Wednesday, 9 March 2016

ಜನರ ಹಿತ, ಸಮಸ್ಯೆ ಮರೆತ ಪಿಡಿಓಗಳು

ಗ್ರಾಮಸಮಸ್ಯೆಗಳ ಸ್ವರೂಪವನ್ನೇ ಸರಿಯಾಗಿ ಅರ್ಥೈಸಿಕೊಳ್ಳದ ಪಿಡಿಓಗಳು ಗ್ರಾಮ ಅಭಿವೃದ್ಧಿಯನ್ನು ಹೇಗೆ ಮಾಡಿಯಾರು, ಅಥವಾ ಸಮಸ್ಯೆಯನ್ನು ಹೇಗೆ ಬಗೆಹರಿಸಿಯಾರು ಎನ್ನುವುದು ಎದುರಿರುವ ಪ್ರಶ್ನೆ. ತಪ್ಪು ಮಾಹಿತಿಯನ್ನು ಸರಿಯಾಗಿ, ಸರಿಯಾದ ಮಾಹಿತಿಯನ್ನು ತಪ್ಪಾಗಿ ಕೊಡುವ ಮೂಲಕ ಮೇಲಧಿಕಾರಿಗಳ ಕೆಂಗಣ್ಣಿಗೆ ತುತ್ತಾಗುತ್ತಿದ್ದಾರೆ. ನೈಜ ಸ್ಥಿತಿ ಹೇಳುವ ಸಾಮರ್ಥ್ಯ ಇಲ್ಲವೇ ಇಲ್ಲ. ಪಿಡಿಓ ಆಗಿ ಗ್ರಾಮದಲ್ಲೇ ನೆಲೆಸಿ ಅಲ್ಲಿನ ಸಮಸ್ಯೆಯನ್ನು ಅರ್ಥೈಕೊಳ್ಳಬೇಕಾಗಿತ್ತಾದರೂ ನಗರದಲ್ಲಿ ನೆಲೆಸಿ  ಗ್ರಾಮೀಣ ಸಮಸ್ಯೆಗೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಗ್ರಾಮದ ವ್ಯಾಪ್ತಿ ಇರುವ 4-6 ಕಿಮೀ ವಿಸ್ತೀರ್ಣದಲ್ಲಿ ಏನಿದೆ, ಏನಿಲ್ಲ ಎಂದರಿಯದ ಇವರಿಂದ ಯಾವ ಅಭಿವೃದ್ಧಿ ಅಥವಾ ಜನರ ಹಿತವನ್ನು ನಿರೀಕ್ಷಿಸಬಹುದು? 

 ಇವರಿಗೆ ತಮ್ಮ  ಗ್ರಾಪಂ ವ್ಯಾಪ್ತಿಯ ವಿಸ್ತೀರ್ಣ, ಜನಸಂಖ್ಯೆ ಎಷ್ಟೆಂದು ಗೊತ್ತಿಲ್ಲ.  ಇರುವ ಬೋರ್‌ವೆಲ್‌ಗಳ ಸಂಖ್ಯೆ ಗೊತ್ತಿಲ್ಲ, ಅದರಲ್ಲೂ ಜೀವಂತ ಮತ್ತು ಕೆಟ್ಟು ಹೋದ ಪಂಪ್‌ಗಳ ಮಾಹಿತಿ ಇಲ್ಲ,  ಈ ಬೋರ್‌ವೆಲ್‌ಗಳ ಆಳ ಎಷ್ಟಿದೆ ಎನ್ನುವುದು ತಿಳಿದಿಲ್ಲ, ತೆರೆದ ಬಾವಿಯ ಆಳ ಮತ್ತು ವಿಸ್ತೀರ್ಣ  ಗೊತ್ತಿಲ್ಲ,  ನೀರಿನ ಲಭ್ಯತೆ ಎಷ್ಟಿದೆ ಎನ್ನುವುದುರ ಅರಿವಿಲ್ಲ, ಹೋಗಲಿ, ಗ್ರಾಮದ  ಜನಸಂಖ್ಯೆಯ ಮಾಹಿತಿಯೂ ಇಲ್ಲ ......
ಇದು ಜಿಲ್ಲೆಯ ಬಹುತೇಕ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಅರ್ಥಾತ್ ಪಿಡಿಓಗಳ ಪರಿಸ್ಥಿತಿ. ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಓ ಮೊನ್ನೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ  ಬಗೆಹರಿಸುವ ಬಗ್ಗೆ  ಕರೆದ ಸಭೆಯಲ್ಲಿ ಕಂಡುಬಂದ ದೃಶ್ಯ.
