Saturday, 25 February 2017

ಎಟಿಎಂ ನಿರ್ವಹಣೆ: ಬ್ಯಾಂಕ್‌ಗಳ ನಿರ್ಲಕ್ಷ್ಯ ಧೋರಣೆ


 ಎಮ್ಮೆ ಖರೀದಿಸಿದವರಿಗೆ ಹಗ್ಗ ತರುವುದು ಭಾರವೇ ಎಂಬ ಗಾದೆ ಮಾತಿದೆ. ಬ್ಯಾಂಕುಗಳು ಎಟಿಎಂನ್ನು ಸ್ಥಾಪಿಸಿ ಅದಕ್ಕೆ ಸರಿಯಾದ ಭದ್ರತೆ ನೀಡದೆ, ಹಣಕ್ಕೆ ರಕ್ಷಣೆ ನೀಡದೆ ಬೇಜವಾಬ್ದಾರಿ ತೋರುತ್ತಿರುವುದನ್ನು ಕಂಡಾಗ ಈ ಗಾದೆ ನೆನೆಪಾಗುತ್ತದೆ. ಬ್ಯಾಂಕುಗಳಿಗೆ ಎಟಿಎಂ ತಮ್ಮದು ಎನ್ನುವ ಕಾಳಜಿಯೇ ಇಲ್ಲ. ಅದನ್ನು ಸ್ಥಾಪಿಸುವ ಕೆಲಸವನ್ನು ಮಾತ್ರ ಮಾಡುತ್ತಿದ್ದಾರೆ. ಅವುಗಳನ್ನು ಸರಿಯಾಗಿ ನೋಡಿಕೊಳ್ಳಲು ಗನ್‌ಮ್ಯಾನ್ ನೇಮಿಸಬೇಕೆಂಬ ವಿಚಾರ ಗೊತ್ತಿದ್ದರೂ ಅದನ್ನು ಜಾರಿಮಾಡುತ್ತಿಲ್ಲ.  ನಗರದ ಸುತ್ತಮುತ್ತ ಎರಡು ವರ್ಷಗಳಲ್ಲಿ ಎಟಿಎಂ ದೋಚುವ ನಾಲ್ಕೈದು ಘಟನೆ ನಡೆದಿದೆ. ಇದರಿಂದ ಎಚ್ಚರಗೊಳ್ಳಬಹುದಿತ್ತು. ಬ್ಯಾಂಕಿನಲ್ಲಿರುವ  ಹಣಕ್ಕೆ ಮಾತ್ರ ರಕ್ಷಣೆ ಕೊಡುವ ಕೆಲಸವಾಗದೆ ಎಟಿಎಂ ಹಣಕ್ಕೂ ತಾವು ಜವಾಬ್ದಾರರು ಎನ್ನುವುದನ್ನು ಅರಿಯಬೇಕಿದೆ. ಗ್ರಾಹಕರಿಗೆ ಉತ್ತಮ ಸೇವೆ ಕೊಡುವಂತಾಗಬೇಕು.



ಶಿವಮೊಗ್ಗ: ಹಣಕಾಸು ಸಂಸ್ಥೆಗಳು ಮೊದಲ ಆದ್ಯತೆ ಕೊಡಬೇಕಿರುವುದು ಸುರಕ್ಷತೆಗೆ. ಇತ್ತೀಚಿನ ದಿನಗಳಲ್ಲಿ ಇವುಗಳಿಗೆ ಭದ್ರತೆಯೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದರಿಂದ ಅದನ್ನು ನಿರ್ಲಕ್ಷಿಸಲಾಗದು. ಸಾರ್ವಜನಿಕರಿಗೆ ಬೇಕಾದಾಗ ಹಣ ದೊರೆಯಲೆಂದು 24*7  ಸೇವೆಯಲ್ಲಿ ಎಟಿಎಂಗಳನ್ನು ತೆರೆಯಲಾಗಿದೆ. ಆದರೆ ಇವುಗಳ ಭದ್ರತೆ ಬಗ್ಗೆ ಮಾತ್ರ ಸ್ವಲ್ಪವೂ ಕಾಳಜಿ ವಹಿಸದಿರುವುದು ತೀರಾ ಬೇಸರದ ವಿಚಾರ.
ಲಕ್ಷಾಂತರ ರೂ. ಗಳನ್ನು ಎಟಿಎಂನಲ್ಲಿ ಇಟ್ಟಿದ್ದರೂ ಅದರ ಕಾವಲಿಗೆ ಶಸ್ತ್ರಸಜ್ಜಿತ ಗಾರ್ಡ್ ಇರುವುದಿಲ್ಲ. ಕೆಲವೆಡೆ ಇದ್ದರೂ ಅವರ ಕೈಲಿ ಶಸ್ತ್ರಗಳಿರುವುದಿಲ್ಲ. ಬ್ಯಾಂಕಿನವರು ದೇಶೀಯ ಶಸ್ತ್ರ ಬಳಕೆಗೆ ಅನುಮತಿ ಪಡೆದು ಖಾಸಗಿ ಸಂಸ್ಥೆಗಳಿಗೆ ಭದ್ರತೆಯ ಜವಾಬ್ದಾರಿ ವಹಿಸಬೇಕು. ಆದರೆ ಅದನ್ನು ಮರೆತಿದ್ದಾರೆ. ಇದರ ಪರಿಣಾಮವನ್ನು ಗ್ರಾಹಕರು ಎದುರಿಸುವಂತಾಗಿದೆ.
ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ರಾಷ್ಟ್ರಿಕೃತ ಬ್ಯಾಂಕೊಂದರ ಎಟಿಎಂನಿಂದ ಹಣ ಪಡೆಯಲು  ಅದೇ ಬ್ಯಾಂಕಿನ  ನೌಕರಳ ಮೇಲೆ ಹಲ್ಲೆ ನಡೆದು ಅವರ ಹಣ ದೋಚಲಾಗಿತ್ತು. ಇದು ದೇಶದಾದ್ಯಂತ ಸುದ್ದಿಯಾಗಿ ಬ್ಯಾಂಕಿನವರೆಲ್ಲ ತುರ್ತು ಸಭೆ ಸೇರಿ ಎಟಿಎಂಗಳಿಗೆ ಭದ್ರತೆ ನೀಡಲು ಸಿಸಿ ಕ್ಯಾಮರಾ ಹಾಕಲು ಆರಂಭಿಸಿದರು. ಅಂದಿನಿಂದ ಆರಂಭವಾದ ಸಿಸಿ ಕ್ಯಾಮರಾ ಅಳವಡಿಕೆ ಅಭಿಯಾನವೇನೊ ಇಂದಿಗೂ ಮುಂದುವರೆದಿದೆ. ಆದರೆ ಅದರ ನಿರ್ವಹಣೆಯನ್ನು ಮಾತ್ರ ಯಾವ ಬ್ಯಾಂಕಿನವರೂ  ಮಾಡುತ್ತಿಲ್ಲ.
ಕ್ಯಾಮರಾ ಅಳವಡಿಕೆ ಎಲ್ಲಿ ಮಾಡಬೇಕು ಎನ್ನುವುದೇ ಬಹುತೇಕ ಅಧಿಕಾರಿಗಳಿಗೆ ಗೊತ್ತಿಲ್ಲ. ಎರಡನೆಯದಾಗಿ, ಅಳವಡಿಸಿದ ಕ್ಯಾಮರಾ ಸರಿಯಾಗಿ ಕೆಲಸ ಮಾಡುತ್ತಿದೆಯೇ, ಯಾರ‌್ಯಾರು ಎಟಿಎಂಗೆ ಬಂದು ಹೋಗಿದ್ದಾರೆ, ಎನ್ನುವುದರ ಪರಿಶೀಲನೆ ನಡೆಸುತ್ತಿಲ್ಲ. ವಾರಕ್ಕೊಮ್ಮೆಯಾದರೂ ಅದನ್ನು ಗಮನಿಸುವ ತಾಳ್ಮೆ ಅವರಲ್ಲಿಲ್ಲ. ಎಟಿಎಂ ಸುತ್ತಮುತ್ತಲಿನ ಚಟುವಟಿಕೆಯನ್ನು ಅಪರೂಪಕ್ಕೆ ಪರೀಕ್ಷಿಸಬೇಕು. ಈ ಎಲ್ಲವನ್ನೂ ಬ್ಯಾಂಕರ್‌ಗಳು ಮರೆತಿದ್ದಾರೆ. ಬದಲಾಗಿ ಪೈಪೋಟಿಗೆ ಬಿದ್ದವರಂತೆ ಎಟಿಎಂ ತೆರೆಯುವುದಲ್ಲಿ ತಲ್ಲೀನವಾಗಿದ್ದಾರೆ.
ನಗರದಲ್ಲೇ ಜೆಎನ್‌ಎನ್‌ಸಿಇ ಬಳಿ ಇರುವ ಎಟಿಎಂನ್ನು ಕಳ್ಳರು ದೋಚಲು ಯತ್ನಿಸಿದ್ದ ಘಟನೆ ವರ್ಷದ ಹಿಂದೆ ನಡೆದಿತ್ತು. ಇದಾದ ನಂತರ ಅದೇ ಮಾರ್ಗದಲ್ಲಿ ಇರುವ ಚೆನ್ನಮುಂಬಾಪುರದಲ್ಲಿರುವ  ಎಟಿಎಂನ್ನು ಹೊತ್ತೊಯ್ಯಲು ಯತ್ನ ನಡೆದ ಘಟನೆ ಸಹ ಜರುಗಿತ್ತು.  ಮೂರು ವರ್ಷಗಳ ಹಿಂದೆ ಮಾಚೇನಹಳ್ಳಿ ಎಸ್‌ಬಿಎಂ ಶಾಖೆಯನ್ನು ದರೋಡೆ ಮಾಡಲಾಗಿತ್ತು. ಇವೆಲ್ಲವೂ ಕಣ್ಣೆದುರಿದ್ದರೂ ಅಧಿಕಾರಿಗಳು ಎಚ್ಚೆತ್ತಿಲ್ಲ.
ಮೊನ್ನೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಬ್ಯಾಂಕಿನವರು ಕೈಗೊಂಡ ಭದ್ರತಾ ಕ್ರಮಗಳ ಪರಿಶೀಲನೆ ನಡೆಯಿತು. ಅಚ್ಚರಿಯೆಂದರೆ, ಬ್ಯಾಂಕಿನವರ ಭದ್ರತೆ ವಿಚಾರ ಕೇಳಿ ಸ್ವತಃ ಜಿಲ್ಲಾಧಿಕಾರಿಯವರೇ ಹೌಹಾರಿದರು. ಜಿಲ್ಲೆಯಲ್ಲಿ ವಿವಿಧ 36 ಬ್ಯಾಂಕುಗಳ 234 ಎಟಿಎಂಗಳಿವೆ. ಇದರಲ್ಲಿ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕಿನದು 134 . ಕೆನರಾ ಬ್ಯಾಂಕಿನವರು ಒಂದೇ ಒಂದು ಎಟಿಎಎಂಗಳು ಭದ್ರತಾ ಸಿಬ್ಬಂದಿಯನ್ನು ನೇಮಿಸಿಲ್ಲ. ಕಾರ್ಪೊರೇಶನ್ ಬ್ಯಾಂಕಿನವರು ಕೇವಲ ಎರಡು ಎಟಿಎಂಗೆ ಮಾತ್ರ ಗಾರ್ಡ ಇಟ್ಟಿದ್ದಾರೆ. ಈ ರೀತಿ ನಿರ್ಲಕ್ಷ್ಯವನ್ನು ಜಿಲ್ಲಾಧಿಕಾರಿ ಪ್ರಶ್ನಿಸಿದಾಗ ಬ್ಯಾಂಕಿನವರ ಬಳಿ ಉತ್ತರವಿರಲಿಲ್ಲ. ಎಸ್‌ಬಿಎಂ ಮತ್ತು ಎಸ್‌ಬಿಐನದು ಎರಡನೆಯ ಅತಿ ಹೆಚ್ಚು ಎಟಿಎಂ ಜಿಲ್ಲೆಯಲ್ಲಿದೆ. ಅವರು ಗಾರ್ಡ್ ಇಟ್ಟಿರುವರಾದರೂ ಅವರಿಗೆ ಶಸ್ತ್ರ ನೀಡಿಲ್ಲ. ಆಗಾಗ ದುಷ್ಕರ್ಮಿಗಳು ಹಾಡಹಗಲೇ ಲೂಟಿ ಮಾಡುತ್ತಿರುವ ಬಗ್ಗೆ ಕೇಳುತ್ತಿದ್ದರೂ ಸುರಕ್ಷತೆಯ ಬಗ್ಗೆ ಇನ್ನೂ ಜಾಗೃತರಾಗದಿರುವುದಕ್ಕೆ ಅವರು ತೀರಾ ವಿಷಾದ ವ್ಯಕ್ತಪಡಿಸಿದರು.
ಬ್ಯಾಂಕ್ ಶಾಖೆಗಳಲ್ಲಿ  ಸೈರನ್ ಮತ್ತು ಅಗ್ನಿ ನಿರೋಧಕ ಮಿನಿಸಿಲಿಂಡರ್ ಇಟ್ಟಿರುತ್ತಾರೆ. ಅವು ಸುಸ್ಥ್ತಿತಿಯಲ್ಲಿವೆಯೇ, ಕೆಲಸ ಮಾಡುತ್ತಿವೆಯೇ, ಸೈರನ್ ಕರೆಂಟ್ ಇಲ್ಲದ ವೇಳೆ ಕೆಲಸ ಮಾಡುತ್ತದೆಯೇ ಎನ್ನುವುದನ್ನು ಅವರು ಚೆಕ್ ಮಾಡುತ್ತಿಲ್ಲ. ಅಣಕು ಕಾರ್ಯಾಚರಣೆ ಮಾಡುವ ಮೂಲಕ ಹೊರಜಗತ್ತಿಗೆ ತಾವೆಷ್ಟು ಭದ್ರರಿದ್ದೇವೆ ಎನ್ನುವುದನ್ನು ತೋರಿಸಬೇಕಿತ್ತು. ಮಿನಿಸಿಲಿಂಡರ್‌ಗಳ ಅವಧಿ ಮುಗಿದಿದ್ದರೂ  ಶೋ ಪೀಸ್ ಆಗಿ ಜೋತುಬಿದ್ದಿವೆ. ಅವುಗಳನ್ನು ಬಳಸುವ ರೀತಿಯೂ ಎಷ್ಟೋ ಸಿಬ್ಬಂದಿಗಳಿಗೆ ಗೊತ್ತಿಲ್ಲ. ಇವೆಲ್ಲವುಗಳ ತರಬೇತಿಯನ್ನು ಸಿಬ್ಬಂದಿಗಳಿಗೆ ನೀಡುವ ಮೂಲಕ ಎಚ್ಚರದ ಸ್ಥಿತಿಯಲ್ಲಿ ಬ್ಯಾಂಕುಗಳು ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಇದೆ.
ಬ್ಯಾಂಕ್ ಶಾಖೆಯವರು ಸಮೀಪದ ಪೊಲೀಸ್ ಠಾಣೆಯ ಅಧಿಕಾರಿಯ ನಂಬರ್ ಇಟ್ಟುಕೊಂಡಿರಬೇಕು. ಆಗಾಗ ಅವರೊಂದಿಗೆ ಚರ್ಚಿಸುತ್ತಿರಬೇಕು. ಸ್ನೇಹಿತರಂತೆ ಸಭೆ ನಡೆೆಸುತ್ತಿದ್ದರೆ ಇನ್ನಷ್ಟು ಕಾಳಜಿಯನ್ನು ಪೊಲೀಸರು ವಹಿಸುತ್ತಾರೆ.
ಇನ್ನಾದರೂ ಬ್ಯಾಂಕಿನವರು ಭದ್ರತೆಗೆ ಹೆಚ್ಚಿನ ಆದ್ಯತೆ ಕೊಡಬೇಕಿದೆ. ಎಟಿಎಂಗಳನ್ನು ಸುಸ್ಥಿತಿಯಲ್ಲಿಡುವತ್ತ ಮುಂದಾಗಬೇಕಿದೆ. ಎಷ್ಟೋ ಎಟಿಎಂಗಳು ನೋಟು ನಿಷೇಧದ ನಂತರ ಬಾಗಿಲನ್ನೇ ತೆರೆದಿಲ್ಲ. ಅವುಗಳಿಗೆ ಸಕಾಲದಲ್ಲಿ ಹಣ ತುಂಬಿಸದೆ ನೋ ಕ್ಯಾಶ್ ಎಂಬ ನಾಮಫಲಕ ತೂಗುಹಾಕಲಾಗಿದೆ. ಕೆಲವು ಎಟಿಎಂಗಳಂತೂ ಓಬೇರಾಯನ ಕಾಲದ್ದಾಗಿದ್ದು, ಅವುಗಳ ಕೀ ಸಹಿತ ವಿವಿಧ ಭಾಗಗಳು ಕೆಟ್ಟು ಹೋಗಿದ್ದರೂ ದುರಸ್ತಿಪಡಿಸುವ ಕೆಲಸ ನಡೆಯುತ್ತಿಲ್ಲ. ಎಟಿಎಂಗಳ ಬಾಗಿಲು ಸರಿಇಲ್ಲ. ಒಳಗೆ ಒಬ್ಬೊಬ್ಬರನ್ನೇ ಬಿಡುವ ಪದ್ದತಿ ಇಲ್ಲ. ಹಣ ತೆಗೆದುಕೊಂಡು ಹೊರಬರುವ ಗ್ರಾಹಕನಿಗೆ ಭದ್ರತೆ ಇಲ್ಲವೇ ಇಲ್ಲ.
ಇವೆಲ್ಲವೂ ಗ್ರಾಹಕನಿಗೆ ಬ್ಯಾಂಕುಗಳು ನೀಡುತ್ತಿರುವ ಸೇವೆಗಳು! ಇತ್ತೀಚೆಗೆ ಎಟಿಎಂಗಳ ಮೇಲೆಯೇ ಗ್ರಾಹಕರ ಅವಲಂಬನೆ ಅಧಿಕವಾಗತೊಡಗಿದೆ. ಆದರೂ ಗ್ರಾಹಕರ ಹಣದ ಬಗ್ಗೆ ಬೇಜವಾಬ್ದಾರಿ ತೋರುತ್ತಿರುವುದು ಖಂಡನಿಯ. ಒಟ್ಟಿನಲ್ಲಿ, ಎಟಿಎಂ ನಿರ್ವಹಣೆ ಮತ್ತು ಭದ್ರತೆ ಬಗ್ಗೆ ಬ್ಯಾಂಕುಗಳು ಅತಿ ನಿರ್ಲಕ್ಷ್ಯ ತೋರುತ್ತಿವೆ ಎಂದರೆ ತಪ್ಪೇನಿಲ್ಲ.  
...............................

Friday, 17 February 2017

ಕುಮಾರ್  ರಾಜಕೀಯ ಭವಿಷ್ಯ ಬಿಜೆಪಿಯಲ್ಲಿದೆಯೇ?





  ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಬಿಜೆಪಿ ಸೇರುವ ಹವಣಿಕೆಯಲ್ಲಿದ್ದಾರೆ. ಸೊರಬದಲ್ಲಿ ತಾನು ಸೋತು, ಕಾಂಗ್ರೆಸ್ ಸಂಘಟಿಸದೆ ಅದು ನೆಲಕಚ್ಚುವಂತೆ ಮಾಡಿ, ಸಚಿವ ಕಾಗೋಡು ಮತ್ತು ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ ಅವರಿಗೇ ಸೆಡ್ಡು ಹೊಡೆದಿದ್ದರು. ಇದರಿಂದ ಕಾಂಗ್ರೆಸ್ಸಿನಲ್ಲಿ ತಾನು ಮೂಲೆಗುಂಪಾಗುತ್ತಿರುವುದನ್ನು ಅರಿತು ಮುಂದಿನ ರಾಜಕೀಯ ಭವಿಷ್ಯಕ್ಕೆ ನೆಲೆ ಕಂಡುಕೊಳ್ಳುವತ್ತ ಹೊರಟಿದ್ದಾರೆ. ಕೇವಲ ಅಪ್ಪನ ನಾಮಬಲದಿಂದಲೇ ಮುಂದೆ ಬಂದು, ತಮ್ಮ ವರ್ಚಸ್ಸನ್ನು ಬೆಳೆಸಿಕೊಳ್ಳದವರು ಯಾವ ಪಕ್ಷದಲ್ಲಿದ್ದರೂ ಆ ಪಕ್ಷಕ್ಕೆ ಹಾನಿ ನಿಶ್ಚಿತ. ಇಂತಹವರಿಂದ ವಿಶೇಷ ಕೊಡುಗೆಯನ್ನು ಯಾರೂ ನಿರೀಕ್ಷಿಸಬೇಕಿಲ್ಲ.
 


 ’ಕುಮಾರ್ ಪಕ್ಷದಲ್ಲಿದ್ದುಕೊಂಡೇ ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಮಾಡಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಪರವಾಗಿ ತಾವು ಕೆಲಸ ಮಾಡಲಿಲ್ಲವೆಂದು ಅವರೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡದವರು ಕಾಂಗ್ರೆಸ್‌ಗೆ ಅಗತ್ಯವಿಲ್ಲ. ಅವರು ವಿಫಲ ನಾಯಕರಾಗಿದ್ದಾರೆ. ಸೊರಬದಲ್ಲಿ ಪಕ್ಷವನ್ನು ಸ್ವಂತ ಬಲದಿಂದ ಕಟ್ಟುವ ಕೆಲಸವನ್ನು ಮಾಡಲೇ ಇಲ್ಲ. ಅವರಿಂದ ಪಕ್ಷಕ್ಕೆ ಆದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಇತ್ತೀಚಿನ ಅವರ ವರ್ತನೆ ಗಮನಿಸಿದರೆ, ಪಕ್ಷದ ಸಂಘಟನೆಗೆ ಅವರಿಂದ ಸಾಕಷ್ಟು ಧಕ್ಕೆಯಾಗಿದೆ’. 
- ಮಂಜುನಾಥ ಭಂಡಾರಿ

ಶಿವಮೊಗ್ಗ:  ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆ. ತಮ್ಮ ರಾಜಕೀಯ ಗುರು ಎಸ್.ಎಂ.ಕೃಷ್ಣ ಇತ್ತೀಚೆಗೆ ಕಾಂಗ್ರೆಸ್ ತೊರೆದಿರುವುದರಿಂದ ಈ ಮೊದಲೇ ಕುಮಾರ್ ಬಗ್ಗೆಯೂ ಇದೇ ಭವಿಷ್ಯ ನುಡಿಯಲಾಗಿತ್ತು. ಈಗ ಅದು ನಿಜವಾಗುತ್ತಿದೆ. ಆದರೆ ಕುಮಾರ್  ಕಾಂಗ್ರೆಸ್ ತೊರೆಯುವುದರಿಂದ ಸೊರಬದಲ್ಲಿ ನೆಲಕಚ್ಚಿದ್ದ ಕಾಂಗ್ರೆಸ್‌ಗೆ ಪೆಟ್ಟು ಬೀಳುವುದು ನಿಶ್ಚಿತ. ಜೊತೆಗೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಕುಟುಂಬದವರೆಲ್ಲ ಆ ಪಕ್ಷದಿಂದ ದೂರಸರಿದಂತಾಗುತ್ತದೆ.
ಸೊರಬದಲ್ಲಿ ಕಾಂಗ್ರೆಸ್‌ಗೆ ಕಳೆದ ಎರಡು- ಮೂರು ಚುನಾವಣೆಯಿಂದೀಚೆಗೆ ಕುಮಾರ್ ಅವರಿಂದ ಏನೂ ಲಾಭವಾಗಿರಲಿಲ್ಲ. ಜಿಪಂ ಇರಲಿ, ತಾಪಂ ಇರಲಿ, ಎಲ್ಲದರಲ್ಲೂ ಕಾಂಗ್ರೆಸ್ ಪರಾಭವಗೊಂಡಿದೆ. ಇದಕ್ಕೆ ಸಹೋದರರ ಮಧ್ಯೆ ಇದ್ದ ದ್ವೇಷ ಸಹ ಕಾರಣ ಎನ್ನುವುದು ಒಂದೆಡೆಯಾದರೆ, ಹಾಲಿ ಶಾಸಕ ಮಧು ಬಂಗಾರಪ್ಪ ವರ್ಚಸ್ಸು ಸದ್ಯ ಚೆನ್ನಾಗಿದೆ. ಕಾಂಗ್ರೆಸ್‌ನಂತೆಯೇ ಬಿಜೆಪಿ ಸ್ಥ್ತಿತಿಯೂ ಅಲ್ಲಿದೆ. ಜಿಪಂನಲ್ಲಿ ಒಂದು ಸ್ಥಾನ ಮಾತ್ರ ಗೆದ್ದಿದೆ. ಹರತಾಳು ಹಾಲಪ್ಪ ಮತ್ತು ಕುಮಾರ್ ಬಂಗಾರಪ್ಪ ಇಬ್ಬರು ವಿಫಲ ನಾಯಕರಾಗಿ ಅವರವರ ಪಕ್ಷದಲ್ಲಿದ್ದರು.
ಕುಮಾರ್‌ಗೆ ಸೊರಬದಲ್ಲಿ ಕೆಲವು ನಾಯಕರನ್ನು ಬಿಟ್ಟರೆ ಕಾರ್ಯಕರ್ತರ ಬೆಂಬಲ ತೀರಾ ಕಡಿಮೆ ಇತ್ತು. ಯಾವಾಗ ಬಂಗಾರಪ್ಪ ಕಾಂಗ್ರೆಸ್ಸನ್ನು ಬಿಟ್ಟರೋ ಅಂದಿನಿಂದಲೇ ಕುಮಾರ್ ರಾಜಕೀಯ ಜೀವನವೂ  ಅಧೋಗತಿಯಲ್ಲಿತ್ತು. ಬಂಗಾರಪ್ಪ ನಂತರ ಬಿಜೆಪಿ ಸೇರಿದಾಗ ಕುಮಾರ್ ಸಹ ಬಿಜೆಪಿ ಹೊಸ್ತಿಲು ತುಳಿದು ಕೇವಲ 21 ದಿನದಲ್ಲಿ ಮರಳಿ ಕಾಂಗ್ರೆಸ್‌ಗೆ ಬಂದಿದ್ದರು. ಆದರೆ ಅವರ ಭವಿಷ್ಯವೂ ಉಜ್ವಲವಾಗಲಿಲ್ಲ. ಇಂದಿಗೂ ಅವರು ರಾಜಕೀಯದಲ್ಲಿ ಮೇಲೇಳಲೇ ಇಲ್ಲ.
ಬಂಗಾರಪ್ಪ ನಾಮಬಲ:
ಬಂಗಾರಪ್ಪ ನಂತರ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಸ್ವಂತ ಬಲಕ್ಕಿಂತ ತಂದೆ ಎಸ್.ಬಂಗಾರಪ್ಪ ಹೆಸರು ಮುಂದಿಟ್ಟುಕೊಂಡು ರಾಜಕಾರಣ ಮಾಡಿದ್ದೇ ಅಧಿಕ.  ಏಕೆಂದರೆ ಇಬ್ಬರಿಗೂ  ಆಗಲೇ ಕ್ಷೇತ್ರದಲ್ಲಿ ವರ್ಚಸ್ಸು, ನೆಲೆ ಇಲ್ಲವಾಗಿತ್ತು. ಇಬ್ಬರ ಮಧ್ಯೆಯ ಆಸ್ತಿ ಜಗಳವೂ ತಾರಕಕ್ಕೇರಿತ್ತು. ಆದರೆ ನಂತರ ಕಳೆದ ಚುನಾವಣೆಯಲ್ಲಿ ಬಂಗಾರಪ್ಪ ನಾಮಬಲದಿಂದಲೇ ಮಧು ಗೆದ್ದುಬಂದರು. ಈ ಮೂಲಕ ಅವರು ನೆಲೆಕಂಡುಕೊಂಡರು. ಆದರೆ ಇಂದಿಗೂ ಅವರು ಜಪಿಸುವುದು ಬಂಗಾರಪ್ಪ ಹೆಸರನ್ನು. ಏಕೆಂದರೆ ಸೊರಬದ ಜನರಲ್ಲಿ ಇಂದಿಗೂ ಬಂಗಾರಪ್ಪ ನೆಲೆಸಿದ್ದಾರೆ.
  ಜಿಲ್ಲೆಯಲ್ಲಿ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ವಿರುದ್ದ ತಮ್ಮ ತಾಲೂಕಿನ ಆಶ್ರಯ ಸಮಿತಿಯ ನೇಮಕದಲ್ಲಾದ ಕೆಲವು ವೈರುಧ್ಯಗಳ ಸಂಬಂಧ ಜಗಳ ತೆಗೆದು ಸದಾ ಟೀಕಿಸತೊಡಗಿದರು. ಈ ಮಧ್ಯೆ ಮಧು ಅವರು ಕಾಗೋಡುಗೆ ಹತ್ತಿರವಾಗತೊಡಗಿದರು. ಇದರಿಂದ ಆಕ್ರೋಶಗೊಂಡ ಕುಮಾರ್, ಸೊರಬಕ್ಕೆ ಬಂದಾಗಲೆಲ್ಲ ವಾಗ್ಬಾಣವನ್ನೇ ಹರಿಯಬಿಟ್ಟರು. ಈ ಸಂಬಂಧ ಜಿಲ್ಲಾ ಕಾಂಗ್ರೆಸ್ ಎಷ್ಟೇ ಎಚ್ಚರಿಕೆ ಕೊಟ್ಟರೂ ಅದನ್ನು ನಿರ್ಲಕ್ಷಿಸಿಯೇ ಮುನ್ನಡೆದರು. ಇದಕ್ಕೂ ಮುನ್ನ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಗೋಡು ತನ್ನ ಪರ ನಿಲ್ಲದೆ ಮಧು ಪರ ಕೆಲಸ ಮಾಡಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದರು. ಈ ಎರಡು ಪ್ರಮುಖ ಕಾರಣದಿಂದ ಕುಮಾರ್ ಬಿಜೆಪಿ ಸೇರಬಹುದೆಂಬ ಮಾತು ಕೇಳಿಬಂದಿತ್ತು. ಆದರೆ ಈಗ ನಿಜವಾಗತೊಡಗಿದೆ.
ಮೂರನೆಯದಾಗಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ  ಮೂರನೆಯ ಸ್ಥಾನಕ್ಕೆ ಅವರು ತೃಪ್ತಿ ಪಡಬೇಕಾಯಿತು. ಇದರ ನಂತರ ಸೊರಬದಲ್ಲಿ ಪಕ್ಷ ಕಟ್ಟುವ ಕೆಲಸವನ್ನು ಮಾಡಲೇ ಇಲ್ಲ.  ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ನಿರಂತರವಾಗಿ ಕಡೆಗಣಿಸುತ್ತಾ ಬಂದರು. ಇದರಿಂದ ಸೊರಬದಲ್ಲಿ ತಾ.ಪಂ., ಜಿ.ಪಂ. ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷ ಹೀನಾಯ ಸೋಲುಂಡಿತು ಎನ್ನುವ ಬಲವಾದ ಆರೋಪ ಇದೆ. ತಾಲೂಕಲ್ಲಿ ಪಕ್ಷಕ್ಕೆ ನೆಲೆ ಇಲ್ಲದಿರುವುದು, ಜಿಲ್ಲಾ ಸಚಿವ ಮತ್ತು ಕಾಂಗ್ರೆಸ್ ನಾಯಕರ ವಿರೋಧವನ್ನು ಮೊದಲೇ ಕಟ್ಟಿಕೊಂಡಿದ್ದು, ಮುಂದೆ ತನಗೆ ಟಿಕೆಟ್ ಕೈತಪ್ಪಲು ಕಾರಣವಾಗುತ್ತದೆ ಎಂದರಿತು  ಪಕ್ಷ ಬಿಡುವ ಯೋಚನೆ ಮಾಡಿದ್ದಾರೆಂದು ವಿಶ್ಲೇಷಿಸಬಹುದಾಗಿದೆ.
ನಾಲ್ಕನೆಯದಾಗಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲು ಇನ್ನಿಲ್ಲದ ಹರಸಾಹಸ ಮಾಡಿದ್ದ ಕುಮಾರ್‌ಗೆ ಕೊಗೂ ಟಿಕೆಟ್ ಸಿಗಲೇ ಇಲ್ಲ. ಜಿಲ್ಲೆಯ ಬಹುತೇಕ ನಾಯಕರು ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ ಪರ ನಿಂತಿದ್ದರು. ಇದರಿಂದ ಟಿಕೆಟ್ ಭಂಡಾರಿ ಪಾಲಾದಾಗ ಕುಮಾರ್ ಬಂಡಾಯ ಸಾರಿದ್ದರು. ನಂತರ ಸುಮ್ಮನಾದರೂ ಗುಟ್ಟಾಗಿ ಪಕ್ಷ ವಿರೋಧಿ ಕೆಲಸ ಮಾಡಿದ್ದು ಬಹಿರಂಗವಾಯಿತು. ಈ ಎಲ್ಲ ಕಾರಣಗಳಿಂದ ಅವರು ವಿಶ್ವಾಸ ಕಳೆದುಕೊಂಡಿದ್ದರು. ತನ್ನ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುತ್ತ ಈಗ ಬಿಜೆಪಿ ಪ್ರವೇಶಿಸುವ ಹಂತಕ್ಕೆ ಬಂದು ನಿಂತಿದ್ದಾರೆ.


ವಕೀಲ ಲಕ್ಷ್ಮೀಕಾಂತ್ ಚಿಮನೂರು  ಕಾಂಗ್ರೆಸ್ ಅಭ್ಯರ್ಥಿ?
 ಸೊರಬ ವಿಧಾನಸಭಾ ಕ್ಷೇತ್ರದಿಂದ ಶತಾಯಗತಾಯ ಕುಮಾರ್ ಬಂಗಾರಪ್ಪಗೆ ಟಿಕೆಟ್ ತಪ್ಪಿಸಲು ಕಾಂಗ್ರೆಸ್‌ನಲ್ಲಿರುವ ಅವರ ವಿರೋಧಿ ಪಾಳೇಯ ಸಿದ್ಧತೆ ನಡೆಸಿತ್ತು. ವಿಶೇಷವಾಗಿ ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ, ಕುಮಾರ್ ಬಂಗಾರಪ್ಪಗೆ ಟಾಂಗ್ ನೀಡುವ ಉದ್ದೇಶದಿಂದಲೇ ಸೊರಬ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಿ ಕಾರ್ಯ ಚಟುವಟಿಕೆ ನಡೆಸುತ್ತಿದ್ದರು.
ಸೊರಬ ಕ್ಷೇತ್ರದ ಯುವಕ, ವಕೀಲ, ಈಡಿಗ ಸಮುದಾಯಕ್ಕೆ ಸೇರಿದ ಲಕ್ಷ್ಮೀಕಾಂತ್ ಚಿಮನೂರ್‌ಗೆ ಟಿಕೆಟ್ ಕೊಡಿಸುವ ಇರಾದೆ ಹೊಂದಿದ್ದರು. ಲಕ್ಷ್ಮೀಕಾಂತ್ ಚಿಮನೂರು ಕೂಡ ಕ್ಷೇತ್ರದಾದ್ಯಂತ ಈಗಾಗಲೇ ಓಡಾಡುತ್ತಿದ್ದಾರೆ. ಈ ನಡುವೆ ಕುಮಾರ್ ಬಂಗಾರಪ್ಪರವರು ಕಾಂಗ್ರೆಸ್ ತೊರೆಯುವುದು ಖಚಿತವಾಗಿದೆ. ಇದರಿಂದ ಮಂಜುನಾಥ ಭಂಡಾರಿ ಕ್ಯಾಂಪ್‌ನಲ್ಲಿ ಕಾಣಿಸಿಕೊಂಡಿರುವ ಲಕ್ಷ್ಮೀಕಾಂತ್‌ಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ.
ಲಕ್ಷ್ಮೀಕಾಂತ್ ಅವರ ಅಜ್ಜ ಚಿಮನೂರು ಬಂಗಾರಪ್ಪ ಅವರ ಹೆಸರು ಸೊರಬ ರಾಜಕೀಯದಲ್ಲಿ ಚಿರಪರಿಚಿತ. ಅವರು ಮಾಜಿ ಸಿಎಂ ಬಂಗಾರಪ್ಪ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು. ಜೊತೆಗೆ ಹಲವು ಬಾರಿ ಅವರ ವರ್ತನೆಯ ವಿರುದ್ದ ಸಿಡಿದೆದ್ದಿದ್ದರು. 1994 ರಲ್ಲಿ ಅವರ ವಿರುದ್ದವೇ ಚುನಾವಣಾ ಕಣಕ್ಕೆ ಪ್ರವೇಶಿಸಿದ್ದರು. ಈಗ ಅವರ ಮೊಮ್ಮಗ ಲಕ್ಷ್ಮೀಕಾಂತ  ವಿಧಾನಸಭಾ ಚುನಾವಣಾ ರಂಗ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
 .............................

Wednesday, 15 February 2017

ಕಲೆ(ಳೆ) ಕಳೆದುಕೊಂಡ ಶಶಿಕಲಾ

  ತ. ನಾಡಿನ ಮತದಾರರು  ಅಮ್ಮಾ ಎಂದರೆ  ಅದೇನು ಭಯಭಕ್ತಿ ತೋರಿದರೋ ಗೊತ್ತಿಲ್ಲ. ಜಯಾ ಅವರನ್ನು 6 ಬಾರಿ ಮುಖ್ಯಮಂತ್ರಿ ಮಾಡಿದರು. ಅದನ್ನೇ ಮುಂದಿಟ್ಟುಕೊಂಡು ಅವರ ಆಪ್ತ ಸ್ನೇಹಿತೆ ಶಶಿಕಲಾ ಮುಖ್ಯಮಂತ್ರಿಯಾಗುವಂತೆ ಅಲ್ಲಿನ ಭಟ್ಟಂಗಿ ಶಾಸಕರು ಯತ್ನಿಸಿದರು. ಇದಕ್ಕೆ ಅಕ್ರಮ ಆಸ್ತಿ ಹಗರಣ ತಡೆಯೊಡ್ಡಿತ್ತು. ತೀರ್ಪು ತನ್ನ ಪರವಿರಲಿದೆ ಎಂದರಿತು ಶಾಸಕರನ್ನು ಕೂಡಿಹಾಕುವ ಕೆಲಸ ಮಾಡಿದರು. ಆದರೆ ನಿನ್ನೆ ಬಂದ ತೀರ್ಪು ಶಶಿಕಲಾ ಅವರ ಕಳೆಯನ್ನೇ ಮಾಯಮಾಡಿದೆ. ಅಕ್ರಮ ಆಸ್ತಿ ಸಂಪಾದನೆಯ ಫಲ ಜೈಲುವಾಸಕ್ಕೆ ಅಣಿಮಾಡಿಕೊಟ್ಟಿದೆ. ಜನಬೆಂಬಲವಿಲ್ಲದಿದ್ದರೂ ಅಧಿಕಾರದ ಗದ್ದುಗೆ ಏರಲು ಮುಂದಾಗಿದ್ದ, ರಾಜಕೀಯವೇ ಗೊತ್ತಿಲ್ಲದ ಶಶಿಕಲಾ ಇನ್ನು ಪರಪ್ಪನ ಅಗ್ರಹಾರದಲ್ಲಿ 4 ವರ್ಷ ಕಳೆಯುವಂತಾಗಿದೆ. 


