Wednesday, 28 September 2022

 ಗ್ರಾಮೀಣ ಶಾಲೆ ಎಂದರೆ ಈ ಅಧಿಕಾರಿಗೆ ಪ್ರೀತಿ


ಶಿವಮೊಗ್ಗದಲ್ಲಿ ಕೆಲಸ ಮಾಡುತ್ತಿರುವ ಮಲ್ಲಿಕಾರ್ಜುನ ತೊದಲಬಾಗಿ ಎಂಬ ಯುವ ಕೆಎಎಸ್ ಅಧಿಕಾರಿ ಪ್ರತಿ ಭಾನುವಾರ ಇರುವುದೇ ಗ್ರಾಮೀಣ ಶಾಲೆಯಲ್ಲಿ. ಏಕೆ ಅಂತಿರಾ?  ಬರಹ ಓದಿ.  



* ದತ್ತಾತ್ರೇಯ ಹೆಗಡೆ



ಇತರರ ಸೇವೆಯಲ್ಲಿ ನಮ್ಮನ್ನು ನಾವು ಕಾಣಬೇಕು ಎನ್ನುವುದು ಮಹಾತ್ಮಾ ಗಾಂಧೀಜಿಯರ ಮಾತು.  

ಇವರೊಬ್ಬ ಯುವ ಕೆಎಎಸ್ ಅಧಿಕಾರಿ. ದಿನವಿಡಿ ಕಚೇರಿಯ ಕೆಲಸದಲ್ಲಿ ಮುಳುಗಿದರೂ ಬಿಡುವಿನ ದಿನ ಈ ಸಮುದಾಯಕ್ಕೆ ಕೈಲಾದ ಸಹಾಯ ಮಾಡಬೇಕೆಂಬ ಆಸೆಯನ್ನು ಹೊತ್ತವರು. ಇದಕ್ಕಾಗಿ ಒಂದು ತಂಡ ರಚಿಸಿಕೊಂಡು ಪ್ರತಿ ಭಾನುವಾರ  ಗ್ರಾಮೀಣ ಭಾಗದತ್ತ ಹೆಜ್ಜೆ ಹಾಕುತ್ತಾರೆ. ಹೀಗೆ ಗ್ರಾಮೀಣ ಸೇವೆಗೆ ತಮ್ಮನ್ನು ಮುಡಿಪಾಗಿರಿಸಿಕೊಂಡಿದ್ದಾರೆ. ಈ ಅಧಿಕಾರಿ ಬೇರಾರೂ ಅಲ್ಲ, ಶಿವಮೊಗ್ಗ ಜಿಪಂ ಉಪ ಕಾರ್‍ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಮಲ್ಲಿಕಾರ್ಜುನ ತೊದಲಬಾಗಿ.

ಮಲ್ಲಿಕಾರ್ಜುನ ಅವರು ಗ್ರಾಮೀಣ ಶಾಲೆಗಳನ್ನು ತಮ್ಮ ಸೇವೆಗೆ ಆಯ್ದುಕೊಂಡಿದ್ದಾರೆ. ಇಲ್ಲಿಯವರಗೆ ೩೧ ಶಾಲೆಗಳಿಗೆ ತಮ್ಮ ಸ್ವಂತ ಖರ್ಚಿನಿಂದ ಸುಣ್ಣ-ಬಣ್ಣ ಮಾಡಿದ್ದಾರೆ. ಶಾಲೆಯ ಮತ್ತು ಸುತ್ತಮುತ್ತ ಸ್ವಚ್ಛ ವಾತಾವರಣ ನಿರ್ಮಿಸಿದ್ದಾರೆ. ಶಾಲೆಗೆ ಸಂಬಂಧಿಸಿದ ಗ್ರಾಮಸ್ಥರನ್ನು ಸೇರಿಸಿ ಅವರಲ್ಲಿ  ವಿವಿಧ ವಿಷಯಗಳ ಬಗ್ಗೆ ಜಾಗೃತಿ ಮತ್ತು ಅರಿವನ್ನು ಮೂಡಿಸಿದ್ದಾರೆ. 

