Monday, 28 August 2017

ಮೈಸೂರು ದಸರಾ ಉದ್ಘಾಟಿಸಲಿರುವ ಪ್ರಪ್ರಥಮ ಮುಸ್ಲಿಂ 
 ನಿಸಾರ್ ಅಹಮದ್‌ಗೆ, ಜಾತ್ಯತೀತ ನಾಡಿಗೆ ವಿಶೇಷ ಗರಿ




ಉದಾರವಾದಿ, ಚಿಂತಕ ನಿಸಾರ್, ಮೈಸೂರು ದಸರಾ ಉದ್ಘಾಟಿಸಲಿರುವ ಪ್ರಪ್ರಥಮ ಮುಸ್ಲಿಂ ಆಗಲಿದ್ದಾರೆ. ಹಿಂದೂ ಧರ್ಮದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದವರು, ಭಗವದ್ಗೀತೆ ಮತ್ತು ರಾಮಾಯಣವನ್ನು ಆಳವಾಗಿ ಅಭ್ಯಸಿಸಿದವರು, ಜೊತೆಗೆ ಮಾತನಾಡಬಲ್ಲವರು. ಕೇವಲ ಬರೆಹಗಾರರಾಗಿ ಮಾತ್ರವಲ್ಲದೆ, ನಾಡಿನ ಸಾಂಸ್ಕೃತಿಕ ಕ್ಷೇತ್ರದಲ್ಲೂ ಮಹತ್ವದ ವ್ಯಕ್ತಿಯಾಗಿದ್ದಾರೆ. ಆದ್ದರಿಂದಲೇ ಇವರ ಆಯ್ಕೆ ದಸರಾಕ್ಕೆ ವಿಶೇಷ ಅರ್ಥ ತರಲಿದೆ. ಎಲ್ಲ ನಂಬಿಕೆಯವರು ಮತ್ತು ಧರ್ಮೀಯರು ಸೇರಿ ಆಚರಿಸುವ ಹಬ್ಬವಿದು. ಜಾತ್ಯತೀತ ನಾಡು ಇದು ಎನ್ನುವುದಕ್ಕೆ ನಿಸಾರ್ ಆಯ್ಕೆ ಇನ್ನಷ್ಟು ಪುಷ್ಠಿ ನೀಡಲಿದೆ


ನಾಡಹಬ್ಬ ದಸರಾ ಸಮೀಪಿಸುತ್ತಿರುವಂತೆಯೇ ಅದರ ಪೂರ್ವ ಸಿದ್ಧತೆಗಳೂ ಆರಂಭವಾಗಿವೆ. ವಿಶೇಷವಾಗಿ  ದಸರಾ ಎಂದರೆ ಮೈಸೂರು ದಸರಾ ನೆನೆಪಾಗುತ್ತದೆ. ತನ್ನ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳಿಂದ ಜನಮಾನಸದಲ್ಲಿ ಅಷ್ಟೆ ಏಕೆ, ವಿಶ್ವವಿಖ್ಯಾತವಾಗಿರುವ ಮೈಸೂರು ದಸರಾ ಈ ವರ್ಷ ಸೆಪ್ಟೆಂಬರ್ 21ರಂದು ಉದ್ಘಾಟನೆಗೊಳ್ಳಲಿದೆ.
ಈ ಬಾರಿಯ 408ನೆಯ  ದಸರಾ ಉದ್ಘಾಟನೆಯನ್ನು ನಾಡಿನ ನವ್ಯ, ಹಿರಿಯ ಮತ್ತು ನಿತ್ಯೋತ್ಸವ ಕವಿ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಉದ್ಘಾಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿ ಎಲ್ಲರೂ ಖುಷಿಪಟ್ಟರು. ಏಕೆಂದರೆ, ಕನ್ನಡ ಸಾಹಿತ್ಯದಲ್ಲಿ ಎಂದೂ ಜಾತಿ, ಗುಂಪುಗಾರಿಕೆ ಮಾಡದೆ ಅಮೂಲ್ಯ ಕವನಗಳನ್ನು ರಚಿಸಿದವರು ನಿಸಾರ್ ಅವರು. ಅವರು ಮುಸ್ಲಿಮರಾದರೂ ಎಲ್ಲೂ ಮುಸ್ಲಿಮರೆಂದು ತೋರಿಸಿಕೊಳ್ಳಲೇ ಇಲ್ಲ. ಅವರ ಕನ್ನಡ ಸಾಹಿತ್ಯದಲ್ಲಿಯೂ ಅದರ ವಾಸನೆ ಇಲ್ಲವೇ ಅಲ್ಲ, ಶುದ್ಧ ಕನ್ನಡದಲ್ಲಿ, ಕನ್ನಡಾಂಬೆಯ ಸಾಹಿತ್ಯ ಸೇವೆಯನ್ನು ಮಾಡಿದವರು ಅವರು. ಈ ಕಾರಣದಿಂದಲೇ ಅವರ ಆಯ್ಕೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಈ ಹಿಂದೆಯೂ ಕವಿ ಚೆನ್ನವಿರ ಕಣವಿ, ಜನಪದ ಸಾಹಿತಿ ಪ್ರೊ. ಚಂದ್ರಶೇಖರ್ ಕಂಬಾರ್, ಸಾಹಿತಿ ನಾ. ಡಿಸೋಜಾ ಮೈಸೂರು ದಸರಾ ಉದ್ಘಾಟಿಸಿದ್ದಾರೆ. ಇದು ಅವರ ಸಾಹಿತ್ಯ ಸೇವೆ ಗಮನಿಸಿ ಸಿಕ್ಕಿರುವ ಗೌರವ. ಅದರಂತೆ ಈ ಬಾರಿಯೂ 81ರ ಹರಯದ ನಿಸಾರ್ ಅಹಮದ್ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಜೋಗದ ಸಿರಿ ಬೆಳಕಿನಲ್ಲಿ
ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ........
ಎಂಬ ಪ್ರಸಿದ್ಧ ಕವನದಿಂದಲೇ ಖ್ಯಾತರಾದ ನಿಸಾರ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯವರು.  ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ 1967ರಿಂದ 72ರವರೆಗೆ ಮತ್ತು 1975ರಿಂದ 78ರವರೆಗೆ ಭೂಗರ್ಭಶಾಸ್ತ್ರ ಪ್ರಾಧ್ಯಾಪಕರಾಗಿ ಇಲ್ಲಿಯೇ ನಿವೃತ್ತರಾದವರು.  ಅವರು ಶಿವಮೊಗ್ಗದಲ್ಲಿದ್ದಾಗಲೇ ಜೋಗದ ವೈಭವವನ್ನು ಕಂಡು ಮನಸೋತು ಈ ಕವನ ರಚಿಸಿದ್ದಾರೆ. ಇದು ಇಷ್ಟು ಪ್ರಖ್ಯಾತವಾಗಿದೆ ಎಂದರೆ ನಾಡಿನ ಉದ್ದಗಲಕ್ಕೂ ಪ್ರಮುಖ ಸಾಹಿತ್ಯಿಕ ಸಮಾರಂಭಗಳಲ್ಲಿ ಇದು ಹಾಡಲ್ಪಡುತ್ತದೆ. ಜೊತೆಗೆ ಕ್ಯಾಸೆಟ್ ಮೂಲಕ ಇದನ್ನು ಅವರು ಹೊರತಂದಾಗ ಇನ್ನಷ್ಟು ಮನೆಮಾತಾಯಿತು.
ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಕ್ಯಾಸೆಟ್ ಮೂಲಕ ಭಾವಗಿತೆಗಳನ್ನು ಪರಿಚಯಿಸಿದವರು ಇವರು. ನಿಸಾರ್ ಅವರಿಗೆ ಶಿವಮೊಗ್ಗದ ನಂಟು ಹೆಚ್ಚು. 2007ರಲ್ಲಿ  ಶಿವಮೊಗ್ಗದಲ್ಲಿ ಜರುಗಿದ 73ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ ಕೀರ್ತಿ ಅವರದ್ದು. ಹಲವಾರು ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಇಲ್ಲಿಗೆ ಬಂದು ಭಾಗವಹಿಸಿರುವ ಅವರು ಇಂದಿಗೂ ನಗರವನ್ನು ಸದಾ ಸ್ಮರಿಸುತ್ತಾರೆ. ಅದೇ ರೀತಿ ಶಿವಮೊಗ್ಗದವರೂ ಅವರನ್ನು ಸದಾ ನೆನೆಪಿಸಿಕೊಳ್ಳುತ್ತಾರೆ.
2011ರಲ್ಲಿ ಬೆಳಗಾವಿಯಲ್ಲಿ ಜರುಗಿದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕವಿಗೋಷ್ಠಿ ನಡೆಸಿಕೊಟ್ಟವರು ನಿಸಾರ್. ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಲಹಾ ಸಮಿತಿಯಲ್ಲಿ ಕೆಲಸ ಮಾಡಿದ್ದಾರೆ. ಕಾನೂನು ವಿಶ್ವಕೋಶ ರಚನಾ ಮಂಡಳಿಯಲ್ಲೂ ಸದಸ್ಯರಾಗಿದ್ದರು. ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಇಂತಹ ಹತ್ತಾರು ಮಹತ್ಸಾಧನೆ ಮಾಡಿರುವ ಅವರಿಗೆ 2008ರಲ್ಲಿ ಪದ್ಮಶ್ರೀ ಮತ್ತು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗಿದೆ.
ಉದಾರವಾದಿ ಮತ್ತು ಚಿಂತಕರಾಗಿರುವ ನಿಸಾರ್, ಮೈಸೂರು ದಸರಾ ಉದ್ಘಾಟಿಸಲಿರುವ ಪ್ರಪ್ರಥಮ ಮುಸ್ಲಿಂ ಆಗಲಿದ್ದಾರೆ. ಹಿಂದೂ ಧರ್ಮದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದವರು, ಭಗವದ್ಗೀತೆ ಮತ್ತು ರಾಮಾಯಣವನ್ನು ಆಳವಾಗಿ ಅಭ್ಯಸಿಸಿದವರು, ಜೊತೆಗೆ ಮಾತನಾಡಬಲ್ಲವರು. ಕೇವಲ ಬರೆಹಗಾರರಾಗಿ ಮಾತ್ರವಲ್ಲದೆ, ನಾಡಿನ ಸಾಂಸ್ಕೃತಿಕ ಕ್ಷೇತ್ರದಲ್ಲೂ ಮಹತ್ವದ ವ್ಯಕ್ತಿಯಾಗಿದ್ದಾರೆ. ಆದ್ದರಿಂದಲೇ ಇವರ ಆಯ್ಕೆ ದಸರಾಕ್ಕೆ ವಿಶೇಷ ಅರ್ಥ ತರಲಿದೆ. ಎಲ್ಲ ನಂಬಿಕೆಯವರು ಮತ್ತು ಧರ್ಮೀಯರು ಸೇರಿ ಆಚರಿಸುವ ಹಬ್ಬವಿದು. ಜಾತ್ಯತೀತ ನಾಡು ಇದು ಎನ್ನುವುದಕ್ಕೆ ನಿಸಾರ್ ಆಯ್ಕೆ ಇನ್ನಷ್ಟು ಪುಷ್ಠಿ ನೀಡಲಿದೆ.  
ಸರ್ಕಾರದ ಆಯ್ಕೆಗಳೆಲ್ಲ ಹೆಚ್ಚು ಕಡಿಮೆ ರಾಜಕೀಯಪ್ರೇರಿತವಾಗಿರುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಆದರೆ ಮೈಸೂರು ದಸರಾ ವಿಚಾರದಲ್ಲಿ ಮಾತ್ರ ಇದು ಸುಳ್ಳಾಗಿದೆ. ಇಲ್ಲಿಯವರೆಗೆ ದಸರಾ ಉದ್ಘಾಟನೆ ಮಾಡಿದವರೆಲ್ಲ ನಾಡಿನ ಗಣ್ಯರೇ ಆಗಿದ್ದು, ಒಂದಿಲ್ಲೊಂದು ಕ್ಷೇತ್ರದಲ್ಲಿ ಅವಿಸ್ಮರಣೀಯ ಕೆಲಸ ಮಾಡಿದವರಾಗಿದ್ದಾರೆ. ಬರಗಾಲದ ಹಿನ್ನೆಲೆಯಲ್ಲಿ ಮತ್ತು ನಾಡಿನಲ್ಲಿ ರೈತರ ಆತ್ಮಹತ್ಯೆ ಒಂದೇ ಸಮನೆ ಏರುತ್ತಿದ್ದುದರಿಂದ ರೈತರಲ್ಲಿ ಆತ್ಮವಿಶ್ವಾಸ ತುಂಬಲು ರೈತ ನಾಯಕ ಪುಟ್ಟಯ್ಯ ಅವರಿಂದ ಉದ್ಘಾಟನೆ ಮಾಡಿದ ಉದಾಹರಣೆ ನಮ್ಮ ಮುಂದಿದೆ. ಜಾತಿ-ಮತ, ಧರ್ಮ, ವೃತ್ತಿ ನೋಡದೆ ಇಂತಹವರ ಆಯ್ಕೆ ನಡೆಯುತ್ತಿರುವುದು ನಿಜಕ್ಕೂ ಒಂದು ಸತ್ಸಂಪ್ರದಾಯ. ಮುಂದಿನ ವರ್ಷಗಳಲ್ಲೂ ಈ ಪರಂಪರೆ ಮುಂದುವರೆದರೆ ಮೈಸೂರು ದಸರಾಕ್ಕೆ ಇನ್ನಷ್ಟು ಉತ್ತಮ ಹೆಸರು ಬರಲು ಸಾಧ್ಯವಿದೆ. ಆರಂಭದಲ್ಲೇ ಅಂದರೆ ದಸರಾ ಉದ್ಘಾಟನೆ ಮಾಡುವವರ ಆಯ್ಕೆಯ ವಿಚಾರದಲ್ಲೇ ವಿವಾದ ಆರಂಭವಾದರೆ ಅದು ಮುಂದಿನ ಎಲ್ಲ ಕಾರ್ಯಕ್ರಮಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ನಾಡ ಹಬ್ಬದ ಸಂದರ್ದಲ್ಲಿ ಎಲ್ಲ ಜಾತಿ- ಧರ್ಮದವರು ಒಗ್ಗಟ್ಟಾಗಿ ಆಚರಿಸಬೇಕಾಗುತ್ತದೆ. ದಸರಾ ಸಮಿತಿಯಲ್ಲೂ ಎಲ್ಲ ವರ್ಗದವರಿಗೂ ಪ್ರಾತಿನಿಧ್ಯವಿರುತ್ತದೆ. ಎಲ್ಲರೂ ಸೇರಿ ಇದನ್ನು ಆಚರಿಸಿದಾಗ ಅದಕ್ಕೆ ವಿಶಿಷ್ಟ ಅರ್ಥ ಬರುತ್ತದೆ. ಎಲ್ಲರಿಗೂ ಮಾದರಿಯಾಗುತ್ತದೆ. ಇಲ್ಲಿಯವರೆಗೆ ದಸರಾ ಆಚರಣೆ ಇದೇ ಮಾದರಿಯಲ್ಲಿ ನಡೆದು ಬಂದಿರುವುದರಿಂದಲೇ ವರ್ಷದಿಂದ ವರ್ಷಕ್ಕೆ ಅದರ ಕೀರ್ತಿ, ವೈಭವ ಪಸರಿಸುತ್ತಿದೆ.
..................................


Thursday, 17 August 2017

ಆಸ್ತಿ ಸರ್ವೇ ನಡೆಸದೆ  ಪ್ರಾಪರ್ಟಿ ಕಾರ್ಡ್ ಜಾರಿ

ಪ್ರಾಪರ್ಟಿ ಕಾರ್ಡ್ ನೀಡುವ ಮುನ್ನ ಸಮಗ್ರವಾಗಿ ಆಸ್ತಿಯ ಸರ್ವೇ ನಡೆಯಬೇಕು. ಆದರೆ ಇದನ್ನು ಮಾಡುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಇದರಿಂದ ಸಮಸ್ಯೆ ಹುಟ್ಟಿಕೊಂಡಿದೆ.  ಸರ್ವೇ ಆದ ನಂತರ ನೊಟಿಫಿಕೇಶನ್ ಆಗಬೇಕು, ಆನಂತರ  ಆಕ್ಷೇಪಣೆ ಕೇಳಬೇಕು. ಇದಾದ ಬಳಿಕ ಅಂತಿಮ ನೊಟಿಫಿಕೇಶನ್ ನಡೆಯಬೇಕು. ಇಷ್ಟೆಲ್ಲಾ ಪ್ರಕ್ರಿಯೆ ಮಾಡದೆ ಆರಂಭಿಸಲಾಗಿದೆ. ಇದರಿಂದ ಜನರಿಗೆ ತೊಂದರೆಯಾಗಿದ್ದು ನಿಜ. ಇನ್ನು ಮುಂದೆ ಸರ್ವೇ ನಡೆಸಿಯೇ ಪ್ರಾಪರ್ಟಿ ಕಾರ್ಡ್ ನೀಡಲಾಗುವುದು. ಈಗ ಜನ ಅಲೆಯುವಂತಾಗಿದೆ. ಇದನ್ನು ಆದಷ್ಟು ಬೇಗ  ಸರಿಪಡಿಸಲಾಗುವುದು
 - -ಕಾಗೋಡು ತಿಮ್ಮಪ್ಪ.

