Thursday, 27 July 2017




ಮೌನತಪಸ್ವಿ ಕೂಡಲಿ ಜಗನ್ನಾಥ ಶಾಸ್ತ್ರಿ  



ಮಲೆನಾಡಿನ ಜ್ಞಾನದ ಖನಿ, ಧಾರ್ಮಿಕ, ಸಾಹಿತ್ಯಿಕ, ಅಧ್ಯಾತ್ಮ, ಕಲಾ ಮಾರ್ಗದರ್ಶಕರಾಗಿದ್ದ ಹಿರಿಯ ಚೇತನ ಕೂಡಲಿ ಜಗನ್ನಾಥ ಶಾಸ್ತ್ರಿಗಳು ನಿನ್ನೆ ಪರಮಪದ ಸೇರಿದ್ದಾರೆ. ಸ್ನೇಹಜೀವಿಯಾಗಿದ್ದ ಈ ಮಹಾನ್ ಹಿರಿಯ ಚೇತನಕ್ಕೆ  ನುಡಿನಮನ


ಶಿವಮೊಗ್ಗ: ನೋಡಲು ಸಣಕಲು ಹಾಗೂ ಎತ್ತರದ ದೇಹ. ಆದರೆ ಅವರ ಮನಸು ಮಾತ್ರ ತುಂಬಿದ ಮನೆಯಂತಿತ್ತು. ಯಾರನ್ನೂ ನೋಯಿಸದ, ತಮ್ಮನ್ನು ಕಾಣಲು ಬಂದವರೊಂದಿಗೆ ವಿಚಾರ ವಿನಿಮಯ ಮಾಡುತ್ತಿದ್ದ ಅವರು ಸ್ಫೂರ್ತಿಯ ಸೆಲೆಯಾಗಿದ್ದ ಚೇತನ. ಅಂತಹ ಮಹಾನ್ ಚೇತನವೇ ಕೂಡಲಿ ಜಗನ್ನಾಥ ಶಾಸ್ತ್ರಿಗಳು.
ಅಧ್ಯಾತ್ಮ, ಸಾಹಿತ್ಯ, ಕಲೆ ಮಾರ್ಗದರ್ಶನ ಹಾಗೂ ತಮ್ಮ ಚಿಂತನೆಯ ಮೂಲಕ ಸಾಕಷ್ಟು ಧರ್ಮಕಾರ್ಯಗಳನ್ನು ಮಾಡುತ್ತ, ಜನಮನದಲ್ಲಿ ಹೊಸ ವಿಚಾರಗಳನ್ನು ಬರೆವಣಿಗೆ ಮೂಲಕ ಬಿತ್ತುತ್ತಾ ಅಚ್ಚಳಿಯದೆ ನಿಂತ ಸಾಧಕರಲ್ಲಿ ಶಾಸ್ತ್ರಿಯವರು ಒಬ್ಬರು.
ತುರಂಗ ಭಾರತ, ಕವಿ ಪರಮದೇವ ಕೃತಿಯ ಬಗ್ಗೆ ಸಾಹಿತ್ಯ ಮತ್ತು ಧಾರ್ಮಿಕ ವಲಯದಲ್ಲಿ ಕೇಳದವರಿಲ್ಲ. ಕೇವಲ ಕೃತಿಯೊಂದೇ ಕೆಲವರಿಗೆ ಹೆಸರನ್ನು ತಂದು ಕೊಡುತ್ತದೆ. ಇನ್ನೂ ಕೆಲವರಿಗೆ ಅವರ ಕೃತಿಯ ಜೊತೆ ಸಾಧನೆಯೂ ಗರಿಮೆಗೆ, ಜನಮನ್ನಣೆಗೆ ಕಾರಣವಾಗುತ್ತದೆ. ಇಂತಹ ಮನ್ನಣೆ ಪಡೆದವರಲ್ಲಿ ಕೂಡಲಿ ಜಗನ್ನಾಥ ಶಾಸ್ತ್ರಿಗಳು ಪ್ರಮುಖರು.
ಶಾಸ್ತ್ರಿಯವರು 89ರ ಹರಯದಲ್ಲಿ ನಿನ್ನೆ ಅಸೌಖ್ಯದಿಂದ ನಿಧನರಾಗಿದ್ದಾರೆ. ವಿದ್ವಾಂಸರಾಗಿ,  ಉಪನ್ಯಾಸಕರಾಗಿ, ಧಾರ್ಮಿಕ ಮತ್ತು ಅಧ್ಯಾತ್ಮಿಕ ಕ್ಷೇತ್ರದಲ್ಲಿ ಹೆಸರು ಮಾಡಿದವರು ಅವರು. ಹೆಸರಿಗಾಗಿ ಎಂದೂ ಹೋರಾಟ ಮಾಡಿದವರಲ್ಲ. ಮೌನತಪಸ್ವಿಯಂತಿದ್ದ ಅವರ ಬರೆಹ ಮತ್ತು ಅಪೂರ್ವ ಬುದ್ಧಿವಂತಿಯೇ ಅವರ ಹೆಸರನ್ನು ಮೇಲಕ್ಕೇರಿಸಿದೆ.
ಇಳಿವಯಸ್ಸಿನಲ್ಲೂ ಅವರು ಬರೆಹ ಮತ್ತು ಓದಿನಲ್ಲೇ ಹೆಚ್ಚು ಕಾಲ ವ್ಯಯಿಸುತ್ತಿದ್ದರು. ನಗರದಲ್ಲಿ ಯಾವುದೇ ಪ್ರಮುಖ ಧಾರ್ಮಿಕ ಕಾರ್ಯಕ್ರಮವಿರಲಿ, ಅದಕ್ಕೆ ಅವರಿಗೆ ತಪ್ಪದೇ ಆಹ್ವಾನವಿರುತ್ತಿತ್ತು. ಅದರಂತೆ ಅವರ ಉಪಸ್ಥಿತಿಯೂ ಇರುತ್ತಿತ್ತು. ಅಷ್ಟರ ಮಟ್ಟಿಗೆ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಅನೇಕ ಸಂಶೋಧನಾ ಪ್ರಬಂಧಗಳನ್ನು ಬರೆಯುವ ಮೂಲಕ ತಮ್ಮಲ್ಲಿರುವ ಅಪಾರ ಜ್ಞಾನವನ್ನು ಹೊರ ಜಗತ್ತಿಗೆ ನೀಡಿದ್ದಾರೆ. ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಪಂಡಿತರಾಗಿದ್ದಲ್ಲದೆ, ಸಂಸ್ಕೃತದಲ್ಲೂ ಅಗಾಧ ಪಾರಮ್ಯ ಮೆರೆದಿದ್ದರು.
ಇತ್ತೀಚೆಗೆ ಅನಾರೋಗ್ಯಕ್ಕೀಡಾಗಿದ್ದರೂ ತಮ್ಮ ಯಾವುದೇ ಕೆಲಸದಿಂದ ಅವರು ವಿಮುಖರಾಗಿರಲಿಲ್ಲ. ಸದಾ ಓದುವುದು, ಬರೆಯುವುದು ಅವರ  ಕೆಲಸವಾಗಿತ್ತು. ವಿಶೇಷವಾಗಿ ಧಾರ್ಮಿಕ ಗ್ರಂಥಗಳ ಬಗ್ಗೆ ಆಸಕ್ತಿ ಹೊಂದಿದ್ದರು.
ಶಬರಿ ದರ್ಶನ, ಪರಮದೇವ, ಶ್ರೀ ಜಗದ್ಗುರು ಪರಂಪರೆಯ ದರ್ಶನ ಮುಂತಾದ ಕೃತಿಗಳ ಮೂಲಕವೇ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಪ್ರಾಚೀನ ಗ್ರಂಥಗಳನ್ನು ಸಂಪಾದಿಸಿದ್ದ ಅವರು, ಶಿವಮೊಗ್ಗದ ಕೆಲವು ಪತ್ರಿಕೆಗಳಲ್ಲಿ ಅಂಕಣಕಾರರಾಗಿದ್ದರು. ವಾಗ್ಮಿ, ಲೇಖಕ, ಚಿಂತಕ, ಸಂಶೋಧಕರಾಗಿ ಮನ್ನಣೆ ಗಳಿಸಿದ್ದರು.
ಮೂಲತಃ ತಾಲೂಕಿನ ಗಡಿಭಾಗದಲ್ಲಿರುವ ಚಿಕ್ಕಕೂಡ್ಲಿಯವರಾದ ಶಾಸ್ತ್ರಿ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, ಪದೋನ್ನತಿ ಮೂಲಕ ಪದವಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದರು. ಬೋಧನಾ ವೃತ್ತಿಯ ಜೊತೆಗೆ ಐತಿಹಾಸಿಕ ಕವಲೇದುರ್ಗ, ಹೊಸನಗರ ತಾಲೂಕು ದರ್ಶನ ಮುಂತಾದ ಗೃಂಥಗಳನ್ನೂ ಸಹ ರಚಿಸಿದ್ದಾರೆ. ಹೊಳೆಹೊನ್ನೂರು ನಾಡು, ಹೊಂಬುಜ ನಾಡಿನ ಅರಸರ ಪರಂಪರೆ ಎಂಬ ಕೃತಿಯನ್ನೂ ರಚಿಸಿದ್ದಾರೆ. ಹೊಸನಗರ ತಾಲೂಕಿನಲ್ಲಿ ಅವರು ಕೆಲಸ ಮಾಡಿದ್ದರಿಂದ ವಿಶೇಷವಾಗಿ ಆ ತಾಲೂಕಿನ ಐತಿಹಾಸಿಕ ಕ್ಷೇತ್ರಗಳ ಅಧ್ಯಯನ ಮಾಡಿ ಸಂಶೋಧನೆ ನಡೆಸಿದ್ದರು.
ಇಂತಹ ಅಪೂರ್ವ ಪ್ರತಿಭೆಯ ಶಾಸ್ತ್ರಿ ಅವರು ಶಿವಮೊಗ್ಗದ ಜ್ಞಾನದ ಆಸ್ತಿ ಎಂಬಂತಿದ್ದರು. ಎಷ್ಟೋ  ವಿಷಯಗಳಿಗೆ ಅವರು ಮಾರ್ಗದರ್ಶಕರಾಗಿದ್ದರು. ಅನೇಕ ಧಾರ್ಮಿಕ ಮತ್ತು ಸಾಹಿತ್ಯಿಕ ವರ್ಗದವರು ಯಾವುದೇ ಸಂಶಯಗಳಿದ್ದರೂ ಅವರಲ್ಲಿಗೆ ತೆರಳಿ ಚರ್ಚಿಸುತ್ತಿದ್ದರು. ಇಂತಹವರಿಗೆ ಸದಾ ಮಾರ್ಗದರ್ಶನ ಮಾಡುತ್ತಿದ್ದರು.
ಜ್ಞಾನದ ಖನಿಯಂತಿದ್ದ ಅವರು ಸ್ವಲ್ಪವೂ ಅಹಮಿಕೆಯನ್ನು ಹೊಂದಿರಲಿಲ್ಲ. ಅವರ ಸಾಧನೆಗಳನ್ನು ಗಮನಿಸಿ ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಅವರಿಗೆ ಸಂದ ಪ್ರಶಸ್ತಿಗಳು ಹತ್ತು ಹಲವು. ಕೂಡಲಿ ಶೃಂಗೇರಿ ಮಠದ ಪರಮಭಕ್ತರಾದ ಇವರಿಗೆ ಮಹಾಸಂಸ್ಥಾನದಿಂದ ವಿದ್ಯಾಶಂಕರ ಪ್ರಶಸ್ತಿ ನೀಡಲ್ಪಟ್ಟಿದೆ. ಪರಮದೇವ ಪ್ರಶಸ್ತಿ, ಸಾಹಿತ್ಯ ವಿದ್ಯಾರತ್ನ ಪ್ರಶಸ್ತಿ, ಶಿವಮೊಗ್ಗ ದಸರಾ ಮತ್ತು ನಗರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಸಮರ್ಪಿಸಲಾಗಿದೆ.
ವಿಶೇಷವೆಂದರೆ, ಕೂಡಲಿ ಮಹಾಸಂಸ್ಥಾನದ ವಿದ್ಯಾಭಿನವ ವಿದ್ಯಾರಣ್ಯ ಸ್ವಾಮೀಜಿ ಅಧ್ಯಯನ ಮಾಡಿದ ಸಂಸ್ಕೃತ ಎಂಎ ಮತ್ತು ಪಿಎಚ್‌ಡಿ ಅಧ್ಯಯನಕ್ಕೆ ಕೂಡಲಿ ಜಗನ್ನಾಥ ಶಾಸ್ತ್ರಿಯವರು ಖಾಸಗಿಯಾಗಿ ಮಾರ್ಗದರ್ಶನ ಮಾಡಿದ್ದರು. ಇಂತಹ ಅಪ್ರತಿಮ ಪ್ರತಿಭೆ ಮತ್ತು ಜನಮನ್ನಣೆ ಗಳಿಸಿದ್ದ ಶಾಸ್ತ್ರಿಯವರು ಇನ್ನು ನೆನೆಪು ಮಾತ್ರ.
,,,,,,,,,,,,,,,,,,,,,,,,
ಎದೆ ನಡುಗಿಸುವ, ಕರ್ಣ ಕಠೋರ ಶಬ್ದದ ಸೈಲೆನ್ಸರ್
 ಕರ್ಕಶ ಸದ್ದಿಗೆ ಬ್ರೇಕ್ ಹಾಕುವ ಕೆಲಸ ಎಂದು?


’ಬೈಕ್ ಅಥವಾ ಇತರೆ ಯಾವುದೇ ವಾಹನವಾಗಿರಲಿ ಶಬ್ದ ಮಾಲಿನ್ಯ ಉಂಟು ಮಾಡುವಂತಿಲ್ಲ. ಮೋಟಾರು ವಾಹನ ಕಾಯ್ದೆಯನುಸಾರ ನಿಗದಿತ ಡೆಸಿಬಲ್‌ಗಿಂತ ಹೆಚ್ಚು ಶಬ್ದ ಹೊರಹೊಮ್ಮುವ ವಾಹನಗಳ ಮಾಲೀಕರ ವಿರುದ್ದ ಕ್ರಮ ಜರುಗಿಸಬಹುದಾಗಿದೆ.  ಕಂಪೆನಿ ನಿಗದಿಪಡಿಸಿದ ಸೈಲೈನ್ಸರ್‌ಗಳನ್ನೇ ಬಳಕೆ ಮಾಡಬೇಕು. ಇದನ್ನು ಮಾರ್ಪಡಿಸಿಕೊಳ್ಳುವುದು ಕಾನೂನುಬಾಹಿರವಾಗಿದೆ. ಇಂತಹ ವಾಹನಗಳ ನೊಂದಣಿ ಕೂಡ ತಡೆಹಿಡಿಯಬಹುದಾಗಿದೆ. ನಾಗರೀಕರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರ್ಕಶ ಶಬ್ದ ಹೊರಹೊಮ್ಮುವ ವಾಹನಗಳು ಕಂಡುಬಂದರೆ ತಮ್ಮ ಮೊಬೈಲ್ ಸಂಖ್ಯೆ : 94498-64014 ಗೆ ಮಾಹಿತಿ ರವಾನಿಸಬಹುದಾಗಿದೆ. ಈ ಮಾಹಿತಿಯ ಆಧಾರದ ಮೇಲೆ ಸಂಬಂಧಿಸಿದ ವಾಹನಗಳ ತಪಾಸಣೆ ನಡೆಸಿ, ನಿಯಮ ಉಲ್ಲಂಘಿಸಿದ್ದು ಕಂಡುಬಂದರೆ ಕ್ರಮ ಜರುಗಿಸಲಾಗುವುದು.
-ಶಿವರಾಜ್ ಪಾಟೀಲ್, ಪ್ರಾದೇಶಿಕ ಸಾರಿಗೆ ಇಲಾಖೆಯ ಜಂಟಿ ಆಯುಕ್ತ

ಶಿವಮೊಗ್ಗ:   ನಗರದಲ್ಲಿ  ಕೆಲವರು ದ್ವಿಚಕ್ರ ವಾಹನಗಳಿಗೆ ದೊಡ್ಡ ಪ್ರಮಾಣದಲ್ಲಿ ಶಬ್ದ ಬರುವ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡು ಶಬ್ದ ಮಾಲಿನ್ಯ ಮಾಡುವುದರ ಜೊತೆಗೆ ಸಾರ್ವಜನಿಕರಿಗೂ ತೊಂದರೆ ಕೊಡುತ್ತಿರುವ ಪ್ರಕರಣ ಇತ್ತೀಚೆಗೆ ಹೆಚ್ಚಾಗುತ್ತಿದೆ.  ಇದರಿಂದ ನಾಗರಿಕರು ನೆಮ್ಮದಿಯಿಲ್ಲದಂತಾಗುವ ಪರಿಸ್ಥಿತಿ ಎದುರಾಗಿದೆ.
ಇತ್ತೀಚೆಗೆ ಮೋಟಾರ್ ಬೈಕ್‌ಗಳ ಶಬ್ದ ಮಾಲಿನ್ಯ ವಿಪರೀತ ಮಟ್ಟಕ್ಕೆ ತಲುಪಿದೆ. ಭಾರೀ ಶಬ್ದ ಮಾಡುತ್ತ ಹೋಗುವ ಕೆಲವು ಬೈಕ್‌ಗಳು ನಾಗರಿಕರ ಎದೆ ನಡುಗಿಸುತ್ತಿವೆ. ಕರ್ಣ ಕಠೋರವಾದ ಈ ಶಬ್ದ   ಚಾಲನೆಯಲ್ಲಿರುವವರು ಮತ್ತು ಪಾದಚಾರಿಗಳೂ ಸಹ ಭಯಗೊಳ್ಳುವಂತೆ ಮಾಡುತ್ತಿದೆ.
ಏಕಾಏಕಿ ಕೇಳಿಬರುವ ಈ ಕರ್ಕಶ ಸದ್ದಿನಿಂದ ಕೆಲ ಬೈಕ್ ಸವಾರರು ಚಾಲನೆಯ ನಿಯಂತ್ರಣ ಕಳೆದುಕೊಂಡು ಸಣ್ಣಪುಟ್ಟ ಅಪಘಾತಕ್ಕೀಡಾಗುತ್ತಿರುವ ಘಟನೆಗಳು ಕೂಡ ನಡೆಯುತ್ತಿವೆ. ಈ ಕರ್ಕಶ ಸದ್ದು ನಾಗರಿಕ ವಲಯದಲ್ಲಿ ನಾನಾ ರೀತಿಯ ಅವಾಂತರ ಸೃಷ್ಟಿಸುತ್ತಿದೆ.
’ಭಾರತ ಮೋಟಾರು ಕಾಯ್ದೆ’ಯ ಪ್ರಕಾರ ಮೋಟಾರ್ ಬೈಕ್ ಸೇರಿದಂತೆ ಇತರೆ ವಾಹನಗಳಲ್ಲಿ ಕರ್ಕಶ ಸದ್ದು ಮಾಡುವಂತಿಲ್ಲ. ಬೈಕ್, ಬಸ್, ಲಾರಿ ಮತ್ತಿತರ ವಾಹನಗಳಿಂದ ಹೊರಹೊಮ್ಮಬಹುದಾದ ಶಬ್ದದ ಪ್ರಮಾಣ ನಿಗದಿತ ಪ್ರಮಾಣದಲ್ಲಿ ಇರಬೇಕೆಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನಿಗದಿತ ’ಡೆಸಿಬಲ್’ಗಿಂತ ಹೆಚ್ಚಿನ ಶಬ್ದ ಹೊರಸೂಸುವ ವಾಹನಗಳ ಮಾಲಿಕರ ಮೇಲೆ ಪೊಲೀಸ್ ಇಲಾಖೆ ಹಾಗೂ ಆರ್‌ಟಿಓ ಕೇಸ್ ದಾಖಲಿಸಬಹುದು. ದಂಡ ಹಾಕಬಹುದು. ಜೊತೆಗೆ ವಾಹನ ಕೂಡ ಮುಟ್ಟುಗೋಲು ಹಾಕಿಕೊಳ್ಳಬಹುದು. ತಾತ್ಕಾಲಿಕ ಅವಧಿಗೆ ನೊಂದಣಿ ರದ್ದುಗೊಳಿಸಲು ಅವಕಾಶವಿದೆ.
ಇಷ್ಟೆಲ್ಲದರ ಹೊರತಾಗಿಯೂ ಶಿವಮೊಗ್ಗ ನಗರದಲ್ಲಿ ಈ ಕರ್ಕಶ ಸದ್ದಿಗೆ ಬ್ರೇಕ್ ಹಾಕುವ ಕೆಲಸಗಳು ಪೊಲೀಸ್ ಇಲಾಖೆ ಹಾಗೂ ಆರ್‌ಟಿಓದಿಂದ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಇದರಿಂದ ದಿನದಿಂದ ದಿನಕ್ಕೆ ಶಬ್ದ ಮಾಲಿನ್ಯ ಉಂಟು ಮಾಡುವ ಬೈಕ್ ಇತರೆ ವಾಹನಗಳ ಹಾವಳಿ ವಿಪರೀತ ಮಟ್ಟಕ್ಕೆ ತಲುಪಿದೆ. ಹೇಳುವವರು ಕೇಳುವವರು ಇಲ್ಲದಂತಾಗಿದೆ.
  80 ಡೆಸಿಬಲ್ ಮೀರಬಾರದು:
  ವಾಹನ ತಯಾರಿಸುವ ಕಂಪೆನಿಗಳು ಮೋಟಾರು ಕಾಯ್ದೆಯನುಸಾರ ವಾಹನಗಳ ಶಬ್ದ ನಿಗದಿಪಡಿಸಿರುತ್ತವೆ. ಆದರೆ ಕೆಲವು ಮಾಲಿಕರು ಶೋಕಿಗಾಗಿ ಅಥವಾ ಜನರ ಗಮನಸೆಳೆಯಲು ವಾಹನಗಳ ಶಬ್ದ ಹೆಚ್ಚಿಸಿಕೊಳ್ಳುತ್ತಾರೆ. ಇದಕ್ಕಾಗಿ ಸೈಲೈನ್ಸರ್‌ಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಹೆಚ್ಚು ಶಬ್ದ ಹೊರಹೊಮ್ಮುವ ಸೈಲೈನ್ಸರ್‌ಗಳನ್ನು ಅಳವಡಿಸಿಕೊಳ್ಳುತ್ತಾರೆ. ಇದರಿಂದ ಈ ವಾಹನಗಳು ರಸ್ತೆಗಿಳಿದ ವೇಳೆ ಭಾರೀ ಪ್ರಮಾಣದ ಸದ್ದು ಮಾಡಿಕೊಂಡು ಹೋಗುತ್ತವೆ. ಈ ರೀತಿಯ ಮಾರ್ಪಾಡು ಮಾಡುವುದು ಕಾನೂನುಬಾಹಿರವಾಗಿದೆ. ಸಂಬಂಧಿಸಿದ ಮಾಲೀಕರ ವಿರುದ್ದ ಕ್ರಮ ಜರುಗಿಸಬಹುದಾಗಿದೆ.  ಶಬ್ದ ಮಾಲಿನ್ಯ ಉಂಟು ಮಾಡುವ ವಾಹನಗಳ ಪತ್ತೆಗೆ ಇಲಾಖೆಯಲ್ಲಿ ಡೆಸಿಬಲ್ ಮೀಟರ್‌ನಂತಹ ಅತ್ಯಾಧುನಿಕ ಉಪಕರಣಗಳಿವೆ.
 ಇತ್ತೀಚೆಗೆ ಪೊಲೀಸರು ಸಾಲುಸಾಲಾಗಿ ಹೆಲ್ಮೆಟ್ ಕೇಸ್ ಹಾಕುತ್ತಿದ್ದಾರೆ. ಅದೇ ರೀತಿಯಲ್ಲಿ ಕರ್ಕಶ ಶಬ್ದ ಹೊರಹೊಮ್ಮಿಸುವ ವಾಹನಗಳ ಮಾಲಿಕರ ವಿರುದ್ದವು ಕಾನೂನು ರೀತ್ಯ ಕ್ರಮ ಜರುಗಿಸಬೇಕು.  ಈ ಮೂಲಕ ಶಬ್ದ ಮಾಲಿನ್ಯ ತಡೆಗಟ್ಟು, ನಾಗರಿಕರ ಆರೋಗ್ಯ ಸಂರಕ್ಷಣೆಯತ್ತ ಗಮನಹರಿಸಬೇಕಾಗಿದೆ. ಹಾಗೆಯೇ ಆರ್‌ಟಿಓ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ, ಸಂಘಸಂಸ್ಥೆಗಳ ನೆರವಿನೊಂದಿಗೆ ಶಬ್ದ ಮಾಲಿನ್ಯ ತಡೆಗೆ ಸಂಬಂಧಿಸಿದಂತೆ ವಾಹನ ಮಾಲಿಕರು, ಚಾಲಕರು, ನಾಗರಿಕರಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಮಾಡಬೇಕು.  
 ...............................
ಸರ್ಕಾರಿ ಶಾಲೆಗಳು ಸೋತಿರುವುದೆಲ್ಲಿ?



