Tuesday, 22 March 2016

 ನಿವೇಶನವೂ ಇಲ್ಲ, ಹಣವೂ ಇಲ್ಲ 
 ಸ್ಬುಡಾಕ್ಕೆ ಉಚಿತವಾಗಿ ಭೂಮಿ ಕೊಟ್ಟು ನಿವೇಶನದ ಹಕ್ಕುದಾರಿಕೆ ಪಡೆಯಲು ಪರದಾಡುತ್ತಿರುವ ಅನ್ನದಾತರು


  ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡರು ಎನ್ನುವ ಗಾದೆ ಇದೆ. ಇದು ನಗರದ ನಗರದ ಹೊರವಲಯ ಮಲ್ಲಿಗೇನಹಳ್ಳಿ ಗ್ರಾಮದ ರೈತರಿಗೆ ಅನ್ವಯವಾಗುತ್ತಿದೆ. ಊರಿನ ಉಪಕಾರಕ್ಕೆ ಜಮೀನನ್ನು ಉಚಿತವಾಗಿ ಬಿಟ್ಟುಕೊಟ್ಟು ಈಗ ತಮಗೇ ಭೂಮಿ ಇಲ್ಲದಂತಾಗಿದ್ದಾರೆ.
 ಈ ರೈತರು ಬಿಟ್ಟುಕೊಟ್ಟ ಜಮೀನಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ಮಾಡಿದ ಬಡಾವಣೆ ವಿವಾದಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಇಲ್ಲಿನ  ನಿವೇಶನಗಳ ಪರಭಾರೆ, ಖಾತೆ ಮಾಡಿಕೊಡುವುದು, ಕಟ್ಟಡ ನಿರ್ಮಾಣಕ್ಕೆ ಲೈಸೈನ್ಸ್ ನೀಡುವುದರ ಮೇಲೆ ತಡೆ ಹಾಕಲಾಗಿದೆ. ಈ ವೇಳೆ ರೈತರಿಗೆ ನೀಡಲಾಗಿದ್ದ ನಿವೇಶನಗಳಿಗೂ ಇದೇ ನಿರ್ಬಂಧ ವಿಧಿಸಲಾಗಿದೆ. ಇದು ರೈತ ಸಮುದಾಯವನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ. ನಾಗರಿಕರಿಗೆ ಕಡಿಮೆ ದರದಲ್ಲಿ ನಿವೇಶನ ನೀಡಲು ಉಚಿತವಾಗಿ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ತಮ್ಮ ಭೂಮಿ ಕೊಟ್ಟು,  ನಿವೇಶನದ ಹಕ್ಕುದಾರಿಕೆ ಪಡೆದುಕೊಳ್ಳಲು ಇಲ್ಲಿನ ರೈತರು ಪರದಾಡುತ್ತಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ (ಸ್ಬುಡಾ)ದ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ಅಭಿವೃದ್ಧಿಪಡಿಸಲಾಗಿತ್ತು. ರೈತರ ಸಹಭಾಗಿತ್ವದಲ್ಲಿ ಶೇ. 40-60 ರ ಅನುಪಾತದಲ್ಲಿ ಬಡಾವಣೆ ನಿರ್ಮಿಸಲಾಗಿತ್ತು. ಬಡಾವಣೆ ಅಭಿವೃದ್ಧಿಗೆ ಭೂಮಿ ಕೊಟ್ಟ ರೈತರಿಗೆ ಪರಿಹಾರ ಧನ ನೀಡುವುದರ ಬದಲಿಗೆ ಪ್ರತಿ ಎಕರೆಗೆ ಶೇ. 40 ರಷ್ಟು ನಿವೇಶನ ನೀಡಲು ಪ್ರಾಧಿಕಾರ ನಿರ್ಧರಿಸಿತ್ತು.  ಇಲ್ಲಿ ವಿವಿಧ ವಿಸ್ತೀರ್ಣದ ನೂರಾರು ನಿವೇಶನ ರಚಿಸಲಾಗಿತ್ತು. ನಿವೇಶನರಹಿತ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಿದ ಸೂಡಾ ಆಡಳಿತವು, ನಿವೇಶನ ಕೂಡ ಹಂಚಿಕೆ ಮಾಡಿತ್ತು. ಹಾಗೆಯೇ ಒಪ್ಪಂದದಂತೆ ಶೇ. 40 ರಷ್ಟು ನಿವೇಶನಗಳನ್ನು ಬಡಾವಣೆ ಅಭಿವೃದ್ಧಿಗೆ ಭೂಮಿ ನೀಡಿದ ರೈತರಿಗೆ ಅಧಿಕೃತವಾಗಿ ಹಸ್ತಾಂತರ ಮಾಡಿತ್ತು. 
