Thursday, 31 March 2016




ಮೌಲ್ಯಮಾಪನ ಬಹಿಷ್ಕಾರ-’ಗುರು’ ಲಘುವಾಗದಿರಲಿ 

ಯಾವುದೇ ಕಾರಣಕ್ಕೂ ಉಪನ್ಯಾಸಕರು ಮೌಲ್ಯಮಾಪನಕ್ಕೆ ಬಹಿಷ್ಕಾರ ಹಾಕುವುದು ಸಲ್ಲದು. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಗಮನವನ್ನು ಬೇರೆ ರೀತಿಯಿಂದ  ಸೆಳೆಯಬೇಕೇ ಹೊರತು, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವುದು ಸರ್ವಥಾ ಸಲ್ಲದು. ಆದರೆ ಕೆಲವು ವರ್ಷಗಳಿಂದೀಚೆಗೆ ಮೌಲ್ಯಮಾಪನಕ್ಕೆ ಬಹಿಷ್ಕಾರ ಹಾಕುವುದು ಉಪನ್ಯಾಸಕರ ಚಾಳಿಯಾಗಿ ಬಿಟ್ಟಿದೆ. ಖಂಡಿತವಾಗಿಯೂ ಉಪನ್ಯಾಸಕರ ಬೇಡಿಕೆಗೆ ಎಲ್ಲರ ಸಹಮತವೂ ಇದೆ. ಆದರೆ ಉತ್ತರ ಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡ್ಡಿಯಾಗುವಂತೆ ಮಾಡುವುದು ಸರಿಯಾದ ಕ್ರಮವಲ್ಲ ಅನ್ನುವುದಷ್ಟೇ ನಮ್ಮೆಲ್ಲರ ಆಕ್ಷೇಪ. ಏಕೆಂದರೆ ಈ ಬಹಿಷ್ಕಾರದಿಂದಾಗಿ ಉನ್ನತ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಪ್ರತಿಬಾರಿ ಮೌಲ್ಯಮಾಪನದ ವೇಳೆ ಬಹಿಷ್ಕಾರ ಹಾಕುವ ಉಪನ್ಯಾಸಕರ ವಿರುದ್ದ ಸರ್ಕಾರವೂ ಕ್ರಮ ಜರುಗಿಸಬೇಕು. ಇದನ್ನು ಉಪನ್ಯಾಸಕರು ಅರಿತುಕೊಳ್ಳಬೇಕು. ತಮ್ಮ ‘ಮೌಲ್ಯ’ವೇ ಮಾಪನವಾಗುವಂತಹ ತಪ್ಪುಹೆಜ್ಜೆಯನ್ನು ಇಡಬಾರದು. ಈ ಬಾರಿ ವಿದ್ಯಾರ್ಥಿಗಳ ಪೋಷಕರು ಕೂಡ ಉಪನ್ಯಾಸಕರ ಈ ಚಾಳಿಯ ವಿರುದ್ದ ಗರಂ ಆಗಿದ್ದಾರೆ. ಉಪನ್ಯಾಸಕರ ಧರಣಿಗೆ ಪ್ರತಿಧರಣಿ ನಡೆಸಲು  ಕೆಲವು ಸಂಘಟನೆಗಳೂ ಸನ್ನದ್ಧವಾಗಿವೆ. ಸಕಾಲದಲ್ಲಿ ಮೌಲ್ಯಮಾಪನ ಮಾಡಿ, ಸಿಇಟಿ ಮೊದಲಾದ ಪರೀಕ್ಷೆ ಬರೆಯುವವರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಇಲ್ಲವಾದಲ್ಲಿ ಉಪನ್ಯಾಸಕರ ನಿಲುವಿನ ವಿರುದ್ಧ ಆಕ್ರೋಶ ಭುಗಿಲೇಳುವುದು ಖಚಿತ.


  ಇಂದು ಉಪನ್ಯಾಸಕ ವರ್ಗಕ್ಕೆ ಗೌರವಯುತ ವೇತನವಿದೆ. ಸಮಾಜದಲ್ಲಿ ಅತ್ಯಂತ ಪೂಜನೀಯ ಸ್ಥಾನಮಾನವಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಂತಹ ಬಹುದೊಡ್ಡ ಜವಾಬ್ದಾರಿಯಿರುವ ಇವರನ್ನು ಜನರು ಗೌರವದಿಂದ ಕಾಣುತ್ತಾರೆ. ಇವರಿಂದ ಕಲಿತುಹೋದವರು ಸೆಲ್ಯೂಟ್ ಹೊಡೆಯುತ್ತಾರೆ, ಸದಾ ಸ್ಮರಿಸಿಕೊಳ್ಳುತ್ತಾರೆ.  ಆದರೆ ತಮ್ಮದೇ ವಿದ್ಯಾರ್ಥಿಗಳ ಉತ್ತರ ಪತ್ರಿಕೆ  ಮೌಲ್ಯಮಾಪನಕ್ಕೆ ಬಹಿಷ್ಕಾರ ಹಾಕುವ ನಮ್ಮ ಉಪನ್ಯಾಸಕ ಬಂಧುಗಳಿಗೆ ಏನೆನ್ನೋಣ? ಇದು ಪಿಯು ಕಾಲೇಜು ಉಪನ್ಯಾಸಕರ ‘ಮೌಲ್ಯ’ ಮಾಪನ!
1998ರಿಂದ ಬಹುತೇಕ ಪ್ರತಿ ವರ್ಷ ಎಪ್ರಿಲ್ ಬಂತೆಂದರೆ ಸಾಕು-ಪಿಯು ಉಪನ್ಯಾಸಕರ ಬಹಿಷ್ಕಾರದ ಸುದ್ದಿ ರಾಜ್ಯಮಟ್ಟದಲ್ಲಿ ಮೊಳಗುತ್ತದೆ. ಇದರಿಂದ ಅತಿ ಹೆಚ್ಚು ಆತಂಕಿತರಾಗುವವರು ವಿದ್ಯಾರ್ಥಿಗಳ ಪಾಲಕರು, ನಂತರ ವಿದ್ಯಾರ್ಥಿಗಳು. ಏಕೆಂದರೆ, ಅವರು ತಮ್ಮ ಮಕ್ಕಳ ಭವ್ಯ ಭವಿಷ್ಯದ ಕನಸು ಹೊತ್ತಿರುತ್ತಾರೆ. ಎಷ್ಟೋ ಪಾಲಕರು ತಾವು ಕಲಿಯದಿದ್ದರೂ, ಮಕ್ಕಳಾದರೂ ಚೆನ್ನಾಗಿ ಓದಿ ಉನ್ನತ ಸ್ಥಾನಮಾನ ಪಡೆಯಲಿ ಎಂಬ ಮಹದಾಸೆ ಹೊಂದಿರುತ್ತಾರೆ. ವರ್ಷಗಟ್ಟಲೆ ಕಲಿತು ಪರೀಕ್ಷ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುವ ವೇಳೆ ಉಪನ್ಯಾಸಕರ ಬಹಿಷ್ಕಾರ, ಬೆದರಿಕೆ ಕೇಳಿಬರಲಾರಂಭಿಸುತ್ತದೆ. ಹಾಗಂತ ಇವರ ಬೇಡಿಕೆಯ ಪಟ್ಟಿ ದೊಡ್ಡದೇನಿಲ್ಲ.  ಒಂದೇ, ಅದು ವೇತನ ಪರಿಷ್ಕರಣೆ.
ಸಮಾಜದಲ್ಲಿ ಅತ್ಯಂತ ದಟ್ಟ ದರಿದ್ರರಿದ್ದಾರೆ, ಅವತ್ತಿನ ದುಡಿತದಿಂದಲೇ ತಿನ್ನುವ ಜನರಿದ್ದಾರೆ. ಎಷ್ಟೋ ಕಡಿಮೆ ಸಂಬಳ ಪಡೆದು ಬದುಕಿನ ಗಾಡಿ ಓಡಿಸುವ ನೌಕರರಿದ್ದಾರೆ. ಅವರನ್ನು ನೋಡಿಯಾದರೂ ತಮಗೆ ಸಿಗುವ ವೇತನದಿಂದ ಇವರು ತೃಪ್ತಿಪಡಬೇಕಿತ್ತು. ತಾವೇ ಎಷ್ಟೋ ಧನ್ಯರು ಎಂದುಕೊಳ್ಳಬೇಕಿತ್ತು. ಇದರರ್ಥ, ಇವರ ವೇತನ ಪರಿಷ್ಕರಣೆ ಸಲ್ಲದೆಂದಲ್ಲ. ಖಂಡಿತ ಕೇಳಲಿ, ಹೋರಾಡಲಿ. ಇದನ್ನು ಕೇಳಲೂ ವೇಳೆಯಿದೆ; ಹೋರಾಟ ಮಾಡಲೂ ದಾರಿ ಬೇರೆ ಇದೆ. ಪಾಠ ಮಾಡುವಾಗ ಪಾಠ ಮಾಡಬೇಕು, ಅದನ್ನು ಬಿಟ್ಟು ಪಾಠ ಮಾಡದೆ, ತರಗತಿಗೆ ಹಾಜರಾಗದೆ ಬಹಿಷ್ಕರಿಸುವುದು, ಪರೀಕ್ಷೆ ನಡೆಸದೇ ಇರುವುದು, ಮೌಲ್ಯಮಾಪನಕ್ಕೆ ತಡೆಮಾಡುವುದು ಇವೆಲ್ಲ ಖಂಡಿತವಾಗಿ ಈ ಸ್ಥಾನದಲ್ಲಿರುವವರಿಗೆ ಶೋಭೆ ತರುವಂಥದ್ದಲ್ಲ.
 ಒಂದು ಕಾಲಕ್ಕೆ ವಿದ್ಯೆ ಕೂಡ ದಾನವಾಗಿತ್ತು. ಆದರೆ ಯಾವಾಗ ಶಿಕ್ಷಣವೂ ಒಂದು ವೃತ್ತಿಯೆಂದು ಪರಿಗಣಿತವಾಯಿತೋ ಅಂದೇ ಗುರು ಲಘುವಾದ; ಆಚಾರ್ಯ ಆಚೆಗಾದ. ಗುರುವಿನ ಸ್ಥಾನದಲ್ಲಿರುವವರನ್ನು ನಮಿಸುವ ಪರಂಪರೆ ನಮ್ಮದು. ಅದನ್ನು ಉಳಿಸಿಕೊಳ್ಳುವುದು ಅವರ ಕೆಲಸ. ಆದರೆ, ಕಳೆದ ಕೆಲವು ವರ್ಷಗಳಿಂದ ಪಾಠಕ್ಕಿಂತ, ಪರೀಕ್ಷೆಗಿಂತ ವೇತನವೇ ಪ್ರಮುಖವಾಗಿರುವುದು ಆ ವೃತ್ತಿಘನತೆಯ ದುರಂತವೇ ಸರಿ. ಲಘುವಾಗುತ್ತಿರುವ ಗುರುವನ್ನು  ಜನರು ಲೇವಡಿಮಾಡುವ ಸ್ಥಿತಿಗೆ ಶಿಕ್ಷಕರು ಇಳಿಯುತ್ತಿದ್ದಾರೆ.
ಸರ್ಕಾರ ಸಕಾಲದಲ್ಲಿ ವೇತನ ಏರಿಸಲೇಬೇಕು. ಇದರಲ್ಲಿ ಎರಡು ಮಾತಿಲ್ಲ. ಆದರೆ, ಅದಕ್ಕಾಗಿ ಹೋರಾಟದ ಮಾರ್ಗ ಬದಲಾಗಬೇಕು. ಪಾಠ ಪ್ರವಚನದ ಕಾಲದಲ್ಲಿ ಬೆಂಗಳೂರಿಗೆ  ಹೋಗಿ ಸರಣಿ ಪ್ರಕಾರ ಧರಣಿ ಮಾಡಲಿ. ಜಿಲ್ಲಾ ಕೇಂದ್ರದಲ್ಲೂ ಇದನ್ನು ಮಾಡಲಿ. ಆದರೆ ತಮ್ಮ ಧರಣಿ, ಹೋರಾಟದಿಂದ ಒಬ್ಬ ವಿದ್ಯಾರ್ಥಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ನಷ್ಟವಾದಲ್ಲಿ ತಮ್ಮ ಕರ್ತವ್ಯದಲ್ಲಿ ವಿಫಲರಾದಂತಾಗುತ್ತದೆ. ವೇತನಕ್ಕಿಂತ ಕಲಿಸುವುದು ಮುಖ್ಯ ಎನ್ನುವುದನ್ನು ಮೊದಲು ಅರಿಯಬೇಕಿದೆ. ನೀವು ಕಲಿಸಿದರೆ ಮಾತ್ರ ವೇತನವಲ್ಲವೆ? ಕಾಲೇಜಿಗೆ ಬೀಗ ಹಾಕುವಂತೆ ಎಲ್ಲರೂ ಧರಣಿ, ಮುಷ್ಕರ, ಬಹಿಷ್ಕಾರ ಎನ್ನುತ್ತ ಹೋದರೆ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಯಾವ ಪರಿಣಾಮವಾದೀತೆನ್ನುವ ಪರಿಕಲ್ಪನೆಯಾದರೂ ಇದೆಯೇ.  ಜೊತೆಗೆ, ತಾವು ಕಲಿಸುವ ವಿದ್ಯಾರ್ಥಿಗಳಿಗೆ ಅನ್ಯಾಯವನ್ನುಂಟು ಮಾಡಿದಂತಾಗಲಿಲ್ಲವೇ? ಗುರುವನ್ನು ಪೂಜ್ಯರೆಂದು ಕಾಣುವ ಮನೋಭಾವ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಲು ಇಂತಹ ವರ್ತನೆಗಳೂ ಕಾರಣ ಎಂದೆನಿಸುವುದಿಲ್ಲವೇ? ವೇತನ ಆಯೋಗದ ಶಿಫಾರಸ್ಸಿನಂತೆ, ಕುಮಾರ್ ನಾಯ್ಕ  ಸಮಿತಿ ನೀಡಿದ ವರದಿಯಂತೆ ಸರ್ಕಾರ ನಿರ್ಧಾರ ಕೈಗೊಳ್ಳಲು ಇವರು ಒತ್ತ್ತಡ ಹೇರಲಿ. ಅದಕ್ಕೆ ಯಾವ ಸಾರ್ವಜನಿಕರ ಆಕ್ಷೇಪವೂ ಖಂಡಿತ ಇಲ್ಲ.
ಮಾರ್ಚ್  22ರಂದು ಶಿವಮೊಗ್ಗಕ್ಕೆ ಪಿಯು ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ತಿಮ್ಮಯ್ಯ ಪುರ್ಲೆ ಆಗಮಿಸಿದ್ದರು. ಅವರು ಪತ್ರಿಕಾಗೋಷ್ಠಿಯಲ್ಲಿ  ಬರೇ ವಿದ್ಯಾರ್ಥಿಗಳ ಪಾಠ, ಪ್ರವಚನ, ಭವಿಷ್ಯ ಎಂದು ಕುಳಿತರೆ ನಮ್ಮ ಸಮಸ್ಯೆ ಕೇಳುವವರಾರು ಎಂದರು. ಒಬ್ಬ ರಾಜ್ಯಾಧ್ಯಕ್ಷರಿಂದ ಈ ಮಾತನ್ನು ಯಾರೂ ನಿರೀಕ್ಷಿಸಿರಲಿಲ್ಲ್ಲ. ಅಂದರೆ ಇವರಿಗೆ ವೇತನ ಸಮಸ್ಯೆ ಯೊಂದೇ ಅತಿಯಾಗಿ ಕಾಡುತ್ತಿದೆ. ಹಾಗಾಗಿ ಮೌಲ್ಯಮಾಪನದಂತಹ ಜವಾಬ್ದಾರಿಯುತ ಕೆಲಸ ಮುಖ್ಯವಲ್ಲ ಎನ್ನುವುದು ಸಾಬೀತಾಯಿತು. ಹಕ್ಕನ್ನು ಕೇಳುವವನಿಗೆ ಅದಕ್ಕಿಂತ ಮೊದಲು ಹೊಣೆಗಾರಿಕೆಯ ಅರಿವಿರಬೇಕು. ಹೊಣೆಗಾರಿಕೆ ಪೂರೈಸಿದ ಬಳಿಕವೇ ಹಕ್ಕಿನ ನೆನಪಾಗಬೇಕು. ಈ ಎಚ್ಚರದ ಅರಿವು ’ಅರಿವೇ ಗುರು’ ಎಂದು ಪಾಠ ಹೇಳಿದ ಶಿಕ್ಷಕ ಬಂಧುಗಳಿಗೆ ಮರೆತುಹೋದರೆ ಹೇಗೆ? ಅದರಂತೆ ಉಪನ್ಯಾಸಕರಿಗೆ ಕಾರ್ಯಭಾರದ  ಬಗ್ಗೆ ಕೇಳಿದಾಗ ಸಾಕಷ್ಟು ಕೆಲಸ ಮಾಡುತ್ತಿದ್ದೇವೆ ಎಂದರು.  ದಿನಕ್ಕೆರಡು- ಮೂರು ತಾಸು ಪಾಠ ಮಾಡುತ್ತಾರೆ.  ಸರಿಯಾಗಿ ಕಾಲೇಜಿಗೆ ಬರುವುದಿಲ್ಲ. ಬಂದರೂ ಪಾಠ ಮಾಡುವುದಿಲ್ಲ ಎಂಬ ಆರೋಪ ಬಹುತೇಕ ಉಪನ್ಯಾಸಕರ ಮೇಲಿದೆ. ಇದನ್ನು ಸರಿಪಡಿಸುವ ವಿಚಾರ ಇವರ ಸಂಘದಲ್ಲಿಲ್ಲ.
ಕಡೇಪಕ್ಷ  ದಕ್ಷಿಣೆಗೆ ಸರಿಯಾಗಿಯಾದರೂ ಪ್ರದಕ್ಷಿಣೆ ಬರಬೇಕು ತಾನೇ?
 ಹಾಗೆ ನೋಡಿದರೆ ಇತ್ತೀಚೆಗೆ ಈ ವೃತ್ತಿಯನ್ನು ಪ್ರೀತಿಸಿ ಬರುವವರಿಗಿಂತ ಸಾಕಷ್ಟು ರಜೆ ಸಿಗುತ್ತದೆ ಎಂಬ ಕಾರಣಕ್ಕಾಗಿ, ಸರ್ಕಾರದ ಸೌಲಭ್ಯಗಳೆಲ್ಲ ದೊರೆಯುತ್ತವೆ ಎನ್ನುವುದಕ್ಕಾಗಿ ಈ ವೃತ್ತಿಗೆ ಬರುವವರ ಸಂಖ್ಯೆಯೇ ಜಾಸ್ತಿ ಎನ್ನುವುದು ಅಪ್ರಿಯವಾದ ಸತ್ಯ.
ನಿಮ್ಮ ಬೇಡಿಕೆಗಾಗಿ ಸರ್ಕಾರದ ಮೇಲೆ ಒತ್ತಡ ತರಬೇಕೋ ಮೌಲ್ಯಮಾಪನದ ನಂತರ ರಜೆ ಆರಂಭವಾಗುತ್ತದೆ. ಆಗ ಧರಣಿ, ಸತ್ಯಾಗ್ರಹ ಆರಂಭಿಸಿರಿ. ಏಕೆಂದರೆ, ಸುಮಾರು 2 ತಿಂಗಳ ಕಾಲ ವಿವಿಧ ರೀತಿಯ ಪ್ರತಿಭಟನೆಯನ್ನು ನಡೆಸಬಹುದು. ಇದರಿಂದ ವಿದ್ಯಾರ್ಥಿಗಳಿಗೂ ನಷ್ಟವಿಲ್ಲ. ಪಾಲಕರಿಗೂ ಚಿಂತೆ ಇರುವುದಿಲ್ಲ. ಮಾತ್ರವಲ್ಲ, ಆಗ ನಿಮ್ಮ ಜೊತೆಗೆವಿದ್ಯಾರ್ಥಿಗಳು, ಅವರ ಪಾಲಕರು ಮತ್ತು ಸಾರ್ವಜನಿಕರು ನಿಮ್ಮನ್ನು ಬೆಂಬಲಿಸುತ್ತಾರೆ; ನಿಮ್ಮ ಬಲ ಕೂಡ ಸಂವರ್ಧನೆಗೊಳ್ಳುತ್ತದೆ.
..................................


Monday, 28 March 2016

DATTATREYA HEGDE: ಕರುಣೆ ತೋರಿದ ಕಾರುಣ್ಯಾ  ಸೂಪರ್ ಮಿನಿಟ್ ಮೂಲಕ  ರೈತ ಮಹಿಳ...

