ಬಂಪರ್ ಬೆಳೆ ; ಕುಸಿದಿದೆ ಬೆಲೆ
ಶಿವಮೊಗ್ಗ, ನ. 2: ’ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ...’ ಎಂಬ ಮಾತು ಮೆಕ್ಕೆಜೋಳ ಬೆಳೆಗಾರರಿಗೆ ಸೂಕ್ತವಾಗಿ ಅನ್ವಯವಾಗುತ್ತದೆ. ಈ ಬಾರಿ ಮುಂಗಾರು ಮಳೆಯ ಕಣ್ಣಾಮುಚ್ಚಾಲೆಯ ನಡುವೆಯೂ ದಾಖಲೆ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆ ಬೆಳೆಯಲಾಗಿದೆ. ಆದರೆ ಮಾರುಕಟ್ಟೆಯಲ್ಲಿ ಧಾರಣೆ ಕುಸಿತದಿಂದ ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ.
ಒಂದೆಡೆ ಕಡಿಮೆ ಮೊತ್ತಕ್ಕೆ ಮೆಕ್ಕೆಜೋಳ ಮಾರಲಾಗದೆ, ಇನ್ನೊಂದೆಡೆ ಉತ್ತಮ ಬೆಲೆ ಬರುವವರೆಗೆ ದಾಸ್ತಾನು ಮಾಡಿಟ್ಟುಕೊಳ್ಳಲು ಸಾಧ್ಯವಾಗದೆ ರೈತರು ಪರಿತಪಿಸುವಂತಾಗಿದೆ. ಈಗಾಗಲೇ ಬಡ - ಮಧ್ಯಮ ವರ್ಗದ ರೈತರು ಅನಿವಾರ್ಯವಾಗಿ ಕಡಿಮೆ ಬೆಲೆಗೆ ಮೆಕ್ಕೆಜೋಳ ಬೆಳೆಯನ್ನು ಖಾಸಗಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಮತ್ತೆ ಕೆಲವು ರೈತರು ರಾಜ್ಯ ಸರ್ಕಾರ ಆರಂಭಿಸಲಿರುವ ಬೆಂಬಲ ಬೆಲೆ ಖರೀದಿ ಕೇಂದ್ರಗಳತ್ತ ಚಿತ್ತ ಹರಿಸಿದ್ದಾರೆ. ಸರ್ಕಾರ ನಿಗದಿಪಡಿಸುವ ಬೆಲೆಯತ್ತ ಗಮನಹರಿಸಿದ್ದು, ಅಲ್ಲಿಯವರೆಗೂ ಖಾಸಗಿ ವ್ಯಾಪಾರಿಗಳಿಗೆ ಬೆಳೆ ಮಾರಾಟ ಮಾಡದಿರಲು ನಿರ್ಧರಿಸಿದ್ದಾರೆ. ಸರ್ಕಾರ ಮೆಕ್ಕೆಜೋಳಕ್ಕೆ ಬೆಲೆ ನಿಗದಿ ಮಾಡಿ ಖರೀದಿಸಲು ಮುಂದಾದರೆ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆಯಾಗುವ ನಿರೀಕ್ಷೆ ರೈತರದ್ದಾಗಿದೆ.
ದೀಪಾವಳಿ ಹಬ್ಬದ ಆಸುಪಾಸಿನ ದಿನಗಳಿಂದ ಜಿಲ್ಲೆಯಾದ್ಯಂತ ಮೆಕ್ಕೆಜೋಳ ಬೆಳೆ ಕಟಾವು ಕಾರ್ಯ ಆರಂಭವಾಗಿದೆ. ಈಗಾಗಲೇ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಕಟಾವು ಮಾಡಲಾಗಿದೆ. ಆದರೆ ಮಾರುಕಟ್ಟೆಯಲ್ಲಿ ದಿಢೀರ್ ಆಗಿ ಬೆಲೆ ಕುಸಿತ ಉಂಟಾಗಿದೆ. ಕಳೆದ ತಿಂಗಳು ಸುಮಾರು 1200 ರೂ.ಗಳಿದ್ದ ಕ್ವಿಂಟಾಲ್ ಮೆಕ್ಕೆಜೋಳದ ಬೆಳೆ ಪ್ರಸ್ತುತ 1000, 1100 ರೂ. ಆಜುಬಾಜಿನಲ್ಲಿದೆ.
ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ. ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ಮೆಕ್ಕೆಜೋಳ ಬರುತ್ತಿರುವುದರಿಂದ ಬೆಲೆ ಇಳಿಕೆಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಬೆಳೆ ದಾಸ್ತಾನು ಮಾಡಲು ಅವಕಾಶವಿಲ್ಲದೆ ಕಡಿಮೆ ಧಾರಣೆಗೆ ಬೆಳೆ ಮಾರಾಟ ಮಾಡುವಂತಾಗಿದೆ ಎನ್ನುವುದು ಬೆಳೆಗಾರರ ನೋವಿನ ಮಾತು.
ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ ಉತ್ತಮ ಧಾರಣೆ ಬರಬೇಕಾದರೆ ಸರ್ಕಾರ ತತಕ್ಷಣ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ನಿಗದಿ ಮಾಡಿ, ಬೆಂಬಲ ಬೆಲೆ ಖರೀದಿ ಕೇಂದ್ರಗಳ ಸ್ಥಾಪನೆ ಮಾಡಬೇಕು. ಇದರಿಂದ ರೈತರಿಗೆ ಸಾಕಷ್ಟು ಅನುಕೂವಾಗಲಿದೆ. ಆದರೆ ಈಗಾಗಲೇ ಮೆಕ್ಕೆಜೋಳ ಕಟಾವು ಕಾರ್ಯ ಆರಂಭವಾಗಿ ಪೂರ್ಣ ಹಂತಕ್ಕೆ ಬರುತ್ತಿದ್ದರೂ ಖರೀದಿ ಕೇಂದ್ರ ಆರಂಭವಾಗದಿರುವುದು ರೈತರಿಗೆ ನಷ್ಟು ಉಂಟಾಗುವಂತೆ ಮಾಡಿದೆ’ ಎನ್ನುತ್ತಾರೆ ಗೆಜ್ಜೇನಹಳ್ಳಿಯ ರೈತ ದೂದ್ಯ ನಾಯ್ಕ್.
ಇತ್ತೀಚಿನ ವರ್ಷಗಳಲ್ಲಿ ಅತೀವೃಷ್ಟಿ, ಅನಾವೃಷ್ಟಿ, ರೋಗ ಬಾಧೆ ಮತ್ತೀತರ ಕಾರಣದಿಂದ ಮೆಕ್ಕೆಜೋಳ ಇಳುವರಿ ಹೇಳಿಕೊಳ್ಳುವಂತಿರಲಿಲ್ಲ. ಆದರೆ ಈ ಬಾರಿ ಬಿದ್ದ ಮಳೆ ಮೆಕ್ಕೆಜೋಳ ಬೆಳೆಗೆ ಪೂರಕವಾಗಿತ್ತು. ರೋಗ ಭಾದೆಯು ಕಡಿಮೆಯಿತ್ತು. ಈ ಕಾರಣದಿಂದ ಉತ್ತಮ ಇಳುವರಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಬೆಳೆಗೆ ಸೂಕ್ತ ಬೆಲೆಯಿಲ್ಲದಿರುವುದು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ. ತಕ್ಷಣವೇ ರಾಜ್ಯ ಸರ್ಕಾರ ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿಗೆ ಮುಂದಾಗಬೇಕು’ ಎನ್ನುವುದು ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಟಿ. ಗಂಗಾಧರ ಅಭಿಮತ.
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಮಳೆಯ ಕಣ್ಣಾಮುಚ್ಚಾಲೆಯಾಟದಿಂದ ಸಾಂಪ್ರದಾಯಿಕ ಬತ್ತ ಬೆಳೆಯ ಪ್ರಮಾಣ ಕಡಿಮೆಯಾಗಿದೆ. ಸುಮಾರು 1.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬತ್ತ ಬೆಳೆಯ ನಿರೀಕ್ಷೆ ಮಾಡಲಾಗಿತ್ತು. ಆದರೆ 71 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬತ್ತ ಬೆಳೆಯಲಾಗಿದೆ. ಮತ್ತೊಂದೆಡೆ 54 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಿರೀಕ್ಷಿಸಲಾಗಿದ್ದ ಮೆಕ್ಕೆಜೋಳ ಬೆಳೆಯನ್ನು 72 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ತಾಲೂಕಿನ ಹಲವೆಡೆ ಬತ್ತದ ಗದ್ದೆಗಳಲ್ಲಿಯೂ ಮೆಕ್ಕೆಜೋಳ ಬೆಳೆಯಲಾಗಿದೆ. ಎಕರೆಗೆ ಸರಾಸರಿ 40 ರಿಂದ 50 ಕ್ವಿಂಟಾಲ್ನಂತೆ, ಸರಿಸುಮಾರು 3.6 ಲಕ್ಷ ಟನ್ ಮೆಕ್ಕೆಜೋಳ ಉತ್ಪಾದನೆಯ ನಿರೀಕ್ಷೆ ಕೃಷಿ ಇಲಾಖೆಯದ್ದಾಗಿದೆ. ಇತ್ತೀಚಿನ ವರ್ಷಗಳಲ್ಲಿಯೇ ಇದು ಅತ್ಯದಿಕ ಪ್ರಮಾಣದ್ದಾಗಿದೆ. ಸರ್ವೆಸಾಮಾನ್ಯವಾಗಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಅವಧಿಯಲ್ಲಿ 2.50 ದಿಂದ 3 ಲಕ್ಷ ಟನ್ ಒಳಗೆ ಮೆಕ್ಕೆಜೋಳ ಬೆಳೆ ಬೆಳೆಯಲಾಗುತ್ತದೆ.
-ಕೃಷಿ ಇಲಾಖೆ
ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆಗೆ ಅನುಮತಿ ಕೋರಿ ಈಗಾಗಲೇ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಅನುಮತಿ ಸಿಗುತ್ತಿದ್ದಂತೆ ನಿಯಾಮಾನುಸಾರ ಅಗತ್ಯವಿರುವೆಡೆ ಖರೀದಿ ಕೇಂದ್ರ ತೆರೆಯಲಾಗುವುದು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬೆಳೆಯಲಾಗಿದೆ.
- ಮಧುಸೂಧನ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ
-----------------------------------------

No comments:
Post a Comment