Saturday, 24 September 2016

ಹೊಳಲೂರು ಏತನೀರಾವರಿ ಯೋಜನೆ ಹೊಳೆಪಾಲು
* ಅರೆಬರೆ ಕಾಮಗಾರಿ ಮಾಡಿ ನಾಪತ್ತೆಯಾದ ಗುತ್ತಿಗೆದಾರ 
* 8 ವರ್ಷದಿಂದ ಕಾಮಗಾರಿ ನೆನೆಗುದಿಯಲ್ಲಿ 


ಅಪೂರ್ಣ ಹಾಗೂ ವಿಳಂಬ ಕಾಮಗಾರಿ ಪ್ರತಿಭಟಿಸಿ ಸೋಮವಾರ ಸೆ. 26ರಂದು ಬೂದಿಗೆರೆ ಕೆರೆಯಿಂದ ಮೆರವಣಿಗೆಯಲ್ಲಿ ಸಾವಿರಾರು ರೈತರು ಪಾದಯಾತ್ರೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಪ್ರತಿಭಟನೆ ನಡೆಸಲಿದ್ದಾರೆ. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು, ಕಾಮಗಾರಿ ಪೂರ್ಣಗೊಳಿಸಿ ರೈತರಿಗೆ ಶೀಘ್ರವೇ ನೀರು ಕೊಡುವ ವ್ಯವಸ್ಥೆ ಆಗಬೇಕು. ಇದಕ್ಕಾಗಿ ಸ್ಥಳೀಯರನ್ನು ಸಂಘಟಿಸಲಾಗಿದೆ. ಕಾಮಗಾರಿ ಮುಗಿಸುವವರೆಗೆ ವಿವಿಧ ರೀತಿಯಲ್ಲಿ ಹೋರಾಟ ನಡೆಸಿ ಜನರ ಪರ ನಿಲ್ಲುತ್ತೇನೆ.
- ಶಾಸಕಿ ಶಾರದಾ ಪೂರ‌್ಯಾ ನಾಯ್ಕ್


ಶಿವಮೊಗ್ಗ ತಾಲೂಕಿನ ಹೊಳಲೂರು ಬಳಿ ತುಂಗಭದ್ರಾ ನದಿಯಿಂದ ನೀರೆತ್ತಿ ಸುತ್ತಮುತ್ತಲ ಏಳು ಕೆರೆಗಳಿಗೆ  ನೀರೊದಗಿಸುವ ಯೋಜನೆ ಎಂಟುವರ್ಷ ಕಳೆದರೂ ಮುಕ್ತಾಯವಾಗಿಲ್ಲ. ಈ ಕಾಮಗಾರಿ ಗುತ್ತಿಗೆ ಪಡೆದ ಬೆಂಗಳೂರಿನ ಕಂಪನಿಗೆ 25 ತಿಂಗಳಲ್ಲಿ ಇದನ್ನು ಮುಗಿಸಲು ಸೂಚಿಸಲಾಗಿತ್ತು. ಅರೆಬರೆ ಕೆಲಸ ಮಾಡಿ ನಾಪತ್ತೆಯಾದ ಕಂಪನಿಗೆ ಎಷ್ಟೇ ನೋಟೀಸ್ , ಎಚ್ಚರಿಕೆ ಕೊಟ್ಟರೂ, ತಿಳಿಹೇಳಿದರೂ ಕದಲದೆ, ಕೆಲಸ ಮಾಡದೆ ಕಾಮಗಾರಿ ಬಾಕಿ ಉಳಿಸಿಕೊಂಡು ರೈತರ ಜೊತೆ ಚೆಲ್ಲಾಟವಾಡುತ್ತಿದೆ.
