Friday, 15 December 2017

ಜಿಲ್ಲಾ ಜೆಡಿಎಸ್‌ನಲ್ಲಿ ಮತ್ತೆ ಭಿನ್ನರಾಗ
* ಜಿಲ್ಲಾಧ್ಯಕ್ಷರ ನಿರ್ಧಾರಗಳಿಗೆ ಬೇಸರ* ವಲಸೆ ಬಂದವರಿಗೆ ಮಣೆ 


  ಜಿಲ್ಲಾ ಜೆಡಿಎಸ್ ಇನ್ನೇನು ಬಲಿಷ್ಠವಾಗುತ್ತಿದೆ. ಉತ್ತಮ ರೀತಿಯಲ್ಲಿ ಸಂಘಟನೆಯಾಗುತ್ತಿದೆ ಎಂದುಕೊಳ್ಳುವ ವೇಳೆಯೇ ಭಿನ್ನರಾಗ ಮೂಡಿದೆ. ಶಿವಮೊಗ್ಗ ನಗರ ಘಟಕದ ವಿಸರ್ಜನೆ ಸಂಬಂಧ ಜಿಲ್ಲಾಧ್ಯಕ್ಷ ನಿರಂಜನ್ ವಿರುದ್ಧ ಹಲವರು ಕಿಡಿಕಾರುತ್ತಿದ್ದಾರೆ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ತಮಗೆ ಅಧಿಕಾರವಿಲ್ಲದಿದ್ದರೂ ವಿಸರ್ಜನೆ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇದನ್ನು ಸರಿಮಾಡಲು ಮತ್ತೆ ರಾಜ್ಯ ನಾಯಕರೇ ಧಾವಿಸುವಂತಾಗಿದೆ. ಒಂದೆಡೆ ಶಾಸಕ ಮಧು ಬಂಗಾರಪ್ಪ ಮತ್ತು ಶಾಸಕಿ ಶಾರದಾ ಪೂರ‌್ಯಾ ನಾಯ್ಕ್ ಏಕತೆಗೆ ಶ್ರಮಿಸುತ್ತಿದ್ದರೆ ಇನ್ನೊಂದೆಡೆ ಇಂತಹ ವಿಚಿತ್ರ ನಿರ್ಧಾರದಿಂದ ಅವರೂ ಸಹ ರೋಸಿಹೋಗಿದ್ದಾರೆ.



ಜಿಲ್ಲಾ ಜೆಡಿಎಸ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನ ಬೇಸರ ಉಂಟು ಮಾಡಿದೆ. ಇದು ಪಕ್ಷದ ಸಂಘಟನೆಗೆ ಧಕ್ಕೆ ಉಂಟು ಮಾಡಲಿದೆ. ಹಿರಿಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಭಿನ್ನಾಭಿಪ್ರಾಯ ಶಮನ ಮಾಡಲಾಗುವುದು.  ನಗರ ಸಮಿತಿಯ ವಿಸರ್ಜನೆಗೆ ಸಂಬಂಧಿಸಿದಂತೆ ತಮಗೆ ಹೆಚ್ಚಿನ ಮಾಹಿತಿಯಿಲ್ಲ. ಪಕ್ಷದ ವೇದಿಕೆಯಲ್ಲಿ ಕುಳಿತು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು
ಎಂ.ಶ್ರೀಕಾಂತ್  - ಜೆಡಿಎಸ್  ರಾಜ್ಯ ಪ್ರಧಾನ ಕಾರ್ಯದರ್ಶಿ



ಪಕ್ಷದಲ್ಲಿ ಯಾವ ಭಿನ್ನಮತವೂ ಇಲ್ಲ. ಸುಬ್ಬೇಗೌಡರನ್ನು ರಾಜ್ಯ ಪದಾಧಿಕಾರಿಯನ್ನಾಗಿ ಮಾಡಲಾಗಿದೆ. ನರಸಿಂಹಮೂರ್ತಿ 80ರ ದಶಕದಲ್ಲಿ ಜನತಾಪಕ್ಷದಲ್ಲೇ ಇದ್ದರು. ಅವರು ವಲಸಿಗರಲ್ಲ. ಪಕ್ಷ ನಡೆಸಲು ಸಮರ್ಥರು ಎಂಬ ಕಾರಣಕ್ಕೆ ಅವರನ್ನು ನೇಮಿಸಲಾಗಿದೆ. ಇದರಲ್ಲಿ ಯಾವ ದುರುದ್ದೇಶವೂ ಇಲ್ಲ. ಎಲ್ಲವೂ ಚೆನ್ನಾಗಿದೆ. ಸಂಘಟನೆ ನಡೆಯುತ್ತಿದೆ.
- ನಿರಂಜನ್, ಜಿಲ್ಲಾಧ್ಯಕ್ಷ  

