Monday, 12 September 2016

‘ಉತ್ತರ’ಕ್ಕೆ ಮುಖ ಮಾಡಿದ ಕುಮಾರಣ್ಣ

  ಕೇರಳದ ಜ್ಯೋಷಿಯೊಬ್ಬರ ಸಲಹೆಯಂತೆ ಉತ್ತರ ಕರ್ನಾಟಕದಲ್ಲಿ ಪ್ರತಿ ತಿಂಗಳ ಕೆಲವು ದಿನ (ಚುನಾವಣೆ ಮುಗಿಯುವವರೆಗೆ) ವಾಸ ಮಾಡಲು ಮಾಜಿ ಸಿಎಂ ಕುಮಾರಣ್ಣ ನಿರ್ಧರಿಸಿದ್ದಾರಂತೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಹೇಗಾದರೂ ಮಾಡಿ ಒಂದಷ್ಟು ಸೀಟು ಗೆದ್ದು ಕಿಂಗ್ ಮೇಕರ್ ಆಗುವ ಬಗ್ಗೆ ಕನಸು ಕಾಣುತ್ತಿರುವಂತಿದೆ. ಜೆಡಿಎಸ್‌ಗೆ ಅಲ್ಲಿ ನಾಯಕರೇ ಇಲ್ಲ. ಕೆಲವು ಜಿಲ್ಲೆಗಳಿಗೆ ಪಕ್ಷದ ಅಧ್ಯಕ್ಷರೇ ಇಲ್ಲದ ಸ್ಥಿತಿ ಇದೆ. ಹಾಗಿರುವಾಗ ಎಚ್ಡಿಕೆೆ ಅಲ್ಲಿ ಹೇಗೆ ಪಕ್ಷ ಬೆಳೆಸುತ್ತಾರೋ ಆ ಜ್ಯೋತಿಷಿಗೇ ಗೊತ್ತು.  





ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ಅಧಿಕಾರದ ಕನಸು ಕಾಣುತ್ತಿದ್ದು, ಇದಕ್ಕಾಗಿ ಕೇರಳದ ಜ್ಯೋಷಿಯೊಬ್ಬರ ಸಲಹೆಯಂತೆ ಉತ್ತರ ಕರ್ನಾಟಕದಲ್ಲಿ ಪ್ರತಿ ತಿಂಗಳ ಕೆಲವು ದಿನ (ಚುನಾವಣೆ ಮುಗಿಯುವವರೆಗೆ) ವಾಸ ಮಾಡಲು ನಿರ್ಧರಿಸಿದ್ದಾರಂತೆ. ಹುಬ್ಬಳ್ಳಿಯಲ್ಲಿ  ಮನೆಯನ್ನೂ ಹುಡುಕುವ ಕೆಲಸ ನಡೆದಿದೆ ಎಂಬ ವರದಿ ಇದೆ. ತನ್ನ ಪಕ್ಷ ಇನ್ನೇನು ಹರಿದು ಹಂಚಿಹೋಗುವ ಸ್ಥಿತಿ ತಲುಪಿರುವುದರಿಂದ ಮತ್ತೆ ಅದನ್ನು ಹೇಗಾದರೂ ಮಾಡಿ ಕಟ್ಟುವ ಚಿಂತನೆ ಅವರಲ್ಲಿ ಮೂಡಿದೆ. ಇದಕ್ಕೆ ಉತ್ತರ ಕರ್ನಾಟಕವನ್ನು ಆಯ್ಕೆಮಾಡಿಕೊಂಡಿದ್ದಾರೆ.
ಮೈಸೂರು ಕರ್ನಾಟಕದಲ್ಲಿ ತನ್ನ ಪಕ್ಷ ಬೆಳೆಯುವುದು ಅಸಾಧ್ಯ ಎಂದರಿತು ಉತ್ತರ ಕರ್ನಾಟಕದಲ್ಲಿ ರೈತರ ಮನವನ್ನು ಗೆಲ್ಲಲು ಕುಮಾರಸ್ವಾಮಿ ಹೊರಟಿದ್ದಾರೆ. ಇತ್ತೀಚಿನ ಮಹಾದಾಯಿ, ಕಾವೇರಿ ಜಲ ವಿವಾದ ಇತ್ಯಾದಿಗಳಿಂದ ರೈತರು ಸ್ವಾಭಾವಿಕವಾಗಿಯೇ ಆಳುವ ಸರ್ಕಾರಗಳ ವಿರುದ್ದ ಮುನಿಸಿಕೊಂಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸೇರಿ ತಮ್ಮನ್ನು ಅಧೋಗತಿಗೆ ತಳ್ಳುತ್ತಿವೆ. ಕೃಷಿ, ನೀರಾವರಿ, ಬೆಂಬಲ ಬೆಲೆ, ಬೆಳೆ ವಿಮೆ ಮೊದಲಾದ ವಿಚಾರಗಳಲ್ಲಿ  ಅನ್ಯಾಯ ಮಾಡಲಾಗುತ್ತಿದೆ ಎಂಬ ಕೂಗು ಒಂದೇ ಸಮನೆ ಕೇಳಿಬರುತ್ತಿದೆ. ಇವೆಲ್ಲವುಗಳ ಲಾಭ ಪಡೆಯಲು ಕುಮಾರಣ್ಣ ಉತ್ತರ ಕರ್ನಾಟಕದೆಡೆ ನೋಟ ಹರಿಸಿದ್ದಾರೆ.
ಸದಾ ಅವಕಾಶವಾದಿ ರಾಜಕೀಯವನ್ನೇ ಮಾಡಿಕೊಂಡು ಬಂದಿರುವ ಜೆಡಿಎಸ್, ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಹೇಗಾದರೂ ಮಾಡಿ ಒಂದಷ್ಟು ಸೀಟು ಗೆದ್ದು ಕಿಂಗ್ ಮೇಕರ್ ಆಗುವ ಬಗ್ಗೆ ಕನಸು ಕಾಣುತ್ತಿರುವಂತಿದೆ. ಏಕೆಂದರೆ ಸದಾ ಇದೇ ಕೆಲಸವನ್ನು ಆ ಪಕ್ಷ ಮಾಡುತ್ತ ಲಾಭ ಪಡೆಯುತ್ತಿದೆ. ಜೊತೆಗೆ ಸದಾ ರಾಜಕೀಯದಲ್ಲಿ ಉಸಿರಾಡುವಂತಾಗಿದೆ. 9 ಬಲಿಷ್ಠ ಶಾಸಕರನ್ನು ಹೊರಹಾಕಿದ ನಂತರ ಹೆಚ್ಚು ಕಡಿಮೆ ಪಕ್ಷ ನಿತ್ರ್ರಾಣಗೊಂಡಿದೆ. ಏಕೆಂದರೆ ಇದಕ್ಕೆ ಅಪ್ಪ-ಮಕ್ಕಳ ಹೊರತಾಗಿ ಬೇರಾವ ನಾಯಕರೂ ಕಾಣುತ್ತಿಲ್ಲ. ಎರಡನೆಯ ತಲೆಮಾರಿನ ನಾಯಕರೇ ಇಲ್ಲದಿದ್ದರೆ ಪಕ್ಷವನ್ನು ಕಟ್ಟುವುದಾದೂ ಹೇಗೆಂಬ ವಿಚಾರ ಅಪ್ಪ-ಮಕ್ಕಳಿಗೆ ಇದ್ದಂತಿಲ್ಲ.