ಎಲ್ಲರಿಗೂ ಸರ್ಕಾರಿ ನೌಕರಿ ಬೇಕು. ಆದರೆ ಸರ್ಕಾರಿ ಶಾಲೆಯಲ್ಲಿ ಕಲಿಯುವುದು ಮಾತ್ರ ಬೇಡ ಎನ್ನುವ ಮನಃಸ್ಥಿತಿ ಇದೆ. ಇದಕ್ಕೆ ಮುಖ್ಯ ಕಾರಣ ಉತ್ತಮ ಗುಣಮಟ್ಟದ ಶಿಕ್ಷಣ ಅಲ್ಲಿ ದೊರೆಯುತ್ತಿಲ್ಲ ಎನ್ನುವುದು. ಈ ರೀತಿ ಶಿಕ್ಷಣ ದೊರೆಯದೇ ಇರಲು ಕಾರಣರು ಯಾರು, ಸಾರ್ವಜನಿಕರೋ ಅಥವಾ ಸರ್ಕಾರವೋ, ಶಿಕ್ಷಕರೋ ಎನ್ನುವುದನ್ನು ನಾವು ಪತ್ತೆಮಾಡದೆ ಸುಮ್ಮನಿದ್ದೇವೆ. ರೋಗಕ್ಕೆ ಮದ್ದು ಕಂಡುಹಿಡಿಯದಿದ್ದರೆ ಆ ರೋಗ ವ್ಯಾಪಿಸುತ್ತದೆ. ಇಲ್ಲಿಯೂ ಸಹ ಗುಣಾತ್ಮಕ ಶಿಕ್ಷಣಕ್ಕ್ಕೆ ಏನು ವ್ಯವಸ್ಥೆ ಬೇಕೋ ಅದನ್ನು ಕೊಡುವ ಕೆಲಸವನ್ನು ಮಾಡಬೇಕು. ಇಲ್ಲಿ ಎಲ್ಲವನ್ನೂ ಸರ್ಕಾರ ಮಾಡಲಿ ಎಂದು ಪಾಲಕರು ಕೈಕಟ್ಟಿ ಕುಳಿತುಕೊಳ್ಳಬಾರದು. ಸಾರ್ವಜನಿಕ ಸಹಭಾಗಿತ್ವ, ಸಾಮುದಾಯಿಕ ಪಾಲುದಾರಿಕೆಯಿಂದ ಏನನ್ನಾದರೂ ಸಾಧಿಸಬಹುದೆನ್ನುವ ಮಾತಿದೆ. ಇದನ್ನು ಕೆಲವು ಶಾಲೆಗಳು ಸಾಧಿಸಿ ತೋರಿಸಿ ಮಾದರಿಯಾಗಿ ನಿಂತಿವೆ. ಉಳಿದ ಶಾಲೆಗಳೂ ಕೂಡ ಆ ಸಾಲಿಗೆ ಸೇರಬೇಕಿದೆ. 
 

ರಾಜ್ಯದಲ್ಲಿ ಉತ್ತಮ ಗುಣಾತ್ಮಕ ಶಿಕ್ಷಣ ಕೊಡುವಲ್ಲಿ ಸರ್ಕಾರಿ ಶಾಲೆಗಳು ಸಂಪೂರ್ಣ ಸೋತಿವೆ ಎನ್ನುವ ಮಾತಿನಲ್ಲಿ ಸ್ವಲ್ಪವೂ ಸುಳ್ಳಿಲ್ಲ. ಸಮರ್ಥ ಶಿಕ್ಷಕರಿದ್ದರೂ, ಬಹುತೇಕ ಶಾಲೆಗಳಲ್ಲಿ ಮೂಲಸೌಕರ್ಯವಿದ್ದರೂ,  ಮಕ್ಕಳ ಸಂಖ್ಯೆ ಗಣನೀಯ ಕುಸಿತ ಕಾಣುತ್ತಿದೆ.  ಎಲ್ಲಿಯವರೆಗೆ ನಮ್ಮ ಶಾಲೆಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಭರವಸೆ ಕೊಡುವುದಿಲ್ಲವೋ ಅಲ್ಲಿಯವರೆಗೆ ಪಾಲಕರು ಈ ಶಾಲೆಗೆ ಮಕ್ಕಳನ್ನು ಕಳುಹಿಸುವುದಿಲ್ಲ. ಜೊತೆಗೆ ಖಾಸಗಿ ಶಾಲೆಗಳ ದರ್ಬಾರು ಹೆಚ್ಚುತ್ತದೆ.
ಖಾಸಗಿ ಶಾಲೆಗಳತ್ತ ಗಮನ ಹರಿಯಲು ಮುಖ್ಯ ಕಾರಣ ಇದೇ ಆಗಿದೆ. ಸರ್ಕಾರ ಎಲ್ಲಾ ಸೌಕರ್ಯವನ್ನು ಕಲ್ಪಿಸಿದರೂ ಅದು ಶಾಲೆಗಳಿಗೆ ತಲುಪುತ್ತಿಲ್ಲ. ಮಲೆನಾಡಿನ ಶಾಲೆಗಳ ದುಃಸ್ಥಿತಿಯನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ಬೀಳಲು ಸಿದ್ಧವಾಗಿರುವ 50 ವರ್ಷಕ್ಕೂ ಹೆಚ್ಚಿನ ಕಟ್ಟಡಗಳು, ಆವರಣ ಗೋಡೆ ಮತ್ತು ಗೇಟು ಇಲ್ಲದ ಶಾಲೆಗಳೇ ಹೆಚ್ಚಿವೆ. ಅದರಲ್ಲೂ ಗ್ರಾಮಾಂತರ ಶಾಲೆಗಳಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದು. ಸಮರ್ಥ ಎಂದು ಕಂಡುಬಂದ ಶಿಕ್ಷಕರನ್ನೇ ಸರ್ಕಾರ ನೇಮಿಸಿಕೊಳ್ಳುತ್ತಿದೆ. ಆದರೆ ಈ ಶಿಕ್ಷಕರು ಮಕ್ಕಳನ್ನು ಸವಾಂಗೀಣವಾಗಿ ತಯಾರು ಮಾಡುವಲ್ಲಿ ಸೋತಿದ್ದಾರೆ. ವರ್ಷದಿಂದ ವರ್ಷಕ್ಕೆ ದಾಖಲಾತಿ ಕುಸಿಯುತ್ತಿದೆ.
ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ನಾವೇಕೆ ಸೋತಿದ್ದೇವೆ ಎನ್ನುವುದನ್ನು ಅವಲೋಕಿಸಿದಾಗ, ಕೆಲವು ಪ್ರಮುಖ ಅಂಶಗಳು ಕಂಡುಬರುತ್ತವೆ. ಕರ್ನಾಟಕ ಸ್ಕೂಲ್ ಕ್ವಾಲಿಟಿ ಅಸೆಸ್‌ಮೆಂಟ್ ಮತ್ತು ಅಕ್ರೆಡೇಶನ್ ಕಮಿಟಿಯು ಈ ಬಗ್ಗೆ ವರದಿ ಸಿದ್ಧಪಡಿಸಿದೆ. ಅದರಲ್ಲಿ ಕಲಿಕಾ ಗುಣಮಟ್ಟ , ಮೂಲಸೌಕರ್ಯ, ಶಾಲಾ ವಾತಾವರಣ, ಕ್ರಿಯಾಶೀಲ ಚಟುವಟಿಕೆ ಮತ್ತು ನಾಯಕತ್ವ ಹಾಗೂ ಸಾಮುದಾಯಿಕ ಪಾಲುಗೊಳ್ಳುವಿಕೆಯಲ್ಲಿ ಸಂಪೂರ್ಣ ವಿಫಲರಾಗಿರುವುದಾಗಿ ಹೇಳಿದೆ. ಈ ನಿಟ್ಟನಿಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಉತ್ತಮ ಶಿಕ್ಷಣ ಕೊಟ್ಟು ಅವರನ್ನು ಮುಖ್ಯವಾಹಿನಿಗೆ ತರುವುದು ನಮ್ಮ ಮುಂದಿರುವ ಬಹುದೊಡ್ಡ ಸವಾಲಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಕೊಡಲಾಗುತ್ತಿದೆ, ಜೊತೆಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ, ಬಿಸಿಯೂಟ ಇದೆ. ಶಿಕ್ಷಕರಿಗೂ ಉತ್ತಮ ಸಂಬಳವಿದೆ, ಸಕಲ ಸೌಲಭ್ಯವಿದೆ. ಆದರೂ ಮಕ್ಕಳು ಬರುತ್ತಿಲ್ಲ ಎಂದರೆ ಅಲ್ಲಿ ಸರಿಯಾದ ಶಿಕ್ಷಣ ಲಭ್ಯವಿಲ್ಲ ಎಂದೇ ಅರ್ಥ.
ಮೊದಲನೆಯದಾಗಿ, ಪಾಲಕರಲ್ಲಿ ಶಾಲೆಯ ಬಗ್ಗೆ ಅಭಿಮಾನ ಮೂಡಬೇಕಿದೆ. ನನ್ನೂರಿನ ಶಾಲೆ ಎಂದರೆ ನಮ್ಮ ಶಾಲೆ ಎಂಬ ಭಾವನೆ ಬರಬೇಕು. ಊರಿನಲ್ಲಿ ಖಾಸಗಿ ಶಾಲೆ ಇದ್ದರೂ ಅಲ್ಲಿಗೆ ಮಕ್ಕಳನ್ನು ಕಳುಹಿಸುವುದಿಲ್ಲ ಎಂಬ ಪ್ರತಿಜ್ಞೆ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಓದುವವರೆಲ್ಲ ದಡ್ಡರು ಮತ್ತು ಬಡವರ ಮಕ್ಕಳು ಎಂಬ ಮನೋಭಾವ ತೊಲಗಬೇಕು. ಶಾಲೆಗೆ ಬೇಕಾದ ಮೂಲಸೌಕರ್ಯಗಳ ಕೊರತೆಯನ್ನು ಶಾಲಾ ಆಡಳಿತ ಮಂಡಳಿ, ಹಳೆಯ ವಿದ್ಯಾರ್ಥಿ ಸಂಘ ಮತ್ತು ಪಾಲಕರು, ಶಿಕ್ಷಕರೊಂದಿಗೆ ಸೇರಿ ಕಲ್ಪಿಸುವ ಕೆಲಸವನ್ನು ಮಾಡಬೇಕು. ಸಣ್ಣ ಸಮಸ್ಯೆಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದು, ಶಿಕ್ಷಣ ಮತ್ತಿತರ ಅಧಿಕಾರಿಗಳ ಕಚೇರಿಗೆ ಅಲೆದಾಡುವುದನ್ನು ಬಿಟ್ಟು ಸಮಸ್ಯೆ ಪರಿಹರಿಸುವ ಮನಸ್ಸು ಮಾಡಿದರೆ ಆ ಶಾಲೆಯನ್ನು ಮಾದರಿಯನ್ನಾಗಿ ಮಾಡಲು ಸಾಧ್ಯವಿದೆ.
ಎರಡನೆಯದಾಗಿ, ಶಿಕ್ಷಕರಿಗೂ ತಮ್ಮ ಜವಾಬ್ದಾರಿ ಏನೆನ್ನುವದುರ ಅರಿವು ಅಗತ್ಯ. ಒಬ್ಬ ವಿದ್ಯಾರ್ಥಿಯನ್ನು ದೇಶದ ಸತ್ಪ್ರಜೆಯನ್ನಾಗಿ ಹೇಗೆ ರೂಪಿಸಬೇಕು. ಇಂದಿನ ಮಕ್ಕಳಿಗೆ ಯಾವ ರೀತಿಯ ಶಿಕ್ಷಣನ ಬೇಕು. ಕಲಿಯುವವನ ಮನಃಸ್ಥಿತಿ ಎಂತಹುದು ಎನ್ನುವದುನ್ನು ಅರಿತು ಕೇವಲ ಪಠ್ಯಕ್ರಮಕ್ಕೆ ಮಾತ್ರ ಜೋತುಬೀಳದೇ ಅವರನ್ನು ಅದರಾಚೆಯೂ ಕರೆತರುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಪಠ್ಯದ ಹುಳುವಾಗಿ ಬಿಡುವ ಅಪಾಯವಿದೆ. ಆಧುನಿಕ ಜಗತ್ತಿನ ಹೊಸ ವಿಚಾರಗಳನ್ನು ಅವರಲ್ಲಿ ತುಂಬುವ ಕೆಲಸ ನಡೆಯಬೇಕು. ಇಂದಿನ ಬಹುತೇಕ ಶಿಕ್ಷಕರಿಗೆ ಇದರ ಬಗ್ಗೆ ಪರಿಕಲ್ಪನೆ ಇಲ್ಲ. ಪಠ್ಯದ ಹೊರತಾಗಿ ಏನನ್ನೂ ಕಲಿಸದ ಶಾಲೆಗಳೇ ಹೆಚ್ಚು. ಮಕ್ಕಳಿಗೆ ಸಾಮಾನ್ಯ ಜ್ಞಾನ, ಕ್ರೀಡೆ, ಕಲೆ, ಸಾಹಿತ್ಯ, ಸಂಸಕ್ರತಿಯಲ್ಲಿ ಆಸಕ್ತಿ ಹುಟ್ಟಿಸುವ ಕೆಲಸವಾಗಬೇಕು. ಮಕ್ಕಳಿಗೆ ಯಾವ ವಿಷಯದ ಬಗ್ಗೆ ಆಸಕ್ತ್ತಿ ಇದೆ ಎನ್ನುವದನ್ನರಿತು ಅದನ್ನು ಕೊಟ್ಟು ನೀರೆರೆಯುವ ಕೆಲಸ ಮಾಡಬೇಕು. ವಿವಿಧ ಸ್ಪರ್ಧೆಗಳಿಗೆ ಮಕ್ಕಳನ್ನು ಕರೆದೊಯ್ಯಬೇಕು. ನಾಲ್ಕಾರು ಮಕ್ಕಳು ಪ್ರತಿಭಾವಂತರಿದ್ದರೂ ಅವರಿಂದ ಇತರೇ ಮಕ್ಕಳು ಪ್ರೇರಿತರಾಗಿ ಹೆಚ್ಚಿನ ಸಾಧನೆ ಸಾಧ್ಯವಾಗಬಹುದು.
ಗ್ರಾಮಾಂತರ ಪ್ರದೇಶದ ಮಕ್ಕಳು ಬಡವರಿರಬಹುದು, ಆದರೆ ದಡ್ಡರಲ್ಲ, ಅವರಲ್ಲಿರುವಷ್ಟು ಪ್ರತಿಭೆ, ಕ್ರಿಯಾಶಿಲತೆ ನಗರ ಪ್ರದೇಶದವರಲ್ಲಿ ಇಲ್ಲ ಎಂದು ಎದೆ ತಟ್ಟಿ ಹೇಳಬಹುದು. ಪಾಲಕರೂ ಕೂಡ ತಮ್ಮ ಮಕ್ಕಳ ಕಲಿಕಾ ಆಸಕ್ತಿಯನ್ನು ಗುರುತಿಸಿ ಅದಕ್ಕೆ ಶಾಲೆಯಿಂದ ಏನಾಗಬೇಕು ಎನ್ನುವುದನ್ನು ತಿಳಿದು ಶಿಕ್ಷಕರಿಗೆ ಮಾಹಿತಿ ನೀಡಿದರೆ ಅದು ಸಿಗುವಂತೆ ಮಾಡಬಹುದು. ಶಾಲೆಗೆ ಮೂಲಸೌಕರ್ಯ ಇಲ್ಲವೆನ್ನುತ್ತಾ ಅದಕ್ಕೆ ಅರ್ಜಿ ಬರೆಯುವ ಕೆಲಸ ಮಾಡುತ್ತಾ ಶಿಕ್ಷಕರು ಕುಳಿತುಕೊಳ್ಳಬಾರದು. ಅದನ್ನು ಗ್ರಾಮಸ್ಥರ ನೆರವಿನಿಂದ ಪಡೆದು ಮಾದರಿ ಶಾಲೆೆಯನ್ನಾಗಿ ಮಾರ್ಪಡಿಸಬಹುದು. ಶಿವಮೊಗ್ಗ ಜಿಲ್ಲೆಯಲ್ಲೇ ಇಂತಹ ಹತ್ತಾರು ಮಾದರಿ ಶಾಲೆಗಳಿವೆ. ಅವುಗಳನ್ನು ಒಮ್ಮೆ ನೋಡಿಕೊಂಡು ಬಂದು ಆ ಮಾರ್ಗದಲ್ಲಿ ಸಾಗುವಂತಾಗಬೇಕು.
ಇಲ್ಲ ಎನ್ನುವ ಸಮಸ್ಯೆಗಳ ಪಟ್ಟಿ ಮಾಡುವುದೇ ಶಿಕ್ಷಕರ ಕೆಲಸವಾಗಬಾರದು. ಮಕ್ಕಳಲ್ಲಿ ಹೊಸ ವೈಜ್ಞಾನಿಕ ಚಿಂತನೆ, ಸಾಹಿತ್ಯಿಕ, ಸಾಂಸ್ಕೃತಿಕ, ಮನೋಭಾವ ಬೆಳೆಯುವಂತೆ ಮಾಡಬೇಕು. ಈ ರೀತಿ ಮಹತ್ತರ ಸಮಸ್ಯೆ ಹೊರತಾಗಿ ಉಳಿದೆಲ್ಲವನ್ನೂ ಪರಿಹರಿಸುವ ಚಾಣಾಕ್ಷತನವನ್ನು ಶಿಕ್ಷಕರು ಅರಿತರೆ ಆ ಶಾಲೆಗೆ ಹೆಚ್ಚೆಚ್ಚು ಮಕ್ಕಳು ತನ್ನಿಂತಾನೇ ಬರುತ್ತಾರೆ. ಇಂತಹ ಶಾಲೆಗಳು ಹೆಚ್ಚಿದಲ್ಲಿ ಯಾವ ಖಾಸಗಿ ಶಾಲೆಗೂ ಮಕ್ಕಳು ತೆರಳದ ಸ್ಥಿತಿ ನಿರ್ಮಾಣವಾಗುತ್ತದೆ. ಕಡಿಮೆ ಮಕ್ಕಳಿದ್ದರೆ ಯಾವ ಖಾಸಗಿ ಶಾಲೆ ನಡೆಸಲು ಸಾಧ್ಯವಿದೆ? ಇಂತಹ ಸೂಕ್ಷ್ಮ ವಿಚಾರವನ್ನು ಶಿಕ್ಷಕರು, ಪಾಲಕರು ಅರಿಯಬೇಕು. ಶಿಕ್ಷಕರೂ ಸಹ  ಆಧುನಿಕತೆಗೆ ತೆರೆದುಕೊಂಡಿರುವವರಾಗಿರಬೇಕು. ಸತತ ಅಧ್ಯಯನ, ಕ್ರಿಯಾಶೀಲತೆಯಿಂದ ಕೂಡಿರುವವರಾಗಿರಬೇಕು. ಹೊಸತನ ಹುಡುಕುವವರಾಗಬೇಕು. ವಿದ್ಯಾರ್ಥಿಗಳಲ್ಲಿ ಜ್ಞಾನದ ಬುತ್ತಿಯನ್ನು ತುಂಬುವವರಾಗಬೇಕು.
ಸರ್ಕಾರ ಶಾಲೆಗಳ ಅಭಿವೃದ್ಧಿ, ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ಕೊಡುವ ಕೆಲಸವಾಗಬೇಕು. ಇವಿದ್ದರೆ ಮಾತ್ರ ಹೆಚ್ಚು ಮಕ್ಕಳು ಸರ್ಕಾರಿ ಶಾಲೆ ಸೇರಲು ಸಾಧ್ಯ. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಡಾ. ಲೋಕೇಶ್ ಹೇಳಿದಂತೆ, ಮುಂದೊಂದು ದಿನ ಸರ್ಕಾರಿ ಶಾಲೆಗಳು ಕೇವಲ ಚುನಾವಣಾ ಬೂತ್ ಕೆಲಸಕ್ಕೆ ಮಾತ್ರ ಸೀಮಿತವಾಗಬಹುದು. ಖಾಸಗಿ ಶಾಲೆಗಳ ಮಕ್ಕಳ ರೀತಿಯಲ್ಲಿ ಸರ್ಕಾರಿ ಶಾಲೆಗಳ ಮಕ್ಕಳು ಕಲಿಕೆಯಲ್ಲಿ ಪ್ರಗತಿ ಸಾಧಿಸುವಂತಾಗಬೇಕು  ಸರ್ಕಾರಿ ಶಾಲೆಗಳಿಗೆ ಬರುವವರು ಬಹುತೇಕ ಬಡ ಮಕ್ಕಳು. ಆದ್ದರಿಂದ ಅವರನ್ನು ಈ ಶಾಲೆ ಆಕರ್ಷಿಸುವಂತಾಗಬೇಕು. ಈ ಮಕ್ಕಳ ಕಲಿಕೆಯ ಮಟ್ಟ ಹೆಚ್ಚಾಗಬೇಕು. ಅವರಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಕರು ಹೆಚ್ಚು ಗಮನಹರಿಸಬೇಕು.
ಇದರೊಟ್ಟಿಗೆ ಶಿಕ್ಷಕರಿಗೂ ಸಹ ಇತರೇ ಕೆಲಸದ ಭಾರವನ್ನು ತಗ್ಗಿಸುವ ಕೆಲಸ ನಡೆಯಬೇಕಿದೆ. ಬೆಳಿಗ್ಗೆ ಮನೆಯಿಂದ ಶಾಲೆಗೆ ಬರುವಾಗ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದಲೇ ಶಾಲೆಗೆ ಸರ್ಕಾರಿ ಶಾಲೆಯ ಶಿಕ್ಷಕರು ಬರುತ್ತಾರೆ. ಆದರೆ ಶಾಲೆಗೆ ಬರುತ್ತಿದ್ದಂತೆ ಹತ್ತು ಹಲವು ಕಾರ್ಯಭಾರದಿಂದ ಕುಗ್ಗಿ ಹೋಗುತ್ತಿದ್ದಾರೆ. ಇದು ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ.
ಇನ್ನು ಜಿಲ್ಲೆಯ ವಿಚಾರ ಗಮನಿಸುವುದಾದರೆ, ಈ ವರ್ಷ ಜಿಲ್ಲೆಯಲ್ಲಿ 8500 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಅತಿ ಹೆಚ್ಚು ಶಿಕ್ಷಣ ಸಂಸ್ಥೆಗಳಿರುವ, ಶೇ. 80ರಷ್ಟು ವಿದ್ಯಾವಂತರೇ ಇರುವ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಹೋರಾಟದ ನೆಲೆವೀಡಾದ ಶಿವಮೊಗ್ಗ ಜಿಲ್ಲೆಯಲ್ಲಿ ಈ ಪರಿಸ್ಥಿತಿ ಬಂದೊದಗಿರುವುದು ಆತಂಕದ ವಿಚಾರವಾಗಿದೆ. ಸರ್ಕಾರಿ ಶಾಲೆಯಲ್ಲಿ ಮೂಲಸೌಕರ್ಯವಿಲ್ಲ, ಅಥವಾ ಹತ್ತಿರದಲ್ಲಿ ಇಲ್ಲ ಎನ್ನುವ ಕಾರಣಕ್ಕೆ ತ್ಯಜಿಸಿದರೆ, ಖಾಸಗಿ ಶಾಲೆಗೆ ಶುಲ್ಕ ಕಟ್ಟಲು ಅಷ್ಟೊಂದು ಹಣವಿಲ್ಲ ಎನ್ನುವ ಮಾತೂ ಕೂಡ ಕೇಳಿಬರುತ್ತಿದೆ. ಹಾಗಾದರೆ ಇಂತಹ ಸಮಸ್ಯೆಯನ್ನು ಯಾರು, ಹೇಗೆ ಪರಿಹರಿಸಬೇಕೆನ್ನುವ ಪ್ರಶ್ನೆಗೆ ಉತ್ತರವಿಲ್ಲ. ಶಿಕ್ಷಣಾಧಿಕಾರಿಗಳು ಇದನ್ನು ಪರಿಹರಿಸುವ ಗೋಜಿಗೆ ಹೋಗುತ್ತಿಲ್ಲ. ಬ್ಲಾಕ್ ಮತ್ತು ಕ್ಲಸ್ಟರ್ ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಸತತವಾಗಿ ಭೇಟಿ ನೀಡಿ ಅವುಗಳ ಗುಣಮಟ್ಟ, ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಹಾಜರಾತಿ, ಸಿಗುವ ಸೌಲಭ್ಯ, ಇನ್ನಿತರ ಕುಂದುಕೊರತೆಗಳ ಬಗ್ಗೆ ನಿಗಾ ಇಟ್ಟಲ್ಲಿ ಗ್ರಾಮಾಂತರ ಶಾಲೆಗಳನ್ನು ಮುಂದೆ ತರಲು ಸಾಧ್ಯವಿದೆ.
ದತ್ತು ಯೋಜನೆಯಡಿ ಶಾಲಾಭಿವೃದ್ಧಿಗೆ ಅವಕಾಶವಿದೆ. ಇದರ ಲಾಭ ಸಿಗುವಂತೆ ಮಾಡಬೇಕು. ಅಧಿಕಾರಿಗಳು ವಿವಿಧ ಸಂಘ- ಸಂಸ್ಥೆ ಅಥವಾ ಖಾಸಗಿ ವ್ಯಕ್ತಿಗಳಿಗೆ ದತ್ತು ನೀಡು ಮೂಲಕ ಶಾಲಾಭಿವೃದ್ಧಿಗೆ ಮುಂದಾಗಬೇಕು. ಮೂರು ವರ್ಷಗಳ ಹಿಂದೆ ಜಿಪಂ ವತಿಯಿಂದ ಸುಮಾರು ಹತ್ತಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ದತ್ತು ಕೊಡಲಾಗಿದೆ. ಅವು ಈಗ ಅಭಿವೃಧಿ ಹೊಂದುತ್ತಿವೆ. ಮಕ್ಕಳ ಸಂಖ್ಯೆಯೂ ಹೆಚ್ಚುತ್ತಿದೆ. ಕಲಿಕೆಯ ಗುಣಮಟ್ಟವೂ ಹೆಚ್ಚುತ್ತಿದೆ.    
ಇಂತಹ ಅನೇಕ ಪರಿಹಾರಗಳ ಮೂಲಕ ಕುಸಿದುಬಿದ್ದಿರುವ ಪ್ರಾಥಮಿಕ ಶಾಲೆಗಳ ಗುಣಮಟ್ಟವನ್ನು ಏರಿಸಬಹುದಾಗಿದೆ. ಇದಕ್ಕೆ ಸಾರ್ವಜನಿಕರಲ್ಲಿ ಇಚ್ಛಾಶಕ್ತಿ ಬೇಕಿದೆ. ಸರ್ಕಾರವನ್ನು ಪ್ರತಿಯೊಂದಕ್ಕೂ ಟೀಕಿಸುವ ಅಥವಾ ಬೇಡುವ ಮನೋಭಾವ ಬದಲಾಗಬೇಕು. ನಮಗೆ ಕರ್ತವ್ಯ ಮತ್ತು  ಜವಾಬ್ದಾರಿಯ ಅರಿವಿದ್ದರೆ ಗುಣಾಣಾತ್ಮಕ ಶಿಕ್ಷಣ ಜಾರಿರುವಲ್ಲಿ ಮಹತ್ತರ ಯಶಸ್ಸನ್ನು ಕಾಣಬಹುದು.
.............................

