Monday, 29 February 2016

ಅತಿ ಆತ್ಮವಿಶ್ವಾಸ, ಬಂಡಾಯದಿಂದಾಗಿ ಬೆಲೆತೆತ್ತ ಕಾಂಗ್ರೆಸ್
 ಜಿಪಂ ಕಾಂಗ್ರೆಸ್ ಸೋಲಿಗೆ ಶುರುವಾಯ್ತು ಆತ್ಮವಿಮರ್ಶೆ 

ಶಿವಮೊಗ್ಗ:   ವಿಧಾನ ಪರಿಷತ್ ಚುನಾವಣೆಯಲ್ಲಿ ಸಿಕ್ಕ ಜಯದಿಂದ ಅತಿಯಾದ ಆತ್ಮವಿಶ್ವಾಸಕ್ಕೆ ಒಳಗಾಗಿದ್ದ ಜಿಲ್ಲಾ ಕಾಂಗ್ರೆಸ್ ಮುಖಂಡರಿಗೆ ಜಿಪಂ ಮತ್ತು ತಾಪಂ ಚುನಾವಣೆ ಪಾಠ ಕಲಿಸಿದೆ.  ಅತಿ ಆತ್ಮ,ವಿಶ್ವಾಸ ಮುಳುವಿಗೆ ಕಾರಣವಾಗುತ್ತದೆ ಎಂಬ ಮಾತಿದೆ. ಇದನ್ನು  ಈ ಚುನಾವಣೆ ಮತ್ತೆ ಸಾಬೀತು ಮಾಡಿದೆ. ಇದರೊಟ್ಟಿಗೆ ಬಂಡಾಯಗಾರರೂ  ಸಹ ಹಲವು ಸ್ಥಾನಗಳನ್ನು ತಪ್ಪಿಸುವಲ್ಲಿ ಸಫಲರಾಗಿದ್ದಾರೆ. ಈ ಎರಡು ಪ್ರಮುಖ ಕಾರಣಗಳಿಂದ ಕಾಂಗ್ರೆಸ್ ನಿರೀಕ್ಷಿತ ಯಶಸ್ಸು ಸಾಧಿಸುವಲ್ಲಿ ಹಿನ್ನಡೆ ಕಂಡಿದೆ.
ಕಾಂಗ್ರೆಸ್ ನಾಯಕರಿಗೆ ಕನಿಷ್ಠ 20ರಿಂದ 25 ಸ್ಥಾನ ಈ ಬಾರಿ ಜಿಪಂನಲ್ಲಿ ಸಿಗುವ ಭರವಸೆ ಇತ್ತು. ಇದರಿಂದಾಗಿ ಅಧಿಕಾರ ಮತ್ತೆ ತಮ್ಮ ಮಡಿಲಿಗೇ ಬರುತ್ತದೆ ಎಂದು ಬಲವಾಗಿ ನಂಬಿದ್ದರು. ಹಾಗಂತ ಪ್ರಚಾರದಲ್ಲಿ ಹಿಂದೆ ಬೀಳಲಿಲ್ಲ. ಇಡೀ ಜಿಲ್ಲೆಯಾದ್ಯಂತ ಬಹುತೇಕ ನಾಯಕರು ಓಡಾಡಿದ್ದಾರೆ. ಆದರೆ ಅತಿ ಆತ್ಮವಿಶ್ವಾಸ ಕೈಕೊಟ್ಟಿದೆ. ಗೆಲುವಿನ ಹೆಚ್ಚು ಅವಕಾಶ ಇದೆ ಎಂದು ನಂಬಿಕೊಂಡ ಕ್ಷೇತ್ರಗಳಲ್ಲೇ ಸೋಲೆದುರಾಗಿದೆ. ಜೊತೆಗೆ ಬಂಡಾಯವೂ ಸುಮಾರು 6 ಕ್ಷೇತ್ರಗಳಲ್ಲಿ ಪೆಟ್ಟು ನೀಡಿದೆ.
