ನಗರಕ್ಕೆ ಪೊಲೀಸ್ ಕಮಿಷನರೇಟ್?
ಶಿವಮೊಗ್ಗ- ಭದ್ರಾವತಿ ಸೇರಿಸಿ ಪೊಲೀಸ್ ಕಮಿಷನರೇಟ್ ಸ್ಥಾಪಿಸಬಹುದಾಗಿದೆ. ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳು ಇಲ್ಲಿವೆ. ಅಪರಾಧ ಕೃತ್ಯ ಒಂದೇ ಸಮನೆ ಹೆಚ್ಚುತ್ತಿವೆ. ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಯೊಬ್ಬರಿಂದಲೇ ಇವುಗಳನ್ನು ನಿಗ್ರಹಿಸುವುದು ಮತ್ತು ಉಳಿದ ತಾಲೂಕುಗಳ ವ್ಯವಸ್ಥೆಯತ್ತ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಮಿಷನರೇಟ್ ಸ್ಥಾಪನೆಯ ಚಿಂತನೆ ನಡೆದಿದೆ. ಸ್ವತಃ ಎಸ್ಪಿ ಅಭಿನವ್ ಖರೆ ಅವರೇ ಈ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ.
ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಮತ್ತು ಮಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಕಚೇರಿ ಇದೆ. ಶಿವಮೊಗ್ಗ- ಭದ್ರಾವತಿ ಈ ಎರಡೂ ನಗರಗಳ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದೇ ಜಿಲ್ಲಾ ಪೊಲೀಸರಿಗಿರುವ ದೊಡ್ಡ ತಲೆನೋವು. ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಇಂತಹ ಸ್ಥಿತಿ ಇಲ್ಲ
* ದತ್ತಾತ್ರೇಯ ಹೆಗಡೆ
ರಾಜ್ಯದಲ್ಲಿ ಅತ್ಯಂತ ಹೆಚ್ಚು ಅಪರಾಧ ಕೃತ್ಯಗಳು ನಡೆಯುವ ಎರಡನೆಯ ಜಿಲ್ಲೆ ಎಂಬ ಕುಖ್ಯಾತಿ ಶಿವಮೊಗ್ಗ ಜಿಲ್ಲೆಗೆ ಅಂಟಿಕೊಂಡಿದೆ. ಬೆಂಗಳೂರು ನಗರಕ್ಕೆ ಮೊದಲ ಸ್ಥಾನವಿದೆ. ಆದರೆ ಅಲ್ಲಿ ಪೊಲೀಸ್ ಆಯುಕ್ತರ (ಕಮಿಷನರ್) ಕಚೇರಿ ಇದೆ. ಶಿವಮೊಗ್ಗದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠರ ಕಚೇರಿಯಿದ್ದು. ಎಸ್ಪಿಯವರೇ ಜಿಲ್ಲಾ ಪೊಲೀಸ್ ಮುಖ್ಯಸ್ಥರು. ಇತ್ತೀಚಿನ ವರ್ಷಗಳಲ್ಲಿ ಅಪರಾಧ ಕೃತ್ಯಗಳು ಜಿಲ್ಲೆಯಲ್ಲಿ ಒಂದೇ ಸಮನೆ ಹೆಚ್ಚುತ್ತಿವೆ. ದಕ್ಷ ಎಸ್ಪಿ ಆಗಮಿಸಿದರೂ ಸಹ ನಿಗ್ರಹ ಸಾಧ್ಯವಾಗುತ್ತಿಲ್ಲ. ಒಂದೆಡೆ ಕೊಲೆ, ಸುಲಿಗೆ, ಕಳ್ಳತನ, ಜೂಜು, ಮತ್ತೊಂದೆಡೆ ರೌಡಿಸಂ, ಮಗದೊಂದೆಡೆ, ಮಾಫಿಯಾಗಳ ಹಾವಳಿ. ಇವೆಲ್ಲಕ್ಕೂ ಕಡಿವಾಣ ಹಾಕುವುದು ಜಿಲ್ಲಾ ಪೊಲೀಸರಿಂದ ಸಾಧ್ಯವಾಗುತ್ತಿಲ್ಲ.