ಜಿಲ್ಲೆಯಲ್ಲಿ 270 ಪಿಡಿಓಗಳಿದ್ದಾರೆ. ಈ ಪೈಕಿ 92 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಪಿಡಿಓಗಳೇ ಕೊಟ್ಟ ಮಾಹಿತಿ ಮೇರೆಗೆ ತಾಲೂಕಿನ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಇಲಾಖೆಯ ಇಂಜಿನಿಯರ್‌ಗಳು ಪಟ್ಟಿ ಸಿದ್ಧಮಾಡಿದ್ದಾರೆ. ವಿಶೇಷವೆಂದರೆ, ಯಾವ ಗ್ರಾಪಂನಲ್ಲಿ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪವೂ ಇಲ್ಲ ಎಂದು ಡೀಸಿಯವರು ಕೇಳಿದರೆ ಒಬ್ಬರೇ ಒಬ್ಬ ಪಿಡಿಓ ಕೈ ಎತ್ತಿಲ್ಲ, ಎರಡನೆಯದಾಗಿ, ಎಷ್ಟು ಪಿಡಿಓಗಳು ತಮ್ಮ ಗ್ರಾಪಂ ವ್ಯಾಪ್ತಿಯಲ್ಲೇ ವಾಸಿಸುತ್ತಿದ್ದಿರಿ ಎಂದು ಕೇಳಿದಾಗ ಕೈ ಎತ್ತಿದವರು ಮೂವರು ಪಿಡಿಓ ಮಾತ್ರ.  
ಇರುವ ಸಮಸ್ಯೆಯಯನ್ನು ಸರಿಯಾಗಿ ವಿವರಿಸಲಾಗದೆ, ಇಲ್ಲದ ಸಮಸ್ಯೆಯನ್ನು ಹೇಳಿ ಕೆಲವರು ಪೇಚಿಗೆ ಸಿಲುಕಿಕೊಂಡರು. ಸಣ್ಣ-ಪುಟ್ಟ ತಾಂತ್ರಿಕ ಸಮಸ್ಯೆ ಇದ್ದರೂ ಅದರ ಗೋಜಿಗೆ ಹೋಗದೆ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಹೇಳಿಕೊಂಡು ಇಕ್ಕಟ್ಟಿಗೆ ಸಿಲುಕಿಕೊಂಡರು.  ಗ್ರ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಬರೆಯಿಸಿ ತರಾಟೆಗೆ ಒಳಗಾದವರು ಸುಮಾರು 100ಕ್ಕೂ ಹೆಚ್ಚು ಪಿಡಿಓಗಳು. ಕೆರೆ ಬತ್ತಿ ಹೋಗಿದೆ, ಕೈ ಪಂಪ್ ಹಾಳಾಗಿದೆ, ಮೋಟಾರ್ ಸುಟ್ಟು ಹೊಗಿದೆ, ವಿದ್ಯುತ್ ಕನೆಕ್ಷನ್ ಕೊಟ್ಟಿಲ್ಲ ಎಂಬ ಸಬೂಬುಗಳನ್ನು ಮತ್ತು ತಾಂತ್ರಿಕ ಸಮಸ್ಯೆಗಳನ್ನು ಹೇಳಿದರೇ ವಿನಾ ಏನು ಪರಿಹಾರ ಕೈಗೊಳ್ಳಬಹುದೆನ್ನುವುದನ್ನು ಯಾರೂ ಹೇಳಲಿಲ್ಲ. ಗ್ರಾಮದ ನೀರಿನ ಸಮಸ್ಯೆ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ಪಿಡಿಓಗಳೇ ಅಧಿಕವಿದ್ದರು. ಮೊದಲೇ ಬಿಸಿಲ ಝಳದಿಂದ ಕಂಗೆಟಿದ್ದ ಇವರಿಗೆ ಜಿಲ್ಲಾಧಿಕಾರಿ ಮತ್ತು ಸಿಇಒ ಬೆವರಿಳಿಸಿದರು.
