Monday, 14 March 2016

ಬಯಲುಸೀಮೆ ಮೀರಿಸಿದ  ಮಲೆನಾಡ ಸುಡುಬಿಸಿಲು 
  38 ಡಿಗ್ರಿ ಉರಿಯಲ್ಲಿ ಬೇಯುತ್ತಿರುವ ಜನ* ದಾಖಲೆಯ ತಾಪಮಾನ


ಮಲೆನಾಡ ನಗರಿ ಖ್ಯಾತಿಯ ಶಿವಮೊಗ್ಗ ನಗರ ಅಕ್ಷರಶಃ ಧಗಧಗಿಸುತ್ತಿದೆ, ಜನ ಬೇಯುತ್ತಿದ್ದಾರೆ. ಪ್ರಸ್ತುತ ಬೇಸಿಗೆ ನಾಗರಿಕರಿಗೆ ಕರಾಳವಾಗಿ ಪರಿಣಮಿಸುತ್ತಿದೆ. ಸುಡು ಬಿಸಿಲಿಗೆ ಶಿವಮೊಗ್ಗ ನಗರ ಕಾದ ಕಾವಲಿಯಂತಾಗಿ ಪರಿಣಮಿಸಿದೆ. ರಣ ಬಿಸಿಲಿಗೆ ಕುಖ್ಯಾತಿಯಾದ ಗುಲ್ಬರ್ಗಾ, ಬಳ್ಳಾರಿ, ರಾಯಚೂರಿನಂತಹ ಬಯಲುನಾಡು ಪ್ರದೇಶಗಳಲ್ಲಿ ದಾಖಲಾಗುವುದಕ್ಕಿಂತ ಅತಿ ಹೆಚ್ಚು ತಾಪಮಾನ ನಗರದಲ್ಲಿ ದಾಖಲಾಗುತ್ತಿದೆ. ಕಳೆದ ಮೂರು ನಾಲ್ಕು ವಾರಗಳಿಂದ ಬೀಳುತ್ತಿರುವ ಸುಡು ಬಿಸಿಲು ಮಲೆನಾಡಿಗರ ನೆತ್ತಿ ಸುಡುತ್ತಿದೆ. ನಾಗರಿಕರು ಏದುಸಿರು ಬಿಡುವಂತಾಗಿದೆ.


  ಜಿಲ್ಲೆಯಲ್ಲಿ ಬಿಸಿಲಿನ ಪ್ರಖರತೆಗೆ ಜನ ತತ್ತರಿಸಿ ಹೋಗಿದ್ದಾರೆ. ಬೇಸಿಗೆಯ ಆರಂಭದ ತಿಂಗಳಾದ ಮಾರ್ಚ್ ಮೊದಲ ವಾರದಲ್ಲೇ ಶಿವಮೊಗ್ಗದ ಬಿಸಿಲ ಧಗೆ 40 ಡಿಗ್ರಿ ಸೆಲ್ಸಿಯಸ್ ಹತ್ತಿರ ಬರುತ್ತಿದೆ. ಜನರು ಉರಿಬಿಸಿಲಿಗೆ ಬಸವಳಿಯುತ್ತ್ತಿದ್ದಾರೆ. ದಿನದಿಂದ ದಿನಕ್ಕೆ ಉಷ್ಣಾಂಶ ಏರುತ್ತಲೇ ಇದ್ದು, ಇದು ಜನರನ್ನು ಚಿಂತೆಗೀಡುಮಾಡಿದೆ.  ಈ ವರ್ಷದ ಚಳಿಗಾಲದ ಸಂದರ್ಭದಲ್ಲೇ ಬಿಸಿಲಿನ ಪ್ರಖರತೆ ಹೆಚ್ಚಾಗಿತ್ತು. ಇದರಿಂದ ಬೇಸಿಗೆ ಅನುಭವ ಇನ್ನಷ್ಟು ಖಡಕ್ ಆಗಿರಲಿದೆ ಎಂದು ನಿರ್ಧರಿಸಲಾಗಿತ್ತು. ಈಗ ಅದೇ ಮರುಕಳಿಸಿದೆ.