Wednesday, 19 July 2017

ವಿವಾದದಲ್ಲಿ ‘ಲೇಡಿ ಸಿಂಗಂ’ ರೂಪಾ ಐಪಿಎಸ್



ಡಿ. ರೂಪಾ ಕರ್ನಾಟಕ ಐಪಿಎಸ್ ಕೇಡರ್‌ನ ಲೇಡಿ ಸಿಂಗಂ. ತಮ್ಮ ಧೈರ್ಯ, ಸೇವಾನಿಷ್ಠೆ, ಭ್ರಷ್ಟ ವ್ಯವಸ್ಥೆಯನ್ನು ಮಟ್ಟ ಹಾಕುವ ಗುಣದಿಂದ ಸದಾ ವಿವಾದಕ್ಕೆ ಸಿಲುಕುತ್ತಿದ್ದಾರೆ. ಕಳೆದ ವಾರ ಬಂಧಿಖಾನೆ ಇಲಾಖೆಯಲ್ಲಿ ಖೈದಿಗಳಿಗೆ ವಿಶೇಷ ರಾಜೋಪಚಾರ ಕಲ್ಪಿಸಿದ್ದರ ಹಿಂದೆ ಅಪಾರ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ರಾಜ್ಯದಾದ್ಯಂತ ಸುದ್ದಿಯಾಗಿದ್ದಾರೆ. ತಮ್ಮ ಹಿರಿಯ ಅಧಿಕಾರಿ ಸತ್ಯನಾರಾಯಣರಾವ್ ವಿರುದ್ದವೇ ಮೇಲಧಿಕಾರಿಗೆ ವರದಿ ನೀಡಿದ್ದರಿಂದ ಅಖಿಲ ಭಾರತೀಯ ಸೇವೆ (ಶಿಸ್ತು) ಸಂಹಿತೆ-1968ರ ಪ್ರಕಾರ ಇಲಾಖೆಯ ಶಿಸ್ತು ಉಲ್ಲಂಘನೆಯಡಿ ಅವರನ್ನು ವರ್ಗಾವಣೆ ಮಾಡಲಾಗಿದೆ. ರೂಪಾ ಬಂದ ದಾರಿಯ ಒಂದು ಹಿನ್ನೋಟ ಇಲ್ಲಿದೆ


ಈ ದೇಶದಲ್ಲಿ ಪುರುಷ ಐಪಿಎಸ್ ಅಧಿಕಾರಿಗಳಿಗಿಂತ ಹೆಚ್ಚು ಸುದ್ದಿಯಲ್ಲಿರುವವರೆಂದರೆ ಮಹಿಳಾ ಐಪಿಎಸ್ ಅಧಿಕಾರಿಗಳು. ಏಕೆಂದರೆ ಅವರು ಯಾರದ್ದಾದರೂ ವಿರುದ್ದ ಸೆಟೆದು ನಿಂತರೆ, ಯಾವುದಾದರೂ ಅವ್ಯವಹಾರ, ಭ್ರಷ್ಟಾಚಾರದ ಗೂಡಿಗೆ ಕೈ ಹಾಕಿದರೆ ಅದು ವಿವಾದವಾಗಿ ಪರಿಣಮಿಸುತ್ತದೆ. ಪೊಲೀಸ್ ಇಲಾಖೆಯೇ ಹಾಗೆ. ಅಲ್ಲಿ ಮಹಿಳಾ ಐಪಿಎಸ್‌ಗಿಂತ ಪುರುಷ ಐಪಿಎಸ್‌ನವರದ್ದೇ ಮೇಲುಗಾರಿಕೆ ಹೆಚ್ಚು. ಇದರಿಂದ ಮಹಿಳಾ ಅಧಿಕಾರಿಗಳ ವಿರುದ್ದ ಸದಾ ಮಸಲತ್ತು ನಡೆಯುತ್ತಲೇ ಇರುತ್ತದೆ.
ಅದರಲ್ಲೂ ರಾಜಕಾರಣಿಗಳು ಇಂತಹ ಅಧಿಕಾರಿಣಿಗಳ ವಿರುದ್ಧ ಸದಾ ಬುಸುಗುಡುತ್ತಲೇ ಇರುತ್ತಾರೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಆಳುವ ಪಕ್ಷದ ರಾಜಕಾರಣಿ ವಿರುದ್ದ ಕೇಸು ದಾಖಲಿಸಿದ್ದಕ್ಕೆ ಅವರನ್ನು ಗಡಿ ಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ತಮ್ಮ ದಿಟ್ಟತನ ತೋರುವ ಭರದಲ್ಲಿ ಕೆಲವು ವೇಳೆ ಅನಾಹುತವನ್ನೂ ಇಂತಹವರು ಮಾಡಿಕೊಂಡಿದ್ದೂ ಇದೆ.    
ಡಿ. ರೂಪಾ ನಾಲ್ಕೈದು ದಿನದಿಂದ ರಾಜ್ಯದಲ್ಲಿ ಸುದ್ದಿ ಹಾಗೂ ಸದ್ದು ಮಾಡುತ್ತಿರುವ  ಮಹಿಳಾ ಐಪಿಎಸ್ ಅಧಿಕಾರಿಣಿ. ಬಂಧೀಖಾನೆ ಇಲಾಖೆಯ ಡಿಐಜಿ ಆಗಿದ್ದ ರೂಪಾ ಪರಪ್ಪನ ಅಗ್ರಹಾರ ಸೆರೆಮನೆಯಲ್ಲಿ ಶಿಕ್ಷೆ ಅನುಭವಿಸುತ್ತಿರುವ  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಗೆಳತಿ ಶಶಿಕಲಾಗೆ ವಿಶೇಷ ಉಪಚಾರ ಕಲ್ಪಿಸಿರುವ ಬಗ್ಗೆ ಬಹಿರಂಗಪಡಿಸಿದ ವರದಿಯಿಂದ ಇಂದು ಅವರ ಹೆಸರು ಎಲ್ಲರ ಬಾಯಲ್ಲಿ ಇರುವಂತಾಗಿದೆ.
ರೂಪಾ ದಿಟ್ಟ ಅಧಿಕಾರಿಣಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾವುದೇ ಭ್ರಷ್ಟಾಚಾರ, ಅಧಿಕಾರ ದುರುಪಯೋಗಕ್ಕೆ ಮಣೆ ಹಾಕುವವರಲ್ಲ. ಆದರೆ ತಮ್ಮ ಧೀರೋದಾತ್ತ  ವಿಚಾರದಿಂದಲೇ ಈಗ ವಿವಾದಕ್ಕೀಡಾಗಿ ವರ್ಗಾವಣೆಗೊಂಡಿದ್ದಾರೆ. ಪರಪ್ಪನ ಅಗ್ರಹಾರ ಸೆರೆಮನೆಯಲ್ಲಿ ಶಶಿಕಲಾ ಮತ್ತು ಅಬ್ದುಲ್ ಕರೀಂ ತೆಲಗಿ ಅವರಿಂದ ಅಪಾರ ಪ್ರಮಾಣದ ಹಣ ಪಡೆದು ರಾಜೋಪಚಾರ ನೀಡಲಾಗುತ್ತಿದೆ ಎಂಬ ವರದಿಯನ್ನು ಮೇಲಧಿಕಾರಿಗಳಿಗೆ ನೀಡಿದ್ದರು. ಅದರಲ್ಲಿ ಮೇಲಧಿಕಾರಿಗಳ ಹೆಸರನ್ನೂ ಸೂಚಿಸಿದ್ದರಿಂದ ಇಷ್ಟೆಲ್ಲ ವಿವಾದಕ್ಕೆ ಕಾರಣವಾಗಿತ್ತು.
ರಾಜ್ಯದಲ್ಲಿ ಸುಮಾರು 16 ವರ್ಷಗಳ ಸೇವೆಯನ್ನು ಸಲ್ಲಿಸಿರುವ ರೂಪಾ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಯಾವುದನ್ನೂ ಲೆಕ್ಕಿಸುವವರಲ್ಲ. ಮಹಿಳಾ ಅಧಿಕಾರಿಯೊಬ್ಬರು ಇಂತಹ ಸಂದರ್ಭದಲ್ಲಿ ವಿವಾದ ಎದುರಿಸುವುದು ಇತ್ತೀಚಿನ ದಿನಗಳಲ್ಲಿ  ಸಾಮಾನ್ಯ ಎಂಬಂತಾಗಿದೆ. ವಿಶೇಷವೆಂದರೆ, ಇವರ ದಿಟ್ಟ ಹೋರಾಟಕ್ಕೆ ಈಗ ವರ್ಗಾವಣೆಯ ಫಲ ಸಿಕ್ಕಿದೆ.
ರೂಪಾ ಕಳೆದ ವರ್ಷ ಎರಡು ಪ್ರತ್ಯೇಕ ಸಂದರ್ಭದಲ್ಲಿ ಸುದ್ದಿಯಾಗಿದ್ದರು. ಮೊದಲನೆಯದೆಂದರೆ, ಕೂಡ್ಲಿಗಿ ಡಿವೈಎಸ್‌ಪಿಯಾಗಿದ್ದ ಅನುಪಮಾ ಶೆಣೈ ಬಳ್ಳಾರಿ ಉಸ್ತುವಾರಿ ಸ ಚಿವರಾಗಿದ್ದ ಪರಮೇಶ್ವರ ನಾಯ್ಕ್ ವಿರುದ್ದ ಸೆಟೆದು ನಿಂತಾಗ ಅವರಿಗೆ ಬೆಂಬಲ ನೀಡಿ ರಾಜಕಾರಣಿಗಳ ಕೆಂಗಣ್ಣಿಗೆ ತುತ್ತ್ತಾಗಿದ್ದರು. ಇಷ್ಟೇ ಅಲ್ಲ, ಅನುಪಮಾ ಸಾಮಾಜಿಕ ಜಾಲತಾಣಗಳಲ್ಲಿ ಈ ಸಚಿವರ ಮತ್ತು ರಾಜಕರಣಿಗಳ ಬಗ್ಗೆ ಸಾಕಷ್ಟು ಬರೆದಾಗ ಅದನ್ನು ಲೈಕ್ ಮಾಡಿಯೂ ಎಲ್ಲ ರೂ ಹುಬ್ಬೇರಿಸುವಂತೆ ಮಾಡಿದ್ದರು. ಇನ್ನೊಂದು ಘಟನೆಯೆಂದರೆ, ಮೈಸೂರು ಸಾಂಸದ ಪ್ರತಾಪ್‌ಸಿಂಹ ಫೇಸ್‌ಬುಕ್‌ನಲ್ಲಿ ರೂಪಾ ವಿರುದ್ದ ಗರಂ ಆಗಿ ಬರೆದಿದ್ದರು. ಇದನ್ನು ವಿರೋಧಿಸಿದ್ದ ರೂಪಾ ಫೇಸ್‌ಬುಕ್‌ನಲ್ಲೇ ಕಾದಾಟ ನಡೆಸಿ ಮತ್ತೆ ಬೆಳಕಿಗೆ ಬಂದಿದ್ದರು. ಆನಂತರ ಪ್ರತಾಪ್‌ಸಿಂಹ ಕ್ಷಮೆ ಯಾಚಿಸುವುದರೊಂದಿಗೆ ಪ್ರಕರಣ ಅಂತ್ಯಗೊಂಡಿತ್ತು.
ಈ ರೀತಿ ಯಾವ ಕೆಟ್ಟ ಹೇಳಿಕೆ, ಘಟನೆಯನ್ನೂ ಸಹಿಸದ ಸ್ವಭಾವ ರೂಪಾ ಅವರದ್ದು. ಅದನ್ನು ದಿಟ್ಟೆದೆಯಿಂದಲೇ ಎದುರಿಸುವ ಮನೋಭಾವ ಕೆಲವು ಸಂದರ್ಭದಲ್ಲಿ ಅನಾಹುತಕ್ಕೆ ಕಾರಣವಾಗುತ್ತದೆ. ಸಮಯ, ಸಂದರ್ಭಕ್ಕಾಗಿ ಕಾಯುವ ರಾಜಕಾರಣಿಗಳು ಮತ್ತು ಹಿರಿಯ ಅಧಿಕಾರಿಗಳು ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಸಕಾಲದಲ್ಲಿ ಸರಿಯಾದ ಏಟು ಕೊಡುತ್ತಾರೆ. ಈಗ ರೂಪಾ ಎದುರಿಸುತ್ತಿರುವುದು ಇದನ್ನೇ.
ಬಂಧಿಖಾನೆ ಇಲಾಖೆಯ ಘಟನೆಯ ಬಗ್ಗೆ ರೂಪಾ ಅವರು ಸರಿಯಾದ ಕೆಲಸವನ್ನು ತಪ್ಪು ಮಾರ್ಗದಲ್ಲಿ ಮಾಡಿದ್ದಾರೆ ಎಂದು ನಿವೃತ್ತ ಐಪಿಎಸ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಭ್ರಷ್ಟಾಚಾರವನ್ನು ಹೊರಹಾಕುವ ಅವಸರದಲ್ಲಿ ಅವರು ಕೆಲವು ಎಡವಟ್ಟು ಮಾಡಿಕೊಂಡಿದ್ದಾರೆ. ರೂಪಾ ಅವರ ಉದ್ದೇಶ ಬಂಧೀಖಾನೆಯಲ್ಲಿ  ಅಕ್ರಮ ವ್ಯವಹಾರ ನಿಗ್ರಹಿಸುವುದು ಎಲ್ಲರೂ ಮೆಚ್ಚುವಂತಹುದೇ ಆಗಿದೆ.  ಆದರೆ ಇದನ್ನು  ಸರಿಯಾದ ಮಾರ್ಗದಲ್ಲಿ ಕೊಂಡೊಯ್ದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.  ತನ್ನ ಮೇಲಧಿಕಾರಿ ತಾನು ನೀಡಿದ ವರದಿಗೆ ಸ್ಪಂದಿಸದಿದ್ದಾಗ ಅದನ್ನು ಗೃಹ ಇಲಾಖೆಯ ಕಾರ್ಯದರ್ಶಿಗೆ ತಲುಪಿಸಬೇಕಿತ್ತು. ಡಿಐಜಿ ಆಗಿ ತಾನೇ ಅದನ್ನು ಪ್ರಕಟಿಸಲು ಹೋಗಬಾರದಿತ್ತು. ಇದರಿಂದ ಅವರಿಗೆ ಹಿನ್ನಡೆಯಾಗಿದೆ ಎನ್ನುತ್ತಾರೆ ರಾಜ್ಯದ ನಿವೃತ್ತ  ಪೊಲೀಸ್ ಮಹಾನಿರ್ದೇಶಕ ಎಚ್. ಟಿ. ಸಾಂಗ್ಲಿಯಾನಾ.
ಬಂಧೀಖಾನೆ ಇಲಾಖೆಯು ಸ್ವತಂತ್ರ ಅಧಿಕಾರ ಹೊಂದಿದ ವಿಭಾಗ. ಇದಕ್ಕೆ ಡಿಜಿಪಿಯೇ ಮುಖ್ಯಸ್ಥ. ಸೆರೆಮನೆಯಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರ ನಿರಂತರವಾಗಿದೆ. ಮಾದಕ ವಸ್ತುಗಳ ವ್ಯವಹಾರ ಎಲ್ಲೆಡೆ ಇದೆ. ರೂಪಾ ಈ ಸಂಬಂಧಿತ ವರದಿಯನ್ನು ಡಿಜಿ ಮತ್ತು ಡಿಜಿಪಿಗೆ ನೀಡುವ ಮುನ್ನ ತನ್ನ ಮೇಲಧಿಕಾರಿಗೇಕೆ ನೀಡಲಿಲ್ಲ ಎನ್ನುವ ಪ್ರಶ್ನೆಯೇ ಅವರಿಗೆ ಮುಳುವಾಗಿದೆ.  
 ರೂಪಾ ಬಗ್ಗೆ ಒಂದಿಷ್ಟು ಮಾಹಿತಿ:
ರೂಪಾ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. 2001ರ ಬ್ಯಾಚಿನ ರೂಪಾ ದಾವಣಗೆರೆಯವರು. ಹುಟ್ಟಿ ಬೆಳೆದು, ಓದಿದ್ದು ದಾವಣಗೆರೆಯಲ್ಲಿ. ಇವರ ತಂದೆ ದಿವಾಕರ್ ತಮ್ಮಿಬ್ಬರು ಹೆಣ್ಣುಮಕ್ಕಳಾದ ರೂಪಾ ಮತ್ತು ರೋಹಿಣಿ ಅವರಿಗೆ ತಮ್ಮ ಕೈಲಾದಷ್ಟು ಉತ್ತಮ ಶಿಕ್ಷಣ ಕೊಡಿಸಿದರು. ರೂಪಾ ಮತ್ತು ರೋಹಿಣಿ ಇಬ್ಬರೂ ಕೇಂದ್ರ ಲೋಕಸೇವಾ ಪರೀಕ್ಷೆಯನ್ನು ಬರೆದು ಅದರಲ್ಲಿ ಉತ್ತೀರ್ಣಗೊಂಡರು. ರೂಪಾ ಐಪಿಎಸ್ ಅಧಿಕಾರಿಯಾದರೆ, ರೋಹಿಣಿ ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಸೆವೆಗೆ ನಿಯುಕ್ತರಾದರು.  ಇಬ್ಬರದೂ ಒಂದೇ ಜಾಯಮಾನ, ಅದೆಂದರೆ ಭ್ರಷ್ಟ ವ್ಯವಸ್ಥೆಯನ್ನು ಕಿತ್ತೊಗೆಯುವ ಅದರ ವಿರುದ್ದ ಸೆಟೆದು ನಿಲ್ಲುವ ಸ್ವಭಾವ, ಇಬ್ಬರೂ ಅದನ್ನು ಅನೇಕ ಬಾರಿ ಸಾಧಿಸಿ ತೋರಿಸಿದ್ದಾರೆ.
ನೋಡಲು ಸ್ಫುರದ್ರೂಪಿ ಸುಂದರಿಯಾಗಿರುವ ರೂಪಾ ಮನಃಶಾಸ್ತ್ರದಲ್ಲಿ ಎಎಂಎಸ್ಸಿ ಮುಗಿಸಿ ಐಪಿಎಸ್‌ನಲ್ಲಿ 49ನೆಯ ರ‌್ಯಾಂಕ್ ಗಳಿಸಿದ್ದರು.  ಐಐಟಿ ಇಂಜಿನಿಯರ್ ಆಗಿರುವ, ಪಂಜಾಬ್ ಮೂಲದ, ಓಡಿಶಾ ಕೇಡರ್‌ನ ಐಎಎಸ್ ಅಧಿಕಾರಿ ಮನೀಷ್ ಮೌದ್ಗೀಲ್ ಅವರನ್ನು ಪ್ರೀತಿಸಿ 2003ರಲ್ಲಿ ವಿವಾಹವಾಗಿದ್ದಾರೆ. ಮನೀಶ್ ಈಗ ಕರ್ನಾಟಕ ಸೇವೆಯಲ್ಲಿದ್ದಾರೆ. ಈ ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದೆ.
,,,,,,,,,,,,,,,,,,,,,,,,,,
ಕುವೆಂಪು ರಸ್ತೆ ವಿಸ್ತರಣೆ ಎಂದು?

