Saturday, 17 September 2016

ಮೂಕ ಹಕ್ಕಿಯು ರೋಧಿಸುತಿದೆ.........






 ಮೊನ್ನೆ ನಡೆದ ಕಾವೇರಿ ಗಲಾಟೆಯಲ್ಲಿ ಯಾಕೋ ನಮ್ಮ ಮೇಲೆ  ಹೋರಾಟಗಾರರ ವೇಷದಲ್ಲಿ ಬಂದ ಬಹುಜನರು ಸೇಡು ತೀರಿಸಿಕೊಂಡಿದ್ದಾರೆ.  ಕಲ್ಲು ಹೊಡೆದರು, ದೊಣ್ಣೆಯಿಂದ ಥಳಿಸಿದರು, ಇಷ್ಟೂ ಸಾಲದೆಂಬಂತೆ ಸುಟ್ಟು ಹಾಕಿದರು. ಇವೆಲ್ಲವನ್ನೂ ಮಾಡಿದರಲ್ಲ, ಹಾಗಾದರೆ ನಾನೇನು ತಪ್ಪು ಮಾಡಿದ್ದೇನೆ ಎನ್ನುವುದನ್ನು ಏಕೆ ನೀವು ಹೇಳಲಿಲ್ಲ. ಗುಂಪಿನಲ್ಲಿದ್ದವರೆಲ್ಲ ಕಲ್ಲೆಸೆದರು, ಮೈಯಿಂದ ರಕ್ತ ಸೋರುವಷ್ಟು ಥಳಿಸಿದರು. ಕೊನೆಗೆ ಬೆಂಕಿಯನ್ನು ಹಾಕಿ ಅದರ ಕೆನ್ನಾಲಿಗೆಯಲ್ಲಿ ಸಿಕ್ಕಿ ಬೇಯುತ್ತಿರುವಾಗ ಕೇಕೆ ಹಾಕಿದರು. ನನ್ನ ಅಸ್ಥಿಪಂಜರವನ್ನು ಮಾತ್ರ  ಬಿಟ್ಟು ಹೋದರು. ಇದೇಕೆ ಇಂತಹ ಶಿಕ್ಷೆ?
ಪ್ರತಿ ಬಾರಿ ಗಲಾಟೆಯಾದಾಗಲೂ ನಾನೇ ಏಕೆ ಗುರಿಯಾಗುತ್ತಿದ್ದೇನೆ ಎನ್ನುವುದು ನನಗೆ ಇಂದಿನವರೆಗೂ ಅರ್ಥವಾಗಿಲ್ಲ.  ಏಕೆಂದರೆ ನಾನು ತಪ್ಪು ಮಾಡಿಲ್ಲ ಎನ್ನುವುದು ನನಗೆ ಗೊತ್ತು. ರಾಜಕಾರಣಿಗಳೋ, ಅಧಿಕಾರಿಗಳೋ, ಸಾರ್ವಜನಿಕರೋ ಅಥವಾ ಚಾಲಕರೊ ಯಾರೋ ಮಾಡಿದ ತಪ್ಪಿಗೆ ನನಗೆ ಶಿಕ್ಷೆ. ಎಂತಹ ನ್ಯಾಯ ನೋಡಿ! ನನ್ನಂತಹ ಅಮಾಯಕನ ಗೋಳು ಕೇಳುವವರಿಲ್ಲ. ಏಕೆಂದರೆ  ಚಾಲಕರು ನನ್ನನ್ನು ಎಲ್ಲಿ ಬೇಕೆಂದರೆಲ್ಲಿ ನಿಲ್ಲಿಸುತ್ತಾರೆ. ಜೊತೆಗೆ ನನ್ನ ಆಕಾರವೂ ದೊಡ್ಡದು. ಹಾಗಾಗಿ ಥಟ್ಟನೆ ಸಾರ್ವಜನಿಕರ ಕಣ್ಣಿಗೆ ಬೀಳುತ್ತೇನೆ. ದೂರದಿಂದ ಕಲ್ಲೆಸೆದರೂ ಅದು ನನಗೆ ತಗಲುತ್ತದೆ.  
