ಬೆಳೆಗಾರರ ನಿದ್ದೆಗೆಡಿಸಿದೆ ಆಮದು ಅಡಿಕೆ, ದರ ಕುಸಿತ
ಮಾರಕವಾಗಿದೆ ಮುಕ್ತ ಆಮದು ನೀತಿ
2015ರ ಮಾರ್ಚ್ 2ರಿಂದ ಮೇ ಅಂತ್ಯದವರೆಗೆ ಶ್ರೀಲಂಕಾದಿಂದ ಶೇ. 89ರಷ್ಟು, ಇಂಡೊನೇಷ್ಯಾದಿಂದ ಶೇ. 10.7 ಮತ್ತು ಮಡ್ಗಾಸ್ಕರ್ನಿಂದ ಶೇ.0.3ರಷ್ಟು ಅಡಿಕೆ , ಭಾರತಕ್ಕೆ (ಸುಮಾರು 1,00,846 ಕ್ವಿಂಟಾಲ್) ಆಮದಾಗಿದೆ. ಇದರ ಮೌಲ್ಯ ಸುಮಾರು 144 ಕೋಟಿ ರೂ.
2014ರ ಇದೇ ಅವಧಿಯಲ್ಲಿ ಭಾರತಕ್ಕೆ ಆಮದುಗೊಂಡ ವಿದೇಶಿ ಅಡಿಕೆ ಪ್ರಮಾಣ 18,288 ಕ್ವಿಂಟಾಲ್ ಮಾತ್ರವಾಗಿತ್ತು. ಮೌಲ್ಯ ಸುಮಾರು 21.8 ಕೋಟಿ ರೂ. ಆಗಿತ್ತು. ಇದರಲ್ಲಿ ಶ್ರೀಂಕಾದಿಂದ ಶೇ 50ರಷ್ಟು, ಪಾಕಿಸ್ತಾನದಿಂದ ಶೇ 41ರಷ್ಟು, ಬಾಂಗ್ಲಾದಿಂದ ಶೇ. 7.5ರಷ್ಟು ಮತ್ತು ಥೈಲ್ಯಾಂಡ್ನಿಂದ ಶೇ. 0.5ರಷ್ಟು ಇತ್ತು. ಒಟ್ಟಿನಲ್ಲಿ ಅಕ್ರಮವಾಗಿ ಕಳಪೆ ಮತ್ತು ಕಡಿಮೆ ಗುಣಮಟ್ಟದ ಅಡಿಕೆ ಭಾರತಕ್ಕೆ ಬರುತ್ತಿರುವುದರಿಂದ ಧಾರಣೆ ಇಲ್ಲಿ ಅಸ್ಥಿರಗೊಂಡಿದೆ.
ಈ ವರ್ಷದ ಜನವರಿಯಿಂದ ಜೂನ್ ಅಂತ್ಯದವರೆಗೆ 1 ಲಕ್ಷ ಟನ್ ಆಮದಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 67,224 ಟನ್ ಆಮದಾಗಿತ್ತು.
ಶಿವಮೊಗ್ಗ: ವಿದೇಶಿ ಅಡಿಕೆ ಆಗಮನದಿಂದ ಕರ್ನಾಟಕದ ಅಡಿಕೆ ಬೆಳೆಗಾರರು ತಲ್ಲಣಿಸಿ ಹೋಗಿರುವ ವಿಚಾರ ಮತ್ತೆ ಸದ್ದು ಮಾಡಲಾರಂಭಿಸಿದೆ. ಹೇಗಾದರೂ ಮಾಡಿ ಅಡಿಕೆ ಆಮದನ್ನು ನಿಲ್ಲಿಸಬೇಕೆಂದು ಕೇಂದ್ರ ಸರಕಾರಕ್ಕೆ ಮೊರೆ ಇಡುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಕೇಂದ್ರ ಈ ಬಗ್ಗೆ ಗಮನಹರಿಸದೆ ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಹಾಗೆಯೇ ಜೀವಂತವಾಗಿರಿಸಿದೆ. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಕುಸಿತಕ್ಕೊಳಗಾಗುವಂತಾಗಿದೆ.