ಕುವೆಂಪು ರಸ್ತೆಯ ಕೆಲವು ಸ್ಥಳಗಳಲ್ಲಿ ಬೇಕಾಬಿಟ್ಟಿಯಾಗಿ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳ ಕಣ್ಣಿಗೆ ಇವು ಬೀಳದಿರುವುದೇ ಆಶ್ಚರ್ಯದ ಸಂಗತಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿ ಧೋರಣೆಯಿಂದ ಈ ರಸ್ತೆಯಲ್ಲಿ ನಾಗರಿಕರು ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  ಇನ್ನಾದರೂ ಸ್ಥಳೀಯ ಜನಪ್ರತಿನಿಧಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಕುವೆಂಪು ರಸ್ತೆ ವಿಸ್ತಾರಗೊಳಿಸಲು ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆ ಮಾಡಿಸಬೇಕಿದೆ. ಇದರಿಂದ ನಗರದ ಮಧ್ಯೆ ಹದುಹೋಗಿರುವ ಈ ರಸ್ತೆಯಲ್ಲಿ ಸಂಚಾರ ಸುಗಮಗೊಳ್ಳಲಿದೆ. ಎಲ್ಲದಕ್ಕೂ ಮೊದಲು ಒತ್ತುವರಿದಾರರಿಗೆ ಬಿಸಿಮುಟ್ಟಿಸುವ ಕೆಲಸವನ್ನು ಪಾಲಿಕೆ ಆರಂಭಿಸಬೇಕಿದೆ.  

ಶಿವಮೊಗ್ಗ: ನಗರದಲ್ಲಿ ಅತ್ಯಧಿಕ ಜನ-ವಾಹನ ಸಂಚಾರ ದಟ್ಟಣೆಯಿರುವ ರಸ್ತೆಗಳಲ್ಲೊಂದಾಗಿರುವ ಹಾಗೆಯೇ ’ಅತ್ಯಂತ ಅಪಾಯಕಾರಿ’ ರಸ್ತೆಯೂ ಆಗಿರುವ ಕುವೆಂಪು ರಸ್ತೆ ವಿಸ್ತರಣೆ ಪ್ರಸ್ತಾಪ ಸಂಪೂರ್ಣವಾಗಿ ನೆನೆಗುದಿಗೆ ಬಿದ್ದಿದೆ. ಸದ್ಯದ ಸ್ಥಿತಿಗತಿ ಗಮನಿಸಿದರೆ ಈ ರಸ್ತೆ ಅಗಲೀಕರಣ ಆರಂಭವಾಗುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ.
   ಸುಮಾರು ಒಂದೂವರೆ ವರ್ಷದ ಹಿಂದೆ ಕುವೆಂಪು ರಸ್ತೆ ವಿಸ್ತಾರಗೊಳಿಸಿ ಮೇಲ್ದರ್ಜೆಗೇರಿಸಲು ಮಹಾನಗರ ಪಾಲಿಕೆ ಆಡಳಿತ ನಿರ್ಧರಿಸಿತ್ತು. ಲೋಕೋಪಯೋಗಿ ಇಲಾಖೆಯ ಮೂಲಕ ರಸ್ತೆಯ ಅಗಲೀಕರಣ ಹಾಗೂ ಮೇಲ್ದರ್ಜೆಗೇರಿಸಲು ತಗಲುವ ಖರ್ಚು - ವೆಚ್ಚಗಳ ಸಮಗ್ರ ಅಂದಾಜು ಪಟ್ಟಿಯನ್ನು ಸಿದ್ದಪಡಿಸಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ತೆರವುಗೊಳ್ಳಲಿರುವ ಕಟ್ಟಡಗಳ ವಿವರ, ಭೂ ಸ್ವಾದೀನಗೊಳಿಸಬೇಕಾಗಿರುವ ಪ್ರದೇಶದ ವಿವರಗಳನ್ನು ಕೂಡ ಲೋಕೋಪಯೋಗಿ ಇಲಾಖೆ ಸಿದ್ಧಪಡಿಸಿತ್ತು. ಸುಮಾರು 67 ರಿಂದ 70 ಕೋಟಿ ರೂ. ಅಗತ್ಯವೆಂದು ಹೇಳಿತ್ತು. ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಮೂಲಕವೇ ಅನುದಾನ ಬಿಡುಗಡೆ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಆದರೆ ಈ ಯೋಜನೆಗೆ ಸಂಬಂಧಿಸಿದ ಕಡತಗಳು ಬೆಂಗಳೂರಿನಲ್ಲಿ ಧೂಳು ಹಿಡಿಯುತ್ತಿದ್ದು, ಸರ್ಕಾರ ರಸ್ತೆ ಅಗಲೀಕರಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಿಲ್ಲ. ಲೋಕೋಪಯೋಗಿ ಇಲಾಖೆಯ ಮೂಲಗಳು ಹೇಳುವ ಪ್ರಕಾರ, ಸದ್ಯಕ್ಕೆ ಈ ಯೋಜನೆಗೆ ಅನುದಾನ ಬಿಡುಗಡೆಯಾಗುವ ಲಕ್ಷಣಗಳು ಇಲ್ಲ.
  ನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ ಕುವೆಂಪು ರಸ್ತೆಯು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿ ಸೇರಿದಂತೆ ಹಲವು ಪ್ರಮುಖ ರಸ್ತೆಗಳ ಸಂಪರ್ಕ ಕೊಂಡಿಯಾಗಿದೆ. ಪ್ರಮುಖ ವ್ಯಾಪಾರ, ವಹಿವಾಟು ಕೇಂದ್ರಗಳು, ಸರ್ಕಾರಿ ಇಲಾಖೆ ಕಚೇರಿ ಕಟ್ಟಡಗಳು ಈ ರಸ್ತೆಯ ಇಕ್ಕೆಲಗಳಲ್ಲಿವೆ. ಇದರಿಂದ ಈ ರಸ್ತೆಯಲ್ಲಿ ಅತ್ಯದಿಕ ಜನ-ವಾಹನ ಸಂಚಾರ ದಟ್ಟಣೆಯಿದೆ. ಈ ರಸ್ತೆಯಲ್ಲಿ ಪಾದಚಾರಿಗಳ ಸಂಚಾರಕ್ಕೆ ಫುಟ್‌ಪಾತ್ ವ್ಯವಸ್ಥೆಯೇ ಇಲ್ಲವಾಗಿದೆ. ರಸ್ತೆ ಮಧ್ಯದಲ್ಲಿಯೇ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಸಣ್ಣಪುಟ್ಟ ರಸ್ತೆ ಅಪಘಾತಗಳು ಸರ್ವೇ ಸಾಮಾನ್ಯ ಎಂಬಂತಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು ಎರಡೂವರೆ ಕಿ.ಮೀ.ನಷ್ಟಿರುವ ಈ ರಸ್ತೆಯನ್ನು ವಿಸ್ತಾರಗೊಳಿಸಿ ದ್ವಿ ಪಥ ರಸ್ತೆಯಾಗಿ ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿತ್ತು.
ಈ ರಸ್ತೆಯ ಇಕ್ಕೆಲಗಳಲ್ಲಿ ಕೆಲವೆಡೆ ರಸ್ತೆಯ ಜಾಗವನ್ನು ಅವ್ಯಾಹತವಾಗಿ ಒತ್ತುವರಿ ಮಾಡಲಾಗಿದೆ. ಕೆಲವು ಕಟ್ಟಡಗಳ ಕಾಂಪೌಂಡ್ ರಸ್ತೆ ಬದಿಯಲ್ಲಿಯೇ ಇದೆ. ಮತ್ತೆ ಕೆಲವು ಕಟ್ಟಡಗಳು ರಸ್ತೆ ಜಾಗ ಸೇರಿಕೊಂಡು ನಿರ್ಮಾಣ ಮಾಡಲಾಗಿದೆ. ಸೆಟ್‌ಬ್ಯಾಕ್ ನಿಯಮಗಳ ಯದ್ವಾತದ್ವಾ ಉಲ್ಲಂಘನೆಯಾಗಿದೆ. ಮತ್ತೊಂದೆಡೆ ಸ್ಥಳಿಯಾಡಳಿತ ಮಾತ್ರ ಈ ಬಗ್ಗೆ ಯಾವುದೆ ಕ್ರಮಕೈಗೊಳ್ಳದೆ ನಿರ್ಲಕ್ಷ್ಯವಹಿಸಿಕೊಂಡು ಬರುತ್ತಿದೆ.
ಕುವೆಂಪು ರಸ್ತೆಯಲ್ಲಿ ಹಲವು ಪ್ರಭಾವಿ ವ್ಯಕ್ತಿಗಳ ಕಟ್ಟಡಗಳಿವೆ. ಒಂದು ವೇಳೆ ಏನಾದರೂ ರಸ್ತೆ ಅಗಲೀಕರಣವಾದರೆ ಪ್ರಭಾವಿಗಳ ಕಟ್ಟಡಕ್ಕೆ ಧಕ್ಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಭಾವಿಗಳು ರಸ್ತೆ ವಿಸ್ತಾರವಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ವರ್ಷಗಳೇ ಕಳೆಯುತ್ತಾ ಬಂದರೂ ಈ ರಸ್ತೆಯ ವಿಸ್ತರಣೆ ಪ್ರಕ್ರಿಯೆಯೇ ಆರಂಭವಾಗಿಲ್ಲ ಎಂಬ ಮಾತು ಸರ್ವೇಸಾಮಾನ್ಯವಾಗಿ ಕೇಳಿಬರುತ್ತಿದೆ.


ಕುವೆಂಪು ರಸ್ತೆಯ ಕೆಲವು ಸ್ಥಳಗಳಲ್ಲಿ ಬೇಕಾಬಿಟ್ಟಿಯಾಗಿ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳ ಕಣ್ಣಿಗೆ ಇವು ಬೀಳದಿರುವುದೇ ಆಶ್ಚರ್ಯದ ಸಂಗತಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿ ಧೋರಣೆಯಿಂದ ಈ ರಸ್ತೆಯಲ್ಲಿ ನಾಗರಿಕರು ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನಾದರೂ ಸ್ಥಳೀಯ ಜನಪ್ರತಿನಿಧಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಕುವೆಂಪು ರಸ್ತೆ ವಿಸ್ತಾರಗೊಳಿಸಲು ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆ ಮಾಡಿಸಬೇಕಿದೆ. ಇದರಿಂದ ನಗರದ ಮಧ್ಯೆ ಹದುಹೋಗಿರುವ ಈ ರಸ್ತೆಯಲ್ಲಿ ಸಂಚಾರ ಸುಗಮಗೊಳ್ಳಲಿದೆ. ಎಲ್ಲದಕ್ಕೂ ಮೊದಲು ಒತ್ತುವರಿದಾರರಿಗೆ ಬಿಸಿಮುಟ್ಟಿಸುವ ಕೆಲಸವನ್ನು ಪಾಲಿಕೆ ಆರಂಭಿಸಬೇಕಿದೆ.
------------------------------------

Friday, 14 July 2017

  ಜಿ.ಪಂ. ಸದಸ್ಯರ ಅಧಿಕಾರ ಮೊಟಕು
  ಅಳಲು ತೋಡಿಕೊಳ್ಳುತ್ತಿರುವ ಸದಸ್ಯರು

ಶಿವಮೊಗ್ಗ,  : ಪಂಚಾಯತ್ ರಾಜ್ ವ್ಯವಸ್ಥೆಯ ಅಧಿಕಾರ ವಿಕೇಂದ್ರಿಕರಣ ನೀತಿಯಡಿ ಅಸ್ತಿತ್ವಕ್ಕೆ ಬಂದ ಜಿಲ್ಲಾ ಪಂಚಾಯ್ತಿ, ತಾಲೂಕು ಹಾಗೂ ಗ್ರಾಮ ಪಂಚಾಯ್ತಿಗಳು ಆಡಳಿತ ವ್ಯವಸ್ಥೆಯಲ್ಲಿ ತಮ್ಮದೇ ಆದ ಮಹತ್ವ ಹೊಂದಿವೆ. ಆದರೆ ಬದಲಾದ ಸನ್ನಿವೇಶದಲ್ಲಿ ನಾನಾ ಕಾರಣಗಳಿಂದ ಜಿಲ್ಲಾ ಪಂಚಾಯ್ತಿ ಆಡಳಿತ ತನ್ನ ಮಹತ್ವ ಉಳಿಸಿಕೊಳ್ಳಲು ಹೆಣಗಾಡುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ.
ವರ್ಷದಿಂದ ವರ್ಷಕ್ಕೆ ಜಿ.ಪಂ. ಆಡಳಿತಕ್ಕೆ ಸರ್ಕಾರದ ನಾನಾ ಯೋಜನೆಗಳಡಿ ಬಿಡುಗಡೆಯಾಗುತ್ತಿದ್ದ ಅನುದಾನ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ಶಾಸಕರಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ಮೂಲಕ ಜಿ.ಪಂ. ಸದಸ್ಯರ ಅಧಿಕಾರ ಕಸಿದುಕೊಳ್ಳುವ ಯತ್ನ ನಡೆಸಲಾಗುತ್ತಿದೆ. ಇದು ಪಂಚಾಯತ್ ರಾಜ್ ವ್ಯವಸ್ಥೆಯ ಆಶಯಕ್ಕೆ ಕೊಡಲಿ ಪೆಟ್ಟು ನೀಡುವಂತದ್ದಾಗಿದೆ ಎಂದು ಬಹುತೇಕ ಜಿ.ಪಂ. ಸದಸ್ಯರು ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದ್ದಾರೆ.
ಕಳೆದ ವರ್ಷ ಪಂಚಾಯತ್ ರಾಜ್ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದು ಅಧ್ಯಕ್ಷ - ಉಪಾಧ್ಯಕ್ಷರ ಮೀಸಲಾತಿಯ ಅಧಿಕಾರಾವಧಿಯನ್ನು ಐದು ವರ್ಷಗಳಿಗೆ ನಿಗದಿಪಡಿಸಿತು. ಜೊತೆಗೆ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಕಲ್ಪಿಸಿತು. ಹಾಗೆಯೇ ಸದಸ್ಯರ ಮಾಸಿಕ ಗೌರವ ಧನ ಹೆಚ್ಚಳ ಮಾಡಿತು. ಸರ್ಕಾರದ ಈ ಕ್ರಮ ನಿಜಕ್ಕೂ ಸ್ವಾಗತಾರ್ಹವಾದುದಾಗಿದೆ. ಆದರೆ ಇನ್ನೊಂದೆಡೆ ವಿವಿಧ ಯೋಜನೆಗಳ ಅನುಷ್ಠಾನದ ಜವಾಬ್ದಾರಿಯನ್ನು ಶಾಸಕರಿಗೆ ವಹಿಸುತ್ತಿದೆ. ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ ಫಲಾನುಭವಿಗಳ ಆಯ್ಕೆ ನಡೆಸಲಾಗುತ್ತಿದೆ. ಜಿ.ಪಂ. ಸದಸ್ಯರು ನಿರ್ವಹಣೆ ಮಾಡುತ್ತಿದ್ದ ಕೆಲಸಗಳನ್ನು ಶಾಸಕರಿಗೆ ವಹಿಸಲಾಗುತ್ತಿದೆ. ಹಾಗಾದರೆ ಜಿ.ಪಂ. ಸದಸ್ಯರು ಏನು ಮಾಡಬೇಕು ಎಂದು ಸದಸ್ಯರು ಪ್ರಶ್ನಿಸುತ್ತಾರೆ.
ಕುಡಿಯುವ ನೀರು ಯೋಜನೆ, 13 ನೇ ಹಣಕಾಸು ಅನುದಾನ, ವಸತಿ ಯೋಜನೆ, ಹೈನುಗಾರಿಕೆ ಫಲಾನುಭವಿಗಳ ಆಯ್ಕೆ ಸೇರಿದಂತೆ ಜಿ.ಪಂ. ಆಡಳಿತ ನಿರ್ಧಾರ ಕೈಗೊಳ್ಳಬೇಕಾದ ಹಲವು ಮಹತ್ವದ ಕಾರ್ಯಕ್ರಮಗಳ ಅನುಷ್ಠಾನದ ಜವಾಬ್ದಾರಿಯನ್ನು ಶಾಸಕರ ನೇತೃತ್ವದ ಸಮಿತಿಗೆ ವಹಿಸಲಾಗಿದೆ. ಇದರಿಂದ ಜಿ.ಪಂ. ಸದಸ್ಯರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಲಾಗುತ್ತಿದೆ. ಜಿ.ಪಂ.ಗೆ ಬಿಡುಗಡೆಯಾಗುವ ವಾರ್ಷಿಕ ಅನುದಾನವೂ ಕಡಿಮೆಯಾಗುತ್ತಿದೆ. ನಮಗೆ ಮತ ನೀಡಿ ಆಯ್ಕೆ ಮಾಡಿ ಕಳುಹಿಸಿದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗದಂತಾಗಿದೆ. ಒಂದೆಡೆ ಅಧಿಕಾರ ಕೊಟ್ಟಂತೆ ಮಾಡಿ, ಇನ್ನೊಂದೆಡೆ ಅಧಿಕಾರ ಕಿತ್ತುಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಜಿ.ಪಂ. ವ್ಯವಸ್ಥೆಯ ಮೇಲೆ ನಾಗರೀಕರು ವಿಶ್ವಾಸ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸದಸ್ಯರು ಅಳಲು ತೋಡಿಕೊಳ್ಳುತ್ತಾರೆ.
ಸರ್ಕಾರ ಜಿ.ಪಂ. ಆಡಳಿತದ ಬಲವಧನೆಗೆ ಕ್ರಮಕೈಗೊಳ್ಳಬೇಕು. ಅಧಿಕಾರ ಮೊಟಕುಗೊಳಿಸುವ ಕೆಲಸ ಮಾಡಬಾರದು. ಈ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮತ್ತಷ್ಟು ಸಶಕ್ತಗೊಳಿಸಲು ಮುಂದಾಗಬೇಕು. ಜಿ.ಪಂ. ಸದಸ್ಯರಿಗೆ ನೆಪಮಾತ್ರಕ್ಕೆ ಕೆಲವು ಅವಕಾಶ ಕಲ್ಪಿಸಿ, ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಮಾಡುವಂತೆ ನಿರ್ದೇಶನ ನೀಡಲಾಗುತ್ತದೆ. ಇದರಿಂದ ಜಿ.ಪಂ. ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯ ಅರ್ಹ ನಾಗರೀಕರಿಗೂ ಸರ್ಕಾರದ ಸೌಲಭ್ಯ ತಲುಪಿಸಲು ಸಾಧ್ಯವಾಗದಂತಾಗಿದೆ. ಮತ್ತೊಂದೆಡೆ ವಾರ್ಷಿಕವಾಗಿ ಲಭ್ಯವಾಗುವ ಅನುದಾನ ಕೂಡ ಕಡಿಮೆಯಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲಸ ಮಾಡುವುದಾದರೂ ಹೇಗೆ ಎನ್ನುವುದು ಜಿಪಂ ಸದಸ್ಯರ ಅಳಲಾಗಿದೆ.
 ’ಜಿಲ್ಲಾ ಪಂಚಾಯ್ತಿ ಆಡಳಿತ ವ್ಯಾಪ್ತಿಗೆ 32 ಇಲಾಖೆಗಳು ಬರುತ್ತವೆ. ಆದರೆ ಇಲಾಖೆಯ ಹಲವು ಕಾರ್ಯಕ್ರಮಗಳ ಅನುಷ್ಠಾನ ಶಾಸಕರ ಅಣತಿಯಂತೆ ನಡೆಯುತ್ತಿವೆ.  . ಪಂಚಾಯತ್ ರಾಜ್ ಕಾಯ್ದೆಯಡಿ ಜಿ.ಪಂ.ಗಿರುವ ಅಧಿಕಾರವನ್ನು ಇಲಾಖೆಗಳ ಆಯುಕ್ತರು ಸುತ್ತೋಲೆಗಳ ಮೂಲಕ ಮೊಟಕುಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಪಂಚಾಯತ್ ರಾಜ್ ಇಲಾಖೆಯಡಿ ಬರುವ ಪಿಡಿಓಗಳು ಸದಸ್ಯರ  ಮಾತು ಕೇಳದಂತಹ ಸ್ಥಿತಿಯಿದೆ. ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆ ಜವಾಬ್ದಾರಿಯನ್ನು ಶಾಸಕರ ನೇತೃತ್ವದ ಸಮಿತಿಗೆ ನೀಡಲಾಗುತ್ತಿದೆ ಎಂಬ ದೂರು ಕೇಳಿಬರುತ್ತಿದೆ.

