ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಹಿಡಿದಿಟ್ಟ
ಈರ್ ಮಾಸ್ತೆವ್ವ ನಾಟಕ
ಹೆಣ್ಣು, ಹೊನ್ನು, ಮಣ್ಣಿಗಾಗಿ ಹಿಂದಿನ ಕಾಲದಲ್ಲಿ ಅಸಖ್ಯಾಂತ ಹೋರಾಟಗಳು ನಡೆದಿರುವುದು ಇತಿಹಾಸದ ಸಂಗತಿಗಳಾಗಿವೆ. ಈ ನಾಟಕದಲ್ಲಿ ಸ್ನೇಹ, ಊರಿನ ಪ್ರತಿಷ್ಠೆ, ಮಹಿಳೆಯರ ಮಾನ, ಗೌರವ ಕಾಪಾಡುವ ಸಲುವಾಗಿ ಮಹಿಳೆಯರು ಹೇಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಘಟನೆಯನ್ನು ನೈಜವಾಗಿ ರಂಗದ ಮೇಲೆ ತರುವ ಮೂಲಕ ಹಿಂದಿನ ಘಟನೆಗಳನ್ನು ಸ್ಮರಿಸಿದ್ದಾರೆ. ಇದರ ಜೊತೆಗೆ ಮಾಸ್ತಿಕಲ್ಲು ಹಾಗೂ ವೀರಗಲ್ಲುಗಳ ಮಹತ್ವವನ್ನು ಮತ್ತು ಅದರ ಇತಿಹಾಸವನ್ನು ಸಂರಕ್ಷಿಸಿ ಮುಂದಿನ ತಲೆಮಾರಿನವರಿಗೆ ಅದರ ಪ್ರಾಮುಖ್ಯತೆಯನ್ನು ತಿಳಿಸುವ ನಾಟಕದ ನಿರ್ದೇಶಕರ ಚಿಂತನೆ ಜಾಣ್ಮೆ ಮೆಚ್ಚುವಂತದ್ದ
ಕಲೆಯ ಎಲ್ಲ ಪ್ರಕಾರಗಳಿಗಿಂತ ನಾಟಕ ಪ್ರಕಾರ ಹೆಚ್ಚು ಪರಿಣಾಮಕಾರಿ. ದೃಶ್ಯ ಮಾಧ್ಯಮವಾಗಿರುವ ಈ ಕಲಾಪ್ರಕಾರಕ್ಕೆ ಪ್ರೇಕ್ಷಕರನ್ನು ಹಿಡಿದಿಡುವುದು ಒಂದು ಸವಾಲಿನ ಕೆಲಸವೇ ಸರಿ. ಉತ್ತಮ ಕಥಾ ಹಂದರವನ್ನು ಹೊಂದಿದ್ದರೆ ಆ ನಾಟಕ ಪ್ರೇಕ್ಷಕರನ್ನು ಹಿಡಿದಿಡಬಹುದು ಎನ್ನುವುದಕ್ಕೆ ಈರ್ ಮಾಸ್ತೆವ್ವ ನಾಟಕ ಒಂದು ಉದಾಹರಣೆ.
ತ್ಯಾಗ, ಬಲಿದಾನದ ಮೂಲಕ ಹೆಣ್ಣು ಹೇಗೆ ಅರ್ಪಣಾ ಮನೋಭಾವದಿಂದ ತನ್ನನ್ನು ಸಮಾಜಕ್ಕೆ ಸಮರ್ಪಿಸಿಕೊಳ್ಳುತ್ತಾಳೆ, ಆತ್ಮ ಗೌರವಕ್ಕೆ ಧಕ್ಕೆ ಬಂದಾಗ ಸಿಡಿದೆದ್ದು ನಿಂತು ಊರಿನ ಘನತೆ, ಗೌರವವನ್ನು ಕಾಪಾಡುತ್ತಾಳೆ ಎನ್ನುವುದನ್ನು ಸಮರ್ಥವಾಗಿ ಅಷ್ಟೇ ಸರಳವಾಗಿ ನಿರೂಪಿಸಿದ ಜಾನಪದ ನಾಟಕ ಇದಾಗಿದೆ.
