Thursday, 11 August 2016


ಭರವಸೆಯ ಬೆಳಕಾಗಿ ಹೊರಹೊಮ್ಮಿದ ಪನ್ನಗಾ 
 ಅಮೃತಮತಿ-ಏಕವ್ಯಕ್ತಿ ಪ್ರದರ್ಶನ




ಒಂದು ದೃಷ್ಟಿಯಿಂದ ನೋಡಿದರೆ, ಅಮೃತಮತಿ ಆಡುವ ಮಾತುಗಳು, ಅವಳ ಸಮರ್ಥನೆಗಳು ಸ್ತ್ರೀ ಸ್ವಾತಂತ್ರ್ಯದ ಅಭಿವ್ಯಕ್ತಿಯಂತೆ ಕಾಣುವುದು ಸುಳ್ಳಲ್ಲ. ಆದರೆ, ಜಾರಿದ ಅಮೃತಮತಿಗೆ ತಡೆದು ನಿಲ್ಲುವುದಕ್ಕೆ ಸಾಕಷ್ಟು ಅವಕಾಶಗಳಿದ್ದವು. ಆದರೆ ಅವಳಿಗದು ಸಾಧ್ಯವಾಗುವುದಿಲ್ಲ. ಅವಳು ಮತ್ತೆ ಮತ್ತೆ ಜಾರುತ್ತಾಳೆ. ಜಾರಿ ಜಾರೆಯಾಗುತ್ತಾಳೆ. ನಿಜಕ್ಕೂ ಅವಳದು ಅನುರಾಗವಲ್ಲ; ಕೇವಲ ಸುಖ-ಭೋಗದ ತೆವಲು. ಅದು ಪ್ರೇಮವಲ್ಲ; ಕಾಮ. ಅದೂ ಸಹ ಕೆರಳಿದ ಕಾಮ. ಕಾಮ ಅರಳಿದರೆ ದೇವತೆ: ಕೆರಳಿದರೆ ರಾಕ್ಷಸ. ಅಮೃತಮತಿಯ ಕಾಮುಕತೆ ಅವಳ ಮತಿ ಕೆಡಿಸುತ್ತದೆ.  ವ್ಯಭಿಚಾರದ ಗುಟ್ಟು ರಟ್ಟಾದಾಗ ಗಂಡನಿಗೂ, ಅತ್ತೆಗೂ ವಿಷ ನೀಡುತ್ತಾಳೆ. ಆ ಮೂಲಕ ಅಮೃತಮತಿ ವಿಷಮತಿಯಾಗುತ್ತಾಳೆ.  ನಿಜಕ್ಕೂ ಇದು ಸ್ರ್ತೀ ಮನೋದೌರ್ಬಲ್ಯದ ರೂಪಕ ಕತೆ.

* ದತ್ತಾತ್ರೇಯ ಹೆಗಡೆ

ಕವಿಚಕ್ರವರ್ತಿ ಎಂದು ಬಿರುದಾಂಕಿತನಾದ, ರತ್ನತ್ರಯರಲ್ಲಿ ಒಬ್ಬನೆಂದು ಖ್ಯಾತಿವೆತ್ತ ಜನ್ನನ ಪ್ರಸಿದ್ಧ ಕೃತಿ ‘ಯಶೋಧರ ಚರಿತೆ’.  ಇದು ಯಶೋಧರ ಚಕ್ರವರ್ತಿಯ ಬದುಕು-ಭವಾವಳಿಗಳನ್ನು ಹೇಳುವ ಕೃತಿಯಾದರೂ, ಇದರ ಕೇಂದ್ರಪಾತ್ರ ಯಶೋಧರನ ಪಟ್ಟಮಹಿಷಿ ಅಮೃತಮತಿ ಎನ್ನುವುದು ಉಲ್ಲೇಖನೀಯ.  