---------------------------------

Wednesday, 12 July 2017

ಕಂಪನಿ ನಾಟಕದಂತೆ ಭಾಸವಾದ ‘ಸಂಸಾರದಲ್ಲಿ ಸನಿದಪ’


ರಂಗಾಯಣ ಶಿವಮೊಗ್ಗದವರು ತಮ್ಮ ಎರಡನೆಯ ನಾಟಕ ‘ಸಂಸಾರದಲ್ಲಿ ಸನಿದಪ’ವನ್ನು ಜುಲೈ 8ರಂದು ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಅಭಿನಯಿಸಿದರು. ಗಟ್ಟಿಯಾದ ಸತ್ವವನ್ನು ಹೊಂದಿರದ, ಕೇವಲ ಹಾಸ್ಯನಾಟಕವಾಗಿ, ಪ್ರೇಕ್ಷಕರು ನಗೆಗಡಲಲ್ಲಿ ತೇಲಲು ನಾಟಕ ಕಾರಣವಾಯಿತು. ನಿರ್ದೇಶನ ಇನ್ನಷ್ಟು ಬಿಗಿಯಾಗಿದ್ದರೆ ನಾಟಕ ಕಳೆಗಟ್ಟುತ್ತಿತ್ತು. ಜೊತೆಗೆ ಬೈಗುಳ ಪದಗಳಿಗೆ ಕೊರತೆ ಕಂಡುಬರಲಿಲ್ಲ. ಪಾತ್ರಧಾರಿಗಳು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಂತೂ ಸುಳ್ಳಲ್ಲ. ಆದರೆ ಪ್ರೇಕ್ಷಕರು ನಿರೀಕ್ಷಿಸಿದ ಗುಣಮಟ್ಟದ ನಾಟಕ ಇದಾಗಿರಲಿಲ್ಲ.  



ಇತ್ತೀಚಿನ ವರ್ಷಗಳಲ್ಲಿ ದಂಪತಿಗಳ ನಡುವಿನ ಸಂಬಂಧ ಮಧುರವಾಗಿ ನೆಲೆಗೊಳ್ಳುತ್ತಿಲ್ಲ. ಆಧುನಿಕ ಜಗತ್ತಿನ ನಾಗಾಲೋಟದಲ್ಲಿ ದಾಂಪತ್ಯದಲ್ಲೂ ನೈತಿಕತೆ, ಸಾಮರಸ್ಯ  ದೂರವಾಗುತ್ತಿದೆ. ಕುಟುಂಬದಲ್ಲಿನ ಅಭಿರುಚಿ, ಸಂಬಂಧಗಳ ಗ್ರಹಿಕೆಯ ಪಲ್ಲಟವಾಗುತ್ತಿದೆ. ಸಂಸಾರ ಎನ್ನುವುದು  ತನ್ನತನವನ್ನು ಉಳಿಸಿಕೊಳ್ಳದೆ ಗಂಡನ ದಾರಿ ಗಂಡನಿಗೆ, ಹೆಂಡತಿಯ ದಾರಿ ಹೆಂಡತಿಗೆ ಎನ್ನುವಂತಹ ಪರಿಸ್ಥಿತಿ ಎದುರಾಗಿದೆ. ಈ ದುರಂತವನ್ನು ಕಟ್ಟಿಕೊಡುವ ನಾಟಕವೇ ‘ಸಂಸಾರದಲ್ಲಿ ಸನಿದಪ’.
ಶಿವಮೊಗ್ಗ ರಂಗಾಯಣದವರು ಪ್ರದರ್ಶಿಸಿದ ಎರಡನೆಯ ನಾಟಕ ಇದು. ರಂಗಾಯಣದ ಕಲಾವಿದರು ಉತ್ತಮ ನಟನೆಗೆ ಹೆಸರುವಾಸಿ. ಇದರಲ್ಲಿ ಎರಡು ಮಾತಿಲ್ಲ. ಇದನ್ನು ಈ ನಾಟಕದಲ್ಲೂ ಸಾಬೀತುಪಡಿಸಿದ್ದಾರೆ. ಇಟಲಿಯ ನಾಟಕಕಾರ ದಾರಿಯೋ ಪೋ ಅವರ ಕೃತಿಯನ್ನು ನೀನಾಸಂನ ಕೆ. ವಿ. ಅಕ್ಷರ ಕನ್ನಡಕ್ಕೆ ತರ್ಜುಮೆ ಮಾಡಿದ್ದು, ಮಂಜು ಕೊಡಗು ಇದನ್ನು ನಿರ್ದೇಶಿಸಿದ್ದಾರೆ. ಆದರೆ ಈ ನಾಟಕವನ್ನು ಮರುರೂಪಿಸಲಾಗಿದೆ. ಎರಡು ಪಾತ್ರಗಳನ್ನು ಹೆಚ್ಚುವರಿಯಾಗಿ ಸೃಷ್ಟಿಸಲಾಗಿದೆ.
ಪ್ರಸ್ತುತ ನಾಟಕದ ಹೆಸರೇ ‘ಸಂಸಾರದಲ್ಲಿ ಸನಿದಪ’ ಹೇಳುವಂತೆ ಇಲ್ಲಿ ಬರುವ ಸಂಸಾರಗಳೆಲ್ಲ ಸರಿಗಮಪದನಿಸವಾಗದೆ ಸನಿದಪಗಳಾಗಿವೆ, ಉಲ್ಟಾಪಲ್ಟಾ ಆಗಿವೆ. ಸರಿಯಾಗಿ ಸಾಗದೆ ಅಡ್ಡದಾರಿ ಹಿಡಿಯುತ್ತವೆ. ಕಳ್ಳನ ದಾಂಪತ್ಯದಿಂದ ಹಿಡಿದು ವಿದ್ಯಾವಂತನೆನಿಸಿಕೊಂಡ ಪೊಲೀಸ್ ಅಧಿಕಾರಿಯ ಕುಟುಂಬದವರೆಗೆ ಸಂಬಂಧಗಳು ಅಡ್ಡದಾರಿ ಹಿಡಿಯುತ್ತಿರುವುದನ್ನು ಸಮರ್ಥವಾಗಿ ಇಲ್ಲಿ ನಿರೂಪಿಸಲಾಗಿದೆ. ನಾಟಕದ ಸಂದೇಶ ಎಲ್ಲರಿಗೂ ಮನದಟ್ಟಾಗುತ್ತದೆ. ತೀರ ಸರಳವಾಗಿ ನಾಟಕ ರಚಿಸಲಾಗಿದೆ.
 ಗಂಡ ಇನ್ನೊಂದು ಹೆಣ್ಣಿನ ಸಂಗಡ, ಹೆಣ್ಣು ಇನ್ನೊಂದು ಗಂಡಿನ ಸಂಗಡ  ಸಂಬಂಧ ಇಟ್ಟುಕೊಂಡ ನಾಲ್ಕು ದಂಪತಿಗಳ ಕಥೆ ಇದು. ಗಂಡನ  ಸ್ತ್ರೀ ವ್ಯಾಮೋಹ ಆತನ ಹೆಂಡತಿಗೆ        ಗೊತ್ತ್ತಾಗುವುದಿಲ್ಲ. ಹೀಗೆ ಕೆಲವು ದಿನಗಳವರೆಗೆ ಸಂಬಂಧ ಮುಂದುವರೆದು ನಂತರ ಬಯಲಾಗುತ್ತದೆ. ಕಳ್ಳತನಕ್ಕೆ ಬಂದ ವ್ಯಕ್ತಿ ಮನೆಯ ಮಾಲಕನ ಅನೈತಿಕತೆಯನ್ನು ಅಡಗಿ ಕುಳಿತು ಪತ್ತೆ ಮಾಡುತ್ತಾನೆ. ಈ ವೇಳೆ ಕಳ್ಳನು ಹೇಳುವ ಉಪದೇಶದ ಮಾತುಗಳು, ಕೆಲವು ಡೈಲಾಗ್‌ಗಳು, ಸರ್ವಜ್ಞನ ವಚನಗಳು ಕೇಳಲು ಮಾತ್ರ  ಹಿತವೆನಿಸುತ್ತವೆ. ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತವೆ. ಇದೇ ಮನೆಗೆ ಅನೈತಿಕತೆಯ ಪೊಲೀಸ್ ಅಧಿಕಾರಿಯೊಬ್ಬ ಬರುವುದು, ಆತನನ್ನು ಹುಡುಕಿಕೊಂಡು ಆತನ ಪತ್ನಿ ಬರುವುದು, ಮನೆಯ ಮಾಲಕನ ಪತ್ನಿ ಬರುವುದು, ಆ ಪತ್ನಿ ತನ್ನ ಯಜಮಾನ ಕರೆದುಕೊಂಡು ಬಂದ ಮಹಿಳೆಯ ಪತಿಯನ್ನು ತಾನು ಕರೆದುಕೊಂಡು ಬರುವುದು....
ಹೀಗೆ ನಾಟಕ ಸಾಗುತ್ತದೆ. ಒಬ್ಬರ ಅನೈತಿಕತೆಯನ್ನು ಇನ್ನೊಬ್ಬರು ಬಯಲು ಮಾಡುವುದು, ನಂತರ ಎಲ್ಲರೂ ತಾವೆಲ್ಲರೂ ಹಾದಿತಪ್ಪಿದವರೆಂದು ಒಪ್ಪಿಕೊಳ್ಳುವುದು, ಮತ್ತೆ ಸರಿದಾರಿಗೆ ಬರುವುದರೊಂದಿಗೆ ನಾಟಕ ಅಂತ್ಯಗೊಳ್ಳುತ್ತದೆ.
ಒಟ್ಟಾರೆಯಾಗಿ, ನಾಟಕ ಮುಗಿದಾಗ ಇದೊಂದು ತೀರಾ ತಮಾಷೆಯ, ಹಾಸ್ಯ ನಾಟಕವಾಗಿಯಷ್ಟೇ ಗೋಚರವಾಗುತ್ತದೆ. ನಿರ್ದೇಶಕರು ನಾಟಕದ ಕಥೆಯನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟಿಕೊಡಬಹುದಿತ್ತೇನೋ ಎಂದೆನಿಸುತ್ತದೆ.  ಕೇವಲ ನಗೆಯುಕ್ಕಿಸುವ, ಗಂಡು- ಹೆಣ್ಣಿನ  ಹಾದರದ ಬಗ್ಗೆ ತಿಳಿಸುವುದಕ್ಕಷ್ಟೇ ಇದು ಸೀಮಿತವಾಗುತ್ತದೆ. ರಂಗಾಯಣದಂತಹ ತಂಡಗಳು ನಾಟಕದ ಕಥಾವಸ್ತುವನ್ನು ಇಷ್ಟೊಂದು ಜೊಳ್ಳಾಗಿ ಅಥವಾ ಸರಳವಾಗಿ ಆಯ್ಕೆಮಾಡುತ್ತವೆ ಎಂದರೆ ಆಶ್ಚರ್ಯವಾಗುತ್ತದೆ. ಇನ್ನಷ್ಟು ಪ್ರಬುದ್ಧತೆಯ  ನಿರ್ದೇಶನ ಇರಬೇಕಿತ್ತು. ನಾಟಕ ಒಂದು ಗಟ್ಟಿಯಾದ ಸತ್ವವನ್ನು ಒಳಗೊಂಡಾಗ ಮಾತ್ರ ಅದು ಶಾಶ್ವತವಾಗಿ ನಮ್ಮಲ್ಲಿ ತಳವೂರಲು ಸಾಧ್ಯ. ಇಲ್ಲವಾದಲ್ಲಿ ಇಂತಹ ಕತೆಗಳು ಕಂಪನಿ ನಾಟಕಗಳನ್ನು ನೆನಪಿಗೆ ತರುತ್ತವೆ. ಏಕೆಂದರೆ ಅವುಗಳ ಕತೆಗಳೂ ಇದೇ ತೆರನಾಗಿರುತ್ತವೆ. ಅಂತಹ ಸಾಮ್ಯತೆ ರಂಗಾಯಣದಂತಹ ತಂಡದಲ್ಲಿ ಬರಬಾರದು.
ಎರಡನೆಯದಾಗಿ, ನಾಟಕದಲ್ಲಿ ಕಳ್ಳ ಮತ್ತು ಆತನ ಹೆಂಡತಿಯ ಬಾಯಿಯಿಂದ ಬರುವ ಅಣಿಮುತ್ತುಗಳನ್ನು ಕೇಳಿದರೆ ಎಂತಹವರೂ ತಲೆತಗ್ಗಿಸುತ್ತಾರೆ. ಅಷ್ಟೊಂದು ಕೆಟ್ಟ, ಅವಾಚ್ಯ ಶಬ್ದಗಳನ್ನು ಬಳಸುವ ಅವಶ್ಯಕತೆ ಇತ್ತೇ ಎನ್ನುವ ಪ್ರಶ್ನೆ  ಪ್ರೇಕ್ಷಕರನ್ನು ಕಾಡದಿರದು. ಕೇವಲ ಅನೈತಿಕತೆಯನ್ನೇ ಇಡೀ ನಾಟಕದ ತುಂಬಾ ಬಿಂಬಿಸುವಂತಹ ನಾಟಕ ಬೇಕೇ ಎಂಬ ಪ್ರಶ್ನೆಯೂ ಎದುರಾಗುತ್ತದೆ.
ಇದೇನೇ ಇದ್ದರೂ ನಟರೆಲ್ಲ ತಮ್ಮ ಪಾತ್ರಕ್ಕೆ ಜೀವ ತುಂಬುವಲ್ಲಿ ಸಫಲರಾಗಿದ್ದಾರೆ. ಕಳ್ಳನ ಪಾತ್ರ ಮಾಡಿದ ರವಿಕುಮಾರ್ ಎಲ್ಲರ ಮನಸೆಳೆಯುತ್ತಾರೆ. ತಮ್ಮ ವೇಷಭೂಷಣ, ಹಾವಭಾವ, ಕುಡುಕನ ಪಾತ್ರ, ಮಾತುಗಾರಿಕೆ ಮೂಲಕ ಕೊನೆಯವರೆಗೂ ನಾಟಕಕ್ಕೆ ಕಳೆಗಟ್ಟುವಂತೆ ಮಾಡುತ್ತಾರೆ. ಅವರ ಪತ್ನಿಯ ಪಾತ್ರಧಾರಿ ರೇವತಿಯ ಪಾತ್ರವೂ ಅಷ್ಟೇ  ಸೊಗಸಾಗಿದೆ. ಇವರಿಬ್ಬರೇ ಇಡೀ ನಾಟಕದ ಜೀವಾಳ ಎನ್ನಬಹುದು.
ರಂಗಸಜ್ಜಿಕೆ ಮತು ಬೆಳಕಿನ ನಿರ್ವಹಣೆ ಎಲ್ಲವೂ ಸೊಗಸಾಗಿತ್ತು. ರಂಗಯಣದ ನಾಟಕವಾದ್ದರಿಂದಲೋ ಏನೋ ಜನಸಮೂಹವೂ ಸಹ ಉತ್ತಮವಾಗಿಯೇ ಇತ್ತು. ಒಟ್ಟಾರೆಯಾಗಿನಾಟಕ ಉತ್ತಮ ಮನರಂಜನೆ ಮೂಲಕ ಪ್ರೇಕ್ಷಕರನ್ನು ಸೆೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.  
..............................

Tuesday, 11 July 2017

ರಾಜ್ಯಾದ್ಯಂತ ಹೊಸ ಸಮಗ್ರ ಪ್ರದೇಶ 
ಯೋಜನೆಯ ಸಾರಿಗೆ ನೀತಿ 
ಖಾಸಗಿಯವರಿಗೆ ಹೊಸ ಪರವಾನಿಗೆ ನೀಡಲು ನಿರ್ಬಂಧ 
ರಾಜ್ಯಾದ್ಯಂತ ಹೊಸ ಸಮಗ್ರ ಪ್ರದೇಶ ಯೋಜನೆ (ಓತಿ ಅಠಿಡಿಟಿ ಂಡಿಚಿ ಛಿ ಜಿಡಿ ಇಟಿಣಡಿ ಣಚಿಣ ಜಿ ಏಚಿಡಿಟಿಚಿಣಚಿಞಚಿ) ಯನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ  ಕರ್ನಾಟಕ ವಿಶೇಷ ರಾಜ್ಯಪತ್ರದಲ್ಲಿನ ಅಧಿಸೂಚನೆ ಸಂಖ್ಯೆ:ಸಾರಿಇ174 ಸಾಇಪ 2015 ಬೆಂಗಳೂರು ದಿ.10-06-2016 ರಂದು  ಹೊರಡಿಸಲಾಗಿದೆ.
ಇದರ ಪ್ರಕಾರ,  ಕರ್ನಾಟಕ ರಾಜ್ಯಾದ್ಯಂತ ಕೆ.ಎಸ್.ಆರ್.ಟಿ.ಸಿ ಬಸ್‌ಗಳನ್ನು ಹೊರತುಪಡಿಸಿ ಖಾಸಗಿಯವರಿಗೆ ಹೊಸ ಪರವಾನಿಗೆಗಳನ್ನು ನೀಡಲು ನಿರ್ಬಂಧಿಸಲಾಗಿದೆ. ಇದು ಖಾಸಗಿ ಬಸ್ ವಲಯಕ್ಕೆ ಭಾರೀ ಪೆಟ್ಟು ನೀಡಲಿದೆ. ಈಗಾಗಲೆ ಇದನ್ನು ಶಿವಮೊಗ್ಗ ಸಹಿತ ರಾಜ್ಯದ ಇತರ ಜಿಲ್ಲೆಯ ಖಾಸಗಿ ಬಸ್ ಮಾಲಕರ ಸಂಘದವರು ವಿರೋಧಿಸಿದ್ದಾರೆ. ಆದರೆ ಖಾಸಗಿಯವರ ಹಾವಳಿಯನ್ನು ತಪ್ಪಿಸಿ ಸಾರ್ವಜನಿಕರಿಗೆ ಸರ್ಕಾರಿ ಬಸ್ ಸೇವೆಯನ್ನು ಒದಗಿಸುವ ಉದ್ದೇಶವನ್ನು ಈ ನೀತಿ ಹೊಂದಿದೆ. ಇದಕ್ಕಾಗಿ ಸರ್ಕಾರ ಈಗ ಸಾರಿಗೆ ವಿಭಾಗಗಳ ಸಂಖ್ಯೆ ಮತ್ತು ಡಿಪೋಗಳನ್ನು ಹೆಚ್ಚಿಸುತ್ತಿದೆ.
ಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿಯನ್ನು ಉದ್ಘಾಟಿಸಲಾಗಿದೆ. ಶೀಘ್ರದಲ್ಲಿ ಚಿತ್ರದುರ್ಗ ಸಹ ವಿಭಾಗೀಯ ಕಚೇರಿ ಹೊಂದಲಿದೆ. ಇದರಿಂದ ಬಸ್‌ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ. ವಿಶೇಷವಾಗಿ ಗ್ರಾಮಾಂತರ ಭಾಗದ ಜನರಿಗೆ ಇನ್ನಷ್ಟು ಸೌಲಭ್ಯ ದೊರೆಯಲಿದೆ. ಇಲ್ಲಿಯವರೆಗೆ ಖಾಸಗಿಯವರು ಇಲ್ಲಿ ಬಸ್ ಓಡಿಸುತ್ತಿದ್ದರು. ಕೆಲವೆಡೆಯಂತೂ ಅವರದ್ದೇ ಏಕಸ್ವಾಮ್ಯವಾಗಿತ್ತು. ರಜಾ ದಿನದಂದು ಪ್ರಯಾಣಿಕರಿಲ್ಲ ಎಂಬ ನೆಪ ಒಡ್ಡಿ ಬಸ್ ಸಂಚಾರ ಸ್ಥಗಿತಗೊಳಿಸುತ್ತಿದ್ದರು. ಇನ್ನೂ ಕೆಲವು ಸಂದರ್ಭಗಳಲ್ಲಿ ಮದುವೆ, ಜಾತ್ರೆ, ಸಮಾವೇಶಗಳಿಗೆ ಬಸ್ ನೀಡಿ ಪ್ರಯಾಣಿಕರನ್ನು ಗೋಳು ಹೊಯ್ದುಕೊಂಡಿದ್ದೂ ಇದೆ.
ಇತ್ತೀಚಿನ ದಿನಗಳಲ್ಲಿ ಖಾಸಗಿ ಬಸ್‌ಗಳ ಬಗ್ಗೆ ಅಸಹನೆ ಹೆಚ್ಚುತ್ತಿರುವುದು ಕಂಡುಬಂದಿತ್ತು. ಕೆಎಸ್ಸಾರ್ಟಿಸಿ ಬಸ್ ವೇಳೆಯೇ ಬೆಂಗಳೂರಿಗೆ ಬಸ್ ಓಡಿಸುವುದು, ಒಂದು ಪರವಾನಿಗೆ ಪಡೆದು ಹತ್ತಾರು ಬಸ್ ಓಡಿಸುವುದು ನಡೆದಿತ್ತು. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಎದುರೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು, ಬಲವಂತವಾಗಿ ಬಸ್‌ಗೆ ಕರೆಯುವ ಬಗ್ಗೆ ದೂರು ಕೇಳಿಬಂದಿದ್ದವು. ಇವಕ್ಕೆಲ್ಲ ಅಂತ್ಯ ಹಾಡಲು ಸರ್ಕಾರ ಕೊನೆಗೂ ನಿರ್ಧರಿಸಿ, ಎಚ್ಚೆತ್ತು ಕಡಿವಾಣ ಹಾಕಲು ಮುಂದಾಗಿದೆ. ಇದಕ್ಕಾಗಿ  ರಾಜ್ಯಾದ್ಯಂತ ಹೊಸ ಸಮಗ್ರ ಪ್ರದೇಶ ಯೋಜನೆಯ ಸಾರಿಗೆ ನೀತಿ  ಜಾರಿಗೆಗೆ ಮುಂದಾಗಿದೆ.
ಇದು ಖಾಸಗಿಯವರಿಗೆ ಬಿಸಿತುಪ್ಪವಾಗಿದೆ. ಒಂದು ವೇಳೆ ಜಾರಿಯಾದರೆ ಖಾಸಗಿ ಬಸ್‌ಗಳ ಆಟಾಟೋಪಕ್ಕೆ ಕಡಿವಾಣ ಬೀಳುವುದಲ್ಲದೆ ಎಷ್ಟೋ ಕಡೆ ಸಂಚಾರ ನಿಲ್ಲಿಸಬೇಕಾಗುತ್ತದೆ. ಏಕೆಂದರೆ ಪರವಾನಿಗೆ ಇಲ್ಲದೆಯೇ ಬಸ್ ಓಡಿಸುತ್ತಿರುವುದು ಹಲವೆಡೆ ಇದೆ. ಇದನ್ನೆಲ್ಲ ಅರಿತ ಖಾಸಗಿ ಬಸ್ ಮಾಲಕರ ಸಂಘದವರು ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಖಾಸಗಿ ಬಸ್ ಉದ್ಯಮ ಮಾಲಕರ ವಾಹನ ಹಾಗು ಬಿಡಿಭಾಗ ಮಾರಾಟಗಾರರ, ಸಿಬ್ಬಂದಿಗಳ, ಹಾಗೂ ಅವಲಂಬಿರತ ಕುಟುಂಬಗಳ ಹಾಗು ಸಂಪೂರ್ಣ ಉದ್ಯಮವು ನಶಿಸಿಹೋಗುವ ಸಂದರ್ಭ ಇರುವುದರಿಂದ, ಈ ಖಾಸಗಿ ಮಜಲು ವಾಹನ ಉದ್ಯಮವನ್ನು ಕೆಎಸ್‌ಆರ್‌ಟಿಸಿ ಯೊಡನೆ 50:50 ಅನುಪಾತದಂತೆಯಾದರೂ ನಿರ್ವಹಿಸಲು ಅವಕಾಶ ನೀಡಬೇಕೆಂದು ಕೋರಿಕೊಂಡಿದ್ದಾರೆ.


