Friday, 30 September 2016

ಇನ್ನೆಲ್ಲಿ ಆ ನಗುಮೊಗದ ವ್ಯಕಿತ್ವ?

ಡಾ. ಅಶೋಕ್ ಪೈ ಅವರಿಗೆ ನುಡಿನಮನ


 ಡಾ. ಕೆ.ಎ. ಅಶೋಕ್ ಪೈ ಪ್ರಖ್ಯಾತ ಮನೋವೈದ್ಯ, ಸಿನಿಮಾ ನಿರ್ಮಾಪಕ, ಬರಹಗಾರ ಮತ್ತು ಚಿಂತಕರಾಗಿ ತಮ್ಮನು ಗುರುತಿಸಿಕೊಂಡವರು. ಮಾನಸಿಕ ರೋಗಿಗಳ ಚಿಕಿತ್ಸೆಗಾಗಿ ಎರಡು ದಶಕಗಳ ಹಿಂದೆ ಶಿವಮೊಗ್ಗದಂತಹ ಅತ್ಯಂತ ಚಿಕ್ಕ ಹಾಗೂ ಯಾವುದೇ ಸೌಲಭ್ಯ ಇಲ್ಲದ ಜಿಲ್ಲೆಯಲ್ಲಿ ಅತ್ಯಾಧುನಿಕ ಮಾನಸಾ ನರ್ಸಿಂಗ್ ಹೋಮ್‌ನ್ನು ಸ್ಥಾಪಿಸಿ, ದೇಶದ ಉದ್ದಗಲಕ್ಕೂ ಇದರ ಹೆಸರು ಪಸರಿಸುವಂತೆ ಮಾಡಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ಇಲ್ಲಿಗೆ ಜನರು ಚಿಕಿತ್ಸೆಗೆ ಬರುತ್ತಿದ್ದಾರೆ. ಕರ್ನಾಟಕದ ಮಟ್ಟಿಗೆ ಮಾನಸಾ ಆಸ್ಪತ್ರೆ ಮನೆಮಾತಾಗಿದೆ. ಬೆಂಗಳೂರಿನಲ್ಲಿ ನಿಮ್ಹಾನ್ಸ್‌ನ್ನು ಬಿಟ್ಟರೆ ಮಾನಸಿಕ ಆರೋಗ್ಯಕ್ಕೆ ಚಿಕಿತ್ಸೆಯನ್ನು ನೀಡುವಂತಹ ಏಕೈಕ ಆಸ್ಪತ್ರೆ ಇದು. ಇಲ್ಲಿ ಚಿಕಿತ್ಸೆ ಜೊತೆಗೆ ಸಲಹಾ ಕೇಂದ್ರವಿದೆ. ಪುನರ್ವಸತಿ ಇದೆ, ಸಂಶೋಧನಾ ಕೇಂದ್ರವಿದೆ.
ಡಾ. ಅಶೋಕ್ ಪೈ ಸತತ ಅಧ್ಯಯನಶೀಲರು. ಯಾವುದೇ ವಿಷಯದ ಬಗ್ಗೆ ನಿರರ್ಗಳವಾಗಿ ಮಾತನಾಡಬಲ್ಲವರು. ಸಮಾಜದಲ್ಲಿ ಹೆಚ್ಚುತ್ತಿರುವ ಮಾನಸಿಕ ರೋಗಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದವರು. ಈ ಸಂಬಂಧ ಹಲವಾರು ಪುಸ್ತಕಗಳನ್ನೂ ಅವರು ಬರೆದಿದ್ದಾರೆ. ಮಾನಸಿಕ ಆರೋಗ್ಯದ ಬಗ್ಗೆ ಇರುವ ಮೂಢನಂಬಿಕೆ ಮತ್ತು ಮಿಥ್ಯೆಗಳನ್ನು ಸುಳ್ಳು ಎಂದು ಪ್ರತಿಪಾದಿಸುತ್ತ, ಈ ಬಗ್ಗೆ ರೋಗಿಗಳಿಗೆ ಮತ್ತು ಅವರ ಬಂಧುಗಳಿಗೆ ಸತತ ಮಾರ್ಗದರ್ಶನ ಮಾಡುತ್ತಲೇ ಬಂದವರು. ದೇಶದ ಹಲವು ಪತ್ರಿಕೆಗಳಲ್ಲಿ, ಮ್ಯಾಗಜಿನ್‌ಗಳಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಇವರು ಬರೆದ ಅಂಕಣ ಇಂದಿಗೂ ಜನಪ್ರಿಯ. ಈ ಮೂಲಕ ಸಾರ್ವಜನಿಕ ಜಾಗೃತಿಯನ್ನು ಅವರು ಮಾಡಿದ್ದಾರೆ. ಆಕಾಶವಾಣಿ, ಟಿವಿ ಚಾನೆಲ್ ಅಷ್ಟೇ ಏಕೆ, ಸಿನಿಮಾ ನಿರ್ಮಿಸುವ ಮೂಲಕ ಅದರಲ್ಲೂ ಮಾನಸಿಕ ಆರೋಗ್ಯವನ್ನೇ ಕೇಂದ್ರವಾಗಿಟ್ಟುಕೊಂಡು ಸಮಾಜಕ್ಕೆ ಅತ್ಯುತ್ತಮ ಸಂದೇಶ ನೀಡಿದ್ದಾರೆ.
ಈ ಮೂಲಕ ದೇಶದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾ. ಪೈ ಅವರಿಗೆ ವಿಶೇಷ ಹೆಸರು ಗಳಿಸಿದ್ದಾರೆ. ಇವರ ಕೃತಿಗಳು ಮತ್ತು ಸಿನಿಮಾಗಳು ಈ ಕಾರಣದಿಂದಲೇ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿವೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಸಿನಿಮಾಗಳು ಪ್ರದರ್ಶಿತವಾಗಿವೆ. ಮಾನಸಿಕ ಆರೋಗ್ಯದ ಬಗ್ಗೆ ಸತತ ಆಧ್ಯಯನ ಮತ್ತು ಇದರ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಅವರು ಪಟ್ಟ ಪರಿಶ್ರಮ ನಿಜಕ್ಕೂ ಪ್ರಶಂಸಾರ್ಹವಾದುದು. ಸಾವಿನ ಮುನ್ನಾದಿನದವರೆಗೂ ಈ ಬಗ್ಗೆ ಹೋರಾಟ ಮುಂದುವರೆದೇ ಇತ್ತು.
ಅವರ ಇನ್ನೊಂದು ಮಹತ್ವದ ಸಾಧನೆ ಎಂದರೆ ಆಶಾಕಿರಣ ಸ್ಥಾಪನೆ. ಆಶಾಕಿರಣ ಮಾನಸಿಕ ರೋಗಿಗಳ (ವಿದಾರ್ಥಿಗಳ) ಪುನರ್ವಸತಿ ಶಾಲೆ. ಇದರಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲರಲ್ಲದವರ ಮಕ್ಕಳಿಗೆ ಮಾತ್ರ ಪ್ರವೇಶ. ಇದು ರೋಟರಿ ಅಂತಾರಾಷ್ಟ್ರೀಯ ಸಂಸ್ಥೆ ಸಹಕಾರದಿಂದ ಸ್ಥಾಪಿತವಾದ್ದು. ಈ ಸಾಮುದಾಯಿಕ ಮಾನಸಿಕ ಕೆಲಸಕ್ಕಾಗಿ ಡಾ. ಪೈ ಅವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಸಹ ಲಭಿಸಿದೆ.
ಡಾ ಪೈ ಈವರೆಗೆ ಮೂರು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಅವುಗಳೆಂದರೆ ಪ್ರಥಮ ಉಷಾಕಿರಣ, ಆಘಾತ ಮತ್ತು ಕಾಡಿನ ಬೆಂಕಿ. ಇದರೊಟ್ಟಿಗೆ ಹಿಂದಿಯಲ್ಲಿ ಒಂದು ಟೆಲಿಸೀರಿಯಲ್‌ಗಳನ್ನು ನಿರ್ಮಿಸಿದ್ದಾರೆ. ಇವೆಲ್ಲವೂ ಮಾನಸಿಕ ಆರೋಗ್ಯದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಮತ್ತು ಮೂಢನಂಬಿಕೆಯನ್ನು ಹಿಮ್ಮೆಟ್ಟಿಸುವ ಕುರಿತಾದದ್ದು. ಈ ಮೂರೂ ಸಿನಿಮಾಕ್ಕೆ ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿ ದಕ್ಕಿದೆ. ಇವರ ಇನ್ನೊಂದು ಪ್ರಮುಖ ಹವ್ಯಾಸವೆಂದರೆ ಅಧ್ಯಯನ ಪ್ರವಾಸ, ಸಂಶೋಧನೆ, ಮೋಜಿಗಾಗಿ ಎಂದೂ ವಿದೇಶ ಯಾತ್ರೆಯನ್ನು ಇವರು ಮಾಡಿಲ್ಲ. ಬದಲಿಗೆ, ಅಧ್ಯಯನ, ಸಮಾವೇಶ, ಉಪನ್ಯಾಸ, ಸಂಶೋಧನೆಗೆ ತೆರಳುತ್ತಿದ್ದರು.
ಸಂವಾದ, ವೈದ್ಯರ ಮತ್ತು ಇತರ ಉನ್ನತ ಅಧಿಕಾರಿಗಳ, ಸಂಸ್ಥೆಗಳ  ಸದಸ್ಯರೊಂದಿಗೆ, ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದು ಇವರ ಅತಿ ಮೆಚ್ಚಿನ ಹವ್ಯಾಸವಾಗಿತ್ತು. ಇತ್ತೀಚೆಗೆ ತಮ್ಮ ಹೊಸ ಯೋಜನೆ ಧರ್ಮ ಮತ್ತು ಮಾನಸಿಕ ಆರೋಗ್ಯ ಎನ್ನುವುದನ್ನು ಆರಂಭಿಸಿದ್ದರು. ತಮ್ಮ ತಂದೆ ದಿವಂಗತ ಕಟೀಲು ಅಪ್ಪುರಾವ್ ಪೈ ಹೆಸರಿನಲ್ಲಿ ಪ್ರತಿವರ್ಷ ದತ್ತಿ ಭಾಷಣವನ್ನು ದೇಶದ ವಿದ್ವಾಂಸರು, ತಜ್ಞರಿಂದ ಮಾಡಿಸುತ್ತಿದ್ದರು. ಇವರನ್ನು ಶಿವಮೊಗ್ಗಕ್ಕೆ  ಕರೆತಂದು ಜನತೆಗೆ ಅವರ ಜ್ಞಾನವನ್ನು ಉಣಬಡಿಸುತ್ತಿದ್ದರು.
ಶಿವಮೊಗ್ಗಕ್ಕೆ ಸಂಬಂಧಿಸಿ ಡಾ. ಪೈ ಅವರನ್ನು ಗಮನಿಸುವುದಾರೆ, ನಗರದ ಯಾವುದೇ ಚಟುವಟಿಕೆಯಲ್ಲಿ ಇವರು ಇಲ್ಲ ಎನ್ನುವುದಿಲ್ಲ. ಬೆಳ್ಳಿಮಂಡಲದಲ್ಲಿ ಗೌರವಾಧ್ಯಕ್ಷರಾಗಿದ್ದಾರೆ. ಈ ಮೂಲಕ ನಗರದಲ್ಲಿ ಚಲನಚಿತ್ರೋತ್ಸವ ನಡೆಯುವಂತೆ ಮಾಡಿದ್ದಾರೆ. ಸಾಮಾಜಿಕ ಕೆಲಸಗಳಲ್ಲೂ ಇವರು ಮುಂದು. ತಮ್ಮ ಮಾನಸಾ ಆಸ್ಪತ್ರೆಯಲ್ಲಿ ವಿವಿಧ ತಜ್ಞರಿಂದ ಉಪನ್ಯಾಸ, ವಿಶೇಷ ಸಂವಾದಗಳನ್ನು ನಡೆಸುವ ಮೂಲಕ ಜನರಲ್ಲಿ ವಿಶೇಷ ಅರಿವು ಮೂಡಿಸುತ್ತಿದ್ದರು. ಸಾಹಿತ್ಯಿಕ ಚಟುವಟಿಕೆಗಳಲ್ಲೂ ಎತ್ತಿದ ಕೈ. ಸ್ವತಃ ವೈದ್ಯ ಸಾಹಿತಿಯೂ ಆಗಿದ್ದುದು ಇದಕ್ಕೆ ಕಾರಣ. ನಗರದಲ್ಲಿ ಹಲವಾರು ರಾಷ್ಟ್ರೀಯ ಮಟ್ಟದ ವೈದ್ಯಕೀಯ ಸಮಾವೇಶಕ್ಕೆ ಇವರು ಕಾರಣಕರ್ತರಾಗಿದ್ದರು.
ನಗರದ ಎಲ್ಲಾ ಜನರನ್ನೂ ಒಂದೇ ರೀತಿಯಲ್ಲಿ ಕಾಣುವುದು ಇವರ ವಿಶೇಷ ಗುಣ ಎನ್ನಲೇಬೇಕು. ಯಾರೇ ಎದುರಾದರೂ ಕೈಕುಲುಕಿ ಮಾತನಾಡಿಯೇ ಮುಂದೆ ಸಾಗುತ್ತಿದ್ದರು. ಬೆಳ್ಳಿಯಿಂದ ಮಾಡಿದ್ದೆನ್ನುವಂತಹ ಉದ್ದನೆಯ ಹಿಂಬಾಚಿದ ಬಿಳಿ ಕೂದಲು, ಎತ್ತರದ ವ್ಯಕ್ತಿತ್ವ, ಅಷ್ಟೇ ಕಟ್ಟುಮಸ್ತಾದ ದೇಹ,  ಹಾಸ್ಯದ ಮಾತು, ಎಲ್ಲರೊಡನೆ ಉತ್ತಮ ಗೆಳೆತನ ಅವರದಾಗಿತ್ತು, ಇಂತಹ ವ್ಯಕ್ತಿ ಇಂದು ಮುಂಜಾನೆ ಮರಳಿಬಾರದ ಲೋಕಕ್ಕೆ ಪಯಣಿಸಿದ್ದಾರೆ ಎಂದರೆ ನಂಬಲಾಗುತ್ತಿಲ್ಲ.

  ಪ್ರಶಸ್ತಿಗಳು 
ಡಾ. ಬಿ.ಸಿ ರಾಯ್ ನ್ಯಾಶನಲ್ ಅವಾರ್ಡ್ ಫಂಡ್ ಸಂಸ್ಥೆಯ ಸೋಶಿಯೋ ಮೆಡಿಕಲ್ ರಿಲೀಫ್ ವಿಭಾಗದ ಪ್ರಶಸ್ತಿ-1999
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-1991
ಅತಿವಿಶಿಷ್ಟ ಚಿಕಿತ್ಸಾ ವಿಧಾನ ರಾಷ್ಟ್ರೀಯ ಪ್ರಶಸ್ತಿ (ನವದೆಹಲಿ)-1995
ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ
ಸಂದೇಶ ಮಾಧ್ಯಮ ಅವಾರ್ಡ್-1994
 ಆರ್ಯಭಟ ಪ್ರಶಸ್ತಿ- ಮನೋಲೋಕ ಕೃತಿಗಾಗಿ-1995
ಡಾ. ಎಸ್. ಜಯರಾಮ್ ಪ್ರಶಸ್ತಿ- ಪರೀಕ್ಷಾ ಫೋಬಿಯಾ ಲೇಖನಕ್ಕಾಗಿ-1990
ಬೀಚಿ ಪ್ರಶಸ್ತಿ- ಮನಶಸ್ತ್ರದಲ್ಲಿ ತಮಾಷೆಗಳು ಎಂಬ ಲೇಖನಕ್ಕಾಗಿ
 ಡಾ, ನರಸಿಂಹಯ್ಯ ಪ್ರಶಸ್ತಿ,
ಆರ್ಯಭಟ ಪ್ರಶಸ್ತಿ-  ಚಿತ್ತ ಚೇತನ ಕೃತಿಗಾಗಿ
ಹೊರನಾಡು ಕನ್ನಡಿಗೆ ಪ್ರಶಸ್ತಿ- ದುಬೈ ಕನ್ನಡ ಸಂಘದಿಂದ
ವಿದ್ಯಾರತ್ನ ಪ್ರಶಸ್ತಿ, ಭಾರತ್ ಗೌರವ್ ಸನ್ಮಾನ್,  ಪ್ರಕೃತಿ ಪ್ರಶಸ್ತಿ, ಇಂಟರ್‌ನ್ಯಾಶನಲ್ ಗೋಲ್ಡ್ ಸ್ಟಾರ್ ಪ್ರಶಸ್ತಿ,ಅಮೃತ್ ಮಹೋತ್ಸವ ಪ್ರಶಸ್ತಿ ಸೇರಿದಂತೆ ಹಲವರು ಪ್ರಶಸ್ತಿಗಳು ಇವರ ಮುಡಿಗೇರಿವೆ.

ಸಿನಿಮಾಗಳು:
ಕಾಡಿನಬೆಂಕಿ  -ಮಾನಸಿಕ ಮತ್ತು ಲೈಂಗಿಕ ವಿಚಾರಗಳಿಗೆ ಸಂಬಂಧಿಸಿದ್ದಾಗಿದ್ದು 1988-89ರ ಸಾಲಿನಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿದೆ.
ಆಘಾತ- ಮನಶಾಸ್ತ್ರದ ಕುರಿತಾದ ಅತ್ಯುತ್ತಮ ಚಿತ್ರವೆಂದು ಖ್ಯಾತಿ ಪಡೆದು ವಿಶೇಷ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿದೆ.
ಉಷಾ ಕಿರಣ- ಮಗುವಿನ ಮಾನಸಿಕ ಸಮಸ್ಯೆ ಕುರಿತಾದದ್ದು. ಇದಕ್ಕೆ 1990ರ ರಾಜ್ಯ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿ ಲಭಿಸಿದೆ. 1995ರ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು.
ಅಂತರಾಳ- ಇದು ಹಿಂದಿ ಟೆಲಿಸೀರಿಯಲ್ ಆಗಿದ್ದು,  ಮನೋಚಿಕಿತ್ಸೆಗೆ ಸಂಬಂಬಧಿಸಿದ್ದಾಗಿದೆ. ಇವರ ಸಹ ನಿರ್ದೇಶನದಲ್ಲಿ ಮುಚ್ಚಿದ ಬಾಗಿಲು ಸಿನಿಮಾವು ತೆರೆ ಕಡಮಿದೆ.

ಕೃತಿಗಳು:
ಮಾನಸಾ (ಮನಶಾಸ್ತ್ರ ಕುರಿತ ಮೊದಲ ಕೃತಿ), ನಿಮ್ಮದು ಸಮಸ್ಯೆಯ ಮಗುವೇ, ಉಷಾ ಕಿರಣ, ಹಾಸ್ಯ ರಶ್ಮಿ, ಚಿತ್ರ ವಿಚಿತ್ರ, ಮನೋವೈಜ್ಞಾನಿಕ ಸತ್ಯ ಕಥೆಗಳು, ಆಶಾಕಿರಣ, ಮನೋಲೋಕ, ಮಕ್ಕಳ ಮನಸ್ಸು, ಆಘಾತ, ಚಿತ್ತ ಚೇತನ, ಮುಚ್ಚಿದ ಬಾಗಿಲು.

ಅಲಂಕರಿಸಿದ ಹುದ್ದೆಗಳು:
ಭಾರತೀಯ ಮನೋವೈದ್ಯರ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷ
ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಮತ್ತು ಶೈಕ್ಷಣಿಕ ಸಮಿತಿಯ ಸದಸ್ಯ,
 ಕನ್ನಡ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ
ಕರ್ನಾಟಕ ರಾಜ್ಯ ಕೇಂದ್ರ ವಾಚನಾಲಯ ಮಂಡಳಿಯ ಸದಸ್ಯ
ರಾಜ್ಯ ಪರಿಸರ ಸಲಹಾ ಮಂಡಳಿಯ ಸದಸ್ಯ
ಭಾರತೀಯ ಮನಃಶಾಸ್ತ್ರಜ್ಞರ ಸೊಸೈಟಿಯ ಅಧ್ಯಕ್ಷ ಸ್ಥಾನ
ಭಾರತೀಯ ವೈದ್ಯಕೀಯ ಸಂಘದ ಅಜೀವ ಸಸದ್ಯತ್ವ
ಭಾರತೀಯ ಮನೋವೈದ್ಯರ ಸಂಘದ ಅಜೀವ ಸದಸ್ಯತ್ವ
ಜಿಲ್ಲಾ ಅಂಧರ ಸೊಸೈಟಿಯ ಅಧ್ಯಕ್ಷ
ಶಿವಮೊಗ್ಗ ರೋಟರಿ ಕ್ಲಬ್ ಅಧ್ಯಕ್ಷ
ಶಿವಮೊಗ್ಗದ ಪರಿಸರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ,
ಜಿಲ್ಲಾ ಕುಟುಂಬ ಯೋಜನಾ ಸಂಘದ ಅಧ್ಯಕ್ಷ
..........................................

Thursday, 29 September 2016

ಗೊಂಬೆಗಳ ಕ್ರೇಜ್ ಹೆಚ್ಚಿಸಿದ ದಸರಾ

  
ಶನಿವಾರದಿಂದ ದಸರಾ ಆರಂಭವಾಗುತ್ತಿದೆ. ದಸರಾದಲ್ಲಿ ಗೊಂಬೆಗಳ ಪೂಜೆಯೂ ವಿಶಿಷ್ಟವಾದ ಸಂಪ್ರದಾಯವನ್ನು ಹೊಂದಿದೆ. ಈ ಪೂಜೆಗೆ ಪ್ರತಿ ವರ್ಷ ಹೊಸ ಗೊಂಬೆಯನ್ನು ಎಲ್ಲಿಂದ ತರಬೇಕು ಎನ್ನುವ ಪ್ರಶ್ನೆ ಶಿವಮೊಗ್ಗದ ಜನರಿಗೆ ಉದ್ಭವಿಸದಂತೆ ಮಾಡಿದ್ದಾರೆ ಸವಿತಾ ಚಂದ್ರು ಅವರು. ನಗರದಲ್ಲಿ ಇಂತಹ ಅಂಗಡಿಯೊಂದರ ಅವಶ್ಯಕತೆ ಇರುವದನ್ನು ಅರಿತು ಅವರು ದುರ್ಗಿಗುಡಿಯಲ್ಲಿ ಆರಂಭಿಸಿದ ಟಾಯ್ ಶಾಪ್ ಈಗ ಗೊಂಬೆಗಳ ಮನೆಯಾಗಿ ಎಲ್ಲರನ್ನೂ ಆಕರ್ಷಿಸುತ್ತಿದೆ. ದಸರಾ ಗೊಂಬೆಯನ್ನು ಇಲ್ಲಿ ಖರೀದಿ ಮಾಡಬಹುದು, ನೋಡಿಯೂ ಆನಂದ ಪಡೆಯಬಹುದು.





