Monday, 29 August 2016

ರವಿ ಚನ್ನಣ್ಣನವರ್ ಮತ್ತೆ ನೆನೆಪಾಗುವುದೇಕೆ?


ಪೊಲೀಸ್ ಅಧಿಕಾರಿಗಳು ಜನಸಾಮಾನ್ಯರ ಮಧ್ಯೆ ಇರುವುದು ಅತಿ ವಿರಳ. ಆದರೆ ರವಿ ಚನ್ನಣ್ಣನವರ್ ಜನಸಾಮಾನ್ಯರ ಜೊತೆ ಬೆರೆತರೆ ಮಾತ್ರ ಸುಲಭದಲ್ಲಿ ಸಮಸ್ಯೆ ಪರಿಹರಿಸಲು ಸಾಧ್ಯ, ಅಪರಾಧ ಪ್ರಮಾಣ ತಗ್ಗಿಸಲು ಸಾಧ್ಯ ಎನ್ನುವ ಸತ್ಯ ಅರಿತಿದ್ದರು.  ಇತ್ತೀಚೆಗೆ ಪೊಲೀಸರು ಮುಷ್ಕರ ಹೂಡುವುದಾಗಿ ಎಚ್ಚರಿಕೆ ನೀಡದಾಗಲೂ ರವಿ ಎಲ್ಲ ಠಾಣೆಗಳಿಗೆ ತೆರಳಿ ಅ ವರ ಅಹವಾಲು ಕೇಳಿದ್ದರು. ನಂತರ ಅವುಗಳನ್ನು ಪರಿಹರಿಸಲು ಮುಂದಾಗಿ, ಕಾಂಟೀನ್, ಮೆಡಿಕಲ್ ಶಾಪ್, ಬೇಕರಿ ಆರಂಭಿಸಿದ್ದರು. ಪೊಲೀಸ್ ಸಮುದಾಯ ಭವನಕ್ಕೆ ಶಿಲಾನ್ಯಾಸ ಹಾಕಲು ಸಿದ್ಧತೆ ನಡೆಸಿದ್ದರಾದರೂ ಅಷ್ಟರೊಳಗೆಯೇ ವರ್ಗಾವಣೆಗೊಂಡಿದ್ದಾರೆ. ಪೊಲೀಸರ ಮಕ್ಕಳಿಗೆ ಅತ್ಯಾಧುನಿಕ ಮಾದರಿಯ ಶಿಕ್ಷಣ ದೊರೆಯಲೆಂದು ಬಾಲಭವನ ತೆರೆದು ಅಲ್ಲಿ ಓಪನ್ ಮೈಂಡ್ ಸ್ಕೂಲ್ ತೆರೆದ ಹೆಗ್ಗಳಿಕೆಯೂ ಅವರದ್ದು.


ಶಿವಮೊಗ್ಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ರವಿ ಚನ್ನಣ್ಣವರ್ ವರ್ಗಾವಣೆಯಂತೆ ಯಾವ ಅಧಿಕಾರಿಯ ವರ್ಗಾವಣೆಯ ಬಗ್ಗೆಯೂ ಚರ್ಚೆಯಾಗಿಲ್ಲ. ರವಿ ಎಸ್ ಪಿಯಾಗಿ ಕಾನೂನಿನಡಿಯಲ್ಲೇ ಹೇಗೆ ಸಮಾಜಮುಖಿ ಮತ್ತು ಜನಸ್ನೇಹಿ ಕೆಲಸ ಮಾಡಬಹುದೆನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಈ ಹಿಂದೆಯೂ ಕೆಲವು ಅಧಿಕಾರಿಗಳು ಅತ್ಯುತ್ತಮ ಕೆಲಸ ಮಾಡಿದ ಉದಾಹರಣೆ ಇದೆ ಎಂದು ಹಿರಿಯರು ಹೇಳುತ್ತಾರೆ. ಆದರೆ ರವಿ ಗಳಿಸಿದ ಜನಮನ್ನಣೆಯನ್ನು ಅವರು ಗಳಿಸಲಿಲ್ಲ ಎನ್ನುವುದು ಅಷ್ಟೇ ಸತ್ಯ.
ದಮನಿತ ಸಮಾಜದಿಂದ ಅತಿ ಕಷ್ಟದಲ್ಲಿ ಅಂದರೆ ದಿನಗೂಲಿ ಕೆಲಸ ಮಾಡಿ ಮೇಲೆ ಬಂದ ರವಿ ಅವರಿಗೆ ಸಾಮಾಜಿಕ ತುಡಿತವಿತ್ತು, ಹಸಿವು, ಕಷ್ಟ ಎದರೇನು ಎನ್ನುವುದರ ಅರಿವಿತ್ತು. ಹಾಗಾಗಿ ಅವರು ಸಮಾಜಮುಖಿ ಅಧಿಕಾರಿಯಾಗಿ ಬೆಳೆದರು. ಎಸ್‌ಪಿ ಎಂದಾಕ್ಷಣ ಕೇವಲ ಕಚೇರಿ, ಪೊಲೀಸ್ ಠಾಣೆ, ಐಪಿಸಿ, ಎಫ್‌ಐಆರ್, ಕೇಸು, ಬಂದೋಬಸ್ತ್, ಕೋರ್ಟ್, ಸಭೆ, ಸಮಾರಂಭಗಳಲ್ಲಿ ಮುಳುಗಿ ಹೋಗುವವರೇ ಜಾಸ್ತಿ. ಇದಕ್ಕಿಂತ ಮುಖ್ಯ ಸಾರ್ವಜನಿಕರೊಂದಿಗಿನ ಸಂಪರ್ಕ ಎನ್ನುವುದು ಎಷ್ಟೋ ಐಪಿಎಸ್‌ಗಳಿಗೆ ಗೊತ್ತಿಲ್ಲ. ಆದರೆ ಇವರು ಎಸ್‌ಪಿ ಕಚೇರಿಯನ್ನು ಸಾರ್ವಜನಿಕರಿಗೆ ಮುಕ್ತವಾಗಿರಿಸಿದರು. ಇಷ್ಟೇ ಅಲ್ಲದೆ ಸಾರ್ವಜನಿಕರನ್ನು ಮುಖತಃ ಭೇಟಿಯಾಗುತ್ತಿದ್ದರು, ಸಮಸ್ಯೆಗೆ ಉತ್ತರ ನೀಡಿಯೇ ಕಳುಹಿಸುತ್ತಿದ್ದರು. ಅವರ ಕಚೇರಿಗೆ ಹೋದರೆ ಅವರನ್ನು ಕಾಣಲು ಎರಡು ಸಾಲುಗಳಲ್ಲಿ ಜನ ತುಂಬಿರುತ್ತಿದ್ದುನ್ನು ಬಹುತೇಕರು ಗಮನಿಸಿರಬಹುದು.
ಸಾಮಾಜಿಕ ತುಡಿತವಿದ್ದವರು ಜನಮುಖಿಯಾಗುತ್ತಾರೆ. ಜನರಿಗೆ ಸ್ಪಂದಿಸುವ ಮನೋಭಾವ ಹೊಂದಿರುತ್ತಾರೆ. ಜನರು ತಮ್ಮ ಬಗ್ಗೆ ಇಟ್ಟುಕೊಂಡಿರುವ ಅಪಾರ ನಿರೀಕ್ಷೆಯನ್ನು ಅವರೆಂದೂ ಹುಸಿಗೊಳಿಸುವುದಿಲ್ಲ. ಅಂತಹವರಲ್ಲಿ ರವಿ ಒಬ್ಬರು. ಅವರಲ್ಲಿ ಸಾಮಾಜಿಕ ಕಳಕಳಿ, ಪ್ರಾಮಾಣಿಕತೆ, ಅಷ್ಟೇ ಪ್ರತಿಭೆಯೂ ಇತ್ತು. ಅದ್ಭುತ  ವಿಚಾರಧಾರೆಯೂ ಇದೆ. ಏಕೆಂದರೆ ಸದಾ ಒಂದಲ್ಲ ಒಂದು ಪುಸ್ತಕ ಓದುವುದು ಅವರ ಹವ್ಯಾಸವಾಗಿತ್ತು. ಅವರು ಐಪಿಎಸ್‌ಗೆ ಕೋಚಿಂಗ್‌ನ್ನು ಹೈದರಾಬಾದ್‌ನಲ್ಲಿ ಖಾಸಗಿ ಸಂಸ್ಥೆಯಲ್ಲಿ ಪಡೆಯುವಾಗ ಅದರ ಮುಖ್ಯಸ್ಥ ನೀವು ಮುಂದಿನ ವರ್ಷ ಇಲ್ಲಿಯೇ ಕೋಚಿಂಗ್ ಕೊಡಲು ಬಂದುಬಿಡಿ ಎಂಬ ಮಾತನ್ನಾಡಿದ್ದರಂತೆ. ಅಂದರೆ ಅಷ್ಟೊಂದು ಮಾತುಗಾರಿಕೆ, ಬುದ್ಧವಂತಿಕೆ ಇತ್ತು. ಆದರೆ ಅಷ್ಟೇ ಚಾಣಾಕ್ಷಮತಿ ರವಿ, ಮುಂದಿನ ವರ್ಷ ನಾನು ಐಪಿಎಸ್ ತರಬೇತಿಯಲ್ಲಿರುತ್ತೇನೆ ಎಂದು ಉತ್ತರ ಕೊಟ್ಟಿದ್ದರಂತೆ. ಇದು ಅವರಲ್ಲಿರುವ ದೃಢ ವಿಶ್ವಾಸ, ಎಂತಹ ಕೆಲಸವನ್ನೂ ತಾನು ಸಾಧಿಸಬಲ್ಲೆ ಎಂಬ ವಿಶ್ವಾಸವನ್ನು ತೋರಿಸುತ್ತದೆ.  
ರವಿ ಜಾತಿವಾದಿಯಾಗಿರಲಿಲ್ಲ, ಭ್ರಷ್ಟರಾಗಿರಲಿಲ್ಲ. ಹಾಗಾಗಿ ಎಲ್ಲ ಸಮುದಾಯದವರೂ ಅವರನ್ನು ಗೌರವಿಸಿದರು. ಅವರ ಇನ್ನೊಂದು ವಿಶೇಷವೆಂದರೆ, ಆಚಾರ, ವಿಚಾರ ಮತ್ತು ಪ್ರಚಾರ ಈ ಮೂರೂ ಅಂಶ ಅವರಲ್ಲಿತ್ತು.  ಆಚಾರದಂತೆ ವಿಚಾರವಿತ್ತು. ವಿಚಾರಕ್ಕೆ ತಕ್ಕ ಪ್ರಚಾರ ದೊರೆಯಿತು. ಅವರು ಮಾಡಿದ ಕೆಲಸ ತಳಸಮುದಾಯದವರೆಗೂ ತಲುಪಿದ್ದರಿಂದ ಅವರ ಬೀಳ್ಕೊಡುಗೆಗೆ ಸಭಾಂಗಣ ತುಂಬಿತ್ತು. ಅವರ ವರ್ಗಾವಣೆಯಾದ ಬಗ್ಗೆ  ಜನಸಾಮಾನ್ಯರೂ ಅಸಮಾಧಾನಗೊಂಡಿದ್ದರು.
ಅಧಿಕಾರಿಗಳು ಜನಮನ್ನಣೆ ಗಳಿಸುವುದು ಕಷ್ಟ. ಜನಸಾಮಾನ್ಯರ ಒಲವು ಗಳಿಸುವುದೂ ಸಹ ಸುಲಭದ ಕೆಲಸವಲ್ಲ. ಅವರ ಸಮಸ್ಯೆಗೆ ಸುಲಭದಲ್ಲಿ ಸ್ಪಂದಿಸಿ ಪರಿಹರಿಸಿಕೊಡುವವರನ್ನು ಯಾರಾದರೂ ಗೌರವಿಸುತ್ತಾರೆ, ಗುರುತಿಸುತ್ತಾರೆ. ರವಿ ಸಹ ಕೇವಲ ಪೊಲೀಸ್ ಇಲಾಖೆಯಲ್ಲಷ್ಟೇ  ಹೆಸರುಗಳಿಸಲಿಲ್ಲ. ಅಥವಾ ಅವರ ಅಧಿಕಾರಿ, ಸಿಬ್ಬಂದಿ ವಲಯದಲ್ಲಿ ಮಾತ್ರ ಜನಪ್ರಿಯರಾಗಲಿಲ್ಲ. ಪೊಲೀಸ್ ಕಾನೂನಿನಡಿ ಇತರ ಇಲಾಖೆೆಯಿಂದಲೂ ಸಮಸ್ಯೆ ಪರಿಹರಿಸಿಕೊಡಬಹುದು ಎನ್ನುವುದು ಅವರಿಗೆ ಗೊತ್ತಿತ್ತು. ತಹಶೀಲ್ದಾರರಿಗೆ ಕರೆ ಮಾಡಿ ಜಮೀನಿನ ಸಮಸ್ಯೆ ಪರಿಸಹರಿಸಿಕೊಡುತ್ತಿದ್ದರು. ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೀಗೆ ಹತ್ತು ಹಲವು ಇಲಾಖೆಗಳಿಂದಾಗುವ ಕೆಲಸವನ್ನು ಪೊಲೀಸ್  ಕಾನೂನಿನಡಿಯೇ ಮಾಡಿಸಿಕೊಡುತ್ತಿದ್ದರು.
ಅವರು ಎಷ್ಡು ಜನಪ್ರಿಯರಾಗಿದ್ದರು ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಗಮನಿಸಿ. ಫೇಸ್‌ಬುಕ್‌ನಲ್ಲಿ  ಅವರ ಪೇಜ್‌ಗೆ 30 ಸಾವಿರ  ಮೆಚ್ಚುಗೆ ಬಂದಿದೆಯಂತೆ. ಸುಮಾರು 7 ಲಕ್ಷ ಜನ ಇದನ್ನು ಗಮನಿಸಿದ್ದಾರಂತೆ. ನಗರದಲ್ಲಿ ಅವರಿಗೆ ಟ್ರಬಲ್ ಶೂಟರ್, ಸಿಂಗಂ ಮೊದಲಾದ ಹೆಸರುಗಳು ಬಂದಿದ್ದವು. ಅವರ ಉಪನ್ಯಾಸ ಕೇಳುವುದು ಒಂದು ವಿಶೇಷ ಸಂದರ್ಭವಾಗಿ ಪರಿಣಮಿಸುತ್ತಿತ್ತು. ಜಿಲ್ಲೆಯಲ್ಲಿದ್ದ ಸುಮಾರು ಒಂದುವರೆ ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ. ಕುವೆಂಪು ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 2 ಸಾವಿರ ವಿದ್ಯಾರ್ಥಿಗಳು ಸೇರಿದ್ದರಂತೆ. ವಿವಿ ಇತಿಹಾಸದಲ್ಲಿ ಇಷ್ಟೊಂದು ವಿದ್ಯಾರ್ಥಿಗಳು ಎಂದೂ ಸೇರಿದ್ದಿಲ್ಲ ಎನ್ನುತ್ತಾರೆ ಕುಲಪತಿ ಜೋಗನ್ ಶಂಕರ್.
ಅವರು ಉತ್ತಮ ಮಾತುಗಾರನ್ನುವುದರಲ್ಲಿ ಎರಡು ಮಾತಿಲ್ಲ. ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದ್ದರು. ತಮ್ಮ ಬಾಲ್ಯದಿಂದ ಹಿಡಿದು ಐಪಿಎಸ್ ಮಾಡಿದವರೆಗಿನ ಅನುಭವವವನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದರು. ತನಗೆ ಕಲಿಸಿದ ಶಿಕ್ಷಕರ ಹೆಸರನ್ನು ಇಂದಿಗೂ ಪಟಪಟನೆ ಹೇಳುವ ಮೂಲಕ ಅವರನ್ನು ಪ್ರತಿ ಭಾಷಣದಲ್ಲಿ ಸ್ಮರಿಸುತ್ತಿದ್ದರು. ಇಷ್ಟೊಂದು ಆಕರ್ಷಣೆ ಏಕಿತ್ತೆಂದರೆ, ಇಂದಿನ ವಿದ್ಯಾರ್ಥಿಗಳು ಸಿನಿಕತೆ ತುಂಬಿ ವಿಶ್ವಾಸವೇ ಇಲ್ಲದಂತೆ ಬದುಕುತ್ತಿದ್ದಾರೆ. ಮುಂದಿನ ಭವಿಷ್ಯವೇನು ಎನ್ನುವ ವಿಚಾರವೇ ಅವರಲ್ಲಿಲ್ಲ.  ಇದರಿಂದ ರವಿ ಅವರ ಮಾತು ಮಳೆಹನಿಯ ಸಿಂಚನದಂತೆ ರೋಮಾಂಚನಕ್ಕೆ ಎಡೆಮಾಡಿಕೊಡುತ್ತಿತ್ತು.  ತಾವೂ ಸಹ ಮುಂದೆ  ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂಬ ಚಿಂತನೆಯ ಕಿಡಿಯನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿದ್ದರು.
ಸರ್ಕಾರದ ಜನಸ್ನೇಹಿ ಆಡಳಿತಕ್ಕೆ ಮಾದರಿಯಾದವರು ರವಿ ಚನ್ನಣ್ಣನವರ್ ಅವರು. ಅವರು ಹಾಸನದಲ್ಲಿ ಎಸ್‌ಪಿಯಾಗಿದ್ದಾಗಲೂ ಇದೇ ಕೆಲಸವನ್ನು ಮಾಡಿದ್ದರೆನ್ನುವುದು ಕೇಳಿಬಂದಿದೆ. ರಾಜಕೀಯದ ಪ್ರತಿಷ್ಠೆಯ ಕಣವಾದ ಹಾಸನಲ್ಲಿ ಅಧಿಕಾರಿಯೊಬ್ಬ ಹೆಸರು ಗಳಿಸುವುದು ಸುಲಭದ ಕೆಲಸವಲ್ಲ. ಅಲ್ಲಿಯೂ ಸಾವಿರಾರು ಅಭಿಮಾನಿ ಬಳಗವನ್ನು ಹೊಂದುವ ಮೂಲಕ ಛಾಪನ್ನು ಮೂಡಿಸಿದರು. ಶಿವಮೊಗ್ಗದಲ್ಲಿ ಹಾಸನಕ್ಕಿಂತ ಹೆಚ್ಚಿನ ಅಭಿಮಾನಿ ಬಳಗ ಸೃಷ್ಟಿಯಾಗಿದ್ದು ಸುಳ್ಳಲ್ಲ.
ಅವರಲ್ಲಿ ಅಪರಾಧ ಕೃತ್ಯವನ್ನು ಹೇಗೆ ತಡೆಯಬೇಕೆಂಬ ವೃತ್ತಿ ಕೌಶಲ್ಯವಿದೆ. ಇದೇ ಅವರನ್ನು ಈ ಮಟ್ಟಕ್ಕೇರಿಸಿದೆ ಎಂದರೆ ತಪ್ಪಾಗಲಾರದು. ಶಿವಮೊಗ್ಗದಲ್ಲಿ ಸಂಭವಿಸಿದ ಪಿಎಫ್‌ಐ ಸಂಬಂಧಿತ ಗಲಭೆಯನ್ನು ಕೇವಲ ವಾರದೊಳಗೆ ಹುಟ್ಟಡಗಿಸುವ ಮೂಲಕ ತಮ್ಮ ಕೌಶಲ್ಯವನ್ನು ಅವರು ಮೆರೆದಿದ್ದು ಅವರ ಇಷ್ಟೊಂದು ಜನಪ್ರಿಯತೆಯ ಕಾರಣದಲ್ಲೊಂದು. ಜಿಲ್ಲೆಯಲ್ಲಿ  ಮೀಟರ್ ಬಡ್ಡಿಯನ್ನು ನಿಲ್ಲಿಸಿದ್ದು ಅವರ ಮಹತ್ಸಾಧನೆಯಲ್ಲೊಂದು. ಸ್ವತಃ ರೈತ ಸಂಘದ ಮುಖಂಡರೇ ಅವರನ್ನು ಇದಕ್ಕಾಗಿ ಅಭಿನಂದಿಸಿದ್ದರು. ಜನರು ಅವರ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಅದರಂತೆ ಅವರು ಕೆಲಸ ಮಾಡಿದ್ದರಿಂದಲೇ ರವಿ ಹೆಸರಾದರು. ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು. ತಮ್ಮ ಮಾತಿನಂತೆ ಕೃತಿಯಲ್ಲೂ ಅವರು ಇದ್ದರು. ಇವೆಲ್ಲದಕ್ಕೂ ಮೂಲವಾದುದು ಅವರ ಹೋರಾಟದ ಬದುಕು.  ಹಾಗಾಗಿ ಅವರು ಮತ್ತೆ ಮತ್ತೆ ನೆನೆಪಾಗುತ್ತಲೇ ಇರುತ್ತಾರೆ.
.................................................... 
ರಾಜಾಕಾಲುವೆ ಹುಡುಕುತ್ತಿದ್ದಾರೆ ಅಧಿಕಾರಿಗಳು!
* ದಾಖಲೆಯಲ್ಲಿಲ್ಲ ರಾಜಾಕಾಲುವೆ* ಪತ್ತೆಗೆ ಏರಿಯಲ್ ಸಮಿಕ್ಷೆ 

ಮಳೆ ನೀರು ಸರಾಗವಾಗಿ ಹರಿದುಹೋಗಲು  ರಾಜಾಕಾಲುವೆ ಅಗತ್ಯ. ಆದರೆ ದಾಖಲೆಗಳಲ್ಲಿ ರಾಜಾಕಾಲುವೆ ಎನ್ನುವ ಪದವೇ ಇಲ್ಲ. ಸರಹದ್ದು, ಗಡಿ, ಬಾಂದು  ಮುಂತಾದ ಪದಗಳಿವೆ. ಇದನ್ನೇ ಆಧಾರವಾಗಿಟ್ಟುಕೊಂಡು ಏರಿಯಲ್ ಸರ್ವೇ ಮೂಲಕ ಪತ್ತೆ ಮಾಡಬೇಕಿದೆ.  ಸ್ಬುಡಾ ಅಧ್ಯಕ್ಷರು ಒಂದು ವಾರದೊಳಗೆ ಪತ್ತೆ ಮಾಡಲು ಸಭೆ ಮರೆದು ಸೂಚಿಸಿದ್ದಾರೆ. ಕೆಲಸ ನಡೆಯುತ್ತಿದೆ. ಇದರಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ನೆರವಾಗುತ್ತಿದ್ದಾರೆ. 
-ಮೂುಕಪ್ಪ ಕರಭೀಮಣ್ಣನವರ್, ಸ್ಬುಡಾ ಆಯುಕ್ತ

ಶಿವಮೊಗ್ಗ:  ದಿನಬೆಳಗಾದರೆ ಬೆಂಗಳೂರಿನಲ್ಲಿ  ರಾಜಾಕಾಲುವೆ ಒತ್ತುವರಿಯಾದ ಬಗ್ಗೆ, ಅದನ್ನು ಬಿಡಿಎ ಮತ್ತು ಬಿವಬಿಎಂಪಿ ಅಧಿಕಾರಿಗಳು ತೆರವುಗೊಳಿಸುತ್ತಿರುವ ಬಗ್ಗೆ   ಪತ್ರಿಕೆಗಳಲ್ಲಿ ಓದುತ್ತಿದ್ದೇವೆ, ಟಿವಿಯಲ್ಲಿ ನೋಡುತ್ತಿದ್ದೇವೆ. ಆದರೆ ನಮ್ಮೂರಿನಲ್ಲೂ ಇಂತಹುದೇ ಸಮಸ್ಯೆ ಇದೆ ಎನ್ನುವುದು ಸಾಕಷ್ಟು ಜನರಿಗೆ ಗೊತ್ತೆ ಇಲ್ಲ. ಇಷ್ಟೇ ಏಕೆ, ಇಲ್ಲಿನ ಅಧಿಕಾರಿಗಳಿಗೇ ರಾಜಾಕಾಲುವೆ ಇದೆಯೇ, ಇದ್ದರೆ ಅದು ಎಲ್ಲಿದೆ ಎನ್ನುವುವ ಬಗ್ಗೆ ಮಾಹಿತಿಯೇ ಇಲ್ಲ.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜಾಕಾಲುವೆ ಹಾದುಹೋಗಿದೆ. ಈ ಕಾಲುವೆ ಇದೆ ಎನ್ನುವುದು ಮಾತ್ರ ಸಾರ್ವಜನಿಕರಿಗೆ ಗೊತ್ತು. ಆದರೆ ಅದರ ಉದ್ದಗಲ ಎಷ್ಟು, ಎಲ್ಲೆಲ್ಲಿಹಾದು ಹೋಗಿದೆ ಎನ್ನುವುದರ ಬಗ್ಗೆ ವಿಚಾರ ಗೊತ್ತಿಲ್ಲ. ಬೆಂಗಳೂರಿನಲ್ಲಿ ಯಾವಾಗ ಈ ಕಾಲುವೆಯನ್ನು ಒತ್ತುವರಿ ಮಾಡಿಯೋ, ಮುಚ್ಚಿಯೋ ನಿವೇಶನ ಮಾಡಿ ಮಾರಾಟ ಮಡಿ, ಮನೆಕಟ್ಟಿಕೊಂಡರೋ, ಆಗ ಮಳೆಯ ನೀರು ಹರಿಯಲಾಗದೆ ಅರ್ಧ ಬೆಂಗಳೂರು ಮುಳುಗುವ ಹಂತಕ್ಕೆ ಪ್ರತಿ ಸಲ ಕಾಡಲಾರಂಭಿಸಿತು. ಅಲ್ಲಿಂದ ರಾಜಾಕಾಲುವೆ ಬಗ್ಗೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಎಚ್ಚರವಾಗತೊಡಗಿತು. ಅದರ ಪರಿಣಾಮ  ರಾಜಾಕಾಲುವೆ ಹುಡುಕಡತೊಡಗಿದರು.  ನಂತರ ಗೊತ್ತ್ತಾಗಿದ್ದು, ಈ ಕಾಲುವೆ ಎಲ್ಲಿ ಒತ್ತುವರಿಯಾಗಿದೆ ಎನ್ನುವುದು.
ನಗರದಲ್ಲಿಯೂ ಈ ಕಾಲುವೆ ಸಾಕಷ್ಟು ಒತ್ತುವರಿಯಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಕಾಲುವೆ ಬಗ್ಗೆ ಪಾಲಿಕೆಯಲ್ಲಾಗಲೀ, ನಗರಾಭಿವೃದ್ಧಿ ಪ್ರಾಧಿಕಾರದಲ್ಲಾಗಲೀ ಮಾಹಿತಿಯೇ ಇಲ್ಲ.  ಸರಕಾರ ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಪಾಲಿಕೆಗಳಿಗೆ ಇತ್ತೀಚೆಗೆ ಆದೇಶ ಕಳುಹಿಸಿ, ರಾಜಾಕಾಲುವೆ ಪತ್ತೆ ಮಾಡಿ, ಒತ್ತುವರಿ ತೆರವುಗೊಳಿಸಿ ಎಂಬ ನಿರ್ದೇಶನ ನೀಡಿದೆ. ಇದರನ್ವಯ ಎಚ್ಚೆತ್ತ ಈ ಎರಡೂ ಸಂಸ್ಥೆಗಳ ಅಧಿಕಾರಿಗಳು ರಾಜಾಕಾಲುವೆ ಹುಡಕತೊಡಗಿದ್ದಾರೆ.
ಆಗಸ್ಟ್ 24ರಂದು ಈ ಸಂಬಂಧ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಈ ಬಗ್ಗೆ ಚರ್ಚೆ ನಡೆಸಿ ಕಾಲುವೆ ಹುಡುಕುವಂತೆ ಸೂಚಿಸಿದ್ದಾರೆ. ನೈಸರ್ಗಿಕ ಕಾಲುವೆ ಮತ್ತು ಕೆರೆ, ಹಳ್ಳವನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಪ್ರಕರಣ ಇದ್ದರೆ ಗಮನಕ್ಕೆ ತನ್ನಿ ಎಂದು ಸೂಚಿಸಿದ್ದಾರೆ. ಬಹುತೇಕವಾಗಿ ಇಂತಹ ಒತ್ತುವರಿ ಆಗುವುದು ಹಣವಂತರಿಂದ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಈಗ ಈ ರಾಜಾಕಾಲುವೆ ಪತ್ತೆಹಚ್ಚಲು ಅಧಿಕಾರಿಗಳು ಏರಿಯಲ್ ಸರ್ವೇ ನಡೆಸುತ್ತಿದ್ದಾರೆ. ಒಂದು ವಾರ, ಹತ್ತು ದಿನದೊದಳಗೆ ಮ್ಯಾಪ್ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ನಗರದ ಮಧ್ಯಭಾಗದಲ್ಲಿ ರಾಜಾಕಾಲುವೆ ಹಾದುಹೋಗಿದೆ. ಆಟೊ ಕಾಂಪ್ಲೆಕ್ಸ್, ಗಾರ್ಡನ್ ಏರಿಯಾ, ಕಮಲಾ ನೆಹರೂ ಕಾಲೇಜು ಪಕ್ಕ, ಗಾಂಧಿ ಪಾರ್ಕ್, ರಂಗಮಂದಿರ  ಮೂಲಕ ಮುಂದಿನ ಬಡಾವಣೆಗಳಲ್ಲಿ ಸಾಗಿದೆ. ಕಾಲುವೆಯೇನೋ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅದರ ಒತ್ತುವರಿ ಪತ್ತೆ ಮಾಡುವುದು ಮತ್ತು ಒತ್ತುವರಿ ತೆರವುಗೊಳಿಸುವುದು  ಈಗ ಅಧಿಕಾರಿಗಳ ಮುಂದಿರುವ ಸವಾಲು. ಕಾಲುವೆಯಿಂದ ನಿಗದಿತ ಅಂತರ ಬಿಟ್ಟು ಮನೆ ಕಟ್ಟಬೇಕು ಎಂಬ ನಿಯಮವಿದೆ. ಇದನ್ನು ಉಲ್ಲಂಘಿಸಿರುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದೆ.
ಇವನ್ನೆಲ್ಲ ಅಧಿಕಾರಿಗಳು ಪತ್ತೆ ಹಚ್ಚಿದರೂ ಈಗಿನ ರಾಜಕಿಯ ವ್ಯವಸ್ಥೆಯಲ್ಲಿ ಅದನ್ನು ತೆರವುಗೊಳಿಸುವುದು ಸಾಧ್ಯವೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಏಕೆಂದರೆ ಪಕ್ಷ ರಾಜಕೀಯಗಳ ಮೇಲಾಟವೇ ಅಧಿಕವಾಗಿರುವ ಶಿವಮೊಗ್ಗದಲ್ಲಿ ಇದು ಕಷ್ಟವಾಗಬಹುದು. ರಾಜಾಕಾಲುವೆ ಗುರುತಿಸುವ ವಿಚಾರದಲ್ಲಿ ಭೂಮಾಪನಾ ಇಲಾಖೆಯವರ ಕೆಲಸ ಜಾಸ್ತಿ ಇದೆ. ಅವರಿಗೆ ನಕ್ಷೆಯೊಂದಿಗೆ ಮಾಹಿತಿ ನೀಡಬೇಕು. ಆದರ ಈಗ ನಕ್ಷೆ ತಯಾರಿಸಲಾಗುತ್ತಿದೆ. ನಕ್ಷೆ ತಯಾರಿಕೆ ಸಮರ್ಪಕವಾಗಿ, ನ್ಯಾಯಯುತವಾಗಿ ನಡೆಯುತ್ತದೆ ಎನ್ನುವ ಗ್ಯಾರಂಟಿಯೂ ಇಲ್ಲ.  ಮೀಟಿಂಗ್‌ಗಳಲ್ಲಿ ಅಧಿಕಾರಿಗಳ ಜೊತೆ ಗರಂ ಆಗಿ ಮಾತನಾಡುವ ಜನಪ್ರತಿನಿಧಿಗಳು ಅಥವಾ ರಾಜಕೀಯ ಮುಖಂಡರು, ಇದೇ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಾಕ್ಷಣ ಇಲ್ಲಸಲ್ಲದ ಒತ್ತಡ ತರಲು ಮುಂದಾಗುತ್ತಾರೆ.
ಇದೇನೇ ಇರಲಿ, ಮೊದಲು ರಾಜಾಕಲುವೆ ಪತ್ತೆ ಮಾಡಿ ಮಳೆ ನೀರು ಹರಿಯಲು ತೊಂದರೆಯಾಗದಂತೆ ಮಾಡಬೇಕಿದೆ. ಕೆಲವು ವರ್ಷಗಳಿಂದ ನಗರದಲ್ಲಿ ಭೂಮಿಗೆ ಚಿನ್ನದ ಬೆಲೆ ನಂತರ ಕಂಡಕಂಡಲ್ಲೆಲ್ಲ ಲೇಔಟ್ ಮಾಡಿ ನಿವೇಶನ ಮಾರಾಟ ಮಾಡಲಾಗುತ್ತಿದೆ. ಇದೊಂದು ದೊಡ್ಡ ಮಾಫಿಯಾ ತರ ಬೆಳೆದಿರುವುದರಿಂದ ರಾಜಾಕಾಲುವೆ, ಕೆರೆ, ಹಳ್ಳಗಳೆಲ್ಲವೂ ಭೂಬಾಕರ ಪಾಲಾಗಿವೆ.  ಜೊತೆಗೆ ನಿವೇಶನ ಪರಿವರ್ತನೆ ಮಾಡುವಾಗ ನಿರಾಕ್ಷೇಪಣ ಪತ್ರದ ಜೊತೆಗೆ ನಗರಮಾಪನ ಇಲಾಖೆ ನೀಡುವ 11 ಇ ನಕ್ಷೆ ಅಗತ್ಯ. ಈ ನಕ್ಷೆಯಲ್ಲಿ ಸುತ್ತಮುತ್ತಲ ನೈಸರ್ಗಿಕದ  ಬಗ್ಗೆ ಮಾಹಿತಿ ಇರುತ್ತದೆ. ತಹಸೀಲ್ದಾರ್ ದೃಢೀಕರಣವೂ  ಬೇಕಾಗುತ್ತದೆ.
  ರಾಜಾಕಾಲುವೆ ನೈಜವಾಗಿ ಸಮೀಕ್ಷೆಯಾದರೆ ಯಾವ್ಯಾವ ಅಧಿಕಾರಿಗಳು ಒತ್ತುವರಿಯಲ್ಲಿ ಶಾಮೀಲಾಗಿದ್ದಾರೆ. ಯಾರ‌್ಯಾರ ಕಾಲದಲ್ಲಿ ಇದು ನಡೆದಿದೆ, ಇವರ ಬೆನ್ನಹಿಂದಿರುವವರಾರು ಎನ್ನುವುದು ಬೆಳಕಿಗೆ ಬರುತ್ತದೆ.
,,,,,,,,,,,,,,,,,,,,,,,,,,,

Saturday, 27 August 2016

ಮತ್ತೆ ಸಿಂಎ ಆಗುವ ಬಿಎಸ್‌ವೈ ಕನಸು ನನಸಾದೀತೆ?