ಭದ್ರಾವತಿಯ ಶಾಂತಲಾ ಕಲಾ ವೇದಿಕೆ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶಿದ ಒಂದು ವೀರ ಮಹಾಸತಿ ಕಲ್ಲಿನ ಕಥೆ ವ್ಯಥೆ ಆಧಾರಿತ ಈರ್‌ಮಾಸ್ತೆವ್ವೆ ಉತ್ತರ ಕರ್ನಾಟಕ ಸೀಮೆಯ ಗ್ರಾಮ್ಯ ಸೊಗಡಿನ ಜಾನಪದ ಐತಿಹಾಸಿಕ ನಾಟಕವಾಗಿದೆ. ಇದು ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟಿದ್ದಲ್ಲದೆ ಅದ್ಭುತ ಪ್ರದರ್ಶನ ಎಂಬ ಪ್ರಶಂಸೆಗೆ ಪ್ರತಿಯೊಬ್ಬರಿಂದಲೂ ಪಾತ್ರವಾಯಿತು. ಕಲಾವಿದರು ಯಾವುದೇ ವೃತ್ತಿಪರ ಕಲಾವಿದರಿಗೆ ಕಡಿಮೆ ಇಲ್ಲದಂತೆ ಪ್ರದರ್ಶಿಸಿದ್ದನ್ನು ಶ್ಲಾಘಿಸಲೇಬೇಕು. ಸಂಭಾಷಣೆ ಸಂಪೂರ್ಣ ಉತ್ತರ ಕರ್ನಾಟಕದ ಶೈಲಿಯಲ್ಲಿದ್ದು, ಪಾತ್ರಧಾರಿಗಳು ಸಹ ಆ ಭಾಗದ ಉಡುಗೆ ತೊಡುಗೆಗಳನ್ನು ಧರಿಸಿ ಅಭಿನಯಿಸಿದ್ದು ಪ್ರೇಕ್ಷಕರಿಗೆ ಹೊಸತನದ ಮದ ನೀಡುವಲ್ಲಿ ಸಂಪೂರ್ಣ ಯಶಸ್ವಿಯಾಯಿತು.
ರುಂಡ ಬೆತ್ತಲೆಯಾಗಿ ಮುಂಡ ಚಂಡಾಡೇ..ರಂಡೆಯೋರ್ವಳು ಬಂಡೆದ್ದ ಸದೆಬಡಿಯೇ. ಬೆಂಡೆದ್ದು ಮುಳುಗೀತೊ...! ಗುಂಡೆದ್ದು ತೇಲಿತೊ...! ಬಂಡೆದ್ದ ರುಂಡ ಕಡಿದು ಧೆರೆಗುರುಳಿತೋ....! ಇದು ಮುಳ್ಳಾವಿಗೆ ಜಂಗಮ ಹಾವಯ್ಯನ ಕಾರ್ಣೀಕ ನುಡಿ.
ಅಂದಿನ ಕಾಲದಲ್ಲಿ ವೀರ ವನಿತೆಯರು ಗ್ರಾಮದ ಉದ್ಧರಕ್ಕಾಗಿ ಅಥವ ಗಂಡಾತರಗಳನ್ನು ನೀಗಿಸಲು ತಮ್ಮನ್ನು ತಾವೇ ಬಲಿ ನೀಡಿದುದರ ನೆನಪಿಗಾಗಿ ವೀರ ಮಹಾಸತಿ ಕಲ್ಲುಗಳನ್ನು ಊರ ಮುಂದಣ ಅಗಸೆಬಾಗಿಲುಗಳಲ್ಲಿ ನೆಡುತ್ತಿದ್ದರು. ಇವುಗಳು ನಮ್ಮ ಪೂರ್ವಜರ ಇತಿಹಾಸವನ್ನು ತಿಳಿಸುವ ನೈಜ ಕುರುಹುಗಳಾಗಿವೆ. ಇಂತಹ ಕುರುಹುಗಳ ಮಾಹಿತಿಗಳು ಸರ್ಕಾರದ ಯಾವುದೇ ಇಲಾಖೆಗಳಲ್ಲಿ ದೊರೆಯುವುದಿಲ್ಲ. ಹಾಗಾಗಿ ಅಂತಹ ಸ್ಮಾರಕಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಯವರಿಗೆ ತಿಳಿಸಬೇಕಾಗಿದೆ. ತ್ಯಾಗ ಬಲಿದಾನದ ಕುರುಹಾದ ವೀರ ಮಹಾಸತಿ ಕಲ್ಲುಗಳು ಇಂದು ಏನಾಗಿವೆ ಎನ್ನುವುದರ ಸಂಶೋಧನೆಗಿಳಿದ ವಿಧ್ಯಾರ್ಥಿನಿಗೆ ಹೆಳವರ ಗಿರಿಯಜ್ಜನಿಂದ ದೊರೆತ ಮಾಹಿತಿ ಏನು ಎನ್ನುವುದೇ ನಾಟಕದ ಕಥಾವಸ್ತುವಾಗಿದೆ.
