Saturday, 20 August 2016



  ಕಾಮುಕರ ದಾಳಿ, ದೌರ್ಜನ್ಯ: ತತ್ತರಿಸಿದ ಭಿಕ್ಷುಕಿಯರು 
 -ಖಾಸಗಿ ಬಸ್ ನಿಲ್ದಾಣ ರಾತ್ರಿ ಕಾಮುಕರ ಅಡ್ಡೆ

ಹಗಲು ಅನ್ನಕ್ಕಾಗಿ ಹೋರಾಟ... ರಾತ್ರಿ ರಕ್ಷಣೆಗೆ ಪರದಾಟ 
ಹಗಲು ಹೊತ್ತು ತುತ್ತ ಅನ್ನಕ್ಕಾಗಿ ಗಲ್ಲಿ ಗಲ್ಲಿ ಸುತ್ತಿ, ಕಂಡಕಂಡವರಿಗೆ ಕೈಮುಗಿದು, ಬಿಸಿಲು-ಮಳೆ-ಚಳಿಯೆನ್ನದೆ ಭಿಕ್ಷೆ ಬೇಡಿ ಹಣ ಸಂಗ್ರಹಿಸುತ್ತೇವೆ. ರಾತ್ರಿ ವೇಳೆ ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣ ಫುಟ್‌ಪಾತ್‌ಗಳಲ್ಲಿ ಮಲಗುತ್ತೇವೆ. ಈ ವೇಳೆ ಕೆಲವರು ನಮ್ಮ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿ ಇದ್ದಬದ್ದ ಹಣವೆಲ್ಲ ಕಿತ್ತುಕೊಳ್ಳುತ್ತಾರೆ. ಇನ್ನೂ ಕೆಲವರು ಭಿಕ್ಷುಕಿಯರೊಂದಿಗೆ ಕೆಟ್ಟದಾಗಿ ವರ್ತಿಸುತ್ತಾರೆ. ಇದು ಸರ್ವೇಸಾಮಾನ್ಯ. ಏನೂ ಮಾಡಲಾಗದ ಸ್ಥಿತಿ ನಮ್ಮದು.  
-  ಆಂದ್ರ ಮೂಲದ ಭಿಕ್ಷುಕಿ  