DATTATREYA HEGDE: ಕರುಣೆ ತೋರಿದ ಕಾರುಣ್ಯಾ
  ಸೂಪರ್ ಮಿನಿಟ್ ಮೂಲಕ  ರೈತ ಮಹಿಳ...
: ಕರುಣೆ ತೋರಿದ ಕಾರುಣ್ಯಾ   ಸೂಪರ್ ಮಿನಿಟ್ ಮೂಲಕ  ರೈತ ಮಹಿಳೆಯ ಸಾಲ ತೀರಿಸಿದ ಚಿತ್ರನಟಿ ರೈತರ ಬಗ್ಗೆ ಉದ್ದುದ್ದ ಮಾತನಾಡುವ, ಆತ್ಮಹತ್ಯೆ ಮಾಡಿಕೊಂಡಾಕ್ಷಣ ರಾಜಕಾರಣ...
ಕರುಣೆ ತೋರಿದ ಕಾರುಣ್ಯಾ
  ಸೂಪರ್ ಮಿನಿಟ್ ಮೂಲಕ  ರೈತ ಮಹಿಳೆಯ ಸಾಲ ತೀರಿಸಿದ ಚಿತ್ರನಟಿ


ರೈತರ ಬಗ್ಗೆ ಉದ್ದುದ್ದ ಮಾತನಾಡುವ, ಆತ್ಮಹತ್ಯೆ ಮಾಡಿಕೊಂಡಾಕ್ಷಣ ರಾಜಕಾರಣ ಮಾಡುವ, ಸರಕಾರದಿಂದ ನೆರವು ದೊರೆಯದಿದ್ದರೆ ಆ ಬಗ್ಗೆ ಹೋರಾಡುವ ಜನರಿದ್ದಾರೆ. ಆದರೆ ತಾವೇ ಮುಂದಾಗಿ ಅವರ ಸಾಲವನ್ನು ತೀರಿಸುವವರಿಲ್ಲ. ಹೋರಾಡಿ ಹಣ ಸಂಗ್ರಹಿಸಿ ಸಾಲ ತುಂಬಿಕೊಟ್ಟ ಸಂಘಟನೆಯವರೂ ಇಲ್ಲ. ಆದರೆ, ಕಿರಗೂರಿನ ಗಯ್ಯಾಳಿಗಳು ಚಿತ್ರದ ನಟಿಯರು ಸಾಲದ ಕಾರಣದಿಂದ ಆತ್ಮಹತ್ಯೆಗೆೆ ಶರಣಾಗಿದ್ದ ದಾವಣಗೆರೆ ಜಿಲ್ಲೆಯ ರೈತನ ಕುಟುಂಬದ  3 ಲಕ್ಷ ರೂ. ಸಾಲವನ್ನು ತೀರಿಸಿದ್ದಾರೆ.  ಸಾಲಮಾಡಿ ಪತಿ ಆತ್ಮಹತ್ಯೆ ಮಾಡಿಕೊಂಡ ನಂತರ ಅದರ ಜವಾಬ್ದಾರಿ ಹೊತ್ತ ಆತನ ಪತ್ನಿ ಲಕ್ಷ್ಮೀಬಾಯಿ ದಿಕ್ಕುತೋಚದ ಸ್ಥಿತಿಯಲ್ಲಿದ್ದಾಗ ಇದನ್ನು ತಿಳಿದು ಆಕೆಯ ಕೈ ಹಿಡಿದವರು ಈ ನಟಿಯರು. ಸಾಲ ತೀರಿಸಿ ಸಮಾಜಕ್ಕೆ ಮಾದರಿಯಾದ, ಹೃದಯವಂತಿಕೆ ಮೆರೆದ  ಈ ನಟಿಯರು ಶ್ರೀಮಂತರಲ್ಲ. ಕಲರ್ಸ್ ಕನ್ನಡ ಚಾನೆಲ್‌ನ ಪ್ರಖ್ಯಾತ ಸೂಪರ್ ಮಿನಿಟ್ ಕಾಂರ್ಕ್ರಮದಲ್ಲಿ ಪಾಲ್ಗೊಂಡು ಅಲ್ಲಿನ ಸ್ಪರ್ಧೆಯಲ್ಲಿ 2 ಲಕ್ಷ ರೂ. ಜಯಿಸಿದ್ದಲ್ಲದೆ, ಚಾನೆಲ್‌ನ ಸಹಾಯದಿಂದ ಇನ್ನೊಂದು ಲಕ್ಷ ರೂ. ವನ್ನು ಹೆಚ್ಚುವರಿಯಾಗಿ ಪಡೆದು ಸಾಲಮರುಪಾವ್ತಿಸಿದ್ದಾರೆ. ಸಮಾಜದಲ್ಲಿ ಮಾನವೀಯತೆ ಇನ್ನೂ ಜೀವಂತವಿದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.  


  ಈ ನಾಡಿನಲ್ಲಿ ರೈತರ ಕಷ್ಟ ಕೇಳುವವರಿಲ್ಲ, ನೆರವಾಗುವವರಿಲ್ಲ, ಒಂದೆಡೆ ಬರಗಾಲದಿಂದ ತತ್ತರಿಸುತ್ತಿದ್ದರೆ, ಇನ್ನೊಂದೆಡೆ ಮಾಡಿಕೊಂಡ ಸಾಲವೆಂಬ ಶೂಲ ಸದಾ ಇರಿಯುತ್ತಿರುತ್ತದೆ. ಮತ್ತೊಂದೆಡೆ, ಸಾಲ ಚುಕ್ತಾಗೊಳಿಸುವಂತೆ ಬ್ಯಾಂಕ್‌ನವರಿಂದ ನೊಟೀಸ್. ಇವೆಲ್ಲವುಗಳ ಪರಿಣಾಮ ರೈತರ ಆತ್ಮಹತ್ಯೆ. ಸದ್ಯ ರೈತರ ಆತ್ಮಹತ್ಯೆ ಕಡಿಮೆಯಾಗಿದೆ. ಆದರೆ ಸಾವಿಗೀಡಾದ ರೈತರ ನೆರವಿಗೆ ಬಂದವರೆಷ್ಟು? ಸರಕಾರ ಘೋಷಿಸಿದ ನೆರವೆಷ್ಟು? ರೈತರ ಕೈಗೆ ಬಂದದ್ದೆಷ್ಟು? ಎನ್ನುವುದಕ್ಕೆ ಮಾತ್ರ ನಮ್ಮಲ್ಲಿ ಉತ್ತರವಿಲ್ಲ.
ನಾಡಿನಲ್ಲಿ ಶ್ರೀಮಂತರಿದ್ದಾರೆ, ರಾಜಕಾರಣಿಗಳಿದ್ದಾರೆ,  ಸಿನಿಮಾ ತಾರೆಯರು, ಉದ್ಯಮಿಗಳು, ವ್ಯಾಪಾರಸ್ಥರು, ಕಾರ್ಪೊರೇಟ್ ಸಂಸ್ಥೆಗಳು, ಅಧಿಕಾರಿಗಳೂ ಇದ್ದಾರೆ. ಆದರೆ ಆತ್ಮಹತ್ಯೆ ಮಾಡಿಕೊಂಡ ರೈತರ ಕಣ್ಣೀರು ಒರೆಸಿದವರು ಎಷ್ಟು ಜನ ಎನ್ನುವುದನ್ನು ಪ್ರಶ್ನಿಸಿಕೊಳ್ಳಬೇಕಿದೆ. ರೈತ ಆತ್ಮಹತ್ಯೆ ಮಾಡಿಕೊಂಡ ನಂತರ ಆತನ ಕುಟುಂಬ ಕಣ್ಣಿರಿನಲ್ಲೇ ಕೈ ತೊಳೆಯುವ ಸ್ಥಿತಿ ಶೇ. 75ರಷ್ಟು ಪ್ರಕರಣಗಳಲ್ಲಿದೆ. ಇದು ನಮ್ಮನ್ನಾಳುವವರಿಗೂ ಗೊತ್ತು, ಆಳಿಸಿಕೊಳ್ಳುವ ನಮಗೂ ಗೊತ್ತು. ಆದರೂ ಸಹಾಯಸ್ತವನ್ನು ಮರೆತುಬಿಟ್ಟಿದ್ದೇವೆ.
ದಾವಣಗೆರೆ ಜಿಲ್ಲೆಯ ಹಳ್ಳಿಯೊಂದರಲ್ಲಿ ಭೀಮಾ ನಾಯ್ಕ್ ಎನ್ನುವ ರೈತ ಟ್ರ್ಯಾಕ್ಟರ್ ಖರೀದಿಗಾಗಿ ಬ್ಯಾಂಕಿನಲ್ಲಿ 13.50 ಲಕ್ಷ ರೂ. ಸಾಲ ಮಾಡಿದ್ದ. ಎಂದಿನಂತೆ ಮಳೆ ಬರಲಿಲ್ಲ, ಸಾಲದ ಕಂತು ಕಟ್ಟಲಿಲ್ಲ, ಬಡ್ಡಿ ಏರಿತು, ಬ್ಯಾಂಕಿನಿಂದ ನೊಟೀಸ್ ಬರಲಾರಂಭಿಸಿತು. ರೈತ ಗಾಬರಿಗೊಂಡ, ಒಂದು ದಿನ ಆತ್ಮಹತ್ಯೆ ಮಾಡಿಕೊಂಡ.  ಇದಾದ ಬಳಿಕ ಆತನ ಪತ್ನಿ ಲಕ್ಷ್ಮೀಬಾಯಿಗೆ ದಾರಿ ಕಾಣದಾಯಿತು. ಜಿಲ್ಲಾಧಿಕಾರಿ ಬಳಿ ಹೋಗಿ ಪರಿಸ್ಥಿತಿ ವಿವರಿಸಿ ಕಣ್ಣೀರಿಟ್ಟಳು. ಇದಕ್ಕೆ ಸ್ಪಂದಿಸಿದ ಅವರು ಸಾಲದ ಬಡ್ಡಿ ಮನ್ನಾ ಮಾಡಿಸಿಕೊಡುವ ಭರವಸೆ ಕೊಟ್ಟರು. ಆದರೆ ಸಾಲದ ಮೊಬಲಗನ್ನಾದರೂ ತುಂಬಬೇಕಲ್ಲ...? ಕೊನೆಗೆ, ಬ್ಯಾಂಕಿನವರು ಎಲ್ಲವನ್ನೂ ಕಳೆದು 3 ಲಕ್ಷ ರೂ. ಕಟ್ಟುವಂತೆ ಸೂಚಿಸಿದರು. ಅಲ್ಲಿಗೆ ಪ್ರಕರಣವೇನೋ ಮುಕ್ತ್ತಾಯವಾಯಿತು.
ಆದರೆ,  3 ಲಕ್ಷ ರೂ. ವನ್ನು ಎಲ್ಲಿಂದ ತರುವುದು, ಶುರುವಾಯಿತು ಲಕ್ಷ್ಮಿಬಾಯಿಗೆ ಚಿಂತೆ. ಆಕೆಯ ಒಡಲಾಳದ ಸಂಕಟ ಇತ್ತೀಚೆಗೆ ಬಿಡುಗಡೆಗೊಂಡು ಯಶಸ್ವೀ ಪ್ರದರ್ಶನ ಕಾಣುತ್ತಿರುವ ‘ಕಿರಗೂರಿನ ಗಯ್ಯಾಳಿಗಳು’ ಚಿತ್ರತಂಡದ ನಾಯಕಿಯರ ಕಿವಿ ತಟ್ಟಿತು; ಮನಸ್ಸು ಮುಟ್ಟಿತು; ಹೃದಯ ತುಡಿಯಿತು. ಈ ಚಿತ್ರದಲ್ಲಿ ಕಾರುಣ್ಯಾ, ಮಾನ್ವಿತಾ, ಅದಿತಿ, ಐಶಾನಿ ಶೆಟ್ಟಿ ಮತ್ತು ಸುಕೃತಾ ಎಂಬ ಪಂಚಕನ್ಯೆಯರಿದ್ದಾರೆ. ಇವರೆಲ್ಲ ಸೇರಿ ನೆರವಾಗಲು ಮುಂದೆ ಬಂದರು. ಹಾಗಂತ ಕೈಯಿಂದ ಹಣ ಕೊಡುವ ಸ್ಥಿತಿಯಲ್ಲಿ ಅವರೂ ಇಲ್ಲ. ಅವರು ಲಕ್ಷ್ಮೀಬಾಯಿಯನ್ನು ಸಂಪರ್ಕಿಸಿ ಧೈರ್ಯ ತುಂಬಿದರು, ಸಹಾಯಸ್ತ ಚಾಚುವುದಾಗಿ ಭರವಸೆ ಕೊಟ್ಟರು. ಅದಕ್ಕಾಗಿ ಉಪಾಯವೊಂದನ್ನು ರೂಪಿಸಿದರು. ಅದೆಂದರೆ, ಕಲರ್ಸ್  ಕನ್ನಡ ಚಾನೆಲ್‌ನಲ್ಲಿ  ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ಪ್ರಸಾರವಾಗುವ  ಚಿತ್ರನಟ ಗಣೇಶ್ ನಡೆಸಿಕೊಡುವ, ಬುದ್ಧಿವಂತಿಕೆ, ಚಾಣಾಕ್ಷತನ, ಆತ್ಮವಿಶ್ವಾಸ, ವೇಗ, ತೀಕ್ಷ್ಣಮತಿತ್ವ ಮತ್ತು ಸಮಯಪ್ರಜ್ಞೆಗೆ ಹೆಸರಾದ  ‘ಸೂಪರ್ ಮಿನಿಟ್’ ನಲ್ಲಿ ಭಾಗವಹಿಸಿ ಅದರಲ್ಲಿ ಯಾರೇ ಗೆದ್ದರೂ, ಗೆದ್ದ ಹಣವನ್ನು ಲಕ್ಷ್ಮೀದೇವಿಗೆ ನೀಡಿ ಸಮಾಜಕ್ಕೆ ಮಾದರಿಯಾಗುವುದು.
ಈ ಪ್ರಕಾರ,  ಚಾನೆಲ್ ಮುಖ್ಯಸ್ಥರನ್ನು ಕಂಡು ಮಾತುಕತೆ ನಡೆಸಿದಾಗ ಅವರೂ ಸಹ ಇದನ್ನು ಮನಸಾರೆ ಶ್ಲಾಘಿಸಿ, ಅನುಮತಿ ಕೊಟ್ಟರು.  ಅದರಂತೆ ಮಾ 26ರ ಶನಿವಾರ ಈ ತಾರೆಯರು ಸೂಪರ್ ಮಿನಿಟ್‌ನಲ್ಲಿ ಭಾಗವಹಿಸಿದ್ದರು. ಆರಂಭದಲ್ಲೇ ತಾವು ಗೆದ್ದ ಹಣವನ್ನು ಲಕ್ಷ್ಮೀಬಾಯಿ ಅವರಿಗೆ ನೀಡಿ ಅವರನ್ನು ಸಾಲದ ಬಾಧೆಯಿಂದ ಮುಕ್ತಗೊಳಿಸುವ ಕೆಲಸ ಮಾಡುವುದಾಗಿ ಘೋಷಿಸಿದ್ದರು. ಆ ಪ್ರಕಾರ  ನಡೆದ ಸ್ಪರ್ಧೆಯಲ್ಲಿ ನಟಿ ಕಾರುಣ್ಯಾ  2 ಲಕ್ಷ ರೂ. ವರೆಗೂ ಆಟ ಮುಂದುವರೆಸಿದರು. ಆದರೆ ನಂತರ ಬರುವ ಆಟಗಳು ಕಷ್ಟವಿರುವುದರಿಂದ ಮತ್ತು ಸೋತಲ್ಲಿ ಸಿಗುವ ಹಣ 50 ಸಾವಿರ ರೂಪಾಯಿಗೆ ಸೀಮಿತಗೊಳ್ಳುವುದರಿಂದ ಚಾಣಾಕ್ಷೆಯಾದ ಕಾರುಣ್ಯಾ ಆಟವನ್ನು ಅಲ್ಲಿಗೇ ನಿಲ್ಲಿಸಿಬಿಟ್ಟರು. ಆದರೂ ಮುಂದಿನ ಆಟ ಯಾವುದಿರಬಹುದು ಎಂಬ ಕುತೂಹಲ ಈ ಕನಸುಕಂಗಳ ಹುಡುಗಿಗೆ. ಕಾರುಣ್ಯಾಳ ಕನಸಿಗೆ ತಣ್ಣೀರೆರಚದ ಕಲರ್ಸ್ ಚಾನೆಲ್, ಇದನ್ನು ಭಾವುಕ ಸನ್ನಿವೇಶವೆಂದು ಪರಿಗಣಿಸಿ,    ಮುಂದಿನ ಆಟವನ್ನು ಆಡಲು ಅವಕಾಶವನ್ನೂ ನೀಡಿತು. ಮಾತ್ರವಲ್ಲ, ಈ ಆಟವನ್ನು ಗೆದ್ದರೆ ಕಾರುಣ್ಯಾ ಗೆದ್ದ 2 ಲಕ್ಷಕ್ಕೆ ಇನ್ನೊಂದು ಲಕ್ಷ ಸೇರಿಸಿ ಒಟ್ಟು 3 ಲಕ್ಷ ನೀಡುವ ಉದಾರತೆಯನ್ನು ಮೆರೆದು, ಮಾನವೀಯತೆಗೆ ತಾನೂ ಕೈಜೋಡಿಸುವುದಾಗಿ ಹೇಳಿತು. ಕಾರುಣ್ಯಾ ಆಟ ಮುಂದುವರೆಸಿದರು. ಗೆಲುವಿನ ನಗೆಯನ್ನೂ ಬೀರಿದರು. ಕೊಟ್ಟ ಮಾತಿನಂತೆ ಕಾರುಣ್ಯಾ ಹಾಗೂ ಕಲರ್ಸ್ ಕನ್ನಡ ಜೊತೆಸೇರಿ ಲಕ್ಷ್ಮೀಬಾಯಿಯವರಿಗೆ 3 ಲಕ್ಷ ಮೊತ್ತದ ಚೆಕ್ ನೀಡಿ ಧನ್ಯತೆಯನ್ನು ಅನುಭವಿಸಿದ ಆ ರಸಕ್ಷಣವನ್ನು ಕನ್ನಡಿಗರಾರೂ ಮರೆಯುವಂತಿಲ್ಲ.
ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ  ಲಕ್ಷ್ಮೀಬಾಯಿಯ ಕಣ್ಣಾಲಿಗಳು ತುಂಬಿಬಂದವು. ಕತ್ತಲು ತುಂಬಿದ್ದ ಆಕೆಯ ಬಾಳಿನಲ್ಲಿ ಹೊಳಪಿನ ಸೆಳೆಮಿಂಚು. ನಟೀಮಣಿಯರ ಹೃದಯವೈಶಾಲ್ಯಕ್ಕೆ, ನಟ ಗಣೇಶ್ ಅವರ ಭಾವುಕ ನಿರೂಪಣೆಗೆ, ಕಲರ್ಸ್ ಕನ್ನಡದ ಮಾನವೀಯತೆಗೆ ನಾವೆಲ್ಲ ‘ಸೆಲ್ಯೂಟ್’ ಎನ್ನಲೇ ಬೇಕು.
ಮೊನ್ನೆಯಷ್ಟೇ ಮೈಸೂರು ಜಿಲ್ಲೆಯ ಹುಣಸೂರು ಸಮೀಪ ಬೈಕ್ ಅಪಘಾತಕ್ಕೀಡಾಗಿ ರಸ್ತೆಯಲ್ಲಿ ನರಳುತ್ತ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕತ್ರಯರನ್ನು ಆಸ್ಪತ್ರಗೆ ಸೇರಿಸದೆ ಅವರ ಸುತ್ತ ನಿಂತು ಚಿತ್ರೀಕರಣ ಮಾಡುತ್ತ, ಪೂರ್ವಾಪರ ವಿಚಾರಿಸುತ್ತ ಕಾಲಹರಣ ಮಾಡಿ ಅಮಾನವೀಯತೆ ಮೆರೆದಿದ್ದ ಘಟನೆ ನಮ್ಮೆದುರು ಹಚ್ಚಹಸಿರಾಗಿರುವಾಗಲೇ, ಮಾನವೀಯತೆಯ ಗಂಧಗಾಳಿಯೂ ಇಲ್ಲದೆ ಸ್ವಾರ್ಥ, ದುರಾಸೆ, ಅಹಂಕಾರ, ಮಮಕಾರಗಳೇ ವಿಜೃಂಭಿಸುತ್ತಿರುವ ಈ ಕಾಲದಲ್ಲೂ ಮಾನವೀಯತೆಯ ಸಾಕಾರಕ್ಕೆ ಸಾಕ್ಷಿಯಾಗುವವರಿದ್ದಾರಲ್ಲ....! ಕಾಲ ಕೆಟ್ಟಿಲ್ಲ, ಈಗಲೂ ಒಳ್ಳೆಯವರಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗುತ್ತಾರೆ ಕಿರಗೂರಿನ ದಯಾಳು ಗಯ್ಯಾಳಿಗಳು!
ರೈತರ ಬಗ್ಗೆ ಉದ್ದುದ್ದ ಮಾತನಾಡುವ, ಆತ್ಮಹತ್ಯೆ ಮಾಡಿಕೊಂಡಾಕ್ಷಣ ರಾಜಕಾರಣ ಮಾಡುವ, ಸರಕಾರದಿಂದ ನೆರವು ದೊರೆಯದಿದ್ದರೆ ಆ ಬಗ್ಗೆ ಹೋರಾಡುವ ಜನರಿದ್ದಾರೆ. ಆದರೆ ತಾವೇ ಮುಂದಾಗಿ ಅವರ ಸಾಲವನ್ನು ತೀರಿಸುವವರಿಲ್ಲ. ಹೋರಾಡಿ ಹಣ ಸಂಗ್ರಹಿಸಿ ಸಾಲ ತುಂಬಿಕೊಟ್ಟ ಸಂಘಟನೆಯವರೂ ಇಲ್ಲ. ಮಳೆ ಬಂದರೂ ಕಷ್ಟ, ಬಾರದಿದ್ದರೂ ಕಷ್ಟ, ಬೆಳೆ ಬೆಳೆದರೂ ಕಷ್ಟ, ಬೆಳೆಯದಿದ್ದರೂ ಕಷ್ಟ ಎನ್ನುವ ಸ್ಥಿತಿಯಲ್ಲಿರುವ ರೈತ ಚೆನ್ನಾಗಿದ್ದರೆ ಮಾತ್ರ ನಾಡು ಚೆನ್ನಾಗಿರುತ್ತದೆ. ರೈತ ನಾಡಿನ ಬೆನ್ನೆಲುಬು, ನೇಗಿಲಯೋಗಿ, ಅನ್ನದಾತ, ಹಸಿರು ಕ್ರಾಂತಿ, ಆಹಾರದಲ್ಲಿ ಸ್ವಾವಲಂಬನೆ ಎನ್ನುವ ಸಂದರ್ಭಗಳಲ್ಲಿ ಮಾತ್ರ ರೈತ ನಮ್ಮ ನಾಯಕರೆನ್ನಿಸಿಕೊಂಡವರಿಗೆಲ್ಲ ನೆನಪಿಗೆ ಬರುವುದು ವಿಷಾದನೀಯವೇ ಸರಿ.
ನಮ್ಮ ಸಮಾಜದಲ್ಲಿರುವ ಶ್ರೀಮಂತರು, ಉದ್ಯಮಿಗಳು, ರಾಜಕಾರಣಿಗಳು, ನಟ-ನಟಿಯರಿಗೆ ಕಿರಗೂರಿನ ಗಯ್ಯಾಳಿಯರು ಮಾದರಿಯಾಗಲಿ; ಸಾಲದ ಶೂಲಕ್ಕೆ ಕೊರಳೊಡ್ಡುವ ಜನರ ಬದುಕಿಗೆ ಆಸರೆಯಾಗಲಿ. 