ಖಾಸಗಿ ಬಸ್ಸು ಸರ್ವೀಸನ್ನು ಒಂದು ಉದ್ಯಮವೆಂದು ಪರಿಗಣಿಸಿರುವುದರಿಂದ (ಮೋಟಾರ್ ಇಂಡಸ್ಟ್ರಿ), ಒಂದು ಉದ್ಯಮವನ್ನೇ ಅವಲಂಬಿತರಾಗಿ ಜೀವನ ಸಾಗಿಸುತ್ತಿರುವ, ಸಾವಿರಾರು ಜನರಿಗೆ ತೊಂದರೆಯಾಗಲಿದೆ. ಮೆಕ್ಯಾನಿಕ್, ಬ್ಲಾಕ್‌ಸ್ಮಿತ್, ವೆಲ್ಡಿಂಗ್, ಪೇಂಟಿಂಗ್, ಗ್ಲಾಸ್‌ವರ್ಕ್, ಲೇತ್ ವರ್ಕ್, ಎಲೆಕ್ಟ್ರಿಕಲ್ ವರ್ಕ್, ಬಾಡಿ ಬಿಲ್ಡಿಂಗ್, ಟೈರ್ ಉದ್ಯಮ, ವಾಹನ ಮಾರಾಟಗಾರರು, ವಾಹನಗಳ ಬಿಡಿಭಾಗಗಳ ಮಾರಾಟಗಾರರು, ಸಾವಿರಾರು ಜನ ಸಬ್ ಏಜೆಂಟರು, ನಿರ್ವಾಹಕರು, ಚಾಲಕರು, ಡೀಸೆಲ್ ಬಂಕ್‌ನವರು ಸೇರಿದಂತೆ ಸಮಾಜದ ಎಲ್ಲಾ ವೃತ್ತಿಯವರಿಗೆ ಇದರಿಂದ ಭಾರಿ ಪೆಟ್ಟು ಬೀಳಲಿದೆ.  ಶಿವಮೊಗ್ಗ ಜಿಲ್ಲೆ ಸೇರಿದಂತೆ ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಮೈಸೂರು, ತುಮಕೂರು, ದಾವಣಗೆರೆ, ಚಿತ್ರದುರ್ಗ ಇವುಗಳ ವ್ಯಾಪ್ತಿಯನ್ನು ಪರಿಗಣಿಸಿದರೆ ಊಹಿಸಲು ನಿಲುಕದಷ್ಟು ತೊಂದರೆಯಾಗಲಿದೆ
-ರಾಜ್ಯ ಖಾಸಗಿ ಬಸ್ ಮಾಲಕರ ಸಂಘ.
......................

’ಸ್ಮಾರ್ಟ್ ಸಿಟಿ’ ಯೋಜನೆ ಅನುಷ್ಠಾನದಲ್ಲಿ 
ಸಾರ್ವಜನಿಕರ ಸಹಭಾಗಿತ್ವವಿಲ್ಲವೇ? 

  ’ಸ್ಮಾರ್ಟ್ ಸಿಟಿ’ ಎಂದರೇ ರಸ್ತೆ, ಸೇತುವೆ ನಿರ್ಮಾಣ, ಕಟ್ಟಡಗಳ ಅಭಿವೃದ್ಧಿಯಲ್ಲ. ಈ ಯೋಜನೆಯು ಸಮಾಜದ ತಳಮಟ್ಟದ ವ್ಯಕ್ತಿಯನ್ನು ಒಳಗೊಳ್ಳಬೇಕು. ಯೋಜನೆಗಳ ಅನುಷ್ಠಾನದಲ್ಲಿ ದೂರದೃಷ್ಟಿಯಿರಬೇಕು. ಮುಂದಿನ 20 ವರ್ಷಗಳ ಅವಧಿಯಲ್ಲಿ ನಗರದಲ್ಲಿನ ಜನಸಂಖ್ಯೆ ಎಷ್ಟಾಗಲಿದೆ, ನಗರದ ಬೆಳವಣಿಗೆಯ ಗತಿ ಯಾವ ರೀತಿಯಲ್ಲಿರಲಿದೆ, ವಾಹನಗಳ ಸಂಚಾರ ಎಷ್ಟಾಗಲಿದೆ ಎಂಬಿತ್ಯಾದಿ ಮಹತ್ವದ ಅಂಶಗಳ ಪರಿಗಣನೆ ಮಾಡಬೇಕು.
- ಎನ್.ಗೋಪಿನಾಥ್, ’ನನ್ನ ಕನಸಿನ ಶಿವಮೊಗ್ಗ’ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ   

ಶಿವಮೊಗ್ಗ:   ’ಸ್ಮಾರ್ಟ್ ಸಿಟಿ’ ಯೋಜನೆಯಡಿ ಆಯ್ಕೆಯಾದ ನಗರಗಳಲ್ಲಿ ನೂರಾರು ಕೋಟಿ ರೂ. ವೆಚ್ಚದ ಕಾಮಗಾರಿಗಳು ಅನುಷ್ಠಾನಗೊಳ್ಳಲು ಸಿದ್ದತೆ ನಡೆದಿದೆ. ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿಯೇ ಪ್ರತ್ಯೇಕ ವಾಹಕ ಘಟಕ, ಕಚೇರಿ, ಐಎಎಸ್ ದರ್ಜೆಯ ಅಧಿಕಾರಿಗಳ ನಿಯೋಜನೆಯನ್ನು ಕೂಡ ಕೇಂದ್ರ ಸರ್ಕಾರ ಮಾಡಿದೆ. ಅದರಂತೆ ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನಕ್ಕೆ ಮಹಾನಗರ ಪಾಲಿಕೆಯ ಆಯುಕ್ತ ಮುಲ್ಲೈ ಮುಹಿಲನ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ಕಚೇರಿ ಕಟ್ಟಡಕ್ಕೂ ಈಗಾಗಲೇ ಜಾಗ ಗುರುತಿಸಲಾಗಿದೆ. ಕನ್ಸಲೆಂಟ್‌ಗಳನ್ನು ನೇಮಕ ಮಾಡಲಾಗಿದ್ದು, ಈಗಾಗಲೇ ಇವರು ನಗರದ ವಿವಿಧೆಡೆ ಸಂಚರಿಸಿ ಯೋಜನೆಗಳ ಅನುಷ್ಠಾನದ ರೂಪುರೇಷೆಗಳನ್ನು ಭರದಿಂದಲೇ ಸಿದ್ದಪಡಿಸಲಾರಂಭಿಸಿದ್ದಾರೆ. ’ಸ್ಮಾರ್ಟ್ ಸಿಟಿ’ ಯೋಜನೆಯ ಕಾಮಗಾರಿಗಳ ಅನುಷ್ಠಾನದ ಕುರಿತಂತೆ ಆಡಳಿತ ವ್ಯವಸ್ಥೆಯಲ್ಲಿ ಸಮರೋಪಾದಿಯ ಪೂರ್ವಭಾವಿ ಸಿದ್ದತೆಗಳು ನಡೆಯುತ್ತಿವೆ. ಆದರೆ ಇದರ ಬಗ್ಗೆ ನಾಗರಿಕರಿಗೆ ಮಾತ್ರ  ಸೂಕ್ತ ಮಾಹಿತಿಯೇ ಇಲ್ಲ.  
’ಸ್ಮಾರ್ಟ್ ಸಿಟಿ’  ಯೋಜನೆ ಅನುಷ್ಠಾನದ ಪ್ರತಿ ಹಂತದಲ್ಲಿಯೂ ಸ್ಥಳಿಯ ನಾಗರಿಕರ ಅಭಿಪ್ರಾಯ, ಸಲಹೆ-ಸೂಚನೆ ಪಡೆದುಕೊಳ್ಳುವುದು, ಅವರ ಸಹಭಾಗಿತ್ವದಲ್ಲಿಯೇ ಯೋಜನೆ ಅನುಷ್ಠಾನಗೊಳಿಸುವುದು ಕಡ್ಡಾಯವಾಗಿದ್ದರೂ ಜಾರಿಯಾಗುತ್ತಿಲ್ಲ.  
ಈ ಹಿಂದೆ ಸ್ಮಾರ್ಟ್ ಸಿಟಿ ಯೋಜನೆಗೆ ನಗರಗಳ ಆಯ್ಕೆಗೂ ಮುನ್ನ ಮಹಾನಗರ ಪಾಲಿಕೆ ಆಡಳಿತವು ನಗರಾದ್ಯಂತ ಭಾರೀ ದೊಡ್ಡ ಮಟ್ಟದಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ಕೆಲಸ ನಡೆಸಿತ್ತು. ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಸಮಾಜದ ನಾನಾ ವರ್ಗದವರು ನಗರದ ಅಭಿವೃದ್ಧಿ ಯಾವ ದಿಕ್ಕಿನಲ್ಲಿರಬೇಕು ಎಂಬುವುದರ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.
ನಾಗರಿಕರ ಅಭಿಪ್ರಾಯದ ಆಧಾರದ ಮೇಲೆಯೇ, ಹತ್ತು ಹಲವು ಯೋಜನೆಗಳ ಪಟ್ಟಿ ಸಿದ್ದಪಡಿಸಿ ಕೇಂದ್ರ ಸರ್ಕಾರಕ್ಕೆ ರವಾನಿಸಿದ್ದರು. ಈ ಯೋಜನೆಗಳ ಅನುಷ್ಠಾನಕ್ಕೆ ಅನುಮೋದನೆ ಕೂಡ ದೊರಕಿದೆ. ನೂರಾರು ಕೋಟಿ ರೂ. ಮಂಜೂರಾಗಿದೆ. ಕೆಲವು ಯೋಜನೆಗಳ ಅನುಷ್ಠಾನಕ್ಕೆ ಪೂರ್ವಭಾವಿ ಸಿದ್ಧತೆಗಳನ್ನು ಕೂಡ ಮಾಡಲಾಗಿದೆ. ಆದರೆ ಯೋಜನೆಯಡಿ ಯಾವ್ಯಾವ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ,  ಮಾಡುತ್ತಿರುವ ವೆಚ್ಚವೆಷ್ಟು,  ವಿನೂತನ ಕಾರ್ಯಕ್ರಮಗಳ್ಯಾವುವು,  ಕಾಮಗಾರಿಗಳ ನಿರ್ವಹಣೆ ಯಾವ ರೀತಿಯಲ್ಲಾಗುತ್ತದೆ,  ಪರಿಸರ ಸಂರಕ್ಷಣೆ ಮತ್ತಿತರ ವಿಷಯಗಳ ಬಗ್ಗೆ ಕೈಗೊಂಡಿರುವ ಕ್ರಮಗಳೇನು ಎಂಬುವುದರ ಬಗ್ಗೆ ನಾಗರಿಕರಿಗೆ  ಮಾಹಿತಿಯೇ ಇಲ.
ನಾಗರಿಕರನ್ನು ಕತ್ತಲಲ್ಲಿಟ್ಟು ಕೇವಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಇದರ ಯೋಜನೆ, ಕಾಮಗಾರಿ ನಿರ್ವಹಣೆ ಮಾಡುವರೇ ಎನ್ನುವ ಪ್ರಶ್ನೆ ಉದ್ಭವಿಸಿದೆ.
  ’ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಕಾರ ಅತ್ಯಂತ ಅವಶ್ಯ.  ಅದರಲ್ಲಿಯೂ ಸ್ಮಾರ್ಟ್ ಸಿಟಿ ಯೋಜನೆಯ ಕಾರ್ಯಗತದಲ್ಲಿ, ಪ್ರತಿ ಹಂತದಲ್ಲಿಯೂ ಸಾರ್ವಜನಿಕರ ಬೆಂಬಲ ಬೇಕೆ ಬೇಕು. ಈಗಾಗಲೇ ಸಾರ್ವಜನಿಕರ ಅಭಿಪ್ರಾಯದ ಆಧಾರದ ಮೇಲೆಯೇ ಯೋಜನೆಗಳನ್ನು ರೂಪಿಸಲಾಗಿದೆ. ಯೋಜನೆಗಳ ಅನುಷ್ಠಾನದ ವೇಳೆಯೂ ಸಾರ್ವಜನಿಕರ ಸಲಹೆ-ಸೂಚನೆಯನ್ನು ಸ್ಮಾರ್ಟ್ ಸಿಟಿ ಕಚೇರಿ ಘಟಕದವರು ಪರಿಗಣನೆ ಮಾಡಬೇಕೆನ್ನುವುದು ನಾಗರಿಕರ ಒತ್ತಾಯ.
........................................


Saturday, 8 July 2017

ಅಂತರಂಗದ ಕೀಚಕ ದಮನ



 ವ್ಯಾಸರ ಮೂಲಭಾರತದ ಸತ್ವವನ್ನು ಸಾರುತ್ತಲೇ ವರ್ತಮಾನದ ಭಾರತವನ್ನು ತೆರೆದಿಡುವ ನಾಟಕ ‘ಕೀಚಕ’ ಜುಲೈ 6ರಂದು ನಗರದ ಕುವೆಂಪು ರಂಗಮಂದಿರದಲಿ ಮೊಲದ ಪ್ರದರ್ಶನ ಕಂಡಿತು. ಕೀಚಕನೆಂದರೆ, ಸ್ತ್ರೀ ಲಂಪಟ, ಕಾಮುಕ, ವಿಷಯಲೋಲುಪ್ತ ಎನ್ನುವ ಪೂರ್ವಾಗ್ರಹಕ್ಕೆ ಒಳಗಾದ ನಮ್ಮನ್ನು ಒಂದಷ್ಟು ಹೊತ್ತು ಚಿಂತನೆಗೆ ತಳ್ಳುವ ನಾಟಕವಿದು. ಮಾತ್ರವಲ್ಲ, ನಮ್ಮೊಳಗೂ ಕೀಚಕನಿದ್ದಾನೆ ಎನ್ನುವುದನ್ನು ಅತ್ಯಂತ ಮಾರ್ಮಿಕವಾಗಿ, ತಾರ್ಕಿಕವಾಗಿ ತೆರೆದಿಡುವಲ್ಲಿ, ನಮ್ಮೊಳಗಿನ ಕೀಚಕ ನಿರ್ನಾಮವಾಗಬೇಕು ಎಂಬ ಮೌಲ್ಯವನ್ನು ಕಟ್ಟಿಕೊಡುವಲ್ಲಿ ಈ ನಾಟಕ ಫಲಪ್ರದವಾಯಿತು.