ಬಹುತೇಕ ಕಾಮಗಾರಿಗಳೆಲ್ಲ ಹೀಗೆಯೇ. ಗುತ್ತಿಗೆದಾರರ ಅಸಡ್ಡೆಯಿಂದಲೇ ಹಳ್ಳ ಹಿಡಿಯುತ್ತಿವೆ. ಕಪ್ಪುಪಟ್ಟಿಗೆ ಸೇರಿಸುತ್ತೇ ಎಂಬ ಬೆದರಿಕೆ ಹಾಕಿದರೂ ಅದಕ್ಕೂ ಜಗ್ಗುವುದಿಲ್ಲ. ಅರೆಬರೆ ಕಾಮಗಾರಿ ಮಾಡಿ ನಾಪತ್ತೆಯಾದರೆ ಸರ್ಕಾರದ ಹಣವೂ ಹೋಯಿತು, ಜನರಿಗೆ ಎಳ್ಳಷ್ಟೂ ಲಾಭವಿಲ್ಲ, ಮಾಡಿದ ಶ್ರಮವೆಲ್ಲ ನಷ್ಟ. ಹೊಳಲೂರಿನ ಕೆರೆಗಳಿಗೆ ನೀರೊದಗಿಸುವ ಯೋಜನೆಯು ಈ ರೀತಿ ಹೊಳೆಪಾಲಾಗುತ್ತಿದೆ. ಸರ್ಕಾರದ 7.06 ಕೋಟಿ ರೂ.ನ ಯೋಜನೆ ಇದಾಗಿದೆ. ಬೆಂಗಳೂರಿನ ಮೆ:ಆರ್.ಎನ್.ಎ. ಇಂಜಿನಿಯರ್ಸ್ ಪ್ರೈ.ಲಿ. ಕಂಪನಿಯವರು ಇದನ್ನು 2008ರ ಫೆ. 23ರಂದು 7.06 ಕೋಟಿ ರೂ. ಗಳಿಗೆ ವಹಿಸಿಕೊಂಡಿದ್ದರು. ಇದಕ್ಕಾಗಿ ಕರಾರು ಒಪ್ಪಂದ (ಸಂ:37/07-08) ಮಾಡಿಕೊಳ್ಳಲಾಗಿದೆ. ಆದರೆ ಈ ಕರಾರಿಗೆ ಈಗ ಕಿಮ್ಮತ್ತಿಲ್ಲದಂತಾಗಿದೆ.
ಈ ಯೋಜನೆಯಿಂದ ತಾಲೂಕಿನ ಹೊಳಲೂರು ಹೋಬಳಿಯಲ್ಲಿ ಬರುವ ಹರಮಘಟ್ಟ, ಕೊಮ್ಮನಾಳು, ಬನ್ನಿಕರೆ, ಮತ್ತು ಸುತ್ತುಕೊಟೆ ಗ್ರಾಮದ ರೈತರ 422 ಹೆಕ್ಟೆರ್ ಜಮೀನಿಗೆ ನೀರೊದಗಿಸಲು ಯೊಜನೆ ರೂಪಿಸಲಾಗಿತ್ತು. ಹೊಳಲೂರು ಬಳಿ ಇನ್‌ಟೇಕ್ ವೆಲ್ ಮತ್ತು ಜಾಕ್‌ವೆಲ್ ನಿರ್ಮಿಸಿ ಮೊದಲ ಹಂತವಾಗಿ 800 ಎಂಎಂನ ಪೈಪ್ ಅಳವಡಿಸಿ ಸುಮಾರು 410 ಮೀಟರ್ ಉದ್ದಕ್ಕೂ ರೈಸಿಂಗ್ ಮೇನ್ ಮೂಲಕ 15.89 ಕ್ಯುಸೆಕ್ಸ್ ನೀರನ್ನು ಹರಮಘಟ್ಟ ಮೇಲುತೊಟ್ಟಿಗೆ ಸರಬರಾಜು ಮಾಡಬೇಕಿತ್ತು. ಇಲ್ಲಿಂದ ನಾರಾಯಣಕೆರೆ ಮತ್ತು ಸೀಗೆಹಳ್ಳ ಕೆರೆಗಳಿಗೆ ನೀರು ತುಂಬಿಸಿ 412 ಎಕ್ರೆ ಜಮೀನಿಗೆ ನೀರಾವರಿ ಕಲ್ಪಿಸುವ ಗುರಿ ಹಾಕಿಕೊಳ್ಳಲಾಗಿತ್ತು.