 ಇಡೀ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಶಿವಮೊಗ್ಗ ನಗರದಲ್ಲಿ ಕಂದಾಯ ಇಲಾಖೆಯ ಸರ್ವೇ ವಿಭಾಗವು ಉಪಗ್ರಹ ಆಧಾರಿತ ಆಸ್ತಿ ಮಾಲಿಕತ್ವ ದಾಖಲೆ (ಯುಪಿಓಆರ್) ಯೋಜನೆ ಅನುಷ್ಠಾನಗೊಳಿಸಲಾಗಿದೆ. ಕಳೆದ ಸರಿಸುಮಾರು ಒಂದು ವರ್ಷದಿಂದ ಸ್ಥಿರಾಸ್ತಿ ನೊಂದಣಿಗೆ ಈ ಯೋಜನೆಯಡಿ ನೀಡುವ ಪ್ರಾಪರ್ಟಿ ಕಾರ್ಡ್ (ಪಿ.ಆರ್.) ಹೊಂದಿರುವುದು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಉಪಗ್ರಹದ ಮೂಲಕ ಖಾಸಗಿ ಹಾಗೂ ಸರ್ಕಾರಿ ಆಸ್ತಿ ಗುರುತಿಸುವುದು, ಸ್ಥಿರಾಸ್ತಿ ನೊಂದಣಿಯ ವೇಳೆ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕುವುದು, ಆಸ್ತಿ ಮಾಲಿಕತ್ವವನ್ನು ವೈಜ್ಞಾನಿಕವಾಗಿ ಗುರುತಿಸುವುದು, ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿ ವಂಚಿಸುವ ಪ್ರಕರಣಗಳಿಗೆ ಕಡಿವಾಣ ಹಾಕುವುದು ಮೊದಲಾದ ಮಹತ್ತರ ಉದ್ದೇಶವನ್ನಿಟ್ಟುಕೊಂಡು ಯುಪಿಓಆರ್ ಯೋಜನೆಯನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರ್ಯಗತಗೊಳಿಸಲಾಗಿತ್ತು.
ಪ್ರಾಯೋಗಿಕವಾಗಿ ಶಿವಮೊಗ್ಗ, ಮೈಸೂರು, ಬಳ್ಳಾರಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಐದಾರು ನಗರಗಳಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಈ ನಗರಗಳಲ್ಲಿ ಉಪಗ್ರಹ ಆಧಾರಿತ ಸರ್ವೇ ಕಾರ್ಯಕ್ಕೂ ಚಾಲನೆ ನೀಡಲಾಗಿತ್ತು. ಆದರೆ ನಾನಾ ಕಾರಣಗಳಿಂದ ಕೆಲವು ನಗರಗಳಲ್ಲಿ ಸಮರ್ಪಕವಾಗಿ ಸರ್ವೇ ಕಾರ್ಯ ನಡೆಯಲಿಲ್ಲ. ಅಂತಿಮವಾಗಿ ಶಿವಮೊಗ್ಗ ಹಾಗೂ ಮೈಸೂರು ನಗರಗಳಲ್ಲಿ ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕೆ ನಿರ್ಧರಿಸಲಾಗಿತ್ತು.
ಅದರಂತೆ ಎರಡು ನಗರಗಳಲ್ಲಿಯೂ ಯುಪಿಓಆರ್ ಕಚೇರಿ ಕೂಡ ತೆರೆಯಲಾಗಿತ್ತು. ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶಿವಮೊಗ್ಗ ನಗರದಲ್ಲಿ ಮಾತ್ರ ಯೋಜನೆ ಕಾರ್ಯಗತಗೊಳಿಸಿ, ಸ್ಥಿರಾಸ್ತಿ ನೊಂದಣಿಗೆ ಯುಪಿಓಆರ್ ಕಚೇರಿಯಿಂದ ಪ್ರಾಪರ್ಟಿ ಕಾರ್ಡ್ ಪಡೆಯಬೇಕೆಂಬ ನಿಬಂಧನೆ ಹೇರಲಾಯಿತು. ಈಗ ಶಿವಮೊಗ್ಗ ನಗರದಲ್ಲಿ ಪ್ರಾಪರ್ಟಿ ಕಾರ್ಡ್ ಹೊಂದಿದ ಸ್ಥಿರಾಸ್ತಿಗಳನ್ನು ಮಾತ್ರ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ನೊಂದಣಿ ಮಾಡಲಾಗುತ್ತಿದೆ.
ಒಟ್ಟಾರೆ ಶಿವಮೊಗ್ಗದಲ್ಲಿ ಸುಮಾರು 80 ಸಾವಿರಕ್ಕೂ ಅಧಿಕ ಸ್ಥಿರಾಸ್ತಿಗಳನ್ನು ಗುರುತಿಸಲಾಗಿದೆ. ಆದರೆ ಇಲ್ಲಿಯವರೆಗೂ ಇವುಗಳ ಮಾಲಿಕರಿಗೆ ಪ್ರಾಪರ್ಟಿ ಕಾರ್ಡ್ ನೀಡಿಲ್ಲ. ಮತ್ತೊಂದೆಡೆ ಕೆಲವು ಮಾಲಿಕರು ಕೂಡ ತಮ್ಮ ಸ್ಥಿರಾಸ್ತಿಗಳಿಗೆ ಪಿ.ಆರ್.ಕಾರ್ಡ್ ಮಾಡಿಸುವ ಗೋಜಿಗೆ ಹೋಗಿಲ್ಲ. ನೊಂದಣಿ, ಕ್ರಯಪತ್ರ ಮಾಡಿಸುವ ಅಗತ್ಯವಿರುವವರು ಮಾತ್ರ ಸ್ಥಿರಾಸ್ತಿಗಳಿಗೆ ಕಾರ್ಡ್ ಮಾಡಿಸುತ್ತಿದ್ದಾರೆ. ಯುಪಿಓಆರ್ ಕಚೇರಿಯಲ್ಲಿ ಪ್ರಾಪರ್ಟಿ ಕಾರ್ಡ್ ನೀಡುವ ಪ್ರಕ್ರಿಯೆ ವಿಳಂಬಗತಿಯಲ್ಲಿ ಸಾಗುತ್ತಿದೆ. ಸಾರ್ವಜನಿಕರು ದಿನನಿತ್ಯ ಕಚೇರಿಗೆ ಅಲೆದಾಡುವಂತಾಗಿದೆ. ಹಾಗೆಯೇ ಪ್ರಾಪರ್ಟಿ ಕಾರ್ಡ್‌ನಲ್ಲಿ ಹತ್ತು ಹಲವು ಲೋಪದೋಷಗಳಿರುತ್ತವೆ. ಇದು ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವಂತೆ ಮಾಡಿದೆ.
ಹಲವು ದಿನಗಳಿಂದ ಯುಪಿಓಆರ್ ಕಚೇರಿಯ ಅಂತರ್ಜಾಲದಲ್ಲಿ ಸರ್ವರ್ ಡೌನ್, ತಾಂತ್ರಿಕ ಸಮಸ್ಯೆ ಎದುರಾಗಿದೆ. ಇದರಿಂದ ಕೆಲವು ದಿನಗಳ ಕಾಲ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಯುಪಿಓಆರ್ ವೆಬ್ ತಾಣ ತೆರೆದುಕೊಳ್ಳುತ್ತಿರಲಿಲ್ಲ. ಸ್ಥಿರಾಸ್ತಿ ನೊಂದಣಿ ಪ್ರಕ್ರಿಯೆಯು ಸಂಪೂರ್ಣ ಸ್ಥಗಿತಗೊಂಡಿತ್ತು. ಇದು ಸ್ಥಿರಾಸ್ತಿ ನೊಂದಣಿ ಮಾಡಿಸಲೇಬೇಕಾದ ತುರ್ತು ಅಗತ್ಯವಿರುವವರು ತೀವ್ರ ಸಂಕಷ್ಟ ಪಡುವಂತಾಗಿತ್ತು.
ಸಬ್ ರಿಜಿಸ್ಟಾರ್ ಕಚೇರಿಯ ಸಮಸ್ಯೆ ಪರಿಹಾರವಾದರೂ ಯಪಿಓಆರ್ ಕಚೇರಿಯಲ್ಲಿನ ಸಮಸ್ಯೆ ಪರಿಹಾರವಾಗುತ್ತಿಲ್ಲ. ಕಾಲಮಿತಿಯಲ್ಲಿ ಪ್ರಾಪರ್ಟಿ ಕಾರ್ಡ್ ಸಿಗುತ್ತಿಲ್ಲ. ಸರ್ವರ್ ಡೌನ್, ತಂತ್ರಾಂಶ ಅಪ್‌ಡೇಟ್ ಮಾಡಲಾಗುತ್ತಿದೆ ಎಂಬಿತ್ಯಾದಿ ಸಿದ್ಧ ಉತ್ತರಗಳನ್ನು ಕಚೇರಿ ಸಿಬ್ಬಂದಿಗಳು ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

---------------------------------------
ದೇಸಿ ಅಕ್ಕಿ ಆಹಾರಕ್ಕೂ, ಔಷಧಿಗೂ ಸೈ 

ಶಿವಮೊಗ್ಗದಲ್ಲಿ ಆಗಸ್ಟ್ 18ರಿಂದ ಮೂರು ದಿನ ದೇಸಿ ಅಕ್ಕಿ ಜಾತ್ರೆ  ನಡೆಯಲಿದೆ. ಈ ಸಂಬಂಧ ದೇಸಿ ಅಕ್ಕಿ ಮತ್ತು ಅದರ ತಳಿಯ ಬಗ್ಗೆ ಒಂದು ಪರಿಚಯಾತ್ಮಕ ಬರೆಹ. 





ವೈವಿಧ್ಯಮಯ ಆಹಾರ ಸಂಸ್ಕೃತಿಗೆ ಹೆಸರಾದ ದೇಶ ನಮ್ಮದು. ಇದಕ್ಕೆ ಪೂರಕವಾಗಿ ಅಸಂಖ್ಯಾತ ಬಗೆಯ ಬೆಳೆಗಳು, ತಳಿಗಳು ನಮ್ಮಲ್ಲಿವೆ. ನೂರಾರು ವರ್ಷಗಳಿಂದ ರೈತರು ಇವುಗಳನ್ನು ಉಳಿಸಿಕೊಂಡು ಬಂದಿದ್ದಾರೆ. ದೇಸಿ ಅಕ್ಕಿಗಳು ನಮ್ಮ ಆಹಾರ ಸಂಸ್ಕೃತಿ- ಸೊಗಡಿನೊಂದಿಗೆ ಬೆಳೆದುಕೊಂಡು ಬಂದಿವೆ. ಈ ತಳಿಗಳನ್ನು ಮುಂದಿನ ಪೀಳಿಗೆಗೂ ನೀಡುವ ಹೊಣೆ ಎಲ್ಲರ ಮೇಲಿದೆ. ದೇಸಿ ಭತ್ತ ಬೆಳೆಯಲು ರೈತರನ್ನು ಪ್ರೋತ್ಸಾಹಿಸುವುದು ಹಾಗೂ ಅದರ ಬಳಕೆಗೆ ಗ್ರಾಹಕರನ್ನು ಪ್ರೇರೇಪಿಸುವುದು ಇಂದಿನ ಅಗತ್ಯವಾಗಿದೆ.
 ಫಾಸ್ಟ್ ಫುಡ್ ಮತ್ತು ಸುಲಭ ಆಹಾರ ತಯಾರಿ ಎಂಬ ಪ್ರಚಾರದ ಮೋಡಿಗೆ ಮಾರುಹೋಗುತ್ತಿರುವ ಇಂದಿನ ಪೀಳಿಗೆಯು ಸಾಂಪ್ರದಾಯಿಕ ದೇಸಿ ಅಡುಗೆಯ ಸೊಗಡನ್ನು ಮರೆಯುತ್ತಿದೆ. ಕೆಂಪಕ್ಕಿಯ ಇಡ್ಲಿ, ನೀರು ದೋಸೆ, ಅಕ್ಕಿ ಕಡುಬು, ಕಜ್ಜಾಯ, ತೊಡದೇವು, ಸಜ್ಜೆಯ ಮಾದಲಿ, ನವಣೆ ಕಜ್ಜಾಯ, ಸಾವೆ ಉಪ್ಪಿಟ್ಟು, ಬರಗು ರೊಟ್ಟಿ-ಎಣ್ಣೆಗಾಯಿ, ಸಿಹಿ ಉಂಡೆಗಳು ಬಳಕೆ ಇಲ್ಲದೆ ಅಪರೂಪವಾಗುತ್ತಿವೆ.
 ಎಲ್ಲವೂ ವಿದೇಶಿಮಯವಾಗುತ್ತಿರುವ ಇಂದಿನ ದಿನಗಳಲ್ಲಿ ಸಣ್ಣ ಸಮಾಧಾನದ ಸಂಗತಿ ಎಂಬಂತೆ ದೇಸಿ ಪದಾರ್ಥ ಬಳಕೆಯತ್ತ ಜನರ ಗಮನ ಹರಿಯತ್ತಿದೆ. ಆದರೆ ಇದು ಬೃಹತ್ ಆಂದೋಲನದ ರೂಪು ಪಡೆಯಬೇಕು ಎಂದು ಆಶಿಸಿದರು. ಒಂದು ದೇಸಿ ತಳಿ ಬೆಳೆ ನಿರ್ನಾಮವಾದರೆ, ಅದಕ್ಕೆ ಸಂಬಂಧಿಸಿದ ವೈಶಿಷ್ಟ್ಯ, ಸಂಸ್ಕೃತಿ, ಪರಂಪರೆ, ಬಳಕೆ ವಿಧಾನ, ಕೃಷ ಪದ್ಧತಿ ಇತ್ಯಾದಿಗಳು ಮರೆಯಾಗುತ್ತವೆ. ಅಪಾರ ವೈವಿಧ್ಯವಿದ್ದ ನಮ್ಮ ದೇಶದಲ್ಲಿ ಈಗಾಗಲೇ ಲಕ್ಷಾಂತರ ದೇಸಿ ತಳಿ ನಮ್ಮ ನೆಲದಿಂದ ಸಂಪೂರ್ಣ ಮರೆಯಾಗಿವೆ. ಈಗಲಾದರೂ ಉಳಿಸಿಕೊಳ್ಳದೇ ಹೋದರೆ ಮುಂದೊಂದು ದಿನ ನಮ್ಮ ನಿರ್ಲಕ್ಷ್ಯಕ್ಕೆ ಪಶ್ಚಾತ್ತಾಪ ಪಡುವಂತಾಗಲಿದೆ .
ಕನ್ನಡ ನಾಡಿನ ವೈವಿಧ್ಯಮಯ ಪಾರಂಪರಿಕ ಅಡುಗೆಗಳಿಗೆ ವಿವಿಧ ಬಗೆಯ ದೇಸಿ ಅಕ್ಕಿಗಳನ್ನು ತಲತಲಾಂತರದಿಂದಲೂ ಬಳಸಲಾಗುತ್ತಿದೆ. ದೇಸಿ ಸೊಗಡಿನ ಪಾಕ ತಯಾರಿಕೆಗೆ ಅದೇ ಬಗೆಯ ಅಕ್ಕಿಯಾದರೆ ಆ ರುಚಿ ಇನ್ನಷ್ಟು ಹೆಚ್ಚುತ್ತದೆ. ಈಗ ಗ್ರಾಹಕರು ಇಂಥ ದೇಸಿ ಅಕ್ಕಿಗಳತ್ತ ಗಮನ ಹರಿಸುತ್ತಿದ್ದು, ಇದಕ್ಕೆ ಇನ್ನಷ್ಟು ಉತ್ತೇಜನ ಕೊಡುವ ಕೆಲಸ ನಡೆಯಬೇಕಿದೆ.
ದೇಸಿ ಅಕ್ಕಿಗಳು ನಮ್ಮ ಆಹಾರ ಸಂಸ್ಕೃತಿ- ಸೊಗಡಿನೊಂದಿಗೆ ಬೆಳೆದುಕೊಂಡು ಬಂದಿವೆ. ಆದರೆ ಕೆಲವು ತಳಿಗಳಿಗಷ್ಟೇ ಪ್ರಚಾರ ಹಾಗೂ ಬಳಕೆಗೆ ಉತ್ತೇಜನ ನೀಡುವ ಹುನ್ನಾರದಿಂದಾಗಿ ದೇಸಿ ಅಕ್ಕಿಗಳು ಕಣ್ಮರೆಯ ಹಾದಿಯಲ್ಲಿವೆ. ಪಾಲಿಶ್ ಮಾಡಿದ ಅಕ್ಕಿ ಬಳಸಿ ಅನಾರೋಗ್ಯ ಆಹ್ವಾನಿಸಿಕೊಳ್ಳುವ ಬದಲಿಗೆ ದೇಸಿ ಅಕ್ಕಿ ಅನ್ನ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬಹುದು. ದೇಸಿ ಅಕ್ಕಿ ತಳಿಗಳ ಭಂಡಾರವೇ ನಮ್ಮ ನಾಡಿನಲ್ಲಿದ್ದು, ಇದರತ್ತ ಗಮನಹರಿಸುವ ಅಗತ್ಯವಿದೆ’
 ಪೌಷ್ಟಿಕಾಂಶಗಳ ಆಗರವಾಗಿರುವ ಕೆಂಪಕ್ಕಿ ತಳಿಗಳು, ನಮ್ಮ ನೆಲ- ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುತ್ತ ಬಂದಿವೆ. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಹವಾಮಾನ ಬದಲಾವಣೆ ಬಿಕ್ಕಟ್ಟಿಗೆ ಕೆಂಪಕ್ಕಿ ತಳಿಗಳು ಸಮರ್ಥವಾಗಿ ಉತ್ತರ ಕೊಡಬಲ್ಲವು. ಬೇರೆ ರಾಜ್ಯಗಳಿಂದ ಅಕ್ಕಿಯನ್ನು ತರಿಸಿ, ಜನರಿಗೆ ಹಂಚುವ ಬದಲಿಗೆ ಸ್ಥಳೀಯ ಮಟ್ಟದಲ್ಲಿ ರೈತರಿಗೆ ದೇಸಿ ಅಕ್ಕಿ ಬೆಳೆಸಲು ಸರ್ಕಾರ ಪ್ರೋತ್ಸಾಹ ಕೊಡಬೇಕು. ಇದರಿಂದ ಸ್ಥಳೀಯ ಮಟ್ಟದಲ್ಲಿ ಮಾರುಕಟ್ಟೆ ಸೃಷ್ಟಿಯಾಗಿ ರೈತರಿಗೆ ಆರ್ಥಿಕವಾಗಿ ಪ್ರಯೋಜನವಾಗಲಿದೆ.
ದೇವರಿಗೆ ನೈವೇದ್ಯವಾಗಿ, ಮಗುವಿನ ಮೊದಲ ತುತ್ತಾಗಿ, ಮಂಗಳ ಕಾರ್ಯದಲ್ಲಿ ಅಕ್ಷತೆಯಾಗಿ, ಕೋಟ್ಯಂತರ ಜನರ ಹೊಟ್ಟೆ ತುಂಬುವ ಅನ್ನ ನಮ್ಮ ಬದುಕಿಗೆ ಆಧಾರ. ಇವತ್ತು ನಾವು ತಿನ್ನುವ ಪಾಲಿಶ್ ಅಕ್ಕಿಯ ಅನ್ನ ನಿಜವಾದ ಅರ್ಥದಲ್ಲಿ ಅನ್ನವೇ ಅಲ್ಲ, ಸಕ್ಕರೆ ಕಾಯಿಲೆ, ಬೊಜ್ಜು, ಮಲಬದ್ಧತೆ ಆಹ್ವಾನಿಸುವ ಬಿಳಿಬಣ್ಣದ ವಿಷ. ದೇಶೀಯ ಅಕ್ಕಿ ತಳಿಗಳು ಆಹಾರಕ್ಕೂ ಸೈ, ಔಷಧಿಗೂ ಸೈ. ಕೆಲವೇ ದಶಕಗಳ ಹಿಂದೆ ಅನ್ನಕ್ಕೊಂದು, ಅವಲಕ್ಕಿಗೊಂದು, ಕಜ್ಜಾಯಕ್ಕೊಂದು, ರೊಟ್ಟಿಗೊಂದು, ಬಾಣಂತಿಯರ ಊಟಕ್ಕೊಂದು ಮಕ್ಕಳ ವಾಂತಿಭೇದಿಗೊಂದು, ವಿವಿಧ ರೋಗಗಳಿಗೆ ತಲಾ ಒಂದೊಂದು...  ಹೀಗೆ ಎಲ್ಲದಕ್ಕ್ಕೂ ದೇಸಿ ಅಕ್ಕಿ ಮನೆಮದ್ದಾಗಿತ್ತು. ದೊಡ್ಡಬೈರನೆಲ್ಲು, ನವರ, ಕರಿಭತ್ತ, ದೊಡ್ಡಿಭತ್ತ ಮುಂತಾದ ಕೆಂಪಕ್ಕಿ ತಳಿಗಳು ಅನೇಕ ರೋಗಗಳಿಗೆ ರಾಮಬಾಣವಾಗಿದ್ದವು.
ಈಗ ಪರಿಸ್ಥಿತಿ ಹೇಗಿದೆ ಎಂದರೆ, ಕೈಯಿಂದ ಜಾರುವಷ್ಟು ನುಣುಪಾದ, ಪಾಲಿಶ್ ಮಾಡಿರುವ, ಹೊಳೆಯುವ, ಉದುರುಉದುರಾಗಿ ಅನ್ನವಾಗುವ ಅಕ್ಕಿಯನ್ನೇ ಗುಣಮಟ್ಟದ ಅಕ್ಕಿ ಎಂದು ಭಾವಿಸಿ ಖರೀದಿಗೆ ಜನ ಮುಂದಾಗುತ್ತಿದ್ದಾರೆ. ಆದರೆ ವಾಸ್ತವವೇ ಬೇರೆ. ನಮ್ಮ ನಾಡಿನಲ್ಲಿ ಆಯಾಯ ಪ್ರಾದೇಶಿಕತೆ, ಭೌಗೋಳಿಕತೆಗೆ ತಕ್ಕಂತೆ ವಿವಿಧ ತಳಿಯ ಭತ್ತ ಬೆಳೆಯುತ್ತಿದ್ದಾರೆ. ಅದರಷ್ಟು ಉತ್ತಮ ದೇಸೀಯ ಅಕ್ಕಿ ಇನ್ನೊಂದಿಲ್ಲ. ನಾಡಿನ ರೈತರು ಹಲವೆಡೆ ಇನ್ನೂ ಇದನ್ನು ಬೆಳೆಯುತ್ತಿದ್ದಾರೆ, ತಿನ್ನುತ್ತಿದ್ದಾರೆ. ಹಾಗಾಗಿಯೇ ಅವರು ಹೆಚ್ಚು ರೋಗಮುಕ್ತರು. ಇಂತಹ ಅಕ್ಕಿ ತಳಿಗಳು ಅತ್ಯಂತ ಶ್ರೇಷ್ಠ ತಳಿಗಳಾಗಿವೆ.  ಪೋಷಕಾಂಶಗಳ ಆಗರವಾಗಿವೆ, ಆರೋಗ್ಯಕ್ಕೆ ಪೂರಕವಾಗಿವೆ.