ಕಳೆದೊಂದು ವಾರದಿಂದ ಜಿಲ್ಲೆಯಾದ್ಯಂತ ಉಷ್ಣಾಂಶ ಪ್ರಮಾಣದಲ್ಲಿ ದಿಢೀರ್ ಹೆಚ್ಚಳವಾಗಿದೆ. ಏಪ್ರಿಲ್, ಮೇ ತಿಂಗಳಲ್ಲಿ ತಾಪಮಾನದ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಇದು ನಾಗರಿಕರು ಮತ್ತಷ್ಟು ಆತಂಕಿತರಾಗುವಂತೆ ಮಾಡಿದೆ. ಮುಂದಿನ ಎರಡು ತಿಂಗಳ ವೇಳೆ 45 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಭಯವಿದೆ. ಹೀಗಾದರೆ ಜನರು ಬಿಸಿಲ ಝಳದಿಂದ ಪಾರಾಗುವುದು ಹೇಗೆಂಬ ಯೋಚನೆಯಲ್ಲಿದ್ದಾರೆ.
  ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಪ್ರಸ್ತುತ ಶಿವಮೊಗ್ಗ ನಗರದಲ್ಲಿ ದಾಖಲಾಗುತ್ತಿರುವ ತಾಪಮಾನದ ಪ್ರಮಾಣ ದಾಖಲೆಯಾಗಿದೆ.  ಹವಮಾನ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗುತ್ತಿರುವ ಮಾಹಿತಿ  ಗಮನಿಸಿದರೆ, ಶಿವಮೊಗ್ಗ ನಗರದಲ್ಲಿ ದಾಖಲಾಗುತ್ತಿರುವ ತಾಪಮಾನದ ಗರಿಷ್ಠ ಪ್ರಮಾಣ 38 ಡಿಗ್ರಿಯಿಂದ 40 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಭಾನುವಾರ (ನಿನ್ನೆ) ನಗರದಲ್ಲಿ ದಾಖಲಾಗಿದ್ದ ಗರಿಷ್ಠ ಉಷ್ಣಾಂಶದ ಪ್ರಮಾಣ 39 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು.
 ಬೆಳಿಗ್ಗೆ 8 ಗಂಟೆಯಾಗುತ್ತಿದ್ದಂತೆ ಬಿಸಿಲ ತೀವ್ರತೆಯಲ್ಲಿ ಏರಿಕೆ ಕಂಡುಬರುತ್ತಿದೆ. ಮಧ್ಯಾಹ್ನದ ಹೊತ್ತಿಗೆ ಸೂರ್ಯ ಬೆಂಕಿಯುಗುಳಲಾರಂಭಿಸುತ್ತಾನೆ. ರಸ್ತೆಯಲ್ಲಿ ಓಡಾಡಲಾಗದಷ್ಟು ಬಿಸಿಲು ಬೀಳುತ್ತಿರುತ್ತದೆ. ಮಧ್ಯಾಹ್ನದ ವೇಳೆಯಂತೂ ಡಾಂಬರು ರಸ್ತೆಗಳಲ್ಲಿ ಪಾದರಕ್ಷೆಗಳಿಲ್ಲದೆ ಕಾಲಿಡಲು ಆಗದಂತಹ ಸ್ಥಿತಿಯಿರುತ್ತದೆ. ಆ ಮಟ್ಟಕ್ಕೆ ರಸ್ತೆಗಳು ಬಿಸಿಲಿಗೆ ಕಾದು ಸುಡುತ್ತಿರುತ್ತವೆ. ಬಿಸಿಲಿನ ತಾಪದಿಂದಲೇ ಮಧ್ಯಾಹ್ನದ ವೇಳೆ ನಗರದ ಪ್ರಮುಖ ರಸ್ತೆಗಳಲ್ಲಿ ಜನ-ವಾಹನ ಸಂಚಾರ ವಿರಳವಾಗಿರುವುದು ಕಂಡುಬರುತ್ತಿದೆ.
