Wednesday, 29 November 2017

ಮಾಯವಾಗುತ್ತಿವೆ  ಫುಟ್‌ಪಾತ್‌ಗಳು
    ರಸ್ತೆಯಂಚಿನಲ್ಲಿ ಓಡಾಡುವ ಪಾದಚಾರಿಗಳು *  ಪಾಲಿಕೆಯ ಮೌನ

  ಶಿವಮೊಗ್ಗ ನಗರ ಬೆಳೆದಂತೆಲ್ಲ, ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ಆನಂತರ ಅಕ್ರಮಗಳೇ ಹೆಚ್ಚುತ್ತಿವೆ. ಒಂದೆಡೆ ವ್ಯಾಪಾರಿಗಳು ಫುಟ್‌ಪಾತನ್ನು ಆಕ್ರಮಿಸಿ ತಮ್ಮ ಅಂಗಡಿಯ ಸರಂಜಾಮುಗಳನ್ನಿಟ್ಟುಕೊಳ್ಳುತ್ತಾರೆ. ಇನ್ನೊಂದೆಡೆ, ರಾತ್ರಿ ಬೆಳಗಾಗುವುದರೊಳಗೆ ಆಟೋ, ಟ್ಯಾಕ್ಸಿ ಸ್ಟ್ತ್ಯಾಂಡ್ ನಿರ್ಮಾಣವಾಗುತ್ತದೆ. ಗ್ಯಾರೇಜ್ ಕೆಲಸ ಸಹ ಫುಟ್‌ಪಾತ್‌ನಲ್ಲೇ ನಡೆಯುತ್ತದೆ. ಸಂಬಂಧಿಸಿದ ಕಾರ್ಪೊರೇಟರ್‌ಗಳಿಗೆ, ಅಧಿಕಾರಿಗಳಿಗೆ ಇವೆಲ್ಲ ಕಾಣಿಸುವುದಿಲ್ಲವೇ, ನಗರದ ಬೆಳವಣಿಗೆಗೆ ಸಹಕರಿಸಬೇಕಾದವರೇ ವಾಮಮಾರ್ಗ ಹಿಡಿದು ಪಾಲಿಕೆಗೂ, ಸಾರ್ವಜನಿಕರಿಗೂ ತೊಂದರೆ ಉಂಟುಮಾಡುತ್ತಿದ್ದರೂ ಆ ಬಗ್ಗೆ ಚಕಾರ ಎತ್ತುವವರಿಲ್ಲ. ದಿನನಿತ್ಯ ಪಾಲಿಕೆ ಸದಸ್ಯರು ಇದೇ ಮಾರ್ಗದಲ್ಲಿ ಸಂಚರಿಸಿದರೂ ಮಾತನಾಡುವುದಿಲ್ಲ. ಸಾರ್ವಜನಿಕರು ಪ್ರಶ್ನಿಸಿದರೆ ಗಲಾಟೆ. ಹಾಗಾದರೆ ಈ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವವರಾರು?