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದಕ್ಕೂ ನನಗೂ ಏನು ಸಂಬಂಧ ಎನ್ನುವುದು ಮಾತ್ರ ಗೊತ್ತಾಗಲೇ ಇಲ್ಲ. ಏಕೆಂದರೆ ನಾನು ಸುಮ್ಮನೆ ಶೆಡ್‌ನಲ್ಲಿ ಅಥವಾ ಬಸ್ ನಿಲ್ದಾಣದಲ್ಲಿ ನಿಲ್ಲುವವನು. ಹುಡುಕಿಕೊಂಡು ಬಂದು ಬೆಂಕಿ ಹಚ್ಚಿದರು. ನಾನು ಜಯಲಲಿತಾ ಪರ ಮಾತನಾಡಿಲ್ಲ, ಅಥವಾ ಸಾಮಾಜಿಕ ಜಾಲತಾಣದಲ್ಲಿ ಬರೆಯಲಿಲ್ಲ. ತಮಿಳುನಾಡನ್ನು ಬಯ್ಯಲಿಲ್ಲ. ಆ ರಾಜ್ಯಕ್ಕೆ ಸಾಕಷ್ಟು ಸಲ ಹೋಗಿಬಂದಿರಬಹುದು. ಆದರೆ ನಾನು ಹೋಗಿದ್ದು ನಿಮ್ಮೆಲ್ಲರ ಅನುಕೂಲಕ್ಕಾಗಿ ಮಾತ್ರ. ಅಲ್ಲಿ ನನ್ನ ಪಾತ್ರ ಏನೂ ಇಲ್ಲ. ಚಾಲಕ ಹೇಳಿದಂತೆ ನಾನು ಕೇಳಬೇಕಲ್ಲ.
ಹೋಗಲಿ, ನಾನು ಕರ್ನಾಟಕದವನೆಂದು ತಮಿಳುನಾಡಿನವರು ಬೆಂಕಿ ಹಚ್ಚುತ್ತಾರೆ. ತಮಿಳುನಾಡಿನವನೆಂದು ಕರ್ನಾಟಕದವರು ಬೆಂಕಿ ಇಡುತ್ತಾರೆ. ಈ ಎರಡೂ ರಾಜ್ಯ ಬಿಟ್ಟು ಬೇರೆ ರಾಜ್ಯಕ್ಕೇ ಹೋಗಬೇಕೆ? ನಿಮ್ಮ ದ್ವೇಷವನ್ನು ನನ್ನ ಮೇಲೇಕೆ ಕಾರುತ್ತೀರಿ ಸಾರ್ವಜನಿಕರೇ? ನಿಮಗೇಕೆ ನಿರುಪದ್ರವಿಯಾದ ನನ್ನ ಮೇಲೆ ಕರುಣೆ ಬಾರದು, ಪ್ರತಿಬಾರಿಯೂ ಸುಟ್ಟುಬೂದಿ ಮಾಡುತ್ತಿರಲ್ಲ, ಇದರಿಂದ ನಿಮಗೆ ಖುಷಿಯಾಗುತ್ತಿದೆಯೇ? ಮೊನ್ನೆ ಸುಟ್ಟಿದ್ದರಿಂದ ಕಾವೇರಿ ನೀರು ನಿಲ್ಲಿಸಿದಷ್ಟು ಸಂಭ್ರಮವಾಯಿತೇ? ಅಥವಾ ಕಾವೇರಿ ನೀರು ಹರಿಯುವುದು ನಿಂತಿತೆ?  