 ಮಹಾಭಾರತ ಕಾವ್ಯ ಅನೇಕ ಪ್ರಯೋಗಗಳಿಗೆ ಎಡೆ ಮಾಡಿಕೊಟ್ಟ ಮಹತ್ ಕೃತಿ. ಎಲ್ಲ ಕಾಲದ ಕೃತಿಕಾರರು ಅಲ್ಲಿನ ಸನ್ನಿವೇಶಗಳನ್ನು, ಪಾತ್ರಗಳನ್ನು ತಮಗೆ ಬೇಕಾದಂತೆ ಹಿಗ್ಗಿಸಿಕೊಂಡಿದ್ದಾರೆ, ವೈಭವೀಕರಿಸಿದ್ದಾರೆ. ಅದರಲ್ಲೂ ಸಾರಾಸಗಟಾಗಿ ತಿರಸ್ಕರಿಸಲ್ಪಟ್ಟ ಪಾತ್ರಗಳ ಪರಕಾಯ ಪ್ರವೇಶ ಮಾಡಿ, ಆ ಪಾತ್ರಗಳ ತಮ್ಮ ಸೃಜನಶೀಲತೆಯನ್ನು ಮೆರೆದಿದ್ದಾರೆ. ರನ್ನನ ದುರ್ಯೋಧನ, ನಾಗಚಂದ್ರನ ರಾವಣ. ಬಿಎಂಶ್ರೀ ಅವರ ಅಶ್ವತ್ಥಾಮ, ಕುವೆಂಪು ಅವರ ಮಂಥರೆ  ಇದಕ್ಕೆ ಸಾಕ್ಷಿಯಾಗಿವೆ.
ಜುಲೈ 6ರಂದು ಲೇಖಕ ಜಿ. ಎಸ್. ಯುಧಿಷ್ಠರ ವಿರಚಿತ ‘ಕೀಚಕ’ ಕಥೆಯನ್ನು ‘ ಟೀಂ  ಸುಪ್ರಯೋಗ’ ನಗರದಲ್ಲಿ ಪ್ರದರ್ಶಿಸಿದೆ. ತನ್ನ ಮೊದಲ ಪ್ರದರ್ಶನದಲ್ಲೇ ಹಿರಿ-ಕಿರಿಯ ತಲೆಮಾರಿನವರನ್ನು ಸೂರೆಗೊಂಡ ಯಶಸ್ಸು ಈ ಪ್ರಯೋಗದ್ದು ಎಂದರೆ ಅತಿಶಯೋಕ್ತಿಯಲ್ಲ.
 ವ್ಯಾಸರ ಮೂಲಭಾರತದ ಸತ್ವವನ್ನು ಸಾರುತ್ತಲೇ ವರ್ತಮಾನದ ಭಾರತವನ್ನು ತೆರೆದಿಡುವ ನಾಟಕವಿದು. ಕೀಚಕನೆಂದರೆ, ಸ್ತ್ರೀ ಲಂಪಟ, ಕಾಮುಕ, ವಿಷಯಲೋಲುಪ್ತ ಎನ್ನುವ ಪೂರ್ವಾಗ್ರಹಕ್ಕೆ ಒಳಗಾದ ನಮ್ಮನ್ನು ಒಂದಷ್ಟು ಹೊತ್ತು ಚಿಂತನೆಗೆ ತಳ್ಳುವ ನಾಟಕವಿದು. ಮಾತ್ರವಲ್ಲ, ನಮ್ಮೊಳಗೂ ಕೀಚಕನಿದ್ದಾನೆ ಎನ್ನುವುದನ್ನು ಅತ್ಯಂತ ಮಾರ್ಮಿಕವಾಗಿ , ತಾರ್ಕಿಕವಾಗಿ ತೆರೆದಿಡುವಲ್ಲಿ, ನಮ್ಮೊಳಗಿನ ಕೀಚಕ ನಿರ್ನಾಮವಾಗಬೇಕು ಎಂಬ ಮೌಲ್ಯವನ್ನು ಕಟ್ಟಿಕೊಡುವಲ್ಲಿ ಈ ನಾಟಕ ಫಲಪ್ರದವಾಗಿದೆ.
ಹಿರಿಯ ತಲೆಮಾರಿನವರಿಗೆ ಒಂದಷ್ಟು ಹೊತ್ತು-‘‘ ಏನಪ್ಪಾ, ಪುರಾಣದೊಂದಿಗೆ ಆಧುನಿಕತೆಯ  ಕಲಬೆರಕೆಯಿದು’’ ಎಂದು ಕಾಡುವ ಸನ್ನಿವೇಶ ತೆರೆದುಕೊಳ್ಳುತ್ತ ಹೋದಂತೆ ಆಪ್ಯಾಯಮಾನವೆನಿಸುವುದರಲ್ಲಿ ಎರಡು ಮಾತಿಲ್ಲ. ದ್ವಾಪರಾಯುಗದ ಕೀಚಕನಿಗೂ, ನಮ್ಮೊಳಗಿರುವ ಈಗಿನ ಕೀಚಕರಿಗೂ ಅದೆಂತಹ ಸಾಮ್ಯತೆ ಎಂದು ಹುಬ್ಬೇರಿಸುವಷ್ಟರ ಮಟ್ಟಿಗೆ ನಾಟಕ ವರ್ತಮಾನದೊಂದಿಗೆ ತೆರೆದುಕೊಳ್ಳುತ್ತದೆ. ಆಗ ನಮಗೆ ನೆನಪಾಗುವುದು - ಹಳೆಬೇರು ಹೊಸಚಿಗುರು ಕೂಡಿರಲು ಮರ ಸೊಬಗು ಎನ್ನುವ ಕವಿವಾಣಿ.
ಕೀಚಕನ ಆಟಾಟೋಪ, ಸ್ತ್ರೀ ಲಂಪಟತನ, ಅಟ್ಟಹಾಸ, ಮದಾಂಧತೆ, ಸ್ವೇಚ್ಛೆ, ಅಹಂಕಾರ ಇವನ್ನೆಲ್ಲ  ಪೂರ್ವಾಗ್ರಹಪೀಡಿತರಾಗಿ ಕಂಡ ನಮಗೆ ಕೂಡ ಈ ನಾಟಕದ  ಕೀಚಕನೆಡೆಗೆ ಒಂದು ಸಣ್ಣ ಒಲವು ಮೂಡುವುದು  ಇಲ್ಲಿಯ ವಿಶೇಷತೆ.  ಕುಮಾರವ್ಯಾಸಭಾರತದಲ್ಲಿ ಉಲ್ಲೇಖಿತವಾದ ಸೈರಂಧ್ರಿಯ ಕುರಿತಾಗಿ ಕೀಚಕನ ಸೆಳೆತ - ‘‘  ತಾಳಲಾರೆನೋ... ಇನ್ನು ಬಾಳಲಾರೆನೋ...’’ ಇದು ಕೀಚಕನ ಉತ್ಕಂಟತೆಯನ್ನು ತೋರಿಸುತ್ತದೆೆ. ಈ ಸಂದರ್ಭದಲ್ಲಿ ಕೂಡ ಕೀಚಕನನ್ನು ಏಕಾಏಕಿ ದೂಷಿಸದ ಕುಮಾರವ್ಯಾಸ ಅದರ ಬದಲಾಗಿ ಚೆಲುವಿನ ಖನಿಯಾದ ದ್ರೌಪದಿಯನ್ನು ಸೃಷ್ಟಿಸಿದ ಬ್ರಹ್ಮನನ್ನು  ಜರೆಯಲು ಮುಂದಾಗುತ್ತಾನೆ-‘‘ಪಾಪಿ ಕಮಲಜ ಚಲಿತಲೋಚನೆಗೇಕೆ ಮಾಡಿದನಿನಿತು ಚೆಲ್ವಿಕೆಯ’’ ಎಂಬುದಾಗಿ.
 ಬಹುತೇಕ ನಾಟಕಗಳಲ್ಲಿ ಒಬ್ಬ ಸೂತ್ರಧಾರನನೊಂದಿಗೆ  ಓರ್ವ ನಟಿ ನಾಟಕವನ್ನು ಮುನ್ನಡೆಸುವುದು ಸಹಜ. ಆದರೆ ಈ ನಾಟಕದಲ್ಲಿ ಸೂತ್ರಧಾರರೇ ಪಾತ್ರಧಾರಿಗಳಾಗಿ ನಾಟಕವನ್ನು ಯಶಸ್ಸಿನತ್ತ ಕೊಂಡೊಯುತ್ತಾರೆ. ಕೇಂದ್ರ ಬಿಂದುವಾಗಿ ಕೀಚಕನ ಪಾತ್ರದಲ್ಲಿ ನುರಿತ ಕಲಾವಿದ ನಯನ್ ಅರೇಹಳ್ಳಿ ನಾಟಕ ಕಳೆಗಟ್ಟುವಲ್ಲಿ ಮುಖ್ಯವೆನಿಸುತ್ತಾರೆ. ಜಟ್ಟಿ ಕೀಚಕನ ಪಾತ್ರಕ್ಕೊಪ್ಪುವ ಆಕರ್ಷಕವಾದ ಮೈಕಟ್ಟು, ಈಗಿನ ಕೀಚಕರನ್ನು ಬಿಂಬಿಸುವಂತೆ ಕಟ್ಟುಮಸ್ತಾದ ಜಿಮ್‌ಬಾಡಿ, ಕೀಚಕನಾಗಿ ಪುರಾಣ ಪ್ರಜ್ಞೆಯ ಅರಿವು, ಕಾಲೇಜು ಹುಡುಗಿಯರನ್ನು ಕಿಚಾಯಿಸುವ, ಪಟಾಯಿಸುವ ಪೋಲಿತನ ಎಲ್ಲವೂ ನಾಟಕಕ್ಕೆ ಮೆರುಗು ನೀಡಿತ್ತು. ಆದರೂ ದ್ರೌಪದಿಯ ಸೆಳೆಮಂಚಕ್ಕೆ ಹೋಗುವಾಗಿನ ಕೀಚಕನಾಗಿ, ಕೈಗೆ ಮಲ್ಲಿಗೆ ಹೂವು ಕಟ್ಟಿಕೊಂಡು ರಸಿಕನಾಗಿ ಕಾಣುವ ಬದಲು ಚಪಲಚೆನ್ನಿಗನಂತೆ, ಅತಿರಂಜಿತನಾಗಿ ವರ್ತಿಸಿದಂತೆಯೂ ಇತ್ತು. ಹಿಮ್ಮೇಳ ಕೂಡ ಯಕ್ಷಗಾನದ ಕೀಚಕನನ್ನು ಕಟ್ಟಿಕೊಡುವಲ್ಲಿ, ಗಮಕಿಗಳ ಕೀಚಕನನ್ನು ತೆರೆದಿಡುವಲ್ಲಿ, ಬುದ್ಧಿಜೀವಿಗಳ ಕೀಚಕನನ್ನು ಅನಾವರಣಗೊಳಿಸುವಲ್ಲಿ  ಕೊಂಚ ಎಡವಿತೇನೋ.....?.  
ಸೈರಂಧ್ರಿಯಾಗಿ ಎ.ಎಸ್. ಸನ್ಮತಿ ಪಾತ್ರಕ್ಕೆ ಜೀವತುಂಬಿದರಾದರೂ, ಪ್ರೇಕ್ಷಕರ ದೃಷಿಯಿಂದ ಆ ಪಾತ್ರಕ್ಕೆ ನ್ಯಾಯ ದೊರಕಿಲ್ಲ ಎನ್ನಲೇಬೇಕು. ಜೊತೆಗೆ ನೀಳಕೇಶರಾಶಿಯ, ದೃಢಚಿತ್ತದ, ನೇರನಿಷ್ಠುರತೆಯ, ಘನಗಾಂಭೀರ್ಯದ ಗಟ್ಟಿಗಿತ್ತಿಯ ದ್ರೌಪದಿಯನ್ನು ಅಲ್ಲಿ ಕಲ್ಪಿಸಿಕೊಳ್ಳಲಾಗಲೇ ಇಲ್ಲ. ನೃತ್ಯಗುರು ಬೃಹನ್ನಳೆಯ ಪಾತ್ರ ಕಳೆಗಟ್ಟಿದ್ದು ಹೌದಾದರೂ ನಮ್ಮ ಕಲ್ಪನೆಯ ಬೃಹನ್ನಳೆಯೇ ಬೇರೆ, ಇಲ್ಲಿ ಕಾಣಿಸಿಕೊಂಡ ಭರತನಾಟ್ಯ ವಿಷಾರದೆಯೇ ಬೇರೆ. ಬಹುಪರಾಕ್ ಹಿನ್ನೆಲೆಯ ಧ್ವನಿಯಲ್ಲಿ ವೇದಿಕೆಯ ಆಸನಗಳನ್ನು ತೆರವುಗೊಳಿಸಿದ್ದು ವಿನೂತನ ಪ್ರಯೋಗ ಹೌದಾದರೂ, ಆಭಾಸವೇ ಸರಿ. ಸ್ಥಿತಪ್ರಜ್ಞರಾದ ವ್ಯಾಸ ಮಹರ್ಷಿಯಾಗಿ ಡಾ. ಅರುಣ್ ಮಾತಿನ ಮೂಲಕ ಆ ನಾಟಕದ ಮೌಲ್ಯವನ್ನು ಎತ್ತಿಹಿಡಿದಿದ್ದಾರೆ. ಒಟ್ಟು ನಾಟಕದ ರಸಗಟ್ಟಿಯೇ ವ್ಯಾಸರ ಬಾಯಿಯಿಂದ ಹೊರಬೀಳುವ ಮೌಲಿಕವಾದ ಮಾತುಗಳು.
ಕೀಚಕ ಎನ್ನುವುದು ಒಬ್ಬ ವ್ಯಕ್ತಿಯಲ್ಲ, ಅದೊಂದು ಮನಃಸ್ಥಿತಿ ನಮ್ಮೊಳಗಿರುವ ದುಃಸ್ಥಿತಿ. ಅದರ ನಿರ್ನಾಮವಾಗದೆ ಜಗತ್ತಿಗೆ ಒಳಿತಿಲ್ಲ ಎನ್ನುವ ಮಾತು ಮತ್ತೆ ಮತ್ತೆ ಮೆಲುಕು ಹಾಕುವಂತಹದ್ದು, ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದುದು. ಆದರೂ ಮಾತಿನ ಮೂಲಕ ಸೆಳೆಯುವ ವ್ಯಾಸ ಮಹರ್ಷಿ ವೇಷಭೂಷಣದ ಮೂಲಕ ಕನ್ನಡ ಪಂಡಿತರನ್ನು ನೆನಪಿಗೆ ತಂದಿದ್ದು ಮಾತ್ರ ಸುಳ್ಳಲ್ಲ.
  ರಂಗದ ಮೇಲೆ ಕೀಚಕನ ಮೊದಲ ಪ್ರಯೋಗದಲ್ಲೇ ನೀನಾಸಂ ಪ್ರತಿಭೆ ಕೆ.ವಿ.ಅಜೇಯಸಿಂಹ ಯಶಸ್ವಿಯಾಗಿದ್ದಾರೆ. ಅವರ ನಿರ್ದೇಶನ ಕೌಶಲ, ಸ್ವೋಪಜ್ಞತೆ, ಅವರಿಗಿರುವ ಪುರಾಣ ಪ್ರಜ್ಞೆ ನಾಟಕದ ವೇಗಕ್ಕೆ, ಓಘಕ್ಕೆ ಪುಷ್ಠಿಯೊದಗಿಸಿದೆ. ರಂಗವಿನ್ಯಾಸ, ಬೆಳಕು, ಸೇರಿದ್ದ ಜನಸ್ತೋಮ ಕಾರ್ಯಕ್ರಮದ ಯಶಸ್ಸಿಗೆ ಕಾರಣವೆನಿಸಿತು.
ಒಟ್ಟಿನಲ್ಲಿ ಹೇಳುವುದಾದರೆ, ಚಿಕ್ಕದಾಗಿ, ಚೊಕ್ಕದಾಗಿ ಈ ನಾಟಕ ಪುಟವಿಟ್ಟ ಚಿನ್ನದಂತೆ  ಮೂಡಿಬಂದದ್ದು ಸುಳ್ಳಲ್ಲ.
, ...................................

Thursday, 6 July 2017

ರೈಲ್ವೆ ನಿಲ್ದಾಣ: ಸಮಸ್ಯೆ ಬಗೆಹರಿಯುವುದೆಂದು? 
  ಕೆರೆಯಂಗಳವಾದ ಹೊರ ಆವರಣ* ಅವ್ಯವಸ್ಥೆಯ ಪಾರ್ಕಿಂಗ್* 
ಹಿಡಿತವಿಲ್ಲದ ಆಟೊ ಚಾಲಕರು* ಆರಂಭವಾಗದ ಪ್ರಿಪೇಡ್ ಆಟೋ ನಿಲ್ದಾಣ




ತಮ್ಮ ಜಾಗವನ್ನು ಮಾತ್ರ ಸುಭದ್ರವಾಗಿ ಕಾಪಾಡಿಕೊಳ್ಳುವ ರೈಲ್ವೆ ಅಧಿಕಾರಿಗಳಿಗೆ  ಪ್ರತಿದಿನ ಸಾವಿರಾರು ಜನ ರೈಲಿನಲ್ಲಿ ತೆರಳು ಬರುತ್ತಾರೆ. ಕನಿಷ್ಟ ಸೌಕರ್ಯವನ್ನಾದರೂ ನೀಡಬೇಕೆನ್ನುವ ವಿಚಾರ ಹೊಳೆಯುವುದೇ ಇಲ್ಲ. ಕಣ್ಣಿಗೆ ಕಾಣುವ ಸಮಸ್ಯೆಯನ್ನೇ ಇತ್ಯರ್ಥಪಡಿಸದೆ ಸುಮ್ಮನಿದ್ದಾರೆ. ಈ ಸಂಬಂಧ ಹಲವಾರು ಪ್ರತಿಭಟನೆ ನಡೆದಿದ್ದರೂ ಎಚ್ಚೆತ್ತಿಲ್ಲ. ಜಿಲ್ಲಾಡಳಿತ ಅಥವಾ ಜನಪ್ರತಿನಿಧಿಗಳ ಹಿಡಿತ ಇಲಾಖೆಯ ಮೇಲೆ ಇಲ್ಲದ ಕಾರಣ ರೈಲ್ವೆ ಇಲಾಖೆಯವರನ್ನು ಪ್ರಶ್ನಿಸುವವರೇ ಇಲ್ಲದ ಸ್ಥಿತಿ ಎದುರಾಗಿದೆ.  ಇದರಿಂದಾಗಿ, ಇಷ್ಟು ದೊಡ್ಡ ಪ್ರಮಾಣದ ರೈಲ್ವೆ ನಿಲ್ದಾಣ ಏಕೆ ಬೇಕು. ನೋಡಲು ಮಾತ್ರ ಸುಂದರವಾಗಿದೆಯೇ ವಿನಾ ಮೂಲಸೌಕರ್ಯ ಇಲ್ಲ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ.

ಶಿವಮೊಗ್ಗ: ಮಳೆ ಬಂದರೆ ಆವರಣ ತುಂಬಾ ನೀರು, ಪ್ರಯಾಣಿಕರು ಸಂಚರಿಸಲು ಪರದಾಡಬೇಕಾದ ಸ್ಥಿತಿ, ಅವ್ಯವಸ್ಥೆಯ ಗೂಡಾದ ಆಟೋ ನಿಲ್ದಾಣ, ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಮೇಲಾಟ ನಡೆಸುವ ಆಟೋಗಳು, ಬಿಸಿಲು- ಮಳೆ ಎನ್ನದೆ ನಿಲ್ಲಬೇಕಾದ ಪಾರ್ಕಿಂಗ್ ವಾಹನಗಳು, ಚಾಲನೆಗೊಳ್ಳದ ಪ್ರಿಪೇಡ್ ಆಟೊ ನಿಲ್ದಾಣ........ ಇವು ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಪ್ರಯಾಣಿಕರನ್ನು ಬೆಂಬಿಡದೆ ಕಾಡುತ್ತಿರುವ ಸಮಸ್ಯೆಗಳು.
ಈ ಸಮಸ್ಯೆ ಇಂದು ನಿನ್ನೆಯದಲ್ಲ, ಕೆಲವು ವರ್ಷಗಳಿಂದ ಮುಂದುವರೆದುಕೊಂಡು ಬಂದಿದೆಯಾದರೂ ಪರಿಹಾರ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ರೈಲು ಅಧಿಕಾರಿಗಳು ಶಿವಮೊಗ್ಗ ನಿಲ್ದಾಣವನ್ನು ಅಭಿವೃದ್ಧಿಗೊಳಿಸುವತ್ತ ಗಮನ ಹರಿಸುತ್ತಿಲ್ಲ ಎನ್ನುವುದಕ್ಕೆ ಮೇಲಿಂದ ಮೇಲೆ ಇಂತಹ ಉದಾಹರಣೆಗಳು ಕಾಣಸಿಗುತ್ತವೆ. ಮೈಸೂರು ವಿಭಾಗವೆಂದರೆ ಕೇವಲ ಮೈಸೂರು ನಿಲ್ದಾಣದ ಅಭಿವೃದ್ಧಿ ಮಾಡಿದರೆ ಸಾಕೆಂಬ ಮನೋಭಾವ ಇಲ್ಲಿಗೆ ಬರುವ ಹೊರರಾಜ್ಯದ ಅಧಿಕಾರಿಗಳದ್ದು. ಇದರಿಂದಾಗಿ ಪ್ರಯಾಣಿಕರು ಎಷ್ಟೇ ಬೊಬ್ಬೆ ಹೊಡೆದರೂ ಮುಲಸೌಕರ್ಯವೇ ಸಿಗದಂತಾಗಿದೆ.
ನಿಲ್ದಾಣದ ಹೊರ ಆವರಣವನ್ನು ಕಾಂಕ್ರೀಟ್ ಮಾಡಲಾಗಿದೆ. ಆದರೆ ನೀರು ಹರಿದು ಹೋಗಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇದರ ಕಾಮಗಾರಿಯನ್ನು ಅವೈಜ್ಞಾನಿಕವಾಗಿ  ಮಾಡಿರುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ಈ ನೀರಿನಲ್ಲೇ ಪ್ರಯಾಣಿಕರು ಸಂಚರಿಸಬೇಕಿದೆ. ನೀರು ಹರಿದುಹೋಗದ ವ್ಯವಸ್ಥೆಯನ್ನು ಇಲ್ಲಿನ ಅಧಿಕಾರಿಗಳು ದಿನನಿತ್ಯ  ಮಳೆಗಾಲದಲ್ಲಿ ಕಾಣುತ್ತಿದ್ದರೂ ತಾತ್ಕಾಲಿಕವಾಗಿಯೂ ವ್ಯವಸ್ಥೆಯನ್ನು ಮಾಡದೆ ಮೌನಕ್ಕೆ ಶರಣು ಹೋಗಿದ್ದಾರೆ. ಕೆರೆ ಅಂಗಳವಾಗಿರುವ ಇಲ್ಲಿ ಎಲ್ಲರೂ ಓಡಾಡಿ ನೀರು ಸಹ ಗಲೀಜಾಗಿ ಚರ್ಮ ರೋಗಕ್ಕೆ ಕಾರಣವಾಗುತ್ತಿದೆ.
ಎರಡನೆಯದಾಗಿ, ಅವ್ಯವಸ್ಥೆಯ ಗೂಡಾದ ಪಾರ್ಕಿಂಗ್. ಇಲ್ಲಿ ಹೇಳಕೇಳುವವರೇ ಇಲ್ಲ. ಇದರ ಗುತ್ತಿಗೆ ಪಡೆದವರು ವಾಹನಗಳಿಗೆ ನೆರಳು ಒದಗಿಸುವ ಕೆಲಸ ಮಾಡಿಲ್ಲ. ಪಾರ್ಕಿಂಗ್ ಶುಲ್ಕ ಕೊಟ್ಟರೂ ಬಿಸಿಲಲ್ಲೋ, ಮಳೆಯಲ್ಲೋ ನಿಲ್ಲಿಸಿ ಒಂದೆರಡು ದಿನ ಕಾಲ ಪ್ರಯಾಣಿಕರು ತೆರಳಬೇಕಾದ ಸ್ಥಿತಿ ಇದೆ. ಜೊತೆಗೆ ಇಲ್ಲಿ ಜಗಳ ಸರ್ವೇ ಸಾಮಾನ್ಯ. ಪಾರ್ಕಿಂಗ್ ಗುತ್ತಿಗೆದಾರರು  ಕೇವಲ ಶುಲ್ಕ ವಸೂಲು ಮಾಡುವುದಕ್ಕಷ್ಟೇ ಮಾತ್ರ ಸೀಮಿತವಲ್ಲ, ವಾಹನಗಳ ರಕ್ಷಣೆಗೂ ಜವಾಬ್ದಾರರಾಗಬೇಕಾಗುತ್ತದೆ. ಜೊತೆಗೆ ಸೌಜನ್ಯದ ನಡವಳಿಕೆಯನ್ನೂ ಕಲಿಯಬೇಕಿದೆ.
ಮೂರನೆಯ ಮತ್ತು ಇಲ್ಲಿಯವರೆಗೆ ಬಗೆಹರಿಯದ ಸಮಸ್ಯೆ ಎಂದರೆ ಪ್ರಿಪೇಡ್ ಆಟೊ ನಿಲ್ದಾಣ. ಇಲ್ಲಿ ನಿಲ್ಲುವ ಆಟೊ ಚಾಲಕರ ಬಗ್ಗೆ ದೂರುಗಳ ಮಹಾಪೂರವೇ ಇದೆ. ಪ್ರಯಾಣಿಕರನ್ನು ಸುಲಿಯುತ್ತಾರೆಂಬ ದೂರು ಇದೆ. ಎಲ್ಲಿಂದಲೋ ಬರುವ ಪ್ರಯಾಣಿಕರಿಗೆ ತಾವು ತೆರಳಬೇಕಾದ ಸ್ಥಳದ ದೂರ ಗೊತ್ತಿರುವುದಿಲ್ಲ. ಅಂತಹವರಿಂದ ಮನಬಂದಂತೆ ಹಣ ವಸೂಲು ಮಾಡುವುದು ನಡೆದೇ ಇದೆ. ಬೆಳಿಗ್ಗೆ ಮತ್ತು ರಾತ್ರಿ ಬಂದು, ಹೋಗುವ ಪ್ರಯಾಣಿಕರು ವಿಶೇಷವಾಗಿ ಆಟೋ ಬಳಸುತ್ತಾರೆ. ಮೀಟರ್ ಹಾಕದೆ ಇವರೆಲ್ಲ ಈ ತೊಂದರೆ ಅನುಭವಿಸುವಂತೆ ಮಾಡುತ್ತಾರೆ. ಸಾಕಷ್ಟು ಬರಿ ಸಾರಿಗೆ ಅಧಿಕಾರಿಯವರೆಗೂ ದೂರು ಹೋಗಿದೆ. ಆದರೆ ಇದನ್ನು ಬಗೆಹರಿಸುವ ಜಾಣ್ಮೆಯನ್ನು ಯಾರೂ ಪ್ರದರ್ಶಿಸಿಲ್ಲ.
ರೈಲು ನಿಲ್ದಾಣದಿಂದ ಆಟೊ ಹತ್ತಿದ್ದ ಬಾಲಕಿಯನ್ನು  ಚಾಲಕ ಮತ್ತು ಆತನ ಸ್ನೇಹಿತರು ಅತ್ಯಾಚಾರ ಮಾಡಿದ ಘಟನೆಯ ನಂತರ ಎಚ್ಚೆತ್ತಿದ್ದ ಜಿಲ್ಲಾಡಳಿತ ಮತ್ತು ಪೊಲೀಸ್, ಸಾರಿಗೆ ಇಲಾಖೆ  ಪ್ರಿಪೇಡ್ ಆಟೋ ಕೌಂಟರ್ ತೆರೆಯಲಾಗುವುದೆಂದು ಹೇಳಿದ್ದರು. ಆದರೆ ಎಂದಿನಿಂದ ಎನ್ನುವುದು ಇನ್ನೂ ಪ್ರಶ್ನಾರ್ಥಕವಾಗಿದೆ. ಹೊಸದಾಗಿ ಇದಕ್ಕಾಗಿ ಕಟ್ಟಡ ನಿರ್ಮಿಸಲಾಗುತ್ತಿದೆ. ಇದು ಅರೆಬರೆಯಾಗಿ ನಿಂತಿದೆ. ಹಳೆಯ ಪ್ರಿಪೇಡ್ ಕೌಂಟರ್ ಇದೆ.  ಅದನ್ನೇ ಇನ್ನಷ್ಟು ಸುಸಜ್ಜಿತಗೊಳಿಸಿ ತಾತ್ಕಾಲಿಕವಾಗಿ ನಿರ್ವಹಣೆ ಮಾಡಬಹುದಿತ್ತು. ಇಂತಹ ಸಣ್ಣಪುಟ್ಟ ವಿಚಾರವನ್ನೂ ಅರಿಯದೆ ಹೊಸ ಕಾಮಗಾರಿಯತ್ತಲೇ ಎಲ್ಲರಿಗೂ ಕಣ್ಣು. ಹಾಗಾಗಿ ಪ್ರಯಾಣಿಕರ ಸಮಸ್ಯೆ ಪರಿಹಾರವಾಗುತ್ತಿಲ್ಲ.
ಈಗ ಸಾರ್ವಜನಿಕರು ದೂರುವುದನ್ನೇ ನಿಲ್ಲಿಸಿದ್ದಾರೆ. ರೈಲ್ವೆ ಕುಂದುಕೊರತೆ ಸಮಿತಿ ಸಭೆ ನಡೆಸಿದಾಗ  ಎಷ್ಟೇ ದೂರು ನೀಡಿದರೂ ಪರಿಹರಿಸಲಾಗುವುದು ಎಂಬ ಉತ್ತರ ಸಿಗುತ್ತದೆಯೇ ವಿನಾ ಸೌಲಭ್ಯ ಒಂದಿನಿತೂ ಈವರೆಗೆ ದಕ್ಕಿಲ್ಲ. ಸಾಂಸದ ಯಡಿಯೂರಪ್ಪ ಸಹ ನೀಡಿದ ಮೂಲಸೌಕರ್ಯದ ಭರವಸೆ ಇನ್ನೂ ಈಡೇರಿಲ್ಲ. ರೈಲು ಬರುವುದು, ಹೋಗುವುದು ಹೆಚ್ಚಿದರೆ ಸಾಲದು, ಮೂಲಸೌಕರ್ಯವೂ ಹೆಚ್ಚಬೇಕಾಗುತ್ತದೆ. ಏಕೆಂದರೆ ರೈಲು ಹೆಚ್ಚಿದಂತೆ ಪ್ರಯಾಣಿಕರ ಸಂಖ್ಯೆಯೂ ಗಣನೀಯವಾಗಿ ಏರುತ್ತ ಹೋಗುತ್ತದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಸೌಕರ್ಯ ಒದಗಿಸುವುದು ಇಲಾಖೆಯ ಆದ್ಯ ಕರ್ತವ್ಯ. ಸಾಂಸದರೂ, ವಿಭಾಗೀಯ ರೈಲ್ವೆಯ ಸದಸ್ಯರು ಇನ್ನಷ್ಟು ಗಮನ ಹರಿಬೇಕಿದೆ.
ಸೌಕರ್ಯ ನೀಡುವಲ್ಲಿ, ಒದಗಿಸುವಲ್ಲಿ ಇಲಾಖೆ ಸಂಪೂರ್ಣ ವಿಫಲವಾಗಿದೆ. ಪ್ರಯಾಣಿಕರ ಗೋಳನ್ನು ರೈಲ್ವೆ ಕುಂದುಕೊರತೆ ಸಮಿತಿ ಮತ್ತು ಸಾಂಸದರು ಇನ್ನಾದರೂ ಆಲಿಸಿ ಪರಿಹರಿಸುವತ್ತ,  ಅಧಿಕಾರಿಗಳ ಕಣ್ತೆರೆಸುವತ್ತ ಕೆಲಸ ಮಾಡಬೇಕಿದೆ..    
............................

