Thursday, 24 November 2016


ಗಾಡಿಕೊಪ್ಪ ಕೆರೆಯಲ್ಲಿ ತಲೆಎತ್ತಿರುವ 
ಖಾಸಗಿ ಕ್ಲಬ್ ತೆರವು ಸಾಧ್ಯವೇ?
  ಜಿಲ್ಲಾಧಿಕಾರಿ ಡಾ. ಲೋಕೇಶ್ ಎದುರಿರುವ ಪ್ರಮುಖ ಸವಾಲು

 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ಭೂಮಿ, ಕೆರೆ, ರಾಜಕಾಲುವೆಗಳ ಒತ್ತುವರಿ ಮಾಡಲಾಗಿದೆ. ಭೂಗಳ್ಳರ ಹಾವಳಿ ವಿಪರೀತ ಮಟ್ಟಕ್ಕೆ ತಲುಪಿದೆ. ಇವರನ್ನು ಮಟ್ಟ ಹಾಕಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಭೂಗಳ್ಳರೊಂದಿಗೆ  ಕೆಲವು ಅಧಿಕಾರಿಗಳು ಕೂಡ ಕೈಜೋಡಿಸುತ್ತಿರುವುದರಿಂದ ಇಂದಿಗೂ ಕೂಡ ನಗರದ ಹಲವೆಡೆ ಸರ್ಕಾರಿ ಭೂಮಿಯ ಒತ್ತುವರಿ ಅವ್ಯಾಹತವಾಗಿ ಸಾಗಿದೆ.
ಕುತೂಹಲದ ಸಂಗತಿ ಎಂದರೆ,  ಜಿಲ್ಲಾಡಳಿತವು ನಗರದ ಗಾಡಿಕೊಪ್ಪ ಗ್ರಾಮದಲ್ಲಿ ಪ್ರತಿಷ್ಠಿತ ಖಾಸಗಿ ಕ್ಲಬ್‌ವೊಂದಕ್ಕೆ ವಾರ್ಷಿಕ ನೆಲ ಬಾಡಿಗೆ ಆಧಾರದ ಮೇಲೆ ಸುಮಾರು 2 ಎಕರೆಯಷ್ಟು ಕೆರೆಯ ಜಾಗವನ್ನು ನೀಡಿದೆ. ಈ ಜಾಗಕ್ಕೆ ಮಣ್ಣು ಸುರಿದು ಭರ್ತಿ ಮಾಡಿದ ಕ್ಲಬ್‌ನವರು ಬೃಹತ್ ಕಟ್ಟಡ ನಿರ್ಮಿಸಿದ್ದಾರೆ. ಈ ಕ್ಲಬ್‌ಗೆ ಜಿಲ್ಲಾಧಿಕಾರಿಯೇ ಗೌರವಾಧ್ಯಕ್ಷರಾಗಿರುವುದು ಮತ್ತೊಂದು ವಿಶೇಷ. ಗ್ರಾಮಸ್ಥರಿಗೆ ಬಹುಪಯೋಗಿಯಾಗಿದ್ದ ಈ ಕೆರೆಯ ಸಂರಕ್ಷಣೆ ಮಾಡಬೇಕಾದ ಜಿಲ್ಲಾಡಳಿತ ತಾನೇ ಮುಂದೆ ನಿಂತು ಕ್ಲಬ್‌ವೊಂದಕ್ಕೆ ಕೆರೆಯ ಜಾಗ ನೀಡಿದೆ ಎಂದರೆ ಇದರ ಹಿಂದೆ ಎಂತೆಂತಹ ಕುಳಗಳು, ಪ್ರಭಾವಿಗಳು ಇರಬಹುದೆನ್ನುವುದನ್ನು ಯೋಚಿಸಬಹುದಾಗಿದೆ. ಹಿಂದಿನ ಜಿಲ್ಲಾಧಿಕಾರಿಗೆ ಹಲವು ಬಾರಿ ಸ್ವತಃ ಪತ್ರಕರ್ತರು ಇದನ್ನು ಗಮನಕ್ಕೆ ತಂದಿದ್ದರೂ ಅವರು ಅದನ್ನು ತೆರವುಗೊಳಿಸುವತ್ತ ಹೆಜ್ಜೆ ಇಡಲೇ ಇಲ್ಲ. ಇದಕ್ಕೆ ಪ್ರಭಾವಿಗಳ  ಒತ್ತಡ ಇದೆ ಎನ್ನುವುದು ಕೇಳಿಬರುತ್ತಿದೆ.  