ದಸರಾದಲ್ಲಿ ಗೊಂಬೆಗಳನ್ನು ಕೂಡ್ರಿಸಿ ಪ್ರದರ್ಶಿಸಿ ಪೂಜಿಸುವ ಸಂಪ್ರದಾಯ ರಾಜ್ಯದ ಕೆಲವು ಭಾಗಗಳಲ್ಲಿದೆ. ಈ ಗೊಂಬೆಗಳು ಬಹುತೇಕ ಮರದಿಂದ ಅಥವಾ ಮಣ್ಣಿನಿಂದ ಮಾಡಿದವಾಗಿರುತ್ತವೆ. ಈ ಹಿಂದೆ ಮದುವೆಯಾಗುವ ಮಗಳಿಗೆ ತವರುಮನೆಯವರು ಒಂದು ಜೊತೆ (ಗಂಡು-ಹೆಣ್ಣು ಇರುವ) ಗೊಂಬೆಯನ್ನು ಕೊಟ್ಟು ಗಂಡನ ಮನೆಗೆ ಕಳುಹಿಸುತ್ತಿದ್ದರು.  ಅವಳು ಆ ಗೊಂಬೆಯನ್ನು ಗಂಡನ ಮನೆಯಲ್ಲಿಟ್ಟು ರಾತ್ರಿ ವೇಳೆ ಪೂಜಿಸಬೇಕಿತ್ತು, ಜೊತೆಗೆ ಇನ್ನಿತರ ದೇವರ, ಜಾನಪದ, ಗೊಂಬೆಗಳನ್ನು ಪ್ರದರ್ಶನಕ್ಕಾಗಿ ಇಡಲಾಗುತ್ತಿತ್ತು. ಈ ಪದ್ಧತಿ ಇನ್ನೂ ಹಲವು ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿದೆ.
ನಗರದಲ್ಲಿ ಇಂತಹ ಗೊಂಬೆಗಳನ್ನೇ ಮಾರಾಟ ಮಾಡುವ ವಿಶೇಷವೆನ್ನಬಹುದಾದ ಅಂಗಡಿಯೊಂದಿದೆ. ದುರ್ಗಿಗುಡಿ ಶನೈಶ್ಚರ ದೇವಸ್ಥಾನದ ಪಕ್ಕದಲ್ಲೇ ಗೊಂಬೆ ಅಥವಾ ಟಾಯ್ ಶಾಪ್ ಇದೆ. ಸವಿತಾ ಚಂದ್ರು ಎನ್ನುವವರು ಇದರ ಮಾಲಿಕರು. ಸುಮಾರು ಮೂರುವರೆ ವರ್ಷದಿಂದ ಈ ಅಂಗಡಿಯನ್ನು ಅವರು ನಡೆಸಿಕೊಂಡು ಬರುತ್ತಿದ್ದಾರೆ. ಈ ಅಂಗಡಿ ತನ್ನದೇ ಆದ ಮಹತ್ವವನ್ನು ಈಗ ಹೊಂದಿದೆ. ಗೊಂಬೆ ಬೇಕೆಂದಾದರೆ ಎಲ್ಲರೂ ಅಲ್ಲಿಗೇ ಹೋಗಿ ತರಹೇವಾರು ಗೊಂಬೆಗಳನ್ನು ಖರೀದಿಸುತ್ತಾರೆ.
ಮಣ್ಣಿನಿಂದ ಮಾಡಿದ, ಮರದಿಂದ ತಯಾರಿಸಿದ ಗೊಂಬೆಗಳು ಮಾತ್ರ ಇಲ್ಲಿ ಲಭ್ಯ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಕೆಲವು ಗೊಂಬೆಗಳೂ ಇವೆ. ಆದರೆ ಪ್ಲಾಸ್ಟಿಕ್ ಗೊಂಬೆ ಇಲ್ಲಿಲ್ಲ. ಈ ಅಂಗಡಿಗೆ ಹೊಕ್ಕರೆ ಮನಸೆಳೆಯುವ ಗೊಂಬೆಗಳ ಸಾಲು ನಮ್ಮನ್ನು ಎದುರುಗೊಳ್ಳುತ್ತದೆ. ಆಂದ್ರದ ಕೊಂಡಪಲ್ಲಿಯ ಮತ್ತು ವಾರಣಾಸಿಯ ಗುಡಿಕೈಗಾರಿಕೆಯಲ್ಲಿ ತಯಾರಾದ ಆಕರ್ಷಕ ಮರದ ಗೊಂಬೆಗಳು ಮನಮೋಹಕವಾಗಿವೆ. ತಮಿಳುನಾಡಿನ ಕುಂಭಕೋಣಂನ ಮಣ್ಣಿನ ಗೊಂಬೆಗಳನ್ನು ಆಕರ್ಷಕವಾಗಿ ಜೋಡಿಸಿಡಲಾಗಿದೆ. ರಾಮಾಯಣ ಮತ್ತು ಮಹಾಭಾರತದ ಪಾತ್ರಧಾರಿಗಳು, ವಿವಿಧ ಜಾನಪದ ಮಾದರಿಯ, ಪ್ರಾಣಿಗಳು, ವಾದ್ಯಪರಿಕರಗಳು, ಮಕ್ಕಳು ಮನತಣಿಸುವ ಗೊಂಬೆಗಳು ಇಲ್ಲಿವೆ.
 ಕರ್ನಾಟಕದ ಚನ್ನಪಟ್ಟಣದ ಗೊಂಬೆಗಳು ಇಲ್ಲಿವೆ. ಶಿವಮೊಗ್ಗದಲ್ಲಿ ಗೊಂಬೆಗಳ ಅಗತ್ಯವಿರುವುದನ್ನು ಮತ್ತು ಈ ಮಾದರಿಯ ಅಂಗಡಿ ಇಲ್ಲದ್ದನ್ನು ಗಮನಿಸಿ ಸವಿತಾ ಅವರು ಇಂತಹ ಅಂಗಡಿಯನ್ನು ತೆರೆಯುವ ಸಾಹಸ ಮಾಡಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಅವರ ಪತಿಯ ಸಹಕಾರವೂ ಇದೆ. ದಸರಾಗೆ ಸುಮಾರು ಒಂದು ತಿಂಗಳ ಮೊದಲೇ ಹೊಸ ಮಾದರಿಯ ಗೊಂಬೆಗಳನ್ನು ತರಿಸುತ್ತಾರೆ. ನಂತರ ಅವುಗಳನ್ನು ಅಷ್ಟೇ ಸುಂದರವಾಗಿ ಜೋಡಿಸಿಡುತ್ತಾರೆ. ರಸ್ತೆಯಲ್ಲಿ ಹೋಗುವವರಿಗೂ ಸಹ ಅವು ಅತ್ಯಾಕರ್ಷಕವಾಗಿ ಗಮನಸೆಳೆಯುತ್ತವೆ. ದಸರಾದಲ್ಲಿ ಗೊಂಬೆ ಇಡುವವರು ಪ್ರತಿವರ್ಷ ಹೊಸ ಗೊಂಬೆಗಳ ಸಂಗ್ರಹವನ್ನು ಮಾಡುತ್ತಾರೆ. ಶಿವಮೊಗ್ಗದಲ್ಲಿ ಇಂತಹ ಸುಮಾರು 250ಕ್ಕೂ ಹೆಚ್ಚು ಖಾಯಂ ಗ್ರಾಹಕರು ಇವರಿಗಿದ್ದಾರೆ. ಅವರಿಗೆ ಬೇಕಾದ ಗೊಂಬೆಗಳನ್ನು ಸವಿತಾ ಮೊದಲೇ ಮಾಹಿತಿ ಪಡೆದು ತರಿಸಿಕೊಡುತ್ತಾರೆ.
ಎಲ್ಲೆಡೆ ಪ್ಲಾಸ್ಟಿಕ್ ಗೊಂಬೆಗಳೇ ರಾರಾಜಿಸುವ ಇಂದಿನ ದಿನಮಾನಗಳಲ್ಲಿ ಮರದ ಮತ್ತು ಮಣ್ಣಿನ ಗೊಂಬೆಯನ್ನು ಜನರು ಖರೀದಿಸುವ ಮೂಲಕ ಪರಿಸರ ಮಾಲಿನ್ಯವನ್ನು ತಪ್ಪಿಸಬಹುದು. ಜೊತೆಗೆ ಇವು ಪ್ಲಾಸ್ಟಿಕ್ ಗಿಂತ ಬಾಳಿಕೆ ಬರುವಂತಹವಾಗಿವೆ. ಜೊತೆಗೆ ಅಷ್ಟೇ ಸುಂದರವಾಗಿಯೂ ಇರುತ್ತವೆ. ಮನೆಯ ಶೋಕೇಸ್‌ನಲ್ಲಿ ರಾರಾಜಿಸುವಂತೆ ಮಾಡಲು ಸಾಕಷ್ಟು ಜನರು ಇಂತಹ ಗೊಂಬೆ ಖರೀದಿಸುತ್ತಾರೆ ಎನ್ನುತ್ತಾರೆ ಅವರು. ಗೊಂಬೆಯಷ್ಟೆ ಅಲ್ಲ, ಜೊತೆಗೆ ಚನ್ನಮಣೆ, ಕಡೆಗೋಲು, ಕಲ್ಲಿನ ಕಲಾಕೃತಿಗಳು, ಉಡುಗೊರೆಗೆ ಬಳಸಬಹುದಾದ ಮರದ ವಿಗ್ರಹಗಳು, ಮರದಿಂದ ತಯಾರಿಸಿದ ಆಕರ್ಷಕ ವಸ್ತುಗಳು ಸಹ ಇಲ್ಲಿ ಲಭ್ಯವಿವೆ.

Wednesday, 28 September 2016

ಮತ್ತೆ ಬಾಲ ಬಿಚ್ಚುತ್ತಿದ್ದಾರೆ ಕ್ರಿಮಿನಲ್ಸ್
  ಆರಂಭವಾಗಿದೆ ಸರಣಿಯೋಪಾದಿಯಲ್ಲಿ  ಅಪರಾಧ 

  ರಾಜೇಂದ್ರನಗರದಲ್ಲಿ ಮನೆ ದರೋಡೆಗೆ  ವಿಫಲ ಯತ್ನ, ವಿವೇಕಾನಂದ ನಗರದಲ್ಲಿ ಮರುಕಳಿಸಿದ ಸರಗಳ್ಳತನ, ಜೆಪಿ ನಗರದಲ್ಲಿ ರಾತ್ರಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ, ಊರಗಡೂರಿನಲ್ಲಿ ಬೇರೆ ಬೇರೆ ಜಾತಿಯ ಯುವಕ-ಯುವತಿ ಒಟ್ಟಿಗೆ ಹೋಗುವಾಗ ಎಳೆದೊಯ್ದು ಕೆಲವು ಯುವಕರಿಂದ ಹಲ್ಲೆ,........
ಇವು ಕಳೆದೊಂದು ವಾರದಲ್ಲಿ ಶಿವಮೊಗ್ಗ ನಗರ ವ್ಯಾಪ್ತ್ತಿಯಲ್ಲಿ ನಡೆದ ಕ್ರಿಮಿನಲ್ ಚಟುವಟಿಕೆಗಳು. ಇವುಗಳನ್ನು ಗಮನಿಸಿದಾಗ ಮತ್ತೆ ಹಳೆ ಕ್ರಿಮಿನಲ್ಸ್ ಬಾಲ ಬಿಚ್ಚುತ್ತಿದ್ದಾರೆಯೇ ಅಥವಾ ಹೊಸಬರು ಕ್ರಿಮಿನಲ್ ಕೆಲಸಕ್ಕೆ ಕೈ ಹಾಕುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಎಸ್‌ಪಿ ಬದಲಾದ ನಂತರ ಈ ಬೆಳವಣಿಗೆ ಚಿಗಿತುಕೊಳ್ಳುತ್ತಿದೆಯೇ, ಪೊಲಿಸರು ಒಂದೇ ತಿಂಗಳಲ್ಲಿ ಹಿಂದಿನ ಬಿಗು ಕ್ರಮವನ್ನು ಮರೆತುಬಿಟ್ಟರೇ ಅಥವಾ ಕೈಬಿಟ್ಟರೇ ಎಂಬೆಲ್ಲ ಚಿಂತನೆಗಳು ಹರಿದಾಡಲಾರಂಭಿಸಿವೆ.
 ಎಸ್ ಪಿ ಆಗಿ ಅಭಿನವ್ ಖರೆ ಜಿಲ್ಲೆಗೆ ಬಂದ ನಂತರ ಇನ್ನೂ ಏಕೊ ಅವರು ಸದ್ದು ಮಾಡಲಾರಂಭಿಸಿಲ್ಲ. ಇದರಿಂದ ಇಂತಹ ಚಟುವಟಿಕೆ ಹೆಚ್ಚುತ್ತಿದೆಯೇ ಎಂಬ ಅನುಮಾನ ಜನರಲ್ಲಿ ಬರುವಂತಾಗಿದೆ. ಖರೆಯವರು ಸದ್ದಿಲ್ಲದೆ ಕೆಲಸ ಮಾಡುತ್ತಿರಬಹುದು. ಅದು ಅಪರಾಧಿಗಳಿಗೆ ಗೊತ್ತಾಗದೆಯೇ ಇದ್ದಿರಲೂಬಹುದು. ಆದರೆ ಯಶಸ್ವಿ ಗಣೇಶೋತ್ಸವ ಮೆರವಣಿಗೆಯನ್ನು ನಿರ್ವಹಿಸಿದ ನಂತರ ಎಸ್‌ಪಿಯವರ ಹೆಸರು ಎಲ್ಲೂ ಕೇಳಿಬರುತ್ತಿಲ್ಲ.  
ಇದೇನೆ ಇರಲಿ, ಕೆಲವು ದಿನಗಳಿಂದ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ದಿಢೀರ್ ಆಗಿ ಅಪರಾಧ ಕೃತ್ಯಗಳು ಏರುಗತಿಯಲ್ಲಿ ಸಾಗುತ್ತಿವೆ. ವಿಶೇಷವಾಗಿ, ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸಮಾಜದ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ದುಷ್ಕೃತ್ಯಗಳಲ್ಲಿ ಕೆಲವು ಕಿಡಿಗೇಡಿಗಳು ನಿರಂತರವಾಗಿ ತೊಡಗುತ್ತಿರುವುದು ಕಂಡುಬರುತ್ತಿದೆ. ಹೆಚ್ಚುತ್ತಿರುವ ಕ್ರಿಮಿನಲ್ಸ್‌ಗಳ ಅಟ್ಟಹಾಸಕ್ಕೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವಿಫಲವಾಗಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಪೊಲೀಸರ ಕಾರ್ಯವೈಖರಿಯ ಬಗ್ಗೆ ನಾಗರಿಕರು ಸಾಮಾಜಿಕ ಜಾಲತಾಣ ’ವ್ಯಾಟ್ಸಾಪ್’ ಗ್ರೂಪ್‌ಗಳಲ್ಲಿ ಚರ್ಚೆ ನಡೆಸಲಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ  ಎಸ್. ಪಿ. ಅಭಿನವ್ ಖರೆ ಕ್ರಿಮಿನಲ್ಸ್‌ಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ.
 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ಎಸ್.ಪಿ.ಯಾಗಿ ಆಗಮಿಸಿದ್ದ ಸಂದರ್ಭದಲ್ಲಿ ಶಿವಮೊಗ್ಗ ನಗರ ಹಾಗೂ ಜಿಲ್ಲೆಯಾದ್ಯಂತ ರೌಡಿಸಂ, ಸರಗಳ್ಳತನ, ಮನೆಗಳ್ಳತನ, ದರೋಡೆ, ವಾಹನ ಕಳ್ಳತನ, ಯುವತಿಯರಿಗೆ ಕಿರುಕುಳ, ಹಫ್ತಾ ವಸೂಲಿ, ಸಮಾಜದ ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟು ಮಾಡುವಂತಹ ದುಷ್ಕೃತ್ಯಗಳು ಸೇರಿದಂತೆ ನಾನಾ ರೀತಿಯ ಅಪರಾಧ ಕೃತ್ಯಗಳು ವಿಪರೀತ ಮಟ್ಟಕ್ಕೆ ತಲುಪಿತ್ತು.  ಅದರಲ್ಲಿಯೂ ರಾಜಕೀಯ ಕೃಪಾಪೋಷಿತ ಕ್ರಿಮಿನಲ್ಸ್‌ಗಳ ಹಾವಳಿ ಹೇಳತೀರದಾಗಿತ್ತು. ಕ್ರಿಮಿನಲ್ಸ್‌ಗಳಿಗೆ ಪೊಲೀಸರ ಭಯವೇ ಇಲ್ಲದಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು. ನಾಗರಿಕರು ಪೊಲೀಸ್ ಇಲಾಖೆಯ ಮೇಲಿದ್ದ ನಂಬಿಕೆಯನ್ನೇ ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿತ್ತು.
ಆದರೆ ಚೆನ್ನಣ್ಣನವರ್ ತಮ್ಮ ನೇರ - ನಿರ್ಭೀಡ ಕಾರ್ಯವೈಖರಿಯ ಮೂಲಕ, ಸಿನಿಮೀಯ ಶೈಲಿಯಲ್ಲಿಯೇ ಕ್ರಿಮಿನಲ್ಸ್‌ಗಳನ್ನು ಸೆದೆಬಡಿಯುವ ಕೆಲಸ ಆರಂಭಿಸಿದರು. ತಾವೇ ಖುದ್ದಾಗಿ ನಾಗರಿಕರ ಅಹವಾಲು ಆಲಿಸಿ ಅಪರಾಧಿಗಳ ಬೆನ್ನು ಬಿದ್ದರು. ಮಾರುವೇಷದ ಕಾರ್ಯಾಚರಣೆ ನಡೆಸಿ ಕಾನೂನುಬಾಹಿರ ಕೃತ್ಯ ನಡೆಸುವವರ ಎದೆ ನಡುಗುವಂತೆ ಮಾಡಿದರು. ರಾತ್ರಿ-ಹಗಲು ಗಸ್ತು ವ್ಯವಸ್ಥೆ ಬಿಗಿಗೊಳಿಸಿದ್ದರು.  ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ಸ್‌ಗಳಿಗೆ ಲಾಠಿ ಏಟು ಖಚಿತ ಎಂಬ ಭಯ ಹುಟ್ಟಿಸಿದರು. ಕಾನೂನುಬಾಹಿರ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದ, ಕ್ರಿಮಿನಲ್ಸ್‌ಗಳೊಂದಿಗೆ ಶಾಮೀಲಾಗಿದ್ದಇಲಾಖೆಯಲ್ಲಿದ್ದ ಭ್ರಷ್ಟ ಪೊಲೀಸ್ ಅಧಿಕಾರಿ-ಸಿಬ್ಬಂದಿಗಳಿಗೂ ತಕ್ಕ ಶಾಸ್ತಿ ಮಾಡಿದರು. ಕಠಿಣ ಕ್ರಮಗಳಿಂದ ಸೀಮಿತಾವಧಿಯಲ್ಲಿಯೇ ಇಡೀ ಜಿಲ್ಲೆಯಲ್ಲಿ ಕ್ರೈಂ ಚಟುವಟಿಕೆಗಳು ತಹಬದಿಗೆ ಬಂದಿದ್ದವು.
 ಚೆನ್ನಣ್ಣನವರ್ ಭಯದಿಂದಲೇ ಹಲವು ಕ್ರಿಮಿನಲ್ಸ್‌ಗಳು ಊರು ತೊರೆದಿದ್ದರು. ಮತ್ತೆ ಕೆಲವರು ತಮ್ಮ ದುಷ್ಕೃತ್ಯಗಳಿಗೆ ತಾತ್ಕಾಲಿಕ ಕಡಿವಾಣ ಹಾಕಿದ್ದರು. ಇದರಿಂದ ಸಮಾಜದಲ್ಲಿ ನೆಮ್ಮದಿಯ ವಾತಾವರಣ
ನೆಲೆಸಿತ್ತು. ಇದು ನಾಗರಿಕರಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿತ್ತು. ಜೊತೆಗೆ ಜಿಲ್ಲಾ ಪೊಲೀಸ್ ಇಲಾಖೆಯ ಕಾರ್ಯವೈಖರಿಯು ಇಡೀ ರಾಜ್ಯದ ಗಮನ ಸೆಳೆಯುವಂತೆ ಮಾಡಿತ್ತು.
ಈಗಿನ ಎಸ್‌ಪಿಯವರು ಉತ್ತಮ ಹೆಸರು ಮಾಡಿದವರು. ಅವರು ಜಿಲ್ಲೆಯ ಕ್ರಿಮಿನಲ್‌ಗಳ ಬಗ್ಗೆ ಜಾಗೃತರಾಗಬೇಕಿದೆ. ಅಪರಾಧಿಗಳ ಪಟ್ಟಿಯನ್ನು ಗಮನಿಸಿ ಅವರು ಸದ್ಯ ಮಾಡುತ್ತಿರುವ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಬೇಕಿದೆ. ಹೊಸ ಕ್ರಿಮಿನಲ್‌ಗಳನ್ನು ಬಗ್ಗುಬಡಿಯುವ ಕೆಲಸ ಮಾಡಬೇಕಿದೆ. ತಮ್ಮ ಕೆಳಗಿನ ಅಧಿಕಾರಿಗಳು ಈ ಹಿಂದಿನಂತೆ ನಿರ್ಭಿಡತೆಯಿಂದ ಕೆಲಸ ಮಾಡಲು ಸೂಚಿಸಬೇಕಿದೆ. ಕೂಡಲೇ ಅಂತಹವರ ಬಗ್ಗೆ ಕ್ರಮ ಜರುಗಿಸುವತ್ತ ಮುಂದಡಿ ಇಡಬೇಕಿದೆ.
 .................................... 

Saturday, 24 September 2016

ಹೊಳಲೂರು ಏತನೀರಾವರಿ ಯೋಜನೆ ಹೊಳೆಪಾಲು
* ಅರೆಬರೆ ಕಾಮಗಾರಿ ಮಾಡಿ ನಾಪತ್ತೆಯಾದ ಗುತ್ತಿಗೆದಾರ 
* 8 ವರ್ಷದಿಂದ ಕಾಮಗಾರಿ ನೆನೆಗುದಿಯಲ್ಲಿ 


ಅಪೂರ್ಣ ಹಾಗೂ ವಿಳಂಬ ಕಾಮಗಾರಿ ಪ್ರತಿಭಟಿಸಿ ಸೋಮವಾರ ಸೆ. 26ರಂದು ಬೂದಿಗೆರೆ ಕೆರೆಯಿಂದ ಮೆರವಣಿಗೆಯಲ್ಲಿ ಸಾವಿರಾರು ರೈತರು ಪಾದಯಾತ್ರೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಪ್ರತಿಭಟನೆ ನಡೆಸಲಿದ್ದಾರೆ. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು, ಕಾಮಗಾರಿ ಪೂರ್ಣಗೊಳಿಸಿ ರೈತರಿಗೆ ಶೀಘ್ರವೇ ನೀರು ಕೊಡುವ ವ್ಯವಸ್ಥೆ ಆಗಬೇಕು. ಇದಕ್ಕಾಗಿ ಸ್ಥಳೀಯರನ್ನು ಸಂಘಟಿಸಲಾಗಿದೆ. ಕಾಮಗಾರಿ ಮುಗಿಸುವವರೆಗೆ ವಿವಿಧ ರೀತಿಯಲ್ಲಿ ಹೋರಾಟ ನಡೆಸಿ ಜನರ ಪರ ನಿಲ್ಲುತ್ತೇನೆ.
- ಶಾಸಕಿ ಶಾರದಾ ಪೂರ‌್ಯಾ ನಾಯ್ಕ್