  ನನಗೆ ನೀವೇನೇ ತೊಂದರೆ ಮಾಡಿದರೂ  ಹಾನಿ ನಿಮ್ಮದೇ ಸರ್ಕಾರಕ್ಕೆ ಅಥವಾ ನಿಮಗೇ ಎನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲವೇ? ನನ್ನ ಸುಟ್ಟರೆ, ಹೊಡೆದರೆ ನಿಮಗೆ ಲಾಭವಾಗುವುದಿದ್ದರೆ ಹೇಳಿ. ಇಲ್ಲವಲ್ಲ, ಹಾಗಿದ್ದ ಮೇಲೆ, ಇನ್ನೊಬ್ಬನನ್ನು ಹಿಂಸಿಸಬಾರದೆನ್ನುವ ಮಹಾನ್ ದಾರ್ಶನಿಕರ, ಸಂತರ  ಮಾತು ಕೇಳಿಲ್ಲವೆ? ಓದಿಲ್ಲವೇ? ಸಾಮಾನ್ಯ ಜ್ಞಾನವಾದರೂ ನಿಮಗೆ ಬೇಡವೇ? ನಾನು ಯಾವತ್ತ್ತೂ ಉಪಕಾರಿಯೇ ವಿನಾ ನಿಮ್ಮಂತೆ ಅಪಕಾರಿಯಲ್ಲ. ನಾನು ಮೂಕ ಎಂಬ ಕಾರಣಕ್ಕೆ ಮತ್ತು ಸ್ವಯಂ ಚಾಲನೆ ಇಲ್ಲ ಎನ್ನುವುದನ್ನೆ ನೀವು ದುರುಪಯೋಗ ಮಾಡಿಕೊಳ್ಳುತ್ತೀರಲ್ಲ, ನೀವೆಂತಹ ಕಟುಕರು, ಹೃದಯಹೀನರು. ನನ್ನನ್ನು ಸದಾ ಬಳಸುತ್ತಿರಿ, ಉಪಯೋಗ ಪಡೆಯುತ್ತೀರಿ. ದಿನನಿತ್ಯ ಸಾವಿರಾರು ಜನರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವ ಪರೋಪಕಾರಿ ಬುದ್ಧಿ ನನ್ನದು. ನಿಮಗೇನದರೂ ಇಂತಹ ಕಾಳಜಿ ಇದೆಯೇ?
ನಿಮ್ಮ ಅಮಾನವೀಯ, ಕಲ್ಲು ಹೃದಯ ನೋಡಿ ನನಗೆ ಕನಿಕರವಾಗುತ್ತಿದೆ. ಆದರೇನು ಮಾಡಲಿ, ನೀವು ವಿದ್ಯಾವಂತರು, ಕನ್ನಡ, ತಮಿಳು ಹೆಸರಲ್ಲಿ ದಾಂಧಲೆ ಮಾಡುತ್ತೀರಿ, ಇನ್ನೊಬ್ಬರಿಗೆ ನೋವು ಕೊಡುತ್ತೀರಿ, ನಾನು ಎಂದಾದರೂ ಹಾಗೆ ಮಾಡಿದ್ದಿದೆಯೆ?  ರಾಜಕೀಯ ನನಗೆ ಗೊತ್ತೇ ಇಲ್ಲ, ಜಾತಿ, ಮತ, ಭಾಷೆ, ಪಂಥವಿಲ್ಲ. ಎಲ್ಲರೂ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು. ಇಂತಹ ಹಾಲುಮನಸ್ಸಿನ ನನ್ನ ಮೇಲೆ ಸದಾ ಬೆಂಕಿಯೆಂಬ ಅಸ್ತ್ರ ಬಳಸುತ್ತೀರಲ್ಲ, ಇದರಿಂದ ನಿಮಗೆ ಖುಷಿ ಸಿಕ್ಕಿತಾ? ಇದೇ ಗತಿ ನಿಮ್ಮ ಸ್ವಂತ ವಾಹನಕ್ಕೆ ಬಂದರೆ ಏನು ಮಾಡುತ್ತೀರಿ?
ಮನುಷ್ಯರಿಗೆ ಮನುಷ್ಯತ್ವ ಮೊದಲು ಇರಬೇಕು. ನೀವೆಷ್ಟೇ ಕಲಿತರೂ. ಎಷ್ಟೇ ಉನ್ನತ ಹುದ್ದೆ ಪಡೆದರೂ, ಮಾನವೀಯತೆ, ಹೃದಯ ವೈಶಾಲ್ಯತೆ ಇಲ್ಲವೆಂದರೆ ಏನೂ ಪ್ರಯೋಜನವಿಲ್ಲ.  ನನ್ನನ್ನು ನೋಡಿ ಪರೋಪಕಾರಿ, ಸೌಹಾರ್ದತೆ ಕಲಿಯಿರಿ, ಅದನ್ನು ಬಿಟ್ಟು ನನಗೇ ಹಿಂಸಿಸುವಿರಲ್ಲಾ , ಇದೆಂತಹಾ ನ್ಯಾಯ ಹೋರಾಟಗಾರೇ???

No comments:

Post a Comment