ಕರ್ನಾಟಕದಲ್ಲಿ ಸುಮಾರು 3 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗುತ್ತಿದೆ. ಕೇರಳದಲ್ಲಿ ಸುಮಾರು 50 ಸಾವಿರ ಟನ್ ಮತ್ತು ಗೋವಾದಲ್ಲಿ 8 ಸಾವಿರ ಟನ್, ಅಸ್ಸಾಂನಲ್ಲಿ 25 ಸಾವಿರ ಟನ್ ಅಡಿಕೆ ಬೆಳೆಯಲಾಗುತ್ತಿದೆ. ರಾಜ್ಯದ ಕರಾವಳಿ, ಮಲೆನಾಡು ಮತ್ತು ಬಯಲುಸೀಮೆಯ ಪ್ರಮುಖ ವಾಣಿಜ್ಯ ಬೆಳೆ ಎನ್ನಬಹುದು. ರಾಜ್ಯದ 22 ಜಿಲ್ಲೆಯಲ್ಲಿ 2.15 ಹೆಕ್ಟೇರ್ನಲ್ಲಿ ಇದನ್ನು ಬೆಳೆಯಲಾಗುತ್ತಿದೆ. ಉತ್ಪಾದನೆ 3.16 ಲಕ್ಷ ಟನ್ನಷ್ಟಿದೆ. ದೇಶದ ಅಡಿಕೆ ಉತ್ಪಾದನೆಯ ಶೇ. 47 ಭಾಗವನ್ನು ಕರ್ನಾಟಕವೊಂದೇ ಬೆಳೆಯುತ್ತಿದೆ. ಕರ್ನಾಟಕ ಸರಕಾರಕ್ಕೆ 100 ಕೋಟಿ ರೂ. ಗೂ ಅಧಿಕ ಆದಾಯವನ್ನು ಅಡಿಕೆ ನೀಡುತ್ತಿದೆ. ಆದರೆ ದಕ್ಷಿಣ ಏಷ್ಯಾ ರಾಷ್ಟ್ರಗಳಿಂದ ಹೇರಳವಾಗಿ ಭಾರತಕ್ಕೆ ಅಡಕೆ ಆಮದಾಗುತ್ತಿದೆ. ಅಡಕೆ ಆಮದಿನ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ. ಇದಕ್ಕೆ ಕೇಂದ್ರ ಸರಕಾರದ ಮುಕ್ತ ಆಮದು ನೀತಿ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.
ಅಡಕೆ ಆಮದು ನಿರ್ಬಂಧದ ಸಡಿಲಿಕೆಯ ಹಿಂದೆ ಗುಟ್ಕಾ ಕಂಪೆನಿಗಳ ಲಾಬಿಯ ಕೈವಾಡದ ಶಂಕೆ ವ್ಯಕ್ತವಾಗುತ್ತಿದೆ. ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಗುಟ್ಕಾ ಕಂಪೆನಿಯ ಲಾಬಿಗೆ ಮಣಿಯಬಾರದು. ವಿದೇಶಿ ಅಡಕೆ ಆಮದು ನೀತಿಯಲ್ಲಿ ಬದಲಾವಣೆ ಮಾಡಬಾರದು. ಒಂದು ವೇಳೆ ಆಮದು ನೀತಿಯಲ್ಲಿ ವ್ಯತ್ಯಾಸವಾದರೆ, ಅಡಕೆ ಬೆಳೆಯನ್ನೇ ನಂಬಿಕೊಂಡಿರುವ ದೇಶೀಯ ಅಡಿಕೆ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಬೇಕಾದ ಪರಿಸ್ಥಿತಿ ಉಂಟಾಗಲಿದೆ ಎನ್ನುವುದು ಬೆಳೆಗಾರರ ಅಭಿಮತ.
