೈಪರೀತ್ಯದಿಂದ ಜನರು ನಾನಾ ರೀತಿಯ ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುವಂತಾಗಿದೆ. ವಯೋವೃದ್ದರು, ಮಕ್ಕಳು, ಅನಾರೋಗ್ಯದಿಂದ ಬಳಲುತ್ತಿರುವವರಂತೂ ಬಿಸಿಲು - ಚಳಿಯ ಹೊಡೆತಕ್ಕೆ ಥರಗುಟ್ಟುವಂತಾಗಿದೆ.
ಒಟ್ಟಾರೆ ತೀವ್ರ ಪ್ರಮಾಣದಲ್ಲಿ ದಾಖಲಾಗುತ್ತಿರುವ ಚಳಿ - ಬಿಸಿಲು ಮಲೆನಾಡಿಗರನ್ನು ಹೈರಾಣಾಗಿಸಿದೆ., ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುವಂತಾಗಿದೆ.
 ------------------------------
 ಗುಂಡಿ-ಗೊಟರಿನ ರಸ್ತೆ: ಗಮನಹರಿಸದ ಪಾಲಿಕೆ ಆಡಳಿತ


 : ಹಲವು ತಿಂಗಳುಗಳಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ - ಗೊಟರುಗಳ ದುರಸ್ತಿಯೇ ಆಗಿಲ್ಲ. ನಗರ ವ್ಯಾಪ್ತಿಯ ಹಲವು ಬಡಾವಣೆಗಳಲ್ಲಿರುವ ಮುಖ್ಯ ರಸ್ತೆಗಳು ಸೇರಿದಂತೆ ಒಳ ರಸ್ತೆಗಳಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಗುಂಡಿ - ಗೊಟರುಗಳು ಬಿದ್ದಿವೆ. ಜನ - ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿದೆ. ರಸ್ತೆಯ ಅವ್ಯವಸ್ಥೆಯಿಂದ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ.  ಮತ್ತೊಂದೆಡೆ, ಧೂಳಿನ ಪ್ರಮಾಣ ಕೂಡ ಹೆಚ್ಚಳವಾಗಿದ್ದು, ನಾಗರಿಕರು ನಾನಾ ರೀತಿಯ ಅನಾರೋಗ್ಯ ಸಮಸ್ಯೆಗೂ ಸಿಲುಕುವಂತಾಗಿದೆ.
ಇಷ್ಟೆಲ್ಲ ಅವ್ಯವಸ್ಥೆ ಮನೆಮಾಡಿದ್ದರೂ ಇಲ್ಲಿಯವರೆಗೂ  ಪಾಲಿಕೆ ಆಡಳಿತ ರಸ್ತೆಗಳ ಗುಂಡಿ - ಗೊಟರು ಮುಚ್ಚಲು ಯಾವುದೇ ಕ್ರಮಕೈಗೊಂಡಿಲ್ಲ. ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದೆ. ಇದರಿಂದ ಸಾರ್ವಜನಿಕರ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ.  
ನಗರದ ಹೃದಯಭಾಗದಲ್ಲಿರುವ, ಪ್ರತಿನಿತ್ಯ ಸಾವಿರಾರು ಜನ - ವಾಹನ ಸಂಚಾರವಿರುವ ಪಾರ್ಕ್ ಬಡಾವಣೆ ಹಾಗೂ ತಿಲಕ್‌ನಗರದ ಮುಖ್ಯ ರಸ್ತೆಗಳಲ್ಲಿಯೇ ಭಾರೀ ದೊಡ್ಡ ಪ್ರಮಾಣದ ಗುಂಡಿಗಳು ಬಿದ್ದಿವೆ. ಈ ರಸ್ತೆಯಲ್ಲಿಯೇ ದಿನನಿತ್ಯ ಹಲವು ಪಾಲಿಕೆ ಅಧಿಕಾರಿಗಳು ಸಂಚರಿಸುತ್ತಾರೆ. ಆದಾಗ್ಯೂ ರಸ್ತೆಗಳ ಅವ್ಯವಸ್ಥೆ ಸರಿಪಡಿಸಲು ಮುಂದಾಗಿಲ್ಲ. ಇನ್ನೂ ನಗರದ ಇತರೆ ಬಡಾವಣೆಗಳಲ್ಲಿ ರಸ್ತೆಗಳ ದುಃಸ್ಥಿತಿ ಇದೇ ರೀತಿ ಇದೆ.
ಗುಂಡಿ - ಗೊಟರು ಬಿದ್ದಿರುವ ರಸ್ತೆಗಳಲ್ಲಿ ದ್ವಿ ಚಕ್ರ ವಾಹನ ಚಾಲನೆ ಮಾಡುವುದೇ ದುಸ್ತರವಾಗಿದೆ. ರಾತ್ರಿ ಸಮಯದಲ್ಲಂತೂ ಜೀವ ಕೈಯಲ್ಲಿಡಿದು ದ್ವಿ ಚಕ್ರ ವಾಹನ ಸವಾರರು ವಾಹನ ಚಲಾಯಿಸುವಂತಾಗಿದೆ. ಕೊಂಚ ಹೆಚ್ಚುಕಮ್ಮಿಯಾದರೂ ಅಪಘಾತ ನಿಶ್ಚಿತ ಎಂಬಂತಾಗಿದೆ. ಈಗಾಗಲೇ ಹಲವು ದ್ವಿ ಚಕ್ರ ವಾಹನ ಸವಾರರು ರಾತ್ರಿಯ ವೇಳೆಯಿರಲಿ, ಹಗಲು ಹೊತ್ತಿನಲ್ಲಿಯೇ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ - ಗೊಟರಿನ ಕಾರಣದಿಂದಲೇ ಅಪಘಾತಕ್ಕೀಡಾಗುತ್ತಿದ್ದಾರೆ.
 ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಹಾಗೂ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ - ಗೊಟರುಗಳಲ್ಲಿ ಮಣ್ಣು ತುಂಬಿಕೊಂಡಿರುವುದರಿಂದ ಧೂಳಿನ ಪ್ರಮಾಣ ಹೆಚ್ಚಾಗಿದೆ. ಧೂಳಿನಿಂದ  ಸಮಸ್ಯೆ ಎದುರಿಸುವಂತಾಗಿದೆ.
 ಸಾಮಾನ್ಯವಾಗಿ ಮಳೆಗಾಲದ ವೇಳೆ ರಸ್ತೆಗಳಲ್ಲಿ ಗುಂಡಿ - ಗೊಟರು ಬೀಳುತ್ತವೆ. ಮಳೆಯ ಕಾರಣದಿಂದ ಈ ಸಮಯದಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುವುದಿಲ್ಲ. ಮಳೆಗಾಲ ಪೂರ್ಣಗೊಂಡ ನಂತರ ರಸ್ತೆಗಳ ಅವ್ಯವಸ್ಥೆ ಸರಿಪಡಿಸಲು ಸ್ಥಳಿಯಾಡಳಿತ ಕ್ರಮಕೈಗೊಳ್ಳುತ್ತದೆ. ಇದು ಕಳೆದ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಪ್ರಕ್ರಿಯೆಯಾಗಿದೆ. ಆದರೆ ಈ ಬಾರಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ - ಗೊಟರು ಮುಚ್ಚುವುದಕ್ಕೆ ಹಾಗೂ ರಸ್ತೆಗಳಲ್ಲಿ ಆವರಿಸಿರುವ ಧೂಳು ತೆರವಿಗೆ ಮಹಾನಗರ ಪಾಲಿಕೆ ಆಡಳಿತ ಗಮನಹರಿಸಿಲ್ಲ. ಇದಕ್ಕೆ ಕಾರಣ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವ ಉದ್ದೇಶ ಎನ್ನಲಾಗುತ್ತಿದೆ.
ಇನ್ನಾದರೂ ಮಹಾನಗರ ಪಾಲಿಕೆ ಆಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ. ವಿವಿಧ ಬಡಾವಣೆಗಳ ಮುಖ್ಯ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ - ಗೊಟರು ಮುಚ್ಚಲು ಕ್ರಮಕೈಗೊಳ್ಳಬೇಕಿದೆ.


ನಗರದ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ - ಗೊಟರು ಮುಚ್ಚಲು ಕ್ರಮಕೈಗೊಳ್ಳುವಂತೆ ನಾಗರಿಕರು ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಮೇಯರ್ ಜೊತೆ ಸಮಾಲೋಚನೆ ನಡೆಸಿದ್ದೇನೆ. ಇನ್ನೊಮ್ಮೆ ಚರ್ಚಿಸಿ ಗುಂಡಿ - ಗೊಟರು ಮುಚ್ಚಲು ಅಗತ್ಯ ಕ್ರಮಕೈಗೊಳ್ಳುವಂತೆ ಮನವಿ ಮಾಡುತ್ತೇನೆ.
-ೆ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷ ಐಡಿಯಲ್ ಗೋಪಿ


ಪಿಡಬ್ಲ್ಯೂಡಿ ಇಲಾಖೆಯಿಂದಲೂ ನಿರ್ಲಕ್ಷ್ಯ
ಪಿಡಬ್ಲ್ಯೂಡಿ ಇಲಾಖೆಯ ಶಿವಮೊಗ್ಗ ವ್ಯಾಪ್ತಿಯ ಅಧೀಕ್ಷಕ ಎಂಜಿನಿಯರ್ ಬಿ.ಎಸ್.ಬಾಲಕೃಷ್ಣ ಕಾಲಮಿತಿಯೊಳಗೆ ಇಲಾಖೆ ವ್ಯಾಪ್ತಿಯ ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿಗಳಲ್ಲಿ ಬಿದ್ದಿರುವ ಗುಂಡಿ-ಗೊಟರು ಮುಚ್ಚಲು ಕ್ರಮಕೈಗೊಳ್ಳುವುದಾಗಿ ಹೇಳಿದ್ದರು. ಆದರೆ ಅವರ ವೇಗಕ್ಕೆ ಅನುಗುಣವಾಗಿ ಅವರ ಕೆಳಹಂತದ ಅಧಿಕಾರಿಗಳು ಕಾರ್ಯನಿರ್ವಹಣೆ ಮಾಡದ ಕಾರಣದಿಂದ ಇಂದಿಗೂ ಪಿಡಬ್ಲ್ಯೂಡಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ - ಗೊಟರುಗಳಿಗೆ ಮೋಕ್ಷ ಸಿಕ್ಕಿಲ್ಲ.  ಶಿವಮೊಗ್ಗ - ರಾಮನಗರ ಜಿಲ್ಲಾ ಹೆದ್ದಾರಿಯ ನಗರ ವ್ಯಾಪ್ತಿಯ ಹಲವೆಡೆ ರಸ್ತೆಯು ಹಾಳಾಗಿದೆ. ಭಾರೀ ದೊಡ್ಡ ಗುಂಡಿ - ಗೊಟರುಗಳು ಬಿದ್ದಿವೆ. ಆದರೆ ಇಲ್ಲಿಯವರೆಗೂ ಪಿಡಬ್ಲ್ಯೂಡಿ ವಿಶೇಷ ವಿಭಾಗದ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದಾರೆ. ಇದರಿಂದ ವಾಹನ ಸವಾರರು ತೀವ್ರ ತೊಂದರೆಗೊಳಗಾಗುವಂತಾಗಿದೆ. ಈ ಹಿನ್ನೆಲೆಯಲ್ಲಿ  ಬಾಲಕೃಷ್ಣ ತಮ್ಮ ಕೆಳಹಂತದ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಬೇಕಾಗಿದೆ.
-------------------------------------
 ನ್ಯಾನೋ ಟೆಕ್ನಾಲಜಿ ಆಧಾರಿತ
 ನೀರು ಶುದ್ದೀಕರಣ ಘಟಕ ಸ್ಥಾಪನೆ 
* ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಶಿವಮೊಗ್ಗದ ಸಿದ್ದರಹಳ್ಳಿ ಗ್ರಾಮದಲ್ಲಿ ಪ್ರಾಯೋಗಿಕ ಅನುಷ್ಠಾನ

ಶಿವಮೊಗ್ಗ:  ತಂತ್ರಜ್ಞಾನ ಬೆಳೆದಂತೆ ಎಲ್ಲಾ ರಂಗಗಳಲ್ಲೂ ಅದರ ಅಳವಡಿಕೆಗೆ ಚಾಲನೆ ನೀಡಲಾಗುತ್ತಿದೆ. ಪ್ರಸ್ತುತ ಶುದ್ಧ ಕುಡಿಯುವ ನೀರು ಸಿಗದಿರುವ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಇಂತಹ ಶುದ್ಧ ನೀರನ್ನು ಕೊಡುವುದು ಹೇಗೆ, ಇದರಲ್ಲಿ ತಂತ್ರಜ್ಞಾನವನನ್ನು ಹೇಗೆ ಬಳಸಿಕೊಳ್ಳಬಹುದೆನ್ನುವುದರ ಲೆಕ್ಕಾಚಾರ ಹಾಕಲಾಗುತ್ತಿದೆ. ಇಂತಹ ನೂತನ ತಂತ್ರಜ್ಞಾನವನ್ನು ಬಳಸಲು ಜಿಲ್ಲೆಯ ಇಂಜಿನಿಯರ್‌ಗಳು ಹೆಜ್ಜೆ ಇಟ್ಟಿದ್ದಾರೆ.
 ಈಗ ದೇಶದ ವಿವಿಧೆಡೆ ’ನ್ಯಾನೋ ಟೆಕ್ನಾಲಜಿ’ ಆಧಾರಿತ ಹೈಟೆಕ್ ನೀರು ಶುದ್ಧೀಕರಣ ಘಟಕಗಳು ತಲೆಎತ್ತಲಾರಂಭಿಸಿವೆ. ಆದರೆ ಕರ್ನಾಟಕದಲ್ಲಿ ಈ ರೀತಿಯ ಘಟಕಗಳು ಇಲ್ಲಿಯವರೆಗೂ ಆರಂಭವಾಗಿಲ್ಲ. ಪ್ರಪ್ರಥಮ ಬಾರಿಗೆ ಶಿವಮೊಗ್ಗ ತಾಲೂಕಿನ ಮತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಿದ್ದರಹಳ್ಳಿ ಗ್ರಾಮದಲ್ಲಿ ’ನ್ಯಾನೋ ಟೆಕ್ನಾಲಜಿ’ ಆಧಾರಿತ ಹೈಟೆಕ್ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ಗ್ರಾಮೀಣ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
 ಸಿದ್ದರಹಳ್ಳಿ ಗ್ರಾಮದಲ್ಲಿ ’ನ್ಯಾನೋ ಟೆಕ್ನಾಲಜಿ’ ಆಧಾರಿತ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುತ್ತಿದೆ. ಆಂಧ್ರಪ್ರದೇಶ ರಾಜ್ಯದ ಹೈದ್ರಾಬಾದ್ ಮೂಲದ ’ಈಶಾವ್ಯಾಸ್ ಪ್ರೈವೇಟ್ ಲಿಮಿಟೆಡ್’ ಎಂಬ ಸಂಸ್ಥೆಯು ಈ ಘಟಕ ನಿರ್ಮಾಣ ಮಾಡಲಿದೆ. ಪ್ರತ್ಯೇಕ ಕೊಠಡಿ ನಿರ್ಮಾಣ ಸೇರಿದಂತೆ ’ನ್ಯಾನೋ ಟೆಕ್ನಾಲಜಿ’ ಆಧಾರಿತ ಶುದ್ಧೀಕರಣ ಘಟಕ ಸ್ಥಾಪನೆಗೆ ಸುಮಾರು 18 ಲಕ್ಷ ರೂ. ವೆಚ್ಚವಾಗಲಿದೆ. ಪ್ರತಿ ಗಂಟೆಗೆ ಸರಿಸುಮಾರು 10 ಸಾವಿರ ಲೀಟರ್ ನೀರನ್ನು ಈ ಘಟಕದಲ್ಲಿ ಶುದ್ಧೀಕರಿಸಬಹುದಾಗಿದೆ. ವಿನೂತನ, ಸುಧಾರಿತ ತಂತ್ರಜ್ಞಾನ ವ್ಯವಸ್ಥೆ ಒಳಗೊಂಡಿದೆ.
 ನದಿ ಹಾಗೂ ಕೆರೆಯ ನೀರನ್ನು ಕುಡಿಯಲು ಬಳಕೆ ಮಾಡುತ್ತಿರುವ ಪ್ರದೇಶಗಳಲ್ಲಿ ’ನ್ಯಾನೋ ಟೆಕ್ನಾಲಜಿ’ ಆಧಾರಿತ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಬಹುದಾಗಿದೆ. ನ್ಯಾನೋ ಘಟಕದ ಕಾರ್ಯನಿರ್ವಹಣೆಯ ಖುದ್ದು ಪರಿಶೀಲನೆ ನಡೆಸಲು ಹಾಗೂ ಅಗತ್ಯ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಗ್ರಾಮೀಣ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಎಸ್.ಎಂ.ಹರೀಶ್ ಹಾಗೂ ಕಿರಿಯ ಎಂಜಿನಿಯರ್ ಕೃಷ್ಣಮೂರ್ತಿ ನೇತೃತ್ವದ ತಂಡ ಇತ್ತೀಚೆಗೆ ಹೈದ್ರಾಬಾದ್‌ಗೆ ತೆರಳಿತ್ತು. ಘಟಕದ ಕಾರ್ಯನಿರ್ವಹಣೆಯ ಮಾಹಿತಿ ಸಂಗ್ರಹಿಸಿ ಹಿಂದಿರುಗಿದೆ.
ಮಲೆನಾಡು ಭಾಗದ ಹಲವು ಗ್ರಾಮಗಳಲ್ಲಿ ಕೆರೆ, ನದಿಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದ್ದು, ಹಲವೆಡೆ ನೀರು ಶುದ್ಧೀಕರಣದ ಸಾಂಪ್ರದಾಯಿಕ ವಿಧಾನಗಳ ಬಳಕೆ ಮಾಡುತ್ತಿರುವುದರಿಂದ ಪರಿಣಾಮಕಾರಿಯಾಗಿ ನೀರಿನ ಸಂಪೂರ್ಣ ಶುದ್ಧೀಕರಣ ಸಾಧ್ಯವಾಗುತ್ತಿಲ್ಲ. ಅಶುದ್ಧ ನೀರು ಸೇವನೆಯಿಂದ ನಾಗರಿಕರು ನಾನಾ ರೀತಿಯ ರೋಗ-ರುಜನಗಳಿಗೆ ತುತ್ತಾಗುವಂತಾಗಿದೆ.
ಇಂತಹ ಪ್ರದೇಶಗಳಲ್ಲಿ ’ನ್ಯಾನೋ ಟೆಕ್ನಾಲಜಿ’ ಆಧಾರಿತ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿದರೆ ಗ್ರಾಮಸ್ಥರಿಗೆ ಸಾಕಷ್ಟು ಅನುಕೂಲವಾಗಲಿದೆ. ಶುದ್ಧ ಕುಡಿಯುವ ನೀರು ಕುಡಿಯುವ ಭಾಗ್ಯ ದೊರಕಲಿದೆ.



ಆಂಧ್ರ ಸಿಎಂ ಅತಿಥಿ ಗೃಹದಲ್ಲಿಯೂ ಅಳವಡಿಕೆ
 ಹೈದ್ರಾಬಾದ್‌ನಲ್ಲಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸರ್ಕಾರಿ ಅತಿಥಿ ಗೃಹದಲ್ಲಿಯೂ ’ನ್ಯಾನೋ ಟೆಕ್ನಾಲಜಿ’ ಆಧಾರಿತ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ. ಶಿವಮೊಗ್ಗ ಗ್ರಾಮೀಣ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್.ಎಂ.ಹರೀಶ್ ಹಾಗೂ ಕಿರಿಯ ಎಂಜಿನಿಯರ್ ಕೃಷ್ಣಮೂರ್ತಿ ನೇತೃತ್ವದ ತಂಡ ಸಿಎಂ ನಿವಾಸದಲ್ಲಿ ಅಳವಡಿಕೆ ಮಾಡಿರುವ ಘಟಕದ ಕಾರ್ಯನಿರ್ವಹಣೆಯ ಖುದ್ದು ಪರಿಶೀಲನೆ ಮಾಡಿ ಹಿಂದಿರುಗಿದೆ.