ಯಡಿಯೂರಪ್ಪ  ಈಗಿನಿಂದಲೇ ತಾನೇ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಈಶ್ವರಪ್ಪ ಅವರು ಯಾವ ಕಾರಣಕ್ಕೂ ಮುಖ್ಯಮಂತ್ರಿಯಾಗಬಾರದೆಂದು ಹಠ ತೊಟ್ಟಿರುವ ಅವರು, ಅದಕ್ಕಾಗಿ ಅವರಿಗೆ ಮುಂದಿನ ವಿಧಾನಸಭೆಗೆ ಟಿಕೆಟ್ ಸಿಗದಂತೆ ಮಾಡುವ ಯತ್ನಕ್ಕೂ ಈಗಲೇ ನಾಂದಿ ಹಾಡಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದಿಂದ ಈಶ್ವರಪ್ಪ ಟಿಕೆಟ್ ಬಯಸುವುದು ನಿಶ್ಚಿತ. ಆದರೆ ಅದಕ್ಕೇ ಈಗಲೇ ಹಾಲಿ ಜಿಲ್ಲಾಧ್ಯಕ್ಷ ಎಸ್. ರುದ್ರೇಗೌಡ ಅವರಿಂದ ಟವೆಲ್ ಹಾಕಿಸುವ ಕೆಲಸ ನಡೆಯುತ್ತಿದೆ. 75 ವರ್ಷ ತಲುಪಿದವರಿಗೆ ಅಧಿಕಾರವಿಲ್ಲ ಎಂಬ ನಿಯಮ  ಬಿಜೆಪಿಯಲ್ಲಿದೆ. ಇದನ್ನು ಎಲ್. ಕೆ. ಆಡ್ವಾಣಿಯಿಂದಲೇ ಜಾರಿಗೊಳಿಸಲಾಗಿದೆ.  ಆಗ ತನ್ನ ಆಪ್ತೆ ಶೋಭಾ ಕರಂದ್ಲಾಜೆಗೆ ಪಟ್ಟ ಕಟ್ಟುವಂತಹ ಸ್ಥಿತಿ ನಿರ್ಮಾಣ ಮಾಡಿ, ತಾನು ಅದರ ಹಿಂದಿನ ಶಕ್ತಿಯಾಗಿ ಅಡಳಿತ ನಡೆಸಿದರೂ ಆಶ್ಚರ್ಯವೇನಿಲ್ಲ.

ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ, ತಾನೇ ಮುಂದಿನ ಮುಖ್ಯಮಂತ್ರಿ  ಎಂದು ಕನಸು ಕಾಣುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಎಲ್ಲಾ ರೀತಿಯಲ್ಲೂ ಟಾಂಗ್ ಕೊಡಲು ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಯತ್ನ ನಡೆಸುತ್ತಿದ್ದರೂ ಅದೇಕೋ ಯಶಸ್ವಿಯಾಗುತ್ತಿಲ್ಲ. ಇದರಿಂದ ಬಿಜೆಪಿಯಲ್ಲಿನ ಬೆಳವಣಿಗೆ ಸದ್ಯ ಸರಿಹೋಗುವ ಲಕ್ಷಣ ಕಂಡುಬರುತ್ತಿಲ್ಲ.
ಮೊನ್ನೆ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಂಗಳೂರಿಗೆ ಬಂದಾಗಲೂ ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿ ಹೋಗಿದ್ದಾರೆ. ಆದರೆ ಸದ್ಯ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಇಲ್ಲ. 2018ಕ್ಕೆ ಚುನಾವಣೆ ನಡೆಯಲಿದೆ. ಅದಕ್ಕೆ ಈಗಲೇ ತಯಾರಿ ನಡೆದರೆ ಏನೂ ಲಾಭವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಏಕೆಂದರೆ ಚುನಾವಣೆಯ ಮೇಲೆ ಪ್ರಭಾವ ಬೀರುವುದು ಆಯಾ ಸಂದರ್ಭದ ಬೆಳವಣಿಗೆಗಳು.
ಇದು ಯಡಿಯೂರಪ್ಪ ಅವರಿಗೂ ಗೊತ್ತಿದೆ. ಆದರೆ ಈಗಿನಿಂದಲೇ ತಾನೇ ಮುಖ್ಯಮಂತ್ರಿ ಎಂದು ಬಿಂಬಿಸಿಕೊಂಡರೆ ಹೆಚ್ಚಿನ ಲಾಭವಾದೀತೆಂಬ ಕಾರಣವೂ ಅವರಲ್ಲಿದೆ. ಅವರ ಮೇಲಿರುವ ಹಲವಾರು ಕೇಸುಗಳೂ ಸಹ ಹಿನ್ನಡೆಯಾಗುವಂತೆ ಮಾಡಬಹುದು. ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳೂ ಸಹ ಅವರಿಗೆ ಮಾರಕವಾಗಬಹುದು. ಇಷ್ಟರೊಳಗೆ ಉತ್ತರ ಪ್ರದೇಶ ಮತ್ತು ಪಂಜಾಬಿನಲ್ಲಿ ಚುನಾವಣೆ ನಡೆಯಲಿದೆ. ಅಲ್ಲಿನ ಫಲಿತಾಂಶ ಏರುಪೇರಾದರೂ ಪರಿಸ್ಥಿತಿ ಉಲ್ಟಾ ಹೊಡೆಯಬಹುದು. ಇದನ್ನೆಲ್ಲ ಅರಿತು ಹೆಜ್ಜೆ ಇಡುವ ಬದಲು ಈಗಿನಿಂದಲೇ ಚುನಾವಣೆ ತಯಾರಿ ಮಾಡುತ್ತಿದ್ದಾರೆ. ಇದರ ಉದ್ದೇಶ ಈಶ್ವರಪ್ಪ ಅವರು ಮುಂಚೂಣಿಗೆ ಬಾರದಂತೆ ಮಾಡುವುದೇ ಆಗಿದೆ.
ಈಶ್ವರಪ್ಪ ಅವರಿಗೂ  ಬಿಜೆಪಿ ಅಧಿಕಾರಕ್ಕೇರಿದರೆ ತಾನೇ ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿದೆ. ಏಕೆಂದರೆ ಕಳೆದ ಬಾರಿ ಬಿಜೆಪಿ ಅಧಿಕಾರಕ್ಕೇರಿದಾಗ ಇಬ್ಬರು ಲಿಂಗಾಯಿತರು, ಒಬ್ಬ ಒಕ್ಕಲಿಗ ಒಟ್ಟು ಮೂರು ಮುಖ್ಯಮಂತ್ರಿಗಳನ್ನು ರಾಜ್ಯ ಕಂಡಿತು. ಹಿಂದುಳಿದವರು ಬಿಜೆಪಿಯಿಂದ ಮುಖ್ಯಮಂತ್ರಿ ಆಗಿಲ್ಲ. ಆ ಸಮುದಾಯದ  ಲೀಡರ್ ತಾನೇ ಎನ್ನುವುದು ಈಶ್ವರಪ್ಪ ತಲೆಯಲ್ಲಿದೆ. ಅದಕ್ಕಾಗಿ ಈಗ ಹಿಂದ ಸಂಘಟನೆಯನ್ನೂ ಕಟ್ಟಹೊರಟಿದ್ದಾರೆ. ಅದರ ಉದ್ಘಾಟನೆಗೂ ತಯಾರಿ ನಡೆದಿದೆ.
ಆದರೆ, ಚುನಾವಣೆಯಲ್ಲಿ ಈ ಬಾರಿಯೂ ಯಡಿಯೂರಪ್ಪ ಜಾತಿಯನ್ನೇ ಮುಂದೆಮಾಡುವ ಸಂಭವ ಈಗಾಲೇ ದಟ್ಟವಾಗಿ ಕಾಣುತ್ತಿದೆ. ಅವರು ರಾಜ್ಯಾಧ್ಯಕ್ಷರಾದ ನಂತರ ಮಾಡಿದ ಕೆಲಸವೂ ಇದೇ ಆಗಿದೆ. ಲಿಂಗಾಯಿತ ಸಮುದಾಯದವರಿಗೆ ಪಕ್ಷದ ಎಲ್ಲ ಸ್ಥರದಲ್ಲೂ ಅಧಿಕಾರ ಸಿಗುವಂತೆ ಮಾಡಿದ್ದಾರೆ. ಹಲವು ಜಿಲ್ಲಾ ಅಧ್ಯಕ್ಷ ಸ್ಥಾನವು ಅವರಿಗೆ ದಕ್ಕುವಂತೆ ನೋಡಿಕೊಂಡಿದ್ದಾರೆ. ಇದರಿಂದ ಹಿಂದುಳಿದವರಿಗೆ ಮತ್ತು ನಿಷ್ಠಾವಂತರಿಗೆ  ಅನ್ಯಾಯವಾಗಿದೆ ಎಂದು ಈಶ್ವರಪ್ಪ, ಸಿ.ಟಿ. ರವಿ ಮೊದಲಾದವರು ಬಂಡಾಯದ ಬಾವುಟ ಹಾರಿಸಿದ್ದಾರೆ. ಅದರಲ್ಲೂ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಅಧ್ಯಕ್ಷರ ಬದಲಾವಣೆ ಬಿಎಸ್ವೈಗೆ ಸಂಕಟ ತಂದೊಡ್ಡಿದೆ.
ಈಶ್ವರಪ್ಪ ಅವರು ಯಾವ ಕಾರಣಕ್ಕೂ ಮುಖ್ಯಮಂತ್ರಿಯಾಗಬಾರದೆಂದು ಹಠ ತೊಟ್ಟಿರುವ ಬಿಎಎಸ್‌ವೈ ಅದಕ್ಕಾಗಿ ಅವರಿಗೆ ಮುಂದಿನ ವಿಧಾನಸಭೆಗೆ ಟಿಕೆಟ್ ಸಿಗದಂತೆ ಮಾಡುವ ಯತ್ನಕ್ಕೂ ಈಗಲೇ ನಾಂದಿ ಹಾಡಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದಿಂದ ಈಶ್ವರಪ್ಪ ಟಿಕೆಟ್ ಬಯಸುವುದು ನಿಶ್ಚಿತ. ಆದರೆ ಅದಕ್ಕೇ ಈಗಲೇ ಹಾಲಿ ಜಿಲ್ಲಾಧ್ಯಕ್ಷ ಎಸ್. ರುದ್ರೇಗೌಡ ಅವರಿಂದ ಟವೆಲ್ ಹಾಕಿಸುವ ಕೆಲಸ ನಡೆಯುತ್ತಿದೆ. ಈಶ್ವರಪ್ಪ ಹಾಲಿ ಎಂಎಲ್‌ಸಿ ಆಗಿರುವುದರಿಂದ ಅವರಿಗೆ ಒಟ್ಟೂ 6 ವರ್ಷದ ಅವಧಿ ಇದೆ. ಒಂದು ವೇಳೆ ಪಕ್ಷ ಅಧಿಕಾರಕ್ಕೇರಿದರೂ ಮಂತ್ರಿಯಾಗುವ ಸಾಧ್ಯತೆ ಇದ್ದೇ ಇದೆ . ಇದನ್ನು ಯಡಿಯೂರಪ್ಪ ಎತ್ತಿ ತೋರಿಸುತ್ತ ರುದ್ರೇಗೌಡರನ್ನು ಕಣಕ್ಕಿಳಿಸಲು ಎಲ್ಲ ಯತ್ನ ಮಾಡುವುದು  ಖಚಿತ.
ಸದ್ಯ ಜಿಲ್ಲಾಧ್ಯಕ್ಷನನ್ನಾಗಿ ಕೂಡ್ರಿಸಿ, ನಂತರ ಟಿಕೆಟ್ ಕೊಡಿಸಿ ಗೆಲ್ಲಿಸುವುದು ಅವರ ತಂತ್ರ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಈಶ್ವರಪ್ಪ ವಿರುದ್ದ ತನ್ನ ಕೆಜೆಪಿಯಿಂದ ಇದೇ ರುದ್ರೇಗೌಡರನ್ನು ಕಣಕ್ಕಿಳಿಸಿ ಹೆಚ್ಚಿನ ಮತ ಸಿಗುವಂತೆ ಮಾಡಿದ್ದರು. ಆದರೆ ರುದ್ರೇಗೌಡರೂ ಗೆಲ್ಲಲಿಲ್ಲ. ಈಶ್ವರಪ್ಪರೂ ಗೆಲ್ಲಲಿಲ್ಲ. ಈ ಬಾರಿಯೂ ಇಬ್ಬರೂ ಇದೇ ಹಗ್ಗಜಗ್ಗಾಟ ಮುಂದುವರೆಸಿದರೆ ಮತ್ತೆ ಕಳೆದ ಚುನಾವಣೆಯ ಫಲಿತಶಂಶವೇ ಮರುಕಳಿಸಿದರೂ ಆಶ್ಚರ್ಯಪಡಬೇಕಿಲ್ಲ.
75 ವರ್ಷ ತಲುಪಿದವರಿಗೆ ಅಧಿಕಾರವಿಲ್ಲ ಎಂಬ ನಿಯಮ  ಬಿಜೆಪಿಯಲ್ಲಿದೆ. ಇದನ್ನು ಎಲ್. ಕೆ. ಆಡ್ವಾಣಿಯಿಂದಲೇ ಜಾರಿಗೊಳಿಸಲಾಗಿದೆ. ಇತ್ತೀಚೆಗೆ ಕೇಂದ್ರ ಸಚಿವೆಯಾಗಿದ್ದ, ಕಾಂಗ್ರೆಸ್‌ನಲ್ಲಿದ್ದು ಅಧಿಕಾರದ ಎಲ್ಲ ವೈಭೋಗಗಳನ್ನು ಅನುಭವಿಸಿದ್ದ ನಜ್ಮಾ ಹೆಫ್ತುಲ್ಲಾ ಅವರಿಗೂ ಇದೇ ನಿಯಮ ತೋರಿಸಿ ಸಚಿವ ಸ್ಥಾನದಿಂದ ಕೆಳಗಿಳಿಸಿ ಮೊನ್ನೆ ರಾಜ್ಯಪಾಲರನ್ನಾಗಿ ಕಳುಹಿಸಲಾಗಿದೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಆನಂದಿಬೆನ್  ಅವರಿಗೂ ವಯಸ್ಸಿನ ನಿಯಮ ಮತ್ತು ಗುಜರಾತಿನಲ್ಲಿ ಪಕ್ಷ ಕಳೆಗುಂದುತ್ತಿರುವ ಕಾರಣ ಅಧಿಕಾರದಿಂದ ಕೆಳಗಿಳಿಸಲಾಗಿದೆ.
ಕರ್ನಾಟಕದಲ್ಲೂ ಇದು ಅನ್ವಯವಾಗಲೇ ಬೇಕಲ್ಲವೇ? ಹಾಗಾದರೆ ಬಿಎಸ್‌ವೈ ಮುಖ್ಯಮಂತ್ರಿಯಾಗುವುದಿಲ್ಲ. 2018ಕ್ಕೆ ಬಿಎಸ್‌ವೈಗೆ 75 ತುಂಬುತ್ತದೆ. ಇದು ಅಮಿತ್ ಶಾ ಅವರಿಗೂ ಗೊತ್ತು. ಈಗ ಶಾ ಅವರ ಯೋಚನೆಯೆಂದರೆ, ಬಿಎಸ್‌ವೈ ನೇತೃತ್ವದಲ್ಲಿ ಪಕ್ಷವನ್ನು ಸಂಘಟಿಸಿದರೆ ನಂತರ ಅವರನ್ನು ವಯಸ್ಸಿನ ನಿರ್ಬಂಧದಿಂದ ಹೊರಗಿಡಬಹುದು. ಈಗಲೇ ಬಿಎಸ್‌ವೈ ಅವರನ್ನು ದೂರವಿಟ್ಟರೆ ಪಕ್ಷ ನೆಲಕಚ್ಚುವುದು ಖಚಿತ. ಇದನ್ನೆಲ್ಲ ಅರಿತೇ ಈಶ್ವರಪ್ಪ ಸಹ ತಯಾರಿ ನಡೆಸಿದ್ದಾರೆ. ಆದರೆ ಬಿಎಸ್‌ವೈ ಅಷ್ಟು ಸುಲಭದಲ್ಲಿ ಸ್ಥಾನ ಬಿಟ್ಟುಕೊಡುವವರಲ್ಲ. ತನ್ನ ಆಪ್ತೆ ಶೋಭಾ ಕರಂದ್ಲಾಜೆಗೆ ಪಟ್ಟ ಕಟ್ಟುವಂತಹ ಸ್ಥಿತಿ ನಿರ್ಮಾಣ ಮಾಡಿ, ತಾನು ಅದರ ಹಿಂದಿನ ಶಕ್ತಿಯಾಗಿ ಅಡಳಿತ ನಡೆಸಿದರೂ ಆಶ್ಚರ್ಯವೇನಿಲ್ಲ. ಹೀಗಾದರೆ ಕಾಣದಿಹ ಕೈಯೊಂದು ಸೂತ್ರ ಹಿಡಿದಿದೆ ಎಂಬ ಹಾಡನ್ನು ಹಾಡಬಹುದು.
ಈ ಎಲ್ಲ ಬೆಳವಣಿಗೆಗಳು ಬಿಎಸ್‌ವೈ ಮತ್ತು ಈಶ್ವರಪ್ಪ ಇಬ್ಬರಿಗೂ ತಿಳಿದಿದೆ. ಆದ್ದರಿಂದಲೇ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟು ಗುದ್ದಾಟ ಆರಂಭಿಸಿದ್ದಾರೆ. ಚುನಾವಣೆಯೇ ಇನ್ನೂ ನಿಗದಿಯಾಗಿಲ್ಲ, ಆದರೂ ಅಧಿಕಾರಕ್ಕಾಗಿ ಇನ್ನಿಲ್ಲದ ಯತ್ನ ನಡೆಸಿದ್ದಾರೆ. ಇದು ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದರು ಎಂಬ ಗಾದೆಮಾತಿನಂತಾಗಿದೆ. ರಾಜ್ಯದಲ್ಲಿ ಆಗಿನ  ಪರಿಸ್ಥಿತಿ ಹೇಗಿರುತ್ತದೆಯೋ, ಬಿಜೆಪಿಗೆ ಪೂರಕವಿರುತ್ತದೆಯೋ ಎನ್ನುವುದನ್ನು ಈಗಲೇ ಹೇಳಲಾಗದು. ಏಕೆಂದರೆ ಸದ್ಯ ರಾಜ್ಯದಲ್ಲಿ ನಕಲಿ ಗೋರಕ್ಷಕರ ಮೆರೆದಾಟ, ದೇಶದ್ರೋಹದ ಹೆಸರಿನಲ್ಲಿ ಪುಂಡಾಟ ಹೆಚ್ಚುತ್ತಿದೆ. ದಲಿತರ ಮೇಲಿನ ಹಲ್ಲೆ ಇನ್ನೊಂದೆಡೆ ಪರಿಣಾಮ ಬೀರುವುದು ನಿಶ್ಚಿತ. ಏಕೆಂದರೆ ಬಿಜೆಪಿ ಹಿಂದೂಪರವಿರುವ ಪಕ್ಷವಾಗಿರುವುದರಿಂದ ಅದರ ಹೆಸರಲ್ಲಿ ಕೆಲವು ಸಂಘಟನೆಗಳು ಕೆಲಸ ಮಾಡುತ್ತ ಅಶಾಂತಿಗೆ ಕಾರಣವಾಗುತ್ತಿವೆ. ಈ ದೇಶದಲ್ಲಿ  ದಲಿತ ಚಳವಳಿಗಳು ಹುಟ್ಟಿದ್ದೇ ಪುರೋಹಿತಶಾಹಿಗಳ ದೌರ್ಜನ್ಯದಿಂದ. ದಲಿತರ ಹೋರಾಟ ಹೆಚ್ಚಿದಲ್ಲಿ ಅದು ಬಿಜೆಪಿಗೆ ಮಾರಕವಾಗುವುದರಲ್ಲಿ ಸಂಶಯವಿಲ್ಲ. ಇತ್ತೀಚೆಗೆ ದಲಿತರು ಸಂಘಟಿತರಾಗುತ್ತಿದ್ದಾರೆ. ಅಹಿಂದವೂ ಸಹ ಅವರ ಒಂದು ಭಾಗವೇ ಆಗಿದೆ ಎನ್ನುವುದನ್ನು ಮರೆಯಬಾರದು.  
ಸದ್ಯ ಸಿದ್ದರಾಮಯ್ಯ ವಿರುದ್ದ ಎಷ್ಟೇ ಬೈದಾಡಿದರೂ ಅದರಿಂದ ಬಿಜೆಪಿಗೆ ಏನೂ ಲಾಭವಾಗೊಲ್ಲ. ಅಹಿಂದದ ವರ್ಚಸ್ಸನ್ನು ಕಳೆಯಲು ಹಿಂದ ಬಂದರೂ ಸಾಧ್ಯವಿಲ್ಲ. ಹಿಂದದಲ್ಲಿ ಮುಸ್ಲಿಮರನ್ನು ಕೈಬಿಡಲಾಗಿದೆ. ಅಲ್ಲದೆ ಇದು ಈಶ್ವರಪ್ಪ ಅವರು ತಮ್ಮ  ವೈಯಕ್ತಿಕ ಪ್ರತಿಷ್ಠೆಗಾಗಿ ಸ್ಥಾಪಿಸಿಕೊಡಂಇದ್ದು ಎನ್ನುವುದು ಜಗಜ್ಜಾಹೀರಾಗಿದೆ.  ಇದೆಲ್ಲವನ್ನೂ ಗಮನಿಸಿದರೆ ಕುರುಬ ಸಮಾಜದವರು ಸದ್ಯ ಈಶ್ವರಪ್ಪ ಸಮಾವೇಶದಲ್ಲಿ ಭಾಗವಹಿಸಬಹುದು.  ಆದರೆ ಇವರಿಬ್ಬರೂ ಒಂದೇ ಸಮುದಾಯದ ಮುಖಂಡರು ಎನ್ನುವುದು ಇಲ್ಲಿನ ವಿಶೇಷ.
ಸದ್ಯದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗಮನಿಸುವುದಾದರ ಅಹಿಂದದಿಂದಾಗಿ ಹಿಂದಕ್ಕೆ ನಿರೀಕ್ಷಿತ ಬೆಂಬಲ ಸಿಗುವುದು ಕಷ್ಟ. ಎರಡನೆಯದಾಗಿ ಚುನಾವಣೆಯನ್ನೇ ಗಮನದಲ್ಲಿಟ್ಟು ಇಂತಹ ಸಮಾವೇಶ ನಡೆಸುವುದಾದರೆ ಸಮುದಾಯದವರನ್ನೆಲ್ಲ ಕೊನೆಯವರೆಗೂ ಈಶ್ವರಪ್ಪ ಹಿಡಿದಿಟ್ಟುಕೊಳ್ಳಬೇಕಾಗುತ್ತದೆ. ಇದು ಸಾದ್ಯವೇ?  ಬಿಜೆಪಿ ಇತರೇ ನಾಯಕರು ಇದನ್ನೆಲ್ಲ ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳುವರೇ? ಬಿಎಸ್‌ವೈ ಈ ಸಂಘಟನೆಯ ವಿರುದ್ದ ಕ್ರಮ ಜರುಗಿಸಬಹುದಲ್ಲವೇ?.
ಇವೆಲ್ಲವುಗಳ ಆಧಾರದಲ್ಲಿ ಬಿಎಸ್‌ವೈ, ಈಶ್ವರಪ್ಪ ಅವರ ಮುಂದಿನ ರಾಜಕೀಯ ಬೆಳವಣಿಗೆಯನ್ನು ಗಮನಿಬಹುದಾಗಿದೆ.
.....................................
ನಿಜಕ್ಕೂ ಸವಾಲಿನ ಕೆಲಸಗಳ ಜಿಲ್ಲೆ ಇದು
* ನೂತನ ಎಸ್‌ಪಿ ಅಭಿನವ್ ಖರೆಗೆ ಗಣೇಶೋತ್ಸವದ ಸ್ವಾಗತ




 ಗಣೇಶ ಹಬ್ಬದ ಜವಾಬ್ದಾರಿ ನಿರ್ವಹಣೆಯನ್ನು ಅತ್ಯಂತ ಎಚ್ಚರಿಕೆ, ಚಾಕಚಕ್ಯತೆ, ಸೂಕ್ಷ್ಮತೆಯಿಂದ ನಡೆಸಬೇಕಾಗಿದೆ. ಕ್ರಿಮಿನಲ್ಸ್‌ಗಳ ಚಲನವಲನಗಳ ಮೇಲೆ ನಿಗಾವಹಿಸಬೇಕಾಗಿದೆ.  
ನಾಗರಿಕರು, ಸಂಘಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಿರಂತರ ಸಮಾಲೋಚನೆ-ಸಂಪರ್ಕದಲ್ಲಿರಬೇಕು. ಇದರಿಂದ ಎಸ್.ಪಿ.ಯವರಿಗೆ ಪರಿಣಾಮಕಾರಿಯಾಗಿ ಭದ್ರತಾ ಏರ್ಪಾಡು, ವಿವಿಧ ವಿಷಯಗಳ ಮಾಹಿತಿ ಪಡೆಯಲು ಸಾಕಷ್ಟು ಸಹಕಾರಿಯಾಗಲಿದೆ. ಯಾವುದೇ ಪ್ರಭಾವ, ರಾಜಕೀಯ ಒತ್ತಡಕ್ಕೆ ಮಣಿಯದೆ ಸಮಾಜದ ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ಸಂಘಟನೆ-ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕಾಗಿದೆ. ಯಾವುದೇ ಕಾರಣಕ್ಕೂ ಶಿವಮೊಗ್ಗ ನಗರದಲ್ಲಿ ಕ್ರಿಮಿನಲ್ಸ್‌ಗಳು ಮತ್ತೆ ಬಾಲ ಬಿಚ್ಚದಂತೆ ನೋಡಿಕೊಳ್ಳಬೇಕಾಗಿದೆ.  