 ಜೆಡಿಎಸ್‌ನಲ್ಲಿ ಜಿಲ್ಲಾಧ್ಯಕ್ಷರ ವಿರುದ್ಧ ಅವರು ಆಯ್ಕೆಯಾದ ದಿನದಿಂದಲೂ ಒಂದಲ್ಲ ಒಂದು ರೀತಿಯ ಅಸಮಾಧಾನ ಕೇಳಿಬರುತ್ತಲೇ ಇದೆ. ಅವರ ಕಾರ್ಯವೈಖರಿ ಬಗ್ಗೆ ಕಾರ್ಯಕರ್ತರು ಇರಲಿ, ನಾಯಕರಿಗೂ ಸಮಾಧಾನವಿಲ್ಲ. ಅವರ ಕೆಲವೊಂದು ನಿರ್ಧಾರಗಳು ಒಮ್ಮಿಂದೊಮ್ಮೆಗೆ ಪ್ರಕಟವಾಗಿ ಪಕ್ಷದಲ್ಲಿ ಅಂತಃಕಲಹಕ್ಕೆ ಕಾರಣವಾಗುತ್ತಿದೆ.
ಇದಕ್ಕೊಂದು ತಾಜಾ ಉದಾಹರಣೆ ಮೊನ್ನೆಯಷ್ಟೇ ಶಿವಮೊಗ್ಗ ನಗರಾಧ್ಯಕ್ಷ ಎ.ಟಿ. ಸುಬ್ಬೇಗೌಡ ಅವರನ್ನು ಬದಲಾಯಿಸಿದ್ದು. ಸುಬ್ಬೇಗೌಡ ಅಧ್ಯಕ್ಷರಾಗಿ ಕೇವಲ ಮೂರು ತಿಂಗಳಾಗಿತ್ತು. ಮಾಹಿತಿ ಇಲ್ಲದ ಏಕಾಏಕಿ ಅವರನ್ನು ತೆಗೆದು ಹಾಕಿ ಆ ಸ್ಥಾನಕ್ಕೆ ನಗರಪಾಲಿಕೆ ಸದಸ್ಯ  ನರಸಿಂಹಮೂರ್ತಿ (ಬಾಬಣ್ಣ) ಅವರನ್ನು ತಂದು ಕೂಡ್ರಿಸಲಾಗಿದೆ. ಅವರಿಗೆ ಪಟ್ಟಾಭಿಷೇಕವೂ ಆಗಿಹೋಗಿದೆ. ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾರ್ಯನಿರ್ವಹಿಸಿದರೆ ಅದು ಭಿನ್ನಮತದ ಆರಂಭಕ್ಕೆ ಕಹಳೆ ಊದುತ್ತದೆ ಎನ್ನುವ ವಿಚಾರ ಗೊತ್ತಿಲ್ಲದವರಂತೆ ಜಿಲಾಧ್ಯ್ಯಕ್ಷ ನಿರಂಜನ್ ಅವರು ನಿರ್ಣಯ ತೆಗೆದುಕೊಳ್ಳುತ್ತಿರುವುದು ಪಕ್ಷದ ಸಂಘಟನೆ ಮೇಲೆ ಗಂಭೀರ ಪರಿಣಾಮ ಬೀರಲಿದೆ.
 ಸುಬ್ಬೇಗೌಡ ಅವರು ಉತ್ತಮ ಕಾರ್ಯನಿರ್ವಹಣೆಯಲ್ಲೇ ಇದ್ದರು. ಮನೆಮನೆಗೆ ತಮ್ಮ ಆಪ್ತರು ಮತ್ತು ವಾರ್ಡಿನ ಜೆಡಿಎಸ್ ಕಾರ್ಯಕರ್ತರನ್ನು ಸೇರಿಸಿಕೊಂಡು ತೆರಳಿ ಸಂಘಟನೆ ಮಾಡುವ ಕೆಲಸಕ್ಕೆ ಕೈ ಹಾಕಿದ್ದರು. ಆದರೆ ಇದೇ ಅವರಿಗೆ ಮುಳುವಾದಂತಿದೆ. ಸುಬ್ಬೇಗೌಡರನ್ನು ಕೇಳಿದರೆ ಕಾರಣ ತಮಗೆ ತಿಳಿದೇ ಇಲ್ಲ ಎನ್ನುತ್ತಾರೆ. ನಿರಂಜನ್ ಅವರು ಕಾರಣ ನೀಡಿ ಅಥವಾ ಅವರಿಗೆ ಉನ್ನತ ಹುದ್ದೆ ನೀಡಿ ಕೆಳಗಿಳಿಸಬಹುದಿತ್ತು. ಆದರೆ ತಮ್ಮ ಕೆಲವು ಆಪ್ತರ  ಮಾತನ್ನು ಕೇಳಿ ಈ ಬದಲಾವಣೆ ಮಾಡಿದ್ದಾರೆಂಬ ಮಾತು ಕೇಳಿಬರುತ್ತಿದೆ. ಸುಬ್ಬೇಗೌಡ ಅವರು ಈ ಬಗ್ಗೆ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೂ ದೂರು ನೀಡಿದ್ದಾರೆ. ಇದನ್ನು ಶಾಸಕ ಮಧು ಬಂಗಾರಪ್ಪ ಮೂಲಕ ಶಮನಗೊಳಿಸುವುದಾಗಿ ಕುಮಾರಸ್ವಾಮಿ ಭರವಸೆ ಕೊಟ್ಟಿದ್ದಾರಂತೆ. ಆದರೆ ಸುಬ್ಬೇಗೌಡ ಮಾತ್ರ ನಾಯಕರ ವರ್ತನೆಯಿಂದ ರೋಸಿಹೋಗಿದ್ದಾರೆ.
ಪಕ್ಷದ ಕೆಲಸ ಮಾಡುವ ಇಚ್ಛೆಯಿಲ್ಲದವರೇ ಹೆಚ್ಚುತ್ತಿರುವ, ಆಸಕ್ತಿಯಿಂದ ಸಂಘಟನೆ ಮಾಡುವವರೇ ಇಲ್ಲವಾದ ಇಂದಿನ ದಿನಮಾನದಲ್ಲಿ ಅಂತಹವರನ್ನೇ ಕೆಲಸಕ್ಕೆ ಮುಂದಾದವರನ್ನೇ ಕೈಬಿಟ್ಟರೆ ಪಕ್ಷದ ಗತಿಯೇನು ಎನ್ನುವುದನ್ನು ನಿರಂಜನ್ ಯೋಚಿಸಬೇಕಿತ್ತು. ಅವರಿಗೆ ರಾಜ್ಯ ಪದಾಧಿಕಾರಿ ಹುದ್ದೆ ಕೊಡಲಾಗಿದೆ ಎಂದು ನಿನ್ನೆ ಸಮಜಾಯಿಶಿ ನೀಡಿದ್ದಾರೆ. ಆದರೆ ಹುದ್ದೆ ಕೊಟ್ಟ ಬಗ್ಗೆ ಅವರಿಗೆ ಮೊದಲೇ ತಿಳಿಸಬೇಕಿತ್ತಲ್ಲವೇ. ಅವರನ್ನು ತಣಿಸುವುದಕ್ಕಾಗಿ ಈಗ ಹುದ್ದೆ ಕೊಡಲಾಗಿದೆ.
ನರಸಿಂಹಮೂರ್ತಿ ಪಕ್ಷೇತರರಾಗಿ ಪಾಲಿಕೆಗೆ ಗೆದ್ದುಬಂದು ಕಾಂಗ್ರೆಸ್ ಬೆಂಬಲಿಸಿದ್ದರು. ಆನಂತರ ಬಿಜೆಪಿ ಸೇರಿದರು. ಅಲ್ಲಿಯೂ ಸೇರಿಬರದೆ ಮತ್ತೆ ಸ್ವತಂತ್ರರಾದರು. ಕೆಲವು ತಿಂಗಳ ಹಿಂದೆಯಷ್ಟೇ ಪಕ್ಷ ಸೇರಿದವರು. ಅವರಿಗೆ ಈಗ ನಗರ ಘಟಕದ ಅಧ್ಯಕ್ಷ ಸ್ಥಾನ. ಹೇಗಿದೆ ನೋಡಿ ರಾಜಕೀಯ! ವಲಸೆ ಬಂದವರಿಗೆ ಮೂರ್ನಾಲ್ಕು ತಿಂಗಳಲ್ಲೇ ಹುದ್ದೆ ಕೊಡುವುದಾದರೆ  ಮೂಲ ಕಾಯಕರ್ತರಿಗೇನು ಬೆಲೆ ಬಂತು? ಪಕ್ಷದಲ್ಲಿ ಮೂಲ ಕಾರ್ಯಕರ್ತರು ಸಾಕಷ್ಟಿದ್ದಾರೆ. ಅವರನ್ನು ಗುರುತಿಸುವ ಕೆಲಸವನ್ನು ಮಾಡದೆ ವಲಸೆ ಬಂದವರಿಗೆ ಮಣೆ ಹಾಕಿದರೆ ಸಂಘಟನೆಯಿಂದ ಹಿಂದೆ ಸರಿಯುತ್ತಾರೆ. ಇನ್ನು ಮುಂದುವರೆದರೆ ಬೇಸರದಿಂದ ಪಕ್ಷವನ್ನೂ ತೊರೆಯಬಹುದು. ಈ ವಿಚಾರ ನಿರಂಜನ್ ಅವರಿಗೆ ಗೊತ್ತಿಲ್ಲವೇ?