ಹೆಣ್ಣು, ಹೊನ್ನು, ಮಣ್ಣಿಗಾಗಿ ಹಿಂದಿನ ಕಾಲದಲ್ಲಿ ಅಸಖ್ಯಾಂತ ಹೋರಾಟಗಳು ನಡೆದಿರುವುದು ಇತಿಹಾಸದ ಸಂಗತಿಗಳಾಗಿವೆ. ಈ ನಾಟಕದಲ್ಲಿ ಸ್ನೇಹ, ಊರಿನ ಪ್ರತಿಷ್ಠೆ, ಮಹಿಳೆಯರ ಮಾನ, ಗೌರವ ಕಾಪಾಡುವ ಸಲುವಾಗಿ ಮಹಿಳೆಯರು ಹೇಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಘಟನೆಯನ್ನು ನೈಜವಾಗಿ ರಂಗದ ಮೇಲೆ ತರುವ ಮೂಲಕ ಹಿಂದಿನ ಘಟನೆಗಳನ್ನು ಸ್ಮರಿಸಿದ್ದಾರೆ. ಇದರ ಜೊತೆಗೆ ಮಾಸ್ತಿಕಲ್ಲು ಹಾಗೂ ವೀರಗಲ್ಲುಗಳ ಮಹತ್ವವನ್ನು ಮತ್ತು ಅದರ ಇತಿಹಾಸವನ್ನು ಸಂರಕ್ಷಿಸಿ ಮುಂದಿನ ತಲೆಮಾರಿನವರಿಗೆ ಅದರ ಪ್ರಾಮುಖ್ಯತೆಯನ್ನು ತಿಳಿಸುವ ನಾಟಕದ ನಿರ್ದೇಶಕರ ಚಿಂತನೆ ಜಾಣ್ಮೆ ಮೆಚ್ಚುವಂತದ್ದಾಗಿದೆ.
ಸಂಶೋಧನಾ ವಿದ್ಯಾರ್ಥಿಯಾಗಿ ಎ.ಎಂ.ನೇತ್ರಾವತಿ ಕುತೂಹಲದಿಂದ ಮಾಸ್ತಿಕಲ್ಲುಗಳನ್ನು ವೀಕ್ಷಿಸಿ ಅದರ ಇತಿಹಾಸದ ಬಗ್ಗೆ ಕೇಳುವ ಹಾಗೂ ಅದರ ಮಹತ್ವವನ್ನು ಅರಿಯುವ ಮನೋಭಾವದ ಪರಿ ಇಂದಿನ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಹೆಳವರ ಗಿರಿಯಜ್ಜನ ಮುದುಕನ ಪಾತ್ರದಲ್ಲಿ ಕತ್ತಲಗೆರೆ ತಿಮ್ಮಪ್ಪ ತಮ್ಮ ಅಭಿನಯದ ಮೂಲಕ ವೃಧ್ಧನ ಪಾತ್ರಕ್ಕೆ ಜೀವ ತುಂಬಿದರು. ಕಥೆಯನ್ನು ಅಚ್ಚುಕಟ್ಟಾಗಿ ಸಂಶೋಧನಾ ವಿಧ್ಯಾರ್ಥಿಗೆ ನಾಟಕದೂದ್ದಕ್ಕೂ ತಿಳಿಸುವ ಶೈಲಿ ಅರ್ಥ ಪೂರ್ಣವಾಗಿದ್ದು, ನಾಟಕವನ್ನು ನಿರಂತರವಾಗಿ ಮುನ್ನಡೆಸಿಕೊಂಡು ಹೋಗುವಲ್ಲಿ ಯಶಸ್ವಿಯಾಯಿತು.