ಕೇಂದ್ರ ವಾಣಿಜ್ಯ ಸಚಿವಾಲಯದ ಅಧೀನದಲ್ಲಿರುವ ಆಮದು ಮತ್ತು ರಫ್ತು ಬೆಲೆ ನಿಗದಿ ಮಾಡುವ ಕೇಂದ್ರದ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ (ಡಿಜಿಎಫ್ಟಿ) ಅಡಿಕೆ ಆಮದು ಸುಂಕದ ಕನಿಷ್ಟ ದರವನ್ನು ಈಗ 162 ರೂ.ಗೆ ನಿಗದಿ ಮಾಡಿದೆ. ಶ್ರೀಲಂಕಾ, ಇಂಡೋನೇಶ್ಯಾ, ಥೈಲ್ಯಾಂಡ್, ಮ್ಯಾನ್ಮಾರ್, ಮಲೇಶಿಯಾ ಮೊದಲಾದ ದೇಶಗಳಲ್ಲಿ ಬೆಳೆಯುವ ಕಡಿಮೆ ಗುಣಮಟ್ಟದ ಅಡಿಕೆಗೆ ಅಲ್ಲಿ ಬೇಡಿಕೆ ಇಲ್ಲದಿರುವುದರಿಂದ ಅದನ್ನು ಇಲ್ಲಿಗೆ ತಂದು ಇಲ್ಲಿನ ಅಡಿಕೆ ಜೊತೆ ಕಲಬೆರಕೆ ಮಾಡಲಾಗುತ್ತಿತ್ತು. ಈ ಕಾರಣದಿಂದ ಆಮದು ಸುಂಕ ಹೆಚ್ಚಳ ಮಾಡಿದ್ದರೂ ಈ ಆದೇಶವನ್ನು 30 ಅಡಿಕೆ ವರ್ತಕರು ಕೊಲ್ಕತ್ತಾ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.
ರಾಜ್ಯದ ಪ್ರಮುಖ ಅಡಿಕೆ ಖರೀದಿ ಸಹಕಾರ ಸಂಘಗಳಾದ ಕ್ಯಾಂಪ್ಕೋ, ಮ್ಯಾಮ್ಕೋಸ್, ಶಿರಸಿಯ ಟಿಎಸ್ಸೆಸ್, ಚೆನ್ನಗಿರಿಯ ತುಮ್ಕೋಸ್, ರಾಮ್ಕೋಸ್ ಮೊದಲಾದ ಸಹಕಾರ ಸಂಘಗಳ ಮುಖಂಡರು ನವದೆಹಲಿಗೆ ತೆರಳಿ ಅಲ್ಲಿ ಅರ್ಥ ಸಚಿವ, ವಾಣಿಜ್ಯ ಸಚಿವರನ್ನು ಭೇಟಿ ಮಾಡಿ ಆಮದು ಅಡಿಕೆ ನಿಷೇಧಿಸುವಂತೆ ಮತ್ತು ಕರ್ನಾಟಕದ ಅಡಿಕೆ ಬೆಳೆಗಾರರ ಹಿತ ಕಾಪಾಡುವಂತೆ ಮನವಿ ಮಾಡಿ ಬಂದಿದ್ದಾರೆ.