  ಆಕೆ ಅಂಗವಿಕಲೆ, ಅಷ್ಟೇ ಅಲ್ಲ ಭಿಕ್ಷುಕಿ. ನಗರದ ಖಾಸಗಿ ಬಸ್ ನಿಲ್ದಾಣದ ಸುತ್ತಮುತ್ತಲು ಭಿಕ್ಷೆ ಬೇಡಿ ಜೀವನ ಸಾಗಿಸುತ್ತಾಳೆ. ಅಂಗವೈಕಲ್ಯ, ರೋಗರುಜಿನುಗಳಿಂದ ಬಳಲುತ್ತಿದ್ದಾಳೆ. ಇನ್ನೊಬ್ಬಳು ಮಾತನಾಡಲು ಬಾರದ ಮಧ್ಯವಯಸ್ಕೆ. ಕಾಮುಕರ ನಿರಂತರ ದಾಳಿಯಿಂದ ಈಕೆ ಕನಲಿ ಹೋಗಿದ್ದಾಳೆ. ಈ ತನ್ನ ಮೇಲಾಗುತ್ತಿರುವ ದೌರ್ಜನ್ಯ ಹೇಳಿಕೊಳ್ಳಲಾಗದೆ ಕಣ್ಣೀರಿಡುತ್ತಿದ್ದಾಳೆ...
ಈ ಅನುಭವ ಇವರಿಬ್ಬರದ್ದು ಮಾತ್ರವಲ್ಲ, ಇಂತಹ ಇನ್ನೂ ಹತ್ತಾರು ಭಿಕ್ಷುಕಿಯರಿದ್ದಾರೆ. ಇದು ನಿಜಕ್ಕೂ ಘನಘೋರ, ಅನಾಗರಿಕ, ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತದ್ದು.
 ಶಿವಮೊಗ್ಗ ನಗರದಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುವ ನಿರ್ಗತಿಕ ಮಹಿಳೆಯರು ಕಾಮಾಂಧರ ಅಟ್ಟಹಾಸಕ್ಕೆ ಸಿಲುಕಿ  ತತ್ತರಿಸಿ ಹೋಗುತ್ತಿದ್ದಾರೆ. ಲೈಂಗಿಕ ಶೋಷಣೆಯ ನರಕಯಾತನೆಗೆ ತುತ್ತಾಗಿ ನರಳುತ್ತಿದ್ದಾರೆ.
ನಗರದ ಖಾಸಗಿ ಬಸ್ ನಿಲ್ದಾಣ ಸುತ್ತಮುತ್ತಲು ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಬೀಡುಬಿಡುವ ಭಿಕ್ಷುಕ ಮಹಿಳೆಯರ ಮೇಲೆ ಈ ದಾಳಿ ನಡೆಯುತ್ತಿದೆ. ನಾನಾ ರೋಗ-ರುಜಿನುಗಳಿಂದ ಬಳಲುತ್ತಿರುವವರು, ಅಂಗವಿಕಲ, ವಯೋವೃದ್ಧ ಮಹಿಳೆಯರು ಕೂಡ ಕಾಮತೃಷೆಗೆ ಬಲಿಯಾಗುತ್ತಿದ್ದಾರೆ. ಸ್ವತಃ ಭಿಕ್ಷುಕಿಯರೇ ತಾವು ಅನುಭವಿಸುತ್ತಿರುವ ನೋವಿನ ಬಗ್ಗೆ ಹೇಳಿಕೊಳ್ಳುತ್ತಾರೆ.
ಬಹುತೇಕ ಈ ಲೈಂಗಿಕ ದೌರ್ಜನ್ಯಗಳು ಮಧ್ಯರಾತ್ರಿಯ ನಂತರವೇ ನಡೆಯುತ್ತಿವೆ. ಬಸ್‌ನಿಲ್ದಾಣ, ಫುಟ್‌ಪಾತ್, ನಿರ್ಜನ ಸ್ಥಳಗಳಲ್ಲಿ ಮಲಗಿ ನಿದ್ದೆ ಮಾಡುವ ಭಿಕ್ಷುಕ ಮಹಿಳೆಯರ ಮೇಲೆರಗುವ ಈ ದುಷ್ಟರು ಇನ್ನಿಲ್ಲದ ಹಿಂಸೆ ನೀಡುತ್ತಿದ್ದಾರೆ. ಜೊತೆಗೆ ಹಗಲಿಡಿ ಭಿಕ್ಷೆ ಬೇಡಿ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಕಿತ್ತುಕೊಂಡು ಹೋಗುತ್ತಿದ್ದಾರೆ. ದೌರ್ಜನ್ಯ ಪ್ರತಿಭಟಿಸುವವರ ಮೇಲೆ ಹಲ್ಲೆ ಕೂಡ ನಡೆಸುತ್ತಿದ್ದಾರೆ.
ಇಷ್ಟೆಲ್ಲ ದೌರ್ಜನ್ಯಕ್ಕೀಡಾದರೂ ಭಿಕ್ಷುಕ ಮಹಿಳೆಯರು ಪೊಲೀಸ್ ಠಾಣೆಗಾಗಲಿ ಅಥವಾ ಇತರರ ಬಳಿಯಾಗಲಿ ತಮ್ಮ ದೂರು ಹೇಳಿಕೊಳ್ಳಲು ಮುಂದಾಗುತ್ತಿಲ್ಲ. ಇವರ ಮೇಲೆ ದೌರ್ಜನ್ಯ ನಡೆಯುತ್ತಿರುವುದರ ಅರಿವಿರುವ ಕೆಲವು ನಾಗರಿಕರು ಕೂಡ ’ಭಿಕ್ಷುಕಿ’ಯರೆಂಬ ತಾತ್ಸಾರದಿಂದ ನೆರವಿಗೆ ಧಾವಿಸುವುದಾಗಲಿ ಅಥವಾ ರಕ್ಷಣೆ ಮಾಡುವ ಗೋಜಿಗೂ ಹೋಗುತ್ತಿಲ್ಲ.