Tuesday, 22 March 2016

 ನಿವೇಶನವೂ ಇಲ್ಲ, ಹಣವೂ ಇಲ್ಲ 
ಸ್ಬುಡಾಕ್ಕೆ ಉಚಿತವಾಗಿ ಭೂಮಿ ಕೊಟ್ಟು ನಿವೇಶನದ ಹಕ್ಕುದಾರಿಕೆ ಪಡೆಯಲು ಪರದಾಡುತ್ತಿರುವ ಅನ್ನದಾತರು



  ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡರು ಎನ್ನುವ ಗಾದೆ ಇದೆ. ಇದು ನಗರದ ನಗರದ ಹೊರವಲಯ ಮಲ್ಲಿಗೇನಹಳ್ಳಿ ಗ್ರಾಮದ ರೈತರಿಗೆ ಅನ್ವಯವಾಗುತ್ತಿದೆ. ಊರಿನ ಉಪಕಾರಕ್ಕೆ ಜಮೀನನ್ನು ಉಚಿತವಾಗಿ ಬಿಟ್ಟುಕೊಟ್ಟು ಈಗ ತಮಗೇ ಭೂಮಿ ಇಲ್ಲದಂತಾಗಿದ್ದಾರೆ.
 ಈ ರೈತರು ಬಿಟ್ಟುಕೊಟ್ಟ ಜಮೀನಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ಮಾಡಿದ ಬಡಾವಣೆ ವಿವಾದಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಇಲ್ಲಿನ  ನಿವೇಶನಗಳ ಪರಭಾರೆ, ಖಾತೆ ಮಾಡಿಕೊಡುವುದು, ಕಟ್ಟಡ ನಿರ್ಮಾಣಕ್ಕೆ ಲೈಸೈನ್ಸ್ ನೀಡುವುದರ ಮೇಲೆ ತಡೆ ಹಾಕಲಾಗಿದೆ. ಈ ವೇಳೆ ರೈತರಿಗೆ ನೀಡಲಾಗಿದ್ದ ನಿವೇಶನಗಳಿಗೂ ಇದೇ ನಿರ್ಬಂಧ ವಿಧಿಸಲಾಗಿದೆ. ಇದು ರೈತ ಸಮುದಾಯವನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ. ನಾಗರಿಕರಿಗೆ ಕಡಿಮೆ ದರದಲ್ಲಿ ನಿವೇಶನ ನೀಡಲು ಉಚಿತವಾಗಿ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ತಮ್ಮ ಭೂಮಿ ಕೊಟ್ಟು,  ನಿವೇಶನದ ಹಕ್ಕುದಾರಿಕೆ ಪಡೆದುಕೊಳ್ಳಲು ಇಲ್ಲಿನ ರೈತರು ಪರದಾಡುತ್ತಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ (ಸ್ಬುಡಾ)ದ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ಅಭಿವೃದ್ಧಿಪಡಿಸಲಾಗಿತ್ತು. ರೈತರ ಸಹಭಾಗಿತ್ವದಲ್ಲಿ ಶೇ. 40-60 ರ ಅನುಪಾತದಲ್ಲಿ ಬಡಾವಣೆ ನಿರ್ಮಿಸಲಾಗಿತ್ತು. ಬಡಾವಣೆ ಅಭಿವೃದ್ಧಿಗೆ ಭೂಮಿ ಕೊಟ್ಟ ರೈತರಿಗೆ ಪರಿಹಾರ ಧನ ನೀಡುವುದರ ಬದಲಿಗೆ ಪ್ರತಿ ಎಕರೆಗೆ ಶೇ. 40 ರಷ್ಟು ನಿವೇಶನ ನೀಡಲು ಪ್ರಾಧಿಕಾರ ನಿರ್ಧರಿಸಿತ್ತು.  ಇಲ್ಲಿ ವಿವಿಧ ವಿಸ್ತೀರ್ಣದ ನೂರಾರು ನಿವೇಶನ ರಚಿಸಲಾಗಿತ್ತು. ನಿವೇಶನರಹಿತ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಿದ ಸೂಡಾ ಆಡಳಿತವು, ನಿವೇಶನ ಕೂಡ ಹಂಚಿಕೆ ಮಾಡಿತ್ತು. ಹಾಗೆಯೇ ಒಪ್ಪಂದದಂತೆ ಶೇ. 40 ರಷ್ಟು ನಿವೇಶನಗಳನ್ನು ಬಡಾವಣೆ ಅಭಿವೃದ್ಧಿಗೆ ಭೂಮಿ ನೀಡಿದ ರೈತರಿಗೆ ಅಧಿಕೃತವಾಗಿ ಹಸ್ತಾಂತರ ಮಾಡಿತ್ತು.
  ಸಾರ್ವಜನಿಕರಿಗೆ ನಿವೇಶನ ಹಂಚಿಕೆಯ ವೇಳೆ ಭಾರೀ ಗೋಲ್‌ಮಾಲ್ ನಡೆಸಲಾಗಿದೆ. ನೀತಿ-ನಿಯಮ ಉಲ್ಲಂಘಿಸಿ ಅನರ್ಹರಿಗೆ, ಪ್ರಭಾವಿಗಳಿಗೆ ನಿವೇಶನ ವಿತರಣೆ ಮಾಡಲಾಗಿದೆ ಎಂಬ ಆರೋಪ ಬೆಳಕಿಗೆ ಬಂದಿತ್ತು. ಈ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದವು. ಇದು ಸಾರ್ವಜನಿಕ ವಲಯದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು.
ಅಂತಿಮವಾಗಿ, ಅಂದಿನ ಜಿಲ್ಲಾಧಿಕಾರಿಯಾಗಿದ್ದ ವಿಪುಲ್ ಬನ್ಸಲ್, ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ನಿವೇಶನ ಹಂಚಿಕೆ ವೇಳೆ ನಡೆದಿರುವ ಅವ್ಯವಹಾರದ ಕುರಿತಂತೆ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚಿಸಿದ್ದರು. ಈ ತನಿಖಾ ಸಮಿತಿಯು ನಿವೇಶನ ಹಂಚಿಕೆಯಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಅವ್ಯವಹಾರ ನಡೆದಿದೆ. ಅಂದಿನ ಪ್ರಾಧಿಕಾರದ ಅಧ್ಯಕ್ಷರಿಬ್ಬರು ನಿಯಮ ಉಲ್ಲಂಘಿಸಿದ್ದಾರೆ. ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿದವರು ಹಾಗೂ ಪಡೆದವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕು ಎಂದು ವರದಿ ಸಲ್ಲಿಸಿತ್ತು.
ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯ ತನಿಖಾ ಸಮಿತಿ ನೀಡಿದ ವರದಿಗೆ ಕಾನೂನು ಮಾನ್ಯತೆಯಿಲ್ಲದ ಕಾರಣದಿಂದ ವರದಿಯ ಶಿಫಾರಸ್ಸು ಅಂಗೀಕರಿಸಿರಲಿಲ್ಲ. ತದನಂತರ ಅಂದಿನ ಸೂಡಾ ಆಡಳಿತಾಧಿಕಾರಿಯಾಗಿದ್ದ  ವಿಪುಲ್ ಬನ್ಸಲ್ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚನೆ ಮಾಡಲು ಪ್ರಾಧಿಕಾರದ ಸಭೆ ಅನುಮೋದನೆ ನೀಡಿತ್ತು. ಅಷ್ಟರಲ್ಲಿಯೇ ರಾಜ್ಯ ಸರ್ಕಾರವು ಈ ಗೋಲ್‌ಮಾಲ್ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಿತ್ತು.
ಈ ಪ್ರಕರಣ ಇನ್ನೂ ಮುಗಿದಿಲ್ಲವಾದ್ದರಿಂದ ಜಾಗದ ವಿವಾದ ಹಾಗೆಯೇ ಉಳಿದುಕೊಂಡಿದೆ. ಇದರಿಂದ ರೈತರು ಜಾಗವೂ ಇಲ್ಲದೆ, ಹಣವೂ ಇಲ್ಲದೆ ಅತಂತ್ರರಾಗುವಂತಾಗಿದೆ.  
     ಭೂಮಿ ಕೊಟ್ಟ ರೈತರು ಈಗ ನಾನಾ ರೀತಿಯ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ನಿವೇಶನ ಮಾರಾಟ ಮಾಡಿ ಹಣ ಸಂಗ್ರಹಿಸಲು ಕೂಡ ಸಾಧ್ಯವಾಗದಂತಾಗಿದೆ. ಮಾಡಿದ ಸಾಲ ಕೂಡ ತೀರಿಸಲು ಆಗುತ್ತಿಲ್ಲ. ಉಚಿತವಾಗಿ ನಿವೇಶನ ಕೊಟ್ಟು ಸಮಸ್ಯೆ ಎದುರಿಸುವಂತಾಗಿದೆ. ಈ ಕೂಡಲೇ ನಗರಾಭಿವೃದ್ದಿ ಸಚಿವರು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕೆಂದು ಮಲ್ಲಿಗೇನಹಳ್ಳಿಯ  ರೈತರು ಆಗ್ರಹಿಸಿದ್ದಾರೆ.
      ನಿವೇಶನ ಹಂಚಿಕೆಯಲ್ಲಿ ನಡೆದಿರುವ ಗೋಲ್‌ಮಾಲ್ ಬಗ್ಗೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಿವೇಶನ ಪರಭಾರೆ, ನೊಂದಣೆ, ಮನೆ ನಿರ್ಮಾಣಕ್ಕೆ ಪರವಾನಿಗೆ ನೀಡುವುದರ ಮೇಲೆ ನಿರ್ಬಂಧ ವಿಧಿಸಲಾಗಿದೆ. ಆದರೆ ರೈತರಿಗೆ ಹಂಚಿಕೆ ಮಾಡಲಾಗಿರುವ ನಿವೇಶನದಲ್ಲಿ ಯಾವುದೇ ಲೋಪವಾಗಿಲ್ಲ. ಈ ಹಿನ್ನೆಲೆಯಲ್ಲಿ ರೈತರಿಗೆ ಹಂಚಿಕೆ ಮಾಡಿರುವ ನಿವೇಶನಗಳ ಪರಭಾರೆ, ನೊಂದಣೆ, ಮನೆ ಕಟ್ಟಲು ಲೈಸೈನ್ಸ್ ನೀಡುವುದರ ಮೇಲೆ ನಿರ್ಬಂಧ ವಿಧಿಸದಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸ್ಬುಡಾ ಅಧ್ಯಕ್ಷ ಎನ್.ರಮೇಶ್ ಸ್ಪಷ್ಟಪಡಿಸಿದ್ದಾರೆ.
     ರೈತರು ಭೂಮಿ ನೀಡಿದ್ದಕ್ಕೆ ಪ್ರತಿಫಲವಾಗಿ ಶೇ. 40 ರಷ್ಟು ನಿವೇಶನಗಳನ್ನು ರೈತರಿಗೆ ಪ್ರಾಧಿಕಾರ ನೀಡಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಆದಾಗ್ಯೂ ರೈತರಿಗೆ ನೀಡಲಾಗಿರುವ ನಿವೇಶನಗಳ ಪರಭಾರೆ, ನೊಂದಣೆ ಹಾಗೂ ಮನೆ ಕಟ್ಟಲು ಲೈಸೈನ್ಸ್ ನೀಡುವುದರ ಮೇಲೆ ನಿರ್ಬಂಧ ಹೇರಿರುವುದು ಎಷ್ಟರಮಟ್ಟಿಗೆ ಸರಿ ಎಂದು ಹೋರಾಟಗಾರ ಕಲ್ಲೂರು ಮೇಘರಾಜ್ ಪ್ರಶ್ನಿಸಿ, ನಗರಾಭಿವೃದ್ಧಿ ಇಲಾಖೆಯ ಸಚಿವ ವಿನಯಕುಮಾರ್ ಸೊರಕೆ ರೈತರ ನೆರವಿಗೆ ಧಾವಿಸಬೇಕು ಎನ್ನುತ್ತ
 ನಿವೇಶನವೂ ಇಲ್ಲ, ಹಣವೂ ಇಲ್ಲ 
 ಸ್ಬುಡಾಕ್ಕೆ ಉಚಿತವಾಗಿ ಭೂಮಿ ಕೊಟ್ಟು ನಿವೇಶನದ ಹಕ್ಕುದಾರಿಕೆ ಪಡೆಯಲು ಪರದಾಡುತ್ತಿರುವ ಅನ್ನದಾತರು


  ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡರು ಎನ್ನುವ ಗಾದೆ ಇದೆ. ಇದು ನಗರದ ನಗರದ ಹೊರವಲಯ ಮಲ್ಲಿಗೇನಹಳ್ಳಿ ಗ್ರಾಮದ ರೈತರಿಗೆ ಅನ್ವಯವಾಗುತ್ತಿದೆ. ಊರಿನ ಉಪಕಾರಕ್ಕೆ ಜಮೀನನ್ನು ಉಚಿತವಾಗಿ ಬಿಟ್ಟುಕೊಟ್ಟು ಈಗ ತಮಗೇ ಭೂಮಿ ಇಲ್ಲದಂತಾಗಿದ್ದಾರೆ.
 ಈ ರೈತರು ಬಿಟ್ಟುಕೊಟ್ಟ ಜಮೀನಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ಮಾಡಿದ ಬಡಾವಣೆ ವಿವಾದಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಇಲ್ಲಿನ  ನಿವೇಶನಗಳ ಪರಭಾರೆ, ಖಾತೆ ಮಾಡಿಕೊಡುವುದು, ಕಟ್ಟಡ ನಿರ್ಮಾಣಕ್ಕೆ ಲೈಸೈನ್ಸ್ ನೀಡುವುದರ ಮೇಲೆ ತಡೆ ಹಾಕಲಾಗಿದೆ. ಈ ವೇಳೆ ರೈತರಿಗೆ ನೀಡಲಾಗಿದ್ದ ನಿವೇಶನಗಳಿಗೂ ಇದೇ ನಿರ್ಬಂಧ ವಿಧಿಸಲಾಗಿದೆ. ಇದು ರೈತ ಸಮುದಾಯವನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ. ನಾಗರಿಕರಿಗೆ ಕಡಿಮೆ ದರದಲ್ಲಿ ನಿವೇಶನ ನೀಡಲು ಉಚಿತವಾಗಿ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ತಮ್ಮ ಭೂಮಿ ಕೊಟ್ಟು,  ನಿವೇಶನದ ಹಕ್ಕುದಾರಿಕೆ ಪಡೆದುಕೊಳ್ಳಲು ಇಲ್ಲಿನ ರೈತರು ಪರದಾಡುತ್ತಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ (ಸ್ಬುಡಾ)ದ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ಅಭಿವೃದ್ಧಿಪಡಿಸಲಾಗಿತ್ತು. ರೈತರ ಸಹಭಾಗಿತ್ವದಲ್ಲಿ ಶೇ. 40-60 ರ ಅನುಪಾತದಲ್ಲಿ ಬಡಾವಣೆ ನಿರ್ಮಿಸಲಾಗಿತ್ತು. ಬಡಾವಣೆ ಅಭಿವೃದ್ಧಿಗೆ ಭೂಮಿ ಕೊಟ್ಟ ರೈತರಿಗೆ ಪರಿಹಾರ ಧನ ನೀಡುವುದರ ಬದಲಿಗೆ ಪ್ರತಿ ಎಕರೆಗೆ ಶೇ. 40 ರಷ್ಟು ನಿವೇಶನ ನೀಡಲು ಪ್ರಾಧಿಕಾರ ನಿರ್ಧರಿಸಿತ್ತು.  ಇಲ್ಲಿ ವಿವಿಧ ವಿಸ್ತೀರ್ಣದ ನೂರಾರು ನಿವೇಶನ ರಚಿಸಲಾಗಿತ್ತು. ನಿವೇಶನರಹಿತ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಿದ ಸೂಡಾ ಆಡಳಿತವು, ನಿವೇಶನ ಕೂಡ ಹಂಚಿಕೆ ಮಾಡಿತ್ತು. ಹಾಗೆಯೇ ಒಪ್ಪಂದದಂತೆ ಶೇ. 40 ರಷ್ಟು ನಿವೇಶನಗಳನ್ನು ಬಡಾವಣೆ ಅಭಿವೃದ್ಧಿಗೆ ಭೂಮಿ ನೀಡಿದ ರೈತರಿಗೆ ಅಧಿಕೃತವಾಗಿ ಹಸ್ತಾಂತರ ಮಾಡಿತ್ತು. 
  ಸಾರ್ವಜನಿಕರಿಗೆ ನಿವೇಶನ ಹಂಚಿಕೆಯ ವೇಳೆ ಭಾರೀ ಗೋಲ್‌ಮಾಲ್ ನಡೆಸಲಾಗಿದೆ. ನೀತಿ-ನಿಯಮ ಉಲ್ಲಂಘಿಸಿ ಅನರ್ಹರಿಗೆ, ಪ್ರಭಾವಿಗಳಿಗೆ ನಿವೇಶನ ವಿತರಣೆ ಮಾಡಲಾಗಿದೆ ಎಂಬ ಆರೋಪ ಬೆಳಕಿಗೆ ಬಂದಿತ್ತು. ಈ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದವು. ಇದು ಸಾರ್ವಜನಿಕ ವಲಯದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. 
ಅಂತಿಮವಾಗಿ, ಅಂದಿನ ಜಿಲ್ಲಾಧಿಕಾರಿಯಾಗಿದ್ದ ವಿಪುಲ್ ಬನ್ಸಲ್, ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ನಿವೇಶನ ಹಂಚಿಕೆ ವೇಳೆ ನಡೆದಿರುವ ಅವ್ಯವಹಾರದ ಕುರಿತಂತೆ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚಿಸಿದ್ದರು. ಈ ತನಿಖಾ ಸಮಿತಿಯು ನಿವೇಶನ ಹಂಚಿಕೆಯಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಅವ್ಯವಹಾರ ನಡೆದಿದೆ. ಅಂದಿನ ಪ್ರಾಧಿಕಾರದ ಅಧ್ಯಕ್ಷರಿಬ್ಬರು ನಿಯಮ ಉಲ್ಲಂಘಿಸಿದ್ದಾರೆ. ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿದವರು ಹಾಗೂ ಪಡೆದವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕು ಎಂದು ವರದಿ ಸಲ್ಲಿಸಿತ್ತು. 
ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯ ತನಿಖಾ ಸಮಿತಿ ನೀಡಿದ ವರದಿಗೆ ಕಾನೂನು ಮಾನ್ಯತೆಯಿಲ್ಲದ ಕಾರಣದಿಂದ ವರದಿಯ ಶಿಫಾರಸ್ಸು ಅಂಗೀಕರಿಸಿರಲಿಲ್ಲ. ತದನಂತರ ಅಂದಿನ ಸೂಡಾ ಆಡಳಿತಾಧಿಕಾರಿಯಾಗಿದ್ದ  ವಿಪುಲ್ ಬನ್ಸಲ್ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚನೆ ಮಾಡಲು ಪ್ರಾಧಿಕಾರದ ಸಭೆ ಅನುಮೋದನೆ ನೀಡಿತ್ತು. ಅಷ್ಟರಲ್ಲಿಯೇ ರಾಜ್ಯ ಸರ್ಕಾರವು ಈ ಗೋಲ್‌ಮಾಲ್ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಿತ್ತು.
ಈ ಪ್ರಕರಣ ಇನ್ನೂ ಮುಗಿದಿಲ್ಲವಾದ್ದರಿಂದ ಜಾಗದ ವಿವಾದ ಹಾಗೆಯೇ ಉಳಿದುಕೊಂಡಿದೆ. ಇದರಿಂದ ರೈತರು ಜಾಗವೂ ಇಲ್ಲದೆ, ಹಣವೂ ಇಲ್ಲದೆ ಅತಂತ್ರರಾಗುವಂತಾಗಿದೆ.   
     ಭೂಮಿ ಕೊಟ್ಟ ರೈತರು ಈಗ ನಾನಾ ರೀತಿಯ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ನಿವೇಶನ ಮಾರಾಟ ಮಾಡಿ ಹಣ ಸಂಗ್ರಹಿಸಲು ಕೂಡ ಸಾಧ್ಯವಾಗದಂತಾಗಿದೆ. ಮಾಡಿದ ಸಾಲ ಕೂಡ ತೀರಿಸಲು ಆಗುತ್ತಿಲ್ಲ. ಉಚಿತವಾಗಿ ನಿವೇಶನ ಕೊಟ್ಟು ಸಮಸ್ಯೆ ಎದುರಿಸುವಂತಾಗಿದೆ. ಈ ಕೂಡಲೇ ನಗರಾಭಿವೃದ್ದಿ ಸಚಿವರು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕೆಂದು ಮಲ್ಲಿಗೇನಹಳ್ಳಿಯ  ರೈತರು ಆಗ್ರಹಿಸಿದ್ದಾರೆ. 
      ನಿವೇಶನ ಹಂಚಿಕೆಯಲ್ಲಿ ನಡೆದಿರುವ ಗೋಲ್‌ಮಾಲ್ ಬಗ್ಗೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಿವೇಶನ ಪರಭಾರೆ, ನೊಂದಣೆ, ಮನೆ ನಿರ್ಮಾಣಕ್ಕೆ ಪರವಾನಿಗೆ ನೀಡುವುದರ ಮೇಲೆ ನಿರ್ಬಂಧ ವಿಧಿಸಲಾಗಿದೆ. ಆದರೆ ರೈತರಿಗೆ ಹಂಚಿಕೆ ಮಾಡಲಾಗಿರುವ ನಿವೇಶನದಲ್ಲಿ ಯಾವುದೇ ಲೋಪವಾಗಿಲ್ಲ. ಈ ಹಿನ್ನೆಲೆಯಲ್ಲಿ ರೈತರಿಗೆ ಹಂಚಿಕೆ ಮಾಡಿರುವ ನಿವೇಶನಗಳ ಪರಭಾರೆ, ನೊಂದಣೆ, ಮನೆ ಕಟ್ಟಲು ಲೈಸೈನ್ಸ್ ನೀಡುವುದರ ಮೇಲೆ ನಿರ್ಬಂಧ ವಿಧಿಸದಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸ್ಬುಡಾ ಅಧ್ಯಕ್ಷ ಎನ್.ರಮೇಶ್ ಸ್ಪಷ್ಟಪಡಿಸಿದ್ದಾರೆ. 
     ರೈತರು ಭೂಮಿ ನೀಡಿದ್ದಕ್ಕೆ ಪ್ರತಿಫಲವಾಗಿ ಶೇ. 40 ರಷ್ಟು ನಿವೇಶನಗಳನ್ನು ರೈತರಿಗೆ ಪ್ರಾಧಿಕಾರ ನೀಡಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಆದಾಗ್ಯೂ ರೈತರಿಗೆ ನೀಡಲಾಗಿರುವ ನಿವೇಶನಗಳ ಪರಭಾರೆ, ನೊಂದಣೆ ಹಾಗೂ ಮನೆ ಕಟ್ಟಲು ಲೈಸೈನ್ಸ್ ನೀಡುವುದರ ಮೇಲೆ ನಿರ್ಬಂಧ ಹೇರಿರುವುದು ಎಷ್ಟರಮಟ್ಟಿಗೆ ಸರಿ ಎಂದು ಹೋರಾಟಗಾರ ಕಲ್ಲೂರು ಮೇಘರಾಜ್ ಪ್ರಶ್ನಿಸಿ, ನಗರಾಭಿವೃದ್ಧಿ ಇಲಾಖೆಯ ಸಚಿವ ವಿನಯಕುಮಾರ್ ಸೊರಕೆ ರೈತರ ನೆರವಿಗೆ ಧಾವಿಸಬೇಕು ಎನ್ನುttare

Monday, 21 March 2016

DATTATREYA HEGDE: ಮತ್ತೆ ಬಂತು ಮಂಗನ ಕಾಯಿಲೆ* ಜಿಲ್ಲೆಯ 8 ಜನರಲ್ಲಿ ಪತ್ತೆ *...

DATTATREYA HEGDE: ಮತ್ತೆ ಬಂತು ಮಂಗನ ಕಾಯಿಲೆ
* ಜಿಲ್ಲೆಯ 8 ಜನರಲ್ಲಿ ಪತ್ತೆ *...
: ಮತ್ತೆ ಬಂತು ಮಂಗನ ಕಾಯಿಲೆ * ಜಿಲ್ಲೆಯ 8 ಜನರಲ್ಲಿ ಪತ್ತೆ *  ಇನ್ನೂ ಪತ್ತೆಯಾಗದ ನಿಖರ ಔಷಧಿ 1957ರಿಂದ ಇಲ್ಲಿಯವರೆಗೆ ಈ ರೋಗಕ್ಕೆ ಜಿಲ್ಲೆಯಲ್ಲಿ ಸತ್ತವರ ಸಂಖ್ಯೆ 5...
ಮತ್ತೆ ಬಂತು ಮಂಗನ ಕಾಯಿಲೆ
* ಜಿಲ್ಲೆಯ 8 ಜನರಲ್ಲಿ ಪತ್ತೆ *  ಇನ್ನೂ ಪತ್ತೆಯಾಗದ ನಿಖರ ಔಷಧಿ

1957ರಿಂದ ಇಲ್ಲಿಯವರೆಗೆ ಈ ರೋಗಕ್ಕೆ ಜಿಲ್ಲೆಯಲ್ಲಿ ಸತ್ತವರ ಸಂಖ್ಯೆ 531 ಎಂಬ ಮಾಹಿತಿಯನ್ನು ಇಲಾಖೆ ನೀಡಿದೆ.

ಈ ವರ್ಷ ಮಂಗನ ಕಾಯಿಲೆ ಕೇವಲ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರವಲ್ಲ, ಪಕ್ಕದ ಗೋವಾ ರಾಜ್ಯದಲ್ಲೂ ಪತ್ತೆಯಾಗಿದೆ. ಸುಮಾರು 14 ಜನರಲ್ಲಿ ಮಂಗನ ಕಾಯಿಲೆಯ ವೈರಸ್ ಇರುವುದು ಕಂಡುಬಂದಿದೆ. ಪಕ್ಕದ ಉತ್ತರ ಕನ್ನಡ ಜಿಲ್ಲೆ ಜೋಯಡಾ ತಾಲೂಕಿನಲ್ಲಿ 6 ಜನರಲ್ಲಿ ಇದು ಪತ್ತೆಯಾಗಿದೆ. ಹೊನ್ನಾವರದಲ್ಲಿ ಮಹಿಳೆಯೊಬ್ಬರಲ್ಲಿ ಕಂಡುಬಂದಿದೆ. ಹೀಗೆ ಸುತ್ತಮುತ್ತಲ ಜಿಲ್ಲೆ, ತಾಲೂಕಿನಲ್ಲಿ ರೋಗ ವಿಸ್ತ್ತಾರಗೊಳ್ಳುತ್ತಿರುವುದು ಅದರ ತೀವ್ರತೆ ಹೆಚ್ಚಿದೆ ಎನ್ನುವುದನ್ನು ಮನದಟ್ಟು ಮಾಡಿಕೊಟ್ಟಿದೆ. ಗೋವಾದಲ್ಲಿ ಕಳೆದ ವರ್ಷ 24 ಜನರಲ್ಲಿ ಇದು ಪತ್ತೆಯಾಗಿ ನಾಲ್ವರು ಮೃತಪಟ್ಟಿದ್ದರು. ಜಿಲ್ಲೆಯಲ್ಲಿ 2012ರಲ್ಲಿ 92, 2013ರಲ್ಲಿ 03, 2014ರಲ್ಲಿ 143, 2015ರಲ್ಲಿ 41 ಜನರಿಗೆ ಮಂಗನ ಕಾಯಿಲೆ ತಗುಲಿರುವುದು ದೃಢಪಟ್ಟಿತ್ತು 

  ಬಿರುಬಿಸಿಲಿನ ಆರ್ಭಟ ಹೆಚ್ಚಾಗುತ್ತಿರುವಂತೆಯೇ ಪ್ರತಿವರ್ಷದಂತೆ ಮಂಗನ ಕಾಯಿಲೆ ಅಥವಾ ಕ್ಯಾಸನೂರು ಅರಣ್ಯ ಕಾಯಿಲೆ ಜಿಲ್ಲೆಯ ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕಿನ ಕೆಲವು ಭಾಗಗಳಲ್ಲಿ ಕಾಲಿಟ್ಟಿದೆ. ಈ ವರ್ಷ ಈಗಾಗಲೆ 8 ಜನರಲ್ಲಿ ಮಂಗನ ಕಾಯಿಲೆಯ ವೈರಸ್ ಇರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಅದರಲ್ಲೂ ಕಾಡಿನಂಚಿನಲ್ಲಿರುವ ಗ್ರಾಮಗಳಲ್ಲಿ ಜನಜಾಗೃತಿ ಆರಂಭಿಸಲಾಗಿದೆ. ಎರಡು ಬಾರಿ ಲಸಿಕೆಯನ್ನು ಹಾಕಲಾಗಿದೆ.
ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯವರು ರೋಗ ತಡೆಗೆ  ವ್ಯಾಪಕ ಕ್ರಮವನ್ನು  ಸಾಗರದಲ್ಲಿರುವ ಮಂಗನ ಕಾಯಿಲೆ ಸಂಶೋಧನಾ ಕೇಂದ್ರದವರೊಂದಿಗೆ ಕೈಗೊಂಡಿದೆ. ಆದರೂ ರೋಗ ಕಂಡುಬಂದಿದೆ. ಇದರಿಂದ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ರೋಗ ತಡೆ ಅಭಿಯಾನವನ್ನು ಆರಂಭಿಸಲಾಗಿದೆ. ಕರಪತ್ರದ ಮೂಲಕ ಜನರನ್ನು ಎಚ್ಚರಿಸಲಾಗುತ್ತಿದೆ. ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಈ ಬಗ್ಗೆ ಜನರಿಗೆ ತಿಳುವಳಿಕೆ ಕೊಡಲಾಗುತ್ತಿದೆ.
ಮಂಗನ ಕಾಯಿಲೆ ಲಕ್ಷಣ ಇರುವ 19 ಜನರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದರಲ್ಲಿ 8 ಜನರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. 1957ರಿಂದ ಈ ರೋಗ ಆರಂಭವಾಗಿದ್ದರೂ ಇಲ್ಲಿಯವರೆಗೆ ರೋಗವನ್ನು ಸಂಪೂರ್ಣ ಮಟ್ಟ ಹಾಕುವಲ್ಲಿ ಸರ್ಕಾರ ಅಥವಾ ಸಂಬಂಧಿತ ಸಂಶೋಧನಾ ಕೇಂದ್ರದವರು ಯಶಸ್ವಿಯಾಗಿಲ್ಲ. ಜೊತೆಗೆ ಸೂಕ್ತ ಔಷಧಿಯನ್ನೂ ಕಂಡುಹಿಡಿಯುವಲ್ಲಿ ಸಫಲರಾಗಿಲ್ಲ. ಇಷ್ಟೆ ಏಕೆ, ಆಡಳಿತ ನಡೆಸುವ ಸರ್ಕಾರ  ರಕ್ತ ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸುವ ಮನಸ್ಸು ಮಾಡಿಲ್ಲ. ಇದರಿಂದ ರಕ್ತ ತಪಾಸಣೆಗೆ ಪೂನಾಗೆ ತೆರಳಬೇಕಿದೆ. ರಕ್ತವನ್ನು ಸಂಗ್ರಹಿಸಿ ಅಲ್ಲಿಗೆ ಕಳುಹಿಸಿ, ಪರೀಕ್ಷೆ ನಡೆದು ವರದಿ ತಲುವಪುವವರೆಗೆ ಕನಿಷ್ಠ 15 ದಿನವಾಗುತ್ತಿದೆ. ಅಷ್ಟರೊಳಗೆ ಕಾಯಿಲೆಯ ಸೋಂಕು ಇರುವವರಿಗೆ ಅದು ಉಲ್ಬಣಿಸುವ ಸಾಧ್ಯತೆ ಇದೆ.
ಈ ವರ್ಷ ಕಳೆದ ಡಿಸೆಂಬರ್ (2ನೆಯ ತಾರೀಕಿನಿಂದ 5ರವರೆಗೆ)  ಮೊದಲ ಹಂತದ ಲಸಿಕಾ ಅಭಿಯಾನವನ್ನು ತೀರ್ಥಹಳ್ಳಿ ಮತ್ತು ಹೊಸನಗರದ  ನಿರ್ದಿಷ್ಟ  ಗ್ರಾಮಗಳಲ್ಲಿ ನಡೆಸಲಾಗಿದೆ. ಎರಡನೆಯ ಹಂತದ ಲಸಿಕೆಯನ್ನು ಜನವರಿಯಲ್ಲಿ ನಡೆಸಲಾಗಿದೆ. ಕಾಡಿನಂಚಿನಿಂದ 5 ಕಿ. ಮೀ ದೂರವಿರುವ ಗ್ರಾಮಗಳಲ್ಲಿ ವಿಶೇಷವಾಗಿ ಈ ಅಭಿಯಾನ ನಡೆಸಲಾಗಿದೆ. ಏಕೆಂದರೆ, ಕಾಡಿನಿಂದಲೇ ಈ ರೋಗ ಹಬ್ಬುವುದರಿಂದ ಸುತ್ತಮುತ್ತಲಿನ ವಾಸಿಗಳಿಗೆ ಇದರ ಪ್ರಭಾವ ಆಗದಿರಲೆಂದು. ಆದರೂ ಮತ್ತೆ ರೋಗ ಬಂದಿರುವುದು ಆತಂಕವನ್ನು ಉಂಟುಮಾಡಿದೆ. ಲಸಿಕೆಯಿಂದ ರೋಗದ ಪ್ರಮಾಣವನ್ನು ಕಡಿಮೆ ಮಾಡುವುದರ ಜೊತೆಗೆ ಅದರ ತೀವ್ರತೆಯೂ ಇಳಿಮುಖವಾಗುವಂತೆ ಮಾಡಬಹುದೇ ವಿನಾ ಕಡಿಮೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಆರೋಗ್ಯಾಧಿಕಾರಿಗಳು.
ಪ್ರತಿ ವರ್ಷ 100ರಿಂದ 500 ಜನರಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿದೆ. ಈ ವರ್ಷ 31,550 ಜನರಿಗೆ  ಲಸಿಕೆ ಹಾಕಲಾಗಿದೆ. ಪ್ರತಿ ವರ್ಷ ನವೆಂಬರ್‌ನಿಂದ ಮಾರ್ಚ್‌ವರೆಗೆ ವಿಶೇಷವಾಗಿ ಕಾಣಿಸಿಕೊಳ್ಳುವ ಈ ರೋಗ ಬಿಸಿಲಿನ ಪ್ರಮಾಣ ಏರಿದಂತೆ ಏರಿಕೆಯಾಗುತ್ತದೆ. ಇನ್ನೂ ಎರಡು ತಿಂಗಳು ಬಿಸಿಲಿನ ತಾಪಮಾನ ಹೆಚ್ಚಲಿರುವುದರಿಂದ ರೋಗ ಇನ್ನಷ್ಟು ಬಾಧಿಸಬಹುದೆಂಬ ಆತಂಕದಲ್ಲಿ ಅಧಿಕಾರಿಗಳಿದ್ದಾರೆ. ಜನರಲ್ಲೂ ಸಹ ಇದು ಗಾಬರಿಯನ್ನುಂಟು ಮಾಡಿದೆ.
ಗ್ರಾಪಂ, ಗ್ರಾಮಸ್ಥರು ಏನು ಮಾಡಬಹುದು?:
ಅರಣ್ಯಕ್ಕೆ ಹೋಗುವುದನ್ನು ಕಡಿಮೆ ಮಾಡಬೇಕು. ಹೋಗುವ ಅವಶ್ಯಕತೆ ಇದ್ದರೆ ಮೈ ತುಂಬಾ ಬಟ್ಟೆ ಧರಿಸಬೇಕು. ಜೊತೆಗೆ ಲಭ್ಯವಿರುವ ಕೆಲವು ನಿಗದಿಪಡಿಸಿದ ತೈಲಗಳನ್ನು ಮೈಕೈಗೆ ಲೇಪಿಸಿಕೊಳ್ಳಬೇಕು. ಮನೆಗೆ ಬಂದ ನಂತರ ಕೈಕಾಲು ತೊಳೆದು ಬಟ್ಟೆ ಬದಲಿಸಿ ಉಣ್ಣೆ ಇಲ್ಲ ಎನ್ನುವುದನ್ನು ಖಾತರಿಪಡಿಸಿಕೊಳ್ಳಬೇಕು.
ಇದರೊಟ್ಟಿಗೆ ಸ್ಥಳೀಯ ಗ್ರಾಪಂನವರು ಹೆಚ್ಚಿನ ಮುತುವರ್ಜಿಯನ್ನು ವಹಿಸಬೇಕಿದೆ. ಜನರಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸುವುದುರ ಜೊತೆ ರೋಗ ತಡೆಯಲು ಏನು ಮಾಡಬೇಕೆನ್ನುವುದನ್ನು ತಿಳಿಹೇಳಬೇಕು. ಗ್ರಾಪಂ ಪಿಡಿಓಗಳು ಮನೆಮನೆ ಭೇಟಿ ಮಾಡಿ ರೋಗದಿಂದ ದೂರವಿರುವಂತೆ ಮಾಹಿತಿ ಕೊಡಬೇಕು. ಕರಪತ್ರ ಪ್ರಕಟಿಸಿ ಪ್ರತಿ ಮನೆಗೂ ತಲುಪಿಸಬೇಕು. ತಾವೇ ಮುಂದಾಗಿ ನಿಂತು ಜನಜಾಗೃತಿ ಸಭೆ ನಡೆಸಬೇಕು. ರೋಗ ಕಂಡುಬಂದಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ತಿಳಿಸಬೇಕು. ಆರೋಗ್ಯಾಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಹೊಂದಿ ಮಾಹಿತಿ ನೀಡುತ್ತಿರಬೇಕು. ಗ್ರಾಪಂ ಸದಸ್ಯರು ಮತ್ತು ಪಿಡಿಓಗಳು ಇತ್ತ ಗಮನಹರಿಸಿದಲ್ಲಿ ಈ ಕಾಯಿಲೆಯ ಬಗ್ಗೆ ಜನಾಂದೋಲನ ರೂಪಿಸಬಹುದಾಗಿದೆ.


ಏನಿದು ಮಂಗನ ಕಾಯಿಲೆ?
ಮಂಗನ ಕಾಯಿಲೆ 1957ರಲ್ಲಿ ಮೊಟ್ಟಮೊದಲ ಬಾರಿಗೆ ಸೊರಬ ತಾಲೂಕಿನ ಕ್ಯಾಸನೂರಿನಲ್ಲಿ ಪತ್ತೆಯಾಗಿತ್ತು. ಇದರಿಂದಾಗಿ ಇದಕ್ಕೆ ಕ್ಯಾಸನೂರು ಕಾಯಿಲೆ ಎಂಬ ಹೆಸರು ಬಂದಿದೆ. ಮಂಗನ ಕಾಯಿಲೆ, ಕ್ಯಾಸನೂರು ಅರಣ್ಯ ಕಾಯಿಲೆ ಎಂದೂ ಸಹ ಕರೆಯಲಾಗುತ್ತಿದೆ.
ಕಾಡಿನಲ್ಲಿ ಮಂಗ ಸತ್ತುಬಿದ್ದಾಗ  ಅದರ ವೈರಸ್ ಹರಡುವುದರಿಂದ, ಆ ಮಂಗವನ್ನು ತಿನ್ನುವ ಇಲಿ, ಹಕ್ಕಿ,  ಅಳಿಲು ಮುಂತಾದ ಪ್ರಾಣಿಗಳಿಂದಲೂ ಇದು ಹರಡುತ್ತದೆ. ಮಂಗನಿಗೆ ಉಣ್ಣೆ ಕಚ್ಚುವುದರಿಂದ ಮಂಗ ಸಾಯಲೂಬಹುದು. ಈ ಸತ್ತ ಮಂಗನಿಂದ ಕಾಯಿಲೆ ಹರಡುತ್ತಿದೆ. ಕೇರಳದ ವೈನಾಡ್ ಮತ್ತು ಮಲಪ್ಪುರಂ, ಚಾಮರಾಜನಗರ ಜಿಲ್ಲೆಯ ಕೆಲವು ಭಾಗಗಳಲ್ಲಿ, ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೆಲವೆಡೆ ಇದು ಕಂಡುಬಂದಿದೆ. ಕಾಡಿನಲ್ಲಿ ಉಣ್ಣೆ ಕಂಡುಬಂದರೆ ಅದರಿಂದ ಈ ರೋಗ ಹಬ್ಬುವ ಪ್ರಮಾಣವೇ ಅಧಿಕ. ಕಾಡಿಗೆ ತೆರಳುವ ಜನರಿಗೆ ಈ ಉಣ್ಣೆ ಕಚ್ಚಿದಾಗ ಜನರಲ್ಲಿ ಮಂಗನ ಕಾಯಿಲೆ ವೈರಸ್ ಹಬ್ಬುತ್ತಿದೆ. ಆದರೆ ಮನುಷ್ಯನಿಂದ ಮನುಷ್ಯನಿಗೆ ಇದು ಹರಡುವುದಿಲ್ಲ. ರೋಗ ಹಬ್ಬುವ ಸಮಯದಲ್ಲಿ ಅರಣ್ಯಕ್ಕೆ ಹೋಗದಂತೆ ಸೂಚಿಸಲಾಗುತ್ತಿದೆ. ಇನ್ನೂ ಕೆಲವೆಡೆ ಮೇಯಲು ಕಾಡಿಗೆ ಹೋಗಿ ಬರುವ ದನಗಳಿಗೆ ಉಣ್ಣೆ  ತಗುಲಿ ಆ ಮೂಲಕ ಮನುಷ್ಯನಿಗೆ ಉಣ್ಣೆ ಕಚ್ಚಿ ಇದು ಬರಬಹುದಾದ ಸಾಧ್ಯತೆ ಸಹ ಇದೆ.
ರೋಗ ಲಕ್ಷಣ:
ಹೆಚ್ಚು ಜ್ವರ, ತಲೆ ನೋವು, ಸ್ನಾಯುಗಳ ಸೆಳೆತ, ನಿಶ್ಯಕ್ತಿ, ಮೂಗಿನಿಂದ ಅಥವಾ ಗಂಟಲಿನಿಂದ ರಕ್ತ ಬರುವುದು, ಕಫ  ಉಂಟಾಗುವುದು.
ಇದಕ್ಕೆ ಔಷಧಿಗಳಿವೆ. ಆದರೆ ಗುಣಮುಖರಾಗಲು ಕನಿಷ್ಟ 2 ವಾರದಿಂದ ಕೆಲವು ತಿಂಳು ಬೇಕಾಗಬಹುದು. ಮನೆಯ ಸುತ್ತಮುತ್ತ ಉಣ್ಣೆ ಸೃಷ್ಠಿಯಾಗದಂತೆ ಮಾಡುವುದು ಅತ್ಯುತ್ತಮ ರೋಗ ನಿರೋಧಕ ಪದ್ದತಿಯಾಗಿದೆ. \
.................................