ಮೊನ್ನೆಯವರೆಗೆ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ತಾನೇ ಎಂದುಕೊಂಡಿದ್ದ ಶಶಿಕಲಾ ಎದುರು ಈಗ ಕತ್ತಲೆ ಕೋಣೆ ಕಾಣುತ್ತಿದೆ. ಮಲಗಿದರೂ ನಿದ್ದೆ ಬಾರದಂತಾಗಿದೆ. ಎಷ್ಟು ನೀರು ಕುಡಿದರೂ ಬಾಯಾರಿಕೆ ನೀಗುತ್ತಿಲ್ಲ. ಒಟ್ಟಿನಲ್ಲಿ ಕಂಗಾಲಾಗಿದ್ದಾರೆ. ಅಕ್ರಮ ಅಸ್ತಿ ಸಂಬಂಧ ನಿನ್ನೆ ತೀರ್ಪು ಬರುತಿದ್ದಂತೆ ಕಣ್ಣಹನಿ ಧಾರಾಕಾರವಾಗಿ ಬಿದ್ದಿದೆ. ಅದನ್ನು ನಿಲ್ಲಿಸಲು ಅವರಿಂದಲೂ ಆಗಿಲ್ಲ.
 ತಾನು ಸಿಂಹದ ಮರಿ. ಸಿಂಹದ ಹಿಂದೆ ಸಿಂಹವೇ ಬರುತ್ತದೆ. ಸಿಂಹದ ಸ್ಥಾನವನ್ನು ಸಿಂಹವೇ ತುಂಬಬೇಕು- ಎರಡು ದಿನದ ಹಿಂದೆಯಷ್ಟೇ ಎಐಎಡಿಎಂಕೆಯ ತನ್ನ ಬೆಂಬಲಿಗ ಶಾಸಕರ ಸಭೆಯಲ್ಲಿ ಶಶಿಕಲಾ ಹೇಳಿದ ಮಾತಿದು. ತಾನೇ ಸಿಎಂ ಆಗುವೆ ಎಂಬ ಅಷ್ಟೊಂದು ದೃಢ ವಿಶ್ವಾಸ, ಅಚಲ ನಂಬಿಕೆ ಅವರಲ್ಲಿತ್ತು. ಆದರೆ ಸುಪ್ರೀಂ ಕೋರ್ಟು ನಿನ್ನೆ ಬೆಳಿಗ್ಗೆ ತೀರ್ಪನ್ನು ವಿರುದ್ದವಾಗಿ ಪ್ರಕಟಿಸಿತೋ, ಅಲ್ಲಿಗೆ ಶಶಿಯ ಕಲೆ(ಳೆ) ಮಾಯವಾಗಿದೆ.  ಕಲೆಯೇ ಇಲ್ಲದ ಶಶಿಯಂತೆ ಕಾಣಲಾರಂಸಿದ್ದಾರೆ.
ಇಷ್ಟಕ್ಕೂ ಶಶಿಕಲಾ ಮಾಡಿದ ಆಸ್ತಿಯೆಷ್ಟು, ಅವು ಎಲ್ಲೆಲ್ಲಿ ಇವೆ, ಅವುಗಳ ಮೌಲ್ಯವೇನು ಎನ್ನುವುದು ಬಹುತೇಕ ಜನರಿಗೆ ಗೊತ್ತಿಲ್ಲ. ಬೆಂಗಳೂರಿನ ವಿಶೇಷ ನ್ಯಾಯಾಲಯ ಇವರ ಇಡಿ ಅಕ್ರಮ ಆಸ್ತಿ ಸಂಪಾದನೆಯ ಮಾಹಿತಿಯನ್ನೇ ನೀಡಿದೆ. ಜಯಲಲಿತಾ 1991ರಲ್ಲಿ ಪ್ರಥಮ ಬಾರಿಗೆ ಮುಖ್ಯಮಂತ್ರಿಯಾದಾಗ ಗಳಿಸಿದ ಆಸ್ತಿ ಲೆಕ್ಕಕ್ಕಿಲ್ಲದಷ್ಟು. ಅವರ ಹಿಂದೆ ಆಗ ನೆರಳಾಗಿ ನಿಂತ ಶಶಿಕಲಾ ಅಂದಿನ ಅಕ್ರಮ ಆಸ್ತಿಯಲ್ಲಿ ಪಾಲು ಗಿಟ್ಟಿಸಿದ್ದಕ್ಕೆ ಈಗ ಜೈಲು ಸೇರುವಂತಾಗಿದೆ.
ಸುಮಾರು 3 ಸಾವಿರ ಎಕರೆ ಭೂಮಿ ಇವರ ಹೆಸರಲ್ಲಿದೆ. ಈ ಭೂಮಿ ಕೇವಲ ತಮಿಳುನಾಡಿನಲ್ಲಿ ಮಾತ್ರವಲ್ಲ, ಕರ್ನಾಟಕ ಮತ್ತು ವಿದೇಶದಲ್ಲೂ ಇದೆ. ಇದರ ಇಂದಿನ ಬೆಲೆ ಎಣಿಕೆಗೆ ನಿಲುಕದಷ್ಟಿದೆ. ಸಾವಿರ ಸಾವಿರ ಕೋಟಿ ಎನ್ನಬಹುದು. ಅಂದು ಅವರು ಗಳಿಸಿದ ಹಣವನ್ನು ಸೂಟ್‌ಕೇಸ್ ಮತ್ತು ಚೀಲದಲ್ಲಿ ಕಟ್ಟಿ ಬ್ಯಾಂಕಿಗೆ ಸಾಗಿಸುತ್ತಿದ್ದರಂತೆ. ಇದಕ್ಕಾಗಿಯೇ ಆಳು ಇಟ್ಟುಕೊಂಡಿದ್ದರಂತೆ. ಶಶಿಕಲಾ ಸರಳ ವ್ಯಕ್ತಿತ್ವದವಳು, ಜಯಾ ಆಪ್ತ್ತೆ, ಅದೇ ರೀತಿ ಶಶಿಕಲಾ ಹೊರತಾಗಿ ಯಾರಿಗೂ ತಿಳಿಯದಂತೆ ಆಸ್ತಿ ಮಾಡಿಕೊಂಡಿದ್ದಾರೆ. ಈ ಹಣ ಎಲ್ಲಿಂದ ಬಂತು, ಈಗ ಎಲ್ಲಿದೆ, ಯಾರ ಹೆಸರಲ್ಲಿದೆ ಎನ್ನುವ ಮಾಹಿತಿ ಬಿಡುಗಡೆಯಾಗಿಲ್ಲ.
1991ರಲ್ಲಿಯೇ ತನ್ನ ಚಾಲಾಕಿತನ ಮತ್ತು ಬುದ್ಧಿವಂತಿಕೆಯನ್ನು ತೋರಿಸಿದ ಹೆಣ್ಣು ಶಶಿಕಲಾ. ಆಗ ಮಾಡಿದ ಅಕ್ರಮ ಆಸ್ತಿ ಈಗ ತಕ್ಕ ಶಾಸ್ತಿ ನೀಡಿದೆ. ಜಯಾ ಅವರ ಬೇಕು-ಬೇಡಗಳನ್ನೆಲ್ಲ ಚೆನ್ನಾಗಿಯೇ ನೋಡಿಕೊಳ್ಳುತ್ತ, ವಿಶ್ವಾಸ ಗಳಿಸಿದ ಶಶಿಕಲಾ, ತನ್ನ ಸಾಮ್ರ್ರಾಜ್ಯವನ್ನು ಆಗಲೇ ಕಟ್ಟಿಕೊಳ್ಳಲಾರಂಭಿಸಿದ್ದಳು. ಅಂದು ಅಕ್ರಮವಾಗಿ ಸಂಪಾದಿಸಿದ ಹಣವನ್ನು ಸುಮಾರು 32 ಕಂಪನಿಗಳಲ್ಲಿ, 2 ಹೊಟೆಲ್‌ಗಳ ಮೇಲೆ  ಹೂಡಿದ್ದರು. ಒಂದೇ ದಿನ 10 ಕಂಪನಿಯನ್ನು ನೊಂದಣಿ ಮಾಡಿಸಿದ್ದರು. ಆದರೆ ಈ ಯಾವ ಕಂಪನಿಗೂ ಆದಾಯವಿರಲಿಲ್ಲ. ಅಕ್ರಮ ಹಣ ವರ್ಗಾವಣೆಯೊಂದೇ ಇವರ ಕೆಲಸವಾಗಿತ್ತು.  ಕಂಪನಿಯ ಈ ಅಕ್ರಮ ಹಣದಿಂದಲೇ ರಾಶಿಗಟ್ಟಲೆ ಅಕ್ರಮ ಆಸ್ತಿ ಖರೀದಿಸಿದರು. ಇದೆಲ್ಲದರ ಪರಿಣಾಮ ಈಗ ಶಿಕ್ಷೆ ಎದುರಿಸುವಂತಾಗಿದೆ.  
ಮುಳುವಾದ ಸಾಕುಮಗನ ಮದುವೆ:
ಜಯಾಗೆ ಅಕ್ರಮ ಆಸ್ತಿ  ವಿವಾದ ತಗುಲಿಕೊಂಡಿದ್ದೇ ತನ್ನ ಸಾಕುಮಗ, ಶಶಿಕಲಾ ಅವರ ಪುತ್ರ ಸುಧಾಕರನ್ ಅವರ ಅದ್ದೂರಿಯ ಮದುವೆ ಮಾಡಿದ್ದರಿಂದ. ಈ ಮದುವೆಗೆ ಸುಮಾರು 100 ಕೋಟಿ ರೂ. ವನ್ನು 1995ರಲ್ಲಿ ಅವರು ವ್ಯಯಿಸಿದ್ದರು. ಆದರೆ ಅಂದು ಅವರು ಸಿಎಂ, ಹಾಗಾಗಿ ಯಾರೂ ಪ್ರಶ್ನಿಸುವಂತಿರಲಿಲ್ಲ. ಆದರೂ ಮದುವೆ ನಂತರ ಅಂದು ಜನತಾ ಪಕ್ಷದಲ್ಲಿದ್ದ ಸುಬ್ರಮಣಿಯನ್ ಸ್ವಾಮಿ ರಾಜ್ಯಪಾಲರಿಗೆ ದೂರು ನೀಡಿದ್ದರು. 1996ರಲ್ಲಿ ಜಯಾ ಅಧಿಕಾರದಿಂದ ಇಳಿದು ಡಿಎಂಕೆ ಅಧಿಕಾರಕ್ಕೇರಿತು. ಅಂದು ಮುಖ್ಯಮಂತ್ರಿಯಾದ ಕರುಣಾನಿಧಿ ಇದರ ಬಗ್ಗೆ ದಾಖಲೆ ಕಲೆಹಾಕತೊಡಗಿ, ಅದರಲ್ಲಿ ಯಶಸ್ವಿಯೂ ಆದರು. ಫಲವಾಗಿ ಅಂಟಿಕೊಂಡಿದ್ದೇ ಈ ಹಗರಣ.
1997ರಲ್ಲಿ ತನಿಖೆ ಆರಂಭವಾಯಿತು. ಅಕ್ರಮ ಆಸ್ತಿ ಮಾಡಿದ ಬಗ್ಗೆ ದಾಖಲೆ ಸಹ ಕೈಸೇರಿದ್ದರಿಂದ ಜಯಾ ಅವರ ಪೊಯಸ್ ಗಾರ್ಡನ್ ಮೇಲೆ ಭ್ರಷ್ಟಾಚಾರ  ನಿಗ್ರಹ ದಳದವರು ದಾಳಿ ಮಾಡಿದರು. ಅಲ್ಲಿ ಅವರು ಕಂಡಿದ್ದು ನಿಬ್ಬೆರಗಾಗಿ ಹೋಗುವಷ್ಟು ಆಸ್ತಿ.  ಇಡೀ ತಮಿಳುನಾಡು ಮಾತ್ರವಲ್ಲ, ದೇಶವೇ ಆ ಸಂಪತ್ತು ಕಂಡು ದಂಗಾಗಿ ಹೋಗಿತ್ತು. 25 ಕೆಜಿ ಚಿನ್ನ, 800 ಕೆಜಿ ಬೆಳ್ಳ್ಳಿ, 750 ಜೊತೆ ಚಪ್ಪಲಿ, 10, 500 ಸೀರೆಗಳು  91 ವಿದೇಶಿ ವಾಚುಗಳು, 41 ಎಸಿ. ಇವು ಸಿಕ್ಕ ಕೆಲವು ವಸ್ತುಗಳು. ತ, ನಾಡಿನಲ್ಲಿ ಪ್ರಕರಣದ ವಿಚಾರಣೆ ನಡೆಸುವುದು ಸೂಕ್ತವಲ್ಲ, ಜಯಾ ಪ್ರಭಾವ ಬೀರಬಹುದು ಎಂದು ಮನವಿ ಸಲ್ಲಿಕೆಯಾಗಿದ್ದರಿಂದ ವಿಚಾರಣೆ ಕರ್ನಾಟಕಕ್ಕೆ ಬಂದಿತು.  ಈಗ ಇವೆಲ್ಲವೂ ಕರ್ನಾಟಕ ಸರಕಾರದ ವಶದಲ್ಲಿವೆ.
ಈ ಪ್ರಕರಣವನ್ನು ಕರ್ನಾಟಕ ಹೈಕೋರ್ಟಿನಲ್ಲಿ ವಿಚಾರಣೆ ನಡೆಸಲಾಯಿತು. ಅಲ್ಲಿ ಅವರಿಗೆ ಮೊದಲು  4 ವರ್ಷ ಶಿಕ್ಷೆ, 10 ಕೋಟಿ ರೂ. ದಂಡ ವಿಧಿಸಲಾಗಿತ್ತು. ಈ 10 ಕೋಟಿಯಲ್ಲಿ 5 ಕೋಟಿಯನ್ನು ಕರ್ನಾಟಕ ಸರಕಾರಕ್ಕೆ ನ್ಯಾಯಾಲಯದ ವೆಚ್ಚ ಎಂದು ಪಾವತಿಸಲು ಸೂಚಿಸಲಾಗಿತ್ತು. ತೀರ್ಪಿನಿಂದ ಕೆಲವು ದಿನ ಸೆರೆವಾಸ ಅನುಭವಿಸಿ ಜಾಮೀನಿನಲ್ಲಿ ಹೊರಬಂದು ಮೇಲ್ಮನವಿ ಸಲ್ಲಿಸಿದರು. ಮೇಲ್ಮನವಿ ವಿಚಾರಣೆ ನಡೆದಾಗ ಜಯಾ ಕೇಸು ಖುಲಾಸೆಗೊಳಿಸಿ ಆದೇಶ ಹೊರಡಿಸಲಾಗಿತ್ತು.
ಆದರೆ ಛಲಬಿಡದ ಕರ್ನಾಟಕ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿತು. ಅಲ್ಲಿ ನಡೆದ ವಿಚಾರಣೆಯ ಪ್ರಕಾರ ತೀರ್ಪು ನಿನ್ನೆ ಬಂದಿದೆ.  ಕರ್ನಾಟಕ ಹೈಕೋರ್ಟಿನ ತೀರ್ಪನ್ನು ಅದು ಎತ್ತಿ ಹಿಡಿದಿದೆ. ಎರಡು ವರ್ಷಗಳ ಹಿಂದೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜಯಾ ಜೊತೆಗೆ ಕೆಲವು ದಿನ ಸೆರೆವಾಸ ಅನುಭವಿಸಿದ್ದ ಶಶಿಕಲಾ ಮತ್ತೆ ಈಗ ಮಗ ಸುಧಾಕರನ್ ಮತ್ತು ಇನ್ನೊಬ್ಬ ಪಾಲುದಾರ ಇಳವರಸಿ ಜೊತೆ ಅಲ್ಲಿಗೆ ಬರುವಂತಾಗಿದೆ.
ಎಷ್ಟೇ ಶ್ರೀಮಂತಿಕೆ ಇರಲಿ, ಶಾಸಕರ ಬೆಂಬಲವಿರಲಿ, ಸತ್ಯ ಕೊನೆಗೂ ಗೆಲ್ಲುತ್ತದೆ. ಆದರೆ ಸತ್ಯ ವಿಳಂಬ ಮತ್ತು ಕಠೋರವಾಗಿರುತ್ತದೆ ಎನ್ನುವುದು ಈ ತೀರ್ಪಿನಿಂದ ಮತ್ತೆ ಸಾಬೀತಾಗಿದೆ.
................................

Monday, 13 February 2017

ಎಐಎಡಿಎಂಕೆ ಹಡಗು ಮುಳುಗದೆ ಸಾಗೀತೇ?
ಚಿನ್ನಮ್ಮಗೆ ಜೈಲು, ಸೆಲ್ವಂ ಸ್ಮೈಲು


ತಮಿಳುನಾಡಿನಲ್ಲಿ ಹಾಲಿ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಇಲ್ಲಿಯವರೆಗೆ ಮಾಡಿದ್ದು ಭರತನ ಕೆಲಸ. ರಾಮನ ಪಾದುಕೆಯನ್ನು ಇಟ್ಟುಕೊಂಡು ಭರತ ರಾಜ್ಯವಾಳಿದಂತೆ ಅಮ್ಮನ ಹೆಸರಿನಲ್ಲಿ ಆಳ್ವಿಕೆ ನಡೆಸಿದರು. ಒಂದು ವೇಳೆ ಸಿಎಂ ಆಗಿ ಮತ್ತೆ ಮುಂದುವರೆದರೆ ಅವರ ನಾಯಕತ್ವದ ಗುಣ, ಸಾಮರ್ಥ್ಯ ಪರೀಕ್ಷೆಗೆ ಒಳಪಡಲಿದೆ. ಎಐಎಡಿಎಂಕೆ ಎಂಬ ರಥ ಇನ್ನೂ 4 ವರ್ಷ ಬಲಿಷ್ಠವಾಗಿ ಸಾಗುವ ಮಾರ್ಗ ತುಂಬಾ ಕಠಿಣವಿದೆ. ಸುಪ್ರೀಂ ಕೋರ್ಟ್ ಶಶಿಕಲಾ ಅವರನ್ನು ಅಕ್ರಮ ಆಸ್ತಿ  ಪ್ರಕರಣದಲ್ಲಿ ತಪ್ಪಿತಸ್ಥೆ ಎಂದು ಇಂದು ಘೋಷಿಸಿದ ಹಿನ್ನೆಲೆಯಲ್ಲಿ ಪನ್ನೀರಸೆಲ್ವಂಗೆ ಮುಖ್ಯಮಂತ್ರಿ ಸ್ಥಾನ ನೀಡದೆ ತನ್ನ ಕಟ್ಟಾ ಬೆಂಬಲಿಗರಾದ ಕೆ.ಎ. ಸೆಂಗೊಟ್ಟೈಯನ್ ಅಥವಾ ಬಲಿಷ್ಠ ಮಂತ್ರಿ ಎಂದೇ ಹೆಸರಾದ ಕೆ. ಪಳನಿಸ್ವಾಮಿ ಅವರನ್ನು ಚೆಕ್‌ಮೇಟ್ ಮಾಡಲಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದರಿಂದ ಪಕ್ಷ ಎರಡು ಹೋಳಾಗುವ ಸಾಧ್ಯತೆ ದಟ್ಟವಾಗಿ ಕಾಣಿಸುತ್ತಿದೆ. ಪನ್ನೀರಸೆಲ್ವಂಗೆ ಪಕ್ಷದಲ್ಲಿ ಹೆಚ್ಚಿನ ಬೆಂಬಲವಿದೆ. ಜೊತೆಗೆ ಸ್ವತಃ ಜನನಾಯಕರಾಗಿರುವುದು ಪ್ಲಸ್ ಪಾಯಿಂಟ್. 


ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಮೃತರಾಗಿ ಎರಡೇ ತಿಂಗಳಿಗೆ ಎಐಎಡಿಎಂಕೆ ಪಕ್ಷ ಹೋಳಾಗುವ ಸ್ಥಿತಿ ತಲುಪಿದೆ. ಜಯಾ ಪಕ್ಷದ ಅಧ್ಯಕೆಯಾಗಿದ್ದಾಗ ಯಾರೊಬ್ಬರೂ  ತುಟಿಪಿಟಕ್ಕೆನ್ನದೆ ಬಾಯಿಗೆ ಬೀಗ ಜಡಿದುಕೊಂಡವರಂತೆ ಕುಳಿತಿದ್ದರು. ಜಯಾ ನಿಧನಾನಂತರ ಅವರ ಆಪ್ತ ಗೆಳತಿ ಶಶಿಕಲಾ ಪಕ್ಷದ ನೇತೃತ್ವವನ್ನು ವಹಿಸಿಕೊಂಡು ಮುಖ್ಯಮಂತ್ರಿಯಾಗಲು ಯತ್ನಿಸಿದ್ದರಿಂದ ಭಿನ್ನಮತಕ್ಕೆ ಚಾಲನೆ ಸಿಕ್ಕಿದೆ. ಇದರಿಂದ ಪಕ್ಷ ಇಬ್ಭಾಗವಾಗುವ ಸಂಭವವಿದೆ.
‘ತಮಿಳುನಾಡಿನ ಅಧಿಕಾರ ಗದ್ದುಗೆಯ ಕಿತ್ತಾಟದ ಮುಂದಿನ ಬೆಳವಣಿಗೆ ಕುತೂಹಲಕಾರಿಯಾಗಿದೆ. ಏಕೆಂದರೆ, ಶಶಿಕಲಾ ಕೂಡ ಜಯಾ ಅವರ ಭ್ರಷ್ಟಾಚಾರದಲ್ಲಿ ಪಾಲುದಾರಳಾದ್ದರಿಂದ ಅವರ ಕುರಿತಾದ ಅಂತಿಮ ತೀರ್ಪು ಇಂದು ಪ್ರಕಟವಾಗಿದ್ದು, ಶಶಿಕಲಾ ದೋಷಿ ಎಂದು ಸುಪ್ರೀಂ ಕೋರ್ಟ್ ಘೋಷಿಸಿದೆ. ಇದಕ್ಕಾಗಿ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 10 ಕೋಟಿ ದಂಡವನ್ನು ವಿಧಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ 10 ವರ್ಷಗಳ ಕಾಲ ಶಶಿಕಲಾ ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ ಎಂಬುದು ಗಮನಾರ್ಹ ಅಂಶ.
ಇನ್ನು, 9 ತಿಂಗಳ ಹಿಂದೆಯಷ್ಟೇ ಭರ್ಜರಿ ಬಹುಮತದೊಂದಿಗೆ ಎಐಎಡಿಎಂಕೆಯನ್ನು ಮತ್ತೆ ಅಧಿಕಾರಕ್ಕೆ ಜಯಲಲಿತಾ ತಂದಿದ್ದರು. ಆದರೆ ಇದಾದ ನಾಲ್ಕೇ ತಿಂಗಳಿಗೆ ಅಮ್ಮಾ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಎರಡು ತಿಂಗಳ ಹಿಂದೆ ನಿಧನರಾದರು. ಇದಾದ ಬಳಿಕ ಶಶಿಕಲಾ ಮತ್ತು ಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ಮಧ್ಯೆ ಪಕ್ಷದ ಮುಖ್ಯಸ್ಥ ಮತ್ತು ಸಿಎಂ ಸ್ಥಾನಕ್ಕಾಗಿ ಕಿತ್ತಾಟ ಆರಂಭವಾಗಿದೆ.
ಸುಪ್ರೀಂ ತೀರ್ಪಿನ ಹಿನ್ನೆಲೆಯ ಸದ್ಯದ ಸ್ಥಿತಿಯಲ್ಲಿ ಸೆಲ್ವಂ ಜಯಶಾಲಿಯಾಗುವ ಲಕ್ಷಣ ಕಂಡುಬರುತ್ತಿದೆ. ಬೀಸುತ್ತಿರುವ ಗಾಳಿಯನ್ನು ಗಮನಿಸಿದರೆ ಅವರು ನಗೆ ಚೆಲ್ಲುವ ಲಕ್ಷಣವೇ ಹೆಚ್ಚು ಕಂಡುಬರುತ್ತಿದೆ. ಹೀಗಾದರೆ ಅವರು ಪಕ್ಷದ ಉನ್ನತ ಸ್ಥಾನ ಮತ್ತು ಮುಖ್ಯಮಂತ್ರಿ ಗಾದಿಯನ್ನು ವಹಿಸಿಕೊಳ್ಳುವರು. ದುರಂತದ ಸಂಗತಿಯೆಂದರೆ, ಪಕ್ಷ ಹೋಳಾಗುವುದು ನಿಶ್ಚಿತ. ಪಕ್ಷದಲ್ಲಿ ತನ್ನ ಅಸಿತ್ವ ಉಳಿಸಿಕೊಳ್ಳಲು ಮತ್ತು ನಾಯಕಿಯಾಗಿ ಹೊರಹೊಮ್ಮಲು ಶಶಿಕಲಾ ಈ ಕೃತ್ಯ ನಡೆಸುವ ಸಾಧ್ಯತೆ ದಟ್ಟವಾಗಿದೆ.
ಸೆಲ್ವಂಗೆ ಸದ್ಯ ಬಲ ಬಂದರೂ ಮುಂದಿನ ದಿನಗಳಲ್ಲಿ ಪಕ್ಷದೊಳಗೆ ಬೆದರಿಕೆಗಳು ಬರಬಹುದಾಗಿದೆ. ಪಕ್ಷವನ್ನು ಬಲಹೀನಗೊಳಿಸುವ ಕೆಲಸವನ್ನು ಶಶಿಕಲಾ ಮಾಡಬಹುದು. ಸೆಲ್ವಂ ಉತ್ತಮ ಮನುಷ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೃದು ಮಾತಿನ, ಜನಪರ ನಾಯಕ ಎಂದೇ ಖ್ಯಾತಿವೆತ್ತವರು. ರಾಜ್ಯದ ಜನರ ಮನ ಗೆದ್ದವರು ಕೂಡ. ಆದ್ದರಿಂದಲೇ ಅಮ್ಮಾ ತಾನು ಹಲವಾರು ಕೇಸುಗಳ ಸಂಬಂಧ ನ್ಯಾಯಾಲಯದಲ್ಲಿ ಹೋರಾಡುವಾಗ ಸೆಲ್ವಂ ಅವರನ್ನೇ ಸಿಎಂ ಆಗಿ ಮಾಡಿದ್ದರು.
ಒಟ್ಟಿನಲ್ಲಿ ಸದ್ಯದ ಮಟ್ಟಿಗೆ ಹೇಳುವುದಾದರೆ, ಸೆಲ್ವಂ ಗೆದ್ದು, ಶಶಿಕಲಾ ಸೋತಿದ್ದರೂ ಪಕ್ಷಕ್ಕೆ ಮಾತ್ರ ಕಂಟಕ ತಪ್ಪಿದ್ದಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿನ ಬೆಳವಣಿಗೆಗಳನ್ನು ನೋಡುವುದಾದರೆ ಈ ಇಬ್ಬರ ಕದನದಿಂದ ಪಕ್ಷ ಹೋಳಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಸೆಲ್ವಂ ಮುಖ್ಯಮಂತ್ರಿಯಾದರೂ ಪಕ್ಷದಲ್ಲಿ ಎದ್ದಿರುವ ಬಣವನ್ನು ನಿಯಂತ್ರಿಸುವುದು ಕಷ್ಟವಾಗಬಹುದು. ಏಕೆಂದರೆ ಶಶಿಕಲಾ ಸುಮ್ಮನೆ ಕೂಡ್ರುವ ಜಾಯಮಾನದವರಲ್ಲ. ಈಗ ಜೈಲಿನಲ್ಲಿದ್ದರೂ ಪರೋಕ್ಷ ಅಧಿಕಾರಕ್ಕಾಗಿ ತನ್ನ ಬೆಂಬಲಿಗರನ್ನು ಎತ್ತಿಕಟ್ಟುವ ಕೆಲಸವನ್ನು ಮಾಡಬಹುದು. ಆಕೆಯ ಪರವಿರುವ ಶಾಸಕರು ಸಿಎಂಗೆ ಅಸಹಕಾರ ತೋರಬಹುದು.
ತಮಿಳುನಾಡು ಮೊದಲಿನಿಂದಲೂ ಕೇಂದ್ರ ಸರಕಾರದೊಂದಿಗೆ ಚೌಕಾಸಿ ವ್ಯವಹಾರವನ್ನು ಮಾಡಿಕೊಂಡು ಬಂದ ನಾಯಕರನ್ನೇ ಕಂಡಿದೆ. ದೆಹಲಿಯಲ್ಲಿ ಅಧಿಕಾರರೂಢಸ್ಥರನ್ನು ತಮ್ಮತ್ತ ಒಲಿಸಿಕೊಳ್ಳುವ ಕಲೆ ಅಲ್ಲಿನ ನಾಯಕರಿಗೆ ಕರಗತವಾಗಿದೆ. ಒಲಿಯದಿದ್ದರೆ ಬ್ಲ್ಯಾಕ್‌ಮೇಲ್ ತಂತ್ರ ನಡೆಸಿ ಸರಕಾರವನ್ನೇ ಉರುಳಿಸಿದ ಉದಾಹರಣೆ ಸಹ ಇದೆ. ಸೆಲ್ವಂಗೆ ಈ ಚೌಕಾಸಿ ವ್ಯವಹಾರ ಚತುರತೆ ಗೊತ್ತಿಲ್ಲ. ಆದರೆ ಅತ್ಯಂತ ವಿಧೇಯ ವ್ಯಕ್ತಿ. ಇದರಿಂದ ಕೇಂದ್ರದ ಜೊತೆ ವ್ಯವಹರಿಸುವಾಗ ತೊಂದರೆಯಾಗಬಹುದು. ಅವರಲ್ಲಿ ಪಕ್ಷವನ್ನು ಸಮರ್ಥವಾಗಿ ನಡೆಸುವ, ಅದಕ್ಕೆ ಹೊಸತನವನ್ನು ತರುವ ಶಕ್ತಿ ಇದೆ. ಜಯಾ ಆಗಲಿ, ಎಂಜಿಆರ್ ಆಗಲಿ, ಪಕ್ಷದೊಳಗೆ ಹೊಸ ನಾಯಕರನ್ನು ಬೆಳೆಸುವ ಕೆಲಸ ಮಾಡಲಿಲ್ಲ. ಸೆಲ್ವಂ ಹೊಸ ನಾಯಕರನ್ನು ಬೆಳೆಸುವ ಮನೋಭಾವದವರು. ಪಕ್ಷ ಈ ಹಿಂದೆ ಮಾಡಿದ ತಪ್ಪನ್ನೇ ಅವರು ಮಾಡಲಿಕ್ಕಿಲ್ಲ.
ಸೆಲ್ವಂ ಅವರು ಜಯಾ ಅವರಿಂದ ಪಡೆದಷ್ಟು ಸಹಕಾರ, ಬೆಂಬಲವನ್ನು ಆ ಪಕ್ಷದ ಯಾವ ನಾಯಕರೂ ಪಡೆದಿಲ್ಲ. ಇದರಿಂದಾಗಿಯೇ ಅವರು ಸಿಂಹಾಸನ ಏರಲು ಸಾಧ್ಯವಾಯಿತು. ಆದರೆ ಜಯಾ ಸಾವಿನ ನಂತರದ ಕಂಬನಿಯ ಅಲೆಯನ್ನು ಅವರು ಸರಿಯಾಗಿ ಬಳಸಿಕೊಳ್ಳಲಿಲ್ಲ. ಇದಾಗಿದ್ದರೆ ಶಶಿಕಲಾ ಮುಂದೆ ಬರುತ್ತಿರಲಿಲ್ಲ. ಪಕ್ಷದಲ್ಲಿ ಪ್ರಜಾಪ್ರಭುತ್ವವನ್ನು ತಂದ ಏಕೈಕ ನಾಯಕ ಸೆಲ್ವಂ. ಮುಕ್ತತೆಗೆ ಬ್ರೇಕ್ ಹಾಕಿ, ಭಟ್ಟಂಗಿತನಕ್ಕೆ ಇತಿಶ್ರೀ ಹಾಡಿದ್ದಾರೆ.
ಸದ್ಯ ಸೆಲ್ವಂಗೆ ಇರುವ ದೊಡ್ಡ ಬೆದರಿಕೆ ಎಂದರೆ ಶಶಿಕಲಾ. ಸಿಎಂ ಆಗಿ ಮುಂದುವರೆದರೂ ಒಂದಲ್ಲ ಒಂದು ದಿನ ಎಐಎಡಿಎಂಕೆಯನ್ನು ಇಬ್ಭಾಗ ಮಾಡುವ ಚಾಣಾಕ್ಷತೆ ಶಶಿಕಲಾ ಅವರಲ್ಲಿದೆ. ಕೋರ್ಟ್ ಕೇಸಿನಲ್ಲಿ ಆರೋಪಿ ಎಂದಾಗಿದ್ದರೂ ಸೆಲ್ವಂಗೆ ಮಾತ್ರ ಕಷ್ಟ ತಪ್ಪಿದ್ದಲ್ಲ. ಸದ್ಯ ವಿಧಾನಸಭೆ ಚುನಾವಣೆ ಇಲ್ಲವಾದರೂ ಈ ಎಲ್ಲ ಬೆಳವಣಿಗೆಗಳು ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರಲಿವೆ.
ಸೆಲ್ವಂ ಸ್ವತಂತ್ರರಾಗಿ ಇಲ್ಲಿಯವರೆಗೆ ಕಾರ್ಯನಿರ್ವಹಿಸಿಲ್ಲ. ಅವರು ಮಾಡಿದ್ದು ಭರತನ ಕೆಲಸ. ರಾಮನ ಪಾದುಕೆಯನ್ನು ಇಟ್ಟುಕೊಂಡು ಭರತ ರಾಜ್ಯವಾಳಿದ ಕಥೆಯಂತೆ ಅಮ್ಮನ ಹೆಸರಿನಲ್ಲಿ ಆಳ್ವಿಕೆ ನಡೆಸಿದರು. ಒಂದು ವೇಳೆ ಸಿಎಂ ಆಗಿ ಮುಂದುವರೆದರೆ ಅವರ ನಾಯಕತ್ವದ ಗುಣ, ಸಾಮರ್ಥ್ಯ ಪರೀಕ್ಷೆಗೆ ಒಳಪಡಲಿದೆ.
ಒಂದಂತೂ ಸ್ಪಷ್ಟ: ಎಐಎಡಿಎಂಕೆಯ ಮುಖ್ಯಸ್ಥರು ಯಾರೇ ಆಗಲಿ, ಮುಂದಿನ ಚುನಾವಣೆಯವರೆಗೆ ಪಕ್ಷ ಸುರಕ್ಷಿತವಾಗಿ ಮುಳುಗದೆ ಸಾಗಲಿದೆ ಎನ್ನುವುದು ಮಾತ್ರ ಸುಳ್ಳು.
,,,,,,,,,,,,,,,,,,,,,,,,



ಭೂಗತಲೋಕಕ್ಕೆ ಕಾಲಿಡುತ್ತಿರುವ ಮರಿರೌಡಿಗಳು

 ಸುಂದರ ಕನಸನ್ನು ಕಂಡು ಅದಕ್ಕೊಂದು ರೂಪು ಕೊಟ್ಟು ಬದುಕನ್ನು ಕಟ್ಟಿಕೊಂಡು  ಅದರಲ್ಲಿ ವಿಹರಿಸಬೇಕಾದ ಕೆಲವು ಯುವಕರು ಯಾವುದೋ ಆಮಿಷ ಅಥವಾ ಆಕರ್ಷಣೆಗೆ ಒಳಗಾಗಿ ಕೈಯ್ಯಾರೆ ಜೀವವನ್ನು ಹೊಸಕಿಹಾಕಿಕೊಳ್ಳುವಂತಹ ಸನ್ನಿವೇಶವನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ರೌಡಿಯಾಗಿ ಘರ್ಜಿಸಿ, ಆರ್ಭಟಿಸಿದವರೆಲ್ಲ ಮಣ್ಣಾಗಿ ಹೋಗಿದ್ದಾರೆ ಎನ್ನುವುದು ಗೊತ್ತಿದ್ದರೂ ಮತ್ತದೇ ದಾರಿಯಲ್ಲಿ ಸಾಗಲು ಹಾತೊರೆಯುತ್ತಿರುವುದು ವಿಚಿತ್ರವಾಗಿದೆ.  