ಚುನಾವಣೆೆಗಿಂತ ಮುನ್ನ ಮತ್ತು ಮತದಾನದ ನಂತರ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ ಮತದಾರರು ಇದನ್ನೆಲ್ಲ ಹುಸಿಗೊಳಿಸಿದ್ದಾರೆ. ಮತದಾನೋತ್ತರದ ಸಮೀಕ್ಷೆಯಲ್ಲಿ ಸಿಂಪಲ್ ಮೆಜಾರಿಟಿಯ ಅವಕಾಶವನ್ನು ಹೇಳಲಾಗಿತ್ತು. ಅಂದರೆ 16ರಿಂದ 17 ಸ್ಥಾನ ದಕ್ಕಬಹುದೆಂದು ವಿಶ್ಲೇಷಿಸಲಾಗಿತ್ತು. ಟಿಕೆಟ್ ನೀಡಿಕೆಯಲ್ಲಿ ಮಹತ್ತರ ತಪ್ಪೇನನ್ನೂ ಮಾಡಿಕೊಳ್ಳದಿದ್ದರೂ ಬಂಡಾಯದ ಕಾಟ ಹೆಚ್ಚು ಪರಿಣಾಮ ಬೀರಿದೆ. ಗಾಜನೂರಿನಲ್ಲಿ ಸೋಲಲು ಇದೇ ಕಾರಣ. ಕುಂಸಿಯಲ್ಲಿ ಬಂಡಾಯ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಲ್ಲಿ ಬಂಡಾಯ ಉಮೇದುವಾರ ರುದ್ರಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿ ಪಡೆದಷ್ಟೇ  ಮತವನ್ನು ಪಡೆದು ಸೆಡ್ಡು ಹೊಡೆದಿದ್ದಾರೆ. ಹಸೂಡಿಯಲ್ಲಂತೂ ಬಂಡಾಯ ಕಾಂಗ್ರೆಸ್ ಅಭ್ಯರ್ಥಿ  ವೇದಾವತಿ ಅವರೇ ಜಯ ಸಾಧಿಸಿದ್ದಾರೆ. ಶಿವಮೊಗ್ಗ ತಾಲೂಕಿನಲ್ಲಿ ಈ 3 ಸ್ಥಾನವನ್ನು ಕಳೆದುಕೊಂಡ ಕಾಂಗ್ರೆಸ್‌ಗೆ ಸಾಗರದಲ್ಲಿ ಎರಡು ಸ್ಥಾನ ಕೈತಪ್ಪಿದೆ. ಇದರಲ್ಲಿ ಕೆಳದಿ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿ ಕಣದಲ್ಲಿದ್ದುದು ಸೋಲಿಗೆ ಕಾರಣವಾಗಿದೆ. ತಾಳಗುಪ್ಪಾದಲ್ಲಿ ಗೆಲುವು ನಿರೀಕ್ಷಿಸಲಾಗಿತ್ತಾದರೂ ಸೋಲು ಎದುರಾಗಿದೆ.
  ಹೊಸನಗರ ತಾಲೂಕಿನ ನಗರದಲ್ಲೂ ಟಿಕೆಟ್‌ಗೆ ಪ್ರಬಲ ಪೈಪೋಟಿ  ಎದ್ದಿತ್ತಾದರೂ ಅದು ಶಮನವಾಗಿತ್ತು. ಆದರೆ ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಜಾತಿ ಪ್ರಮಾಣಪತ್ರ ವಿಚಾರದಲ್ಲಿ ವಿವಾದಕ್ಕೊಳಗಾಗಿದ್ದರು. ಅವರ ವಿರುದ್ದ ಪ್ರತಿಭಟನೆ ಸಹ ನಡೆದಿತ್ತು. ಆದರೆ ಯಾವುದೋ ಒತ್ತಡಕ್ಕೆ ಒಳಗಾಗಿ ಇದಾವುದನ್ನೂ ಗಮನಿಸದೆ ಅವರಿಗೇ ಟಿಕೆಟ್ ಕೊಡಲಾಗಿತ್ತು. ಕಾಂಗ್ರೆಸ್ ನಾಯಕರ ಈ ನಡೆಯನ್ನು ಪ್ರಜ್ಞಾವಂತ ಮತದಾರ ಸರಿಯಾಗಿ ವಿವೇಚಿಸಿ ತಕ್ಕ ಉತ್ತರ ನೀಡಿದ್ದಾನೆ. ಭದ್ರಾವತಿಯ ಸಿಂಗನಮನೆ ಮತ್ತು ಕೂಡ್ಲಿಗೆರೆಯಲ್ಲಿ ಕಾಂಗ್ರೆಸ್‌ಗೆ ಎದುರಾದ ಸೋಲು ನಿಜಕ್ಕೂ ಅಚ್ಚರಿ ತರುವಂತಹುದು. ಈ ಎರಡೂ ಸ್ಥಾನ ಗೆದ್ದೇ ಗೆಲ್ಲುತ್ತದೆ ಎಂದು ಹೇಳಲಾಗಿತ್ತು. ಕೂಡ್ಲಿಗೆರೆಯಲ್ಲಿ ನೇರ ಹೋರಾಟ ಇತ್ತು. ಸಿಂಗನಮನೆಯಲ್ಲಿ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಸಾದಿಕ್ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಜಿಪಂ ಮಾಜಿ ಸದಸ್ಯರೂ ಆಗಿರುವ ಅವರ ಗೆಲುವು ನಿಶ್ಚಿತ ಎಂದೇ ಪರಿಗಣಿಸಲ್ಪಟ್ಟಿತ್ತು. ಭದ್ರಾವತಿಯಲ್ಲಿ ಸಿ ಎಂ ಇಬ್ರಾಹಿಂ ಮತ್ತು ಮಾಜಿ ಶಾಸಕ ಬಿ. ಕೆ. ಸಂಗಮೇಶ್ ಮಧ್ಯೆ ಕಚ್ಚಾಟದಿಂದ ಸಿಂಗಮನೆ ಕ್ಷೇತ್ರ ಕಳೆದುಕೊಂಡಿದ್ದು ಸ್ಪಷ್ಟ. ಸಾದಿಕ್‌ಗೆ ಟಿಕೆಟ್ ಕೊಡದಂತೆ ಸಂಗಮೇಶ್ ಕಡೆಯಿಂದ ಒತ್ತಡ ಇತ್ತು. ಆದರೆ ಇಬ್ರಾಹಿಂ ತಮ್ಮ ಸಹೋದರನಿಗೆ ಕೆಪಿಸಿಸಿ ಮಟ್ಟದಿಂದಲೇ ಟಿಕೆಟ್ ಕೊಡಿಸಿದರೆನ್ನುವುದು ಜಜ್ಜಾಹೀರಾದ ಸತ್ಯ.. ಆನವೇರಿಯಲ್ಲಿ ಮಾಜಿ ಜಿಪಂ ಸದಸ್ಯ ಶಾಂತವೀರ ನಾಯ್ಕ್ ಟಿಕೆಟ್‌ಗೆ ಬಹಳ ಯತ್ನಿಸಿದ್ದರು. ಆದರೆ ಅವರನ್ನು ಯಾವುದೋ ಒತ್ತಡದ ಹಿನ್ನೆಲೆಯಲ್ಲಿ ಕೈಬಿಟ್ಟು ಹೊಸಬರಿಗೆ ಸ್ಥಾನ ಕಲ್ಪಿಸಿದ್ದರಿಂದ ನಿರೀಕ್ಷಿತ ಸೋಲು ಎದುರಾಗಿದೆ.    
ಸೊರಬದಲ್ಲಿ ಸಹೋದರರ ಸವಾಲ್ ಎಂದಿನಂತೆ ಮುಂದುವರೆದಿತ್ತಾದರೂ ಒಂದೆರಡು ಸ್ಥಾನ ಸಿಗಬಹುದೆಂಬ ಅಂದಾಜಿತ್ತು. ಆದರೆ ಅದು ಉಲ್ಟಾ ಹೊಡೆದಿದೆ. ಮಾಜಿ ಸಚಿವ ಕುಮಾರ್ ಬಂಗಾರಪ್ಪ ಟಿಕೆಟ್ ನೀಡಿಕೆಯಲ್ಲಿ ಸರಿಯಾದ ಮಾರ್ಗ ಅನುಸರಿಸಲಿಲ್ಲ ಎಂದು ಅಲ್ಲಿನ ಕಾಂಗ್ರೆಸ್ ಮುಖಂಡರೇ ಬಹಿರಂಗವಾಗಿ ಆರೋಪಿಸಿ ಅವರ ವಿರುದ್ದ ಸಿಡಿದೆದ್ದಿದ್ದರು. ಇದರ ಪರಿಣಾಮ ಪಕ್ಷಕ್ಕೆ ತಟ್ಟಿದೆ. ಜೆಡಿಎಸ್ ತನ್ನ ಪ್ರಾಬಲ್ಯವನ್ನು ಇಲ್ಲಿ ತೋರುವ ಮೂಲಕ ಕಳೆದ ಬಾರಿ ಎಲ್ಲ 5 ಸ್ಥಾನ ಗೆದ್ದುಕೊಂಡಿದ್ದ ಬಿಜೆಪಿಗೆ ಒಂದೇ ಸ್ಥಾನವನ್ನು ಈ ಬಾರಿ ನೀಡುವ ಮೂಲಕ ಪಾಠ ಕಲಿಸಿದೆ. ಶಿಕಾರಿಪುರದಲ್ಲಿ ಕಾಂಗ್ರೆಸ್‌ಗೆ ನೊ ಲಾಸ್, ನೋ ಪ್ರಾಫಿಟ್ ಎಂಬಂತಾಗಿದೆ. ಆದರೆ ಇಲ್ಲಿ ಇನ್ನೆರಡು ಸ್ಥಾನ ಸಿಗಬಹುದೆನ್ನುವ ನಿರೀಕ್ಷೆ ಕಾಂಗ್ರೆಸ್‌ನದ್ದಾಗಿತ್ತು.