 . ಪ್ರಾಯೋಗಿಕ ಅನುಷ್ಠಾನದ ಸಾಧಕ-ಬಾಧಕ ಗಮನಿಸಿದ ನಂತರ ಇತರೆಡೆ ಘಟಕ ಸ್ಥಾಪನೆಯ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ನದಿ ಹಾಗೂ ಕೆರೆಗಳಿಂದ ನೀರು ಪೂರೈಕೆಯಾಗುವ ಪ್ರದೇಶಗಳಲ್ಲಿ ಈ ಘಟಕ ನಿರ್ಮಾಣ ಮಾಡಬಹುದಾಗಿದೆ. ಇಷ್ಟರಲ್ಲಿಯೇ ಈ ಘಟಕದ ನಿರ್ಮಾಣ ಕಾರ್ಯ ಆರಂಭವಾಗಲಿದೆ.
-ಕಾರ್ಯಪಾಲಕ ಅಭಿಯಂತರ ಎಸ್.ಎಂ.ಹರೀಶ್
----------------------------------------

Thursday, 24 November 2016


ಗಾಡಿಕೊಪ್ಪ ಕೆರೆಯಲ್ಲಿ ತಲೆಎತ್ತಿರುವ 
ಖಾಸಗಿ ಕ್ಲಬ್ ತೆರವು ಸಾಧ್ಯವೇ?
  ಜಿಲ್ಲಾಧಿಕಾರಿ ಡಾ. ಲೋಕೇಶ್ ಎದುರಿರುವ ಪ್ರಮುಖ ಸವಾಲು

 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ಭೂಮಿ, ಕೆರೆ, ರಾಜಕಾಲುವೆಗಳ ಒತ್ತುವರಿ ಮಾಡಲಾಗಿದೆ. ಭೂಗಳ್ಳರ ಹಾವಳಿ ವಿಪರೀತ ಮಟ್ಟಕ್ಕೆ ತಲುಪಿದೆ. ಇವರನ್ನು ಮಟ್ಟ ಹಾಕಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಭೂಗಳ್ಳರೊಂದಿಗೆ  ಕೆಲವು ಅಧಿಕಾರಿಗಳು ಕೂಡ ಕೈಜೋಡಿಸುತ್ತಿರುವುದರಿಂದ ಇಂದಿಗೂ ಕೂಡ ನಗರದ ಹಲವೆಡೆ ಸರ್ಕಾರಿ ಭೂಮಿಯ ಒತ್ತುವರಿ ಅವ್ಯಾಹತವಾಗಿ ಸಾಗಿದೆ.
ಕುತೂಹಲದ ಸಂಗತಿ ಎಂದರೆ,  ಜಿಲ್ಲಾಡಳಿತವು ನಗರದ ಗಾಡಿಕೊಪ್ಪ ಗ್ರಾಮದಲ್ಲಿ ಪ್ರತಿಷ್ಠಿತ ಖಾಸಗಿ ಕ್ಲಬ್‌ವೊಂದಕ್ಕೆ ವಾರ್ಷಿಕ ನೆಲ ಬಾಡಿಗೆ ಆಧಾರದ ಮೇಲೆ ಸುಮಾರು 2 ಎಕರೆಯಷ್ಟು ಕೆರೆಯ ಜಾಗವನ್ನು ನೀಡಿದೆ. ಈ ಜಾಗಕ್ಕೆ ಮಣ್ಣು ಸುರಿದು ಭರ್ತಿ ಮಾಡಿದ ಕ್ಲಬ್‌ನವರು ಬೃಹತ್ ಕಟ್ಟಡ ನಿರ್ಮಿಸಿದ್ದಾರೆ. ಈ ಕ್ಲಬ್‌ಗೆ ಜಿಲ್ಲಾಧಿಕಾರಿಯೇ ಗೌರವಾಧ್ಯಕ್ಷರಾಗಿರುವುದು ಮತ್ತೊಂದು ವಿಶೇಷ. ಗ್ರಾಮಸ್ಥರಿಗೆ ಬಹುಪಯೋಗಿಯಾಗಿದ್ದ ಈ ಕೆರೆಯ ಸಂರಕ್ಷಣೆ ಮಾಡಬೇಕಾದ ಜಿಲ್ಲಾಡಳಿತ ತಾನೇ ಮುಂದೆ ನಿಂತು ಕ್ಲಬ್‌ವೊಂದಕ್ಕೆ ಕೆರೆಯ ಜಾಗ ನೀಡಿದೆ ಎಂದರೆ ಇದರ ಹಿಂದೆ ಎಂತೆಂತಹ ಕುಳಗಳು, ಪ್ರಭಾವಿಗಳು ಇರಬಹುದೆನ್ನುವುದನ್ನು ಯೋಚಿಸಬಹುದಾಗಿದೆ. ಹಿಂದಿನ ಜಿಲ್ಲಾಧಿಕಾರಿಗೆ ಹಲವು ಬಾರಿ ಸ್ವತಃ ಪತ್ರಕರ್ತರು ಇದನ್ನು ಗಮನಕ್ಕೆ ತಂದಿದ್ದರೂ ಅವರು ಅದನ್ನು ತೆರವುಗೊಳಿಸುವತ್ತ ಹೆಜ್ಜೆ ಇಡಲೇ ಇಲ್ಲ. ಇದಕ್ಕೆ ಪ್ರಭಾವಿಗಳ  ಒತ್ತಡ ಇದೆ ಎನ್ನುವುದು ಕೇಳಿಬರುತ್ತಿದೆ.  
ಮತ್ತೊಂದೆಡೆ, ಈ ಕೆರೆಯ ಸುತ್ತಮುತ್ತಲು ಭಾರೀ ದೊಡ್ಡ ಪ್ರಮಾಣದ ಒತ್ತುವರಿ ನಡೆಯುತ್ತಿದ್ದು, ಮನೆಗಳು ನಿರ್ಮಾಣವಾಗುತ್ತಿವೆ. ಕೆರೆಯ ಸಂರಕ್ಷಣೆಗೆ ಜಿಲ್ಲಾಡಳಿತ ಯಾವುದೇ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಇತ್ತೀಚೆಗೆ ಡಾ. ಲೋಕೇಶ್ ಅವರಿಗೂ ಈ ಬಗ್ಗೆ ಪತ್ರಿಕಾ ಸಂವಾದದಲ್ಲಿ ಈ ಕೆರೆಯ ಸಂರಕ್ಷಣೆ ಮಾಡುವಂತೆ ಪತ್ರಕರ್ತರು ಮನವಿ ಮಾಡಿದ್ದಾರೆ.  ನೂತನ ಜಿಲ್ಲಾಧಿಕಾರಿ ಯಾವ ರೀತಿಯ ಕ್ರಮಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಕಣ್ಮರೆಯಾಗುತ್ತಿದೆ ರಾಜಕಾಲುವೆ:
ನಗರದ ಹೊರವಲಯದ ಪ್ರದೇಶಗಳಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಕೆರೆ, ರಾಜಕಾಲುವೆಗಳು ಕಣ್ಮರೆಯಾಗುತ್ತಿವೆ. ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡುವ ದೊಡ್ಡ ದೊಡ್ಡ ಜಾಲವೇ ಸಕ್ರಿಯವಾಗಿದೆ.  ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಭೂಮಿಯನ್ನು ಈ ಭೂಗಳ್ಳರ ಜಾಲಗಳು ತಿಂದು ತೇಗಿವೆ. ಇದೆಲ್ಲ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕಿದ್ದರೂ ಯಾವುದೇ ಕ್ರಮಕೈಗೊಳ್ಳದೆ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಕ್ಕೆಡೆ ಮಾಡಿಕೊಟ್ಟಿದೆ.
 ಪಾಲಿಕೆ ವ್ಯಾಪ್ತಿಯ ಗಾಡಿಕೊಪ್ಪ, ಆಲ್ಕೊಳ, ಮಲ್ಲಿಗೇನಹಳ್ಳಿ, ಪುರಲೆ, ಕಾಶೀಪುರ, ಸ್ವಾಮಿ ವಿವೇಕಾನಂದ ಬಡಾವಣೆ ಮೊದಲಾದ ಹೊರವಲಯದ ಪ್ರದೇಶಗಳಲ್ಲಿ ಈಗಾಗಲೇ ಹಲವು ಕೆರೆಗಳು ಮಾಯವಾಗಿವೆ. ಕೇವಲ ದಾಖಲೆಗಳಲ್ಲಿ ಮಾತ್ರ ಕೆರೆಗಳಿರುವುದು ಕಂಡುಬರುತ್ತಿದೆ. ಕೆರೆ ಜಾಗಗಳಲ್ಲಿ ಖಾಸಗಿ ಲೇಔಟ್, ಖಾಸಗಿ ಆಸ್ಪತ್ರೆ, ಕ್ಲಬ್ ಕಟ್ಟಡಗಳು, ಮನೆಗಳು ನಿರ್ಮಾಣವಾಗಿರುವುದು ನಗರದಲ್ಲಿ ನಡೆದಿರುವ ಒತ್ತುವರಿಗೆ ಸಾಕ್ಷಿಯಾಗಿದೆ. ಗಾಡಿಕೊಪ್ಪದಲ್ಲಿ ಕೆರೆಯ ಜಾಗವನ್ನು ಸ್ವತಃ ಸರ್ಕಾರಿ ಇಲಾಖೆಗಳೇ ಒತ್ತುವರಿ ಮಾಡಿದ್ದು, ವಿವಿಧ ಸರ್ಕಾರಿ ಕಟ್ಟಡಗಳು ತಲೆ ಎತ್ತುತ್ತಿವೆ. ಕೆರೆ ಜಾಗ ಸಂರಕ್ಷಣೆ ಮಾಡಬೇಕಾದ ಜಿಲ್ಲಾಡಳಿತವೇ ಸ್ವತಃ ಕೆರೆ ಜಾಗವನ್ನು ಸರ್ಕಾರಿ ಸಂಘಸಂಸ್ಥೆಗೆ ಹಂಚಿಕೆ ಮಾಡಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಇಷ್ಟೇ ಅಲ್ಲ, ನಗರದ ಒಳ ಭಾಗದ ಪ್ರದೇಶಗಳಲ್ಲಿಯೂ ಕನ್ಸರ್‌ವೆನ್ಸಿ, ಕೆರೆ ಜಾಗ, ಪಾಲಿಕೆಯ ಜಾಗಗಳು ಭಾರೀ ದೊಡ್ಡ ಮಟ್ಟದಲ್ಲಿ ಭೂಗಳ್ಳರು ಅತಿಕ್ರಮಿಸಿಕೊಂಡಿದ್ದಾರೆ. ಇವುಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ ನೂರಾರು ಕೋಟಿ ರೂ. ದಾಟುತ್ತದೆ ಎಂದು ಕೆಲವು ಅಧಿಕಾರಿಗಳೇ ಹೇಳುತ್ತಾರೆ.
ಮತ್ತೊಂದೆಡೆ, ಸರ್ಕಾರಿ ಭೂಮಿ ಸಂರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ, ರಾಜ್ಯ ಸರ್ಕಾರಗಳು, ಸುಪ್ರೀಂ, ಹೈಕೋರ್ಟ್‌ಗಳು ಹತ್ತು ಹಲವು ರೀತಿಯ ಆದೇಶಗಳು ಹೊರಡಿಸುತ್ತಿದ್ದರೂ ಶಿವಮೊಗ್ಗ ನಗರದಲ್ಲಿ ಮಾತ್ರ ಇವ್ಯಾವ ಆದೇಶಗಳಿಗೂ ಬೆಲೆ ಇಲ್ಲದಂತಾಗಿದೆ. ಸರ್ಕಾರಿ ಭೂ ಅತಿಕ್ರಮ ಅವ್ಯಾಹತವಾಗಿದ್ದು, ಭೂಗಳ್ಳರಿಗೆ ಯಾವುದೇ ಭಯವಿಲ್ಲದಂತಾಗಿದೆ.
ಇತ್ತೀಚೆಗೆ ಮಹಾನಗರ ಪಾಲಿಕೆ ಆಡಳಿತವಾಗಲಿ, ತಾಲೂಕು ಆಡಳಿತವಾಗಲಿ ಸರ್ಕಾರಿ ಭೂಮಿ ಒತ್ತುವರಿಗೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿದ ಉದಾಹರಣೆಯಿಲ್ಲ. ಉಪವಿಭಾಗಾಧಿಕಾರಿ  ಅವರು ಕಳೆದ ಮಳೆಗಾಲದ ಆರಂಭದಲ್ಲಿ ಹತ್ತಾರು ಕೆರೆಗಳ ಒತ್ತುವರಿಯನ್ನು ಅಂದಿನ ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ತೆರವುಗೊಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
  ನಿಜಕ್ಕೂ ಜಿಲ್ಲಾಧಿಕಾರಿಗೆ ಸರ್ಕಾರಿ ಆಸ್ತಿಯ ಬಗ್ಗೆ ಕಾಳಜಿಯಿದ್ದರೆ ನಗರದಲ್ಲಿ ನಡೆದಿರುವ ಕೆರೆ, ರಾಜಕಾಲುವೆ, ಸರ್ಕಾರಿ ಭೂಮಿಗಳ ಒತ್ತುವರಿ ತೆರವಿಗೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ. 

Wednesday, 23 November 2016



ಲೂಟಿಕೋರರಿಗೆ ಮರಳಿದೆ, ನಾಗರಿಕರಿಗೆ ವಿತರಿಸಲು ಇಲ್ಲ

  ಲೂಟಿಕೋರರಿಗೆ ಮರಳಿದೆ, ನಾಗರಿಕರಿಗೆ ವಿತರಿಸಲು ಇಲ್ಲ. ಇದು ಶಿವಮೊಗ್ಗ ಜಿಲ್ಲೆಯ ಮರಳಿನ ಸ್ಥಿತಿ. 
  ನಗರದಲ್ಲಿ ಮರಳಿನ ತೀವ್ರ ಅಭಾವವಿದೆ. ಕಾಳಸಂತೆಯಲ್ಲಿ ಒಂದು ಲಾರಿ ಲೋಡ್ ಮರಳಿಗೆ 40 ಸಾವಿರ ರೂ.ಗೂ ಅಧಿಕವಿದ್ದು, ಟ್ರಾಕ್ಟರ್ ಮರಳಿಗೆ 10 ಸಾವಿರಕ್ಕೂ ಅಧಿಕವಾಗಿದೆ. ಅನಿವಾರ್ಯವಾಗಿ ಕೆಲ ನಾಗರಿಕರು ದುಬಾರಿ ಮೊತ್ತ ಪಾವತಿಸಿ ಮರಳು ಖರೀದಿಸುವಂತಾಗಿದೆ. ನಾಗರಿಕರ ಗೋಳು ಕೇಳುವವರ‌್ಯಾರೂ ಇಲ್ಲದಂತಾಗಿದೆ. ರಾಜ್ಯದಲ್ಲಿ ಅಧಿಕ ಪ್ರಮಾಣದಲ್ಲಿ ಮರಳು ಲಭ್ಯವಾಗುವ ಜಿಲ್ಲೆಗಳಲ್ಲಿ ಒಂದಾದ ಶಿವಮೊಗ್ಗದಲ್ಲಿ  ಈ ಪರಿಸ್ಥಿತಿ ಇದೆ.
  ಜಿಲ್ಲೆಯಲ್ಲಿ ಮರಳಿಗೆ ಭಾರೀ ದೊಡ್ಡ ಪ್ರಮಾಣದ ಬೇಡಿಕೆಯಿದೆ. ಆದರೆ ನಾಲ್ಕು ಬ್ಲಾಕ್‌ಗಳಲ್ಲಿ ಮಾತ್ರ ಮರಳು ತೆಗೆಯಲು ಅನುಮತಿ ಸಿಕ್ಕಿರುವುದರಿಂದ ನಾಗರಿಕರ ಬೇಡಿಕೆಗೆ ಅನುಗುಣವಾಗಿ ಮರಳು ಪೂರೈಕೆಯಾಗುವುದು ಅನುಮಾನವಾಗಿದೆ. ಮರಳಿಗೆ ಹಾಹಾಕಾರ ತಲೆದೋರುವುದು ನಿಶ್ಚಿತ ಎಂದು ಸ್ವತಃ  ಅಧಿಕಾರಿಗಳೇ ಹೇಳುತ್ತಾರೆ.
ಸರಕಾರದಿಂದ ನೂತನ ಮರಳು ನೀತಿ ಇನ್ನೂ ಜಾರಿಗೆ ಬಂದಿಲ್ಲ. ಮರಳುಕೋರೆ ಗುರುತಿಸಿಲ್ಲ.  ಕೆಲವೆಡೆ ನೀರಿನ ಮಟ್ಟ ಕಡಿಮೆಯಾಗಿಲ್ಲ ಎನ್ನುವುದು ಈ  ಅಧಿಕಾರಿಗಳ ಹೇಳಿಕೆ.
ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಜನಸಾಮಾನ್ಯರು ಮರಳಿಗಾಗಿ ಪರಿತಪಿಸುವಂತಾಗಿದೆ. ಮತ್ತೊಂದೆಡೆ, ಜಿಲ್ಲಾಡಳಿತ ಇಲ್ಲಿಯವರೆಗೂ ಮರಳು ವಿತರಣೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ಕಾಳಸಂತೆಕೋರರು ಮನಸೋಇಚ್ಚೆ ದರಕ್ಕೆ ಮರಳು ಮಾರಾಟ ಮಾಡುತ್ತಿದ್ದು, ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಸ್ಟಾಕ್‌ಯಾರ್ಡ್ ರಚನೆ ಮಾಡಿ ಮಳೆಗಾಲದ ವೇಳೆಯೂ ಮರಳು ನೀಡುವುದಾಗಿ ಈ ಹಿಂದೆ ಜಿಲ್ಲಾಡಳಿತ ನಾಗರಿಕರಿಗೆ ಭರವಸೆ ನೀಡಿತ್ತು. ಮಳೆಗಾಲದ ಸಮಯವಿರಲಿ, ಬೇಸಿಗೆಯ ಅವಧಿಯಲ್ಲಿಯೇ ನಾಗರಿಕರಿಗೆ ಸಮರ್ಪಕವಾಗಿ ಮರಳು ಕಲ್ಪಿಸುವಲ್ಲಿ ಜಿಲ್ಲಾಡಳಿತ ವಿಫಲವಾಯಿತು. ಇದರಿಂದ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಬಡ - ಮಧ್ಯಮ ವರ್ಗದವರು ದುಬಾರಿ ಬೆಲೆ ತೆತ್ತು ಖಾಸಗಿಯವರ ಬಳಿ ಮರಳು ಖರೀದಿಸುವಂತಹ ದುಃಸ್ಥಿತಿ ನಿರ್ಮಾಣವಾಗಿದೆ. 
ಮಳೆಗಾಲದ ನಾಲ್ಕು ತಿಂಗಳು ಹೊರತುಪಡಿಸಿ ಉಳಿದ ಅವಧಿಯಲ್ಲಿ ಮರಳು ನೀಡಲು ಅವಕಾಶವಿದೆ. ಪ್ರಸ್ತುತ ಜಿಲ್ಲೆಯಲ್ಲಿ ಮಳೆಯ ಪ್ರಮಾಣವೂ ಕಡಿಮೆಯಾಗಿದೆ. ನದಿಗಳ ನೀರಿನ ಹರಿವಿನಲ್ಲಿಯೂ ಕಡಿಮೆಯಿದೆ. ಪರಿಸ್ಥಿತಿ ಈ ರೀತಿಯಿದ್ದರೂ ಮರಳು ಲಭ್ಯವಿರುವ ಸ್ಥಳಗಳನ್ನು ಗುರುತಿಸಿ ನಾಗರೀಕರಿಗೆ ಮರಳು ವಿತರಣೆ ಮಾಡಲು ಜಿಲ್ಲಾಡಳಿತ ಮುಂದಾಗುತ್ತಿಲ್ಲವೇಕೆ? ಎಂದು ನಾಗರೀಕರು ಪ್ರಶ್ನಿಸುತ್ತಿದ್ದಾರೆ. 
 ಕಾಳಸಂತೆಯಲ್ಲಿ ಮಾರಾಟ ಮಾಡುವವರಿಗೆ ಮರಳು ಸಿಗುತ್ತಿದೆ. ಆದರೆ ಸಂಬಂಧಿಸಿದ ಪ್ರಾಧಿಕಾರಗಳಿಂದ ಲೈಸೈನ್ಸ್ ಪಡೆದು ಮನೆ ಕಟ್ಟುತ್ತಿರುವವರಿಗೆ ಸಕಾಲದಲ್ಲಿ ಮರಳು ಸಿಗುತ್ತಿಲ್ಲ. ಇಲ್ಲಿಯವರೆಗೂ ಸಮರ್ಪಕವಾಗಿ ಮರಳು ಹಂಚಿಕೆ ಮಾಡಲು ಆಗಿಲ್ಲವೆಂದರೆ ಆಡಳಿತ ವ್ಯವಸ್ಥೆ ಜೀವಂತವಾಗಿದೆಯೇ ಎಂಬ ಅನುಮಾನ ವ್ಯಕ್ತವಾಗುವಂತಾಗಿದೆ. ನಿಜಕ್ಕೂ ಆಡಳಿತ ವ್ಯವಸ್ಥೆಗೆ ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಮಧ್ಯಮ - ಬಡ ವರ್ಗದವರ ಬಗ್ಗೆ ಕಾಳಜಿಯಿದ್ದರೆ, ಅವರಿಗೆ ಅನಾನುಕೂಲವಾಗದಂತೆ ಎಚ್ಚರವಹಿಸಬೇಕು. ನಿಯಮಾನುಸಾರ ಮರಳು ವಿತರಣೆಗೆ ಕ್ರಮಕೈಗೊಳ್ಳಬೇಕು. ಇದು ಆಡಳಿತ ವ್ಯವಸ್ಥೆಯ ಆದ್ಯ ಕರ್ತವ್ಯವೂ ಆಗಿದೆ ಎನ್ನುವುದನ್ನು ಮನಗಾಣಬೇಕಿದೆ.
 ಸ್ವಂತ ಮನೆ, ಕಟ್ಟಡ ನಿರ್ಮಾಣ ಮಾಡುತ್ತಿರುವ ಬಡ - ಮಧ್ಯಮ ವರ್ಗದವರಿಗೆ ಕಾನೂನುಬದ್ದವಾಗಿ ಮರಳು ವಿತರಣೆಗೆ ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಬೇಕು. ಕಾಳಸಂತೆಯಲ್ಲಿ ಮರಳು ಮಾರಾಟಕ್ಕೆ ಕಡಿವಾಣ ಹಾಕಬೇಕು. ಮರಳು ಲೂಟಿಗೆ ಗುಪ್ತವಾಗಿ ಅವಕಾಶ ಕಲ್ಪಿಸುವ ಅಧಿಕಾರಿಗಳ ವಿರುದ್ದ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಕಠಿಣ ಕ್ರಮ ಜರುಗಿಸಬೇಕಿದೆ. 

 
 
ಪ್ರಸ್ತುತ ಪರಿಸ್ಥಿತಿ ಗಮನಿಸಿದರೆ ಸದ್ಯದ ಮಟ್ಟಿಗೆ ನಾಗರಿಕರಿಗೆ ಮರಳು ಲಭ್ಯವಾಗುವ ಯಾವುದೇ ಲಕ್ಷಣಗಳು ಗೋಚರವಾಗುತ್ತಿಲ್ಲ. ಈ ವರ್ಷ ಜಿಲ್ಲೆಯಲ್ಲಿ 4 ಬ್ಲಾಕ್‌ಗಳಲ್ಲಿ ಮಾತ್ರ ಮರಳು ತೆಗೆಯಲು ಅನುಮತಿ ದೊರಕಿದೆ. ಸುಮಾರು 40 ಕ್ಕೂ ಅಧಿಕ ಬ್ಲಾಕ್‌ಗಳಲ್ಲಿ ಮರಳು ತೆಗೆಯಲು ಅವಕಾಶ ಸಿಕ್ಕಿಲ್ಲ. ಅನುಮತಿ ಸಿಕ್ಕಿರುವ ಬ್ಲಾಕ್‌ಗಳಲ್ಲಿ ಮರಳು ಪೂರೈಕೆ ಕಾರ್ಯ ಎಂದಿನಿಂದ ಆರಂಭವಾಗಲಿದೆ ಎಂಬುವುದರ ಬಗ್ಗೆ ಸಂಬಂಧಿಸಿದ ಇಲಾಖೆಗಳಲ್ಲಿ ಸ್ಪಷ್ಟ ಮಾಹಿತಿಯೇ ಇಲ್ಲವಾಗಿದೆ.  