  ರಕ್ತ ಕೊಡುವುದು, ರಕ್ತ ಪಡೆಯುವುದು ಎರಡೂ ನನ್ನ ರಕ್ತದಲ್ಲೇ ಬಂದಿದೆ (ಖೂನ್ ಲೇನಾ, ಖೂನ್ ದೇನಾ, ಮೇರೆ ಖೂನ್ ಮೇ ಆಯಾ ಹೈ) ಎಂಬ ಮಾತು ಭೂಗತ ಲೋಕದಲ್ಲಿದೆ. ಇದನ್ನು ಅರಿತುಕೊಂಡೇ ಮರಿರೌಡಿಗಳು  ಕಾಲಿಡುತ್ತಿದ್ದಾರೆ. ಭೂಗತ ಲೋಕದಲ್ಲೂ ರಕ್ತಕ್ಕಾಗಿ ರಕ್ತ ಎಂಬ ಮಾತಿರುವುದು ತಿಳಿದುಬರುತ್ತದೆ. ಕೈಯಲ್ಲಿ ಮಚ್ಚು, ಲಾಂಗ್, ಕತ್ತಿ ಕೊಟ್ಟು ಬಹುಶಃ ಹೇಳಿಕೊಡುವುದು ಇದೇ ಮಾತನ್ನು. ಆದ್ದರಿಂದ ಯುದ್ಧರಂಗಕ್ಕೆ ನುಗ್ಗಿದ ವೀರಯೋಧ ಹೆದರದೆ ಸೆಣೆಸುವಂತೆ ಇಲ್ಲಿಯೂ  ಜೀವದ ಹಂಗು ತೊರೆದು ಕಾಳಗ ನಡೆಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಚ್ಚು, ಲಾಂಗ್ ಬದಲು ಪಿಸ್ತೂಲುಗಳು ಕಾಲಿಟ್ಟಿದ್ದರೂ ಶಿವಮೊಗ್ಗದಲ್ಲಿ ಪುಡಿರೌಡಿಗಳ ಕೈಯಲ್ಲಿ ಮಚ್ಚುಗಳೇ ವಿಜೃಂಭಿಸುತ್ತಿವೆ.
ರೌಡಿಯಾಗುವ ಬಯಕೆ ಏಕೆ ಉಂಟಾಗುತ್ತದೆ ಎಂಬ ವಿಷಯವನ್ನು ಕೆದಕುತ್ತ ಹೋದಂತೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ ಮತು ನೆನೆಪಿಗೆ ಬರುತ್ತದೆ. ದ್ವೇಷ ಮೊದಲ ಕಾರಣವಾದರೆ, ರೌಡಿಯಾಗಿ ಜನಪ್ರಿಯತೆ, ಹೆಸರು ಗಳಿಸುವುದು, ಡಾನ್ ಆಗುವುದು, ತನ್ನ  ಕೆಳಗೆ ಹತ್ತಾರು ಜನರನ್ನು ಇಟ್ಟುಕೊಳ್ಳುವುದು ಎರಡನೆಯ ಕಾರಣ.
ಇದರಲ್ಲಿ ಹಣ ಮಾಡುವ ಉದ್ದೇಶ ಎಲ್ಲೋ ಸ್ವಲ್ಪ ಪ್ರಮಾಣದಲ್ಲಿ ಮಾತ್ರ. ತನ್ನ ಮಿತ್ರನನ್ನೋ, ಸಹೋದರನನ್ನೋ, ತಂದೆಯನ್ನೋ, ಬಂಧುವನ್ನೋ ಒಬ್ಬ ರೌಡಿ ಕೊಂದರೆ, ಅದಕ್ಕೆ ಪ್ರತಿಯಾಗಿ ಆತನ ಪ್ರಾಣ ತೆಗೆಯುವ ಶಪಥ ಅಂದೇ ನಡೆಯುತ್ತದೆಯಂತೆ. ಇದಕ್ಕಾಗಿ ತಮ್ಮೆಲ್ಲ ಕಾರ್ಯಚಟುವಟಿಕೆ ಆರಂಭಿಸುತ್ತಾರೆ. ಕೊಲೆ ಮಾಡಿದವನು ಜೈಲಿಗೆ ಹೋದ ನಂತರ ಆತ ಹೊರಬರುವುದನ್ನೇ ಕಾಯುತ್ತಿರುತ್ತಾರೆ. ನಂತರ ಆತ ಎಲ್ಲೆಲ್ಲಿ ಹೋಗುತ್ತಾನೆ, ಏನು ವ್ಯವಹಾರ ಮಾಡುತ್ತಾನೆ, ಆತನ ದಿನಚರಿ ಏನೆನ್ನುವುದನ್ನು ಪಟ್ಟಿ ಮಾಡುತ್ತಾರೆ.
 ತಮ್ಮ ಹಿಂಬಾಲಕರನ್ನು ಬಿಟ್ಟು ಆತನನನ್ನು ಫಾಲೋ ಮಾಡಿಸುತ್ತಾರೆ. ಒಂದು ದಿನ ಇದರ ಫೈನಲ್ ಕೆಲಸ ನಡೆಯುತ್ತದೆ. ಜನನಿಬಿಡವಿರಲಿ, ಜನವಿರಳವಿರಲಿ, ಎದುರಾಳಿ ಕಣ್ಣಿಗೆ ಬಿದ್ದಕ್ಷಣ ಹಿಂದೆ ಮುಂದೆ ನೋಡದೆ, ಬೆನ್ನಟ್ಟಿಯಾದರೂ ತರಕಾರಿ ಕೊಚ್ಚುವಂತೆ ಕೊಚ್ಚಿ ಬಿಸಾಡುತ್ತಾರೆ. ಹಾಗಂತ ಕೊಲೆ ಮಾಡುವವರಿಗೆ ತಾವೂ ಸಹ ಜೈಲಿಗೆ ಹೋಗುವುದು ನಿಶ್ಚಿತ ಎನ್ನುವುದು ಖಾತರಿಯಾಗಿರುತ್ತದೆ. ಮತ್ತೆ ಕೆಲವೇ ದಿನಗಳಲ್ಲಿ ಜಾಮೀನಿನಿನಲ್ಲಿ ಹೊರಬರುತ್ತೇವೆ ಎನ್ನುವುದೂ ಅಹ ಅಷ್ಟೇ ಚೆನ್ನಾಗಿ ಗೊತ್ತಿರುತ್ತದೆ.
ಹಿಗೆ ರೌಡಿಸಂ ಹಾವು ಏಣಿ ಆಟದಂತೆ ಆತನನ್ನು ಈತ, ಈತನನ್ನು ಆತ ಕೊಲ್ಲುತ್ತಲೇ ಮುಂದುವರೆಯುತ್ತದೆ. ಇವರಿಗೆ ಶಿಷ್ಯರ ಸಾಲು ಬೆಳೆಯುತ್ತಾರೆ. ತಾನು ಜೈಲಿಗೆ ಹೋದರೂ ಶಿಷ್ಯರು ಅದನ್ನು ಮುಂದುವರೆಸುವಂತೆ ಮಾಡುತ್ತಾರೆ. ಹೊಡೆದಾಟ, ಕೊಲೆ ಶಿಷ್ಯರ ಮೂಲಕ ಫುಲ್ ಸ್ಟಾಪ್ ಇಲ್ಲದಂತೆ ನಡೆಯುತ್ತಲೇ ಇರುತ್ತದೆ. ಕೆಲವು ಸಲ ಬೇಕೆಂತಲೇ ಕಾಲು ಕೆರೆದು ಜಗಳ ತೆಗೆದು ಅದನ್ನೇ ಕೊಲೆಗೆ ಕಾರಣವನ್ನಾಗಿ ಮಾಡುತ್ತಾರೆ. ಜೈಲು ಸೇರಿದ ನಂತರ ಅಲ್ಲಿ ನಡೆಯುವ ಮಾತುಕತೆಗಳೂ ಸಹ ಇದೇ ರೀತಿಯದ್ದು.  ಅಲ್ಲಿಯೇ ತನ್ನಂತೆ ಕೊಲೆಗಾರರರ ಪರಿಚಯವಾಗುತ್ತದೆ. ಇನ್ನೊಂದು ಕೊಲೆಗೆ ಸ್ಕೆಚ್ ಶುರುವಾಗುತ್ತದೆ. ಅದಕ್ಕಾಗಿ ತಯಾರಿ, ಹಣ ಹೊಂದಾಣಿಕೆ ನಡೆಯುತ್ತದೆ. ಇತ್ತೀಚೆಗಂತೂ ಜೈಲಿನಲ್ಲಿ ಕುಳಿತೇ ಮೊಬೈಲ್ ಮೂಲಕ ಎಲ್ಲ ವ್ಯವಹಾರ ಮಾಡಿಸುತ್ತಾರೆ. ಕೊಲೆ ಮಾಡಿದ ನಂತರ ಎಲ್ಲಿಗೆ ಹೋಗಿ ಅಡಗಬೇಕು ಎಂಬ ಸಿದ್ಧತೆ ಮೊದಲೇ ನಿಗದಿಯಾಗಿರುತ್ತದೆ. ಕೆಲವೊಮ್ಮೆ ಸುಪಾರಿ ಕೊಡುವವರು ಇದಕ್ಕೆಲ್ಲ ಮೊದಲೇ ತಯಾರಿ ಮಾಡುತ್ತಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಈ ಹಿಂದೆ ಹೇಳಿದ್ದರು.
 ಶಿವಮೊಗ್ಗದಲ್ಲಿ ಈಗ ರೌಡಿಸಂ ಮತ್ತೆ ಮೀಸೆ ಚಿಗುರದ ಕೆಲವು ಯುವಕರ ಕೈಲಿದೆ. ನಾಲ್ಕಾರು ದೊಡ್ಡ ರೌಡಿಗಳು ಇಂತಹ ಯುವಕರನ್ನು ಇಟ್ಟುಕೊಂಡು ರೌಡಿಸಂ ನಡೆಸುತ್ತಿದ್ದಾರೆ. ಇತ್ತೀಚೆಗೆ ಅಣ್ಣಾನಗರದಲ್ಲಿ ನಡೆದ ಕೊಲೆಯನ್ನೇ ಗಮನಿಸಿದರೆ ಇಲ್ಲಿ ಲೀಡರ್ ಮಾತ್ರ ಸೀನಿಯರ್. ಉಳಿದವರು 17ರಿಂದ 23ರ ಒಳಗಿನವರು. ಇದಕ್ಕೆ ಹೇತುವಾದದ್ದೂ ರೌಡಿಸಂ ದ್ವೇಷ. ಕತ್ತಿ, ಮಚ್ಚು, ಲಾಂಗ್ ಝಳಪಿಸುವುದನ್ನು ಸುಲಭದಲ್ಲಿ ಕಲಿಯುವ ಈ ಯುವಕರು ಉತ್ತಮ ಜೀವನಕ್ಕೆ ಬೇಕಾದ ಮಾರ್ಗವನ್ನು ಮಾತ್ರ ಕಲಿಯುತ್ತಿಲ್ಲ. ರೌಡಿಸಂ ಯುವಜನಾಂಗವನ್ನು ಸೆಳೆಯುತ್ತಿರುವುದು ಮಾತ್ರ ಆಶ್ಚರ್ಯಕರ. ಒಂದಲ್ಲ ಒಂದು ದಿನ ತನ್ನನ್ನೂ ಇದೇ ರೀತಿ ಕತ್ತರಿಸಿ ಎಸೆಯುತ್ತಾರೆ. ತನ್ನ ಮನೆಯವರಿಗೆ ಶವ ಸಹ ಸಿಗದೆ ಹೋಗಬಹುದೆಂಬ ಅರಿವಿದ್ದರೂ ಮಚ್ಚು, ಲಾಂಗ್ ಹಿಡಿಯುತ್ತಾರೆ.
....................

Saturday, 11 February 2017

ವಿಫಲವಾದ ಹೆಬ್ಬೆಟ್ಟು ಮಂಜನ ಯೋಜನೆ:
ರೌಡಿ ಕೊರಂಗುವಿಗೆ ಜೀವದಾನ
 - ಪಿಸ್ತೂಲು ಇಟ್ಟುಕೊಂಡು, ಮಾರಾಟ ಮಾಡಲೆತ್ನಿಸಿ ಸಿಕ್ಕಿಬಿದ್ದ ಅಶ್ರಫ್


ಶಿವಮೊಗ್ಗದ ಪಾತಕ ಲೋಕದಲ್ಲಿ ಹೆಸರುವಾಸಿಯಾಗಿದ್ದ ಹೆಬ್ಬೆಟ್ಟು ಮಂಜನು ಕ್ರಮೇಣ ಬೆಂಗಳೂರಿಗೆ ತನ್ನ ಚಟುವಟಿಕೆ ಸ್ಥಳಾಂತರಿಸಿಕೊಂಡಿದ್ದ. ಬೆಂಗಳೂರಿನ ರೌಡಿ ಕೊರಂಗು ಕೃಷ್ಣನ ಹತ್ಯೆಗೆ ಸುಪಾರಿ ಪಡೆದುಕೊಂಡಿದ್ದ. ಅದರಂತೆ ವಿವಿಧ ಪ್ರಕರಣಗಳಲ್ಲಿ ಜೈಲ್‌ನಲ್ಲಿದ್ದ ಕೊರಂಗು ಕೃಷ್ಣನನ್ನು ಪೊಲೀಸರು ಪ್ರಕರಣವೊಂದರ ವಿಚಾರಣೆಗಾಗಿ ಚಿತ್ರದುರ್ಗ ನ್ಯಾಯಾಲಯಕ್ಕೆ ಕರೆತಂದಿದ್ದರು. ಅಲ್ಲಿಂದ ಬೆಂಗಳೂರಿನ ಜೈಲ್‌ಗೆ ತೆರಳುವ ಮಾರ್ಗಮಧ್ಯೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿಯ ಡಾಬಾದ ಬಳಿ ಊಟಕ್ಕೆ ತೆರಳಿದ್ದರು. ಈ ವೇಳೆ ಹೆಬ್ಬೆಟ್ಟು ಮಂಜನು ಕೊರಂಗು ಕೃಷ್ಣನ ಮೇಲೆ ಮಚ್ಚಿನಿಂದ ದಾಳಿ ನಡೆಸಿದ್ದ. ಮಾರಣಾಂತಿಕ ಗಾಯಗೊಂಡಿದ್ದ ಕೊರಂಗು ಕೃಷ್ಣ ಬದುಕುಳಿದಿದ್ದ. ತದನಂತರ ಹೆಬ್ಬೆಟ್ಟು ಹತ್ಯೆಗೆ ಸಾಕಷ್ಟು ಸಂಚು ರೂಪಿಸಿದ್ದ. ಈ ಹಿನ್ನೆಲೆಯಲ್ಲಿಯೇ ಹೆಬ್ಬೆಟ್ಟು ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ.

ಶಿವಮೊಗ್ಗ; ಶಿವಮೊಗ್ಗ ರೌಡಿಯಿಸಂ ಇತಿಹಾಸದಲ್ಲಿ ಹೆಬ್ಬೆಟ್ಟು ಮಂಜನ ಹೆಸರು ಪ್ರಮುಖವಾದುದು. ಜಿಲ್ಲೆಯಲ್ಲಿ ರೌಡಿಯಿಸಂ ಬೆಳೆಸಿ, ಸಾಕಷ್ಟು ಶಿಷ್ಯರನ್ನು ಹೊಂದಿದ ನಂತರ ಬೆಂಗಳೂರಿನ ರೌಡಿಗಳನ್ನು ಎದುರು ಹಾಕಿಕೊಂಡು, ಅವರ ಕೊಲೆಗೆ ಯತ್ನಿಸಿದವನು ಈತ. ನಂತರ ಜೀವಭಯ, ಪೊಲೀಸರ ಭಯದಿಂದ ಪಾರಾಗಲು ಮಲೇಶಿಯಾಕ್ಕೆ ಪರಾರಿಯಾಗಿದ್ದಾನೆ ಎಂದು  ಊಹಿಸಲಾಗುತ್ತಿದೆ.
 ಅಲ್ಲಿಂದಲೇ ಶಿಷ್ಯರ ಮೂಲಕ ಗೂಂಡಾಗಿರಿ ನಡೆಸುತ್ತ ಕಾಲಕಳೆಯುತ್ತಿದ್ದಾನೆ. ಈತನ ಕಟ್ಟಾ ವೈರಿ ಬೆಂಗಳೂರಿನ ಕೊರಂಗು ಕೃಷ್ಣನನ್ನು ಕೊಲೆ ಮಾಡುವ ಸಂಚನ್ನು ರೂಪಿಸಿ ಅದರಲ್ಲಿ ಎಡವಟ್ಟು ಮಾಡಿಕೊಂಡಿದ್ದಾನೆ. ಈ ಮೂಲಕ ಮತ್ತೆ ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರಿದ್ದಾನೆ. ಪೊಲೀಸರು ತನ್ನ ಬಗ್ಗೆ ಇನ್ನಷ್ಟು ಗಮನಹರಿಸುವಂತೆ ಮಾಡಿಕೊಂಡಿದ್ದಾನೆ. ಇಷ್ಟಾದರೂ ಕೊರಂಗು ಕೊಲೆಗೆ ಮತ್ತೆ ಮತ್ತೆ ಯತ್ನ ನಡೆಸುತ್ತಲೇ ಇರುವುದು ಈಗ ಬೆಳಕಿಗೆ ಬಂದಿದೆ. ಮೊನ್ನೆ ಶಿವಮೊಗ್ಗ ಸಮೀಪದ ಮಂಡಗದ್ದೆಯ ಲಿಂಗಾಪುರ ಗ್ರಾಮದಲ್ಲಿ ಈ ಸಂಬಂಧ ತಂದಿಡಲಾಗಿದ್ದ ಪಿಸ್ತೂಲ್ ಮತ್ತು ಜೀವಂತ ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡ ನಂತರ ಹೆಬ್ಬೆಟ್ಟು ಮಂಜನ ಕೃತ್ಯದ ಬಗ್ಗೆ ಜಿಲ್ಲೆಯ ಇನ್ನಷ್ಟು ನಿಗಾಹಿಸುವಂತಾಗಿದೆ.
ಸ್ನೇಹಿತನ ನಂಬಿ ಕೆಟ್ಟ  :
ಮೊನ್ನೆ ಪೊಲೀಸರಿಗೆ ಸಿಕ್ಕಿಬಿದ್ದ ಹೆಬ್ಬೆಟ್ಟು ಮಂಜನ ಬಾಲ್ಯ ಸ್ನೇಹಿತ ಅಶ್ರಫ್ ಮೂಲತಃ ಶಿವಮೊಗ್ಗದವನಾಗಿದ್ದು, ತದನಂತರ ಸಾಗರದಲ್ಲಿ ನೆಲೆಸಿದ್ದ. ಈತನ ತಂದೆ ನಗರದಲ್ಲಿ ಚಿಕ್ಕ ಟೀ ಸ್ಟಾಲ್ ಇಟ್ಟುಕೊಂಡಿದ್ದರು.ಅಂಗಡಿ ವ್ಯವಹಾರದಲ್ಲಿ ನಷ್ಟಕ್ಕೀಡಾಗಿ ತಂದೆಯೊಂದಿಗೆ ಕೇರಳದ ಮಲಪ್ಪುರಂ ಜಿಲ್ಲೆಯ ಕರಾಡುಪರ್ಮ ಎಂಬ ಗ್ರಾಮಕ್ಕೆ ತೆರಳಿ ನೆಲೆಸಿದ್ದ. ಆದರೂ ಶಿವಮೊಗ್ಗ ಜಿಲ್ಲೆಯ ನಂಟನ್ನು ಬಿಟ್ಟಿರಲಿಲ್ಲ. ಈತನ ಸಂಪರ್ಕ ಸಾಧಿಸಿದ್ದ ಹೆಬ್ಬೆಟ್ಟು ಆತನ ಬಳಿ ಪಿಸ್ತೂಲ್-ಗುಂಡುಗಳನ್ನು ದಾಸ್ತಾನು ಮಾಡುವ ನಿರ್ಧಾರ ಮಾಡಿದ್ದ. ಈತನಿಗೆ ಸಾಕಷ್ಟು ಹಣ ಕೂಡ ಕೊಟ್ಟಿದ್ದ.
ಕೊರಂಗು ಕೊಲೆಗೆ ಸ್ಕೆಚ್ ಹಾಕಿದ್ದ ಹೆಬ್ಬೆಟ್ಟು ಅಶ್ರಫ್ ಮೇಲೆ ವಿಶ್ವಾಸವಿಟ್ಟಿದ್ದ. ಒಡಿಶಾದ ಬೆಹರಾಮ್‌ಪುರ ಜಿಲ್ಲೆಯ ವಾಸಿ ಜಾವೇದ್ ಎನ್ನುವವನಿಂದ ಒಟ್ಟೂ 6 ಪಿಸ್ತೂಲನ್ನು ತರಿಸಿ ಕೊಟ್ಟಿದ್ದ. ಇದನ್ನು ಲಿಂಗಾಪುರದ ಮಥಾನ್ ಎನ್ನುವವನ ಮನೆಯಲ್ಲಿ ಬಚ್ಚಿಡಲಾಗಿತ್ತು. ಇದು ಇಲ್ಲಿಗೆ ಯಾವಾಗ ಬಂದು ತಲುಪಿತ್ತು ಎನ್ನುವ ಬಗ್ಗೆ ಮಾಹಿತಿ ನಿಖರವಾಗಿ ಸಿಕ್ಕಿಲ್ಲ. ಅಶ್ರಫ್  ಈ 6ರ ಪೈಕಿ ಎರಡನ್ನು ಒಂದನ್ನು ಮಂಗಳೂರಿನ ಚಿನ್ನದ ವ್ಯಾಪಾರಿ ಇಕ್ಬಾಲ್‌ಗೆ ಮತ್ತೊಂದನ್ನು ಮಂಡಗದ್ದೆಯ ಗಫಾರ್‌ಖಾನ್ (ಮಥಾನ್)ಗೆ ಮಾರಾಟ ಮಾಡಿದ್ದನು. ಅಶ್ರಫ್‌ನು ಹಣದಾಸೆಗೆ ಪಿಸ್ತೂಲ್‌ಗಳನ್ನು ಮಾರಿಕೊಳ್ಳಲಾರಂಭಿಸಿದ್ದ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೆಬ್ಬೆಟ್ಟುವಿನ ಸಂಪರ್ಕದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಎಂದು ಪೊಲೀಸ್ ಇಲಾಖೆಯ ಮೂಲಗಳು ಹೇಳುತ್ತವೆ.
ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹೆಬ್ಬೆಟ್ಟು ಮಂಜನಿಗೆ ದೇಶಕ್ಕೆ ವಾಪಾಸ್ ಆಗುವ ಬಯಕೆ ಉಂಟಾಗಿರಬಹುದು. ತನ್ನ ಎದುರಾಳಿ ಕೊರಂಗು ಕೃಷ್ಣನ ಹತ್ಯೆ ನಡೆಸಿದರೆ ಆರಾಮಾಗಿ ಕರ್ನಾಟಕದಲ್ಲಿರಬಹುದು ಎಂದು ಯೋಚಿಸಿ ಈ ಹತ್ಯೆಗೆ ವಿದೇಶದಲ್ಲಿ ಕುಳಿತು ಮಾಸ್ಟರ್ ಪ್ಲ್ಯಾನ್ ರೂಪಿಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸುತ್ತಾರೆ.  ಇದಕ್ಕಾಗಿಯೇ ಅಮೆರಿಕಾ, ಜರ್ಮನಿ ದೇಶಗಳ ಅತ್ಯಾಧುನಿಕ ಪಿಸ್ತೂಲ್‌ಗಳನ್ನು ತನ್ನ ಸಹಚರರ ಮೂಲಕ ಖರೀದಿಸಿಟ್ಟಿದ್ದ ಎನ್ನಲಾಗುತ್ತಿದೆ.
ಈಗ ಎಲ್ಲವೂ ಬಯಲಾಗುವ ಮೂಲಕ ಕೊರಂಗು ಹತ್ಯೆ ಸಂಚು ಮತ್ತೆ ವಿಫಲಗೊಂಡಿದೆ. ಇದರ ಜೊತೆಗೆ ಅಶ್ರಫ್ ಸಹ ಹೆಬ್ಬೆಟ್ಟುವಿನ ಕೆಂಗಣ್ಣಿಗೆ ತುತ್ತಾಗುವಂತಾಗಿದೆ. ಕಾರಣ ಪಿಸ್ತೂಲ್ ಮಾರಾಟ ಮಾಡಿದ್ದಕ್ಕೆ. ಅಶ್ರಫ್ ಇನ್ನುಳಿದ 4 ಪಿಸ್ತೂಲನ್ನೂ ಸಹ ಮಾರಾಟ ಮಾಡಲು ಸಂಚು ರೂಪಿಸಿದ್ದು ಬೆಳಕಿಗೆ ಬಂದಿದೆ. ಈ ಮಾರಾಟಕ್ಕೆ ಆರ್‌ಎಂಎಲ್ ನಗರದ ವಾಸಿ , ಟಯರ್ ವ್ಯಾಪಾರಿ ನದೀಮ್ ಎನ್ನುವವನನ್ನು ಮಧ್ಯವರ್ತಿಯಾಗಿ ಬಳಸಿಕೊಂಡಿದ್ದು, ಆತನೂ ಸಹ ಪೊಲೀಸರ ಬಲೆಗೆ ಬಿದ್ದಿದ್ದಾನೆ.  
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಸ್ತೂಲ್ ಖರೀದಿ ಮಾಡಿದ ಇಬ್ಬರು, ತರಿಸಿದ ಹೆಬ್ಬೆಟ್ಟು ಮಂಜ, ಅಕ್ರಮವಾಗಿ ಇಟ್ಟುಕೊಂಡ ಲಿಂಗಾಪುರದ ಮಥಾನ್ ಮತ್ತು ಓಡಿಶಾದಿಂದ ಬೆಂಗಳೂರಿಗೆ ತಂದು ಕೊಟ್ಟವ, ಬೆಂಗಳೂರಿನಿಂದ ಪಿಸ್ತೂಲನ್ನು ಅಶ್ರಫ್‌ಗೆ ತಂದುಕೊಟ್ಟ ಅಂಬರೀಶ್ ಬಂಧನಕ್ಕೆ ಪೊಲೀಸರು ಸಜ್ಜಾಗಿದ್ದಾರೆ. ಒಟ್ಟಿನಲ್ಲಿ ಕೊರಂಗು ಹತ್ಯೆಯು ಪೊಲೀಸರ ಸಕಾಲಿಕ ಪ್ರವೇಶದಿಂದ ತಪ್ಪಿದಂತಾಗಿದೆ.