ಆಗಸ್ಟ್ 9ರಂದು ಕುವೆಂಪು ರಂಗಮಂದಿರದಲ್ಲಿ ಯಶೋಧರ ಚರಿತೆಯ ಮುಖ್ಯಪಾತ್ರವಾದ ಅಮೃತಮತಿಯನ್ನು ಕುರಿತಾಗಿ ಏಕವ್ಯಕ್ತಿ ಪ್ರದರ್ಶನ ನಡೆಯಿತು. ಮನುಷ್ಯ ಸಹಜವಾದ ಆಕರ್ಷಣೆ, ಅದಕ್ಕೆ ಅಡೆತಡೆಯಾಗಿರುವ ಸಾಮಾಜಿಕ ಬಂಧಗಳು, ಯುಕ್ತಾಯುಕ್ತ ನಡೆಯ ನಡುವಿನ ಸಂಘರ್ಷ-ತುಮುಲಗಳು, ಸೌಂದರ್ಯದ ಪರಿಕಲ್ಪನೆಯ ವಿವಿಧ ಮಜಲುಗಳನ್ನು ತೆರೆದಿಡುವಲ್ಲಿ ಈ ಪ್ರಯೋಗ ನಿಜಕ್ಕೂ ಪ್ರಶಂಸನೀಯ.
ಜೈನಧರ್ಮದ ಹಿನ್ನೆಲೆಯಲ್ಲಿ, ಜೈನ ಸಿದ್ಧಾಂತವನ್ನು ಪ್ರತಿಪಾದಿಸುವುದೇ ಈ ಕಥಾಹಂದರದ ಮುಖ್ಯಗುರಿಯಾಗಿತ್ತು.   ಹೆಂಡತಿಯ ಅನೈತಿಕ ಸಂಬಂಧವನ್ನು ಕಂಡು ಹೇಸಿ-ರೋಸಿ ಹೋಗುವ ಯಶೋಧರ ತನ್ನ ಅಳಲನ್ನು ತಾಯಿ ಚಂದ್ರಮತಿಯೊಂದಿಗೆ ತೋಡಿಕೊಳ್ಳುವುದು, ತಾಯಿಯ ಸಲಹೆಯಂತೆ ಹಿಟ್ಟಿನ ಹುಂಜವನ್ನು ಕೊಲ್ಲುವ ಸಂಕಲ್ಪ ತಳೆಯುವುದು, ಆ ಸಂಕಲ್ಪದ ಪರಿಣಾಮವಾಗಿ ಪಾಪಪ್ರಜ್ಞೆಯಿಂದ ತೊಳಲುವುದು, ಅದರ ನಿವಾರಣೆಗಾಗಿ ಎಂಬಂತೆ ಗಂಡ ಯಶೋಧರ ಮತ್ತು  ಅತ್ತೆ ಚಂದ್ರಮತಿಗೆ ವಿಷವಿಕ್ಕಿ ಉಪಕರಿಸಿದೆನೆಂದು ಅಮೃತಮತಿ ತನ್ನ ತಪ್ಪನ್ನು ತಾನು ಸಮರ್ಥಿಸಿಕೊಳ್ಳುವುದು - ಒಟ್ಟು ಪ್ರದರ್ಶನದ ಜೀವಾಳ.
ಯಕ್ಷಗಾನದ ಎಲ್ಲ ಮಜಲುಗಳನ್ನು ಕರತಲಾಮಲಕ ಮಾಡಿಕೊಂಡ ಪರಮೇಶ್ವರ ಹೆಗಡೆ ಐನಬೈಲು ಇವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರೆ ಮತ್ತು ಖ್ಯಾತ ರಂಗನಿರ್ದೇಶಕ ಪ್ರೊ. ಗೌರೀಶಂಕರ್ ಅವರ ಪುತ್ರಿ ಪನ್ನಗಾ ಜೋಯ್ಸ್ ಅವರು  ಅಮೃತಮತಿ ಪಾತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರದರ್ಶಿಸುವಲ್ಲಿ ಯಶಸ್ವಿಯಾದರು. ಹಿತ-ಮಿತವಾದ, ಆಕರ್ಷಕವಾದ ವೇಷಭೂಷಣ, ಯಕ್ಷಗಾನದ ಬಾಗು-ಬಳುಕಿನ ನರ್ತನ, ಪಾತ್ರಕ್ಕೆ ಜೀವತುಂಬುವ ಭಾವಪೂರ್ಣವಾದ, ತರ್ಕಬದ್ಧವಾದ ವಾಕ್ಸರಣಿಯ ಮೂಲಕ ಜನಮನವನ್ನು ಹಿಡಿದಿಡುವಲ್ಲಿ ಪನ್ನಗಾ ಅವರು ಯಶಸ್ವಿಯಾದರೆಂದೇ ಹೇಳಬೇಕು.