ಮೂರು ದಿನಗಳ ಈ ದೇಸಿ ಅಕ್ಕಿ ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳ ಅನೇಕ ರೈತರು ದೇಸಿ ತಳಿ ಅಕ್ಕಿಯನ್ನು ಪ್ರದರ್ಶಿಸಲಿದ್ದಾರೆ. ಕನ್ನಡ ನಾಡಿನ ದೇಸಿ ತಳಿಗಳು ಮಾತ್ರವಲ್ಲದೇ ಭಾರತದ ಅಪರೂಪದ ಭತ್ತದ ತಳಿಗಳನ್ನು ರೈತರು ಸಂರಕ್ಷಿಸುತ್ತಿದ್ದು, ಅವುಗಳ ಪ್ರದರ್ಶನ ಕೂಡ ಇರಲಿದೆ. ಬಗೆಬಗೆಯ ದೇಸಿ ಅಡುಗೆಗಳು, ತಿಂಡಿ- ತಿನಿಸುಗಳ ಪ್ರದರ್ಶನ ಹಾಗೂ ಮಾರಾಟ ಇದೆ. ಮೂರು ದಿನಗಳ ಕಾಲ ಬೆಳಿಗ್ಗೆ 10:30ರಿಂದ ರಾತ್ರಿ 9ರವರೆಗೆ ಅಕ್ಕಿ ಜಾತ್ರೆ ನಡೆಯಲಿದೆ.
- ಸಿ. ಶಾಂತಕುಮಾರ್,  ಸಹಜ ಸಮೃದ್ಧ’ ಬಳಗದ ಸಂಚಾಲಕ 

ನಮ್ಮ ದೇಸಿ ಅಕ್ಕಿ ಪರಂಪರೆಯನ್ನು ಮರಳಿ ತರುವ ಪ್ರಯತ್ನದ ಅಂಗವಾಗಿ ಶಿವಮೊಗ್ಗದಲ್ಲಿ ಆಗಸ್ಟ್ 18ರಿಂದ 20ರವರೆಗೆ ‘ದೇಸಿ ಅಕ್ಕಿ ಜಾತ್ರೆ’ಯನ್ನು ಆಯೋಜಿಸಲಾಗಿದೆ. ‘ಸಹಜ ಸಮೃದ್ಧ’ ಹಾಗೂ ‘ಭತ್ತ ಉಳಿಸಿ ಆಂದೋಲನ’ದ ಜತೆಗೂಡಿ ‘ಆರ್ಗ್ಯಾನಿಕ್ ಶಿವಮೊಗ್ಗ’ ಈ ಅಕ್ಕಿ ಜಾತ್ರೆಯನ್ನು ಹಮ್ಮಿಕೊಂಡಿದೆ. ದೇಸಿ ಅಕ್ಕಿ ಬಳಸಿ ಆರೋಗ್ಯಭರಿತ ಬದುಕು ನಿಮ್ಮದಾಗಿಸಿಕೊಳ್ಳಿ ಎಂಬ ಸಂದೇಶವನ್ನು ಇದು ಸಾರಲಿದೆ. ದೇಸಿ ಅಕ್ಕಿ ಜಾತ್ರೆ’ಯ ಹಿನ್ನೆಲೆಯಲ್ಲಿ ‘ದೇಸಿ ಅಡುಗೆ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ. ದೇಸಿ ಅಕ್ಕಿ, ಸಿರಿಧಾನ್ಯ ಮತ್ತು ಕಾಳುಗಳಿಂದ ತಯಾರಿಸುವ ಸಾಂಪ್ರದಾಯಿಕ ಮತ್ತು ಹೊಸ ಅಡುಗೆಗಳನ್ನು ಪ್ರೋತ್ಸಾಹಿಸಲೆಂದು ’ದೇಸಿ ಅಡುಗೆ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ. 
- ಎಂ.ಎಸ್. ಮಂಜುನಾಥ, ಅಕ್ಕಿ ಜಾತ್ರೆ ಸಂಘಟಕ ಹಾಗೂ ‘ ಆರ್ಗ್ಯಾನಿಕ್ ಶಿವಮೊಗ್ಗ’ ಮುಖ್ಯಸ್ಥ 
....................................



Tuesday, 15 August 2017

ಉಪ್ಪಿ ಪರಿಕಲ್ಪನೆ ಒಳ್ಳೆಯದು, ಆದರೆ.....


  ರಾಜಕೀಯ ಸೇರಲು ಅಧಿಕಾರಿಗಳು, ನಿವೃತ್ತರು ಮುಂದಾಗುತ್ತಿದ್ದಾರೆ. ಸಿನಿಮಾನಟರೂ ಸಹ ಈಗ ತುದಿಗಾಲಲ್ಲಿ ನಿಂತಿದ್ದಾರೆ. ದಕ್ಷಿಣ ಭಾರತದ ರಾಜಕಾರಣದಲ್ಲಿ ಆಂದ್ರ, ತಮಿಳುನಾಡಿನಲ್ಲಿ ಸಿನಿಮಾಕ್ಕೆ ಬಣ್ಣ ಹಚ್ಚಿದವರು ರಾಜ್ಯವನ್ನೂ ಆಳಿದ ಉದಾಹರಣೆ ಕಣ್ಮುಂದಿದೆ. ಆದರೆ ಕರ್ನಾಟಕದಲ್ಲಿ ನಟರು ರಾಜಕೀಯವಾಗಿ ಪ್ರಕಾಶಮಾನರಾದ ಉದಾಹರಣೆ ಇಲ್ಲ. ಆದರೂ ಅನೇಕ ನಟರು ರಾಜಕೀಯ ಚಟಕ್ಕೆ ಬೀಳುತ್ತಿದ್ದಾರೆ. ನಟ ಉಪೇಂದ್ರ. ಪ್ರಜಾಕೀಯ ಎಂಬ ಸಂಘಟನೆ ಮೂಲಕ ರಾಜಕೀಯ ಪಕ್ಷ ಕಟ್ಟಲು ಸಿದ್ಧರಾಗಿದ್ದಾರೆ. ತಮ್ಮ ರಾಜಕೀಯ ನಿಲುವು ಎನು, ರಾಜಕೀಯ ಎಂದರೆ ಹೇಗಿರಬೇಕೆಂಬ ಬಗ್ಗೆ ವಿಸ್ತಾರವಾಗಿ ಮಾತನಾಡಿದ್ದಾರೆ. ಆದರೆ ಇವುಗಳನ್ನೆಲ್ಲ ಜಾರಿಗೊಳಿಸುವುದು ಅಷ್ಟು ಸುಲಭವೇ ಎಂಬ ಪ್ರಶ್ನೆ ನಮ್ಮ ಮುಂದಿದೆ. ಆ ಬಗ್ಗೆ ಒಂದಷ್ಟು ವಿಚಾರ. 