  ನೂತನ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆಯವರ ಮುಂದೆ ಸಾಕಷ್ಟು ಸವಾಲುಗಳಿವೆ. ಶಿವಮೊಗ್ಗ ಜಿಲ್ಲೆಯ ಸಮಸ್ಯೆಗಳೇ ಸವಾಲಿನವು. ಹೋರಾಟಗಳಿಂದ ಹಿಡಿದು ಕೋಮುಗಲಭೆಯವರೆಗೆ ಇಲ್ಲಿ ನಡೆದಿವೆ. ಹಾಗಾಗಿ ಇಂದಿಗೂ ಕೋಮು ಸೂಕ್ಷ್ಮ ಎಂಬ ಹಣೆಪಟ್ಟಿಯಲ್ಲೇ ಶಿವಮೊಗ್ಗ ನಗರವಿದೆ.
ಜಿಲ್ಲೆಯ ಪೊಲೀಸರಿಗೆ ಸದಾ ತಲೆನೋವು ತರುವ ವಿಷಯವೆಂದರೆ ಬಂದೋಬಸ್ತ್. ಬೃಹತ್ ಪ್ರತಿಭಟನೆಗಳು, ಉತ್ಸವಗಳು, ಮೆರವಣಿಗೆಗಳು, ಹಬ್ಬ-ಹರಿದಿನಗಳು, ಸಮಾವೇಶಗಳು....ಒಂದಲ್ಲ, ಎರಡಲ್ಲ, ಒಂದರ ಬೆನ್ನಿಗೆ ಇನ್ನೊಂದು ಸದಾ ಇರುತ್ತದೆ. ಇದರಿಂದ ಸಶಸ್ತ್ರ ದಳದ ಪೊಲೀಸರಂತೆ ಸಿವಿಲ್ ಪೊಲೀಸರಿಗೂ ತಾಲೂಕು ಮತ್ತು ನಗರದ ಬಂದೋಬಸ್ತ್‌ನಲ್ಲೇ ಕಾಲಕಳೆಯುವಂತಾಗಿದೆ.
ಮುಂಬರುವ ’ಗಣೇಶೋತ್ಸವ ಹಬ್ಬ’ ಅತ್ಯಂತ ಮಹತ್ವದ್ದಾಗಿದೆ. ಜಿಲ್ಲೆಯ ಪ್ರಮುಖ ಗಣಪತಿಗಳ ಮೆರವಣಿಗೆಯನ್ನು ಸುಗಮ-ಶಾಂತಿಯುತವಾಗಿ ನಡೆಸುವ ಗುರುತರ ಜವಾಬ್ದಾರಿ ನೂತನ ಎಸ್.ಪಿ.ಯ ಮೇಲಿದೆ. ಈ ನಿಟ್ಟಿನಲ್ಲಿ ಖರೆ ಅವರು ಕೈಗೊಳ್ಳುವ ಭದ್ರತಾ ಕ್ರಮಗಳ ಬಗ್ಗೆ ಜಿಲ್ಲೆಯ ನಾಗರಿಕರಲ್ಲಿ ಸಾಕಷ್ಟು ಕುತೂಹಲ ಮನೆ ಮಾಡಿದೆ.  ಗಣೇಶೋತ್ಸವ ಹಬ್ಬದ ಸಂದರ್ಭದಲ್ಲಂತೂ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳುತ್ತದೆ. ಪ್ರಮುಖ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಗಳನ್ನು ಸುಗಮ-ಶಾಂತಿಯುತವಾಗಿ ನೆರವೇರಿಸಿಕೊಂಡು ಬರುವುದು ಪೊಲೀಸ್ ಇಲಾಖೆ ಮಾತ್ರವಲ್ಲ, ಜಿಲ್ಲಾಡಳಿತಕ್ಕೂ ಸವಾಲಿನ ಕೆಲಸವಾಗಿದೆ.
ಕಳೆದ ಹಲವು ವರ್ಷಗಳ ಹಿಂದೆ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗಣೇಶ ಮೂರ್ತಿಗಳ ವಿಸರ್ಜನಾ ಪೂರ್ವ ಮೆರವಣಿಗೆಗಳಲ್ಲಿ ನಡೆದ ಅಹಿತಕರ ಘಟನೆಗಳು ಜನಮಾನಸದಲ್ಲಿ ಅಚ್ಚಳಿಯದೆ ಉಳಿದುಕೊಂಡಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಗಣೇಶ ಮೂರ್ತಿಗಳ ವಿಸರ್ಜನಾ ಪೂರ್ವ ಮೆರವಣಿಗೆಯ ವೇಳೆ ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿಗೂ ಇದು ಸವಾಲಿನ ಕೆಲಸವಾಗಿದೆ.
 ನಿಗರ್ಮಿತ ಎಸ್.ಪಿ. ರವಿ ಡಿ. ಚೆನ್ನಣ್ಣವರ್ ಪ್ರಮುಖ ಗಣೇಶ ಮೂರ್ತಿಗಳ ವಿಸರ್ಜನಾ ಪೂರ್ವ ಮೆರವಣಿಗೆಯ ಸಂದರ್ಭದಲ್ಲಿ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಾಡಬೇಕಾದ ಬಂದೋಬಸ್ತ್ ಕ್ರಮಗಳ ಬಗ್ಗೆ ಕಳೆದೊಂದು ತಿಂಗಳಿನಿಂದಲೇ ಸಮಗ್ರ ರೂಪುರೇಶೆ ಸಿದ್ಧಪಡಿಸಿಟ್ಟುಕೊಂಡಿದ್ದರು. ಸಮಾಜಘಾತುಕ ವ್ಯಕ್ತಿ, ಸಂಘಟನೆಗಳ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು. ಈ ಹಿಂದಿನ ಗಣೇಶೋತ್ಸವ ಮೆರವಣಿಗೆಗಳಲ್ಲಿ ಅಶಾಂತಿ ಸೃಷ್ಟಿಸಿದ ಕ್ರಿಮಿನಲ್ಸ್‌ಗಳ ಪಟ್ಟಿ ತಯಾರು ಮಾಡಿಕೊಂಡಿದ್ದರು.
   ಹಿಂದಿನ ಗಣೇಶೋತ್ಸವದ ವೇಳೆ ಮಾಡಲಾಗಿದ್ದ ವೀಡಿಯೋ ಚಿತ್ರೀಕರಣ ಕೂಡ ತರಿಸಿಕೊಂಡು ರವಿ ಪರಿಶೀಲಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಬೇಕಾದ ಕ್ರಿಮಿನಲ್ಸ್‌ಗಳ ಪಟ್ಟಿ ಕೂಡ ಸಿದ್ದಪಡಿಸಿಟ್ಟುಕೊಂಡಿದ್ದರು. ಈ ಬಾರಿ ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಕಣ್ಗಾವಲಿದೆ. ಜೊತೆಗೆ ಡ್ರೋಣ್ ವಿಚಕ್ಷಣೆಗೆ ಇದೆ. ಅತ್ಯುತ್ತ್ತಮ  ಗುಣಮಟ್ಟದ, ಸಮರ್ಥವಾದ ಮತ್ತು ಅತಿಸೂಕ್ಷ್ಮವಾದ ಕ್ಯಾಮರಾ ವ್ಯವಸ್ಥೆ ಇದೆ. ಇದರಿಂದ ಬಂದೋಬಸ್ತ್‌ಗೆ ಅನುಕೂಲವಾಗಿದೆ.
 ಇನ್ನು ಕಾನೂನು ಮತ್ತು ಸುವ್ಯವಸ್ಥೆಯತ್ತ ಗಮನಿಸುವುದಾದರೆ, ರೌಡಿಗಳ ಆರ್ಟವಿದೆ, ಕ್ರಿಮಿನಲ್, ಜೂಜುಕೊರರು, ದಂಧೆಕೋರರು ಕಾಟ ಕೊಡುತ್ತಲೇ ಇರುತ್ತಾರೆ. ಟ್ರಾಫಿಕ್ ಸಮಸ್ಯೆಗೆ ಇನ್ನೂ ಪೂರ್ಣವಿರಾಮ ಬಿದ್ದಿಲ್ಲ. ಮತ್ತೊಂದೆಡೆ, ಘಟಾನುಘಟಿ ರಾಜಕಾರಣಿಗಳು ಇಲ್ಲಿರುವುದರಿಂದ ಅವರಲ್ಲಿಯೂ ಪಕ್ಷ ಸಂಘರ್ಷದ, ಅಭಿವೃದ್ಧಿ ವಿಚಾರದ ಬಗ್ಗೆ ಕಚ್ಚಾಟವಿದೆ. ಇದು ಒಮ್ಮೊಮ್ಮೆ ತಾರಕಕ್ಕೇರಿ ಸಂಘರ್ಷಕ್ಕೆ ಕಾರಣವಾಗುತ್ತಿದೆ.  ಬಾಹ್ಯ ಶಕ್ತಿಗಳಿಂದ ಕೆಲವೊಮ್ಮೆ ಅಪಾಯ ಸಂಭವಿಸಿದ ಉದಾಹರಣೆ ಇದೆ. ಇದನ್ನೆಲ್ಲ ಎಸ್‌ಪಿ ಆದವರು ಸಮರ್ಥವಾಗಿ ನಿಭಾಯಿಸಿದ್ದಾರೆ.  ಜೊತೆಗೆ ಜನಸಾಮಾನ್ಯರ ಜೊತೆ ಸಂಪರ್ಕ ಇಟ್ಟುಕೊಳ್ಳುವ ಮೂಲಕ ಅವರ ಅಹವಾಲು ಕೇಳಿ ಪರಿಹಾರ ಒದಗಿಸಲು ವ್ಯವಸ್ಥೆ ಕಲ್ಪಿಸಬೇಕು. ಇದರೊಟ್ಟಿಗೆ ಪೊಲೀಸರ ಕುಂದುಕೊರತೆಗೆ ಸ್ಪಂದಿಸಿ ಅವರ ಕಲ್ಯಾಣ ಕೆಲಸವೂ ನಡೆಯಬೇಕಿದೆ. ರವಿ ಚೆನ್ನಣ್ಣನವರ್ ಇಂತಹ ಸಾಕಷ್ಟು ಕೆಲಸ ಮಾಡಿದ್ದಾರೆ. ಹೊಸ ಎಸ್ಪಿಯವರು ಇದನ್ನೆಲ್ಲ ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ಹೊಸತನವನ್ನೂ ಇಲಾಖೆಗೆ ತರಬೇಕಿದೆ.

.............................

Monday, 22 August 2016

ಒಲಿಂಪಿಕ್ಸ್‌ನಲ್ಲಿ ಮತ್ತದೇ ನಿರಾಸೆ


2000ರ ಒಲಿಂಪಿಕ್ಸ್‌ನಲ್ಲಿ ಕರಣಂ ಮಲ್ಲೇಶ್ವರಿ ವೇಟ್ ಲಿಪ್ಟಿಂಗ್‌ನಲ್ಲಿ 1 ಕಂಚು ಪದಕ  
2004ರಲ್ಲಿ ಒಲಿಂಪಿಕ್ಸ್‌ನಲ್ಲಿ  ರಾಜವರ್ಧನ್ ಸಿಂಗ್  ಶೂಟಿಂಗ್‌ನಲ್ಲಿ 1 ಬೆಳ್ಳಿ ಪದಕ 
2008ರ ಒಲಿಂಪಿಕ್ಸ್‌ನಲ್ಲಿ  ಅಭಿನವ್ ಭಿಂದ್ರಾ  ಶೂಟಿಂಗ್‌ನಲ್ಲಿ 1 ಚಿನ್ನ
ವಿಜೇಂದರ್ ಸಿಂಗ್ ಬಾಕ್ಸಿಂಗ್‌ನಲ್ಲಿ 1 ಕಂಚು 
  ಸುಶೀಲ್‌ಕುಮಾರ್ ಕುಸ್ತಿಯಲ್ಲಿ 1 ಕಂಚು 
2012ರ ಒಲಿಂಪಿಕ್ಸ್‌ನಲ್ಲಿ  ಶೂಟಿಂಗ್‌ನಲ್ಲಿ, 1 ಬೆಳ್ಳಿ, 1 ಕಂಚು
ಕುಸ್ತಿಯಲ್ಲಿ 1 ಕಂಚು
ಬ್ಯಾಡ್ಮಿಂಟನ್‌ನಲ್ಲಿ 1 ಕಂಚು
ಬಾಕ್ಸಿಂಗ್‌ನಲ್ಲಿ 1 ಕಂಚು
2016ರಲ್ಲಿ ಸಾಕ್ಷಿ ಮಲ್ಲಿಕ್  1 ಬೆಳ್ಳಿ
ಪಿ.ವಿ. ಸಿಂಧು ಬ್ಯಾಡ್ಮಿಂಟನ್‌ನಲ್ಲಿ 1 ಬೆಳ್ಳಿ 

 ಗೆಲುವಿಗೆ ತಕ್ಕಂತೆ ಕ್ರೀಡಾಪಟುಗಳನ್ನು ರೂಪಿಸಬಲ್ಲವರು ನಾವಾಗಿಲ್ಲ. ನಮ್ಮ ದೇಶದಲ್ಲಿ ಎಷ್ಟೋ ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದಾರೆ. ಅವರಿಗೆ ಬೇಕಾದ ತರಬೇತಿ, ಅಗತ್ಯ ಕ್ರೀಡೋಪಕರಣಗಳ ಸವಲತ್ತೂ ಇಲ್ಲ. ತರಬೇತಿ ಪಡೆದು ಹೊರಬರುವವರು ಪದಕ ಗೆಲ್ಲುವಂತೆ ತಯಾರಾಗುತ್ತಿಲ್ಲ.  ಕಷ್ಟಪಟ್ಟರೆ ಮಾತ್ರ ಯಶಸ್ಸು ಎನ್ನುವುದು ಕೇವಲ ಮಾತಿಗಷ್ಟೇ ಸೀಮಿತವಾಗಿದೆ. ನಮ್ಮಲ್ಲಿ ಸಹಜ ಕ್ರೀಡಾಪಟುಗಳು ತಯಾರಾಗುತ್ತಿಲ್ಲ. ವಿದೇಶಗಳಲ್ಲಿ ಕ್ರೀಡಾಪಟುಗಳು ಕ್ರೀಡೆಗೆ ಮಾತ್ರ ಮೀಸಲಾಗಿರುತ್ತಾರೆ. ಆದರೆ ಭಾರತದಲ್ಲಿ ಬಿಡುವು ಸಿಕ್ಕಾಗ ಕ್ರೀಡೆ ಎಂಬ ಮನೋಭಾವವಿದೆ. ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿ ತನ್ನನ್ನು  ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ಆತನಲ್ಲಿ ಸಾಧನೆಯ ಸಾಮರ್ಥ್ಯ ಬರುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ.  


ನೀವು ಯಾವುದೇ ಮಕ್ಕಳಲ್ಲಿ ಮುಂದೇನಾಗುವಿರಿ ಎಂದು ಕೇಳಿದರೆ ಸಿಗುವ ಉತ್ತರ ಒಂದೋ ಇಂಜಿನೀಯರ್ ಇಲ್ಲವೇ ಡಾಕ್ಟರ್ ಎನ್ನುವುದು. ಯಾರೂ ಉತ್ತಮ ಕ್ರೀಡಾಪಟು ಆಗುವೆ, ದೇಶವನ್ನು ಒಲಿಂಪಿಕ್ಸ್‌ನಲ್ಲಿ ಪ್ರತಿನಿಧಿಸಿ ಪದಕ ಗೆದ್ದು ತರುವ ಗುರಿ ಇದೆ ಎಂದು ಹೇಳುವುದಿಲ್ಲ. ನಮ್ಮ ಪರಂಪರೆಯೇ ಹೀಗೆ ಬೆಳೆದು ಬಂದಿದೆ.  ಯಾವ ತಂದೆ-ತಾಯಿಯೂ ತನ್ನ ಮಗ ಅತ್ಯುತ್ತಮ ಕ್ರೀಡಾಪಟುವಾಗಿ ದೇಶಕ್ಕೆ ಹೆಸರು ತರುವವನಾಗಲಿ ಎಂದು ಬೆಳೆಸಿದ್ದು ಕಂಡುಬರುವುದಿಲ್ಲ. ಎಲ್ಲರಿಗೂ ನೌಕರಿ ಮುಖ್ಯ. ವಿದ್ಯಾಭ್ಯಾಸಕ್ಕೆ ಖರ್ಚು ಮಾಡಿದ್ದನ್ನು ನೌಕರಿ ಗಿಟ್ಟಿಸಿ ಕೆಲವೇ ವರ್ಷಗಳಲ್ಲಿ ಅದನ್ನು ಮರಳಿ ಪಡೆಯುವ ಯತ್ನ.  ಇದೇ ಪಾಲಕರು ಒಲಿಂಪಿಕ್ಸ್‌ನಲ್ಲಿ ಪದಕ ಬಾರದಿದ್ದರೆ ನಿರಾಸೆ ವ್ಯಕ್ತಪಡಿಸುತ್ತಾರೆ. ಅಂದರೆ ತಮ್ಮ ಮಕ್ಕಳಿಗೆ ಅಂತಹ ಶಿಕ್ಷಣ ಕೊಡದೆ ಇನ್ನೊಬ್ಬರು ಸೋತ ಬಗ್ಗೆ ಮಾತನಾಡುತ್ತಾರೆ.
ನಮ್ಮಲ್ಲಿರುವ ಇನ್ನೊಂದು ದೊಡ್ಡ ಅವಗುಣವೆಂದರೆ ಗೆಲುವಿನ ಆರಾಧಕರಾಗಿರುವುದು. ಇದರಿಂದ ಅನಾಹುತವೇ ಜಾಸ್ತಿ ಎನ್ನುವುದನ್ನು ಮರೆತಿದ್ದೇವೆ. ಒಮ್ಮೆ ಕ್ರೀಡಾಪಟು ಗೆದ್ದು ಕೋಟಿಗಟ್ಟಲೇ ಬಹುಮಾನ ಪಡೆದನೆಂದರೆ, ಆತನಿಗೆ ಎಲ್ಲೆಡೆ ಸನ್ಮಾನ, ಹಾರ-ತುರಾಯಿಯ ಗೌರವ ಸಿಗುತ್ತದೆ. ಆದರೆ ನಂತರದ ದಿನಗಳಲ್ಲಿ ಕ್ರೀಡೆಯನ್ನು ಮರೆಯುವವರೇ ಜಾಸ್ತಿ. ಅಂದರೆ ಹಣದ ಮದದಲ್ಲಿ ಮೈಮರೆತುಬಿಡುತ್ತೇವೆ. ಆದರೆ ಸೋಲು ಹಾಗಲ್ಲ.  ಪಾಠ ಕಲಿಸುತ್ತದೆ. ಮುನ್ನುಗ್ಗು ಎಂಬ ಸಂದೇಶವನ್ನು ಆಗಾಗ ನೀಡುತ್ತದೆ. ಗೆಲ್ಲಲು ಯತ್ನಿಸು ಎಂದು ಪ್ರಚೋದಿಸುತ್ತದೆ. ಇದರಿಂದ ಪ್ರೇರೇಪಿತನಾಗಿ ಆತ ಮರಳಿ ಯತ್ನ ಮಾಡುತ್ತಾನೆ. ಸೋಲೇ ಗೆಲುವಿನ ಸೋಪಾನ ಎಂಬ ಮಾತಿಗೆ ತಕ್ಕಂತೆ ಶಕ್ತಿ ಮೀರಿ ಯತ್ನ ನಡೆಸುತ್ತಾನೆ. ಇದರಿಂದ ಯಶಸ್ಸನ್ನು ಕಾಣುತ್ತಾನೆ.
 ಗೆಲುವಿಗೆ ತಕ್ಕಂತೆ ಕ್ರೀಡಾಪಟುಗಳನ್ನು ರೂಪಿಸಬಲ್ಲವರು ನಾವಾಗಿಲ್ಲ. ನಮ್ಮ ದೇಶದಲ್ಲಿ ಎಷ್ಟೋ ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದಾರೆ. ಅವರಿಗೆ ಬೇಕಾದ ತರಬೇತಿ, ಅಗತ್ಯ ಕ್ರೀಡೋಪಕರಣಗಳ ಸವಲತ್ತೂ ಇಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಆಧುನಿಕ ತರಬೇತಿ ನಮ್ಮಲ್ಲಿಯೂ ಸಿಗುತ್ತಿದೆ. ಬಹುತೇಕ ಎಲ್ಲ ರಾಜ್ಯಗಳಲ್ಲೂ ವಿವಿಧ ಕ್ರೀಡೆಗಳ ತರಬೇತಿ ಕೇಂದ್ರ ಇದೆ.  ಅಲ್ಲಿ ತರಬೇತಿ ಪಡೆದು ಹೊರಬರುವವರು ಪದಕ ಗೆಲ್ಲುವಂತೆ ತಯಾರಾಗುತ್ತಿಲ್ಲ.  ಕಷ್ಟಪಟ್ಟರೆ ಮಾತ್ರ ಯಶಸ್ಸು ಎನ್ನುವುದು ಕೇವಲ ಮಾತಿಗಷ್ಟೇ ಸೀಮಿತವಾಗಿದೆ. ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸುವುದೇ ಒಂದು ಸಾಧನೆ. ಇದಕ್ಕೆ ಕನಿಷ್ಠ ಹತ್ತಾರು ವರ್ಷ ತಪಸ್ಸಿನ ರೀತಿ ಕಠಿಣ ತರಬೇತಿ ಅವಶ್ಯ. ಇಂತಹ ಕಠಿಣ ತರಬೇತಿ ನಮ್ಮಲ್ಲಿ ಇದೆಯಾದರೂ ಅದು ಬಳಕೆಯಾಗುತ್ತಿಲ್ಲ.
ನಮ್ಮ ದೇಶದ ಒಂದು ದುರಂತವೆಂದರೆ, ಕ್ರೀಡಾ ಅಕಾಡೆಮಿ, ಪ್ರಾಧಿಕಾರಗಳಿಗೆ ರಾಜಕಾರಣಿಗಳು ಅಥವಾ ಅವರ ಪುತ್ರರು, ಸಂಬಂಧಿಗಳೇ ಮುಖ್ಯಸ್ಥರಾಗುವುದು. ದಶಕಗಳ ಕಾಲ ಅಲ್ಲಿ ದರ್ಬಾರು ನಡೆಸಿದ್ದಾರೆ. ಇಲ್ಲಿ ನಡೆಯುವುದೆಲ್ಲ ಜಾತಿ, ಷಡ್ಯಂತ್ರ, ಕಾಲೆಳೆಯುವ ಪ್ರವೃತ್ತಿ. ಈ ರಾಜಕಾರಣಿಗಳಿಗೆ ಕ್ರೀಡೆಯ ಬಗ್ಗೆ ಕಿಂಚಿತ್ತೂ ಜ್ಞಾನವಿರುವುದಿಲ್ಲ.  ಏನೂ ಗೊತ್ತಿಲ್ಲದವರನ್ನು ಆ ಸ್ಥಾನಕ್ಕೆ ತಂದು ಕೂಡ್ರಿಸಿದರೆ ಕ್ರೀಡಾಪಟುಗಳಿಗೆ ಅವಮಾನ ಮಾಡಿದಂತಾಗುವುದಿಲ್ಲವೆ? ಇಂತಹವರಿಂದ ಕ್ರೀಡೆಗೆ ಅಥವಾ ಕ್ರೀಡಾಪಟುಗಳಿಗೆ ಯಾವ ರೀತಿಯ ಪ್ರೋತ್ಸಾಹ ದೊರೆಯಬಹುದು ಎನ್ನುವುದನ್ನು ನೀವೇ ಯೋಚಿಸಿ. ಸಮರ್ಥ ಕ್ರೀಡಾಪಟುಗಳಿರುವಾಗ ಆ ಸ್ಥಾನ ಅವರಿಗೇಕೆ ನೀಡಬಾರದು?
ವಿದೇಶಿ ಕೋಚ್‌ಗಳನ್ನೇ ನಾವು ನೇಮಿಸಿಕೊಂಡರೂ ಪದಕ ಗೆಲ್ಲಲಾಗದ ಪರಿಸ್ಥಿತಿ ಇಲ್ಲಿದೆ. ಆ ಕೋಚ್‌ಗಳಿಗೆ ಇವರ ಸಾಮರ್ಥ್ಯ ಅರಿತುಕೊಂಡು ಎಷ್ಟೇ ತರಬೇತಿ ನೀಡಿದರೂ ಅವರು ಅಂತಹ ಗುಣಮಟ್ಟಕ್ಕೇರುತ್ತಿಲ್ಲ. ಇದಕ್ಕೆ ನಮ್ಮ ಆಹಾರ ಪದ್ಧತಿ, ಸಂಸ್ಕೃತಿ ಕಾರಣ. ಕ್ರೀಡಾಶಾಲೆಗಳು ಎಷ್ಟೊಂದು ಇವೆ. ಸರ್ಕಾರದ ಖರ್ಚಿನಲ್ಲಿ ತರಬೇತಿ ಸಹ ಕೊಡಲಾಗುತ್ತಿದೆ. ಆದರೂ ನಮ್ಮವರಿಗೆ ಆ ಸಾಮರ್ಥ್ಯ ತಲುಪಲಾಗುತ್ತಿಲ್ಲ. ಕ್ರೀಡಾ ಸಾಧನೆಗೆ ಮುಖ್ಯವಾದುದೇ ಸಾಮರ್ಥ್ಯ. ನಮ್ಮ ನೆಲದ ಸಾಂಪ್ರದಾಯಿಕ ಶಕ್ತಿ ವಿದೇಶಿ ನೆಲದಲ್ಲಿ ಉಪಯೋಗಕ್ಕೆ ಬರುತ್ತಿಲ್ಲ.  ಜೊತೆಗೆ ನಮ್ಮಲ್ಲಿ ಸಹಜ ಕ್ರೀಡಾಪಟುಗಳು ತಯಾರಾಗುತ್ತಿಲ್ಲ. ವಿದೇಶಗಳಲ್ಲಿ ಕ್ರೀಡಾಪಟುಗಳು ಕ್ರೀಡೆಗೆ ಮಾತ್ರ ಮೀಸಲಾಗಿರುತ್ತಾರೆ. ಆದರೆ ಭಾರತದಲ್ಲಿ ಬಿಡುವು ಸಿಕ್ಕಾಗ ಕ್ರೀಡೆ ಎಂಬ ಮನೋಭಾವವಿದೆ. ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿ ತನ್ನನ್ನು  ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ಆತನಲ್ಲಿ ಸಾಧನೆಯ ಸಾಮರ್ಥ್ಯ ಬರುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ.
 ಲಂಡನ್ ಒಲಿಂಪಿಕ್ಸ್‌ಗೆ 83 ಆಟಗಾರರು ತೆರಳಿ 6 ಪದಕ ತಂದಿದ್ದರು. ಈ ಬಾರಿ ಭಾರತದಿಂದ 118 ಆಟಗಾರರು ರಿಯೊ ಒಲಿಂಪಿಕ್ಸ್‌ಗೆ ತೆರಳಿದ್ದಾರೆ. ಇಷ್ಟೊಂದು ಜನ ಅರ್ಹತೆ ಗಿಟ್ಟಿಸಿರುವುದೇ ಒಂದು ಸಾಧನೆ ಎನ್ನಬಹುದು. ಆದರೆ ಅಲ್ಲಿಗೆ ತೆರಳಿದ ನಂತರ ವಿದೇಶಿ ಆಟಗಾರರ ಎದುರು ಸೆಣೆಸುವಾಗ ಅಥವಾ ಉಳಿದ ಆಟಗಾರರ ಸಾಮರ್ಥ್ಯ, ಕೌಶಲ್ಯವನ್ನು ಕಂಡು ನಮ್ಮವರ ಆತ್ಮವಿಶ್ವಾಸ ಉಡುಗಿ ಹೋಗುತ್ತದೆ. ಇದಕ್ಕೆ ಮೂಲಕಾರಣ ಆತ್ಮವಿಶ್ವಾಸದ ಕೊರತೆ. ವಿದೇಶಿ ಆಟಗಾರರು ಆಡುವಷ್ಟು ಆತ್ಮವಿಶ್ವಾಸದ ಆಟವನ್ನು ನಮ್ಮವರು ಆಡುತ್ತಿಲ್ಲ. ಅದು ಅಲ್ಲಿನವರ ಸಂಸಕ್ರತಿ. ಅದಕ್ಕೆ ತಕ್ಕಂತೆ ಶ್ರಮಪಡುತ್ತಾರೆ. ಅವರು ಅವರಿಗಿಷ್ಟವಾದ ಹಾದಿಯಲ್ಲೇ ಬೆಳೆಯುತ್ತಾರೆ.
ಆದರ ನಮ್ಮಲ್ಲಿ ಕ್ರೀಡೆ ಎಂದರೆ ಮೂಗುಮುರಿಯಯವವರು ಜಾಸ್ತಿ. ಸರಕಾರ ಕ್ರೀಡೆಗೆ ಎಷ್ಟೊಂದು ಪ್ರಾಮುಖ್ಯತೆ ಕೊಡುತ್ತಿದೆ ಎನ್ನುವುದರ ಅರಿವು  ಸಹ ನಮ್ಮವರಿಗಿಲ್ಲ. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳನ್ನು ತಯಾರುಮಾಡಬಲ್ಲ ಶಕ್ತಿ ನಮ್ಮಲ್ಲಿಯೂ ಇದೆ. ಆದರೆ ಅಂತಹ ಕ್ರೀಡಾಪಟುಗಳು ತಯಾರಾಗುತ್ತಿಲ್ಲ. ಜೊತೆಗೆ ಅಂತಹ ಸಾಮರ್ಥ್ಯವಿರುವ ಕ್ರೀಡಾಳುಗಳನ್ನು ಗುರುತಿಸುವಲ್ಲಿಯೂ ರಾಜಕೀಯ ನಡೆಯುವ ಬಗ್ಗೆ ಕೇಳಿದ್ದೇವೆ.  ನಮ್ಮಲ್ಲಿ ಕ್ರೀಡಾ ಸಂಸಕ್ರತಿ ಇದೆಯಾದರೂ ಅದು ಇನ್ನೂ ಸಾಕಷ್ಟು ಬೆಳೆಯಬೇಕಿದೆ. ಒಲಿಂಪಿಕ್ಸ್‌ಗೆ  ಅತಿ ಕಡಿಮೆ ಆಟಗಾರರು ತೆರಳಿದರೂ ಪದಕ ಗೆದ್ದು ಬರುವ ಮಟ್ಟಿಗೆ ಅದು ಬೆಳೆಯಬೇಕಿದೆ. ಶಾಲಾ- ಕಾಲೇಜುಗಳಲ್ಲಿ ಕ್ರೀಡೆ ಒಂದು ವಿಷಯವಾಗಬೇಕಿದೆ.
ಉಸೇನ್ ಬೋಲ್ಟ್ ಎಂಬ  ಸಣ್ಣ ರಾಷ್ಟ್ರ ಜಮೈಕಾದ ಆಟಗಾರ 9 ಸ್ವರ್ಣ ಪದಕ ಗೆದ್ದಿದ್ದಾನೆ. ಆ ದೇಶ ಕರ್ನಾಟಕದ ಅರ್ಧದಷ್ಟಿರಬಹುದು. ಅಲ್ಲಿ ಕ್ರೀಡೆಗೆ 3,075 ಕೋಟಿ ರೂ. ವನ್ನು ಪ್ರತಿ ವರ್ಷ ಮೀಸಲಿಡಲಾಗುತ್ತಿದೆ. ಕೆನಡಾದಲ್ಲಿ ಪ್ರತಿ ವರ್ಷ  150 ಮಿಲಿಯನ್ ಡಾಲರ್ ತೆಗೆದಿಡಲಾಗುತ್ತದೆ. ಬ್ರಿಟನ್‌ನಲ್ಲಿ ಖಾಸಗಿ ಮತ್ತು ಸರ್ಕಾರಿಯಾಗಿ ನೆರವು ನೀಡಲಾಗುತ್ತದೆ. ಆಸೇಟ್ರೆಲಿಯಾದಲ್ಲೂ ಈ ಪದ್ಧತಿ ಇದೆ. ಕ್ರೀಡಾಪಟುಗಳಿಗೆ ವಿವಿಧ ದೇಶಗಳಿಗೆ ತೆರಳಿ ತರಬೇತಿ ಪಡೆಯಲು  ಉಚಿತ ನೆರವು ಕಲ್ಪಿಸಲಾಗುತ್ತಿದೆ. ಅಮೆರಿಕಾದಲ್ಲಿ ಕ್ರೀಡಾ ಸಂಸ್ಥೆಗಳಿಗೆ ಇವುಗಳ ಜವಾಬ್ದಾರಿ ವಹಿಸಲಾಗಿದೆ. ಇಲ್ಲೆಲ್ಲೂ ನಡೆಯದ ಜಾತಿ, ಭ್ರಷ್ಟಾಚಾರ ಮತ್ತು ರಾಜಕಿಯ ಭಾರತದಲ್ಲಿ ಮಾತ್ರ ಕಂಡುಬರುವುದರಿಂದ ನಮ್ಮ ಸಾಧನೆ ಎಲ್ಲರಿಗಿಂತ ಕಡಿಮೆ ಎಂದು ಹೇಳಬಹುದು. ಭಾರತದಲ್ಲಿ  ಕಳೆದ ಬಜೆಟ್‌ನಲ್ಲಿ ಕ್ರೀಡೆಗೆ ತೆಗೆದಿರಿಸಿದ್ದು, 1,552 ಕೋಟಿ ರೂ. ಮಾತ್ರ. ಇದರಲ್ಲಿ ಕ್ರೀಡಾಪಟುಗಳಿಗೆ ತಲುಪುವುದು ಎಷ್ಟು ಎನ್ನುವುದನ್ನು ಯಾರೂ ಹೇಳಬೇಕಿಲ್ಲ.
ಭಾರತದಲ್ಲಿ ಕ್ರಿಕೆಟ್‌ಗೆ ಮಾತ್ರ  ಹೆಚ್ಚು ಪ್ರ್ರಾಮುಖ್ಯತೆ ಸಿಗುತ್ತಿದೆ ಎನ್ನುವುದು ನಿಜವಾದರೂ ಅದನ್ನು ಟೀಕಿಸುವ ವಿಷಯವನ್ನಾಗಿ ಮಾಡಬಾರದು. ಏಕೆಂದರೆ ಕ್ರಿಕೆಟ್‌ನಲ್ಲಿ ಭಾರತದ ಸ್ಥಾನ ನಂಬರ್ 1 ಅಥವಾ ಎರಡರಲ್ಲಿರುತ್ತದೆ. ಜಾಗತಿಕ ಕ್ರಿಕೆಟ್‌ನಲ್ಲಿ ಭಾರತದ ಸಾಧನೆ ಮತ್ತು ಹೆಸರು ಐತಿಹಾಸಿಕವಾದುದು. ಇಡೀ ವಿಶ್ವವೇ ಆಶ್ಚರ್ಯಪಡುವ ರೀತಿಯಲ್ಲಿ ಸಾಧನೆ ಮಾಡಿದ ಕ್ರಿಕೆಟ್ ದಿಗ್ಗಜರು ನಮ್ಮಲ್ಲಿದ್ದಾರೆ ದಂತಕಥೆಗಳಾಗಿದ್ದಾರೆ. ಜೊತೆಗೆ ಸರಕಾರದಿಂದ ಧನಸಹಾಯವಿಲ್ಲ. ಅದು ಸ್ವತಂತ್ರ ನಿಯಮತ್ರಣ ಮಂಡಳಿ (ಬಿಸಿಸಿಐ) ರಚಿಸಿಕೊಂಡು ಆದಾಯದ ಮೂಲವನ್ನು ಮಾಡಿಕೊಂಡಿದೆ. ನಮ್ಮ ಮಕ್ಕಳು ಕ್ರಿಕೆಟ್ ಇಷ್ಪಡುತ್ತಾರೆ ಎಂದರೆ ಅವರಿಗೆ ಅಲ್ಲಿ ಸುನಿಲ್ ಗವಾಸ್ಕರ್, ಕಪಿಲ್ ದೇವ್, ರವಿ ಶಾಸ್ತ್ರಿ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿಯಂತಹ ಜಾಗತಿಕ ಆಟಗಾರರಿರುವುದರಿಂದ. ಅವರ ಆಟದ ಕೌಶಲ್ಯ, ತಂತ್ರ, ಲಯಬದ್ಧತೆ ಸೆಳೆದಿದೆಯೇ ವಿನಾ ಬೇರೇನಿಲ್ಲ. ಯಾವುದೇ ಕ್ರೀಡೆಯಲ್ಲಿ ಆದರ್ಶರೆನಿಸುವ ವ್ಯಕ್ತಿಗಳು ನಮ್ಮ ಮುಂದಿರಬೇಕು. ಆಗ ಆ ಕ್ರೀಡೆಯತ್ತ ಯುವಕರು ಹೆಚ್ಚು ಆಸಕ್ತರಾಗುತ್ತಾರೆ.
ಅಂಕಣಕಾರ ಮತ್ತು ಹಿರಿಯ ಪತ್ರಕರ್ತ ಟಿ.ಜೆ.ಎಸ್ ಜಾರ್ಜ್ ಇತ್ತೀಚೆಗೆ ಬರೆದ ಅಂಕಣವೊಂದರಲ್ಲಿ ‘‘ನಮ್ಮಲ್ಲಿ ಸ್ಥಾನಮಾನಕ್ಕೆ ಮಾತ್ರ ಬೆಲೆಕೊಡಲಾಗುತ್ತದೆ.ಅದರಲ್ಲೂ ಕ್ರೀಡಾಪಟುಗಳಿಗಲ್ಲ. ರಾಜಕಾರಣಿಗಳಿಗೆ, ಕ್ರೀಡಾ ಅಧಿಕಾರಿಗಳಿಗೆ, ಇವರಿಬ್ಬರ ಸುತ್ತ ಸುಳಿದಾಡುವ ಹಿಂಬಾಲಕರೆಂಬ ಪರಾವಲಂಬಿಗಳಿಗೆ, ಅವರ ಮಕ್ಕಳು, ನೆಂಟರಿಗೆ, ಈ ವಿಐಪಿಗಳ ಪ್ರೇಯಸಿಯರಿಗೆ ಅವಕಾಶ ಮಾಡಿಕೊಡುವುದೇ ಮುಖ್ಯವಾಗಿದೆ’’ ಎಂದಿದ್ದಾರೆ. ನಮ್ಮ ಕ್ರೀಡಾ ಅಕಾಡೆಮಿ, ಮಂಡಳಿಗಳು ಹೀಗೆಯೇ ಇವೆ.ಇವರೆಲ್ಲರಿಗೆ ಸಿಗುವ ಸೌಲಭ್ಯ, ಐಷರಾಮಿತನ ಕ್ರೀಡಾಪಟುಗಳಿಗಿಲ್ಲ. ಅವರು ಕಷ್ಟಪಟ್ಟು ಹೋರಾಡಬೇಕಿದೆ. ಇಂತಹ ವಾತಾವರಣದಿಂದ ಮುಕ್ತಿ ಸಿಗದ ತನಕ ಕ್ರೀಡೆಗೆ ಭಾರತದಲ್ಲಿ ಮಹತ್ವಸಿಗದು ಎಂದು ವಿಷಾದದಿಂದ ಹೇಳಬೇಕಾಗುತ್ತದೆ.
ಒಂದು  ದೇಶದ ಹಿರಿಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿಯಲು ಸಾಧ್ಯವಿರುವ ಕೆಲವೇ ಸಂಗತಿಗಳಲ್ಲಿ ಕ್ರೀಡೆಯೂ ಒಂದು. ಆದರೆ ಸರ್ಕಾರಗಳು ಅದನ್ನು ನಮ್ಮಲ್ಲಿ ಕಡೆಗಣಿಸಿವೆ. ಇದರಿಂದ ನಷ್ಟ ದೇಶಕ್ಕೆ ವಿನಾ ಕ್ರೀಡಾಪಟುಗಳಿಗಲ್ಲ. ಸರ್ಕಾರಗಳು ಹೆಚ್ಚು ಅನುದಾನವನ್ನು ಕ್ರೀಡೆಗೆ ನೀಡುವಂತಾಗಬೇಕು. ಖಾಸಗಿ ಕ್ರೀಡಾ ಅಕಾಡೆಮಿ ಸ್ಥಾಪಿಸಲು ನೆರವು ನೀಡಬೇಕು. ಈ ತರಬೇತಿ ಅಕಾಡೆಮಿಗಳಿಗೆ ಬೇಕಾದ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಏಕೆಂದರೆ ಸರ್ಕಾರದಿಂದ ಕ್ರೀಡಾಬೆಳವಣಿಗೆ ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ರಾತ್ರಿ ಬೆಳಗಾಗುವುದರೊಳಗೆ ಕ್ರೀಡೆಯಲ್ಲಿ ಯಶಸ್ಸು ಸಾಧ್ಯವಿಲ್ಲ ಎನ್ನುವುದನ್ನು ಸರ್ಕಾರಗಳು ಮನಗಾಣಬೇಕು. ಹಾಗೆ ಸಾಧನೆ ಮಾಡಲು ಇದು ‘ಸುಲ್ತಾನ್’ ಹಿಂದಿ ಸಿನಿಮಾವೂ ಅಲ್ಲ. (ಈ ಸಿನಿಮಾದಲ್ಲೂ ನಾಯಕ ಎಷ್ಟೋ ವರ್ಷ ಕಷ್ಟಪಟ್ಟು ಸಾಧನೆ ಮಾಡಿಯೇ ಪ್ರಶಸ್ತಿ ಪಡೆಯುತ್ತಾನೆ).
ೆ ಅಮೆರಿಕಾ ಸರ್ಕಾರ ದಿನವೊಂದಕ್ಕೆ ಒಬ್ಬ ಕ್ರೀಡಾಪಟುವಿಗೆ 22 ರೂ. ವ್ಯಯಿಸುತ್ತದೆಯಂತೆ. ಭಾರತದಲ್ಲಿ  3 ಪೈಸೆಯಷ್ಟು ಮಾತ್ರ  ಒಂದು ದಿನಕ್ಕೆ ಖರ್ಚು ಮಾಡಲಾಗುತ್ತದೆ ಎಂದು ವರದಿಯೊಂದು ಹೇಳಿದೆ. ಇದನ್ನು ಗಮನಿಸಿದರೆ ನಮ್ಮಲ್ಲಿ ಕ್ರೀಡೆಗಿರುವ ಅಸಡ್ಡೆ ಗೊತ್ತಾಗುತ್ತದೆ.
ಭಾರತದ ಆರ್ಥಿಕ ವೃದ್ಧಿ ದರ  ಚೀನಾಕ್ಕಿಂತ ಹೆಚ್ಚಿಗೆ ಇದೆ. ಕ್ಷಿಪಣಿ ತಂತ್ರಜ್ಞಾನದಲ್ಲಿ ಮುಂದಿದ್ದೇವೆ. ಆರ್ಥಿಕ ಮತ್ತು ವೈಜ್ಞಾನಿಕವಾಗಿ ಮುನ್ನುಗ್ಗುತ್ತಿರುವ ನಮಗೆ ಕ್ರೀಡಾಕ್ಷೇತ್ರದಲ್ಲಿ ಮಾತ್ರ ನಿರಾಶದಾಯಕ ಸ್ಥಿತಿ ಇದೆ.  ಇದರಲ್ಲಿ ಮಾತ್ರ ವಿಶ್ವದ ಇತರ ದೇಶಗಳ ಮಧ್ಯೆ ಗಾಢ ಅಂತರವನ್ನು ಕಾಯ್ದುಕೊಂಡಿದ್ದೇವೆ. ಮಂದಿನ ದಿನಗಳಲ್ಲಾದರೂ ನಮ್ಮ ಕ್ರೀಡಾಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಯಾಗಲಿ. ಪ್ರತಿಭೆಗಳ ನಾಡಾದ ಭಾರತದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮಿನುಗುತ್ತಿರುವವರಿದ್ದಾರೆ. ವಿದೇಶದಲ್ಲಿ ಉನ್ನತ ಸ್ಥಾನ ಪಡೆಯುತ್ತಿದ್ದಾರೆ. ಕ್ರೀಡೆಯಲ್ಲೂ ತಾರೆಗಳು ಪ್ರಜ್ವಲಿಸಲಿ.ಭವಿಷ್ಯದಲ್ಲಿ ಉತ್ತಮ ಸಾಧನೆಯಾಗಲಿ.
........................................