ಕುಮಾರ್ ಬಂಗಾರಪ್ಪಗೆ ಇಲ್ಲಿ ಮತ್ತೆ ಸೋಲು ಎದುರಾಗಿದೆ. ಜಿಪಂ ಚುನಾವಣೆಯಲ್ಲಿ ಸಕ್ರಿಯವಾಗಿ ಅವರು ತೊಡಗಿಸಿಕೊಂಡು ಜಿಲ್ಲಾದ್ಯಂತ ಓಡಾಡಿದ್ದರು. ಆದರೆ ಅವರಿಗೆ ಸ್ವಂತ ಕ್ಷೇತ್ರದಲ್ಲೇ ಗೆಲುವು ದಕ್ಕಲಿಲ್ಲ. ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಅಣ್ಣ -ತಮ್ಮನ ಕುಸ್ತಿ ಮಧ್ಯೆಯೂ ಒಂದು ಸ್ಥಾನ ಗಿಟ್ಟಿಸಿಕೊಡುವಲ್ಲಿ ಸಫಲರಾಗಿದ್ದಾರೆ ಎನ್ನಬಹುದು.


ಜೆಡಿಎಸ್ ಕಿಂಗ್‌ಮೇಕರ್
 ಜಾತ್ಯತೀತ ಜನತಾ ದಳ ಕೇವಲ ಎರಡು ಸ್ಥಾನದಿಂದ ಏಳು ಸ್ಥಾನಕ್ಕೇರಿದೆ. 5 ಕ್ಷೇತ್ರಗಳನ್ನು ಈ ಬಾರಿ ಹೆಚ್ಚು ಗೆದ್ದುಕೊಂಡಿದೆ.  ಅದಕ್ಕೆ ಸೊರಬ ಮತ್ತು ಭದ್ರಾವತಿ ತಾಲೂಕು ಕಾರಣ. ಅಲ್ಲಿ ಜೆಡಿಎಸ್ ಶಾಸಕರಿರುವುದು ಅದಕ್ಕೆ ಲಾಭ ತಂದುಕೊಟ್ಟಿದೆ. ಈ ಮೂಲಕ ಮತ್ತೆ ಕಿಂಗ್ ಮೇಕರ್ ಆಗುವ ಅವಕಾಶವನ್ನು ಉಳಿಸಿಕೊಂಡಿದೆ. ಜಿಪಂನಲ್ಲಿ  ಕಾಂಗ್ರೆಸ್ ಅಥವಾ ಬಿಜೆಪಿ ಅಧಿಕಾರಕ್ಕ್ಕೇರಬೇಕಾದರೆ ಜೆಡಿಎಸ್ ಬೆಂಬಲ ಪಡೆಯಲೇಬೇಕಾಗಿದೆ. ಈ ಮೂಲಕ ಕಳೆದ ಬಾರಿಯಂತೆ ಮತ್ತೆ ಅದು ಲಾಭದಾಯಕ ಹುದ್ದೆಯನ್ನು ಈ ಬಾರಿ ಪಡೆಯಲು ಯತ್ನಿಸುವುದು ನಿಶ್ಚಿತ. ಸೊರಬದಲ್ಲಿ 4 ಸ್ಥಾನವನ್ನು ಗೆಲ್ಲುವ ಮೂಲಕ ಶಾಸಕ ಮಧು ಬಂಗಾರಪ್ಪ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಂಡಿದ್ದಾರೆ.  ಭದ್ರಾವತಿಯಲ್ಲೂ  ಶಾಸಕ ಅಪ್ಪಾಜಿ ಗೌಡರ ಪ್ರಭಾವ ಸ್ವಲ್ಪ ಹೆಚ್ಚಿದ್ದು ಸಾಬೀತಾಗಿದೆ. ಕಳೆದ ಬಾರಿ ಹಿರಿಯೂರು ಜಿಪಂ ಮಾತ್ರ  ಗೆದ್ದಿದ್ದ ಅದು, ಈ ಬಾರಿ ಇನ್ನೆರಡನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ಇಲ್ಲಿ ಗೆದ್ದವರಿಬ್ಬರೂ ಅಪ್ಪಾಜಿಗೌಡರ ಆಪ್ತರೆನ್ನುವುದು ಸತ್ಯ. ಜೊತೆಗೆ ಸೋತವರೂ ಸಹ ಕಾಂಗ್ರೆಸ್‌ನ (ಘಟನಾನುಘಟಿ) ಮಾಜಿ ಜಿಪಂ ಸದಸ್ಯರೆನ್ನುವುದನ್ನು ಗಮನಿಸಬೇಕಿದೆ. ಆದರೆ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ‌್ಯಾ ನಾಯ್ಕ್ ಸ್ವತಃ ತನ್ನ ಮಗನನ್ನು ಗೆಲ್ಲಿಸುವಲ್ಲಿ ಸೋತಿದ್ದಾರೆ. ತನ್ನ ನಂತರ ಕುಟುಂಬ ರಾಜಕಾರಣ ಮುಂದುವರೆಸಲು ಯತ್ನಿಸಿದ್ದಕ್ಕೆ ಜನ ತಕ್ಕ ಉತ್ತರ ಕೊಟ್ಟಿದ್ದಾರೆ. ರಾಜಕೀಯವೇ ಗೊತ್ತಿಲ್ಲದ, ವಿದ್ಯಾರ್ಥಿಯನ್ನು ತನ್ನ ಸ್ಥಾನ ತುಂಬಲು ಬೆಳೆಸಲೆತ್ನಿಸಿದ ಯತ್ನಕ್ಕೆ ಬ್ರೇಕ್ ಹಾಕಿದ್ದಾರೆ. ಇಷ್ಟೇ ಅಲ್ಲ, ಅವರ ಕ್ಷೇತ್ರದಲ್ಲಿ ಒಂದೇ ಒಂದು ಸ್ಥಾನ  ಜೆಡಿಎಸ್‌ಗೆ ದಕ್ಕಿಲ್ಲ. ಅದು ಅವರಿಗಾದ ಹಿನ್ನಡೆ ಎಂದೇ ಹೇಳಬಹುದು.


