Monday, 28 March 2016

ಕರುಣೆ ತೋರಿದ ಕಾರುಣ್ಯಾ
  ಸೂಪರ್ ಮಿನಿಟ್ ಮೂಲಕ  ರೈತ ಮಹಿಳೆಯ ಸಾಲ ತೀರಿಸಿದ ಚಿತ್ರನಟಿ


ರೈತರ ಬಗ್ಗೆ ಉದ್ದುದ್ದ ಮಾತನಾಡುವ, ಆತ್ಮಹತ್ಯೆ ಮಾಡಿಕೊಂಡಾಕ್ಷಣ ರಾಜಕಾರಣ ಮಾಡುವ, ಸರಕಾರದಿಂದ ನೆರವು ದೊರೆಯದಿದ್ದರೆ ಆ ಬಗ್ಗೆ ಹೋರಾಡುವ ಜನರಿದ್ದಾರೆ. ಆದರೆ ತಾವೇ ಮುಂದಾಗಿ ಅವರ ಸಾಲವನ್ನು ತೀರಿಸುವವರಿಲ್ಲ. ಹೋರಾಡಿ ಹಣ ಸಂಗ್ರಹಿಸಿ ಸಾಲ ತುಂಬಿಕೊಟ್ಟ ಸಂಘಟನೆಯವರೂ ಇಲ್ಲ. ಆದರೆ, ಕಿರಗೂರಿನ ಗಯ್ಯಾಳಿಗಳು ಚಿತ್ರದ ನಟಿಯರು ಸಾಲದ ಕಾರಣದಿಂದ ಆತ್ಮಹತ್ಯೆಗೆೆ ಶರಣಾಗಿದ್ದ ದಾವಣಗೆರೆ ಜಿಲ್ಲೆಯ ರೈತನ ಕುಟುಂಬದ  3 ಲಕ್ಷ ರೂ. ಸಾಲವನ್ನು ತೀರಿಸಿದ್ದಾರೆ.  ಸಾಲಮಾಡಿ ಪತಿ ಆತ್ಮಹತ್ಯೆ ಮಾಡಿಕೊಂಡ ನಂತರ ಅದರ ಜವಾಬ್ದಾರಿ ಹೊತ್ತ ಆತನ ಪತ್ನಿ ಲಕ್ಷ್ಮೀಬಾಯಿ ದಿಕ್ಕುತೋಚದ ಸ್ಥಿತಿಯಲ್ಲಿದ್ದಾಗ ಇದನ್ನು ತಿಳಿದು ಆಕೆಯ ಕೈ ಹಿಡಿದವರು ಈ ನಟಿಯರು. ಸಾಲ ತೀರಿಸಿ ಸಮಾಜಕ್ಕೆ ಮಾದರಿಯಾದ, ಹೃದಯವಂತಿಕೆ ಮೆರೆದ  ಈ ನಟಿಯರು ಶ್ರೀಮಂತರಲ್ಲ. ಕಲರ್ಸ್ ಕನ್ನಡ ಚಾನೆಲ್‌ನ ಪ್ರಖ್ಯಾತ ಸೂಪರ್ ಮಿನಿಟ್ ಕಾಂರ್ಕ್ರಮದಲ್ಲಿ ಪಾಲ್ಗೊಂಡು ಅಲ್ಲಿನ ಸ್ಪರ್ಧೆಯಲ್ಲಿ 2 ಲಕ್ಷ ರೂ. ಜಯಿಸಿದ್ದಲ್ಲದೆ, ಚಾನೆಲ್‌ನ ಸಹಾಯದಿಂದ ಇನ್ನೊಂದು ಲಕ್ಷ ರೂ. ವನ್ನು ಹೆಚ್ಚುವರಿಯಾಗಿ ಪಡೆದು ಸಾಲಮರುಪಾವ್ತಿಸಿದ್ದಾರೆ. ಸಮಾಜದಲ್ಲಿ ಮಾನವೀಯತೆ ಇನ್ನೂ ಜೀವಂತವಿದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.  


