Thursday, 31 March 2016




ಮೌಲ್ಯಮಾಪನ ಬಹಿಷ್ಕಾರ-’ಗುರು’ ಲಘುವಾಗದಿರಲಿ 

ಯಾವುದೇ ಕಾರಣಕ್ಕೂ ಉಪನ್ಯಾಸಕರು ಮೌಲ್ಯಮಾಪನಕ್ಕೆ ಬಹಿಷ್ಕಾರ ಹಾಕುವುದು ಸಲ್ಲದು. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಗಮನವನ್ನು ಬೇರೆ ರೀತಿಯಿಂದ  ಸೆಳೆಯಬೇಕೇ ಹೊರತು, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವುದು ಸರ್ವಥಾ ಸಲ್ಲದು. ಆದರೆ ಕೆಲವು ವರ್ಷಗಳಿಂದೀಚೆಗೆ ಮೌಲ್ಯಮಾಪನಕ್ಕೆ ಬಹಿಷ್ಕಾರ ಹಾಕುವುದು ಉಪನ್ಯಾಸಕರ ಚಾಳಿಯಾಗಿ ಬಿಟ್ಟಿದೆ. ಖಂಡಿತವಾಗಿಯೂ ಉಪನ್ಯಾಸಕರ ಬೇಡಿಕೆಗೆ ಎಲ್ಲರ ಸಹಮತವೂ ಇದೆ. ಆದರೆ ಉತ್ತರ ಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡ್ಡಿಯಾಗುವಂತೆ ಮಾಡುವುದು ಸರಿಯಾದ ಕ್ರಮವಲ್ಲ ಅನ್ನುವುದಷ್ಟೇ ನಮ್ಮೆಲ್ಲರ ಆಕ್ಷೇಪ. ಏಕೆಂದರೆ ಈ ಬಹಿಷ್ಕಾರದಿಂದಾಗಿ ಉನ್ನತ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಪ್ರತಿಬಾರಿ ಮೌಲ್ಯಮಾಪನದ ವೇಳೆ ಬಹಿಷ್ಕಾರ ಹಾಕುವ ಉಪನ್ಯಾಸಕರ ವಿರುದ್ದ ಸರ್ಕಾರವೂ ಕ್ರಮ ಜರುಗಿಸಬೇಕು. ಇದನ್ನು ಉಪನ್ಯಾಸಕರು ಅರಿತುಕೊಳ್ಳಬೇಕು. ತಮ್ಮ ‘ಮೌಲ್ಯ’ವೇ ಮಾಪನವಾಗುವಂತಹ ತಪ್ಪುಹೆಜ್ಜೆಯನ್ನು ಇಡಬಾರದು. ಈ ಬಾರಿ ವಿದ್ಯಾರ್ಥಿಗಳ ಪೋಷಕರು ಕೂಡ ಉಪನ್ಯಾಸಕರ ಈ ಚಾಳಿಯ ವಿರುದ್ದ ಗರಂ ಆಗಿದ್ದಾರೆ. ಉಪನ್ಯಾಸಕರ ಧರಣಿಗೆ ಪ್ರತಿಧರಣಿ ನಡೆಸಲು  ಕೆಲವು ಸಂಘಟನೆಗಳೂ ಸನ್ನದ್ಧವಾಗಿವೆ. ಸಕಾಲದಲ್ಲಿ ಮೌಲ್ಯಮಾಪನ ಮಾಡಿ, ಸಿಇಟಿ ಮೊದಲಾದ ಪರೀಕ್ಷೆ ಬರೆಯುವವರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಇಲ್ಲವಾದಲ್ಲಿ ಉಪನ್ಯಾಸಕರ ನಿಲುವಿನ ವಿರುದ್ಧ ಆಕ್ರೋಶ ಭುಗಿಲೇಳುವುದು ಖಚಿತ.