Saturday, 27 February 2016

ಸಿಟಿ ಬಸ್ ಎಂಬ ಬೆಕ್ಕಿಗೆ ಗಂಟೆ ಕಟ್ಟುವವರಾರು?

ನಗರದಲ್ಲಿ ಸಂಚರಿಸುವ ಕೆಲವು ಖಾಸಗಿ ಸಿಟಿ ಬಸ್‌ಗಳು ಮಿತಿ ಮೀರಿದ ವೇಗದಲ್ಲಿ, ಬೇಕಾಬಿಟ್ಟಿಯಾಗಿ ಸಂಚರಿಸುತ್ತವೆ. ಇದರಿಂದ ಪಾದಚಾರಿಗಳು, ದ್ವಿ ಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಹ ಪರಿಸ್ಥಿತಿಯಿದೆ. ಸಂಚಾರಿ ನಿಯಮಗಳ ಸಮರ್ಪಕ ಪಾಲನೆ ಮಾಡುತ್ತಿಲ್ಲ. ಸಿಟಿಬಸ್ ಸಿಬ್ಬಂದಿಗಳ ಪುಂಡಾಟ, ಪ್ರೇಮದಾಟ ಮುಂದುವರೆಯುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.


ಬೇಕಾಬಿಟ್ಟಿ ಚಾಲನೆ, ಮಿತಿಮೀರಿದ ವೇಗ, ಚಾಲನೆಯ ಕಾನೂನನ್ನೇ ಅರಿಯದ ಯುವ ಚಾಲಕರು, ಇನ್ನೊಂದೆಡೆ ಯಾರ‌್ಯಾರೋ ನಿರ್ವಾಹಕರು, ನಿರ್ವಾಹಕರ ಜೊತೆ ಒಂದಷ್ಟು ಪುಂಡರು, ಸಮವಸ್ತ್ರ ಧರಿಸದ ಸಿಬ್ಬಂದಿಗಳು, ಕಾಲೇಜು ಯುವತಿಯರೊಡನೆ ಮಾತನಾಡುತ್ತಲೇ ಬಸ್ ಚಲಾಯಿಸುವ ಯುವ ಚಾಲಕರು, ಪಕ್ಕದಲ್ಲೇ ಯುವತಿಯರನ್ನು ನಿಲ್ಲಿಸಿಕೊಂಡು ಆವೇಶ ಬಂದಂತೆ ಬಸ್ ಚಾಲನೆ ಮಾಡುವುದು...... ಇವೆಲ್ಲವನ್ನೂ ನೀವು ನೋಡಬೇಕೆಂದರೆ ಶಿವಮೊಗ್ಗದ ಬಹುತೇಕ ಸಿಟಿ ಬಸ್‌ಗಳಲ್ಲಿ ಸಂಚರಿಸಬೇಕು.