  ಈ ನಾಡಿನಲ್ಲಿ ರೈತರ ಕಷ್ಟ ಕೇಳುವವರಿಲ್ಲ, ನೆರವಾಗುವವರಿಲ್ಲ, ಒಂದೆಡೆ ಬರಗಾಲದಿಂದ ತತ್ತರಿಸುತ್ತಿದ್ದರೆ, ಇನ್ನೊಂದೆಡೆ ಮಾಡಿಕೊಂಡ ಸಾಲವೆಂಬ ಶೂಲ ಸದಾ ಇರಿಯುತ್ತಿರುತ್ತದೆ. ಮತ್ತೊಂದೆಡೆ, ಸಾಲ ಚುಕ್ತಾಗೊಳಿಸುವಂತೆ ಬ್ಯಾಂಕ್‌ನವರಿಂದ ನೊಟೀಸ್. ಇವೆಲ್ಲವುಗಳ ಪರಿಣಾಮ ರೈತರ ಆತ್ಮಹತ್ಯೆ. ಸದ್ಯ ರೈತರ ಆತ್ಮಹತ್ಯೆ ಕಡಿಮೆಯಾಗಿದೆ. ಆದರೆ ಸಾವಿಗೀಡಾದ ರೈತರ ನೆರವಿಗೆ ಬಂದವರೆಷ್ಟು? ಸರಕಾರ ಘೋಷಿಸಿದ ನೆರವೆಷ್ಟು? ರೈತರ ಕೈಗೆ ಬಂದದ್ದೆಷ್ಟು? ಎನ್ನುವುದಕ್ಕೆ ಮಾತ್ರ ನಮ್ಮಲ್ಲಿ ಉತ್ತರವಿಲ್ಲ.
ನಾಡಿನಲ್ಲಿ ಶ್ರೀಮಂತರಿದ್ದಾರೆ, ರಾಜಕಾರಣಿಗಳಿದ್ದಾರೆ,  ಸಿನಿಮಾ ತಾರೆಯರು, ಉದ್ಯಮಿಗಳು, ವ್ಯಾಪಾರಸ್ಥರು, ಕಾರ್ಪೊರೇಟ್ ಸಂಸ್ಥೆಗಳು, ಅಧಿಕಾರಿಗಳೂ ಇದ್ದಾರೆ. ಆದರೆ ಆತ್ಮಹತ್ಯೆ ಮಾಡಿಕೊಂಡ ರೈತರ ಕಣ್ಣೀರು ಒರೆಸಿದವರು ಎಷ್ಟು ಜನ ಎನ್ನುವುದನ್ನು ಪ್ರಶ್ನಿಸಿಕೊಳ್ಳಬೇಕಿದೆ. ರೈತ ಆತ್ಮಹತ್ಯೆ ಮಾಡಿಕೊಂಡ ನಂತರ ಆತನ ಕುಟುಂಬ ಕಣ್ಣಿರಿನಲ್ಲೇ ಕೈ ತೊಳೆಯುವ ಸ್ಥಿತಿ ಶೇ. 75ರಷ್ಟು ಪ್ರಕರಣಗಳಲ್ಲಿದೆ. ಇದು ನಮ್ಮನ್ನಾಳುವವರಿಗೂ ಗೊತ್ತು, ಆಳಿಸಿಕೊಳ್ಳುವ ನಮಗೂ ಗೊತ್ತು. ಆದರೂ ಸಹಾಯಸ್ತವನ್ನು ಮರೆತುಬಿಟ್ಟಿದ್ದೇವೆ.