ಮಲ್ಲಯ್ಯಪುರದ ನಾಡಗೌಡ ಮಲ್ಲನ ಗೌಡನಾಗಿ ಅಪೇಕ್ಷಾ ಮಂಜುನಾಥ ಪಾತ್ರಕ್ಕೆ ತಕ್ಕಂತೆ ಹಿರಿಯ ಗೌಡನಾಗಿ ಅಭಿನಯಿಸಿದ್ದಾರೆ, ಮಗ ವೀರನಗೌಡನಾಗಿ ಟಿ.ಲೋಕೇಶ್, ಶಿವದುರ್ಗದ ಯುವ ದೇಸಾಯಿ ಲಿಂಗಣ್ಣ ದೇಸಾಯಿಯಾಗಿ ಎಲ್.ವರದರಾಜು, ಲಿಂಗಣ್ಣ ದೇಸಾಯಿ ಸೋದರ ಸಂಬಂಧಿ ಗುರುಲಿಂಗ ದೇಸಾಯಿಯಾಗಿ ಎಂ.ವಿರುಪಾಕ್ಷಪ್ಪ, ಗುರುಲಿಂಗ ದೇಸಾಯಿ ಆಪ್ತ ಈರ‌್ಯನಾಗಿ ವಿರುಪಾಕ್ಷಯ್ಯ ಹಿರೇಮಠ್ ನಂಬಿಕಸ್ಥ ಭಂಟಬಾಗಿ ಮಾಡಿರುವ ಅಭಿನಯ ಮನಸ್ಸಿನಲ್ಲಿ ಉಳಿಯುವಂತಿದೆ, ಮಲ್ಲನಗೌಡರ ಒಡನಾಡಿ ಆಪ್ತ ಗುರವಜ್ಜನಾಗಿ ವೈ.ಕೆ.ಹನುಮಂತಯ್ಯ, ವಾಡೇದ ಕರಣಿಕ ನರಸಪ್ಪಯ್ಯನಾಗಿ ಜಿ.ವಿ.ಸದಾಶಿವಪ್ಪ ನಾಟಕ ಕಥೆಗೆ ತಕ್ಕಂತೆ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನಾಟಕ ನಿರಾಂತಕವಾಗಿ ಮುಂದುವರೆಯುವಲ್ಲಿ ತಮ್ಮ ಕೊಡುಗೆಯನ್ನು ನೀಡಿದ್ದಾರೆ.
ಇನ್ನು ನಾಟಕದ ಪ್ರಮುಖ ಪಾತ್ರ ಮುಳ್ಳಾವಿಗೆ ಜಂಗಮ ಹಾವಯ್ಯನಾಗಿ ಬಸನಗೌಡ ಮಾಳಗಿ ಸಮರ್ಥವಾಗಿ ಮುಳ್ಳಾವಿಗೆ ಮೇಲೆ ನಿಂತು ಹೇಳುವ ಭಾವಪೂರ್ಣ ಭಂಗಿ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತುವಂತಿದೆ. ನಾಟಕದಲ್ಲಿ ಅದು 3-4 ಭಾರಿ ಪುನರಾವರ್ತನೆಯಾಗಿದೆ. ಅವರ ಧ್ವನಿ ದೃಶ್ಯಕ್ಕೆ ಗಡಸುತನದಿಂದ ಕೂಡಿದ್ದು ಜನರಿಗೆ ನಿಜಕ್ಕೂ ಕಾರ್ಣಿಕದ ಜಂಗಮರ ನೆನೆಪನ್ನು ತರಿಸಿತು.
ಈರ‌್ಯಾನ ನಂಬಿಕಸ್ತ ಭಂಟರಾಗಿ ಹೆಚ್.ಮಲ್ಲಿಕಾರ್ಜುನ್ ಮತ್ತು ಚಿದಾನಂದ, ಓಲೆಕಾರ ತಲವಾರ ಸಂಕನಾಗಿ ಕಾ.ರಾ.ನಾಗರಾಜ್ ಚಿಕ್ಕ ಪಾತ್ರವಾದರೂ ಚೊಕ್ಕವಾಗಿ ಮಾಡಿದ್ದಾರೆ. ಮಲ್ಲನ ಗೌಡರ ಮಗಳು ಮಲ್ಲವ್ವನಾಗಿ ದೀಪ್ತಿ ಶ್ರೀಹರ್ಷ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದರು. ತಮ್ಮ ಭಾವ ಪೂರ್ಣ ಅಭಿನಯ ಮಾಡಿದಲ್ಲದೆ ಕೊನೆಯ ಎರಡು ದೃಶ್ಯದಲ್ಲಿ ಅವರ ರೌದ್ರಾವತಾರದ ಭಾವಾಭಿನಯ, ವಿಕಟ ನಗೆ, ಆಂಗಿಕ ಅಭಿನಯ, ಸಭಿಕರ ಮನದಲ್ಲಿ ಬಹಳ ಕಾಲ ನೆನೆಪಿನಲ್ಲಿ ಉಳಿಯುವಂತೆ ಮಾಡಿತು. ಜೊತೆಗೆ ತಾನೊಬ್ಬ ಸಮರ್ಥ ಮತ್ತು ಪರಿಪಕ್ವ ನಟಿ ಎನ್ನುವುದನ್ನು ಅವರು ಸಾಬೀತುಪಡಿಸಿದರು. ಇಡೀ ನಾಟಕಕ್ಕೆ ಜೀವಕಳೆ ತುಂಬಿದ್ದೇ ಅವರ ಪಾತ್ರ.