 
  ಮರಳಿನ ಕೊರತೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ನಿಗದಿತ ಮಟ್ಟದ ಎಂ ಸ್ಯಾಂಡ್‌ನ್ನು ಕಟ್ಟಡ ನಿರ್ಮಾಣ ಮತ್ತಿತರ ಕೆಲಸಕಾರ್ಯಗಳಿಗೆ ಬಳಕೆ ಮಾಡಲು ಅವಕಾಶ ಕಲ್ಪಿಸಿದೆ. ಆದರೆ ಎಂ ಸ್ಯಾಂಡ್ ಕೂಡ ಸರಿಯಾಗಿ ಲಭ್ಯವಾಗುತ್ತಿಲ್ಲ. ದುಬಾರಿ ಬೆಲೆ ನಿಗದಿ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಎಂ ಸ್ಯಾಂಡ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು. ಮರಳಿನ ರೀತಿಯಲ್ಲಿ ಎಂ ಸ್ಯಾಂಡ್‌ಗೂ ಬೆಲೆ ನಿಗದಿ ಮಾಡಬೇಕು.
-ಮಹದೇವಸ್ವಾಮಿ, ಗುತ್ತಿಗೆದಾರ 
----------------------------------------- 
ನಗರದಲ್ಲಿ ಶುರುವಾಯ್ತು  ಕ್ಯಾಶ್‌ಲೆಸ್ ಬಿಸಿನೆಸ್
 ನಗದು ಹಣದ ಸಮಸ್ಯೆಯಿಂದ ಹೊಸ ಮಾದರಿಯ ವ್ಯಾಪಾರ




 ನಗದಿಗೆ ಹೋಲಿಕೆ ಮಾಡಿದರೆ ’ಕ್ಯಾಶ್‌ಲೆಸ್’ ಮೂಲಕ ವ್ಯವಹಾರ ನಡೆಸುವುದು ಸುರಕ್ಷಿತವಾಗಿದೆ. ಈ ವಿಧಾನದಲ್ಲಿ ವೆಚ್ಚ ಮಾಡಿದ ಪ್ರತಿಯೊಂದ ಪೈಸೆಗೂ ಲೆಕ್ಕ ಸಿಗಲಿದೆ. ವೆಚ್ಚ ಮಾಡಿದ್ದಕ್ಕೆ ಸಂಬಂಧಿಸಿದಂತೆ ಮೊಬೈಲ್‌ಗೆ ಎಸ್‌ಎಂಎಸ್ ವಿವರಗಳು ನಿರಂತರವಾಗಿ ಲಭ್ಯವಾಗುವುದರಿಂದ ಖಾತೆಯಲ್ಲಿರುವ ಹಣದ ವಿವರ ಗೊತ್ತಾಗುತ್ತದೆ. ’ಕ್ಯಾಶ್‌ಲೆಸ್’ ವಿಧಾನ ನಾಗರಿಕರಿಗೆ ಅತ್ಯಂತ ಉಪಯುಕ್ತವಾಗಿದೆ ಎನ್ನುತ್ತಾರೆ ಗ್ರಾಹಕರು. 
ಕ್ಯಾಶ್‌ಲೆಸ್ ವಿಧಾನದ ಬಗ್ಗೆ ಇನ್ನೂ ವಿದ್ಯಾವಂತ - ಪ್ರಜ್ಞಾವಂತ ವಲಯದಲ್ಲಿಯೇ ಮಾಹಿತಿಯ ಕೊರತೆಯಿದೆ. ಇನ್ನೂ ಗ್ರಾಮೀಣ, ಅನಕ್ಷರಸ್ಥ, ಬಡ ವರ್ಗದವರು ಈ ವ್ಯವಹಾರದತ್ತ ಮುಖ ಮಾಡಬೇಕಾದರೆ ಹಲವು ದಶಕಗಳ ಬೇಕಾಗುತ್ತವೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ. ಆದರೆ ಈ ನಿಟ್ಟಿನಲ್ಲಿ ನಡೆಯುತ್ತಿರುವ ಜಾಗೃತಿ ಕಾರ್ಯಕ್ರಮಗಳು ಯಾವುದಕ್ಕೂ ಸಾಲದು ಎನ್ನುವುದು ಬ್ಯಾಂಕ್ ವ್ಯವಸ್ಥಾಪಕರೊಬ್ಬರ ಅನಿಸಿಕೆ.

’ಡೆಬಿಟ್, ಕ್ರೆಡಿಟ್, ನೆಟ್ ಬ್ಯಾಂಕಿಂಗ್, ಎನ್‌ಇಎಫ್‌ಟಿ, ಆರ್‌ಟಿಜಿಎಸ್...’ ನಂತಹ ’ನಗದು ರಹಿತ’ (ಕ್ಯಾಶ್‌ಲೆಸ್) ವ್ಯವಹಾರ ಶಿವಮೊಗ್ಗ ನಗರದಲ್ಲಿ ಕ್ರಮೇಣ ಹೆಚ್ಚಾಗತೊಡಗಿದೆ.
 ಕೇಂದ್ರ ಸರ್ಕಾರವು ಹಳೆಯ 500 ಹಾಗೂ 1000 ರೂ. ಮುಖಬೆಲೆಯ ನೋಟ್ ಚಲಾವಣೆ ರದ್ದುಗೊಳಿಸಿದ ನಂತರ  ್ಲ ನಗದು ವ್ಯವಹಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಹಣಕ್ಕಾಗಿ ನಾಗರಿಕರು ಪರದಾಡುವಂತಾಗಿತ್ತು. ನಗದು ಪಡೆದುಕೊಳ್ಳಲು ಬ್ಯಾಂಕ್ - ಎಟಿಎಂಗಳ ಮುಂಭಾಗ ಗಂಟೆಗಟ್ಟಲೆ ಕ್ಯೂ ನಿಲ್ಲುವಂತಾಗಿತ್ತು. ಇದರ ಜೊತೆ ಚಿಲ್ಲರೆ ಸಮಸ್ಯೆಯೂ ಉದ್ಭವವಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟಿನ ಮೇಲೆ ಅಡ್ಡ ಪರಿಣಾಮ ಸೃಷ್ಟಿಸಿತ್ತು.
ಇದೆಲ್ಲದರ ಪರಿಣಾಮದಿಂದ, ನಗದು ಸಮಸ್ಯೆಯಿಂದ ಪಾರಾಗಲು ನಾಗರಿಕರು ’ಕ್ಯಾಶ್‌ಲೆಸ್’ ವ್ಯವಹಾರದತ್ತ ಮುಖಮಾಡುತ್ತಿದ್ದಾರೆ. ಕೆಲವು ದಿನಗಳಿಂದ ’ಕ್ಯಾಶ್‌ಲೆಸ್’ ವ್ಯವಹಾರ ಭರ್ಜರಿಯಾಗಿ ನಡೆಯುತ್ತಿದೆ.
ಆಧುನಿಕ ಅರ್ಥ ವ್ಯವಸ್ಥೆಯತ್ತ ಒಲವು ತೋರುತ್ತಿರುವುದು ಕಂಡುಬರುತ್ತಿದೆ. ನಗರ ಮಾತ್ರವಲ್ಲದೆ ದೇಶದಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಕ್ಯಾಶ್‌ಲೆಸ್ ವಿಧಾನದ ಮೂಲಕ ವ್ಯವಹಾರಕ್ಕೆ ಮುಂದಾಗುತ್ತಿರುವುದು ಕೇಳಿಬರುತ್ತಿದೆ. ಮುಂದಿನ ದಿನಗಳಲ್ಲಿ ’ಕ್ಯಾಶ್‌ಲೆಸ್’ ಸಮಾಜ ನಿರ್ಮಾಣಕ್ಕೆ ಇದು ದಿಕ್ಸೂಚಿಯಾಗಬಹುದು ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ. ಇದರಿಂದ  ವ್ಯವಹಾರದಲ್ಲಿ ಸಂಪೂರ್ಣ ಪಾರದರ್ಶಕತೆ ಬರಲಿದೆ.
  ನಗರದಲ್ಲಿ ದೊಡ್ಡ ದೊಡ್ಡ ವ್ಯಾಪಾರ ಮಳಿಗೆಗಳು, ಕೆಲವು ಪೆಟ್ರೋಲ್ ಬಂಕ್‌ಗಳು ಸೇರಿದಂತೆ ಸೀಮಿತ ವ್ಯವಹಾರ ಸ್ಥಗಳಲ್ಲಿ ಮಾತ್ರ ’ಡೆಬಿಟ್ - ಕ್ರೆಡಿಟ್’ ಕಾರ್ಡ್ ಮೂಲಕ ಮೊತ್ತ ಪಾವತಿಗೆ ಅವಕಾಶವಿತ್ತು. ಕೆಲವೆಡೆ ನೆಟ್ ಬ್ಯಾಂಕಿಂಗ್ ಮೂಲಕವೂ ಗ್ರಾಹಕರು ಹಣ ವರ್ಗಾವಣೆ ಮಾಡುತ್ತಿದ್ದರು. ಆದರೆ ಈ ಪ್ರಮಾಣ ಬಹಳ ಕಡಿಮೆಯಿತ್ತು. ನಾನಾ ಕಾರಣಗಳಿಂದ ಕೆಲವು ವಿದ್ಯಾವಂತರೂ ಕೂಡ ’ಕ್ಯಾಶ್‌ಲೆಸ್’ ವ್ಯವಹಾರಕ್ಕೆ ಮುಂದಾಗುತ್ತಿರಲಿಲ್ಲ. ನಗದು ಮೂಲಕವೇ ವ್ಯವಹರಿಸುತ್ತಿದ್ದರು. ಆದರೆ ನೋಟ್ ರದ್ದು ಆದೇಶದ ನಂತರ ವಿದ್ಯಾವಂತರು, ನಗರ ಪ್ರದೇಶದವರು ಮಾತ್ರವಲ್ಲದೆ ಗ್ರಾಮೀಣ ಭಾಗದವರು ಕೂಡ ಡೆಬಿಟ್-ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಎನ್‌ಇಎಫ್‌ಟಿ, ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದಾರೆ.
 ಅಂಗಡಿಗಳಲ್ಲಿ ಡೆಬಿಟ್ - ಕ್ರೆಡಿಟ್ ಕಾರ್ಡ್ ಮೂಲಕ ಹಣ ಸ್ವೀಕರಿಸುವ ವ್ಯವಸ್ಥೆಯಿರಲಿಲ್ಲ. ನಗದು ಮೂಲಕವೇ ವ್ಯವಹಾರ ನಡೆಯುತ್ತಿತ್ತು. ಬದಲಾದ ಸನ್ನಿವೇಶದಲ್ಲಿ ಅಂಗಡಿಯಲ್ಲಿ ಡೆಬಿಟ್ - ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸುವ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಹೊಸದಾಗಿ ಸ್ವಯ್‌ಪಿಂಗ್ ಯಂತ್ರ ಕೂಡ ಖರೀದಿಸುತ್ತಿದ್ದಾರೆ. ನಗರ ಭಾಗದವರು ಮಾತ್ರವಲ್ಲ, ಗ್ರಾಮೀಣ ಭಾಗದ ಕೆಲವರು ತಮ್ಮ ಡೆಬಿಟ್ - ಕ್ರೆಡಿಟ್ ಕಾರ್ಡ್ ಮೂಲಕವೇ ಹಣ ಪಾವತಿಸುತ್ತಿದ್ದಾರೆ.
---------------------------------

Thursday, 17 November 2016

ಮಾತು ಕಡಿಮೆ, ಕೆಲಸ ಹೆಚ್ಚು
 ಕಚೇರಿಗಳಿಗೆ ದಿಢೀರ್ ಭೇಟಿ*  ಇದು ನೂತನ ಡಿಸಿ ಡಾ. ಲೊಕೇಶ್ ಕಾರ್ಯವೈಖರಿ





ಶಿವಮೊಗ್ಗ:  ಕೆಲವು ಅಧಿಕಾರಿಗಳು ಕಚೇರಿ ಮತ್ತು ಖುರ್ಚಿಪ್ರಿಯರಾಗಿರುತ್ತಾರೆ. ಮತ್ತೆ ಕೆಲವರು ಜನಹಿತ ಕಾರ್ಯದತ್ತ, ಜನರಿಗೆ ಅನುಕೂಲ ಕಲ್ಪಿಸಿಕೊಡುವ ಬಗ್ಗೆ ಕೇವಲ ಮಾತನಾಡುತ್ತಾರೆ, ಆನಂತರ ಭಾಷಣಪ್ರಿಯರಾಗಿ ಪ್ರಚಾರದ ಗೀಳಿಗೆ ಅಂಟಿಕೊಳ್ಳುತ್ತಾರೆ. ಇನ್ನೂ ಕೆಲವರು  ಜನರ ಬಳಿಗೆ ಹೋಗಿ ಅವರ ಸಮಸ್ಯೆ , ಅಹವಾಲು ಕೇಳುತ್ತ, ತಾನೂ ಅವರಲ್ಲಿ ಒಬ್ಬರಾಗಿ ಬಿಡುತ್ತಾರೆ. ಆ ಮೂಲಕ ಜನಪ್ರಿಯರಾಗುತ್ತಾರೆ. ಅವರ ಸಮಸ್ಯೆ ಬಗೆಹರಿಸಲು ಮುಂದಾಗುತ್ತಾರೆ. ನೂತನ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಮೂರನೆಯ ವರ್ಗಕ್ಕೆ ಸೇರುತ್ತಾರೆ.
 ಡಾ. ಪಿ. ಲೋಕೇಶ್ ಅಧಿಕಾರ ವಹಿಸಿಕೊಂಡ ಹತ್ತು ದಿನದಲ್ಲಿ ಜಿಲ್ಲೆಯಲ್ಲಿ ಸಂಚಲನ ಉಂಟುಮಾಡಿದ್ದಾರೆ. ದಿಢೀರನೆ ಭೇಟಿ ಕೊಡುವ ಮೂಲಕ ಕೆಲವು ಆರೋಗ್ಯ ಕೇಂದ್ರ, ಹೋಬಳಿಯ ಕಂದಾಯ ಇಲಾಖೆಯ ಕಚೇರಿಗಳ ನೌಕರರಲ್ಲಿ, ಅಧಿಕಾರಿಗಳಲ್ಲಿ ತಳಮಳ ಉಂಟಾಗುವಂತೆ ಮಾಡಿದ್ದಾರೆ. ಅಲ್ಲೆಲ್ಲ ಅವಲೋಕನ ನಡೆಸಿ ಜನರಿಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಲು  ಸೂಚಿಸಿದ್ದಾರೆ.
ತಾನು ಕೇವಲ ಕಚೇರಿಯಲ್ಲಿ ಕುಳಿತುಕೊಂಡು ಜನರ ಅಹವಾಲು ಕೇಳುವುದು, ಸಭೆ ನಡೆಸುವುದು, ಫೈಲ್‌ಗಳಿಗೆ ಸಹಿ ಹಾಕುವ ಅಧಿಕಾರಿ ಅಲ್ಲವೆನ್ನುವುದನ್ನು ಸಾಬೀತುಪಡಿಸುತ್ತಿದ್ದಾರೆ. ಜನರಲ್ಲಿ ಹೊಸ ಜಾಗೃತಿ ಮೂಡಿಸುತ್ತಿದ್ದಾರೆ. ಇತ್ತೀಚೆಗೆ ಪತ್ರಿಕಾ ಸಂವಾದದಲ್ಲಿ ಸ್ವತಃ ಲೋಕೇಶ್ ಅವರು, ತಾನು ಸಾರ್ವಜನಿಕರ ಅಹವಾಲು ಕೇಳಲು ಸದಾ ಸಿದ್ಧ. ಸಾರ್ವಜನಿಕರಿಗೆ ತನ್ನ ಕಚೇರಿ ಯಾವಾಗಲೂ ತೆರೆದಿರುತ್ತದೆ ಎನ್ನುವುದನ್ನು ಹೇಳಿದ್ದರು. ಇದಾದ ನಂತರ ದಿಢೀರ್ ಭೇಟಿ ಆರಂಭಿಸಿದ್ದಾರೆ. ಹೊಳಲೂರು ಸಮುದಾಯ ಆರೋಗ್ಯ ಕೇಂದ್ರ ಮತ್ತು ಆಲದಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ. ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈದ್ಯರಿಗೆ ಮತ್ತು ಅಲ್ಲಿನ ಸಿಬ್ಬಂದಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಔಷಧಗಳ ಕೊರತೆ, ಸಲಕರಣೆಗಳ ಮತ್ತು ಹಾಸಿಗೆಯ ಸೌಲಭ್ಯ ಚೆನ್ನಾಗಿರದಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದು ಎಲ್ಲ ವ್ಯವಸ್ಥೆಯನ್ನು ಒಂದು ವಾರದೊಳಗೆ ಸರಿಪಡಿಸಿಕೊಳ್ಳಲು ಸೂಚನೆ ನೀಡಿದ್ದಾರೆ.
ಮೊನ್ನೆ ಮಧ್ಯಾಹ್ನ ವಿದ್ಯಾನಗರದಲ್ಲಿರುವ ನಿದಿಗೆ ಹೋಬಳಿಯ ಕಂದಾಯ ಕಚೇರಿಗೆ ದಿಢೀರ್ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ, ಸಾರ್ವಜನಿಕರಿಗಾಗುತ್ತಿರುವ ತೊಂದರೆಗಳನ್ನು  ಆಲಿಸಿ, ಸುತ್ತಮುತ್ತಲಿನ ಗಲೀಜು ವಾತಾವರಣವನ್ನು ಗಮನಿಸಿ ಎಲ್ಲ ವ್ಯವಸ್ಥೆ ಚೆನ್ನಾಗಿರುವಂತೆ ನೋಡಿಕೊಳ್ಳಬೇಕೆಂದು ಸೂಚಿಸಿದ್ದಾರೆ.
ಆನಂತರ ಸಂಜೆ, ನಗರದಲ್ಲಿ ಹೆಚ್ಚುತ್ತಿರುವ ಪಾರ್ಕಿಂಗ್ ಸಮಸ್ಯೆ, ಕಟ್ಟಡಗಳ ಮಾಲಕರಿಂದ ಒತ್ತುವರಿ, ಕಟ್ಟಡ ನಿರ್ಮಿಸುವಾಗ ಪಾರ್ಕಿಂಗ್‌ಗೆ ಜಾಗ ಬಿಡದೇ ಇರುವುದರ ಬಗ್ಗೆ ಸ್ವತಃ ಸ್ಥಳ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.
ನೆಹರೂ ರಸ್ತೆ, ಎ.ಎ. ರಸ್ತೆ, ಶಿವಪ್ಪ ನಾಯಕ ವೃತ್ತ ಮೊದಲಾದೆಡೆ ಸಂಚರಿಸಿ ಅಲ್ಲಿನ ಪಾರ್ಕಿಂಗ್ ಸಮಸ್ಯೆ ಗಮನಿಸಿದರು. ಅಂಡರ್‌ಪಾಸ್‌ನಲ್ಲೂ ಸಂಚರಿಸಿದರು. ನಾಗರಿಕ ಒಕ್ಕೂಟದವರು ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದರು. ಪತ್ರಕರ್ತರೂ ಸಹ ಸಂವಾದದಲ್ಲಿ ಈ ವಿಷಯವನ್ನು ನಿವೇದಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು.
ಈ ಹಿಂದಿನ ಜಿಲ್ಲಾಧಿಕಾರಿ ವಿ. ಪಿ. ಇಕ್ಕೇರಿ ಸಹ ವಿವಿಧ ತಾಲೂಕುಗಳಿಗೆ ಭೇಟಿ ನೀಡಿದಾಗ ಅಥವಾ ಹಲವು ಬಾರಿ ದಿಢೀರನೆ ಹಾಸ್ಟೆಲ್, ಆಸ್ಪತ್ರೆ, ವಿವಿಧ ಇಲಾಖೆಗಳಲ್ಲಿ ಪರಿಶೀಲನೆ ನಡೆಸುತ್ತಿದ್ದರು. ಇದಕ್ಕೂ ಮುನ್ನ ಜಿಪಂ ಅಧ್ಯಕ್ಷರಾಗಿದ್ದ ಕಲಗೋಡು ರತ್ನಾಕರ್ ಸಹ ಹಾಸ್ಟೆಲ್ ಸಹಿತ ಶಾಲೆ, ಹೈಸ್ಕೂಲ್, ಇತರೇ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು. ಇಂತಹ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ಅಧಿಕಾರಿಗಳ ಕೆಲಸ ಕೇವಲ ಕಚೇರಿಯಲ್ಲಿ ಕಾಲ ಕಳೆಯುವುದಲ್ಲ ಎನ್ನುವುದನ್ನು ಮತ್ತೆ  ನೆನಪಿಸಿದ್ದಾರೆ.
ಗ್ರಾಮಿಣ ಜನರ ಸಮಸ್ಯೆ  ಪರಿಹರಿಸುವ ಮತ್ತು ಅವರಿಗೆ ನೆರವಾಗುವ ಉತ್ಕಟ ಇಚ್ಛೆ ನೂತನ ಡಿಸಿಯವರದ್ದಾಗಿದ್ದು, ಪ್ರತಿ ಗ್ರಾಪಂ ಮಟ್ಟದಲ್ಲಿ ಸಭೆ ನಡೆಸಿ ಅಲ್ಲಿಯೇ ಗ್ರಾಮಸ್ಥರ ಸಮಸ್ಯೆ ಬಗೆಹರಿಸುವ ಕೆಲಸವನ್ನು ಮಾಡುವ ಯೋಜನೆಯನ್ನು ಹೊಂದಿದ್ದಾರೆ. ಜಿಲ್ಲೆಯ ಮಟ್ಟಿಗೆ ಡಿಸಿ ಸದ್ಯ ನೂತನ ಆಶಾಕಿರಣವಾಗಿದ್ದಾರೆ.
,,,,,,,,,,,,,,,,,,,,,,,,,,,,,,,,,,,,,,,,  