‘ಪರಿಸರ ಪ್ರೇಮ’ ಎಂಬ ತಂಡವನ್ನು ರಚಿಸಿಕೊಂಡಿದ್ದಾರೆ. ಇದರಲ್ಲಿ ೫೦ ಸದಸ್ಯರಿದ್ದಾರೆ. ಇವರೆಲ್ಲ ವಿವಿಧ ಇಲಾಖೆಯ ನೌಕರರು ಮತ್ತು ಅಧಿಕಾರಿಗಳು. ಜಿಪಂ ಮತ್ತು ಶಿಕ್ಷಣ ಇಲಾಖೆಯವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರತಿ ಭಾನುವಾರ ಸೌಕರ್‍ಯವಂಚಿತ, ಕುಗ್ರಾಮದ ಅಥವಾ ಸೇವೆಯ ಅವಶ್ಯಕತೆ ಇರುವ ಯಾವುದಾದರೊಂದು ಶಾಲೆಯನ್ನು ಆಯ್ಕೆ ಮಾಡಿಕೊಂಡು ಬೆಳಗ್ಗೆ ೯ ಗಂಟೆಗೆ ಅಲ್ಲಿ ಇಡೀ ತಂಡ ಹಾಜರಿರುತ್ತದೆ. ಮೊದಲು ಗ್ರಾಮಸ್ಥರನ್ನು, ಶಾಲೆಗೆ ಸಂಬಂಧಿಸಿದವರನ್ನು, ಶಿಕ್ಷಕರನ್ನು  ಮತ್ತು ಮಕ್ಕಳನ್ನು ಸೇರಿಸಿ ಅವರೊಂದಿಗೆ ಮೀಟಿಂಗ್ ಆರಂಭಿಸುತ್ತಾರೆ. ಸಮಸ್ಯೆ ಆಲಿಸುತ್ತಾರೆ. ಮಕ್ಕಳ ಸಮಸ್ಯೆ, ಸಾಮಾಜಿಕ, ಶೈಕ್ಷಣಿಕ  ಸಮಸ್ಯೆಗಳ ಬಗ್ಗೆ. ಇದರೊಟ್ಟಿಗೆಯೇ ಕೆಲಸ ಆರಂಭವಾಗುತ್ತದೆ. ಬಣ್ಣ ಬಳಿಯುವುದು, ಕಸ ಹೆಕ್ಕಿ ಸ್ವಚ್ಛಗೊಳಿಸುವುದು, ಗಿಡಗಂಟಿಗಳ ನಿರ್ಮೂಲನೆ, ದುರಸ್ತಿ ಮೊದಲಾದವು. ಇಲ್ಲಿ ಸದಸ್ಯರೆಲ್ಲ ಸಮವಸ್ತ್ರಧಾರಿಗಳಾಗಿರುತ್ತಾರೆ. ಸಂಜೆಯವರೆಗೆ ಕೆಲಸ ಮಾಡುತ್ತಾರೆ. ಮಧ್ಯಾಹ್ನ ಶಾಲೆಯಲ್ಲೇ ಊಟ, ಊಟದ ವ್ಯವಸ್ಥೆಯನ್ನು ಗ್ರಾಪಂ ಅಥವಾ ಪಿಡಿಓ ಮೂಲಕ ಬಿಸಿಯೂಟದ ಮಾದರಿಯಲ್ಲೇ ವ್ಯವಸ್ಥೆ  ಮಾಡಲಾಗುತ್ತದೆ. 