ಎಲ್ಲ ತಾಲೂಕಿನ ಪಿಡಿಓಗಳನ್ನು ಕರೆಸಿ ಸಮಸ್ಯೆ ವಿಚಾರಿಸಿದಾಗ ನಿಜಕ್ಕೂ 92 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇಲ್ಲ, ಇರುವುದು 35 ರಿಂದ 40 ಗ್ರಾಮಗಳಲ್ಲಿ ಮಾತ್ರ ಎನ್ನುವುದು ಡಿಸಿ ಮತ್ತು ಸಿಇಒಗೆ ಅರಿವಾದಾಗ ಪಿಡಿಗಳಿಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡರು. ಜಿಲ್ಲಾಧಿಕಾರಿಯವರಂತೂ ನೀವು ಪಂಚಾಯತ್ ಡೆವಲಪ್‌ಮೆಂಟ್ ಆಫೀಸರೋ (ಪಿಡಿಓ) ಅಥವಾ ಪರ್ಸನಾಲಿಟಿ ಡೆವಲಪ್‌ಮೆಂಟ್ ಆಫೀಸರೋ(ಪಿಡಿಓ) ಎಂದು ಗರಂ ಆಗಿ ಪ್ರಶ್ನಿಸಿದರು. ಕಚೇರಿಯಲ್ಲಿ ಕುಳಿತು ಕಾಲಹರಣ ಮಾಡಬೇಡಿ, ಜನರ ಬಳಿ ಹೋಗಿ, ಸಮಸ್ಯೆ ಎಲ್ಲಿದೆ ಎಂದು ಕೇಳಿ ತಿಳಿಯಿರಿ, ಜನರು ಬಂದು ಹೇಳಿದರೆ ಮಾತ್ರ ಸಮಸ್ಯೆ ಇದೆ ಎಂದು ತಿಳಿದುಕೊಳ್ಳಬೇಡಿ, ಹಳ್ಳಿಯಲ್ಲಿ ಕೆಲಸ ಮಾಡಲಾಗದಿದ್ದರೆ ಮನೆಗೆ ಹೋಗಿ, ಕ್ಷೇತ್ರ ಸುತ್ತಾಡಲು ನಿಮಗೇನು ವಾಹನ ಬೇಕೇ, ಇರುವ 3-4 ಕಿಮೀಯನ್ನು ಒಂದೇ ದಿನದಲ್ಲಿ ಸುತ್ತಾಡಿ ಬರಬಹುದು. ಜನರ ಪರಿಚಯ ಮಾಡಿಕೊಂಡು, ನೆರವು ಕಲ್ಪಿಸಿ ಎಂದು ಪಾಠ ಮಾಡಿದರು.
ಸಮಸ್ಯೆ ಹೇಳುವುದಷ್ಟೇ ತಮ್ಮ ಕೆಲಸ, ಪರಿಹಾರ ಮಾಡುವುದಲ್ಲ  ಎಂದು ತಿಳಿದುಕೊಂಡಿದ್ದ  ಪಿಡಿಓಗಳು ಸಮಸ್ಯೆಯನ್ನು ಮಾತ್ರ ಬಿಚ್ಚಿಡಲೆತ್ನಿಸಿದರು. ಇಲ್ಲಿ ಇಲ್ಲದ ಸಮಸ್ಯೆಯನ್ನೂ ಹೇಳಿಕೊಂಡು ಪೇಚಿಗೆ ಸಿಲುಕಿದರು. ಪಂಚಾಯತ್ ಖಾತೆಯಲ್ಲಿ ಹಣವಿದ್ದರೂ ಅದನ್ನು ಬಿಚ್ಚಿ ಖರ್ಚು ಮಾಡಲು ಜಿಗುಟುತನ ತೋರಿಸಿದವರು ತರಾಟೆಗೊಳಗಾದರು.  ಸಮಸ್ಯೆ ಹೇಳಿ ಅದನ್ನು ಪರಿಹರಿಸಿಕೊಳ್ಳಲು ಮೇಲಧಿಕಾರಿಗಳ ನೆರವು ಪಡೆಯಬೇಕಿತ್ತಾದರೂ ಸಮಸ್ಯೆ ನಿವೇದನೆಯಷ್ಟೇ ತಮ್ಮ ಕೆಲಸ ಎಂದುಕೊಂಡು ಬಂದಿದ್ದ ಪಿಡಿಓಗಳು ಸಭೆಯಲ್ಲಿ ನೀರಿಳಿಸಿಕೊಂಡರು. ಪಂಚಾಯತ್ ನಲ್ಲಿ ಇರುವ ಹಣವನ್ನು ಬಳಸದೆ ಕುಳಿತಿದ್ದೀರಿ, ನೀರಿನ ಸೌಕರ್ಯಕ್ಕೆ ಹಣ ಖರ್ಚು ಮಾಡಿದರೆ ನಿಮಗೆ ಸಂಕಟವಾಗುತ್ತದೆಯೇ, ಸಲ್ಲದ ನೆಪ ಹೇಳಿ ನೀರಿನ ಸಮಸ್ಯೆ ಪರಿಹರಿಸದಿದ್ದರೆ ಸುಮ್ಮನಿರಲು ಸಾಧ್ಯವಿಲ್ಲ. ತಾಂತ್ರಿಕ ಮತ್ತು ಸಣ್ಣಪುಟ್ಟ ಸಮಸ್ಯೆ ಇದ್ದವರು ಮೂರು ದಿನದಲ್ಲಿ ಬಗೆಹರಿಸಿಕೊಳ್ಳದಿದ್ದರೆ ಶಿಸ್ತು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಕಟ್ಟಪ್ಪಣೆ ನೀಡಿದಾಗ ಬಹುತೇಕ ಪಿಡಿಓಗಳು ಸುಸ್ತ್ತಾಗಿ ಹೋಗಿದ್ದರು.