ಮತ್ತೊಂದೆಡೆ, ಈ ಕೆರೆಯ ಸುತ್ತಮುತ್ತಲು ಭಾರೀ ದೊಡ್ಡ ಪ್ರಮಾಣದ ಒತ್ತುವರಿ ನಡೆಯುತ್ತಿದ್ದು, ಮನೆಗಳು ನಿರ್ಮಾಣವಾಗುತ್ತಿವೆ. ಕೆರೆಯ ಸಂರಕ್ಷಣೆಗೆ ಜಿಲ್ಲಾಡಳಿತ ಯಾವುದೇ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಇತ್ತೀಚೆಗೆ ಡಾ. ಲೋಕೇಶ್ ಅವರಿಗೂ ಈ ಬಗ್ಗೆ ಪತ್ರಿಕಾ ಸಂವಾದದಲ್ಲಿ ಈ ಕೆರೆಯ ಸಂರಕ್ಷಣೆ ಮಾಡುವಂತೆ ಪತ್ರಕರ್ತರು ಮನವಿ ಮಾಡಿದ್ದಾರೆ.  ನೂತನ ಜಿಲ್ಲಾಧಿಕಾರಿ ಯಾವ ರೀತಿಯ ಕ್ರಮಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಕಣ್ಮರೆಯಾಗುತ್ತಿದೆ ರಾಜಕಾಲುವೆ:
ನಗರದ ಹೊರವಲಯದ ಪ್ರದೇಶಗಳಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಕೆರೆ, ರಾಜಕಾಲುವೆಗಳು ಕಣ್ಮರೆಯಾಗುತ್ತಿವೆ. ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡುವ ದೊಡ್ಡ ದೊಡ್ಡ ಜಾಲವೇ ಸಕ್ರಿಯವಾಗಿದೆ.  ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಭೂಮಿಯನ್ನು ಈ ಭೂಗಳ್ಳರ ಜಾಲಗಳು ತಿಂದು ತೇಗಿವೆ. ಇದೆಲ್ಲ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕಿದ್ದರೂ ಯಾವುದೇ ಕ್ರಮಕೈಗೊಳ್ಳದೆ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಕ್ಕೆಡೆ ಮಾಡಿಕೊಟ್ಟಿದೆ.
 ಪಾಲಿಕೆ ವ್ಯಾಪ್ತಿಯ ಗಾಡಿಕೊಪ್ಪ, ಆಲ್ಕೊಳ, ಮಲ್ಲಿಗೇನಹಳ್ಳಿ, ಪುರಲೆ, ಕಾಶೀಪುರ, ಸ್ವಾಮಿ ವಿವೇಕಾನಂದ ಬಡಾವಣೆ ಮೊದಲಾದ ಹೊರವಲಯದ ಪ್ರದೇಶಗಳಲ್ಲಿ ಈಗಾಗಲೇ ಹಲವು ಕೆರೆಗಳು ಮಾಯವಾಗಿವೆ. ಕೇವಲ ದಾಖಲೆಗಳಲ್ಲಿ ಮಾತ್ರ ಕೆರೆಗಳಿರುವುದು ಕಂಡುಬರುತ್ತಿದೆ. ಕೆರೆ ಜಾಗಗಳಲ್ಲಿ ಖಾಸಗಿ ಲೇಔಟ್, ಖಾಸಗಿ ಆಸ್ಪತ್ರೆ, ಕ್ಲಬ್ ಕಟ್ಟಡಗಳು, ಮನೆಗಳು ನಿರ್ಮಾಣವಾಗಿರುವುದು ನಗರದಲ್ಲಿ ನಡೆದಿರುವ ಒತ್ತುವರಿಗೆ ಸಾಕ್ಷಿಯಾಗಿದೆ. ಗಾಡಿಕೊಪ್ಪದಲ್ಲಿ ಕೆರೆಯ ಜಾಗವನ್ನು ಸ್ವತಃ ಸರ್ಕಾರಿ ಇಲಾಖೆಗಳೇ ಒತ್ತುವರಿ ಮಾಡಿದ್ದು, ವಿವಿಧ ಸರ್ಕಾರಿ ಕಟ್ಟಡಗಳು ತಲೆ ಎತ್ತುತ್ತಿವೆ. ಕೆರೆ ಜಾಗ ಸಂರಕ್ಷಣೆ ಮಾಡಬೇಕಾದ ಜಿಲ್ಲಾಡಳಿತವೇ ಸ್ವತಃ ಕೆರೆ ಜಾಗವನ್ನು ಸರ್ಕಾರಿ ಸಂಘಸಂಸ್ಥೆಗೆ ಹಂಚಿಕೆ ಮಾಡಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಇಷ್ಟೇ ಅಲ್ಲ, ನಗರದ ಒಳ ಭಾಗದ ಪ್ರದೇಶಗಳಲ್ಲಿಯೂ ಕನ್ಸರ್‌ವೆನ್ಸಿ, ಕೆರೆ ಜಾಗ, ಪಾಲಿಕೆಯ ಜಾಗಗಳು ಭಾರೀ ದೊಡ್ಡ ಮಟ್ಟದಲ್ಲಿ ಭೂಗಳ್ಳರು ಅತಿಕ್ರಮಿಸಿಕೊಂಡಿದ್ದಾರೆ. ಇವುಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ ನೂರಾರು ಕೋಟಿ ರೂ. ದಾಟುತ್ತದೆ ಎಂದು ಕೆಲವು ಅಧಿಕಾರಿಗಳೇ ಹೇಳುತ್ತಾರೆ.
ಮತ್ತೊಂದೆಡೆ, ಸರ್ಕಾರಿ ಭೂಮಿ ಸಂರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ, ರಾಜ್ಯ ಸರ್ಕಾರಗಳು, ಸುಪ್ರೀಂ, ಹೈಕೋರ್ಟ್‌ಗಳು ಹತ್ತು ಹಲವು ರೀತಿಯ ಆದೇಶಗಳು ಹೊರಡಿಸುತ್ತಿದ್ದರೂ ಶಿವಮೊಗ್ಗ ನಗರದಲ್ಲಿ ಮಾತ್ರ ಇವ್ಯಾವ ಆದೇಶಗಳಿಗೂ ಬೆಲೆ ಇಲ್ಲದಂತಾಗಿದೆ. ಸರ್ಕಾರಿ ಭೂ ಅತಿಕ್ರಮ ಅವ್ಯಾಹತವಾಗಿದ್ದು, ಭೂಗಳ್ಳರಿಗೆ ಯಾವುದೇ ಭಯವಿಲ್ಲದಂತಾಗಿದೆ.
ಇತ್ತೀಚೆಗೆ ಮಹಾನಗರ ಪಾಲಿಕೆ ಆಡಳಿತವಾಗಲಿ, ತಾಲೂಕು ಆಡಳಿತವಾಗಲಿ ಸರ್ಕಾರಿ ಭೂಮಿ ಒತ್ತುವರಿಗೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿದ ಉದಾಹರಣೆಯಿಲ್ಲ. ಉಪವಿಭಾಗಾಧಿಕಾರಿ  ಅವರು ಕಳೆದ ಮಳೆಗಾಲದ ಆರಂಭದಲ್ಲಿ ಹತ್ತಾರು ಕೆರೆಗಳ ಒತ್ತುವರಿಯನ್ನು ಅಂದಿನ ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ತೆರವುಗೊಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
  ನಿಜಕ್ಕೂ ಜಿಲ್ಲಾಧಿಕಾರಿಗೆ ಸರ್ಕಾರಿ ಆಸ್ತಿಯ ಬಗ್ಗೆ ಕಾಳಜಿಯಿದ್ದರೆ ನಗರದಲ್ಲಿ ನಡೆದಿರುವ ಕೆರೆ, ರಾಜಕಾಲುವೆ, ಸರ್ಕಾರಿ ಭೂಮಿಗಳ ಒತ್ತುವರಿ ತೆರವಿಗೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ. 

No comments:

Post a Comment