ಬೆಳಿಗ್ಗೆ 9 ಗಂಟೆಗಾಗಲೇ ರಸ್ತೆಗಿಳಿಯದ ವಾತಾವರಣ ಉಂಟಾಗುತ್ತಿದೆ. ಆ ವೇಳೆಯೇ ತಲೆತಿರುಗುವಷ್ಟು ಬಿಸಿಲ ಅನುಭವವಾಗುತ್ತಿದೆ. ಹೊತ್ತು ಏರಿದಂತೆ ಬಿಸಿಲ ತಾಪವೂ ಹೆಚ್ಚುತ್ತಿದೆ. ಮಧ್ಯಾಹ್ನದ ವೇಳೆ ಮನೆಯಿಂದ ಹೊರಬರಲಾಗದ  ಅನುಭವ. ಕೆಲವು ದಿನಗಳಿಂದ ಮಧ್ಯಾಹ್ನದ ನಂತರ ಸಂಜೆ 5ರವರೆಗೆ ಜನ ಸಂಚಾರ ರಸ್ತೆಗಳಲ್ಲಿ ವಿರಳವಾಗುತ್ತಿದೆ. ಇನ್ನೊಂದೆಡೆ, ಉಷ್ಣಾಂಶ ಹೆಚ್ಚುತ್ತಿರುವುದರಿಂದ ಮಳೆ ಬರುವ ಸಾಧ್ಯತೆಯನ್ನು ನಿರೀಕ್ಷಿಸಲಾಗುತ್ತಿದೆಯಾದರೂ ಶಿವಮೊಗ್ಗ ಜಿಲ್ಲೆಯಲ್ಲಿ ಈತನಕ ಮಳೆ ಬಿದ್ದಿಲ್ಲ. ಸುತ್ತಮುತ್ತಲ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಆಗಾಗ ಮಳೆ ಆಗುತ್ತಿದ್ದರೆ ಉಷ್ಣಾಂಶದಲ್ಲಿ ಸ್ವಲ್ಪ ಮಟ್ಟಿನ ಇಳಿಕೆಯನ್ನು ಕಾಣಲು ಸಾಧ್ಯವಿದೆ.

 ಪರಿಸರ ನಾಶವೇ ಕಾರಣ
’ಬಿರು ಬಿಸಿಲು ನಾಗರಿಕರಲ್ಲಿ ನಾನಾ ರೀತಿಯ ಅನಾರೋಗ್ಯ ಸಮಸ್ಯೆಗಳಿಗೂ ಎಡೆ ಮಾಡಿಕೊಟ್ಟಿದೆ. ಅದರಲ್ಲಿಯೂ, ವಯೋವೃದ್ಧರ ಪಾಡಂತೂ ಹೇಳತೀರದಾಗಿದೆ. ಮನೆಯ ಒಳಗಡೆ ಫ್ಯಾನ್, ಕೂಲರ್, ಎ.ಸಿ.ಯಿಲ್ಲದೆ ಇರಲು ಸಾಧ್ಯವಾಗದಂತಹ ಪರಿಸ್ಥಿತಿಯಿದೆ. ಈಗಲೇ ನಗರದಲ್ಲಿ ಈ ಪರಿಸ್ಥಿತಿಯಾದರೆ ಏಪ್ರಿಲ್, ಮೇ ತಿಂಗಳಲ್ಲಿ ಇನ್ಯಾವ ಸ್ಥಿತಿಯಿರಲಿದೆ ಎಂಬುವುದನ್ನು ಊಹಿಸಿಕೊಂಡರೆ ಭಯವಾಗುತ್ತದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾರ್ಯಗಳಿಗೆ ಸಾವಿರಾರು ಮರಗಳನ್ನು