Saturday, 20 August 2016

 ಅನೈತಿಕ ಚಟುವಟಿಕೆಗಳ ತಾಣವಾದ ಶಿವಮೊಗ್ಗ ವಿಮಾನ ನಿಲ್ದಾಣ

ರಾಜ್ಯ ಸರ್ಕಾರವು 2007 ರಲ್ಲಿ ಶಿವಮೊಗ್ಗದ ಸೋಗಾನೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಭೂ ಸ್ವಾಧೀನ ಪ್ರಕ್ರಿಯೆ ನಡೆಸಿ, 2010 ರಲ್ಲಿ ನಿರ್ಮಾಣ ಸಂಸ್ಥೆಯೊಂದಿಗೆ ಅಧಿಕೃತವಾಗಿ ಒಪ್ಪಂದ ಕೂಡ ಮಾಡಿಕೊಂಡಿತ್ತು. ಪ್ರಾರಂಭ ಹಂತದ ಅಂದಾಜು ಪ್ರಕಾರ 192 ಕೋಟಿ ರೂ. ವೆಚ್ಚ ನಿರೀಕ್ಷೆ ಮಾಡಲಾಗಿತ್ತು. 3.1 ಕಿ.ಮೀ. ಉದ್ದದ ರನ್ ವೇ, ಟರ್ಮಿನಲ್ ಕಟ್ಟಡ, ಕಾಂಪೌಂಡ್ ಸೇರಿದಂತೆ ಇತರೆ ನಿರ್ಮಾಣ ಕಾಮಗಾರಿ ಸೇರಿದ್ದವು. ಒಪ್ಪಂದ ಮಾಡಿಕೊಂಡ 24 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕೆಂಬ ಶರತ್ತನ್ನು ಸರ್ಕಾರ ನಿರ್ಮಾಣ ಸಂಸ್ಥೆಗೆ ಹಾಕಿತ್ತು. ಆದರೆ ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. 
 ನಗರದ ಹೊರವಲಯ ಸೋಗಾನೆ ಗ್ರಾಮದ ಬಳಿ ಅರೆಬರೆ ಕಾಮಗಾರಿಯಾಗಿ ನೆನೆಗುದಿಗೆ ಬಿದ್ದಿರುವ ವಿಮಾನ ನಿಲ್ದಾಣ ಈಗ  ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತಿತವಾಗುತ್ತಿದೆ. ಕಾಮಗಾರಿಗೆ ಬಳಕೆ ಮಾಡಿರುವ ನೂರಾರು ಕೋಟಿ ರೂ. ನೀರಿನಲ್ಲಿ ಹೋಮ ಮಾಡಿದಂತಾಗಿದ್ದು, ಸ್ಮಶಾನದಂತಹ ಸ್ಥಿತಿ ನಿರ್ಮಾಣವಾಗಿದೆ.
 ವಿಮಾನ ನಿಲ್ದಾಣದ ಆವರಣದಲ್ಲಿ ಹಾಕಲಾಗಿದ್ದ ಕಟ್ಟಡ ಸಾಮಗ್ರಿಗಳನ್ನು ಕೆಲವರು ಹೊತ್ತೊಯ್ಯುತ್ತಿದ್ದಾರೆ. ಆವರಣದ ತುಂಬ ಗಿಡಪೊದೆಗಳು ಬೆಳೆದು ನಿಂತಿವೆ. ದನಕರುಗಳ ಮೇವಿನ ತಾಣವಾಗಿದೆ. ರಾತ್ರಿಯ ವೇಳೆ ಮದ್ಯ ಸೇವನೆ ಮಾಡುವುದು ಸೇರಿದಂತೆ ನಾನಾ ರೀತಿಯ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ.
 ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸೋಗಾನೆ ಗ್ರಾಮದಲ್ಲಿ ಸುಮಾರು 662 ಎಕರೆ ಪ್ರದೇಶದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಆರಂಭಕ್ಕೆ ನಿರ್ಧರಿಸಲಾಗಿತ್ತು. ಈ ಯೋಜನೆಯ ಅನುಷ್ಠಾನದಲ್ಲಿ ಅಂದು ಉಪ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಸಾಕಷ್ಟು ಆಸಕ್ತಿ ವಹಿಸಿದ್ದರು.  ಖಾತಾ ಜಮೀನುಗಳಿಗೆ ಎಕರೆಗೆ 6 ಲಕ್ಷ ರೂ. ಹಾಗೂ ಬಗರ್‌ಹುಕುಂ ಜಮೀನುಗಳಿಗೆ 2 ಲಕ್ಷ ರೂ. ಪರಿಹಾರ ಮೊತ್ತವನ್ನು ರೈತರಿಗೆ ನೀಡಲಾಗಿತ್ತು. ಮನೆ ಕಳೆದುಕೊಂಡವರಿಗೆ ಮನೆ, ರೈತರಿಗೆ ನಿವೇಶನ ಸೇರಿದಂತೆ ವಿವಿಧ ಭರವಸೆಯನ್ನು ಸರ್ಕಾರ ನೀಡಿತ್ತು. ಭಾರೀ ದೊಡ್ಡ ಪ್ರಚಾರದೊಂದಿಗೆ ನಿಲ್ದಾಣದ ಕಾಮಗಾರಿ ಕೂಡ ಪ್ರಾರಂಭವಾಗಿತ್ತು. ನಿರ್ಮಾಣ ಸಂಸ್ಥೆಯೊಂದು ಗುತ್ತಿಗೆ ಪಡೆದುಕೊಂಡಿತ್ತು.