ಶಾಲೆಯ ಸುತ್ತಮುತ್ತ ಕನಿಷ್ಟ ೨೫ ಸಸಿಗಳನ್ನು ಹಾಕುತ್ತರೆ. ಇವುಗಳನ್ನು ಒಬ್ಬೊಬ್ಬ ಮಕ್ಕಳಿಗೆ ದತ್ತು ಕೊಡುತ್ತಾರೆ.  ಅಲ್ಲಿ ಅವರ ಹೆಸರನ್ನು ಬರೆಯಲಾಗುತ್ತದೆ. ಎಲ್ಲ ಕೆಲಸ ಮುಗಿದ ಮೇಲೆ ಎಲ್ಲರೂ ಸೇರಿ ವಿವಿಧ ಆಟಗಳನ್ನಾಡುತ್ತಾರೆ. ಇಲ್ಲಿ ಗೆದ್ದವರಿಗೆ ಬಹುಮಾನವಿದೆ. 

ಒಟ್ಟಿನಲ್ಲಿ ಗ್ರಾಮಸ್ಥರಿಗೆ ಆ ಭಾನುವಾರ ವಿಶೇಷ ದಿನ. ಏಕೆಂದರೆ, ಸುಮಾರು ೧೦೦ರಿಂದ ೧೫೦ ಜನರು ಅಲ್ಲಿರುತ್ತಾರೆ. ವಿವಿಧ ಚಟುವಟಿಕೆಯ ಮತ್ತು ಅರಿವಿನ, ಹೊಸ ಮುಖಗಳ ಪರಿಚಯದ ಮತ್ತು ಮನರಂಜನೆಯದ್ದಾಗಿರುತ್ತದೆ. ಒಬ್ಬ ಅಧಿಕಾರಿ ಮತ್ತು ನೌಕರರ ಜೊತೆ ಸೆರಿ ಇಡೀ ದಿನ ಕಳೆದ ಹೊಸ ಅನುಭವವನ್ನು ಕೊಡುತ್ತದೆ. 

ಇಷ್ಟಕ್ಕೂ ಮಲ್ಲಿಕಾರ್ಜುನ ಅವರಲ್ಲಿ ಈ ಸೇವೆ ಬಗ್ಗೆ ಆಸಕ್ತಿ ಮೂಡಿದ್ದು ಹೇಗೆಂಬ ಪ್ರಶ್ನೆ ನಿಮ್ಮದಾಗಿರಬಹುದು. ಅಲ್ಲವೇ? ಅದಕ್ಕೆ ಇಲ್ಲಿದೆ ಉತ್ತರ.

ಜಮಖಂಡಿ ತಾಲೂಕಿನ ಕವಟಗಿ ಗ್ರಾಮದ ಮಲ್ಲಿಕಾರ್ಜುನ ಸರಕಾರಿ ಶಾಲೆಗಳು, ಕಾಲೇಜಿನಲ್ಲೇ ಓದಿದವರು. ಎಂ ಎ ಮುಗಿಸಿದ ನಂತರ ಕಲಬುರಗಿಯಲ್ಲಿ ಶಿಕ್ಷಕರಾಗಿ ಕೆಲಸಕ್ಕೆ ಸೇರಿದರು. ಆನಂತರ ತಾಪಂ ಇಒ ಆಗಿ ಬೀಳಗಿ ತಾಲೂಕಿನಲ್ಲಿ ಮೂರು ವರ್ಷ ಕೆಲಸ ಮಾಡಿದರು. ಎಂಇಡಿ ಪದವಿ ಮುಗಿಸಿ ಜಮಖಂಡಿಯಲ್ಲಿ ಹೈಸ್ಕ್ಕೂಲು ಮುಖ್ಯಾಧ್ಯಾಪಕರಾದರು. ಇದೇ ವೇಳೆ ಕೆಇಎಸ್ (ಕರ್ನಾಟಕ ಶಿಕ್ಷಣ ಸೇವೆ) ಪಾಸಾದರು. ಆಗ ಅವರಿಗೆ ಎದುರಾದದ್ದ್ದು  ೭ ವಿವಿಧ ನೌಕರಿ. ಆದರೆ ಕೆಎಎಸ್ ಮಾಡಬೇಕೆಂಬ ಆಸೆ ಇದ್ದುದರಿಂದ ಅದನ್ನು ಪೂರ್ಣಗೊಳಿಸಿದರು. ಅಲ್ಲಿಂದ ಶಿವಮೊಗ್ಗ ಜಿಪಂ ಉಪ ಕಾರ್‍ಯದರ್ಶಿಯಾಗಿ ನೇಮಕವಾದರು. 