  ಇಂದು ಉಪನ್ಯಾಸಕ ವರ್ಗಕ್ಕೆ ಗೌರವಯುತ ವೇತನವಿದೆ. ಸಮಾಜದಲ್ಲಿ ಅತ್ಯಂತ ಪೂಜನೀಯ ಸ್ಥಾನಮಾನವಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಂತಹ ಬಹುದೊಡ್ಡ ಜವಾಬ್ದಾರಿಯಿರುವ ಇವರನ್ನು ಜನರು ಗೌರವದಿಂದ ಕಾಣುತ್ತಾರೆ. ಇವರಿಂದ ಕಲಿತುಹೋದವರು ಸೆಲ್ಯೂಟ್ ಹೊಡೆಯುತ್ತಾರೆ, ಸದಾ ಸ್ಮರಿಸಿಕೊಳ್ಳುತ್ತಾರೆ.  ಆದರೆ ತಮ್ಮದೇ ವಿದ್ಯಾರ್ಥಿಗಳ ಉತ್ತರ ಪತ್ರಿಕೆ  ಮೌಲ್ಯಮಾಪನಕ್ಕೆ ಬಹಿಷ್ಕಾರ ಹಾಕುವ ನಮ್ಮ ಉಪನ್ಯಾಸಕ ಬಂಧುಗಳಿಗೆ ಏನೆನ್ನೋಣ? ಇದು ಪಿಯು ಕಾಲೇಜು ಉಪನ್ಯಾಸಕರ ‘ಮೌಲ್ಯ’ ಮಾಪನ!
1998ರಿಂದ ಬಹುತೇಕ ಪ್ರತಿ ವರ್ಷ ಎಪ್ರಿಲ್ ಬಂತೆಂದರೆ ಸಾಕು-ಪಿಯು ಉಪನ್ಯಾಸಕರ ಬಹಿಷ್ಕಾರದ ಸುದ್ದಿ ರಾಜ್ಯಮಟ್ಟದಲ್ಲಿ ಮೊಳಗುತ್ತದೆ. ಇದರಿಂದ ಅತಿ ಹೆಚ್ಚು ಆತಂಕಿತರಾಗುವವರು ವಿದ್ಯಾರ್ಥಿಗಳ ಪಾಲಕರು, ನಂತರ ವಿದ್ಯಾರ್ಥಿಗಳು. ಏಕೆಂದರೆ, ಅವರು ತಮ್ಮ ಮಕ್ಕಳ ಭವ್ಯ ಭವಿಷ್ಯದ ಕನಸು ಹೊತ್ತಿರುತ್ತಾರೆ. ಎಷ್ಟೋ ಪಾಲಕರು ತಾವು ಕಲಿಯದಿದ್ದರೂ, ಮಕ್ಕಳಾದರೂ ಚೆನ್ನಾಗಿ ಓದಿ ಉನ್ನತ ಸ್ಥಾನಮಾನ ಪಡೆಯಲಿ ಎಂಬ ಮಹದಾಸೆ ಹೊಂದಿರುತ್ತಾರೆ. ವರ್ಷಗಟ್ಟಲೆ ಕಲಿತು ಪರೀಕ್ಷ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುವ ವೇಳೆ ಉಪನ್ಯಾಸಕರ ಬಹಿಷ್ಕಾರ, ಬೆದರಿಕೆ ಕೇಳಿಬರಲಾರಂಭಿಸುತ್ತದೆ. ಹಾಗಂತ ಇವರ ಬೇಡಿಕೆಯ ಪಟ್ಟಿ ದೊಡ್ಡದೇನಿಲ್ಲ.  ಒಂದೇ, ಅದು ವೇತನ ಪರಿಷ್ಕರಣೆ.