Saturday, 20 August 2016

 ಅನೈತಿಕ ಚಟುವಟಿಕೆಗಳ ತಾಣವಾದ ಶಿವಮೊಗ್ಗ ವಿಮಾನ ನಿಲ್ದಾಣ

ರಾಜ್ಯ ಸರ್ಕಾರವು 2007 ರಲ್ಲಿ ಶಿವಮೊಗ್ಗದ ಸೋಗಾನೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಭೂ ಸ್ವಾಧೀನ ಪ್ರಕ್ರಿಯೆ ನಡೆಸಿ, 2010 ರಲ್ಲಿ ನಿರ್ಮಾಣ ಸಂಸ್ಥೆಯೊಂದಿಗೆ ಅಧಿಕೃತವಾಗಿ ಒಪ್ಪಂದ ಕೂಡ ಮಾಡಿಕೊಂಡಿತ್ತು. ಪ್ರಾರಂಭ ಹಂತದ ಅಂದಾಜು ಪ್ರಕಾರ 192 ಕೋಟಿ ರೂ. ವೆಚ್ಚ ನಿರೀಕ್ಷೆ ಮಾಡಲಾಗಿತ್ತು. 3.1 ಕಿ.ಮೀ. ಉದ್ದದ ರನ್ ವೇ, ಟರ್ಮಿನಲ್ ಕಟ್ಟಡ, ಕಾಂಪೌಂಡ್ ಸೇರಿದಂತೆ ಇತರೆ ನಿರ್ಮಾಣ ಕಾಮಗಾರಿ ಸೇರಿದ್ದವು. ಒಪ್ಪಂದ ಮಾಡಿಕೊಂಡ 24 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕೆಂಬ ಶರತ್ತನ್ನು ಸರ್ಕಾರ ನಿರ್ಮಾಣ ಸಂಸ್ಥೆಗೆ ಹಾಕಿತ್ತು. ಆದರೆ ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. 
 ನಗರದ ಹೊರವಲಯ ಸೋಗಾನೆ ಗ್ರಾಮದ ಬಳಿ ಅರೆಬರೆ ಕಾಮಗಾರಿಯಾಗಿ ನೆನೆಗುದಿಗೆ ಬಿದ್ದಿರುವ ವಿಮಾನ ನಿಲ್ದಾಣ ಈಗ  ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತಿತವಾಗುತ್ತಿದೆ. ಕಾಮಗಾರಿಗೆ ಬಳಕೆ ಮಾಡಿರುವ ನೂರಾರು ಕೋಟಿ ರೂ. ನೀರಿನಲ್ಲಿ ಹೋಮ ಮಾಡಿದಂತಾಗಿದ್ದು, ಸ್ಮಶಾನದಂತಹ ಸ್ಥಿತಿ ನಿರ್ಮಾಣವಾಗಿದೆ.
 ವಿಮಾನ ನಿಲ್ದಾಣದ ಆವರಣದಲ್ಲಿ ಹಾಕಲಾಗಿದ್ದ ಕಟ್ಟಡ ಸಾಮಗ್ರಿಗಳನ್ನು ಕೆಲವರು ಹೊತ್ತೊಯ್ಯುತ್ತಿದ್ದಾರೆ. ಆವರಣದ ತುಂಬ ಗಿಡಪೊದೆಗಳು ಬೆಳೆದು ನಿಂತಿವೆ. ದನಕರುಗಳ ಮೇವಿನ ತಾಣವಾಗಿದೆ. ರಾತ್ರಿಯ ವೇಳೆ ಮದ್ಯ ಸೇವನೆ ಮಾಡುವುದು ಸೇರಿದಂತೆ ನಾನಾ ರೀತಿಯ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ.
 ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸೋಗಾನೆ ಗ್ರಾಮದಲ್ಲಿ ಸುಮಾರು 662 ಎಕರೆ ಪ್ರದೇಶದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಆರಂಭಕ್ಕೆ ನಿರ್ಧರಿಸಲಾಗಿತ್ತು. ಈ ಯೋಜನೆಯ ಅನುಷ್ಠಾನದಲ್ಲಿ ಅಂದು ಉಪ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಸಾಕಷ್ಟು ಆಸಕ್ತಿ ವಹಿಸಿದ್ದರು.  ಖಾತಾ ಜಮೀನುಗಳಿಗೆ ಎಕರೆಗೆ 6 ಲಕ್ಷ ರೂ. ಹಾಗೂ ಬಗರ್‌ಹುಕುಂ ಜಮೀನುಗಳಿಗೆ 2 ಲಕ್ಷ ರೂ. ಪರಿಹಾರ ಮೊತ್ತವನ್ನು ರೈತರಿಗೆ ನೀಡಲಾಗಿತ್ತು. ಮನೆ ಕಳೆದುಕೊಂಡವರಿಗೆ ಮನೆ, ರೈತರಿಗೆ ನಿವೇಶನ ಸೇರಿದಂತೆ ವಿವಿಧ ಭರವಸೆಯನ್ನು ಸರ್ಕಾರ ನೀಡಿತ್ತು. ಭಾರೀ ದೊಡ್ಡ ಪ್ರಚಾರದೊಂದಿಗೆ ನಿಲ್ದಾಣದ ಕಾಮಗಾರಿ ಕೂಡ ಪ್ರಾರಂಭವಾಗಿತ್ತು. ನಿರ್ಮಾಣ ಸಂಸ್ಥೆಯೊಂದು ಗುತ್ತಿಗೆ ಪಡೆದುಕೊಂಡಿತ್ತು.
 ಈ ಸಂಸ್ಥೆಯ ವಿರುದ್ದ ಆರೋಪ ಕೇಳಿಬಂದ ನಂತರ ಒಪ್ಪಂದ ರದ್ದುಗೊಳಿಸಿದ್ದ ಸರ್ಕಾರವು, ಮತ್ತೊಂದು ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇನ್ನೇನೂ ಎಲ್ಲವೂ ಸರಿಯಾಯಿತು ಎನ್ನುತ್ತಿದ್ದಂತೆ ಹೈಟೆನ್ಷನ್ ವಿದ್ಯುತ್ ಲೈನ್, ಮಾಚೇನಹಳ್ಳಿ ಕೈಗಾರಿಕೆಗಳ ಚಿಮಣಿ ಗೋಪುರ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದವು. ಇದೆಲ್ಲದರ ನಡುವೆಯೇ  ರನ್ ವೇ ನಿರ್ಮಾಣ ಕಾರ್ಯ ಕೂಡ ಆರಂಭವಾಗಿತ್ತು. ಪ್ರಾಥಮಿಕ ಹಂತದ ರನ್ ವೇ ಕೆಲಸ ಕೂಡ ಪೂರ್ಣಗೊಂಡಿತ್ತು. ಎಲ್ಲವೂ ಸರಿಯಾಯ್ತು ಎನ್ನುವ ಹಂತದಲ್ಲಿ ಒಂದೆಡೆ ನಿರ್ಮಾಣ ಸಂಸ್ಥೆ ಮತ್ತೊಂದೆಡೆ ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರ ವಿವಿಧ ಸಮಸ್ಯೆಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ಮುಂದಿಟ್ಟವು.
ಸಮಸ್ಯೆ ಪರಿಹಾರವಾಗುವವರೆಗೂ ನಿರ್ಮಾಣ ಕೆಲಸ ಆರಂಭಿಸುವುದಿಲ್ಲ ಎಂದು ನಿರ್ಮಾಣ ಸಂಸ್ಥೆ ಪಟ್ಟು ಹಿಡಿಯಿತು. ಜಿಲ್ಲಾಡಳಿತ ಕೂಡ ಸಮಸ್ಯೆ ಪರಿಹಾರಕ್ಕೆ ಇನ್ನಿಲ್ಲದ ಹರಸಾಹಸ ನಡೆಸಿತು. ಆದರೆ ಸಮಸ್ಯೆ ಇತ್ಯರ್ಥವಾಗದೆ ಕಾಮಗಾರಿಯೂ ಸಂಪೂರ್ಣವಾಗಿ ನೆನೆಗುದಿಗೆ ಬಿದ್ದಿತ್ತು. ತದನಂತರ ರಾಜ್ಯ ಸರ್ಕಾರವು ನಿರ್ಮಾಣ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ರದ್ದುಗೊಳಿಸಿತು.  ಇಲ್ಲಿಂದ ವಿಮಾನ ನಿಲ್ದಾಣ ಪ್ರದೇಶವು ಸಂಪೂರ್ಣವಾಗಿ ಪಾಳು ಬಿದ್ದಿದೆ. ಇಲ್ಲಿಯವರೆಗೂ ನಡೆಸಲಾಗಿರುವ ಕಾಮಗಾರಿಯು ಹಾಳಾಗುತ್ತಿದ್ದು, ಅವ್ಯವಸ್ಥೆಯ ತಾಣವಾಗಿ ಪರಿವರ್ತಿತವಾಗುತ್ತಿದೆ. ಕಾಮಗಾರಿಗೆ ವ್ಯಯಿಸಿದ ನೂರಾರು ಕೋಟಿ ರೂಪಾಯಿ ವ್ಯರ್ಥವಾದಂತಾಗಿದೆ.
 ಹಸ್ತಾಂತರವೂ ಆಗಲಿಲ್ಲ:
  ರಾಜ್ಯದವರೇ ಆದ ಸಂಸದ ಜಿ.ಎಂ.ಸಿದ್ದೇಶ್ವರ್ ಕೇಂದ್ರ ವಿಮಾನಯಾನ ರಾಜ್ಯ ಸಚಿವರಾಗಿದ್ದ ವೇಳೆ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ್ದರು. ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ್ದರು. ರಾಜ್ಯ ಸರ್ಕಾರವು ಖಾಸಗಿ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದ ರದ್ದುಗೊಳಿಸಿ ಕೇಂದ್ರ ಸರ್ಕಾರಕ್ಕೆ ಯೋಜನೆಯ ಅನುಷ್ಠಾನದ ಜವಾಬ್ದಾರಿ ವಹಿಸಿದರೆ, ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರದ ಮೂಲಕ ಬಾಕಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಜಿ.ಎಂ.ಸಿದ್ದೇಶ್ವರ್ ತಿಳಿಸಿದ್ದರು. ಆದರೆ ತಾಂತ್ರಿಕ ಸಮಸ್ಯೆಯಿಂದ  ಹಸ್ತಾಂತರವಾಗಲಿಲ್ಲ. ಮತ್ತೊಂದೆಡೆ, ಸಿದ್ದೇಶ್ವರ್ ವಿಮಾನಯಾನ ಖಾತೆ ಕಳೆದುಕೊಂಡರು. ಇದರಿಂದ ಕೇಂದ್ರ ಸರ್ಕಾರಕ್ಕೆ ಹಸ್ತಾಂತರ ಪ್ರಸ್ತಾಪ ಕೂಡ ನೆನೆಗುದಿಗೆ ಬೀಳುವಂತಾಯಿತು.

----------------------------


  ಕಾಮುಕರ ದಾಳಿ, ದೌರ್ಜನ್ಯ: ತತ್ತರಿಸಿದ ಭಿಕ್ಷುಕಿಯರು 
 -ಖಾಸಗಿ ಬಸ್ ನಿಲ್ದಾಣ ರಾತ್ರಿ ಕಾಮುಕರ ಅಡ್ಡೆ

ಹಗಲು ಅನ್ನಕ್ಕಾಗಿ ಹೋರಾಟ... ರಾತ್ರಿ ರಕ್ಷಣೆಗೆ ಪರದಾಟ 
ಹಗಲು ಹೊತ್ತು ತುತ್ತ ಅನ್ನಕ್ಕಾಗಿ ಗಲ್ಲಿ ಗಲ್ಲಿ ಸುತ್ತಿ, ಕಂಡಕಂಡವರಿಗೆ ಕೈಮುಗಿದು, ಬಿಸಿಲು-ಮಳೆ-ಚಳಿಯೆನ್ನದೆ ಭಿಕ್ಷೆ ಬೇಡಿ ಹಣ ಸಂಗ್ರಹಿಸುತ್ತೇವೆ. ರಾತ್ರಿ ವೇಳೆ ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣ ಫುಟ್‌ಪಾತ್‌ಗಳಲ್ಲಿ ಮಲಗುತ್ತೇವೆ. ಈ ವೇಳೆ ಕೆಲವರು ನಮ್ಮ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿ ಇದ್ದಬದ್ದ ಹಣವೆಲ್ಲ ಕಿತ್ತುಕೊಳ್ಳುತ್ತಾರೆ. ಇನ್ನೂ ಕೆಲವರು ಭಿಕ್ಷುಕಿಯರೊಂದಿಗೆ ಕೆಟ್ಟದಾಗಿ ವರ್ತಿಸುತ್ತಾರೆ. ಇದು ಸರ್ವೇಸಾಮಾನ್ಯ. ಏನೂ ಮಾಡಲಾಗದ ಸ್ಥಿತಿ ನಮ್ಮದು.  
-  ಆಂದ್ರ ಮೂಲದ ಭಿಕ್ಷುಕಿ  