ಶಿವಮೊಗ್ಗ ತಾಲೂಕಿನ ಹೊಳಲೂರು ಬಳಿ ತುಂಗಭದ್ರಾ ನದಿಯಿಂದ ನೀರೆತ್ತಿ ಸುತ್ತಮುತ್ತಲ ಏಳು ಕೆರೆಗಳಿಗೆ  ನೀರೊದಗಿಸುವ ಯೋಜನೆ ಎಂಟುವರ್ಷ ಕಳೆದರೂ ಮುಕ್ತಾಯವಾಗಿಲ್ಲ. ಈ ಕಾಮಗಾರಿ ಗುತ್ತಿಗೆ ಪಡೆದ ಬೆಂಗಳೂರಿನ ಕಂಪನಿಗೆ 25 ತಿಂಗಳಲ್ಲಿ ಇದನ್ನು ಮುಗಿಸಲು ಸೂಚಿಸಲಾಗಿತ್ತು. ಅರೆಬರೆ ಕೆಲಸ ಮಾಡಿ ನಾಪತ್ತೆಯಾದ ಕಂಪನಿಗೆ ಎಷ್ಟೇ ನೋಟೀಸ್ , ಎಚ್ಚರಿಕೆ ಕೊಟ್ಟರೂ, ತಿಳಿಹೇಳಿದರೂ ಕದಲದೆ, ಕೆಲಸ ಮಾಡದೆ ಕಾಮಗಾರಿ ಬಾಕಿ ಉಳಿಸಿಕೊಂಡು ರೈತರ ಜೊತೆ ಚೆಲ್ಲಾಟವಾಡುತ್ತಿದೆ.
ಬಹುತೇಕ ಕಾಮಗಾರಿಗಳೆಲ್ಲ ಹೀಗೆಯೇ. ಗುತ್ತಿಗೆದಾರರ ಅಸಡ್ಡೆಯಿಂದಲೇ ಹಳ್ಳ ಹಿಡಿಯುತ್ತಿವೆ. ಕಪ್ಪುಪಟ್ಟಿಗೆ ಸೇರಿಸುತ್ತೇ ಎಂಬ ಬೆದರಿಕೆ ಹಾಕಿದರೂ ಅದಕ್ಕೂ ಜಗ್ಗುವುದಿಲ್ಲ. ಅರೆಬರೆ ಕಾಮಗಾರಿ ಮಾಡಿ ನಾಪತ್ತೆಯಾದರೆ ಸರ್ಕಾರದ ಹಣವೂ ಹೋಯಿತು, ಜನರಿಗೆ ಎಳ್ಳಷ್ಟೂ ಲಾಭವಿಲ್ಲ, ಮಾಡಿದ ಶ್ರಮವೆಲ್ಲ ನಷ್ಟ. ಹೊಳಲೂರಿನ ಕೆರೆಗಳಿಗೆ ನೀರೊದಗಿಸುವ ಯೋಜನೆಯು ಈ ರೀತಿ ಹೊಳೆಪಾಲಾಗುತ್ತಿದೆ. ಸರ್ಕಾರದ 7.06 ಕೋಟಿ ರೂ.ನ ಯೋಜನೆ ಇದಾಗಿದೆ. ಬೆಂಗಳೂರಿನ ಮೆ:ಆರ್.ಎನ್.ಎ. ಇಂಜಿನಿಯರ್ಸ್ ಪ್ರೈ.ಲಿ. ಕಂಪನಿಯವರು ಇದನ್ನು 2008ರ ಫೆ. 23ರಂದು 7.06 ಕೋಟಿ ರೂ. ಗಳಿಗೆ ವಹಿಸಿಕೊಂಡಿದ್ದರು. ಇದಕ್ಕಾಗಿ ಕರಾರು ಒಪ್ಪಂದ (ಸಂ:37/07-08) ಮಾಡಿಕೊಳ್ಳಲಾಗಿದೆ. ಆದರೆ ಈ ಕರಾರಿಗೆ ಈಗ ಕಿಮ್ಮತ್ತಿಲ್ಲದಂತಾಗಿದೆ.
ಈ ಯೋಜನೆಯಿಂದ ತಾಲೂಕಿನ ಹೊಳಲೂರು ಹೋಬಳಿಯಲ್ಲಿ ಬರುವ ಹರಮಘಟ್ಟ, ಕೊಮ್ಮನಾಳು, ಬನ್ನಿಕರೆ, ಮತ್ತು ಸುತ್ತುಕೊಟೆ ಗ್ರಾಮದ ರೈತರ 422 ಹೆಕ್ಟೆರ್ ಜಮೀನಿಗೆ ನೀರೊದಗಿಸಲು ಯೊಜನೆ ರೂಪಿಸಲಾಗಿತ್ತು. ಹೊಳಲೂರು ಬಳಿ ಇನ್‌ಟೇಕ್ ವೆಲ್ ಮತ್ತು ಜಾಕ್‌ವೆಲ್ ನಿರ್ಮಿಸಿ ಮೊದಲ ಹಂತವಾಗಿ 800 ಎಂಎಂನ ಪೈಪ್ ಅಳವಡಿಸಿ ಸುಮಾರು 410 ಮೀಟರ್ ಉದ್ದಕ್ಕೂ ರೈಸಿಂಗ್ ಮೇನ್ ಮೂಲಕ 15.89 ಕ್ಯುಸೆಕ್ಸ್ ನೀರನ್ನು ಹರಮಘಟ್ಟ ಮೇಲುತೊಟ್ಟಿಗೆ ಸರಬರಾಜು ಮಾಡಬೇಕಿತ್ತು. ಇಲ್ಲಿಂದ ನಾರಾಯಣಕೆರೆ ಮತ್ತು ಸೀಗೆಹಳ್ಳ ಕೆರೆಗಳಿಗೆ ನೀರು ತುಂಬಿಸಿ 412 ಎಕ್ರೆ ಜಮೀನಿಗೆ ನೀರಾವರಿ ಕಲ್ಪಿಸುವ ಗುರಿ ಹಾಕಿಕೊಳ್ಳಲಾಗಿತ್ತು.
ಎರಡನೆಯ ಹಂತದಲ್ಲಿ, 4315 ಮೀಟರ್ ಉದ್ದಕ್ಕೆ  600 ಮಿಮೀಯ ಪೈಪ್ ಹಾಕಿ ರೈಸಿಂಗ್ ಮೇನ್ ಅಳವಡಿಸಿ ಸೋಮಿನಕೊಪ್ಪ ಗ್ರಾಮದ ಹತ್ತಿರ ತೊಟ್ಟಿಗೆ ನೀರು ಸರಬರಾಜು ಮಾಡಿ ಅಲ್ಲಿಂದ ಬೂದಿಗೆರೆಕೆರೆ ಮತ್ತು ಸುತ್ತುಕೋಟೆ ಕೆರೆಗೆ ಗ್ರಾವಿಟಿ ಪೈಪ್‌ಲೈನ್ ಮೂಲಕ ನೀರು ತುಂಬಿಸಿ 630 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ಹಮ್ಮಿಕೊಳ್ಳಲಾಗಿತ್ತು.
ಗುತ್ತಿಗೆದಾರರು ಕಾಮಗಾರಿಯನ್ನು ಪ್ರಾರಂಭಿಸಿ ನಿಧಾನಗತಿಯಲ್ಲಿ ಮುಂದುವರೆಸಿದ್ದರಿಂದ ತಿಳುವಳಿಕೆ ಮತ್ತು ಎಚ್ಚರಿಕೆ ನೋಟೀಸ್ ನೀಡಲಾಗಿತ್ತು. ಯೋಜನೆಯನ್ನು ಸಫಲಗೊಳಿಸಲು ಜಿಲ್ಲಾಧಿಕಾರಿ ಸಹ ಸಾಕಷ್ಟು ಸಲ ಸಭೆ ನಡೆಸಿದ್ದರೂ ಕಾಮಗಾರಿ ಕುಂಠಿತವಾಗಿತ್ತು. ಈ ಹಿನ್ನೆಲೆಯಲ್ಲಿ  ಸಣ್ಣ ನೀರಾವರಿ ಇಲಾಖೆಯ ವಿಭಾಗೀಯ ಕಚೇರಿಯು 2013ರ ಸೆ. 26ರಂದು ಟೆಂಡರ್ ರದ್ದುಗೊಳಿಸಲು ಮುಖ್ಯ ಇಂಜಿನಿಯರ್‌ಗೆ ಪ್ರಸ್ತಾವನೆ ಕಳಿಸಿತ್ತು. ಆದರೆ ಬೆಂಗಳೂರಿನಲ್ಲಿ ಇಲಾಖೆಯ ಮುಖ್ಯ ಇಂಜಿನಿಯರ್‌ರವರು ಅದೇ ವರ್ಷದ ಅ. 10ರಂದು ಕರೆದ ಸಭೆಯಲ್ಲಿ ಗುತ್ತಿಗೆದಾರರು ಎರಡುವರೆ ತಿಂಗಳಲ್ಲಿ ಕಾಮಗಾರಿ ಮುಗಿಸಲು ಒಪ್ಪಿಕೊಂಡಿದ್ದರು. ಆದರೆ ಮತ್ತೆ  ಪೂರ್ಣಗೊಳಿಸದೆ ಕೈಕೊಟ್ಟಿದ್ದರು.
    ಡಿಸಿಯವರು 2014ರ ಜೂನ್ 5ರಂದು ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ 10 ದಿನದೊಳಗೆ ಕಾಮಗಾರಿ ಮುಗಿಸಿ ಹರಮಘಟ್ಟದವರೆಗೆ ನೀರೊದಗಿಸುವಂತೆ ಆದೇಶಿಸಿದ್ದರು.  ಆ ಪ್ರಕಾರ ಮಾರ್ಚ್ 2015ರವರೆಗೆ ಕೆಲಸ ಮಾಡಿ ಆ ಕಾಮಗಾರಿಯನ್ನು ಮುಗಿಸಿದ್ದರು. ನಂತರ ಟ್ರಯಲ್ ರನ್ ಮಾಡಿದಾಗ ಸುಮಾರು ಏಳು ಕಡೆಯಲ್ಲಿ ಪೈಪ್ ಜಾಯಿಂಟ್‌ಗಳಲ್ಲಿ ಲೀಕೇಜ್ ಕಂಡುಬಂದಿತ್ತು. ಕಪ್ಪುಮಿಶ್ರತ ಮಣ್ಣಿನಲ್ಲಿ ಪೈಪ್‌ಲೈನ್ ಇರುವುದರಿಂದ ಜಾಯಿಂಟ್ ಬಿಟ್ಟುಹೋಗಿತ್ತು. ಇದನ್ನು ಸರಿಪಡಿಸಿಕೊಟ್ಟರು. ಆನಂತರ 2ನೆಯ ಟ್ರಯಲ್ ಮಾಡಿ ಯಶಸ್ವಿಯಾದರೆ ಪ್ರಥಮ ಹಂತಕ್ಕೆ ನೀರೊದಗಿಸಲು ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಈ ವೇಳೆ ಸುಮಾರು 25 ಕಡೆ ಲೀಕೇಜ್ ಕಂಡುಬಂದಿತು. ಇದಕ್ಕೆ ಸಬೂಬು ಕೊಡದೆ ಸರಿಪಡಿಸಿ ನೀರು ಕೊಡಲು ಆದೇಶಿಸಿದ್ದರೂ ಆ ಕಡೆ ಗುತ್ತಿಗೆದಾರರು ತಲೆಯನ್ನೇ ಹಾಕಲಿಲ್ಲ.
 ಇದನ್ನೆಲ್ಲ ಸಹಿಸಿಕೊಂಡೇ 2015ರ ಜೂನ್ 5ರಂದು ಅಂತಿಮ ನೋಟೀಸ್ ಕೊಡಲಾಗಿದೆ. ಅದೇ ವರ್ಷದ ಸೆ. 30ರಂದು ಎರಡನೆಯ ನೋಟೀಸನ್ನೂ ನೀಡಲಾಯಿತು. ಇದಾದ ಬಳಿಕ 2016ರ ಮಾ 4ರಂದು ವಿಧಾನ ಪರಿಷತ್ ಸಭಾಧ್ಯಕ್ಷರ ಕೊಠಡಿಯಲ್ಲಿ ಸಣ್ಣ ನೀರಾವರಿ ಸಚಿವರ, ಪ್ರತಿಪಕ್ಷ ನಾಯಕರ, ಹೊಳಲೂರು ಜಿಪಂ ಸದಸ್ಯರ, ವಿವಿಧ ಹಂತದ ಇಂಜಿನಿಯರ್, ಗುತ್ತಿಗೆದಾರ ಮತ್ತು ರೈತ ಪ್ರಮುಖರ  ಸಮ್ಮುಖದಲ್ಲಿ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಮಳೆಗಾಲ ಆರಂಭವಾಗುವುದರೊಳಗೆ ಸರಿಪಡಿಸಿ ನೀರೊದಗಿಸಲು ಸೂಚಿಸಲಾಗಿತ್ತು. ತಪ್ಪಿದಲ್ಲಿ ಕಪ್ಪುಪಟ್ಟಿಗೆ ಸೇರಿಸುವ ಎಚ್ಚರಿಕೆಯನ್ನು ಸಚಿವರೇ  ಕೊಟ್ಟಿದ್ದರು.
ಆದರೆ ಇಲ್ಲಿಯವರೆಗೆ ಕೆಲಸ ನಡೆದಿಲ್ಲ. ಗುತ್ತಿಗೆದಾರರ ಈ ನಡೆಯಿಂದ ಜನ ಆಕ್ರೋಶಿತರಾಗಿದ್ದಾರೆ. ಸಾಕಷ್ಟು ಬಾರಿ ಪ್ರತಿಭಟನೆ, ಹೋರಾಟ ನಡೆದಿದೆ. ಆದರೂ ಲಾಭವಾಗಿಲ್ಲ. ಅಲ್ಲಿನ ರೈತರು ಮಾತ್ರ ಎಂದು ಈ ಕಾಮಗಾರಿ ಮುಗಿಯುವುದು, ಯಾವಾಗ ಜಮೀನಿಗೆ ನೀರು ಸಿಗಬಹುದೆಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಗುತ್ತಿಗೆದಾರ ಎಲ್ಲಿದ್ದಾನೆ ಎನ್ನುವುದೇ ಗೊತ್ತಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಅರೆಬರೆ ಕಾಮಗಾರಿಯಿಂದ ಯಂತ್ರೋಪಕರಣಗಳೂ ಸಹ ಹಾಳಾಗುವ ಸ್ಥಿತಿ ನಿರ್ಮಾಣವಾಗಿದೆ.
   .........................................

Friday, 23 September 2016


ದೇವೇಗೌಡ- ಸಿದ್ದರಾಮಯ್ಯರನ್ನು ಒಂದುಗೂಡಿಸಿದ  ಕಾವೇರಿ ಜಲವಿವಾದ
  ಮತ್ತೆ ಒಂದಾದ ಹಳೆ ರಾಜಕೀಯ ದೈತ್ಯರು * ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ



ಕೆಲವು ಸಂದರ್ಭಗಳು ವೈರಿಗಳನ್ನು ಒಂದುಗೂಡಿಸಿ ಮಿತ್ರರನ್ನಾಗಿಸುತ್ತವೆ. ಇನ್ನೂ ಕೆಲವು ಸಂದರ್ಭ ಹಳೆಯ ಮತ್ತು ದೂರಿವಿದ್ದ ಮಿತ್ರರನ್ನು ಹತ್ತಿರಕ್ಕೆ ಕರೆತರುತ್ತವೆ. ಕಾವೇರಿ ಜಲವಿವಾದ ರಾಜ್ಯದ ಎರಡು ದೈತ್ಯ ರಾಜಕೀಯ ಶಕ್ತಿಗಳು ಮತ್ತೆ ಒಂದಾಗಲು ವೇದಿಕೆಯನ್ನು ಸೃಷ್ಟಿಸಿದೆ. ತಮ್ಮ 10 ವರ್ಷಗಳ ವೈರತವ್ವನ್ನು ಮರೆತು ಪರಸ್ಪರರ ಮನೆಗೆ ಹೋಗಿಬರುವಂತೆ ಮಾಡಿದೆ. ಇದು ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಹೊಸ ಸಂಚಲನೆಗೆ ಕಾರಣವಾಗಬಹುದು ಎಂದು ವಿಶ್ಲೇಷಕರು ಅಂದಾಜಿಸುತ್ತಿದ್ದಾರೆ. ಕಾಲದ ಮಹಿಮೆಯೇ ಹೀಗೆ.


ರಾಜ್ಯದಲ್ಲಿ ಕಾವೇರಿ ಜಲವಿವಾದ ಆಕ್ರೋಶ ಸೃಷ್ಟಿದ್ದರೆ, ಇನ್ನೊಂದೆಡೆ, ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡ ಅವರ ಭೇಟಿ ರಾಜಕೀಯದಲ್ಲಿ ಸಂಚಲನ ಉಂಟುಮಾಡಿದೆ. ಹಾವು-ಮುಂಗುಸಿಯಂತಾಗಿ 10 ವರ್ಷಗಳ ಕಾಲ ಇದ್ದವರು ಈಗ ರಾಗ-ದ್ವೇಷಗಳನ್ನು ಏಕಾಏಕಿ ಮರೆತು ಸ್ನೇಹ ಮೂಡಲು ಕಾರಣವಾದ್ದದು ಕಾವೇರಿ ವಿವಾದ.
ಇಬ್ಬರ ಮಧ್ಯೆ ಇದ್ದ ವೈಮನಸ್ಸಿನ ಗೋಡೆ ಈಗ ಬಿದ್ದು ಹೊಗಿದೆ. ಜಿದ್ದಾಜಿದ್ದಿ ರಾಜಕೀಯಕ್ಕೆ ತೆರೆ ಬಿದ್ದಿದೆ.  ಸಿಎಂ ಸಿದ್ದರಾಮಯ್ಯ ಸ್ವತಃ ದೇವೇಗೌಡರ ಮನೆಗೆ ಹೋಗಿ ಸುಮಾರು ಎರಡು ಗಂಟೆಗಳ ಕಾಲ ಕಾವೇರಿ ಸಮಸ್ಯೆ ಬಗ್ಗೆ ಮಾತುಕತೆ ನಡೆಸಿದ್ದು ಜನ ಮೂಗಿನ ಮೇಲೆ ಬೆರಳಿಟ್ಟು ಗಮನಿಸುವಂತಾಗಿದೆ. ಹಿರಿಯ ಮುತ್ಸದ್ದಿ ದೇವೇಗೌಡರೂ ಸಹ ಕಾವೇರಿ ವಿಚಾರದಲ್ಲಿ ಎದೆಗುಂದಬೇಡಿ, ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಮೂಲಕ ರಾಜಿನಾಮೆ ನೀಡಿಲು ಒಂದು ಹಂತದಲ್ಲಿ ಯೋಚಿಸಿದ್ದ ಸಿದ್ದರಾಮಯ್ಯ ಅವರನ್ನು  ಸಂತೈಸಿದ್ದಾರೆ. ಇದರಿಂದ ಸಿಎಂ ಈಗ ನಿರಾಳರಾಗಲು ಅವಕಾಶವಾದಂತಾಗಿದೆ.
ಮೊನ್ನೆ ನಡೆದ ಸರ್ವಪಕ್ಷ ಸಭೆಯಲ್ಲಿ ಗೌಡರು ಮತ್ತು ಸಿಎಂ ಅಕ್ಕಪಕ್ಕ ಕುಳಿತು ಚರ್ಚಿಸಿದ್ದಾರೆ.  ದೇವೇಗೌಡರು ವಿಧಾನಸೌಧದ ಸಭಾಂಗಣಕ್ಕೆ ಬಂದಾಗ ಸಿಎಂ ಆದಿಯಾಗಿ ಎಲ್ಲರೂ ಎದ್ದು ನಿಂತು ಸ್ವಾಗತಿಸಿದ್ದಾರೆ. ಗೌಡರ ಕೈ ಹಿಡಿದು ಸಿದ್ದು ಕೂಡ್ರಿಸಿದ್ದಾರೆ. ಎರಡು ದೈತ್ಯ ಶಕ್ತಿಗಳ ಮಿಲನಕ್ಕೆ ವೇದಿಕೆ ಮೊನ್ನೆ ಸಿಕ್ಕಿದೆ.
1996ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆದಾಗ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂದ ನಂತರ ಮೊನ್ನೆಯವರೆಗೆ ಪಾಲ್ಗೊಂಡಿರಲಿಲ್ಲ. 20 ವರ್ಷಗಳ ದಾಖಲೆಯನ್ನು ನಿನ್ನೆ ಅಳಿಸಿ ಹಾಕಿ ಹೊಸ ಸಂಬಂಧಕ್ಕೆ ನಾಂದಿ ಹಾಡಿದ್ದಾರೆಂದೇ ವಿಶ್ಲೇಷಿಸಲಾಗುತ್ತಿದೆ. ಗೌಡರು ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಸ್ವತಃ ಸಿಎಂ ಅವರ ಮನೆಗೆ ಹೋಗಿ ಆಹ್ವಾನಿಸಿದ್ದರು. ಮೊನ್ನೆಯ ಸಭೆಯಲ್ಲಿ ಅರ್ಧ ಗಂಟೆಗಳ ಕಾಲ ಗೌಡರು ಮಾತನಾಡಿದ್ದಾರೆ. ಕಾವೇರಿ ವಿವಾದ ಆರಂಭವಾದ ನಂತರ ಇವರಿಬ್ಬರು ದಿನಕ್ಕೆ 2-3 ಬಾರಿ ಮಾತುಕತೆ ನಡೆಸುತ್ತಿದ್ದಾರೆಂಬ ಮಾತು ಕೇಳಿಬರುತ್ತಿದೆ.
ಸೆ. 5ರಂದು ಸುಪ್ರೀಂ ಕೋರ್ಟ್ ದಿನನಿತ್ಯ 15 ಸಾವಿರ ಕ್ಯುಸೆಕ್ಸ್ ನೀರು ಬಿಡಬೇಕೆಂದು ಆದೇಶಿಸಿದ ನಂತರ ಸಿಎಂ ಸಂಕಷ್ಟಕ್ಕೆ ಸಿಲುಕಿದ್ದರು. ನೀರೇ ಇಲ್ಲದ ವೇಳೆ ಹೇಗೆ ಬಿಡಲಿ ಎಂದು ಚಿಂತೆಗೊಳಗಾಗಿದ್ದರು. ಒಂದೆಡೆ ಸುಪ್ರೀಂ ಆದೇಶ, ಇನ್ನೊಂದೆಡೆ ಜನರ ಆಕ್ರೋಶ. ಇವು ಸಿದ್ದು ಅವರನ್ನು ಹೈರಾಣಾಗಿಸಿದ್ದವು. ಆಗ ಅವರಿಗೆ ನೆನಪಾದವರೇ ಮಾಜಿ ಪ್ರಧಾನಿ ದೇವೇಗೌಡರು.  ನೀರಾವರಿ ವಿಚಾರದಲ್ಲಿ ಅಪಾರ ಜ್ಞಾನವುಳ್ಳವರು ದೇವೇಗೌಡರು ಎನ್ನುವುದು ಸಿಎಂಗೆ ಗೊತ್ತಿತ್ತು. ಆ ಪ್ರಕಾರ, ಅವರ ಸಲಹೆ ಕೇಳಲು ಅವರ ಮನೆಗೆ ಹೋದರು. ಅಲ್ಲಿ ಗೌಡರು ನೀಡಿದ ಸಲಹೆ ಮುಖ್ಯಮಂತ್ರಿಯವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಜೊತೆಗೆ ಅಂದು ನೀರು ಬಿಟ್ಟಿದ್ದನ್ನು ಗೌಡರು ಸಹ ಸಮರ್ಥಿಸಿಕೊಂಡಿದ್ದರು.
ಇದಾದ ಎರಡು ದಿನದ ಬಳಿಕ ಸ್ವತಃ ದೇವೇಗೌಡರು ಹೆಲಿಕಾಪ್ಟರ್‌ನಲ್ಲಿ ರಾಜ್ಯದ ಎಲ್ಲ ಜಲಾಶಯಗಳ ಸಮೀಕ್ಷೆ ನಡೆಸಿ ಮಾರನೆಯ ದಿನವೇ ನವದೆಹಲಿಗೆ ತೆರಳಿ ಪ್ರಧಾನಿಯವರನ್ನು ಕಂಡು ಕರ್ನಾಟಕದ ಜಲಾಶಯಗಳ ನೀರಿನ ಸ್ಥಿತಿಗತಿ ಬಗ್ಗೆ ವಿವರಿಸಿದ್ದರು. ಮಧ್ಯಸ್ಥಿಕೆ ವಹಿಸಲು ಮನವಿ ಮಾಡಿದ್ದರು. ಆದರೆ ಪ್ರಧಾನಿ ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರಲಿಲ್ಲ.
ಇಲ್ಲಿಂದ ಇಬ್ಬರ ಮಧ್ಯೆ ದಿನನಿತ್ಯ ಸಂಭಾಷಣೆ ಶುರುವಾಗಿದೆ. ಗೌಡರು ಸಿಎಂಗೆ ಈ ವಿಷಯದ ಬಗ್ಗೆ ಸಾಕಷ್ಟು ಸಲಹೆ ಕೊಡುತ್ತಿದ್ದಾರೆ. ಮೊನ್ನೆ ಮತ್ತೆ ಕರ್ನಾಟಕದ ವಿರುದ್ದ ತೀರ್ಪು ಬಂದಾಗ ನೀರು ಬಿಡದಂತೆ ಸೂಚಿಸಿದವರೇ ಗೌಡರು. ಅದನ್ನೇ ಮಂತ್ರಿ ಪರಿಷತ್‌ನಲ್ಲಿ ಮಂಡಿಸಿ ನಿರ್ಧಾರ ತಾಳಲಾಗಿದೆ. ಅದೇನೇ ಪರಿಸ್ಥಿತಿ ಎದುರಾದರೂ ಒಟ್ಟಾಗಿ ಎದುರಿಸೋಣ ಎಂಬ ಮನೋಸ್ಥೈರ್ಯವನ್ನು ಗೌಡರು ತುಂಬಿದ್ದರಿಂದ ಸಿದ್ದರಾಮಯ್ಯ ಇನ್ನಷ್ಟು ಧೈರ್ಯತಂದುಕೊಂಡಿದ್ದಾರೆ.
ಈಗ ಸಿದ್ದರಾಮಯ್ಯ ಮತ್ತು ದೇವೇಗೌಡರ ಮಧ್ಯೆ 1997ರಿಂದ ಇದ್ದ ದ್ವೇಷವೆಲ್ಲ ಕರಗಿದಂತಾಗಿದೆ. ತಾನು ಪ್ರಧಾನಿಯಾಗುವಾಗ ಮುಖ್ಯಮಂತ್ರಿ ಹುದ್ದೆಗೆ ತನ್ನನ್ನು ನಿರ್ಲಕ್ಷಿಸಿ ಜೆ.ಎಚ್. ಪಟೇಲರನ್ನು ಹಿರಿತನದ ಆಧಾರದ ಮೇಲೆ ಘೋಷಿಸಿದ್ದು  ವಿರಸಕ್ಕೆ ಮೊದಲ ಕಾರಣವಾಗಿತ್ತು. ಬಳಿಕ 2004ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಧಿಕಾರ ಹಿಡಿದಾಗ ದೇವೇಗೌಡರು ತನ್ನನ್ನು ಮುಖ್ಯಮಂತ್ರಿ ಮಾಡದೆ ಕಾಂಗ್ರೆಸ್‌ಗೆ ಆ ಸ್ಥಾನ ಬಿಟ್ಟುಕೊಟ್ಟಿದ್ದರು. ಧರಂಸಿಂಗ್ ಸಿಎಂ ಆಗುವಂತೆ ಮಾಡಿದ್ದರೆನ್ನುವುದು ಎರಡನೆಯ ಸಿಟ್ಟಾಗಿತ್ತು.  ನಂತರ ಯಾವ ಕಾರಣಕ್ಕೂ ಸಿದ್ದರಾಮಯ್ಯಗೆ ಅಧಿಕಾರ ಸಿಗಬಾರದೆಂದು ಎಚ್. ಡಿ. ಕುಮಾರಸ್ವಾಮಿ ಪಕ್ಷವನ್ನೇ ಹೈಜಾಕ್ ಮಾಡಿ ತಾನೇ ಮುಖ್ಯಮಂತ್ರಿಯಾಗಿದ್ದರು. ಇದು ಮೂರನೆಯ ಸಿಟ್ಟು. ಇಲ್ಲಿಂದ ಗೌಡರ ವಿರುದ್ಧ ಸಾಕಷ್ಟು ಸಲ ಪುತ್ರ ವ್ಯಾಮೋಹ ಎಂದೆಲ್ಲ ಸಿದ್ದು ಜರಿದಿದ್ದರು. ಗೌಡರೂ ಸಹ ಇದಕ್ಕೆ ಉತ್ತರಿಸಿದ್ದರು. ತನ್ನಿಂದ ಬೆಳೆದು ತನಗೇ ಎದುರು ಮಾತನಾಡುತ್ತಾರೆಂದು ಹೇಳಿದ್ದರು.
ಬದಲಾದ ರಾಜಕೀಯದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿ ಮತ್ತೆ ಆ ಪಕ್ಷ ಅಧಿಕಾರ ಪಡೆದಾಗ ಸಿಎಂ ಆದರು. ಆಗ ದೇವೇಗೌಡರು ಅಬಿನಂದನೆ ಸಲ್ಲಿಸಿದ್ದರು. ಪ್ರತಿಯಾಗಿ ಸಿದ್ದರಾಮಯ್ಯ ಸಹ ಅವರ ಮನೆಗೆ ಹೋಗಿ ಭೇಟಿ ಮಾಡಿ ಬಂದಿದ್ದರು. ಇದಾದ ಬಳಿಕ ಅವರ ಭೇಟಿ ಇತ್ತೀಚೆಗೆ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ನಿಧನರಾದಾಗ ನಡೆದಿತ್ತು. ದೇವೇಗೌಡರು ಸಿಎಂ ಮನೆಗೆ ಭೇಟಿ ಕೊಟ್ಟು ಎರಡು ತಾಸು ಸಂತೈಸಿದ್ದರು.
ಈಗ ಕಾವೇರಿ ಕಿಚ್ಚು ಮತ್ತೆ ಇಬ್ಬರನ್ನು ಒಂದುಗೂಡಿಸಿದೆ. ಇಬ್ಬರ ಮಧ್ಯೆ ಇದ್ದ ದ್ವೇಷ ಕೊಚ್ಚಿ ಹೋಗಿದೆ. ರಾಜ್ಯ ಸಂಕಷ್ಟದಲ್ಲಿರುವ ವೇಳೆ ಜನನಾಯಕರಿಗೆ ಜನಹಿತ ಮುಖ್ಯ ಎನ್ನುವುದನ್ನು ಇಬ್ಬರೂ ಸಾಬೀತು ಮಾಡಿದ್ದಾರೆ. ಈ ಮೂಲಕ ರಾಜ್ಯದ ರಾಜಕೀಯದಲ್ಲಿ ಹೊಸ ಭಾಷ್ಯವೊಂದನ್ನು ಬರೆದಿದ್ದಾರೆ.
....................................  

Wednesday, 21 September 2016

 ಪಾಲಿಕೆ ಸದಸ್ಯರು ಸ್ಮಾರ್ಟ್ ಆಗುವುದೆಂದು?
  ಕೆಲವರು ವಾರ್ಡನ್ನೇ ಮರೆತರು* ಇನ್ನೂ ಕೆಲವರು ವೈಭೋಗದಲ್ಲೇ ಮೈಮರೆತರು 

  ಪಾಲಿಕೆಯ ಬಹುತೇಕ ಸದಸ್ಯರು ವಾರ್ಡಿನ ಅಭಿವೃದ್ಧಿ ಹೊರತಾಗಿ ಬೇರೆ ಕೆಲಸವನ್ನೆಲ್ಲ ಚೆನ್ನಾಗಿ ಮಾಡುತ್ತಿದ್ದಾರೆ. ಇನ್ನೊಂದೆಡೆ, ಮತದಾರರು ಉಗಿಯುತ್ತಿದ್ದಾರೆ. ನೂರು ಕೋಟಿ ರೂ. ಅನುದಾನ ಬಂದಿರುವುದರಿಂದ ಮಾಡಿದ ಕಾಮಗಾರಿಯೆಲ್ಲವನ್ನೂ ತಾನೇ ಮಾಡಿಸಿದ್ದು ಎಂದು ಕೊಚ್ಚಿಕೊಳ್ಳುತ್ತಿದ್ದಾರೆ. ಈ ಅನುದಾನದ ಹೊರತಾಗಿ ಸರಿಯಾಗಿ ಕಸವನ್ನು ಎತ್ತಿ ಹಾಕಿಸಿಲ್ಲ, ಶುಚಿತ್ವವನ್ನಿಟ್ಟಿಲ್ಲ. ವಾರ್ಡಿನ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಇದೆ. ಕೆಲವು ಸದಸ್ಯರು ಕಾಣೆಯಾಗಿದ್ದಾರೆಂಬ ದೂರು ಸಹ ಬರಲಾರಂಭಿಸಿದೆ. ವೈಭೋಗದ ಶ್ರೀಮಂತಿಕೆ ತೋರುವುದನ್ನು ಬಿಟ್ಟು ಮತದಾರರಿಗೆ ತಮ್ಮ ಹೃದಯಶ್ರೀಮಂತಿಕೆಯನ್ನು ತೋರ್ಪಡಿಸುವ ಜರೂರತ್ತಿದೆ.


ಶಿವಮೊಗ್ಗ ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಆಯ್ಕೆಯಾಗಿದೆ. ಆದರೆ ಪಾಲಿಕೆಯ ಕೆಲವು ಸದಸ್ಯರು ಮಾತ್ರ ಸ್ಮಾರ್ಟ್ ಇರಲಿ, ಸಿಂಪಲ್ ಸಹ ಇನ್ನೂ ಆಗದೇ ಇರುವುದು ಅವರನ್ನು ಆರಿಸಿ ಕಳುಹಿಸಿದ ಮತದಾರರಲ್ಲಿ ಬೇಸರ ಮೂಡಿಸಿದೆ. ಕಾರಣ ಜನಸೇವೆಯನ್ನು ಇವರು ಮರೆತಿದ್ದಾರೆ. ಇದಕ್ಕಾಗಿ ಈಗ ಪ್ರತಿಭಟನೆಯನ್ನು ಆರಂಭಿಸಿದ್ದಾರೆ.
ಪಾಲಿಕೆಯ ಅವಧಿ ಅರ್ಧದಷ್ಟು   ಮುಗಿದಿದೆ. ಆದರೆ ಆರೆಂಟು ಸದಸ್ಯರ ಬಗ್ಗೆ  ಅವರವರ ವಾರ್ಡಿನಲ್ಲಿ ಒಳ್ಳೆೆಯ ಅಭಿಪ್ರಾಯ ಕೇಳಿಬರುತ್ತಿಲ್ಲ. ಕಾರಣ ಇಷ್ಟೇ. ಆ ಸದಸ್ಯರೆಲ್ಲ ಕ್ಷೇತ್ರದಲ್ಲಿ ಇದ್ದರೂ ಅಲ್ಲಿನ ನಾಗರಿಕರ ಸಮಸ್ಯೆ ಕೇಳುವುದು, ಅಹವಾಲು ಸ್ವೀಕರಿಸುವುದು, ಅಭಿವೃದ್ಧಿ ಕೆಲಸ ಕೈಗೊಳ್ಳುವುದರಲ್ಲಿ ಹಿಂದೆಬಿದ್ದಿದ್ದಾರೆ. ಕೆಲವರಂತೂ ಇನ್ನೂ ಮನೆಬಿಟ್ಟು ಹೊರಬಂದಿಲ್ಲ. ಅವರ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಸಂಬಂಧಿಸಿದ ಗುತ್ತಿಗೆದಾರನೇ ಉಸ್ತುವಾರಿ ಮಾಡಬೇಕಿದೆ. ಪಾಲಿಕೆಯ ಬಹುತೇಕ ಸದಸ್ಯರು ಫಾರ್ಚೂನ್ ಕಾರಿನಲ್ಲಿ ಓಡಾಡುತ್ತಾರೆ. ಮೊದಲ ಬಾರಿಗೆ ಆಯ್ಕೆಯಾದವರು ಇದರಲ್ಲಿ ಸೇರಿದ್ದಾರೆ. ಇಷ್ಟೊಂದು ಬೇಗ ಸಿರಿವಂತರಾಗುವ ಅವಕಾಶ ಸಿಕ್ಕಿದೆ ಎಂದರೆ ಅವರ ವಾರ್ಡು ಸಹ ಅಷ್ಟೇ ವೇಗವಾಗಿ ಅಭಿವೃದ್ಧಿ ಕಾಣಬೇಕಿತ್ತು. ಆದರೆ ವಾರ್ಡಿನ ಬಗ್ಗೆ ಮಾತನಾಡದಿರುವುದೇ ಲೇಸು. ಸಮಸ್ಯೆ ಕೊಳೆಯುತ್ತಲೇ ಇದೆ, ಜನರು ದೂರುತ್ತಲೇ ಬೇಡಿಕೆ ಇಡುತ್ತಿದ್ದಾರೆ. ಇವರಾರೂ ಅದಕ್ಕೆ ತಲೆಕೆಡಿಸಿಕೊಂಡಿಲ್ಲ.
ಪಾಲಿಕೆ ಸಭೆಯಲ್ಲಿ ಸಮಸ್ಯೆ ಬಗ್ಗೆ ಮಾತನಾಡುತ್ತಾರೆ. ಆದರೆ ವಾರ್ಡಿನ ಮತದಾರರಲ್ಲಿ ಸದಸ್ಯರ ಬಗ್ಗೆ ಕೇಳಿದರೆ ಸದಸ್ಯರು ತಮ್ಮ ರಸ್ತೆಯತ್ತ ತಲೆಹಾಕುತ್ತಿಲ್ಲ. ಕಾಮಗಾರಿಗಳು ಅರ್ಧಂಬರ್ಧ ಆಗಿದ್ದರೂ ಅವುಗಳತ್ತ ಗಮನ ಹರಿಸಿಲ್ಲ ಎನ್ನುವ ದೂರು ಕೇಳಿಬರುತ್ತಿದೆ. ವಾರ್ಡೊಂದರಲ್ಲಿ ಕಸ-ಕಡ್ಡಿಗಳು ಕೊಳೆತು ನಾರುತ್ತ ಸೊಳ್ಳೆಗಳು  ಕಾಟ ಕೊಡುತ್ತಿವೆ. ಕಾಮಗಾರಿ ಗಮನಿಸುವರಾರೂ ಇಲ್ಲ, ಅರೆಬರೆ ಕೆಲಸವಾದರೂ ಸದಸ್ಯರು ಬಂದಿಲ್ಲ, ಕಳಪೆ ಕಾಮಗಾರಿ ನಡೆದರೆ ಜವಾಬ್ದಾರಿ ಯಾರು  ಎಂದು ದೂರಿ  ಸದಸ್ಯರೊಬ್ಬರ ವಿರುದ್ಧ ನಿನ್ನೆ ಪಾಲಿಕೆಯಲ್ಲೇ ಪ್ರತಿಭಟನೆ ನಡೆದಿದೆ.  
ಪಾಲಿಕೆಗೆ ನೂರು ಕೋಟಿ ರೂ.ಅನುದಾನ ಬಂದಿದೆ. ಅದನ್ನು ಶಾಸಕ, ಮೇಯರ್, ಸದಸ್ಯರು  ಸೇರಿ ಎಲ್ಲ ವಾರ್ಡುಗಳಿಗೂ ಹಂಚಿ ರಸ್ತೆ, ಚರಂಡಿ, ಕಾಂಕ್ರೀಟೀಕರಣ ಮೊದಲಾದ ಅಭಿವೃದ್ಧಿ ಕಾಮಗಾರಿ ಮಾಡಿಸುತ್ತಿದ್ದಾರೆ. ಆದರೆ ಕೆಲವು ಕಾರ್ಪೊರೇಟರ್‌ಗಳಿಗೆ ತಮ್ಮ ವಾರ್ಡಿನಲ್ಲಿ ನಡೆಯುತ್ತಿರುವ ಕಾಮಗಾರಿಯೇ ಗೊತ್ತಿಲ್ಲ. ಏಕೆಂದರೆ ಅವರು ಜನಹಿತ ಕಾಪಾಡಲು ಆಯ್ಕೆಯಾದವರಂತೆ ವರ್ತಿಸುತ್ತಿಲ್ಲ.
ಕ್ರಿಯಾಶೀಲರಲ್ಲದ, ಕೆಲಸ ಮಾಡಲು ಆಸಕ್ತಿ ಇಲ್ಲದ ಕೆಲವು ಸದಸ್ಯರಿದ್ದಾರೆ. ಅಂತಹವರಿಂದ ಅವರ ವಾರ್ಡು ಖಂಡಿತ ಅಭಿವೃದ್ಧಿಯಾಗುವುದಿಲ್ಲ. ಆಯ್ಕೆಯಾದ ಮೇಲೆ ವಾರ್ಡನ್ನು ಮಾದರಿಯಾಗಿಸುವ ಗುರಿ ಹಾಕಿಕೊಳ್ಳಬೇಕು. ವಾರಕ್ಕೊಮ್ಮೆಯಾದರೂ ವಾರ್ಡಿನ ಉದ್ದಗಲಕ್ಕೂ ಸಂಚರಿಸಿ ಸಮಸ್ಯೆ ಕೇಳಬೇಕು. ಮತ ನೀಡಿದವರ ಹಿತ ಕಾಯುವುದು ಮುಖ್ಯವಾಗಬೇಕು. ಬಹುತೇಕ ಯುವ ಸದಸ್ಯರು ಈ ಕೆಲಸವನ್ನು ಮಾಡುತ್ತಿದ್ದಾರೆ. ಕೆಲವು ಅನುಭವಿ ಸದಸ್ಯರು ವಾರ್ಡನ್ನು ಚೆನ್ನಾಗಿ ಅಭಿವೃದ್ಧಿ ಮಾಡುತ್ತಿದ್ದಾರೆ. ಆದರೆ ಹೊಸದಾಗಿ ಆಯ್ಕೆಯಾದ ಕೆಲವರ ಬಗ್ಗೆ ಅಪಸ್ವರ ಪಾಲಿಕೆಯಲ್ಲೂ, ಅವರ ವಾರ್ಡಿನಲ್ಲೂ ಕೇಳಿಬರುತ್ತಿದೆ.
ಸ್ಮಾರ್ಟ್ ಸಿಟಿಯಾಗಿದೆ ಎಂದು ಸಂಭ್ರಮಪಡುವುದರ ಜೊತೆಗೆ ತಮ್ಮ ವಾರ್ಡನ್ನೂ ಸ್ಮಾರ್ಟ್ ಮಾಡುವ ಕೆಲಸವನ್ನು ಪಾಲಿಕೆ ಸದಸ್ಯರು ಮಾಡಬೇಕಿದೆ. ಫುಟ್‌ಪಾತ್ ವ್ಯಾಪಾರ ನಿಲ್ಲಿಸುವುದು, ಪಾದಚಾರಿ ಮಾರ್ಗಕ್ಕೆ ಅನುವು ಮಾಡಿಕೊಡುವುದು, ಕನ್ಸರ್ವೆನ್ಸಿಗಳನ್ನು ಶುಚಿಗೊಳಿಸಿ ಪಾರ್ಕಿಂಗ್‌ಗೆ ಅನುವು ಮಾಡಿಕೊಡುವುದು, ಸ್ವಚ್ಛ ಭಾರತದ ಕನಸು ನನಸಾಗಲು ತಮ್ಮ ವಾರ್ಡನ್ನು ಶುಚಿಯಾಗಿರಿಸುವುದು ಮೊದಲಾದ ಕೆಲಸ ಮಾಡಿದರೆ ಸಾಕು. ಕೇವಲ ಚರಂಡಿ, ರಸ್ತೆ ಮಾಡಿಸಿದರೆ ಸಾಲದು. ಪಾಲಿಕೆ ಸಭೆಗೆ ಬಂದು ಅಧಿಕಾರಿಗಳನ್ನು ಬಯ್ಯುವುದೇ ಕೆಲಸವಾಗಬಾರದು. ಬಯ್ಯುವ ಬದಲು ಅವರಿಂದ ಕೆಲಸ ತೆಗೆದುಕೊಳ್ಳು ಜಾಣ್ಮೆಯನ್ನು ಮೆರೆಯಬೇಕು.
 ಜನರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವತ್ತ ಗಮನಹರಿಸಿ ಮತದಾರರ ಮನಗೆಲ್ಲುವ ಕಾರ್ಯವನ್ನು ಇನ್ನಿರುವ ಅವಧಿಯಲ್ಲಾದರೂ ಮಾಡಬೇಕು. ಮಾದರಿ ಕೆಲಸ ಮಾಡಿ ವಾರ್ಡಿನ ಜನ ಸದಾ ತಮ್ಮ ಹೆಸರನ್ನು ನೆನೆಪಿಟ್ಟುಕೊಳ್ಳುವಂತೆ ಹೆಜ್ಜೆ ಇಡಬೇಕಿದೆ.
,,,,  

Monday, 19 September 2016

ಉತ್ತರಾಧಿಕಾರಿ ಹುದ್ದೆ: ಪ್ರಾದೇೀಶಿಕ ಪಕ್ಷಗಳಲ್ಲಿ ಭುಗಿಲೇಳುತ್ತಿರುವ ವಿವಾದ

ಈ ದೇಶದಲ್ಲಿ ಅಪ್ಪ-ಮಕ್ಕಳ ಮತ್ತು ಕುಟುಂಬ ರಾಜಕಾರಣ ಎಲ್ಲ ಪಕ್ಷಗಳಲ್ಲೂ ಇದೆ. ಆದರೆ ಪ್ರಾದೇಶಿಕ ಪಕ್ಷಗಳಲ್ಲಿ ಇದು ವಿಕೋಪಕ್ಕೆ ಹೋಗುತ್ತಿದೆ. ಅಪ್ಪ ಕಟ್ಟಿದ ಪಕ್ಷದ ಹುದ್ದೆ ಕುಟುಂಬೇತರರಿಗೆ ಸಿಗಬಾರದು ಎಂದು ಅವರ ಮಕ್ಕಳೇ ಖುರ್ಚಿಯೇರುತ್ತಿದ್ದಾರೆ. ಅಪ್ಪ ಜೀವಂತವಿರುವಾಗಲೇ ಮಕ್ಕಳಲ್ಲಿ ಅಪ್ಪನ ಖುರ್ಚಿಯನ್ನು ಗಿಟ್ಟಿಸುವ ದುರಾಸೆ ಹೆಚ್ಚುತ್ತಿದೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಅಧಿಕಾರ ದಾಹ, ಕುಟುಂಬ ಕಲಹದಿಂದ ಪಕ್ಷಗಳು ಸಂಕಷ್ಟಕ್ಕೆ ಸಿಲುಕಿ ಕೆಲವು ಸಂದರ್ಭದಲ್ಲಿ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿವೆ. ಯಾವುದೇ ಸಿದ್ಧಾಂತವಿಲ್ಲದ ಈ ಕುಟುಂಬ ರಾಜಕೀಯ ದೇಶಕ್ಕೆ ಎಷ್ಟು ಮಾರಕ ಎನ್ನುವುದರ ಬಗ್ಗೆ ನಿಜಕ್ಕೂ ಚಿಂತನೆ ನಡೆಯಬೇಕಿದೆ.  











ಅಧಿಕಾರ ಲಭಿಸಿದೊಡನೆ ಪ್ರಾದೇಶಿಕ ಪಕ್ಷಗಳಲ್ಲಿ ಕುಟುಂಬದ ಸದಸ್ಯರ ಮಧ್ಯೆಯೇ ಭಿನ್ನಮತ ಕಾಣಿಸಿಕೊಳ್ಳುವುದು ಭಾರತದ ರಾಜಕಾರಣದಲ್ಲಿ ಸಾಮಾನ್ಯವಾಗಿದೆ. ಒಂದು ಅಥವಾ ಎರಡು ಅವಧಿ ಆಳ್ವಿಕೆ ನಡೆಸಿದೊಡನೆ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕುಟುಂಬ ಸದಸ್ಯರ ಅಥವಾ ಸಹೋದರರ ಮಧ್ಯೆ ಭಿನ್ನಮತ ಉದ್ಭವಿಸುತ್ತಿದೆ. ತಂದೆಯ ನಂತರದ ಉತ್ತರಾಧಿಕಾರಿ ಹುದ್ದೆಯ ಮೇಲಿನ ಕಣ್ಣೇ ಇಷ್ಟೆಲ್ಲ ಕಚ್ಚಾಟಕ್ಕೆ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದಕ್ಕೆ ಸಾಕಷ್ಟು ಉದಾಹರಣೆ ಕೊಡಬಹುದು. ಮೊನ್ನೆ ಸಮಾಜವಾದಿ ಪಕ್ಷದಲ್ಲಿ ಎದ್ದಿದ್ದ ಬಿರುಗಾಳಿ ಇದಕ್ಕೊಂದು ಹೊಸ ಸೇರ್ಪಡೆಯಾಗಿದೆ.
ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿ ಕಳೆದ ವಾರ ಕಾಣಿಸಿಕೊಂಡಿದ್ದ ಕುಟುಂಬ ಕಲಹ ಸದ್ಯ ತಣ್ಣಗಾಗಿದೆ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ಸಿಂಗ್ ಮಧ್ಯೆ ಈ ಮನಸ್ತಾಪ ಕಾಣಿಸಿಕೊಂಡಿತ್ತು. ಸಮಾಜವಾದಿ ಪಕ್ಷದ ರಾಷ್ಟ್ರೀಯ ಮುಖಂಡ ಮುಲಾಯಂ ಸಿಂಗ್ ಯಾದವ್ ತನ್ನ ಮಗ ಅಖಿಲೇಶ್‌ಗೆ ಪಟ್ಟಾಭಿಷೇಕ ನಡೆಸಿ ತನ್ನ ಸಹೋದರ ಶಿವಪಾಲ್‌ನನ್ನು ಸಚಿವನನ್ನಾಗಿ ಮಾಡಿದ್ದರು. ರಾಜ್ಯದ ಸಮಾಜವಾದಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ಅಖಿಲೇಶ್ ಉಳಿಸಿಕೊಂಡಿದ್ದರು. ಅಧಿಕಾರ ಹಂಚಿಕೆಯಲ್ಲಿದ್ದ ಅಸಮಾಧಾನ ಇಬ್ಬರ ಮಧ್ಯೆ ಭುಗಿಲೆದ್ದ ಕಾರಣ ಅಖಿಲೇಶ್ ಚಿಕ್ಕಪ್ಪನನ್ನು ಸಂಪುಟದಿಂದ ವಜಾ ಮಾಡಿದರು. ಪರಿಣಾಮವಾಗಿ ಪಕ್ಷದಲ್ಲಿ ಎರಡು ಬಣ ಉಂಟಾಗಿ ಭಿನ್ನಮತ ಸೃಷ್ಟಿಯಾಗಿತ್ತು. ಆದರೆ ಮುಲಾಯಂ ಸದ್ಯ ತಣ್ಣಗಾಗಿಸಿ ಜಾಣ್ಮೆ ಮೆರೆದಿದ್ದಾರೆ.
ಮುಂದಿನ ವರ್ಷಾರಂಭದಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮುಖ್ಯಮಂತ್ರಿ ಸ್ಥಾನದ ಮೇಲಿನ ಕಣ್ಣು ಇಷ್ಟಕ್ಕೆಲ್ಲ ಕಾರಣವಾಗಿದೆ. ಕಳೆದ ತಿಂಗಳು ನಡೆದ ಸಮೀಕ್ಷೆಯೊಂದರಲ್ಲಿ ಸಮಾಜವದಿ ಪಕ್ಷಕ್ಕೆ ಮುನ್ನಡೆ ಸಿಗಲಿದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಅಖಿಲೇಶ್ ಮತ್ತೆ ಸಿಎಂ ಆಗುವ ಎಲ್ಲ ಅವಕಾಶ ಇದ್ದುದದರಿಂದ ಪಕ್ಷದಲ್ಲಿ ನಾಯಕತ್ವದ ಬಿಕ್ಕಟ್ಟು ಎದುರಾಗಿದೆ.
ಡಿಎಂಕೆ:-
       ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಂಗಂ (ಡಿಎಂಕೆ)ಯು ಇದಕ್ಕೆ ಇನ್ನೊಂದು ಉದಾಹರಣೆ. 92ರ ಇಳಿವಯಸ್ಸಿನಲ್ಲೂ ಆ ಪಕ್ಷದ ಮುಖ್ಯಸ್ಥ ಎಂ. ಕರುಣಾನಿಧಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಇತ್ತೀಚೆಗೆ ಜರುಗಿದ ವಿಧಾನಸಭೆ ಚುನಾವಣೆಯಲ್ಲಿ ಬಿಂಬಿಸಲ್ಪಟ್ಟಿದ್ದರು.  ಅವರ ಮಗ ಎಂ. ಕೆ. ಸ್ಟಾಲಿನ್  ಸಹ ರಾಜಕಾರಣಿಯಾಗಿ ರಾಜ್ಯದಲ್ಲಿ ಹೆಸರು ಮಾಡಿದ್ದರು. ಕರುಣಾನಿಧಿ ಇನ್ನೊಬ್ಬ ಮಗ ಎಂ. ಕೆ ಅಳಗಿರಿಗೆ ಸ್ಟಾಲಿನ್‌ಗೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಕರುಣಾನಿಧಿ ಕೊಟ್ಟಿಲ್ಲ. ಇದರಿಂದ ಸಿಟ್ಟಿಗೆದ್ದ ಅಳಗಿರಿ ಬಂಡಾಯವೆದ್ದಾಗ ಆತನನ್ನು  ಪಕ್ಷವಿರೋಧಿ ಚಟುವಟಿಕೆ ಆಧಾರದ ಮೇಲೆ  ಉಚ್ಛಾಟನೆ ಮಾಡಿದ್ದರು. ಆದರೆ ಕರುಣಾನಿಧಿ ಸ್ಟಾಲಿನ್‌ನನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವ ಧೈರ್ಯ ತೋರಲಿಲ್ಲ. ಏಕೆಂದರೆ ಕುಟುಂಬ ರಾಜಕಾರಣದ ವಿಚಾರ ಅದರಲ್ಲೂ ಪುತ್ರವ್ಯಾಮೋಹದ ಆರೋಪ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ. ಜೊತೆಗೆ ಅಣ್ಣ-ತಮ್ಮಂದಿರಲ್ಲೂ ಮುಂದೆ ಕಲಹ ಎದುರಾಗಬಹದೆನ್ನುವ ದೂರಾಲೋಚನೆ ಅವರಲ್ಲಿತ್ತು.
ಮಕ್ಕಳಿಬ್ಬರ ಮಧ್ಯೆ ಗಲಾಟೆ ತಪ್ಪಿಸಲು ತಾನು ಜೀವಂತವಿರುವವರೆಗೆ ತಾನೇ ಪಕ್ಷದ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದಾರೆ. ಕರುಣಾನಿಧಿ ಮಗಳು ಕನಿಮೋಳಿ ಸಹ ರಾಜಕಿಯದಲ್ಲಿದ್ದಾರೆ. ಈಕೆ ಸ್ಟಾಲಿನ್ ಬೆಂಬಲಿಗಳು. ಸದ್ಯ ಕರುಣಾನಿಧಿ ಹಿಡಿತದಲ್ಲೇನೋ ಪಕ್ಷ ಇದೆ. ಅದರ ಅವರ ನಂತರ ಮಕ್ಕಳಲ್ಲಿ ಅಧಿಕಾರಕ್ಕಾಗಿ ಕಲಹ ಭುಗಿಲೇಳುವುದರಲ್ಲಿ ಅನುಮಾನವೇ ಇಲ್ಲ.
ತೆಲುಗುದೇಶಂ:-
ಎನ್.ಟಿ. ರಾಮರಾವ್ ಅವರ ತೆಲುಗುದೇಶಂ ಪಕ್ಷದ ಹಿಡಿತ ಈಗ ಚಂದ್ರಬಾಬು ನಾಯ್ಡು ಕೈಲಿದೆ. ಎನ್ಟಿಆರ್ ನಿಧನಾನಂತರ ಅವರ ಪತ್ನಿ ಲಕ್ಷ್ಮೀ ಪಾರ್ವತಿ ಅಧ್ಯಕ್ಷೆಯಾದರೂ ಚಂದ್ರಬಾಬು ನಾಯ್ಡು (ಎನ್ಟಿಆರ್ ಅಳಿಯ) ಅವರಿಂದ ಪಕ್ಷವನ್ನೇ ಹೈಜಾಕ್ ಮಾಡಿದ್ದರು. ನಂತರ ಪಕ್ಷವನ್ನು ಕಟ್ಟಿ ಬೆಳೆಸಿದರು. ಅದರೆ ಇದಕ್ಕೆ ಎನ್‌ಟಿಆರ್ ಪುತ್ರ  ಎನ್. ಬಾಲಕೃಷ್ಣ, ಲಕ್ಷ್ಮೀ ಪಾರ್ವತಿ ಮತ್ತು ಪುತ್ರಿ ಪುರಂದೇಶ್ವರಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇವರ ವೈಷಮ್ಯ ಎಲ್ಲಿಯವರೆಗೆ ಬೆಳೆಯಿತೆಂದರೆ ಪುರಂದೇಶ್ವರಿ ಯುಪಿಎ ಸರ್ಕಾರದಲ್ಲ್‌ಸಚಿವೆಯಾಗಿದ್ದರು. ನಂತರ ಬಿಜೆಪಿ ಸೇರಿದರು. ಆದರೆ ನಾಯ್ಡುಗೆ ಬಿಜೆಪಿ ಸಖ್ಯವಿದ್ದುದರಿಂದ ಪುರಂದೇಶ್ವರಿಗೆ ಬಿಜೆಪಿಯಲ್ಲಿ ಯಾವ ಹುದ್ದೆಯೂ ಸಿಗದಂತೆ ಮಾುಡಿದರು.
ಜೆಡಿಎಸ್:-
ಕರ್ನಾಟಕದ ಜಾತ್ಯತೀತ ಜನತಾದಳದಲ್ಲೂ ಅಪ್ಪ-ಮಕ್ಕಳ ರಾಜ್ಯಭಾರವೇ ನಡೆದಿದೆ. ಎರಡನೆಯ ಮಗ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆದರೆ ಮೊದಲ ಪುತ್ರ ಮಂತ್ರಿ ಪ್ರಭಾವಿ ಸ್ಥಾನಕ್ಕಷ್ಟೇ ತೃಪ್ತಿ ಪಡಬೇಕಾಯಿತು. ನಂತರ ಮಕ್ಕಳಲ್ಲಿ ಮತ್ತೆ ಅಧಿಕಾರಕ್ಕಾಗಿ ಕಚ್ಚಾಟ ನಡೆಯಬಾರದೆಂದು ತೀರ್ಮಾನಿಸಿ ದೇವೇಗೌಡರೇ ಪಕ್ಷದ ಪರಮೋಚ್ಛ ನಾಯಕರಾಗಿದ್ದಾರೆ. ಕುಮಾರಸ್ವಾಮಿ ರಾಜ್ಯಾಧ್ಯಕ್ಷರಾಗಿದ್ದಾರೆ. ಜೆಡಿಎಸ್ ಮುಂದೆ ಅಧಿಕಾರಕ್ಕೆ ಬಂದರೆ ಅವರೇ ಸಿಎಂ ಅಭ್ಯರ್ಥಿ ಎಂದು ಬಿಂಬಿತರಾಗುತ್ತಿದ್ದಾರೆ. ಕುಮಾರಸ್ವಾಮಿ ಪತ್ನಿಯೂ ರಾಜಕೀಯದಲ್ಲಿದ್ದಾರೆ.ರೇವಣ್ಣ ಅವರ ಪತ್ನಿ, ಪುತ್ರ ರಾಜಕೀಯಕ್ಕೆ ಧುಮುಕಿದ್ದಾರೆ. ಕುಟುಂಬ ರಾಜಕಾರಣವೇ ಇಲ್ಲಿ ನೆಲೆಯೂರಿದೆ.
ಆರ್‌ಜೆಡಿ:
 ಲಾಲೂ ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾದಳದಲ್ಲೂ ಅವರ ಇಬ್ಬರು ಪುತ್ರರು ಮತ್ತು ಒಬ್ಬ ಮಗಳು ತಂದೆ ಹೊಂದಿದ್ದ ಸ್ಥಾನಕ್ಕಾಗಿ ಈಗಿಂದಲೇ ಯತ್ನ ನಡೆಸಿದ್ದಾರೆ. ಪುತ್ರರಾದ ತೇಜಸ್ವಿ ಮತ್ತು ತೇಜ್ ಪ್ರತಾಪ್  ಮತ್ತು ಪುತ್ರಿ ಮಿಸಾ ಭಾರತಿ ಅವರಲ್ಲಿ ಯಾವುದೇ ಕಲಹ ಕಾಣಿಸಿಕೊಳ್ಳಬಾರದೆಂದು ಸದ್ಯಕ್ಕೆ ತೇಜಸ್ವಿ ಅವರನ್ನು ಬಿಹಾರದ ಉಪಮುಖ್ಯಮಂತ್ರಿಯನ್ನಾಗಿ, ಇನ್ನೊಬ್ಬ ಮಗನನ್ನು ಮಂತ್ರಿಯನ್ನಾಗಿ ಮಾಡಿದ್ದಾರೆ. ಹಿರಿತನ ಮತ್ತು ರಾಜಕೀಯದ ಅನುಭವದ ದೃಷ್ಟಿಯಿಂದ ಇದು ಸಮ್ಮತ ಎಂದು ಅಭಿಪ್ರ್ರಾಯ ಪಡಲಾಗುತ್ತಿದೆ.
ಶಿವಸೇನಾ:
ಕಟ್ಟಾ ಹಿಂದೂ ನಾಯಕರಾಗಿದ್ದ ಬಾಳಾ ಸಾಹೇಬ್ ಠಾಕ್ರೆ  1966ರಲ್ಲೇ ಸ್ಥಾಪಿಸಿದ ಪಕ್ಷ ಶಿವಸೇನೆ. ಠಾಕ್ರೆ ಹಿರಿಯ ಮಗ ಉದ್ಧವ್ ಮತ್ತು ಸಹೋದರ ಸಂಬಂಧಿ ರಾಜ್ ಠಾಕ್ರೆ ಜೊತೆ ಸೇರಿ 2013ರವರೆಗೆ ಕಾಪಾಡಿಕೊಂಡು ಬಂದಿದ್ದರು. 2005ರಲ್ಲಿ ಠಾಕ್ರೆ ವೃದ್ಧಾಪ್ಯದಿಂದಾಗಿ ಹಿರಿಯ ಮಗ ಉದ್ಧವ್‌ನನ್ನು ಪಕ್ಷದ ಮುಖ್ಯಸ್ಥ ಎಂದು ಬಿಂಬಿಸಿದ ನಂತರ ಕಚ್ಚಾಟ ಆರಂಭವಾಗಿತ್ತು. ಏಕೆಂದರೆ ರಾಜ್ ಠಾಕ್ರೆ ಸಹ ಪ್ರಭಾವಿ ಮತ್ತು ತನ್ನದೇ ಆದ ವರ್ಚಸ್ಸಿನಿಂದ ಜನಮನಗೆದ್ದಿದ್ದರು. ಇದರಿಂದ ಬೇಸರಗೊಂಡ ರಾಜ್ ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ಕಟ್ಟಿದರು. 2012ರಲ್ಲಿ ಠಾಕ್ರೆ ಮರಣಹೊಂದಿದರು. ಕೆಲವು ತಿಂಗಳಿನಿಂದ ಮತ್ತೆ ಇಬ್ಬರನ್ನೂ ಒಂದೆಡೆ ಸೇರಿಸುವ ಯತ್ನ ನಡೆಯುತ್ತಿದೆ.  
ಜೆಎಂಎಂ:
ಜಾರ್ಖಂಡ್‌ನ ಶಿಬು ಸೊರೆನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾದಲ್ಲಿ ಪಕ್ಷದ ಉನ್ನತ ಹುದ್ದೆಗಾಗಿ ಕುಟುಂಬ ಕಲಹ 2009ರಲ್ಲೇ ಕಾಣಿಸಿಕೊಂಡಿದೆ. ಸೊರೆನ್ ಅವರ ಹಿರಿಯ ಪುತ್ರ ದುರ್ಗಾ ಸೊರೆನ್ ಎಂಎಲ್‌ಎ ಆಗಿದ್ದಾಗ ಅಕಾಲಿಕ ಸಾವನ್ನಪ್ಪಿದರು. ಇವರ ಸ್ಥಾನವನ್ನು ಅವರ ಪತ್ನಿ ಸೀತಾ ಸೊರೆನ್ ತುಂಬುತ್ತಿದ್ದಾರೆ. ಈ ಮಧ್ಯೆ ಸೊರೆನ್ ಅವರ ಇನ್ನಿಬ್ಬರು ಪುತ್ರರಾದ ಹೇಮಂತ್ ಮತ್ತು ಬಸಂತ್ ತಾವೇ ಮುಂದಾಳತ್ವ ವಹಿಸಬೇಕೆಂದು ಹಠ ಹಿಡಿದಿದ್ದು ಅಂತಃಕಲಹ ಮುಂದುವರೆದಿದೆ. ಆದರೆ ಸೊಸೆ ಸೀತಾ ಸದ್ಯ ಎಮ್ಮೆಲ್ಲೆ ಆಗಿರುವುದರಿಂದ ವಿವಾದ ಇತ್ಯರ್ಥವಾಗದೆ ಉಳಿದಿದೆ. ಹೇಮಂತ್ ಮುಂದಿನ ಸಿಎಂ ಉಮೇದುವಾರ ತಾನೇ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಶಿಬು ಸಾಕಷ್ಟು ಸಂದರ್ದಲ್ಲಿ ಹೇಮಂತ್ ವಿರುದ್ದ ಕಿಡಿಕಾರಿದ್ದಾರೆ. ಇನ್ನೊಬ್ಬ ಮಗ ಬಸಂತ್ ರಾಜ್ಯಸಭೆ ಸದಸ್ಯರಾಗಿದ್ದಾರೆ.
ತೆಲಂಗಾಣ ರಾಷ್ಟ್ರ ಸಮಿತಿ:
ತೆಲಂಗಾಣದಲ್ಲಿ ಸದ್ಯ ಅಧಿಕಾರದಲ್ಲಿರುವ ಈ ಪಕ್ಷದ ಮುಖ್ಯಸ್ಥ ಅಲ್ಲಿನ ಹಾಲಿ ಸಿಎಂ ಕೆ. ಚಂದ್ರಶೇಖರರಾವ್. ಅವರ ಹಿರಿಯ ಮಗ ರಾಮರಾವ್ ಅಪ್ಪನ ಸಂಪುಟದಲ್ಲಿ ಪ್ರಭಾವಿ ಸಚಿವ. ರಾವ್ ಅವರ  ಮಗಳು ಕವಿತಾ ಲೋಕಸಭೆ ಸದಸ್ಯೆ. ಸದ್ಯ ಇವರಲ್ಲಿ ಅಂತಃಕಲಹ ಇಲ್ಲ.  