ನಮ್ಮ ಕರ್ಮೇಂದ್ರಿಯಗಳಿಗೆ ಜ್ಞಾನೇಂದ್ರಿಯಗಳೇ ಶತ್ರುಗಳು.  ಕಿವಿಗೆ ಶಬ್ದ, ಚರ್ಮಕ್ಕೆ ಸ್ಪರ್ಶ, ಕಣ್ಣಿಗೆ ರೂಪ, ನಾಲಗೆಗೆ ರಸ, ಮೂಗಿಗೆ ಗಂಧ ಶತ್ರುವಾಗಿ ಪರಿಣಮಿಸುತ್ತದೆ. ಇವು ನಮ್ಮನ್ನು ಎಲ್ಲೆಂದರಲ್ಲಿ ದಿಕ್ಕೆಡಿಸಿ ಘಾಸಿಗೊಳಿಸುತ್ತವೆ; ಕೆಡಹುತ್ತವೆ. ಅದಕ್ಕೆ ಉಪ್ಪರಿಗೆಯ ಹಾಸಿಗೆಯೂ ಆದೀತು; ತಿಪ್ಪೆಯ ಗುಂಡಿಯೂ ಆದೀತು. ಅಮೃತಮತಿಯ ಬದುಕಿನಲ್ಲಿ ನಾವು ಇವೆರಡನ್ನೂ ಕಾಣುತ್ತೇವೆ. ಅಮೃತಮತಿ ಉಪ್ಪರಿಗೆಯ ಹಂಸತೂಲಿಕಾ ತಲ್ಪದಲ್ಲಿ  ಗಂಡನ ತೋಳಿಗೆ ತಲೆಯಿಟ್ಟು ತನಿನಿದ್ದೆಯಲ್ಲಿ ಮುಳುಗಿದ್ದಾಳೆ; ತನ್ನ ಕಿವಿದೆರೆಯನ್ನು ಮುಟ್ಟಿದ ಶಬ್ದದಿಂದ ತಿಳಿದೇಳುತ್ತಾಳೆ. ಕಿವಿಗೆ ನಾದ ತಲುಪಿತು. ಆ ರಾಗ ಎಲ್ಲಿಂದ ಬಂತೋ....? ಅದನ್ನು ಮುಟ್ಟುವ ಅನುರಾಗ ಅವಳಲ್ಲಿ  ಹೆಚ್ಚಾಯಿತು. ಮೊದಲು ಶಬ್ದ: ಅನಂತರ ಸ್ಪರ್ಶದ ಹಂಬಲ. ಆದರೆ ಅದು ಕಾಣಲಿಲ್ಲ. ಮಾವುತನ ‘‘ಕತ್ತಲಿದು ರಸಿಕರಿಗೆ ರಸದಂಗಳ’’ ಎನ್ನುವ ಸೊಲ್ಲು ಅವಳನ್ನು ಸೂಜಿಗಲ್ಲಿನಂತೆ ಸೆಳೆಯಿತು. ಕಾಣುವ ಹಂಬಲ ಹೆಚ್ಚಾಯಿತು. ಅದು ರೂಪವೋ, ಕುರೂಪವೋ ಅವಳಿಗದು ಗೊತ್ತಿಲ್ಲ. ಅವನನ್ನು ಕೂಡುವ, ಸುಖಿಸುವ ಚಪಲತೆ ಉಂಟಾಯಿತು. ತನ್ನ ಮನಸ್ಸನ್ನೇ ಅವನಿಗೆ ಮೆಚ್ಚುಗಾಣಿಕೆಯಾಗಿ ಕೊಟ್ಟಳು. ಭಾವತೀವ್ರತೆಯಿಂದ ಅಮೃತಮತಿ ಕಾಮೋತ್ಕಂಠಿತೆಯಾಗುವುದನ್ನು ಈ ಸಂದರ್ಭದಲ್ಲಿ ಪನ್ನಗ ಅತ್ಯಂತ  ಮನೋಜ್ಞವಾಗಿ ಅಭಿನಯಿಸಿ ಜನಮನ ಸೂರೆಗೊಂಡರು.