ದಾವಣಗೆರೆ ಜಿಲ್ಲೆಯ ಹಳ್ಳಿಯೊಂದರಲ್ಲಿ ಭೀಮಾ ನಾಯ್ಕ್ ಎನ್ನುವ ರೈತ ಟ್ರ್ಯಾಕ್ಟರ್ ಖರೀದಿಗಾಗಿ ಬ್ಯಾಂಕಿನಲ್ಲಿ 13.50 ಲಕ್ಷ ರೂ. ಸಾಲ ಮಾಡಿದ್ದ. ಎಂದಿನಂತೆ ಮಳೆ ಬರಲಿಲ್ಲ, ಸಾಲದ ಕಂತು ಕಟ್ಟಲಿಲ್ಲ, ಬಡ್ಡಿ ಏರಿತು, ಬ್ಯಾಂಕಿನಿಂದ ನೊಟೀಸ್ ಬರಲಾರಂಭಿಸಿತು. ರೈತ ಗಾಬರಿಗೊಂಡ, ಒಂದು ದಿನ ಆತ್ಮಹತ್ಯೆ ಮಾಡಿಕೊಂಡ.  ಇದಾದ ಬಳಿಕ ಆತನ ಪತ್ನಿ ಲಕ್ಷ್ಮೀಬಾಯಿಗೆ ದಾರಿ ಕಾಣದಾಯಿತು. ಜಿಲ್ಲಾಧಿಕಾರಿ ಬಳಿ ಹೋಗಿ ಪರಿಸ್ಥಿತಿ ವಿವರಿಸಿ ಕಣ್ಣೀರಿಟ್ಟಳು. ಇದಕ್ಕೆ ಸ್ಪಂದಿಸಿದ ಅವರು ಸಾಲದ ಬಡ್ಡಿ ಮನ್ನಾ ಮಾಡಿಸಿಕೊಡುವ ಭರವಸೆ ಕೊಟ್ಟರು. ಆದರೆ ಸಾಲದ ಮೊಬಲಗನ್ನಾದರೂ ತುಂಬಬೇಕಲ್ಲ...? ಕೊನೆಗೆ, ಬ್ಯಾಂಕಿನವರು ಎಲ್ಲವನ್ನೂ ಕಳೆದು 3 ಲಕ್ಷ ರೂ. ಕಟ್ಟುವಂತೆ ಸೂಚಿಸಿದರು. ಅಲ್ಲಿಗೆ ಪ್ರಕರಣವೇನೋ ಮುಕ್ತ್ತಾಯವಾಯಿತು.
ಆದರೆ,  3 ಲಕ್ಷ ರೂ. ವನ್ನು ಎಲ್ಲಿಂದ ತರುವುದು, ಶುರುವಾಯಿತು ಲಕ್ಷ್ಮಿಬಾಯಿಗೆ ಚಿಂತೆ. ಆಕೆಯ ಒಡಲಾಳದ ಸಂಕಟ ಇತ್ತೀಚೆಗೆ ಬಿಡುಗಡೆಗೊಂಡು ಯಶಸ್ವೀ ಪ್ರದರ್ಶನ ಕಾಣುತ್ತಿರುವ ‘ಕಿರಗೂರಿನ ಗಯ್ಯಾಳಿಗಳು’ ಚಿತ್ರತಂಡದ ನಾಯಕಿಯರ ಕಿವಿ ತಟ್ಟಿತು; ಮನಸ್ಸು ಮುಟ್ಟಿತು; ಹೃದಯ ತುಡಿಯಿತು. ಈ ಚಿತ್ರದಲ್ಲಿ ಕಾರುಣ್ಯಾ, ಮಾನ್ವಿತಾ, ಅದಿತಿ, ಐಶಾನಿ ಶೆಟ್ಟಿ ಮತ್ತು ಸುಕೃತಾ ಎಂಬ ಪಂಚಕನ್ಯೆಯರಿದ್ದಾರೆ. ಇವರೆಲ್ಲ ಸೇರಿ ನೆರವಾಗಲು