 
-------------------------------------------

Friday, 10 February 2017


ಶಿವಮೊಗ್ಗದ ಡಾನ್ ಆಗುವ ಇನಾಯತ್ 
ಕನಸು ನನಸಾಗಲೇ ಇಲ್ಲ

 - ಶಿವಮೊಗ್ಗದ ಭೂಗತ ಲೋಕದ ಚರಿತ್ರೆಯ ಒಂದು ಪುಟಕ್ಕೆ ವಿರಾಮ


ಶಿವಮೊಗ್ಗ : ನಗರದಲ್ಲಿ ಮತ್ತೆ ರೌಡಿಗಳ ಹಾವಳಿ ಆರಂಭವಾಗಿದೆ. ವಿವಿಧ ಅಪರಾಧಗಳನ್ನು ಎಸಗುತ್ತಿದ್ದ ಯುವಕರನ್ನು ಪೊಲೀಸರು ಮಟ್ಟಹಾಕುತ್ತಿರುವಂತೆಯೇ ವೃತಿನಿರತ ರೌಡಿಗಳು ಘರ್ಜಿಸಲಾರಂಭಿಸಿದ್ದಾರೆ. ಈ ಮೂಲಕ ತಮ್ಮ ಹಳೆಯ ದ್ವೇಷಗಳನ್ನು ತೀರಿಸಿಕೊಳ್ಳಲು ಕತ್ತಿ, ಮಚ್ಚು, ಲಾಂಗ್‌ಗಳನ್ನು ಝಳಪಿಸತೊಡಗಿದ್ದಾರೆ.
ನಗರದ ಅಣ್ಣಾನಗರ ಮುಖ್ಯರಸ್ತೆಯಲ್ಲೇ ಇನಾಯತ್ (ಹಯಾತ್) ಎನ್ನುವ ಯುವಕ ಬುಧವಾರ ಸಂಜೆ ಕೊಲೆಯಾಗಿದ್ದಾನೆ. ಈತ ಕಳೆದ ತಿಂಗಳಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದವನು. ಹಳೆಯ ಗ್ಯಾಂಗ್ ವೈಷಮ್ಯದಿಂದ ಕೊಲೆ ನಡೆದಿದೆ ಎನ್ನುವುದು ಪೊಲೀಸರ ಹೇಳಿಕೆ. ಇಲಿಯಾಸ್ ನಗರದ ವಾಸಿ ಇನಾಯತ್ ಕಳೆದ ಅಕ್ಟೋಬರ್‌ನಲ್ಲಿ ದಾಡಿ ಬಶೀರ್ ಮನೆಗೆ ನುಗ್ಗಿ ಆತನ ಹಣೆಗೆ ರಿವಾಲ್ವರ್ ಇಟ್ಟು 1 ಕೋಟಿ ರೂ. ನೀಡುವಂತೆ ಕೇಳಿದ್ದ. ಕೊಡದಿದ್ದರೆ ಸುಟ್ಟು ಹಾಕುವ ಬೆದರಿಕೆ ಹಾಕಿದ್ದ ಎಂಬ ಆರೋಪ ಹೊತ್ತಿದ್ದ. ಈ ಹಿನ್ನೆಲೆಯಲ್ಲಿ ಈತನ ಬಂಧನವಾಗಿತ್ತು.
ಈ ಕೃತ್ಯಕ್ಕಾಗಿ ಈತ ಮಹಾರಾಷ್ಟ್ರದಿಂದ ಪಿಸ್ತೂಲು ಖರೀದಿಸಿದ್ದ ಎಂಬ ಆಂಶವೂ ಬಯಲಿಗೆ ಬಂದಿದೆ. ಈತನ ತಂದೆ ನಸ್ರು ಹಳೆೆಯ ರೌಡಿಯಾಗಿದ್ದ. ಸುಮಾರು 15 ವರ್ಷಗಳ ಹಿಂದೆಯೇ ನಸ್ರು ಅಂದಿನ ಶ್ರೀಗಂಧ ಚೋರರಿಂದ ಹಫ್ತ್ತಾ ವಸೂಲಿ ಮಾಡುತ್ತಿದ್ದ. ಆಗ ಶ್ರೀಗಂಧದ ಕಳ್ಳತನ ಎಗ್ಗಿಲ್ಲದೆ ನಡೆಯುತ್ತಿತ್ತು. ಸ್ಮಗ್ಲರ್‌ಗಳು ಮರವನ್ನು ಮನಬಂದಂತೆ ದೋಚುವ ಮೂಲಕ ಕೋಟಿ ಕೋಟಿ ಗಳಿಸಿದ್ದರು. ಆಗ ಇವರ ಬೆನ್ನಿಗೆ ಬಿದ್ದವನೇ ನಸ್ರು. ತಿಂಗಳ ಮಾಮೂಲಿ ಕೊಡುವಂತೆ ಬೆದರಿಕೆ ಹಾಕುತ್ತಿದ್ದ. ಇದಕ್ಕೆ ಹೆದರಿದ್ದ ಎಷ್ಟೋ ಸ್ಮಗ್ಲರ್‌ಗಳು ವ್ಯವಹಾರ ಮಾಡಿಕೊಂಡಿದ್ದರು. ಆದರೆ ಹಣ ಕೊಡದ ಕೆಲವರು ನಸ್ರುಗೆ ಬುದ್ಧಿ ಕಲಿಸಲು ಮುಂದಾಗಿದ್ದರು.
ಹಣ ಕೊಡದಿದ್ದರೆ ಕಿಡ್ನಾಪ್ ಮಾಡಿಸುತ್ತಿದ್ದ ಎಂಬ ಮಾತು ಕೇಳಿಬರುತ್ತಿತ್ತು. ಹೀಗೆ ನಟೋರಿಯಸ್ ಆಗಿ ಬೆಳೆದಿದ್ದ ನಸ್ರುವನ್ನು ನಡುರಸ್ತೆಯಲ್ಲೇ ಕಡಿದುರುಳಿಸಲಾಗಿತ್ತು  ನಸ್ರುವಿನ ಉಪಟಳ ತಾಳಲಾರದೆ  ಅಂದು ಮಾಮೂಲಿ ಕೊಡುತ್ತಿದ್ದವರು, ಈತನನ್ನು ಮುಗಿಸುವಂತೆ ವ್ಯವಹಾರ ಮಾಡಿಕೊಂಡಿದ್ದರು. ಆ ಪ್ರಕಾರ ಕೆಲಸವು ಮುಗಿದಿತ್ತು.
ಈ ಘಟನೆಯ ದ್ವೇಷವೇ ಮೊನ್ನೆ ಕೊಲೆಯಲ್ಲಿ ಪರ್ಯಾವಸನಗೊಂಡಿದೆ. ಈ ಕೊಲೆಯನ್ನು ಕೀಲಿ ಇಮ್ರಾನ್ ಕಡೆಯವರು ನಡೆಸಿದ್ದಾರೆಂದು ಪೊಲೀಸರು ಹೇಳುತ್ತಿದ್ದಾರೆ. ಇದೇನೇ ಇದ್ದರೂ, ಶಿವಮೊಗ್ಗ ನಗರದ ಅಂಡರ್ ವರ್ಲ್ಡ್ ನಾಯಕನಾಗಿ ತಾನು ಆಳಬೇಕೆಂಬ ಹೊಂಗನಸು ಕಂಡಿದ್ದ ಇನಾಯತ್ ಮಣ್ಣಾಗಿದ್ದಾನೆ.
ಓದುವ ವಯಸ್ಸಿನಲ್ಲೇ ದಾರಿತಪ್ಪಿದ್ದ ಮಗನನ್ನು ಮನೆಯವರು ಸರಿದಾರಿಗೆ ತರುವ ಯತ್ನ ಮಾಡಿದ್ದರು. ಆದರೆ ಆಗಲೇ ಕೆಲವರ ಸಹವಾಸ ಮತ್ತು ಇಲ್ಲಸಲ್ಲದ ಚಟಕ್ಕೆ ಅಂಟಿಕೊಂಡಿದ್ದ ಎಂಬ ಮಾತು ಕೇಳಿಬರುತ್ತಿದೆ. ಜೊತೆಗೆ ದಿನದ ಖರ್ಚಿಗಾಗಿ ವಾಮಮಾರ್ಗದಲ್ಲಿ ಹಣಸಂಪಾದನೆ ಮಾಡುವ ಮೂಲಕ ಪೊಲೀಸರ ಕಣ್ಣಿಗೆ ಬಿದ್ದಿದ್ದ. ಪೊಲೀಸರು ಎಷ್ಟೇ ಬುದ್ಧಿ ಹೇಳಿದ್ದರೂ ಕೇಳುವ ಮನಃಸ್ಥಿತಿ ಆತನದ್ದಾಗಿರಲಿಲ್ಲ. ಏಕೆಂದರೆ ಡಾನ್ ಎಂಬ ಶಬ್ದದ ಮೂಲಕ ತಾನು ಪ್ರಸಿದ್ಧಿಯಾಗಬೇಕೆಂಬ ಕನಸನ್ನು ಆತ ಕಂಡಿದ್ದ ಎನ್ನುತ್ತಾರೆ ಆತನ ವಾಸದ ಬಡಾವಣೆಯ ಕೆಲವರು.
ಭೂಗತ ಲೋಕದಲ್ಲಿ ಹೆಸರು ಮಾಡಬೇಕೆಂಬ ಇನಾಯತ್ ಕನಸು ನನಸಾಗಲೇ ಇಲ್ಲ. ಅಪ್ಪನಂತೆಯೇ ರಸ್ತೆಯಲ್ಲೇ ನೆತ್ತರು ಚೆಲ್ಲಿ ಎದುರಾಳಿಗಳ ಮಚ್ಚಿನೇಟಿಗೆ ಬಲಿಯಾದ. ಈಗ ಈತನ ಕೊಲೆ ಮಾಡಿದವರು ಇನ್ನೊಂದು ದಾಳಿಗೆ ಸಿಲುಕಿ ಮತ್ತೆ ರೌಡಿಯಿಸಂ ಇತಿಹಾಸ ಮುಂದುವರೆಸುವುದು ನಿಶ್ಚಿತ.
ಶಿವಮೊಗ್ಗದ ರೌಡಿಸಂ ಚರಿತ್ರೆ ಮುಂದುವರೆಯುತ್ತಲೇ ಇದೆ. ಹೊಸ ರೌಡಿಗಳು ಬರುತ್ತಿದ್ದಾರೆ. ಹಳೆಯ ರೌಡಿಗಳು ಸಾಯುತ್ತಿದ್ದಾರೆ. ಇದು ಪೊಲೀಸರನ್ನು ಮಾತ್ರ ನಿದ್ದೆಗೆಡಿಸಿದೆ.
...............................

Wednesday, 8 February 2017

ಜಿಲ್ಲೆಯಲ್ಲಿ  39 ಹೆಚ್1ಎನ್1 ಪ್ರಕರಣ, ಇಬ್ಬರು ಬಲಿ
 -ಶಿವಮೊಗ್ಗ ತಾಲೂಕಿನಲ್ಲಿ 6, ತೀರ್ಥಹಳ್ಳಿಯಲ್ಲಿ 20, ಸಾಗರದಲ್ಲಿ 6, ಹೊಸನಗರದಲ್ಲಿ 6, ಭದ್ರಾವತಿಯಲ್ಲಿ 1 ಪ್ರಕರಣ ವರದಿ

ಶಿವಮೊಗ್ಗ,  : ಜಿಲ್ಲೆಯಾದ್ಯಂತ ಬೇಸಿಗೆಯ ಪ್ರಾರಂಭದಲ್ಲಿಯೇ ರಣಬಿಸಿಲು ಮೈ ಸುಡಲಾರಂಭಿಸಿದೆ. ಇದರ ಬೆನ್ನಲ್ಲೆ ವಿವಿಧ ರೋಗಗಳು ಕೂಡ ಕಾಣಿಸಿಕೊಳ್ಳಲಾರಂಭಿಸಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇಷ್ಟು ದಿನ ಜಿಲ್ಲೆಯಾದ್ಯಂತ ನಿಯಂತ್ರಣದಲ್ಲಿದ್ದ ಹೆಚ್1ಎನ್1  ಅಥವಾ ಹಂದಿಜ್ವರ ಮತ್ತೆ ನಾಗರಿಕರನ್ನು ಕಾಡಲಾರಂಭಿಸಿದ್ದು, ಈ ರೋಗಕ್ಕೆ ಇಬ್ಬರು ಬಲಿಯಾಗಿದ್ದಾರೆ.
ಮತ್ತೊಂದೆಡೆ, ಹೆಚ್1ಎನ್1 ರೋಗ ಉಲ್ಬಣಿಸುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾ ಆರೋಗ್ಯ ಇಲಾಖೆಯು, ವ್ಯಾಪಕ ಮುನ್ನೆಚ್ಚರಿಕೆ ಕ್ರಮದ ಜೊತೆಗೆ ನಾಗರಿಕರಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಪ್ರಾರಂಭಿಸಿದೆ. ಈ ರೋಗಕ್ಕೆ ನೀಡಲಾಗುವ ಟ್ಯಾಮಿಪ್ಲೂ ಮಾತ್ರೆಯನ್ನು ಉಚಿತವಾಗಿ ಪೂರೈಕೆ ಮಾಡುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸಾ ನೀಡುವ ವ್ಯವಸ್ಥೆ ಮಾಡಲಾರಂಭಿಸಿದೆ.
 ಆರೋಗ್ಯ ಇಲಾಖೆಯ ಮಾಹಿತಿಗಳ ಪ್ರಕಾರ, ಜನವರಿಯಿಂದ ಫೆ. 6 ರವರೆಗಿನ ಅವಧಿಯಲ್ಲಿ ಜಿಲ್ಲೆಯಾದ್ಯಂತ ಹೆಚ್1ಎನ್1ಗೆ ಸಂಬಂಧಿಸಿದ 39 ಪ್ರಕರಣಗಳು ಕಂಡುಬಂದಿವೆ. ತೀರ್ಥಹಳ್ಳಿ ಹಾಗೂ ಭದ್ರಾವತಿಯಲ್ಲಿ ಶಂಕಿತ ಜ್ವರದಿಂದ ಬಳಲುತ್ತಿದ್ದ ಓರ್ವ ಪುರುಷ ಮತ್ತು ಮಹಿಳೆ ಮೃತಪಟ್ಟಿರುವ ಘಟನೆ ಕೂಡ ವರದಿಯಾಗಿದೆ. ಇದರಿಂದ ನಾಗರಿಕರು ಸಾಕಷ್ಟು ಆತಂಕಕ್ಕೆ ತುತ್ತಾಗುವಂತೆ ಮಾಡಿದೆ.
 ಒಂದು ತಿಂಗಳಲ್ಲಿ ಹೊಸನಗರ ಹಾಗೂ ಶಿಕಾರಿಪುರ ತಾಲೂಕಿನಲ್ಲಿ ಮಾತ್ರ ಹೆಚ್1ಎನ್1ಗೆ ಸಂಬಂಧಿಸಿದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಉಳಿದಂತೆ ಶಿವಮೊಗ್ಗ ತಾಲೂಕಿನಲ್ಲಿ 6, ತೀರ್ಥಹಳ್ಳಿಯಲ್ಲಿ 20, ಸಾಗರದಲ್ಲಿ 6, ಹೊಸನಗರದಲ್ಲಿ 6 ಹಾಗೂ ಭದ್ರಾವತಿಯಲ್ಲಿ 1 ಪ್ರಕರಣ ದಾಖಲಾಗಿದೆ. ಮಂಗನಕಾಯಿಲೆ ಕಾಯಿಲೆಯಿಂದ ಬಳಲುತ್ತಿರುವ ತೀರ್ಥಹಳ್ಳಿ ತಾಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಚ್1ಎನ್1 ಜ್ವರ ಕಾಣಿಸಿಕೊಂಡಿರುವುದು ಸ್ಥಳೀಯ ನಾಗರಿಕರು ಇನ್ನಷ್ಟು ನಿದ್ದೆಗೆಡುವಂತೆ ಮಾಡಿದೆ.
ಜಿಲ್ಲೆಯಲ್ಲಿ ಹೆಚ್1ಎನ್1 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆಯು ಜನಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಅತೀ ಹೆಚ್ಚು ಪ್ರಕರಣಗಳು ಕಂಡುಬಂದಿರುವ ತೀರ್ಥಹಳ್ಳಿ ತಾಲೂಕಿನಾದ್ಯಂತ ತೀವ್ರ ನಿಗಾವಹಿಸಲಾಗಿದ್ದು, ಶಂಕಿತ ರೋಗ ಪೀಡಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಉಚಿತ ಆ್ಯಂಬುಲೆನ್ಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಜಿಲ್ಲೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ.
ಎಚ್1ಎನ್1 ಪರೀಕ್ಷೆ, ಔಷಧಿ ಹಾಗೂ ಚಿಕಿತ್ಸೆಯನ್ನು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಹಂದಿ ಜ್ವರ ದೃಢಪಟ್ಟಲ್ಲಿ ವೈದ್ಯರಿಂದ ಟ್ಯಾಮಿಪ್ಲೂ ಔಷಧಿಯ ಚಿಕಿತ್ಸೆ ನೀಡಲಾಗುತ್ತದೆ. ಶಂಕಿತ ರೋಗಿಗಳು ಉಪಯೋಗಿಸಿದ ಯಾವುದೇ ವಸ್ತು ಅಥವಾ ಪದಾರ್ಥಗಳನ್ನು ಮುಟ್ಟುವ ಅಥವಾ ಉಪಯೋಗಿಸುವ ಮೊದಲು ಬಿಸಿ ನೀರಿನಲ್ಲಿ ಸ್ವಚ್ಚಗೊಳಿಸಬೇಕು. ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳಬೇಕು. ಹೆಚ್1ಎನ್1 ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದನ್ನು ಮುಂದೂಡಬೇಕು.
ರೋಗ ಹರಡುವಿಕೆ ತೀವ್ರಗೊಳ್ಳುತ್ತಿರುವ ಪ್ರದೇಶದಲ್ಲಿ ಮೂಗು ಮತ್ತು ಬಾಯಿಗೆ ಮಾಸ್ಕ್ ಬಳಸಬೇಕು. ಸೋಂಕು ತಗುಲಿದವರು ಕನಿಷ್ಠ ಏಳು ದಿನಗಳವರೆಗೆ ಹೊರಗಡೆ ಬರಬಾರದು. ರೋಗ ಪೀಡಿತ ವ್ಯಕ್ತಿ ಕೆಮ್ಮುವಾಗ, ಸೀನುವಾಗ ಟಿಶ್ಯೂ ಅಥವಾ ಇತರೆ ವಸ್ತ್ರಗಳಿಂದ ಮೂಗ-ಬಾಯಿ ಮುಚ್ಚಿಕೊಳ್ಳಬೇಕು. ನಂತರ ಅದನ್ನು ಸುಟ್ಟು ಹಾಕಬೇಕು. ಪ್ರಾರಂಭದ ಹಂತದಲ್ಲಿಯೇ ರೋಗಿಯು ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಂಡರೆ ಈ ರೋಗ ಗುಣಪಡಿಸಬಹುದು. ಶಂಕಿತ ಲಕ್ಷಣಗಳಿಂದ ಬಳಲುತ್ತಿರುವವರು ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿಯಿತ್ತು ಚಿಕಿತ್ಸೆ ಪಡೆದುಕೊಳ್ಳಬೇಕು ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ.



