Thursday, 3 March 2016

ಬಿಸಿಲ ಪ್ರತಾಪ  * ಬೆಂಕಿಯ ಕೆಂಡವಾದ ಮಲೆನಾಡ ನಗರ
 ರಾಜ್ಯದಲ್ಲಿ ಮಲೆನಾಡಿ ನಗರಿ ಎಂದೇ ಖ್ಯಾತವಾಗಿರುವ ಶಿವಮೊಗ್ಗ ನಗರದಲ್ಲಿ, ಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೂರ್ಯನ ಝಳಕ್ಕೆ ಅಕ್ಷರಶಃ ನಗರ ತತ್ತರಿಸಿ ಹೋಗಿದ್ದು, ಕಾದ ಕಾವಲಿಯಂತಾಗಿದೆ. ಉಷ್ಣಾಂಶದಲ್ಲಿನ ದಿಢೀರ್ ಏರಿಕೆಯಿಂದ ನಾಗರಿಕರು ಏದುಸಿರು ಬಿಡುವಂತಾಗಿದ್ದು, ನಾನಾ ರೀತಿಯ ಸಮಸ್ಯೆ ಎದುರಿಸುವಂತಾಗಿದೆ.
  ಸೂರ್ಯ ಉಗುಳುತ್ತಿರುವ ಕೆಂಡದಂತಹ ಬಿಸಿಲಿಗೆ ಶಿವಮೊಗ್ಗ ನಗರ ಬಸವಳಿದು ಹೋಗಿದೆ. ಬಿರುಬಿಸಿಲಿಗೆ ಸಾಕ್ಷಿಯಾಗುವ ರಾಜ್ಯದ ಬಯಲುಸೀಮೆಯ ಪ್ರದೇಶಗಳ ಅನುಭವ ಉಂಟು ಮಾಡುತ್ತಿದೆ. ಕಳೆದೊಂದು ವಾರದಿಂದ ನಗರದ ಗರಿಷ್ಠ ತಾಪಮಾನದ ಪ್ರಮಾಣ 35 ಕ್ಕೆ ತಲುಪಿದೆ. ದಿನದಿಂದ ದಿನಕ್ಕೆ ಬಿಸಿಲ ಬೇಗೆ ಏರುಗತಿಯಲ್ಲಿ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಉಷ್ಣಾಂಶದ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಆತಂಕ ಜನಮಾನಸದಲ್ಲಿ ಮನೆ ಮಾಡಿದೆ. 
  ಫೆಬ್ರುವರಿ ಆರಂಭದಲ್ಲಿ ಶಿವಮೊಗ್ಗದಲ್ಲಿ ಬಿಸಿಲ ಬೇಗೆ ಕಡಿಮೆಯಿತ್ತು. ಆದರೆ ತಿಂಗಳಾಂತ್ಯದಲ್ಲೇ ತನ್ನ ಆರ್ಭಟ ತೋರಿಸಲಾರಂಭಿಸಿದೆ. ಫೆಬ್ರವರಿಯಲ್ಲಿಯೇ ಈ ಪರಿಸ್ಥಿತಿಯಾದರೆ ಎಪ್ರಿಲ್, ಮೇ ತಿಂಗಳಲ್ಲಿ ಬಿಸಿಲ ಬೇಗೆ ಇನ್ನ್ಯಾವ ಮಟ್ಟಕ್ಕಿರಲಿದೆ ಎಂಬ ಆತಂಕ ಎದುರಾಗಿದೆ. ಕಳೆದ ವರ್ಷ ಎಪ್ರಿಲ್, ಮೇ ತಿಂಗಳಲ್ಲಿ ನಗರದ ತಾಪಮಾನದ ಪ್ರಮಾಣದಲ್ಲಿ ತೀವ್ರ ಸ್ವರೂಪದ ಏರಿಕೆ ಕಂಡುಬಂದಿತ್ತು.  ಉಷ್ಣಾಂಶ ಪ್ರಮಾಣದಲ್ಲಿ ದಿಢೀರ್ ಹೆಚ್ಚಳ ಕಂಡುಬಂದಿದ್ದು, ಬೆಳಗ್ಗೆ 10 ಗಂಟೆಯಾಗುತ್ತಿದ್ದಂತೆ ಸೂರ್ಯ ನೆತ್ತಿ ಸುಡುತ್ತಿದ್ದಾನೆ. ಮಧ್ಯಾಹ್ನದ ಹೊತ್ತಿಗೆ ಸೂರ್ಯ ಬೆಂಕಿಯುಗುಳುತ್ತಿರುವ ಅನುಭವವಾಗುತ್ತ್ತಿದೆ. ಓಡಾಡಲು ಆಗದಷ್ಟು ಬಿಸಿಲಿದೆ. ಡಾಂಬರು ರಸ್ತೆಯಲ್ಲಿ ಬರಿಗಾಲಲ್ಲಿ ಓಡಾಡುವುದು ಅಸಾಧ್ಯ ಎಂಬ ಮಟ್ಟಿಗೆ ರಸ್ತೆಗಳು ಬಿಸಿಲಿಗೆ ಕಾದ ಕಾವಲಿಯಂತಾಗಿರುತ್ತವೆ. ಬಿಸಿಲ ಕಾರಣದಿಂದ ಮಧ್ಯಾಹ್ನದ ಸಂದರ್ಭದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಜನವಾಹನ ಸಂಚಾರ ವಿರಳವಾಗಿರುತ್ತದೆ. 
  ಪ್ರಸ್ತುತ ನಗರದಲ್ಲಿ ಅನಿಯಮಿತ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ. ಇದೊಂದು ನೆಮ್ಮದಿಯ ವಿಚಾರವಾಗಿದೆ.    ಲೋಡ್‌ಶೆಡ್ಡಿಂಗ್ ಇದ್ದಿದ್ದರೆ ಬಿಸಿಲ ಬೇಗೆಯ ತೀವ್ರತೆ ಮತ್ತಷ್ಟು ಹೆಚ್ಚುವಂತಾಗುತ್ತಿತ್ತು. ಮನೆಯಲ್ಲಿರಲೂ ಆಗದೆ, ಹೊರಗಡೆ ಓಡಾಡಲೂ ಸಾಧ್ಯವಾಗದೆ ನಾಗರಿಕರು ಸಂಕಷ್ಟ ಪಡುವಂತಾಗುತ್ತಿತ್ತು.
 ರಾತ್ರಿ ವೇಳೆಯಂತೂ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಆ ಮಟ್ಟಕ್ಕೆ ಸೆಕೆಯಿರುತ್ತದೆ. ಫ್ಯಾನ್ ಹಾಕಿಕೊಂಡರೂ ಸೆಕೆ ಕಡಿಮೆಯಾಗುತ್ತಿಲ್ಲ. ಈ ಹಿಂದೆ ಶಿವಮೊಗ್ಗ ನಗರದ ಸುತ್ತಮುತ್ತಲು ಸಾಕಷ್ಟು ಅರಣ್ಯ ಪ್ರದೇಶ, ತೋಟ, ಗದ್ದೆಯಿಂದ ಆವೃತವಾಗಿತ್ತು. ಕಳೆದ ಒಂದೆರೆಡು ದಶಕಗಳಿಂದ ಅರಣ್ಯ, ತೋಟ, ಗದ್ದೆಗಳು ಮರೆಯಾಗಿವೆ. ಹಾಗೆಯೇ ನಗರದಲ್ಲಿಯೂ ಕೂಡ ನಾನಾ ಕಾರಣಗಳಿಂದ ಮರಗಳ ಕಡಿತಲೆ ನಿರಂತರವಾಗಿ ನಡೆಸಲಾಗುತ್ತಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ನಗರದಲ್ಲಿ ತಾಪಮಾನದ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ.   