ಸಮಾಜದಲ್ಲಿ ಅತ್ಯಂತ ದಟ್ಟ ದರಿದ್ರರಿದ್ದಾರೆ, ಅವತ್ತಿನ ದುಡಿತದಿಂದಲೇ ತಿನ್ನುವ ಜನರಿದ್ದಾರೆ. ಎಷ್ಟೋ ಕಡಿಮೆ ಸಂಬಳ ಪಡೆದು ಬದುಕಿನ ಗಾಡಿ ಓಡಿಸುವ ನೌಕರರಿದ್ದಾರೆ. ಅವರನ್ನು ನೋಡಿಯಾದರೂ ತಮಗೆ ಸಿಗುವ ವೇತನದಿಂದ ಇವರು ತೃಪ್ತಿಪಡಬೇಕಿತ್ತು. ತಾವೇ ಎಷ್ಟೋ ಧನ್ಯರು ಎಂದುಕೊಳ್ಳಬೇಕಿತ್ತು. ಇದರರ್ಥ, ಇವರ ವೇತನ ಪರಿಷ್ಕರಣೆ ಸಲ್ಲದೆಂದಲ್ಲ. ಖಂಡಿತ ಕೇಳಲಿ, ಹೋರಾಡಲಿ. ಇದನ್ನು ಕೇಳಲೂ ವೇಳೆಯಿದೆ; ಹೋರಾಟ ಮಾಡಲೂ ದಾರಿ ಬೇರೆ ಇದೆ. ಪಾಠ ಮಾಡುವಾಗ ಪಾಠ ಮಾಡಬೇಕು, ಅದನ್ನು ಬಿಟ್ಟು ಪಾಠ ಮಾಡದೆ, ತರಗತಿಗೆ ಹಾಜರಾಗದೆ ಬಹಿಷ್ಕರಿಸುವುದು, ಪರೀಕ್ಷೆ ನಡೆಸದೇ ಇರುವುದು, ಮೌಲ್ಯಮಾಪನಕ್ಕೆ ತಡೆಮಾಡುವುದು ಇವೆಲ್ಲ ಖಂಡಿತವಾಗಿ ಈ ಸ್ಥಾನದಲ್ಲಿರುವವರಿಗೆ ಶೋಭೆ ತರುವಂಥದ್ದಲ್ಲ.
 ಒಂದು ಕಾಲಕ್ಕೆ ವಿದ್ಯೆ ಕೂಡ ದಾನವಾಗಿತ್ತು. ಆದರೆ ಯಾವಾಗ ಶಿಕ್ಷಣವೂ ಒಂದು ವೃತ್ತಿಯೆಂದು ಪರಿಗಣಿತವಾಯಿತೋ ಅಂದೇ ಗುರು ಲಘುವಾದ; ಆಚಾರ್ಯ ಆಚೆಗಾದ. ಗುರುವಿನ ಸ್ಥಾನದಲ್ಲಿರುವವರನ್ನು ನಮಿಸುವ ಪರಂಪರೆ ನಮ್ಮದು. ಅದನ್ನು ಉಳಿಸಿಕೊಳ್ಳುವುದು ಅವರ ಕೆಲಸ. ಆದರೆ, ಕಳೆದ ಕೆಲವು ವರ್ಷಗಳಿಂದ ಪಾಠಕ್ಕಿಂತ, ಪರೀಕ್ಷೆಗಿಂತ ವೇತನವೇ ಪ್ರಮುಖವಾಗಿರುವುದು ಆ ವೃತ್ತಿಘನತೆಯ ದುರಂತವೇ ಸರಿ. ಲಘುವಾಗುತ್ತಿರುವ ಗುರುವನ್ನು  ಜನರು ಲೇವಡಿಮಾಡುವ ಸ್ಥಿತಿಗೆ ಶಿಕ್ಷಕರು ಇಳಿಯುತ್ತಿದ್ದಾರೆ.