Saturday, 19 March 2016

 ಹೋರಾಟಗಾರರಿಗೆ ಮಾದರಿಯಾದ
ದಿ. ಕಡ್ಲೆಕಾಯಿ ಮಂಜುನಾಥ


ಹೆಸರಿಗಾಗಿ ಹೋರಾಟ ಮಾಡುವವರಿದ್ದಾರೆ, ಹಣಗಳಿಸಲು ಹೋರಾಟ ಮಾಡುವವರಿದ್ದಾರೆ. ತೀಟೆಗಾಗಿ ಪ್ರತಿಭಟಿಸುವವರಿದ್ದಾರೆ. ಆದರೆ, ನಿಜಕ್ಕೂ ಸಮಸ್ಯೆಗಳಿಗೆ ಅಥವಾ ಜನಸಮಾನ್ಯರ ಸಂಕಷ್ಟಗಳನ್ನು ಪರಿಹರಿಸಲು ಹೋರಾಡುವವರು ತೀರಾ ವಿರಳ. ಅಂತಹವರಲ್ಲಿ ಒಬ್ಬರಾಗಿದ್ದವರು ದಿವಂಗತ ಕಡ್ಲೆಕಾಯಿ ಮಂಜುನಾಥ.
ಕಡ್ಲೆಕಾಯಿ ಮಂಜುನಾಥ ಹೆಸರೇ ವಿಶಿಷ್ಟವಾದುದು. ಶಿವಮೊಗ್ಗದಲ್ಲಿ ಬಹುತೇಕ ಜನರಿಗೆ ಇವರು ಪರಿಚಿತರು. ಯಾರೇ ಎದುರು ಸಿಕ್ಕರೂ ಅಣ್ಣಾ, ಸಾರ್ ಎಂದು ಕೈ ಮುಗಿದೇ ಸಂಬೋಧಿಸುವ ಸೌಮ್ಯ ಸ್ವಭಾವದ, ನಿಸ್ವಾರ್ಥ ಮನೋಭಾವದ, ಯಾರೊಡನೆಯೂ ಜಗಳ ಮಾಡದ, ಸಮಸ್ಯೆ ಇರುವವರನ್ನು ಕಟ್ಟಿಕೊಂಡು ಕಚೇರಿಯಿಂದ ಕಚೇರಿಗೆ ಅಲೆದು ಅಧಿಕಾರಿಗಳಿಗೂ ಗೌರವ ಕೊಟ್ಟು ಕೆಲಸ ಮಾಡಿಸಿಕೊಡುವ ಮಂಜುನಾಥ ಕಾಲವಾಗಿದ್ದಾರೆ. ಮಾ 18ರಂದು ಮುಂಜಾನೆ ಹೃದಯಾಘಾತದಿಂದ ನಿಧನರಾದ ಸುದ್ದಿ ಕೇಳಿ ಎಷ್ಟೋ ಜನರು ಮಂಜುನಾಥಗೆ ಈ ಸಾವು ಬರಬಾರದಿತ್ತು. ಇಂತಹ ಪ್ರಾಮಾಣಿಕ, ನಿಗರ್ವಿ, ವ್ಯಕ್ತಿ ಇಷ್ಟು ಬೇಗ ನಮ್ಮನ್ನು ಅಗಲಬಾರದಿತ್ತು ಎಂದು ಮರುಗಿದವರು ಬಹಳ ಜನ.
ಕೆಲವರು ಸತ್ತರೂ ಸುದ್ದಿಯಾಗುವುದಿಲ್ಲ, ಕೆಲವರು ಇದ್ದರೂ ಸುದ್ದಿಯಾಗುವುದಿಲ್ಲ. ಆದರೆ ಮಂಜುನಾಥ ಜೀವವಿದ್ದಾಗಲೂ, ಸತ್ತ ನಂತರವೂ ಜನರ ಪ್ರಶಂಸೆ, ಅಭಿಮಾನ ಪಡೆದವರು.
ಕಾಯಕವೇ ಕೈಲಾಸ ಎನ್ನುವುದ್ಕಕೆ ಉತ್ತಮ ಉದಾಹರಣೆ ಇವರು. ನಡೆದಾಡಿಕೊಂಡೇ ನಗರ ಸುತ್ತುತ್ತಿದ್ದರು. ದುರ್ಗಿಗುಡಿಯಲ್ಲಿ ರೂಮು ಮಾಡಿಕೊಂಡು ವಾಸವಾಗಿದ್ದ ಮಂಜುನಾಥ ಬಳಿ ಯಾರಾದರೂ ರೇಶನ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣಪತ್ರ, ವಿಧವಾ ವೇತನ ಇನ್ನಿತರ ಸಮಸ್ಯೆ ಹೇಳಿಕೊಂಡು ಹೋದರೆ ಸಾಕು, ಅವರನ್ನು ಕರೆದುಕೊಂಡು ನೇರವಾಗಿ ಸಂಬಂಧಿತ ಅಧಿಕಾರಿಗಳ ಕಚೇರಿಗೆ ತೆರಳುತ್ತಿದ್ದರು. ಅಧಿಕಾರಿಗಳಿಗೂ ಕಡ್ಲೆಕಾಯ ಸ್ವಭಾವ ಗೊತ್ತಿದ್ದರಿಂದ ಸುಲಭದಲ್ಲಿ ಕೆಲಸವಾಗುತ್ತಿತ್ತು. ಕೆಲಸವಾದ ನಂತರ ಯಾರಿಂದಲೂ ಒಂದು ಪೈಸೆಯನ್ನೂ ಯಾಚಿಸದ ಕೈ ಅವರದ್ದಾಗಿತ್ತು. ಅಷ್ಟೊಂದು ಶುದ್ಧ ಕಚ್ಚೆ- ಕೈ- ಬಾಯಿ ಅವರದ್ದಾಗಿತ್ತು. ಅನ್ಯಾಯವನ್ನು ಸಹಿಸದ,ಸುಳ್ಳು ಹೇಳದ, ಹೆಸರಿಗಾಗಿ,  ಪಟ್ಟಕ್ಕಾಗಿ ಎಂದೂ ಹಂಬಲಿಸದ ಅಪರೂಪದ ವ್ಯಕ್ತಿ ಅವರಾಗಿದ್ದರು. 
 ಕಲ್ಲೂರು ಮೇಘರಾಜ್ ಮುಖಂಡತ್ವದ ಶಾಂತವೇರಿ ಗೋಪಾಲಗೌಡ  ಸಮಿತಿಯ ಎಲ್ಲ ಹೋರಾಟಗಳಲ್ಲಿ ಕಡ್ಲೆಕಾಯಿ ಮುಂದು. ಮೇಘರಾಜ್ ಅವರ ಬಲಗೈ ಯಂತಿದ್ದರು. ಎಷ್ಟೋ ಜನ ಮೇಘರಾಜ್ ಜತೆ ಇದ್ದರೂ ನಂತರ ಕೈಬಿಟ್ಟು ಹೋದರು. ಆದರೆ ಕಡ್ಲೆಕಾಯಿ ಮಾತ್ರ ಎಂದೂ ಕೈಕೊಡಲಿಲ್ಲ. ಅಷ್ಟೊಂದು ವಿಶ್ವಾಸಿಗರಾಗಿದ್ದರು. ಯಾವುದೇ ಹೋರಾಟ, ಪತ್ರಿಕಾಗೋಷ್ಠಿ ಪ್ರತಿಭಟನೆ, ಧರಣಿ ಇರಲಿ, ಎಲ್ಲರಿಗಿಂತ ಮೊದಲೇ ಬಂದು ವ್ಯವಸ್ಥೆ ಮಾಡಿ ಪತ್ರಕರ್ತರನ್ನು  ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು. ದುರ್ಗಿಗುಡಿ ಕನ್ನಡ ಸಂಘದಲ್ಲಿ ಕೆಲಸ ಮಾಡಿದ ಮಂಜಣ್ಣ, ಮಹಾನ್ ದೈವಭಕ್ತರೂ ಆಗಿದ್ದರು. ಇಂತಹ ಮಂಜುನಾಥ ಈಗ ನೆನಪು ಮಾತ್ರ.
ಸದಾ ಕಿತ್ತು ತಿನ್ನುವ ಬಡತನವಿದ್ದರೂ, ಸದಾ ತನ್ನ ಅಳಲನ್ನು ಮರೆತು ನೊಂದವರಿಗೆ ಹೆಗಲು ಕೊಡುತ್ತಿದ್ದರು, ಅವರ ಪರ ಹೋರಾಡುತ್ತಿದ್ದರು. ಭ್ರಷ್ಟರ ಜಾತಕವನ್ನು ಆರ್‌ಟಿಐ ಮೂಲಕ ಪಡೆದು ಹೋರಾಟಕ್ಕೆ ನೆಲೆಗಟ್ಟು ಹಾಕುತ್ತಿದ್ದರು. ಅವರು ಮನಸ್ಸು ಮಾಡಿದ್ದರೆ ಎಷ್ಟೋ ಹಣ ಸಂಪಾದಿಸಬಹದಿತ್ತು. ಆದರೆ ಜನಪ್ರಿಯತೆ, ಗೆಳೆತನ ಸಂಪಾದಿಸಿದರು. ನಿಜವಾದ ಹೋರಾಟಗಾರನಿಗೆ ಇದಕ್ಕಿಂತ ಹೆಚ್ಚಿನ ಗೌರವ ಇನ್ನೇನು ಬೇಕು?       
ಮೂಲತಃ ಶಿವಮೊಗ್ಗದವರೇ ಅದ ಮಂಜುನಾಥ ತಂದೆ ಮುನಿಯಪ್ಪ ಗಾಂಧಿ ಪಾರ್ಕಿನಲ್ಲಿ ಕಡ್ಲೆಕಾಯಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಅಲ್ಲಿಂದ ಆ ಹೆಸರೇ ಅಂಟಿಕೊಂಡಿತು. ಮಂಜುನಾಥ ಸಹ ಇದೇ ಹೆಸರನ್ನು ಇಟ್ಟುಕೊಂಡರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಆತ್ಮೀಯರಾಗಿದ್ದ ಮುನಿಯಪ್ಪ ‘ಶ್ರಮಜೀವಿ’ ಎಂಬ ಬಿರುದನ್ನು ಅವರಿಂದ ಪಡೆದು ಸನ್ಮಾನಿಸಲ್ಪಟ್ಟಿದ್ದರು. ಅಪ್ಪನಂತೆ ಮಗನೂ ಸಹ ಶ್ರಮಜೀವಿಯಾಗಿ, ಸ್ನೇಹಜೀವಿಯಾಗಿ, ಸಂಘಜೀವಿಯಾಗಿ, ಬಡವರಪರ ಜೀವಿಯಾಗಿ ದುಡಿದು ಅಳಿದಿದಿದ್ದಾರೆ. ಮಂಜಣ್ಣನ  ನೆನೆಪು ಸದಾ ಅಮರ.

Tuesday, 15 March 2016

ಆಗ ಅಜ್ಜಿ ಮನೆ; ಈಗ ಬೇಸಿಗೆ ಶಿಬಿರ!

ಬೇಸಿಗೆ ಶಿಬಿರಗಳು  ವಿವಿಧ ರೀತಿಯ ತರಬೇತಿಗಳನ್ನು ಕೊಡುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.  ಆದರೆ, ದುಬಾರಿ ಶುಲ್ಕ ಪಡೆದು ಹಣ ಮಾಡುವ ದಂಧೆಯಾಗಿ ಇತ್ತೀಚೆಗೆ ಮಾರ್ಪಾಡಾಗುತ್ತಿವೆ. ತಮ್ಮ ಮಕ್ಕಳಿಗೆ ಈ ಶಿಬಿರದ ಅವಶ್ಯಕತೆ ಇದೆಯೇ, ರಜೆಯ ಮಜವನ್ನು ಏಕೆ ಸವಿಯಬಾರದು ಎನ್ನುವುದನ್ನು ಪಾಲಕರು ಮೊದಲು ಯೋಚಿಸಬೇಕು. ನೆರೆಹೊರೆಯ ಮಕ್ಕಳೊಂದಿಗೆ ಆಟವಾಡುತ್ತಾ, ಕುಣಿದು, ಕುಪ್ಪಳಿಸುತ್ತಾ, ರಜೆಯ ಸವಿಯನ್ನು ಅನುಭವಿಸದಂತೆ ಬಹುತೇಕ ಪಾಲಕರು ಮಾಡುತ್ತಿದ್ದಾರೆ. ಕಲಿಯುವ ವಯಸ್ಸಿನಲ್ಲಿ ಮಕ್ಕಳು ಕಲಿಯಬೇಕೆನ್ನುವ ಮಾತನ್ನು ಒಪ್ಪುವುದಾದಾದರೂ ಅದು ಬಲವಂತದ ಹೇರಿಕೆಯಾಗಬಾರದು ಎನ್ನುವುದನ್ನೂ ಗಮನಿಸಬೇಕು. ಜೊತೆಗೆ ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಳ್ಳುವತ್ತ ಮಕ್ಕಳನ್ನು ಹೆಚ್ಚು ಪ್ರೋತ್ಸಾಹಿಸುವ ಅವಶ್ಯಕತೆಯೂ ಇದೆ. 
           
 ಕಾಲ ಬದಲಾದಂತೆ ನಾವೂ ಬದಲಾಗಬೇಕು ಎನ್ನುವುದೇನೋ ನಿಜ. ಆದರೆ ಇಷ್ಟರ ಮಟ್ಟಿಗೆ ಬದಲಾಗುವ ಅಗತ್ಯವಿದೆಯೇ? ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆಯಿದು. ಕಾಲದೊಂದಿಗೆ ನಾವೂ ಉರುಳಬೇಕು; ಹೊರಳಬೇಕು ಎನ್ನುವುದು ನಿಜವಾದರೂ, ಕಾಲದೊಳಗೆ ಕಳೆದುಹೋಗುತ್ತಿರುವ ನಾವು, ಸಂಬಂಧಗಳಿಂದ ಕಳಚಿಕೊಳ್ಳುತ್ತಿದ್ದೇವೆ; ಇರುವ ಸಂಬಂಧಗಳೂ ಸಡಿಲಗೊಳ್ಳುತ್ತಿವೆ.  ಬಾಲ್ಯವನ್ನು ನೆನಪು ಮಾಡಿಕೊಳ್ಳುತ್ತಿರುವ ನಾವು,  ಮಕ್ಕಳನ್ನು ಮಾತ್ರ ಆ ಸವಿಸವಿ ನೆನಪಿನಿಂದ ವಂಚಿತರನ್ನಾಗಿ ಮಾಡುತ್ತಿದ್ದೇವೆ.
ಅದೊಂದು ಕಾಲವಿತ್ತು- ಶಾಲೆಗೆೆ ರಜೆ ಬಂದರೆ ಸಾಕು, ಮಕ್ಕಳು ಅಜ್ಜಿ-ಅಜ್ಜನ ಮನೆ, ಚಿಕ್ಕಮ್ಮ- ದೊಡ್ಡಮ್ಮನ ಮನೆ, ಅತ್ತೆ- ಮಾವನ ಮನೆ, ಮೊದಲಾದ ಸಂಬಂಧಿಕರ ಮನೆಗೆ ಹೋಗಿ ರಜೆ ಪೂರ್ತಿ ಕುಣಿದು ಕುಪ್ಪಳಿಸುತ್ತಿದ್ದರು. ಆದರೆ ಈಗ? ಅವೆಲ್ಲ  ಹಿರಿಯರ ಮೆಲುಕುಗಳಷ್ಟೇ. ಮಕ್ಕಳ ಅಂಕಪಟ್ಟಿ ಹಿಡಿದು ಬೀಗುವ ಹೆತ್ತವರಿಗೆ, ಮಕ್ಕಳನ್ನು ಸದಾ ಬ್ಯುಸಿಯಾಗಿಡುವುದರಲ್ಲೇ ಬೀಗುವ ಪಾಲಕರಿಗೆ ಸಂಬಂಧಗಳನ್ನು ಬೆಸೆಯುವ, ಹೊಸೆಯುವ ವ್ಯವಧಾನವಾದರೂ ಎಲ್ಲಿಂದ ಬರಬೇಕು ಹೇಳಿ?
ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಅಜ್ಜ-ಅಜ್ಜಿ ತೋರುವ ಪ್ರೀತಿಯಲ್ಲಿ ಮಕ್ಕಳು ಇರಲು ಬಯಸುವುದಿಲ್ಲ. ಅವರಿಗೇನಿದ್ದರೂ ಪೇಟೆಯ ಜೀವನ ಒಗ್ಗಿ ಹೋಗಿದೆ. ರಜೆಯಲ್ಲೂ ಪಾಲಕರನ್ನು ಬಿಟ್ಟಿರಲಾದ ಸ್ಥಿತಿಗೆ ಬಂದು ಬಿಟ್ಟಿದ್ದಾರೆ. ವೀಡಿಯೋ ಗೇಮ್, ಟಿ.ವಿ., ಮೊಬೈಲ್, ಫೇಸ್‌ಬುಕ್, ವಾಟ್ಸಪ್, ಸಿಟಿಯ ಜೀವನ ಶೈಲಿಗೆ ಮಾರು ಹೋಗಿ ಇಲ್ಲೇ ಉಳಿಯುತ್ತಿದ್ದಾರೆ. ಆ ಹಳ್ಳಿಯ ಜೀವನ ಪದ್ದತಿ, ಅಲ್ಲಿನ ಹಳ್ಳ- ಕೊಳ್ಳಗಳು, ಪರಿಸರ, ಪ್ರಾಣಿ, ಪಕ್ಷಿಗಳು, ನಿಸರ್ಗ, ಮಣ್ಣು-ಮರಳು, ಗಿಡ-ಮರಗಳನ್ನು ಬಳಸಿ ಆಡುವ ಜನಪದ ಸೊಗಡಿನ ಆಟಗಳಲ್ಲಿ ಆಸಕ್ತಿಯೇ ಇಲ್ಲವಾಗಿದೆ.
ಪಟ್ಟಣದ ಯಾಂತ್ರಿಕ ಜೀವನದಲ್ಲೇ ಮುಳುಗೇಳುತ್ತಿದ್ದರೂ ಹಳ್ಳಿಯ ನೆನಪಾಗುವುದಿಲ್ಲ. ಬೇಸಿಗೆ ರಜೆಯಲ್ಲೂ  ಪಾಲಕರು ತಮ್ಮ ಮಗು ಓದುವುದನ್ನೇ ಮರೆಯುತ್ತದೆಂಬ ದೃಷ್ಟಿಯಿಂದ ಮಕ್ಕಳನ್ನು ಹಳ್ಳಿಯಿಂದ ದೂರವಿಟ್ಟು ವಿವಿಧ ಶಿಬಿರಗಳಿಗೆ ಸೇರಿಸಲಾರಂಭಿಸಿದ್ದಾರೆ. ಇದರಿಂದಾಗಿ ಪಟ್ಟಣದಲ್ಲಿ ಈಗ ಬೇಸಿಗೆ ಶಿಬಿರಗಳಿಗೆ ಎಲ್ಲಿಲ್ಲದ ಬೇಡಿಕೆ. ಕೆಲವು ಸಂಘ- ಸಂಸ್ಥೆಗಳಂತೂ ಬೇಸಿಗೆ ಶಿಬಿರ ನಡೆಸುವುದಕ್ಕಾಗಿಯೇ  ಹುಟ್ಟಿಕೊಂಡಿವೆ. ಇನ್ನೂ ಕೆಲವು ವಿದ್ಯಾಸಂಸ್ಥೆಗಳು, ಇತರೇ ಸಂಘಟನೆಗಳೂ ಸಹ ಬೇಸಿಗೆ ಶಿಬಿರವನ್ನು ತಪ್ಪದೇ ನಡೆಸುತ್ತಿವೆ.
ರಜೆಯಲ್ಲಿ ಹಾಯಾಗಿ ಕಾಲ ಕಳೆಯಬೇಕಾದ ಮಕ್ಕಳು ಇತ್ತೀಚಿನ ವರ್ಷಗಳಲ್ಲಿ ಬೇಸಿಗೆ ಶಿಬಿರದ ಹೆಸರಲ್ಲಿ ಬಂಧಿಯಾಗುತ್ತಿದ್ದಾರೆ. ಮಕ್ಕಳಿಗೆ ಮನಸ್ಸಿಲ್ಲದಿದ್ದರೂ ಪಾಲಕರು ಒತ್ತಾಯಪೂರ್ವಕವಾಗಿ ಸೇರಿಸುತ್ತಿದ್ದಾರೆ. ಪಕ್ಕದ ಮನೆಯ ಮಕ್ಕಳು ಸೇರುತ್ತಿದ್ದಾರೆಂದು ತಮ್ಮ ಮನೆಯ ಮಕ್ಕಳನ್ನು ಅವರಿಗೆ ಇಷ್ಟವಿಲ್ಲದಿದ್ದರೂ ಸೇರಿಸಲಾಗುತ್ತಿದೆ. ರಜೆಯನ್ನು ಮಕ್ಕಳು ಮನೆಯಲ್ಲೋ, ಅಜ್ಜಿಯ ಮನೆಯಲ್ಲೋ ಕಳೆಯಲಿ ಎಂಬ ಮನೋಭಾವ ಕಡಿಮೆಯಾಗುತ್ತಿದೆ. ತಮ್ಮ ಮಕ್ಕಳು ಇನ್ನಷ್ಟು ಬುದ್ಧಿವಂತರಾಗಲಿ ಎಂಬ ದೃಷ್ಟಿಯಿಂದ ಎಲ್ಲವನ್ನೂ ಹೇರಲಾಗುತ್ತಿದೆ. ಮಕ್ಕಳಿಗೆ ಏನು ಬೇಕು, ಎಷ್ಟು ಬೇಕು ಎನ್ನುವುದನ್ನು ಪಾಲಕರು ಅರ್ಥ ಮಾಡಿಕೊಳ್ಳದೆ  ಎಷ್ಟಾದರೂ ಶುಲ್ಕ ತೆತ್ತು ಶಿಬಿರಗಳಿಗೆ ನೂಕುತ್ತಿದ್ದಾರೆ. ಜೊತೆಗೆ ಶಾಲೆಯಲ್ಲಿ ಇವೆಲ್ಲವನ್ನೂ ಕಲಿಸುವುದಿಲ್ಲ ಎನ್ನುವ ಭಾವನೆಯೂ ಇದೆ.
ಬೇಸಿಗೆ ಶಿಬಿರಗಳು  ವಿವಿಧ ರೀತಿಯ ತರಬೇತಿಗಳನ್ನು ಕೊಡುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೆಲವರದ್ದು 10 ದಿನದ ಶಿಬಿರವಾಗಿದ್ದರೆ, ಇನ್ನು ಕೆಲವರದ್ದು 15 ದಿನ, 25 ದಿನ, ತಿಂಗಳುಗಟ್ಟಲೆ ಶಿಬಿರ ನಡೆಯುತ್ತದೆ. ಇವುಗಳ ಶುಲ್ಕವೂ ಅಷ್ಟೇ ದುಬಾರಿಯಾಗಿರುತ್ತದೆ. ಹಣ ಮಾಡುವ ದಂಧೆಯಾಗಿ ಇತ್ತೀಚೆಗೆ ಶಿಬಿರಗಳು ಮಾರ್ಪಾಡಾಗುತ್ತಿವೆ. ತಮ್ಮ ಮಕ್ಕಳಿಗೆ ಈ ಶಿಬಿರದ ಅವಶ್ಯಕತೆ ಇದೆಯೇ, ರಜೆಯ ಮಜವನ್ನು ಏಕೆ ಸವಿಯಬಾರದು ಎನ್ನುವುದನ್ನು ಪಾಲಕರು ಮೊದಲು ಯೋಚಿಸಬೇಕು. ನೆರೆಹೊರೆಯ ಮಕ್ಕಳೊಂದಿಗೆ ಆಟವಾಡುತ್ತಾ, ಕುಣಿದು, ಕುಪ್ಪಳಿಸುತ್ತಾ, ರಜೆಯ ಸವಿಯನ್ನು ಅನುಭವಿಸದಂತೆ ಬಹುತೇಕ ಪಾಲಕರು ಮಾಡುತ್ತಿದ್ದಾರೆ.
ಬೇಸಿಗೆ ಶಿಬಿರಗಳು ಪಠ್ಯೇತರ ಚಟುವಟಿಕೆಗೆ ಸಹಕಾರಿಯಾಗಿದ್ದರೆ ಪಾಲಕರು ಕಳುಹಿಸುವುದರಲ್ಲಿ ತಪ್ಪೇನಿಲ್ಲ. ಆದರೆ, ಒತ್ತಾಯದಿಂದ ಮಕ್ಕಳ ಮೇಲೆ ಇದನ್ನು ಹೇರಬಾರದು. ಕಲಿಯುವ ವಯಸ್ಸಿನಲ್ಲಿ ಮಕ್ಕಳು ಕಲಿಯಬೇಕೆನ್ನುವ ಮಾತನ್ನು ಒಪ್ಪುವುದಾದಾದರೂ ಅದು ಬಲವಂತದ ಹೇರಿಕೆಯಾಗಬಾರದು ಎನ್ನುವುದನ್ನೂ ಗಮನಿಸಬೇಕು. ಜೊತೆಗೆ ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಳ್ಳುವತ್ತ ಮಕ್ಕಳನ್ನು ಹೆಚ್ಚು ಪ್ರೋತ್ಸಾಹಿಸುವ ಅವಶ್ಯಕತೆಯೂ ಇದೆ. 