ಕಡಿದುರುಳಿಸಲಾಗಿದೆ. ಅಭಿವೃದ್ದಿಯ ಹೆಸರಿನಲ್ಲಿ ಪರಿಸರ ವಿನಾಶವಾಗುತ್ತಿದೆ. ನಗರದ ಸುತ್ತಮುತ್ತಲು ಗದ್ದೆ, ತೋಟಗಳನ್ನು ಬಡಾವಣೆಗಳಾಗಿ ಅಭಿವೃದ್ದಿಪಡಿಸಲಾಗುತ್ತಿದೆ. ಕೆರೆಗಳು ಕಣ್ಮರೆಯಾಗುತ್ತಿವೆ. ಪರಿಸರದಲ್ಲಿ ಏರುಪೇರು ಕಂಡುಬರುತ್ತಿದ್ದು, ಹವಮಾನದಲ್ಲಿ ವೈಪರೀತ್ಯ ಉಂಟಾಗುತ್ತಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ವರ್ಷದಿಂದ ವರ್ಷಕ್ಕೆ ತಾಪಮಾನ ಹೆಚ್ಚಾಗುತ್ತಿದೆ ಎನ್ನಬಹುದು.
 ಬಿಸಿಲ ಬೇಗೆಯಿಂದ ಪಾರಾಗಲು ನಾಗರಿಕರು ನಾನಾ ರೀತಿಯ ತಂತ್ರಗಳಿಗೆ ಮೊರೆ ಹೋಗುತ್ತಿದ್ದಾರೆ. ಐಸ್ ಕ್ರೀಂ, ಫ್ರೂಟ್ ಸಲಾಡ್, ಜ್ಯೂಸ್ ಶಾಪ್‌ಗಳಿಗೆ ಈಗ ಸುಗ್ಗಿಯ ಕಾಲ. ಅದರಂತೆ ಬೀದಿ ಬದಿಯ ಕಲ್ಲಂಗಡಿ ರಾಶಿ, ಕಲ್ಲಂಗಡಿ, ಖರಬೂಜ, ಬನಾಸ್ಪತ್ರೆಯಂತಯ ತಂಪು ಹಣ್ಣುಗಳಿಗೆ ಎಲ್ಲಿಲ್ಲದ ಬೇಡಿಕೆ ಕಂಡುಬಂದಿದೆ. ವ್ಯಾಪಾರಿಗಳು ಉತ್ತಮ ವ್ಯಾಪಾರ ನಡೆಸುತ್ತಿದ್ದಾರೆ. ಜೊತೆಗೆ ಎಳನೀರು ದರವು ಬಿಸಿಲಿನಂತೆ ಏರತೊಡಗಿದೆ. 25ರಿಂದ 30 ರೂ. ವರೆಗೆ ಮಾರಾಟವಾಗುತ್ತಿದೆ. ಕಬ್ಬಿನ ಜೂಸ್ ಮಾತ್ರ ಸಾಮಾನ್ಯ ಜನರಿಗೂ ಕೈಗೆಟುಕುವ ದರದಲ್ಲಿ ಅಂದರೆ 10ರಿಂದ 15 ರೂ. ನಲ್ಲಿ ಸಿಗುತ್ತಿದೆ. ಇತ್ತೀಚೆಗೆ ಸೆವೆನ್ ಅಪ್, ಕೊಕೊಕೊಲಾ, ಮೊದಲಾದವೂ ಸಹ ಚಿಲ್ಲರೆಯಾಗಿ ಕೆಲವು ಅಂಗಡಿಗಲಲ್ಲಿ ಗ್ಲಾಸಿಗೆ 6 ರಿಂದ 10 ರೂ. ನಂತೆ  ಲಭ್ಯವಾಗುತ್ತಿವೆ.
-----------------

No comments:

Post a Comment