ಈ ಬಸ್ ಚಾಲಕ, ಕಂಡಕ್ಟರ್ ಮತ್ತು ಇತರೇ ಸಿಬ್ಬಂದಿಗಳಿಗೆ ಮಾಲಕರ ಭಯವಿಲ್ಲ, ಪೊಲೀಸರ ಬಗ್ಗೆ ಚಿಂತೆ ಇಲ್ಲ. ಪ್ರಯಾಣಿಕರ ಬಗ್ಗೆ ಮೊದಲೇ ಕಾಳಜಿ ಇಲ್ಲ. ಅವರ ವರ್ತನೆಯನ್ನು ಇತರ ಪ್ರಯಾಣಿಕರು ಪ್ರಶ್ನಿಸುವಂತಿಲ್ಲ. ಸದಾ ಇವುಗಳನ್ನು ನೋಡುತ್ತ ಸಂಚರಿಸುವ ಸಂದರ್ಭ. ಏಕೆಂದರೆ ಬುದ್ಧಿ ಹೇಳುವ ಕಾಲ ಇದಲ್ಲವಲ್ಲ!       
ನಗರದಲ್ಲಿ ಸಂಚರಿಸುವ ಕೆಲವು ಖಾಸಗಿ ಸಿಟಿ ಬಸ್‌ಗಳು ಮಿತಿ ಮೀರಿದ ವೇಗದಲ್ಲಿ, ಬೇಕಾಬಿಟ್ಟಿಯಾಗಿ ಸಂಚರಿಸುತ್ತವೆ. ಇದರಿಂದ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಹ ಪರಿಸ್ಥಿತಿಯಿದೆ. ಸಂಚಾರಿ ನಿಯಮಗಳ ಸಮರ್ಪಕ ಪಾಲನೆ ಮಾಡುತ್ತಿಲ್ಲ. ಈ ಸಿಟಿ ಬಸ್ ಸಿಬ್ಬಂದಿಗಳ ಪುಂಡಾಟ, ಪ್ರೇಮದಾಟಕ್ಕೆ ಕಡಿವಾಣ ಹಾಕುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಪೊಲೀಸರ ಈ ನಿರ್ಲಕ್ಷ್ಯದಿಂದ ಸಿಟಿ ಬಸ್‌ಗೆ ಸಿಲುಕಿ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ನಿನ್ನೆ ವಿದ್ಯಾನಗರದಲ್ಲಿ ಬಾಲಕನೋರ್ವ ಬಲಿಯಾದ ಘಟನೆಯನ್ನೇ ಗಮನಿಸಿದರೆ ಬಸ್ ಚಾಲಕ ತನ್ನ ಹತೋಟಿಯಲ್ಲಿ ಬಸ್ ಇಟ್ಟುಕೊಂಡಿದ್ದರೆ ಖಂಡಿತ ಈ ಘಟನೆ ಸಂಭವಿಸುತ್ತಿರಲಿಲ್ಲ. ಹೆದ್ದಾರಿಯಲ್ಲಿ ಭರ‌್ರೆಂದು ಸಾಗುವಂತೆ ಜನನಿಬಿಡ ಪ್ರದೇಶದಲ್ಲಿ ಸಾಗುತ್ತಾರೆ. ಹೊಂಡ-ಗುಂಡಿ ನೋಡದೆ ಚಲಾಯಿಸಿ, ಏಕಾಏಕಿ ಬ್ರೇಕ್ ಹಾಕಿ ಎದುರಿಗೆ ಇರುವವರ ಜೀವ ತಿನ್ನುತ್ತಿದ್ದಾರೆ.  
ಇನ್ನೊಂದು ಮಾತು ಹೇಳಲೇಬೇಕು. ಅದೇನೆಂದರೆ, ಕಾಲೇಜು ಸಮಯದಲ್ಲಿ ಅಂದರೆ ಬೆಳಿಗ್ಗೆ ಮತ್ತು ಸಂಜೆಯ ವೇಳೆ ಕೆಲವು ಬಸ್‌ಗಳಲ್ಲಿ ಇರುವ ಕಂಡಕ್ಟರ್ ಮತ್ತು ಚಾಲಕರು ಉಳಿದ ಸಮಯದಲ್ಲಿ ಇರುವುದಿಲ್ಲ. ಇದಕ್ಕಾಗಿ ಅವರವರಲ್ಲೇ ಹೊಂದಾಣಿಕೆ ನಡೆಯುತ್ತದೆ. ಹುಡುಗಿಯರೊಂದಿಗೆ ನಗುತ್ತ, ಮಾತನಾಡುತ್ತ, ಯಾವುದೋ ಲೋಕದ ಕನಸು ಕಾಣುತ್ತ ತೇಲಾಡುವ ಚಾಲಕ ಬಸ್ ಚಲಾಯಿಸುತ್ತಾನೆ. ಇನ್ನೊಂದೆಡೆ ಹುಡುಗಿಯರೊಡನೆ ಮಾತನಾಡುತ್ತಲೇ, ಪ್ರಯಾಣಿಕರ ಟಿಕೆಟ್ ಮಾಡುತ್ತಾನೆ ಕಂಡಕ್ಟರ್. ಕೆಲವು ಅವರ ಸಹಚರರು ಹುಡುಗಿಯರಿಗಾಗಿ ಸೀಟು ರಿಸರ್ವ್ ಮಾಡಿಕೊಂಡು ಬಂದು ತಮ್ಮ ಪಕ್ಕದಲ್ಲೇ ಕೂಡ್ರಿಸಿಕೊಳ್ಳುತ್ತಾರೆ. ಇಂತಹ ದುರ್ವರ್ತನೆಯನ್ನೆ ಮೈಗೂಡಿಸಿಕೊಂಡಿರುವ ಸಿಬ್ಬಂದಿಗಳಿಗೆ ಪಾಠ ಹೇಳುವ ಕೆಲಸವನ್ನು ಯಾವ ಮಾಲಕರೂ ಮಾಡಿಲ್ಲ ಎಂದು ವಿಷಾದದಿಂದ ಹೇಳಬೇಕಾಗುತ್ತದೆ. 