Monday, 14 March 2016

ಬಯಲುಸೀಮೆ ಮೀರಿಸಿದ  ಮಲೆನಾಡ ಸುಡುಬಿಸಿಲು 
  38 ಡಿಗ್ರಿ ಉರಿಯಲ್ಲಿ ಬೇಯುತ್ತಿರುವ ಜನ* ದಾಖಲೆಯ ತಾಪಮಾನ


ಮಲೆನಾಡ ನಗರಿ ಖ್ಯಾತಿಯ ಶಿವಮೊಗ್ಗ ನಗರ ಅಕ್ಷರಶಃ ಧಗಧಗಿಸುತ್ತಿದೆ, ಜನ ಬೇಯುತ್ತಿದ್ದಾರೆ. ಪ್ರಸ್ತುತ ಬೇಸಿಗೆ ನಾಗರಿಕರಿಗೆ ಕರಾಳವಾಗಿ ಪರಿಣಮಿಸುತ್ತಿದೆ. ಸುಡು ಬಿಸಿಲಿಗೆ ಶಿವಮೊಗ್ಗ ನಗರ ಕಾದ ಕಾವಲಿಯಂತಾಗಿ ಪರಿಣಮಿಸಿದೆ. ರಣ ಬಿಸಿಲಿಗೆ ಕುಖ್ಯಾತಿಯಾದ ಗುಲ್ಬರ್ಗಾ, ಬಳ್ಳಾರಿ, ರಾಯಚೂರಿನಂತಹ ಬಯಲುನಾಡು ಪ್ರದೇಶಗಳಲ್ಲಿ ದಾಖಲಾಗುವುದಕ್ಕಿಂತ ಅತಿ ಹೆಚ್ಚು ತಾಪಮಾನ ನಗರದಲ್ಲಿ ದಾಖಲಾಗುತ್ತಿದೆ. ಕಳೆದ ಮೂರು ನಾಲ್ಕು ವಾರಗಳಿಂದ ಬೀಳುತ್ತಿರುವ ಸುಡು ಬಿಸಿಲು ಮಲೆನಾಡಿಗರ ನೆತ್ತಿ ಸುಡುತ್ತಿದೆ. ನಾಗರಿಕರು ಏದುಸಿರು ಬಿಡುವಂತಾಗಿದೆ.


  ಜಿಲ್ಲೆಯಲ್ಲಿ ಬಿಸಿಲಿನ ಪ್ರಖರತೆಗೆ ಜನ ತತ್ತರಿಸಿ ಹೋಗಿದ್ದಾರೆ. ಬೇಸಿಗೆಯ ಆರಂಭದ ತಿಂಗಳಾದ ಮಾರ್ಚ್ ಮೊದಲ ವಾರದಲ್ಲೇ ಶಿವಮೊಗ್ಗದ ಬಿಸಿಲ ಧಗೆ 40 ಡಿಗ್ರಿ ಸೆಲ್ಸಿಯಸ್ ಹತ್ತಿರ ಬರುತ್ತಿದೆ. ಜನರು ಉರಿಬಿಸಿಲಿಗೆ ಬಸವಳಿಯುತ್ತ್ತಿದ್ದಾರೆ. ದಿನದಿಂದ ದಿನಕ್ಕೆ ಉಷ್ಣಾಂಶ ಏರುತ್ತಲೇ ಇದ್ದು, ಇದು ಜನರನ್ನು ಚಿಂತೆಗೀಡುಮಾಡಿದೆ.  ಈ ವರ್ಷದ ಚಳಿಗಾಲದ ಸಂದರ್ಭದಲ್ಲೇ ಬಿಸಿಲಿನ ಪ್ರಖರತೆ ಹೆಚ್ಚಾಗಿತ್ತು. ಇದರಿಂದ ಬೇಸಿಗೆ ಅನುಭವ ಇನ್ನಷ್ಟು ಖಡಕ್ ಆಗಿರಲಿದೆ ಎಂದು ನಿರ್ಧರಿಸಲಾಗಿತ್ತು. ಈಗ ಅದೇ ಮರುಕಳಿಸಿದೆ.
ಕಳೆದೊಂದು ವಾರದಿಂದ ಜಿಲ್ಲೆಯಾದ್ಯಂತ ಉಷ್ಣಾಂಶ ಪ್ರಮಾಣದಲ್ಲಿ ದಿಢೀರ್ ಹೆಚ್ಚಳವಾಗಿದೆ. ಏಪ್ರಿಲ್, ಮೇ ತಿಂಗಳಲ್ಲಿ ತಾಪಮಾನದ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಇದು ನಾಗರಿಕರು ಮತ್ತಷ್ಟು ಆತಂಕಿತರಾಗುವಂತೆ ಮಾಡಿದೆ. ಮುಂದಿನ ಎರಡು ತಿಂಗಳ ವೇಳೆ 45 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಭಯವಿದೆ. ಹೀಗಾದರೆ ಜನರು ಬಿಸಿಲ ಝಳದಿಂದ ಪಾರಾಗುವುದು ಹೇಗೆಂಬ ಯೋಚನೆಯಲ್ಲಿದ್ದಾರೆ.
  ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಪ್ರಸ್ತುತ ಶಿವಮೊಗ್ಗ ನಗರದಲ್ಲಿ ದಾಖಲಾಗುತ್ತಿರುವ ತಾಪಮಾನದ ಪ್ರಮಾಣ ದಾಖಲೆಯಾಗಿದೆ.  ಹವಮಾನ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗುತ್ತಿರುವ ಮಾಹಿತಿ  ಗಮನಿಸಿದರೆ, ಶಿವಮೊಗ್ಗ ನಗರದಲ್ಲಿ ದಾಖಲಾಗುತ್ತಿರುವ ತಾಪಮಾನದ ಗರಿಷ್ಠ ಪ್ರಮಾಣ 38 ಡಿಗ್ರಿಯಿಂದ 40 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಭಾನುವಾರ (ನಿನ್ನೆ) ನಗರದಲ್ಲಿ ದಾಖಲಾಗಿದ್ದ ಗರಿಷ್ಠ ಉಷ್ಣಾಂಶದ ಪ್ರಮಾಣ 39 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು.
 ಬೆಳಿಗ್ಗೆ 8 ಗಂಟೆಯಾಗುತ್ತಿದ್ದಂತೆ ಬಿಸಿಲ ತೀವ್ರತೆಯಲ್ಲಿ ಏರಿಕೆ ಕಂಡುಬರುತ್ತಿದೆ. ಮಧ್ಯಾಹ್ನದ ಹೊತ್ತಿಗೆ ಸೂರ್ಯ ಬೆಂಕಿಯುಗುಳಲಾರಂಭಿಸುತ್ತಾನೆ. ರಸ್ತೆಯಲ್ಲಿ ಓಡಾಡಲಾಗದಷ್ಟು ಬಿಸಿಲು ಬೀಳುತ್ತಿರುತ್ತದೆ. ಮಧ್ಯಾಹ್ನದ ವೇಳೆಯಂತೂ ಡಾಂಬರು ರಸ್ತೆಗಳಲ್ಲಿ ಪಾದರಕ್ಷೆಗಳಿಲ್ಲದೆ ಕಾಲಿಡಲು ಆಗದಂತಹ ಸ್ಥಿತಿಯಿರುತ್ತದೆ. ಆ ಮಟ್ಟಕ್ಕೆ ರಸ್ತೆಗಳು ಬಿಸಿಲಿಗೆ ಕಾದು ಸುಡುತ್ತಿರುತ್ತವೆ. ಬಿಸಿಲಿನ ತಾಪದಿಂದಲೇ ಮಧ್ಯಾಹ್ನದ ವೇಳೆ ನಗರದ ಪ್ರಮುಖ ರಸ್ತೆಗಳಲ್ಲಿ ಜನ-ವಾಹನ ಸಂಚಾರ ವಿರಳವಾಗಿರುವುದು ಕಂಡುಬರುತ್ತಿದೆ.
ಬೆಳಿಗ್ಗೆ 9 ಗಂಟೆಗಾಗಲೇ ರಸ್ತೆಗಿಳಿಯದ ವಾತಾವರಣ ಉಂಟಾಗುತ್ತಿದೆ. ಆ ವೇಳೆಯೇ ತಲೆತಿರುಗುವಷ್ಟು ಬಿಸಿಲ ಅನುಭವವಾಗುತ್ತಿದೆ. ಹೊತ್ತು ಏರಿದಂತೆ ಬಿಸಿಲ ತಾಪವೂ ಹೆಚ್ಚುತ್ತಿದೆ. ಮಧ್ಯಾಹ್ನದ ವೇಳೆ ಮನೆಯಿಂದ ಹೊರಬರಲಾಗದ  ಅನುಭವ. ಕೆಲವು ದಿನಗಳಿಂದ ಮಧ್ಯಾಹ್ನದ ನಂತರ ಸಂಜೆ 5ರವರೆಗೆ ಜನ ಸಂಚಾರ ರಸ್ತೆಗಳಲ್ಲಿ ವಿರಳವಾಗುತ್ತಿದೆ. ಇನ್ನೊಂದೆಡೆ, ಉಷ್ಣಾಂಶ ಹೆಚ್ಚುತ್ತಿರುವುದರಿಂದ ಮಳೆ ಬರುವ ಸಾಧ್ಯತೆಯನ್ನು ನಿರೀಕ್ಷಿಸಲಾಗುತ್ತಿದೆಯಾದರೂ ಶಿವಮೊಗ್ಗ ಜಿಲ್ಲೆಯಲ್ಲಿ ಈತನಕ ಮಳೆ ಬಿದ್ದಿಲ್ಲ. ಸುತ್ತಮುತ್ತಲ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಆಗಾಗ ಮಳೆ ಆಗುತ್ತಿದ್ದರೆ ಉಷ್ಣಾಂಶದಲ್ಲಿ ಸ್ವಲ್ಪ ಮಟ್ಟಿನ ಇಳಿಕೆಯನ್ನು ಕಾಣಲು ಸಾಧ್ಯವಿದೆ.

 ಪರಿಸರ ನಾಶವೇ ಕಾರಣ
’ಬಿರು ಬಿಸಿಲು ನಾಗರಿಕರಲ್ಲಿ ನಾನಾ ರೀತಿಯ ಅನಾರೋಗ್ಯ ಸಮಸ್ಯೆಗಳಿಗೂ ಎಡೆ ಮಾಡಿಕೊಟ್ಟಿದೆ. ಅದರಲ್ಲಿಯೂ, ವಯೋವೃದ್ಧರ ಪಾಡಂತೂ ಹೇಳತೀರದಾಗಿದೆ. ಮನೆಯ ಒಳಗಡೆ ಫ್ಯಾನ್, ಕೂಲರ್, ಎ.ಸಿ.ಯಿಲ್ಲದೆ ಇರಲು ಸಾಧ್ಯವಾಗದಂತಹ ಪರಿಸ್ಥಿತಿಯಿದೆ. ಈಗಲೇ ನಗರದಲ್ಲಿ ಈ ಪರಿಸ್ಥಿತಿಯಾದರೆ ಏಪ್ರಿಲ್, ಮೇ ತಿಂಗಳಲ್ಲಿ ಇನ್ಯಾವ ಸ್ಥಿತಿಯಿರಲಿದೆ ಎಂಬುವುದನ್ನು ಊಹಿಸಿಕೊಂಡರೆ ಭಯವಾಗುತ್ತದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾರ್ಯಗಳಿಗೆ ಸಾವಿರಾರು ಮರಗಳನ್ನು ಕಡಿದುರುಳಿಸಲಾಗಿದೆ. ಅಭಿವೃದ್ದಿಯ ಹೆಸರಿನಲ್ಲಿ ಪರಿಸರ ವಿನಾಶವಾಗುತ್ತಿದೆ. ನಗರದ ಸುತ್ತಮುತ್ತಲು ಗದ್ದೆ, ತೋಟಗಳನ್ನು ಬಡಾವಣೆಗಳಾಗಿ ಅಭಿವೃದ್ದಿಪಡಿಸಲಾಗುತ್ತಿದೆ. ಕೆರೆಗಳು ಕಣ್ಮರೆಯಾಗುತ್ತಿವೆ. ಪರಿಸರದಲ್ಲಿ ಏರುಪೇರು ಕಂಡುಬರುತ್ತಿದ್ದು, ಹವಮಾನದಲ್ಲಿ ವೈಪರೀತ್ಯ ಉಂಟಾಗುತ್ತಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ವರ್ಷದಿಂದ ವರ್ಷಕ್ಕೆ ತಾಪಮಾನ ಹೆಚ್ಚಾಗುತ್ತಿದೆ ಎನ್ನಬಹುದು.
 ಬಿಸಿಲ ಬೇಗೆಯಿಂದ ಪಾರಾಗಲು ನಾಗರಿಕರು ನಾನಾ ರೀತಿಯ ತಂತ್ರಗಳಿಗೆ ಮೊರೆ ಹೋಗುತ್ತಿದ್ದಾರೆ. ಐಸ್ ಕ್ರೀಂ, ಫ್ರೂಟ್ ಸಲಾಡ್, ಜ್ಯೂಸ್ ಶಾಪ್‌ಗಳಿಗೆ ಈಗ ಸುಗ್ಗಿಯ ಕಾಲ. ಅದರಂತೆ ಬೀದಿ ಬದಿಯ ಕಲ್ಲಂಗಡಿ ರಾಶಿ, ಕಲ್ಲಂಗಡಿ, ಖರಬೂಜ, ಬನಾಸ್ಪತ್ರೆಯಂತಯ ತಂಪು ಹಣ್ಣುಗಳಿಗೆ ಎಲ್ಲಿಲ್ಲದ ಬೇಡಿಕೆ ಕಂಡುಬಂದಿದೆ. ವ್ಯಾಪಾರಿಗಳು ಉತ್ತಮ ವ್ಯಾಪಾರ ನಡೆಸುತ್ತಿದ್ದಾರೆ. ಜೊತೆಗೆ ಎಳನೀರು ದರವು ಬಿಸಿಲಿನಂತೆ ಏರತೊಡಗಿದೆ. 25ರಿಂದ 30 ರೂ. ವರೆಗೆ ಮಾರಾಟವಾಗುತ್ತಿದೆ. ಕಬ್ಬಿನ ಜೂಸ್ ಮಾತ್ರ ಸಾಮಾನ್ಯ ಜನರಿಗೂ ಕೈಗೆಟುಕುವ ದರದಲ್ಲಿ ಅಂದರೆ 10ರಿಂದ 15 ರೂ. ನಲ್ಲಿ ಸಿಗುತ್ತಿದೆ. ಇತ್ತೀಚೆಗೆ ಸೆವೆನ್ ಅಪ್, ಕೊಕೊಕೊಲಾ, ಮೊದಲಾದವೂ ಸಹ ಚಿಲ್ಲರೆಯಾಗಿ ಕೆಲವು ಅಂಗಡಿಗಲಲ್ಲಿ ಗ್ಲಾಸಿಗೆ 6 ರಿಂದ 10 ರೂ. ನಂತೆ  ಲಭ್ಯವಾಗುತ್ತಿವೆ.
-----------------

Friday, 11 March 2016

 ಬಿ.ಇಡಿ ವಿದ್ಯಾರ್ಥಿಗಳ ಭವಿಷ್ಯ ಚಿಂತಿಸದ ಕುವೆಂಪು ವಿವಿ
  ಹೊಸ ಪಠ್ಯ ಅಳವಡಿಸಿಕೊಳ್ಳದೆ ಪಾಠ * ಭಾವಿ ಶಿಕ್ಷಕರು ಡೋಲಾಯಮಾನದಲ್ಲಿ



ಬಿ.ಇಡಿ ಕೋರ್ಸಿಗೆ  ಏಕರೂಪ ಪಠ್ಯಕ್ರಮವನ್ನು 2014ರಿಂದಲೇ ರಾಜ್ಯ ಸರ್ಕಾರ ನಿಗದಿಪಡಿಸಿದೆ. ಆದರೆ ಕುವೆಂಪು ವಿವಿ ಇದನ್ನು ಅಳವಡಿಸಿಕೊಂಡಿಲ್ಲ. ಇತ್ತೀಚೆಗೆ ವಿದ್ಯಾರ್ಥಿಗಳು ಈ ಬಗ್ಗೆ ವಿವಿಗೆ ಎಚ್ಚರಿಕೆ ನೀಡಿ ಹೋರಾಟಕ್ಕಿಳಿಯುವ ಸೂಚನೆ ನೀಡಿದ್ದಾರೆ. ಇದರಿಂದ ಸ್ವಲ್ಪ ವಿಚಲಿತರಾದ ಅಧಿಕಾರಿಗಳು ಮುಂದಿನ ವರ್ಷದಿಂದ ರಾಜ್ಯಪಠ್ಯವನ್ನು ಜಾರಿಗೊಳಿಸುವ ಮಾತನಾಡುತ್ತಿದ್ದಾರೆ. ಆದರೆ ಕಳೆದ ಎರಡು ವರ್ಷದಿಂದ ಇದನ್ನು ಜಾರಿಗೊಳಿಸದ ಕಾರಣ ಕುವೆಂಪು ವಿವಿ ಸಿಲೇಬಸ್‌ನಲ್ಲಿ ಕಲಿತ ಮಕ್ಕಳ ಭವಿಷ್ಯವೇನು ಎನ್ನುವುದಕ್ಕೆ ಅಧಿಕಾರಿಗಳು ಸಮಜಾಯಿಷಿ ನೀಡಬೇಕಿದೆ. 


