ಭೂಗತಲೋಕಕ್ಕೆ ಕಾಲಿಡುತ್ತಿರುವ ಮರಿರೌಡಿಗಳು
ಸುಂದರ ಕನಸನ್ನು ಕಂಡು ಅದಕ್ಕೊಂದು ರೂಪು ಕೊಟ್ಟು ಬದುಕನ್ನು ಕಟ್ಟಿಕೊಂಡು ಅದರಲ್ಲಿ ವಿಹರಿಸಬೇಕಾದ ಕೆಲವು ಯುವಕರು ಯಾವುದೋ ಆಮಿಷ ಅಥವಾ ಆಕರ್ಷಣೆಗೆ ಒಳಗಾಗಿ ಕೈಯ್ಯಾರೆ ಜೀವವನ್ನು ಹೊಸಕಿಹಾಕಿಕೊಳ್ಳುವಂತಹ ಸನ್ನಿವೇಶವನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ರೌಡಿಯಾಗಿ ಘರ್ಜಿಸಿ, ಆರ್ಭಟಿಸಿದವರೆಲ್ಲ ಮಣ್ಣಾಗಿ ಹೋಗಿದ್ದಾರೆ ಎನ್ನುವುದು ಗೊತ್ತಿದ್ದರೂ ಮತ್ತದೇ ದಾರಿಯಲ್ಲಿ ಸಾಗಲು ಹಾತೊರೆಯುತ್ತಿರುವುದು ವಿಚಿತ್ರವಾಗಿದೆ.
ರಕ್ತ ಕೊಡುವುದು, ರಕ್ತ ಪಡೆಯುವುದು ಎರಡೂ ನನ್ನ ರಕ್ತದಲ್ಲೇ ಬಂದಿದೆ (ಖೂನ್ ಲೇನಾ, ಖೂನ್ ದೇನಾ, ಮೇರೆ ಖೂನ್ ಮೇ ಆಯಾ ಹೈ) ಎಂಬ ಮಾತು ಭೂಗತ ಲೋಕದಲ್ಲಿದೆ. ಇದನ್ನು ಅರಿತುಕೊಂಡೇ ಮರಿರೌಡಿಗಳು ಕಾಲಿಡುತ್ತಿದ್ದಾರೆ. ಭೂಗತ ಲೋಕದಲ್ಲೂ ರಕ್ತಕ್ಕಾಗಿ ರಕ್ತ ಎಂಬ ಮಾತಿರುವುದು ತಿಳಿದುಬರುತ್ತದೆ. ಕೈಯಲ್ಲಿ ಮಚ್ಚು, ಲಾಂಗ್, ಕತ್ತಿ ಕೊಟ್ಟು ಬಹುಶಃ ಹೇಳಿಕೊಡುವುದು ಇದೇ ಮಾತನ್ನು. ಆದ್ದರಿಂದ ಯುದ್ಧರಂಗಕ್ಕೆ ನುಗ್ಗಿದ ವೀರಯೋಧ ಹೆದರದೆ ಸೆಣೆಸುವಂತೆ ಇಲ್ಲಿಯೂ ಜೀವದ ಹಂಗು ತೊರೆದು ಕಾಳಗ ನಡೆಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಚ್ಚು, ಲಾಂಗ್ ಬದಲು ಪಿಸ್ತೂಲುಗಳು ಕಾಲಿಟ್ಟಿದ್ದರೂ ಶಿವಮೊಗ್ಗದಲ್ಲಿ ಪುಡಿರೌಡಿಗಳ ಕೈಯಲ್ಲಿ ಮಚ್ಚುಗಳೇ ವಿಜೃಂಭಿಸುತ್ತಿವೆ.
ರೌಡಿಯಾಗುವ ಬಯಕೆ ಏಕೆ ಉಂಟಾಗುತ್ತದೆ ಎಂಬ ವಿಷಯವನ್ನು ಕೆದಕುತ್ತ ಹೋದಂತೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ ಮತು ನೆನೆಪಿಗೆ ಬರುತ್ತದೆ. ದ್ವೇಷ ಮೊದಲ ಕಾರಣವಾದರೆ, ರೌಡಿಯಾಗಿ ಜನಪ್ರಿಯತೆ, ಹೆಸರು ಗಳಿಸುವುದು, ಡಾನ್ ಆಗುವುದು, ತನ್ನ ಕೆಳಗೆ ಹತ್ತಾರು ಜನರನ್ನು ಇಟ್ಟುಕೊಳ್ಳುವುದು ಎರಡನೆಯ ಕಾರಣ.