 ತಮಿಳುನಾಡಿನ ಹಿರಿಯನಟರಿಬ್ಬರಾದ ಕಮಲ್‌ಹಾಸನ್ ಮತ್ತು ರಜನಿಕಾಂತ್ ತಾವಿಬ್ಬರೂ ರಾಜಕೀಯಕ್ಕೆ ಪದಾರ್ಪಣೆ ಮಾಡುವ ವಿಚಾರವನ್ನು ಕೆಲವು ತಿಂಗಳಿನಿಂದ ಹೇಳುತ್ತಿದ್ದರೂ ಯಾವಾಗ ಕಾಲಿಡುವೆವು ಎನ್ನುವ ಗುಟ್ಟನ್ನು ಬಿಟ್ಟುಕೊಡದೆ ಅಭಿಮಾನಿಗಳನ್ನು ಹಿಡಿದಿಟ್ಟುಕೊಂಡಿದ್ದಾರೆ. ಈ ಮಧ್ಯೆ ಕನ್ನಡದ ನಟ ‘ರಿಯಲ್ ಸ್ಟಾರ್’ ಉಪೇಂದ್ರ ತಾನು ‘ಪ್ರಜಾಕೀಯ’ ಎಂಬ ರಾಜಕೀಯ ಸಂಘಟನೆಯನ್ನು ಸ್ಥಾಪಿಸುವುದಾಗಿ ಆಗಸ್ಟ್ 12ರಂದು ಘೋಷಿಸಿದ್ದಾರೆ.
ಉಪೇಂದ್ರ ಬಿಡುಗಡೆಗೊಳಿಸಿರುವ ರಾಜಕೀಯ ಪರಿಕಲ್ಪನೆಗಳು ಉತ್ತಮ ಉದ್ದೇಶವನ್ನು ಹೊಂದಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.  ಇಂತಹ ಪರಿಕಲ್ಪನೆಗಳನ್ನು ಇಟ್ಟುಕೊಂಡೇ ಎಲ್ಲರೂ ರಾಜಕೀಯಕ್ಕೆ ಬರುತ್ತಾರೆ. ಆದರೆ ಯಾವಾಗ ತನ್ನಿಂದ ಈಗಿನ ಹದಗೆಟ್ಟ ರಾಜಕೀಯ ವಾತಾವರಣವನ್ನು ಬದಲಿಸಲು ಸಾಧ್ಯವಿಲ್ಲ ಎನ್ನುವುದು ತಿಳಿಯುತ್ತದೆಯೋ ಆಗ ಅದಕ್ಕೇ ಶರಣಾಗುತ್ತಾರೆ. ಇಲ್ಲವೇ ಅದರಲ್ಲೇ ಲೀನವಾಗಿಬಿಡುತ್ತ್ತಾರೆ. ಇದು ನಮ್ಮ ವ್ಯವಸ್ಥೆಯಲ್ಲಿ ಆಗಾಗ ಕಂಡುಬರುವ ದೃಶ್ಯ.
ಉಪೇಂದ್ರ ಹೇಳಿದ ಕೆಲವು ಪ್ರಮುಖ ಅಂಶಗಳನ್ನು ಗಮನಿಸಿ. ತಮ್ಮ ಸಂಘಟನೆ ಸಂಪೂರ್ಣ  ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ನಿಂತಿರುತ್ತದೆ.  ಹಣ ಮತ್ತು ಜಾತಿಯ ಹೊರತಾಗಿಯೂ ರಾಜಕೀಯ ಸಾಧ್ಯವಿದೆ ಎನ್ನುವುದನ್ನು ತೋರಿಸಿಕೊಡಬೇಕಿದೆ. ಪ್ರಜಾಪ್ರಭುತ್ವದಲ್ಲಿ ಜನರೇ ರಾಜರಾಗಿರುವಾಗ  ಬಹಿರಂಗ ಸಮಾವೇಶದ ಮೂಲಕವೇ ಎಲ್ಲರನ್ನೂ ಏಕೆ ಸೇರಿಸಬೇಕು,  ಜನರಿಗಾಗಿ ನಾವು ಏನನ್ನಾದರೂ ಮಾಡಬೇಕು. ಅನುಯಾಯಿಗಳು ಬೇಡ, ಕಾರ್ಯಕರ್ತರು ಬೇಕು.  ತಮಗೆ ನೀಡುವ ಗುರಿಯನ್ನು ಸಮರ್ಪಕವಾಗಿ ಮಾಡುವವರು ಬೇಕು. ಶಾಲೆಯಿಂದ ಹಿಡಿದು ನೌಕರಿ ಸೇರುವವರೆಗೆ ಪರಿಕ್ಷೆ ಎದುರಿಸುವ ಈ ಕಾಲದಲ್ಲಿ ಜನಪ್ರತಿನಿಧಿಯಾಗುವವರಿಗೆ ಪರೀಕ್ಷೆಯನ್ನೇಕೆ ಮಾಡಬಾರದು ಮುಂತಾದುವು.
ಇವೆಲ್ಲ ಕೇಳಲು ಬಲು ಚೆನ್ನ. ಆದರೆ ಅನುಷ್ಠಾನಕ್ಕೆ ತರುವುದು ಸುಲಭದ ಮಾತಲ್ಲ. ರಾಜಕೀಯ ಎನ್ನುವುದು ಬಣ್ಣದ ಮಾತುಗಳಿಂದ ಜನರನ್ನು ಸೆಳೆಯುವುದಲ್ಲ. ಅಥವಾ ಬಣ್ಣ ಹಚ್ಚಿಕೊಂಡು ತೆರೆಯ ಮೆಲೆ ಹತ್ತಾರು ಜನರನ್ನು  ಹೊಡೆದುರುಳಿಸಿ ಸೀಟಿ ಹೊಡೆಯಿಸಿಕೊಳ್ಳುವುದಲ್ಲ, ಸಿನಿಮಾ ಬಿಡುಗಡೆ ದಿನ ದೊಡ್ಡ ಕಟೌಟ್ ಹಾಕಿಸಿ  ಹಾಲೆರೆಸಿಕೊಂಡು ಪೂಜೆ ಮಾಡಿಸಿಕೊಳ್ಳುವಂತದ್ದಲ್ಲ. ಹೊಸದಾಗಿ ರಾಜಕೀಯಕ್ಕೆ ಬರುವವರಿಗೆ ಬಹುದೊಡ್ಡ ಕನಸುಗಳಿರುತ್ತವೆ. ನಿಜ, ಆದರೆ ಕಾಣುವ ಕನಸು ನನಸಾಗಲು ಯೋಗ್ಯತೆಯನ್ನು ಹೊಂದಿದೆಯೇ ಎನ್ನುವುದನ್ನೂ ಯೋಚಿಸಬೇಕು.
ಹಣವಿದೆ ಎಂದು ರಾಜಕೀಯ ಮಾಡಲಿಳಿದರೆ ಹಣವಿರುವವರೆಗೆ ಜನರು ಹಿಂದೆ-ಮುಂದೆ ಇರುತ್ತಾರೆ. ಅಥವಾ ರಾಜಕೀಯ ಹಣವಂತರಿಗೆ ಮಾತ್ರ ಎಂದಾಗಿದ್ದರೂ ಅಂಬಾನಿಯಂತ ಬಿಲಿಯಾಧೀಶರು ಎಂದೋ ಪ್ರಧಾನಿಯೋ ಇನ್ನೇನೇನೊ ಆಗಿಬಿಡುತ್ತಿದ್ದರು. ಆದರೆ ಇದು ಹಾಗಲ್ಲ, ತತ್ವ ಸಿದ್ಧಾಂತದ ಆಧಾರದ ಮೇಲೆ ವಿಚಾರಧಾರೆಗಳು  ರೂಪಿತವಾಗಿರಬೆಕು. ಜನರನ್ನು ನಂಬಿಉಸವುದು ಸುಲಭದ ಮಾತಲ್ಲ. ಹೊಸ ಪಕ್ಷ ಕಟ್ಟುವವರನ್ನು ಜನ ಅನುಮಾನದಿಂದಲೇ ಕಾಣುತ್ತಾರೆ. ಏಕೆಂದರೆ, ರಾಜಕೀಯ ಎನ್ನುವುದು ದಂಧೆಯಾಗಿದೆ. ಹಣ ಚೆಲ್ಲಿ ಹಣ ಪಡೆಯುವುದು ಎಂಬಂತಾಗಿದೆ.
 ರಾಷ್ಟ್ರೀಯ ಪಕ್ಷಗಳೇ ಚುನಾವಣೆಯಲ್ಲಿ ಎಷ್ಟೇ ಹಣ ಜಾತಿ,  ರಾಜಕೀಯ ಮಾಡಿದರೂ ಸೋಲುವುದನ್ನು ಕಾಣುತ್ತೇವೆ. ಹೀಗಿರುವಾಗ ಕೇವಲ ಬಣ್ಣದ ಮಾತಿನಿಂದ ಜನರನ್ನು ಮರುಳುಗೊಳಿಸಲು ಸಾಧ್ಯವಿಲ್ಲ ಎನ್ನುವುದು ಉಪೇಂದ್ರ ಅವರಿಗೆ ಗೊತ್ತಿಲ್ಲದೇ ಇಲ್ಲ. ಆದರೂ ಇದರಲ್ಲೇನೋ ವಿಶೇಷತೆ ಇದೆ ಎಂದೆನಿಸದಿರದು. ತಮ್ಮ ಹಲವು ಸಿನಿಮಾಗಳಲ್ಲಿ ರಾಜಕೀಯದ ವ್ಯಂಗ್ಯೋಕ್ತಿಯನ್ನು ಮತ್ತು ಕನಸಿನ ಸಾಮ್ರಾಜ್ಯವನ್ನು ತೋರಿಸುತ್ತಲೇ ಬಂದಿರುವ ಉಪೇಂದ್ರ ಅವರಿಗೆ ಬಹು ದಿನಗಳ ಹಿಂದೆಯೇ ರಾಜಕೀಯ ಸೇರುವ ಆಸಕ್ತಿ ಉದ್ಭವಿಸಿತ್ತು. ಬಿಜೆಪಿ ಸೇರುವರೆಂಬ ಚರ್ಚೆಯೂ ನಡೆದಿತ್ತು. ಆದರೆ ಇದಕ್ಕೆ ಅಷ್ಟೊಂದು ಮನ್ನಣೆ ಸಿಗಲೇ ಇಲ್ಲ. ರಾಜ್ಯಕ್ಕೆ ಒಂದೆಡೆ ಎಐಸಿಸಿ ಉಪಾಧ್ಯಕ್ಷ  ರಾಹುಲ್ ಗಾಂಧಿ, ಇನ್ನೊಂದೆಡೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಂದ ದಿನವನ್ನೇ ತಮ್ಮ ಭವಿಷ್ಯತ್ತಿನ ರಾಜಕೀಯ ಸಂಘಟನೆಯ ಬಗ್ಗೆ ಮಾಹಿತಿ ಹೊರಗೆಡವಿ ಹೊಸ ಪಕ್ಷ ಸ್ಥಾಪಿಸುವ ಘೋಷಣೆ ಮಾಡಿದ್ದಾರೆ.
 ವಿಶೇಷವೆಂದರೆ, ಉಪೇಂದ್ರ ಅವರ ಈ ಘೋಷಣೆಯಿಂದ ಯಾರಲ್ಲೂ ಸಂಚಲನವಾಗಿಲ್ಲ. ಎಲ್ಲ ಪಕ್ಷದ ಮುಖಂಡರು ರಾಜಕೀಯ ಶುದ್ಧೀಕರಣವಾಗಬೇಕೆನ್ನುವ ಉಪೇಂದ್ರ ಅವರ ಮಾತನ್ನು ಸ್ವಾಗತಿಸಿದ್ದಾರೆ.  ಅಂದರೆ ರಾಜಕೀಯ ವ್ಯವಸ್ಥೆ  ಸರಿ ಇಲ್ಲ ಎನ್ನುವುದನ್ನು ಒಪ್ಪಿಕೊಂಡಂತಾಗಿದೆ. ದುರಂತವೆಂದರೆ, ಇದನ್ನು ಶುದ್ಧೀಕರಿಸಲು ರಾಜಕೀಯ ಪಕ್ಷದವರು ಏಕೆ ಮುಂದಾಗುತ್ತಿಲ್ಲ. ಹೊಸಬರು ರಾಜಕೀಯಕ್ಕೆ ಬಂದರೆ ಅವರು ಬೆಳೆಯುವುದು ಕನಸಿನ ಮಾತು. ರಜದ್ದಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೇ ಪಕ್ಷಗಳು ಸದಾ ಕಾದಾಡುತ್ತವೆ. ಆದರೆ ಯಾರಲ್ಲೂ ಹೊಸತನದ ರಾಜಕೀಯ ಚಿಂತನೆ ಮೂಡಿಸಿಕೊಳ್ಳಬೇಕೆಂಬ ಇಚ್ಛಾಶಕ್ತಿಯೇ ಇಲ್ಲ. ತಮ್ಮದೇ ಆದ ಭ್ರಷ್ಟಾಚಾರ, ಹಗರಣಗಳ ಮಧ್ಯೆಯೂ ಮತ್ತೆ ಮತ್ತೆ ಆಡಳಿತಕ್ಕೆ ಬರುತ್ತ ರಾಜ್ಯವನ್ನಾಳುತ್ತಿವೆ. ಹಾಗಾದರೆ ಜನರಿಗೇಕೆ ಹೊಸತನ ತರಬೇಕೆಂಬ ಆಸೆಯಿಲ್ಲ ಎಂಬ ಪ್ರಶ್ನೆ ಉದ್ಭವವಾಗುತ್ತದೆ.
 ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂದು ಎಲ್ಲರೂ ಹೇಳುತ್ತೇವೆ. ಆದರೆ ಅದು ಮತ ಚಲಾಯಿಸುವವರೆಗೆ ಮಾತ್ರ. ಆನಂತರ ಆಯ್ಕೆಯಾದವರೇ ಪ್ರಭುಗಳಾಗಿ ಬಿಡುತ್ತಿದ್ದಾರೆ. ಇದು ಇಂದಿನ ಪ್ರಜಾಪ್ರಭುತ್ವದ ದುರಂತ. ಇದೇನೆ ಇರಲಿ, ಉಪೇಂದ್ರ ಅವರ ಮುಂದಿನ ಹೆಜ್ಜೆಯ ಮೇಲೆ ಅವರ ಪಕ್ಷದ ಅಥವಾ ಸಂಘಟನೆಯ ಭವಿಷ್ಯ ನಿಂತಿರುತ್ತದೆ. ಬಿಸಿರಕ್ತದ ಯುವಕರು ಮತ್ತು ಉಪ್ಪಿ ಅಭಿಮಾನಿಗಳ ದಂಡು ಇದನ್ನು ಬೆಂಬಲಿಸಬಹುದು. ಆದರೆ ಇಲ್ಲೂ ಒಂದು ಸಮಸ್ಯೆಯಿದೆ ಅದೆಂದರೆ, ಉಪ್ಪಿ ಹೇಳಿದಂತೆ ಪರೀಕ್ಷೆ ಬರೆದು ರಾಜಕೀಯ ಸೇರುವ ಪರಿಸ್ಥಿತಿಯನ್ನು ಯಾರೂ ಒಪ್ಪುವುದಿಲ್ಲ. ಉಪ್ಪಿ ಪರೀಕ್ಷೆ ಬರೆದು ಬನ್ನಿ ಎಂದರೆ ನಾವು ಬೇರೆ ಪಕ್ಷಕ್ಕೆ ಹೋಗುತ್ತೇವೆ. ಅಲ್ಲಿ ಸದಾ ತೆರೆದ ಬಾಗಿಲ ಸ್ವಾಗತವಿದೆ ಎಂದು ಹೇಳಬಹುದಲ್ಲವೆ?  ಇಂತಹ  ಪರಿಕಲ್ಪನೆ ಕೇಳಲಷ್ಟೇ ಚೆಂದ.
ಕರ್ನಾಟಕದಲ್ಲಿ ಸಿನಿಮಾ ನಟರು ರಾಜಕೀಯಕ್ಕಿಳಿದ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಕೆಲವರು ಸಚಿವರೂ, ಶಾಸಕರೂ, ಕೇಂದ್ರ ಸಚಿವರೂ  ಆದರು. ಆದರೆ ಮುಂದೇನಾದರು, ಯಾವ ಸುಧಾರಣೆ ತಂದರು. ಉತ್ತಮ ಹೆಸರುಗಳಿಸಿದರೇ ಎಂಬೆಲ್ಲ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಹೊಸ ಸಾಧನೆಗೆ ಕಾಲಿಡುವಾಗ ಸಾಧಿಸುವ ಕನಸನ್ನೇನೋ ಕಾಣುತ್ತೇವೆ. ಆದರೆ ಆನಂತರ ಹಣದ ಮದ ನಮ್ಮನ್ನು ದಾರಿತಪ್ಪಿಸಿ, ನಾವು ಬಂದ ಉದ್ದೇಶವನ್ನೆ ಮರೆಯಿಸಿಬಿಡುತ್ತದೆ. ಕೊನೆಗೆ ನಮ್ಮನ್ನೂ ಆ ಕ್ಷೇತ್ರದಿಂದ ಮತದಾರ ದೂರವಿಡುವಂತೆ ಮಾಡುತ್ತದೆ.  
ರಿಯಲ್ ಸ್ಟಾರ್ ಅವರ ಯೋಚನೆಗಳು ಇನ್ನು ರಿಯಲ್ ವರ್ಲ್ಡ್‌ಗೆ ಕಾಲಿಡಬೇಕಿದೆ. ಉತ್ತಮ ಮತ್ತು ನಿಜಕ್ಕೂ ರಾಜಕೀಯದಲ್ಲಿ ಆಗಲೇಬೇಕಾದ ಯೋಚನಾಲಹರಿಯನ್ನು ಹರಿಯಬಿಟ್ಟಿದ್ದಾರೆ. ಇದನ್ನು ಮತದಾರ ಬೆಂಬಲಿಸುತ್ತಾನೋ, ತಿರಸ್ಕರಿಸುತ್ತಾನೋ ಕಾದು ನೊಡೋಣ.
ಕೊನೆಯದಾಗಿ,  ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯವಿಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಪಕ್ಷ ಕಟ್ಟಿ ಯಶಸ್ಸು ಕಂಡವರು ದೇವರಾಜ ಅರಸು ಒಬ್ಬರೇ. ಅದೂ ಅವರೂ ಸಹ ಕೊನೆಗೆ ಒಂಟಿಯಾಗಿ ಇರುವಂತಾಯಿತು. ಬಂಗಾರಪ್ಪ, ಯಡಿಯೂರಪ್ಪ ಮೊದಲಾದವರು ತಮ್ಮ ಯತ್ನ ನಡೆಸಿ ಮತ್ತೆ ತವರಿಗೆ ಮರಳಿದ್ದಾರೆ. ಆದರೆ, ಅಂದಿನದಕ್ಕೂ ಇಂದಿನದಕ್ಕ್ಕೂ ಒಂದು ವ್ಯತ್ಯಾಸವಿದೆ. ಅದೆಂದರೆ, ಈವರೆಗೆ ಪಕ್ಷ ಕಟ್ಟಿದವರಲ್ಲಿ ಬಹುತೇಕರು ರಾಜಕೀಯ ಅನುಭವಿಗಳೇ ಆಗಿದ್ದರು. ಉಪ್ಪಿ ರಾಜಕೀಯ ಹಿನ್ನೆಲೆಯಿಂದ ಬಂದವರಲ್ಲ. ಏಕ ವ್ಯಕ್ತಿಯಾಗಿ ಕಾರ್ಯಕರ್ತರೊಂದಿಗೆ ಹೊರಟಿದ್ದಾರೆ. ಸಾಧನೆ ಮಾಡಿದರೆ ಹೊಸ ಇತಿಹಾಸ ಬರೆದಂತಾಗುತ್ತದೆ. ಇಲ್ಲವಾದಲ್ಲಿ ಮತ್ತೆ ಇತಿಹಾಸ ಮರುಕಳಿಸಿದಂತಾಗುತ್ತದೆ.
.............................

Tuesday, 8 August 2017

’ಸ್ಮಾರ್ಟ್ ಸಿಟಿ’ಯಲ್ಲಿ ಗರಿಷ್ಠಮಟ್ಟದ  ’ಪಾರ್ಕಿಂಗ್ ಸಮಸ್ಯೆ 


  

 ಶಿವಮೊಗ್ಗ ನಗರದ ರಸ್ತೆಗಳ ಅಂಚಿನಲ್ಲಿ  ವಾಹನಗಳ ನಿಲುಗಡೆ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಸಮರ್ಪಕ ಟ್ರಾಫಿಕ್ ವ್ಯವಸ್ಥೆ ಹಾಗೂ ವಾಹನ ಮಾಲಕರೂ ಕಂಡಕಂಡಲ್ಲಿ  ನಿಲ್ಲಿಸುವುದರಿಂದ ಸಮಸ್ಯೆ ಒಂದೆಡೆ ಹೆಚುತ್ತಿದ್ದರೆ, ಇನ್ನೊಂದೆಡೆ ಒತ್ತುವರಿ ಮೂಲಕ ಬಹುಮಹಡಿ ಕಟ್ಟಡ ಕಟ್ಟುವವರೂ ತಮ್ಮ ಕಾಣಿಕೆ ನೀಡುತ್ತಿದ್ದಾರೆ. ಇದನ್ನು ನಿಗ್ರಹಿಸಬೇಕಾದ  ಪಾಲಿಕೆ ಮತ್ತು ಸ್ಬುಡಾ ಮೌನಿಯಾಗಿವೆ. ಪ್ರತಿಯೊಂದರಲ್ಲೂ ಪ್ರಭಾವಿಗಳೇ ಮೇಲುಗೈ ಸಾಧಿಸುವುದರಿಂದ, ಲಂಚಾವತಾರ ಮಿತಿಮೀರಿರುವುದರಿಂದ ಕಟ್ಟಡಗಳು ಹೇಗೆ ಬೇಕೋ ಹಾಗೆ ತಲೆಎತ್ತುತ್ತಿವೆ. ಸಾಮಾನ್ಯ ನಾಗರಿಕರು ಪ್ರಶ್ನಿಸುವ ಧ್ವನಿಯನ್ನು ಕಳೆದುಕೊಂಡಿದ್ದಾರೆ. ಕೆಲವು ಹೋರಾಟಗಾರರು ಅಲ್ಲೊಮ್ಮೆ, ಇಲ್ಲೊಮ್ಮೆ ಮನವಿ ಸಲ್ಲಿಸಿ, ಹೇಳಿಕೆ ನೀಡಿ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿರುವರಾದರೂ ಅದು ಪ್ರಯೋಜನಕ್ಕೆ ಬರುತ್ತಿಲ್ಲ.  