Saturday, 12 November 2016

ಮುಂಜಾನೆ ಮೈಕೊರೆಯುವ ಚಳಿ, 
ಹೊತ್ತೇರಿದಂತೆ ನೆತ್ತಿ ಸುಡುವ ಬಿಸಿಲು 

 ಸದ್ಯದ ವಾತಾವರಣ ಹೇಗಿದೆ ಎಂದರೆ, ಮನೆಯ ಒಳಗಡೆ ಫ್ಯಾನ್, ಕೂಲರ್, ಎ.ಸಿ.ಯಿಲ್ಲದೆ ಹಗಲು ಇರಲು ಸಾಧ್ಯವಾಗದಂತಹ ಪರಿಸ್ಥಿತಿಯಿದೆ. ಈಗಲೇ ನಗರದಲ್ಲಿ ಈ ಪರಿಸ್ಥಿತಿಯಾದರೆ ಏಪ್ರಿಲ್, ಮೇ ತಿಂಗಳಲ್ಲಿ ಇನ್ಯಾವ ಸ್ಥಿತಿಯಿರಲಿದೆ ಎಂಬುವುದನ್ನು ಊಹಿಸಿಕೊಂಡರೆ ಭಯವಾಗುತ್ತದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಸಾವಿರಾರು ಮರಗಳನ್ನು ಕಡಿದುರುಳಿಸಲಾಗುತ್ತಿದೆ. ಅಭಿವೃದ್ದಿಯ ಹೆಸರಿನಲ್ಲಿ ಪರಿಸರ ವಿನಾಶವಾಗುತ್ತಿದೆ. ನಗರದ ಸುತ್ತಮುತ್ತಲು ಗದ್ದೆ, ತೋಟಗಳನ್ನು ಬಡಾವಣೆಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಕೆರೆಗಳು ಕಣ್ಮರೆಯಾಗುತ್ತಿವೆ. ಪರಿಸರದಲ್ಲಿ ಏರುಪೇರು ಕಂಡುಬರುತ್ತಿದ್ದು, ಹವಮಾನದಲ್ಲಿ ವೈಪರೀತ್ಯ ಉಂಟಾಗುತ್ತಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ವರ್ಷದಿಂದ ವರ್ಷಕ್ಕೆ ತಾಪಮಾನ ಹೆಚ್ಚಾಗುತ್ತಿದೆ ಎನ್ನಬಹುದು. ಬಿಸಿಲ ಬೇಗೆ ದಿನೇ ದಿನೇ ತೀವ್ರಗೊಳ್ಳುತ್ತಿರುವುದರಿಂದ ಅನಾರೋಗ್ಯದ ಜೊತೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕೆರೆ, ಬಾವಿ, ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕುಡಿಯುವ ನೀರಿನ ಹಾಹಾಕಾರ ಉಂಟಾಗುವ ಆತಂಕ ಸೃಷ್ಟಿಸಿದೆ


   ಮಲೆನಾಡಿನ ವಾತಾವರಣ 2-3 ವರ್ಷದಿಂದ ಏರುಪೇರಿನಲ್ಲಿದೆ.  ವಿಪರೀತ ಬಿಸಿಲು ಬೀಳುವ ಮೂಲಕ ಬೇಸಿಗೆಯಲ್ಲಿ ಬಯಲಿಸೀಮೆಯನ್ನು ಮೀರಿಸುತ್ತಿದೆ. ಇನ್ನೊಂದೆಡೆ ಮಳೆಗಾಲದಲ್ಲಿ ಮಳೆಯೂ ಆಗದೆ ಬಯಲುಸೀಮೆಯವನ್ನು ಮತ್ತೊಮ್ಮೆ ನೆನಪಿಸುತ್ತಿದೆ. ಪ್ರಾಕೃತಿಕ ವ್ಯವಸ್ಥೆಯಲ್ಲಿನ ಏರುಪೇರಿನಿಂದ, ತಾಪಮಾನದ ಏರಿಳಿತದಲ್ಲಾಗುತ್ತಿರುವ ದಿಢೀರ್ ಬದಲಾವಣೆಯಿಂದ ಜನತೆ ತತ್ತರಿಸುವಂತಾಗಿದೆ.
  ಚಳಿಗಾಲದಲ್ಲಿಯೇ ಬೇಸಿಗೆಯ ಸುಡು ಬಿಸಿಲಿನ ಶಾಖವನ್ನು ಸಹ್ಯಾದ್ರಿ ಅಂಚಿನಲ್ಲಿರುವ ಮಲೆನಾಡಿಗರು ಈಗ ಎದುರಿಸುವಂತಾಗಿದೆ. ರಾತ್ರಿ ಮೈ ಕೊರೆಯುವ ಚಳಿಯೂ ತನ್ನ ಪ್ರಮಾಣವನ್ನು ಹೆಚ್ಚಿಸಲಾರಂಭಿಸಿದೆ. ಬೆಳಗಿನ ಜಾವ ಮತ್ತು ಮುಂಜಾನೆಯ ಕುಳಿರ್ಗಾಳಿ ಮಿಶ್ರಿತ ಚಳಿ ಜನತೆಯ ಆರೋಗ್ಯದ ಮೇಲೆ ಪರಿಣಾಮ ಬೀರಲಾರಂಭಿಸಿದೆ. ಹಗಲು ವೇಳೆ ಕಂಡುಬರುವ ನೆತ್ತಿಸುಡುವ ಬಿಸಿಲಿಗೆ ಈಗಲೇ ಸುಸ್ತಾಗುತ್ತಿದ್ದಾರೆ. ಈ ವೈಪರೀತ್ಯದಿಂದ ನಾನಾ ರೀತಿಯ ಆರೋಗ್ಯ ಸಂಬಂಧಿತ ಸಮಸ್ಯೆಗಳು ಎದುರಾಗುತ್ತಿವೆ.
ಒಂದು ವಾರದಿಂದ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಚಳಿಯ ಪ್ರಮಾಣ ಹೆಚ್ಚಳವಾಗಿದೆ. ಸಂಜೆಯಾಗುತ್ತಿದ್ದಂತೆ ತಾಪಮಾನದಲ್ಲಿ ದಿಢೀರ್ ಕುಸಿತ ಕಂಡುಬರುತ್ತಿದೆ. ಚಳಿಗಾಳಿ ಬೀಸಲಾರಂಭಿಸುತ್ತಿದೆ. ಮಧ್ಯರಾತ್ರಿಯ ನಂತರ  ಚಳಿ ಹೆಚ್ಚುತ್ತಿದೆ. ಮುಂಜಾನೆಯ ವೇಳೆಯಂತೂ ಈ ಪ್ರಮಾಣ ಮತ್ತಷ್ಟು ಹೆಚ್ಚಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಮಧ್ಯರಾತ್ರಿಯ ನಂತರ ಶಿವಮೊಗ್ಗ ನಗರದ ತಾಪಮಾನದ ಪ್ರಮಾಣ, 15 ರಿಂದ 18 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶ ದಾಖಲಾಗುತ್ತಿದೆ. ಮುಂಜಾನೆಯ ವೇಳೆಯಂತೂ ಚಳಿ ಕಾಡುತ್ತಿದೆ. ಚಳಿಯ ಅನುಭವ ಒಂದು ರೀತಿಯದ್ದಾದರೆ, ಬಿಸಿಲ ಬೇಗೆಯ ಸ್ಥಿತಿ ಮತ್ತೊಂದು ಬಗೆಯದ್ದಾಗಿದೆ. ಅಕ್ಟೋಬರ್‌ನಿಂದಲೇ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ತಾಪಮಾನದ ಪ್ರಮಾಣದಲ್ಲಿ ದಿಢೀರ್ ಹೆಚ್ಚಳ ಕಂಡುಬಂದಿದೆ. ಏಪ್ರಿಲ್, ಮೇನಲ್ಲಿ ಕಂಡುಬರುವ ತಾಪಮಾನ ಚಳಿಗಾಲದ ಅವಧಿಯಲ್ಲಿಯೇ ದಾಖಲಾಗುತ್ತಿದೆ.
  ಚಳಿಗಾಲದ ಅವಧಿಯಲ್ಲಿ ಇಷ್ಟೊಂದು ಪ್ರಮಾಣದ ತಾಪಮಾನ ಇತ್ತೀಚಿನ ವರ್ಷಗಳಲ್ಲಿ ಕಂಡುಬರುತ್ತಿರಲಿಲ್ಲ. ಆದರೆ, ಪ್ರಸ್ತುತ ವರ್ಷ ನವೆಂಬರ್ ತಿಂಗಳಲ್ಲಿಯೇ ಬೇಸಿಗೆಯ ಅವಧಿಯ ತಾಪಮಾನ ದಾಖಲಾಗುತ್ತಿದೆ. ಈಗಲೇ ಪರಿಸ್ಥಿತಿ ಹೀಗಾದರೆ, ಬೇಸಿಗೆಯ ಸ್ಥಿತಿ ಹೇಗಿರುತ್ತದೆಯೋ ಎಂಬ ಆತಂಕ ಜನರನ್ನು ಕಾಡಲಾರಂಭಿಸಿದೆ.
24 ಗಂಟೆಯ ಅವಧಿಯಲ್ಲಿ ಬಿಸಿಲು ಹಾಗೂ ಚಳಿ ತೀವ್ರ ಸ್ವರೂಪದಲ್ಲಿ ದಾಖಲಾಗುತ್ತಿರುವುದು ಮಲೆನಾಡು ಭಾಗದಲ್ಲಿ ಬದಲಾಗುತ್ತಿರುವ ಪರಿಸರಕ್ಕೆ ಸಾಕ್ಷಿಯಾಗಿದೆ. ಮರಗಳ ಅವ್ಯಾಹತ ಮಾರಣಹೋಮದಿಂದ ಸಸ್ಯ ಶ್ಯಾಮಲೆಯಾಗಿದ್ದ, ಹಸಿರುಟ್ಟು ನಳನಳಿಸುತ್ತಿದ್ದ ದಟ್ಟ ಕಾಡುಗಳು ನಾಶವಾಗುತ್ತಿವೆ. ಇನ್ನೊಂದೆಡೆ, ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ.ಇದಕ್ಕೆ ಸರಿಯಾಗಿ,
ಪ್ರಾಕೃತಿಕ ವ್ಯವಸ್ಥೆಯಲ್ಲಿ ಏರುಪೇರು ಉಂಟಾಗಿ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ ಎಂದು ಪರಿಸರ ತಜ್ಞರು ಅಭಿಪ್ರಾಯಪಡುತ್ತಾರೆ. ಒಟ್ಟಾರೆ, ಚಳಿ ಹಾಗೂ ಬಿಸಿಲಿನ ಜುಗಲ್‌ಬಂದಿಯಿಂದ ಮಲೆನಾಡಿಗರ ಆರೋಗ್ಯವೂ ಏರುಪೇರಾಗುತ್ತಿದೆ.
-------------------------------------

Friday, 11 November 2016

ಪ್ರತಿಭಟನೆ, ಪ್ರತಿಕೃತಿ ದಹನವೇ ಇವರ ಗುರಿ
 ಹೆಚ್ಚುತ್ತಿರುವ ಕನ್ನಡ ಸಂಘಟನೆಗಳಲ್ಲಿ ಕಡಿಮೆಯಾಗುತ್ತಿದೆ ಕಾಳಜಿ



ಕನ್ನಡದ ಹೆಸರಿನಲ್ಲಿ ಸಂಘಟನೆ ಕಟ್ಟುವವರು ಜಾಸ್ತಿಯಾಗುತ್ತಿದ್ದಾರೆ. ಎಲ್ಲರೂ ನಾಯಕರಾಗುತ್ತಿದ್ದಾರೆ. ಇವರೊಂದಿಗೆ ಸಮಸ್ಯೆಯೂ ಜಾಸ್ತಿಯಾಗುತ್ತಿದೆ. ಕೆಲವೊಮ್ಮೆ ಈ ಸಂಘಟನೆಗಳೇ ಸಮಸ್ಯೆಯಾಗಿ ಪರಿಣಮಿಸುತ್ತಿವೆ. ಇಂತಹ ಸಂಘಟನೆಗಳಿಂದ ಬಗೆಹರಿದ ಸಮಸ್ಯೆಗಳು ಯಾವುದೂ ಇಲ್ಲ. ಸಮಸ್ಯೆಯ ಬೆನ್ನುಹತ್ತಿ ಹೋರಾಡಿ, ಅದಕ್ಕೊಂದು ಇತ್ಯರ್ಥ ಮಾಡುವ ಗುರಿ, ಛಲ ಈ ಹೋರಾಟಗಾರರಿಗಿಲ್ಲ. ಕೇವಲ ಜಿಲ್ಲಾಧಿಕಾರಿ ಕಚೇರಿ, ಕೆಲವು ವೃತ್ತಗಳಿಗಷ್ಟೇ ಸೀಮಿತರಾಗಿರುತ್ತಾರೆ. ಹೋರಾಟಗಾರರು ಕನ್ನಡದ ಹೆಸರಿಟ್ಟುಕೊಂಡು ಸಂಘಟನೆ ಕಟ್ಟಿದರೆ   ಸ್ವಲ್ಪವಾದರೂ ಕನ್ನಡದ ಪರ ಕೆಲಸ ಮಾಡಬೇಕು.


ಶಿವಮೊಗ್ಗ; ಕನ್ನಡ ಪರ ಸಂಘಟನೆಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಶಿವಮೊಗ್ಗದಲ್ಲಿ ಇರುವಷ್ಟು ಕನ್ನಡದ ಹೆಸರಿನ ಸಂಘಟನೆಗಳು ರಾಜ್ಯದಲ್ಲೆಲ್ಲೂ ಇಲ್ಲ್ಲವೆಂದರೆ ತಪ್ಪಾಗಲಾರದು. ಹಾಗಂತ ಕನ್ನಡದ ಸಮಸ್ಯೆ ಕಡಿಮೆಯಾಗಿಲ್ಲ, ಅಥವಾ ಬೆಳವಣಿಗೆಯೂ ಹೆಚ್ಚಿಲ್ಲ. ನೈಜ ಕಾಳಜಿ ಇಲ್ಲದೆ, ಪ್ರಚಾರಕ್ಕಾಗಿ, ಪ್ರದರ್ಶನಕ್ಕಾಗಿ ಹುಟ್ಟುವ ಸಂಸ್ಥೆಗಳು ಬಹುಕಾಲ ಉಳಿಯೊಲ್ಲ ಎನ್ನುವುದಕ್ಕೆ ಈಗ ಅಣಬೆಗಳಂತೆ ತಲೆಎತ್ತುತ್ತಿರುವ ಈ ಸಂಘಟನೆಗಳೇ ಸಾಕ್ಷಿ.
ಕನ್ನಡದ ಹೆಸರಿನಲ್ಲಿ ಯಾವುದೇ ಸಂಘಟನೆ ಹುಟ್ಟಬೇಕಾದರೆ ಅದಕ್ಕೆ ಕನ್ನಡ ನಾಡು-ನುಡಿ, ಪರಂಪರೆ ಮತ್ತು ಸಂಸ್ಕೃತಿಯ ಬಗ್ಗೆ ಕಾಳಜಿ ಇರಬೇಕು. ಅನ್ಯ ಉದ್ದೇಶಕ್ಕೆ ಹುಟ್ಟಿಕೊಂಡು ಎದುರು ಮಾತ್ರ ಕನ್ನಡ ಎಂದು ನಾಮಫಲಕ ಹಾಕಿಕೊಳ್ಳುವವರ ಸಂಖ್ಯೆ ಅಧಿಕಗೊಳ್ಳುತ್ತಿದೆ. ಸಂಘಟನೆ ಹುಟ್ಟುವಾಗ ಯಾವ ಉದ್ದೇಶವನ್ನು ಹೊಂದಿರುತ್ತದೆಯೋ ಅದನ್ನು ಕೊನೆತನಕ ಹೊಂದಿರಬೇಕು. ಕನ್ನಡ ನುಡಿ, ಮಾಧ್ಯಮ, ಭಾಷಾ ಸಮಸ್ಯೆ ಎಂದೆಲ್ಲ ಹೇಳಿಕೊಂಡು ಹತ್ತಾರು ಜನ ಬಂದು ಯಾರದೋ ಪ್ರತಿಕೃತಿ ಸುಟ್ಟು, ಧಿಕ್ಕಾರ ಹಾಕಿ ಮನೆ ಸೇರಿಕೊಂಡರೆ ಅದು ಪ್ರಚಾರದ ತೆವಲಿಗಾಗಿ ಹುಟ್ಟಿಕೊಂಡ ಸಂಘಟನೆಯಾಗುತ್ತದೆ.
ಇತ್ತೀಚೆಗಂತೂ ಇಂತಹ  ಪ್ರತಿಭಟನೆ ಮಾಡಲೆಂದೇ ಈ ಸಂಘಟನೆಗಳು ಹುಟ್ಟಿಕೊಂಡಂತಿವೆ. ಸಂಘಟನೆಗಳು ಯಾವುದೇ ವಿಚಾರ ತಮಗೆ ಸಂಬಂಧವಿರಲಿ, ಇಲ್ಲದಿರಲಿ ಬಾವುಟ ಹಿಡಿದು ಘೋಷಣೆ ಕೂಗಿ ಪ್ರತಿಭಟಿಸುತ್ತಿವೆ. ಪ್ರತಿಭಟನೆ ಯಾವತ್ತೂ ಪ್ರದರ್ಶನ ಅಥವಾ ಪ್ರಚಾರವನ್ನು ತನ್ನ ಮೂಲ ಉದ್ದೇಶವನ್ನಾಗಿರಿಸಿಕೊಳ್ಳಬಾರದು. ಅಲ್ಲಿ ಸಮಸ್ಯೆಯ ಪ್ರತಿಬಿಂಬವಿರಬೇಕು. ಅನ್ಯಾಯದ ನೈಜತೆ ಕಾಣುತ್ತಿರಬೇಕು.
  ಕನ್ನಡದ ಬಗ್ಗೆ ಹೊತ್ತಿ ಉರಿಯುವಷ್ಟು ಸಮಸ್ಯೆ ಇದ್ದರೂ ಇವು ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಅದು ಭುಗಿಲೆದ್ದಾಗ ಮಾತ್ರ ಧಿಕ್ಕಾರ ಕೂಗುತ್ತ ಬಾವುಟ ಹಿಡಿದು, ಶಾಲು ಹೆಗಲಿಗೇರಿಸಿಕೊಂಡು ಮೆರವಣಿಗೆಯಲ್ಲಿ ಬರುತ್ತಾರೆ. (ಉದಾಹರಣೆಗೆ, ಕಾವೇರಿ ವಿವಾದ, ಬೆಳಗಾವಿಯಲ್ಲಿ ಎಂಇಎಸ್ ಪುಡಾಂಟ ಮೊದಲಾದ ಸಂದರ್ದಲ್ಲಿ ಮಾತ್ರ) ಇದರಿಂದ ಏನೂ ಸಾಧನೆಯಾಗುವುದಿಲ್ಲ. ಇಂತಹ ಸಂಘಟನೆಗಳು ಕನ್ನಡದ ಹೋರಾಟಕ್ಕೆ ಮಾತ್ರ ಸೀಮಿತವಾಗಿದ್ದರೆ ಒಳ್ಳೆಯದು, ಜೊತೆಗೆ ಬೇಕಾದರೆ ನಾಗರಿಕ ಸಮಸ್ಯೆಗೂ ಸ್ಪಂದಿಸಲಿ. ಆದರೆ ತಮಗೆ ಬೇಡವಾದ, ಸಂಬಂಧವಿಲ್ಲದ ವಿಚಾರದ ಬಗ್ಗೆ ಪ್ರತಿಭಟಿಸಿದರೆ ಅಪಹಾಸ್ಯಕ್ಕೀಡಾಗುತ್ತವಲ್ಲದೆ, ತಮ್ಮ ನೈಜ ಬಂಡವಾಳ ಏನೆನ್ನುವುದನ್ನು ಜನರಿಗೂ ತೋರಿಸಿದಂತಾಗುತ್ತದೆ.  
ಶಿವಮೊಗ್ಗ ನಗರದ ಸಮಸ್ಯೆ ಕೈಗೆತ್ತಿಕೊಂಡು ಹೋರಾಟ ಮಾಡಿದರೆ ಅಂತಹವುಗಳಿಗೆ ಜನಬೆಂಬಲವಿರುತ್ತದೆ.  ಕನ್ನಡ ಶಾಲೆಗೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುತ್ತಾ ಪ್ರತಿಭಟಿಸುತ್ತಾರೆಯೇ ವಿನಾ ಅದಕ್ಕೆ ಪರಿಹಾರವೇನು, ಜನರೇನು ಮಾಡಬೇಕು, ತಾವೇನು ಮಾಡಬಹುದೆನ್ನುವ ಬಗ್ಗೆ ಎಲ್ಲೂ ಮಾತನಾಡುವುದಿಲ್ಲ. ಇಂತಹ ಮಹತ್ವದ ಸಮಸ್ಯೆ ಎದುರಾದಾಗ ಎಲ್ಲ ಹೋರಾಟಗಾರರನ್ನು, ಸಾಹಿತಿಗಳನ್ನು ಸೇರಿಸಿ, ಚರ್ಚಿಸಿ, ಜನಜಾಗೃತಿ, ವಿಚಾರ ಸಂಕಿರಣ, ಸಮಾವೇಶ ನಡೆಸಿ ಜಾಗೃತಿ ಮೂಡಿಸುವ ಅಥವಾ ಸಂಬಂಧಿತ ಇಲಾಖೆಗೆ ಸಹಕರಿಸಿ ನೆರವಾಗುವ ಕೆಲಸ ಮಾಡಿದ್ದರೆ ಇಲ್ಲಿನ ಸಂಘಟನೆಗಳು ಹೆಸರುವಾಸಿಯಾಗುತ್ತಿದ್ದವು.
 ಸಂಘಟನೆ ಕಟ್ಟುವವರು ಜಾಸ್ತಿಯಾಗುತ್ತಿದ್ದಾರೆ. ಎಲ್ಲರೂ ನಾಯಕರಾಗುತ್ತಿದ್ದಾರೆ. ಇವರೊಂದಿಗೆ ಸಮಸ್ಯೆಯೂ ಜಾಸ್ತಿಯಾಗುತ್ತಿದೆ. ಕೆಲವೊಮ್ಮೆ ಈ ಸಂಘಟನೆಗಳೇ ಸಮಸ್ಯೆಯಾಗಿ ಪರಿಣಮಿಸುತ್ತಿವೆ. ಇಂತಹ ಸಂಘಟನೆಗಳಿಂದ ಬಗೆಹರಿದ ಸಮಸ್ಯೆಗಳು ಯಾವುದೂ ಇಲ್ಲ. ಸಮಸ್ಯೆಯ ಬೆನ್ನುಹತ್ತಿ ಹೋರಾಡಿ, ಅದಕ್ಕೊಂದು ಇತ್ಯರ್ಥ ಮಾಡುವ ಗುರಿ, ಛಲ ಈ ಹೋರಾಟಗಾರರಿಗಿಲ್ಲ. ಪತ್ರಿಕೆಯಲ್ಲಿ ಫೋಟೋ, ಸುದ್ದಿ ಪ್ರಕಟವಾದರೆ ಸಾಕು, ಇವರ ಹೋರಾಟದ ಗುರಿಯೂ ಇದೇ ಆಗಿರುತ್ತದೆ.
ಎಷ್ಟೋ ಜನರಿಗೆ ಸಂಘಟನೆಯ ಹೆಸರೇ ಗೊತ್ತಿರುವುದಿಲ್ಲ. ಏಕೆಂದರೆ ಅವರು ಕೇವಲ ಜಿಲ್ಲಾಧಿಕಾರಿ ಕಚೇರಿ, ಕೆಲವು ವೃತ್ತಗಳಿಗಷ್ಟೇ ಸೀಮಿತರಾಗಿರುತ್ತಾರೆ. ಆದ್ದರಿಂದ ಹೋರಾಟಗಾರರು ಕನ್ನಡದ ಹೆಸರಿಟ್ಟುಕೊಂಡು ಸಂಘಟನೆ ಕಟ್ಟಿದರೆ ಕನಿಷ್ಠ ಸ್ವಲ್ಪವಾದರೂ ಕನ್ನಡದ ಪರ ಕೆಲಸ ಮಾಡಬೇಕು. ಕನ್ನಡ ಬಾರದವರಿಗೆ ಕನ್ನಡ ಕಲಿಸುವ ಕೆಲಸ ಮಾಡಲಿ, ಹೋರಾಟದ ಮೂಲಕ ಹಲವು ಯುವಕರನ್ನು ಮುಂದೆ ತಂದು ಉತ್ತಮ ಹೋರಾಟಗಾರರನ್ನೋ, ನಾಯಕರನ್ನೋ ಆಗಿ ಮಾಡಲಿ. ಸಮಸ್ಯೆ ಬಗ್ಗೆ ಹೋರಾಡಿ ಯುವಕರಲ್ಲಿ ಹೋರಾಟದ ಕೆಚ್ಚನ್ನು ತುಂಬಬೇಕು. ಜನರ ಮನಸ್ಸನ್ನು ಈ ಮೂಲಕ ಗೆಲ್ಲಬೇಕೇ ವಿನಾ ರಾಜಕೀಯ ನಾಯಕರ ಬಾಲಬಡುಕರಾಗದೆ ಪರಿಶುದ್ಧರಾಗಿರಬೇಕು.
  ಇದನ್ನೆಲ್ಲಾ ಕನ್ನಡ ಸಂಘಟನೆಗಳು ಅರ್ಥ ಮಾಡಿಕೊಂಡು ಹೋರಾಟ ಮಾಡಿದರೆ ಅವುಗಳ ನೈಜ ಕಾಳಜಿ ಈಡೇರಲು ಸಾಧ್ಯ. ಇಲ್ಲವಾದರೆ ಹೆಚ್ಚುತ್ತಿವೆ ಕನ್ನಡ ಸಂಘಟನೆಗಳು, ಕಡಿಮೆಯಾಗುತ್ತಿದೆ ಕಾಳಜಿ ಎಂದು ಹೇಳಲೇಬೇಕಾಗುತ್ತದೆ.
,,,,,,,,,,,,,,,,,,,,,,,,,,,,,,,,,,,,,,,,,,,,,,