  ಆಕೆ ಅಂಗವಿಕಲೆ, ಅಷ್ಟೇ ಅಲ್ಲ ಭಿಕ್ಷುಕಿ. ನಗರದ ಖಾಸಗಿ ಬಸ್ ನಿಲ್ದಾಣದ ಸುತ್ತಮುತ್ತಲು ಭಿಕ್ಷೆ ಬೇಡಿ ಜೀವನ ಸಾಗಿಸುತ್ತಾಳೆ. ಅಂಗವೈಕಲ್ಯ, ರೋಗರುಜಿನುಗಳಿಂದ ಬಳಲುತ್ತಿದ್ದಾಳೆ. ಇನ್ನೊಬ್ಬಳು ಮಾತನಾಡಲು ಬಾರದ ಮಧ್ಯವಯಸ್ಕೆ. ಕಾಮುಕರ ನಿರಂತರ ದಾಳಿಯಿಂದ ಈಕೆ ಕನಲಿ ಹೋಗಿದ್ದಾಳೆ. ಈ ತನ್ನ ಮೇಲಾಗುತ್ತಿರುವ ದೌರ್ಜನ್ಯ ಹೇಳಿಕೊಳ್ಳಲಾಗದೆ ಕಣ್ಣೀರಿಡುತ್ತಿದ್ದಾಳೆ...
ಈ ಅನುಭವ ಇವರಿಬ್ಬರದ್ದು ಮಾತ್ರವಲ್ಲ, ಇಂತಹ ಇನ್ನೂ ಹತ್ತಾರು ಭಿಕ್ಷುಕಿಯರಿದ್ದಾರೆ. ಇದು ನಿಜಕ್ಕೂ ಘನಘೋರ, ಅನಾಗರಿಕ, ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತದ್ದು.
 ಶಿವಮೊಗ್ಗ ನಗರದಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುವ ನಿರ್ಗತಿಕ ಮಹಿಳೆಯರು ಕಾಮಾಂಧರ ಅಟ್ಟಹಾಸಕ್ಕೆ ಸಿಲುಕಿ  ತತ್ತರಿಸಿ ಹೋಗುತ್ತಿದ್ದಾರೆ. ಲೈಂಗಿಕ ಶೋಷಣೆಯ ನರಕಯಾತನೆಗೆ ತುತ್ತಾಗಿ ನರಳುತ್ತಿದ್ದಾರೆ.
ನಗರದ ಖಾಸಗಿ ಬಸ್ ನಿಲ್ದಾಣ ಸುತ್ತಮುತ್ತಲು ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಬೀಡುಬಿಡುವ ಭಿಕ್ಷುಕ ಮಹಿಳೆಯರ ಮೇಲೆ ಈ ದಾಳಿ ನಡೆಯುತ್ತಿದೆ. ನಾನಾ ರೋಗ-ರುಜಿನುಗಳಿಂದ ಬಳಲುತ್ತಿರುವವರು, ಅಂಗವಿಕಲ, ವಯೋವೃದ್ಧ ಮಹಿಳೆಯರು ಕೂಡ ಕಾಮತೃಷೆಗೆ ಬಲಿಯಾಗುತ್ತಿದ್ದಾರೆ. ಸ್ವತಃ ಭಿಕ್ಷುಕಿಯರೇ ತಾವು ಅನುಭವಿಸುತ್ತಿರುವ ನೋವಿನ ಬಗ್ಗೆ ಹೇಳಿಕೊಳ್ಳುತ್ತಾರೆ.
ಬಹುತೇಕ ಈ ಲೈಂಗಿಕ ದೌರ್ಜನ್ಯಗಳು ಮಧ್ಯರಾತ್ರಿಯ ನಂತರವೇ ನಡೆಯುತ್ತಿವೆ. ಬಸ್‌ನಿಲ್ದಾಣ, ಫುಟ್‌ಪಾತ್, ನಿರ್ಜನ ಸ್ಥಳಗಳಲ್ಲಿ ಮಲಗಿ ನಿದ್ದೆ ಮಾಡುವ ಭಿಕ್ಷುಕ ಮಹಿಳೆಯರ ಮೇಲೆರಗುವ ಈ ದುಷ್ಟರು ಇನ್ನಿಲ್ಲದ ಹಿಂಸೆ ನೀಡುತ್ತಿದ್ದಾರೆ. ಜೊತೆಗೆ ಹಗಲಿಡಿ ಭಿಕ್ಷೆ ಬೇಡಿ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಕಿತ್ತುಕೊಂಡು ಹೋಗುತ್ತಿದ್ದಾರೆ. ದೌರ್ಜನ್ಯ ಪ್ರತಿಭಟಿಸುವವರ ಮೇಲೆ ಹಲ್ಲೆ ಕೂಡ ನಡೆಸುತ್ತಿದ್ದಾರೆ.
ಇಷ್ಟೆಲ್ಲ ದೌರ್ಜನ್ಯಕ್ಕೀಡಾದರೂ ಭಿಕ್ಷುಕ ಮಹಿಳೆಯರು ಪೊಲೀಸ್ ಠಾಣೆಗಾಗಲಿ ಅಥವಾ ಇತರರ ಬಳಿಯಾಗಲಿ ತಮ್ಮ ದೂರು ಹೇಳಿಕೊಳ್ಳಲು ಮುಂದಾಗುತ್ತಿಲ್ಲ. ಇವರ ಮೇಲೆ ದೌರ್ಜನ್ಯ ನಡೆಯುತ್ತಿರುವುದರ ಅರಿವಿರುವ ಕೆಲವು ನಾಗರಿಕರು ಕೂಡ ’ಭಿಕ್ಷುಕಿ’ಯರೆಂಬ ತಾತ್ಸಾರದಿಂದ ನೆರವಿಗೆ ಧಾವಿಸುವುದಾಗಲಿ ಅಥವಾ ರಕ್ಷಣೆ ಮಾಡುವ ಗೋಜಿಗೂ ಹೋಗುತ್ತಿಲ್ಲ.
ಇದರಿಂದ ಭಿಕ್ಷುಕಿಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು ಬೆಳಕಿಗೆ ಬರುತ್ತಿಲ್ಲ. ಮತ್ತೊಂದೆಡೆ, ಕಾಮಾಂಧರು ಕೂಡ ತಮ್ಮ ಹೇಯ ಕೃತ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಭಿಕ್ಷುಕಿಯರು ಕೂಡ ರಾತ್ರಿಯ ವೇಳೆ ನಿರಂತರವಾಗಿ ನಿಶೆಯಲ್ಲಿರುವ ಇವರ ಅಟ್ಟಹಾಸಕ್ಕೆ ತುತ್ತಾಗುವಂತಹ ದುರಂತ ಸ್ಥಿತಿ ನಿರ್ಮಾಣವಾಗಿದೆ.
  ನಾಗರಿಕ ಸಮಾಜದ ವಕ್ರದೃಷ್ಟಿಗೆ ಒಳಗಾದ ಭಿಕ್ಷುಕಿಯರಿಗೆ ಸಮಾಜದ ಕಣ್ಣೆದುರಲ್ಲೇ ಆಗುತ್ತಿರುವ ಅನ್ಯಾಯದ ಸರಮಾಲೆಗೆ ನ್ಯಾಯ ಕೊಡಿಸುವುದಿರಲಿ, ಸಾಂತ್ವನ ಹೇಳುವವರು ಇಲ್ಲವಾಗಿರುವುದು ನಿಜಕ್ಕೂ ವ್ಯವಸ್ಥೆಯ ಲೋಪಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಭಿಕ್ಷುಕಿಯರ ಸಂಖ್ಯೆ ಹೆಚ್ಚುತ್ತಿರುವುದೂ ಇದಕ್ಕೆ ಕಾರಣ. ಅವರನ್ನು ಭಿಕ್ಷುಕರ ಅಥವಾ ನಿರ್ಗತಿಕರ ಕೇಂದ್ರಕ್ಕೆ ಸಾಗ ಹಾಕುವ ಕೆಲಸವನ್ನು ಪಾಲಿಕೆ ಅಥವಾ ಸಂಬಂಧಿಸಿದ ಇಲಾಖೆ ಮಾಡಬೇಕಿತ್ತು. ಆದರೆ ಇದು ನಡೆಯುತ್ತಿಲ್ಲ. ಎಲ್ಲೆಂದರೆಲ್ಲಿ ಮಲಗುವುದು, ಕುಳಿತುಕೊಳ್ಳುವುದ ಇವರ ಕೆಲಸ. ರಾತ್ರಿಯಾದೊಡನೆ ಮಳೆ, ಗಾಳಿ, ಚಳಿಯಿಂದ ತಪ್ಪಿಸಿಕೊಳ್ಳಲು ಬಸ್ ನಿಲ್ದಾಣ ಸುರಕ್ಷಿತ ಸ್ಥಾನ ಎಂದು ತಿಳಿದು ಬರುತ್ತಾರೆ. ಆದರೆ ಇಲ್ಲಿ ಅನುಭವಿಸಬೇಕಾದದ್ದು ಲೈಂಗಿಕ ಕಿರುಕುಳ.
ಇನ್ನಾದರೂ ಸಂಬಂಧಿಸಿದ ಇಲಾಖೆ, ಸಂಘಸಂಸ್ಥೆಗಳು ಎಚ್ಚೆತ್ತುಕೊಳ್ಳಬೇಕು. ರಾಜ್ಯದಲ್ಲಿರುವ ಭಿಕ್ಷುಕಿಯರ ನೆರವಿಗೆ ಧಾವಿಸಬೇಕು. ದುರುಳರ ಅಟ್ಟಹಾಸದಿಂದ ಮುಕ್ತಿ ಕಲ್ಪಿಸಬೇಕು. ಅವರು ಕೂಡ ನಾಗರಿಕ ಸಮಾಜದಲ್ಲಿ ನೆಮ್ಮದಿಯಾಗಿ ಜೀವನ ನಡೆಸುವ ವ್ಯವಸ್ಥೆ ಕಲ್ಪಿಸಲು ಪ್ರಾಮಾಣಿಕ ಕ್ರಮಕೈಗೊಳಬೇಕಿದೆ.
  ಓಡಾಡುವುದೇ ದುಸ್ತರ:
  ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ತಡರಾತ್ರಿ ವೇಳೆ ಮಹಿಳೆಯರು ಓಡಾಡುವುದೇ ದುಸ್ತರ ಎಂಬಂತಹ ಪರಿಸ್ಥಿತಿಯಿದೆ. ಕಾಮುಕರು, ಕಳ್ಳಕಾಕರ ಹಾವಳಿ ವಿಪರೀತವಾಗಿರುತ್ತದೆ. ಬಸ್ ನಿಲ್ದಾಣದ ಆವರಣದಲ್ಲಿರುವ ಅರ್ಧದಷ್ಟು ಲೈಟ್‌ಗಳು ದುರಸ್ತಿಯಲ್ಲಿವೆ. ಸಿಸಿ ಕ್ಯಾಮರಾ ಇದೆ. ಆದರೆ ಅದು ಕೆಲಸ ಮಾಡುತ್ತಿದೆಯೇ ಇಲ್ಲವೇ ಎನ್ನುವುದು ಗೊತ್ತಿಲ್ಲ. ಬಸ್ ನಿಲ್ದಾಣದ ಹಲವು ಭಾಗಗಳಲ್ಲಿ ಕತ್ತಲು ಆವರಿಸಿರುತ್ತದೆ. ಕತ್ತಲಿರುವ ಸ್ಥಳಗಳಲ್ಲಿ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿರುತ್ತವೆ. ಮಹಾನಗರ ಪಾಲಿಕೆ ಆಡಳಿತದ ಅಸಮರ್ಪಕ ನಿರ್ವಹಣೆಯಿಂದ ರಾತ್ರಿ ವೇಳೆ ಬಸ್ ನಿಲ್ದಾಣವು ಅಸುರಕ್ಷಿತ ವಲಯವಾಗಿ ಪರಿಣಮಿಸಿದೆ.  
ಎಸಿಬಿ: ದಾವಣಗೆರೆ ವಲಯದಲ್ಲಿ ಎರಡು ಕೇಸ್ ಮಾತ್ರ ದಾಖಲು!
  ಭ್ರಷ್ಟಾಚಾರದ ಬಗ್ಗೆ ನಾಗರಿಕರಲ್ಲಿ ದೂರುಗಳಿಲ್ಲವೇ?  

ಹವಾಲು ಸ್ವೀಕಾರದಲ್ಲಿ ಬಂದಿದ್ದು   ಒಂದೇ  ದೂರು 
 ಶಿವಮೊಗ್ಗ: ನಗರದ ಪ್ರವಾಸಿ ಮಂದಿರದಲ್ಲಿ ’ಭ್ರಷ್ಟಾಚಾರ ನಿಗ್ರಹ ದಳ’ (ಎ.ಸಿ.ಬಿ.) ವತಿಯಿಂದ ಮೊನ್ನೆ ಆಯೋಜಿಸಲಾಗಿದ್ದ ಸಾರ್ವಜನಿಕರ ಅಹವಾಲು ಸಭೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.   ತೀರ್ಥಹಳ್ಳಿ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರೊಬ್ಬರು  ಮಾತ್ರ ದೂರು ಸಲ್ಲಿಸಿದರು. ’ತಮಗೆ ಸೇರಿದ ಖಾಲಿ ನಿವೇಶನವನ್ನು ನಕಲಿ ದಾಖಲೆ ಸೃಷ್ಟಿಸಿ ಕೆಲವರು ಕಬಳಿಸಿದ್ದಾರೆ. ಈ ಕುರಿತಂತೆ ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆದರೆ ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಸಂಬಂಧಿಸಿದವರು ನಿರ್ಲಕ್ಷ್ಯವಹಿಸಿದ್ದಾರೆ. ಕಳೆದ 15 ವರ್ಷದಿಂದ ಹೋರಾಟ ನಡೆಸುತ್ತಿದ್ದು  ಸುಮಾರು 9 ಲಕ್ಷ ರೂ. ವ್ಯಯಿಸಿದರೂ ನ್ಯಾಯ ದೊರಕಿಲ್ಲ. ಈ ಕುರಿತಂತೆ ರಾಜ್ಯಪಾಲರಿಗೂ ದೂರು ಸಲ್ಲಿಸಿದ್ದು, ಅಲ್ಲಿಂದ ಜಿಲ್ಲಾಧಿಕಾರಿಗೆ ಪತ್ರ ಬಂದಿದೆ. ಆದಾಗ್ಯೂ ಯಾವುದೇ ಕ್ರಮಕೈಗೊಂಡಿಲ್ಲ. ತಾವು ಈ ಕುರಿತಂತೆ ತನಿಖೆ ನಡೆಸಿ ನ್ಯಾಯ ಕಲ್ಪಿಸಿಕೊಡಬೇಕು’ ಎಂದು ಅರ್ಜಿದಾರರು ಮನವಿ ಮಾಡಿದರು. ಇದು ಭಾರೀ ನಿರೀಕ್ಷೆಯೊಂದಿಗೆ ಆಗಮಿಸಿದ್ದ ಎ.ಸಿ.ಬಿ. ತಂಡವನ್ನು ತೀವ್ರ ನಿರಾಸೆಗೀಡು ಮಾಡಿತ್ತು. 
  ದಾವಣಗೆರೆ ವಲಯದ  ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಎ.ಸಿ.ಬಿ. (ಭ್ರಷ್ಟಾಚಾರ ವಿರೋಧಿ ದಳ)ಯಲ್ಲಿ ದಾಖಲಾಗಿರುವ ದೂರುಗಳ ಸಂಖ್ಯೆ ಕೇವಲ ಎರಡು ಮಾತ್ರ.
ಇದು ನಿಜ.   ಎ.ಸಿ.ಬಿ.ಯ ದಾವಣಗೆರೆ ವಿಭಾಗವು ದಾವಣಗೆರೆ-ಶಿವಮೊಗ್ಗ-ಚಿತ್ರದುರ್ಗ-ಹಾವೇರಿ ಜಿಲ್ಲೆಯನ್ನು ಒಳಗೊಂಡಿದೆ. ಶಿವಮೊಗ್ಗ ಹಾಗೂ ಹಾವೇರಿ ಎ.ಸಿ.ಬಿ. ಪೊಲೀಸ್ ಠಾಣೆಯಲ್ಲಿ ಮಾತ್ರ ತಲಾ ಒಂದೊಂದು ದೂರು ದಾಖಲಾಗಿದೆ. ಉಳಿದಂತೆ ಉಳಿದೆರೆಡು ಜಿಲ್ಲೆಗಳಲ್ಲಿ ಇಲ್ಲಿಯವರೆಗೂ ಘಟಕಕ್ಕೆ ಯಾವುದೇ ದೂರುಗಳು ದಾಖಲಾಗಿಲ್ಲ. ಇದನ್ನು ಹೇಳಿದವರು ಬೇರಾರೂ ಅಲ್ಲ, ಎಸಿಬಿ  ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ.) ಪುಟ್ಟಮಾದಯ್ಯ.
ಈ ನಾಲ್ಕು ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಎಸಿಬಿ ಬಗ್ಗೆ ಸಾಕಷ್ಟು ಪ್ರಚಾರ ಮಾಡಲಾಗಿದೆ. ಜನರಿಗೂ ಇದರ ಬಗ್ಗೆ ಮಾಹಿತಿ ಇದೆ. ಆದರೆ ದೂರುಗಳೇ ಬರುತ್ತಿಲ್ಲ. ಇದರರ್ಥ ಭ್ರಷ್ಟಾಚಾರ ನಿಂತುಹೋಗಿದೆ ಎಂದು ತಿಳಿದರೆ ತಪ್ಪಾದೀತು. ಸರಕಾರ ಲೋಕಾಯುಕ್ತ ಸಂಸ್ಥೆಯನ್ನು ಬಲಹೀನಗೊಳಿಸಿ ಅದರ ಬದಲು ಎಸಿಬಿಯನ್ನು ಸ್ಥಾಪಿಸಿದೆ. ಇದರ ಕಾರ್ಯವೈಖರಿ ಲೋಕಾಯುಕ್ತದ ಮಾದರಿಯಲ್ಲೇ ಇದ್ದರೂ ದೂರು ಕೊಡುವವರೇ ಈಗ ಕಡಿಮೆಯಾಗಿದ್ದಾರೆ.
 ದೂರು ಕೊಟ್ಟರೂ ಲಾಭವಿಲ್ಲ ಎಂದಿರಬಹುದೇ, ಅಥವಾ ಇದರ ಕಾರ್ಯವೈಖರಿ ಬಗ್ಗೆ ಗೊತ್ತಿಲ್ಲವೇ? ಭ್ರಷ್ಟಾಚಾರವನ್ನು ಸಹಿಸಿಕೊಂಡೇ ಬದುಕುತ್ತೇವೆ ಎನ್ನುವ ಮನೋಭಾವವೇ, ಯಾರು ಬೇಕಾದರೂ ಭ್ರಷ್ಟಾಚಾರ ಮಾಡಿಕೊಳ್ಳಲಿ, ಅವರ ಉಸಾಬರಿ ನಮಗೇಕೆ ಎನ್ನುವ ಮನೋಭಾವವೆ ಎಂಬೆಲ್ಲ ಪಶ್ನೆ ಮೂಡುತ್ತದೆ.    
ಪ್ರತಿ ತಾಲೂಕಿಗೂ ಪ್ರತಿ ತಿಂಗಳಿಗೊಮ್ಮೆ ಈ ತಂಡ ತೆರಳಿ ಈ ಹಿಂದೆ ಲೋಕಾಯುಕ್ತದವರು ಮಾಡುತ್ತಿದ್ದಂತೆ ದೂರು ಸ್ವೀಕಾರ ಮಾಡಲಾಗುತ್ತಿದೆ. ಈ ಬಗ್ಗೆ ಒಂದು ವಾರ ಮೊದಲೇ  ಪತ್ರಿಕಾ ಪ್ರಕಟಣೆ ಕೊಡುತ್ತದೆ. ಆದರೂ ದೂರು ನೀಡಲು ಜನರು ಮುಂದೆ ಬರುತ್ತಿಲ್ಲ.
ಪ್ರತಿ ಜಿಲ್ಲಾ ಕೇಂದ್ರದಲ್ಲಿ ಎಸಿಬಿ ಪೊಲೀಸ್ ಠಾಣೆ ಸ್ಥಾಪಿಸಲಾಗಿದೆ.ಇದರ ಹೊರತಾಗಿ ತಾಲೂಕು ಭೇಟಿ ನಡೆಯುತ್ತಿದೆ. ಆಗಲೂ ಸಹ ದೂರು ಸಲ್ಲಿಸಬಹುದು.
ಜನರಿಗೆ ಭ್ರಷ್ಟಾಚಾರದ ವಿರುದ್ದ ಹೋರಾಡುವ ಮನೋಭಾವ ಮೊದಲು ಬರಬೇಕು. ಕೆಲವೇ ಜನರು ಮಾತ್ರ ವಿವಿಧ ಸಂಘಟನೆಗಳ ಹೆಸರಿನಲ್ಲಿ ಈಗ ಹೋರಾಟ ಮಾಡುತ್ತಿದ್ದಾರೆ. ಅಂತಹವರನ್ನು ಅವಹೇಳನ ಮಾಡುವ ಕೆಲಸ ನಡೆಯುತ್ತಿದೆಯೇ ವಿನಾ ಬೆಂಬಲಿಸುವವರು ಬೆರಳೆಣಿಕೆಯಷ್ಟು ಮಾತ್ರ. ಹೀಗಾದರೆ ದೂರುಗಳು ಬರುವುದು ಕಡಿಮೆಯಾಗುವುದು ನಿಶ್ಚಿತ. ಜನರು ಅನ್ಯಾಯ, ಭ್ರಷ್ಟಾಚಾರವನ್ನು ಎಂದೂ ಸಹಿಸಿಕೊಳ್ಳದೆ ದೂರು ಕೊಟ್ಟು ಅದರ ವಿರುದ್ದ ಹೋರಾಟ ಮಾಡಿ ನ್ಯಾಯ ಪಡೆಯಬೇಕೆಂಬ ಉದ್ದೇಶದಿಂದ ಈ ಸಂಸ್ಥೆ ಸ್ಥಾಪಿತವಾಗಿದೆ ಎನ್ನುವುದನ್ನು ಎಲ್ಲರೂ ನೆನೆಪಿಡಬೇಕಿದೆ.  


........................................
ಜಾತಿ ರಾಜಕೀಯದತ್ತ ಹೊರಳುತ್ತಿದೆ ಬಿಜೆಪಿ 

ಭಾಷಣ ಮಾಡುವಾಗ ಸಮಾನತೆ, ಸಹಬಾಳ್ವೆ ಎಂದೆಲ್ಲ ಘೋಷಿಸುವವರು ವೇದಿಕೆಯಿಂದ ಕೆಳಗಿಳಿದಾಕ್ಷಣ ಮಾಡುವುದೇ ಮತ್ತೊಂದು. ಜಾತಿ, ಮತ, ಪಂಥವನ್ನೆಲ್ಲ ತೊರೆದು ಜನಸಾಮಾನ್ಯರ ಏಳಿಗೆಗೆ ಹೋರಾಡಬೇಕಾದವರೇ ಒಂದೊಂದು ಜಾತಿ ಹಿಡಿದುಕೊಂಡು ಬಡಿದಾಡುತ್ತಿದ್ದಾರೆ. ಕನಕದಾಸರ ‘‘ಕುಲಕುಲ ಎಂದು ಹೊಡೆದಾಡಬೇಡಿ’’ ಎಂಬ ಮಾತು ಪುಸ್ತಕಕಷ್ಟೇ ಸೀಮಿತವಾಗಿದೆ. ಇದು ನಿಜಕ್ಕೂ ಈ ದೇಶದ ದುರಂತ ಎನ್ನಲೇಬೇಕು. ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ಎಲ್ಲ ಜಾತಿಗಳ ಮಧ್ಯೆ ಭೀಕರ  ಕಂದಕ ಉಂಟಾಗುವುದು ನಿಶ್ಚಿತ. ಜಾತಿಯ ಹೆಸರಿನಲ್ಲೇ ಹೊಡೆದಾಡಿಕೊಂಡು, ಕಚ್ಚಾಡಿಕೊಂಡು ಬದುಕಬೇಕಾದ ದಿನವೂ ಎದುರಾಗಬಹುದು.   

ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು)  ರಾಜ್ಯದಲ್ಲಿ ಘರ್ಜಿಸಿದ್ದು ಎಲ್ಲರ ನೆನಪಿನಾಳದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ  ಅಹಿಂದ ಸಂಘಟನೆಯನ್ನು ಹುಟ್ಟು ಹಾಕಿ ಅದರಲ್ಲಿ ಯಶಸ್ಸು ಕಂಡವರು. ಆ ವೇಳೆ ಅಹಿಂದವನ್ನು ಬಿಜೆಪಿ ಟೀಕಿಸಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಬಿಜೆಪಿ  ಜಾತಿ ರಾಜಕೀಯದತ್ತ ಬಲವಾಗಿ ಹೊರಳುತ್ತಿದೆ. ಇದರಿಂದ ಹಿಂದ (ಹಿಂದುಳಿದವರು ಮತ್ತು ದಲಿತರು) ಸಂಘಟನೆಯನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆರಂಭಿಸಲು ಸಕಲ ಸಿದ್ಧತೆ ನಡೆಸಿದ್ದಾರೆ. ಆದರೆ ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಹಿತ ಅವರ ಬಣ ಪ್ರಬಲ ವಿರೋಧ ವ್ಯಕ್ತಪಡಿಸಿದೆ. ಬಿಜೆಪಿಯಲ್ಲಿ ಮತ್ತೆ ಭಿನ್ನಮತಕ್ಕೆ ಇದು ಕಾರಣವಾಗಿದೆ.
 ಸಿದ್ದರಾಮಯ್ಯ ಅಹಿಂದ ಹುಟ್ಟುಹಾಕಿದಾಗಲೂ ಕಾಂಗ್ರೆಸ್‌ನಲ್ಲಿ ಇದಕ್ಕೆ ಅಪಸ್ವರ ಎದ್ದಿತ್ತು. ಆದರೆ ನಂತರ ಅದನ್ನು ಎಲ್ಲರೂ ಒಪ್ಪಿಕೊಂಡಿದ್ದರು. ಆದರೆ ಬಿಜೆಪಿಯಲ್ಲಿ ಪರಿಸ್ಥಿತಿ ಹಾಗಿಲ್ಲ. ಏಕೆಂದರೆ ಬಿಜೆಪಿ ಮೇಲ್ವರ್ಗದವರಿಂದಲೇ ತುಂಬಿರುವ ಪಕ್ಷ. ಹಿಂದವನ್ನು ಅವರು ಸಹಿಸುತ್ತಿಲ್ಲ. ಆದರೆ ಈಶ್ವರಪ್ಪ ಹಿಂದುಳಿದ ಕುರುಬ ಸಮುದಾಯದವರಾಗಿದ್ದು, ಅವರು ಹಿಂದುಳಿದವರನ್ನು ಮತ್ತು ದಲಿತರನ್ನು ಸಂಘಟಿಸಲು, ಅವರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಇದನ್ನು ಸ್ಥಾಪಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ರಾಜ್ಯದಲ್ಲಿ ಅಹಿಂದ ಮತ ಬ್ಯಾಂಕ್ ಮೇಲೆ ರಾಜಕಾರಣಿಗಳಿಗೆ ಕಣ್ಣಿದೆ. ಏಕೆಂದರೆ, ನಿರ್ಣಾಯಕ ಮತದಾರರು ಅವರೇ ಆಗಿರುವುದು. ಸಿದ್ದರಾಮಯ್ಯ ಸಹ ಹಿಂದುಳಿದವರಾಗಿರುವುದರಿಂದ ಅವರನ್ನೆಲ್ಲ ಸಂಘಟಿಸಿ ಅಹಿಂದ ಸಮುದಾಯದವರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಹೋರಾಟ ನಡೆಸಿ ಅದರಲ್ಲಿ ಯಶಸ್ವಿಯಾಗಿ ಮುಖ್ಯಮಂತ್ರಿಯೂ ಆದರು.  ವಿಶೇಷವೆಂದರೆ, ಬಿಜೆಪಿ ಮೇಲ್ಜಾತಿಯವರನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದರೂ ಅಹಿಂದವರನ್ನು ನಿರ್ಲಕ್ಷಿಸಲು ತಯಾರಿಲ್ಲ. ಹಾಗಂತ ಅವರು ಮುಂದೆ ಬರುವುದನ್ನೂ ಸಹಿಸುತ್ತಿಲ್ಲ. ಇದರ ಪರಿಣಾಮವೇ ಈಗ ಯಡಿಯೂರಪ್ಪ- ಈಶ್ವರಪ್ಪ ಮಧ್ಯೆ ಎದ್ದಿರುವ ಭಿನ್ನಮತ. ಈಶ್ವರಪ್ಪ ಹಿಂದ ಹೆಸರಿನಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಲು ಸಿದ್ಧತೆ ನಡೆಸಿದ್ದಾರೆ. ಅವರು ಹೇಳುವಂತೆ ಇದು ಜಾತಿ ಸಂಘಟನೆಯಲ್ಲ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವೀರಶೈವರನ್ನು ಮುಂದಿಟ್ಟುಕೊಂಡೇ ಸದಾ ರಾಜಕೀಯ ಮಾಡುವವರು. ಮಾಜಿ ಪ್ರಧಾನಿ ದೇವೇಗೌಡ ಒಕ್ಕಲಿಗರನ್ನು ಮುಂದಿಟ್ಟುಕೊಂಡೇ ರಾಜಕೀಯ ಮಾಡುವವರು ಎನ್ನುವ ಮಾತು ಇಡಿ ರಾಜ್ಯದಲ್ಲಿ ಪ್ರಚಲಿತದಲ್ಲಿದೆ. . ಇವರ ಹೊರತಾಗಿ ಕರ್ನಾಟಕದಲ್ಲಿ ಉಳಿದ ಸಮುದಾಯದವರಿಗೆ ಬಲವಾದ ನಾಯಕ ಎನ್ನುವವರಿಲ್ಲ. ಬ್ರಾಹ್ಮಣರಾಗಲಿ, ದಲಿತರಾಗಲಿ, ಮುಸ್ಲಿಮರಾಗಲಿ ಪ್ರಬಲ ನಾಯಕನನ್ನು ಹೊಂದಿಲ್ಲ. ಅದಕ್ಕಾಗಿ ಕುರುಬ ಸಮುದಾಯದಲ್ಲಿ ಈಶ್ವರಪ್ಪ ನಾಯಕನೆನ್ನಿಸಿಕೊಳ್ಳಲು ಈ ಸಂಘಟನೆ ಕಟ್ಟುತ್ತಿದ್ದಾರೆಂದೇ ಊಹಿಸಲಾಗುತ್ತಿದೆ.
ಇದಕ್ಕೆಲ್ಲ ಮೂಲ ಕಾರಣ ನಮ್ಮಲ್ಲಿ ನೆಲೆಯೂರಿರುವ ಜಾತಿ ರಾಜಕಾರಣ. ಪ್ರತಿಯೊಂದು ವಿಚಾರದಲ್ಲಿ ಬರುವುದೇ ಜಾತಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅತಿ ಹೆಚ್ಚು ಪ್ರಮಾಣದಲ್ಲಿ ಲಿಂಗಾಯಿತರನ್ನು ಓಲೈಸಿಕೊಂಡರೆಂಬ ಆರೋಪ ಹೊತ್ತಿದ್ದಾರೆ. ಕೆಲವು ಲಿಂಗಾಯಿತ ಸ್ವಾಮಿಗಳಂತೂ  ತಾವೂ ಸಹ ರಾಜಕೀಯ ಮುಖಂಡರಿಗಿಂತ ಕಡಿಮೆ ಏನಿಲ್ಲ ಎಂಬಂತೆ ವರ್ತಿಸಿದ್ದ್ದೂ ಇದೆ. ಇದಕ್ಕೆಲ್ಲ ಅವರಿಗೆ ಸಿಕ್ಕ ಅತಿಯಾದ ಪ್ರೋತ್ಸಾಹ ಕಾರಣ. ಆದರೆ ನೂರಾರು ಜಾತಿಯವರಿರುವ ರಾಜ್ಯದಲ್ಲಿ, ದೇಶದಲ್ಲಿ ಜಾತಿ ರಾಜಕೀಯ ಎಂದಿಗೂ ಯಶಸ್ವಿಯಾಗುವುದಿಲ್ಲ. ಈವರೆಗೆ ಯಶಸ್ವಿಯಾಗಿಯೂ ಇಲ್ಲ. ಇದಕ್ಕೆ ಹಲವಾರು ನಾಯಕರ ಉದಾಹರಣೆ ಕೊಡಬಹುದು.  
ಪ್ರಸ್ತುತ ಬಿಎಸ್‌ವೈ- ಈಶ್ವರಪ್ಪ ಮಧ್ಯೆ ಎದ್ದಿರುವ ವಿವಾದವೂ ಇದೇ ಜಾತಿಯದ್ದು. ಬಿಜೆಪಿಯು ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಈಗಲೇ ಕನಸು ಕಾಣುತ್ತಿರುವ ಯಡಿಯೂರಪ್ಪ  ತಾನೇ ಮುಖ್ಯಮಂತ್ರಿ ಎಂದು ಹೆಚ್ಚು ಕಡಿಮೆ ಬಿಂಬಿಸಿಕೊಂಡಿದ್ದಾರೆ.  ತಾನು ಆ ಕುರ್ಚಿ ಏರಲು ಸಿದ್ಧತೆಯನ್ನು ತಳಹಂತದಿಂದ ಮಾಡಿಕೊಂಡಿದ್ದಾರೆ. ಪಕ್ಷದ ರಾಜ್ಯ ಸಮಿತಿ ರಚಿಸುವಾಗಲೇ ಇದು ಸ್ಫೋಟವಾಗಿದ್ದನ್ನು ಗಮನಿಸಬಹುದು. ಜಿಲ್ಲಾಧ್ಯಕ್ಷರ ಆಯ್ಕೆಯಲ್ಲೂ ಜಾತಿ ಎದುರಾಯಿತು. ಪದಾಧಿಕಾರಿಗಳ ಆಯ್ಕೆಯಲ್ಲೂ ಇದನ್ನು ಪೋಷಿಸಲಾಯಿತು. ಇದು ಬಿಜೆಪಿಯ ಕೆಲವು ನಾಯಕರಿಗೆ ಸಹ್ಯವಾಗಲಿಲ್ಲ. ಪ್ರತಿಭಟಿಸಿದರು. ಆದರೂ ವಿವಾದ ಇಂದಿಗೂ ಬಗೆಹರಿಯದೆ ಉಳಿದಿದೆ. ಪ್ರತಿಯಾಗಿ ಈಶ್ವರಪ್ಪ ಬ್ರಿಗೇಡ್ ಆರಂಭಕ್ಕೆ ಹೆಜ್ಜೆ ಇಟ್ಟಿದ್ದಾರೆ.
ಬಿಜೆಪಿಯ ಈ ನಡೆ ಅದರ ಮುಂದಿನ ಹಾದಿಗೆ ಮುಳ್ಳಾಗುವ ಸಾಧ್ಯತೆಯನ್ನು ಕಡೆಗಣಿಸುವಂತಿಲ್ಲ. ಈಶ್ವರಪ್ಪ ಅವರ ಬ್ರಿಗೇಡ್ ರಚನೆಯಾದ ನಂತರವೇ ಹೆಚ್ಚಿನ ಫಲಿತಾಂಶ ಗೊತ್ತ್ತಾಗುತ್ತದೆ.
ಬಸವಣ್ಣ ‘‘ಇವನಾರವ, ಇವನಾರವ ಇವನಾರವ ಎಂದೆಣಿಸದಿರಯ್ಯ’’ ಎಂದರು. ಸರ್ವಜ್ಞ ‘‘ಜಾತಿ-ವಿಜಾತಿ ಎನಬೇಡ’’ ಎಂದರು. ಪಂಪ ‘‘ಮಾನವಕುಲ ತಾನೊಂದೇ ವಲಂ ’’ಎಂದರೆ, ಮಹಾಕವಿ ಕುವೆಂಪು ‘‘ಮನುಜಮತ ವಿಶ್ವಪಥ’’ ಎಂದರು. ಆದರೆ ಇಂದು ಇವುಗಳ ಆಚರಣೆ ಮಾತ್ರ ಶೂನ್ಯವಾಗಿದೆ. ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿವೆ. ರಾಜಕೀಯ ಮಾತ್ರ ಜಾತಿಯ ಹೆಸರಿನಲ್ಲೇ ಸಾಗುತ್ತಿದೆ, ಮುನ್ನಡೆಯುತ್ತಿದೆ.