ಇದರಲ್ಲಿ ಹಣ ಮಾಡುವ ಉದ್ದೇಶ ಎಲ್ಲೋ ಸ್ವಲ್ಪ ಪ್ರಮಾಣದಲ್ಲಿ ಮಾತ್ರ. ತನ್ನ ಮಿತ್ರನನ್ನೋ, ಸಹೋದರನನ್ನೋ, ತಂದೆಯನ್ನೋ, ಬಂಧುವನ್ನೋ ಒಬ್ಬ ರೌಡಿ ಕೊಂದರೆ, ಅದಕ್ಕೆ ಪ್ರತಿಯಾಗಿ ಆತನ ಪ್ರಾಣ ತೆಗೆಯುವ ಶಪಥ ಅಂದೇ ನಡೆಯುತ್ತದೆಯಂತೆ. ಇದಕ್ಕಾಗಿ ತಮ್ಮೆಲ್ಲ ಕಾರ್ಯಚಟುವಟಿಕೆ ಆರಂಭಿಸುತ್ತಾರೆ. ಕೊಲೆ ಮಾಡಿದವನು ಜೈಲಿಗೆ ಹೋದ ನಂತರ ಆತ ಹೊರಬರುವುದನ್ನೇ ಕಾಯುತ್ತಿರುತ್ತಾರೆ. ನಂತರ ಆತ ಎಲ್ಲೆಲ್ಲಿ ಹೋಗುತ್ತಾನೆ, ಏನು ವ್ಯವಹಾರ ಮಾಡುತ್ತಾನೆ, ಆತನ ದಿನಚರಿ ಏನೆನ್ನುವುದನ್ನು ಪಟ್ಟಿ ಮಾಡುತ್ತಾರೆ.
ತಮ್ಮ ಹಿಂಬಾಲಕರನ್ನು ಬಿಟ್ಟು ಆತನನನ್ನು ಫಾಲೋ ಮಾಡಿಸುತ್ತಾರೆ. ಒಂದು ದಿನ ಇದರ ಫೈನಲ್ ಕೆಲಸ ನಡೆಯುತ್ತದೆ. ಜನನಿಬಿಡವಿರಲಿ, ಜನವಿರಳವಿರಲಿ, ಎದುರಾಳಿ ಕಣ್ಣಿಗೆ ಬಿದ್ದಕ್ಷಣ ಹಿಂದೆ ಮುಂದೆ ನೋಡದೆ, ಬೆನ್ನಟ್ಟಿಯಾದರೂ ತರಕಾರಿ ಕೊಚ್ಚುವಂತೆ ಕೊಚ್ಚಿ ಬಿಸಾಡುತ್ತಾರೆ. ಹಾಗಂತ ಕೊಲೆ ಮಾಡುವವರಿಗೆ ತಾವೂ ಸಹ ಜೈಲಿಗೆ ಹೋಗುವುದು ನಿಶ್ಚಿತ ಎನ್ನುವುದು ಖಾತರಿಯಾಗಿರುತ್ತದೆ. ಮತ್ತೆ ಕೆಲವೇ ದಿನಗಳಲ್ಲಿ ಜಾಮೀನಿನಿನಲ್ಲಿ ಹೊರಬರುತ್ತೇವೆ ಎನ್ನುವುದೂ ಅಹ ಅಷ್ಟೇ ಚೆನ್ನಾಗಿ ಗೊತ್ತಿರುತ್ತದೆ.