Tuesday, 8 November 2016

 ಎಂಇಎಸ್ ಪುಂಡಾಟಕ್ಕೆ ಬಲಿಯಾಗುತ್ತಿದೆ ಬೆಳಗಾವಿ ಪಾಲಿಕೆ 
 ಬೆಳಗಾವಿ ಕನ್ನಡಿಗರಿಗೆ ತಪ್ಪದ ಗೋಳು

  ಎಂಇಎಸ್ ತಾನೇ  ದೌರ್ಜನ್ಯ ನಡೆಸಿ ಕನ್ನಡಿಗರ ಮೇಲೆ ಗೂಬೆ ಕೂರಿಸಲೆತ್ನಿಸುತ್ತಿದೆ.ಬೆಳಗಾವಿಯಲ್ಲಿ ಮರಾಠಿಗರನ್ನು ಹಿಂಸಿಸಲಾಗುತ್ತಿದೆ, ಪೊಲೀಸರು ವಿನಾಕಾರಣ ಬಂಧಿಸುತ್ತಿದ್ದಾರೆ ಎಂದು ದೂರಿ ಪ್ರಧಾನಿ ಮತ್ತು ರಾಷ್ಟ್ರಪತಿಗೆ ಮನವಿ ಸಲ್ಲಿಸಿದೆ. ನ. 13ರಂದು ಬೆಳಗಾವಿಗೆ ಪ್ರಧಾನಿ ಬರಲಿರುವುದರಿಂದ ಅವರ ಗಮನ ಸೆಳೆಯಲು ಈ ಮನವಿ ಸಲ್ಲಿಸಿದೆ ಎಂದೇ ಹೇಳಲಾಗುತ್ತಿದೆ. ಈ ಮಧ್ಯೆ ಎಂಎಇಎಸ್ ಮುಖಂಡರಿಗೆ ಬೆಳಗಾವಿ ಪೊಲೀಸ್ ಆಯುಕ್ತರು ನೋಟಿಸ್ ಜಾರಿ ಮಾಡಿ, ಕರಾಳ ದಿನಾಚರಣೆಗೆ ಪರವಾನಿಗೆ ನೀಡಿದ್ದನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ನೋಟೀಸ್ ನೀಡಿ 3 ದಿನದಲ್ಲಿ ಉತ್ತರಿಸಲು ಸೂಚಿಸಿದ್ದಾರೆ. ಇನ್ನೊಂದೆಡೆ, ಬೆಳಗಾವಿ ಪಾಲಿಕೆಯನ್ನು ವಿಸರ್ಜಿಸಬಾರದು ಏಕೆ ಎಂಬ ಬಗ್ಗೆ ವಿಚಾರಣೆ ನಡೆಸಿ ವಾರದೊಳಗೆ ವರದಿ ನೀಡಲು ಪ್ರಾದೇಶಿಕ ಆಯುಕ್ತರಿಗೆ ಸರಕಾರ ಕೇಳಿದೆ.      


ಕನ್ನಡ ರಾಜ್ಯೋತ್ಸವ ನವೆಂಬರ್‌ನಲ್ಲಿ ಆರಂಭವಾದೊಡನೆ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಯ ದುರ್ವರ್ತನೆಗೂ ಚಾಲನೆ ಸಿಗುತ್ತದೆ. ಇದು ಪ್ರತಿ ವರ್ಷದ ಅವರ ಕೆಲಸ. ಕರ್ನಾಟಕದಲ್ಲೇ ಇರುವ ಬೆಳಗಾವಿಯಲ್ಲಿ ವಾಸಿಸುತ್ತ, ಇಲ್ಲಿಯ ನೆಲ, ಜಲವನ್ನೇ ಬಳಸುತ್ತ, ಅದಕ್ಕೇ ದ್ರೋಹ ಮಾಡುತ್ತಿದೆ ಎಂಇಎಸ್ ಎಂಬ ಸಂಘಟನೆ. ಈ ಸಂಘಟನೆಯ ಆಟಾಟೋಪ ಇಂದು- ನಿನ್ನೆಯದಲ್ಲ, ಹಲವು ದಶಕಗಳಿಂದ ನಡೆದೇ ಬಂದಿದೆ. ಆದರೆ ಇದನ್ನು ಇಂದಿಗೂ ನಿಲ್ಲಿಸಲು ಸಾಧ್ಯವಾಗಿಲ್ಲ, ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣವೂ ಇದೆ.
ಬೆಳಗಾವಿಯ ಜನಸಂಖ್ಯೆಯಲ್ಲಿ ಶೇ. 35ರಷ್ಟು ಮಾತ್ರ ಮರಾಠಿಗರಿದ್ದಾರೆ. ಉಳಿದ ಶೇ. 65ರಷ್ಟು ಕನ್ನಡಿಗರೇ ಇದ್ದರೂ ಮರಾಠಿಗರ ಪ್ರಾಬಲ್ಯವೇ ಪ್ರಚಲಿತಲ್ಲಿದೆ. ಏಕೆಂದರೆ, ಅವರು ಹಲ್ಲೆ, ದೊಂಬಿ, ಗಲಾಟೆ ಎಲ್ಲದರಲ್ಲೂ ನಿಸ್ಸೀಮರು. ಕನ್ನಡಿಗರು ಶಾಂತ ಸ್ವಭಾವದವರಾಗಿದ್ದು. ಎಲ್ಲವನ್ನೂ ಮೂಕಪ್ರೇಕ್ಷಕರಾಗಿ ನೋಡುವಂತಹ ಸ್ಥಿತಿ ಅಲ್ಲಿದೆ. ಮೊನ್ನೆ ನವೆಂಬರ್ 1 ರಂದು ಕರಾಳ ದಿನವನ್ನು ಆಚರಿಸುವುದರ ಮೂಲಕ, ಕನ್ನಡಕ್ಕೆ ಅವಮಾನ ಎಸಗಿರುವ ಎಂಎಇಎಸ್, ಕೆಲವು ವರ್ಷಗಳಿಂದ ತನ್ನ ಶಾಸಕರನ್ನು ನಗರದಿಂದ ಆರಿಸಿ ಕಳುಹಿಸುತ್ತಿದೆ. ಒಬ್ಬರು, ಇಬ್ಬರು ಶಾಸಕರು ಪ್ರತಿಬಾರಿ ಇದ್ದೇ ಇರುತ್ತಾರೆ. ಪಾಲಿಕೆಯಲ್ಲೂ ಅವರದ್ದೇ ಆಟ ನಡೆಯುತ್ತಿದೆ. ಇಂತಹ ಪುಂಡಾಟ ಆಡಿದ್ದರಿಂದಲೇ 2005 ಮತ್ತು 2011ರಲ್ಲಿ ಪಾಲಿಕೆ ಸೂಪರ್‌ಸೀಡ್ ಆಗಿತ್ತು. ಈ ವರ್ಷದ ನ. 1ರಂದು ಬೆಳಗಾವಿ ದಕ್ಷಿಣ ಶಾಸಕ ಸಂಭಾಜಿರಾವ್ ಪಾಟೀಲ್, ಮೇಯರ್ ಸರಿತಾ ಪಾಟಿಲ್ ಮತ್ತು ಉಪಮೇಯರ್ ಸಂಜಯ್ ಶಿಂಧೆ (ಎಲ್ಲರೂ ಎಂಇಎಸ್)  ನಗರದಲ್ಲಿ ಹಾಕಲಾಗಿದ್ದ ಅನೇಕ ಕನ್ನಡದ ಬಾವುಟ, ಬಂಟಿಂಗ್ಸ್‌ಗಳನ್ನು ಕಿತ್ತುಹಾಕಿದ್ದರು. ಕೆಲವೆಡೆ ಹರಿದುಹಾಕಿದ್ದರು, ಕರ್ನಾಟಕ ವಿರೋಧಿ ಘೋಷಣೆಯನ್ನು ಕೂಗಿ, ಸಾರ್ವಜನಿಕವಾಗಿ ಬಂದೂಕನ್ನು ಸಹ ಪ್ರದರ್ಶಿಸಿ ಭಯಾನಕ ವಾತಾವರಣವನ್ನು ಸೃಷ್ಟಿಸಿದ್ದರು. ಅದೆಲ್ಲದರ ಫಲವಾಗಿ ಈಗ ತೊಂದರೆಗೆ ಸಿಲುಕಿಕೊಂಡಿದ್ದಾರೆ.
ಈಗ ಮತ್ತೆ ಪಾಲಿಕೆ ಸೂಪರ್‌ಸೀಡ್ ಆಗುವ ಎಲ್ಲ ಲಕ್ಷಣ ಗೋಚರವಾಗುತ್ತಿದೆ. ಜಿಲ್ಲಾಧಿಕಾರಿ ನೀಡಿದ ವರದಿಯನ್ವಯ ಹೆಚ್ಚಿನ ಮಾಹಿತಿಯನ್ನು ನೀಡುವಂತೆ ಬೆಳಗಾವಿ ಪ್ರಾದೇಶಿಕ ಅದಿಕಾರಿಗೆ ಸರಕಾರ ಸೂಚಿಸಿದ್ದು, ವಾರದಲ್ಲಿ ಪಾಲಿಕೆ ಆಡಳಿತ ಅಂತ್ಯವಾಗುವ ಸಾಧ್ಯತೆ ಕಂಡುಬರುತ್ತಿದೆ. ಎಷ್ಟೇ ಬಾರಿ ಸೂಪರ್‌ಸೀಡ್ ಮಾಡಿದರೂ ಮರಾಠಿಗರ ಆಟವೇ ಮತ್ತೆ ಅಲ್ಲಿ ಶುರುವಾಗುತ್ತದೆ. ಪಾಲಿಕೆಯ ಚುನಾವಣೆಯಲ್ಲಿ ಶೇ. 65ರಷ್ಟು ಕನ್ನಡಿಗರಿದ್ದರೂ ಹಣ ಬಲ, ತಾಕತ್ತು ಪ್ರದರ್ಶನದಿಂದ ಗೆದ್ದು ಬಂದು ಎಂಇಎಸ್ ಬಹುಮತ ಪಡೆಯುವ ಮೂಲಕ ಮತ್ತೆ ನಾಡದ್ರೋಹಿ ಕೆಲಸಕ್ಕೆ ಕೈಹಾಕುತ್ತಿದೆ.
ಪ್ರತಿ ಬಾರಿಯೂ ಕನ್ನಡಿಗರಿಗೇ ಸವಾಲೊಡ್ಡುವ ಕೆಲಸವನ್ನೇ ಮಾಡುತ್ತ ಬಂದಿರುವ ಎಂಎಇಎಸ್‌ನ್ನು ಯಾರೂ ಏನು ಮಾಡುವಂತಿಲ್ಲ. ಏಕೆಂದರೆ, ಅದೊಂದು ಮರಾಠಿ ಭಾಷಿಕರ ಸಂಘಟನೆ. ಅವರಿಗೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆನ್ನುವುದೊಂದೇ ಹಠ. ಬೆಳಗಾವಿಯಲ್ಲಿ ಮರಾಠಿ ನೆಲೆಸಬೇಕು. ಕನ್ನಡಕ್ಕೆ ಅವಕಾಶ ಕೊಡಬಾರದು ಎನ್ನುತ್ತ ಗಡಿಭಾಗದ ಕನ್ನಡಿಗರ ಮೇಲೆ ಸತತ ದೌರ್ಜನ್ಯ ಎಸಗುತ್ತಲೇ ಬಂದಿದ್ದಾರೆ.
ಬೆಳಗಾವಿ ಸಂಗೊಳ್ಳಿ ರಾಯಣ್ಣ ಮತ್ತು ಕಿತ್ತೂರು ಚೆನ್ನಮ್ಮ ಅವರ ತಪೋಭೂಮಿ ಎಂದು ಕರೆಯಿಸಿಕೊಳ್ಳುತ್ತದೆ. ಇಂತಹ ವೀರರ ನಾಡಲ್ಲಿ ಎಂಇಎಸ್ ಅಟ್ಟಹಾಸ ದಿನೇದಿನೇ ಮಿತಿಮೀರುತ್ತಿದೆ. ಯಾವುದೇ ಸರಕಾರಕ್ಕೂ ಇವರ ಮೇಲೆ ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಶೇ. 35ರಷ್ಟು ಜನಸಂಖ್ಯೆ ಇರುವ ಮರಾಠನ್ನು ವಿರೋಧಿಸಿದಂತಾಗುತ್ತದೆ. ಇಲ್ಲಿ  ಅವರ ವಿರುದ್ದ ಕ್ರಮ ಜರುಗಿಸಿದರೆ ಮುಂಬೈನಲ್ಲಿ ಕನ್ನಡಿಗರ ಮೆಲೆ ಹಲ್ಲೆ ಆರಂಭವಾಗುತ್ತದೆ. ಅಲ್ಲಿ ಶಿವಸೇನೆಯಂತಹ ಕಟ್ಟಾ ಮರಾಠಾವಾದಿ ಪಕ್ಷಗಳು ಯಾವುದಕ್ಕೂ ಹೇಸದೆ
ತಮ್ಮ ಕಾರ್ಯಾಚರಣೆ ನಡೆಸುತ್ತವೆ. ಈ ಎಲ್ಲ ದೃಷ್ಟಿಯಿಂದ ರಾಜ್ಯ ಸರ್ಕಾರಗಳು ಸಾಧ್ಯವಾದಷ್ಟು ಕ್ರಮ ಜರುಗಿಸುತ್ತ ಪಾಠ ಕಲಿಸುತ್ತಿವೆ.
2005ರಲ್ಲಿ ಪಾಲಿಕೆಯ ಮೇಯರ್ ಆಗಿದ್ದ ವಿಜಯ್ ಮೋರೆ ಅವರ ಮುಖಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯವರು ಮಸಿ ಬಳಿದು ಪ್ರತಿಭಟಿಸಿದ್ದರು. ಇದಾದ ಬಳಿಕ ಪಾಲಿಕೆಯು ಬೆಳಗಾವಿ ನಗರ ಮಹಾರಾಷ್ಟ್ರಕ್ಕೆ ಸೇರಬೇಕೆಂದು ನಿರ್ಣಯ ಅಂಗೀಕರಿಸಿತ್ತು. ಇದರಿಂದ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಪಾಲಿಕೆಯನ್ನು ಸೂಪರ್‌ಸೀಡ್ ಮಾಡಿದ್ದರು. 2011ರಲ್ಲೂ ಸಹ ನಾಡದ್ರೋಹಿ ಚಟುವಟಿಕೆ ನಡೆಸಿದ್ದಕ್ಕೆ ಮುಖ್ಯಮಂತ್ರಿ ಸದಾನಂದ ಗೌಡ ಇದೇ ಕೆಲಸ ಮಾಡಿದ್ದರು. 2016ರಲ್ಲಿ ಮತ್ತೆ ಸೂಪರ್‌ಸೀಡ್‌ಗೆ ಎಲ ್ಲತಯಾರಿ ನಡೆದಿದೆ.
ಎಷ್ಟೇ ಕ್ರಮ ಕೈಗೊಂಡರೂ ಎಂಇಎಸ್ ಪಾಠ ಕಲಿಯುತ್ತಿಲ್ಲ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆನ್ನುವುದೊಂದೇ ಅವರ ಹಠ. ಎಲ್ಲಿಯವರೆಗೆ ಬೆಳಗಾವಿ ಕನ್ನಡಿಗರು ಒಟ್ಟಾಗಿ ಕನ್ನಡ ಭಾಷಿಕರನ್ನು ಆಯ್ಕೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಇಂತಹ ಕೆಲಸ ನಡೆಯುತ್ತಲೇ ಇರುತ್ತದ. ಕನ್ನಡದ ಬಗ್ಗೆ ಮಾತನಾಡುವವರು ಅದರ ಉಳಿವಿಗೂ ಮುಂದಾಗಬೇಕು. ಚುನಾವಣೆ ಬಂದಾಗ ಎಂಎಇಎಸ್‌ಗೆ ಮತ ಹಾಕಿ ಮತ್ತೆ ಅವರನ್ನೇ ಆಯ್ಕೆ ಮಾಡುವುದನ್ನು ಬಿಡಬೇಕು. ಕನ್ನಡ ಸಂಘಟನೆಗಳು ಸಾಕಷ್ಟಿದ್ದರೂ ಅವೆಲ್ಲ ಒಂದೇ ಸೂರಿನಡಿಯಲ್ಲಿ ಕೆಲಸ ಮಾಡದಿರುವುದು ಇದಕ್ಕೆ ಕಾರಣವಿರಬಹುದು.
,,,,,,,,,,,,,,,,,,,,,,,,,,,,,

Monday, 7 November 2016

ಉಲ್ಬಣಿಸಿದ ಮಾಲಿನ್ಯತೆ: ದೆಹಲಿ ಜನತೆ ತತ್ತರ 


ಪರಿಸರ ಮಾಲಿನ್ಯದ ಬಗ್ಗೆ ಮಾತನಾಡುವ ನಾವು ಅದರ ಭೀಕರತೆ ಎಷ್ಟು ಎನ್ನುವುದನ್ನು ಅರಿತಿಲ್ಲ. ಈಗ ದೆಹಲಿಯಲ್ಲಿ ಗಂಭೀರ ಸ್ವರೂಪದ ಪರಿಸರ ಮಾಲಿನ್ಯ ಎದುರಾಗಿದ್ದು, ಇದರಿಂದ ಪಾರಾಗಲು ಅಲ್ಲಿನ ಜನತೆ ಇನ್ನಿಲ್ಲದ ಯತ್ನ ಆರಂಭಿಸಿದ್ದಾರೆ. ಬಳುವಳಿಯಾಗಿ ಬಂದ ಪರಿಸರವನ್ನು ಉಳಿಸಿಕೊಳ್ಳದೆ ಪಿತ್ರಾರ್ಜಿತ ಆಸ್ತಿ  ಎಂಬಂತೆ ಮನಬಂದ ಹಾಗೆ ಹಾಳು ಮಾಡುವುದನ್ನು ಕಲಿತುಕೊಂಡಿರುವ ನಾವು, ಅದರ ಫಲವನ್ನು ಈಗ ಉಣ್ಣಲೇಬೇಕಿದೆ. ದೆಹಲಿಯಲ್ಲಿ 17 ವರ್ಷಗಳ ಇತಿಹಾಸದಲ್ಲೇ ಅತ್ಯಂತ ಮಾರಕವಾದ ಹೊಗೆಮಂಜಿನ ಸಮಸ್ಯೆ ಎದುರಾಗಿದೆ. ಇದರಿಂದ ಅಸ್ತಮಾ, ಉಸಿರಾಟದ ಸಮಸ್ಯೆ, ಶ್ವಾಸಕೋಶಗಳ ಊತ ಮೊದಲಾದ ತೀವ್ರ ಸ್ವರೂಪದ ಕಾಯಿಲೆ ಹೆಚ್ಚಾಗಿದೆ. ಹೆಚ್ಚುತ್ತಿರುವ ವಾಹನಗಳು, ಘನತ್ಯಾಜ್ಯ ಸಮಸ್ಯೆ ವಾತಾವರಣವನ್ನು ನಾಶ ಮಾಡುತ್ತಿದೆ. ದೆಹಲಿಯ ಸದ್ಯದ ಪರಿಸ್ಥಿತಿ ದೇಶದ ಇತರ ಮಹಾನಗರಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ   ಸ್ವಯಂಕೃತ ಅಪರಾಧದ ಫಲವನ್ನು ಅನುಭವಿಸಲೇಬೇಕಾಗುತ್ತದೆ.


ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ  ಪರಿಸರ ಮಾಲಿನ್ಯತೆ ಉಲ್ಬಣಿಸಿದ್ದು, ಪರಿಣಾಮವಾಗಿ ಶಾಲಾ- ಕಾಲೇಜುಗಳು ರಜೆ ಘೋಷಿಸುವ ಪರಿಸ್ಥಿತಿ ಎದುರಾಗಿದೆ. ತಪ್ಪಿನಿಂದ ಪಾಠ ಕಲಿಯದ ಮತ್ತೆ ಮತ್ತೆ ಸತತವಾಗಿ ತಪ್ಪನ್ನೇ ಮಾಡುತ್ತಿರುವುದರಿಂದ ಈಗ ಕರಾಳ ಎನ್ನುವಂತಹ  ವಾತಾವರಣ ನಿರ್ಮಾಣವಾಗಿದೆ. ವಾಹನಗಳು, ಕೈಗಾರಿಕೆಗಳು, ನಿವಾಸಿಗಳು ಉರಿಸುತ್ತಿರುವ ಇಂಧನಗಳಿಂದಾಗುತ್ತಿರುವ ಮಾಲಿನ್ಯತೆ, ಇದರ ಜೊತೆಗೆ ಧೂಳು ಮತ್ತು ಸಮುದ್ರದ ಉಪ್ಪಿನಂಶದ ಗಾಳಿ  ಎಲ್ಲವೂ ಸೇರಿ ಇಡಿ ವಾತಾವರಣವನ್ನು ಕಲುಷಿತಗೊಳಿಸಿವೆ. ಚಳಿಗಾಲ ಇನ್ನೇನು ಆರಂಭವಾಗಲಿದ್ದು, ಇದು ತಂಗಾಳಿಯನ್ನೇ ಬುಡಮೇಲು ಮಾಡುವ ಸಾಧ್ಯತೆ ಇದೆ. ಇದರಿಂದ ಮಾಲಿನ್ಯ ಭೂಮಿಗೆ ಅತಿ ಹತ್ತಿರದಲ್ಲಿ ಬರುವ ಸಂಭವವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.
ದೆಹಲಿ ಪಕ್ಕದಲ್ಲಿರುವ ಪಂಜಾಬ್ ಮತ್ತು ಹರಿಯಾಣಾದ ರೈತರು ಅತಿ ಹೆಚ್ಚಿನ ಪ್ರಮಾಣದಲ್ಲಿ ಹೊಲಗಳಲ್ಲಿ ಕಸದ ವಸ್ತುಗಳನ್ನು ಸುಡುತ್ತಾರೆ. ಇದು ದೆಹಲಿಯ ವಾತಾವರಣವನ್ನು ಸೇರುತ್ತಿದೆ. ಇದರೊಟ್ಟಿಗೆ ಅತಿ ಹೆಚ್ಚು ಜನಸಾಂದ್ರತೆ ಇರುವ ಪ್ರದೇಶವಾದ ದೆಹಲಿಯ ಮಾಲಿನ್ಯವು  ಸಮೀಪದಲ್ಲಿರುವ ಇತರೆ ದೇಶಗಳಲ್ಲಿನ ವಾತಾವರಣದ ಮಾಲೀನತೆಯನ್ನು ಸಹ ಎಳೆದುಕೊಳ್ಳುವ ಪರಿಸ್ಥಿತಿ ಸದ್ಯ ಇದೆ. ಈಗಿನ ಧೂಳು ಇದಕ್ಕೆ ಸೇರಿಕೊಂಡು ಇನ್ನಷ್ಟು ಆತಂಕಕ್ಕೆ ಇಂಬು ಕೊಡುತ್ತಿದೆ.

ನಿವಾಸಿಗಳಲ್ಲಿ ಉಸಿರಾಟದ ಸಮಸ್ಯೆ, ಅಸ್ತಮಾ, ಅಲರ್ಜಿ
ನವದೆಹಲಿಯಲ್ಲಿ ಕಳೆದ 17 ವರ್ಷಗಳಿಂದೀಚೆ ಕಾಣದ ಭೀಕರ ಮಾಲಿನ್ಯ ಎದುರಾಗಿದೆ. ಪರಿಣಾಮವಾಗಿ ಟಾಕ್ಸಿಕ್‌ಯುಕ್ತ ಗಾಳಿ ದಪ್ಪಪದರದಲ್ಲಿ ಅನುಭವಕ್ಕೆ ಬರುತ್ತಿದೆ. ವಾತಾವರಣ ಕಪ್ಪಾಗಿ ಮಂಜುಮುಸುಕಿದಂತೆ ಕಂಡುುಬರುತ್ತಿದೆ. ಆದರೆ ವಾತಾವರಣದಲ್ಲಿ ಯಾವುದೋ ಮಾಲಿನ್ಯಯುಕ್ತ ಅಂಶ ಇರುವುದು ಜನರಿಗೆ ಗೊತ್ತಾಗುತ್ತಿದೆ. ಇದರಿಂದ ಉಸಿರಾಟದ ಸಮಸ್ಯೆ, ಅಸ್ತಮಾ ಮತ್ತು ಅಲರ್ಜಿ ಹೆಚ್ಚು ಪ್ರಮಾಣದಲ್ಲಿ ಉಲ್ಬಣಿಸುತ್ತಿವೆ.
 ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನೀಡಿರುವ ಮಾಹಿತಿ ಪ್ರಕಾರ, ಈ ಹಿಂದೆ ಶೇ. 15ರಿಂದ 20ರಷ್ಟು ಮಾತ್ರ ಪರಿಸರ ಮಾಲಿನ್ಯ ಪ್ರಭಾವದಿಂದ ವಿವಿಧ ರೋಗಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಸದ್ಯ ಇದು ಶೇ. 60ಕ್ಕೇರಿದೆ. ಅತಿ ದೊಡ್ಡ  ಸಮಸ್ಯೆ ಎದುರಾಗಿರುವುದು ಶ್ವಾಸೋಚ್ಛಾಸದ ಮೇಲೆ. ಈ ವರ್ಷ ಉಸಿರಾಟದ ಸಮಸ್ಯೆ ಎನ್ನುತ್ತ ಬರುವವರೇ ಜಾಸ್ತಿಯಾಗಿದ್ದಾರೆ, ಇದರೊಂದಿಗೆ ಕೆಮ್ಮು, ಕಫ ಮತ್ತು ಸೀನುವಿಕೆ ಸಹ ಹೆಚ್ಚ್ಚಾಗಿದೆ.  ಶ್ವಾಸನಾಳಗಳ ಊತದ ಬಗ್ಗೆಯೂ ವರದಿಯಾಗುತ್ತಿದೆ. ಇದಕ್ಕೆಲ್ಲ ಇತ್ತೀಚೆಗೆ ಕಾಣಿಸಿಕೊಂಡಿರುವ ಹೊಗೆ ಮತ್ತು ಮಂಜಿನ ಮಿಶ್ರಣದ ವಾತಾವರಣ (ಹೊಗೆಮಂಜು) ಎನ್ನುತ್ತಾರೆ ವೈದ್ಯರು.
ಕೇಂದ್ರವು ಅಕ್ಕಪಕ್ಕದ ರಾಜ್ಯಗಳ ಪರಿಸರ ಸಚಿವರ ಸಭೆಯನ್ನು ಕರೆದಿದ್ದು, ತ್ಯಾಜ್ಯವಸ್ತುಗಳನ್ನು ಸುಡುವುದರ ವಿರುದ್ಧ ಕ್ರಮ ಜರುಗಿಸಲು ಸೂಚಿಸಿದೆ. ಮಕ್ಕಳು ಬೆಳಿಗ್ಗೆ ಮತ್ತು ಸಂಜೆ ಮನೆಯಿಂದ ಹೊರಬರದಂತೆ ತಡೆಯಲು ಸೂಚಿಸಿದೆ.

 ಮಾಸ್ಕ್ ಖರೀದಿಗೆ ಮುಂದು :
 ಕಳೆದ ಒಂದು ವಾರದಿಂದ ಪರಿಸ್ಥಿತಿ ಭೀಕರವಾಗಿರುವ ಹಿನ್ನೆಲೆಯಲ್ಲಿ ಮೂಗು, ಬಾಯಿ ಸಹಿತ ಮುಖವನ್ನು ಮುಚ್ಚಿಕೊಳ್ಳುವ ಮಾಸ್ಕ್‌ಗಳ ಖರೀದಿ ಜೋರಾಗಿದೆ. ಮೆಡಿಕಲ್ ಶಾಪ್ ಎದುರು ಜನರು ಸಾಲಾಗಿ ನಿಲ್ಲುತ್ತಿದ್ದಾರೆ. ಹಲವೆಡೆ ನೋ ಸ್ಟಾಕ್ ಬೋರ್ಡ್ ಸಹ ಕಾಣಿಸಿಕೊಳ್ಳುತ್ತಿದೆ. ಪಾಲಕರಿಗೆ ಶಾಲೆ ಸೂಚನೆ ನೀಡಿ, ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಬಳಸಲು ತಿಳಿಸಿದೆ..  90 ರೂ. ಗೆ ಸಿಗುತ್ತಿದ್ದ ಮಾಸ್ಕ್‌ನ್ನು ಈಗ 220 ರೂ ಗೆ ಮಾರಾಟ ಮಾಡಲಾಗುತ್ತಿದೆ. ಈ ಮಾಸ್ಕ್ ಶೇ. 99ರಷ್ಟು ಸುರಕ್ಷತೆಯನ್ನು ನೀಡುತ್ತದೆ ಎನ್ನುತ್ತಾರೆ ವೈದ್ಯರು. 

ಈ ಪರಿಸ್ಥಿತಿಗೆ ದೆಹಲಿ ವಾಸಿಗಳ ಕೊಡುಗೆಯೂ ಅಪಾರವಾಗಿದೆ. ದೆಹಲಿಯಲ್ಲಿ ಪ್ರತಿದಿನ 10 ಸಾವಿರ ಟನ್ ಘನತ್ಯಾಜ್ಯ ಶೇಖರಣೆಯಾಗುತ್ತಿದೆ. ಇವುಗಳನ್ನು ಸುಟ್ಟು ನಾಶಮಾಡಲಾಗುತ್ತಿದೆ. ಇದರೊಟ್ಟಿಗೆ ನಾಗಾಲೋಟದಲ್ಲಿ ಸಾಗುತ್ತಿರುವ ನಗರೀಕರಣದಲ್ಲಿ ಹೆಚ್ಚುತ್ತಿರುವ ಕಟ್ಟಡಗಳ ನಿರ್ಮಾಣ, ಸುಮಾರು 7.4  ಮಿಲಿಯನ್‌ನಷ್ಟಿರುವ ವಾಹನಗಳ ಸಂಖ್ಯೆ, ಪ್ರತಿನಿತ್ಯ ದಾಖಲಾಗುತ್ತಿರುವ 1200ರಷ್ಟು ವಾಹನಗಳು... ಇನ್ನೇನು ಬೇಕು ಪರಿಸರ ಮಾಲಿನ್ಯ ಗಂಭೀರ ಸ್ವರೂಪ ತಳೆಯಲು.
ಉಷ್ಣಾಂಶ ಮತ್ತು ಗಾಳಿ ವಿವಿಧ ಮಾಲಿನ್ಯತೆಗೆ ಸಾಕಷ್ಟು ಕಾರಣವಾಗುತ್ತಿವೆ. ಈ ಬಗ್ಗೆ ಕೇಂದ್ರ ಪರಿಸರ ಮತ್ತು ಭೂವಿಜ್ಞಾನ ಇಲಾಖೆ ಎದುರಾಗಿರುವ ಸಮಸ್ಯೆಗೆ ಕಾರಣ ಮತ್ತು ಪರಿಹಾರಕ್ಕೆ ವಿಚಾರ ಸಂಕಿರಣಗಳನ್ನು, ಚರ್ಚಾಗೋಷ್ಠಿಗಳನ್ನು ನಡೆಸಲುದ್ದೇಶಿಸಿದೆ.
ದೆಹಲಿಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇತ್ತೀಚೆಗೆ ಸರ್ವೇ ನಡೆಸಿ ಅತಿ ಹೆಚ್ಚು ಮಾಲಿನ್ಯಕ್ಕೆ ಏರುತ್ತಿರುವ ವಾಹನಗಳ ಸಂಖ್ಯೆ ಮತ್ತು ಅವು ಉಗುಳುವ ಇಂಧನದ  ಹೊಗೆಯೇ ಕಾರಣ. ಅತಿ ಕಳಪೆ ಮಟ್ಟದ ಇಂಧನಗಳನ್ನು ವಾಹನಗಳು ಬಳಸುತ್ತಿರುವುದರಿಂದ ವ್ಯಾಪಕ ಮಾಲಿನ್ಯ ಎದುರಾಗುತ್ತಿದೆ. ಇಂದಿನ ವಾಹನ ತಂತ್ರಜ್ಞಾನವೂ ಸಹ ಇಂತಹ ಇಂಧನಗಳ ಗುಣಮಟ್ಟವನ್ನು ನಿರ್ಧರಿಸುವಂತಹವಾಗಿಲ್ಲ. ಈ ಬಗ್ಗೆ ಸಮಗ್ರ ನೀತಿ-ನಿರೂಪಣೆ ಅಗತ್ಯ ಎಂದು ಸುಪ್ರೀಂ ಕೋರ್ಟಿಗೆ ವರದಿ ನೀಡಿದೆ.
ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದರಿಂದ ಮಾಲಕರು ಸಹ ಅತಿ ಕಡಿಮೆ ದರದ ಇಂಧನವನ್ನೇ ಬಯಸುತ್ತಾರೆ. ಅದರಲ್ಲೂ ಡೀಸೆಲ್ ಬಳಕೆಯೇ ಹೆಚ್ಚುತ್ತಿದೆ. ಪ್ರತಿವರ್ಷ ಮಾರಾಟವಾಗುವ ಕಾರುಗಳಲ್ಲಿ ಶೇ. 50ರಷ್ಟು ಕಾರುಗಳು ಡೀಸೆಲ್ ಬಳಸುವಂತಹವಾಗಿವೆ. ಡೀಸೆಲ್ ಹೊಗೆಯಿಂದ ಶ್ವಾಸಕೋಶದ ಕ್ಯಾನ್ಸರ್ ಎದುರಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬಹುಹಿಂದೆಯೇ ಎಚ್ಚರಿಸಿದೆ. ಇದು ತಂಬಾಕು ಸೇವನೆಯಷ್ಟೇ ಹಾನಿಕರ ಎಂದು ಸಹ ಹೇಳಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ದೇಶದ 38 ನಗರಗಳನ್ನು ಅತಿ ಹೆಚ್ಚು ಇಂಧನದಿಂದ ಮಾಲಿನ್ಯಗೊಳ್ಳುತ್ತಿರುವ ನಗರ ಎಂದು ಗುರುತಿಸಿದೆ. ಇದರಲ್ಲಿ ದೆಹಲಿಯೂ ಸೇರಿದೆ.
ಮಾಲಿನ್ಯರಹಿತ ವಾಹನಗಳನ್ನು ಬಳಸುವವರೇ ಇಲ್ಲ. ಇದರಿಂದ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ದೆಹಲಿಯಂತಹ ನಗರದಲ್ಲಿ ನಡೆದಾಡುವುದು, ಸೈಕ್ಲಿಂಗ್  ಅಪಾಯಕಾರಿಯಾಗಿದೆ. ವಾಹನ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇದರೊಟ್ಟಿಗೆ  ಪ್ರತಿ ಗಂಟೆಗೊಬ್ಬ ಅಪಘಾತದಿಂದ ಸಾಯುತ್ತಿದ್ದಾನೆ. ಬಸ್‌ಗಳಿಗೆ ಕಾರ್‌ಗಳಿಗಿಂತ ಹೆಚ್ಚಿನ ತೆರಿಗೆಯನ್ನು ದೆಹಲಿಯಲ್ಲಿ ವಿಧಿಸಲಾಗಿದೆ. ಇದರಿಂದ ಬಸ್ ನಿರ್ವಹಣೆಯು ಕಷ್ಟವಾಗಿದೆ. ಕಾರು ಜೋರಾಗಿ ಓಡಾಡುತ್ತಿದೆ. ಕಾರು ಖರೀದಿಗೆ ಎಲ್ಲಾ ಬ್ಯಾಂಕ್‌ಗಳು ಸಾಲ ನೀಡುತ್ತಿರುವುದೂ ಸಹ ಏರಿಕೆಗೆ ಕಾರಣವಾಗಿದೆ.
ನಾಸಾ ಸೆಟಲೈಟ್ ಡಾಟಾ ನೀಡಿರುವ ವರದಿಯ ಪ್ರಕಾರ, ಭಾರತದಲ್ಲಿ 2005ರಿಂದೀಚೆಗೆ  ಸಲ್ಫರ್ ಡಯಾಕ್ಸೈಡ್  ಮಾಲಿನ್ಯ ವಿಪರೀತವಾಗುತ್ತಿದೆ. ಶೇ. 60ಕ್ಕಿಂತ ಹೆಚ್ಚಿನ ಮಾಲಿನ್ಯ ಇದರ ಕೊಡುಗೆಯಾಗಿದೆ. ಚೀನಾ ನಂತರ ಅತಿ ಹೆಚ್ಚು ಸಲ್ಫರ್ ಡಯಾಕ್ಸೈಡ್ ಮಾಲಿನ್ಯ ಇರುವುದು ಭಾರತದಲ್ಲಿ. ಕಲ್ಲಿದ್ದಲು ಘಟಕಗಳು ಈ ಮಾಲಿನ್ಯಕ್ಕೆ ಕಾರಣ.  ಅತಿ ದೂರದವರೆಗೆ ಮತ್ತು ಅತಿ ಹೆಚ್ಚು ಕಾಲ ಇದರ ಮಾಲಿನ್ಯ ಇರುತ್ತದೆ. ಇದು ಸಾರ್ವಜನಿಕರ ಆರೋಗ್ಯದ ಮತ್ತು ಪರಿಸರದ ಮೇಲೆ ನಿರಂತರ ಪರಿಣಾಮ ಬೀರುತ್ತಲೇ ಇರುತ್ತದೆ.
.............................
   