 ಸಾಗರ ತಾಲೂಕಿನ ಪಿಡಿಓ ಒಬ್ಬರು  ಎರಡು ವರ್ಷದಿಂದ ಟ್ಯಾಂಕರ್‌ನಲ್ಲಿ ನೀರು ಪೂರೈಸುತ್ತಿದ್ದೇವೆ, ಎರಡು ಕೊಳವೆ ಬಾವಿ ಬೇಕೆಂದು ಇಂಜಿನೀಯರ್ ವಿಭಾಗಕ್ಕೆ ವರ್ಷದ ಹಿಂದೆಯೇ  ಮನವಿ ಕೊಟ್ಟಿದ್ದೇನೆ, ಶಾಸಕರಿಗೂ ಮನವಿ ಕೊಟ್ಟಿದ್ದೇನೆ ಎನ್ನು ಮೂಲಕ ಬಹಿರಂಗವಾಗಿ ನಗೆಪಾಟಲಿಗೀಡಾದರು. ಇಂಜಿನೀಯರ್‌ಗೆ ಮತ್ತು ಶಾಸಕರಿಗೆ ಮನವಿ ಕೊಡುವ ಕೆಲಸವನ್ನು ಪಿಡಿಓಗಳು ಮಾಡುವುದೇ?, ಮನವಿ ಕೊಡುವುದು ಸಾರ್ವಜನಿಕರ ಕೆಲಸ. ಪಿಡಿಓ ಸಮಸ್ಯೆ ನಿಭಾಯಿಸಬೇಕೇ ವಿನಾ ಸಮಸ್ಯೆ ಇದೆ ಎಂದು ಹೇಳಿಕೊಂಡು ಕೈಕಟ್ಟಿ ಕೂಡ್ರುವುದಲ್ಲ. ತಮ್ಮ ಕೆಲಸವೇನು. ಅದರ ಇತಿಮಿತಿಯೇನು ಎಂದರಿಯದ ಪಿಡಿಓಗಳು ಉಗುರಿನಿಂದ ತೆಗೆಯುವುದಕ್ಕೆ ಕೊಡಲಿ ಬಳಸಿದರು ಎನ್ನುವ ಗಾದೆಯಂತೆ  ಇಚ್ಛಾಶಕ್ತಿ ಇಲ್ಲದವರಂತೆ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಸಾಬೀತಾಗುತ್ತಿದೆ. 
ಇದರೊಟ್ಟಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ವಿತರಣೆಯ ಪೂರ್ವಭಾವಿ ಕೆಲಸ ನಡೆಯುತ್ತಿದೆ. ಆ ಆರ್ಜಿಗಳ ಪರಿಶೀಲನೆಯನ್ನೂ ಸಹ ಇವರು ಮಾಡಬೇಕಿದೆ. ಆದರೆ ಈ ಬಗ್ಗೆ ಅರಿವೇ ಇಲ್ಲದ ಉದಾಹರನೆ ಸಹ ಕಂಡುಬಂದಿದೆ. ತಮ್ಮ ವ್ಯಾಪ್ತಿಯಲ್ಲಿರುವ ಕೆರೆಗಳ ಸ್ಥಿತಿ, ಅವುಗಳ ಹೂಳೆತ್ತಿಸುವ ಮೂಲಕ ಕುಡಿಯುವ ನೀರು ಸಿಗುವಂತೆ ಮಾಡುವ ಹೊಣೆಗಾರಿಕೆಯೂ ಇದೆ. ಶೌಚಾಲಯಗಳ ಬಗ್ಗೆ ಜಾಗೃತಿ ಮೂಡಿಸುವುದು, ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಸೂಚಿಸುವುದೂ ಸಹ ಪಿಡಿಓಗಳ ಕೆಲಸ. ಇವನ್ನೆಲ್ಲ ನಿಜಕ್ಕೂ ಅವರು ನಿರ್ವಹಿಸಿದರೆ ಆ ಗ್ರಾಮ ಮಾದರಿಯಾಗುವುದರಲ್ಲಿ ಸಂಶಯವೇ ಇಲ್ಲ. ಆದರೆ ತಮ್ಮ ಕೆಲಸದ ಇತಿಮಿತಿಯೇ ಗೊತ್ತಿಲ್ಲದಿರುವುದು ದೌರ್ಭಾಗ್ಯವೇ ಸರಿ. 

No comments:

Post a Comment