ಮಲ್ಲವ್ವನ ಅತ್ತಿಗೆ ನೀಲವ್ವನಾಗಿ ಮಮತಾ (ಸುನೀತಾ) ಗಿರೀಶ್ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ. ನಾಟಕದಲ್ಲಿ ಎಲ್ಲ ಪಾತ್ರವನ್ನು ಅಚ್ಚುಕಟ್ಟಾಗಿ ದೃಶ್ಯಕ್ಕೆ ತಕ್ಕಂತೆ ಸಮರ್ಥವಾಗಿ ನಿಭಾಯಿಸಿರುವುದು ನಾಟಕದ ಪ್ಲಸ್ ಪಾಯಿಂಟ್ ಎನ್ನಬಹುದು.
ಈ ನಾಟಕದ ರಚನೆ, ವಿನ್ಯಾಸ, ಸಂಗೀತ, ನಿರ್ದೇಶನ ಎಸ್.ಜಿ.ಶಂಕರಮೂರ್ತಿ ಅವರದ್ದಾಗಿದ್ದು ಎಂದಿನಂತೆ ಅವರು ತಮ್ಮ ಜೀವನದ ಅನುಭವವನ್ನು ಇಲ್ಲಿ ಸಂಪೂರ್ಣ ಧಾರೆ ಎರೆದು ನಾಟಕದ ಶ್ರೀಮಂತಿಕೆಗೆ ಕಾರಣಕರ್ತರಾಗಿದ್ದಾರೆ , ಬೆಳಕು ವಿನ್ಯಾಸ ಹೆಚ್.ಬಿ.ಉಮೇಶ್ ರಾವ್, ಸಹಾಯಕ ನಿರ್ದೇಶನ ವಿರುಪಾಕ್ಷಯ್ಯ ಹಿರೇಮಠ ಅವರದು. ನಾಟಕದ ಧ್ವನಿ ಮುದ್ರಣದಿಂದ ಕೂಡಿದ್ದರಿಂದ ಎಲ್ಲೂ ಸಂಭಾಷಣೆ, ಅಸ್ಪಷ್ಟ ಮಾತು, ಮೈಕ್ ಸಮಸ್ಯೆ ಎದುರಾಗಲಿಲ್ಲ. ಹಿನ್ನೆಲೆ ಗಾಯನವನ್ನು (ಜಾನಪದ ಗೀತೆ) ಬಹು ಸುಂದರವಾಗಿ ಹಾಡಿದ್ದು, ಎಲ್ಲರೂ ಗುನುಗುನಿಸುವಂತೆ ಮಾಡಿತು.
ನಾಟಕವನ್ನು ಧ್ವನಿ ಮುದ್ರಣ ಮಾಡುವುದಕ್ಕಿಂತ ಸಹಜವಾಗಿಯೇ ನಟರು ತಮ್ಮ ಧ್ವನಿಯ ಮೂಲಕ ಅಭಿನಯಿಸಬೇಕಿತ್ತು. ಇದರಿಂದ ನಾಟಕಕ್ಕೆ ಇನ್ನಷ್ಟು ಕಳೆಕಟ್ಟುತ್ತಿತ್ತು. ಈ ನಾಟಕದಲ್ಲಿ ಕಲಾವಿದರು ಮಾತನಾಡದೆ ಕೇವಲ ಮಾತನಾಡುವಂತೆ ತುಟಿ ಚಲನೆ ಮಾಡಿದ್ದು ಕಂಡುಬಂದಿತು ಧ್ವನಿಮುದ್ರಣದ ಪ್ರದರ್ಶನ ಹೊಸ ಬಗೆಯಾಗಿ ಗೋಚರಿಸಿತು. ಇದೊಂದನ್ನು ಬಿಟ್ಟರೆ ಅನುಭವಿ ನಿರ್ದೇಶನ, ಕಲಾವಿದರು ಮೇಳೈಸಿದ ಪ್ರದರ್ಶನ ಇದಾಗಿತ್ತು.
.......................................