ಜನಹಿತ, ಸಮಸ್ಯೆ, ಅಭಿವೃದ್ಧಿ  ಮರೆತ ಅಧಿಕಾರಿಗಳು 
 ಕಿವಿ ಹಿಂಡಿ ಕೆಲಸದ ನೆನೆಪು ಮಾಡಿಕೊಟ್ಟ ಸಿಇಓ

ಶಿವಮೊಗ್ಗದಲ್ಲಿ ಪಾದರಸದಂತೆ ಚಲನಶೀಲ, ಕೆಲಸ ಮಾಡುವ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ, ಜಿಪಂ ಸಿಇಓ ರಾಕೇಶ್‌ಕುಮಾರ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಉಪವಿಭಾಗಾಧಿಕಾರಿ ಎಚ್. ಕೆ.  ಕೃಷ್ಣಮೂರ್ತಿಯವರಂತಹ ದಕ್ಷ ಅಧಿಕಾರಿಗಳಿದ್ದಾರೆ. ಅವರೆಲ್ಲ ಕೆಲಸ ಮಾಡುವ ರೀತಿ, ಪರಿಸ್ಥಿತಿಯನ್ನು ನಿಭಾಯಿಸುವ ಕಲೆ, ಹೊತ್ತು ಮೀರಿದರೂ ಕೆಲಸ ಮುಗಿಸಿಯೇ ಮನೆಗೆ ಮರಳುವುದು ಎಂತಹವರನ್ನೂ ಆಕರ್ಷಿಸುತ್ತದೆ. ಇವರೆಲ್ಲ ಎಷ್ಟು ಕ್ರಿಯಾಶೀಲರೆಂದರೆ, ಸದಾ ಜನಸಮಾನ್ಯರ ಸಮಸ್ಯೆ ಪರಿಹರಿಸಲು, ಅಹವಾಲು ಕೇಳಲು ಸಿದ್ಧವಾಗಿರುತ್ತಾರೆ. ಸಾಮಾನ್ಯ ವ್ಯಕ್ತಿಯೂ ಇವರನ್ನು ಭೇಟಿ ಮಾಡಿ ಮಾತನಾಡಲು ಅವಕಾಶ ಕಲ್ಪಿಸಿದ್ದಾರೆ. ಇಷ್ಟೊಂದು ಉತ್ತಮ ಅಧಿಕಾರಿ ವೃಂದ ಕಾಣುವುದು ದುರ್ಲಭ. ನಿಜಕ್ಕೂ ಜಿಲ್ಲೆಯ ಎಲ್ಲಾ ಇಲಾಖಾ ಅಧಿಕಾರಿಗಳು ಇವರನ್ನು ನೋಡಿ ಪಾಠ ಕಲಿಯಬೇಕಿದೆ. ಇವರ ಮಾದರಿಯಲ್ಲಿ ಕೆಲಸ ಮಾಡುವ ಛಲ ಬೆಳೆಸಿಕೊಳ್ಳಬೇಕಿದೆ.


ಸಮಸ್ಯೆಗಳ ಸ್ವರೂಪವನ್ನೇ ಸರಿಯಾಗಿ ಅರ್ಥೈಸಿಕೊಳ್ಳದ ಜಿಲ್ಲಾ ಮಟ್ಟದ ಬಹುತೇಕ ಅಧಿಕಾರಿಗಳು ಅಭಿವೃದ್ಧಿಯನ್ನು ಹೇಗೆ ಮಾಡಿಯಾರು, ಅಥವಾ ಸಮಸ್ಯೆಯನ್ನು ಹೇಗೆ ಬಗೆಹರಿಸಿಯಾರು. ತಪ್ಪು ಮಾಹಿತಿಯನ್ನು ಸರಿಯಾಗಿ, ಸರಿಯಾದ ಮಾಹಿತಿಯನ್ನು ತಪ್ಪಾಗಿ ಕೊಡುವ ಮೂಲಕ ಮೇಲಧಿಕಾರಿಗಳ ಕೆಂಗಣ್ಣಿಗೆ ತುತ್ತಾಗುತ್ತಿದ್ದಾರೆ. ನೈಜ ಸ್ಥಿತಿ ಹೇಳುವ ಸಾಮರ್ಥ್ಯ ಇಲ್ಲವೇ ಇಲ್ಲ. ಸಮಸ್ಯೆಯನ್ನು ಅರ್ಥೈಕೊಳ್ಳಬೇಕಾಗಿತ್ತಾದರೂ ನಗರದಲ್ಲಿ ನೆಲೆಸಿರುವುದರಿಂದ  ಗ್ರಾಮೀಣ ಸಮಸ್ಯೆಗೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇವರಿಂದ ಯಾವ ಅಭಿವೃದ್ಧಿ ಅಥವಾ ಜನರ ಹಿತವನ್ನು ನಿರೀಕ್ಷಿಸಬಹುದು?

 ಇವರೆಲ್ಲ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು. ಬಹುತೇಕರು ಹಲವರು ವರ್ಷಗಳಿಂದ ಇಲ್ಲಿಯೇ ತಳವೂರಿದ್ದಾರೆ. ಆದರೂ ಅವರಿಗೆ ಕೆಲಸ ಮಾಡುವುದೆಂದರೆ ಏಕೋ ಅಲರ್ಜಿ. ಇಲಾಖೆಯ ಕೆಲಸ, ಜನರಿಗೆ ದೊರಕಿಸಿಕೊಡಬಹುದಾದ ಸೌಲಭ್ಯಗಳು, ಜನಪ್ರತಿನಿಧಿಗಳು ಸಮಸ್ಯೆ ಹೇಳಿದಾಗ ಅದನ್ನು ಪರಿಹರಿಸುವುದು, ಜನರು ತಮ್ಮ ಬಳಿ ಬಂದಾಗ ಅವರನ್ನು ಸೌಜನ್ಯದಿಂದ ಕಾಣುವುದು ಇವ್ಯಾವುದನ್ನೂ ಮಾಡುವುದಿಲ್ಲ. ಬದಲಿಗೆ ಜಿಲ್ಲಾ ಮಟ್ಟದ ಇಪ್ಪತ್ತಂಶಗಳ ಸಭೆ ಕರೆದಾಗ ಬರುತ್ತಾರೆ. ಹಿಂದಿನ ಸಭೆಯಲ್ಲಿ ಹೇಳಿದ್ದನ್ನೇ ಹೇಳುತ್ತಾರೆ. ಜನಪ್ರತಿನಿಧಿಗಳಿಂದ ಅಥವಾ ಹಿರಿಯ ಅಧಿಕಾರಿಗಳಿಂದ ಒಂದಷ್ಟು ಉಗಿಸಿಕೊಳ್ಳುತ್ತಾರೆ, ಮರಳುತ್ತಾರೆ.
ಹೀಗೇಕೆ ಇವರು ಮಾಡುತ್ತಾರೆ ಎಂದು ಯೋಚಿಸಿದಾಗ ಇವರಲ್ಲಿ ಕೆಲಸ ಮಾಡುವ ಮನೋಭಾವವೇ ಇಲ್ಲದಿರುವುದು ವೇದ್ಯವಾಗುತ್ತದೆ. ಎರಡನೆಯದಾಗಿ, ಸಭೆಗೆ ತಯಾರಿ ನಡೆಸುವುದಿಲ್ಲ. ಅಂದರೆ ಕೆಲಸದಲ್ಲಿ ನಿಪುಣತೆ, ಚಾಕಚಕ್ಯತನ ಇಲ್ಲ. ಅಂದಿನ ಕೆಲಸವನ್ನು ಅಂದೇ ಮುಗಿಸುವುದಿಲ್ಲ. ಮೇಲಧಿಕಾರಿಗಳಿಗೆ ಹೇಗೆ ವರದಿ ಕಳಿಸಬೇಕೆಂಬ ಕಲೆ ಗೊತ್ತಿಲ್ಲ. ಸಭೆಗೆ ಸಮಯಕ್ಕೆ ಸರಿಯಾಗಿ  ಹಾಜರಾಗುವುದೂ ಇಲ್ಲ. ಸಮಯಪ್ರಜ್ಞೆ ಗೊತ್ತೇ ಇಲ್ಲ. ನೀಟಾಗಿ ಡ್ರೆಸ್ ಮಾಡಿ, ಶಿಸ್ತಿನಿಂದ ಆಗಮಿಸಬೇಕೆನ್ನುವುದೂ ಕೆಲವರಿಗೆ ಗೊತ್ತಿಲ್ಲ.  
ಇದು ಜಿಲ್ಲೆಯ ಬಹುತೇಕ ಹಿರಿಯ ಅಧಿಕಾರಿಗಳು ಮಾಡುತ್ತಿರುವ ಕೆಲಸ. ಇದನ್ನೆಲ್ಲ ಆರೆಂಟು ತಿಂಗಳಿನಿಂದ ಗಮನಿಸಿಕೊಂಡು ಬಂದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಇನ್ನು ಈ ಅಶಿಸ್ತನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಹಂತ ತಲುಪಿದಾಗ ಚೆನ್ನಾಗಿ ಬುದ್ಧಿ ಹೇಳಿದ್ದಾರೆ.
ಜಿಲೆಯಲ್ಲಿ ಈ ವರ್ಷ ಬಹುತೇಕ ಬರಗಾಲ ಬಂದಿದೆ. ಬೆಳೆೆ ನಾಶವಾಗಿದೆ.  ಶಿಕ್ಷಕರ ಕೊರತೆ ಇನ್ನೂ ಸಾಕಷ್ಟಿದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಇನ್ನೂ ಮೂರ್ನಾಲ್ಕು ವರ್ಷದ ಹಿಂದಿನ ಗುರಿಯೇ ಬಾಕಿ ಇದೆ. ಕಾರ್ಮಿಕರಿಗೆ ದೊರಕಬೇಕಾದ ವಿಮೆ ಇನ್ನಿತರ ಸೌಲಭ್ಯ ಸಿಕ್ಕಿಲ್ಲ. ಕುಡಿಯುವ ನೀರಿನ ಯೋಜನೆ ನಾಲ್ಕಾರು ವರ್ಷವಾದರೂ ಮುಗಿದಿಲ್ಲ. ಇವುಗಳ ಬಗ್ಗೆ ಪ್ರಶ್ನಿಸಿದರೆ ಈ ಅಧಿಕಾರಿಗಳು ಯಥಾ ಪ್ರಕಾರ ಅನುಪಾಲನಾ ವರದಿಯಲ್ಲಿ ಇದ್ದುದನ್ನೇ ಓದಿ ಸಭೆ ಮುಗಿಸುವ ತಂತ್ರ ಹೂಡುತ್ತಾರೆ. ಒಂದು ಇಲಾಖೆಯ ಹಿರಿಯ ಅಧಿಕಾರಿಯಾದ ಮೇಲೆ ಅವರಿಗೆ ತಮ್ಮದೇ ಆದ ಜವಾಬ್ದಾರಿ ಇರುತ್ತದೆ. ಇಡೀ ಜಿಲ್ಲೆಯ  ವ್ಯವಹಾರ ಸಂಬಂಧಿಸುತ್ತದೆ. ಕೆಲವರು ಜಿಲ್ಲಾ ಕೇಂದ್ರ ಬಿಟ್ಟು ತಾಲೂಕಿಗೆ ತೆರಳುವುದೇ ಇಲ್ಲ. ಓಡಾಡಲೊಂದು ವಾಹನ, ಕೈಲೊಂದು ಫೈಲು ಹಿಡಿದು ಸದಾ ಮಿಂಚುತ್ತಾರೆ.  ಹೊಸ ಯೋಜನೆ ಯಾವುದು ಜಾರಿಯಾಗಿದೆ, ತಮ್ಮ ಇಲಾಖೆಯ ಅನುದಾನದಲ್ಲಿ ಯಾವ್ಯಾವ ಕೆಲಸ ನಡೆಸಬಹುದು, ಜನರಿಗೆ ತುರ್ತಾಗಿ ನೀಡಬಹುದಾದ ಸೌಲಭ್ಯಗಳೇನು ಎನ್ನುವುದನ್ನು ಯೋಚಿಸುತ್ತಿಲ್ಲ.
ಕೆಲವು ಅಧಿಕಾರಿಗಳು ಎಷ್ಟು ಚಾಲಾಕಿಗಳಿದ್ದಾರೆ ಎಂದರೆ ಕೆಡಿಪಿ, ಜಿಪಂನಂತಹ ಮಹತ್ವದ ಸಭೆ ಇದ್ದ ದಿನವೇ ರಜೆ ಹಾಕುತ್ತಾರೆ. ಕಿರಿಯ ಅಧಿಕಾರಿಗಳನ್ನು ಸಭೆಗೆ ಕಳುಹಿಸಿ ಅವರು ಉಗಿಸಿಕೊಳ್ಳುವಂತೆ ಮಾಡಿ ತಾವು ಬಚಾವಾಗುತ್ತಾರೆ.
ಇದನ್ನೆಲ್ಲ ಗಮನಿಸಿದ್ದ ಸಿಇಓ ರಾಕೇಶ್‌ಕುಮಾರ್ ಬಹುತೇಕ ಇಲಾಖಾಧಿಕಾರಿಗಳಿಗೆ ಮೊನ್ನೆ ಕಿವಿ ಹಿಂಡಿದ್ದಾರೆ. ಸಭೆಗೆ ಏಕೆ ಮತ್ತು ಹೇಗೆ ಬರಬೇಕು ಎಂಬ ಪಾಠ ಮಾಡಿದ್ದಾರೆ. ಜೊತೆಗೆ ಅವರ ಸೇವಾ ವೈಖರಿಯ ಬಗ್ಗೆ ಇಲಾಖೆಯ ಆಯುಕ್ತರು ಮತ್ತು ಪ್ರಧಾನ ಕಾರ್ಯದರ್ಶಿಗೆ ಬರೆಯುವುದಾಗಿ ಎಚ್ಚರಿಸಿದ್ದಾರೆ. ಕೆಲಸವನ್ನೇ ಮಾಡದ, ಸೋಂಬೇರಿಗಳಾದ ಇಂತಹ ಅಧಿಕಾರಿಗಳು ಜಿಲ್ಲೆಯಲ್ಲಿ ಇದ್ದರೆ ಏನು ಲಾಭ ಎನ್ನುವ ಪ್ರಶ್ನೆ ಸಿಇಓ ಅವರದ್ದು.
ಇತ್ತೀಚೆಗೆ ಶಿಕಾರಿಪುರದಲ್ಲಿ ಇಬ್ಬರು ಅಧಿಕಾರಿಗಳು ಬೆಳೆ ಹಾನಿಯನ್ನು ರೈತರ ಹೋಲಕ್ಕೆ ಹೋಗಿ ಪರಿಶೀಲಿಸದೆ ಕಚೇರಿಯಲ್ಲೇ ಕುಳಿತು ವರದಿ ತಯಾರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇಂತಹವರಿಂದ ಯಾವ ರೈತನಿಗೂ ಎಳ್ಳಷ್ಟೂ ಲಾಭವಿಲ್ಲ. ಸರ್ಕಾರದ ಆದೇಶ ಬಂದಿದ್ದರೂ ಅದನ್ನು ಕಾರ್ಯಗತಗೊಳಿಸಬೇಕೆಂಬ ಕನಿಷ್ಟ ತಿಳುವಳಿಕೆಯೂ ಇಲ್ಲ. ಇಲಾಖೆಯಲ್ಲಿ ಹಣವಿಲ್ಲ, ಸಿಬ್ಬಂದಿಗಳಿಲ್ಲ, ಫಲಾನುಭವಿಗಳೇ ಇಲ್ಲ, ತಾಂತ್ರಿಕ ತೊಂದರೆ ಇದೆ, ಗುತ್ತಿಗೆದಾರರು ಸಮಯಕ್ಕೆ ಸರಿಯಾಗಿ ಕೆಲಸ ಮಾಡಿಕೊಡುತ್ತಿಲ್ಲ ಎಂಬ ನೆಪ ಹೇಳುವ ಅಧಿಕಾರಿಗಳು, ಇವರೆಲ್ಲರಿಂದ ಕೆಲಸ ಮಾಡಿಸಿ, ವೀಕ್ಷಿಸಿ ವರದಿ ಕೊಡಲೆಂದೇ ತಾವಿದ್ದೇವೆ ಎನ್ನುವುದನ್ನು  ಮರೆತುಬಿಟ್ಟಿದ್ದಾರೆ.
ಕೆಲವು ಅಧಿಕಾರಿಗಳಂತೂ ಎಷ್ಟು ಜಡ್ಡುಗಟ್ಟಿ ಹೋಗಿದ್ದಾರೆಂದರೆ, ಅವರನ್ನು ಎಬ್ಬಿಸುವುದೇ ಕಷ್ಟ ಎನ್ನುವಂತಾಗಿದೆ. ಯಾವ ಆದೇಶ ಬರಲಿ, ಹೋಗಲಿ, ಅವರು ತಲೆಕೆಡಿಸಿಕೊಳ್ಳುತ್ತಿಲ್ಲ. ಅವರು ಮಾಡಿದ್ದೆ ಕೆಲಸ, ಬಿಟ್ಟಿದ್ದೇ ಕೆಲಸ. ಇಡೀ ದಿನವನ್ನು ವ್ಯರ್ಥ ಮಾಡುತ್ತ ಕಾಲಕಳೆಯುತ್ತಾರೆ. ಇನ್ನೂ ಕೆಲವು ಅಧಿಕಾರಿಗಳ ಮುಖದರ್ಶನವೇ ಸಾರ್ವಜನಿಕರಿಗಿಲ್ಲ. ಇವರು ಬಹಿರಂಗದಲ್ಲಿ ಕಾಣಿಸಿಕೊಳ್ಳದೆ ಕೆಲಸ ಮಾಡುವವರು!  
ಸಭೆಯಲ್ಲಿ ಬೇಜವಾಬ್ದರಿ ಉತ್ತರ ಕೊಡುವುದು, ವಿಷಯ ಜ್ಞಾನ ಇಲ್ಲದಂತೆ ವರ್ತಿಸುವುದು,  ಪ್ರಶ್ನೆಗೆ ಯಾವುದೋ ಉತ್ತರ ಕೊಡುವುದು, ಸಂಬಂಧಿಸಿದ ದಾಖಲೆ ತರದಿರುವುದು, ಆಮೇಲೆ ಕಳಿಸಿಕೊಡುತ್ತೇನೆ ಎನ್ನುವುದು,  ಪಕ್ಕದಲ್ಲಿ ಕುಳಿತವರೊಂದಿಗೆ ಮಾತನಾಡುವುದು, ಮೊಬೈಲ್ ಚಾಟಿಂಗ್ ನಡೆಸುತ್ತ ಸಭೆಗೂ ತಮಗೂ ಸಂಬಂಧವಿಲ್ಲದಂತೆ ಇರುವುದು, ಆಕಳಿಸುತ್ತ ಕಾಲಕಳೆಯುವುದು... ಇತ್ಯಾದಿ ಸಾಮಾನ್ಯವಾಗಿ ಅಧಿಕಾರಿಗಳಲ್ಲಿ ಕಂಡುಬರುತ್ತದೆ. ಕೆಲಸದಲ್ಲಿ ನಿಷ್ಠೆ, ಶ್ರದ್ಧೆ, ಆಸಕ್ತಿ, ಕಾಳಜಿ ಇಲ್ಲದಿರುವವರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ?
ಇಂತಹವರ ಹೊರತಾಗಿಯೂ ಕೆಲವು ಅಧಿಕಾರಿಗಳು ಅತ್ಯುತ್ತಮ ರೀತಿಯಲ್ಲಿ ಅಂದರೆ ಮಾದರಿ ಎನಿಸುವಂತೆ ಕೆಲಸ ಮಾಡುತ್ತಿದ್ದಾರೆ. ಅವರು ಉತ್ತರ ಕೊಡುವ ಕೌಶಲ್ಯ, ಕೆಲಸ ಮಾಡುವ ರೀತಿ, ಸಂವಹನ ಕಲೆ ಮೆಚ್ಚುಗೆಯಾಗುತ್ತದೆ.
ಸಿಇಒ ರಾಕೇಶ್‌ಕುಮಾರ್ ಸರಳ ಮತ್ತು ಅಷ್ಟೇ ಕಟ್ಟುನಿಟ್ಟಿನ ಯುವ ಅಧಿಕಾರಿ. ಹತ್ತಾರು ಸಭೆಯಲ್ಲಿ ಕೆಲಸ ಮಾಡದ ಅಧಿಕಾರಿಗಳ ವರ್ತನೆ, ಅಸಡ್ಡೆತನ ಕಂಡು ರೋಸಿ ಹೋಗಿ ಮೊನ್ನೆ ಸರಿಯಾಗಿ ಚಾಟಿ ಬೀಸಿದ್ದಾರೆ. ಅಧಿಕಾರಿಗಳು ಸಿಇಒ ಮಾತು ಕೇಳಿ ಬೆವೆತುಹೋಗಿದ್ದಾರೆ. ಕೆಲಸ ಮಾಡಲು ಸಾಧ್ಯವಿಲ್ಲದಿದ್ದರೆ ಹೇಳಿ, ರಿಲೀವ್ ಮಾಡುತ್ತೇನೆಂಬ ಮಾತನ್ನೂ ಆಡಿದ್ದಾರೆ.  
ಜಿಲ್ಲಾಧಿಕಾರಿ ವಿ. ಪಿ. ಇಕ್ಕೇರಿ ಐದಾರು ತಿಂಗಳ ಹಿಂದೆ ಕುಡಿಯುವ ನೀರಿನ ಸಮಸ್ಯೆ ಗ್ರಾಮಗಳಲ್ಲಿ ಎದುರಾಗಿದ್ದ ಬಗ್ಗೆ ಮಾಹಿತಿ ಪಡೆಯಲು ಪಿಡಿಓಗಳ ಸಭೆ ಕರೆದಿದ್ದರು. ಆಗ  ಕೇಳಿದ ಪ್ರಶ್ನೆಗಳಿಗೆ ಪಿಡಿಓಗಳಿಂದ ಬಂದ ಉತ್ತರ ಗಮನಿಸಿ ಚೆನ್ನಾಗಿ ಝಾಡಿಸಿದ್ದರು. ಕೆಲಸ ಮಾಡುತ್ತಿರುವ ಸ್ಥಳದ ಬಗ್ಗೆ ಸಾಮಾನ್ಯ ಜ್ಞಾನವನ್ನೂ ಹೊಂದಿಲ್ಲದ್ದರ ಬಗ್ಗೆ ತೀವ್ರವಾಗಿ ಕಿಡಿಕಾರಿದ್ದರು. ಅಲ್ಲಿಂದ ಡಿಸಿ ಎಂದರೆ ಪಿಡಿಓಗಳು ಬೆವರುತ್ತಾರೆ.
ಮೊನ್ನೆ ಸಿಇಒ ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡಾಗ ಡಿಸಿಯವರು ಪಿಡಿಓಗಳಿಗೆ ಪಾಠ ಮಾಡಿದ ಸಭೆಯ ನೆನೆಪಾಯಿತು. ಈಗ ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ಸಿಇಓ ಬಿಸಿಮುಟ್ಟಿಸಿದ ಮೇಲೆ ಎಚ್ಚೆತ್ತುಕೊಳ್ಳುವಂತಾಗಿದೆ. ಬಿಸಿ ತಾಗಿದರೆ ಮಾತ್ರ ಬೆಣ್ಣೆ ಕರಗುತ್ತದೆ ಅಲ್ಲವೇ? ಈಗ ಬಿಸಿ ತಾಗಿದೆ. ಇನ್ನಾದರೂ ಜಾಗೃತರಾಗಿ ಇಲಾಖೆಯ ಕೆಲಸ ಮತ್ತು ತಮ್ಮ ಕರ್ತವ್ಯವನ್ನು ಅಧಿಕಾರಿಗಳು ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕಿದೆ.