ಯಾರು ಎಲ್ಲಿ ದಾರಿತಪ್ಪುತ್ತಾರೋ ಅಲ್ಲಿ ಬುದ್ಧಿ ಹೇಳಿ ತಿದ್ದಬೇಕು ಎಂಬ ಮಾತಿದೆ. ಆದರೆ ಇಲ್ಲಿ ಬುದ್ಧಿ ಹೇಳುವ ಅಧಿಕಾರ ಇರುವುದು ಮಾಲಕರಿಗೆ ಮಾತ್ರ. ಮಾಲಕರು ಈ ಕೆಲಸ ಮಾಡುತ್ತಿಲ್ಲ. ಬದಲಾಗಿ ಅವರಿಗೆ ದಿನದ ನಿಗದಿತ ಕಲೆಕ್ಷನ್ ಮಾತ್ರ ಬಂದರಾಯಿತು. ಉಳಿದವುಗಳ ಗೊಡವೆಯ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಉದಾಹರಣೆಗೆ ಎಷ್ಟೊ ಚಾಲಕರಿಗೆ, ಕಂಡಕ್ಟರ್ ಮತ್ತು ಕ್ಲೀನರ್‌ಗೆ ಸಮವಸ್ತ್ರ ಇರುವುದೇ ಇಲ್ಲ.  ಕೆಲಸಕ್ಕೆ ಬರುವ ವೇಳೆ ಸಮವಸ್ತ್ರ ಮತ್ತು ಬ್ಯಾಜ್ ಕಡ್ಡಾಯವಾಗಿ ಧರಿಸಬೇಕೆಂದು ಮಾಲಕರಿಗೆ ಸೂಚಿಸಲು ಸಾಧ್ಯವಿಲ್ಲವೇ? ಟಿಕೆಟ್ ಚೆಕ್ಕರ್‌ಗಳು ಇಲ್ಲದ ಕಾರಣ ಸಿಬ್ಬಂದಿಗಳು ಆಡಿದ್ದೇ ಆಟ. ವಿಶೇಷವಾಗಿ ಕಾಲೇಜು ಯುವತಿಯರೊಂದಿಗೆ ಅವರ ಚೆಲ್ಲಾಟವನ್ನು ನಿಲ್ಲಿಸಲೇಬೇಕಿದೆ. 


ಎಸ್ಪಿ ರವಿ ಅವರು ಕ್ರಮ ಕೈಗೊಳ್ಳುವರೇ|
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣವರ್ ಅವರು ಬೇಕಾಬಿಟ್ಟಿಯಾಗಿ ಸಂಚರಿಸುವ ಹಾಗೂ ಪ್ರಯಾಣಿಕರೊಂದಿಗೆ ಈ ಮೇಲಿನಂತೆ ದುರ್ವರ್ತನೆ ತೋರುವ, ಆಟಾಟೋಪದ ಸಿಟಿ ಬಸ್ ಮತ್ತು ಅದರ ಸಿಬ್ಬಂದಿಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕು. ಈ ಮೂಲಕ ಅಮಾಯಕ ನಾಗರಿಕರು ಜೀವ ಕಳೆದುಕೊಳ್ಳದಂತೆ ಎಚ್ಚರವಹಿಸಬೇಕಿದೆ. ಈ ನಿಟ್ಟಿನಲ್ಲಿ ಎಸ್ಪಿಯವರು ಕೂಡಲೇ ಕ್ರಮ ಕೈಗೊಳ್ಳಬೇಕಿದೆ.


