Saturday, 12 November 2016

ಮುಂಜಾನೆ ಮೈಕೊರೆಯುವ ಚಳಿ, 
ಹೊತ್ತೇರಿದಂತೆ ನೆತ್ತಿ ಸುಡುವ ಬಿಸಿಲು 

 ಸದ್ಯದ ವಾತಾವರಣ ಹೇಗಿದೆ ಎಂದರೆ, ಮನೆಯ ಒಳಗಡೆ ಫ್ಯಾನ್, ಕೂಲರ್, ಎ.ಸಿ.ಯಿಲ್ಲದೆ ಹಗಲು ಇರಲು ಸಾಧ್ಯವಾಗದಂತಹ ಪರಿಸ್ಥಿತಿಯಿದೆ. ಈಗಲೇ ನಗರದಲ್ಲಿ ಈ ಪರಿಸ್ಥಿತಿಯಾದರೆ ಏಪ್ರಿಲ್, ಮೇ ತಿಂಗಳಲ್ಲಿ ಇನ್ಯಾವ ಸ್ಥಿತಿಯಿರಲಿದೆ ಎಂಬುವುದನ್ನು ಊಹಿಸಿಕೊಂಡರೆ ಭಯವಾಗುತ್ತದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಸಾವಿರಾರು ಮರಗಳನ್ನು ಕಡಿದುರುಳಿಸಲಾಗುತ್ತಿದೆ. ಅಭಿವೃದ್ದಿಯ ಹೆಸರಿನಲ್ಲಿ ಪರಿಸರ ವಿನಾಶವಾಗುತ್ತಿದೆ. ನಗರದ ಸುತ್ತಮುತ್ತಲು ಗದ್ದೆ, ತೋಟಗಳನ್ನು ಬಡಾವಣೆಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಕೆರೆಗಳು ಕಣ್ಮರೆಯಾಗುತ್ತಿವೆ. ಪರಿಸರದಲ್ಲಿ ಏರುಪೇರು ಕಂಡುಬರುತ್ತಿದ್ದು, ಹವಮಾನದಲ್ಲಿ ವೈಪರೀತ್ಯ ಉಂಟಾಗುತ್ತಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ವರ್ಷದಿಂದ ವರ್ಷಕ್ಕೆ ತಾಪಮಾನ ಹೆಚ್ಚಾಗುತ್ತಿದೆ ಎನ್ನಬಹುದು. ಬಿಸಿಲ ಬೇಗೆ ದಿನೇ ದಿನೇ ತೀವ್ರಗೊಳ್ಳುತ್ತಿರುವುದರಿಂದ ಅನಾರೋಗ್ಯದ ಜೊತೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕೆರೆ, ಬಾವಿ, ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕುಡಿಯುವ ನೀರಿನ ಹಾಹಾಕಾರ ಉಂಟಾಗುವ ಆತಂಕ ಸೃಷ್ಟಿಸಿದೆ