ಮಾವುತನ ರಾಗಕ್ಕೆ ಮರುಳಾಗಿ ಅನುರಾಗಕ್ಕೊಳಗಾದ ಅಮೃತಮತಿಗಾದುದು ಮೊದಲು ಕಿವುಡುತನ. ದೂತಿ ಬಂದು  ಮಾವುತ ಅಷ್ಟಾವಂಕನ ರೂಪವನ್ನು ಕಣ್ಣಿಗೆ ಕಟ್ಟುವಂತೆ ತೆರೆದಿಟ್ಟರೂ ಅವಳಿಗದು ಕೇಳಿಸುವುದಿಲ್ಲ.  ಅಷ್ಟಾವಂಕನನ್ನು ಸಂಧಿಸಿದಾಗಲೂ ಅವನ ಕುರೂಪ ಅವಳಲ್ಲಿ ಹೇಸಿಗೆ ತರಿಸುವುದಿಲ್ಲ. ಆಗ ಅವಳಿಗಾಗುವುದು ಕಣ್ಗುರುಡತನ; ಜೊತೆಯಲ್ಲಿ ಬಗೆಕುರುಡತನ.  ಅವಳ ಮಾತಿನಲ್ಲೇ ಹೇಳುವುದಾದರೆ, ‘‘ಇನ್ನೆನಗೆ ಆತನೇ ಕಾಮದೇವಂ, ಇಂದ್ರಂ, ಚಂದ್ರಂ’’. ಹೀಗಾಗಿಯೇ ಆಕೆ ‘‘ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳ್’’ ಎಂಬಷ್ಟು ಕುರುಡಿಯಾಗುತ್ತಾಳೆ; ಕತ್ತಲಲ್ಲೇ ಬೆತ್ತಲಾಗುತ್ತಾಳೆ; ‘ಚಿತ್ರಮಪಾತ್ರೇ ರಮತೇ ನಾರಿ’’ ಎನ್ನುವುದಕ್ಕ್ಕೆ ರೂಪಕ ವಾಗುತ್ತಾಳೆ.
ಶ್ರುತಿಬದ್ಧವಾದ ಹಾಡುಗಾರಿಕೆ, ಪೂರಕವಾದ ಚಂಡೆ-ಮದ್ದಲೆಗಳ ಹಿಮ್ಮೇಳ, ನಿಶೆಯ ನಶೆ ಏರಿಸುವ ಆಕರ್ಷಕ ಮಂದ ಬೆಳಕು, ಕಲಾಪ್ರೇಮಿಗಳಿಂದ ಕೂಡಿದ ಸಭೆ, ಕಾರ್ಯಕ್ರಮದ ಘನತೆ- ಗಾಂಭೀರ್ಯಕ್ಕೆ ಮೆರುಗು ನೀಡಿತು. ಏಕವ್ಯಕ್ತಿ ಪ್ರದರ್ಶನಕ್ಕೆ ಬಹುಜಟಿಲವೆನಿಸುವ ಈ ಕಥಾನಕವನ್ನು ತನ್ನ ಪ್ರಥಮ ಪ್ರಯತ್ನದಲ್ಲೇ ಸಶಕ್ತವಾಗಿ ಪ್ರದರ್ಶಿಸುವಲ್ಲಿ ಪನ್ನಗಾ ಸಫಲರಾಗಿದ್ದಾರೆ ಎನ್ನುವುದಕ್ಕೆ ಅಷ್ಟಾವಂಕನಿಂದ ಚಾಟಿ ಏಟು ತಿನ್ನುವಂತೆ, ಅವನಿಂದ ಒದೆಸಿಕೊಳ್ಳುವಂತೆ ಅವರು ನೀಡಿದ ಅಭಿನಯ ಮತ್ತೆ ಮತ್ತೆ ಮೆಲುಕುಹಾಕುವಂತಿತ್ತು.