Thursday, 11 August 2016


ಭರವಸೆಯ ಬೆಳಕಾಗಿ ಹೊರಹೊಮ್ಮಿದ ಪನ್ನಗಾ 
 ಅಮೃತಮತಿ-ಏಕವ್ಯಕ್ತಿ ಪ್ರದರ್ಶನ




ಒಂದು ದೃಷ್ಟಿಯಿಂದ ನೋಡಿದರೆ, ಅಮೃತಮತಿ ಆಡುವ ಮಾತುಗಳು, ಅವಳ ಸಮರ್ಥನೆಗಳು ಸ್ತ್ರೀ ಸ್ವಾತಂತ್ರ್ಯದ ಅಭಿವ್ಯಕ್ತಿಯಂತೆ ಕಾಣುವುದು ಸುಳ್ಳಲ್ಲ. ಆದರೆ, ಜಾರಿದ ಅಮೃತಮತಿಗೆ ತಡೆದು ನಿಲ್ಲುವುದಕ್ಕೆ ಸಾಕಷ್ಟು ಅವಕಾಶಗಳಿದ್ದವು. ಆದರೆ ಅವಳಿಗದು ಸಾಧ್ಯವಾಗುವುದಿಲ್ಲ. ಅವಳು ಮತ್ತೆ ಮತ್ತೆ ಜಾರುತ್ತಾಳೆ. ಜಾರಿ ಜಾರೆಯಾಗುತ್ತಾಳೆ. ನಿಜಕ್ಕೂ ಅವಳದು ಅನುರಾಗವಲ್ಲ; ಕೇವಲ ಸುಖ-ಭೋಗದ ತೆವಲು. ಅದು ಪ್ರೇಮವಲ್ಲ; ಕಾಮ. ಅದೂ ಸಹ ಕೆರಳಿದ ಕಾಮ. ಕಾಮ ಅರಳಿದರೆ ದೇವತೆ: ಕೆರಳಿದರೆ ರಾಕ್ಷಸ. ಅಮೃತಮತಿಯ ಕಾಮುಕತೆ ಅವಳ ಮತಿ ಕೆಡಿಸುತ್ತದೆ.  ವ್ಯಭಿಚಾರದ ಗುಟ್ಟು ರಟ್ಟಾದಾಗ ಗಂಡನಿಗೂ, ಅತ್ತೆಗೂ ವಿಷ ನೀಡುತ್ತಾಳೆ. ಆ ಮೂಲಕ ಅಮೃತಮತಿ ವಿಷಮತಿಯಾಗುತ್ತಾಳೆ.  ನಿಜಕ್ಕೂ ಇದು ಸ್ರ್ತೀ ಮನೋದೌರ್ಬಲ್ಯದ ರೂಪಕ ಕತೆ.

* ದತ್ತಾತ್ರೇಯ ಹೆಗಡೆ

ಕವಿಚಕ್ರವರ್ತಿ ಎಂದು ಬಿರುದಾಂಕಿತನಾದ, ರತ್ನತ್ರಯರಲ್ಲಿ ಒಬ್ಬನೆಂದು ಖ್ಯಾತಿವೆತ್ತ ಜನ್ನನ ಪ್ರಸಿದ್ಧ ಕೃತಿ ‘ಯಶೋಧರ ಚರಿತೆ’.  ಇದು ಯಶೋಧರ ಚಕ್ರವರ್ತಿಯ ಬದುಕು-ಭವಾವಳಿಗಳನ್ನು ಹೇಳುವ ಕೃತಿಯಾದರೂ, ಇದರ ಕೇಂದ್ರಪಾತ್ರ ಯಶೋಧರನ ಪಟ್ಟಮಹಿಷಿ ಅಮೃತಮತಿ ಎನ್ನುವುದು ಉಲ್ಲೇಖನೀಯ.  
ಆಗಸ್ಟ್ 9ರಂದು ಕುವೆಂಪು ರಂಗಮಂದಿರದಲ್ಲಿ ಯಶೋಧರ ಚರಿತೆಯ ಮುಖ್ಯಪಾತ್ರವಾದ ಅಮೃತಮತಿಯನ್ನು ಕುರಿತಾಗಿ ಏಕವ್ಯಕ್ತಿ ಪ್ರದರ್ಶನ ನಡೆಯಿತು. ಮನುಷ್ಯ ಸಹಜವಾದ ಆಕರ್ಷಣೆ, ಅದಕ್ಕೆ ಅಡೆತಡೆಯಾಗಿರುವ ಸಾಮಾಜಿಕ ಬಂಧಗಳು, ಯುಕ್ತಾಯುಕ್ತ ನಡೆಯ ನಡುವಿನ ಸಂಘರ್ಷ-ತುಮುಲಗಳು, ಸೌಂದರ್ಯದ ಪರಿಕಲ್ಪನೆಯ ವಿವಿಧ ಮಜಲುಗಳನ್ನು ತೆರೆದಿಡುವಲ್ಲಿ ಈ ಪ್ರಯೋಗ ನಿಜಕ್ಕೂ ಪ್ರಶಂಸನೀಯ.
ಜೈನಧರ್ಮದ ಹಿನ್ನೆಲೆಯಲ್ಲಿ, ಜೈನ ಸಿದ್ಧಾಂತವನ್ನು ಪ್ರತಿಪಾದಿಸುವುದೇ ಈ ಕಥಾಹಂದರದ ಮುಖ್ಯಗುರಿಯಾಗಿತ್ತು.   ಹೆಂಡತಿಯ ಅನೈತಿಕ ಸಂಬಂಧವನ್ನು ಕಂಡು ಹೇಸಿ-ರೋಸಿ ಹೋಗುವ ಯಶೋಧರ ತನ್ನ ಅಳಲನ್ನು ತಾಯಿ ಚಂದ್ರಮತಿಯೊಂದಿಗೆ ತೋಡಿಕೊಳ್ಳುವುದು, ತಾಯಿಯ ಸಲಹೆಯಂತೆ ಹಿಟ್ಟಿನ ಹುಂಜವನ್ನು ಕೊಲ್ಲುವ ಸಂಕಲ್ಪ ತಳೆಯುವುದು, ಆ ಸಂಕಲ್ಪದ ಪರಿಣಾಮವಾಗಿ ಪಾಪಪ್ರಜ್ಞೆಯಿಂದ ತೊಳಲುವುದು, ಅದರ ನಿವಾರಣೆಗಾಗಿ ಎಂಬಂತೆ ಗಂಡ ಯಶೋಧರ ಮತ್ತು  ಅತ್ತೆ ಚಂದ್ರಮತಿಗೆ ವಿಷವಿಕ್ಕಿ ಉಪಕರಿಸಿದೆನೆಂದು ಅಮೃತಮತಿ ತನ್ನ ತಪ್ಪನ್ನು ತಾನು ಸಮರ್ಥಿಸಿಕೊಳ್ಳುವುದು - ಒಟ್ಟು ಪ್ರದರ್ಶನದ ಜೀವಾಳ.
ಯಕ್ಷಗಾನದ ಎಲ್ಲ ಮಜಲುಗಳನ್ನು ಕರತಲಾಮಲಕ ಮಾಡಿಕೊಂಡ ಪರಮೇಶ್ವರ ಹೆಗಡೆ ಐನಬೈಲು ಇವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರೆ ಮತ್ತು ಖ್ಯಾತ ರಂಗನಿರ್ದೇಶಕ ಪ್ರೊ. ಗೌರೀಶಂಕರ್ ಅವರ ಪುತ್ರಿ ಪನ್ನಗಾ ಜೋಯ್ಸ್ ಅವರು  ಅಮೃತಮತಿ ಪಾತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರದರ್ಶಿಸುವಲ್ಲಿ ಯಶಸ್ವಿಯಾದರು. ಹಿತ-ಮಿತವಾದ, ಆಕರ್ಷಕವಾದ ವೇಷಭೂಷಣ, ಯಕ್ಷಗಾನದ ಬಾಗು-ಬಳುಕಿನ ನರ್ತನ, ಪಾತ್ರಕ್ಕೆ ಜೀವತುಂಬುವ ಭಾವಪೂರ್ಣವಾದ, ತರ್ಕಬದ್ಧವಾದ ವಾಕ್ಸರಣಿಯ ಮೂಲಕ ಜನಮನವನ್ನು ಹಿಡಿದಿಡುವಲ್ಲಿ ಪನ್ನಗಾ ಅವರು ಯಶಸ್ವಿಯಾದರೆಂದೇ ಹೇಳಬೇಕು.
ನಮ್ಮ ಕರ್ಮೇಂದ್ರಿಯಗಳಿಗೆ ಜ್ಞಾನೇಂದ್ರಿಯಗಳೇ ಶತ್ರುಗಳು.  ಕಿವಿಗೆ ಶಬ್ದ, ಚರ್ಮಕ್ಕೆ ಸ್ಪರ್ಶ, ಕಣ್ಣಿಗೆ ರೂಪ, ನಾಲಗೆಗೆ ರಸ, ಮೂಗಿಗೆ ಗಂಧ ಶತ್ರುವಾಗಿ ಪರಿಣಮಿಸುತ್ತದೆ. ಇವು ನಮ್ಮನ್ನು ಎಲ್ಲೆಂದರಲ್ಲಿ ದಿಕ್ಕೆಡಿಸಿ ಘಾಸಿಗೊಳಿಸುತ್ತವೆ; ಕೆಡಹುತ್ತವೆ. ಅದಕ್ಕೆ ಉಪ್ಪರಿಗೆಯ ಹಾಸಿಗೆಯೂ ಆದೀತು; ತಿಪ್ಪೆಯ ಗುಂಡಿಯೂ ಆದೀತು. ಅಮೃತಮತಿಯ ಬದುಕಿನಲ್ಲಿ ನಾವು ಇವೆರಡನ್ನೂ ಕಾಣುತ್ತೇವೆ. ಅಮೃತಮತಿ ಉಪ್ಪರಿಗೆಯ ಹಂಸತೂಲಿಕಾ ತಲ್ಪದಲ್ಲಿ  ಗಂಡನ ತೋಳಿಗೆ ತಲೆಯಿಟ್ಟು ತನಿನಿದ್ದೆಯಲ್ಲಿ ಮುಳುಗಿದ್ದಾಳೆ; ತನ್ನ ಕಿವಿದೆರೆಯನ್ನು ಮುಟ್ಟಿದ ಶಬ್ದದಿಂದ ತಿಳಿದೇಳುತ್ತಾಳೆ. ಕಿವಿಗೆ ನಾದ ತಲುಪಿತು. ಆ ರಾಗ ಎಲ್ಲಿಂದ ಬಂತೋ....? ಅದನ್ನು ಮುಟ್ಟುವ ಅನುರಾಗ ಅವಳಲ್ಲಿ  ಹೆಚ್ಚಾಯಿತು. ಮೊದಲು ಶಬ್ದ: ಅನಂತರ ಸ್ಪರ್ಶದ ಹಂಬಲ. ಆದರೆ ಅದು ಕಾಣಲಿಲ್ಲ. ಮಾವುತನ ‘‘ಕತ್ತಲಿದು ರಸಿಕರಿಗೆ ರಸದಂಗಳ’’ ಎನ್ನುವ ಸೊಲ್ಲು ಅವಳನ್ನು ಸೂಜಿಗಲ್ಲಿನಂತೆ ಸೆಳೆಯಿತು. ಕಾಣುವ ಹಂಬಲ ಹೆಚ್ಚಾಯಿತು. ಅದು ರೂಪವೋ, ಕುರೂಪವೋ ಅವಳಿಗದು ಗೊತ್ತಿಲ್ಲ. ಅವನನ್ನು ಕೂಡುವ, ಸುಖಿಸುವ ಚಪಲತೆ ಉಂಟಾಯಿತು. ತನ್ನ ಮನಸ್ಸನ್ನೇ ಅವನಿಗೆ ಮೆಚ್ಚುಗಾಣಿಕೆಯಾಗಿ ಕೊಟ್ಟಳು. ಭಾವತೀವ್ರತೆಯಿಂದ ಅಮೃತಮತಿ ಕಾಮೋತ್ಕಂಠಿತೆಯಾಗುವುದನ್ನು ಈ ಸಂದರ್ಭದಲ್ಲಿ ಪನ್ನಗ ಅತ್ಯಂತ  ಮನೋಜ್ಞವಾಗಿ ಅಭಿನಯಿಸಿ ಜನಮನ ಸೂರೆಗೊಂಡರು.
ಮಾವುತನ ರಾಗಕ್ಕೆ ಮರುಳಾಗಿ ಅನುರಾಗಕ್ಕೊಳಗಾದ ಅಮೃತಮತಿಗಾದುದು ಮೊದಲು ಕಿವುಡುತನ. ದೂತಿ ಬಂದು  ಮಾವುತ ಅಷ್ಟಾವಂಕನ ರೂಪವನ್ನು ಕಣ್ಣಿಗೆ ಕಟ್ಟುವಂತೆ ತೆರೆದಿಟ್ಟರೂ ಅವಳಿಗದು ಕೇಳಿಸುವುದಿಲ್ಲ.  ಅಷ್ಟಾವಂಕನನ್ನು ಸಂಧಿಸಿದಾಗಲೂ ಅವನ ಕುರೂಪ ಅವಳಲ್ಲಿ ಹೇಸಿಗೆ ತರಿಸುವುದಿಲ್ಲ. ಆಗ ಅವಳಿಗಾಗುವುದು ಕಣ್ಗುರುಡತನ; ಜೊತೆಯಲ್ಲಿ ಬಗೆಕುರುಡತನ.  ಅವಳ ಮಾತಿನಲ್ಲೇ ಹೇಳುವುದಾದರೆ, ‘‘ಇನ್ನೆನಗೆ ಆತನೇ ಕಾಮದೇವಂ, ಇಂದ್ರಂ, ಚಂದ್ರಂ’’. ಹೀಗಾಗಿಯೇ ಆಕೆ ‘‘ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳ್’’ ಎಂಬಷ್ಟು ಕುರುಡಿಯಾಗುತ್ತಾಳೆ; ಕತ್ತಲಲ್ಲೇ ಬೆತ್ತಲಾಗುತ್ತಾಳೆ; ‘ಚಿತ್ರಮಪಾತ್ರೇ ರಮತೇ ನಾರಿ’’ ಎನ್ನುವುದಕ್ಕ್ಕೆ ರೂಪಕ ವಾಗುತ್ತಾಳೆ.
ಶ್ರುತಿಬದ್ಧವಾದ ಹಾಡುಗಾರಿಕೆ, ಪೂರಕವಾದ ಚಂಡೆ-ಮದ್ದಲೆಗಳ ಹಿಮ್ಮೇಳ, ನಿಶೆಯ ನಶೆ ಏರಿಸುವ ಆಕರ್ಷಕ ಮಂದ ಬೆಳಕು, ಕಲಾಪ್ರೇಮಿಗಳಿಂದ ಕೂಡಿದ ಸಭೆ, ಕಾರ್ಯಕ್ರಮದ ಘನತೆ- ಗಾಂಭೀರ್ಯಕ್ಕೆ ಮೆರುಗು ನೀಡಿತು. ಏಕವ್ಯಕ್ತಿ ಪ್ರದರ್ಶನಕ್ಕೆ ಬಹುಜಟಿಲವೆನಿಸುವ ಈ ಕಥಾನಕವನ್ನು ತನ್ನ ಪ್ರಥಮ ಪ್ರಯತ್ನದಲ್ಲೇ ಸಶಕ್ತವಾಗಿ ಪ್ರದರ್ಶಿಸುವಲ್ಲಿ ಪನ್ನಗಾ ಸಫಲರಾಗಿದ್ದಾರೆ ಎನ್ನುವುದಕ್ಕೆ ಅಷ್ಟಾವಂಕನಿಂದ ಚಾಟಿ ಏಟು ತಿನ್ನುವಂತೆ, ಅವನಿಂದ ಒದೆಸಿಕೊಳ್ಳುವಂತೆ ಅವರು ನೀಡಿದ ಅಭಿನಯ ಮತ್ತೆ ಮತ್ತೆ ಮೆಲುಕುಹಾಕುವಂತಿತ್ತು.
  ಒಂದು ದೃಷ್ಟಿಯಿಂದ ನೋಡಿದರೆ, ಅಮೃತಮತಿ ಆಡುವ ಮಾತುಗಳು, ಅವಳ ಸಮರ್ಥನೆಗಳು ಸ್ತ್ರೀ ಸ್ವಾತಂತ್ರ್ಯದ ಅಭಿವ್ಯಕ್ತಿಯಂತೆ ಕಾಣುವುದು ಸುಳ್ಳಲ್ಲ. ಆದರೆ, ಜಾರಿದ ಅಮೃತಮತಿಗೆ ತಡೆದು ನಿಲ್ಲುವುದಕ್ಕೆ ಸಾಕಷ್ಟು ಅವಕಾಶಗಳಿದ್ದವು. ಆದರೆ ಅವಳಿಗದು ಸಾಧ್ಯವಾಗುವುದಿಲ್ಲ. ಅವಳು ಮತ್ತೆ ಮತ್ತೆ ಜಾರುತ್ತಾಳೆ. ಜಾರಿ ಜಾರೆಯಾಗುತ್ತಾಳೆ. ನಿಜಕ್ಕೂ ಅವಳದು ಅನುರಾಗವಲ್ಲ; ಕೇವಲ ಸುಖ-ಭೋಗದ ತೆವಲು. ಅದು ಪ್ರೇಮವಲ್ಲ; ಕಾಮ. ಅದೂ ಸಹ ಕೆರಳಿದ ಕಾಮ. ಕಾಮ ಅರಳಿದರೆ ದೇವತೆ: ಕೆರಳಿದರೆ ರಾಕ್ಷಸ. ಅಮೃತಮತಿಯ ಕಾಮುಕತೆ ಅವಳ ಮತಿ ಕೆಡಿಸುತ್ತದೆ.  ವ್ಯಭಿಚಾರದ ಗುಟ್ಟು ರಟ್ಟಾದಾಗ ಗಂಡನಿಗೂ, ಅತ್ತೆಗೂ ವಿಷ ನೀಡುತ್ತಾಳೆ. ಆ ಮೂಲಕ ಅಮೃತಮತಿ ವಿಷಮತಿಯಾಗುತ್ತಾಳೆ.  ನಿಜಕ್ಕೂ ಇದು ಸ್ರ್ತೀ ಮನೋದೌರ್ಬಲ್ಯದ ರೂಪಕ ಕತೆ.
ಈ ಪ್ರದರ್ಶನದ ಕೊನೆಯಲ್ಲಿ ಅಮೃತಮತಿಯ ಬಾಯಿಯಿಂದ ಹೊರಹೊಮ್ಮುವ- ‘‘ನಮಗೆ ಬೇಕಾದ್ದನ್ನು ನಾವು ದಕ್ಕಿಸಿಕೊಳ್ಳಬೇಕು. ಹಾಗೆಂದ ಮಾತ್ರಕ್ಕೆ ಇದು ಎಲ್ಲರಿಂದ ಸಾಧ್ಯವಿಲ್ಲ. ಅಮೃತಮತಿಯಂತಹವರಿಗೆ ಮಾತ್ರ ಸಾಧ್ಯ’’ ಎಂದು ತನ್ನನ್ನು ತಾನು ಸಮರ್ಥಿಸಿಕೊಳ್ಳುವುದು ಪ್ರ್ರಾಯಶಃ  ಸಹೃದಯ ಪ್ರೇಕ್ಷಕರಿಗೆ ಸಹ್ಯವಾಗುವುದಿಲ್ಲವೇನೋ.
......................................

Wednesday, 10 August 2016

ಸಿಟ್ಯಾಕೊ, ಸಿಡುಕ್ಯಾಕೊ ಮಳೆರಾಯ
 ಮಳೆಗಾಲ ಕೆಲವೇ ವರ್ಷಗಳ ಹಿಂದೆ ಜೂನ್ ಮೊದಲ ವಾರದಲ್ಲೇ ನಿಗದಿತವಾದಂತೆ ಆರಂಭವಾಗುತ್ತಿತ್ತು. ಆದರೆ ಕಳೆದ ಮೂರ್ನಾಲ್ಕು ವರ್ಷದಿಂದ ಗಮನಿಸಿದರೆ ಜೂನ್ ಆಂತ್ಯ, ಜುಲೈನಲ್ಲಿ ಆರಂಭವಾಗುತ್ತಿದೆ. ಇದರರ್ಥ ಮಳೆ ಪ್ರಮಾಣ ಇಳಿಮುಖವಾಗುತ್ತಿದೆ ಎಂದು. ಜೂನ್ ಮತ್ತು ಜುಲೈನಲ್ಲೇ ಶೇ. 785ರಷ್ಟು ಮಳೆಯಾಗುತ್ತಿದ್ದ ಕಾಲವಿತ್ತು. ಹಳ್ಳ-ಕೊಳ್ಳಗಳು ನಾಲ್ಕಾರು ತಿಂಗಳು ತುಂಬಿ ಹರಿಯುವಂತಹ ಸ್ಥಿತಿ ನಿಮಾಣವಾಗುತ್ತಿತ್ತು. ಜೊತೆಗೆ ವರ್ಷವಿಡೀ ಎಲ್ಲೆಡೆ ನೀರಿನ ಲಭ್ಯತೆ ಇರುತ್ತಿತ್ತು. ಆದರೆ ಈಗ ಅಕ್ಟೋಬರ್ ವೇಳೆಗಾಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಜಿಲ್ಲೆಗಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತ್ವತಾರ ಬಂದು ಟ್ಯಾಂಕರ್ ಮೂಲಕ ಪೂರೈಸುವುದನ್ನು ಕಾಣುತ್ತಿದ್ದೇವೆ. ಮಲೆನಾಡು ಬಯಲುಸೀಮೆಯಾಗುವತ್ತ ಹೆಜ್ಜೆ ಇಟ್ಟಿದೆಯೇ ಎನ್ನುವ ಆತಂಕ ಎದುರಾಗುತ್ತಿದೆ. ನಮ್ಮ ಪರಿಸರ, ಕಾಡು ಉಳಿಸಿಕೊಳ್ಳದಿದ್ದರೆ ಭೀಕರ ಸ್ಥಿತಿ ಎದುರಿಸಬೇಕಾದ ಸ್ಥಿತಿ ಎದುರಾಗುವುದು ಸತ್ಯ. ಈ ಬಗ್ಗೆ ಈಗಾಗಲೇ ಅನೇಕ ಪರಿಸರ ತಜ್ಞರು, ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಆದರೂ ಎಚ್ಚೆತ್ತುಕೊಳ್ಳದ ಸ್ಥಿತಿಯಲ್ಲಿ ನಾವಿದ್ದೇವೆ.



ಮಳೆರಾಯ ಮತ್ತೆ ಮುನಿಸಿಕೊಂಡಿದ್ದಾನೆ. ಮಳೆ ಬಾರದಿರುವುದನ್ನು ಕಂಡಾಗ, ಅದರಲ್ಲೂ ದಟ್ಟವಾದ ಕಪ್ಪು ಮೋಡ ಆವರಿಸಿ, ಇನ್ನೇನು ಭರ್ಜರಿ ಮಳೆ ಬೀಳುತ್ತದೆ ಎಂದುಕೊಂಡರೂ ಚದುರಿದಂತೆ ಮಳೆಯಾಗಿ ನಿರಾಶೆ ಮೂಡಿಸಿದಾಗ  ಜಾನಪದರ ಹಾಡು ‘ಸಿಟ್ಯಾಕೊ, ಸಿಡುಕ್ಯಾಕೊ ನನರಾಯ’  ಎನ್ನುವುದು ನೆನಪಾಗುತ್ತದೆ. ಆದರೆ ಪರಿಸರ ನಾಶವನ್ನು ಮಾಡಿಕೊಂಡ ನಾವು ಅದಕ್ಕೆ ಭಾರಿ ಪ್ರಮಾಣದಲ್ಲಿ ಬೆಲೆ ತೆರುತ್ತಿರುವುದು ಸತ್ಯ.
ಈ ವರ್ಷ ಮಳೆ ಮತ್ತೆ ಕೈಕೊಟ್ಟಿದೆ. ಕಳೆದ ವರ್ಷವೇ ಮಳೆ ಕಡಿಮೆ ಪ್ರಮಾಣದಲ್ಲಿ ಬಿದ್ದಿದ್ದರಿಂದ ಬಹುತೇಕ ಜಿಲ್ಲೆಗಳಲ್ಲಿ ಬರಗಾಲ ಎದುರಾಗಿತ್ತು. ಮಲೆನಾಡು ಈಗ ಹಿಂದಿನ ಮಳೆನಾಡಾಗಿ ಉಳಿದಿಲ್ಲ. ಇಲ್ಲಿಯೂ ಕೆಲವು ತಾಲೂಕುಗಳು ಬರಪೀಡಿತವಾಗಿದ್ದವು. ನಂತರದ ದಿನಗಳಲ್ಲಿ ಈ ವರ್ಷ ಉತ್ತಮ ಮಳೆ ಬೀಳಲಿದೆ ಎಂದೇ ಹವಾಮಾನ ತಜ್ಞರು ಹೇಳಿದ್ದರು. ಆದರೆ ಈಗ ಅದು ಸುಳ್ಳಾಗಿದೆ. ಮಲೆನಾಡಿನಲ್ಲಿ ಈ ವರ್ಷ ಮತ್ತೆ ನೀರಿನ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ಎದುರಾಗುವುದು ಖಚಿತವಾಗಿದೆ. ಜೂನ್, ಜುಲೈನಲ್ಲಿ ವಾಡಿಕೆ ಮಳೆಯೂ ಜಿಲ್ಲೆಯಲ್ಲಿ ಆಗಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಇನ್ನೆಷ್ಟು ಮಳೆ ನಿರೀಕ್ಷಿಸಲು ಸಾಧ್ಯ.  ಲಿಂಗನಮಕ್ಕಿ ಜಲಾಶಯವೂ ತುಂಬುವ ಲಕ್ಷಣ ಗೋಚರವಾಗುತ್ತಿಲ್ಲ. ಆಗಸ್ಟ್‌ನಲ್ಲಿ ಮಳೆ ಬೀಳುವುದು ಅನುಮಾನವಾಗಿದೆ. ಏಕೆಂದರೆ, ಜಿನುಗು ಮಳೆ ಮಾತ್ರ ಬೀಳುತ್ತಿದೆ.
 ಆದರೆ ಬಯಲು ಸೀಮೆ ಜಿಲ್ಲೆಗಳಲ್ಲಿ ಮಾತ್ರ ಪ್ರವಾಹವೇ ಎದುರಾಗಿದೆ. ಮಲೆನಾಡಿನ ಜಿಲ್ಲೆಗಳಲ್ಲಿ ಅಕಾಲದಲ್ಲಿ ಅಂದರೆ ಅಕ್ಟೋಬರ್-ನವೆಂಬರ್‌ನಲ್ಲಿ ಮಳೆಯಾಗುವ ಸಂಭವವನ್ನು ಈಗ ಅಂದಾಜಿಸಲಾಗುತ್ತಿದೆ. ಹೀಗಾದರೆ ಇನ್ನಷ್ಟು ಬೆಳೆ ನಾಶ ಖಚಿತವಾಗಿ, ರೈತರು ಸಂಕಷ್ಟಕ್ಕೆ ಸಿಲುಕುವುದಲ್ಲಿ ಸಂದೇಹವೇ ಇಲ್ಲ.
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದೆರಡು ತಿಂಗಳಲ್ಲಿ ಶೇ. 34ರಷ್ಟು ಮಳೆ ಕಡಿಮೆಯಾಗಿರುವುದಾಗಿ ಇಲಾಖೆಗಳು ಹೇಳುತ್ತ್ತಿವೆ. ಇದರಿಂದ ಕೃಷಿಗೆ ತೀರಾ ಹಿನ್ನಡೆಯಾಗದಿದ್ದರೂ ಮುಂದಿನ ದಿನಗಳಲ್ಲಿ ನೀರಿನ ಕೊರತೆಯನ್ನು ಎದುರಿಸಬೇಕಾಗಬಹುದು ಎನ್ನುವುದು ದೂರಾಲೋಚನೆ.
ಇದರಿಂದ ಮಲೆನಾಡಿನ ರೈತರು ಈ ಬಾರಿ ಕಂಗಾಲಾಗಿದ್ದಾರೆ. ನೀರಿನ ಸಮಸ್ಯೆ ಜೊತೆಗೆ ಬೆಳೆಹಾನಿಯೂ ಕಟ್ಟಿಟ್ಟದ್ದು ಎಂಬ ನಿಲುವಿಗೆ ಬಂದಿದ್ದಾರೆ. ಕಳೆದ ಬೇಸಿಗೆಯಲ್ಲೇ ನೀರಿಲ್ಲದೆ ಜಿಲ್ಲೆಯಲ್ಲಿ ಬಹಳಷ್ಟು ಅಡಕೆ ತೋಟಗಳು ಒಣಗಿ ಹೋಗಿದ್ದವು. ಗದ್ದೆಗಳು ಬಿರುಕುಬಿಟ್ಟಿದ್ದವು. ಬೆಳೆಗಾರ ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತೆ
ಆಗಿತ್ತು. ಮಲೆನಾಡು ಮತ್ತು ಬಯಲುಸೀಮೆಯ ಅಂಚಿನಲ್ಲಿರುವ ಅಡಕೆ ತೋಟಗಳೇ ಹೆಚ್ಚಿನ ಪ್ರಮಾಣದಲ್ಲಿ ನಾಶವಾಗಿದ್ದವು. ಬಿಸಿಲಿನ ಹೊಡೆತಕ್ಕೆ ಸುಟ್ಟುಹೋಗಿದ್ದವು. ಈ ಎಲ್ಲ ಕಹಿ ನೆನಪು ಮತ್ತೆ ರೈತರನ್ನು ಕಾಡತೊಡಗಿದೆ.
ಜಿಲ್ಲೆಯ ವಾಡಿಕೆ ಮಳೆ 1813 ಮಿ.ಮೀ. ಆದರೆ ಈ ವರ್ಷ ಇನ್ನು ತಲುಪುವುದು ಅಸಾಧ್ಯ ಎನ್ನಬಹುದು. ಈ ವರ್ಷದ ಜನವರಿಯಿಂದ ಜುಲೈ ಅಂತ್ಯದವರೆಗೆ 1400 ಮಿ. ಮೀ ಮಾತ್ರ ಮಳೆಯಾಗಬೇಕಿತ್ತು. ಆದರೆ 975 ಮಿ. ಮೀ. ಮಾತ್ರ ಮಳೆಯಾಗಿದೆ. ಕಳೆದ ವರ್ಷದ ಮೊದಲ 6 ತಿಂಗಳಲ್ಲಿ  1371 ಮಿ. ಮೀ ಮಳೆಯಾಗಿತ್ತು. ಅಂದರೆ ಕಳೆದ ಸಾಲಿಗಿಂತ 396 ಮಿ. ಮೀ. ಮಳೆ ಕೊರತೆಯಾಗಿದೆ.
ಕಳೆದ ಎರಡು ವರ್ಷಗಳ ಮಳೆ ಪ್ರಮಾಣ :
2015ರಲ್ಲಿ ವಾರ್ಷಿಕವಾಗಿ ಸರಾಸರಿ ಆಗಬೇಕಿದ್ದ  ವಾಡಿಕೆ ಮಳೆಯಾಗಿದೆ. ವಾಡಿಕೆ ಮಳೆ 1818.9 ಮಿಲಿಮೀಟರ್ ಇದೆ. ಆದರೆ ಆ ವರ್ಷ ಸೆ. 15ರವರೆಗಿನ ವರದಿಯಂತೆ ಜಿಲ್ಲೆಯಲ್ಲಿ ಬಿದ್ದ ಮಳೆ 1955.5 ಮಿಲಿಮೀಟರ್. 2014ರಲ್ಲಿ ಇದೇ ವೇಳೆಗೆ 1978.4 ಮಿಮೀ ಮಳೆಯಾಗಿತ್ತು. 2013ರಲ್ಲಿ 2192.6 ಮಿಮೀ, ಮಳೆಯಾಗಿತ್ತು.
ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಹೆಸರಾಗಿದ್ದ ಆಗುಂಬೆಯಲ್ಲಿ ಪ್ರತಿ ವರ್ಷ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಅದೇ ಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಹುಲಿಕಲ್‌ನಲ್ಲಿ ಮಳೆ ಪ್ರಮಾಣ ಹೆಚ್ಚುತ್ತಿದೆ. ಆಗುಂಬೆ ವ್ಯಾಪ್ತಿಯಲ್ಲಿ ಸತತ ಕಾಡುನಾಶ ನಡೆದಿರುವುದು ಈ ದುರಂತಕ್ಕೆ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ದಟ್ಟ ಕಾಡುಗಳು ಒಳಗಿಂದೊಳಗೇ ಬೋಳಾಗುತ್ತಿವೆ. ಪರಿಸರ ನಾಶವಾದ ಮೇಲೆ ಸಸಿ ನೆಡುವ, ಪರಿಸರ ಕಾಪಾಡುವ ಭಾಷಣ ಮಾಡಲಾಗುತ್ತಿದೆ. ಕೆಲವೇ ವರ್ಷಗಳ ಹಿಂದೆ ಮಳೆಗಾಲ ಎಂದರೆ 6 ತಿಂಗಳು ಎಡೆಬಿಡದೆ ಸುರಿಯುತ್ತಿದ್ದ ಮಲೆನಾಡು ಮುಂದಿನ ವರ್ಷಗಳಲ್ಲಿ ಮಳೆ ಕೊರತೆ ಎದುರಿಸುವುದು ನಿಶ್ಚಿತ. ಇದರ ಪರಿಣಾಮ ಜಿಲ್ಲೆಯ ಆರ್ಥಿಕತೆಯ ಮೇಲೆ ಆಗಲಿದೆ. ಈ ರೀತಿ ಕೈಕೊಡುವ ಮಳೆಯಿಂದಾಗಿ ಸತತ ನಷ್ಟದಲ್ಲಿರುವ ರೈತರೂ ಸಹ ಕೃಷಿಯಿಂದ ವಿಮುಖರಾಗುತ್ತಿದ್ದಾರೆ