Wednesday, 5 July 2017



ಯಾರಿಗ್ಹೇಳೋಣ ನಮ್ಮ ಪ್ರಾಬ್ಲಮ್ಮು





ಶಿವಮೊಗ್ಗ: ನಮಗೆ ವಸತಿಗೆ ಜಾಗ ಕೊಡಿ. ಎಲ್ಲಿ ವಸತಿ ಹೂಡಿದರೂ ಅಲ್ಲಿಂದ ಒಕ್ಕಲೆಬ್ಬಿಸುವ ಇತ್ತೀಚೆಗೆ ಪರಿಪಾಠ ಬೆಳೆದಿದೆ. ನಾವು ಎಲ್ಲಿಯೂ ಒತ್ತುವರಿ ಮಾಡಿಕೊಂಡಿಲ್ಲ ಎನ್ನುವುದನ್ನು ಮೊದಲೇ ತಿಳಿಯಬಯಸುತ್ತೇವೆ. ಇತ್ತೀಚೆಗೆ ಕನ್ಸರ್ವೆನ್ಸಿಗಳನ್ನೆಲ್ಲಾ ರಸ್ತೆಯಂತೆ ಕಾಂಕ್ರಿಟ್ ಮಾಡಿ, ಚರಂಡಿಯನ್ನೆಲ್ಲ ಶುಚಿಗೊಳಿಸುತ್ತಿರುವುದರಿಂದ ನಮಗೆ ಆವಾಸ ಸ್ಥಾನ ಇಲ್ಲದೆ ಪರದಾಡುತ್ತಿದ್ದೇವೆ. ದಯವಿಟ್ಟು ನಮಗೊಂದಷ್ಟು ಜಾಗ ಕೊಟ್ಟು ಬದುಕಲು ಬಿಡಿ.
ಬಡಾವಣೆಗಳಲ್ಲಿ ಕೊಂಪೆ, ಗಿಡಗಂಟಿಗಳ ಪೊದೆಗಳಲ್ಲಿ ಬದುಕಿ ಅಲೆಮಾರಿಗಳ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದೇವೆ. ಆದರೆ ಅಲ್ಲಿಯೂ ಈಗ ಮನೆ ಕಟ್ಟುವ ನೆಪದಲ್ಲಿ ನಮ್ಮನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಇದು ಜೀವನದ ಪ್ರಶ್ನೆಯಾಗಿರುವುದರಿಂದ ನಾವು ಅನಿವಾರ್ಯವಾಗಿ ವಸತಿ ವ್ಯವಸ್ಥೆ ಮಾಡಿಕೊಳ್ಳಲೇಬೇಕಿದೆ. ನಮ್ಮ ಪಾಡು ಯಾರಿಗೆ ಹೇಳಲಿ, ಕೇಳಿಸಿಕೊಳ್ಳುವವರೂ ಇಲ್ಲ. ಕನಿಷ್ಠ ಅನುಕಂಪವೂ ಇಲ್ಲವಲ್ಲ ಎಂಬ ಬೇಸರ ನಮಗಿದೆ.
ನಮ್ಮದು ಹೇಳಿಕೇಳಿ, ದೊಡ್ಡ ಸಂಸಾರ. ವರ್ಷಕ್ಕೆ 3ರಿಂದ 4 ಬಾರಿ ಹೆರಿಗೆ ಭಾಗ್ಯವನ್ನು (ನಿಮಗಿಲ್ಲ) ದೇವರು ಕರುಣಿಸಿದ್ದಾನೆ. ಇದರಿಂದ ಸಂತತಿ ಹೆಚ್ಚುತ್ತಲೇ ಇದೆ. ನಾವು ನಿಮ್ಮ ಹಾಗೆ ಒಂದೋ, ಅಪರೂಪಕ್ಕೆ ಎರಡೋ ಹೆರುವವರಲ್ಲ. ಕನಿಷ್ಠ ಆರೆಂಟು ಮಕ್ಕಳಾದರೂ ಜನಿಸುತ್ತವೆ. ಇವರನ್ನೆಲ್ಲ ಕಾಪಾಡಲು ವಸತಿ ವ್ಯವಸ್ಥೆಯ ಅಗತ್ಯತೆ ಇದೆ. ಆಹಾರ ವ್ಯವಸ್ಥೆಯನ್ನು ಹೇಗಾದರೂ ಮಾಡಿಕೊಳ್ಳುತ್ತೇವೆ. ದಯವಿಟ್ಟು ಎಲ್ಲ ಕನ್ಸರ್ವೆನ್ಸಿಗಳನ್ನೆಲ್ಲ ಸುಂದರಗೊಳಿಸುವ ಮತ್ತು ಸ್ಮಾರ್ಟ್ ಸಿಟಿ ಕೆಲಸಕ್ಕೆ ಕೈ ಹಾಕಿ ನಮಗೆ ಅನಗತ್ಯ ತೊಂದರೆ ಕೊಡಬೇಡಿ. ನಿಮಗೆ ಪಾರ್ಕಿಂಗ್ ಪ್ರಾಬ್ಲಂ ಆದರೆ ನಾವು ಜವಾಬ್ದಾರರಲ್ಲ. ಅದಕ್ಕೆ ನಮ್ಮ ವಸತಿ ಹಕ್ಕನ್ನು ಕಸಿದುಕೊಳ್ಳಬೇಡಿ. ಬಿಲ್ಡಿಂಗ್ ಕಟ್ಟುವವರಿಗೆ ಜಾಗ ಬಿಡಲು ಹೇಳಿ. ಇನ್ನು ಮುಂದಾದರೂ ನಮ್ಮ ಮನವಿಗೆ ಸ್ಪಂದಿಸಿ ಬದುಕಲು ಬಿಡಿ. ಬದುಕುವ ಹಕ್ಕು ನಮಗೂ ನಿಮ್ಮಂತೆ ಇದೆ, ತಿಳಿದಿರಲಿ. ನೀವು ಬದುಕಿ, ನಮ್ಮನ್ನೂ ಬದುಕಬಿಡಿ.

ನಮ್ಮ  ಬಗ್ಗೆ ತಿಳಿದಿರಲಿ

* ನಾವು ಹಕ್ಕುಪತ್ರ ಕೇಳುತ್ತಿಲ್ಲ.
 * 94 ಸಿಸಿ ಕಾಯ್ದೆ ಪ್ರಕಾರ ಬದುಕುತ್ತಿರುವ ಜಾಗ ನಮ್ಮ ಹೆಸರಿಗೆ ಮಾಡಿಕೊಡಿ ಎಂದು ಕೇಳೋದಿಲ್ಲ.
* ಒಂದು ವೇಳೆ ಒಕ್ಕಲೆಬ್ಬಿಸಿದರೂ ನಾವು ಡಿಸಿ ಕಚೇರಿ ಎದುರು ಕುಳಿತು ಕೂಗಾಡೋದಿಲ್ಲ.
* ಪತ್ರಕರ್ತರಿಗೆ ಮಾಹಿತಿ ಕೊಟ್ಟು ಪುಕ್ಕಟೆ ಪ್ರಚಾರ ತಗೊಳ್ಳಲ್ಲ.
*  ಪೇಪರ್‌ನಲ್ಲಿ ನಮ್ಮ ಫೋಟೊ ಬರೋದು ಇಷ್ಟವಿಲ್ಲ.
* ಅಲೆಮಾರಿಗಳಂತೆ ತಿರುಗಾಡಿ ಬದುಕುವುದು ಗೊತ್ತು.
* ತಿರುಗಾಡುವಾಗ, ರಸ್ತೆ ಕ್ರಾಸ್ ಮಾಡುವಾಗ ಮಕ್ಕಳೂ ಸಹ ನಮ್ಮ ಸಂಗಡ ಬರುವುದರಿಂದ ಕೆಲವೊಮ್ಮೆ ಟ್ರಾಫಿಕ್ ಜಾಮ್ ಆಗಬಹುದು.
* ಇದಕ್ಕಾಗಿ ನಮಗೆ ಬಾಯಿಗೆ ಬಂದಂತೆ ಬಂದು ಬೈಯ್ದು ದೂಷಿಸುವಂತಿಲ್ಲ. 
...................................

Saturday, 1 July 2017

 ಇಂದಿನಿಂದ ಜಿಲ್ಲೆಯಲ್ಲಿ ಬಾಗಿಲು ಮುಚ್ಚಲಿವೆ 
ಸುಮಾರು 100 ಮದ್ಯದಂಗಡಿಗಳು
  ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮ * 
ನಿರುದ್ಯೋಗಿಗಳಾಗುವ ಆತಂಕದಲ್ಲಿ ಕೆಲಸಗಾರರು




 ಈ ಮೊದಲು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯಂಚಿನ 500 ಮೀಟರ್ ಒಳಗಡೆಯಿರುವ ಮದ್ಯ ಮಾರಾಟ ಕೇಂದ್ರಗಳನ್ನು ಸ್ಥಳಾಂತರಗೊಳಿಸಬೇಕಾಗಿತ್ತು. ತದನಂತರ ಸುಪ್ರೀಂ ಕೋರ್ಟ್ ಮತ್ತೊಂದು ಆದೇಶ ಹೊರಡಿಸಿ 20 ಸಾವಿರ ಜನಸಂಖ್ಯೆಯೊಳಗಿರುವ ನಗರ, ಪಟ್ಟಣ ಪ್ರದೇಶದೊಳಗೆ 220 ಮೀಟರ್ ಒಳಗಡೆ ಹಾಗೂ 20 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ಪ್ರದೇಶಗಳಲ್ಲಿ 500 ಮೀಟರ್ ಒಳಗಡೆಯಿರುವ ಮದ್ಯ ಮಾರಾಟ ಕೇಂದ್ರಗಳನ್ನು ಮುಚ್ಚುವಂತೆ ಆದೇಶಿಸಿದೆ. ಪ್ರಸ್ತುತ ರಾಜ್ಯ ಸರ್ಕಾರವು ಮದ್ಯ ಮಾರಾಟ ಮಳಿಗೆಗಳನ್ನು ಉಳಿಸುವ ಉದ್ದೇಶದಿಂದ ನಗರ - ಪಟ್ಟಣ ಪ್ರದೇಶಗಳಲ್ಲಿ ಹಾದು ಹೋಗಿರುವ ರಾಷ್ಟ್ರೀಯ - ರಾಜ್ಯ ಹೆದ್ದಾರಿಗಳನ್ನು ಡಿನೋಟೀಫೈ ಮಾಡಿ ಇವುಗಳನ್ನು ಸ್ಥಳೀಯ ಆಡಳಿತಕ್ಕೆ ಒಪ್ಪಿಸುವ ತೀರ್ಮಾನ ಕೈಗೊಂಡಿದೆ. ಇದರಿಂದ ರಾಜ್ಯ ಹೆದ್ದಾರಿಯಂಚಿನಲ್ಲಿರುವ ಮದ್ಯದಂಗಡಿಗಳು ಸುಪ್ರೀಂಕೋರ್ಟ್ ಆದೇಶದಿಂದ ತಪ್ಪಿಸಿಕೊಳ್ಳುವಂತಾಗಿದೆ. ರಾಷ್ಟ್ರೀಯ ಹೆದ್ದಾರಿಯಂಚಿನಲ್ಲಿರುವ ಮಾರಾಟ ಕೇಂದ್ರಗಳಿಗೆ ಸದ್ಯಕ್ಕೆ ಸಂಕಟ ತಪ್ಪದಂತಾಗಿದೆ.

ಶಿವಮೊಗ್ಗ, ಜುಲೈ 1: ಸುಪ್ರೀಂ ಕೋರ್ಟ್ ತೀರ್ಪಿನಂತೆ ಜುಲೈ 1 ರಿಂದ (ಇಂದಿನಿಂದ) ರಾಷ್ಟ್ರೀಯ ಹೆದ್ದಾರಿಯಂಚಿನಿಂದ ನಿರ್ದಿಷ್ಟ ಅಂತರದಲ್ಲಿರುವ ಮದ್ಯದಂಗಡಿಗಳ ಬಾಗಿಲು ಮುಚ್ಚಲಿವೆ.  ಜಿಲ್ಲೆಯಲ್ಲಿ ನೂರಾರು ಮದ್ಯದಂಗಡಿಗಳು ಬಾಗಿಲು ಮುಚ್ಚಲಿದ್ದು, ಶುಕ್ರವಾರ ಮಧ್ಯರಾತ್ರಿಯಿಂದಲೇ ವಹಿವಾಟು ಸ್ಥಬ್ಧಗೊಳಿಸಬೇಕಿದೆ.
ಮತ್ತೊಂದೆಡೆ ಅಬಕಾರಿ ಇಲಾಖೆಯು ಸುಪ್ರೀಂ ಕೋರ್ಟ್ ತೀರ್ಪಿನ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಮುಂದಾಗಿದೆ. ಈಗಾಗಲೇ ಸಂಬಂಧಿಸಿದ ಮದ್ಯದಂಗಡಿಗಳಿಗೆ ನೋಟೀಸ್ ಜಾರಿಗೊಳಿಸಿರುವ ಇಲಾಖೆಯು, ಜುಲೈ 1 ರಿಂದ ಯಾವುದೇ ಕಾರಣಕ್ಕೂ ವಹಿವಾಟು ನಡೆಸಬಾರದು. ನಿಯಮ ಉಲ್ಲಂಘಿಸಿ ವಹಿವಾಟು ನಡೆಸುವುದು ಕಂಡುಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ. ಜಿಲ್ಲೆಯ ಇತರೆ ನಗರ ಪಟ್ಟಣಗಳಿಗೆ ಹೋಲಿಕೆ ಮಾಡಿದರೆ ಶಿವಮೊಗ್ಗ ನಗರದಲ್ಲಿಯೇ ಅತ್ಯದಿಕ ಮದ್ಯದಂಗಡಿಗಳು ಬಾಗಿಲು ಮುಚ್ಚಲಿವೆ. ನಗರದ ಮೂಲಕ ರಾಷ್ಟ್ರೀಯ ಹೆದ್ದಾರಿ 206 ಹಾಗೂ 13 ಹಾದು ಹೋಗಿದೆ. ಈ ಎರಡು ಹೆದ್ದಾರಿಯಂಚಿನಲ್ಲಿ ಹಲವು ವೈನ್‌ಶಾಪ್, ಬಾರ್, ಮದ್ಯ ಮಾರಾಟ ವ್ಯವಸ್ಥೆಯಿರುವ ಹೋಟೆಲ್-ಲಾಡ್ಜ್, ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆಗಳು ವಹಿವಾಟು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ.
 ತೆರವುಗೊಳ್ಳುವ ಭೀತಿಯಲ್ಲಿದ್ದ ಸುಮಾರು ಆರು ಮದ್ಯದಂಗಡಿಗಳು ಈಗಾಗಲೇ ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡು ವಹಿವಾಟು ನಡೆಸುತ್ತಿವೆ. ಉಳಿದ ಕೆಲವು ಅಂಗಡಿಗಳು ಸ್ಥಳಾಂತರ ಪ್ರಕ್ರಿಯೆಯಲ್ಲಿವೆ. ಉಳಿದಂತೆ ಹಲವು ಮದ್ಯ ಮಾರಾಟ ಕೇಂದ್ರಗಳು ನಾನಾ ಕಾರಣಗಳಿಂದ ಇವ್ಯಾವ ಪ್ರಕ್ರಿಯೆ ಆರಂಭಿಸಿಲ್ಲ. ಈ ಮಾರಾಟ ಕೇಂದ್ರಗಳು ಜುಲೈ 1 ರಿಂದ ತಮ್ಮ ವಹಿವಾಟು ಸ್ಥಗಿತಗೊಳಿಸಲೇಬೇಕು.
 ಮದ್ಯ ಮಾರಾಟ ಕೇಂದ್ರಗಳ ಬಾಗಿಲು ಮುಚ್ಚಲೇಬೇಕಾದ ಸ್ಥಿತಿಯಲ್ಲಿರುವ ವರ್ತಕರು ಪಾಡಂತೂ ಹೇಳತೀರದಾಗಿದೆ. ತಮ್ಮ ಅಂಗಡಿಯಲ್ಲಿ ಮಾರಾಟವಾಗದೆ ಬಾಕಿ ಉಳಿದಿರುವ ಮದ್ಯವನ್ನು ನಿಯಮಾನುಸಾರ ಬೇರೇಡೆ ವಿಲೇವಾರಿ ಮಾಡಲು ಹರಸಾಹಸ ಪಡುತ್ತಿದ್ದಾರೆ. ಬೇರೇಡೆ ಸ್ಥಳಾಂತರಗೊಳ್ಳಲು ಜಾಗ ಹುಡುಕಾಡುತ್ತಿದ್ದು, ಸೂಕ್ತ ಸ್ಥಳಾವಕಾಶ ದೊರಕದೆ ಪರದಾಡುವಂತಾಗಿದೆ. ಮತ್ತೊಂದೆಡೆ ಈ ಅಂಗಡಿಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಕೆಲಸಗಾರರು ನಿರುದ್ಯೋಗಿಗಳಾಗುವ ಆತಂಕದಲ್ಲಿದ್ದಾರೆ.
ಜಿಲ್ಲೆಯಲ್ಲಿವೆ 230 ಲೈಸೈನ್ಸ್ ಮದ್ಯದಂಗಡಿಗಳು:
 ಜಿಲ್ಲೆಯ ಏಳು ತಾಲೂಕು ವ್ಯಾಪ್ತಿಯಲ್ಲಿ ವೈನ್‌ಶಾಪ್, ಬಾರ್-ರೆಸ್ಟೋರೆಂಟ್, ಎಂಎಸ್‌ಐಎಲ್, ಹೋಟೆಲ್ - ಲಾಡ್ಜ್‌ಗಳು, ಕ್ಲಬ್‌ಗಳು ಸೇರಿದಂತೆ ಒಟ್ಟಾರೆ 230 ಲೈಸೈನ್ಸ್ ಮದ್ಯ ಮಾರಾಟ ಕೇಂದ್ರಗಳಿವೆ. ಇದರಲ್ಲಿ 126 ಮದ್ಯ ಮಾರಾಟ ಕೇಂದ್ರಗಳ ಕಾರ್ಯನಿರ್ವಹಣೆಗೆ ಯಾವುದೇ ಅಡೆತಡೆಯಿಲ್ಲವಾಗಿದೆ. ಉಳಿದ ಮದ್ಯ ಮಾರಾಟ ಕೇಂದ್ರಗಳು ರಾಷ್ಟ್ರೀಯ ಹೆದ್ದಾರಿಯಂಚಿನಲ್ಲಿವೆ. ಇದರಲ್ಲಿ ಹಲವು ಮದ್ಯದಂಗಡಿಗಳು ಮಾರ್ಪಡಿಸಿಕೊಂಡಿದ್ದು, ಸುಪ್ರೀಂ ಕೋರ್ಟ್ ಆದೇಶದ ತೂಗುಕತ್ತಿಯಿಂದ ತಪ್ಪಿಸಿಕೊಂಡಿವೆ. ಉಳಿದಂತೆ 100 ಮದ್ಯದಂಡಿಗಳು ಸಂಕಷ್ಟದಲ್ಲಿವೆ ಎಂದು ಅಬಕಾರಿ ಇಲಾಖೆಯ ಮೂಲಗಳು ಹೇಳುತ್ತವೆ.





’ -----------------------------------