 ಈ ಸಂಸ್ಥೆಯ ವಿರುದ್ದ ಆರೋಪ ಕೇಳಿಬಂದ ನಂತರ ಒಪ್ಪಂದ ರದ್ದುಗೊಳಿಸಿದ್ದ ಸರ್ಕಾರವು, ಮತ್ತೊಂದು ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇನ್ನೇನೂ ಎಲ್ಲವೂ ಸರಿಯಾಯಿತು ಎನ್ನುತ್ತಿದ್ದಂತೆ ಹೈಟೆನ್ಷನ್ ವಿದ್ಯುತ್ ಲೈನ್, ಮಾಚೇನಹಳ್ಳಿ ಕೈಗಾರಿಕೆಗಳ ಚಿಮಣಿ ಗೋಪುರ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದವು. ಇದೆಲ್ಲದರ ನಡುವೆಯೇ  ರನ್ ವೇ ನಿರ್ಮಾಣ ಕಾರ್ಯ ಕೂಡ ಆರಂಭವಾಗಿತ್ತು. ಪ್ರಾಥಮಿಕ ಹಂತದ ರನ್ ವೇ ಕೆಲಸ ಕೂಡ ಪೂರ್ಣಗೊಂಡಿತ್ತು. ಎಲ್ಲವೂ ಸರಿಯಾಯ್ತು ಎನ್ನುವ ಹಂತದಲ್ಲಿ ಒಂದೆಡೆ ನಿರ್ಮಾಣ ಸಂಸ್ಥೆ ಮತ್ತೊಂದೆಡೆ ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರ ವಿವಿಧ ಸಮಸ್ಯೆಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ಮುಂದಿಟ್ಟವು.
ಸಮಸ್ಯೆ ಪರಿಹಾರವಾಗುವವರೆಗೂ ನಿರ್ಮಾಣ ಕೆಲಸ ಆರಂಭಿಸುವುದಿಲ್ಲ ಎಂದು ನಿರ್ಮಾಣ ಸಂಸ್ಥೆ ಪಟ್ಟು ಹಿಡಿಯಿತು. ಜಿಲ್ಲಾಡಳಿತ ಕೂಡ ಸಮಸ್ಯೆ ಪರಿಹಾರಕ್ಕೆ ಇನ್ನಿಲ್ಲದ ಹರಸಾಹಸ ನಡೆಸಿತು. ಆದರೆ ಸಮಸ್ಯೆ ಇತ್ಯರ್ಥವಾಗದೆ ಕಾಮಗಾರಿಯೂ ಸಂಪೂರ್ಣವಾಗಿ ನೆನೆಗುದಿಗೆ ಬಿದ್ದಿತ್ತು. ತದನಂತರ ರಾಜ್ಯ ಸರ್ಕಾರವು ನಿರ್ಮಾಣ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ರದ್ದುಗೊಳಿಸಿತು.  ಇಲ್ಲಿಂದ ವಿಮಾನ ನಿಲ್ದಾಣ ಪ್ರದೇಶವು ಸಂಪೂರ್ಣವಾಗಿ ಪಾಳು ಬಿದ್ದಿದೆ. ಇಲ್ಲಿಯವರೆಗೂ ನಡೆಸಲಾಗಿರುವ ಕಾಮಗಾರಿಯು ಹಾಳಾಗುತ್ತಿದ್ದು, ಅವ್ಯವಸ್ಥೆಯ ತಾಣವಾಗಿ ಪರಿವರ್ತಿತವಾಗುತ್ತಿದೆ. ಕಾಮಗಾರಿಗೆ ವ್ಯಯಿಸಿದ ನೂರಾರು ಕೋಟಿ ರೂಪಾಯಿ ವ್ಯರ್ಥವಾದಂತಾಗಿದೆ.
 ಹಸ್ತಾಂತರವೂ ಆಗಲಿಲ್ಲ:
  ರಾಜ್ಯದವರೇ ಆದ ಸಂಸದ ಜಿ.ಎಂ.ಸಿದ್ದೇಶ್ವರ್ ಕೇಂದ್ರ ವಿಮಾನಯಾನ ರಾಜ್ಯ ಸಚಿವರಾಗಿದ್ದ ವೇಳೆ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ್ದರು. ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ್ದರು. ರಾಜ್ಯ ಸರ್ಕಾರವು ಖಾಸಗಿ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದ ರದ್ದುಗೊಳಿಸಿ ಕೇಂದ್ರ ಸರ್ಕಾರಕ್ಕೆ ಯೋಜನೆಯ ಅನುಷ್ಠಾನದ ಜವಾಬ್ದಾರಿ ವಹಿಸಿದರೆ, ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರದ ಮೂಲಕ ಬಾಕಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಜಿ.ಎಂ.ಸಿದ್ದೇಶ್ವರ್ ತಿಳಿಸಿದ್ದರು. ಆದರೆ ತಾಂತ್ರಿಕ ಸಮಸ್ಯೆಯಿಂದ  ಹಸ್ತಾಂತರವಾಗಲಿಲ್ಲ. ಮತ್ತೊಂದೆಡೆ, ಸಿದ್ದೇಶ್ವರ್ ವಿಮಾನಯಾನ ಖಾತೆ ಕಳೆದುಕೊಂಡರು. ಇದರಿಂದ ಕೇಂದ್ರ ಸರ್ಕಾರಕ್ಕೆ ಹಸ್ತಾಂತರ ಪ್ರಸ್ತಾಪ ಕೂಡ ನೆನೆಗುದಿಗೆ ಬೀಳುವಂತಾಯಿತು.

----------------------------

No comments:

Post a Comment