ಮುಂದೆ ಬಂದರು. ಹಾಗಂತ ಕೈಯಿಂದ ಹಣ ಕೊಡುವ ಸ್ಥಿತಿಯಲ್ಲಿ ಅವರೂ ಇಲ್ಲ. ಅವರು ಲಕ್ಷ್ಮೀಬಾಯಿಯನ್ನು ಸಂಪರ್ಕಿಸಿ ಧೈರ್ಯ ತುಂಬಿದರು, ಸಹಾಯಸ್ತ ಚಾಚುವುದಾಗಿ ಭರವಸೆ ಕೊಟ್ಟರು. ಅದಕ್ಕಾಗಿ ಉಪಾಯವೊಂದನ್ನು ರೂಪಿಸಿದರು. ಅದೆಂದರೆ, ಕಲರ್ಸ್  ಕನ್ನಡ ಚಾನೆಲ್‌ನಲ್ಲಿ  ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ಪ್ರಸಾರವಾಗುವ  ಚಿತ್ರನಟ ಗಣೇಶ್ ನಡೆಸಿಕೊಡುವ, ಬುದ್ಧಿವಂತಿಕೆ, ಚಾಣಾಕ್ಷತನ, ಆತ್ಮವಿಶ್ವಾಸ, ವೇಗ, ತೀಕ್ಷ್ಣಮತಿತ್ವ ಮತ್ತು ಸಮಯಪ್ರಜ್ಞೆಗೆ ಹೆಸರಾದ  ‘ಸೂಪರ್ ಮಿನಿಟ್’ ನಲ್ಲಿ ಭಾಗವಹಿಸಿ ಅದರಲ್ಲಿ ಯಾರೇ ಗೆದ್ದರೂ, ಗೆದ್ದ ಹಣವನ್ನು ಲಕ್ಷ್ಮೀದೇವಿಗೆ ನೀಡಿ ಸಮಾಜಕ್ಕೆ ಮಾದರಿಯಾಗುವುದು.
ಈ ಪ್ರಕಾರ,  ಚಾನೆಲ್ ಮುಖ್ಯಸ್ಥರನ್ನು ಕಂಡು ಮಾತುಕತೆ ನಡೆಸಿದಾಗ ಅವರೂ ಸಹ ಇದನ್ನು ಮನಸಾರೆ ಶ್ಲಾಘಿಸಿ, ಅನುಮತಿ ಕೊಟ್ಟರು.  ಅದರಂತೆ ಮಾ 26ರ ಶನಿವಾರ ಈ ತಾರೆಯರು ಸೂಪರ್ ಮಿನಿಟ್‌ನಲ್ಲಿ ಭಾಗವಹಿಸಿದ್ದರು. ಆರಂಭದಲ್ಲೇ ತಾವು ಗೆದ್ದ ಹಣವನ್ನು ಲಕ್ಷ್ಮೀಬಾಯಿ ಅವರಿಗೆ ನೀಡಿ ಅವರನ್ನು ಸಾಲದ ಬಾಧೆಯಿಂದ ಮುಕ್ತಗೊಳಿಸುವ ಕೆಲಸ ಮಾಡುವುದಾಗಿ ಘೋಷಿಸಿದ್ದರು. ಆ ಪ್ರಕಾರ  ನಡೆದ ಸ್ಪರ್ಧೆಯಲ್ಲಿ ನಟಿ ಕಾರುಣ್ಯಾ  2 ಲಕ್ಷ ರೂ. ವರೆಗೂ ಆಟ ಮುಂದುವರೆಸಿದರು. ಆದರೆ ನಂತರ ಬರುವ ಆಟಗಳು ಕಷ್ಟವಿರುವುದರಿಂದ ಮತ್ತು ಸೋತಲ್ಲಿ ಸಿಗುವ ಹಣ 50 ಸಾವಿರ ರೂಪಾಯಿಗೆ ಸೀಮಿತಗೊಳ್ಳುವುದರಿಂದ ಚಾಣಾಕ್ಷೆಯಾದ ಕಾರುಣ್ಯಾ ಆಟವನ್ನು ಅಲ್ಲಿಗೇ ನಿಲ್ಲಿಸಿಬಿಟ್ಟರು. ಆದರೂ ಮುಂದಿನ ಆಟ ಯಾವುದಿರಬಹುದು ಎಂಬ ಕುತೂಹಲ ಈ ಕನಸುಕಂಗಳ ಹುಡುಗಿಗೆ. ಕಾರುಣ್ಯಾಳ ಕನಸಿಗೆ ತಣ್ಣೀರೆರಚದ ಕಲರ್ಸ್ ಚಾನೆಲ್, ಇದನ್ನು ಭಾವುಕ ಸನ್ನಿವೇಶವೆಂದು ಪರಿಗಣಿಸಿ,    ಮುಂದಿನ ಆಟವನ್ನು ಆಡಲು ಅವಕಾಶವನ್ನೂ ನೀಡಿತು. ಮಾತ್ರವಲ್ಲ, ಈ ಆಟವನ್ನು ಗೆದ್ದರೆ ಕಾರುಣ್ಯಾ ಗೆದ್ದ 2 ಲಕ್ಷಕ್ಕೆ ಇನ್ನೊಂದು ಲಕ್ಷ ಸೇರಿಸಿ ಒಟ್ಟು 3 ಲಕ್ಷ ನೀಡುವ ಉದಾರತೆಯನ್ನು ಮೆರೆದು, ಮಾನವೀಯತೆಗೆ ತಾನೂ ಕೈಜೋಡಿಸುವುದಾಗಿ ಹೇಳಿತು. ಕಾರುಣ್ಯಾ ಆಟ ಮುಂದುವರೆಸಿದರು. ಗೆಲುವಿನ ನಗೆಯನ್ನೂ ಬೀರಿದರು. ಕೊಟ್ಟ ಮಾತಿನಂತೆ ಕಾರುಣ್ಯಾ ಹಾಗೂ ಕಲರ್ಸ್ ಕನ್ನಡ ಜೊತೆಸೇರಿ ಲಕ್ಷ್ಮೀಬಾಯಿಯವರಿಗೆ 3 ಲಕ್ಷ ಮೊತ್ತದ ಚೆಕ್ ನೀಡಿ ಧನ್ಯತೆಯನ್ನು ಅನುಭವಿಸಿದ ಆ ರಸಕ್ಷಣವನ್ನು ಕನ್ನಡಿಗರಾರೂ ಮರೆಯುವಂತಿಲ್ಲ.
ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ  ಲಕ್ಷ್ಮೀಬಾಯಿಯ ಕಣ್ಣಾಲಿಗಳು ತುಂಬಿಬಂದವು. ಕತ್ತಲು ತುಂಬಿದ್ದ ಆಕೆಯ ಬಾಳಿನಲ್ಲಿ ಹೊಳಪಿನ ಸೆಳೆಮಿಂಚು. ನಟೀಮಣಿಯರ ಹೃದಯವೈಶಾಲ್ಯಕ್ಕೆ, ನಟ ಗಣೇಶ್ ಅವರ ಭಾವುಕ ನಿರೂಪಣೆಗೆ, ಕಲರ್ಸ್ ಕನ್ನಡದ ಮಾನವೀಯತೆಗೆ ನಾವೆಲ್ಲ ‘ಸೆಲ್ಯೂಟ್’ ಎನ್ನಲೇ ಬೇಕು.