ಎರಡನೆಯ ಹಂತದಲ್ಲಿ, 4315 ಮೀಟರ್ ಉದ್ದಕ್ಕೆ  600 ಮಿಮೀಯ ಪೈಪ್ ಹಾಕಿ ರೈಸಿಂಗ್ ಮೇನ್ ಅಳವಡಿಸಿ ಸೋಮಿನಕೊಪ್ಪ ಗ್ರಾಮದ ಹತ್ತಿರ ತೊಟ್ಟಿಗೆ ನೀರು ಸರಬರಾಜು ಮಾಡಿ ಅಲ್ಲಿಂದ ಬೂದಿಗೆರೆಕೆರೆ ಮತ್ತು ಸುತ್ತುಕೋಟೆ ಕೆರೆಗೆ ಗ್ರಾವಿಟಿ ಪೈಪ್‌ಲೈನ್ ಮೂಲಕ ನೀರು ತುಂಬಿಸಿ 630 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ಹಮ್ಮಿಕೊಳ್ಳಲಾಗಿತ್ತು.
ಗುತ್ತಿಗೆದಾರರು ಕಾಮಗಾರಿಯನ್ನು ಪ್ರಾರಂಭಿಸಿ ನಿಧಾನಗತಿಯಲ್ಲಿ ಮುಂದುವರೆಸಿದ್ದರಿಂದ ತಿಳುವಳಿಕೆ ಮತ್ತು ಎಚ್ಚರಿಕೆ ನೋಟೀಸ್ ನೀಡಲಾಗಿತ್ತು. ಯೋಜನೆಯನ್ನು ಸಫಲಗೊಳಿಸಲು ಜಿಲ್ಲಾಧಿಕಾರಿ ಸಹ ಸಾಕಷ್ಟು ಸಲ ಸಭೆ ನಡೆಸಿದ್ದರೂ ಕಾಮಗಾರಿ ಕುಂಠಿತವಾಗಿತ್ತು. ಈ ಹಿನ್ನೆಲೆಯಲ್ಲಿ  ಸಣ್ಣ ನೀರಾವರಿ ಇಲಾಖೆಯ ವಿಭಾಗೀಯ ಕಚೇರಿಯು 2013ರ ಸೆ. 26ರಂದು ಟೆಂಡರ್ ರದ್ದುಗೊಳಿಸಲು ಮುಖ್ಯ ಇಂಜಿನಿಯರ್‌ಗೆ ಪ್ರಸ್ತಾವನೆ ಕಳಿಸಿತ್ತು. ಆದರೆ ಬೆಂಗಳೂರಿನಲ್ಲಿ ಇಲಾಖೆಯ ಮುಖ್ಯ ಇಂಜಿನಿಯರ್‌ರವರು ಅದೇ ವರ್ಷದ ಅ. 10ರಂದು ಕರೆದ ಸಭೆಯಲ್ಲಿ ಗುತ್ತಿಗೆದಾರರು ಎರಡುವರೆ ತಿಂಗಳಲ್ಲಿ ಕಾಮಗಾರಿ ಮುಗಿಸಲು ಒಪ್ಪಿಕೊಂಡಿದ್ದರು. ಆದರೆ ಮತ್ತೆ  ಪೂರ್ಣಗೊಳಿಸದೆ ಕೈಕೊಟ್ಟಿದ್ದರು.
    ಡಿಸಿಯವರು 2014ರ ಜೂನ್ 5ರಂದು ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ 10 ದಿನದೊಳಗೆ ಕಾಮಗಾರಿ ಮುಗಿಸಿ ಹರಮಘಟ್ಟದವರೆಗೆ ನೀರೊದಗಿಸುವಂತೆ ಆದೇಶಿಸಿದ್ದರು.  ಆ ಪ್ರಕಾರ ಮಾರ್ಚ್ 2015ರವರೆಗೆ ಕೆಲಸ ಮಾಡಿ ಆ ಕಾಮಗಾರಿಯನ್ನು ಮುಗಿಸಿದ್ದರು. ನಂತರ ಟ್ರಯಲ್ ರನ್ ಮಾಡಿದಾಗ ಸುಮಾರು ಏಳು ಕಡೆಯಲ್ಲಿ ಪೈಪ್ ಜಾಯಿಂಟ್‌ಗಳಲ್ಲಿ ಲೀಕೇಜ್ ಕಂಡುಬಂದಿತ್ತು. ಕಪ್ಪುಮಿಶ್ರತ ಮಣ್ಣಿನಲ್ಲಿ ಪೈಪ್‌ಲೈನ್ ಇರುವುದರಿಂದ ಜಾಯಿಂಟ್ ಬಿಟ್ಟುಹೋಗಿತ್ತು. ಇದನ್ನು ಸರಿಪಡಿಸಿಕೊಟ್ಟರು. ಆನಂತರ 2ನೆಯ ಟ್ರಯಲ್ ಮಾಡಿ ಯಶಸ್ವಿಯಾದರೆ ಪ್ರಥಮ ಹಂತಕ್ಕೆ ನೀರೊದಗಿಸಲು ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಈ ವೇಳೆ ಸುಮಾರು 25 ಕಡೆ ಲೀಕೇಜ್ ಕಂಡುಬಂದಿತು. ಇದಕ್ಕೆ ಸಬೂಬು ಕೊಡದೆ ಸರಿಪಡಿಸಿ ನೀರು ಕೊಡಲು ಆದೇಶಿಸಿದ್ದರೂ ಆ ಕಡೆ ಗುತ್ತಿಗೆದಾರರು ತಲೆಯನ್ನೇ ಹಾಕಲಿಲ್ಲ.