 ಸ್ಮಾರ್ಟ್ ಸಿಟಿಯಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ ಪಾರ್ಕಿಂಗ್ ಪ್ರಾಬ್ಲಂ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಜನಸಂಖ್ಯೆ, ವಿಸ್ತಾರವಾಗುತ್ತಿರುವ ನಗರ ವ್ಯಾಪ್ತಿ, ದಿನೆ ದಿನೇ ಹೆಚ್ಚುತ್ತಿರುವ ವಾಹನಗಳು, ಅವೈಜ್ಞಾನಿಕವಾಗಿ ನಿರ್ಮಾಣಗೊಳ್ಳುತ್ತಿರುವ ರಸ್ತೆಗಳು... ಇದರಿಂದ ವಾಹನಗಳ ನಿಲುಗಡೆ (ಪಾರ್ಕಿಂಗ್) ಗೆ ಸ್ಥಳಾವಕಾಶವೇ ಇಲ್ಲದಂತಹ ಪರಿಸ್ಥಿತಿ.
ಇದು ಪ್ರಸ್ತುತ ಶಿವಮೊಗ್ಗ ನಗರದಲ್ಲಿರುವ ದುಃಸ್ಥಿತಿ. ನಗರದಲ್ಲಿ ಸುಗಮ ವಾಹನ ಸಂಚಾರ ದಿನೆ ದಿನೇ ದುಸ್ತರವಾಗಿ ಪರಿಣಮಿಸುತ್ತಿದೆ. ರಸ್ತೆಗಳಲ್ಲಿ ಪಾರ್ಕಿಂಗ್‌ಗೆ ಸೂಕ್ತ ಸ್ಥಳವಾಕಾಶದ ಕೊರತೆಯಿಂದ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವಂತಾಗಿದೆ. ಇದರಿಂದ ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗಿರುವುದರ ಜೊತೆಗೆ, ಸಾಕಷ್ಟು ಕಿರಿಕಿರಿಗೂ ಕಾರಣವಾಗುತ್ತಿದೆ.
 ಕೆಲವು ವರ್ಷಗಳಿಂದ ನಗರದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ರಸ್ತೆಗಳು ಮೇಲ್ದರ್ಜೆಗೇರುತ್ತಿವೆ. ಆದರೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ, ಯಾವುದೇ ವೈಜ್ಞಾನಿಕ ಕ್ರಮ ಪಾಲನೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಯಾವುದೇ ಮುಂದಾಲೋಚನೆ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇದರಿಂದ ನಗರದ ಮುಖ್ಯ ರಸ್ತೆಗಳು ಮಾತ್ರವಲ್ಲ, ಅವುಗಳಿಗೆ ಹೊಂದಿಕೊಂಡಂತಿರುವ ಸಮಾನಾಂತರ ರಸ್ತೆಗಳಲ್ಲಿ ಸಮರ್ಪಕವಾದ ವಾಹನಗಳ ನಿಲುಗಡೆ ವ್ಯವಸ್ಥೆಯೇ ಇಲ್ಲದಂತಾಗಿದೆ.
 ವಾಹನ ಮಾಲಕರು ಎಲ್ಲೆಂದರಲ್ಲಿ ವಾಹನ ನಿಲ್ಲಿಸುವಂತಾಗಿದೆ. ಕೆಲವೊಮ್ಮೆ ಪಾರ್ಕಿಂಗ್ ವಿಷಯದಲ್ಲಿಯೇ ವಾಹನ ಮಾಲೀಕರ ನಡುವೆಯೇ ಗಲಾಟೆಗಳಾಗುತ್ತಿವೆ. ಮತ್ತೆ ಕೆಲವು ರಸ್ತೆಗಳಲ್ಲಿ ವ್ಯಾಪಾರ-ವ್ಯವಹಾರಕ್ಕೆ ಅಡ್ಡಿಯಾಗುತ್ತದೆ ಎಂದು ಆರೋಪಿಸಿ, ತಮ್ಮ ಅಂಗಡಿ-ಮುಂಗ್ಗಟ್ಟುಗಳ ಮುಂಭಾಗ ವಾಹನಗಳ ನಿಲುಗಡೆಗೆ ಕೆಲವು ವರ್ತಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಕೆಲವೊಮ್ಮೆ ವರ್ತಕರು - ವಾಹನ ಮಾಲೀಕರ ನಡುವೆ ವಾಗ್ವಾದ, ಮಾತಿನ ಚಕಮಕಿಯೂ ಸರ್ವೇಸಮಾನ್ಯ ಎಂಬಂತಾಗಿದೆ.
ಅವೈಜ್ಞಾನಿಕ ಬೆಳವಣಿಗೆ:
 ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆಯಲ್ಲಿ ಅನುಮೋದಿತವಾಗುವ ನಕ್ಷೆಗೆ ಅನುಗುಣವಾಗಿ ನಗರದಲ್ಲಿ ಕಟ್ಟಡಗಳ ನಿರ್ಮಾಣ ಕಾರ್ಯ ನಡೆಯುತ್ತಿಲ್ಲ. ಕಟ್ಟಡ ನಕ್ಷೆಯನ್ನು ಅನುಮೋದಿಸಿಕೊಳ್ಳುವ ವೇಳೆ ಕೆಳ ಅಂತಸ್ತಿನಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ತೋರಿಸುತ್ತವೆ. ಆದರೆ ತದನಂತರ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ನಗರದ ಹೃದಯ ಭಾಗಗಳಲ್ಲಿ ವಾಣಿಜ್ಯ, ವಸತಿ ಪ್ರದೇಶಗಳ ನಡುವೆ ಅಂತರವೇ ಕಡಿಮೆಯಾಗುತ್ತಿದೆ. ವಸತಿ ಪ್ರದೇಶಗಳಲ್ಲಿಯೂ ದೊಡ್ಡ ದೊಡ್ಡ ವಾಣಿಜ್ಯ ಸಂಕೀರ್ಣಗಳು ನಿರ್ಮಾಣವಾಗುತ್ತಿವೆ. ಇದರಿಂದಲೂ ನಗರದ ಸಣ್ಣಪುಟ್ಟ ರಸ್ತೆಗಳಲ್ಲಿಯೂ ಸಂಚಾರ ದಟ್ಟಣೆ ವಿಪರೀತ ಮಟ್ಟಕ್ಕೆ ತಲುಪುವಂತಾಗಿದೆ.
ನಗರದಲ್ಲಿ ನಿರ್ಮಾಣವಾಗುವ ಬಹುಮಹಡಿ ವಾಣಿಜ್ಯ ಸಂಕೀರ್ಣಗಳು ಕನಿಷ್ಠ ನೀತಿ-ನಿಯಮಗಳನ್ನು ಪಾಲಿಸುತ್ತಿಲ್ಲ. ಎಲ್ಲ ನಿಯಮಗಳನ್ನು ಗಾಳಿಗೆ ತೂರುತ್ತಿವೆ. ಬಹುತೇಕ ಬೃಹತ್ ವಾಣಿಜ್ಯ ಸಂಕೀರ್ಣ ಕಟ್ಟಡಗಳ ನಿರ್ಮಾಣದಲ್ಲಿ ಸೆಟ್‌ಬ್ಯಾಕ್ ನಿಯಮಗಳ ಉಲ್ಲಂಘನೆ ಮಾಡಲಾಗುತ್ತಿದೆ. ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳವಾಕಾಶವನ್ನೇ ಮೀಸಲಿಡುತ್ತಿಲ್ಲವಾಗಿದೆ.
ಅವೈಜ್ಞಾನಿಕ ನಿರ್ಮಾಣ:
ಏಳೆಂಟು ವರ್ಷಗಳ ಅವಧಿಯಲ್ಲಿ ಶಿವಮೊಗ್ಗದ ರಸ್ತೆಗಳ ಅಭಿವೃದ್ಧಿಗೆ ನೂರಾರು ಕೋಟಿ ರೂ. ಮೊತ್ತ ವಿನಿಯೋಗಿಸಲಾಗಿದೆ. ಆದರೆ ಒಂದೇ ಒಂದು ರಸ್ತೆ ಯೋಜನಾಬದ್ದವಾಗಿ ನಿರ್ಮಾಣವಾಗಿಲ್ಲ. ಯಾವೊಂದು ರಸ್ತೆಯೂ ವೈಜ್ಞಾನಿಕವಾಗಿಲ್ಲ. ಇದಕ್ಕೆ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ, ಬೇಜವಾಬ್ದಾರಿ ಧೋರಣೆ ಸಾಕ್ಷಿಯಾಗಿದೆ. ರಸ್ತೆಗಳ ವಿಸ್ತರಣೆ ವೇಳೆ ಸಂಬಂಧಪಟ್ಟ ಅಧಿಕಾರಿಗಳು ವಾಹನ ನಿಲುಗಡೆಗೆ ಯಾವುದೇ ಕ್ರಮಬದ್ದ ಯೋಜನೆ ರೂಪಿಸುತ್ತಿಲ್ಲ. ಸ್ಥಳೀಯ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಬೇಕಾಬಿಟ್ಟಿಯಾಗಿ ಯೋಜನೆಗಳನ್ನು ಜಾರಿ ಮಾಡುತ್ತಿದ್ದಾರೆ.
  ಜೊತೆಗೆ ಪರ್ಯಾಯ ಮಾರ್ಗವನ್ನೂ ಕಂಡುಹಿಡಿಯುತ್ತಿಲ್ಲ. ಇನ್ನಾದರೂ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಸ್ಥಳೀಯ ಜನಪ್ರತಿನಿಧಿಗಳು, ಯೋಜನೆಗಳ ನೀತಿನಿರೂಪಕರು ಎಚ್ಚೆತ್ತುಕೊಳ್ಳಬೇಕಾಗಿದೆ. ನಗರದ ಭವಿಷ್ಯದ ಬೆಳವಣಿಗೆಯ ದೃಷ್ಟಿಯನ್ನಿಟ್ಟುಕೊಂಡು ಯೋಜನೆ ರೂಪಿಸಬೇಕಾಗಿದೆ. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುವುದು ನಿಜ.


 ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ನಗರದ ಕೆಲವು ಬಹು ಮಹಡಿ ವಾಣಿಜ್ಯ ಸಂಕೀರ್ಣಗಳು ವಾಹನಗಳ ನಿಲುಗಡೆಗೆ ಮೀಸಲಿಟ್ಟ ಜಾಗವನ್ನು ರಾಜಾರೋಷವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿವೆ. ಇಂತಹ ವಾಣಿಜ್ಯ ಮಳಿಗೆಗಳನ್ನು ಪ್ರಶ್ನಿಸುವ ಗೋಜಿಗೆ ಆಡಳಿತ ವ್ಯವಸ್ಥೆ ಹೋಗದಿರುವುದು, ಜಾಣ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಇನ್ನಾದರೂ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕು. ಒತ್ತಡ, ಪ್ರಭಾವಕ್ಕೆ ಮಣಿಯದೆ ಕಾರ್ಯನಿರ್ವಹಣೆ ಮಾಡಬೇಕಿದೆ.
- ಕಲ್ಲೂರು ಮೇಘರಾಜ, ಹೋರಾಟಗಾರ
------------------------------

Monday, 7 August 2017

ಸಾವಿನ ರಹದಾರಿ ಸಾಗರ ರಸ್ತೆ


 ಆಗಬೇಕಾದದ್ದು ಏನು?
..................................
* ಖಾಸಗಿ ಬಸ್‌ಗಳಿಗೆ ವೇಗದ ಮೇಲೆ ನಿಯಂತ್ರಣ ಹೇರಬೇಕು.
*  ಅಶಿಸ್ತಿನಿಂದ, ಮಿತಿಮೀರಿದ ವೇಗದಲ್ಲಿ ಚಾಲನೆ ಮಾಡುವ ಚಾಲಕರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು. 
* ಚಾಲನಾ ಪರವಾನಿಗೆ ಇಲ್ಲದವರು ಮತ್ತು ಸಮವಸ್ತ್ರ ಇಲ್ಲದ ಚಾಲಕ, ಕಂಡಕ್ಟರ್ ಬಸ್‌ನಲ್ಲಿ ಕೆಲಸದಲ್ಲಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಬೇಕು. 
*  ವಿಶೇಷವಾಗಿ ಸಾಗರ ರಸ್ತೆಯಲ್ಲಿ ಪೊಲೀಸ್ ಹಾಗೂ ಆರ್‌ಟಿಓದವರು ನಿಯಮಿತವಾಗಿ ಸಂಚರಿಸಿ, ನಿಯಮ ಉಲ್ಲಂಘಿಸುವ ಚಾಲಕರನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು. 
* ಒಮ್ಮೆ ಎಚ್ಚರಿಕೆ ಕೊಟ್ಟ ನಂತರವೂ ಕೆಟ್ಟ ಚಾಳಿಯನ್ನೇ ಮುಂದುವರೆಸಿದರೆ ಮಾಲಕರನ್ನು ಕರೆದು ತಿಳಿಹೇಳಬೇಕು. ಆಗಾಗ ಮಾಲಕರ ಜೊತೆ ಸಭೆ ನಡೆಸಿ ಮಾಹಿತಿ ಪಡೆಯುತ್ತಿರಬೇಕು. 
*  ರಸ್ತೆಯ ಇಕ್ಕೆಲಗಳಲ್ಲಿ ವೇಗ ಮಿತಿಯ ಇನ್ನಷ್ಟು ಎಚ್ಚರಿಕೆಯ ಫಲಕಗಳನ್ನು ಹಾಕಬೇಕು.
* ಸಾರ್ವಜನಿಕರು ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. 
* ವಿದ್ಯಾರ್ಥಿಗಳು ಕೇವಲ ಬಸ್‌ಪಾಸ್‌ಗಾಗಿ ಮಾತ್ರ ಹೋರಾಟ ಮಾಡದೆ ತಮ್ಮ ಗ್ರಾಮದ ಮೂಲಕ ಸಂಚರಿಸುವ ಬಸ್‌ನಲ್ಲಿ ಪ್ರಯಾಣಿಸುವ ಮನೋಭಾವ ಬೆಳೆಸಿಕೊಳ್ಳಬೇಕು. 
* ಸರ್ಕಾರಿ ಬಸ್ ನಿಲ್ದಾಣದ ಅಧಿಕಾರಿಗಳು ನಿದ್ದೆ ಬಿಟ್ಟು ಎದ್ದೇಳಬೇಕು. ಮಾರ್ಗ ಸಂಚಾರ ಮಾಡಿ ಆಗುತ್ತಿರುವ ತೊಂದರೆ ಗಮನಿಸಿ ಪರಿಹರಿಸುವ ಕ್ರಮ ಜರುಗಿಸಬೇಕು. 



