ಲೂಟಿಕೋರರಿಗೆ ಮರಳಿದೆ, ನಾಗರಿಕರಿಗೆ ವಿತರಿಸಲು ಇಲ್ಲ
ಲೂಟಿಕೋರರಿಗೆ ಮರಳಿದೆ, ನಾಗರಿಕರಿಗೆ ವಿತರಿಸಲು ಇಲ್ಲ. ಇದು ಶಿವಮೊಗ್ಗ ಜಿಲ್ಲೆಯ ಮರಳಿನ ಸ್ಥಿತಿ.
ನಗರದಲ್ಲಿ ಮರಳಿನ ತೀವ್ರ ಅಭಾವವಿದೆ. ಕಾಳಸಂತೆಯಲ್ಲಿ ಒಂದು ಲಾರಿ ಲೋಡ್ ಮರಳಿಗೆ 40 ಸಾವಿರ ರೂ.ಗೂ ಅಧಿಕವಿದ್ದು, ಟ್ರಾಕ್ಟರ್ ಮರಳಿಗೆ 10 ಸಾವಿರಕ್ಕೂ ಅಧಿಕವಾಗಿದೆ. ಅನಿವಾರ್ಯವಾಗಿ ಕೆಲ ನಾಗರಿಕರು ದುಬಾರಿ ಮೊತ್ತ ಪಾವತಿಸಿ ಮರಳು ಖರೀದಿಸುವಂತಾಗಿದೆ. ನಾಗರಿಕರ ಗೋಳು ಕೇಳುವವರ್ಯಾರೂ ಇಲ್ಲದಂತಾಗಿದೆ. ರಾಜ್ಯದಲ್ಲಿ ಅಧಿಕ ಪ್ರಮಾಣದಲ್ಲಿ ಮರಳು ಲಭ್ಯವಾಗುವ ಜಿಲ್ಲೆಗಳಲ್ಲಿ ಒಂದಾದ ಶಿವಮೊಗ್ಗದಲ್ಲಿ ಈ ಪರಿಸ್ಥಿತಿ ಇದೆ.
ಜಿಲ್ಲೆಯಲ್ಲಿ ಮರಳಿಗೆ ಭಾರೀ ದೊಡ್ಡ ಪ್ರಮಾಣದ ಬೇಡಿಕೆಯಿದೆ. ಆದರೆ ನಾಲ್ಕು ಬ್ಲಾಕ್ಗಳಲ್ಲಿ ಮಾತ್ರ ಮರಳು ತೆಗೆಯಲು ಅನುಮತಿ ಸಿಕ್ಕಿರುವುದರಿಂದ ನಾಗರಿಕರ ಬೇಡಿಕೆಗೆ ಅನುಗುಣವಾಗಿ ಮರಳು ಪೂರೈಕೆಯಾಗುವುದು ಅನುಮಾನವಾಗಿದೆ. ಮರಳಿಗೆ ಹಾಹಾಕಾರ ತಲೆದೋರುವುದು ನಿಶ್ಚಿತ ಎಂದು ಸ್ವತಃ ಅಧಿಕಾರಿಗಳೇ ಹೇಳುತ್ತಾರೆ.
ಸರಕಾರದಿಂದ ನೂತನ ಮರಳು ನೀತಿ ಇನ್ನೂ ಜಾರಿಗೆ ಬಂದಿಲ್ಲ. ಮರಳುಕೋರೆ ಗುರುತಿಸಿಲ್ಲ. ಕೆಲವೆಡೆ ನೀರಿನ ಮಟ್ಟ ಕಡಿಮೆಯಾಗಿಲ್ಲ ಎನ್ನುವುದು ಈ ಅಧಿಕಾರಿಗಳ ಹೇಳಿಕೆ.
ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಜನಸಾಮಾನ್ಯರು ಮರಳಿಗಾಗಿ ಪರಿತಪಿಸುವಂತಾಗಿದೆ. ಮತ್ತೊಂದೆಡೆ, ಜಿಲ್ಲಾಡಳಿತ ಇಲ್ಲಿಯವರೆಗೂ ಮರಳು ವಿತರಣೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ಕಾಳಸಂತೆಕೋರರು ಮನಸೋಇಚ್ಚೆ ದರಕ್ಕೆ ಮರಳು ಮಾರಾಟ ಮಾಡುತ್ತಿದ್ದು, ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಸ್ಟಾಕ್ಯಾರ್ಡ್ ರಚನೆ ಮಾಡಿ ಮಳೆಗಾಲದ ವೇಳೆಯೂ ಮರಳು ನೀಡುವುದಾಗಿ ಈ ಹಿಂದೆ ಜಿಲ್ಲಾಡಳಿತ ನಾಗರಿಕರಿಗೆ ಭರವಸೆ ನೀಡಿತ್ತು. ಮಳೆಗಾಲದ ಸಮಯವಿರಲಿ, ಬೇಸಿಗೆಯ ಅವಧಿಯಲ್ಲಿಯೇ ನಾಗರಿಕರಿಗೆ ಸಮರ್ಪಕವಾಗಿ ಮರಳು ಕಲ್ಪಿಸುವಲ್ಲಿ ಜಿಲ್ಲಾಡಳಿತ ವಿಫಲವಾಯಿತು. ಇದರಿಂದ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಬಡ - ಮಧ್ಯಮ ವರ್ಗದವರು ದುಬಾರಿ ಬೆಲೆ ತೆತ್ತು ಖಾಸಗಿಯವರ ಬಳಿ ಮರಳು ಖರೀದಿಸುವಂತಹ ದುಃಸ್ಥಿತಿ ನಿರ್ಮಾಣವಾಗಿದೆ.
ಮಳೆಗಾಲದ ನಾಲ್ಕು ತಿಂಗಳು ಹೊರತುಪಡಿಸಿ ಉಳಿದ ಅವಧಿಯಲ್ಲಿ ಮರಳು ನೀಡಲು ಅವಕಾಶವಿದೆ. ಪ್ರಸ್ತುತ ಜಿಲ್ಲೆಯಲ್ಲಿ ಮಳೆಯ ಪ್ರಮಾಣವೂ ಕಡಿಮೆಯಾಗಿದೆ. ನದಿಗಳ ನೀರಿನ ಹರಿವಿನಲ್ಲಿಯೂ ಕಡಿಮೆಯಿದೆ. ಪರಿಸ್ಥಿತಿ ಈ ರೀತಿಯಿದ್ದರೂ ಮರಳು ಲಭ್ಯವಿರುವ ಸ್ಥಳಗಳನ್ನು ಗುರುತಿಸಿ ನಾಗರೀಕರಿಗೆ ಮರಳು ವಿತರಣೆ ಮಾಡಲು ಜಿಲ್ಲಾಡಳಿತ ಮುಂದಾಗುತ್ತಿಲ್ಲವೇಕೆ? ಎಂದು ನಾಗರೀಕರು ಪ್ರಶ್ನಿಸುತ್ತಿದ್ದಾರೆ.
ಕಾಳಸಂತೆಯಲ್ಲಿ ಮಾರಾಟ ಮಾಡುವವರಿಗೆ ಮರಳು ಸಿಗುತ್ತಿದೆ. ಆದರೆ ಸಂಬಂಧಿಸಿದ ಪ್ರಾಧಿಕಾರಗಳಿಂದ ಲೈಸೈನ್ಸ್ ಪಡೆದು ಮನೆ ಕಟ್ಟುತ್ತಿರುವವರಿಗೆ ಸಕಾಲದಲ್ಲಿ ಮರಳು ಸಿಗುತ್ತಿಲ್ಲ. ಇಲ್ಲಿಯವರೆಗೂ ಸಮರ್ಪಕವಾಗಿ ಮರಳು ಹಂಚಿಕೆ ಮಾಡಲು ಆಗಿಲ್ಲವೆಂದರೆ ಆಡಳಿತ ವ್ಯವಸ್ಥೆ ಜೀವಂತವಾಗಿದೆಯೇ ಎಂಬ ಅನುಮಾನ ವ್ಯಕ್ತವಾಗುವಂತಾಗಿದೆ. ನಿಜಕ್ಕೂ ಆಡಳಿತ ವ್ಯವಸ್ಥೆಗೆ ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಮಧ್ಯಮ - ಬಡ ವರ್ಗದವರ ಬಗ್ಗೆ ಕಾಳಜಿಯಿದ್ದರೆ, ಅವರಿಗೆ ಅನಾನುಕೂಲವಾಗದಂತೆ ಎಚ್ಚರವಹಿಸಬೇಕು. ನಿಯಮಾನುಸಾರ ಮರಳು ವಿತರಣೆಗೆ ಕ್ರಮಕೈಗೊಳ್ಳಬೇಕು. ಇದು ಆಡಳಿತ ವ್ಯವಸ್ಥೆಯ ಆದ್ಯ ಕರ್ತವ್ಯವೂ ಆಗಿದೆ ಎನ್ನುವುದನ್ನು ಮನಗಾಣಬೇಕಿದೆ.
