Thursday, 27 July 2017




ಮೌನತಪಸ್ವಿ ಕೂಡಲಿ ಜಗನ್ನಾಥ ಶಾಸ್ತ್ರಿ  



ಮಲೆನಾಡಿನ ಜ್ಞಾನದ ಖನಿ, ಧಾರ್ಮಿಕ, ಸಾಹಿತ್ಯಿಕ, ಅಧ್ಯಾತ್ಮ, ಕಲಾ ಮಾರ್ಗದರ್ಶಕರಾಗಿದ್ದ ಹಿರಿಯ ಚೇತನ ಕೂಡಲಿ ಜಗನ್ನಾಥ ಶಾಸ್ತ್ರಿಗಳು ನಿನ್ನೆ ಪರಮಪದ ಸೇರಿದ್ದಾರೆ. ಸ್ನೇಹಜೀವಿಯಾಗಿದ್ದ ಈ ಮಹಾನ್ ಹಿರಿಯ ಚೇತನಕ್ಕೆ  ನುಡಿನಮನ


ಶಿವಮೊಗ್ಗ: ನೋಡಲು ಸಣಕಲು ಹಾಗೂ ಎತ್ತರದ ದೇಹ. ಆದರೆ ಅವರ ಮನಸು ಮಾತ್ರ ತುಂಬಿದ ಮನೆಯಂತಿತ್ತು. ಯಾರನ್ನೂ ನೋಯಿಸದ, ತಮ್ಮನ್ನು ಕಾಣಲು ಬಂದವರೊಂದಿಗೆ ವಿಚಾರ ವಿನಿಮಯ ಮಾಡುತ್ತಿದ್ದ ಅವರು ಸ್ಫೂರ್ತಿಯ ಸೆಲೆಯಾಗಿದ್ದ ಚೇತನ. ಅಂತಹ ಮಹಾನ್ ಚೇತನವೇ ಕೂಡಲಿ ಜಗನ್ನಾಥ ಶಾಸ್ತ್ರಿಗಳು.
ಅಧ್ಯಾತ್ಮ, ಸಾಹಿತ್ಯ, ಕಲೆ ಮಾರ್ಗದರ್ಶನ ಹಾಗೂ ತಮ್ಮ ಚಿಂತನೆಯ ಮೂಲಕ ಸಾಕಷ್ಟು ಧರ್ಮಕಾರ್ಯಗಳನ್ನು ಮಾಡುತ್ತ, ಜನಮನದಲ್ಲಿ ಹೊಸ ವಿಚಾರಗಳನ್ನು ಬರೆವಣಿಗೆ ಮೂಲಕ ಬಿತ್ತುತ್ತಾ ಅಚ್ಚಳಿಯದೆ ನಿಂತ ಸಾಧಕರಲ್ಲಿ ಶಾಸ್ತ್ರಿಯವರು ಒಬ್ಬರು.
ತುರಂಗ ಭಾರತ, ಕವಿ ಪರಮದೇವ ಕೃತಿಯ ಬಗ್ಗೆ ಸಾಹಿತ್ಯ ಮತ್ತು ಧಾರ್ಮಿಕ ವಲಯದಲ್ಲಿ ಕೇಳದವರಿಲ್ಲ. ಕೇವಲ ಕೃತಿಯೊಂದೇ ಕೆಲವರಿಗೆ ಹೆಸರನ್ನು ತಂದು ಕೊಡುತ್ತದೆ. ಇನ್ನೂ ಕೆಲವರಿಗೆ ಅವರ ಕೃತಿಯ ಜೊತೆ ಸಾಧನೆಯೂ ಗರಿಮೆಗೆ, ಜನಮನ್ನಣೆಗೆ ಕಾರಣವಾಗುತ್ತದೆ. ಇಂತಹ ಮನ್ನಣೆ ಪಡೆದವರಲ್ಲಿ ಕೂಡಲಿ ಜಗನ್ನಾಥ ಶಾಸ್ತ್ರಿಗಳು ಪ್ರಮುಖರು.
ಶಾಸ್ತ್ರಿಯವರು 89ರ ಹರಯದಲ್ಲಿ ನಿನ್ನೆ ಅಸೌಖ್ಯದಿಂದ ನಿಧನರಾಗಿದ್ದಾರೆ. ವಿದ್ವಾಂಸರಾಗಿ,  ಉಪನ್ಯಾಸಕರಾಗಿ, ಧಾರ್ಮಿಕ ಮತ್ತು ಅಧ್ಯಾತ್ಮಿಕ ಕ್ಷೇತ್ರದಲ್ಲಿ ಹೆಸರು ಮಾಡಿದವರು ಅವರು. ಹೆಸರಿಗಾಗಿ ಎಂದೂ ಹೋರಾಟ ಮಾಡಿದವರಲ್ಲ. ಮೌನತಪಸ್ವಿಯಂತಿದ್ದ ಅವರ ಬರೆಹ ಮತ್ತು ಅಪೂರ್ವ ಬುದ್ಧಿವಂತಿಯೇ ಅವರ ಹೆಸರನ್ನು ಮೇಲಕ್ಕೇರಿಸಿದೆ.