 ಸರ್ಕಾರಿ ಬಸ್ ಬೇಡ, ಶಾಲೆ ಬೇಡ, ಆಸ್ಪತ್ರೆ ಬೇಡ, ಆದರೆ ನೌಕರಿ ಮಾತ್ರ ಸರ್ಕಾರಿಯದ್ದಾಗಿರಬೇಕು.
ಇದು ಸಾರ್ವಜನಿಕರ ಮನೋಭಾವ. ಇದರಿಂದಾಗಿ ಸರ್ಕಾರಿ ಸ್ವಾಮ್ಯದಲ್ಲಿರುವ ಶಾಲೆ ಮುಚ್ಚುತ್ತಿದೆ, ಬಸ್ ನಿಲುಗಡೆ ಆಗುತ್ತಿದೆ, ಆಸ್ಪತ್ರೆಗಳಿಗೆ ಬರುವವರೇ ಕಡಿಮೆಯಾಗುತ್ತಿದ್ದಾರೆ. ಆದರೆ ಉತ್ತಮ ಮತ್ತು ಕಡಿಮೆ ದರದಲ್ಲಿ ವಿದ್ಯಾಭ್ಯಾಸ, ಸಂಚಾರ, ಚಿಕಿತ್ಸೆ ದೊರೆತರೂ ಅದೂ ಬೇಡ. ಈ  ಮಾತನ್ನು ಹೇಳಲೇಕಾದ ಸಂದರ್ಭ ಎದುರಾಗಿದೆ.
ಶಿವಮೊಗ್ಗದಿಂದ ಸಾಗರಕ್ಕೆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸದಂತಹ ಭೀಕರ ಅನುಭವ ಪ್ರಯಾಣಿಕರಿಗಾಗುತ್ತಿದೆ. ಬೆಂಗಳೂರು- ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206  ಸಂಭವಿಸುತ್ತಿರುವ ರಸ್ತೆ ಅಪಘಾತದ ಅವಲೋಕನ ಮಾಡಿದರೆ ಈ ರಸ್ತೆಯಲ್ಲಿ ಸಂಚರಿಸುವುದೇ ಬೇಡ ಎನ್ನುವಂತಾಗುತ್ತಿದೆ.  ಸಾಗರ- ಶಿವಮೊಗ್ಗ ಮಧ್ಯೆ ಸಂಚರಿಸುವ ಖಾಸಗಿ ಬಸ್‌ಗಳ ರೌದ್ರನರ್ತನ ಹೆಚ್ಚುತ್ತಿದೆ. ಇದರಿಂದ ಹೆಚ್ಚು ಹೆಚ್ಚು ಸಾವು ಘಟಿಸುತ್ತಿದೆ. ಯಮದೂತನ ರೀತಿಯ ಬಸ್‌ಗಳು ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಲೇ ಈ ರಸ್ತೆಯನ್ನು ತಮ್ಮ ಆಡುಂಬೊಲವನ್ನಾಗಿ ಮಾಡಿಕೊಡಂತಿದೆ.
ಶನಿವಾರ ಮಧ್ಯಾಹ್ನ ಸಾಗರ ತಾಲೂಕಿನ ಆನಂದಪುರ ಸಮೀಪದ  ಆಚಾಪುರ ಗ್ರಾಮದಲ್ಲಿ ನಡೆದ ಅಪಘಾದಲ್ಲಿ ಏಳು ಜನರು ಸಾವಿಗೀಡಾಗಿದ್ದಾರೆ. ಎಂತಹವರನ್ನೂ ಬೆಚ್ಚಿಬೀಳಿಸುವ ಘಟನೆ ಇದು. ಖಾಸಗಿ ಬಸ್‌ಗಳ ಮಿತಿಮೀರಿದ ವೇಗ ಮತ್ತು ಬೇಜವಾಬ್ದಾರಿತನದ ಚಾಲನೆಯಿಂದಾಗಿ ಈ ಹೆದ್ದಾರಿಯಲ್ಲಿ ಸಂಚರಿಸುವವರು ಜೀವವನ್ನು ಕೈಯಲ್ಲಿ ಹಿಡಿದುಕೊಳ್ಳುವಂತೆ ಮಾಡಿವೆ. ಶಿವಮೊಗ್ಗ ಮೂಲದ ಖಾಸಗಿ ಬಸ್ ಕಂಪನಿಯೊಂದರ ಬಸ್‌ಗಳೇ ತಿಂಗಳಿಗೆ ಸರಾಸರಿ 3ರಿಂದ 4 ಅಪಘಾತ ಎಸಗಿ ಹತ್ತಾರು ಜನರನ್ನು ಬಲಿಹಾಕುತ್ತಿವೆ. ಆದರೂ ಅಧಿಕಾರಿಗಳು ಕಂಪನಿ ವಿರುದ್ಧ ಕ್ರಮ ಜರುಗಿಸಿಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯದಿಂದ ಅಪಘಾತ ಮತ್ತು ಸಾವಿನ ಪ್ರಮಾಣ ಏರುಗತಿಯಲ್ಲೇ ಇದೆ.
ಖಾಸಗಿ ಬಸ್‌ಗಳಿಗೆ ಕಡಿವಾಣ ಹಾಕದಿರುವ ಸಂಬಂಧಿತ ಇಲಾಖೆಯ ವರ್ತನೆ ಈಗ ಸಿಡಿದೇಳುವ ಮಟ್ಟಕ್ಕೆ ಬಂದಿದೆ. ಅಮಾಯಕರು ಎಲ್ಲಿಂದಲೋ ಯಾತ್ರೆ, ಪ್ರವಾಸ, ಮದುವೆ ಮೊದಲಾದ ಕಾರ್ಯಕ್ಕೆ ಬಂದು ಬಲಿಯಾಗುತ್ತಿರುವ ಬಗ್ಗೆ ಗ್ರ್ರಾಮಸ್ಥರು ಕೆಂಡಕಾರುತ್ತಿದ್ದಾರೆ. ಇವೆಲ್ಲಕ್ಕೂ ಮುನ್ನ ಉದ್ಭವಿಸುವ ಪ್ರಶ್ನೆ ಎಂದರೆ ಒಂದೇ ಕಂಪನಿಯ ಬಸ್ ಪದೇ ಪದೇ ಅಪಘಾತ ಎಸಗುವುದೇಕೆ ಎನ್ನುವುದು. ಚಾಲಕನ ನಿರ್ಲಕ್ಷ್ಯ ಹಾಗೂ ಬೇಜವಬ್ದಾರಿ, ಅನನುಭವ, ಇನ್ನೊಂದು ಬಸ್‌ಗೆ ಪ್ರಯಾಣಿಕರು ಸಿಗಬಾರದೆಂದು ಮಿತಿಮೀರಿದ ವೇಗದಲ್ಲಿ ಚಾಲನೆ ಮಾಡುವುದು ಇವೆಲ್ಲ ಕಾರಣವಾಗಿವೆ ಎನ್ನುವುದು ಈ ರಸ್ತೆಯಲ್ಲಿ ಸಂಚರಿಸುವಾಗ ಕಂಡುಬರುತ್ತದೆ. ಹೀಗಿದ್ದರೂ ಅದೇ ಬಸ್‌ನ್ನು ಕಾದು ಕುಳಿತು ಏರುವ ಪ್ರಯಾಣಿಕರು ಸಾಕಷ್ಟಿದ್ದಾರೆ.
ಸಂಬಂಧಿತ ಕಂಪನಿ ಸತ್ತ ಪ್ರಯಾಣಿಕರಿಗೆ ಪೈಸೆಯಷ್ಟೂ ಪರಿಹಾರವನ್ನೂ ಕೊಡುವುದಿಲ್ಲ. ಖಾಸಗಿಯವರ ಇತಿಹಾಸವೇ ಇದು. ನಿಗದಿತ ವೇಳೆಗಿಂತ ಸ್ವಲ್ಪ ತಡವಾಗಿ ಹೊರಡುತ್ತಾರೆ. ಆನಂತರ ಹೆದ್ದಾರಿಯಲ್ಲಿ ಯಮವೇಗದಲ್ಲಿ ಸಾಗಿ ಹಲವರ ಜೀವ ತೆಗೆಯುತ್ತಾರೆ. ಇಷ್ಟೆಲ್ಲ ಆದರೂ ಸಂಬಂಧಿತ ಬಸ್ ಮಾಲಕರ ಸಭೆ ಕರೆದು ಕ್ರಮ ಕೈಗೊಳ್ಳದೆ ಅಧಿಕಾರಿಗಳು ಮೌನವಹಿಸಿರುವುದು ಹಲವು ಪ್ರಶ್ನೆಯನ್ನುಂಟು ಮಾಡುತ್ತಿದೆ.
ಕೆಲವು ಬಸ್ ಚಾಲಕರು ಗ್ರಾಮಗಳ ಭಾಗಗಳಲ್ಲಿಯೂ ಅತಿವೇಗವಾಗಿಯೇ ಬಸ್ ಚಾಲನೆ ಮಾಡುತ್ತಾರೆ. ವೇಗ ನಿಯಂತ್ರಣಗೊಳಿಸಲು ಮುಂದಾಗುವುದಿಲ್ಲ. ಕಿವಿಗಡಚಕ್ಕುವ ರೀತಿಯಲ್ಲಿ ಹಾರನ್ ಮಾಡುತ್ತಾರೆ. ಖಾಸಗಿ ಬಸ್‌ಗಳು ಆಗಮಿಸುವ ವೇಳೆ ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟಬೇಕಾದಂತಹ, ವಾಹನ ಚಾಲನೆ ಮಾಡಬೇಕಾದ ಸ್ಥಿತಿಯಿದೆ. ಆ ಮಟ್ಟಿಗೆ ಅಜಾಗರೂಕವಾಗಿ ಬಸ್ ಚಲಾಯಿಸುತ್ತಾರೆ. ಇವರನ್ನು ಹೇಳುವವರು ಕೇಳುವವರ‌್ಯಾರೂ  ಇಲ್ಲ ಎಂದು ದೂರುವವವರೇ ಮಾರನೆಯ ದಿನ ಅದೇ ಬಸ್‌ಗೆ ತೆರಳುತ್ತಾರೆ.
ಕೆಲವು ಖಾಸಗಿ ಬಸ್ ಚಾಲಕರು ಚಾಲನೆಯ ವೇಳೆಯಲ್ಲಿಯೇ ಮೊಬೈಲ್ ಪೋನ್ ಬಳಕೆ ಮಾಡುವ ಆರೋಪವೂ ಇದೆ. ಎದುರು ಅಥವಾ ಅಕ್ಕಪಕ್ಕದ ಆಸನದಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಅಥವಾ ಯುವತಿಯರನ್ನು ಕೂಡ್ರಿಸಿಕೊಂಡು ಅವರೊಂದಿಗೆ ಚೆಲ್ಲಾಟವಾಡುವವರೂ ಇದ್ದಾರೆ. ಟಿಕೆಟ್ ಕೊಡುವವರಂತೂ ಹರಿಹಾಯುವುದನ್ನೇ ರೂಢಿಸಿಕೊಂಡಿದ್ದಾರೆ. ಸೌಜನ್ಯ, ತಾಳ್ಮೆ, ಗೌರವ ಕೊಡುವುದು ಇವರಲ್ಲಿಲ್ಲ. ಆದರೂ ನಮ್ಮವರಿಗೆ ಖಾಸಗಿ ಬಸ್ ಅಂದರೆ ಸರ್ಕಾರಿ ಕೆಲಸದಷ್ಟೇ ಜೀವ!.
ಈ ಮಾರ್ಗದಲ್ಲಿ ಸರ್ಕಾರಿ ಬಸ್  ಸಂಚಾರ ಆರಂಭವಾಗಿ ಬಹಳೇ ತಿಂಗಳು ಕಳೆದಿದೆ. ಸಾರ್ವಜನಿಕರು ಇದಕ್ಕೆ ಮಹತ್ವವವನ್ನೇ ಕೊಡುವುದಿಲ್ಲ. ಸುರಕ್ಷಿತ ಪ್ರಯಾಣವನ್ನು, ವಿಮೆಯನ್ನು ಇದರಲ್ಲಿ ಪಡೆಯಬಹುದಾದರೂ, ತಮಗೆ ಬೇಕಾದಲ್ಲಿ, ತಮ್ಮ ಮನೆ ಮುಂದೆ ನಿಲ್ಲಿಸುವುದಿಲ್ಲ. ಆಪ್ತರಿಗೆ ಕಡಿಮೆ ದರ ಅಥವಾ ಪುಕ್ಕಟೆಯಾಗಿ ಕರದೊಯ್ಯುವುದಿಲ್ಲ ಎಂಬ ಚಿಂತನೆ ಅವರದ್ದು.  ಇದನ್ನೇ ಬಂಡವಾಳ ಮಾಡಿಕೊಂಡ ಹಲವರು ತಮ್ಮ ದಿನನಿತ್ಯದ ಕೆಲಸ, ವ್ಯಾಪಾರ, ವಹಿವಾಟುಗಳಿಗೆ ಬರುವವರು ಅದೇ ಖಾಸಗಿ ಬಸ್‌ಗೆ ಆಸನ ಭರ್ತಿಯಾಗಿದ್ದರೂ ನಿಂತುಕೊಂಡಾದರೂ ಬರುತ್ತಾರೆ.
 ಖಾಸಗಿಯವರಂತೂ ಸರ್ಕಾರಿ ಬಸ್ ಕಂಡರೆ ಅದು ಸ್ಟಾಪ್‌ನಲ್ಲಿ ನಿಲ್ಲಲೂ ಬಿಡುವುದಿಲ್ಲ. ಸಾಗರದ ಖಾಸಗಿ ಬಸ್ ನಿಲ್ದಾಣದ ಬಳಿ ಪ್ರಯಾಣಿಕರನ್ನು ತುಂಬಿಸಿಕೊಳ್ಳಲೂ ಅವಕಾಶ ಕೊಡುವುದಿಲ್ಲ. ಇದೇಕೆ ನಮ್ಮ ಅಧಿಕಾರಿಗಳಿಗೆ ಗೊತ್ತಾಗುವುದಿಲ್ಲ. ಇಲ್ಲಿ ಕೆಎಸ್ಸಾರ್ಟಿಸಿ ಅಧಿಕಾರಿಗಳೂ ಜಡ್ಡುಗಟ್ಟಿದ ವಾತಾವರದಿಂದ ಎಚ್ಚರಗೊಳ್ಳುವ ಅವಶ್ಯಕತೆ ಇದೆ. ಪೈಪೋಟಿಯನ್ನು ಎದುರಿಸಲು ಸನ್ನದ್ಧವಾಗಬೇಕಿದೆ. ಸರ್ಕಾರಿ ಕೆಲಸ ಎಂದು ಮೈಮರೆತರೆ ನಷ್ಟ ಜನರಿಗೆ ಮತ್ತು ಇಲಾಖೆಗೆ. ಇನ್ನೊಂದು ಡಿಪೊ ಬಸ್ ಬಂದರೆ ಅದಕ್ಕೆ ಸ್ವಲ್ಪ ಹೊತ್ತು ಕಾಯಲೂ ಅವಕಾಶ ಕೊಡದ ಸಾಗರ ಬಸ್‌ನಿಲ್ದಾಣದ ಅಧಿಕಾರಿಗಳಿಗೇಕೆ ಇದು ಅರ್ಥವಾಗುವುದಿಲ್ಲ? ತಮ್ಮದೇ ಡಿಪೊ ಬಸ್‌ಗಳಿಗೆ ಆಗುತ್ತಿರುವ ತೊಂದರೆಯನ್ನು ಇವರಿಗೇಕೆ ಪರಿಹರಿಸಲು ಆಗುವುದಿಲ್ಲ?
 ಸರ್ಕಾರಿ ಬಸ್‌ನಲ್ಲಿ ಅತಿ ಕಡಿಮೆ ದರವಿದೆ (43 ರೂ.) ಬೆಂಗಳೂರು, ಮೈಸೂರು, ಧರ್ಮಸ್ಥಳ ಇನ್ನಿತರೆಡೆ ಸಾಗುವ ಸುಮಾರು 25ಕ್ಕೂ ಹೆಚ್ಚು ಎಕ್ಸ್‌ಪ್ರೆಸ್ ಬಸ್‌ಗಳಿಗೆ  60 ಮತ್ತು 65 ರೂ ದರವಿದೆ. ಈ ಬಸ್ ಸಹ ಒಂದೂವರೆ ಗಂಟೆೆಗೆ ಸಾಗರದಿಂದ ಶಿವಮೊಗ್ಗಕ್ಕೆ ಅಂದರೆ ಖಾಸಗಿ ಬಸ್‌ನಷ್ಟೇ ವೇಳೆಯಲ್ಲಿ ಬರುತ್ತವೆ. ಆದರೆ ನಮ್ಮ ಜನರಿಗೆ ಸರ್ಕಾರಿ ಬಸ್ ಬೇಡ. ಹಲವು ಗ್ರಾಮಸ್ಥರು ತಮ್ಮ ಊರಿನ ಮೂಲಕ ಸರ್ಕಾರಿ ಬಸ್ ಬಿಡಿ ಎಂದು ಆಗ್ರಹಿಸುತ್ತಾರೆ. ಆದರೆ ಬಸ್ ಸಂಚಾರ ಆರಂಭಿಸಿದ ನಂತರ ಅದರಲ್ಲಿ  ಪ್ರಯಾಣಿಸುವುದೇ ಇಲ್ಲ. ಇದು ನಮ್ಮ ಜನರ ನೀತಿ.