ಹಂದಿ ಜ್ವರದ ರೋಗ ಲಕ್ಷಣಗಳು... 
ಹಂದಿ ಜ್ವರವು ಮೊದಲು ಮೆಕ್ಸಿಕೋ ದೇಶದಲ್ಲಿ ಹಂದಿಯಿಂದ ಮನುಷ್ಯನಲ್ಲಿ ಕಾಣಿಸಿಕೊಂಡಿತ್ತು. ಈ ಜ್ವರದ ’ಟೈಪ್ - ಹೆಚ್1ಎನ್1’ ವೈರಾಣು ವ್ಯಕ್ತಿಯಿಂದ ವ್ಯಕ್ತಿಗೆ ನೇರವಾಗಿ ಬಾಯಿ ಅಥವಾ ಮೂಗಿನ ಉಸಿರಾಟದ ಮೂಲಕ ವೇಗವಾಗಿ ಹರಡುತ್ತದೆ. ಸಾಮಾನ್ಯ ಜ್ವರದಂತೆ ಪ್ರಾರಂಭವಾಗಿ ಕೆಮ್ಮು, ಶೀತ, ಮೂಗು ಸೋರುವುದು, ಗಂಟಲು ನೋವು, ತಲೆನೋವು, ಮೈಕೈ ನೋವು, ವಾಕರಿಕೆ, ವಾಂತಿ-ಬೇಧಿ ಆಗುವುದು ಈ ರೋಗದ ಲಕ್ಷಣಗಳಗಾಗಿವೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಹೊರಡಿಸಿರುವ ಜನಜಾಗೃತಿ ಕರಪತ್ರದಲ್ಲಿ ಮಾಹಿತಿ ನೀಡಲಾಗಿದೆ.

’ಟ್ಯಾಮಿಪ್ಲೂ ಮಾತ್ರೆ ದಾಸ್ತಾನಿದೆ’ : ಡಿ.ಹೆಚ್.ಓ.  
ಹೆಚ್1ಎನ್1 ರೋಗಕ್ಕೆ ನೀಡಲಾಗುವ ಟ್ಯಾಮಿಪ್ಲೂ ಮಾತ್ರೆಯ ಅಗತ್ಯ ದಾಸ್ತಾನು ಇಲಾಖೆಯಲ್ಲಿದೆ. ಜಿಲ್ಲೆಯ ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನದ 24 ಗಂಟೆಯೂ ಈ ಮಾತ್ರೆ ಲಭ್ಯವಿರುವ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶಂಕಿತ ಪ್ರಕರಣದ ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, ಸಂಬಂಧಿಸಿದ ಆಸ್ಪತ್ರೆಯವರು ಇಲಾಖೆಯನ್ನು ಸಂಪರ್ಕಿಸಿದರೆ ಉಚಿತವಾಗಿ ಟ್ಯಾಮಿಪ್ಲೂ ಮಾತ್ರೆಗಳನ್ನು ಪೂರೈಕೆ ಮಾಡಲಾಗುವುದು. ಈಗಾಗಲೇ ತೀರ್ಥಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಶಂಕಿತ ಪ್ರಕರಣದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೋರ್ವರಿಗೆ ಉಚಿತವಾಗಿ ಮಾತ್ರೆ ಪೂರೈಕೆ ಮಾಡಲಾಗಿದೆ ಎನ್ನುತ್ತಾರೆ ಡಿಎಚ್‌ಓ ಡಾ. ರಾಜೇಶ್ ಸುರಗೀಹಳ್ಳಿ.  
ಪ್ರಸ್ತುತ ತೀರ್ಥಹಳ್ಳಿ ಹಾಗೂ ಭದ್ರಾವತಿಯಲ್ಲಿ ಮೃತಪಟ್ಟಿರುವ ರೋಗಿಗಳ ರಕ್ತದ ಮಾದರಿ ಸಂಗ್ರಹಿಸಿ ಉನ್ನತ ಮಟ್ಟದ ಪರಿಶೀಲನೆಗೆ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು. ಇವರಿಬ್ಬರ ಸಾವಿಗೆ ಹೆಚ್1ಎನ್1 ಕಾರಣವಾಗಿರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಈ ರೋಗಕ್ಕೆ ತುತ್ತಾದವರು ಆತಂಕಪಡುವ ಅಗತ್ಯವಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳಬೇಕು. ಪ್ರಾರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದುಕೊಂಡರೆ ಸೋಂಕು ನಿಯಂತ್ರಣಕ್ಕೆ ಸಾಧ್ಯವಾಗಲಿದೆ. ಎಂದಿದ್ದಾರೆ ಅವರು.
--------------------------------------------

 ಮಿಳಘಟ್ಟ ಸಂತೆ ಸ್ಥಳಾಂತರಕ್ಕೆ ಕಾಲಕೂಡಿಬರುವುದೆಂದು?

 ಮಿಳಘಟ್ಟ ಸಂತೆ ಸ್ಥಳಾಂತರವಾಗಬೇಕೆಂಬ ಕೂಗು ಇಂದು, ನಿನ್ನೆಯದಲ್ಲ, ನಾಲ್ಕಾರು ವರ್ಷಗಳಿಂದ ಸತತವಾಗಿ ಕೇಳಿಬರುತ್ತಿದೆ. ಇದಕ್ಕೆ ಕಾರಣ ಅನೇಕ ಅಪಘಾತ ಸಂಭವಿಸಿರುವುದು. ಆದರೆ ಈ ಮೊದಲು ಬದಲಿ ಸ್ಥಳ ಸಿಕ್ಕಿರಲಿಲ್ಲ. ಇತ್ತೀಚೆಗೆ ಡಿಪೊ ಎದುರು ಒಂದಷ್ಟು ಖಾಲಿ ಸ್ಥಳ ಗುರುತಿಸಿ ನೆಲಸಮತಟ್ಟು ಮಾಡಲಾಗಿದೆ. ಅಲ್ಲಿ ಸಂತೆಗೆ ಬೇಕಾದ ಇನ್ನಷ್ಟು ಮೂಲಸೌಕರ್ಯಗಳನ್ನು ಕಲ್ಪಿಸಿ ಅನುಕೂಲಕರ ವಾತಾವರಣ ಕಲ್ಪಿಸಬೇಕು. ಅತ್ಯಂತ ಶೀಘ್ರವಾಗಿ ಇದು ನೆರವೇರಲು ಪಾಲಿಕೆಯ ಅಧಿಕಾರಿಗಳು ಇಚ್ಛಾಶಕ್ತಿ ತೋರಬೇಕು. ವಿಸ್ತಾರವಾದ ಜಾಗ ನಿಡಿ, ಸಕಲ ಸೌಲಭ್ಯವಿದ್ದಲ್ಲಿ ಇದು ಇನ್ನಷ್ಟು ಬೆಳೆಯಲು ಅನುಕೂಲವಾಗುತ್ತದೆ.

ಸಂತೆ ಸ್ಥಳಾಂತರ ಆಗಲೇಬೇಕು. ಇದರಲ್ಲಿ ಬೇರೆ ಮಾತಿಲ್ಲ. ಸುಮಾರು 8 ತಿಂಗಲ ಹಿಂದೆಯೇ ಡಿಪೊ ಎದುರಿನ 80 ಅಡಿ ರಸ್ತೆಯ ಯೋಜನೆ ಸಿದ್ಧವಾಗಿತ್ತು. 3.5 ಕೋಟಿ ರೂ ವೆಚ್ಚದಲ್ಲಿ ಡಿಪೊ- ಬೈಪಾಸ್ ರಸ್ತೆ ಡಾಂಬರೀಕರಣಕ್ಕೆ ಟೆಂಡರ್ ನೀಡಲಾಗಿದ್ದರೂ ಟೆಂಡರ್‌ದಾರ ಕೊನೆಕ್ಷಣದಲ್ಲಿ ಕಾಮಗಾರಿಯಿಂದ ಹಿಂದೆ ಸರಿದರು. ಇದರೊಟ್ಟಿಗೆ ಸಂತೆ ನಡೆಸುವ ಸ್ಥಳ ಡಿಪೊ ಎದುರಿದೆ. ಇಲ್ಲಿ ಮಣ್ಣಿನಿಂದ ಕೂಡಿದ ಸ್ಥಳವಿರುವುದರಿಂದ ಡಾಂಬರೀಕರಣ ಅಥವಾ ಕಾಂಕ್ರೀಟೀಕರಣ ಕೆಲಸ ಆಗಬೇಕಿದೆ. ಶೆಡ್ ಮತ್ತಿತರ ಕೆಲಸವೂ ಬಾಕಿ ಇದೆ. ಸಂತೆ ಇಲ್ಲಿಗೇ ಸ್ಥಳಾಂತರವಾಗಬೇಕಿದೆ. ಏಕೆಂದರೆ ಬೇರೆ ಜಾಗ ಇಲ್ಲ. ಜೊತೆಗೆ ಇಲ್ಲಿನ ಜನರಿಗೂ ತೊಂದರೆಯಾಗಬಾರದು. ಇದಕ್ಕಾಗಿ ವರ್ಷದ ಹಿಂದಿನಿಂದಲೂ ಯತ್ನ ನಡೆಸಲಾಗುತ್ತಿದೆ. ಈ ತಿಂಗಳಾಂತ್ಯದೊಳಗೆ ಕಾಮಗಾರಿ ಆರಂಭವಾಗಲಿದೆ. ಇದನ್ನರಿತೇ ಪ್ರತಿಭಟನೆ ಮಾಡಲಾಗಿದೆ. ಕಾಮಗಾರಿ ಮುಗಿಯಲು ಸುಮಾರು 3 ತಿಂಗಳು ಬೇಕಾಗಬಹುದು. ಇದಾದ ನಂತರ ಸಂತೆ ಸ್ಥಳಾಂತರ ಮಾಡಲಾಗುವುದು.  
- ಏಳುಮಲೈ (ಕೇಬಲ್ ಬಾಬು), ಆ ಭಾಗದ ಪಾಲಿಕೆ ಸದಸ್ಯ

 ನಗರದ ಬಸ್ ನಿಲ್ದಾಣದ ಹಿಂಭಾಗದಲ್ಲಿ ಇರುವ ಮಿಳಘಟ್ಟ ಸಂತೆ ಮೈದಾನವನ್ನು ಅಲ್ಲಿಂದ ಸ್ಥಳಾಂತರ ಮಾಡುವ ವಿಚಾರ ಇನ್ನೂ ಕೈಗೂಡಿಲ್ಲ. ಇದರಿಂದ ಮಿಳಘಟ್ಟ- ಗೋಪಾಳ ರಸ್ತೆಯಲ್ಲಿ ಸಂಚರಿಸುವುದು ಸಾಹಸದ ಕೆಲಸವಾಗಿದೆ. ವಾಹನ ಸವಾರರು ಸಂತೆಯ ದಿನವಾದ ಪ್ರತಿ ಮಂಗಳವಾರ ಸರ್ಕಸ್ ಮಾಡುತ್ತಾ ಸಾಗಬೇಕಿದೆ. ಬಸ್ ಚಾಲಕರಂತೂ ಅನುಭವಿಸುವ ಯಾತನೆ ಹೇಳತೀರದು. ಪಾಲಿಕೆಯು ಕೆಲವು ತಿಂಗಳ ಹಿಂದೆಯೇ ಇದನ್ನು ಸ್ಥಳಾಂತರಿಸಿ ಬಸ್ ಡಿಪೋ ಎದುರು ಸಂತೆ ನಡೆಸುವಂತೆ ಮಾಡಲು ಸಿದ್ಧತೆ ನಡೆಸಿತ್ತಾರಾದರೂ  ಅದು ಇನ್ನೂ ಆರಂಭವಾಗಿಯೇ ಇಲ್ಲ.
ಮಿಳಘಟ್ಟ ಸಂತೆಗೆ ಜನಸಂದಣಿಯೇ ಸೇರುತ್ತದೆ. ಅಕ್ಕಪಕ್ಕದ ಹತ್ತಾರು ಬಡಾವಣೆಯವರು ಸಂತೆಗೆ ಬರುತ್ತಾರೆ. ಆದ್ದರಿಂದ ಇದು ಗಾಂಧಿಬಜಾರ್ ಸಂತೆಯಂತೆಯೇ ಆಗಿದೆ. ತರಕಾರಿ ಮಾರಾಟಗಾರರೂ ಸಹ ಅತಿ ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ರಸ್ತೆಯಂಚಿನಲ್ಲೇ ಟೆಂಟ್ ಹಾಕಿ ಮಾರಾಟ ಮಾಡುವುದು ವಾಹನ ಸಂಚಾರಕ್ಕೆ, ಜನರು ಓಡಾಡಲು ತೊಂದರೆಯಾಗಿದೆ. ಹಾಗೆಂದು ಈ ಸಂತೆಯನ್ನು ಬಂದ್ ಮಾಡಲು ಸಾಧ್ಯವಿಲ್ಲದಂತಾಗಿದೆ. ಏಕೆಂದರೆ ಸುಮಾರು 30-35 ವರ್ಷದಿಂದ ಇದು ನಡೆದುಕೊಂಡು ಬಂದಿದೆ. ಈ ಭಾಗದ ಜನರಿರು ಗಾಂಧಿಬಜಾರ್ ತರಕಾರಿ ಮಾರುಕಟ್ಟೆಗೆ ಹೋಗಿ ಖರೀದಿ ಮಾಡುವ ಅವಶ್ಯಕತೆಯೇ ಇಲ್ಲದಂತಾಗಿದೆ.
ಒಂದೆಡೆ ಈ ಸಂತೆಯಿಂದ ಸಹಸ್ರಾರು ಜನರಿಗೆ ಅನುಕೂಲವಾಗಿದೆಯಾದರೂ ಇನ್ನೊಂದೆಡೆ, ವಾರದ ಸಂತೆಯನ್ನು ಸ್ಥಳಾಂತರ ಮಾಡಬೇಕೆಂಬ ಆಗ್ರಹ ಮೊದಲಿನಿಂದಲೂ ಕೇಳಿಬರುತ್ತಿದೆ. ಕಾರಣವೇನೆಂದರೆ ಸಂಚಾರಕ್ಕೆ ತೊಂದರೆಯಾಗುತ್ತಿರುವುದು. ಇದು ನಿಜವೂ ಹೌದು, ಜೊತೆಗೆ ಸ್ಥಳಾಂತರ ಅನಿವಾರ್ಯ ಸಹ ಆಗಿದೆ. ಸಂತೆಗೆ ಬರುವವರ ಸಂಖ್ಯೆಯೂ ಹೆಚ್ಚಿದೆ. ವ್ಯಾಪಾರಸ್ಥರ ಸಂಖ್ಯೆಯೂ ಏರುತ್ತಿದೆ.
ಕೆಲವು ವರ್ಷಗಳ ಹಿಂದೆ ಇಲ್ಲಿ ಅಪಘಾತವಾಗಿ ಸಾವು ಸಹ ಸಂಭವಿಸಿದ ಉದಾಹರಣೆ ಇದೆ. ಇದರ ಹೊರತಾಗಿ ಸಣ್ಣಪುಟ್ಟ ಅಪಘಾತ ಪ್ರತಿವಾರ ನಡೆಯುತ್ತದೆ. ಪ್ರತಿ ಮಂಗಳವಾರ ಇಲ್ಲಿ ಸಂತೆ ನಡೆಯುತ್ತಿದ್ದು, ರಸ್ತೆ ಅಂಚಿನಲ್ಲೇ ತರಕಾರಿ ಮಾರಾಟ ಮಾಡಲಾಗುತ್ತಿದೆ. ಇದು ಗೋಪಾಳಕ್ಕೆ ಸೇರುವ ಪ್ರಮುಖ ರಸ್ತೆಯಾಗಿರುವುದರಿಂದ ಜೊತೆಗೆ ಸಾಕಷ್ಟು ಸಿಟಿ ಬಸ್‌ಗಳು ಹಾದು ಹೋಗುವುದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಸಂತೆಗೆ ಬಂದವರೂ ಸಹಾ ಅತ್ತಿಂದಿತ್ತ ಸಂಚರಿಸುವಾಗ ಅಪಘಾತ ಸಂಭವಿಸಿದ ಸಾಕಷ್ಟು ಉದಾಹರಣೆ ಇಲ್ಲಿದೆ. ಸಾರ್ವಜನಿಕರು ಇದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಮಾರ್ಗದಲ್ಲಿ ಬಸ್ ಸಂಚಾರವನ್ನು ಬದಲಿಸಲು ಸಾಧ್ಯವಿಲ್ಲದಿರುವುದರಿಂದ ಸಂತೆಯನ್ನು ಬೇರೆಡೆ ಸ್ಥಳಾಂತರ ಮಾಡಬೇಕೆನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಪಕ್ಕದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ಇದ್ದು, ತರಕಾರಿ ಮಾರಾಟಗಾರರು ಉಳಿದ ತರಕಾರಿಗಳನ್ನು ಸಂಜೆ ಅಲ್ಲಿಂದ ಜಾಗ ಬಿಡುವಾಗ ಬಿಸಾಡಿ ಗಲೀಜು ಮಾಡುತ್ತಿದ್ದಾರೆ. ಇವು ಒಂದೆಡೆ ಕೊಳೆತು ನಾರುತ್ತಿದ್ದರೆ ಇನ್ನೊಂದೆಡೆ ಕತ್ತೆ, ಹಂದಿ, ನಾಯಿ, ದನಕರು ಅಲ್ಲಿಯೇ ತಿಂದು ಗಲೀಜು ಮಾಡುತ್ತಿವೆ. ವಿದ್ಯಾರ್ಥಿಗಳಿಗೆ ರೋಗ ರುಜಿನು ಹರಡುವ ಸಾಧ್ಯತೆ ಹೆಚ್ಚಿದೆ. ಶಬ್ದಮಾಲಿನ್ಯ, ಪರಿಸರ ಮಾಲಿನ್ಯ ಕೂಡ ಆಗುತ್ತಿದೆ.
ಪಾಲಿಕೆಯ ಅಧಿಕಾರಿಗಳು, ಹಿಂದಿನ ಜಿಲ್ಲಾಧಿಕಾರಿ, ಮೇಯರ್, ಶಾಸಕರು ಕೆಲವು ತಿಂಗಳ ಹಿಂದೆಯೇ ಸಂತೆ ಸ್ಥಳಾಂತರ ಸಂಬಂಧ ಸ್ಥಳಪರಿಶೀಲನೆ ನಡೆಸಿದ್ದರು. ಇದಕ್ಕೆ ಒಪ್ಪಿಗೆಯೂ ಆಗಿತ್ತು. ಆದರೆ ಹೊಸದಾಗಿ ಸಂತೆ ಮಾಡುವಲ್ಲಿ ಇನ್ನೂ ಕಾಮಗರಿಯಾಗಿಲ್ಲದಿರುವುದು ಸ್ಥಳಾಂತರ‌್ಕಕೆ ಅಡ್ಡಿಯಾಗಿದೆ. ಪಾಲಿಕೆಯವರು ಕೂಡಲೇ ಅಲ್ಲಿ ಮೂಲಸೌಕರ್ಯ ಸಹಿತ ಎಲ್ಲ ವ್ಯವಸ್ಥೆ ಕಲ್ಪಿಸಿದರೆ ಸ್ಥಳಾಂತರ ಸುಲಭವಾಗುತ್ತದೆ.