Monday, 8 August 2016


 ಬೆಳೆಗಾರರ ನಿದ್ದೆಗೆಡಿಸಿದೆ ಆಮದು ಅಡಿಕೆ, ದರ ಕುಸಿತ
 ಮಾರಕವಾಗಿದೆ ಮುಕ್ತ ಆಮದು ನೀತಿ 



2015ರ ಮಾರ್ಚ್  2ರಿಂದ ಮೇ ಅಂತ್ಯದವರೆಗೆ ಶ್ರೀಲಂಕಾದಿಂದ ಶೇ. 89ರಷ್ಟು, ಇಂಡೊನೇಷ್ಯಾದಿಂದ ಶೇ. 10.7 ಮತ್ತು ಮಡ್ಗಾಸ್ಕರ್‌ನಿಂದ ಶೇ.0.3ರಷ್ಟು ಅಡಿಕೆ , ಭಾರತಕ್ಕೆ (ಸುಮಾರು 1,00,846 ಕ್ವಿಂಟಾಲ್) ಆಮದಾಗಿದೆ. ಇದರ ಮೌಲ್ಯ ಸುಮಾರು 144 ಕೋಟಿ ರೂ.
2014ರ ಇದೇ ಅವಧಿಯಲ್ಲಿ ಭಾರತಕ್ಕೆ ಆಮದುಗೊಂಡ ವಿದೇಶಿ ಅಡಿಕೆ ಪ್ರಮಾಣ 18,288 ಕ್ವಿಂಟಾಲ್ ಮಾತ್ರವಾಗಿತ್ತು. ಮೌಲ್ಯ ಸುಮಾರು 21.8 ಕೋಟಿ ರೂ. ಆಗಿತ್ತು. ಇದರಲ್ಲಿ ಶ್ರೀಂಕಾದಿಂದ ಶೇ 50ರಷ್ಟು, ಪಾಕಿಸ್ತಾನದಿಂದ ಶೇ 41ರಷ್ಟು, ಬಾಂಗ್ಲಾದಿಂದ ಶೇ. 7.5ರಷ್ಟು ಮತ್ತು ಥೈಲ್ಯಾಂಡ್‌ನಿಂದ ಶೇ. 0.5ರಷ್ಟು ಇತ್ತು. ಒಟ್ಟಿನಲ್ಲಿ ಅಕ್ರಮವಾಗಿ ಕಳಪೆ ಮತ್ತು ಕಡಿಮೆ ಗುಣಮಟ್ಟದ ಅಡಿಕೆ ಭಾರತಕ್ಕೆ ಬರುತ್ತಿರುವುದರಿಂದ ಧಾರಣೆ ಇಲ್ಲಿ ಅಸ್ಥಿರಗೊಂಡಿದೆ.  
ಈ ವರ್ಷದ ಜನವರಿಯಿಂದ ಜೂನ್ ಅಂತ್ಯದವರೆಗೆ 1 ಲಕ್ಷ ಟನ್ ಆಮದಾಗಿದೆ. ಕಳೆದ  ವರ್ಷ ಈ ಅವಧಿಯಲ್ಲಿ 67,224 ಟನ್ ಆಮದಾಗಿತ್ತು.


ಶಿವಮೊಗ್ಗ:   ವಿದೇಶಿ ಅಡಿಕೆ ಆಗಮನದಿಂದ ಕರ್ನಾಟಕದ ಅಡಿಕೆ ಬೆಳೆಗಾರರು ತಲ್ಲಣಿಸಿ ಹೋಗಿರುವ  ವಿಚಾರ ಮತ್ತೆ ಸದ್ದು ಮಾಡಲಾರಂಭಿಸಿದೆ. ಹೇಗಾದರೂ ಮಾಡಿ ಅಡಿಕೆ ಆಮದನ್ನು ನಿಲ್ಲಿಸಬೇಕೆಂದು ಕೇಂದ್ರ ಸರಕಾರಕ್ಕೆ ಮೊರೆ ಇಡುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಕೇಂದ್ರ ಈ ಬಗ್ಗೆ ಗಮನಹರಿಸದೆ ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಹಾಗೆಯೇ ಜೀವಂತವಾಗಿರಿಸಿದೆ. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಕುಸಿತಕ್ಕೊಳಗಾಗುವಂತಾಗಿದೆ.
ಕರ್ನಾಟಕದಲ್ಲಿ ಸುಮಾರು 3 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗುತ್ತಿದೆ. ಕೇರಳದಲ್ಲಿ ಸುಮಾರು 50 ಸಾವಿರ ಟನ್ ಮತ್ತು ಗೋವಾದಲ್ಲಿ 8 ಸಾವಿರ ಟನ್, ಅಸ್ಸಾಂನಲ್ಲಿ 25 ಸಾವಿರ ಟನ್ ಅಡಿಕೆ ಬೆಳೆಯಲಾಗುತ್ತಿದೆ. ರಾಜ್ಯದ ಕರಾವಳಿ, ಮಲೆನಾಡು ಮತ್ತು ಬಯಲುಸೀಮೆಯ ಪ್ರಮುಖ ವಾಣಿಜ್ಯ ಬೆಳೆ ಎನ್ನಬಹುದು. ರಾಜ್ಯದ 22 ಜಿಲ್ಲೆಯಲ್ಲಿ 2.15 ಹೆಕ್ಟೇರ್‌ನಲ್ಲಿ ಇದನ್ನು ಬೆಳೆಯಲಾಗುತ್ತಿದೆ. ಉತ್ಪಾದನೆ 3.16 ಲಕ್ಷ ಟನ್‌ನಷ್ಟಿದೆ. ದೇಶದ ಅಡಿಕೆ ಉತ್ಪಾದನೆಯ ಶೇ. 47 ಭಾಗವನ್ನು ಕರ್ನಾಟಕವೊಂದೇ ಬೆಳೆಯುತ್ತಿದೆ.  ಕರ್ನಾಟಕ ಸರಕಾರಕ್ಕೆ 100 ಕೋಟಿ ರೂ. ಗೂ ಅಧಿಕ ಆದಾಯವನ್ನು ಅಡಿಕೆ ನೀಡುತ್ತಿದೆ. ಆದರೆ ದಕ್ಷಿಣ ಏಷ್ಯಾ ರಾಷ್ಟ್ರಗಳಿಂದ ಹೇರಳವಾಗಿ ಭಾರತಕ್ಕೆ ಅಡಕೆ ಆಮದಾಗುತ್ತಿದೆ. ಅಡಕೆ ಆಮದಿನ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ. ಇದಕ್ಕೆ ಕೇಂದ್ರ ಸರಕಾರದ ಮುಕ್ತ ಆಮದು ನೀತಿ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.
 ಅಡಕೆ ಆಮದು ನಿರ್ಬಂಧದ ಸಡಿಲಿಕೆಯ ಹಿಂದೆ ಗುಟ್ಕಾ ಕಂಪೆನಿಗಳ ಲಾಬಿಯ ಕೈವಾಡದ ಶಂಕೆ ವ್ಯಕ್ತವಾಗುತ್ತಿದೆ. ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಗುಟ್ಕಾ ಕಂಪೆನಿಯ ಲಾಬಿಗೆ ಮಣಿಯಬಾರದು. ವಿದೇಶಿ ಅಡಕೆ ಆಮದು ನೀತಿಯಲ್ಲಿ ಬದಲಾವಣೆ ಮಾಡಬಾರದು. ಒಂದು ವೇಳೆ ಆಮದು ನೀತಿಯಲ್ಲಿ ವ್ಯತ್ಯಾಸವಾದರೆ, ಅಡಕೆ ಬೆಳೆಯನ್ನೇ ನಂಬಿಕೊಂಡಿರುವ ದೇಶೀಯ ಅಡಿಕೆ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಬೇಕಾದ ಪರಿಸ್ಥಿತಿ ಉಂಟಾಗಲಿದೆ ಎನ್ನುವುದು ಬೆಳೆಗಾರರ ಅಭಿಮತ.
 ಕೇಂದ್ರ ವಾಣಿಜ್ಯ ಸಚಿವಾಲಯದ ಅಧೀನದಲ್ಲಿರುವ ಆಮದು ಮತ್ತು ರಫ್ತು ಬೆಲೆ ನಿಗದಿ ಮಾಡುವ ಕೇಂದ್ರದ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ) ಅಡಿಕೆ ಆಮದು ಸುಂಕದ ಕನಿಷ್ಟ ದರವನ್ನು ಈಗ 162 ರೂ.ಗೆ ನಿಗದಿ ಮಾಡಿದೆ. ಶ್ರೀಲಂಕಾ, ಇಂಡೋನೇಶ್ಯಾ, ಥೈಲ್ಯಾಂಡ್, ಮ್ಯಾನ್ಮಾರ್, ಮಲೇಶಿಯಾ ಮೊದಲಾದ ದೇಶಗಳಲ್ಲಿ ಬೆಳೆಯುವ ಕಡಿಮೆ ಗುಣಮಟ್ಟದ ಅಡಿಕೆಗೆ ಅಲ್ಲಿ ಬೇಡಿಕೆ ಇಲ್ಲದಿರುವುದರಿಂದ ಅದನ್ನು ಇಲ್ಲಿಗೆ ತಂದು ಇಲ್ಲಿನ ಅಡಿಕೆ ಜೊತೆ ಕಲಬೆರಕೆ ಮಾಡಲಾಗುತ್ತಿತ್ತು. ಈ ಕಾರಣದಿಂದ ಆಮದು ಸುಂಕ ಹೆಚ್ಚಳ ಮಾಡಿದ್ದರೂ ಈ ಆದೇಶವನ್ನು 30 ಅಡಿಕೆ ವರ್ತಕರು ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
  ರಾಜ್ಯದ ಪ್ರಮುಖ ಅಡಿಕೆ ಖರೀದಿ ಸಹಕಾರ ಸಂಘಗಳಾದ ಕ್ಯಾಂಪ್ಕೋ, ಮ್ಯಾಮ್ಕೋಸ್, ಶಿರಸಿಯ ಟಿಎಸ್ಸೆಸ್, ಚೆನ್ನಗಿರಿಯ ತುಮ್ಕೋಸ್, ರಾಮ್ಕೋಸ್ ಮೊದಲಾದ ಸಹಕಾರ ಸಂಘಗಳ ಮುಖಂಡರು ನವದೆಹಲಿಗೆ ತೆರಳಿ ಅಲ್ಲಿ ಅರ್ಥ ಸಚಿವ, ವಾಣಿಜ್ಯ ಸಚಿವರನ್ನು ಭೇಟಿ ಮಾಡಿ ಆಮದು ಅಡಿಕೆ ನಿಷೇಧಿಸುವಂತೆ ಮತ್ತು ಕರ್ನಾಟಕದ ಅಡಿಕೆ ಬೆಳೆಗಾರರ ಹಿತ ಕಾಪಾಡುವಂತೆ ಮನವಿ ಮಾಡಿ ಬಂದಿದ್ದಾರೆ.
ಆಮದು ಬೇಡ:
  ಕೇಂದ್ರ ಸರ್ಕಾರ ಗುಟ್ಕಾ ಕಂಪನಿಗಳ ಒತ್ತಡಕ್ಕೆ ಮಣಿದು ಅಡಿಕೆ ಆಮದಾಗದಂತೆ ನೋಡಿಕೊಂಡರೆ ಮುಂದಿನ ಅಡಿಕೆ ಹಂಗಾಮಿನಲ್ಲೂ ರೈತರಿಗೆ ಉತ್ತಮ ದರ ದೊರೆಯುವ ನಿರೀಕ್ಷೆ ಇದೆ. ನೇಪಾಳ ಹಾಗೂ ಬಾಂಗ್ಲಾದೇಶಗಳು ಭಾರತ ದೇಶದೊಂದಿಗೆ ಆಪ್ತಮಿತ್ರ ರಾಷ್ಟ್ರಗಳಾಗಿರುವ ಕಾರಣ ಹೊಂದಿರುವ "ವಿಶೇಷ ವ್ಯಾಪಾರ ಒಪ್ಪಂದ"ದ ರಿಯಾಯಿತಿಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ಹಾಗೂ ಮೇಲ್ಕಂಡ ದೇಶಗಳ ಮೂಲಕ ದಕ್ಷಿಣ ಏಷ್ಯಾ ರಾಷ್ಟ್ರಗಳು ಬೆಳೆಯುವ ಅಡಿಕೆಯನ್ನು ಅಮದು ಮಾಡಿಕೊಳ್ಳದಂತೆ ಕಠಿಣ ಕ್ರಮವನ್ನು ಕೈಗೊಳ್ಳಬೇಕಿದೆ. ಈ ಮೂಲಕ ದೇಶೀಯ ಅಡಿಕೆ ಮಾರುಕಟ್ಟೆಯ ಉತ್ತಮ ಧಾರಣೆಯ ಸ್ಥಿರತೆಯನ್ನು ಕಾಯಬಹುದು ಎನ್ನುತ್ತಾರೆ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದವರು.
 ವಿದೇಶಿ ಅಡಕೆ ಆಮದು ನೀತಿಯಲ್ಲಿ ಬದಲಾವಣೆ ಮಾಡಬಾರದು. ಒಂದು ವೇಳೆ ಆಮದು ನೀತಿಯಲ್ಲಿ ವ್ಯತ್ಯಾಸವಾದರೆ, ಅಡಕೆ ಬೆಳೆಯನ್ನೇ ನಂಬಿಕೊಂಡಿರುವ ದೇಶೀಯ ಅಡಿಕೆ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಬೇಕಾದ ಪರಿಸ್ಥಿತಿ ಉಂಟಾಗಲಿದೆ ಎನ್ನುವುದು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ ಅಭಿಮತ.
ಅಡಕೆ ಧಾರಣೆ:
 ಅಡಕೆ ಧಾರಣೆ ಗಮನಿಸುವುದಾದರೆ, ಕೆಂಪಡಕೆ ಧಾರಣೆ ಇಳಿಮುಖವಾಗುತ್ತಲೇ ಇದೆ. ಸದ್ಯ 20 ರಿಂದ 22 ಸಾವಿರದವರೆಗೆ ಅಡಕೆ ದರ ಕ್ವಿಂಟಾಲ್‌ಗೆ ಇದೆ.  ಕಳೆದ ವರ್ಷದ ಜೂನ್‌ನ್‌ನಲ್ಲಿ 26ರಿಂದ 27 ಸಾವಿರದವರೆಗೆ ಧಾರಣೆ ಇತ್ತು.  ಹಿಂದಿನ ವರ್ಷಕ್ಕಿಂತ ಈ ವರ್ಷ ಕೆಂಪಡಕೆ ಆವಕ ಶೇ 7ರಷ್ಟು ಕಡಿಮೆಯಾಗಿದೆ. ಆದರೆ ದರ ಶೇ. 28ರಷ್ಟು ಕುಸಿತ ಕಂಡಿದೆ.  ಇದರಿಂದ ಶಿವಮೊಗ್ಗ ಎಪಿಎಂಸಿಯೊಂದರಲ್ಲೇ 3 ಲಕ್ಷ ಚೀಲದಷ್ಟು ಕೆಂಪಡಕೆ ದಾಸ್ತಾನಿದೆ. ಬಿಳಿಚಾಲಿಯ ದರವನ್ನು ಗಮನಿಸುವುದಾದರೆ, ಕಳೆದ ವರ್ಷಕ್ಕಿಂತ ಈ ವರ್ಷ ಶೇ. 6ರಷ್ಟು ದರ ಕುಸಿದಿದೆ.
.




Wednesday, 3 August 2016

ಇವರಿಗೆ ಬುದ್ಧಿ ಹೇಳುವವರಾರು?


ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಜನರು ಮತ್ತು ಸಂಘ-ಸಂಸ್ಥೆಗಳು ಇಲಾಖೆಗಳೊಂದಿಗೆ ಕೈಜೋಡಿಸಬೇಕಿದೆ. ಶಿವಮೊಗ್ಗದಲ್ಲಂತೂ ಬಹುಮಹಡಿ ಕಟ್ಟಡಗಳೇ ದೊಡ್ಡ ತಲೆನೋವಾಗಿವೆ. ಉದ್ದೇಶಪೂರ್ವಕವಾಗಿ ಇವರು ಟ್ರಾಫಿಕ್‌ಗೆ ತೊಂದರೆ ಮಾಡುತ್ತಿದ್ದಾರೆ. ಪಾರ್ಕಿಂಗ್‌ಗೆ ಬಿಡುವ ಜಾಗದಲ್ಲೂ  ಮಳಿಗೆ ನಿರ್ಮಿಸುತ್ತಾರೆ. ಅದನ್ನು ತೆರವುಗೊಳಿಸಲು ಮುಂದಾಗುವ ಅಧಿಕಾರಿಯನ್ನು ವರ್ಗಾವಣೆ ಅಥವಾ ಅಮಾನತು ಬೇಕಾದರೂ ಮಾಡಿಸುತ್ತಾರೆ. ಅದೇ ರೀತಿ ಅಂಗಡಿ ಮಾಲಕರೂ ಫುಟ್‌ಪಾತ್ ತಮ್ಮ ಅಂಗಡಿಗೆ ಸೇರಿದ ಜಾಗ. ತಾವು ಅದಕ್ಕೆ ಬಾಡಿಗೆ ಕೊಡುತ್ತಿದ್ದೇವೆ ಎಂದು ತಿಳಿದಂತಿದೆ.


ಇವರೆಲ್ಲರೂ ವಿದ್ಯಾವಂತರು. ಜೊತೆಗೆ ಆರ್ಥಿಕವಾಗಿ ಸದೃಢರು. ಬಹುವರ್ಷದಿಂದ ವ್ಯಾಪಾರ- ವಹಿವಾಟು ನಡೆಸುತ್ತಿರುವವರು. ಆದರೆ  ಪಾದಚಾರಿ ಮಾರ್ಗ ಬಿಡುವುದು, ಪಾರ್ಕಿಂಗ್‌ಗೆ ಅನುಕೂಲ ಕಲ್ಪಿಸಿಕೊಡುವ ಬಗ್ಗೆ ಸಾಮಾನ್ಯ ಜ್ಞಾನವೂ ಇಲ್ಲ.
ಇದು ಶಿವಮೊಗ್ಗ ನಗರದಲ್ಲಿ ಅತಿ ಹೆಚ್ಚು ಸಮಸ್ಯೆಯಾಗಿ ಕಾಡುತ್ತಿರುವ ಪಾರ್ಕಿಂಗ್ ಅವ್ಯವಸ್ಥೆ ಮತ್ತು ಪಾದಚಾರಿ ಮಾರ್ಗಗಳ ಒತ್ತುವರಿಯ ಬಗ್ಗೆ ಗಮನಿಸಿದಾಗ ಕಂಡುಬರುವ ಪ್ರಮುಖ ಅಂಶಗಳು. ಇಲ್ಲಿ ಮಹಾನಗರ ಪಾಲಿಕೆ ಇದೆ. ಪೊಲೀಸ್ ಇಲಾಖೆ ಇದೆ. ಲೋಕೋಪಯೋಗಿ ಮತ್ತು ರಾಷ್ಟ್ರೀಯ ಹೆದ್ದಾರಿ ನಿಗಮ  ಇದೆ.  ಆದರೂ ಸಂಚಾರ ವ್ಯವಸ್ಥೆ ಮಾತ್ರ ಹದಗೆಟ್ಟಿದೆ. ಟ್ರಾಫಿಕ್ ಮತ್ತು ಪಾರ್ಕಿಂಗ್ ಸಮಸ್ಯೆ  ಕೇವಲ ವಾಹನಗಳ ಭರಾಟೆಯಿಂದ ಮಾತ್ರವಲ್ಲ. ತಾಂತ್ರಿಕವಾಗಿ ರಸ್ತೆಗಳನ್ನು ನಿರ್ಮಾಣ ಮಾಡದಿದ್ದರೆ, ವೃತ್ತಗಳನ್ನು ರಚಿಸದಿದ್ದರೆ, ನಿಯಮಬಾಹಿರವಾಗಿ ಕಟ್ಟಡ ನಿರ್ಮಿಸಿದರೆ ಎದುರಾಗುತ್ತದೆ. ಇವುಗಳನ್ನು ಸಂಬಂಧಿತ ಇಲಾಖೆಯವರು ಜವಾಬ್ದಾರಿಯಿಂದ ನಿರ್ವಹಿಸಬೇಕಾಗುತ್ತದೆ. ಆದರೆ ಪ್ರಸ್ತುತ ಟ್ರಾಫಿಕ್ ಎಂದಾಕ್ಷನ ಪೊಲೀಸ್ ಇಲಾಖೆಯೊಂದನ್ನು ಮಾತ್ರ ದೂಷಿಸುವ ಪದ್ಧತಿ ಜನರಲ್ಲಿ ಬೆಳೆದುಬಂದಿದೆ.
 ಅಂಡರ್ ಗ್ರೌಂಡ್‌ನಲ್ಲಿ ಪಾರ್ಕಿಂಗ್‌ಗೆ ಸ್ಥಳಾವಕಾಶ ಬಿಡಬೇಕೆಂದು ಹೈಕೋರ್ಟ್ ಆದೇಶವಿದ್ದರೂ ಇದನ್ನು ಪಾಲಿಸುವವರಿಲ್ಲ. ಈ ಆದೇಶವನ್ನು ಜಾರಿಗೊಳಿಸುವವರೇ ಇಲ್ಲ. ಎಲ್ಲರೂ ಉಲ್ಲಂಘಿಸುವವರೇ ಆಗಿದ್ದಾರೆ. ಬಹುಮಹಡಿ ಕಟ್ಟಡವನ್ನು ಸ್ವಲ್ಪವೂ ಜಾಗ ಬಿಡದೆ ಫುಟ್‌ಪಾತ್‌ವರೆಗೆ ಕಟ್ಟುತ್ತಾರೆ. ಇನ್ನೂ ಹಲವೆಡೆ ಒತ್ತುವರಿ ಮಾಡಿ ನಿರ್ಮಿಸಿದ್ದೂ ಇದೆ. ಹೀಗಾದರೆ ಪಾರ್ಕಿಂಗ್‌ಗೆ ಎಲ್ಲಿ ಅವಕಾಶ ಸಿಗುತ್ತದೆ. ಆ ಕಟ್ಟಡಕ್ಕೆ ಬರುವವರು ರಸ್ತೆಯಂಚಿನಲ್ಲೇ ವಾಹನ ನಿಲ್ಲಿಸುತ್ತಾರೆ. ಇದರಿಂದ ವಾಹನಗಳು ಜಾಮ್ ಆಗುತ್ತವೆ. ಇಕ್ಕಟ್ಟಾದ ರಸ್ತೆ ಆದರಂತೂ ಸಮಸ್ಯೆ ಬಗೆಹರಿಯುವುದೇ ಇಲ್ಲ.
ಪಾಲಿಕೆಯವರು  ಮತ್ತು ರಸ್ತೆ ಇಂಜಿನಿಯರಿಂಗ್ ನಿರ್ವಹಿಸುವವರು ಎಸಗುತ್ತಿರುವ ಬಹುದೊಡ್ಡ ತಪ್ಪುಗಳಿಗೆ ಸಾರ್ವಜನಿಕರು ಅದರಲ್ಲೂ ವಾಹನ ಸವಾರರು ಬೆಲೆತೆರಬೇಕಾಗುತ್ತಿದೆ. ಪಾಲಿಕೆಯವರು ಕಟ್ಟಡ ಅನುಮತಿ ನೀಡುವಾಗ ಕೆಲವು ಶರತ್ತುಗಳನ್ನು ವಿಧಿಸುತ್ತಾರೆ. ಅದನ್ನು ಅಳವಡಿಸಿಕೊಂಡು ಪರವಾನಿಗೆ ಪಡೆದವರು ಕಟ್ಟಡ ನಿರ್ಮಿಸಬೇಕು. ಆದರೆ ಹಾಗೆ ಮಾಡದೆ  ಅದನ್ನು ಪಾಲಿಸದೆ ತಮಗಿಷ್ಟ ಬಂದಂತೆ ಕಟ್ಟಡ ನಿರ್ಮಿಸುತ್ತಾರೆ. ಜೊತೆಗೆ ಪಾಲಿಕೆಯವರೂ ಸಹ ಇದನ್ನು ಪರಿಶೀಲನೆ ಮಾಡುವ ಗೋಜಿಗೆ ಹೋಗುವುದೇ ಇಲ್ಲ. ಈ ಮಧ್ಯೆ ನಗರಾಭಿವೃದ್ಧಿ ಪ್ರಾಧಿಕಾರ ಇದೆ. ಅವರು ಈ ವಿಷಯದಲ್ಲಿ ಏನು ಮಾಡುತ್ತಿದ್ದಾರೆ ಎನ್ನುವುದೇ ಯಾರಿಗೂ ಗೊತ್ತಿಲ್ಲ.  
ನಗರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಹುಮಹಡಿ ಕಟ್ಟಡಗಳು ಅಧಿಕವಾಗುತ್ತಿವೆ. ಮುಂದಿನ ದಿನಗಳಲ್ಲಿ ಇವೇ ರಾರಾಜಿಸಲಿವೆ. ಇವರೆಲ್ಲ ಕಾನೂನು ಮೀರುವವರಾದರೆ ಪಾರ್ಕಿಂಗ್ ಹಾಳಾಗಿ ಹೋಗಲಿ, ನಡೆದಾಡಲೂ ಜಾಗವಿಲ್ಲದಂತಹ ಪರಿಸ್ಥಿತಿ ತಲೆದೋರುವುದು ನಿಶ್ಚಿತ. ಬಹುಮಹಡಿ ಕಟ್ಟುವವರು ಶ್ರೀಮಂತರೇ ವಿನಾ ಬಡವರಲ್ಲ. ಅವರಿಗೆ ಕಾನೂನು ಉಲ್ಲಂಘಿಸುವುದೂ ಗೊತ್ತು, ಅದರಿಂದ ಪಾರಾಗುವುದೂ  ಗೊತ್ತಿರುತ್ತದೆ. ಇಂತಹವರಿಗೆ ರಾಜಕಾರಣಿಗಳ ಬೆಂಬಲ ಸದಾ ಇರುತ್ತದೆ. ಈ ಎಲ್ಲವುಗಳ ಉದಾಹರಣೆ ನಮ್ಮ ಕಣ್ಣೆದುರೇ ಇದೆ.
ಈ ರೀತಿ ಕಾನೂನು ಉಲ್ಲಂಘಿಸುವವರು ಜಾಸ್ತಿ ಇರುವಾಗ ಟ್ರಾಫಿಕ್ ನಿರ್ವಹಣೆ ಮಾಡುವುದು ಹೇಗೆ ಸಾಧ್ಯ. ಮೊನ್ನೆ ಪೊಲೀಸ್ ವರಿಷ್ಠರು ಕರೆದಿದ್ದ ಈ ಕುರಿತ ಸಂವಾದದಲ್ಲಿ ಮಾತನಾಡಿದ ಬಹುತೇಕರು  ಬಹುಮಹಡಿ ಕಟ್ಟಡಗಳು ಮತ್ತು ಆಸ್ಪತ್ರೆಗಳು ಪಾರ್ಕಿಂಗ್‌ಗೆ ಜಾಗ ಬಿಡದೆ ಫುಟ್‌ಪಾತ್‌ವರೆಗೆ ಕಟ್ಟಡ ನಿರ್ಮಿಸಿದ್ದು ಪ್ರಸ್ತ್ತಾಪವಾಯಿತು. ಎರಡನೆಯದಾಗಿ , ಅಂಗಡಿಕಾರರು ಫುಟ್‌ಪಾತ್‌ನಲ್ಲಿ ತಮ್ಮ ಮಾರಾಟದ ಸರಕುಗಳನ್ನು ಇಟ್ಟು ಜನಸಂಚಾರಕ್ಕೆ ಅಡ್ಡಿ ಮಾಡುವುದು, ಮೂರನೆಯದಾಗಿ, ತಪ್ಪಾದ ಇಂಜಿನಿಯರಿಂಗ್ ವ್ಯವಸ್ಥೆಗಳಿಂದ ವಾಹನ  ಸವಾರರು ಪರದಾಡಬೇಕಾದ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಯಿತು.
ಜನರು ಎಲ್ಲಿಯವರೆಗೆ ಪಾರ್ಕಿಂಗ್, ಕಾನೂನು,  ಟ್ರಾಫಿಕ್ ಸಮಸ್ಯೆ ಬಗ್ಗೆ ಅರಿವು ಹೊಂದುವುದಿಲ್ಲವೋ ಅಲ್ಲಿಯವರೆಗೆ ಏನೇ ಮಾಡಿದರೂ ಅವರನ್ನು ಸುಧಾರಿಸಲು ಸಾಧ್ಯವಿಲ್ಲ. ಪೊಲೀಸರು ಎಷ್ಟೇ ಕಷ್ಟಪಟ್ಟರೂ, ಜನ ಎಷ್ಟೇ ಅವರನ್ನು ಬೈದರೂ ಲಾಭವಿಲ್ಲ. ನೆಹರೂ ರಸ್ತೆ ಮತ್ತು ಬಿಎಚ್ ರಸ್ತೆ ಅಮೀರ್ ಅಹಮದ್ ವೃತ್ತದಿಂದ ಬಸ್ ನಿಲ್ದಾಣದವರೆಗೆ ಇರುವ ಫುಟ್‌ಪಾತ್ ಗಮನಿಸಿ. ಫುಟ್‌ಪಾತ್ ಇರುವುದು ಓಡಾಟಕ್ಕಲ್ಲ, ಅಂಗಡಿಕಾರರ ಸಾಮಗ್ರಿ ಸಂಗ್ರಹಿಸಿಡಲು ಎನ್ನುವುದು ಗೊತ್ತ್ತಾಗುತ್ತದೆ.
ತಮ್ಮ ಜವಾಬ್ದಾರಿ ಈ ಸಮಾಜದಲ್ಲಿ ಏನು ಎನ್ನುವುದನ್ನು ಪ್ರತಿಯೊಬ್ಬ ಮನುಷ್ಯ ಅರ್ಥ ಮಾಡಿಕೊಳ್ಳಬೇಕು. ತಾನು ತಪ್ಪು ಮಾಡಿದರೆ ಎಷ್ಟು ಜನ ತೊಂದರೆಪಡಬಹುದು ಎಂಬ  ಅರಿವು ಇರಬೇಕು. ಇಲ್ಲವಾದರೆ ಪತ್ರಿಕೆಯಲ್ಲಿ ಎಷ್ಟೇ ಬರೆಯಲಿ, ಪೊಲೀಸರು ಎಷ್ಟೇ ಎಚ್ಚರಿಸಲಿ, ಅದರಿಂದ ಲಾಭವಿಲ್ಲ. ಇನ್ನುಮುಂದೆ ಪೊಲೀಸರು ಫುಟ್‌ಪಾತ್‌ನಲ್ಲಿಡುವ ಅಂಗಡಿಕಾರರ ಸಾಮಗ್ರಿಗಳನ್ನು ಎತ್ತಿಹಾಕಿಕೊಂಡು ಹೋಗಿ ಪಾಠ ಕಲಿಸಲು ಮುಂದಾಗಬೇಕಿದೆ.
ನಗರದ ಸಂಚಾರ ವ್ಯವಸ್ಥೆ ಸುಧಾರಿಸಬೇಕಾದಲ್ಲಿ ಇವರೆಲ್ಲ ಮುಕ್ತ ಮನಸ್ಸಿನಿಂದ ಮುಂದೆ ಬಂದು ಸಹಕರಿಬೇಕೇ ವಿನಾ ಪೊಲೀಸರನ್ನು ಬಯ್ಯುವುದಲ್ಲ. ವಾಹನಗಳ ನಿರ್ವಹಣೆ ಪೊಲೀಸರ ಜವಾಬ್ದಾರಿ. ಸುಗಮ ಸಂಚಾರಕ್ಕೆ ಇಲಾಖೆ ಎಲ್ಲ ರೀತಿಯ ಯತ್ನವನ್ನು ಮಾಡುತ್ತಿದೆ. ಜನರಿಂದ ಸಲಹೆಗಳನ್ನೂ ಪಡೆಯುತ್ತಿದೆ. ಇದನ್ನರಿತು ಸಾರ್ವಜನಿಕರು ಸಹಕಾರ ಕೊಟ್ಟರೆ ಮಾತ್ರ ಸುವ್ಯವಸ್ಥಿತ ಸಂಚಾರ ಸಾಧ್ಯ. 