  ರಾಜ್ಯ ಉನ್ನತ ಶಿಕ್ಷಣ ಮಂಡಳಿಯು ಬಿ.ಇಡಿ ಕೋರ್ಸಿಗೆ  ಏಕರೂಪ ಪಠ್ಯಕ್ರಮವನ್ನು 2014ರಿಂದಲೇ ನಿಗದಿಪಡಿಸಿದೆ. ಆದರೆ ಕುವೆಂಪು ವಿ.ವಿ ಒಳಗೊಂಡಂತೆ ನಾಲ್ಕು ವಿ.ವಿಗಳು ಈ ಪಠ್ಯಕ್ರಮವನ್ನು ಅಳವಡಿಸಿಕೊಳ್ಳದೆ ವಿವಿ ನಿಗದಿಪಡಿಸಿದ ಪಾಠ ಮಾಡುತ್ತಿವೆ. ರಾಜ್ಯ ಪಠ್ಯಕ್ರಮ ಅಳವಡಿಸಿಕೊಳ್ಳದೆ ಹೋದರೆ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಲಿದೆ. ಇದು ಗೊತ್ತಿದ್ದೂ ಸಹ ವಿವಿ ಅಧಿಕಾರಿಗಳು ಕಾಲೇಜು ಆಡಳಿತ ಮಂಡಳಿಗಳೇ ಜವಾಬ್ದಾರಿ ಎನ್ನುವ ಮಾತನ್ನಾಡುತ್ತಿದ್ದಾರೆ. ವಿವಿ ಮತ್ತು ಕಾಲೇಜು ಆಡಳಿತ ಮಂಡಳಿಯ ಮಧ್ಯೆಯ ಈ ವಿವಾದದಲ್ಲಿ ಬಿ.ಇಡಿ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ.
ಬಿಇಡಿ ಕೋರ್ಸನ್ನು ಎರಡು ವರ್ಷಕ್ಕೆ ನಿಗದಿ ಮಾಡಿದ ನಂತರ ಸರ್ಕಾರದ ಈ ಪಠ್ಯಕ್ರವನ್ನು ವಿವಿಗಳು ಅಳವಡಿಸಿಕೊಳ್ಳಲೇಬೇಕಿದೆ. ಇಲ್ಲವಾದಲ್ಲಿ ಬಿಇಡಿ ಪದವಿಯ ಅರ್ಹತೆ ಪ್ರಶ್ನಾರ್ಹವಾಗಲಿದೆ. ಈ ಹೊಸ ಪಠ್ಯದಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ  ಈ ಮೂರೂ ಹಂತದಲ್ಲಿ ಉಪಯೋಗವಾಗುವ ತರಬೇತಿಯನ್ನು  ನೀಡಲಾಗಿದೆ. ಈ ತರಬೇತಿ ಪಡೆದವರು ಮಾತ್ರ ಶಿಕ್ಷಕರಾಗಲು ಅರ್ಹರಾಗುತ್ತಾರೆ.  ಸರ್ಕಾರ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರೂ ಕುವೆಂಪು ವಿವಿ ಸಹಿತ ರಾಜ್ಯದ ನಾಲ್ಕು ವಿವಿಯವರು ಹೊಸ ಪಠ್ಯವನ್ನು ಅಳವಡಿಸಿಕೊಳ್ಳದೆ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.  ಪಟ್ಯ ಅಳವಡಿಸಿಕೊಂಡ ವಿವಿಯವರಿಗೆ ಈಗಾಗಲೇ ತರಬೇತಿ ಸಹ ನೀಡಲಾಗಿದೆ. ಅವರೆಲ್ಲ ಮುಂದಿನ ನೇಮಕಾತಿಯಲ್ಲಿ ಶಿಕ್ಷಕರಾಗಲು ಸಿದ್ಧರಾಗಿದ್ದಾರೆ. ಆದರೆ ಈ ನಾಲ್ಕು  (ಕುವೆಂಪು ವಿವಿ, ಬೆಂಗಳೂರು ವಿವಿ, ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ ಮತ್ತು ವಿಜಯಪುರದ ಮಹಿಳಾ ವಿವಿ) ಮಾತ್ರ ತಮ್ಮದೇ ಪಠ್ಯದಲ್ಲಿ ಇನ್ನೂ ಬೋಧಿಸುತ್ತಿದ್ದಾರೆ. ಇದು ಈಗ ವಿದ್ಯಾರ್ಥಿಗಳ ಹೋರಾಟಕ್ಕೆ ಕಾರಣವಾಗುತ್ತಿದೆ.
ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿ ಹೊಂದಿರುವ ಕುವೆಂಪು ವಿವಿ ಅಧೀನದಲ್ಲಿ ಒಟ್ಟೂ 18 ಬಿ.ಎಡ್ ಕಾಲೇಜುಗಳಿವೆ. ಈ ಪೈಕಿ 13 ಶಿವಮೊಗ್ಗ ಜಿಲ್ಲೆಯಲ್ಲೇ ಇವೆ. ಉಳಿದ 5 ಚಿಕ್ಕಮಗಳೂರು ಜಿಲ್ಲೆಯಲ್ಲಿವೆ.  ಕುವೆಂಪು ವಿವಿ ಅಧಿಕಾರಿಗಳನ್ನು ಪಠ್ಯಕ್ರಮದ ಬಗ್ಗೆ ಪ್ರಶ್ನಿಸಿದರೆ ಆಡಲಿತ ಮಂಡಳಿಯವರು ಅರ್ಜಿ ಸಲ್ಲಿಸಿಲ್ಲ. ಅವರು ಅರ್ಜಿ ಸಲ್ಲಿಸಿದರೆ ಮಾತ್ರ ಪಠ್ಯ ಬದಲಾವಣೆ ಮಾಡುವುದಾಗಿ ಹೇಳುತ್ತಿದ್ದಾರೆ. ಆಡಳಿತ ಮಂಡಳಿಗೂ ಪಠ್ಯ ಬದಲಾವಣೆಗೂ ಏನು ಸಂಬಂಧ ಎನ್ನುವುದಕ್ಕೆ ವಿವಿ ಅಧಿಕಾರಿಗಳು ಉತ್ತರಿಸಬೇಕಿದೆ. ಏಕೆಂದರೆ, ಆಡಳಿತ ಮಂಡಳಿಗೆ ಪಠ್ಯಕ್ರಮದ ಮೇಲೆ ಯಾವುದೇ ಅಧಿಕಾರವಿಲ್ಲ. ಜೊತೆಗೆ ಪಠ್ಯ ತಯಾರಿಕೆಯ ಸಮಿತಿಯೇ ಬೇರೆ. ಅವರೇ ಅದರ ನಿರ್ಣಾಯಕರು. ಹೀಗಿರುವಾಗ ಇಲ್ಲಸಲ್ಲದ ನೆಪ ಹೇಳಿ ವಿದ್ಯಾರ್ಥಿಗಳ ಭವಿಷ್ಯ ಹಾಳುಮಾಡುತ್ತಿರುವ ಈ ಅಧಿಕಾರಿಗಳ ಸಾಮಾನ್ಯ ಪ್ರಜ್ಞೆ ಬಗ್ಗೆ ಸಂಶಯ ಉಂಟಾಗುತ್ತಿದೆ.  
ಪಠ್ಯಕ್ರಮವನ್ನು ಅಳವಡಿಸುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾದದ್ದು ವಿವಿ. ಜೊತೆಗೆ, ವಿವಿಯಲ್ಲಿ ಅಕಾಡೆಮಿಕ್ ಕೌನ್ಸಿಲ್ ಮತು ಸಿಂಡಿಕೇಟ್ ಇದೆ. ಅಲ್ಲಿಯೂ ಇದು ಚರ್ಚೆಯಾಗುತ್ತದೆ. ಆದರೆ ವಿವಿಯ ಅಧಿಕಾರಿಗಳಿಗೆ ಇದ್ಯಾವುದರ ಪರಿವೆಯೇ ಇದ್ದಂತೆ ತೋರುತ್ತಿಲ್ಲ. ಆಡಳಿತ ಮಂಡಳಿ ಕಾಲೇಜನ್ನು ನಡೆಸಲು ಇರುತ್ತದೆಯೇ ವಿನಾ ಉಳಿದ ವಿಚಾರಗಳಿಗಲ್ಲ. ತಾನು ಮಾಡಿದ ತಪ್ಪಿಗೆ ಬೆಲೆತೆರಬೇಕಾದವರು ಈಗ ವಿದ್ಯಾರ್ಥಿಗಳು. ಇತ್ತೀಚೆಗೆ ವಿದ್ಯಾರ್ಥಿಗಳು ಈ ಬಗ್ಗೆ ವಿವಿಗೆ ಎಚ್ಚರಿಕೆ ನೀಡಿ ಹೋರಾಟಕ್ಕಿಳಿಯುವ ಸೂಚನೆ ನೀಡಿದ್ದಾರೆ. ಇದರಿಂದ ಸ್ವಲ್ಪ ವಿಚಲಿತರಾದ ಅಧಿಕಾರಿಗಳು ಮುಂದಿನ ವರ್ಷದಿಂದ ರಾಜ್ಯಪಠ್ಯವನ್ನು ಜಾರಿಗೊಳಿಸುವ ಮಾತನಾಡುತ್ತಿದ್ದಾರೆ. ಆದರೆ ಕಳೆದ ಎರಡು ವರ್ಷದಿಂದ ಇದನ್ನು ಜಾರಿಗೊಳಿಸದ ಕಾರಣ ಕುವೆಂಪು ವಿವಿ ಸಿಲೇಬಸ್‌ನಲ್ಲಿ ಕಲಿತ ಮಕ್ಕಳ ಭವಿಷ್ಯವೇನು ಎನ್ನುವುದಕ್ಕೆ ಅಧಿಕಾರಿಗಳು ಸಮಜಾಯಿಷಿ ನೀಡಬೇಕಿದೆ. 
ರಾಜ್ಯದ ಈ ಪಠ್ಯಕ್ರಮ ಇಡೀ ದೇಶದಲ್ಲೇ ಶ್ಲಾಘನೆಗೆ ಒಳಗಾಗಿದೆ. ದೇಶದಲ್ಲಿ ಮೊಟ್ಟಮೊದಲ ಬಾರಿ ಏಕರೂಪ ಪಠ್ಯ ಜಾರಿಗೊಳಿಸಿ ಕೀರ್ತಿ ಕರ್ನಾಟಕದ್ದಾಗಿದೆ. ಇದನ್ನು ಅನೇಕ ರಾಜ್ಯಗಳು ಅಳವಡಿಸಿಕೊಳ್ಳಲು ಮುಂದಾಗಿವೆ. ಆದರೆ ದುರಂತವೆಂದರೆ, ನಮ್ಮದೇ ವಿವಿಗಳು ಇನ್ನೂ ಈ ನಿಟ್ಟಿನಲ್ಲಿ ಹೆಜ್ಜೆ ಇಡದಿರುವುದು. ಇದು ವಿದ್ಯಾರ್ಥಿಗಳ ಬಾಳಿಗೆ ಅಂಧಕಾರ ಕವಿಯುವಂತೆ ಮಾಡಿದೆ. ಈ ವಿವಿಗಳಲ್ಲಿನ ಹಿರಿಯ ಅದಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆಯಿಂದ ಈ ಹಿನ್ನಡೆಯಾಗಿದೆ ಎಂದೇ ಹೇಳಬಹುದು. ಹೊಸದಾಗಿ ಬಂದ ಪದ್ದತಿಯನ್ನು ಆಧುನಿಕ ಶಿಕ್ಷಣದಲ್ಲಿ ಅಳವಡಿಸಿಕೊಳ್ಳದೇ ಹೋದಲ್ಲಿ ಅದರ ಪರಿಣಾಮವಾಗುವುದು ವಿದ್ಯಾರ್ಥಿಗಳ ಮೇಲೆ. ಇದು ಗೊತ್ತಿದ್ದೂ ಉನ್ನತ ಹುದ್ದೆಯಲ್ಲಿ ಆಸೀನರಾಗಿರುವ ವಿವಿಯ ಅಧಿಕಾರಿಗಳು ಗಮನಹರಿಸದಿರುವುದು ಮಾತ್ರ ವಿಪರ್ಯಾಸವೇ ಸರಿ. 
ಮಹತ್ವದ ವಿಷಯವೆಂದರೆ, ಹೊಸ ಪಠ್ಯ ರಚನಾ ಸಮಿತಿಯಲ್ಲಿ ರಾಜ್ಯದ ಎಲ್ಲ ವಿವಿಗಳ ಒಬ್ಬೊಬ್ಬ ಪ್ರತಿನಿಧಿಯನ್ನು ಸೇರಿಸಿಕೊಳ್ಳಲಾಗಿದೆ. ಅವರ ಅನುಮತಿಯನ್ನು ಪಡೆದೇ ಪಾಠಗಳನ್ನು ನಿಗದಿ ಮಾಡಲಾಗಿದೆ. ಈ ಪ್ರತಿನಿಧಿಯನ್ನು ನೇಮಕ ಮಾಡಿದವರು ವಿವಿಯ ಮುಖ್ಯಸ್ಥರು. ಹೀಗಿದ್ದರೂ ಅವರ ಅಭಿಪ್ರಾಯಕ್ಕೆ ವಿವಿಯ ಅಧಿಕಾರಿಗಳು ಮನ್ನಣೆ ಕೊಡದಿರುವುದು ಏಕೆ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ. ಹೊಸ ಪಠ್ಯ ಅಳವಡಿಕೆಗೆ ಹಿಂದೇಟು ಹಾಕುತ್ತಿರುವುದರ ಔಚಿತ್ಯವೇನು ಎನ್ನುವುದನ್ನು ವಿವಿಯ ಅಧಿಕಾರಿಗಳೇ ಬಹಿರಂಗಪಡಿಸಬೇಕಿದೆ.  
ಈಗ ಚಾಲ್ತಿಯಲ್ಲಿರುವ ಹಳೆಯ ಪಠ್ಯಕ್ರಮದಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಉಂಟಾಗಲಿದೆ ಎಂಬ ಆತಂಕವನ್ನು ಕುವೆಂಪು ವಿ.ವಿ ವ್ಯಾಪ್ತಿಯ ಬಿ.ಇಡಿ ವಿದ್ಯಾರ್ಥಿಗಳು ಹಾಗೂ ಪೋಷಕರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಿವಿಯ ರಜಿಸ್ಟ್ರಾರ್ ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.  ಕಡ್ಡಾಯವಾಗಿ ಇತರೆ ಎಲ್ಲಾ ವಿ.ವಿಗಳಂತೆ ರಾಜ್ಯ ಏಕರೂಪ ಪಠ್ಯಕ್ರಮವನ್ನು ಜಾರಿಗೆ ತರಬೇಕೆಂದು ವಿನಂತಿಸಿಕೊಂಡಿದ್ದಾರೆ. ಈಗಾಗಲೇ ಪಠ್ಯಕ್ರಮ ಬದಲಾವಣೆಯ ಗೊಂದಲವಾಗಿದೆ. ಕೂಡಲೇ ಆದೇಶವನ್ನು ಹೊರಡಿಸಿ ಹೊಸ ಪಠ್ಯ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಕೋರಿದ್ದಾರೆ.

Wednesday, 9 March 2016

ಜನರ ಹಿತ, ಸಮಸ್ಯೆ ಮರೆತ ಪಿಡಿಓಗಳು

ಗ್ರಾಮಸಮಸ್ಯೆಗಳ ಸ್ವರೂಪವನ್ನೇ ಸರಿಯಾಗಿ ಅರ್ಥೈಸಿಕೊಳ್ಳದ ಪಿಡಿಓಗಳು ಗ್ರಾಮ ಅಭಿವೃದ್ಧಿಯನ್ನು ಹೇಗೆ ಮಾಡಿಯಾರು, ಅಥವಾ ಸಮಸ್ಯೆಯನ್ನು ಹೇಗೆ ಬಗೆಹರಿಸಿಯಾರು ಎನ್ನುವುದು ಎದುರಿರುವ ಪ್ರಶ್ನೆ. ತಪ್ಪು ಮಾಹಿತಿಯನ್ನು ಸರಿಯಾಗಿ, ಸರಿಯಾದ ಮಾಹಿತಿಯನ್ನು ತಪ್ಪಾಗಿ ಕೊಡುವ ಮೂಲಕ ಮೇಲಧಿಕಾರಿಗಳ ಕೆಂಗಣ್ಣಿಗೆ ತುತ್ತಾಗುತ್ತಿದ್ದಾರೆ. ನೈಜ ಸ್ಥಿತಿ ಹೇಳುವ ಸಾಮರ್ಥ್ಯ ಇಲ್ಲವೇ ಇಲ್ಲ. ಪಿಡಿಓ ಆಗಿ ಗ್ರಾಮದಲ್ಲೇ ನೆಲೆಸಿ ಅಲ್ಲಿನ ಸಮಸ್ಯೆಯನ್ನು ಅರ್ಥೈಕೊಳ್ಳಬೇಕಾಗಿತ್ತಾದರೂ ನಗರದಲ್ಲಿ ನೆಲೆಸಿ  ಗ್ರಾಮೀಣ ಸಮಸ್ಯೆಗೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಗ್ರಾಮದ ವ್ಯಾಪ್ತಿ ಇರುವ 4-6 ಕಿಮೀ ವಿಸ್ತೀರ್ಣದಲ್ಲಿ ಏನಿದೆ, ಏನಿಲ್ಲ ಎಂದರಿಯದ ಇವರಿಂದ ಯಾವ ಅಭಿವೃದ್ಧಿ ಅಥವಾ ಜನರ ಹಿತವನ್ನು ನಿರೀಕ್ಷಿಸಬಹುದು? 