ಸರ್ಕಾರ ಸಕಾಲದಲ್ಲಿ ವೇತನ ಏರಿಸಲೇಬೇಕು. ಇದರಲ್ಲಿ ಎರಡು ಮಾತಿಲ್ಲ. ಆದರೆ, ಅದಕ್ಕಾಗಿ ಹೋರಾಟದ ಮಾರ್ಗ ಬದಲಾಗಬೇಕು. ಪಾಠ ಪ್ರವಚನದ ಕಾಲದಲ್ಲಿ ಬೆಂಗಳೂರಿಗೆ  ಹೋಗಿ ಸರಣಿ ಪ್ರಕಾರ ಧರಣಿ ಮಾಡಲಿ. ಜಿಲ್ಲಾ ಕೇಂದ್ರದಲ್ಲೂ ಇದನ್ನು ಮಾಡಲಿ. ಆದರೆ ತಮ್ಮ ಧರಣಿ, ಹೋರಾಟದಿಂದ ಒಬ್ಬ ವಿದ್ಯಾರ್ಥಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ನಷ್ಟವಾದಲ್ಲಿ ತಮ್ಮ ಕರ್ತವ್ಯದಲ್ಲಿ ವಿಫಲರಾದಂತಾಗುತ್ತದೆ. ವೇತನಕ್ಕಿಂತ ಕಲಿಸುವುದು ಮುಖ್ಯ ಎನ್ನುವುದನ್ನು ಮೊದಲು ಅರಿಯಬೇಕಿದೆ. ನೀವು ಕಲಿಸಿದರೆ ಮಾತ್ರ ವೇತನವಲ್ಲವೆ? ಕಾಲೇಜಿಗೆ ಬೀಗ ಹಾಕುವಂತೆ ಎಲ್ಲರೂ ಧರಣಿ, ಮುಷ್ಕರ, ಬಹಿಷ್ಕಾರ ಎನ್ನುತ್ತ ಹೋದರೆ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಯಾವ ಪರಿಣಾಮವಾದೀತೆನ್ನುವ ಪರಿಕಲ್ಪನೆಯಾದರೂ ಇದೆಯೇ.  ಜೊತೆಗೆ, ತಾವು ಕಲಿಸುವ ವಿದ್ಯಾರ್ಥಿಗಳಿಗೆ ಅನ್ಯಾಯವನ್ನುಂಟು ಮಾಡಿದಂತಾಗಲಿಲ್ಲವೇ? ಗುರುವನ್ನು ಪೂಜ್ಯರೆಂದು ಕಾಣುವ ಮನೋಭಾವ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಲು ಇಂತಹ ವರ್ತನೆಗಳೂ ಕಾರಣ ಎಂದೆನಿಸುವುದಿಲ್ಲವೇ? ವೇತನ ಆಯೋಗದ ಶಿಫಾರಸ್ಸಿನಂತೆ, ಕುಮಾರ್ ನಾಯ್ಕ  ಸಮಿತಿ ನೀಡಿದ ವರದಿಯಂತೆ ಸರ್ಕಾರ ನಿರ್ಧಾರ ಕೈಗೊಳ್ಳಲು ಇವರು ಒತ್ತ್ತಡ ಹೇರಲಿ. ಅದಕ್ಕೆ ಯಾವ ಸಾರ್ವಜನಿಕರ ಆಕ್ಷೇಪವೂ ಖಂಡಿತ ಇಲ್ಲ.
ಮಾರ್ಚ್  22ರಂದು ಶಿವಮೊಗ್ಗಕ್ಕೆ ಪಿಯು ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ತಿಮ್ಮಯ್ಯ ಪುರ್ಲೆ ಆಗಮಿಸಿದ್ದರು. ಅವರು ಪತ್ರಿಕಾಗೋಷ್ಠಿಯಲ್ಲಿ  ಬರೇ ವಿದ್ಯಾರ್ಥಿಗಳ ಪಾಠ, ಪ್ರವಚನ, ಭವಿಷ್ಯ ಎಂದು ಕುಳಿತರೆ ನಮ್ಮ ಸಮಸ್ಯೆ ಕೇಳುವವರಾರು ಎಂದರು. ಒಬ್ಬ ರಾಜ್ಯಾಧ್ಯಕ್ಷರಿಂದ ಈ ಮಾತನ್ನು ಯಾರೂ ನಿರೀಕ್ಷಿಸಿರಲಿಲ್ಲ್ಲ. ಅಂದರೆ ಇವರಿಗೆ ವೇತನ ಸಮಸ್ಯೆ ಯೊಂದೇ ಅತಿಯಾಗಿ ಕಾಡುತ್ತಿದೆ. ಹಾಗಾಗಿ ಮೌಲ್ಯಮಾಪನದಂತಹ ಜವಾಬ್ದಾರಿಯುತ ಕೆಲಸ ಮುಖ್ಯವಲ್ಲ ಎನ್ನುವುದು ಸಾಬೀತಾಯಿತು. ಹಕ್ಕನ್ನು ಕೇಳುವವನಿಗೆ ಅದಕ್ಕಿಂತ ಮೊದಲು ಹೊಣೆಗಾರಿಕೆಯ ಅರಿವಿರಬೇಕು. ಹೊಣೆಗಾರಿಕೆ ಪೂರೈಸಿದ ಬಳಿಕವೇ ಹಕ್ಕಿನ ನೆನಪಾಗಬೇಕು. ಈ ಎಚ್ಚರದ ಅರಿವು ’ಅರಿವೇ ಗುರು’ ಎಂದು ಪಾಠ ಹೇಳಿದ ಶಿಕ್ಷಕ ಬಂಧುಗಳಿಗೆ ಮರೆತುಹೋದರೆ ಹೇಗೆ? ಅದರಂತೆ ಉಪನ್ಯಾಸಕರಿಗೆ ಕಾರ್ಯಭಾರದ  ಬಗ್ಗೆ ಕೇಳಿದಾಗ ಸಾಕಷ್ಟು ಕೆಲಸ ಮಾಡುತ್ತಿದ್ದೇವೆ ಎಂದರು.  ದಿನಕ್ಕೆರಡು- ಮೂರು ತಾಸು ಪಾಠ ಮಾಡುತ್ತಾರೆ.  ಸರಿಯಾಗಿ ಕಾಲೇಜಿಗೆ ಬರುವುದಿಲ್ಲ. ಬಂದರೂ ಪಾಠ ಮಾಡುವುದಿಲ್ಲ ಎಂಬ ಆರೋಪ ಬಹುತೇಕ ಉಪನ್ಯಾಸಕರ ಮೇಲಿದೆ. ಇದನ್ನು ಸರಿಪಡಿಸುವ ವಿಚಾರ ಇವರ ಸಂಘದಲ್ಲಿಲ್ಲ.
ಕಡೇಪಕ್ಷ  ದಕ್ಷಿಣೆಗೆ ಸರಿಯಾಗಿಯಾದರೂ ಪ್ರದಕ್ಷಿಣೆ ಬರಬೇಕು ತಾನೇ?
 ಹಾಗೆ ನೋಡಿದರೆ ಇತ್ತೀಚೆಗೆ ಈ ವೃತ್ತಿಯನ್ನು ಪ್ರೀತಿಸಿ ಬರುವವರಿಗಿಂತ ಸಾಕಷ್ಟು ರಜೆ ಸಿಗುತ್ತದೆ ಎಂಬ ಕಾರಣಕ್ಕಾಗಿ, ಸರ್ಕಾರದ ಸೌಲಭ್ಯಗಳೆಲ್ಲ ದೊರೆಯುತ್ತವೆ ಎನ್ನುವುದಕ್ಕಾಗಿ ಈ ವೃತ್ತಿಗೆ ಬರುವವರ ಸಂಖ್ಯೆಯೇ ಜಾಸ್ತಿ ಎನ್ನುವುದು ಅಪ್ರಿಯವಾದ ಸತ್ಯ.
ನಿಮ್ಮ ಬೇಡಿಕೆಗಾಗಿ ಸರ್ಕಾರದ ಮೇಲೆ ಒತ್ತಡ ತರಬೇಕೋ ಮೌಲ್ಯಮಾಪನದ ನಂತರ ರಜೆ ಆರಂಭವಾಗುತ್ತದೆ. ಆಗ ಧರಣಿ, ಸತ್ಯಾಗ್ರಹ ಆರಂಭಿಸಿರಿ. ಏಕೆಂದರೆ, ಸುಮಾರು 2 ತಿಂಗಳ ಕಾಲ ವಿವಿಧ ರೀತಿಯ ಪ್ರತಿಭಟನೆಯನ್ನು ನಡೆಸಬಹುದು. ಇದರಿಂದ ವಿದ್ಯಾರ್ಥಿಗಳಿಗೂ ನಷ್ಟವಿಲ್ಲ. ಪಾಲಕರಿಗೂ ಚಿಂತೆ ಇರುವುದಿಲ್ಲ. ಮಾತ್ರವಲ್ಲ, ಆಗ ನಿಮ್ಮ ಜೊತೆಗೆವಿದ್ಯಾರ್ಥಿಗಳು, ಅವರ ಪಾಲಕರು ಮತ್ತು ಸಾರ್ವಜನಿಕರು ನಿಮ್ಮನ್ನು ಬೆಂಬಲಿಸುತ್ತಾರೆ; ನಿಮ್ಮ ಬಲ ಕೂಡ ಸಂವರ್ಧನೆಗೊಳ್ಳುತ್ತದೆ.
..................................


No comments:

Post a Comment