ಹಾಲಿ ಜಿಲ್ಲಾ ಪೊಲೀಸ್ ವರಿಷ್ಠರಾಗಿರುವ ಅಭಿನವ್ ಖರೆ ಶಿವಮೊಗ್ಗ ಮತ್ತು ಭದ್ರಾವತಿಯನ್ನು ಸೇರಿಸಿ ಪೊಲೀಸ್ ಕಮೀಷನರ್ ಕಚೇರಿಯನ್ನು ತೆರೆಯುವ ಬಗ್ಗೆ ರೂಪುರೇಶೆ ಸಿದ್ಧಪಡಿಸುತ್ತಿದ್ದಾರೆ. ಬೆಳೆಯುತ್ತಿರುವ ಈ ಎರಡೂ ನಗರಗಳು ಅಪರಾಧಿಗಳ ತವರು ಎಂಬಂತಾಗುತ್ತಿವೆ. ಇಲಾಖೆಯ ಪ್ರಕಾರ ಭದ್ರಾವತಿಯಲ್ಲಿ ಕಳ್ಳರು, ಪುಂಡರು, ಅಕ್ರಮ ಚಟುವಟಿಕೆಗಳು ಹೆಚ್ಚು. ಈ ಹಿನ್ನೆಲೆಯಲ್ಲಿ ಎರಡೂ ನಗರಗಳನ್ನು ಸೇರಿಸಿ ಕಮಿಷನರೇಟ್ ತೆರೆದರೆ ಇವುಗಳನ್ನು ಹತ್ತಿಕ್ಕುವುದು ಸುಲಭವಾಗುತ್ತದ ಎಂಬ ನಿರ್ಧಾರಕ್ಕೆ ಬಂದಿರುವ ಎಸ್ಪಿಯವರು ಇದಕ್ಕೆ ಮುನ್ನುಡಿ ಬರೆಯಲಾರಂಭಿಸಿದ್ದಾರೆ.
ಮೊದಲೇ ಕೋಮು ಸೂಕ್ಷ್ಮ ಪ್ರದೇಶ ಎಂದು ಈ ಎರಡೂ ನಗರಗಳಿಗೆ ಹಣೆಪಟ್ಟಿ ಅಂಟಿಕೊಂಡಿದೆ. ಅದರಲ್ಲೂ ರಾಜಕೀಯ ಮತ್ತು ಧಾರ್ಮಿಕ ವಿಚಾರಗಳಿಗೆ ನಡೆಯುವ ಗಲಭೆ, ಗಲಾಟೆಗಳೇ ಹೆಚ್ಚು. ಗಣೇಶ ವಿಸರ್ಜನೆಯ ದಿನಗಳಲ್ಲಿ ಆತಂಕದ ವಾತಾವರಣ ನೆಲೆಸಿರುತ್ತದೆ. ಇದಕ್ಕಾಗಿ ಪೊಲಿಸರಿಗೆ ಸುಮಾರು ಒಂದು ತಿಂಗಳು ಬೇರೆ ಚಿಂತನೆ ಮಾಡಲು ಅವಕಾಶವೇ ಇರುವುದಿಲ್ಲ. ಮುಸ್ಲಿಂ ಹಬ್ಬಗಳಲ್ಲೂ ಇದೇ ಸ್ಥಿತಿ. ಕೆಎಸ್ಸಾರ್ಪಿ ತುಕಡಿಯೇ ಮಾಚೇನಹಳ್ಳಿಯಲ್ಲಿ ಇದ್ದರೂ ಕೇವಲ ಬಂದೋಬಸ್ತ್ಗಾಗಿಯೇ ಹೆಚ್ಚಿನ ಪಡೆಯನ್ನು ಇಟ್ಟುಕೊಳ್ಳುವ ಸ್ಥಿತಿ ಇದೆ. ಜೊತೆಗೆ ದಕ್ಷಿಣ ವಲಯದ ಇತರೆ ಜಿಲ್ಲೆಗಳಿಂದಲೂ ಹೆಚ್ಚಿನ ತುಕಡಿಗಳು ಇಲ್ಲಿಗೆ ಬರುವಂತಾಗಿದೆ.
ನಗರದಲ್ಲಿ ಗಲಭೆಗಳು ಮೂರ್ನಾಲ್ಕು ವರ್ಷಗಳಿಗೊಮ್ಮೆ ಸಂಭವಿಸುತ್ತಿರುವುದರಿಂದ ಅವುಗಳನ್ನು ಸಮರ್ಥವಾಗಿ ನಿಭಾಯಿಸಲು ಇಡೀ ಜಿಲ್ಲೆಯ ಉಸ್ತುವಾರಿ ಹೊತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠರೊಬ್ಬರಿಂದಲೇ ಸಾಧ್ಯವಾಗುವುದಿಲ್ಲ. ಹೊರ ಜಿಲ್ಲೆಯ ದಿಟ್ಟ ಅಧಿಕಾರಿಗಳೇ ಬರಬೇಕಾದ ಅನಿವಾರ್ಯತೆ ಇದೆ. ಇದು ಹಲವು ಸಂದರ್ಭದಲ್ಲಿ ಸಾಬೀತಾಗಿದೆ. ಸಮರ್ಥ ರೀತಿಯಲ್ಲಿ ಇಂತಹ ಗಲಭೆಗಳನ್ನು ಹತ್ತಿಕ್ಕಲು ನಗರಕ್ಕಷ್ಟೇ ಸೀಮಿತವಾಗುವ ಕಮಿಷನರೇಟ್ ಇದ್ದರೆ ಸಾಧ್ಯ.