ಇಳಿವಯಸ್ಸಿನಲ್ಲೂ ಅವರು ಬರೆಹ ಮತ್ತು ಓದಿನಲ್ಲೇ ಹೆಚ್ಚು ಕಾಲ ವ್ಯಯಿಸುತ್ತಿದ್ದರು. ನಗರದಲ್ಲಿ ಯಾವುದೇ ಪ್ರಮುಖ ಧಾರ್ಮಿಕ ಕಾರ್ಯಕ್ರಮವಿರಲಿ, ಅದಕ್ಕೆ ಅವರಿಗೆ ತಪ್ಪದೇ ಆಹ್ವಾನವಿರುತ್ತಿತ್ತು. ಅದರಂತೆ ಅವರ ಉಪಸ್ಥಿತಿಯೂ ಇರುತ್ತಿತ್ತು. ಅಷ್ಟರ ಮಟ್ಟಿಗೆ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಅನೇಕ ಸಂಶೋಧನಾ ಪ್ರಬಂಧಗಳನ್ನು ಬರೆಯುವ ಮೂಲಕ ತಮ್ಮಲ್ಲಿರುವ ಅಪಾರ ಜ್ಞಾನವನ್ನು ಹೊರ ಜಗತ್ತಿಗೆ ನೀಡಿದ್ದಾರೆ. ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಪಂಡಿತರಾಗಿದ್ದಲ್ಲದೆ, ಸಂಸ್ಕೃತದಲ್ಲೂ ಅಗಾಧ ಪಾರಮ್ಯ ಮೆರೆದಿದ್ದರು.
ಇತ್ತೀಚೆಗೆ ಅನಾರೋಗ್ಯಕ್ಕೀಡಾಗಿದ್ದರೂ ತಮ್ಮ ಯಾವುದೇ ಕೆಲಸದಿಂದ ಅವರು ವಿಮುಖರಾಗಿರಲಿಲ್ಲ. ಸದಾ ಓದುವುದು, ಬರೆಯುವುದು ಅವರ  ಕೆಲಸವಾಗಿತ್ತು. ವಿಶೇಷವಾಗಿ ಧಾರ್ಮಿಕ ಗ್ರಂಥಗಳ ಬಗ್ಗೆ ಆಸಕ್ತಿ ಹೊಂದಿದ್ದರು.
ಶಬರಿ ದರ್ಶನ, ಪರಮದೇವ, ಶ್ರೀ ಜಗದ್ಗುರು ಪರಂಪರೆಯ ದರ್ಶನ ಮುಂತಾದ ಕೃತಿಗಳ ಮೂಲಕವೇ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಪ್ರಾಚೀನ ಗ್ರಂಥಗಳನ್ನು ಸಂಪಾದಿಸಿದ್ದ ಅವರು, ಶಿವಮೊಗ್ಗದ ಕೆಲವು ಪತ್ರಿಕೆಗಳಲ್ಲಿ ಅಂಕಣಕಾರರಾಗಿದ್ದರು. ವಾಗ್ಮಿ, ಲೇಖಕ, ಚಿಂತಕ, ಸಂಶೋಧಕರಾಗಿ ಮನ್ನಣೆ ಗಳಿಸಿದ್ದರು.
ಮೂಲತಃ ತಾಲೂಕಿನ ಗಡಿಭಾಗದಲ್ಲಿರುವ ಚಿಕ್ಕಕೂಡ್ಲಿಯವರಾದ ಶಾಸ್ತ್ರಿ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, ಪದೋನ್ನತಿ ಮೂಲಕ ಪದವಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದರು. ಬೋಧನಾ ವೃತ್ತಿಯ ಜೊತೆಗೆ ಐತಿಹಾಸಿಕ ಕವಲೇದುರ್ಗ, ಹೊಸನಗರ ತಾಲೂಕು ದರ್ಶನ ಮುಂತಾದ ಗೃಂಥಗಳನ್ನೂ ಸಹ ರಚಿಸಿದ್ದಾರೆ. ಹೊಳೆಹೊನ್ನೂರು ನಾಡು, ಹೊಂಬುಜ ನಾಡಿನ ಅರಸರ ಪರಂಪರೆ ಎಂಬ ಕೃತಿಯನ್ನೂ ರಚಿಸಿದ್ದಾರೆ. ಹೊಸನಗರ ತಾಲೂಕಿನಲ್ಲಿ ಅವರು ಕೆಲಸ ಮಾಡಿದ್ದರಿಂದ ವಿಶೇಷವಾಗಿ ಆ ತಾಲೂಕಿನ ಐತಿಹಾಸಿಕ ಕ್ಷೇತ್ರಗಳ ಅಧ್ಯಯನ ಮಾಡಿ ಸಂಶೋಧನೆ ನಡೆಸಿದ್ದರು.
ಇಂತಹ ಅಪೂರ್ವ ಪ್ರತಿಭೆಯ ಶಾಸ್ತ್ರಿ ಅವರು ಶಿವಮೊಗ್ಗದ ಜ್ಞಾನದ ಆಸ್ತಿ ಎಂಬಂತಿದ್ದರು. ಎಷ್ಟೋ  ವಿಷಯಗಳಿಗೆ ಅವರು ಮಾರ್ಗದರ್ಶಕರಾಗಿದ್ದರು. ಅನೇಕ ಧಾರ್ಮಿಕ ಮತ್ತು ಸಾಹಿತ್ಯಿಕ ವರ್ಗದವರು ಯಾವುದೇ ಸಂಶಯಗಳಿದ್ದರೂ ಅವರಲ್ಲಿಗೆ ತೆರಳಿ ಚರ್ಚಿಸುತ್ತಿದ್ದರು. ಇಂತಹವರಿಗೆ ಸದಾ ಮಾರ್ಗದರ್ಶನ ಮಾಡುತ್ತಿದ್ದರು.
ಜ್ಞಾನದ ಖನಿಯಂತಿದ್ದ ಅವರು ಸ್ವಲ್ಪವೂ ಅಹಮಿಕೆಯನ್ನು ಹೊಂದಿರಲಿಲ್ಲ. ಅವರ ಸಾಧನೆಗಳನ್ನು ಗಮನಿಸಿ ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಅವರಿಗೆ ಸಂದ ಪ್ರಶಸ್ತಿಗಳು ಹತ್ತು ಹಲವು. ಕೂಡಲಿ ಶೃಂಗೇರಿ ಮಠದ ಪರಮಭಕ್ತರಾದ ಇವರಿಗೆ ಮಹಾಸಂಸ್ಥಾನದಿಂದ ವಿದ್ಯಾಶಂಕರ ಪ್ರಶಸ್ತಿ ನೀಡಲ್ಪಟ್ಟಿದೆ. ಪರಮದೇವ ಪ್ರಶಸ್ತಿ, ಸಾಹಿತ್ಯ ವಿದ್ಯಾರತ್ನ ಪ್ರಶಸ್ತಿ, ಶಿವಮೊಗ್ಗ ದಸರಾ ಮತ್ತು ನಗರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಸಮರ್ಪಿಸಲಾಗಿದೆ.
ವಿಶೇಷವೆಂದರೆ, ಕೂಡಲಿ ಮಹಾಸಂಸ್ಥಾನದ ವಿದ್ಯಾಭಿನವ ವಿದ್ಯಾರಣ್ಯ ಸ್ವಾಮೀಜಿ ಅಧ್ಯಯನ ಮಾಡಿದ ಸಂಸ್ಕೃತ ಎಂಎ ಮತ್ತು ಪಿಎಚ್‌ಡಿ ಅಧ್ಯಯನಕ್ಕೆ ಕೂಡಲಿ ಜಗನ್ನಾಥ ಶಾಸ್ತ್ರಿಯವರು ಖಾಸಗಿಯಾಗಿ ಮಾರ್ಗದರ್ಶನ ಮಾಡಿದ್ದರು. ಇಂತಹ ಅಪ್ರತಿಮ ಪ್ರತಿಭೆ ಮತ್ತು ಜನಮನ್ನಣೆ ಗಳಿಸಿದ್ದ ಶಾಸ್ತ್ರಿಯವರು ಇನ್ನು ನೆನೆಪು ಮಾತ್ರ.
,,,,,,,,,,,,,,,,,,,,,,,,

No comments:

Post a Comment