Friday, 4 November 2016



 ವಿಧಾನಸಭೆ ಚುನಾವಣೆಗೆ  ತಾಲೀಮು ಆರಂಭ 
ಜಿಲ್ಲಾ ರಾಜಕೀಯದ ಒಂದು
 ರೌಂಡಪ್



ಶಿವಮೊಗ್ಗ:  ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿಯಿದೆ. ಆದರೆ ಈಗಾಗಲೆ ಜಿಲ್ಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಚುನಾವಣಾ ಪೂರ್ವಭಾವಿ ಸಿದ್ಧತೆಯ ರಂಗ ತಾಲೀಮು ಆರಂಭಿಸಿವೆ. ಪಕ್ಷ ಸಂಘಟನೆ, ಕಾರ್ಯಕರ್ತರ ಒಗ್ಗೂಡಿಸುವ ಕೆಲಸಕ್ಕೆ ವಿಧ್ಯುಕ್ತ ಚಾಲನೆ ನೀಡುವ ಮೂಲಕ ರಣಕಹಳೆ ಮೊಳಗಲಾರಂಭಿಸಿವೆ.
ಪ್ರಸ್ತುತ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆ, ವಿದ್ಯಮಾನಗಳನ್ನು ಗಮನಿಸಿದರೆ ಇದು ಸತ್ಯವೆನಿಸುತ್ತಿದೆ. ಚಳಿಗಾಲದಲ್ಲಿಯೇ ಜಿಲ್ಲೆಯ ರಾಜಕೀಯ ಚಟುವಟಿಕೆಗಳು ಕಾವೇರತೊಡಗಿದೆ. ಚುನಾವಣೆ ಪ್ರಕ್ರಿಯೆ ಆರಂಭವಾದಾಗ ಸಿದ್ಧತೆ ಆರಂಭಿಸುವ ವ್ಯವಸ್ಥೆಗೆ ಇತಿಶ್ರೀ ಹಾಡಿರುವ ಪಕ್ಷಗಳು, ಚುನಾವಣೆಗಿನ್ನೂ ಒಂದೂವರೆ ವರ್ಷ ಬಾಕಿಯಿರುವಂತೆ ಸಂಘಟನಾ ಚಟುವಟಿಕೆಗಳನ್ನು ಆರಂಭಿಸಿವೆ. ಈ ಮೂಲಕ ಕೊನೆಯ ಹಂತದಲ್ಲಿ ಉಂಟಾಗುವ ಗೊಂದಲ-ಗಡಿಬಿಡಿಗೆ ಕಡಿವಾಣ ಹಾಕಲು ಮುಂದಾಗಿವೆ.
ಮೂರು ಪಕ್ಷಗಳ ಮುಖಂಡರು ಪರಸ್ಪರ ಆರೋಪ-ಪ್ರತ್ಯಾರೋಪ, ಟೀಕೆ-ಟಿಪ್ಪಣಿ, ಕೆಸರೆರೆಚಾಟ ನಡೆಸಲಾರಂಭಿಸಿದ್ದಾರೆ. ಪಕ್ಷದ ಪ್ರಭಾವಿ ನಾಯಕರನ್ನು ಜಿಲ್ಲೆಗೆ ಕರೆತಂದು ಕಾರ್ಯಕರ್ತರ ಸಭೆ ನಡೆಸುತ್ತಿವೆ. ಈ ಮೂಲಕ ಕಾರ್ಯಕರ್ತರಲ್ಲಿ ಹುರುಪು ಮೂಡಿಸುವ ಕೆಲಸ ನಡೆಸಲಾರಂಭಿಸಿವೆ. ಟಿಕೆಟ್ ಸಿಗುವ ಆತ್ಮವಿಶ್ವಾಸದಲ್ಲಿರುವವರಂತೂ ಈಗಾಗಲೇ ಮತದಾರರ ಮನವೊಲಿಸುವ ಕಾರ್ಯವನ್ನು ಭರ್ಜರಿಯಾಗಿ ಮಾಡಲಾರಂಭಿಸಿದ್ದಾರೆ.