ಕಮಿಷನರ್ ಕಚೇರಿ ಬಂದರೆ ಅನುಭವಿ ಐಪಿಎಸ್ ಅಧಿಕಾರಿ ಕಮೀಷನರ್ ಆಗಿ ಬರುತ್ತಾರೆ. ಅವರ ಅಡಿಯಲ್ಲಿ ಒಬ್ಬ ಉಪ ಆಯುಕ್ತರು ಮತ್ತು ಇನ್ನಿಬ್ಬರು ಸಹಾಯಕ ಆಯುಕ್ತರು, ಜೊತೆಗೆ ಟ್ರಾಫಿಕ್ಗೂ ಒಬ್ಬ ಸಹಾಯಕ ಆಯುಕ್ತರ ಹುದ್ದೆ ಸೃಷ್ಟಿಯಾಗುತ್ತದೆ. ಆಗ ಈಗಿರುವ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಶಿವಮೊಗ್ಗ ನಗರ ಹೊರತಾಗಿ ಉಳಿದ ತಾಲೂಕುಗಳತ್ತ ಗಮನ ಹರಿಸಲು ಸಾಧ್ಯವಾಗುತ್ತದೆ.
ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಮತ್ತು ಮಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಕಚೇರಿ ಇದೆ. ಶಿವಮೊಗ್ಗ- ಭದ್ರಾವತಿ ಈ ಎರಡೂ ನಗರಗಳ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದೇ ಜಿಲ್ಲಾ ಪೊಲೀಸರಿಗಿರುವ ದೊಡ್ಡ ತಲೆನೋವು. ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಇಂತಹ ಸ್ಥಿತಿ ಇಲ್ಲ.
ಇದೆಲ್ಲವನ್ನೂ ಮನಗಂಡು ಕೋಮು ಸೂಕ್ಷ್ಮವೂ ಆಗಿರುವ ಈ ನಗರಕ್ಕೆ ಕಮಿಷನ್ ಹುದ್ದೆ ಮಂಜೂರು ಮಾಡುವುದು ಈಗ ಅನಿವಾರ್ಯವೂ ಆಗಿದೆ. ಸಕಾಲವೂ ಹೌದು. ಪೊಲಿಸ್ ಕಮಿಷನರ್ ಹುದ್ದೆಯು ಬಹುತೇಕ ದೊಡ್ಡ ನಗರಗಳಿಗೆ, ಅದರಲ್ಲೂ ವಿಶೇಷವಾಗಿ ಕೋಮು ಸೂಕ್ಷ್ಮ ಪ್ರದೇಶಗಳಿಗೆ ಮಂಜೂರು ಮಾಡಲಾಗುತ್ತದೆ. ಕಮಿಷನರೇಟ್ ಸ್ಥಾಪಿಸಲು ಸರ್ಕಾರಕ್ಕೆ ಇದು ಸಕಾಲ. ಈ ನಿಟ್ಟಿನಲ್ಲಿ ಮುಂದಡಿ ಇಡಬೇಕಿದೆ.
ಸದ್ಯ ಇವರೆಡೂ ನಗರದ ಹಾಲಿ ಜನಸಂಖ್ಯೆಗೆ ತಕ್ಕಂತೆ ಪೊಲೀಸ್ ಸಿಬ್ಬಂದಿಗಳಿಲ್ಲ, ಠಾಣೆ ಇಲ್ಲ. ಇನ್ನೂ ಎರಡು- ಮೂರು ಪೊಲೀಸ್ ಠಾಣೆಗಳನ್ನು ತೆರೆಯುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಯೋಚಿಸಿರುವ ಎಸ್ಪಿಯವರು, ಇದಕ್ಕೆ ಪ್ರಸ್ತಾವನೆ ಸಿದ್ಧಪಡಿಸಿ ಇಲಾಖೆಗೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ. ಕಮೀಷನರೆಟ್ ತೆರೆದು ಎರಡೂ ನಗರದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸುವಂತೆ ಸರಕಾರ ಮಾಡಬೇಕಿದೆ. ಜನಪ್ರತಿನಿಧಿಗಳೂ ಸಹ ಪಕ್ಷಭೇದ ಮರೆತು ಎಸ್ಪಿ ಅವರ ಈ ಚಿಂತನೆಯನ್ನು ಬೆಂಬಲಿಸಿ ಆದಷ್ಟು ಶೀಘ್ರ ಅನುಷ್ಠಾನಗೊಳ್ಳಲು ಸಹಕರಿಸಬೇಕಿದೆ.
............................................
No comments:
Post a Comment