  ಸಾರ್ವಜನಿಕರಿಗೆ ನಿವೇಶನ ಹಂಚಿಕೆಯ ವೇಳೆ ಭಾರೀ ಗೋಲ್‌ಮಾಲ್ ನಡೆಸಲಾಗಿದೆ. ನೀತಿ-ನಿಯಮ ಉಲ್ಲಂಘಿಸಿ ಅನರ್ಹರಿಗೆ, ಪ್ರಭಾವಿಗಳಿಗೆ ನಿವೇಶನ ವಿತರಣೆ ಮಾಡಲಾಗಿದೆ ಎಂಬ ಆರೋಪ ಬೆಳಕಿಗೆ ಬಂದಿತ್ತು. ಈ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದವು. ಇದು ಸಾರ್ವಜನಿಕ ವಲಯದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. 
ಅಂತಿಮವಾಗಿ, ಅಂದಿನ ಜಿಲ್ಲಾಧಿಕಾರಿಯಾಗಿದ್ದ ವಿಪುಲ್ ಬನ್ಸಲ್, ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ನಿವೇಶನ ಹಂಚಿಕೆ ವೇಳೆ ನಡೆದಿರುವ ಅವ್ಯವಹಾರದ ಕುರಿತಂತೆ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚಿಸಿದ್ದರು. ಈ ತನಿಖಾ ಸಮಿತಿಯು ನಿವೇಶನ ಹಂಚಿಕೆಯಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಅವ್ಯವಹಾರ ನಡೆದಿದೆ. ಅಂದಿನ ಪ್ರಾಧಿಕಾರದ ಅಧ್ಯಕ್ಷರಿಬ್ಬರು ನಿಯಮ ಉಲ್ಲಂಘಿಸಿದ್ದಾರೆ. ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿದವರು ಹಾಗೂ ಪಡೆದವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕು ಎಂದು ವರದಿ ಸಲ್ಲಿಸಿತ್ತು. 
ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯ ತನಿಖಾ ಸಮಿತಿ ನೀಡಿದ ವರದಿಗೆ ಕಾನೂನು ಮಾನ್ಯತೆಯಿಲ್ಲದ ಕಾರಣದಿಂದ ವರದಿಯ ಶಿಫಾರಸ್ಸು ಅಂಗೀಕರಿಸಿರಲಿಲ್ಲ. ತದನಂತರ ಅಂದಿನ ಸೂಡಾ ಆಡಳಿತಾಧಿಕಾರಿಯಾಗಿದ್ದ  ವಿಪುಲ್ ಬನ್ಸಲ್ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚನೆ ಮಾಡಲು ಪ್ರಾಧಿಕಾರದ ಸಭೆ ಅನುಮೋದನೆ ನೀಡಿತ್ತು. ಅಷ್ಟರಲ್ಲಿಯೇ ರಾಜ್ಯ ಸರ್ಕಾರವು ಈ ಗೋಲ್‌ಮಾಲ್ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಿತ್ತು.
ಈ ಪ್ರಕರಣ ಇನ್ನೂ ಮುಗಿದಿಲ್ಲವಾದ್ದರಿಂದ ಜಾಗದ ವಿವಾದ ಹಾಗೆಯೇ ಉಳಿದುಕೊಂಡಿದೆ. ಇದರಿಂದ ರೈತರು ಜಾಗವೂ ಇಲ್ಲದೆ, ಹಣವೂ ಇಲ್ಲದೆ ಅತಂತ್ರರಾಗುವಂತಾಗಿದೆ.   