ಬಾಕ್ಸ್

ಆಗಬೇಕಾದದ್ದು ಏನು?
..................................
* ಖಾಸಗಿ ಬಸ್‌ಗಳಿಗೆ ವೇಗದ ಮೇಲೆ ನಿಯಂತ್ರಣ ಹೇರಬೇಕು.
*  ಅಶಿಸ್ತಿನಿಂದ, ಮಿತಿಮೀರಿದ ವೇಗದಲ್ಲಿ ಚಾಲನೆ ಮಾಡುವ ಚಾಲಕರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು.
* ಚಾಲನಾ ಪರವಾನಿಗೆ ಇಲ್ಲದವರು ಮತ್ತು ಸಮವಸ್ತ್ರ ಇಲ್ಲದ ಚಾಲಕ, ಕಂಡಕ್ಟರ್ ಬಸ್‌ನಲ್ಲಿ ಕೆಲಸದಲ್ಲಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಬೇಕು.
*  ವಿಶೇಷವಾಗಿ ಸಾಗರ ರಸ್ತೆಯಲ್ಲಿ ಪೊಲೀಸ್ ಹಾಗೂ ಆರ್‌ಟಿಓದವರು ನಿಯಮಿತವಾಗಿ ಸಂಚರಿಸಿ, ನಿಯಮ ಉಲ್ಲಂಘಿಸುವ ಚಾಲಕರನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು.
* ಒಮ್ಮೆ ಎಚ್ಚರಿಕೆ ಕೊಟ್ಟ ನಂತರವೂ ಕೆಟ್ಟ ಚಾಳಿಯನ್ನೇ ಮುಂದುವರೆಸಿದರೆ ಮಾಲಕರನ್ನು ಕರೆದು ತಿಳಿಹೇಳಬೇಕು. ಆಗಾಗ ಮಾಲಕರ ಜೊತೆ ಸಭೆ ನಡೆಸಿ ಮಾಹಿತಿ ಪಡೆಯುತ್ತಿರಬೇಕು.
*  ರಸ್ತೆಯ ಇಕ್ಕೆಲಗಳಲ್ಲಿ ವೇಗ ಮಿತಿಯ ಇನ್ನಷ್ಟು ಎಚ್ಚರಿಕೆಯ ಫಲಕಗಳನ್ನು ಹಾಕಬೇಕು.
* ಸಾರ್ವಜನಿಕರು ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.
* ವಿದ್ಯಾರ್ಥಿಗಳು ಕೇವಲ ಬಸ್‌ಪಾಸ್‌ಗಾಗಿ ಮಾತ್ರ ಹೋರಾಟ ಮಾಡದೆ ತಮ್ಮ ಗ್ರಾಮದ ಮೂಲಕ ಸಂಚರಿಸುವ ಬಸ್‌ನಲ್ಲಿ ಪ್ರಯಾಣಿಸುವ ಮನೋಭಾವ ಬೆಳೆಸಿಕೊಳ್ಳಬೇಕು.
* ಸರ್ಕಾರಿ ಬಸ್ ನಿಲ್ದಾಣದ ಅಧಿಕಾರಿಗಳು ನಿದ್ದೆ ಬಿಟ್ಟು ಎದ್ದೇಳಬೇಕು. ಮಾರ್ಗ ಸಂಚಾರ ಮಾಡಿ ಆಗುತ್ತಿರುವ ತೊಂದರೆ ಗಮನಿಸಿ ಪರಿಹರಿಸುವ ಕ್ರಮ ಜರುಗಿಸಬೇಕು.
---------------------------------

Friday, 4 August 2017

’ಸ್ಮಾರ್ಟ್ ಸಿಟಿ’ಯಲ್ಲಿ ಗರಿಷ್ಠಮಟ್ಟದ  ’ಪಾರ್ಕಿಂಗ್ ಸಮಸ್ಯೆ 


 
 ಶಿವಮೊಗ್ಗ ನಗರದ ರಸ್ತೆಗಳ ಅಂಚಿನಲ್ಲಿ  ವಾಹನಗಳ ನಿಲುಗಡೆ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಸಮರ್ಪಕ ಟ್ರಾಫಿಕ್ ವ್ಯವಸ್ಥೆ ಹಾಗೂ ವಾಹನ ಮಾಲಕರೂ ಕಂಡಕಂಡಲ್ಲಿ  ನಿಲ್ಲಿಸುವುದರಿಂದ ಸಮಸ್ಯೆ ಒಂದೆಡೆ ಹೆಚುತ್ತಿದ್ದರೆ, ಇನ್ನೊಂದೆಡೆ ಒತ್ತುವರಿ ಮೂಲಕ ಬಹುಮಹಡಿ ಕಟ್ಟಡ ಕಟ್ಟುವವರೂ ತಮ್ಮ ಕಾಣಿಕೆ ನೀಡುತ್ತಿದ್ದಾರೆ. ಇದನ್ನು ನಿಗ್ರಹಿಸಬೇಕಾದ  ಪಾಲಿಕೆ ಮತ್ತು ಸ್ಬುಡಾ ಮೌನಿಯಾಗಿವೆ. ಪ್ರತಿಯೊಂದರಲ್ಲೂ ಪ್ರಭಾವಿಗಳೇ ಮೇಲುಗೈ ಸಾಧಿಸುವುದರಿಂದ, ಲಂಚಾವತಾರ ಮಿತಿಮೀರಿರುವುದರಿಂದ ಕಟ್ಟಡಗಳು ಹೇಗೆ ಬೇಕೋ ಹಾಗೆ ತಲೆಎತ್ತುತ್ತಿವೆ. ಸಾಮಾನ್ಯ ನಾಗರಿಕರು ಪ್ರಶ್ನಿಸುವ ಧ್ವನಿಯನ್ನು ಕಳೆದುಕೊಂಡಿದ್ದಾರೆ. ಕೆಲವು ಹೋರಾಟಗಾರರು ಅಲ್ಲೊಮ್ಮೆ, ಇಲ್ಲೊಮ್ಮೆ ಮನವಿ ಸಲ್ಲಿಸಿ, ಹೇಳಿಕೆ ನೀಡಿ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿರುವರಾದರೂ ಅದು ಪ್ರಯೋಜನಕ್ಕೆ ಬರುತ್ತಿಲ್ಲ.  

* ದತ್ತಾತ್ರೇಯ ಹೆಗಡೆ


 ಸ್ಮಾರ್ಟ್ ಸಿಟಿಯಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ ಪಾರ್ಕಿಂಗ್ ಪ್ರಾಬ್ಲಂ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಜನಸಂಖ್ಯೆ, ವಿಸ್ತಾರವಾಗುತ್ತಿರುವ ನಗರ ವ್ಯಾಪ್ತಿ, ದಿನೆ ದಿನೇ ಹೆಚ್ಚುತ್ತಿರುವ ವಾಹನಗಳು, ಅವೈಜ್ಞಾನಿಕವಾಗಿ ನಿರ್ಮಾಣಗೊಳ್ಳುತ್ತಿರುವ ರಸ್ತೆಗಳು... ಇದರಿಂದ ವಾಹನಗಳ ನಿಲುಗಡೆ (ಪಾರ್ಕಿಂಗ್) ಗೆ ಸ್ಥಳಾವಕಾಶವೇ ಇಲ್ಲದಂತಹ ಪರಿಸ್ಥಿತಿ.
ಇದು ಪ್ರಸ್ತುತ ಶಿವಮೊಗ್ಗ ನಗರದಲ್ಲಿರುವ ದುಃಸ್ಥಿತಿ. ನಗರದಲ್ಲಿ ಸುಗಮ ವಾಹನ ಸಂಚಾರ ದಿನೆ ದಿನೇ ದುಸ್ತರವಾಗಿ ಪರಿಣಮಿಸುತ್ತಿದೆ. ರಸ್ತೆಗಳಲ್ಲಿ ಪಾರ್ಕಿಂಗ್‌ಗೆ ಸೂಕ್ತ ಸ್ಥಳವಾಕಾಶದ ಕೊರತೆಯಿಂದ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವಂತಾಗಿದೆ. ಇದರಿಂದ ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗಿರುವುದರ ಜೊತೆಗೆ, ಸಾಕಷ್ಟು ಕಿರಿಕಿರಿಗೂ ಕಾರಣವಾಗುತ್ತಿದೆ.
 ಕೆಲವು ವರ್ಷಗಳಿಂದ ನಗರದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ರಸ್ತೆಗಳು ಮೇಲ್ದರ್ಜೆಗೇರುತ್ತಿವೆ. ಆದರೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ, ಯಾವುದೇ ವೈಜ್ಞಾನಿಕ ಕ್ರಮ ಪಾಲನೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಯಾವುದೇ ಮುಂದಾಲೋಚನೆ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇದರಿಂದ ನಗರದ ಮುಖ್ಯ ರಸ್ತೆಗಳು ಮಾತ್ರವಲ್ಲ, ಅವುಗಳಿಗೆ ಹೊಂದಿಕೊಂಡಂತಿರುವ ಸಮಾನಾಂತರ ರಸ್ತೆಗಳಲ್ಲಿ ಸಮರ್ಪಕವಾದ ವಾಹನಗಳ ನಿಲುಗಡೆ ವ್ಯವಸ್ಥೆಯೇ ಇಲ್ಲದಂತಾಗಿದೆ.
 ವಾಹನ ಮಾಲಕರು ಎಲ್ಲೆಂದರಲ್ಲಿ ವಾಹನ ನಿಲ್ಲಿಸುವಂತಾಗಿದೆ. ಕೆಲವೊಮ್ಮೆ ಪಾರ್ಕಿಂಗ್ ವಿಷಯದಲ್ಲಿಯೇ ವಾಹನ ಮಾಲೀಕರ ನಡುವೆಯೇ ಗಲಾಟೆಗಳಾಗುತ್ತಿವೆ. ಮತ್ತೆ ಕೆಲವು ರಸ್ತೆಗಳಲ್ಲಿ ವ್ಯಾಪಾರ-ವ್ಯವಹಾರಕ್ಕೆ ಅಡ್ಡಿಯಾಗುತ್ತದೆ ಎಂದು ಆರೋಪಿಸಿ, ತಮ್ಮ ಅಂಗಡಿ-ಮುಂಗ್ಗಟ್ಟುಗಳ ಮುಂಭಾಗ ವಾಹನಗಳ ನಿಲುಗಡೆಗೆ ಕೆಲವು ವರ್ತಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಕೆಲವೊಮ್ಮೆ ವರ್ತಕರು - ವಾಹನ ಮಾಲೀಕರ ನಡುವೆ ವಾಗ್ವಾದ, ಮಾತಿನ ಚಕಮಕಿಯೂ ಸರ್ವೇಸಮಾನ್ಯ ಎಂಬಂತಾಗಿದೆ.
ಅವೈಜ್ಞಾನಿಕ ಬೆಳವಣಿಗೆ:
 ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆಯಲ್ಲಿ ಅನುಮೋದಿತವಾಗುವ ನಕ್ಷೆಗೆ ಅನುಗುಣವಾಗಿ ನಗರದಲ್ಲಿ ಕಟ್ಟಡಗಳ ನಿರ್ಮಾಣ ಕಾರ್ಯ ನಡೆಯುತ್ತಿಲ್ಲ. ಕಟ್ಟಡ ನಕ್ಷೆಯನ್ನು ಅನುಮೋದಿಸಿಕೊಳ್ಳುವ ವೇಳೆ ಕೆಳ ಅಂತಸ್ತಿನಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ತೋರಿಸುತ್ತವೆ. ಆದರೆ ತದನಂತರ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ನಗರದ ಹೃದಯ ಭಾಗಗಳಲ್ಲಿ ವಾಣಿಜ್ಯ, ವಸತಿ ಪ್ರದೇಶಗಳ ನಡುವೆ ಅಂತರವೇ ಕಡಿಮೆಯಾಗುತ್ತಿದೆ. ವಸತಿ ಪ್ರದೇಶಗಳಲ್ಲಿಯೂ ದೊಡ್ಡ ದೊಡ್ಡ ವಾಣಿಜ್ಯ ಸಂಕೀರ್ಣಗಳು ನಿರ್ಮಾಣವಾಗುತ್ತಿವೆ. ಇದರಿಂದಲೂ ನಗರದ ಸಣ್ಣಪುಟ್ಟ ರಸ್ತೆಗಳಲ್ಲಿಯೂ ಸಂಚಾರ ದಟ್ಟಣೆ ವಿಪರೀತ ಮಟ್ಟಕ್ಕೆ ತಲುಪುವಂತಾಗಿದೆ.
ನಗರದಲ್ಲಿ ನಿರ್ಮಾಣವಾಗುವ ಬಹುಮಹಡಿ ವಾಣಿಜ್ಯ ಸಂಕೀರ್ಣಗಳು ಕನಿಷ್ಠ ನೀತಿ-ನಿಯಮಗಳನ್ನು ಪಾಲಿಸುತ್ತಿಲ್ಲ. ಎಲ್ಲ ನಿಯಮಗಳನ್ನು ಗಾಳಿಗೆ ತೂರುತ್ತಿವೆ. ಬಹುತೇಕ ಬೃಹತ್ ವಾಣಿಜ್ಯ ಸಂಕೀರ್ಣ ಕಟ್ಟಡಗಳ ನಿರ್ಮಾಣದಲ್ಲಿ ಸೆಟ್‌ಬ್ಯಾಕ್ ನಿಯಮಗಳ ಉಲ್ಲಂಘನೆ ಮಾಡಲಾಗುತ್ತಿದೆ. ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳವಾಕಾಶವನ್ನೇ ಮೀಸಲಿಡುತ್ತಿಲ್ಲವಾಗಿದೆ.
ಅವೈಜ್ಞಾನಿಕ ನಿರ್ಮಾಣ:
ಏಳೆಂಟು ವರ್ಷಗಳ ಅವಧಿಯಲ್ಲಿ ಶಿವಮೊಗ್ಗದ ರಸ್ತೆಗಳ ಅಭಿವೃದ್ಧಿಗೆ ನೂರಾರು ಕೋಟಿ ರೂ. ಮೊತ್ತ ವಿನಿಯೋಗಿಸಲಾಗಿದೆ. ಆದರೆ ಒಂದೇ ಒಂದು ರಸ್ತೆ ಯೋಜನಾಬದ್ದವಾಗಿ ನಿರ್ಮಾಣವಾಗಿಲ್ಲ. ಯಾವೊಂದು ರಸ್ತೆಯೂ ವೈಜ್ಞಾನಿಕವಾಗಿಲ್ಲ. ಇದಕ್ಕೆ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ, ಬೇಜವಾಬ್ದಾರಿ ಧೋರಣೆ ಸಾಕ್ಷಿಯಾಗಿದೆ. ರಸ್ತೆಗಳ ವಿಸ್ತರಣೆ ವೇಳೆ ಸಂಬಂಧಪಟ್ಟ ಅಧಿಕಾರಿಗಳು ವಾಹನ ನಿಲುಗಡೆಗೆ ಯಾವುದೇ ಕ್ರಮಬದ್ದ ಯೋಜನೆ ರೂಪಿಸುತ್ತಿಲ್ಲ. ಸ್ಥಳೀಯ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಬೇಕಾಬಿಟ್ಟಿಯಾಗಿ ಯೋಜನೆಗಳನ್ನು ಜಾರಿ ಮಾಡುತ್ತಿದ್ದಾರೆ.
  ಜೊತೆಗೆ ಪರ್ಯಾಯ ಮಾರ್ಗವನ್ನೂ ಕಂಡುಹಿಡಿಯುತ್ತಿಲ್ಲ. ಇನ್ನಾದರೂ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಸ್ಥಳೀಯ ಜನಪ್ರತಿನಿಧಿಗಳು, ಯೋಜನೆಗಳ ನೀತಿನಿರೂಪಕರು ಎಚ್ಚೆತ್ತುಕೊಳ್ಳಬೇಕಾಗಿದೆ. ನಗರದ ಭವಿಷ್ಯದ ಬೆಳವಣಿಗೆಯ ದೃಷ್ಟಿಯನ್ನಿಟ್ಟುಕೊಂಡು ಯೋಜನೆ ರೂಪಿಸಬೇಕಾಗಿದೆ. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುವುದು ನಿಜ.


 ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ನಗರದ ಕೆಲವು ಬಹು ಮಹಡಿ ವಾಣಿಜ್ಯ ಸಂಕೀರ್ಣಗಳು ವಾಹನಗಳ ನಿಲುಗಡೆಗೆ ಮೀಸಲಿಟ್ಟ ಜಾಗವನ್ನು ರಾಜಾರೋಷವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿವೆ. ಇಂತಹ ವಾಣಿಜ್ಯ ಮಳಿಗೆಗಳನ್ನು ಪ್ರಶ್ನಿಸುವ ಗೋಜಿಗೆ ಆಡಳಿತ ವ್ಯವಸ್ಥೆ ಹೋಗದಿರುವುದು, ಜಾಣ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಇನ್ನಾದರೂ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕು. ಒತ್ತಡ, ಪ್ರಭಾವಕ್ಕೆ ಮಣಿಯದೆ ಕಾರ್ಯನಿರ್ವಹಣೆ ಮಾಡಬೇಕಿದೆ.
- ಕಲ್ಲೂರು ಮೇಘರಾಜ, ಹೋರಾಟಗಾರ
------------------------------

Thursday, 3 August 2017

ನಕಲಿ  ಕಲಾವಿದರು ಪಟ್ಟಿ ಸೇರದಿರಲಿ 


ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಯೋಜನೆ ಇರಲಿ, ಅದು ವಿಫಲವಾಗುವುದು ಒಂದೋ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇಲ್ಲವೇ ನಕಲಿ ಫಲಾನುಭವಿಗಳಿಂದ. 
ಈಗ ಕೇಂದ್ರ ಸರ್ಕಾರವು ದೇಶದಾದ್ಯಂತದ ಕಲಾವಿದರ ಪಟ್ಟಿ ಮಾಡುವ ಯೋಜನೆಗೆ ಚಾಲನೆ ನೀಡಿದೆ. ಶಿವಮೊಗ್ಗ ಮೊದಲ ಹಂತದಲ್ಲೇ ಈ ಯೋಜನೆಗೆ ಆಯ್ಕೆಯಾಗಿ ಕೆಲಸ ಮುಗಿಸಿದೆ. ಈ ಪಟ್ಟಿಯಲ್ಲಿ ಕೆಲವು ನಕಲಿ ಕಲಾವಿದರು ನುಸುಳಿಕೊಂಡಿದ್ದಾರೆಂಬ ಆರೋಪ ಕೇಳಿಬರತೊಡಗಿದೆ. ಕಸಾಪದಲ್ಲಿ ಮುಂಚೂಣಿಯಲ್ಲಿದ್ದ  ಕೆಲವರು ಈ ಪಟ್ಟಿ ತಯಾರಿಗೆ ನಿಯುಕ್ತರಾಗಿದ್ದರಿಂದ  ದಾಖಲೆಯ ಪ್ರಮಾಣದ ಕಲಾವಿದರು ಶಿವಮೊಗ್ಗದಲ್ಲಿ ಕಂಡುಬಂದರೂ ಅಚ್ಚರಿಪಡಬೇಕಿಲ್ಲ. ದಾಖಲೆ ನಿರ್ಮಿಸಲು ಹೋಗಿ ನೈಜ ಕಲಾವಿದರಿಗೆ ಅನ್ಯಾಯವಾಗದಂತೆ ಇವರು ಪಟ್ಟಿ ರಚಿಸುವ ಕೆಲಸ ಮಾಡಿದ್ದರೆ ಸಾಕಿತ್ತು. 