ಆಮದು ಬೇಡ:
ಕೇಂದ್ರ ಸರ್ಕಾರ ಗುಟ್ಕಾ ಕಂಪನಿಗಳ ಒತ್ತಡಕ್ಕೆ ಮಣಿದು ಅಡಿಕೆ ಆಮದಾಗದಂತೆ ನೋಡಿಕೊಂಡರೆ ಮುಂದಿನ ಅಡಿಕೆ ಹಂಗಾಮಿನಲ್ಲೂ ರೈತರಿಗೆ ಉತ್ತಮ ದರ ದೊರೆಯುವ ನಿರೀಕ್ಷೆ ಇದೆ. ನೇಪಾಳ ಹಾಗೂ ಬಾಂಗ್ಲಾದೇಶಗಳು ಭಾರತ ದೇಶದೊಂದಿಗೆ ಆಪ್ತಮಿತ್ರ ರಾಷ್ಟ್ರಗಳಾಗಿರುವ ಕಾರಣ ಹೊಂದಿರುವ "ವಿಶೇಷ ವ್ಯಾಪಾರ ಒಪ್ಪಂದ"ದ ರಿಯಾಯಿತಿಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ಹಾಗೂ ಮೇಲ್ಕಂಡ ದೇಶಗಳ ಮೂಲಕ ದಕ್ಷಿಣ ಏಷ್ಯಾ ರಾಷ್ಟ್ರಗಳು ಬೆಳೆಯುವ ಅಡಿಕೆಯನ್ನು ಅಮದು ಮಾಡಿಕೊಳ್ಳದಂತೆ ಕಠಿಣ ಕ್ರಮವನ್ನು ಕೈಗೊಳ್ಳಬೇಕಿದೆ. ಈ ಮೂಲಕ ದೇಶೀಯ ಅಡಿಕೆ ಮಾರುಕಟ್ಟೆಯ ಉತ್ತಮ ಧಾರಣೆಯ ಸ್ಥಿರತೆಯನ್ನು ಕಾಯಬಹುದು ಎನ್ನುತ್ತಾರೆ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದವರು.
ವಿದೇಶಿ ಅಡಕೆ ಆಮದು ನೀತಿಯಲ್ಲಿ ಬದಲಾವಣೆ ಮಾಡಬಾರದು. ಒಂದು ವೇಳೆ ಆಮದು ನೀತಿಯಲ್ಲಿ ವ್ಯತ್ಯಾಸವಾದರೆ, ಅಡಕೆ ಬೆಳೆಯನ್ನೇ ನಂಬಿಕೊಂಡಿರುವ ದೇಶೀಯ ಅಡಿಕೆ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಬೇಕಾದ ಪರಿಸ್ಥಿತಿ ಉಂಟಾಗಲಿದೆ ಎನ್ನುವುದು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ ಅಭಿಮತ.
ಅಡಕೆ ಧಾರಣೆ:
ಅಡಕೆ ಧಾರಣೆ ಗಮನಿಸುವುದಾದರೆ, ಕೆಂಪಡಕೆ ಧಾರಣೆ ಇಳಿಮುಖವಾಗುತ್ತಲೇ ಇದೆ. ಸದ್ಯ 20 ರಿಂದ 22 ಸಾವಿರದವರೆಗೆ ಅಡಕೆ ದರ ಕ್ವಿಂಟಾಲ್ಗೆ ಇದೆ. ಕಳೆದ ವರ್ಷದ ಜೂನ್ನ್ನಲ್ಲಿ 26ರಿಂದ 27 ಸಾವಿರದವರೆಗೆ ಧಾರಣೆ ಇತ್ತು. ಹಿಂದಿನ ವರ್ಷಕ್ಕಿಂತ ಈ ವರ್ಷ ಕೆಂಪಡಕೆ ಆವಕ ಶೇ 7ರಷ್ಟು ಕಡಿಮೆಯಾಗಿದೆ. ಆದರೆ ದರ ಶೇ. 28ರಷ್ಟು ಕುಸಿತ ಕಂಡಿದೆ. ಇದರಿಂದ ಶಿವಮೊಗ್ಗ ಎಪಿಎಂಸಿಯೊಂದರಲ್ಲೇ 3 ಲಕ್ಷ ಚೀಲದಷ್ಟು ಕೆಂಪಡಕೆ ದಾಸ್ತಾನಿದೆ. ಬಿಳಿಚಾಲಿಯ ದರವನ್ನು ಗಮನಿಸುವುದಾದರೆ, ಕಳೆದ ವರ್ಷಕ್ಕಿಂತ ಈ ವರ್ಷ ಶೇ. 6ರಷ್ಟು ದರ ಕುಸಿದಿದೆ.
.

No comments:
Post a Comment