 
ತಂಪು ಪಾನೀಯಗಳಿಗೆ ಮೊರೆ
 ಬಿಸಿಲ ಝಳದಿಂದ ಪಾರಾಗಲು ನಾಗರಿಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಎಳನೀರು, ಮಜ್ಜಿಗೆ ಸೇರಿದಂತೆ ಇತರೆ ತಂಪು ಪಾನೀಯ ಹಾಗೂ ಕಲ್ಲಂಗಡಿ, ಕರುಬೂಜ ಮತ್ತಿತರ ಹಣ್ಣುಗಳಿಗೆ ಸಖತ್ ಡಿಮ್ಯಾಂಡ್ ಕಂಡುಬಂದಿದೆ.
ಇದೇ ವೇಳೆ ಕಬ್ಬಿನ ಹಾಲು, ಇತರೆ ಹಣ್ಣುಗಳ ಜೂಸ್, ಎಳನೀರು ದರ ಮೆಲ್ಲನೆ ಏರಲಾರಂಭಿಸಿದೆ. ವ್ಯಾಪಾರಿಗಳ ಕೈ ಚಳಕ ಈಗಲೇ ಆರಂಭವಾಗಿದೆ. ಎಳನೀರು 25 ರೂ. ಗೆ ಮಾರಾಟವಾಗುತ್ತಿದೆ.  
  ನಗರ ಮಾತ್ರವಲ್ಲದೆ ಜಿಲ್ಲೆಯ ಇತರೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿಯೂ ಬಿಸಿಲ ಅಬ್ಬರ ಜೋರಾಗಿದೆ. ದಟ್ಟ ಅರಣ್ಯ ಪ್ರದೇಶ, ಕೆರೆ-ನದಿಗಳಿಂದ ಆವೃತವಾಗಿರುವ ಪ್ರದೇಶಗಳಲ್ಲಿಯೂ ಬಿಸಿಲ ಬೇಗೆ ಹೆಚ್ಚಿರುವುದು ಕಂಡುಬರುತ್ತಿದೆ. 
ಬಿಸಿಲ ಬೇಗೆ ದಿನೇ ದಿನೇ ತೀವ್ರಗೊಳ್ಳುತ್ತಿರುವುದರಿಂದ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕೆರೆ, ಬಾವಿ, ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಕುಡಿಯುವ ನೀರಿನ ಹಾಹಾಕಾರ ಉಂಟಾಗುವ ಆತಂಕ ಸೃಷ್ಟಿ.

No comments:

Post a Comment