 ಇದನ್ನೆಲ್ಲ ಸಹಿಸಿಕೊಂಡೇ 2015ರ ಜೂನ್ 5ರಂದು ಅಂತಿಮ ನೋಟೀಸ್ ಕೊಡಲಾಗಿದೆ. ಅದೇ ವರ್ಷದ ಸೆ. 30ರಂದು ಎರಡನೆಯ ನೋಟೀಸನ್ನೂ ನೀಡಲಾಯಿತು. ಇದಾದ ಬಳಿಕ 2016ರ ಮಾ 4ರಂದು ವಿಧಾನ ಪರಿಷತ್ ಸಭಾಧ್ಯಕ್ಷರ ಕೊಠಡಿಯಲ್ಲಿ ಸಣ್ಣ ನೀರಾವರಿ ಸಚಿವರ, ಪ್ರತಿಪಕ್ಷ ನಾಯಕರ, ಹೊಳಲೂರು ಜಿಪಂ ಸದಸ್ಯರ, ವಿವಿಧ ಹಂತದ ಇಂಜಿನಿಯರ್, ಗುತ್ತಿಗೆದಾರ ಮತ್ತು ರೈತ ಪ್ರಮುಖರ  ಸಮ್ಮುಖದಲ್ಲಿ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಮಳೆಗಾಲ ಆರಂಭವಾಗುವುದರೊಳಗೆ ಸರಿಪಡಿಸಿ ನೀರೊದಗಿಸಲು ಸೂಚಿಸಲಾಗಿತ್ತು. ತಪ್ಪಿದಲ್ಲಿ ಕಪ್ಪುಪಟ್ಟಿಗೆ ಸೇರಿಸುವ ಎಚ್ಚರಿಕೆಯನ್ನು ಸಚಿವರೇ  ಕೊಟ್ಟಿದ್ದರು.
ಆದರೆ ಇಲ್ಲಿಯವರೆಗೆ ಕೆಲಸ ನಡೆದಿಲ್ಲ. ಗುತ್ತಿಗೆದಾರರ ಈ ನಡೆಯಿಂದ ಜನ ಆಕ್ರೋಶಿತರಾಗಿದ್ದಾರೆ. ಸಾಕಷ್ಟು ಬಾರಿ ಪ್ರತಿಭಟನೆ, ಹೋರಾಟ ನಡೆದಿದೆ. ಆದರೂ ಲಾಭವಾಗಿಲ್ಲ. ಅಲ್ಲಿನ ರೈತರು ಮಾತ್ರ ಎಂದು ಈ ಕಾಮಗಾರಿ ಮುಗಿಯುವುದು, ಯಾವಾಗ ಜಮೀನಿಗೆ ನೀರು ಸಿಗಬಹುದೆಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಗುತ್ತಿಗೆದಾರ ಎಲ್ಲಿದ್ದಾನೆ ಎನ್ನುವುದೇ ಗೊತ್ತಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಅರೆಬರೆ ಕಾಮಗಾರಿಯಿಂದ ಯಂತ್ರೋಪಕರಣಗಳೂ ಸಹ ಹಾಳಾಗುವ ಸ್ಥಿತಿ ನಿರ್ಮಾಣವಾಗಿದೆ.
   .........................................

No comments:

Post a Comment