------------------------------

Tuesday, 7 February 2017

ಅಪರಾಧ ಕೃತ್ಯ: ಯುವಶಕ್ತಿ ಮುಂದೆ
 ನಗರದ ಬಹುತೇಕ ಅಪರಾಧ ಕೃತ್ಯಗಳಲ್ಲಿ ಯುವಕರೇ ಹೆಚ್ಚು ಆರೋಪಿಗಳು


ಸುಲಭದಲ್ಲಿ ಹಣಗಳಿಸುವ ದಂಧೆ ಒಮ್ಮೆ ವಿದ್ಯಾರ್ಥಿಗಳಿಗೆ ಅಥವಾ ಯುವಜನತೆಗೆ ಎದುರಾದರೆ ಅದರಿಂದ ಇನ್ನಷ್ಟು ಶೋಕಿ ಜೀವನಕ್ಕೆ ಅವರು ಮಾರುಹೋಗುತ್ತಾರೆ. ವಿವಿಧ ಆಕರ್ಷಣೆಗಳು ಸಹ ಈ ರೀತಿ ಕೃತ್ಯಕ್ಕೆ ಪ್ರೋತ್ಸಾಹ ನೀಡುತ್ತಿವೆ. ಒಮ್ಮೆ ದರೋಡೆ ಮಾಡಿದ ನಂತರ ಅದರಲ್ಲಿ ಯಶಸ್ವಿಯಾದರೆ ಇನ್ನೊಂದಷ್ಟು ಇಂತಹ ಕೃತ್ಯ ಮಾಡಲು ಆತ ಉದ್ಯುಕ್ತನಾಗುತ್ತಾನೆ. ಕಾನೂನು, ಪೊಲೀಸ್ ಎಲ್ಲರನ್ನೂ ನಿರ್ಲಕ್ಷಿಸುತ್ತಾನೆ. ಹೆಚ್ಚು ಹೆಚ್ಚು ಹಣ ಸಂಪಾದಿಸುವುದರತ್ತ ಆತನ ಗುರಿ ಇರುತ್ತದೆ. ತಾನು ಮಾತ್ರವಲ್ಲ, ಇತರ ಕೆಲವು ಯುವಕರನ್ನು ಇದಕ್ಕೆ ಬಳಸಿಕೊಳ್ಳುತ್ತಾನೆ. ಇದರಿಂದ ಅವರೂ ಕೂಡ ಹಾದಿ ತಪ್ಪುತ್ತಾರೆ. ಯುವಜನತೆ ಅಪರಾಧ ಕೃತ್ಯದಲ್ಲಿ ಹೆಚ್ಚು ಹೆಚ್ಚು ಸಿಕ್ಕಿಬೀಳುತ್ತಿರುವುದು ನಿಜಕ್ಕೂ ಆತಂಕದ ವಿಚಾರ.
- ಎಸ್‌ಪಿ ಅಭಿನವ್ ಖರೆ


ಅಂದು 2016ರ  ಸೆಪ್ಟೆಂಬರ್ 12.  ಐವರು ಯುವಕರು  ಬೈಕಿನಲ್ಲಿ ರಾತ್ರಿ ವೇಳೆ ಸುತ್ತಾಡುತ್ತಾ, ರಸ್ತೆಯಂಚಿನ ಸ್ಟಾಲಲ್ಲಿ ಟೀ ಕುಡಿಯುತ್ತಾ, ಸಿಗರೇಟು ಎಳೆಯುತ್ತಾ ನಿಲ್ಲುತ್ತಾರೆ. ಇಷ್ಟೆಲ್ಲಾ ಆದ ಮೇಲೆ ಮತ್ತೆ ರೌಂಡ್ ಹೊಡೆಯುವ ಆಸೆ ಹುಟ್ಟುತ್ತದೆ. ಹೀಗೆ ಬೆಳಗಿನ ಜಾವ 4 ಗಂಟೆಯವರೆಗೆ ಸುತ್ತುತ್ತಾ ಬೈಪಾಸ್ ಬಳಿ ಬರುತ್ತಾರೆ. ಆ ವೇಳೆ ಎಷ್ಟೋ ದೂರದಿಂದ ಸರಕು ಸಾಗಾಣೆಯ ಲಾರಿ ಚಾಲಕ ಬಂದು ನಿಲ್ಲಿಸಿ ನಿದ್ದೆಗೆ ಶರಣಾಗುತ್ತಾನೆ. ಅಂಡಲೆಯುತ್ತಿದ್ದ ಈ ಯುವಕರ ಗುಂಪಿಗೆ ಲಾರಿ ಹೊರರಾಜ್ಯದ್ದು ಮತ್ತು ತುಂಬಾ ಸರಕು ಇರುವುದು ಗಮನಕ್ಕೆ ಬಂದು ಚಾಲಕನಲ್ಲಿ  ಅಪಾರ ಹಣವಿರಬಹುದೆಂದು ಊಹಿಸುತ್ತಾರೆ. ಎಲ್ಲಿಂದಲೋ ಮಾರಕಾಸ್ತ್ರ ತರುತ್ತಾರೆ. ಲಾರಿಗೆ ಏಕಾಏಕಿ ನುಗ್ಗಿ ಹಣ ಕೊಡುವಂತೆ ಮಾರಕಾಸ್ತ್ರದಿಂದ ಹೆದರಿಸುತ್ತಾರೆ. ಭಯಗೊಂಡ ಚಾಲಕ ಮತ್ತು ಕ್ಲೀನರ್ ಜೀವ ಉಳಿದರೆ ಸಾಕೆಂದು ತಮ್ಮಲ್ಲಿದ್ದ ನಗದು 55 ಸಾವಿರ ರೂ. ಮತ್ತು ಮೊಬೈಲ್, ವಾಚು ಕೊಟ್ಟುಬಿಡುತ್ತಾರೆ.
ಗುಂಪಿನಲ್ಲಿದ್ದ ಐವರು ತಲಾ 11 ಸಾವಿರದಂತೆ ಹಂಚಿಕೊಂಡು ಮನೆಗೆ ಹೋಗಿ ಮಲಗುತ್ತಾರೆ. ಮತ್ತೆ ಸಂಜೆ ಸೇರುತ್ತಾರೆ. ಶ್ರಮವಿಲ್ಲದೆ ಹಣ ಲೂಟಿ ಮಾಡಿದ್ದನ್ನು ಸ್ಮರಿಸುತ್ತ ಇದನ್ನು ಮತ್ತೆ ಇನ್ನು ಕೆಲವರನ್ನು ಸೇರಿಸಿಕೊಂಡು ಮುಂದುವರೆಸಲು ನಿರ್ಧರಿಸುತ್ತಾರೆ. ಇದಾದ ಎರಡು ದಿನದ ನಂತರ ಮತ್ತೆ ಸ್ಕೆಚ್ ಹಾಕುತ್ತಾರೆ. ಕಿಸೆಯಲ್ಲಿ ಚಾಕು, ಸಣ್ಣದೊಂದು ಕತ್ತಿ, ಮಚ್ಚು ಇಟ್ಟುಕೊಂಡು ಕತ್ತಲಾಗುತ್ತಿದ್ದಂತೆಯೇ ನಗರ ಸಂಚಾರಕ್ಕಿಳಿಯುತ್ತಾರೆ. ಕೆ.ಆರ್. ಪುರಂ ರಸ್ತೆಯಲ್ಲಿ ರಾತ್ರಿ 10:30ರ ವೇಳೆ ಜನಸಂದಣಿ ಸ್ವಲ್ಪ ಕಡಿಮೆ ಇರುತ್ತದೆ. ವ್ಯಕ್ತಿಯೊಬ್ಬರು ನಡೆದು ಬರುತ್ತಿರುತ್ತಾರೆ. ಅವರನ್ನು ಕಂಡಕೂಡಲೇ ದರೋಡೆ ಮಾಡುವ ಯೋಚನೆ ಹೊಳೆಯುತ್ತದೆ. ದೂರದಿಂದ ಅವರಿಗೆ ಕಲ್ಲಿನಲ್ಲಿ ಹೊಡೆಯುತ್ತಾರೆ. ನಂತರ ಹತ್ತ್ತಿರ ಬಂದು ಬ್ಲೇಡ್ ತೋರಿಸಿ ಹಣಕ್ಕಾಗಿ ಒತ್ತಾಯಿಸುತ್ತಾರೆ. ಹಣ ಕೊಡಲೊಲ್ಲೆ ಎಂದಾಗ ಬ್ಲೇಡ್‌ನಿಂದ ಕುತ್ತಿಗೆಗೆ ಗಾಯಮಾಡುತ್ತಾರೆ. 2200 ರೂ. ಕಿತ್ತುಕೊಂಡು ಕಾಲ್ಕೀಳುತ್ತಾರೆ.
ಇದು ಯಾವ ಸಿನಿಮಾ ಕತೆಯಲ್ಲ. ನಗರದ 11 ಯುವಕರು ಶ್ರಮವಿಲ್ಲದೆ ಹಣಗಳಿಸುವ ಮಾರ್ಗವನ್ನು ಕಂಡುಕೊಂಡ ರೀತಿ. ಈ ಯುವಕರು ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಮೇಲಿನ ಎರಡು ಘಟನೆ ನಂತರ ತಾವು ಯಶಸ್ವಿ ದರೋಡೆಕೋರರಾಗಿದ್ದರಿಂದ ಇನ್ನೂ ನಾಲ್ಕು ದರೋಡೆ ಮಾಡಿದ್ದಾರೆ. ಆದರೆ ಅಲ್ಲಿಗೆ ಅವರ ನಸೀಬು ಕೈಕೊಟ್ಟಿತ್ತು. ಪೊಲೀಸರು ಕಾದು ಕುಳಿತಿದ್ದರು. ಅವರ ದಾಳಕ್ಕೆ ಸಿಕ್ಕುಬಿದ್ದು ಈಗ ಜೈಲು ಕಂಬಿ ಎಣಿಸುತ್ತಿದ್ದಾರೆ.
     ಯುವಕರು ಶೋಕಿಗಾಗಿ ತಮ್ಮ ಯೌವ್ವನವನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ. ಶ್ರಮವಹಿಸಿ ದುಡಿದು ಕುಟುಂಬವನ್ನು ಸಾಕುವುದರ ಜೊತೆಗೆ ಆರ್ಥಿಕವಾಗಿ ಬಲಿಷ್ಠವಾಗುವುದನ್ನು ಯೋಚಿಸುವ ಅಥವಾ ಜೀವನದ ದಾರಿಯನ್ನು ಕಂಡುಕೊಳ್ಳುವುದನ್ನು ಬಿಟ್ಟು ಮೋಜು-ಮೇಜವನಿಗಾಗಿ ತಪ್ಪು ದಾರಿ ತುಳಿಯುತ್ತಿದ್ದಾರೆ,ಜೈಲು ಪಾಲಾಗುತ್ತಿದ್ದಾರೆ. ಇದೇ ರೀತಿಯ ಇನ್ನೂ ಎರಡು ಘಟನೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಯುವಕರು 2 ತಿಂಗಳಲ್ಲಿ ಶಿವಮೊಗ್ಗದಲ್ಲಿ ಸೆರೆಮನೆ ಸೇರಿದ್ದಾರೆ.
ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಉತ್ತಮ ಯುವಕರಾಗಿ, ಸಮಾಜಮುಖಿಯಾಗಿ ಬಾಳುವುದನ್ನು ಕಲಿಯಬೇಕಿದ್ದ ವಯಸ್ಸಿನಲ್ಲಿ ಮಾಡಬಾರದ ಕೆಲಸಕ್ಕೆ ಕೈ ಹಾಕಿ ಇಡೀ ಭವಿಷ್ಯವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಮೋಜಿನ ಜೀವನದ ಬಯಕೆ. ಕೈಲೊಂದು ಆಧುನಿಕ ಮಾಡೆಲ್ ಬೈಕ್, ಬೆಲೆಬಾಳುವ ಮೊಬೈಲ್,  ಸದಾ ಹೊಗೆ ಹಾರುವ ಸಿಗರೇಟು, ಸಂಜೆಯಾಯಿತೆಂದರೆ ಬಾರಿನಲ್ಲಿ ಕಾರುಬಾರು, ಹಣ ಬೇಕೆಂದರೆ ಮತ್ತೆ ದರೋಡೆಗಿಳಿಯುವುದು.
  ವಿದ್ಯಾರ್ಥಿ ಜೀವನದಲ್ಲೇ ಕೆಟ್ಟ ಸಹವಾಸಕ್ಕೆ ಬಿದ್ದು, ಬೇಡದ ಚಟಗಳನ್ನು ಅಂಟಿಸಿಕೊಂಡು ಕುಟುಂಬದವರೊಂದಿಗೆ ಜಗಳವಾಡುತ್ತ ಅವರಿಗೇ ಹೊರೆಯಾಗುತ್ತಿರುವುದು ಕಂಡುಬರುತ್ತಿದೆ. ಕುಟುಂಬದ ಜವಾಬ್ದಾರಿ ಹೊರುವುದನ್ನು ಬಿಟ್ಟು ಅವರಿಗೇ ಭಾರವಾಗುತ್ತಿದ್ದಾರೆ. ಇನ್ನೊಂದೆಡೆ ಬಹುತೇಕ ಸಂದರ್ಭಗಳಲ್ಲಿ  ಪಾಲಕರಿಗೆ ತಮ್ಮ ಮಕ್ಕಳು ಎಲ್ಲಿಗೆ ಹೋಗುತ್ತಾರೆ., ಏನು ಮಾಡುತ್ತಾರೆ ಎನ್ನುವುದೇ ತಿಳಿದಿರುವುದಿಲ್ಲ. ಸಂಜೆಯಾಯಿತೆಂದರೆ ಮನೆಯಿಂದ ಹೊರಹೋಗುವುದು ಏಕೆ ಎಂದು ಯಾವ ಪಾಲಕರೂ ಪ್ರಶ್ನಿಸುವುದಿಲ್ಲ. ಮಕ್ಕಳು ದಾರಿತಪ್ಪುವಲ್ಲಿ ತಮ್ಮ ಪಾತ್ರವೂ ಇದೆ ಎನ್ನುವುದು ಅವರಿಗೆ ಗೊತ್ತ್ತಾಗುವ ವೇಳೆ ಮಕ್ಕಳು ಜೈಲು ಹಕ್ಕಿಯಾಗಿರುತ್ತಾರೆ.
18ರಿಂದ 23ರ ಯುವಕರೇ ಇತ್ತೀಚಿನ ಬಹುತೇಕ ಅಪರಾಧಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಹೆಸರಿಗೆ ಗಾರೆ ಕೆಲಸ, ಪೇಂಟಿಂಗ್, ಹಣ್ಣು, ತರಕಾರಿ ಮಾರಾಟ ಎಂದು ಹೇಳುತ್ತಾರೆ. ಆದರೆ ಎಲ್ಲೋ ಒಂದು ದಿನ ಕೆಲಸಕ್ಕೆ ಹೋಗುವುದು, ಉಳಿದ ದಿನ ಕೆಟ್ಟವರ ಸಹವಾಸಕ್ಕೆ ಬಿದ್ದು ದಾರಿ ತಪ್ಪಿ ಮಾಡಬಾರದ ಕೆಲಸ ಮಾಡುತ್ತಿದ್ದಾರೆ. ಇಂತಹ ಯುವಶಕ್ತಿ ದೇಶದ ಆಶಾಕಿರಣವಾಗಬೇಕಿತ್ತು. ಭವ್ಯ ಭಾರತದ ನಿರ್ಮಾರ್ತೃರಾಗಬೇಕಾದವರು ದರೋಡೆಯಂತಹ ಕೃತ್ಯ ಎಸಗಿ ಸಿಕ್ಕಿಬೀಳುತ್ತಿದ್ದಾರೆ.
ಇದು ಪೊಲೀಸರಿಗೆ ಒಂದು ರೀತಿಯ ತಲೆನೋವನ್ನು ತಂದಿದ್ದರೆ, ಇನ್ನೊಂದೆಡೆ ಇಡೀ ಕುಟುಂಬದವರಿಗೆ ಅವಮಾನಕರ ವಿಚಾರ. ಸಮಾಜಕ್ಕೆ ಕಂಟಕಪ್ರಾಯರಾಗುತ್ತಿರುವ ಇಂತಹವರನ್ನು ಸರಿ ದಾರಿಗೆ ತರುವವರಾರು ಎನ್ನುವ ಪ್ರಶ್ನೆ ಮತ್ತೆ ನಮ್ಮ ಮುಂದೆ ಬೃಹದಾಕಾರವಾಗಿ ನಿಲ್ಲುತ್ತದೆ.



,,,,,,,,,,,,,,,,,,,,,,,,,,