     ಭೂಮಿ ಕೊಟ್ಟ ರೈತರು ಈಗ ನಾನಾ ರೀತಿಯ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ನಿವೇಶನ ಮಾರಾಟ ಮಾಡಿ ಹಣ ಸಂಗ್ರಹಿಸಲು ಕೂಡ ಸಾಧ್ಯವಾಗದಂತಾಗಿದೆ. ಮಾಡಿದ ಸಾಲ ಕೂಡ ತೀರಿಸಲು ಆಗುತ್ತಿಲ್ಲ. ಉಚಿತವಾಗಿ ನಿವೇಶನ ಕೊಟ್ಟು ಸಮಸ್ಯೆ ಎದುರಿಸುವಂತಾಗಿದೆ. ಈ ಕೂಡಲೇ ನಗರಾಭಿವೃದ್ದಿ ಸಚಿವರು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕೆಂದು ಮಲ್ಲಿಗೇನಹಳ್ಳಿಯ  ರೈತರು ಆಗ್ರಹಿಸಿದ್ದಾರೆ. 
      ನಿವೇಶನ ಹಂಚಿಕೆಯಲ್ಲಿ ನಡೆದಿರುವ ಗೋಲ್‌ಮಾಲ್ ಬಗ್ಗೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಿವೇಶನ ಪರಭಾರೆ, ನೊಂದಣೆ, ಮನೆ ನಿರ್ಮಾಣಕ್ಕೆ ಪರವಾನಿಗೆ ನೀಡುವುದರ ಮೇಲೆ ನಿರ್ಬಂಧ ವಿಧಿಸಲಾಗಿದೆ. ಆದರೆ ರೈತರಿಗೆ ಹಂಚಿಕೆ ಮಾಡಲಾಗಿರುವ ನಿವೇಶನದಲ್ಲಿ ಯಾವುದೇ ಲೋಪವಾಗಿಲ್ಲ. ಈ ಹಿನ್ನೆಲೆಯಲ್ಲಿ ರೈತರಿಗೆ ಹಂಚಿಕೆ ಮಾಡಿರುವ ನಿವೇಶನಗಳ ಪರಭಾರೆ, ನೊಂದಣೆ, ಮನೆ ಕಟ್ಟಲು ಲೈಸೈನ್ಸ್ ನೀಡುವುದರ ಮೇಲೆ ನಿರ್ಬಂಧ ವಿಧಿಸದಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸ್ಬುಡಾ ಅಧ್ಯಕ್ಷ ಎನ್.ರಮೇಶ್ ಸ್ಪಷ್ಟಪಡಿಸಿದ್ದಾರೆ. 
     ರೈತರು ಭೂಮಿ ನೀಡಿದ್ದಕ್ಕೆ ಪ್ರತಿಫಲವಾಗಿ ಶೇ. 40 ರಷ್ಟು ನಿವೇಶನಗಳನ್ನು ರೈತರಿಗೆ ಪ್ರಾಧಿಕಾರ ನೀಡಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಆದಾಗ್ಯೂ ರೈತರಿಗೆ ನೀಡಲಾಗಿರುವ ನಿವೇಶನಗಳ ಪರಭಾರೆ, ನೊಂದಣೆ ಹಾಗೂ ಮನೆ ಕಟ್ಟಲು ಲೈಸೈನ್ಸ್ ನೀಡುವುದರ ಮೇಲೆ ನಿರ್ಬಂಧ ಹೇರಿರುವುದು ಎಷ್ಟರಮಟ್ಟಿಗೆ ಸರಿ ಎಂದು ಹೋರಾಟಗಾರ ಕಲ್ಲೂರು ಮೇಘರಾಜ್ ಪ್ರಶ್ನಿಸಿ, ನಗರಾಭಿವೃದ್ಧಿ ಇಲಾಖೆಯ ಸಚಿವ ವಿನಯಕುಮಾರ್ ಸೊರಕೆ ರೈತರ ನೆರವಿಗೆ ಧಾವಿಸಬೇಕು ಎನ್ನುttare

No comments:

Post a Comment