............................

Saturday, 17 September 2016

ಮೂಕ ಹಕ್ಕಿಯು ರೋಧಿಸುತಿದೆ.........






 ಮೊನ್ನೆ ನಡೆದ ಕಾವೇರಿ ಗಲಾಟೆಯಲ್ಲಿ ಯಾಕೋ ನಮ್ಮ ಮೇಲೆ  ಹೋರಾಟಗಾರರ ವೇಷದಲ್ಲಿ ಬಂದ ಬಹುಜನರು ಸೇಡು ತೀರಿಸಿಕೊಂಡಿದ್ದಾರೆ.  ಕಲ್ಲು ಹೊಡೆದರು, ದೊಣ್ಣೆಯಿಂದ ಥಳಿಸಿದರು, ಇಷ್ಟೂ ಸಾಲದೆಂಬಂತೆ ಸುಟ್ಟು ಹಾಕಿದರು. ಇವೆಲ್ಲವನ್ನೂ ಮಾಡಿದರಲ್ಲ, ಹಾಗಾದರೆ ನಾನೇನು ತಪ್ಪು ಮಾಡಿದ್ದೇನೆ ಎನ್ನುವುದನ್ನು ಏಕೆ ನೀವು ಹೇಳಲಿಲ್ಲ. ಗುಂಪಿನಲ್ಲಿದ್ದವರೆಲ್ಲ ಕಲ್ಲೆಸೆದರು, ಮೈಯಿಂದ ರಕ್ತ ಸೋರುವಷ್ಟು ಥಳಿಸಿದರು. ಕೊನೆಗೆ ಬೆಂಕಿಯನ್ನು ಹಾಕಿ ಅದರ ಕೆನ್ನಾಲಿಗೆಯಲ್ಲಿ ಸಿಕ್ಕಿ ಬೇಯುತ್ತಿರುವಾಗ ಕೇಕೆ ಹಾಕಿದರು. ನನ್ನ ಅಸ್ಥಿಪಂಜರವನ್ನು ಮಾತ್ರ  ಬಿಟ್ಟು ಹೋದರು. ಇದೇಕೆ ಇಂತಹ ಶಿಕ್ಷೆ?
ಪ್ರತಿ ಬಾರಿ ಗಲಾಟೆಯಾದಾಗಲೂ ನಾನೇ ಏಕೆ ಗುರಿಯಾಗುತ್ತಿದ್ದೇನೆ ಎನ್ನುವುದು ನನಗೆ ಇಂದಿನವರೆಗೂ ಅರ್ಥವಾಗಿಲ್ಲ.  ಏಕೆಂದರೆ ನಾನು ತಪ್ಪು ಮಾಡಿಲ್ಲ ಎನ್ನುವುದು ನನಗೆ ಗೊತ್ತು. ರಾಜಕಾರಣಿಗಳೋ, ಅಧಿಕಾರಿಗಳೋ, ಸಾರ್ವಜನಿಕರೋ ಅಥವಾ ಚಾಲಕರೊ ಯಾರೋ ಮಾಡಿದ ತಪ್ಪಿಗೆ ನನಗೆ ಶಿಕ್ಷೆ. ಎಂತಹ ನ್ಯಾಯ ನೋಡಿ! ನನ್ನಂತಹ ಅಮಾಯಕನ ಗೋಳು ಕೇಳುವವರಿಲ್ಲ. ಏಕೆಂದರೆ  ಚಾಲಕರು ನನ್ನನ್ನು ಎಲ್ಲಿ ಬೇಕೆಂದರೆಲ್ಲಿ ನಿಲ್ಲಿಸುತ್ತಾರೆ. ಜೊತೆಗೆ ನನ್ನ ಆಕಾರವೂ ದೊಡ್ಡದು. ಹಾಗಾಗಿ ಥಟ್ಟನೆ ಸಾರ್ವಜನಿಕರ ಕಣ್ಣಿಗೆ ಬೀಳುತ್ತೇನೆ. ದೂರದಿಂದ ಕಲ್ಲೆಸೆದರೂ ಅದು ನನಗೆ ತಗಲುತ್ತದೆ.  
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದಕ್ಕೂ ನನಗೂ ಏನು ಸಂಬಂಧ ಎನ್ನುವುದು ಮಾತ್ರ ಗೊತ್ತಾಗಲೇ ಇಲ್ಲ. ಏಕೆಂದರೆ ನಾನು ಸುಮ್ಮನೆ ಶೆಡ್‌ನಲ್ಲಿ ಅಥವಾ ಬಸ್ ನಿಲ್ದಾಣದಲ್ಲಿ ನಿಲ್ಲುವವನು. ಹುಡುಕಿಕೊಂಡು ಬಂದು ಬೆಂಕಿ ಹಚ್ಚಿದರು. ನಾನು ಜಯಲಲಿತಾ ಪರ ಮಾತನಾಡಿಲ್ಲ, ಅಥವಾ ಸಾಮಾಜಿಕ ಜಾಲತಾಣದಲ್ಲಿ ಬರೆಯಲಿಲ್ಲ. ತಮಿಳುನಾಡನ್ನು ಬಯ್ಯಲಿಲ್ಲ. ಆ ರಾಜ್ಯಕ್ಕೆ ಸಾಕಷ್ಟು ಸಲ ಹೋಗಿಬಂದಿರಬಹುದು. ಆದರೆ ನಾನು ಹೋಗಿದ್ದು ನಿಮ್ಮೆಲ್ಲರ ಅನುಕೂಲಕ್ಕಾಗಿ ಮಾತ್ರ. ಅಲ್ಲಿ ನನ್ನ ಪಾತ್ರ ಏನೂ ಇಲ್ಲ. ಚಾಲಕ ಹೇಳಿದಂತೆ ನಾನು ಕೇಳಬೇಕಲ್ಲ.
ಹೋಗಲಿ, ನಾನು ಕರ್ನಾಟಕದವನೆಂದು ತಮಿಳುನಾಡಿನವರು ಬೆಂಕಿ ಹಚ್ಚುತ್ತಾರೆ. ತಮಿಳುನಾಡಿನವನೆಂದು ಕರ್ನಾಟಕದವರು ಬೆಂಕಿ ಇಡುತ್ತಾರೆ. ಈ ಎರಡೂ ರಾಜ್ಯ ಬಿಟ್ಟು ಬೇರೆ ರಾಜ್ಯಕ್ಕೇ ಹೋಗಬೇಕೆ? ನಿಮ್ಮ ದ್ವೇಷವನ್ನು ನನ್ನ ಮೇಲೇಕೆ ಕಾರುತ್ತೀರಿ ಸಾರ್ವಜನಿಕರೇ? ನಿಮಗೇಕೆ ನಿರುಪದ್ರವಿಯಾದ ನನ್ನ ಮೇಲೆ ಕರುಣೆ ಬಾರದು, ಪ್ರತಿಬಾರಿಯೂ ಸುಟ್ಟುಬೂದಿ ಮಾಡುತ್ತಿರಲ್ಲ, ಇದರಿಂದ ನಿಮಗೆ ಖುಷಿಯಾಗುತ್ತಿದೆಯೇ? ಮೊನ್ನೆ ಸುಟ್ಟಿದ್ದರಿಂದ ಕಾವೇರಿ ನೀರು ನಿಲ್ಲಿಸಿದಷ್ಟು ಸಂಭ್ರಮವಾಯಿತೇ? ಅಥವಾ ಕಾವೇರಿ ನೀರು ಹರಿಯುವುದು ನಿಂತಿತೆ?  
  ನನಗೆ ನೀವೇನೇ ತೊಂದರೆ ಮಾಡಿದರೂ  ಹಾನಿ ನಿಮ್ಮದೇ ಸರ್ಕಾರಕ್ಕೆ ಅಥವಾ ನಿಮಗೇ ಎನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲವೇ? ನನ್ನ ಸುಟ್ಟರೆ, ಹೊಡೆದರೆ ನಿಮಗೆ ಲಾಭವಾಗುವುದಿದ್ದರೆ ಹೇಳಿ. ಇಲ್ಲವಲ್ಲ, ಹಾಗಿದ್ದ ಮೇಲೆ, ಇನ್ನೊಬ್ಬನನ್ನು ಹಿಂಸಿಸಬಾರದೆನ್ನುವ ಮಹಾನ್ ದಾರ್ಶನಿಕರ, ಸಂತರ  ಮಾತು ಕೇಳಿಲ್ಲವೆ? ಓದಿಲ್ಲವೇ? ಸಾಮಾನ್ಯ ಜ್ಞಾನವಾದರೂ ನಿಮಗೆ ಬೇಡವೇ? ನಾನು ಯಾವತ್ತ್ತೂ ಉಪಕಾರಿಯೇ ವಿನಾ ನಿಮ್ಮಂತೆ ಅಪಕಾರಿಯಲ್ಲ. ನಾನು ಮೂಕ ಎಂಬ ಕಾರಣಕ್ಕೆ ಮತ್ತು ಸ್ವಯಂ ಚಾಲನೆ ಇಲ್ಲ ಎನ್ನುವುದನ್ನೆ ನೀವು ದುರುಪಯೋಗ ಮಾಡಿಕೊಳ್ಳುತ್ತೀರಲ್ಲ, ನೀವೆಂತಹ ಕಟುಕರು, ಹೃದಯಹೀನರು. ನನ್ನನ್ನು ಸದಾ ಬಳಸುತ್ತಿರಿ, ಉಪಯೋಗ ಪಡೆಯುತ್ತೀರಿ. ದಿನನಿತ್ಯ ಸಾವಿರಾರು ಜನರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವ ಪರೋಪಕಾರಿ ಬುದ್ಧಿ ನನ್ನದು. ನಿಮಗೇನದರೂ ಇಂತಹ ಕಾಳಜಿ ಇದೆಯೇ?
ನಿಮ್ಮ ಅಮಾನವೀಯ, ಕಲ್ಲು ಹೃದಯ ನೋಡಿ ನನಗೆ ಕನಿಕರವಾಗುತ್ತಿದೆ. ಆದರೇನು ಮಾಡಲಿ, ನೀವು ವಿದ್ಯಾವಂತರು, ಕನ್ನಡ, ತಮಿಳು ಹೆಸರಲ್ಲಿ ದಾಂಧಲೆ ಮಾಡುತ್ತೀರಿ, ಇನ್ನೊಬ್ಬರಿಗೆ ನೋವು ಕೊಡುತ್ತೀರಿ, ನಾನು ಎಂದಾದರೂ ಹಾಗೆ ಮಾಡಿದ್ದಿದೆಯೆ?  ರಾಜಕೀಯ ನನಗೆ ಗೊತ್ತೇ ಇಲ್ಲ, ಜಾತಿ, ಮತ, ಭಾಷೆ, ಪಂಥವಿಲ್ಲ. ಎಲ್ಲರೂ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು. ಇಂತಹ ಹಾಲುಮನಸ್ಸಿನ ನನ್ನ ಮೇಲೆ ಸದಾ ಬೆಂಕಿಯೆಂಬ ಅಸ್ತ್ರ ಬಳಸುತ್ತೀರಲ್ಲ, ಇದರಿಂದ ನಿಮಗೆ ಖುಷಿ ಸಿಕ್ಕಿತಾ? ಇದೇ ಗತಿ ನಿಮ್ಮ ಸ್ವಂತ ವಾಹನಕ್ಕೆ ಬಂದರೆ ಏನು ಮಾಡುತ್ತೀರಿ?
ಮನುಷ್ಯರಿಗೆ ಮನುಷ್ಯತ್ವ ಮೊದಲು ಇರಬೇಕು. ನೀವೆಷ್ಟೇ ಕಲಿತರೂ. ಎಷ್ಟೇ ಉನ್ನತ ಹುದ್ದೆ ಪಡೆದರೂ, ಮಾನವೀಯತೆ, ಹೃದಯ ವೈಶಾಲ್ಯತೆ ಇಲ್ಲವೆಂದರೆ ಏನೂ ಪ್ರಯೋಜನವಿಲ್ಲ.  ನನ್ನನ್ನು ನೋಡಿ ಪರೋಪಕಾರಿ, ಸೌಹಾರ್ದತೆ ಕಲಿಯಿರಿ, ಅದನ್ನು ಬಿಟ್ಟು ನನಗೇ ಹಿಂಸಿಸುವಿರಲ್ಲಾ , ಇದೆಂತಹಾ ನ್ಯಾಯ ಹೋರಾಟಗಾರೇ???

Tuesday, 13 September 2016

ಮತ್ತೆ ಅಡಿ ಇಟ್ಟಿದೆ ಬರಗಾಲ


ಸರ್ಕಾರ ಬರಗಾಲ ಪರಿಹಾರ ಕಾಮಗಾರಿಯನ್ನು ಸಮರೋಪಾದಿಯಲ್ಲಿ ಆರಂಭಿಸಿದರೆ ಸ್ಪಲ್ವವಾದರೂ ಜನ ನೆಮ್ಮದಿಯನ್ನು ಕಾಣಬಹುದು. ಕೇಂದ್ರವೂ ಸಹ ರಾಜ್ಯದ ಬರ ಪರಿಸ್ಥಿತಿಗೆ ನೆರವಾಗಬೇಕಿದೆ. ಕೇಂದ್ರ ಸರ್ಕಾರ ತನ್ನ ಅಧಿಕಾರಿಗಳನ್ನು ಕಳುಹಿಸಿ ಬರಸಮೀಕ್ಷೆ ಮಾಡಿಸಿ ಹೆಚ್ಚಿನ ಮೊತ್ತದ ಪರಿಹರ ಘೋಷಣೆಗೆ ಮುಂದಾಗಬೇಕಿಕು. ರಾಜ್ಯದ ಸಾಂಸದರು ಕೇಂದ್ರದ ಮೇಲೆ ಒತ್ತಡ ತರುವತ್ತ ಕಾರ್ಯೋನ್ಮುಖರಾಗಬೇಕಿದೆ. ಬರ ಎದುರಾಗಿರುವ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಮ್ಮನದಿಂದ ಕೆಲಸ ಮಾಡಬೇಕು. ಇದನ್ನು ಬಿಟ್ಟು ಕೇಂದ್ರ ರಾಜ್ಯ ಸರ್ಕಾರವನ್ನು, ರಾಜ್ಯ ಕೇಂದ್ರವನ್ನು ದೂಷಿಸುತ್ತ ಕೂಡ್ರುವ ಕೆಲಸವನ್ನು ಮಾಡಬಾರದು.