  ಒಂದು ದೃಷ್ಟಿಯಿಂದ ನೋಡಿದರೆ, ಅಮೃತಮತಿ ಆಡುವ ಮಾತುಗಳು, ಅವಳ ಸಮರ್ಥನೆಗಳು ಸ್ತ್ರೀ ಸ್ವಾತಂತ್ರ್ಯದ ಅಭಿವ್ಯಕ್ತಿಯಂತೆ ಕಾಣುವುದು ಸುಳ್ಳಲ್ಲ. ಆದರೆ, ಜಾರಿದ ಅಮೃತಮತಿಗೆ ತಡೆದು ನಿಲ್ಲುವುದಕ್ಕೆ ಸಾಕಷ್ಟು ಅವಕಾಶಗಳಿದ್ದವು. ಆದರೆ ಅವಳಿಗದು ಸಾಧ್ಯವಾಗುವುದಿಲ್ಲ. ಅವಳು ಮತ್ತೆ ಮತ್ತೆ ಜಾರುತ್ತಾಳೆ. ಜಾರಿ ಜಾರೆಯಾಗುತ್ತಾಳೆ. ನಿಜಕ್ಕೂ ಅವಳದು ಅನುರಾಗವಲ್ಲ; ಕೇವಲ ಸುಖ-ಭೋಗದ ತೆವಲು. ಅದು ಪ್ರೇಮವಲ್ಲ; ಕಾಮ. ಅದೂ ಸಹ ಕೆರಳಿದ ಕಾಮ. ಕಾಮ ಅರಳಿದರೆ ದೇವತೆ: ಕೆರಳಿದರೆ ರಾಕ್ಷಸ. ಅಮೃತಮತಿಯ ಕಾಮುಕತೆ ಅವಳ ಮತಿ ಕೆಡಿಸುತ್ತದೆ.  ವ್ಯಭಿಚಾರದ ಗುಟ್ಟು ರಟ್ಟಾದಾಗ ಗಂಡನಿಗೂ, ಅತ್ತೆಗೂ ವಿಷ ನೀಡುತ್ತಾಳೆ. ಆ ಮೂಲಕ ಅಮೃತಮತಿ ವಿಷಮತಿಯಾಗುತ್ತಾಳೆ.  ನಿಜಕ್ಕೂ ಇದು ಸ್ರ್ತೀ ಮನೋದೌರ್ಬಲ್ಯದ ರೂಪಕ ಕತೆ.
ಈ ಪ್ರದರ್ಶನದ ಕೊನೆಯಲ್ಲಿ ಅಮೃತಮತಿಯ ಬಾಯಿಯಿಂದ ಹೊರಹೊಮ್ಮುವ- ‘‘ನಮಗೆ ಬೇಕಾದ್ದನ್ನು ನಾವು ದಕ್ಕಿಸಿಕೊಳ್ಳಬೇಕು. ಹಾಗೆಂದ ಮಾತ್ರಕ್ಕೆ ಇದು ಎಲ್ಲರಿಂದ ಸಾಧ್ಯವಿಲ್ಲ. ಅಮೃತಮತಿಯಂತಹವರಿಗೆ ಮಾತ್ರ ಸಾಧ್ಯ’’ ಎಂದು ತನ್ನನ್ನು ತಾನು ಸಮರ್ಥಿಸಿಕೊಳ್ಳುವುದು ಪ್ರ್ರಾಯಶಃ  ಸಹೃದಯ ಪ್ರೇಕ್ಷಕರಿಗೆ ಸಹ್ಯವಾಗುವುದಿಲ್ಲವೇನೋ.
......................................

No comments:

Post a Comment