ಇದರಿಂದ ಭಿಕ್ಷುಕಿಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು ಬೆಳಕಿಗೆ ಬರುತ್ತಿಲ್ಲ. ಮತ್ತೊಂದೆಡೆ, ಕಾಮಾಂಧರು ಕೂಡ ತಮ್ಮ ಹೇಯ ಕೃತ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಭಿಕ್ಷುಕಿಯರು ಕೂಡ ರಾತ್ರಿಯ ವೇಳೆ ನಿರಂತರವಾಗಿ ನಿಶೆಯಲ್ಲಿರುವ ಇವರ ಅಟ್ಟಹಾಸಕ್ಕೆ ತುತ್ತಾಗುವಂತಹ ದುರಂತ ಸ್ಥಿತಿ ನಿರ್ಮಾಣವಾಗಿದೆ.
  ನಾಗರಿಕ ಸಮಾಜದ ವಕ್ರದೃಷ್ಟಿಗೆ ಒಳಗಾದ ಭಿಕ್ಷುಕಿಯರಿಗೆ ಸಮಾಜದ ಕಣ್ಣೆದುರಲ್ಲೇ ಆಗುತ್ತಿರುವ ಅನ್ಯಾಯದ ಸರಮಾಲೆಗೆ ನ್ಯಾಯ ಕೊಡಿಸುವುದಿರಲಿ, ಸಾಂತ್ವನ ಹೇಳುವವರು ಇಲ್ಲವಾಗಿರುವುದು ನಿಜಕ್ಕೂ ವ್ಯವಸ್ಥೆಯ ಲೋಪಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಭಿಕ್ಷುಕಿಯರ ಸಂಖ್ಯೆ ಹೆಚ್ಚುತ್ತಿರುವುದೂ ಇದಕ್ಕೆ ಕಾರಣ. ಅವರನ್ನು ಭಿಕ್ಷುಕರ ಅಥವಾ ನಿರ್ಗತಿಕರ ಕೇಂದ್ರಕ್ಕೆ ಸಾಗ ಹಾಕುವ ಕೆಲಸವನ್ನು ಪಾಲಿಕೆ ಅಥವಾ ಸಂಬಂಧಿಸಿದ ಇಲಾಖೆ ಮಾಡಬೇಕಿತ್ತು. ಆದರೆ ಇದು ನಡೆಯುತ್ತಿಲ್ಲ. ಎಲ್ಲೆಂದರೆಲ್ಲಿ ಮಲಗುವುದು, ಕುಳಿತುಕೊಳ್ಳುವುದ ಇವರ ಕೆಲಸ. ರಾತ್ರಿಯಾದೊಡನೆ ಮಳೆ, ಗಾಳಿ, ಚಳಿಯಿಂದ ತಪ್ಪಿಸಿಕೊಳ್ಳಲು ಬಸ್ ನಿಲ್ದಾಣ ಸುರಕ್ಷಿತ ಸ್ಥಾನ ಎಂದು ತಿಳಿದು ಬರುತ್ತಾರೆ. ಆದರೆ ಇಲ್ಲಿ ಅನುಭವಿಸಬೇಕಾದದ್ದು ಲೈಂಗಿಕ ಕಿರುಕುಳ.
ಇನ್ನಾದರೂ ಸಂಬಂಧಿಸಿದ ಇಲಾಖೆ, ಸಂಘಸಂಸ್ಥೆಗಳು ಎಚ್ಚೆತ್ತುಕೊಳ್ಳಬೇಕು. ರಾಜ್ಯದಲ್ಲಿರುವ ಭಿಕ್ಷುಕಿಯರ ನೆರವಿಗೆ ಧಾವಿಸಬೇಕು. ದುರುಳರ ಅಟ್ಟಹಾಸದಿಂದ ಮುಕ್ತಿ ಕಲ್ಪಿಸಬೇಕು. ಅವರು ಕೂಡ ನಾಗರಿಕ ಸಮಾಜದಲ್ಲಿ ನೆಮ್ಮದಿಯಾಗಿ ಜೀವನ ನಡೆಸುವ ವ್ಯವಸ್ಥೆ ಕಲ್ಪಿಸಲು ಪ್ರಾಮಾಣಿಕ ಕ್ರಮಕೈಗೊಳಬೇಕಿದೆ.
  ಓಡಾಡುವುದೇ ದುಸ್ತರ:
  ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ತಡರಾತ್ರಿ ವೇಳೆ ಮಹಿಳೆಯರು ಓಡಾಡುವುದೇ ದುಸ್ತರ ಎಂಬಂತಹ ಪರಿಸ್ಥಿತಿಯಿದೆ. ಕಾಮುಕರು, ಕಳ್ಳಕಾಕರ ಹಾವಳಿ ವಿಪರೀತವಾಗಿರುತ್ತದೆ. ಬಸ್ ನಿಲ್ದಾಣದ ಆವರಣದಲ್ಲಿರುವ ಅರ್ಧದಷ್ಟು ಲೈಟ್‌ಗಳು ದುರಸ್ತಿಯಲ್ಲಿವೆ. ಸಿಸಿ ಕ್ಯಾಮರಾ ಇದೆ. ಆದರೆ ಅದು ಕೆಲಸ ಮಾಡುತ್ತಿದೆಯೇ ಇಲ್ಲವೇ ಎನ್ನುವುದು ಗೊತ್ತಿಲ್ಲ. ಬಸ್ ನಿಲ್ದಾಣದ ಹಲವು ಭಾಗಗಳಲ್ಲಿ ಕತ್ತಲು ಆವರಿಸಿರುತ್ತದೆ. ಕತ್ತಲಿರುವ ಸ್ಥಳಗಳಲ್ಲಿ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿರುತ್ತವೆ. ಮಹಾನಗರ ಪಾಲಿಕೆ ಆಡಳಿತದ ಅಸಮರ್ಪಕ ನಿರ್ವಹಣೆಯಿಂದ ರಾತ್ರಿ ವೇಳೆ ಬಸ್ ನಿಲ್ದಾಣವು ಅಸುರಕ್ಷಿತ ವಲಯವಾಗಿ ಪರಿಣಮಿಸಿದೆ.  

No comments:

Post a Comment