 ಇವರಿಗೆ ತಮ್ಮ  ಗ್ರಾಪಂ ವ್ಯಾಪ್ತಿಯ ವಿಸ್ತೀರ್ಣ, ಜನಸಂಖ್ಯೆ ಎಷ್ಟೆಂದು ಗೊತ್ತಿಲ್ಲ.  ಇರುವ ಬೋರ್‌ವೆಲ್‌ಗಳ ಸಂಖ್ಯೆ ಗೊತ್ತಿಲ್ಲ, ಅದರಲ್ಲೂ ಜೀವಂತ ಮತ್ತು ಕೆಟ್ಟು ಹೋದ ಪಂಪ್‌ಗಳ ಮಾಹಿತಿ ಇಲ್ಲ,  ಈ ಬೋರ್‌ವೆಲ್‌ಗಳ ಆಳ ಎಷ್ಟಿದೆ ಎನ್ನುವುದು ತಿಳಿದಿಲ್ಲ, ತೆರೆದ ಬಾವಿಯ ಆಳ ಮತ್ತು ವಿಸ್ತೀರ್ಣ  ಗೊತ್ತಿಲ್ಲ,  ನೀರಿನ ಲಭ್ಯತೆ ಎಷ್ಟಿದೆ ಎನ್ನುವುದುರ ಅರಿವಿಲ್ಲ, ಹೋಗಲಿ, ಗ್ರಾಮದ  ಜನಸಂಖ್ಯೆಯ ಮಾಹಿತಿಯೂ ಇಲ್ಲ ......
ಇದು ಜಿಲ್ಲೆಯ ಬಹುತೇಕ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಅರ್ಥಾತ್ ಪಿಡಿಓಗಳ ಪರಿಸ್ಥಿತಿ. ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಓ ಮೊನ್ನೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ  ಬಗೆಹರಿಸುವ ಬಗ್ಗೆ  ಕರೆದ ಸಭೆಯಲ್ಲಿ ಕಂಡುಬಂದ ದೃಶ್ಯ.
ಜಿಲ್ಲೆಯಲ್ಲಿ 270 ಪಿಡಿಓಗಳಿದ್ದಾರೆ. ಈ ಪೈಕಿ 92 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಪಿಡಿಓಗಳೇ ಕೊಟ್ಟ ಮಾಹಿತಿ ಮೇರೆಗೆ ತಾಲೂಕಿನ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಇಲಾಖೆಯ ಇಂಜಿನಿಯರ್‌ಗಳು ಪಟ್ಟಿ ಸಿದ್ಧಮಾಡಿದ್ದಾರೆ. ವಿಶೇಷವೆಂದರೆ, ಯಾವ ಗ್ರಾಪಂನಲ್ಲಿ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪವೂ ಇಲ್ಲ ಎಂದು ಡೀಸಿಯವರು ಕೇಳಿದರೆ ಒಬ್ಬರೇ ಒಬ್ಬ ಪಿಡಿಓ ಕೈ ಎತ್ತಿಲ್ಲ, ಎರಡನೆಯದಾಗಿ, ಎಷ್ಟು ಪಿಡಿಓಗಳು ತಮ್ಮ ಗ್ರಾಪಂ ವ್ಯಾಪ್ತಿಯಲ್ಲೇ ವಾಸಿಸುತ್ತಿದ್ದಿರಿ ಎಂದು ಕೇಳಿದಾಗ ಕೈ ಎತ್ತಿದವರು ಮೂವರು ಪಿಡಿಓ ಮಾತ್ರ.  
ಇರುವ ಸಮಸ್ಯೆಯಯನ್ನು ಸರಿಯಾಗಿ ವಿವರಿಸಲಾಗದೆ, ಇಲ್ಲದ ಸಮಸ್ಯೆಯನ್ನು ಹೇಳಿ ಕೆಲವರು ಪೇಚಿಗೆ ಸಿಲುಕಿಕೊಂಡರು. ಸಣ್ಣ-ಪುಟ್ಟ ತಾಂತ್ರಿಕ ಸಮಸ್ಯೆ ಇದ್ದರೂ ಅದರ ಗೋಜಿಗೆ ಹೋಗದೆ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಹೇಳಿಕೊಂಡು ಇಕ್ಕಟ್ಟಿಗೆ ಸಿಲುಕಿಕೊಂಡರು.  ಗ್ರ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಬರೆಯಿಸಿ ತರಾಟೆಗೆ ಒಳಗಾದವರು ಸುಮಾರು 100ಕ್ಕೂ ಹೆಚ್ಚು ಪಿಡಿಓಗಳು. ಕೆರೆ ಬತ್ತಿ ಹೋಗಿದೆ, ಕೈ ಪಂಪ್ ಹಾಳಾಗಿದೆ, ಮೋಟಾರ್ ಸುಟ್ಟು ಹೊಗಿದೆ, ವಿದ್ಯುತ್ ಕನೆಕ್ಷನ್ ಕೊಟ್ಟಿಲ್ಲ ಎಂಬ ಸಬೂಬುಗಳನ್ನು ಮತ್ತು ತಾಂತ್ರಿಕ ಸಮಸ್ಯೆಗಳನ್ನು ಹೇಳಿದರೇ ವಿನಾ ಏನು ಪರಿಹಾರ ಕೈಗೊಳ್ಳಬಹುದೆನ್ನುವುದನ್ನು ಯಾರೂ ಹೇಳಲಿಲ್ಲ. ಗ್ರಾಮದ ನೀರಿನ ಸಮಸ್ಯೆ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ಪಿಡಿಓಗಳೇ ಅಧಿಕವಿದ್ದರು. ಮೊದಲೇ ಬಿಸಿಲ ಝಳದಿಂದ ಕಂಗೆಟಿದ್ದ ಇವರಿಗೆ ಜಿಲ್ಲಾಧಿಕಾರಿ ಮತ್ತು ಸಿಇಒ ಬೆವರಿಳಿಸಿದರು.
ಎಲ್ಲ ತಾಲೂಕಿನ ಪಿಡಿಓಗಳನ್ನು ಕರೆಸಿ ಸಮಸ್ಯೆ ವಿಚಾರಿಸಿದಾಗ ನಿಜಕ್ಕೂ 92 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇಲ್ಲ, ಇರುವುದು 35 ರಿಂದ 40 ಗ್ರಾಮಗಳಲ್ಲಿ ಮಾತ್ರ ಎನ್ನುವುದು ಡಿಸಿ ಮತ್ತು ಸಿಇಒಗೆ ಅರಿವಾದಾಗ ಪಿಡಿಗಳಿಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡರು. ಜಿಲ್ಲಾಧಿಕಾರಿಯವರಂತೂ ನೀವು ಪಂಚಾಯತ್ ಡೆವಲಪ್‌ಮೆಂಟ್ ಆಫೀಸರೋ (ಪಿಡಿಓ) ಅಥವಾ ಪರ್ಸನಾಲಿಟಿ ಡೆವಲಪ್‌ಮೆಂಟ್ ಆಫೀಸರೋ(ಪಿಡಿಓ) ಎಂದು ಗರಂ ಆಗಿ ಪ್ರಶ್ನಿಸಿದರು. ಕಚೇರಿಯಲ್ಲಿ ಕುಳಿತು ಕಾಲಹರಣ ಮಾಡಬೇಡಿ, ಜನರ ಬಳಿ ಹೋಗಿ, ಸಮಸ್ಯೆ ಎಲ್ಲಿದೆ ಎಂದು ಕೇಳಿ ತಿಳಿಯಿರಿ, ಜನರು ಬಂದು ಹೇಳಿದರೆ ಮಾತ್ರ ಸಮಸ್ಯೆ ಇದೆ ಎಂದು ತಿಳಿದುಕೊಳ್ಳಬೇಡಿ, ಹಳ್ಳಿಯಲ್ಲಿ ಕೆಲಸ ಮಾಡಲಾಗದಿದ್ದರೆ ಮನೆಗೆ ಹೋಗಿ, ಕ್ಷೇತ್ರ ಸುತ್ತಾಡಲು ನಿಮಗೇನು ವಾಹನ ಬೇಕೇ, ಇರುವ 3-4 ಕಿಮೀಯನ್ನು ಒಂದೇ ದಿನದಲ್ಲಿ ಸುತ್ತಾಡಿ ಬರಬಹುದು. ಜನರ ಪರಿಚಯ ಮಾಡಿಕೊಂಡು, ನೆರವು ಕಲ್ಪಿಸಿ ಎಂದು ಪಾಠ ಮಾಡಿದರು.
ಸಮಸ್ಯೆ ಹೇಳುವುದಷ್ಟೇ ತಮ್ಮ ಕೆಲಸ, ಪರಿಹಾರ ಮಾಡುವುದಲ್ಲ  ಎಂದು ತಿಳಿದುಕೊಂಡಿದ್ದ  ಪಿಡಿಓಗಳು ಸಮಸ್ಯೆಯನ್ನು ಮಾತ್ರ ಬಿಚ್ಚಿಡಲೆತ್ನಿಸಿದರು. ಇಲ್ಲಿ ಇಲ್ಲದ ಸಮಸ್ಯೆಯನ್ನೂ ಹೇಳಿಕೊಂಡು ಪೇಚಿಗೆ ಸಿಲುಕಿದರು. ಪಂಚಾಯತ್ ಖಾತೆಯಲ್ಲಿ ಹಣವಿದ್ದರೂ ಅದನ್ನು ಬಿಚ್ಚಿ ಖರ್ಚು ಮಾಡಲು ಜಿಗುಟುತನ ತೋರಿಸಿದವರು ತರಾಟೆಗೊಳಗಾದರು.  ಸಮಸ್ಯೆ ಹೇಳಿ ಅದನ್ನು ಪರಿಹರಿಸಿಕೊಳ್ಳಲು ಮೇಲಧಿಕಾರಿಗಳ ನೆರವು ಪಡೆಯಬೇಕಿತ್ತಾದರೂ ಸಮಸ್ಯೆ ನಿವೇದನೆಯಷ್ಟೇ ತಮ್ಮ ಕೆಲಸ ಎಂದುಕೊಂಡು ಬಂದಿದ್ದ ಪಿಡಿಓಗಳು ಸಭೆಯಲ್ಲಿ ನೀರಿಳಿಸಿಕೊಂಡರು. ಪಂಚಾಯತ್ ನಲ್ಲಿ ಇರುವ ಹಣವನ್ನು ಬಳಸದೆ ಕುಳಿತಿದ್ದೀರಿ, ನೀರಿನ ಸೌಕರ್ಯಕ್ಕೆ ಹಣ ಖರ್ಚು ಮಾಡಿದರೆ ನಿಮಗೆ ಸಂಕಟವಾಗುತ್ತದೆಯೇ, ಸಲ್ಲದ ನೆಪ ಹೇಳಿ ನೀರಿನ ಸಮಸ್ಯೆ ಪರಿಹರಿಸದಿದ್ದರೆ ಸುಮ್ಮನಿರಲು ಸಾಧ್ಯವಿಲ್ಲ. ತಾಂತ್ರಿಕ ಮತ್ತು ಸಣ್ಣಪುಟ್ಟ ಸಮಸ್ಯೆ ಇದ್ದವರು ಮೂರು ದಿನದಲ್ಲಿ ಬಗೆಹರಿಸಿಕೊಳ್ಳದಿದ್ದರೆ ಶಿಸ್ತು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಕಟ್ಟಪ್ಪಣೆ ನೀಡಿದಾಗ ಬಹುತೇಕ ಪಿಡಿಓಗಳು ಸುಸ್ತ್ತಾಗಿ ಹೋಗಿದ್ದರು.
 ಸಾಗರ ತಾಲೂಕಿನ ಪಿಡಿಓ ಒಬ್ಬರು  ಎರಡು ವರ್ಷದಿಂದ ಟ್ಯಾಂಕರ್‌ನಲ್ಲಿ ನೀರು ಪೂರೈಸುತ್ತಿದ್ದೇವೆ, ಎರಡು ಕೊಳವೆ ಬಾವಿ ಬೇಕೆಂದು ಇಂಜಿನೀಯರ್ ವಿಭಾಗಕ್ಕೆ ವರ್ಷದ ಹಿಂದೆಯೇ  ಮನವಿ ಕೊಟ್ಟಿದ್ದೇನೆ, ಶಾಸಕರಿಗೂ ಮನವಿ ಕೊಟ್ಟಿದ್ದೇನೆ ಎನ್ನು ಮೂಲಕ ಬಹಿರಂಗವಾಗಿ ನಗೆಪಾಟಲಿಗೀಡಾದರು. ಇಂಜಿನೀಯರ್‌ಗೆ ಮತ್ತು ಶಾಸಕರಿಗೆ ಮನವಿ ಕೊಡುವ ಕೆಲಸವನ್ನು ಪಿಡಿಓಗಳು ಮಾಡುವುದೇ?, ಮನವಿ ಕೊಡುವುದು ಸಾರ್ವಜನಿಕರ ಕೆಲಸ. ಪಿಡಿಓ ಸಮಸ್ಯೆ ನಿಭಾಯಿಸಬೇಕೇ ವಿನಾ ಸಮಸ್ಯೆ ಇದೆ ಎಂದು ಹೇಳಿಕೊಂಡು ಕೈಕಟ್ಟಿ ಕೂಡ್ರುವುದಲ್ಲ. ತಮ್ಮ ಕೆಲಸವೇನು. ಅದರ ಇತಿಮಿತಿಯೇನು ಎಂದರಿಯದ ಪಿಡಿಓಗಳು ಉಗುರಿನಿಂದ ತೆಗೆಯುವುದಕ್ಕೆ ಕೊಡಲಿ ಬಳಸಿದರು ಎನ್ನುವ ಗಾದೆಯಂತೆ  ಇಚ್ಛಾಶಕ್ತಿ ಇಲ್ಲದವರಂತೆ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಸಾಬೀತಾಗುತ್ತಿದೆ. 
ಇದರೊಟ್ಟಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ವಿತರಣೆಯ ಪೂರ್ವಭಾವಿ ಕೆಲಸ ನಡೆಯುತ್ತಿದೆ. ಆ ಆರ್ಜಿಗಳ ಪರಿಶೀಲನೆಯನ್ನೂ ಸಹ ಇವರು ಮಾಡಬೇಕಿದೆ. ಆದರೆ ಈ ಬಗ್ಗೆ ಅರಿವೇ ಇಲ್ಲದ ಉದಾಹರನೆ ಸಹ ಕಂಡುಬಂದಿದೆ. ತಮ್ಮ ವ್ಯಾಪ್ತಿಯಲ್ಲಿರುವ ಕೆರೆಗಳ ಸ್ಥಿತಿ, ಅವುಗಳ ಹೂಳೆತ್ತಿಸುವ ಮೂಲಕ ಕುಡಿಯುವ ನೀರು ಸಿಗುವಂತೆ ಮಾಡುವ ಹೊಣೆಗಾರಿಕೆಯೂ ಇದೆ. ಶೌಚಾಲಯಗಳ ಬಗ್ಗೆ ಜಾಗೃತಿ ಮೂಡಿಸುವುದು, ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಸೂಚಿಸುವುದೂ ಸಹ ಪಿಡಿಓಗಳ ಕೆಲಸ. ಇವನ್ನೆಲ್ಲ ನಿಜಕ್ಕೂ ಅವರು ನಿರ್ವಹಿಸಿದರೆ ಆ ಗ್ರಾಮ ಮಾದರಿಯಾಗುವುದರಲ್ಲಿ ಸಂಶಯವೇ ಇಲ್ಲ. ಆದರೆ ತಮ್ಮ ಕೆಲಸದ ಇತಿಮಿತಿಯೇ ಗೊತ್ತಿಲ್ಲದಿರುವುದು ದೌರ್ಭಾಗ್ಯವೇ ಸರಿ. 

Thursday, 3 March 2016

ಬಿಸಿಲ ಪ್ರತಾಪ  * ಬೆಂಕಿಯ ಕೆಂಡವಾದ ಮಲೆನಾಡ ನಗರ
 ರಾಜ್ಯದಲ್ಲಿ ಮಲೆನಾಡಿ ನಗರಿ ಎಂದೇ ಖ್ಯಾತವಾಗಿರುವ ಶಿವಮೊಗ್ಗ ನಗರದಲ್ಲಿ, ಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೂರ್ಯನ ಝಳಕ್ಕೆ ಅಕ್ಷರಶಃ ನಗರ ತತ್ತರಿಸಿ ಹೋಗಿದ್ದು, ಕಾದ ಕಾವಲಿಯಂತಾಗಿದೆ. ಉಷ್ಣಾಂಶದಲ್ಲಿನ ದಿಢೀರ್ ಏರಿಕೆಯಿಂದ ನಾಗರಿಕರು ಏದುಸಿರು ಬಿಡುವಂತಾಗಿದ್ದು, ನಾನಾ ರೀತಿಯ ಸಮಸ್ಯೆ ಎದುರಿಸುವಂತಾಗಿದೆ.
  ಸೂರ್ಯ ಉಗುಳುತ್ತಿರುವ ಕೆಂಡದಂತಹ ಬಿಸಿಲಿಗೆ ಶಿವಮೊಗ್ಗ ನಗರ ಬಸವಳಿದು ಹೋಗಿದೆ. ಬಿರುಬಿಸಿಲಿಗೆ ಸಾಕ್ಷಿಯಾಗುವ ರಾಜ್ಯದ ಬಯಲುಸೀಮೆಯ ಪ್ರದೇಶಗಳ ಅನುಭವ ಉಂಟು ಮಾಡುತ್ತಿದೆ. ಕಳೆದೊಂದು ವಾರದಿಂದ ನಗರದ ಗರಿಷ್ಠ ತಾಪಮಾನದ ಪ್ರಮಾಣ 35 ಕ್ಕೆ ತಲುಪಿದೆ. ದಿನದಿಂದ ದಿನಕ್ಕೆ ಬಿಸಿಲ ಬೇಗೆ ಏರುಗತಿಯಲ್ಲಿ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಉಷ್ಣಾಂಶದ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಆತಂಕ ಜನಮಾನಸದಲ್ಲಿ ಮನೆ ಮಾಡಿದೆ. 
  ಫೆಬ್ರುವರಿ ಆರಂಭದಲ್ಲಿ ಶಿವಮೊಗ್ಗದಲ್ಲಿ ಬಿಸಿಲ ಬೇಗೆ ಕಡಿಮೆಯಿತ್ತು. ಆದರೆ ತಿಂಗಳಾಂತ್ಯದಲ್ಲೇ ತನ್ನ ಆರ್ಭಟ ತೋರಿಸಲಾರಂಭಿಸಿದೆ. ಫೆಬ್ರವರಿಯಲ್ಲಿಯೇ ಈ ಪರಿಸ್ಥಿತಿಯಾದರೆ ಎಪ್ರಿಲ್, ಮೇ ತಿಂಗಳಲ್ಲಿ ಬಿಸಿಲ ಬೇಗೆ ಇನ್ನ್ಯಾವ ಮಟ್ಟಕ್ಕಿರಲಿದೆ ಎಂಬ ಆತಂಕ ಎದುರಾಗಿದೆ. ಕಳೆದ ವರ್ಷ ಎಪ್ರಿಲ್, ಮೇ ತಿಂಗಳಲ್ಲಿ ನಗರದ ತಾಪಮಾನದ ಪ್ರಮಾಣದಲ್ಲಿ ತೀವ್ರ ಸ್ವರೂಪದ ಏರಿಕೆ ಕಂಡುಬಂದಿತ್ತು.  ಉಷ್ಣಾಂಶ ಪ್ರಮಾಣದಲ್ಲಿ ದಿಢೀರ್ ಹೆಚ್ಚಳ ಕಂಡುಬಂದಿದ್ದು, ಬೆಳಗ್ಗೆ 10 ಗಂಟೆಯಾಗುತ್ತಿದ್ದಂತೆ ಸೂರ್ಯ ನೆತ್ತಿ ಸುಡುತ್ತಿದ್ದಾನೆ. ಮಧ್ಯಾಹ್ನದ ಹೊತ್ತಿಗೆ ಸೂರ್ಯ ಬೆಂಕಿಯುಗುಳುತ್ತಿರುವ ಅನುಭವವಾಗುತ್ತ್ತಿದೆ. ಓಡಾಡಲು ಆಗದಷ್ಟು ಬಿಸಿಲಿದೆ. ಡಾಂಬರು ರಸ್ತೆಯಲ್ಲಿ ಬರಿಗಾಲಲ್ಲಿ ಓಡಾಡುವುದು ಅಸಾಧ್ಯ ಎಂಬ ಮಟ್ಟಿಗೆ ರಸ್ತೆಗಳು ಬಿಸಿಲಿಗೆ ಕಾದ ಕಾವಲಿಯಂತಾಗಿರುತ್ತವೆ. ಬಿಸಿಲ ಕಾರಣದಿಂದ ಮಧ್ಯಾಹ್ನದ ಸಂದರ್ಭದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಜನವಾಹನ ಸಂಚಾರ ವಿರಳವಾಗಿರುತ್ತದೆ. 
  ಪ್ರಸ್ತುತ ನಗರದಲ್ಲಿ ಅನಿಯಮಿತ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ. ಇದೊಂದು ನೆಮ್ಮದಿಯ ವಿಚಾರವಾಗಿದೆ.    ಲೋಡ್‌ಶೆಡ್ಡಿಂಗ್ ಇದ್ದಿದ್ದರೆ ಬಿಸಿಲ ಬೇಗೆಯ ತೀವ್ರತೆ ಮತ್ತಷ್ಟು ಹೆಚ್ಚುವಂತಾಗುತ್ತಿತ್ತು. ಮನೆಯಲ್ಲಿರಲೂ ಆಗದೆ, ಹೊರಗಡೆ ಓಡಾಡಲೂ ಸಾಧ್ಯವಾಗದೆ ನಾಗರಿಕರು ಸಂಕಷ್ಟ ಪಡುವಂತಾಗುತ್ತಿತ್ತು.
 ರಾತ್ರಿ ವೇಳೆಯಂತೂ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಆ ಮಟ್ಟಕ್ಕೆ ಸೆಕೆಯಿರುತ್ತದೆ. ಫ್ಯಾನ್ ಹಾಕಿಕೊಂಡರೂ ಸೆಕೆ ಕಡಿಮೆಯಾಗುತ್ತಿಲ್ಲ. ಈ ಹಿಂದೆ ಶಿವಮೊಗ್ಗ ನಗರದ ಸುತ್ತಮುತ್ತಲು ಸಾಕಷ್ಟು ಅರಣ್ಯ ಪ್ರದೇಶ, ತೋಟ, ಗದ್ದೆಯಿಂದ ಆವೃತವಾಗಿತ್ತು. ಕಳೆದ ಒಂದೆರೆಡು ದಶಕಗಳಿಂದ ಅರಣ್ಯ, ತೋಟ, ಗದ್ದೆಗಳು ಮರೆಯಾಗಿವೆ. ಹಾಗೆಯೇ ನಗರದಲ್ಲಿಯೂ ಕೂಡ ನಾನಾ ಕಾರಣಗಳಿಂದ ಮರಗಳ ಕಡಿತಲೆ ನಿರಂತರವಾಗಿ ನಡೆಸಲಾಗುತ್ತಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ನಗರದಲ್ಲಿ ತಾಪಮಾನದ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ.   

 
ತಂಪು ಪಾನೀಯಗಳಿಗೆ ಮೊರೆ
 ಬಿಸಿಲ ಝಳದಿಂದ ಪಾರಾಗಲು ನಾಗರಿಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಎಳನೀರು, ಮಜ್ಜಿಗೆ ಸೇರಿದಂತೆ ಇತರೆ ತಂಪು ಪಾನೀಯ ಹಾಗೂ ಕಲ್ಲಂಗಡಿ, ಕರುಬೂಜ ಮತ್ತಿತರ ಹಣ್ಣುಗಳಿಗೆ ಸಖತ್ ಡಿಮ್ಯಾಂಡ್ ಕಂಡುಬಂದಿದೆ.
ಇದೇ ವೇಳೆ ಕಬ್ಬಿನ ಹಾಲು, ಇತರೆ ಹಣ್ಣುಗಳ ಜೂಸ್, ಎಳನೀರು ದರ ಮೆಲ್ಲನೆ ಏರಲಾರಂಭಿಸಿದೆ. ವ್ಯಾಪಾರಿಗಳ ಕೈ ಚಳಕ ಈಗಲೇ ಆರಂಭವಾಗಿದೆ. ಎಳನೀರು 25 ರೂ. ಗೆ ಮಾರಾಟವಾಗುತ್ತಿದೆ.  
  ನಗರ ಮಾತ್ರವಲ್ಲದೆ ಜಿಲ್ಲೆಯ ಇತರೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿಯೂ ಬಿಸಿಲ ಅಬ್ಬರ ಜೋರಾಗಿದೆ. ದಟ್ಟ ಅರಣ್ಯ ಪ್ರದೇಶ, ಕೆರೆ-ನದಿಗಳಿಂದ ಆವೃತವಾಗಿರುವ ಪ್ರದೇಶಗಳಲ್ಲಿಯೂ ಬಿಸಿಲ ಬೇಗೆ ಹೆಚ್ಚಿರುವುದು ಕಂಡುಬರುತ್ತಿದೆ. 
ಬಿಸಿಲ ಬೇಗೆ ದಿನೇ ದಿನೇ ತೀವ್ರಗೊಳ್ಳುತ್ತಿರುವುದರಿಂದ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕೆರೆ, ಬಾವಿ, ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಕುಡಿಯುವ ನೀರಿನ ಹಾಹಾಕಾರ ಉಂಟಾಗುವ ಆತಂಕ ಸೃಷ್ಟಿ.