ರಾಜ್ಯದಲ್ಲಿ ಈ ಬಾರಿ ಮತ್ತೆ ಬರಗಾಲ ಕಾಲಿಟ್ಟಿದೆ. ನಿಗದಿತ ಪ್ರಮಾಣದಲ್ಲಿ ಮಳೆ ಸುರಿಯದೆ ಸೆಪ್ಟೆಂಬರ್‌ನಲ್ಲೇ ಬರಪೀಡಿತ ತಾಲೂಕುಗಳನ್ನು ಘೋಷಿಸುವ ಪರಿಸ್ಥಿತಿ ಬಂದೊದಗಿದೆ.
ಮಳೆ ಇಲ್ಲದೆ ಜಲಾಶಯಗಳು ತುಂಬಿಲ್ಲ. ಇದರಿಂದ ಬೆಳೆಗೆ ನೀರಿಲ್ಲ ಮತ್ತು ಕುಡಿಯಲು ನೀರಿಲ್ಲ. ಬೆಳೆಗೆ ನೀರು ಕೊಟ್ಟರೆ ಕುಡಿಯಲು ನೀರಿರುವುದಿಲ್ಲ. ಹೀಗೆ ಒಂದರ ಮೇಲೊಂದು ಸಮಸ್ಯೆ ಎದುರಾಗಿದೆ. ಕರ್ನಾಟಕ ಸರ್ಕಾರ ಬರಗಾಲಪೀಡಿತ ತಾಲೂಕುಗಳ ಪಟ್ಟಿ ಮಾಡುವಲ್ಲಿ ನಿರತವಾಗಿದೆ.
ರಾಜ್ಯದಲ್ಲ್ ಒಟ್ಟೂ 7 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ನಾಟಿಯಾಗಬೇಕಿತ್ತು. ಆದರೆ ಈ ಬಾರಿ ಕೇವಲ 2,42 ಹೆಕ್ಟೇರ್‌ನಲ್ಲಿ ಮಾತ್ರ ನಾಟಿಯಾಗಿದೆ. ಇದು ಆಘಾತಕರಿ ವಿಚಾರವಾಗಿದೆ. ಮಳೆಯಾಗದೇ ಇರುವುದರಿಂದ ರೈತರು ಭತ್ತ ನಾಟಿಯತ್ತ ತಲೆಹಾಕಲೇ ಇಲ್ಲ. ಈ ವರ್ಷ ಮಳೆಗಾಲ ಉತ್ತಮ ಆರಂಭವನ್ನು ಮಾಡಿ ನಿರೀಕ್ಷೆಯನ್ನು ಹುಟ್ಟಿಸಿತ್ತು. ಇದರಿಂದ ಎಲ್ಲರೂ ಸಂತಸಗೊಂಡಿದ್ದರು. ಆದರೆ ಬರಬರುತ್ತ ಮಳೆ ಕಡಿಮೆಯಾಗತೊಡಗಿತರು. ಆರಂಭದ ಅಂದರೆ ಜೂನ್ ತಿಂಗಳಲ್ಲೇ ಕೊರತೆಯ ಮಳೆ ಕಾಡಿತು. ಮತ್ತೆ ಜುಲೈ, ಆಗಸ್ಟ್‌ನಲ್ಲೂ ಇದೇ ಪರಿಸ್ಥಿತಿ ಎದುರಾಗಿದೆ.
ರಾಜ್ಯದಲ್ಲಿ 2002ರಿಂದ 2005ರವರೆಗಿನ ವರ್ಷದಲ್ಲಿ ಮಾತ್ರ ಉತ್ತಮ ಮಳೆಯಾಗಿದೆ. ಇದರ ಹೊರತುಪಡಿಸಿದರೆ ಎಲ್ಲ ವರ್ಷವೂ ಮಳೆ ಖೋತಾ. ಅರೆಬರೆ ಬರಗಾಲ ಬಂದಿತ್ತು. ಆದರೆ ಇದನ್ನು ಎದುರಿಸುವಲ್ಲಿ ಆಯಾಯ ಸರ್ಕಾರಗಳು ಯಶಸ್ಸಿಗಿಂತ ಹೆಚ್ಚು ವಿಫಲತೆಯನ್ನೇ ಕಂಡಿವೆ.  ಏಕೆಂದರೆ ಎಷ್ಟೇ ಬರ ಎದುರಾದರೂ ಸರಕಾರಗಳು ಮುನ್ನೆಚ್ಚರಿಕೆ ಕೈಗೊಳ್ಳದಿರುವುದು ಇದಕ್ಕೆ ಕಾರಣ. ಈ ವರ್ಷವೂ ಕಳೆದೆಲ್ಲ ವರ್ಷಗಳಿಗಿಂತ ಮುನ್ನವೇ ಬರ ಕಾಲಿಟ್ಟಿದೆ. ಇದು ರಾಜ್ಯದ ಜನರನ್ನು ಆತಂಕಕ್ಕೆ ನೂಕಿದೆ. ಮುಂದಿನ ಜೀವನ ಹೇಗೆಂಬ ಭಯ ಕಾಡಲಾರಂಭಿಸಿದೆ. ಬೆಳೆಗಳೆಲ್ಲ ಬಹುತೇಕ ನೆಲಕಚ್ಚಿವೆ. ಇನ್ನೊಂದೆಡೆ, ಬೆಳೆವಿಮೆಯೂ ಸರಿಯಾಗಿ ಪಾವತಿಯಾಗದೆ ರೈತ ಕಂಗಾಲಾಗಿದ್ದಾನೆ. ಬೆಳೆದ ಬೆಳೆಗೂ ಉತ್ತಮ ಬೆಲೆ, ಮಾರುಕಟ್ಟೆ ಇಲ್ಲದೆ ಇನ್ನಷ್ಟು ಹೈರಾಣಾಗುವಂತಾಗಿದೆ.
 ಶಿವಮೊಗ್ಗ ಜಿಲ್ಲೆಯಲ್ಲೇ ಈ ಬಾರಿ ಶೇಕಡಾ 70ರಷ್ಟು ಮಳೆ ಕೊರತೆ ಆಗಿದೆ. ಮಲೆನಾಡಿನ ಜಿಲ್ಲೆಯಲ್ಲಿ ಹೀಗಾದರೆ ಇನ್ನು ಬಯಲುಸೀಮೆ, ಅರೆಬಯಲುಸೀಮೆ ಜಿಲ್ಲೆಗಳ ಪರಿಸ್ಥಿತಿ ಏನಾಗಬಹುದು? ಬಯಲುಸೀಮೆಯ ಜಿಲ್ಲೆಯಲ್ಲಿ ಯಥಾಪ್ರಕರ ಗುಳೆ ಆರಂಭವಾಗಿದೆ. ಮುಂಬಯಿ, ಗೋವಾ ಮತ್ತು ಕರಾವಳಿ ಜಿಲ್ಲೆಗಳತ್ತ ವಲಸೆ ಆರಂಭವಾಗಿದೆ. ಅನ್ನಕ್ಕಾಗಿ ಇವರು ಕುಟುಂಬಸಹಿತ ಊರು ಖಾಲಿ ಮಾಡುತ್ತಿದ್ದಾರೆ. ಇವರನ್ನು ತಡೆಯುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ. ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಯೋಜನೆಯನನ್ನು ಕೂಡಲೇ ಜಾರಿಗೊಳಿಸುವ ಕೆಲಸವಾಗಬೇಕಿದೆ. ಈ ಯೋಜನೆಯಲ್ಲಿ ದಿನಕ್ಕೆ 204 ರೂ. ಗಳ ವೇತನವನ್ನು ಪುರುಷ ಮತ್ತು ಮಹಿಳೆಯರಿಗೆ (ಸಮಾನವಾಗಿ) ನೀಡಲಾಗುತ್ತಿದೆ. ಆದರೆ ಈ ವರ್ಷ ಇನ್ನೂ ಇದು ಆರಂಭವಾಗಿಲ್ಲ.
ಬರಗಾಲದ ಹಿನ್ನೆಲೆಯಲ್ಲಿ ಸಾಕಷ್ಟು ಕುಡಿಯುವ ನೀರು ಕಾಪಾಡಿಕೊಳ್ಳುವತ್ತ ಸರಕಾರ ಕ್ರಮ ಜರುಗಿಸಬೇಕು. ಕಾವೇರಿ ಜಲಾನಯನ ಪ್ರದೇಶದಲ್ಲಿನ ನೀರಿಗೆ ಜಯಲಲಿತಾ ಗಂಟುಬಿದ್ದಿರುವುದರಿಂದ ಆ ಭಾಗದ ಜಿಲ್ಲೆಯ ಜನರಿಗೆ ಬೇಸಿಗೆಯಲ್ಲಿ ಈ ಬಾರಿ ಕುಡಿಯುವ ನೀರು ಕೊಡುವುದು ಕಷ್ಟವಾದೀತು. ಬೆಂಗಳೂರಿನಂತಹ ಮಹಾನಗರ ನೀರಿಗಾಗಿ ಪರಿತಪಿಸಬೇಕಾದ ಸ್ಥಿತಿ ಎದುರಾಗಲಿದೆ. ಮಲೆನಾಡು ಜಿಲ್ಲೆಗಳಲ್ಲೂ ಜಲಾಶಯಗಳು ಭರ್ತಿಯಾಗಿಲ್ಲ. ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗಿದ್ದರೂ ಆಲಮಟ್ಟಿ ಜಲಾಶಯ ತುಂಬಿಲ್ಲ. ಇದರಿಂದ ಆ ಭಾಗದ ಕುಡಿಯುವ ನೀರು, ಬೆಳೆಗಳಿಗೆ ಕಂಟಕ ಕಾದಿರುವುದು ನಿಶ್ಚಿತ.
ಸರ್ಕಾರ ಬರಗಾಲ ಪರಿಹಾರ ಕಾಮಗಾರಿಯನ್ನು ಸಮರೋಪಾದಿಯಲ್ಲಿ  ಆರಂಭಿಸಿದರೆ ಸ್ಪಲ್ವವಾದರೂ ಜನ ನೆಮ್ಮದಿಯನ್ನು ಕಾಣಬಹುದು. ಕೇಂದ್ರವೂ ಸಹ ರಾಜ್ಯದ ಬರ ಪರಿಸ್ಥಿತಿಗೆ ನೆರವಾಗಬೇಕಿದೆ. ಕೇಂದ್ರ ಸರ್ಕಾರ ತನ್ನ ಅಧಿಕಾರಿಗಳನ್ನು ಕಳುಹಿಸಿ ಬರಸಮೀಕ್ಷೆ ಮಾಡಿಸಿ ಹೆಚ್ಚಿನ ಮೊತ್ತದ ಪರಿಹರ ಘೋಷಣೆಗೆ ಮುಂದಾಗಬೇಕಿಕು. ರಾಜ್ಯದ ಸಾಂಸದರು ಕೇಂದ್ರದ ಮೇಲೆ ಒತ್ತಡ ತರುವತ್ತ ಕಾರ್ಯೋನ್ಮುಖರಾಗಬೇಕಿದೆ. ಬರ ಎದುರಾಗಿರುವ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಮ್ಮನದಿಂದ ಕೆಲಸ ಮಾಡಬೇಕು. ಇದನ್ನು ಬಿಟ್ಟು ಕೇಂದ್ರ ರಾಜ್ಯ ಸರ್ಕಾರವನ್ನು, ರಾಜ್ಯ ಕೇಂದ್ರವನ್ನು ದೂಷಿಸುತ್ತ ಕೂಡ್ರುವ ಕೆಲಸವನ್ನು ಮಾಡಬಾರದು.
ಬರಗಾಲ ತಡೆಯುವ ನಿಟ್ಟಿನಲ್ಲಿ ಶಾಶ್ವತ ಕಾರ್ಯಕ್ರಗಳನ್ನು ಕೈಗೊಳ್ಳುವ ಬಗ್ಗೆ ಯೋಜನೆ ರೂಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಕಳೆದ ವರ್ಷ ರಾಜ್ಯ ಸರ್ಕಾರ ಕೆರೆಗಳ ಹೂಳೆತ್ತುವಿಕೆ, ಮಳೆ ನೀರು ಸಂಗ್ರಹ, ಬಸಿಗಾಲುವೆಯಂತಹ ಕಾರ್ಯಕ್ರಮವನ್ನು ರೂಪಿಸಿತ್ತು. ಒತ್ತುವರಿಯಾಗಿದ್ದ ಅನೇಕ ಕೆರೆಗಳನ್ನು ತೆರವುಗೊಳಿಸಿ ಬೇಲಿ ಹಾಕಿಸಿ, ಅವುಗಳ ಸಂರಕ್ಷಣೆಗೆ ಮುಂದಾಗಿತ್ತು ಈ ವರ್ಷವೂ ಇದನ್ನು ಮುಂದುವರೆಸಿದರೆ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಜಲಮರುಪೂರಣಕ್ಕೆ ಅನುಕೂಲವಾಗಬಹುದು. ಇದರಿಂದ ಬರಗಾಲವನ್ನು ಎದುರಿಸಲು ಸಹಕಾರಿಯಗಬಹುದು.  
............................................................

Monday, 12 September 2016

‘ಉತ್ತರ’ಕ್ಕೆ ಮುಖ ಮಾಡಿದ ಕುಮಾರಣ್ಣ

  ಕೇರಳದ ಜ್ಯೋಷಿಯೊಬ್ಬರ ಸಲಹೆಯಂತೆ ಉತ್ತರ ಕರ್ನಾಟಕದಲ್ಲಿ ಪ್ರತಿ ತಿಂಗಳ ಕೆಲವು ದಿನ (ಚುನಾವಣೆ ಮುಗಿಯುವವರೆಗೆ) ವಾಸ ಮಾಡಲು ಮಾಜಿ ಸಿಎಂ ಕುಮಾರಣ್ಣ ನಿರ್ಧರಿಸಿದ್ದಾರಂತೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಹೇಗಾದರೂ ಮಾಡಿ ಒಂದಷ್ಟು ಸೀಟು ಗೆದ್ದು ಕಿಂಗ್ ಮೇಕರ್ ಆಗುವ ಬಗ್ಗೆ ಕನಸು ಕಾಣುತ್ತಿರುವಂತಿದೆ. ಜೆಡಿಎಸ್‌ಗೆ ಅಲ್ಲಿ ನಾಯಕರೇ ಇಲ್ಲ. ಕೆಲವು ಜಿಲ್ಲೆಗಳಿಗೆ ಪಕ್ಷದ ಅಧ್ಯಕ್ಷರೇ ಇಲ್ಲದ ಸ್ಥಿತಿ ಇದೆ. ಹಾಗಿರುವಾಗ ಎಚ್ಡಿಕೆೆ ಅಲ್ಲಿ ಹೇಗೆ ಪಕ್ಷ ಬೆಳೆಸುತ್ತಾರೋ ಆ ಜ್ಯೋತಿಷಿಗೇ ಗೊತ್ತು.  





ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ಅಧಿಕಾರದ ಕನಸು ಕಾಣುತ್ತಿದ್ದು, ಇದಕ್ಕಾಗಿ ಕೇರಳದ ಜ್ಯೋಷಿಯೊಬ್ಬರ ಸಲಹೆಯಂತೆ ಉತ್ತರ ಕರ್ನಾಟಕದಲ್ಲಿ ಪ್ರತಿ ತಿಂಗಳ ಕೆಲವು ದಿನ (ಚುನಾವಣೆ ಮುಗಿಯುವವರೆಗೆ) ವಾಸ ಮಾಡಲು ನಿರ್ಧರಿಸಿದ್ದಾರಂತೆ. ಹುಬ್ಬಳ್ಳಿಯಲ್ಲಿ  ಮನೆಯನ್ನೂ ಹುಡುಕುವ ಕೆಲಸ ನಡೆದಿದೆ ಎಂಬ ವರದಿ ಇದೆ. ತನ್ನ ಪಕ್ಷ ಇನ್ನೇನು ಹರಿದು ಹಂಚಿಹೋಗುವ ಸ್ಥಿತಿ ತಲುಪಿರುವುದರಿಂದ ಮತ್ತೆ ಅದನ್ನು ಹೇಗಾದರೂ ಮಾಡಿ ಕಟ್ಟುವ ಚಿಂತನೆ ಅವರಲ್ಲಿ ಮೂಡಿದೆ. ಇದಕ್ಕೆ ಉತ್ತರ ಕರ್ನಾಟಕವನ್ನು ಆಯ್ಕೆಮಾಡಿಕೊಂಡಿದ್ದಾರೆ.
ಮೈಸೂರು ಕರ್ನಾಟಕದಲ್ಲಿ ತನ್ನ ಪಕ್ಷ ಬೆಳೆಯುವುದು ಅಸಾಧ್ಯ ಎಂದರಿತು ಉತ್ತರ ಕರ್ನಾಟಕದಲ್ಲಿ ರೈತರ ಮನವನ್ನು ಗೆಲ್ಲಲು ಕುಮಾರಸ್ವಾಮಿ ಹೊರಟಿದ್ದಾರೆ. ಇತ್ತೀಚಿನ ಮಹಾದಾಯಿ, ಕಾವೇರಿ ಜಲ ವಿವಾದ ಇತ್ಯಾದಿಗಳಿಂದ ರೈತರು ಸ್ವಾಭಾವಿಕವಾಗಿಯೇ ಆಳುವ ಸರ್ಕಾರಗಳ ವಿರುದ್ದ ಮುನಿಸಿಕೊಂಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸೇರಿ ತಮ್ಮನ್ನು ಅಧೋಗತಿಗೆ ತಳ್ಳುತ್ತಿವೆ. ಕೃಷಿ, ನೀರಾವರಿ, ಬೆಂಬಲ ಬೆಲೆ, ಬೆಳೆ ವಿಮೆ ಮೊದಲಾದ ವಿಚಾರಗಳಲ್ಲಿ  ಅನ್ಯಾಯ ಮಾಡಲಾಗುತ್ತಿದೆ ಎಂಬ ಕೂಗು ಒಂದೇ ಸಮನೆ ಕೇಳಿಬರುತ್ತಿದೆ. ಇವೆಲ್ಲವುಗಳ ಲಾಭ ಪಡೆಯಲು ಕುಮಾರಣ್ಣ ಉತ್ತರ ಕರ್ನಾಟಕದೆಡೆ ನೋಟ ಹರಿಸಿದ್ದಾರೆ.
ಸದಾ ಅವಕಾಶವಾದಿ ರಾಜಕೀಯವನ್ನೇ ಮಾಡಿಕೊಂಡು ಬಂದಿರುವ ಜೆಡಿಎಸ್, ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಹೇಗಾದರೂ ಮಾಡಿ ಒಂದಷ್ಟು ಸೀಟು ಗೆದ್ದು ಕಿಂಗ್ ಮೇಕರ್ ಆಗುವ ಬಗ್ಗೆ ಕನಸು ಕಾಣುತ್ತಿರುವಂತಿದೆ. ಏಕೆಂದರೆ ಸದಾ ಇದೇ ಕೆಲಸವನ್ನು ಆ ಪಕ್ಷ ಮಾಡುತ್ತ ಲಾಭ ಪಡೆಯುತ್ತಿದೆ. ಜೊತೆಗೆ ಸದಾ ರಾಜಕೀಯದಲ್ಲಿ ಉಸಿರಾಡುವಂತಾಗಿದೆ. 9 ಬಲಿಷ್ಠ ಶಾಸಕರನ್ನು ಹೊರಹಾಕಿದ ನಂತರ ಹೆಚ್ಚು ಕಡಿಮೆ ಪಕ್ಷ ನಿತ್ರ್ರಾಣಗೊಂಡಿದೆ. ಏಕೆಂದರೆ ಇದಕ್ಕೆ ಅಪ್ಪ-ಮಕ್ಕಳ ಹೊರತಾಗಿ ಬೇರಾವ ನಾಯಕರೂ ಕಾಣುತ್ತಿಲ್ಲ. ಎರಡನೆಯ ತಲೆಮಾರಿನ ನಾಯಕರೇ ಇಲ್ಲದಿದ್ದರೆ ಪಕ್ಷವನ್ನು ಕಟ್ಟುವುದಾದೂ ಹೇಗೆಂಬ ವಿಚಾರ ಅಪ್ಪ-ಮಕ್ಕಳಿಗೆ ಇದ್ದಂತಿಲ್ಲ.
ಉತ್ತರ ಕರ್ನಾಟಕದ ವಿಚಾರ ಗಮನಿಸುವುದಾದರೆ,  ಜೆಡಿಎಸ್‌ಗೆ ಅಲ್ಲಿ ನಾಯಕರೇ ಇಲ್ಲ. ಕೆಲವು ಜಿಲ್ಲೆಗಳಿಗೆ ಪಕ್ಷದ ಅಧ್ಯಕ್ಷರೇ ಇಲ್ಲದ ಸ್ಥಿತಿ ಇದೆ. ಬಹುತೇಕ ರೈತ ಮುಖಂಡರೆಲ್ಲ ರಾಜಕೀಯ ಪಕ್ಷದ ಸದಸ್ಯರೇ ಆಗಿದ್ದಾರೆ. ಕೆಲವಷ್ಟೇ ರೈತರು ಇನ್ನೂ ಕೆಚ್ಚೆದೆಯಿಂದ ಹೋರಾಡುತ್ತಿದ್ದಾರೆ. ಹಾಗಿರುವಾಗ ಎಚ್ಡಿಕೆೆ ಅಲ್ಲಿ ಹೇಗೆ ಪಕ್ಷ ಬೆಳೆಸುತ್ತಾರೋ ಆ ಜ್ಯೋತಿಷಿಗೇ ಗೊತ್ತು.  ಈಗಾಗಲೇ ಬಿಜೆಪಿ ಲಿಂಗಾಯಿತರ ಮತ ನೆಚ್ಚಿಕೊಂಡು, ಕಾಂಗ್ರೆಸ್ ಅಹಿಂದವನ್ನು ಹಿಡಿದುಕೊಂಡು ಸಾಗಿವೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯಿತರ ಪ್ರ್ರಾಬಲ್ಯವಿದ್ದರೂ ದಿವಂಗತ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯಂತಹವರಿಂದ ಮಾತ್ರ ಅದನ್ನು ಪಡೆಯಲು ಸಾಧ್ಯವಾಯಿತು. ಆದರೆ ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಹ  ಆ ಮತ ಪಡೆಯಲು ಸನ್ನದ್ಧರಾಗಿದ್ದಾರೆ. ಕುಮಾರಸ್ವಾಮಿಗೂ ಕಣ್ಣು ಬಿದ್ದಿದೆ.
 ಕಾವೇರಿ ಜಲ ವಿವಾದದ ಸಂದರ್ದಲ್ಲಿ ಕೇವಲ ಪ್ರಚೋದನಾತ್ಮಕ ಹೇಳಿಕೆ ಕೊಡದೆ ತಾವೂ ಸಹ ಬೀದಿಗಿಳಿದು ರೈತರೊಂದಿಗೆ ಕಾಣಿಸಿಕೊಂಡಿದ್ದರೆ ಒಂದಷ್ಟು ಅನುಕಂಪ ಗಳಿಸಬಹುದಿತ್ತಾದರೂ ಆ ಸಾಹಸವನ್ನು ಮಾಡಿಲ್ಲ. ಹಳೆ ಮೈಸೂರು ಭಾಗದಲ್ಲಿ ಒಂದಷ್ಟು ಹಿಡಿತವನ್ನು ಪಕ್ಷ ಹೊಂದಿತ್ತಾದರೂ ಅದೂ ಸಹ ಇನ್ನು ಕೈಕೊಡುವ ಭಯವಿದೆ. ಏಕೆಂದರೆ ಯಾರನ್ನೂ ನಂಬದವರ ಬಗ್ಗೆ ಜನರು ಹೇಗೆ ನಂಬಿಕೆ ಇಡಬೇಕು?
 ದೇವೇಗೌಡರು ಪ್ರವಾಸ ಮಾಡಿದರೆ ಒಂದಷ್ಟು ಸುಧಾರಣೆ ಮಾಡಬಹುದು. ಈಗ ಕಾವೇರಿ ವಿಚಾರದಲ್ಲಿ ಅವರು ಮಾಡುತ್ತಿರುವ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನು ಬಂಡವಾಳ ಮಾಡಿಕೊಳ್ಳುವ ಜಾಣ್ಮೆ ಅವರ ಮಕ್ಕಳಿಗಿಲ್ಲ. ಕುಮಾರಸ್ವಾಮಿ  ಒಂದಷ್ಟು ದಿನ ಸಿನಿಮಾ, ಒಂದಷ್ಟು ದಿನ ರಾಜಕೀಯದವರು. ರೇವಣ್ಣ ಸಂಘಟನೆಯಿಂದ ದೂರವಾಗಿ ಬಹಳ ತಿಂಗಳಾಗಿದೆ. ಅವರಿಗೆ ಹಾಸನವೊಂದೇ ಗೊತ್ತು. ಅಪ್ಪ ಮತ್ತು ಇಬ್ಬರು ಮಕ್ಕಳು ಒಂದೊಂದು ದಿಕ್ಕು ಹಿಡಿದಿದ್ದಾರೆ. ಹೀಗಾದರೆ ಪಕ್ಷ ಸಂಘಟನೆ ಹೇಗೆ ಸಾಧ್ಯ? ಜ್ಯೋತಿಷಿಗಳ ಮಾತು ನಂಬಿ ರಾಜಕೀಯ ಮಾಡುವವರನ್ನು ಕಂಡು ಮತದಾರರು ನಗುವಂತಾಗಿದೆ.
ಚುನಾವಣೆ ಹತ್ತಿರ ಬರುತ್ತಿರುವಂತೆ ರಾಜಕಾರಣಿಗಳಿಗೂ ಜ್ಯೋತಿಷಿಗಳಿಗೂ ಸಂಬಂಧ ಹೆಚ್ಚುತ್ತದೆ. ಕೆಲವು ಜ್ಯೋತಿಷಿಗಳು ಇದಕ್ಕಾಗಿಯೇ ಹುಟ್ಟಿಕೊಳ್ಳುತ್ತಾರೆ. ಜ್ಯೋತಿಷಿಗಳು ಹೇಳುವುದು ನಿಜವಾಗುವುದಾದರೆ ಎಲ್ಲರೂ ಎಮ್ಮೆಲ್ಲೆಗಳಾಗಿ ಎಲ್ಲ ಪಕ್ಷದವರೂ ಅಧಿಕಾರಕ್ಕೇರಬೇಕಲ್ಲವೆ?
.............................................................

Saturday, 10 September 2016

ಮುಖ್ಯಮಂತ್ರಿ ಕನಸಲ್ಲಿ ನವಜೋತ್ ಸಿಂಗ್ ಸಿಧು
 ಪಂಜಾಬ್‌ನಲ್ಲಿ ನಾಲ್ಕನೆಯ ಪಕ್ಷವಾಗಿ ಉದಯಿಸಿದ  ಅವಾಜ್-ಇ- ಪಂಜಾಬ್. 