ಉತ್ತರ ಕರ್ನಾಟಕದ ವಿಚಾರ ಗಮನಿಸುವುದಾದರೆ,  ಜೆಡಿಎಸ್‌ಗೆ ಅಲ್ಲಿ ನಾಯಕರೇ ಇಲ್ಲ. ಕೆಲವು ಜಿಲ್ಲೆಗಳಿಗೆ ಪಕ್ಷದ ಅಧ್ಯಕ್ಷರೇ ಇಲ್ಲದ ಸ್ಥಿತಿ ಇದೆ. ಬಹುತೇಕ ರೈತ ಮುಖಂಡರೆಲ್ಲ ರಾಜಕೀಯ ಪಕ್ಷದ ಸದಸ್ಯರೇ ಆಗಿದ್ದಾರೆ. ಕೆಲವಷ್ಟೇ ರೈತರು ಇನ್ನೂ ಕೆಚ್ಚೆದೆಯಿಂದ ಹೋರಾಡುತ್ತಿದ್ದಾರೆ. ಹಾಗಿರುವಾಗ ಎಚ್ಡಿಕೆೆ ಅಲ್ಲಿ ಹೇಗೆ ಪಕ್ಷ ಬೆಳೆಸುತ್ತಾರೋ ಆ ಜ್ಯೋತಿಷಿಗೇ ಗೊತ್ತು.  ಈಗಾಗಲೇ ಬಿಜೆಪಿ ಲಿಂಗಾಯಿತರ ಮತ ನೆಚ್ಚಿಕೊಂಡು, ಕಾಂಗ್ರೆಸ್ ಅಹಿಂದವನ್ನು ಹಿಡಿದುಕೊಂಡು ಸಾಗಿವೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯಿತರ ಪ್ರ್ರಾಬಲ್ಯವಿದ್ದರೂ ದಿವಂಗತ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯಂತಹವರಿಂದ ಮಾತ್ರ ಅದನ್ನು ಪಡೆಯಲು ಸಾಧ್ಯವಾಯಿತು. ಆದರೆ ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಹ  ಆ ಮತ ಪಡೆಯಲು ಸನ್ನದ್ಧರಾಗಿದ್ದಾರೆ. ಕುಮಾರಸ್ವಾಮಿಗೂ ಕಣ್ಣು ಬಿದ್ದಿದೆ.
 ಕಾವೇರಿ ಜಲ ವಿವಾದದ ಸಂದರ್ದಲ್ಲಿ ಕೇವಲ ಪ್ರಚೋದನಾತ್ಮಕ ಹೇಳಿಕೆ ಕೊಡದೆ ತಾವೂ ಸಹ ಬೀದಿಗಿಳಿದು ರೈತರೊಂದಿಗೆ ಕಾಣಿಸಿಕೊಂಡಿದ್ದರೆ ಒಂದಷ್ಟು ಅನುಕಂಪ ಗಳಿಸಬಹುದಿತ್ತಾದರೂ ಆ ಸಾಹಸವನ್ನು ಮಾಡಿಲ್ಲ. ಹಳೆ ಮೈಸೂರು ಭಾಗದಲ್ಲಿ ಒಂದಷ್ಟು ಹಿಡಿತವನ್ನು ಪಕ್ಷ ಹೊಂದಿತ್ತಾದರೂ ಅದೂ ಸಹ ಇನ್ನು ಕೈಕೊಡುವ ಭಯವಿದೆ. ಏಕೆಂದರೆ ಯಾರನ್ನೂ ನಂಬದವರ ಬಗ್ಗೆ ಜನರು ಹೇಗೆ ನಂಬಿಕೆ ಇಡಬೇಕು?
 ದೇವೇಗೌಡರು ಪ್ರವಾಸ ಮಾಡಿದರೆ ಒಂದಷ್ಟು ಸುಧಾರಣೆ ಮಾಡಬಹುದು. ಈಗ ಕಾವೇರಿ ವಿಚಾರದಲ್ಲಿ ಅವರು ಮಾಡುತ್ತಿರುವ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನು ಬಂಡವಾಳ ಮಾಡಿಕೊಳ್ಳುವ ಜಾಣ್ಮೆ ಅವರ ಮಕ್ಕಳಿಗಿಲ್ಲ. ಕುಮಾರಸ್ವಾಮಿ  ಒಂದಷ್ಟು ದಿನ ಸಿನಿಮಾ, ಒಂದಷ್ಟು ದಿನ ರಾಜಕೀಯದವರು. ರೇವಣ್ಣ ಸಂಘಟನೆಯಿಂದ ದೂರವಾಗಿ ಬಹಳ ತಿಂಗಳಾಗಿದೆ. ಅವರಿಗೆ ಹಾಸನವೊಂದೇ ಗೊತ್ತು. ಅಪ್ಪ ಮತ್ತು ಇಬ್ಬರು ಮಕ್ಕಳು ಒಂದೊಂದು ದಿಕ್ಕು ಹಿಡಿದಿದ್ದಾರೆ. ಹೀಗಾದರೆ ಪಕ್ಷ ಸಂಘಟನೆ ಹೇಗೆ ಸಾಧ್ಯ? ಜ್ಯೋತಿಷಿಗಳ ಮಾತು ನಂಬಿ ರಾಜಕೀಯ ಮಾಡುವವರನ್ನು ಕಂಡು ಮತದಾರರು ನಗುವಂತಾಗಿದೆ.
ಚುನಾವಣೆ ಹತ್ತಿರ ಬರುತ್ತಿರುವಂತೆ ರಾಜಕಾರಣಿಗಳಿಗೂ ಜ್ಯೋತಿಷಿಗಳಿಗೂ ಸಂಬಂಧ ಹೆಚ್ಚುತ್ತದೆ. ಕೆಲವು ಜ್ಯೋತಿಷಿಗಳು ಇದಕ್ಕಾಗಿಯೇ ಹುಟ್ಟಿಕೊಳ್ಳುತ್ತಾರೆ. ಜ್ಯೋತಿಷಿಗಳು ಹೇಳುವುದು ನಿಜವಾಗುವುದಾದರೆ ಎಲ್ಲರೂ ಎಮ್ಮೆಲ್ಲೆಗಳಾಗಿ ಎಲ್ಲ ಪಕ್ಷದವರೂ ಅಧಿಕಾರಕ್ಕೇರಬೇಕಲ್ಲವೆ?
.............................................................

No comments:

Post a Comment