Friday, 4 November 2016



 ವಿಧಾನಸಭೆ ಚುನಾವಣೆಗೆ  ತಾಲೀಮು ಆರಂಭ 
ಜಿಲ್ಲಾ ರಾಜಕೀಯದ ಒಂದು
 ರೌಂಡಪ್



ಶಿವಮೊಗ್ಗ:  ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿಯಿದೆ. ಆದರೆ ಈಗಾಗಲೆ ಜಿಲ್ಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಚುನಾವಣಾ ಪೂರ್ವಭಾವಿ ಸಿದ್ಧತೆಯ ರಂಗ ತಾಲೀಮು ಆರಂಭಿಸಿವೆ. ಪಕ್ಷ ಸಂಘಟನೆ, ಕಾರ್ಯಕರ್ತರ ಒಗ್ಗೂಡಿಸುವ ಕೆಲಸಕ್ಕೆ ವಿಧ್ಯುಕ್ತ ಚಾಲನೆ ನೀಡುವ ಮೂಲಕ ರಣಕಹಳೆ ಮೊಳಗಲಾರಂಭಿಸಿವೆ.
ಪ್ರಸ್ತುತ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆ, ವಿದ್ಯಮಾನಗಳನ್ನು ಗಮನಿಸಿದರೆ ಇದು ಸತ್ಯವೆನಿಸುತ್ತಿದೆ. ಚಳಿಗಾಲದಲ್ಲಿಯೇ ಜಿಲ್ಲೆಯ ರಾಜಕೀಯ ಚಟುವಟಿಕೆಗಳು ಕಾವೇರತೊಡಗಿದೆ. ಚುನಾವಣೆ ಪ್ರಕ್ರಿಯೆ ಆರಂಭವಾದಾಗ ಸಿದ್ಧತೆ ಆರಂಭಿಸುವ ವ್ಯವಸ್ಥೆಗೆ ಇತಿಶ್ರೀ ಹಾಡಿರುವ ಪಕ್ಷಗಳು, ಚುನಾವಣೆಗಿನ್ನೂ ಒಂದೂವರೆ ವರ್ಷ ಬಾಕಿಯಿರುವಂತೆ ಸಂಘಟನಾ ಚಟುವಟಿಕೆಗಳನ್ನು ಆರಂಭಿಸಿವೆ. ಈ ಮೂಲಕ ಕೊನೆಯ ಹಂತದಲ್ಲಿ ಉಂಟಾಗುವ ಗೊಂದಲ-ಗಡಿಬಿಡಿಗೆ ಕಡಿವಾಣ ಹಾಕಲು ಮುಂದಾಗಿವೆ.
ಮೂರು ಪಕ್ಷಗಳ ಮುಖಂಡರು ಪರಸ್ಪರ ಆರೋಪ-ಪ್ರತ್ಯಾರೋಪ, ಟೀಕೆ-ಟಿಪ್ಪಣಿ, ಕೆಸರೆರೆಚಾಟ ನಡೆಸಲಾರಂಭಿಸಿದ್ದಾರೆ. ಪಕ್ಷದ ಪ್ರಭಾವಿ ನಾಯಕರನ್ನು ಜಿಲ್ಲೆಗೆ ಕರೆತಂದು ಕಾರ್ಯಕರ್ತರ ಸಭೆ ನಡೆಸುತ್ತಿವೆ. ಈ ಮೂಲಕ ಕಾರ್ಯಕರ್ತರಲ್ಲಿ ಹುರುಪು ಮೂಡಿಸುವ ಕೆಲಸ ನಡೆಸಲಾರಂಭಿಸಿವೆ. ಟಿಕೆಟ್ ಸಿಗುವ ಆತ್ಮವಿಶ್ವಾಸದಲ್ಲಿರುವವರಂತೂ ಈಗಾಗಲೇ ಮತದಾರರ ಮನವೊಲಿಸುವ ಕಾರ್ಯವನ್ನು ಭರ್ಜರಿಯಾಗಿ ಮಾಡಲಾರಂಭಿಸಿದ್ದಾರೆ.
ಈ ವಿಷಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹಲವು ದಿನಗಳ ಹಿಂದಿನಿಂದಲೇ ಪಕ್ಷ  ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಮತ್ತಿತರ ನಾಯಕರು ಸಮಯ ಸಿಕ್ಕಾಗಲೆಲ್ಲ  ವಿವಿಧ ಮೋರ್ಚಾಗಳ ಸಭೆ ನಡೆಸುತ್ತಿದ್ದಾರೆ. ಸಂಘಟನೆಯ ದಿಕ್ಕಿನಲ್ಲಿ ಸಕ್ರಿಯವಾಗಿವೆ. ಬಿಜೆಪಿಯವರು ಇತ್ತೀಚೆಗಷ್ಟೇ ಎಲ್ಲಾ ಮೋರ್ಚಾಕ್ಕೆ ಹೊಸ ಪದಾದಿಕಾರಿಗಳನ್ನು ನೇಮಿಸಿರುವುದರಿಂದ ಭಾರೀ ಉತ್ಸಾಹದಲ್ಲಿ ಸಭೆ ನಡೆಸುತ್ತಿವೆ. ವಾರಕ್ಕೆರಡು, ಮೂರು ಸಭೆಯನ್ನು ಪಕ್ಷದ ಕಚೇರಿಯಲ್ಲಿ ನಡೆಸುತ್ತಿದ್ದಾರೆ. ಪತ್ರಿಕಾಗೋಷ್ಠಿಗಂತೂ ಲೆಕ್ಕವೇ ಇಲ್ಲ ಎನ್ನುವಂತಾಗಿದೆ. ಎಲ್ಲ ತಾಲೂಕುಗಳಲ್ಲೂ ಇದೇ ರೀತಿ ಸಭೆಯನ್ನು ನಡೆಸಲಾಗುತ್ತಿದೆ. ಮೂರೂ ಪಕ್ಷಗಳು ಪೈಪೋಟಿಗೆ ಬಿದ್ದವರ ರೀತಿಯಲ್ಲಿ ಚುನಾವಣಾ ಪೂರ್ವಭಾವಿ ಸಿದ್ಧತೆ ಮಾಡುತ್ತಿರುವುದು ಕಂಡುಬರುತ್ತಿದೆ. ಪಾದಯಾತ್ರೆ, ಹೋರಾಟ ನಡೆಸುವ ಮೂಲಕ ಮತದಾರರ ಗಮನ ಸೆಳೆಯುವ ಕೆಲಸ ನಡೆಸುತ್ತಿದೆ.
ಜೆಡಿಎಸ್ ಕೂಡ ಹೋರಾಟ, ಪಾದಯಾತ್ರೆ ನಡೆಸುತ್ತಿದೆ. ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡರನ್ನು ಕೆಲವೇ ದಿನಗಳ ಅಂತರದಲ್ಲಿ ಎರಡು ಬಾರಿಗೆ ಜಿಲ್ಲೆಗೆ ಕರೆಯಿಸಿ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸುವ ಕೆಲಸ ಮಾಡಿದೆ. ಇತರೆ ಪಕ್ಷಗಳ ಪ್ರಮುಖ ಮುಖಂಡರನ್ನು ಸೆಳೆದುಕೊಳ್ಳುವ ಕೆಲಸ ಕೂಡ ನಡೆಸಲಾರಂಭಿಸಿದೆ.  
ಆಡಳಿತಾರೂಢ ಕಾಂಗ್ರೆಸ್ ಮೈಚಳಿ ಬಿಟ್ಟವರ ರೀತಿಯಲ್ಲಿ ಸಿದ್ಧತೆ ನಡೆಸಲಾರಂಭಿಸಿದೆ. ಉಳಿದೆರಡುಪಕ್ಷಗಳಿಗೆ ಹೋಲಿಕೆ ಮಾಡಿದರೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಪೂರ್ವಭಾವಿ ಸಿದ್ಧತೆಯನ್ನು ತಡವಾಗಿ ಆರಂಭಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ಜಿ. ಪರಮೇಶ್ವರ್ ಅವರನ್ನು ಕರೆಯಿಸಿ ಕಾರ್ಯಕರ್ತರ ಸಭೆ ನಡೆಸಿದೆ. ಈ ಮೂಲಕ ವಿಧ್ಯುಕ್ತವಾಗಿ ಚುನಾವಣಾ ಪೂರ್ವಭಾವಿ ಸಿದ್ಧತೆಯನ್ನು ನಡೆಸಿದೆ.
ಏಳು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ಪರಮೇಶ್ವರ್ ಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡಿ ಹೋಗಿದ್ದಾರೆಂಬ ಮಾತು ಕೇಳಿಬಂದಿದೆ. ಎಲ್ಲ ಏಳು ವಿಧಾನಸಭಾ ಕ್ಷೇತ್ರಗಳಲ್ಲ್ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಬೇಕು ಎಂಬ ಗುರಿಯಿಟ್ಟುಕೊಂಡು, ಆ ನಿಟ್ಟಿನಲ್ಲಿ ಪಕ್ಷದ ಸಂಘಟನಾ ಚಟುವಟಿಕೆಗಳನ್ನು ಈಗಿನಿಂದಲೇ ನಡೆಸಬೇಕು. ಕಳೆದ ಚುನಾವಣೆಯಲ್ಲಿ ಸಾಗರ, ಶಿವಮೊಗ್ಗ ನಗರ ಹಾಗೂ ತೀರ್ಥಹಳ್ಳಿ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಉಳಿದಂತೆ ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಸೊರಬ ಹಾಗೂ ಶಿಕಾರಿಪುರ ಕ್ಷೇತ್ರಗಳಲ್ಲಿ ಉತ್ತಮ ಮತ ಗಳಿಕೆ ಮಾಡಿದ್ದರೂ ಪಕ್ಷ ಹಿನ್ನೆಡೆ ಸಾಧಿಸಿತ್ತು. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳತ್ತ ಹೆಚ್ಚಿನ ಗಮನಹರಿಸಲಾಗಿದೆ. ಪಕ್ಷದ ಸಂಘಟನೆಗೆ ಒತ್ತು ನೀಡಲು ಸೂಚಿದ್ದಾಗಿ ಮಾಹಿತಿ ಲಭ್ಯವಾಗಿದೆ.
  ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಕ್ಕಿ ಸಿಗುವ ಆತ್ಮವಿಶ್ವಾಸದಲ್ಲಿರುವ ಸ್ಪರ್ಧಾಕಾಂಕ್ಷಿಗಳು ಈಗಾಗಲೇ  ಕ್ಷೇತ್ರದಾದ್ಯಂತ ಮತದಾರರ ಮನವೊಲಿಸುವ ಕೆಲಸಗಳನ್ನು ಮಾಡಲಾರಂಭಿಸಿದ್ದಾರೆ. ವಿವಿಧ ಸಮುದಾಯಗಳ ಹಬ್ಬ ಹರಿದಿನ, ಜಾತ್ರಾ ಮಹೋತ್ಸವ, ಧಾರ್ಮಿಕ ಸಭೆ ಮತ್ತಿತರ ಕಾರ್ಯಕ್ರಮಗಳಿಗೆ ಹೇರಳ ಧನ ಸಹಾಯದ ಕೊಡುಗೆ ನೀಡುತ್ತಿರುವ ಮಾಹಿತಿಗಳು ಕೇಳಿಬರುತ್ತಿವೆ.
-----------------------------------

ಜಿಲ್ಲೆಯ 77 ಎಪಿಎಂಸಿ ಸ್ಥಾನಕ್ಕೆ ನ. 27 ರಂದು ಚುನಾವಣೆ
ನ. 10 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ 


*ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ ನ. 10
*ನಾಮಪತ್ರ ಪರಿಶೀಲನೆ ನ. 12
*ನಾಮಪತ್ರ ಹಿಂದಕ್ಕೆ ಪಡೆಯುವ ಕೊನೆಯ ದಿನಾಂಕ ನ. 15
*ಮತದಾನ ನಡೆಯುವ ದಿನಾಂಕ ನ. 27
*ಮತ ಎಣಿಕೆ ನ. 29 (ಆಯಾಯ ತಾಲೂಕಿನ ಕೇಂದ್ರ ಸ್ಥಾನದಲ್ಲಿ)
*ಒಟ್ಟು ಚುನಾವಣೆ ನಡೆಯುವ ಕ್ಷೇತ್ರಗಳು 77
*ಒಟ್ಟು ಮತದಾರರು 2,53,036
*ಒಟ್ಟು ಮತಗಟ್ಟೆಗಳ ಸಂಖ್ಯೆ 395

 ಜಿಲ್ಲೆಯ ಏಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 77 ಸ್ಥಾನಗಳಿಗೆ ನ. 27 ರಂದು ಚುನಾವಣೆ ನಡೆಯಲಿದೆ. ಈ ಸಂಬಂಧ ಈಗಾಗಲೇ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ ಅಧಿಸೂಚನೆ ಹೊರಡಿದ್ದಾರೆ.
ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ, ತೀರ್ಥಹಳ್ಳಿ, ಸೊರಬ, ಹೊಸನಗರ ಎಪಿಎಂಸಿಗಳಿಗೆ ಚುನಾವಣೆ ನಡೆಯಲಿದೆ. ಈ ಎಲ್ಲಾ ಎಪಿಎಂಸಿಗಳಲ್ಲಿ ತಲಾ 11 ಸ್ಥಾನಗಳು ಇವೆ. ಅವುಗಳನ್ನು ಮೀಸಲಾತಿ ಅನ್ವಯ ಸಾಮಾನ್ಯ, ಮಹಿಳೆ, ಎಸ್‌ಸಿ, ಎಸ್‌ಟಿ, ಬಿಸಿಎ ಮತ್ತು ಬಿಸಿಬಿ ವರ್ಗಕ್ಕೆ ಮೀಸಲಿಡಲಾಗಿದೆ.
ಪ್ರತಿ ಎಪಿಎಂಸಿಯಲ್ಲಿ ಇಬ್ಬರು ಮಹಿಳಾ ಸದಸ್ಯರು ಕಡ್ಡಾಯವಾಗಿ ಇರತಕ್ಕದ್ದು ಎಂದು ಈ ಬಾರಿ ಸೂಚಿಸಲಾಗಿದೆ. ಈ ಕ್ಷೇತ್ರಗಳು ಕೃಷಿಕರ ವಲಯದಿಂದ ಮತಚಲಾಯಿಸಲ್ಪಡುವಂತಹವು. ಇದರ ಹೊರತಾಗಿ ಚಿಲ್ಲರೆ ವ್ಯಾಪಾರಿಗಳಾಗಿದರ, ಕಮೀಷನ್ ಎಜೆಂಟರು ಮತ್ತು ವ್ಯಾಪಾರಿಗಳು ಚುನಾಯಿಸಿದ ಒಬ್ಬರ ಸದಸ್ಯ, ಎಪಿಎಂಸಿ ಮಾರುಕಟ್ಟೆ ಪ್ರದೇಶದೊಳಗೆ ವ್ಯವಹಾರ ನಡೆಸುವ ಸಂಘಗಳ ಪ್ರತಿನಿಧಿಯೊಬ್ಬ ಅಂತಹ ಸಂಘಗಳ ಆಡಳಿತ ಸಮಿತಿಗಳಿಂದ ಚುನಾಯಿಸಲ್ಪಡಬೇಕು.
ಮಾರುಕಟ್ಟೆ ಪ್ರದೇಶದೊಳಗೆ ಅಧಿಸೂಚಿತ ಕೃಷಿ ಉತ್ಪನ್ನ ವ್ಯವಹಾರ ನಡೆಸುವ ಕೃಷಿ ಸಹಕಾರ ಸಂಸ್ಕರಣ ಸಂಘಗಳ ಪ್ರತಿನಿಧಿಯಾಗಿರುವ ಸಂಘಗಳ ಆಡಳಿತ ಸಮಿತಿಗಳಿಂದ ಚುನಾಯಿತನಾದ ಒಬ್ಬ ಸದಸ್ಯ ಇದರಲ್ಲಿ ಇರುತ್ತಾರೆ.
ಚುನಾವಣೆಗೆ ಆಯಾಯ ತಾಲೂಕಿನ ತಹಶೀಲ್ದಾರ್‌ಗಳನ್ನು ಚುನಾವಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ತಹಶೀಲ್ದಾರ್ ಗ್ರೇಡ್-2 ಸಹಾಯಕ ಚುನಾವಣಾಧಿಕಾರಿಯಾಗಿರುತ್ತಾರೆ. ನೋಡಲ್ ಅಧಿಕಾರಿಗಳನ್ನಾಗಿ ಆಯಾಯ ಉಪವಿಭಾಗಗಳ ಉಪವಿಭಾಗಾಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 2,53,036 ಮತದಾರರು ಇದ್ದು, ಈ ಪೈಕಿ ಶಿಕಾರಿಪುರದಲ್ಲಿ ಅತ್ಯಧಿಕ ಎಂದರೆ 46,217 ಮತದಾರರು ಹೊಸನಗರದಲ್ಲಿ ಅತಿಕಡಿಮೆ ಎಂದರೆ 19,425, ಸೊರಬ 42,073, ಸಾಗರ 31,657. ತೀರ್ಥಹಳ್ಳಿ 28,577, ಭದ್ರಾವತಿ 42,487 ಮತ್ತು ಶಿವಮೊಗ್ಗ 42,600 ಮತದಾರರು ಇದ್ದಾರೆ.
ಜಿಲ್ಲೆಯಲ್ಲಿ ಒಟ್ಟು 395 ಮತಗಟ್ಟೆಗಳನ್ನು ತೆರೆಯಲಾಗಿದೆ. ಶಿವಮೊಗ್ಗದಲ್ಲಿ 50, ಭದ್ರಾವತಿಯಲ್ಲಿ 68, ತೀರ್ಥಹಳ್ಳಿಯಲ್ಲಿ 51, ಸಾಗರದಲ್ಲಿ 60, ಹೊಸನಗರದಲ್ಲಿ 30, ಸೊರಬದಲ್ಲಿ 79, ಶಿಕಾರಿಪುರದಲ್ಲಿ 57 ಮತಗಟ್ಟೆಗಳು ಇವೆ.
ಚುನಾವಣೆಗೆ ಒಟ್ಟು  435 ಮತಪೆಟ್ಟಿಗಳನ್ನು ಬಳಸಲಾಗುವುದು. ಸುಮಾರು 22 ಬಸ್, 69 ಜೀಪ್ ಬೇಕಾಗಬಹುದು ಎಂದು ನಿರ್ಧರಿಸಲಾಗಿದೆ. 1740 ಮತಗಟ್ಟೆ ಸಿಬ್ಬಂದಿಗಳು ಈ ಚುನಾವಣೆಯಲ್ಲಿ ಕೆಲಸ ನಿರ್ವಹಿಸುವರು.
.......................................

Thursday, 3 November 2016


ಕಮಲ್ ರಿಯಲ್ ಬದುಕೂ ರೀಲ್ ಬದುಕಾಯಿತೇ......?
 ತೆರೆಯ ಮೇಲಿನ ಆದರ್ಶ ನಿಜ ಬದುಕಿನಲ್ಲೇಕಿಲ್ಲ? 





  ಕಮಲ್‌ಹಾಸನ್ ದಕ್ಷಿಣ ಭಾರತದ  ಸಿನೆಮಾ ಜಗತ್ತಿನ ಮೇರುನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದೇಕೋ ಆತ ನಟನಾ ಕ್ಷೇತ್ರದಲ್ಲಿ ಯಶಸ್ವಿಯಾದಂತೆ ತನ್ನ ಖಾಸಗಿ ಜೀವನದಲ್ಲಿ ಮಾತ್ರ ಯಶಸ್ವಿಯಾಗಲೇ ಇಲ್ಲ. ಇಬ್ಬರು ಹೆಂಡತಿಯರಿಗೆ ವಿಚ್ಛೇದನ ನೀಡಿ, ಮೂರನೆಯವಳ ಜೊತೆ ಲಿವಿಂಗ್ ಟುಗೆದರ್ ಇದ್ದರೂ ಆಕೆಯನ್ನೂ ಈಗ ಕೈಬಿಡುತ್ತಿದ್ದಾರೆ. ವ್ಯಕ್ತಿ ಎಷ್ಟೇ ಶ್ರೀಮಂತನಾಗಿರಬಹುದು, ಬುದ್ಧಿವಂತನಾಗಿರಬಹುದು, ಉನ್ನತ ಸ್ಥಾನದಲ್ಲಿರಬಹುದು, ಆತನಿಗೆ ತನ್ನ ಖಾಸಗಿ ಜೀವನದ ನಡವಳಿಕೆಯೂ ಸಾರ್ವಜನಿಕ ವಲಯದಲ್ಲಿ ಪರಿಗಣಿತವಾಗುತ್ತದೆ ಎನ್ನುವ ಎಚ್ಚರದ ಪ್ರಜ್ಞೆಯೂ ಅಗತ್ಯ. ಸಾರ್ವಜನಿಕ ಕ್ಷೇತ್ರದಲ್ಲಿರುವವರ ವ್ಯಕ್ತಿತ್ವ ಕೂಡ ನಿರಭ್ರ-ಶುಭ್ರ ಬಿಳಿಬಟ್ಟೆಯಂತೆ ಶೋಭಿಸುತ್ತಿರಬೇಕು. ಈ ನಿಟ್ಟಿನಲ್ಲಿ ಕಮಲ್ ಅವರನ್ನು ನೋಡಿದಾಗ ಕೌಟುಂಬಿಕ ಜೀವನದಲ್ಲಿ ಅವರು ಎಡವಿರುವುದು ಅಕ್ಷರಶಃ ದಿಟ.  