ಶಿಕ್ಷಣ ಇಲಾಖೆಯವರಿಂದ ಮಾಹಿತಿ ಪಡೆದು  ಶಾಲೆಗಳನ್ನು ಆಯ್ಕೆ ಮಾಡುತ್ತಾರೆ. ಇನ್ನೂ ವಿಶೇಷವೆಂದರೆ, ಇಲ್ಲಿ ಒಂದು ರುಪಾಯಿಯನ್ನೂ ಇತರರಿಂದ ಪಡೆಯುವುದಿಲ್ಲ. ಬದಲಾಗಿ ವ್ಯಕ್ತಿಯ ನೆರವನ್ನು ಸೇವೆಯ ರೂಪದಲ್ಲಿ ಪಡೆಯಲಾಗುತ್ತದೆ. ತಮ್ಮ ಈ ಸೇವೆಯ ಬಗ್ಗೆ ಅವರು ಇಲ್ಲಿಯವರೆಗೆ ಎಲ್ಲಿಯೂ ಪ್ರಚಾರ ಪಡೆಯಲು ಹೋಗಲಿಲ್ಲ. ಬದಲಾಗಿ ದಿನೇ ದಿನೇ ಇವರ ಸೇವೆಯ ಸುದ್ದಿ  ಜನರಿಂದ ಜನರಿಗೆ ಹರಡತೊಡಗಿದೆ. 

ಎಲೆಮರೆಯಾಗಿಯೇ ಉಳಿದು, ಮೌನದಿಂದ, ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ಟೊಂಕಕಟ್ಟಿರುವ ಮಲ್ಲಿಕಾಜುನ  ಅವರ ಕೆಲಸದ ಬಗ್ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.





 

  ಸರಕಾರಿ ಅಧಿಕಾರಿಯಾಗಿ ಏನಾದರೂ ಸಮಾಜ ಸೇವೆ ಮಾಡಬೇಕೆಂಬ ಆಸೆ ಇದ್ದುದರಿಂದ ತಾನಾನು ಶಿಕ್ಷಕನಾಗಿದ್ದಾಗ ಕಂಡುಂಡ ಸಮಸ್ಯೆಗಳ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲೆಗಳಿಗೆ ಒಂದು ರೂಪ ಕೊಡುವ, ಅವುಗಳ ಚಿತ್ರಣ ಬದಲಿಸುವ ಕೆಲಸಕ್ಕೆ ಕೈ ಹಾಕಿದೆ. ಕುಗ್ರಾಮದ, ಹಿಂದುಳಿದ ಭಾಗದ ಶಾಲೆಗೆ ಆದ್ಯತೆ ಕೊಟ್ಟು ಕೆಲಸ ಮಾಡುತ್ತಿದ್ದೇನೆ. ನೌಕರರು, ಗ್ರಾಮಸ್ಥರು ತುಂಬಾ ಸಹಕಾರ ಕೊಡುತ್ತಿರುವುದು ಸಂತಸ ತಂದಿದೆ. ಸೇವೆಯ ಮೂಲಕ ನನ್ನ ಸಂತಸವನ್ನು ಪಡೆಯುತ್ತೇನೆ. 

- ಮಲ್ಲಿಕಾರ್ಜುನ ತೊದಲಬಾಗಿ ಜಿಪಂ ಉಪ ಕಾರ್‍ಯದರ್ಶಿ  


article  published on sept. 28, 2022

.......................