ಈಗ ಅವರು ಮಾಡಿಕೊಂಡ ಅನಾಹುತದಿಂದ ಖಂಡಿತ ಪಕ್ಷಕ್ಕೆ ನಷ್ಟವಾಗಲಿದೆ. ಇದನ್ನು ಸರಿಪಡಿಸಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ. ಸುಬ್ಬೇಗೌಡರ ಜೊತೆ ಇದ್ದಷ್ಟು ಕಾರ್ಯಕರ್ತರು ಮೂರ್ತಿ ಜೊತೆ ಇಲ್ಲ. ಸುಬ್ಬೇಗೌಡ ಪತ್ರಿಕಾಗೋಷ್ಠಿ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದರು. ಆಗ ಹಾಜರಿದ್ದು ಬೆಂಬಲಿಸಿದ್ದ ಪಾಲಿಕೆ ಸದಸ್ಯರಾದ ನಾಗರಾಜ ಕಂಕಾರಿ ಮತ್ತು ಫಾಲಾಕ್ಷಿ ಅಧ್ಯಕ್ಷ ನಿರಂಜನ್ ಕರೆದ ಪತ್ರಿಕಾಗೋಷ್ಠಿಯಲ್ಲೂ ಹಾಜರಿದ್ದು ತಮ್ಮ ದ್ವಂದ್ವ ನಿಲುವನ್ನು ಪ್ರದರ್ಶಿಸಿದ್ದಾರೆ.
ಒಬ್ಬರಿಗೆ ಒಂದೇ ಹುದ್ದೆ ಎನ್ನುವ ನಿರಂಜನ್, ಮೂರ್ತಿ ಪಾಲಿಕೆ ಸದಸ್ಯ ಎನ್ನುವುದು ಗೊತ್ತಿದ್ದೂ ನಗರಾಧ್ಯಕ್ಷ ಸ್ಥಾನ ನೀಡಿದ್ದಾರೆ. ಇದರರ್ಥ ಏನೆನ್ನುವುದನ್ನು ಊಹಿಸಬಹುದು. ಪಕ್ಷದಲ್ಲಿ ಮುಸ್ಲೀಮರು ಸಾಕಷ್ಟಿದ್ದಾರೆ. ಅವರಿಗೆ ಹುದ್ದೆ ಕೊಡಬಹುದಿತ್ತು ಎಂಬ ಮಾತು ಸಹ ಕೇಳಿಬರತೊಡಗಿದೆ. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ 60 ಸಾವಿರದಷ್ಟಿದೆ. ಮುಸ್ಲಿಂ ಸಮುದಾಯದವರನ್ನು ಅಧ್ಯಕ್ಷರನ್ನಾಗಿ ನೇಮಿಸಿದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಮತಗಳಿಕೆಗೆ ಸಹಕಾರಿಯಾಗುತ್ತಿತ್ತೇನೋ. ಇವೆಲ್ಲವುಗಳ ಪರಿಣಾಮ ಮುಂದಿನ ತಿಂಗಳ ಆರಂಭದಲ್ಲಿ ಗೊತ್ತಾಗಲಿದೆ ಎಂದು ಪಕ್ಷದ ಕೆಲವು ಮುಖಂಡರೇ ಹೇಳುತ್ತಿದ್ದಾರೆ.
ಈಗ ಚುನಾವಣಾ ಹೊಸ್ತಿಲಿನಲ್ಲಿರುವುದರಿಂದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪಕ್ಷವನ್ನು ಸಜ್ಜುಗೊಳಿಸುವ ಕಾರ್ಯ ನಡೆಸಬೇಕಾಗಿದ್ದ ನಿರಂಜನ್, ಅನಗತ್ಯವಾಗಿ ಅಸಮಾಧಾನ ಸ್ಫೋಟಗೊಳ್ಳುವಂತೆ ಮಾಡಿಕೊಂಡಿದ್ದಾರೆ. ಇದು ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಜೊತೆಗೆ ಪರಿಣಾಮಕಾರಿ ಸಂಘಟನೆಗೆ ತೀವ್ರ ಹಿನ್ನೆಡೆಯಾಗಲಿದೆ. ಪಕ್ಷಾಂತರಕ್ಕೆ ನಾಂದಿಯಾಗಲೂಬಹುದು. 
........................

No comments:

Post a Comment