ಮದುವೆ ಎನ್ನುವುದು ಒಂದು ಹೆಣ್ಣು ಮತ್ತು ಗಂಡಿನ ಹೃದಯವನ್ನು ಬಂಧಿಸುವ ಸುಂದರ ಸಂಕೋಲೆ. ಮದುವೆಯಾದವರು ಕುಟುಂಬದವರ, ನೆಂಟರಿಷ್ಟರ ಮತ್ತು ಮಿತ್ರವೃಂದದ ಮಧ್ಯೆ ಆನಂದಮಯವಾಗಿ, ಸಡಗರದಿಂದ, ಹಬ್ಬದ ವಾತಾವರಣದಲ್ಲಿ ಕಾಲಕಳೆಯುತ್ತಾರೆ. ಹಾಗಂತ ಎಲ್ಲ ಮದುವೆಗಳು ಜೀವನಪರ್ಯಂತ ಇರುವುದಿಲ್ಲ. ಎಲ್ಲ ಮದುವೆಗಳು ಸಂತಸದಿಂದ ಅಂತ್ಯಗೊಳ್ಳುವುದೂ ಇಲ್ಲ. ಕೆಲವು ವಿಚ್ಛೇದನದಿಂದ ಅಂತ್ಯವಾಗಿ  ದುಃಖಕರವಾಗಿ ಪರಿಣಮಿಸುತ್ತವೆ. ಈ ವಿಚ್ಛೇದಿತರು ಇನ್ನೊಬ್ಬರನ್ನು ಅಥವಾ ಇನ್ನೊಬ್ಬರಿಂದ ವಿಚ್ಛೇದನಗೊಂಡವರನ್ನೋ ಮತ್ತೆ  ಮದುವೆಯಾಗುತ್ತಾರೆ. ಸಿನಿಮಾರಂಗದಲ್ಲಂತೂ ಇದು ಸರ್ವೇಸಾಮಾನ್ಯವಾಗಿಬಿಟ್ಟಿದೆ.
ದಕ್ಷಿಣ ಭಾರತ ಚಿತ್ರರಂಗದಲ್ಲಿ ಪ್ರಖ್ಯಾತ ತಾರೆಯರಾಗಿದ್ದ ಕಮಲ್‌ಹಾಸನ್ ಮತ್ತು ಗೌತಮಿ ದಂಪತಿ ಬೇರೆಬೇರೆಯಾಗುತ್ತಿದ್ದಾರೆ. ಸತತ 13 ವರ್ಷಗಳ ಸಂಬಂಧವನ್ನು ಅವರು ಕೊನೆಗೊಳಿಸಿಕೊಳ್ಳುತ್ತಿರುವುದಾಗಿ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ಪ್ರತಿಷ್ಠಿತ ಸಿನಿಮಾನಟರು ಹೀಗೇಕೆ ವಿಚ್ಛೇದನಕ್ಕೆ ಮೊರೆಹೋಗುತ್ತಿದ್ದಾರೆ, ಬಣ್ಣದ ಬದುಕಿನವರೇ ಏಕೆ ಈ ರೀತಿ ವಿಚ್ಛೇದನದ ಮೂಲಕ ಸುದ್ದಿಯಾಗುತ್ತಿದ್ದಾರೆ  ಎನ್ನುವ ಪ್ರಶ್ನೆ ಎಲ್ಲರನ್ನೂ ಸಹಜವಾಗಿಯೇ ಕಾಡುತ್ತಿದೆ.
ಕಮಲ್‌ಗೆ ಗೌತಮಿ ಮೂರನೆಯ ಪತ್ನಿ. 1978ರಲ್ಲಿ ನೃತ್ಯಗಾರ್ತಿ ವಾಣಿ ಗಣಪತಿ ಅವರನ್ನು ಮದುವೆಯಾಗಿದ್ದರು. ಹತ್ತೇ ವರ್ಷದಲ್ಲಿ ಅವರಿಂದ ವಿಚ್ಛೇದನ ಪಡೆದರು. ಇದಾದ ಬಳಿಕ ನಟಿ ಸಾರಿಕಾ ಅವರನ್ನು 1988ರಲ್ಲಿ ವಿವಾಹವಾದರು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಜನಿಸಿದ್ದಾಗ್ಯೂ 2004ರಲ್ಲಿ ಬೇರೆಬೇರೆಯಾದರು. ಅಲ್ಲಿಂದ ನಟಿ ಗೌತಮಿ ಜೊತೆ (ಲಿವಿಂಗ್ ಟುಗೆದರ್) ಸಾಂಗತ್ಯದಲ್ಲಿದ್ದರು. ಗೌತಮಿ ಸಹ ಈ ಮೊದಲು ಉದ್ಯಮಿಯೊಬ್ಬರನ್ನು ವಿವಾಹವಾಗಿ ಅವರಿಂದ ಬೇರೆಯಾಗಿದ್ದರು. ಈಗ ಕಮಲ್ ಅವರಿಂದಲೂ ಬೇರೆಯಾಗುತ್ತಿರುವುದಕ್ಕೆ ಯಾವುದೇ ಕಾರಣವನ್ನು ನೀಡಿಲ್ಲವಾದರೂ, ಇಬ್ಬರು ಸಮ್ಮತಿಯ ಮೂಲಕವೇ ಬೇರೆಯಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಸಿನಿಮಾನಟ -ನಟಿಯರ ಜೀವನದಲ್ಲೇ ಏಕೆ ಈ ರೀತಿ ಘಟನೆಗಳು ಉಳಿದವರ ಜೀವನಕ್ಕಿಂತ ಹೆಚ್ಚು ನಡೆಯುತ್ತವೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಸೂಕ್ಷ್ಮವಾಗಿ ಈ ವಿಚಾರವನ್ನು ಅವಲೋಕಿಸಿದಾಗ ಮೊದಲನೆಯದಾಗಿ, ಸಾಮಾನ್ಯವಾಗಿ ಇಂತಹ ಸೆಲೆಬ್ರೆಟಿಗಳು ಮನೆಗಿಂತ ಹೊರಗಡೆಯೇ ಇರುವುದು ಅಧಿಕ. ಇಂತಹ ಸಂದರ್ಭದಲ್ಲಿ ಬೇರೆ ಕ್ಷೇತ್ರದ, ಅಂತಸ್ತಿನ ಜನರ ಪರಿಚಯವಾಗುತ್ತದೆ. ಅದರಲ್ಲೂ ಗೌರವಾನ್ವಿತ, ಅಧಿಕಾರಸ್ಥರ, ಶ್ರೀಮಂತರ ಪರಿಚಯವಾಗುವುದು ಅಧಿಕ. ಇಲ್ಲಿನ ಪರಿಚಯವೇ ಕೆಲವೊಮ್ಮೆ ಸೆಳೆತ-ಎಳೆತಗಳಾಗಿ ಅವರ ಕೌಟುಂಬಿಕ ಜೀವನವನ್ನು ಪಲ್ಲಟಗೊಳಿಸುತ್ತದೆ. ಇಲ್ಲಿ ಪರಿಚಯವಾಗುವ ಕೆಲವು ಮಹಿಳೆಯರು ಅಥವಾ ಯುವತಿಯರು ಅವರ ಜೀವನದಲ್ಲಿ ಪ್ರವೇಶಿಸುತ್ತಾರೆ.
ಎರಡನೆಯದಾಗಿ, ನಟ-ನಟಿಯರು ಸಹನಟಿಯರು, ಮತ್ತಿತರರ ಜೊತೆ ಕೆಲಸ ಮಾಡಬೇಕಾಗುತ್ತದೆ. ಕೆಲವೊಮ್ಮೆ ಇವರ ಜೊತೆ ತೀರಾ ರೊಮ್ಯಾಂಟಿಕ್ ಆಗಿ ನಟಿಸಬೇಕಾಗುತ್ತದೆ.  ಕೆಲವೊಮ್ಮೆ ಈ ರೊಮ್ಯಾಂಟಿಕ್ ನಟನೆಯೇ ಸಿನಿಮಾದಾಚೆಯ ಸಂಬಂಧಕ್ಕೆ ಕಾರಣವಾಗುತ್ತದೆ. ಮೂರನೆಯದಾಗಿ, ಹಣದ ಅಮಲು. ಕೆಲವೊಮ್ಮೆ ಸಾಕಷ್ಟು ಸಂಪತ್ತು ಹೊಂದಿರುವ ನಟ-ನಟಿಯರಿಗೆ ತನ್ನಂತೆ ಶ್ರೀಮಂತನಿರುವ ಇನ್ನೊಬ್ಬ ವ್ಯಕ್ತಿ ಅಥವಾ ಮಹಿಳೆಯ ಸಂಪರ್ಕ ಬೆಳೆದರೆ ಅವರ ಜೊತೆ ಗೊತ್ತಿಲ್ಲದಂತೆ ಸಂಬಂಧ ಬೆಳೆಯುತ್ತದೆ. ನೋಡಲು ಸುಂದರವಾಗಿರುವವರೂ  ಇದೇ ರೀತಿ ಎಡವುದಿದೆ.
ಸೃಜನಶೀಲತೆ ಮತ್ತು ಆಲೋಚನಾ ಕ್ರಮದ ಮಧ್ಯೆ ಅದೇನೋ ಗಾಢವಾದ ಸಂಬಂಧವಿದೆ. ವ್ಯಕ್ತಿ ತನ್ನಂತೆಯೇ ಇರುವ ಇಂತಹ ವ್ಯಕ್ತಿಯನ್ನು ಸ್ವಾಭಾವಿಕವಾಗಿಯೇ ಇಷ್ಟಪಡುತ್ತಾನೆ. ಸಿನಿಮಾರಂಗದಲ್ಲಿ ಇದು ಅತಿ ಹೆಚ್ಚಾಗಿ ಕಾಣಸಿಗುತ್ತದೆ. ಇದು ದೀರ್ಘವಾಗಿ ಬಿಟ್ಟಿರಲಾಗದ ಸಂಬಂಧವನ್ನು ಕಲ್ಪಿಸುತ್ತದೆ. ಇದರಿಂದ ಕೌಟುಂಬಿಕ ಜೀವನ ಶಿಥಿಲವಾಗುತ್ತದೆ. ಅರಿವಿಲ್ಲದಂತೆಯೇ ವ್ಯಕ್ತಿಗಳಲ್ಲಿ ಪ್ರೀತಿ-ಪ್ರೇಮ, ಸಂಬಂಧ ಬೆಳೆಯುತ್ತದೆ. ಆದರೆ ವ್ಯಕ್ತಿಯ ನಾಡಿಮಿಡಿತವನ್ನು ಅರಿಯದೆ ಈ ರೀತಿ ಸಂಬಂಧವನ್ನು ಬೆಳೆಸಿಕೊಂಡಲ್ಲಿ ಅದು ಜೀವನದ    ಅನಿಶ್ಚಿತತಗೆ ಕಾರಣವಾಗುತ್ತದೆ.
ನಟರು ತಮ್ಮ ಶ್ರೀಮಂತಿಕೆಯ ಮೂಲಕವೇ ಹೆಚ್ಚು ಮೆರೆದಾಡುತ್ತಾರೆ. ಇದು ಹಲವರನ್ನು ಆಕರ್ಷಿಸುತ್ತದೆ. ಪಾರ್ಟಿ, ಸಭೆ, ಸಮಾರಂಭಗಳಲ್ಲಿ ಪರಿಚಯವಾಗುವ ಮೂಲಕ ಕೆಲವು  ಆಕರ್ಷಕ ವ್ಯಕ್ತಿತ್ವದವರು, ಸುಂದರ, ಸುಂದರಿಯರು, ನಟ-ನಟಿಯರ ಬಲೆಗೆ ಬೀಳುತ್ತಾರೆ. ಇದು ಸಹ ಮದುವೆಯ ಹಂತದವರೆಗೆ ತಲುಪುವುದನ್ನು ಕಾಣುತ್ತೇವೆ. ಆದರೆ ವ್ಯಕ್ತಿಯ ಹಿನ್ನೆಲೆ ಅರಿಯದೆ, ಆತನ, ಅವಳ ಜೀವನದ ಸಾಧಕ-ಬಾಧಕಗಳ ಬಗ್ಗೆ ಅರಿಯದೆ ಕೇವಲ ಬಾಹ್ಯ ಸೌಂದರ್ಯ, ಅಂತಸ್ತನ್ನಷ್ಟೇ ಗಮನಿಸಿ ವಿವಾಹವಾದರೆ ಅವರ ಬಾಳು ಗೋಳಾಗುವುದರಲ್ಲಿ ಎರಡು ಮಾತಿಲ್ಲ.
ಮಾಧ್ಯಮಗಳಲ್ಲಿ ನಟರ ಮತ್ತು ನಟಿಮಣಿಯರ ಬಗ್ಗೆ ಸದಾ ಸುದ್ದಿ ಹರಿದಾಡುತ್ತಲೇ ಇರುತ್ತದೆ. ನಟ- ನಟಿಯರ ಖಾಸಗಿ ಜೀವನ, ಖಾಸಗಿ ಪಾರ್ಟಿಗಳಲ್ಲಿ ವರ್ತಿಸುವ ಅಸಭ್ಯ, ಅಶ್ಲೀಲ ರೀತಿ ಎಲ್ಲವೂ ಬಿತ್ತರವಾಗುತ್ತವೆ. ಇದು ಸಹ ನಟರ ಜೀವನದಲ್ಲಿ ದಾಂಪತ್ಯ ಮುರಿಯಲು ಕಾರಣವಾದ ಉದಾಹರಣೆ ನಮ್ಮ ಮುಂದೆ ಸಾಕಷ್ಟಿದೆ. ನಟ-ನಟಿಯರು ಸಾಕಷ್ಟು ಆಸ್ತಿ-ಪಾಸ್ತಿ ಗಳಿಸಿಕೊಂಡರೂ ಜೀವನದಲ್ಲಿ ಭದ್ರತೆ, ನೆಮ್ಮದಿಯನ್ನು ಕಾಣುತ್ತಿಲ್ಲ. ಕೆಲವು ನಟ-ನಟಿಯರು ಇದೇ ಕಾರಣಕ್ಕೆ ಏಕಾಂಗಿತನ ಅನುಭವಿಸಿ ಸಾವಿಗೆ ಶರಣಾದ ನಿದರ್ಶನಗಳೂ ನಮ್ಮ ಮುಂದಿವೆ.
ಇಂತಹ ದಂಪತಿಗಳ ಮಧ್ಯೆ ತಾನು ಹೆಚ್ಚು ಎನ್ನುವ ಶ್ರೇಷ್ಠತೆಯ ಮನೋಭಾವವೂ ದಾಂಪತ್ಯ ವಿರಸಕ್ಕೆ ಕಾರಣವಾಗುತ್ತಿದೆ. ಕೆಲವೊಮ್ಮೆ ಆತ್ಮಾರಾಧನೆಯೇ ಮುಖ್ಯವಾದರೂ ಇದೇ ಪರಿಸ್ಥಿತಿ ಎದುರಾಗುತ್ತದೆ. ಈ ಸೆಲೆಬ್ರೆಟಿಗಳು ತಮ್ಮ ಕುಟುಂಬದ ಜೊತೆ ಹೆಚ್ಚಿನ ದಿನವನ್ನು ಕಳೆಯಲು ಸಾಧ್ಯವಾಗುವುದಿಲ್ಲ. ಇದರಿಂದ ಕುಟುಂಬದಲ್ಲಿ ಕಿರಿಕಿರಿ ಉಂಟಾಗುತ್ತದೆ. ಮಕ್ಕಳ ಸಲುವಾಗಿ ಪತಿ-ಪತ್ನಿ ಮಧ್ಯೆ ಗಲಾಟೆ ಶುರುವಾಗುತ್ತದೆ. ಇದು ವಿಚ್ಛೇದನಕ್ಕೂ ಮುಂದೆ ಹೇತುವಾಗುತ್ತದೆ. ಪತಿ-ಪತ್ನಿಯರಿಬ್ಬರೂ ನಟರಾದರೆ ಇನ್ನೊಂದು ಅನಾಹುತ ಕೆಲವೊಮ್ಮೆ ಸಂಭವಿಸುತ್ತದೆ. ಅದೆಂದರೆ, ಯಾರಾದರೊಬ್ಬರ ನಟನಾ ಜೀವನ ಕುಸಿತವಾದರೆ, ಜನಪ್ರಿಯತೆಯಿಂದ ವಿಮುಖಗೊಂಡರೆ ಅವರಿಬ್ಬರ ಮಧ್ಯೆ ಅಸೂಯೆ ಎದುರಾಗುತ್ತದೆ. ಇದೂ ಸಹ ಕೌಟುಂಬಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ಬಣ್ಣದ ಲೋಕದ ನಟ-ನಟಿಯಯರನ್ನೇ ತಮ್ಮ ಆದರ್ಶವೆಂದು ಭ್ರಮಿಸುವ ನಮ್ಮ ಯುವಪೀಳಿಗೆಗೆ ಸಿನೆಮಾ ಜಗತ್ತಿನವರ ಖಾಸಗಿ ಬದುಕು ಆದರ್ಶವಾಗದಿರಲಿ ಎಂದು ಆಶಿಸೋಣವೇ...?  
................................. 

Wednesday, 2 November 2016

ಹೋರಿ ಬೆದರಿಸುವ ಸ್ಪರ್ಧೆಗೆ ಅಂಕುಶ ಹಾಕುವವರಾರು? 
 ಅಪಾಯಕಾರಿ ಎಂದು ಗೊತ್ತಿದ್ದರೂ ಬಿಡಲೊಪ್ಪದ ಗ್ರಾಮಸ್ಥರು
 * ಜಿಲ್ಲಾಡಳಿತಕ್ಕೆ ತಲೆನೋವಾದ ಸ್ಪರ್ಧೆ



 ದೀಪಾವಳಿ ಹಬ್ಬ ಪೂರ್ಣಗೊಂಡ ಬೆನ್ನಲ್ಲೇ ಜಿಲ್ಲೆಯ ವಿವಿಧೆಡೆ ’ಹೋರಿ ಬೆದರಿಸುವ’ ಸ್ಪರ್ಧೆಗಳಿಗೆ ವಿಧ್ಯುಕ್ತ ಚಾಲನೆ ಸಿಕ್ಕಿದೆ. ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ದೊಡ್ಡ ಪ್ರಮಾಣದ ಸ್ಪರ್ಧೆಗಳು ಕೂಡ ಆಯೋಜನೆ ಮಾಡಲಾಗುತ್ತಿದೆ. ಇದರ ಜೊತೆಗೆ ಹಲವೆಡೆ ಅವಘಡಗಳು ಸಂಭವಿಸಿರುವ ಮಾಹಿತಿಗಳು ಕೂಡ ವರದಿಯಾಗಿವೆ. ಮತ್ತೊಂದೆಡೆ, ಈ ಸ್ಪರ್ಧೆಯು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ.
 ಶಿಕಾರಿಪುರ ಹಾಗೂ ಶಿವಮೊಗ್ಗ ತಾಲೂಕಿನಲ್ಲಿ ಸೋಮವಾರ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಓರ್ವ ಮೃತಪಟ್ಟು, ಐದಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಶಿಕಾರಿಪುರ ತಾಲೂಕಿನ ಬೇಗೂರು ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಮಲ್ಲೇಶ್ (34) ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಶಿವಮೊಗ್ಗ ತಾಲೂಕಿನ ಕುಂಸಿ ಹಾಗೂ ಹಾರ‌್ನಳ್ಳಿ ಗ್ರಾಮಗಳಲ್ಲಿ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿತದಿಂದ ಐದರಿಂದ ಆರು ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಗಾಯಾಳುಗಳನ್ನು ಆಯನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. 

 ದೀಪಾವಳಿ ಹಬ್ಬದ ನಂತರ ಜಿಲ್ಲೆಯ ಶಿವಮೊಗ್ಗ, ಶಿಕಾರಿಪುರ, ಸಾಗರ, ಸೊರಬ ಹಾಗೂ ಕೆಲವು ತಾಲೂಕುಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಶಿಕಾರಿಪುರ ತಾಲೂಕಿನಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಈ ಸ್ಪರ್ಧೆಗಳು ನಡೆಯುತ್ತವೆ. ಹೋರಿಯನ್ನು ಹಿಡಿದು ಅದರ ಕೊರಳಲ್ಲಿ ಕಟ್ಟಿದ ವಸ್ತುವನ್ನು ಬಿಚ್ಚುವಲ್ಲಿ ಯಶಸ್ವಿಯಾಗುವವರಿಗೆ ಬಹುಮಾನ ನೀಡಲಾಗುತ್ತದೆ. ಹೋರಿ ಹಿಡಿಯಲು ಯಾರೊಬ್ಬರಿಗೂ ಸಾಧ್ಯವಾಗದಿದ್ದರೆ ಅಂತಹ ಹೋರಿಯ ಮಾಲಕರಿಗೂ ಬಹುಮಾನ ಕೊಡಲಾಗುತ್ತದೆ. ಈ ಸ್ಪರ್ಧೆ ವೀಕ್ಷಿಸಲು ಹಾಗೂ ಹೋರಿ ಹಿಡಿಯಲು ಭಾರೀ ದೊಡ್ಡ ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿರುತ್ತಾರೆ. ವಿವಿಧೆಡೆಯಿಂದಲೂ ಜನರು ಆಗಮಿಸುತ್ತಾರೆ.
ಹೋರಿ ಹಿಡಿಯಲು ಮುಂದಾಗುವವರು ಕೊಂಚ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಹೋರಿ ತಿವಿತ ಇಲ್ಲವೇ ಅದರಡಿ ಸಿಲುಕಿ ಗಾಯಗೊಳ್ಳಬೇಕಾಗುತ್ತದೆ. ಈ ಹಿಂದಿನ ಸಂದರ್ಭಗಳಲ್ಲಿ ಕೆಲವರು ಹೋರಿ ತಿವಿತದಿಂದ ಮೃತಪಟ್ಟಿರುವ, ಮಾರಣಾಂತಿಕವಾಗಿ ಗಾಯಗೊಂಡಿರುವ ಹಲವು ಘಟನೆಗಳು ನಡೆದಿವೆ. ಮತ್ತೊಂದೆಡೆ, ಕೂಗಾಟ-ಶಿಳ್ಳೆ ಕೂಗಿನಿಂದ ಬೆದರುವ ಹೋರಿಗಳು ಇಕ್ಕೆಲಗಳಲ್ಲಿ ನಿಂತಿರುವ ನಾಗರಿಕರ ಮೇಲೂ ನುಗ್ಗಿ ಅನಾಹುತ ಸೃಷ್ಟಿಸಲಿವೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಗಳು ಸ್ಪರ್ಧೆ ಆಯೋಜನೆ ಮಾಡುವವರಿಗೆ ಕಳೆದ ಕೆಲವು ವರ್ಷಗಳಿಂದ ಅನುಮತಿ ಪಡೆಯುವಂತೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾರಂಭಿಸಿವೆ. ಆಯೋಜಕರಿಗೆ ಕೆಲವು ನಿಬಂಧನೆಗಳನ್ನು ಕೂಡ ಹಾಕುತ್ತಿದೆ. ಸಾವು-ನೋವಿಗೆ ಆಸ್ಪದವಾಗದಂತೆ ಎಚ್ಚರ ವಹಿಸುವಂತೆ ಸೂಚನೆ ನೀಡುತ್ತಿವೆ.
ಅದೆಷ್ಟೋ ಗ್ರಾಮಗಳಲ್ಲಿ ಸ್ಪರ್ಧೆ ಆಯೋಜನೆಗೆ ಅನುಮತಿ ಪಡೆಯುವುದಿರಲಿ, ಕನಿಷ್ಠ ಸುರಕ್ಷತಾ ಕ್ರಮಗಳ ಪಾಲನೆ ಕೂಡ ಮಾಡುತ್ತಿಲ್ಲವೆಂಬ ಮಾಹಿತಿ ಸ್ವತಃ ಅಧಿಕಾರಿಗಳ ವಲಯದಿಂದಲೇ ಕೇಳಿಬರುತ್ತದೆ. ಕೆಲವೊಮ್ಮೆ ಈ ಬಗ್ಗೆ ಸಂಬಂಧಿಸಿದವರಿಗೆ ತಿಳಿಹೇಳಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ತಲತಲಾಂತರದಿಂದ ಸ್ಪರ್ಧೆ ಆಯೋಜನೆ ಮಾಡಿಕೊಂಡು ಬರುತ್ತಿದ್ದೆವೆ. ಈಗೇಕೆ ಅನುಮತಿ ಪಡೆಯಬೇಕು ಎಂದು ಕೆಲವರು ಪ್ರಶ್ನಿಸುತ್ತಾರೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
ಆದರೆ ಈ ಬಾರಿ ಜಿಲ್ಲಾಡಳಿತವು ಸ್ಪರ್ಧೆಗಳ ಆಯೋಜನೆಗೆ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ಈ ಕುರಿತಂತೆ ತಹಶೀಲ್ದಾರ್‌ಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಸ್ಪರ್ಧೆಗಳಲ್ಲಿ ಕಟ್ಟುನಿಟ್ಟಿನ ಸುರಕ್ಷಾ ಕ್ರಮಗಳ ಪಾಲನೆ ಮಾಡುವಂತೆಯೂ ಆದೇಶಿಸಿದೆ. ನಿಯಮ ಉಲ್ಲಂಘಿಸುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆಯೂ ಸೂಚಿಸಿದೆ.
ನಿಯಮ ಪಾಲನೆ ಮಾಡುವಂತೆ ಆಯೋಜಕರ ಮನವೊಲಿಸುವುದು ದೊಡ್ಡ ಸವಾಲಿನ ಕೆಲಸವಾಗಿದ್ದು, ಕಿರಿಕಿರಿಯಾಗಿ ಪರಿಣಮಿಸುತ್ತಿದೆ.
ಜಿಲ್ಲೆಯ ವಿವಿಧೆಡೆ ಆಯೋಜನೆ ಮಾಡಲಾಗುತ್ತಿರುವ ಹೋರಿ ಬೆದರಿಸುವ ಸ್ಪರ್ಧೆಗಳು ದಿನದಿಂದ ದಿನಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಸಾವು-ನೋವು ಸಂಭವಿಸುವುದು ಸೇರಿದಂತೆ ಹಲವು ರೀತಿಯ ಅಹಿತಕರ ಘಟನೆಗಳಿಗೆ ಎಡೆ ಮಾಡಿಕೊಡುತ್ತಿರುವುದು ಆಡಳಿತ ವ್ಯವಸ್ಥೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿರುವುದಂತೂ ಸತ್ಯವಾಗಿದೆ.
,,,,,,,,,,,,,,,,,,,,,,,,,,,,,,,,,,,,,,,,,