ಕೇಂದ್ರ ಸಂಸ್ಕೃತಿ ಸಚಿವಾಲಯ ಒಂದು ಮಹತ್ವದ ಯೋಜನೆ ರೂಪಿಸಿದೆ. ಅದೆಂದರೆ, ದೇಶದಲ್ಲಿರುವ ಎಲ್ಲ ಕಲಾವಿದರ ಹೆಸರು, ವಿಳಾಸ, ಮತ್ತು ಅವರ ಕಲಾಕ್ಷೇತ್ರ  ಇವುಗಳನ್ನು ಪಟ್ಟಿ ಮಾಡಿ, ದೇಶದ ಸಾಂಸ್ಕೃತಿಕ ನಕ್ಷೆಯನ್ನು (ಕಲ್ಚರಲ್ ಮ್ಯಾಪಿಂಗ್ ಆಫ್ ಇಂಡಿಯಾ) ರೂಪಿಸಬೇಕೆನ್ನುವುದೇ ಈ ಯೋಜನೆ.
ಎಲ್ಲ ಪ್ರಕಾರದ ಜಾನಪದ ಕಲೆಗಳು, ಚಿತ್ರಕಲೆ, ಶಿಲ್ಪಕಲೆ,  ಸಾಹಿತ್ಯ, ನಾಟಕ, ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ವಾದನ, ಸುಗಮ ಸಂಗೀತ, ಹರಿಕಥೆ, ಗಮಕ, ಜಾದೂ, ರಂಗೋಲಿ, ಯಕ್ಷಗಾನ, ಬಯಲಾಟ, ಬೊಂಬೆಯಾಟ, ಛಾಯಾಗ್ರಹಣ, ಕರಕುಶಲ ಕಲೆ, ಬುಡಕಟ್ಟು ಕಲೆ- ಹೀಗೆ ಎಲ್ಲ ವಿಭಾಗಗಳನ್ನು ಒಳಗೊಳ್ಳುವ ಯೋಜನೆ ಇದಾಗಿದೆ. ದೇಶದ  7 ಜಿಲ್ಲೆಗಳಲ್ಲಿ ಇದನ್ನು ಪ್ರಪ್ರಥವಾಗಿ ಆರಂಭಿಸಲಾಗಿದೆ. ದಕ್ಷಿಣ ಭಾರತದಲ್ಲಿ ಶಿವಮೊಗ್ಗ ಜಿಲ್ಲೆ ಮಾತ್ರ ಆಯ್ಕೆಯಾಗಿದೆ. ಜಿಲ್ಲೆಯ ಎಲ್ಲ 7 ತಾಲೂಕಿನಲ್ಲಿ ವಿವಿಧ ಪ್ರಕಾರದ ಕಲಾವಿದರನ್ನು ನೊಂದಾಯಿಸಲು ಕಾರ್ಯಕರ್ತರನ್ನು ನೇಮಿಸಿ ಅವರಿಂದ ಪಟ್ಟಿ ಪಡೆಯಲಾಗಿದೆ. ಕಲಾವಿದರ ಹೆಸರು, ತಾಲೂಕು, ಸಂಪರ್ಕದ ದೂರವಾಣಿ, ಹೆಸರು ಮಾಡಿದ ಕಲಾಕ್ಷೇತ್ರ ಇತ್ಯಾದಿಗಳ ವಿವರನ್ನು ಅವರಿಂದಲೇ ಭರ್ತಿ ಮಾಡಿಸಿಕೊಳ್ಳಲಾಗಿದೆ.  ಕಾರ್ಯಕರ್ತರೂ ಹೆಚ್ಚು ಶ್ರಮ ವಹಿಸಿ ಈ ಪಟ್ಟಿ ತಯಾರಿಸಿದ್ದಾರೆ. ವಿಶೇಷವಾಗಿ, ಗ್ರಾಮಾಂತರ ಪ್ರದೇಶದಲ್ಲಿರುವ ಕಲಾವಿದರನ್ನು ಸಂಪರ್ಕಿಸಿ ಅವರಿಗೆ ಇದರ ಬಗ್ಗೆ ಮಾಹಿತಿ ಕೊಟ್ಟು ಅವರನ್ನು ನೊಂದಾಯಿಸುವ ಕೆಲಸ ಮಾಡಲಾಗಿದೆ.
ಆದರೆ ಈಗ ಉದ್ಭವಿಸಿರುವ ಶಂಕೆ ಏನೆಂದರೆ, ಈ ಯೋಜನೆಯ ದುರ್ಲಾಭ ಪಡೆಯಲು ನಕಲಿ ಕಲಾವಿದರು ಸೇರ್ಪಡೆಯಾಗಿರಬಹುದು ಎನ್ನುವುದು. ಅನೇಕ ಕಲಾವಿದರೇ ಈ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ತಾಲೂಕಿಗೂ ಕಲಾವಿದರ ನೊಂದಣಿ ಮತ್ತು ಮಾಹಿತಿಗಾಗಿ ಕಾರ್ಯಕರ್ತರನ್ನು ನೇಮಿಸಲಾಗಿತ್ತು. ಕೆಲವು ತಾಲೂಕಿಗೆ ಮೂರು, ನಾಲ್ಕು ಕಾರ್ಯಕರ್ತರಿದ್ದರು. ಸರ್ಕಾರದ ಸಹಾಯಧನ, ಅನುದಾನ, ಕಾರ್ಯಕ್ರಮ ನೀಡಲು ಅವಕಾಶ ಸಿಗುತ್ತದೆ ಎಂಬ ದೃಷ್ಟಿಯಲ್ಲಿ ಸೇರ್ಪಡೆಯಾಗಿರಬಹುದೆಂಬ ಅನುಮಾನ ಕಾಡತೊಡಗಿದೆ. ಏಕೆಂದರೆ ಸರ್ಕಾರದ ಬಹುತೇಕ ಯೋಜನೆಗಳನ್ನು ಹಳ್ಳ ಹಿಡಿಸುತ್ತಿರುವವರು ಮತ್ತು ದುರ್ಲಾಭ ಪಡೆಯುತ್ತಿರುವವರು ನಕಲಿಗಳು.
 ಎಲ್ಲೋ ಒಂದೆರಡು ಕಡೆ ಹಾಡಿರುವುದು, ನಾಟಕದಲ್ಲಿ ಅಭಿನಯಿಸಿರುವುದು, ಚಿತ್ರ ಬಿಡಿಸಿರುವುದು ಮೊದಲಾದವುಗಳ ಫೋಟೋ ತೋರಿಸಿ ತಾವೂ ಸಹ ಕಲಾವಿದರೆಂದು ಬಿಂಬಿಸಿ, ಹೆಸರು ಸೇರಿಸಿಕೊಂಡಿರುವ ಸಾಧ್ಯತೆ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಇಂತಹವರೇನಾದರೂ ಸೇರ್ಪಡೆಯಾದಲ್ಲಿ ನೈಜ ಕಲಾವಿದರಿಗೆ ಸಿಗಬೇಕಾದ ಸೌಕರ್ಯಗಳೆಲ್ಲವನ್ನು ಇವರು ಪಡೆದುಕೊಳ್ಳಲು ಪ್ರಭಾವ ಬೀರಬಹುದು. ಇದರಿಂದ ಈ ಲಿಸ್ಟ್ ಮಾಡುವ ಯೋಜನೆಗೆ ಕಪ್ಪು ಚುಕ್ಕೆ ಅಂಟಿದಂತಾಗುತ್ತದೆ.
ಆದ್ದರಿಂದ ಕಾರ್ಯಕರ್ತರು ಯಾವ ವಶೀಲಿ, ಪ್ರಭಾವ, ಪ್ರಲೋಭನೆಗೂ ಒಳಗಾಗದೆ ಪಟ್ಟಿ ತಯಾರಿಸುವ ಬಹುದೊಡ್ಡ ಜವಾಬ್ದಾರಿ ಇತ್ತು. ಜಾತಿ, ಧರ್ಮ, ಪಕ್ಷ, ಸಂಬಂಧ ಮೊದಲಾದವೇ ಹೆಚ್ಚು ಕೆಲಸವನ್ನು ಇಲ್ಲಿ ಮಾಡುತ್ತವೆ. ಯಾವ ಕ್ಷೇತ್ರವನ್ನೂ ಬಿಡದ  ಸ್ವಜನಪಕ್ಷಪಾತ, ಜಾತೀಯತೆ ಮತ್ತು ರಾಜಕೀಯ ಇಲ್ಲಿಯೂ ತೂರಿಕೊಳ್ಳದೆ ನ್ಯಾಯಯುತವಾಗಿ ಕಲಾವಿದರಿಗೆ ಸರ್ಕಾರದಿಂದ ದಕ್ಕಬೇಕಾದ ಸವಲತ್ತುಗಳು ಅಥವಾ ಇನ್ನಿತರೆ ನೆರವು ಸಿಗುವಂತಾದರೆ ಮಾತ್ರ ಈ ಯೋಜನೆ ಯಶಸ್ವಿಯಾಗಲು ಸಾಧ್ಯವಿದೆ. ಇಲ್ಲವಾದಲ್ಲಿ ಇಲ್ಲಿಯವರೆಗೆ ಜಾರಿಯಾದ ಬಹುತೇಕ ಯೋಜನೆಗಳಂತೆಯೇ ಇದೂ ಸಹ ಹತ್ತರ ಸಂಗಡ ಹನ್ನೊಂದು ಎಂಬಂತಾಗುವುದರಲ್ಲಿ ಅನುಮಾನವಿಲ್ಲ.
ಸರ್ಕಾರಿ ಸವಲತ್ತನ್ನು ಪಡೆಯಲು ಫಲಾನುಭವಿಗಳು ಅರ್ಹರು ಕಡಿಮೆ ಇದ್ದರೂ ಹೆಚ್ಚು ಜನರು ಆಸಕ್ತರಿರುತ್ತಾರೆ.  ಅದರಲ್ಲೂ ಪುಕ್ಕಟೆ ದೊರೆಯುವುದಾದರೆ ತನಗೂ ಒಂದಿರಲಿ, ತನ್ನ ಅಪ್ಪನಿಗೂ ಒಂದಿರಲಿ ಎನ್ನುವ ಮನೋಭಾವ ತೋರುವವರೇ ಅಧಿಕ. ಶಿವಮೊಗ್ಗದ ಕಲಾವಿದರ ಪಟ್ಟಿಯ (ಒಂದು ಬಣದ್ದು) ಜಾನಪದ ವಿಭಾಗದ ಮಾಹಿತಿ ದೊರೆತಿದ್ದು, ಇನ್ನೊಂದು ಬಣದ ಪಟ್ಟಿ ಲಭ್ಯವಾಗಬೇಕಿದೆ. ಎರಡೂ ಬಣದ ಪ್ರತಿಷ್ಠೆಯಲ್ಲಿ ಕಲಾವಿದರ ಸಂಖ್ಯೆ ಹೆಚ್ಚುವುದು ನಿಶ್ಚಿತ. ಕೆಲವರು ಅನಾಯಾಸವಾಗಿ ಸ್ಥಾನ ಪಡೆಯುವಂತಾದರೂ ಆಶ್ಚರ್ಯವೇನಿಲ್ಲ.
ಆದರೆ ಈ ನಕಲಿ ಕಲಾವಿದರ ಬಗ್ಗೆ ಸಾಂಸ್ಕೃತಿಕ ನಕ್ಷೆ ನಿರೂಪಣಾ ರಾಷ್ಟ್ರೀಯ ಮಿಷನ್‌ನ ರಾಜ್ಯ ಸದಸ್ಯ ಬಿ. ವಿ. ರಾಜಾರಾಮ ಹೇಳುವುದೇನೆಂದರೆ, ಕಾರ್ಯಕರ್ತರಿಗೆ ಸ್ಥಳೀಯ ಕಲಾವಿದರ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ. ಹಾಗಾಗಿಯೇ ಪ್ರತಿ ತಾಲೂಕಿಗೆ ಆಯಾಯ ತಾಲೂಕಿನವರನ್ನೇ ನೇಮಿಸಲಾಗಿದೆ. ಇಲ್ಲಿ ನಕಲಿಗಳು ಕಾಣಿಸಿಕೊಳ್ಳುವ ಸಾಧ್ಯತೆಯೇ ಇಲ್ಲ ಎನ್ನುತ್ತಾರೆ.
 ಏನೇ ಇದ್ದರೂ, ಪಟ್ಟಿ ಬಿಡುಗಡೆಯಾದ ನಂತರವೇ ಅಸಲಿ, ನಕಲಿಗಳ ಮಾಹಿತಿ ದೊರೆಯಲು ಸಾಧ್ಯ. ಕಲಾವಿದರ ಪಟ್ಟಿ ಮಾಡಿದ ಕಾರ್ಯಕರ್ತರು ಕೈಚಳಕ ತೋರಿದ್ದಾರೆಯೇ ಇಲ್ಲವೇ ಎನ್ನುವುದೂ ಸಹ ಆನಂತರವೇ ಗೊತ್ತಾಗಬೇಕಿದೆ. ಸರ್ಕಾರದ ಇಂತಹ ಯೋಜನೆ ಯಶಸ್ವಿಯಾಗುವುದೇ ಅದು ಅರ್ಹ ಫಲಾನುಭವಿಗಳಿಗೆ ತಲುಪಿದಾಗ. ಈ ನಿಟ್ಟಿನಲ್ಲಿ ಕಲಾವಿದರ ಆಯ್ಕೆ ಪಾರದರ್ಶಕವಾಗಿ ನಡೆದಿದೆ ಎಂದು  ಸದ್ಯ ಹೇಳಿಕೊಳ್ಳಬಹುದು. ಒಮ್ಮೆ ಪಟ್ಟಿಮಾಡಿದ ನಂತರ ನಕಲಿಗಳಿದ್ದರೆ, ಅವರನ್ನು ತೆಗೆದುಹಾಕುವುದು ಅಷ್ಟು ಸುಲಭದ ಕೆಲಸವಲ್ಲ. ಪಟ್ಟಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲ್ಪಡುವುದರಿಂದ ರಚನೆಯ ವೇಳೆಯೇ ಅಥವಾ ಜಿಲ್ಲಾ ಮಟ್ಟದಲ್ಲಿ ಪರಿಷ್ಕರಣೆ ಮಾಡುವಾಗಲೇ ವಿಚಕ್ಷಣೆ ಮಾಡುವುದು ಅಗತ್ಯವಾಗಿತ್ತು.
ಜಿಲ್ಲೆಯಲ್ಲಿ  ಕೇವಲ  ಜನಪದ ಕಲಾವಿದರ ನೋಂದಣಿಯೇ 1640ರಷ್ಟಾಗಿದೆ. ಶಿವಮೊಗ್ಗದಿಂದ 150 ಕ್ಕೂ ಹೆಚ್ಚು, ಭದ್ರಾವತಿಯಿಂದ 160, ಶಿಕಾರಿಪುರದಿಂದ  380 ಕ್ಕೂ ಹೆಚು,  ಸಾಗರದಿಂದ 200 ಕ್ಕೂ ಹೆಚ್ಚು, ಹೊಸನಗರ, ತೀರ್ಥಹಳ್ಳಿ ಮತ್ತು ಸೊರಬದಿಂದ ತಲಾ  250 ಕ್ಕೂ ಹೆಚ್ಚು  ಕಲಾವಿದರನ್ನು ನೋಂದಾಯಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇನ್ನುಳಿದ ಕಲಾವಿದರನ್ನು ಸೇರಿಸಿದರೆ ಸುಮಾರು 5 ಸಾವಿರದ ಗಡಿ ದಾಟಬಹುದೇನೊ.  ಜಿಲ್ಲೆಯಲ್ಲಿ ಜನಪದ ಕಲಾವಿದರು ಹೆಚ್ಚು ಪ್ರಮಾಣದಲ್ಲಿದ್ದಾರೆನ್ನುವುದು ಒಪ್ಪತಕ್ಕದ್ದಾದರೂ ಇಷ್ಟೊಂದು ಪ್ರಮಾಣದಲ್ಲಿದ್ದಾರೆಂದರೆ ಆಶ್ಚರ್ಯವಾಗುತ್ತದೆ. ಇಲ್ಲಿ ಕಲಾವಿದರನ್ನು ಆಯ್ಕೆ ಮಾಡಲು ಗುರಿ ಕೊಟ್ಟಂತೆ ಕಾಣುತ್ತಿದೆ. ಅಥವಾ ಮೇಲಾಟದ ಮೂಲಕ ನೊಂದಾಯಿಸಿರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಕಲಾವಿದರ ಆಯ್ಕೆಗೆ ಮಾನದಂಡ ವಿಶೇಷವಾಗಿ ಹೇಳಿಕೊಳ್ಳುವಂತಹದ್ದು ಇಲ್ಲದ ಕಾರಣ ಮೇಲೆ ಹೇಳಿದಂತೆ ಒಮ್ಮೆ ಆ ಕ್ಷೇತ್ರದಲ್ಲಿ ಕಾಣಿಸಿಕೊಂಡವರೆಲ್ಲ ಕಲಾವಿದರಾಗಿ ನುಸುಳಿರಬಹುದು. ಇದೇನೇ ಇರಲಿ, ಪಟ್ಟಿ ತಯಾರಿಗೆ ನಿಯುಕ್ತರಾದವರು ಬಹಳ ಶ್ರಮಪಟ್ಟು, ನಿಷ್ಠೆಯಿಂದ ಮಾಡಿದ ‘‘ಹೆಚ್ಚು’’ ಕೆಲಸವನ್ನು ಮೆಚ್ಚಲೇಬೇಕು!
............................................