ಹಿಗೆ ರೌಡಿಸಂ ಹಾವು ಏಣಿ ಆಟದಂತೆ ಆತನನ್ನು ಈತ, ಈತನನ್ನು ಆತ ಕೊಲ್ಲುತ್ತಲೇ ಮುಂದುವರೆಯುತ್ತದೆ. ಇವರಿಗೆ ಶಿಷ್ಯರ ಸಾಲು ಬೆಳೆಯುತ್ತಾರೆ. ತಾನು ಜೈಲಿಗೆ ಹೋದರೂ ಶಿಷ್ಯರು ಅದನ್ನು ಮುಂದುವರೆಸುವಂತೆ ಮಾಡುತ್ತಾರೆ. ಹೊಡೆದಾಟ, ಕೊಲೆ ಶಿಷ್ಯರ ಮೂಲಕ ಫುಲ್ ಸ್ಟಾಪ್ ಇಲ್ಲದಂತೆ ನಡೆಯುತ್ತಲೇ ಇರುತ್ತದೆ. ಕೆಲವು ಸಲ ಬೇಕೆಂತಲೇ ಕಾಲು ಕೆರೆದು ಜಗಳ ತೆಗೆದು ಅದನ್ನೇ ಕೊಲೆಗೆ ಕಾರಣವನ್ನಾಗಿ ಮಾಡುತ್ತಾರೆ. ಜೈಲು ಸೇರಿದ ನಂತರ ಅಲ್ಲಿ ನಡೆಯುವ ಮಾತುಕತೆಗಳೂ ಸಹ ಇದೇ ರೀತಿಯದ್ದು. ಅಲ್ಲಿಯೇ ತನ್ನಂತೆ ಕೊಲೆಗಾರರರ ಪರಿಚಯವಾಗುತ್ತದೆ. ಇನ್ನೊಂದು ಕೊಲೆಗೆ ಸ್ಕೆಚ್ ಶುರುವಾಗುತ್ತದೆ. ಅದಕ್ಕಾಗಿ ತಯಾರಿ, ಹಣ ಹೊಂದಾಣಿಕೆ ನಡೆಯುತ್ತದೆ. ಇತ್ತೀಚೆಗಂತೂ ಜೈಲಿನಲ್ಲಿ ಕುಳಿತೇ ಮೊಬೈಲ್ ಮೂಲಕ ಎಲ್ಲ ವ್ಯವಹಾರ ಮಾಡಿಸುತ್ತಾರೆ. ಕೊಲೆ ಮಾಡಿದ ನಂತರ ಎಲ್ಲಿಗೆ ಹೋಗಿ ಅಡಗಬೇಕು ಎಂಬ ಸಿದ್ಧತೆ ಮೊದಲೇ ನಿಗದಿಯಾಗಿರುತ್ತದೆ. ಕೆಲವೊಮ್ಮೆ ಸುಪಾರಿ ಕೊಡುವವರು ಇದಕ್ಕೆಲ್ಲ ಮೊದಲೇ ತಯಾರಿ ಮಾಡುತ್ತಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಈ ಹಿಂದೆ ಹೇಳಿದ್ದರು.
ಶಿವಮೊಗ್ಗದಲ್ಲಿ ಈಗ ರೌಡಿಸಂ ಮತ್ತೆ ಮೀಸೆ ಚಿಗುರದ ಕೆಲವು ಯುವಕರ ಕೈಲಿದೆ. ನಾಲ್ಕಾರು ದೊಡ್ಡ ರೌಡಿಗಳು ಇಂತಹ ಯುವಕರನ್ನು ಇಟ್ಟುಕೊಂಡು ರೌಡಿಸಂ ನಡೆಸುತ್ತಿದ್ದಾರೆ. ಇತ್ತೀಚೆಗೆ ಅಣ್ಣಾನಗರದಲ್ಲಿ ನಡೆದ ಕೊಲೆಯನ್ನೇ ಗಮನಿಸಿದರೆ ಇಲ್ಲಿ ಲೀಡರ್ ಮಾತ್ರ ಸೀನಿಯರ್. ಉಳಿದವರು 17ರಿಂದ 23ರ ಒಳಗಿನವರು. ಇದಕ್ಕೆ ಹೇತುವಾದದ್ದೂ ರೌಡಿಸಂ ದ್ವೇಷ. ಕತ್ತಿ, ಮಚ್ಚು, ಲಾಂಗ್ ಝಳಪಿಸುವುದನ್ನು ಸುಲಭದಲ್ಲಿ ಕಲಿಯುವ ಈ ಯುವಕರು ಉತ್ತಮ ಜೀವನಕ್ಕೆ ಬೇಕಾದ ಮಾರ್ಗವನ್ನು ಮಾತ್ರ ಕಲಿಯುತ್ತಿಲ್ಲ. ರೌಡಿಸಂ ಯುವಜನಾಂಗವನ್ನು ಸೆಳೆಯುತ್ತಿರುವುದು ಮಾತ್ರ ಆಶ್ಚರ್ಯಕರ. ಒಂದಲ್ಲ ಒಂದು ದಿನ ತನ್ನನ್ನೂ ಇದೇ ರೀತಿ ಕತ್ತರಿಸಿ ಎಸೆಯುತ್ತಾರೆ. ತನ್ನ ಮನೆಯವರಿಗೆ ಶವ ಸಹ ಸಿಗದೆ ಹೋಗಬಹುದೆಂಬ ಅರಿವಿದ್ದರೂ ಮಚ್ಚು, ಲಾಂಗ್ ಹಿಡಿಯುತ್ತಾರೆ.
....................
No comments:
Post a Comment