*ಸಿಟಿ ಬಸ್‌ಗಳಲ್ಲಿ ಈ ಹಿಂದೆ ಟೇಪ್‌ರೆಕಾರ್ಡರ್ ಬಳಕೆ ನಿಷೇಧಿಸಲಾಗಿತ್ತು. ಆದರೆ ಈಗ ಹಲವು ಸಿಟಿ ಬಸ್‌ಗಳಲ್ಲಿ ಟೇಪ್‌ರೆಕಾರ್ಡರ್ ಅಳವಡಿಸಲಾಗಿದ್ದು, ಕರ್ಕಶ ಶಬ್ದದೊಂದಿಗೆ ಸಿನಿಮಾ ಹಾಡುಗಳನ್ನು ಹಾಕಲಾಗುತ್ತಿದೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. 
*ಕೆಲವು ಸಿಟಿ ಬಸ್ ಚಾಲಕರು, ನಿರ್ವಾಹಕರು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವುದಿಲ್ಲ. ಸರಿಯಾಗಿ ಟಿಕೆಟ್ ಕೂಡ ನೀಡುವುದಿಲ್ಲ. ಬೇಕಾಬಿಟ್ಟಿಯಾಗಿ ದರ ವಸೂಲಿ ಮಾಡುತ್ತಾರೆ. ಒಬ್ಬರಿಗೊಂದು, ಮತ್ತೊಬ್ಬರಿಗೊಂದು ದರ ಪಡೆಯುವುದು ಇಲ್ಲಿ ಮಾಮೂಲಿ. *ಕಿಸೆಯಲ್ಲಿ ಚಿಲ್ಲರೆ ಇದ್ದರೂ ಚಿಲ್ಲರೆ ಕೊಡಿ ಎಂದು ಅಬ್ಬರಿಸುವುದು, ಕೆಲವೊಮ್ಮೆ ಬೇಕೆಂತಲೇ ಚಿಲ್ಲರೆ ವಾಪಸ್ ಕೊಡದೆ ಇರುವುದು, ಕೆಲವರಿಗೆ ಇಳಿದರೂ ಚಿಲ್ಲರೆ ಕೊಡದಿರುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. 


ಯಾರಿಗೂ ಬೇಡ ಪೊಲೀಸರ ಸ್ಥಿತಿ
ಪೊಲೀಸರು ವೇಗದಲ್ಲೇ ಬಂದ ಬಸ್‌ಗೂ ದಂಡ ಹಾಕುತ್ತಿಲ್ಲ. ಅವರೆಲ್ಲ ಬಸ್ ಮಾಲಕರಿಗೆ ಹೆದರಿಕೊಂಡಿದ್ದಾರೆ. ಬಸ್ ಹಿಡಿದರೆ ತಮ್ಮ ಕೆಲಸವೇ ಹೋಗುತ್ತದೆ ಎಂಬ ಭಯವೇ ಇದಕ್ಕೆ ಕಾರಣ. ಏಕೆಂದರೆ ಬಸ್ ಮಾಲಕರದ್ದು ದೊಡ್ಡ ಲಾಬಿಯೇ ಇದೆ. ಇವರು ರಾಜಕಾರಣಿಗಳಂತೆ ತುಂಬಾ ಪ್ರಭಾವಿಗಳು. ಯಾವ ಅಧಿಕಾರಿಯನ್ನು ಬೇಕಾದರೂ ಅಮಾನತುಗೊಳಿಸುವ ಶಕ್ತಿ ಇದೆ. ಮನೆಗೆ ಕಳುಹಿಸುವ ತಾಕತ್ತಿದೆ.  ತಮಗೆ ಬೇಕಾದ ಅಧಿಕಾರಿಯನ್ನು ಕರೆಯಿಸಿಕೊಳ್ಳುವ ಬಲವಿದೆ. ಅದಕ್ಕಾಗಿ ಕೇಸು, ದಂಡದ ವಿಚಾರಕ್ಕೆ ಪೊಲೀಸರು ಮುಂದಾಗುತ್ತಿಲ್ಲ. ಕೆಲವು ರಾಜಕಾರಣಿಗಳು ಬಸ್ ಮಾಲಕರ ಮುಲಾಜಿಗೆ ಸಿಲುಕಿ ಅಧಿಕಾರಿಗಳ ವಿರುದ್ದವೇ ಕ್ರಮವಾಗುವಂತೆ ಮಾಡಿದ ನಿರ್ದರ್ಶನವಿದೆ. ಏಕೆಂದರೆ ಬಸ್ ಮಾಲಕರನ್ನು ರಾಜಕಾರಣಿಗಳು ಓಲೈಸಿಕೊಳ್ಳದಿದ್ದರೆ ನಾಳೆ ಅವರಿಗೆ ಸಹಾಯ ಸಿಕ್ಕುವುದಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಪೊಲೀಸರು ಮೂಕ ಪ್ರೇಕ್ಷಕರೆಂದೇ ಹೇಳಬಹುದು.