ಪಂಜಾಬ್‌ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ಸಂಭವಿಸಿದೆ. ಇನ್ನೇನು ಐದು ತಿಂಗಳಲ್ಲಿ ಆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಅಲ್ಲಿನ ರಾಜಕೀಯದಲ್ಲಿ ಸಂಚಲನ ಉಂಟುಮಾಡುವಂತಹ ಹಾಗೂ ಆಢಳಿತಾರೂಢ ಶಿರೋಮಣಿ ಅಕಾಲಿದಳ- ಬಿಜೆಪಿ ಮೈತ್ರಿ ಸರ್ಕಾರಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ  ಇದು ಘಟಿಸಿದೆ. ಇತ್ತೀಚೆಗಷ್ಟೇ ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿರುವ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು  ಹೊಸ ಪಕ್ಷವೊಂದನ್ನು ಹುಟ್ಟು ಹಾಕಿದ್ದಾರೆ. ಅದರ ಹೆಸರು ಅವಾಜ್-ಇ- ಪಂಜಾಬ್.
ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ)ಯ ನೇತೃತ್ವವನ್ನು  ಬಿಜೆಪಿಗೆ ರಾಜೀನಾಮೆ ನೀಡಿ ಆಗಸ್ಟ್‌ನಲ್ಲಿ ಹೊರಬಂದಿರುವ ಸಿಧು ವಹಿಸಿಕೊಳ್ಳುತ್ತಾರೆಂಬ ವದಂತಿ ಕೇಳಿಬಂದಿತ್ತು. ಅಷ್ಟೇ ಅಲ್ಲ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗುವುದೆಂಬ ಮಾತು ಹರಡಿತ್ತು. ಆದರೆ  ಎಎಪಿ  ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಇದಕ್ಕೊಪ್ಪದ  ಹಿನ್ನೆಲೆಯಲ್ಲಿ ಸಿಧು ಹೊಸ ಪಕ್ಷ ರಚಿಸಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ.
ಸಿಧು ಅವರ ಅವಾಜ್-ಇ- ಪಂಜಾಬ್ ಎಂಬ ಹೆಸರಿನ ಈ ಪಕ್ಷ ಪಂಜಾಬ್‌ನಲ್ಲಿ ಹೊಸ ಶಕೆಯನ್ನು ಆರಂಭಿಸುವ ಉದ್ದೇಶ ಹೊಂದಿದೆ. ಕಾಂಗ್ರೆಸ್ ಹೊರತುಪಡಿಸಿದರೆ ಪಂಜಾಬಿನಲ್ಲಿ ಅಕಾಲಿದಳವೇ ಪ್ರಮುಖ ಪಕ್ಷವಾಗಿದೆ. ಅದರೆ ಇದು ಸ್ವತಂತ್ರವಾಗಿ ಆಡಳಿತ ನಡೆಸುವ ಸ್ಥಿತಿಯಲ್ಲಿಲ್ಲದ ಕಾರಣ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಕೇಂದ್ರ ಸರ್ಕಾರಕ್ಕೂ ಅಕಾಲಿದಳ ಬೆಂಬಲ ನೀಡಿದೆ. ಆದರೆ ಸಿಧು ಅಕಾಲಿದಳದ ಕಟ್ಟಾ ವಿರೋಧಿಯಾಗಿರುವುದು ಹೊಸ ಬೆಳವಣಿಗೆಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ.
ಸಿಧು ಜೊತೆ ಭಾರತ ಹಾಕಿ ತಂಡದ ಮಾಜಿ ನಾಯಕ ಹಾಗೂ ಅಕಾಲಿದಳದ ಹಾಲಿ ಶಾಸಕ ಪರ್ಗತ್ ಸಿಂಗ್  ಮತ್ತು ಪಕ್ಷೇತರ ಸದಸ್ಯ ಬೇನ್ಸ್  ಕೈಜೋಡಿಸಿದ್ದಾರೆ. ಪರ್ಗತ್ ಅವರು ಪಕ್ಷದ ನಾಯಕತ್ವವನ್ನು ಟೀಕಿಸಿದ್ದಕ್ಕಾಗಿ ಇತ್ತೀಚೆಗಷ್ಟೇ ಅವರನ್ನು ಅಕಾಲಿದಳದಿಂದ ಅಮಾನತುಗೊಳಿಸಲಾಗಿತ್ತು. ಬೇನ್ಸ್ ಸಹ ಅಕಾಲಿದಳದಿಂದ ಟಿಕೆಟ್ ಸಿಗಲಿಲ್ಲ ಎಂದು ಅದರ ವಿರುದ್ದ ಸೆಡ್ಡು ಹೊಡೆದು ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದವರು. ಈಗ ಹೊಸ ಪಕ್ಷ ಕಟ್ಟಿರುವ ಸಿಧು ಮುಂದಿನ ಚುನಾವಣೆಯಲ್ಲಿ ಎಎಪಿ ಜೊತೆ ಸೇರಿ ಸ್ಪರ್ಧಿಸಿ ಹೊಸ ಸರ್ಕಾರ ರಚಿಸುವ ವಿಶ್ವಾಸದಲ್ಲಿದ್ದಾರೆ ಎನ್ನಲಾಗುತ್ತಿದೆ. ಪಂಜಾಬ್‌ನಲ್ಲಿ ನಡೆದ ಈ ನಾಟಕೀಯ ಬೆಳವಣಿಗೆಯಿಂದ ಅಲ್ಲಿನ ಸರ್ಕಾರ ಗಂಭೀರ ಚಿಂತನೆ ನಡೆಸುವಂತಾಗಿದೆ. ಅಕಾಲಿದಲ, ಕಾಂಗ್ರೆಸ್ ಮತ್ತು ಬಿಜೆಪಿ ಮೂರೇ ಪಕ್ಷಗಳು ಆ ರಾಜ್ಯದಲ್ಲಿವೆ.  ಈಗ ಎಎಪಿ ಮತ್ತು ಸಿಧು ಅವರ ಅವಾಜ್ -ಇ- ಪಂಜಾಬ್ ನಿಂದ ನಾಲ್ಕು ಪಕ್ಷಗಳು ಚುನಾವಣೆಯಲ್ಲಿ  ಸೆಣೆಸುವಂತಾಗಿದೆ.
10 ವರ್ಷಗಳಿಂದ ಆಡಳಿತಾರೂಢವಾಗಿರುವ ಅಕಾಲಿದಳದ ಬಗ್ಗೆ ಸಾಕಷ್ಟು ಭ್ರಮನಿರಸನ ಅಲ್ಲಿನ ಜನತೆಯಲ್ಲಿ ಮೂಡಿರುವುದು ಸತ್ಯ. ಇದರ ಲಾಭವನ್ನು  ಈ ಮೂವರು ನಾಯಕರು ಸದುಪಯೋಗಪಡಿಸಿಕೊಳ್ಳಲು ತಂತ್ರ ಹೆಣೆದಿದ್ದಾರೆ. ಅಲ್ಲಿನ ಪ್ರತಿಯೊಬ್ಬ ಮತದಾರನ ಅಚ್ಚುಮೆಚ್ಚಿನ ಕ್ರಿಕೆಟ್ ಮತ್ತು ಹಾಕಿ ಆಟಗಾರರಾದ ಸಿಧು ಮತ್ತು ಪರ್ಗತ್, ಎಎಪಿ ಜೊತೆಗೆ ಗೌಪ್ಯವಾಗಿಯೇ ವ್ಯವಹರಿಸುತ್ತಿದ್ದಾರೆಂಬ ಮಾತು ಕೇಳಿಬರುತ್ತಿದೆ. ಸೀಟು ಹೊಂದಾಣಿಕೆ ಸಹಿತ ಹಲವು ವಿಚಾರಗಳು ಈಗಾಗಲೆ ಇತ್ಯರ್ಥವಾಗಿವೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಚುನಾವಣೆ ಘೋಷಣೆ ಮುನ್ನವೇ ಸೂಕ್ತ ತಯಾರಿ ನಡೆಸುವುದು ಅವರ  ಮುಂದಿರುವ ತಂತ್ರವಾಗಿದೆ ಎಂದು ಹೇಳಲಾಗುತ್ತಿದೆ..
ಮತದಾರರಲ್ಲಿ ರಿಂಗಣಿಸುತ್ತಿರುವ ತನ್ನ ನೀತಿಗಳ ಬಗ್ಗೆ, ಕಾರ್ಯವೈಖರಿಗಳ ಬಗ್ಗೆ ಮೊದಲೇ ಅಕಾಲಿದಳ ಚಿಂತಿತವಾಗಿದೆ. ಇನ್ನೊಂದೆಡೆ, ಕಾಂಗ್ರೆಸ್ ಮತ್ತು ಎಎಪಿ ಸಹ ನಿದ್ದೆಗೆಡುವಂತೆ ಈ ಬೆಳವಣಿಗೆ ಮಾಡಿದೆ. ಕಾಂಗ್ರೆಸ್ ಸಾಕಷ್ಟು ನಿರೀಕ್ಷೆಗಳನ್ನು ಮುಂದಿನ ಚುನಾವಣೆ ಬಗ್ಗೆ ಹೊಂದಿತ್ತು. ಎಎಪಿ ಸಹ ಇದೇ ಆಶಾಭಾವನೆಯಲ್ಲಿತ್ತು. ಏಕೆಂದರೆ ಅಕಾಲಿದಳದ ಬಗ್ಗೆ ಇರುವ ನಕಾರಾತ್ಮಕ ಬೆಳವಣಿಗೆ ತನಗೆ ಅನುಕೂಲವಾಗಲಿದೆ ಎಂದೇ ಎಎಪಿ ಮತ್ತು ಕಾಂಗ್ರೆಸ್ ಭಾವಿಸಿದ್ದವು.
ಸಿಧು ಈ ಎಲ್ಲ ಅವಕಾಶಗಳನ್ನು ಈಗ ಗುಡಿಸಿಹಾಕುವುದು ನಿಶ್ಚಿತವಾಗಿದೆ. ಎಎಪಿ ತನ್ನನ್ನು ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಎಂಧು ಘೋಷಿಸಲಿಲಲ್ಲ ಎಂಬ ಸಿಟ್ಟಿದೆ. ಅದನ್ನು ಚುನಾವನೆ ಮೂಲಕ ತೀರಿಸಿಕೊಳ್ಳುವರೇ ಅಥವಾ ಅದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವರೇ ಎನ್ನುವುದು ಇನ್ನೂ ಬೆಳಕಿಗೆ ಬಂದಿಲ್ಲ.  ಕೆಲವು ಮಾಹಿತಿಗಳ ಪ್ರಕಾರ, ಪಂಜಾಬ್ ಎಎಪಿ ಮುಖ್ಯಸ್ಥ  ಹಿಮ್ಮತ್ ಸಿಂಗ್  ಜೊತೆ ಸಿಧು ಮಾತುಕತೆ ನಡೆಸಿದ್ದಾರೆ. ಮೈತ್ರಿ ಬಗ್ಗೆ ಒಪ್ಪಿಗೆ ಸಿಕ್ಕಿದೆ. ಈ ಮಧ್ಯೆ  ಎಎಪಿಯ ಪ್ರಮುಖನಾಗಿದ್ದ ಸುಖ್ ಸಿಂಗ್ ಅವರನ್ನು ಎಎಪಿ ವಜಾ ಮಾಡಿದ ಕಾರಣ ಪಕ್ಷ ತನ್ನ ಮೊದಲಿನ ಹೆಸರನ್ನು ಉಳಿಸಿಕೊಂಡಿಲ್ಲ.  ಈ ಪಕ್ಷದ ಬಂಡಾಯ ನಾಯಕರು ಮತ್ತು ಕಾರ್ಯಕರ್ತರು ಸಿಧು ಪಕ್ಷ ಸೇರುವುದು ನಿಶ್ಚಿತವಾಗಿದೆ. ಇದು ಆಪಕ್ಷದ ಮುಖಂಡ ಹಿಮ್ಮತ್‌ಗೆ ನಿದ್ದೆ ಬಾರದಂತೆ ಮಾಡಿದೆ. ಹೊರಬಂದ ಈ ಬಂಡಾಯಗಾರರು ತಮ್ಮದು ನೈಜ ಎಎಪಿ ಎಂದು ಹೇಳಿಕೊಳ್ಳುತ್ತಿದ್ದಾರೆ.  ಕೇಜ್ರಿವಾಲ್ ಸಹ ಸಿಧು ಜೊತೆ ಮಾತುಕತೆ ನಡೆಸಿದ್ದರಾದರೂ ಪರಿಣಾಮ ಬೀರಲಿಲ್ಲ. ಹೀಗಿರುವಾಗ ಸಿಧು ಅವರೊಂದಿಗೆ ಮತ್ತ್ತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಬಹುದೇ ಎನ್ನುವ ಚಚೇ ರಾಜ್ಯದಲ್ಲಿ ನಡೆಯುತ್ತಿದೆ.
ನಾಲ್ಕನೆಯ ರಂಗವಾಗಿ ಹೊರಹೊಮ್ಮಿರುವ ಸಿಧು ಪಕ್ಷದಿಂದ ಕಾಂಗ್ರೆಸ್‌ಗೆ ಹೆಚ್ಚು ಹಾನಿಯಾಗಲಿದೆ.  ಹಾಲಿ ಮುಖ್ಯಮಂತ್ರಿ ಬಾದಲ್ ಅವರ ವಿರುದ್ಧವಿರುವ ಮತಗಳನ್ನೆಲ್ಲ ತಾನು ಬಾಚಿಕೊಳ್ಳುವ ಆಸೆ ಕಾಂಗ್ರೆಸ್‌ದ್ದಾಗಿತ್ತು. ಆದರೆ ಎಎಪಿ ಸಹ ಇದಕ್ಕಾಗಿ ತನ್ನ ಸಾಹಸವನ್ನು ಮುಂದುವರೆಸಿತ್ತು. ಆ ಪಕ್ಷವು ಇಬ್ಭಾಗವಾಗಿದ್ದರಿಂದ ಕಾಂಗ್ರೆಸ್ ಮತ್ತೆ ಕನಸು ಕಂಡಿತ್ತು. ಆದರೆ ಸಿಧು ಪಕ್ಷ ಈ ಎಲ್ಲ ಕನಸುಗಳಿಗೆ ತಡೆ ಹಾಕಿದೆ. ಮತ್ತೆ ಅಕಾಲಿದಳವೇ ನೇರ ಪೈಪೋಟಿ  ನೀಡಬಹುದು. ಸಿಧು ಪಕ್ಷ ಈ ಮೂರೂ ಪಕ್ಷಗಳ ಮತವನ್ನು ಕಸಿದುಕೊಂಡು ಮುನ್ನುಗ್ಗಬಹುದೆ ಎನ್ನುವ ಪ್ರಶ್ನೆಗೆ ಸದ್ಯ ಉತ್ತರವಿಲ್ಲ.
ವ್ಯಕ್ತಿಯ ಜನಪ್ರಿಯತೆ ಬೇರೆ. ರಾಜಕೀಯ ಬೇರೆ.  ಮತ ಹಾಕುವವರು ಲಾಭ-ನಷ್ಟಗಳನ್ನು ಗಮನಿಸುತ್ತಾರೆ. ದೇಸದ ಹಲವು ರಾಜ್ಯಗಳಲ್ಲಿ ಸಿನಿಮಾ ನಟರು, ಕ್ರಿಕೆಟಿಗರು, ರಾಜಕಿಯ ಮಾಡಿದ್ದು ಕಣ್ಣೆದುರಿರುವಾಗ ಸುಲಭವಾಗಿ ಸಿಧುವನ್ನು ಅಲ್ಲಿನ ಮತದಾರ ಮೇಲಕ್ಕೆತ್ತುತ್ತಾನೆಯೇ ಎನ್ನುವುದಕ್ಕೆ ಕಾಲವೇ ಉತ್ತರ ಹೇಳಬೇಕು.  
.....................................

ನೆಲ, ಜಲಕ್ಕಿಂತ ರಾಜಕೀಯವೇ ಮುಖ್ಯ
 ಇದು ಕರ್ನಾಟಕದ ಹಣೆಬರಹ

 ಕಾವೇರಿ ಜಲವಿವಾದ ಪ್ರತಿವರ್ಷ ಮರುಕಳಿಸುತ್ತಲೇ ಇದೆ. ರಾಜ್ಯದ ಮೂರೂ ಪಕ್ಷದ ರಾಜಕಾರಣಿಗಳು ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ನಮ್ಮಲ್ಲಿ ತಮಿಳುನಾಡಿನಂತೆ ನೆಲ, ಜಲ, ಭಾಷೆ ಮತ್ತು ಜನರ ಹಿತ ಕಾಯುವ ಪಕ್ಷಗಳಿಲ್ಲದಿರುವುದು ಇಷ್ಟೆಲ್ಲ ಹಿನ್ನಡೆಗೆ ಕಾರಣ. ಇನ್ನೊಂದೆಡೆ, ಕಲಾವಿದರು, ಬುದ್ಧಿಜೀವಿಗಳು, ಸಾಹಿತಿಗಳು ಸಹ ತಮಗೂ ಈ ಬಂದ್‌ಗೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.


ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕಾಗಿ ಇರುವ  ನ್ಯಾಯಾಧಿಕರಣದಿಂದ ಕರ್ನಾಟಕಕ್ಕೆ ನ್ಯಾಯ ಸಿಕ್ಕಿಲ್ಲ. ಇದರಿಂದ ಮತ್ತೆ ಕರ್ನಾಟಕ ಪ್ರತಿನಿತ್ಯ 15 ಸಾವಿರ ಕ್ಯೂಸೆಕ್ಸ್ ನೀರನ್ನು 10 ದಿನಗಳ ಕಾಲ ಹರಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿರುವುದರಿಂದ ಕರ್ನಾಟಕದಲ್ಲಿ ಆತಂಕ, ತಲ್ಲಣ ಎದುರಾಗಿ  ಹೋರಾಟ, ಬಂದ್ ನಡೆದಿದೆ. ಆದರೆ ಈ ವಿವಾದದ ಇತ್ಯರ್ಥಕ್ಕೆ ಪ್ರಧಾನಿ ಮಧ್ಯಪ್ರವೇಶ ಮಾಡಬೇಕದ ಅನಿವಾರ್ಯತೆ ಮತ್ತೆ ಎದುರಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಕರ್ನಾಟಕದಲ್ಲಿನ ಮಳೆಯ ಅಭಾವ, ಜಲಾಶಯದ ಸ್ಥಿತಿಗತಿ, ಇಲ್ಲಿನ ಬೆಳೆ ಮತ್ತು ರೈತರಿಗೆ ಅವಶ್ಯವಿರುವ ನೀರಿನ ಪ್ರಮಾಣ ಇವೆಲ್ಲವನ್ನೂ ಪತ್ರದಲ್ಲಿ ವಿವರಿಸಿದ್ದಾರೆ. ನೀರು ಬಿಡಬೇಕೆಂಬ ಆದೇಶ ಬಂದು ನೀರು ಬಿಟ್ಟ ನಂತರ ಈ ಪತ್ರ ಬರೆಯುವ ಅವಶ್ಯಕತೆ ಇತ್ತೇ ಎನ್ನುವ ಪ್ರಶ್ನೆ ಒಂದೆಡೆಯಾದರೆ, ಇನ್ನೊಂದೆಡೆ, ಇದೇ ಕೆಲಸವನ್ನು ಎರಡು ದಿನಗಳ ಹಿಂದೆಯೇ ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಬಿಜೆಪಿ ಸಾಂಸದರು, ಕಾಂಗ್ರೆಸ್ ಮತ್ತು ಜೆಡಿಎಸ್ ಸಾಂಸದರನ್ನು ಸೇರಿಸಿಕೊಂಡು ಮಾಡಬಹುದಿತ್ತಲ್ಲ ಎನ್ನುವ ವಿಚಾರವೂ ನಮ್ಮೆದುರು ಇದೆ.
ಕಾವೇರಿ ನೀರು ಬಿಡುವ ವಿಚಾರ ಬಂದಾಗಲೆಲ್ಲ ಆವೇಶಭರಿತರಾಗಿ ಮಾತನಾಡುವ ನಮ್ಮ ಜನಪ್ರತಿನಿಧಿಗಳು ಹೋರಾಟಕ್ಕೆ ಮಾತ್ರ ಕಣಕ್ಕಿಳಿಯುವುದಿಲ್ಲ. ವೀರಾವೇಶದ ಹೇಳಿಕೆ ನೀಡಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಾರೆ. ಆದರೆ ಈ ವಿವಾದ ಸದಾ ಮುಂದುವರೆಯಬಾರದೆನ್ನುವುದಾದರೆ ಏನು ಮಾಡಬೇಕೆನ್ನುವ ಬಗ್ಗೆ ಸ್ಪಷ್ಟ ಕಲ್ಪನೆಗಳೇ ಅವರಲ್ಲಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ, ಜೆಡಿಎಸ್ ಕೇವಲ ತಮ್ಮ ಮತಬ್ಯಾಂಕ್ ರಕ್ಷಣೆಯ ರಾಜಕಾರಣದಲ್ಲೇ ಕಾಲಕಳೆೆಯುತ್ತಿರುವುದರಿಂದ ಈ ವಿವಾದ ಎದುರಾದಾಗ ಒಬ್ಬರನ್ನೊಬ್ಬರು ಟೀಕಿಸುತ್ತಲೇ ಕಾಲಕಳೆಯುತ್ತಾರೆ.
 ಆದರೆ ಈ ಸಮಸ್ಯೆ ರಾಜಕೀಯಾತ್ಮಕವಾದುದಲ್ಲ. ರಾಜ್ಯದ ಹಿತೃದಷ್ಟಿಯಿಂದ ಮಾಡಬೇಕಾದ ಕೆಲಸ ಎನ್ನುವುದು ಅವರ ಗಮನದಲ್ಲಿಲ್ಲ. ಮಾಜಿ ಮುಖ್ಯಮಂತ್ರಿ ದೇವೇಗೌಡರು ಮಾತ್ರ  ಕಾವೇರಿ ವಿಚಾರದಲ್ಲಿ ಸದಾ ಹೋರಾಟಕ್ಕೆ ಮುಂದಾದವರು. ಯಾರು ಏನೇ ಟೀಕಿಸಲಿ, ಈ ಸಂಬಂಧ ಅವರು ಮಣ್ಣಿನ ಮಗ ಹೌದು ಎನ್ನುವುದಕ್ಕೆ ತಾನು ಸಿಎಂ ಆದಾಗ ಮಾಡಿದ ತಂತ್ರಗಳನ್ನೇ ನಾವು ಗನಿಸಬಹುದು.
1995-96ರ ಸಾಲಿನಲ್ಲಿ ಇಂತಹುದೇ ಸಮಸ್ಯೆ ಎದುರಾದಾಗ ದೇವೇಗೌಡರು ನೀರು ಬಿಡಲು ಸಿದ್ದರಾಗಿರಲಿಲ್ಲ. ಅಂದಿನ ಪ್ರಧಾನಿ ದಿ. ಪಿ.ವಿ. ನರಸಿಂಹರಾವ್ ಕರ್ನಾಟಕ ಸರ್ಕಾರದ ಕೋರಿಕೆಯ ಮೇರೆಗೆ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ವಿವಾದ ತಣ್ಣಗಾಗಿರಿಸಿದ್ದರು. ನಂತರ ಯಾರೂ ಈ ಕೆಲಸಕ್ಕೆ ಮುಂದಾಗದೆ ಸುಪ್ರೀಂ ಆದೇಶದಂತೆ ನೀರು ಬಿಡುತ್ತ್ತಲೇ ಖುರ್ಚಿಯಲ್ಲಿ ಉಳಿದರು.  95-96ರಲ್ಲಿ 30 ಟಿಎಂಸಿ ನೀರು ಬಿಡಲು ಸುಪ್ರೀಂ ಸೂಚಿಸಿತ್ತು. ಆದರೆ ದೇವೇಗೌಡರು ಇದಕ್ಕೆ ಸಮ್ಮತಿಸಿರಲಿಲ್ಲ. ಬದಲಾಗಿ ನ್ಯಾಯಾಧಿಕರಣಕ್ಕೆ ಹೋದರು. ಅಲ್ಲಿ ಅಹವಾಲು ಸಲ್ಲಿಸಿದರು.  ಆಗ ನ್ಯಾಯಾಧಿಕರಣ 11 ಟಿಎಂಸಿ ನೀರು ಬಿಡಲು ಸೂಚಿಸಿತು. ಅದಕ್ಕೂ ಕರ್ನಾಟಕ ಜಗ್ಗಲಿಲ್ಲ. ನೀರು ಬಿಡಲು ಸಾಧ್ಯವೇ ಇಲ್ಲ ಎಂದಿತ್ತು. ಆದರೆ ಸುಪ್ರೀಂ ಕೋರ್ಟಿಗೆ ಮಾತ್ರ ನ್ಯಾಯಾಧಿಕರಣ ತೀರ್ಪು ಪಾಲಿಸಬೇಕು ಎಂದಿತ್ತು. ಆಗ ಅಂದಿನ ಪ್ರಧಾನಿ ನರಸಿಂಹರಾವ್ ಮಧ್ಯಪ್ರವೇಶಿಸಿ ಕೇವಲ 6 ಟಿಎಂಸಿ ನೀರು ಬಿಡುವಂತೆ ಸೂಚಿಸಿ ವಿವಾದಕ್ಕೆ ತಾತ್ಕಾಲಿಕ ವಿರಾಮ ಹಾಡಿದ್ದರು.
ಇದನ್ನು ಗಮನದಲ್ಲಿಟ್ಟುಕೊಂಡು ಈಗ ಕರ್ನಾಟಕ ಸಹ ಪ್ರಧಾನಿಗೆ ಪತ್ರ ಬರೆದಿದೆ. ಪತ್ರ ಬರೆದಿದ್ದು ವಿಳಂಬವಾಗಿದೆಯಾದರೂ ಪ್ರಧಾನಿ ಇದನ್ನು ಒಪ್ಪಿ ಸಭೆ ಕರೆಯುವ ವೇಳೆ ನೀರು ಹರಿದು ಮುಗಿಯಬಹುದು. ಇಂದಿನ ಪ್ರಧಾನಿ ನರೇಂದ್ರ ಮೋದಿ ಸಭೆ ಕರೆದು ವಿವಾದಕ್ಕೆ ಮತ್ತೆ ವಿರಾಮ ಹಾಕಬೇಕಿದೆ. ಇದನ್ನು ಕರ್ನಾಟಕದ ಎಂಪಿಗಳು ಸಿಎಂಗಿಂತ ಮುನ್ನ ಮಾಡಬಹುದಿತ್ತು. ಕೇಂದ್ರದ ಸಚಿವರು, ರಾಜ್ಯದ ಬಿಜೆಪಿ ಅಧ್ಯಕ್ಷರು ಪ್ರಭಾವಿಗಳಾಗಿದ್ದರಿಂದ ಈ ಸಂಬಂಧ ಮುನ್ನುಗ್ಗಬಹುದಿತ್ತು.
ಇದೇನೇ ಇರಲಿ, ಪ್ರಧಾನಿ ಮಧ್ಯಪ್ರವೇಶ ಮಾಡಬೇಕೆಂಬ ಕೂಗು ಈಗ ಮತ್ತೆ ಬಲವಾಗತೊಡಗಿದೆ. ಬಂದ್ ಕರೆಕೊಟ್ಟರೂ ಬೆರಳೆಣಿಕೆಯಷ್ಟು ರಾಜಕಾರಣಿಗಳೂ ಇದರಲ್ಲಿ ಸಕ್ರಿಯರಾಗಿ ಪಾಲ್ಗೊಂಡಿಲ್ಲ. ಎಲ್ಲ ಪಕ್ಷದ ಶಾಸಕರು, ಸಾಂಸದರು ಪಾಲ್ಗೊಂಡು ಕರ್ನಾಟಕದ ಪರ ನಿಲ್ಲಬೇಕಿತ್ತು. ರಾಜ್ಯದ ಮೂರೂ ಪಕ್ಷದ ರಾಜಕಾರಣಿಗಳು ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ನಮ್ಮಲ್ಲಿ ತಮಿಳುನಾಡಿನಂತೆ ನೆಲ, ಜಲ, ಭಾಷೆ ಮತ್ತು ಜನರ ಹಿತ ಕಾಯುವ ಪಕ್ಷಗಳಿಲ್ಲದಿರುವುದು ಇಷ್ಟೆಲ್ಲ ಹಿನ್ನಡೆಗೆ ಕಾರಣ. ಇನ್ನೊಂದೆಡೆ, ಕಲಾವಿದರು, ಬುದ್ಧಿಜೀವಿಗಳು, ಸಾಹಿತಿಗಳು ಸಹ ತಮಗೂ ಈ ಬಂದ್‌ಗೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.
ನವೆಂಬರ್‌ನಲ್ಲಿ ಮಾತ್ರ ಕನ್ನಡದ ಬಗ್ಗೆ ಮಾತನಾಡುವ ನಾವು  ಉಳಿದ ತಿಂಗಳಲ್ಲಿ ಕನ್ನಡ ನೆಲ, ಜಲಕ್ಕೆ ಅನ್ಯಾಯವಾದರೂ ಸುಮ್ಮನಿರುತ್ತೇವೆ. ಕಾವೇರಿ ಕೇವಲ ರೈತರ ವಿಚಾರವಲ್ಲ. ಸಮಸ್ತ ಕರ್ನಾಟಕ ರಾಜ್ಯಕ್ಕೆ ಸೇರಿದ್ದು ಎನ್ನುವುದು ಎಲ್ಲರ ಅರಿವಿಗೆ ಬರಬೇಕಿದೆ.
.................................................