   ಮಲೆನಾಡಿನ ವಾತಾವರಣ 2-3 ವರ್ಷದಿಂದ ಏರುಪೇರಿನಲ್ಲಿದೆ.  ವಿಪರೀತ ಬಿಸಿಲು ಬೀಳುವ ಮೂಲಕ ಬೇಸಿಗೆಯಲ್ಲಿ ಬಯಲಿಸೀಮೆಯನ್ನು ಮೀರಿಸುತ್ತಿದೆ. ಇನ್ನೊಂದೆಡೆ ಮಳೆಗಾಲದಲ್ಲಿ ಮಳೆಯೂ ಆಗದೆ ಬಯಲುಸೀಮೆಯವನ್ನು ಮತ್ತೊಮ್ಮೆ ನೆನಪಿಸುತ್ತಿದೆ. ಪ್ರಾಕೃತಿಕ ವ್ಯವಸ್ಥೆಯಲ್ಲಿನ ಏರುಪೇರಿನಿಂದ, ತಾಪಮಾನದ ಏರಿಳಿತದಲ್ಲಾಗುತ್ತಿರುವ ದಿಢೀರ್ ಬದಲಾವಣೆಯಿಂದ ಜನತೆ ತತ್ತರಿಸುವಂತಾಗಿದೆ.
  ಚಳಿಗಾಲದಲ್ಲಿಯೇ ಬೇಸಿಗೆಯ ಸುಡು ಬಿಸಿಲಿನ ಶಾಖವನ್ನು ಸಹ್ಯಾದ್ರಿ ಅಂಚಿನಲ್ಲಿರುವ ಮಲೆನಾಡಿಗರು ಈಗ ಎದುರಿಸುವಂತಾಗಿದೆ. ರಾತ್ರಿ ಮೈ ಕೊರೆಯುವ ಚಳಿಯೂ ತನ್ನ ಪ್ರಮಾಣವನ್ನು ಹೆಚ್ಚಿಸಲಾರಂಭಿಸಿದೆ. ಬೆಳಗಿನ ಜಾವ ಮತ್ತು ಮುಂಜಾನೆಯ ಕುಳಿರ್ಗಾಳಿ ಮಿಶ್ರಿತ ಚಳಿ ಜನತೆಯ ಆರೋಗ್ಯದ ಮೇಲೆ ಪರಿಣಾಮ ಬೀರಲಾರಂಭಿಸಿದೆ. ಹಗಲು ವೇಳೆ ಕಂಡುಬರುವ ನೆತ್ತಿಸುಡುವ ಬಿಸಿಲಿಗೆ ಈಗಲೇ ಸುಸ್ತಾಗುತ್ತಿದ್ದಾರೆ. ಈ ವೈಪರೀತ್ಯದಿಂದ ನಾನಾ ರೀತಿಯ ಆರೋಗ್ಯ ಸಂಬಂಧಿತ ಸಮಸ್ಯೆಗಳು ಎದುರಾಗುತ್ತಿವೆ.
ಒಂದು ವಾರದಿಂದ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಚಳಿಯ ಪ್ರಮಾಣ ಹೆಚ್ಚಳವಾಗಿದೆ. ಸಂಜೆಯಾಗುತ್ತಿದ್ದಂತೆ ತಾಪಮಾನದಲ್ಲಿ ದಿಢೀರ್ ಕುಸಿತ ಕಂಡುಬರುತ್ತಿದೆ. ಚಳಿಗಾಳಿ ಬೀಸಲಾರಂಭಿಸುತ್ತಿದೆ. ಮಧ್ಯರಾತ್ರಿಯ ನಂತರ  ಚಳಿ ಹೆಚ್ಚುತ್ತಿದೆ. ಮುಂಜಾನೆಯ ವೇಳೆಯಂತೂ ಈ ಪ್ರಮಾಣ ಮತ್ತಷ್ಟು ಹೆಚ್ಚಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಮಧ್ಯರಾತ್ರಿಯ ನಂತರ ಶಿವಮೊಗ್ಗ ನಗರದ ತಾಪಮಾನದ ಪ್ರಮಾಣ, 15 ರಿಂದ 18 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶ ದಾಖಲಾಗುತ್ತಿದೆ. ಮುಂಜಾನೆಯ ವೇಳೆಯಂತೂ ಚಳಿ ಕಾಡುತ್ತಿದೆ. ಚಳಿಯ ಅನುಭವ ಒಂದು ರೀತಿಯದ್ದಾದರೆ, ಬಿಸಿಲ ಬೇಗೆಯ ಸ್ಥಿತಿ ಮತ್ತೊಂದು ಬಗೆಯದ್ದಾಗಿದೆ. ಅಕ್ಟೋಬರ್‌ನಿಂದಲೇ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ತಾಪಮಾನದ ಪ್ರಮಾಣದಲ್ಲಿ ದಿಢೀರ್ ಹೆಚ್ಚಳ ಕಂಡುಬಂದಿದೆ. ಏಪ್ರಿಲ್, ಮೇನಲ್ಲಿ ಕಂಡುಬರುವ ತಾಪಮಾನ ಚಳಿಗಾಲದ ಅವಧಿಯಲ್ಲಿಯೇ ದಾಖಲಾಗುತ್ತಿದೆ.
  ಚಳಿಗಾಲದ ಅವಧಿಯಲ್ಲಿ ಇಷ್ಟೊಂದು ಪ್ರಮಾಣದ ತಾಪಮಾನ ಇತ್ತೀಚಿನ ವರ್ಷಗಳಲ್ಲಿ ಕಂಡುಬರುತ್ತಿರಲಿಲ್ಲ. ಆದರೆ, ಪ್ರಸ್ತುತ ವರ್ಷ ನವೆಂಬರ್ ತಿಂಗಳಲ್ಲಿಯೇ ಬೇಸಿಗೆಯ ಅವಧಿಯ ತಾಪಮಾನ ದಾಖಲಾಗುತ್ತಿದೆ. ಈಗಲೇ ಪರಿಸ್ಥಿತಿ ಹೀಗಾದರೆ, ಬೇಸಿಗೆಯ ಸ್ಥಿತಿ ಹೇಗಿರುತ್ತದೆಯೋ ಎಂಬ ಆತಂಕ ಜನರನ್ನು ಕಾಡಲಾರಂಭಿಸಿದೆ.
24 ಗಂಟೆಯ ಅವಧಿಯಲ್ಲಿ ಬಿಸಿಲು ಹಾಗೂ ಚಳಿ ತೀವ್ರ ಸ್ವರೂಪದಲ್ಲಿ ದಾಖಲಾಗುತ್ತಿರುವುದು ಮಲೆನಾಡು ಭಾಗದಲ್ಲಿ ಬದಲಾಗುತ್ತಿರುವ ಪರಿಸರಕ್ಕೆ ಸಾಕ್ಷಿಯಾಗಿದೆ. ಮರಗಳ ಅವ್ಯಾಹತ ಮಾರಣಹೋಮದಿಂದ ಸಸ್ಯ ಶ್ಯಾಮಲೆಯಾಗಿದ್ದ, ಹಸಿರುಟ್ಟು ನಳನಳಿಸುತ್ತಿದ್ದ ದಟ್ಟ ಕಾಡುಗಳು ನಾಶವಾಗುತ್ತಿವೆ. ಇನ್ನೊಂದೆಡೆ, ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ.ಇದಕ್ಕೆ ಸರಿಯಾಗಿ,
ಪ್ರಾಕೃತಿಕ ವ್ಯವಸ್ಥೆಯಲ್ಲಿ ಏರುಪೇರು ಉಂಟಾಗಿ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ ಎಂದು ಪರಿಸರ ತಜ್ಞರು ಅಭಿಪ್ರಾಯಪಡುತ್ತಾರೆ. ಒಟ್ಟಾರೆ, ಚಳಿ ಹಾಗೂ ಬಿಸಿಲಿನ ಜುಗಲ್‌ಬಂದಿಯಿಂದ ಮಲೆನಾಡಿಗರ ಆರೋಗ್ಯವೂ ಏರುಪೇರಾಗುತ್ತಿದೆ.
-------------------------------------

No comments:

Post a Comment