 ನಗರದಲ್ಲಿ ದಿನ ಕಳೆದಂತೆ ಫುಟ್‌ಪಾತ್ (ಪಾದಚಾರಿ ಮಾರ್ಗ) ಗಳೇ ಮಾಯವಾಗುತ್ತಿವೆ. ನಗರದಲ್ಲಿ ಫುಟ್‌ಪಾತ್‌ಗಳ ಒತ್ತುವರಿ ಅವ್ಯಾಹತವಾಗಿ ನಡೆಯಲಾರಂಭಿಸಿದೆ. ಇನ್ನೊಂದೆಡೆ ಇದಕ್ಕೆ ಕಡಿವಾಣ ಹಾಕಬೇಕಾದ ಆಡಳಿತ ವ್ಯವಸ್ಥೆ ಮೌನಕ್ಕೆ ಶರಣಾಗಿದೆ. ಇದರಿಂದ ಪಾದಚಾರಿಗಳು ಜೀವ ಕೈಯಲ್ಲಿಡಿದು ರಸ್ತೆಗಳಲ್ಲಿ ಓಡಾಡುವಂತಾಗಿದೆ.
ನಗರದ ಪ್ರಮುಖ ರಸ್ತೆಗಳಲ್ಲಿ ಫುಟ್‌ಪಾತ್‌ಗಳ ಮೇಲೆಯೇ ಕೆಲವು ವ್ಯಾಪಾರಸ್ಥರು ಸರಕು-ಸರಂಜಾಮುಗಳನ್ನಿಟ್ಟುಕೊಂಡು ಪಾದಚಾರಿಗಳ ಓಡಾಟಕ್ಕೆ ಅಡ್ಡಿಪಡಿಸುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಫುಟ್‌ಪಾತ್‌ಗಳ ಮೇಲೆಯೇ ವಾಹನ ಸ್ಟ್ಯಾಂಡ್‌ಗಳ ಶೆಲ್ಟರ್ ನಿರ್ಮಾಣ ಮಾಡಲಾಗುತ್ತಿದೆ.
ವಿಪರ್ಯಾಸದ ಸಂಗತಿಯೆಂದರೇ, ಸರ್ಕಾರದ ವಿವಿಧ ಅನುದಾನದಡಿ ಫುಟ್‌ಪಾತ್‌ಗಳ ಮೇಲೆಯೇ ಶೆಲ್ಟರ್ ನಿರ್ಮಿಸಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಜಲ್ವಂತ ನಿದರ್ಶನವೆಂಬಂತೆ ನಗರದ ಬಾಲರಾಜ ಅರಸ್ ರಸ್ತೆಯಲ್ಲಿ ಫುಟ್‌ಪಾತ್ ಮೇಲೆಯೇ ಪ್ರವಾಸಿ ವಾಹನಗಳ ನಿಲುಗಡೆಯ ಶೆಲ್ಟರ್ ನಿರ್ಮಿಸಿರುವುದು.
ಇದರಿಂದ ಈ ಪ್ರದೇಶದಲ್ಲಿ ನಿರ್ದಿಷ್ಟ ಅಂತರದವರೆಗೆ ಫುಟ್‌ಪಾತ್ ಮೇಲೆ ಪಾದಚಾರಿಗಳು ಓಡಾಡಲು ಸಾಧ್ಯವೇ ಇಲ್ಲದಂತಾಗಿದೆ. ರಸ್ತೆಯ ಮೇಲೆಯೇ ಸಂಚರಿಸಬೇಕಾಗಿದೆ. ಪಾದಚಾರಿಗಳ ಪಡಿಪಾಟಲು ಹೇಳತೀರದಾಗಿದ್ದು, ಕೊಂಚ ಹೆಚ್ಚುಕಮ್ಮಿಯಾದರೂ ವೇಗವಾಗಿ ಆಗಮಿಸುವ ವಾಹನಗಳಿಗೆ ಸಿಕ್ಕಿ ಅಪಘಾತಕ್ಕೀಡಾಗುವಂತಾಗಿದೆ.
  ಎ.ಎ. ವೃತ್ತದಿಂದ ನೆಹರೂ ರಸ್ತೆ ಪ್ರವೇಶಿಸುವ ಸ್ಥಳದಲ್ಲಿಯೂ ಪಾದಚಾರಿ ಮಾರ್ಗ ಒತ್ತುವರಿಯಾಗಿದೆ. ಮಹಾವೀರ ವೃತ್ತದ ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿಯೇ ಪಾದಚಾರಿ ಮಾರ್ಗದ ಮೇಲೆಯೇ ಕೆಲವರು ವಾಹನಗಳ ದುರಸ್ತಿ ಕೆಲಸ ಮಾಡುತ್ತಾರೆ. ಗಾಂಧಿಬಜಾರ್, ನೆಹರೂ ರಸ್ತೆ, ದುರ್ಗಿಗುಡಿ, ಜೈಲ್ ರಸ್ತೆ, ಎಂಕೆಕೆ ರಸ್ತೆ, ಗಾರ್ಡನ್ ಏರಿಯಾ ರಸ್ತೆ ಸೇರಿದಂತೆ ಬಹುತೇಕ ಮುಖ ರಸ್ತೆಗಳಲ್ಲಿ ಕೆಲ ವರ್ತಕರು ಫುಟ್‌ಪಾತ್‌ಗಳ ಮೇಲೆಯೇ ಸರಕು-ಸರಂಜಾಮುಗಳನ್ನಿಟ್ಟುಕೊಂಡಿದ್ದಾರೆ.
ಪಾದಚಾರಿ ಮಾರ್ಗ ಸುವ್ಯವಸ್ಥಿತವಾಗಿಟ್ಟುಕೊಳ್ಳಬೇಕಾಗಿರುವುದು ಸ್ಥಳಿಯಾಡಳಿತದ ಕರ್ತವ್ಯವಾಗಿದೆ. ಆದರೆ ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಆಡಳಿತ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಫುಟ್‌ಪಾತ್‌ಗಳ ಮೇಲೆಯೇ ವಾಹನ ನಿಲುಗಡೆಯ ಶೆಲ್ಟರ್ ನಿರ್ಮಿಸಲು ಅವಕಾಶ ಕೊಟ್ಟಿದ್ದು ಸರಿಯೇ, ಪಾಲಿಕೆ ಹಾಗೂ ಜಿಲ್ಲಾಡಳಿತ ಪಾದಚಾರಿ ಮಾರ್ಗಗಳ ಸಂರಕ್ಷಣೆಗೆ ಪ್ರಾಮಾಣಿಕ ಗಮನವನ್ನು ಏಕೆ ಹರಿಸುತ್ತಿಲ್ಲ ಎಂದು ಪ್ರಶ್ನಿಸುವಂತಾಗಿದೆ. 
 ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಮತ್ತು ಪಾಲಿಕೆ ಆಯುಕ್ತ ಮುಲ್ಲೈ ಮುಹಿಲನ್ ನಗರದ ವಿವಿಧೆಡೆ ಫುಟ್‌ಪಾತ್, ರಸ್ತೆ ಜಾಗ ಅತಿಕ್ರಮಿಸಿ ನಿರ್ಮಾಣವಾಗುತ್ತಿರುವ ಶೆಲ್ಟರ್‌ಗಳಿಗೆ ಕಡಿವಾಣ ಹಾಕಬೇಕಾಗಿದೆ. ಫುಟ್‌ಪಾತನಲ್ಲಿ ಅಂಗಡಿಯ ವಸ್ತುಗಳನ್ನಿಡುವವರಿಗೆ ಎಚ್ಚರಿಕೆ ಕೊಡಬೇಕು. ಈ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಅವರು ಕಾರ್ಯನಿರ್ವಹಿಸಬೇಕಾಗಿದೆ.
------------------------------------------

No comments:

Post a Comment