ಸ್ವಂತ ಮನೆ, ಕಟ್ಟಡ ನಿರ್ಮಾಣ ಮಾಡುತ್ತಿರುವ ಬಡ - ಮಧ್ಯಮ ವರ್ಗದವರಿಗೆ ಕಾನೂನುಬದ್ದವಾಗಿ ಮರಳು ವಿತರಣೆಗೆ ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಬೇಕು. ಕಾಳಸಂತೆಯಲ್ಲಿ ಮರಳು ಮಾರಾಟಕ್ಕೆ ಕಡಿವಾಣ ಹಾಕಬೇಕು. ಮರಳು ಲೂಟಿಗೆ ಗುಪ್ತವಾಗಿ ಅವಕಾಶ ಕಲ್ಪಿಸುವ ಅಧಿಕಾರಿಗಳ ವಿರುದ್ದ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಕಠಿಣ ಕ್ರಮ ಜರುಗಿಸಬೇಕಿದೆ.
ಪ್ರಸ್ತುತ ಪರಿಸ್ಥಿತಿ ಗಮನಿಸಿದರೆ ಸದ್ಯದ ಮಟ್ಟಿಗೆ ನಾಗರಿಕರಿಗೆ ಮರಳು ಲಭ್ಯವಾಗುವ ಯಾವುದೇ ಲಕ್ಷಣಗಳು ಗೋಚರವಾಗುತ್ತಿಲ್ಲ. ಈ ವರ್ಷ ಜಿಲ್ಲೆಯಲ್ಲಿ 4 ಬ್ಲಾಕ್ಗಳಲ್ಲಿ ಮಾತ್ರ ಮರಳು ತೆಗೆಯಲು ಅನುಮತಿ ದೊರಕಿದೆ. ಸುಮಾರು 40 ಕ್ಕೂ ಅಧಿಕ ಬ್ಲಾಕ್ಗಳಲ್ಲಿ ಮರಳು ತೆಗೆಯಲು ಅವಕಾಶ ಸಿಕ್ಕಿಲ್ಲ. ಅನುಮತಿ ಸಿಕ್ಕಿರುವ ಬ್ಲಾಕ್ಗಳಲ್ಲಿ ಮರಳು ಪೂರೈಕೆ ಕಾರ್ಯ ಎಂದಿನಿಂದ ಆರಂಭವಾಗಲಿದೆ ಎಂಬುವುದರ ಬಗ್ಗೆ ಸಂಬಂಧಿಸಿದ ಇಲಾಖೆಗಳಲ್ಲಿ ಸ್ಪಷ್ಟ ಮಾಹಿತಿಯೇ ಇಲ್ಲವಾಗಿದೆ.
ಮರಳಿನ ಕೊರತೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ನಿಗದಿತ ಮಟ್ಟದ ಎಂ ಸ್ಯಾಂಡ್ನ್ನು ಕಟ್ಟಡ ನಿರ್ಮಾಣ ಮತ್ತಿತರ ಕೆಲಸಕಾರ್ಯಗಳಿಗೆ ಬಳಕೆ ಮಾಡಲು ಅವಕಾಶ ಕಲ್ಪಿಸಿದೆ. ಆದರೆ ಎಂ ಸ್ಯಾಂಡ್ ಕೂಡ ಸರಿಯಾಗಿ ಲಭ್ಯವಾಗುತ್ತಿಲ್ಲ. ದುಬಾರಿ ಬೆಲೆ ನಿಗದಿ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಎಂ ಸ್ಯಾಂಡ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು. ಮರಳಿನ ರೀತಿಯಲ್ಲಿ ಎಂ ಸ್ಯಾಂಡ್ಗೂ ಬೆಲೆ ನಿಗದಿ ಮಾಡಬೇಕು.
-ಮಹದೇವಸ್ವಾಮಿ, ಗುತ್ತಿಗೆದಾರ
-----------------------------------------

No comments:
Post a Comment