Tuesday, 2 August 2016

ಎಂಎಲ್ಸಿಯಾಗಲು  ಶುರುವಾಗಿದೆ  ಪೈಪೋಟಿ   
* ಮೂರು ನಾಮನಿರ್ದೇಶನ ಸ್ಥಾನಕ್ಕೆ ನಟರು, ಸಮಾಜಸೇವಕರು, ಸಾಹಿತಿಗಳ ಯತ್ನ


ವಿಧಾನಪರಿಷತ್‌ನ ಮೂರು ನಾಮನಿರ್ದೇಶಿತ ಸದಸ್ಯರ ಸ್ಥಾನಕ್ಕೆ  ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ಆರಂಭವಾಗಿದೆ. ಸಿನಿಮಾ ನಟರು, ಸಮಾಜ ಸೇವಕರು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದವರನ್ನು ಈ ಸ್ಥಾನಕ್ಕೆ ನಾಮನಿರ್ದೇಶನ ಮಾಡಲಾಗುತ್ತದೆ. ಈ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು, ಮುಂದಿನ ತಿಂಗಳ ಮೊದಲ ವಾರದಲ್ಲಿ ಅಂತಿಮ ಪಟ್ಟಿ ಪ್ರಕಟವಾಗಲಿದೆ.
ನಟ ಜಗ್ಗೇಶ್, ಪ್ರೊ. ಪಿ.ವಿ.ಕೃಷ್ಣ ಭಟ್ ಮತ್ತು  ವಿ. ಸೋಮಣ್ಣ ಅವರನ್ನು ಹಿಂದಿನ ಬಿಜೆಪಿ ಸರ್ಕಾರ ತನ್ನ ಅವಧಿಯಲ್ಲಿ ನಾಮನಿರ್ದೇಶನ ಮಾಡಿತ್ತು. ಆದರೆ ಅವರ ಅವಧಿ ಮುಗಿದು ಸುಮಾರು ಎರಡು ತಿಂಗಳೇ ಗತಿಸಿದೆ. ಶೀಘ್ರದಲ್ಲಿ ಈ ಮೂರು ಸ್ಥಾನವನ್ನು ಹಾಲಿ ಸರ್ಕಾರ ತುಂಬಬೇಕಿದೆ.
ಈ ಮೂರು ಸ್ಥಾನಕ್ಕೆ ಪ್ರಮುಖ ಆಕಾಂಕ್ಷಿಗಳೆಂದರೆ, ಸಿನಿಮಾ ಕ್ಷೇತ್ರದಿಂದ ನಟಿಯರಾದ ರಮ್ಯಾ ಮತ್ತು ಭಾವನಾ, ಸಾಹಿತ್ಯ ಕ್ಷೇತ್ರದಿಂದ ಬರಗೂರು ರಾಮಚಂದ್ರಪ್ಪ, ಪ್ರೊ.ಎಸ್. ಜಿ. ಸಿದ್ದರಾಮಯ್ಯ, ಪ್ರೊ. ಜಿ.ಕೆ. ಗೋವಿಂದರಾವ್, ಸಮಾಜ ಸೇವಕರ ಕ್ಷೇತ್ರದಿಂದ ಕೆ.ಪಿ.ನಂಜುಂಡಿ,  ರಾಜಕಾರಣಿಗಳಾದ ಬೆಂಗಳೂರಿನ ಮಾಜಿ ಮೇಯರ್ ಮತ್ತು ಕೆಪಿಸಿಸಿ ಮುಖಂಡ ರಾಮಚಂದ್ರಪ್ಪ ಮತ್ತು ಮೂಲತಃ ಚಿಕ್ಕಮಗಳೂರಿನವರಾದ, ಕೆಪಿಸಿಸಿ ವಕ್ತಾರರಾದ ಬಿ.ಎಲ್. ಶಂಕರ್ ಇವರ ಹೆಸರು ಮುಂಚೂಣಿಯಲ್ಲಿದೆ. ಆದರೆ ಆಯ್ಕೆ ಕೆಪಿಸಿಸಿ ಮತ್ತು ಮುಖ್ಯಮಂತ್ರಿಗೆ ಬಿಟ್ಟಿದ್ದಾಗಿದೆ.
ನಟಿ ರಮ್ಯಾ ಈ ಹಿಂದೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾದವರು. ಜೊತೆಗೆ ಎಐಸಿಸಿಯಲ್ಲೂ ಹೆಚ್ಚಿನ ಪ್ರಭಾವವಿರುವವರಾಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದಲ್ಲಿನ ನಾಯಕರ ಭಿನ್ನಮತದಿಂದ ಅವರು ಸೋಲುಂಡಿದ್ದಾರೆ. ನಂತರ ರಾಜ್ಯ ರಾಜಕಾರಣದಲ್ಲಿ ಅಷ್ಟೇನೂ ಸಕ್ರಿಯರಾಗಿರದಿದ್ದರೂ  ಆಗಾಗ ಹೆಸರು ಕೇಳಿಬರುತ್ತಿತ್ತು. ಇತ್ತೀಚೆಗೆ ನಡೆದ ಎಂಎಲ್ಸಿ ಚುನಾವಣೆ ವೇಳೆಯೂ ಅವರ ಹೆಸರು ಕೇಳಿಬಂದಿತ್ತು. ನಟಿ ಭಾವನಾ ಸಹ ಕಾಂಗ್ರೆಸ್‌ನಲ್ಲಿದ್ದುಕೊಡೇ ಮಕ್ಕಳ ಹಕ್ಕುಗಳ ಸಮಿತಿ (ಬಾಲಭವನ) ರಾಜ್ಯಾಧ್ಯಕ್ಷೆಯಾಗಿದ್ದಾರೆ. ಇವರ ಹೆಸರೂ ಸಹ ಇತ್ತೀಚೆಗೆ ಜರುಗಿದ ಎಂಎಲ್‌ಸಿ ಚುನಾವಣೆ ವೇಳೆ ಕೇಳಿಬಂದಿತ್ತು. ಆದರೆ ಕೊನೆಗಳಿಗೆಯಲ್ಲಿ ಅವರಿಗೆ ಟಿಕೆಟ್ ಕೈತಪ್ಪಿತ್ತು. ಈ ಬಾರಿ ಇವರಿಬ್ಬರಲ್ಲಿ ಯಾರಿಗಾದರೊಬ್ಬರಿಗೆ ಟಿಕೆಟ್ ಸಿಗುವುದು ಬಹುತೇಕ ನಿಶ್ಚಿತವಾಗಿದೆ.
 ಸಾಹಿತ್ಯ ವಲಯದಿಂದ ಹೆಚ್ಚಿನ ಪೈಪೋಟಿ ಎದುರಾಗಿದೆ. ಎಲ್ಲ ಆಕಾಂಕ್ಷಿಗಳೂ  ತಮ್ಮ ಪ್ರಭಾವ ಬೀರಲಾರಂಭಿಸಿದ್ದಾರೆ. ಪ್ರಮುಖವಾಗಿ ಬರಗೂರು ಮತ್ತು ಪ್ರೊ. ಸಿದ್ದರಾಮಯ್ಯ ಅವರ ಹೆಸರು ಚಾಲ್ತಿಯಲ್ಲಿದೆ. ಜೊತೆಗೆ ಇನ್ನೂ ಹಲವರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಇಲ್ಲಿ ಬರಗೂರು ಅವರಿಗೆ ಅವಕಾಶ ಹೆಚ್ಚಿನ ಪ್ರಮಾಣದಲ್ಲಿದೆ. ಜೊತೆಗೆ ಅನೇಕ ಸಚಿವರು ಮತ್ತು ಕಾಂಗ್ರೆಸಿಗರು ಬರಗೂರು ಅವರನ್ನೇ ನಾಮಕರಣ ಮಾಡುವಂತೆ ಕೆಪಿಸಿಸಿಗೆ ಮತ್ತು ಸಿಂಎಗೆ ಮನವಿ ಮಾಡಿದ್ದಾರೆ. ಇವರನ್ನು ಹೊರತುಪಡಿಸಿದರೆ ಸಿದ್ದರಾಮಯ್ಯ ಮತ್ತು ಜಿ. ಕೆ. ಗೋವಿಂದರಾವ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ಸಮಾಜ ಸೇವೆ ಕ್ಷೇತ್ರದಿಂದ  ಕೆ. ಪಿ. ನಂಜುಂಡಿ ಸ್ಥಾನ ಪಡೆದರೆ ಆಶ್ಚರ್ಯವೇನಿಲ್ಲ. ಏಕೆಂದರೆ, ಕೆಲವು ವರ್ಷಗಳಿಂದ ಕಾಂಗ್ರೆಸ್‌ನಲ್ಲಿರುವ ನಂಜುಂಡಿ ಪಕ್ಷಕ್ಕೆ ಫೈನಾನ್ಶಿಯರ್ ಸಹ ಆಗಿದ್ದಾರೆ. ಲಕ್ಷ್ಮೀ ಗೋಲ್ಡ್ ಪ್ಯಾಲೇಸ್ ಎಂಬ ಸ್ವರ್ಣೋದ್ಯಮದ ಮೂಲಕ ರಾಜ್ಯದಲ್ಲಿ ಹೆಸರುಗಳಿಸಿರುವ ಅವರು, ಉತ್ತಮ ಸಂಘಟಕರೂ, ಧಾರಾವಾಹಿ ಮೂಲಕ ನಟನೆ, ನಿರ್ಮಾಪಕರಾಗಿ ಮನೆಮಾತಾದವರು. ಕಾಂಗ್ರೆಸ್‌ನಲ್ಲಿ ಆಸ್ಕರ್ ಫರ್ನಾಂಡೀಸ್ ಅವರ ಅತ್ಯಾಪ್ತರೆಂಬ ಮಾತಿದೆ. ಕಳೆದ ಎಂಎಲ್‌ಸಿ ಚುನಾವಣೆಯಲ್ಲೂ ಇವರಿಗೆ ಕೊನೆಹಂತದಲ್ಲಿ ಅವಕಾಶ ತಪ್ಪಿದೆ. ಇದೆಲ್ಲ ಈ ಬಾರಿ ಅವರಿಗೆ ಪ್ಲಸ್ ಆಗಬಹುದೆಂದು ಲೆಕ್ಕಾಚಾರ ಹಾಕಲಾಗುತ್ತಿದೆ.
 ಆದರೆ ಇವರಿಗೆ ಅಷ್ಟೇ ಪ್ರಬಲ ಸ್ಪರ್ಧೆ ಒಡ್ಡುತ್ತಿರುವವರೆಂದರೆ, ಹಿರಿಯರಾದ ರಾಮಚಂದ್ರಪ್ಪ ಮತ್ತು ಬಿ.ಎಲ್.ಶಂಕರ್. ರಾಮಚಂದ್ರಪ್ಪ ಮತ್ತು ಶಂಕರ್ ಪಕ್ಷದಲ್ಲಿ ಪ್ರಭಾವಿಗಳು. ಶಂಕರ್ ಪಕ್ಷವನ್ನು ಸಮರ್ಥಿಸಿಕೊಳ್ಳುವ ಮಾತುಗಾರ. ಆದರೂ ರಾಮಚಂದ್ರಪ್ಪ ಬಹುುತೇಕ ಟಿಕೆಟ್ ಪಡೆಯುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಇವರೆಲ್ಲರ ಹೊರತಾಗಿ ಇನ್ನೂ ಹಲವರು ಪಟ್ಟಿ ಸೇರಲೂಬಹುದು.
ಅಂತಿಮವಾಗಿ, ಏನಿದ್ದರೂ ಜಾತಿ ಲೆಕ್ಕಾಚಾರದ ಮೇಲೆ ಎಲ್ಲವೂ ನಿರ್ಧರಿತವಾಗಲಿದೆ. ಪ್ರಭಾವವೂ ಕೆಲಸ ಮಾಡುತ್ತದೆ. ಆದ್ದರಿಂದ ಮೂರು ಸ್ಥಾನದ ಆಯ್ಕೆ ಅಷ್ಟು ಸಲೀಸಾಗಿಲ್ಲ. ಮುಖಂಡರು ಅಳೆದು-ತೂಗಿ ತಿಂಗಳಾಂತ್ಯದ ವೇಳೆ ಆಯ್ಕೆ ಮಾಡುವ ಸಾಧ್ಯತೆ ಇದೆ.
.................................................    

Monday, 1 August 2016

 ಮಾನಸಿಕ ಅಸ್ವಸ್ಥರ ಬಾಳು ಬೆಳಗಲು ಮುಂದಾದ ನ್ಯಾಯಾಲಯ


ಸರ್ಕಾರದ ಎಷ್ಟೋ ಯೋಜನೆಗಳು ಜನರಿಗೆ ಗೊತ್ತಿಲ್ಲದೆ, ಪ್ರಚಾರ ಸಿಗದೆ ಮೂಲೆಗುಂಪಾಗುತ್ತವೆ. ಹಾಗೆಯೇ ಕಾನೂನಿನಲ್ಲಿ ಇರುವ ಒಳ್ಳೆಯ ಅವಕಾಶಗಳೂ ಸಹ ಜನಸಾಮಾನ್ಯರಿಗೆ ಗೊತ್ತಾಗುವುದೇ ಇಲ್ಲ. ಕಾನೂನಿನಲ್ಲಿ ಮಾನಸಿಕ ಅಸ್ವಸ್ಥರಿಗೆ ಬದುಕು ಕಟ್ಟಿಕೊಡಲು ದಾರಿ ಇದೆ ಎನ್ನುವುದನ್ನು ನಗರದ ಒಬ್ಬ ಹಿರಿಯ ನ್ಯಾಯಾಧೀಶರು ತೋರಿಸಿಕೊಟ್ಟಿದ್ದಾರೆ. ಇದು ನಗರದಲ್ಲಿರುವ ಎಲ್ಲ ಅಧಿಕಾರಿ, ಇಲಾಖೆಗಳ ಮುಖ್ಯಸ್ಥರ, ಜನಸಾಮಾನ್ಯರ ಕಣ್ತೆರೆಸಬೇಕಿದೆ.  ಜೀವನದಲ್ಲಿ ಸಂಭವಿಸಿದ ಯಾವುದೋ  ಘಟನೆಯಿಂದ  ಮಾನಸಿಕ ಅಸ್ವಸ್ಥರಾಗಿ ಮನೆ ಬಿಟ್ಟು ಅಲೆಯುತ್ತಿರುವವರನ್ನು ಹಾಗೆಯೇ ಬಿಡದೆ ಸಮಾಜದ ಮುಖ್ಯವಾಹಿನಿಗೆ ತರಲು ನ್ಯಾಯಾಲಯಕ್ಕೆ ಹಾಜರ್ಪಡಿಸಿ ನಿಮ್ಹಾನ್ಸ್‌ಗೆ ಸೇರಿಸಿ ಉಚಿತ ಚಿಕಿತ್ಸೆಗೆ ಅನುವು ಮಾಡಿಕೊಡಬೇಕು.



ಮಾನಸಿಕ ಅಸ್ಥಸ್ಥರು ರಸ್ತೆಯಲ್ಲಿ ತಿರುಗಾಡುತ್ತಿದ್ದರೆ ಅವರ ಬಗ್ಗೆ ಪೊಲೀಸರಿಗೆ ಇಲ್ಲವೇ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಮಾಹಿತಿ ಕೊಡಿ.  ಇವರ ಮೂಲಕ ಅವರನ್ನು ನ್ಯಾಯಾಲಯಕ್ಕೆ ಹಾಜರ್ಪಡಿಸಿದರೆ ನ್ಯಾಯಾಧೀಶರು ಸ್ವೀಕೃತಿ ಆದೇಶವನ್ನು ಹೊರಡಿಸುತ್ತಾರೆ. ಕೂಡಲೇ ನಿಮ್ಹಾನ್ಸ್‌ಗೆ ಸೇರಿಸಲು ಆದೇಶಿಸುತ್ತಾರೆ. ಇದರಿಂದ ಈ ರೋಗಿಗೆ ಉಚಿತ ಚಿಕಿತ್ಸೆ ನಿಮ್ಹಾನ್ಸ್‌ನಲ್ಲಿ ದೊರೆಯುತ್ತದೆ.
ಇಂತಹ ಯೋಜನೆ ಜಾರಿಯಲ್ಲಿರುವುದು ಬಹುತೇಕರಿಗೆ ಗೊತ್ತಿಲ್ಲ. ಸ್ವತಃ ಪೊಲೀಸರಿಗೇ ಗೊತ್ತಿಲ್ಲ. ಹಾಗಾಗಿಯೇ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಬೀದಿಯಲ್ಲಿ ಕೂಗಾಡುತ್ತಾ, ಗಲಾಟೆ ಮಾಡುತ್ತ ಅಥವಾ  ಅಂಡಲೆಯುತ್ತಿರುವುದು ಕಂಡುಬರುತ್ತಿದೆ. ಕೆಲವೆಡೆ ಇಂತಹವರನ್ನು ಚುಡಾಯಿಸುವುದು, ತಮಾಷೆ ಮಾಡುವುದು ಕಂಡುಬರುತ್ತದೆ. ಆದ್ದರಿಂದ ಇನ್ನುಮು ಂದೆ ಇಂತಹವರು ಎಲ್ಲೇ ಕಂಡುಬಂದರೂ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ಕೊಡಿ. ಅವರು ಈ ರೋಗಿಗಳನ್ನು ನ್ಯಾಯಾಲಯಕ್ಕೆ ಹಾಜರ್ಪಡಿಸಲು ಮನವಿ ಮಾಡಿ. ಇದರಿಂದ ಮಾನಸಿಕ ಅಸ್ವಸ್ಥರು ಬೀದಿಗಳಲ್ಲಿ ಅಲೆಯುವುದು ತಪ್ಪುತ್ತದೆ. ಉತ್ತಮ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ.
ನಗರಪಾಲಿಕೆಯವರು ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು, ಪೊಲೀಸರು ಇಂತಹ ಮಹತ್ತರ ಯೋಜನೆಗಳ ಬಗ್ಗೆ ತಾವೇ ತಿಳಿದುಕೊಂಡಿಲ್ಲ. ಜನರಲ್ಲೂ ಜಾಗೃತಿ ಮೂಡಿಸಿಲ್ಲ.
  ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆ. ಮಾನಸಿಕ ಅಸ್ಥಸ್ಥರು ಎಲ್ಲರಂತೆ ಜೀವನ ನಡೆಸಲು ಹಕ್ಕಿದೆ. ಇದನ್ನು ತಿಳಿದುಕೊಂಡು ಅವರಿಗೆ ಉಚಿತ ತಪಾಸಣೆ ನಡೆಸಲಾಗುತ್ತಿದೆ. ಅವಶ್ಯವಿದ್ದರೆ ಚಿಕಿತ್ಸೆಯನ್ನೂ ಎಲ್ಲ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊಡಿಸಲು ಅವಕಾಶವಿದೆ. ಅದರೆ ನ್ಯಾಯಾಧೀಶರು ನಿಮ್ಹಾನ್ಸ್‌ನಲ್ಲಿ ಹೆಚ್ಚಿನ ಅನುಕೂಲಗಳು, ಸೌಲಭ್ಯಗಳು ಇರುವುದರಿಂದ ಅಲ್ಲಿಗೇ ಆದೇಶ ಹೊರಡಿಸುತ್ತಾರೆ. ಈ ಸಂದರ್ಭದಲ್ಲಿ ಅವರೊಂದಿಗೆ ಆಸ್ಪತ್ರೆಯಲ್ಲಿ ಯಾರೂ ಇರಬೇಕೆಂದಿಲ್ಲ. ಆಸ್ಪತ್ರೆಗೆ ದಾಖಲಿಸಿದ ನಂತರ ಅವರು ಬಿಡುಗಡೆಯಾಗುವವರೆಗೂ ಆಸ್ಪತ್ರೆಯವರೇ ಜವಾಬ್ದಾರರಾಗಿರುತ್ತಾರೆ. ಅವರಿಗೆ ಸಲಹೆ, ಸಮಾಲೋಚನೆ ಆಯೋಜಿಸಲಾಗುತ್ತದೆ.
 ಈ ಬಗ್ಗೆ ಜನಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಜಿಲ್ಲೆಗೆ ಇತ್ತೀಚೆಗಷ್ಟೇ ಬಂದಿರುವ ನೂತನ ಜಿಲ್ಲಾ ಪ್ರಧಾನ ಮತ್ತು ಸತ್ರನ್ಯಾಯಾಧೀಶ ಭೀಮನಗೌಡ ಕೆ. ನಾಯಿಕ ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ನಗರದಲ್ಲಿ ಮಾನಸಿಕ ಅಸ್ಥಸ್ಥ ಮತ್ತು ಮಾನಸಿಕ ವಿಕಲಚೇತನರಿಗೆ ಕಾನೂನು ಸೇವೆಗಳ ಬಗ್ಗೆ ಒಂದು ದಿನ ಕಾರ್ಯಾಗಾರವನ್ನು ಮತ್ತು ಉಚಿತ ಆಪ್ತಸಮಾಲೋಚನೆ, ಚಿಕಿತ್ಸೆ ಶಿಬಿರವನ್ನು ಮೊನ್ನೆ ಏರ್ಪಡಿಸಿದ್ದರು. ಇದರ ಬಗ್ಗೆ  ಜಾಗೃತಿಯನ್ನು  ಯಾರಲ್ಲಿ ಮೂಡಿಸಬೇಕೋ ಅಂತಹವರನ್ನೇ ಈ ಶಿಬಿರಕ್ಕೆ ವಿಶೇಷವಾಗಿ ಆಹ್ವಾನಿಸಿದ್ದರು. ಅವರೆಂದರೆ, ಪೊಲೀಸ್ ಅಧಿಕಾರಿಗಳು, ಮುಖ್ಯೋಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತೆಯರು. ಹೆಸರಾಂತ ಮಾನಸಿಕ ತಜ್ಞರನ್ನು ಕರೆಯಿಸಿ ಅವರಿಂದ ಸಲಹೆ ಕೊಡಿಸಿದ್ದಾರೆ. ಇನ್ನಾದರೂ ಸಂಬಂಧಿತ ಇಲಾಖೆಯವರು ಅಥವಾ ಸಾರ್ವಜನಿಕರು ಇಂತಹವರ ಸಂಖ್ಯೆಯನ್ನು ನಗರದಲ್ಲಿ ಕಡಿಮೆ ಮಾಡಲು  ಮುಂದೆಬರಬೇಕಿದೆ.
ನಗರಗಳಲ್ಲಿ ಬೀದಿಗಳಲ್ಲಿ ತಿರುಗುತ್ತ ಇರುವ ಇಂತಹವರನ್ನು ನಿರಾಶ್ರಿತರ ಕೇಂದ್ರಕ್ಕೆ ಸೇರಿಸಲಾಗುತ್ತಿದೆ. ಅಲ್ಲಿ ಕೆಲವು ದಿನ ಅವರಿಗೆ ಉಪಚಾರ ಮಾಡಲಾಗುತ್ತದೆ. ನಂತರ ಮತ್ತೆ ಬಿಟ್ಟುಬಿಡುತ್ತಾರೆ. ಅವರು ಮತ್ತೆ ಅದೇ ರಸ್ತೆಯಲ್ಲಿ ತಿರುಗಾಡುತ್ತಾ ಇರುತ್ತಾರೆ. ಅಂದರೆ  ಈ ಕೇಂದ್ರಗಳು ಜವಾಬ್ದಾರಿಯನ್ನು ಹೊರುವುದಿಲ್ಲ. ದಾಖಲೆಯಲ್ಲಿ ಮಾತ್ರ ಇಂತಹ ರೋಗಿಗಳನ್ನು ಸೇರಿಸಿಕೊಂಡಿದ್ದನ್ನು, ಅವರಿಗೆ ಚಿಕಿತ್ಸೆ ನೀಡಿದ್ದನ್ನು ತೋರಿಸುತ್ತಾರೆ. ಆದರೆ ನಂತರ ಆ ರೋಗಿ ಗುಣಮುಖನಾದನೇ, ಎಲ್ಲಿದ್ದಾನೆ ಎನ್ನುವುದನ್ನು ಮಾತ್ರ ಎಲ್ಲಿಯೂ ಬಹಿರಂಗಪಡಿಸುವುದಿಲ್ಲ.
ಶಿವಮೊಗ್ಗದಲ್ಲಿ ಇಂತಹ ಕೇಂದ್ರಗಳು ಸುಮಾರು ಎಂಟು-ಹತ್ತರಷ್ಟಿವೆ. ಈ ಎನ್‌ಜಿಒಗಳು ಯಾವ ಮಾನಸಿಕ ರೋಗಿಯನ್ನೂ ಇಲ್ಲಿಯವರೆಗೆ ಪೊಲೀಸರ ಸಹಾಯದಿಂದ ನ್ಯಾಯಾಧೀಶರ ಬಳಿ ಕರದೊಯ್ದು ನಿಮ್ಹಾನ್ಸ್‌ಗೆ ದಾಖಲಿಸುವ ಕೆಲಸ ಮಾಡಿಲ್ಲ. ನಿರಾಶ್ರಿತರ, ಅಸ್ವಸ್ಥರ ಸೇವೆ ಎಂದು ಹೇಳಿಕೊಂಡು  ಕೆಲಸ ಮಾಡುತ್ತಿವೆ. ನಿಜಕ್ಕೂ ಮಾನಸಿಕ ಅಸ್ವಸ್ಥ ಗುಣಮುಖನಾಗಲು ಸಹಕರಿಸಿದ್ದರೆ ಅವರ ಸಂಸ್ಥೆ ಇನ್ನಷ್ಟು ಜನಪ್ರಿಯವಾಗುತ್ತಿತ್ತು.
ಸಾರ್ವಜನಿಕರಿಗೂ ಈ ಬಗ್ಗೆ ಮಾಹಿತಿ ಇಲ್ಲದ್ದರಿಂದ ಇಲ್ಲಿಯವರೆಗೆ ಮಾನಸಿಕ ಅಸ್ವಸ್ಥರು ನಗರದಲ್ಲಿ ಸಾಕಷ್ಟು ತಿರುಗಾಡುತ್ತಿರುವುದು ಕಂಡುಬರುತ್ತಿದೆ. ಇನ್ನಾದರೂ ಇಂತಹವರು ಕಂಡುಬಂದರೆ ಕೂಡಲೇ ಪೊಲೀಸರಿಗೆ ತಿಳಿಸಿ, ಅವರ ಮೂಲಕ ಆ ರೋಗಿ ಚಿಕಿತ್ಸೆಗೆ ದಾಖಲಾಗಲು ಸಹಕರಿಸುವಂತಾಗಬೇಕಿದೆ. ಆತ ಗುಣಮುಖನಾದಲ್ಲಿ ಎಂದಿನಂತೆ ತನ್ನ ಕುಟುಂಬದ ಜೊತೆ ಜೀವನ ಸಾಗಿಸಲು ಸಮರ್ಥನಾಗುತ್ತಾನೆ. ಮಾನಸಿಕ ಅಸ್ವಸ್ಥರಿಗೂ ಎಲ್ಲರಂತೆ ಸಮಾಜದಲ್ಲಿ  ಬದುಕುವ ಹಕ್ಕಿದೆ ಎನ್ನುವುದು ಇದರಿಂದ ಬಹಿರಂಗವಾಗುತ್ತದೆ. ಇಂತಹ ಉತ್ತಮ ಯೋಜನೆಯನ್ನು ಸಾರ್ವಜನಿಕರು ಅರಿತು ಮಾನಸಿಕ ಅಸ್ವಸ್ಥರ ಬಾಳು ಬೆಳಗಿಸಲು ಮುಂದಾಗಬೇಕಿದೆ.
...............................