ಮೊನ್ನೆಯಷ್ಟೇ ಮೈಸೂರು ಜಿಲ್ಲೆಯ ಹುಣಸೂರು ಸಮೀಪ ಬೈಕ್ ಅಪಘಾತಕ್ಕೀಡಾಗಿ ರಸ್ತೆಯಲ್ಲಿ ನರಳುತ್ತ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕತ್ರಯರನ್ನು ಆಸ್ಪತ್ರಗೆ ಸೇರಿಸದೆ ಅವರ ಸುತ್ತ ನಿಂತು ಚಿತ್ರೀಕರಣ ಮಾಡುತ್ತ, ಪೂರ್ವಾಪರ ವಿಚಾರಿಸುತ್ತ ಕಾಲಹರಣ ಮಾಡಿ ಅಮಾನವೀಯತೆ ಮೆರೆದಿದ್ದ ಘಟನೆ ನಮ್ಮೆದುರು ಹಚ್ಚಹಸಿರಾಗಿರುವಾಗಲೇ, ಮಾನವೀಯತೆಯ ಗಂಧಗಾಳಿಯೂ ಇಲ್ಲದೆ ಸ್ವಾರ್ಥ, ದುರಾಸೆ, ಅಹಂಕಾರ, ಮಮಕಾರಗಳೇ ವಿಜೃಂಭಿಸುತ್ತಿರುವ ಈ ಕಾಲದಲ್ಲೂ ಮಾನವೀಯತೆಯ ಸಾಕಾರಕ್ಕೆ ಸಾಕ್ಷಿಯಾಗುವವರಿದ್ದಾರಲ್ಲ....! ಕಾಲ ಕೆಟ್ಟಿಲ್ಲ, ಈಗಲೂ ಒಳ್ಳೆಯವರಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗುತ್ತಾರೆ ಕಿರಗೂರಿನ ದಯಾಳು ಗಯ್ಯಾಳಿಗಳು!
ರೈತರ ಬಗ್ಗೆ ಉದ್ದುದ್ದ ಮಾತನಾಡುವ, ಆತ್ಮಹತ್ಯೆ ಮಾಡಿಕೊಂಡಾಕ್ಷಣ ರಾಜಕಾರಣ ಮಾಡುವ, ಸರಕಾರದಿಂದ ನೆರವು ದೊರೆಯದಿದ್ದರೆ ಆ ಬಗ್ಗೆ ಹೋರಾಡುವ ಜನರಿದ್ದಾರೆ. ಆದರೆ ತಾವೇ ಮುಂದಾಗಿ ಅವರ ಸಾಲವನ್ನು ತೀರಿಸುವವರಿಲ್ಲ. ಹೋರಾಡಿ ಹಣ ಸಂಗ್ರಹಿಸಿ ಸಾಲ ತುಂಬಿಕೊಟ್ಟ ಸಂಘಟನೆಯವರೂ ಇಲ್ಲ. ಮಳೆ ಬಂದರೂ ಕಷ್ಟ, ಬಾರದಿದ್ದರೂ ಕಷ್ಟ, ಬೆಳೆ ಬೆಳೆದರೂ ಕಷ್ಟ, ಬೆಳೆಯದಿದ್ದರೂ ಕಷ್ಟ ಎನ್ನುವ ಸ್ಥಿತಿಯಲ್ಲಿರುವ ರೈತ ಚೆನ್ನಾಗಿದ್ದರೆ ಮಾತ್ರ ನಾಡು ಚೆನ್ನಾಗಿರುತ್ತದೆ. ರೈತ ನಾಡಿನ ಬೆನ್ನೆಲುಬು, ನೇಗಿಲಯೋಗಿ, ಅನ್ನದಾತ, ಹಸಿರು ಕ್ರಾಂತಿ, ಆಹಾರದಲ್ಲಿ ಸ್ವಾವಲಂಬನೆ ಎನ್ನುವ ಸಂದರ್ಭಗಳಲ್ಲಿ ಮಾತ್ರ ರೈತ ನಮ್ಮ ನಾಯಕರೆನ್ನಿಸಿಕೊಂಡವರಿಗೆಲ್ಲ ನೆನಪಿಗೆ ಬರುವುದು ವಿಷಾದನೀಯವೇ ಸರಿ.
ನಮ್ಮ ಸಮಾಜದಲ್ಲಿರುವ ಶ್ರೀಮಂತರು, ಉದ್ಯಮಿಗಳು, ರಾಜಕಾರಣಿಗಳು, ನಟ-ನಟಿಯರಿಗೆ ಕಿರಗೂರಿನ ಗಯ್ಯಾಳಿಯರು ಮಾದರಿಯಾಗಲಿ; ಸಾಲದ ಶೂಲಕ್ಕೆ ಕೊರಳೊಡ್ಡುವ ಜನರ ಬದುಕಿಗೆ ಆಸರೆಯಾಗಲಿ. 

No comments:

Post a Comment