ಈ ವಿಷಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹಲವು ದಿನಗಳ ಹಿಂದಿನಿಂದಲೇ ಪಕ್ಷ  ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಮತ್ತಿತರ ನಾಯಕರು ಸಮಯ ಸಿಕ್ಕಾಗಲೆಲ್ಲ  ವಿವಿಧ ಮೋರ್ಚಾಗಳ ಸಭೆ ನಡೆಸುತ್ತಿದ್ದಾರೆ. ಸಂಘಟನೆಯ ದಿಕ್ಕಿನಲ್ಲಿ ಸಕ್ರಿಯವಾಗಿವೆ. ಬಿಜೆಪಿಯವರು ಇತ್ತೀಚೆಗಷ್ಟೇ ಎಲ್ಲಾ ಮೋರ್ಚಾಕ್ಕೆ ಹೊಸ ಪದಾದಿಕಾರಿಗಳನ್ನು ನೇಮಿಸಿರುವುದರಿಂದ ಭಾರೀ ಉತ್ಸಾಹದಲ್ಲಿ ಸಭೆ ನಡೆಸುತ್ತಿವೆ. ವಾರಕ್ಕೆರಡು, ಮೂರು ಸಭೆಯನ್ನು ಪಕ್ಷದ ಕಚೇರಿಯಲ್ಲಿ ನಡೆಸುತ್ತಿದ್ದಾರೆ. ಪತ್ರಿಕಾಗೋಷ್ಠಿಗಂತೂ ಲೆಕ್ಕವೇ ಇಲ್ಲ ಎನ್ನುವಂತಾಗಿದೆ. ಎಲ್ಲ ತಾಲೂಕುಗಳಲ್ಲೂ ಇದೇ ರೀತಿ ಸಭೆಯನ್ನು ನಡೆಸಲಾಗುತ್ತಿದೆ. ಮೂರೂ ಪಕ್ಷಗಳು ಪೈಪೋಟಿಗೆ ಬಿದ್ದವರ ರೀತಿಯಲ್ಲಿ ಚುನಾವಣಾ ಪೂರ್ವಭಾವಿ ಸಿದ್ಧತೆ ಮಾಡುತ್ತಿರುವುದು ಕಂಡುಬರುತ್ತಿದೆ. ಪಾದಯಾತ್ರೆ, ಹೋರಾಟ ನಡೆಸುವ ಮೂಲಕ ಮತದಾರರ ಗಮನ ಸೆಳೆಯುವ ಕೆಲಸ ನಡೆಸುತ್ತಿದೆ.
ಜೆಡಿಎಸ್ ಕೂಡ ಹೋರಾಟ, ಪಾದಯಾತ್ರೆ ನಡೆಸುತ್ತಿದೆ. ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡರನ್ನು ಕೆಲವೇ ದಿನಗಳ ಅಂತರದಲ್ಲಿ ಎರಡು ಬಾರಿಗೆ ಜಿಲ್ಲೆಗೆ ಕರೆಯಿಸಿ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸುವ ಕೆಲಸ ಮಾಡಿದೆ. ಇತರೆ ಪಕ್ಷಗಳ ಪ್ರಮುಖ ಮುಖಂಡರನ್ನು ಸೆಳೆದುಕೊಳ್ಳುವ ಕೆಲಸ ಕೂಡ ನಡೆಸಲಾರಂಭಿಸಿದೆ.  
ಆಡಳಿತಾರೂಢ ಕಾಂಗ್ರೆಸ್ ಮೈಚಳಿ ಬಿಟ್ಟವರ ರೀತಿಯಲ್ಲಿ ಸಿದ್ಧತೆ ನಡೆಸಲಾರಂಭಿಸಿದೆ. ಉಳಿದೆರಡುಪಕ್ಷಗಳಿಗೆ ಹೋಲಿಕೆ ಮಾಡಿದರೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಪೂರ್ವಭಾವಿ ಸಿದ್ಧತೆಯನ್ನು ತಡವಾಗಿ ಆರಂಭಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ಜಿ. ಪರಮೇಶ್ವರ್ ಅವರನ್ನು ಕರೆಯಿಸಿ ಕಾರ್ಯಕರ್ತರ ಸಭೆ ನಡೆಸಿದೆ. ಈ ಮೂಲಕ ವಿಧ್ಯುಕ್ತವಾಗಿ ಚುನಾವಣಾ ಪೂರ್ವಭಾವಿ ಸಿದ್ಧತೆಯನ್ನು ನಡೆಸಿದೆ.
ಏಳು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ಪರಮೇಶ್ವರ್ ಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡಿ ಹೋಗಿದ್ದಾರೆಂಬ ಮಾತು ಕೇಳಿಬಂದಿದೆ. ಎಲ್ಲ ಏಳು ವಿಧಾನಸಭಾ ಕ್ಷೇತ್ರಗಳಲ್ಲ್ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಬೇಕು ಎಂಬ ಗುರಿಯಿಟ್ಟುಕೊಂಡು, ಆ ನಿಟ್ಟಿನಲ್ಲಿ ಪಕ್ಷದ ಸಂಘಟನಾ ಚಟುವಟಿಕೆಗಳನ್ನು ಈಗಿನಿಂದಲೇ ನಡೆಸಬೇಕು. ಕಳೆದ ಚುನಾವಣೆಯಲ್ಲಿ ಸಾಗರ, ಶಿವಮೊಗ್ಗ ನಗರ ಹಾಗೂ ತೀರ್ಥಹಳ್ಳಿ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಉಳಿದಂತೆ ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಸೊರಬ ಹಾಗೂ ಶಿಕಾರಿಪುರ ಕ್ಷೇತ್ರಗಳಲ್ಲಿ ಉತ್ತಮ ಮತ ಗಳಿಕೆ ಮಾಡಿದ್ದರೂ ಪಕ್ಷ ಹಿನ್ನೆಡೆ ಸಾಧಿಸಿತ್ತು. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳತ್ತ ಹೆಚ್ಚಿನ ಗಮನಹರಿಸಲಾಗಿದೆ. ಪಕ್ಷದ ಸಂಘಟನೆಗೆ ಒತ್ತು ನೀಡಲು ಸೂಚಿದ್ದಾಗಿ ಮಾಹಿತಿ ಲಭ್ಯವಾಗಿದೆ.
  ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಕ್ಕಿ ಸಿಗುವ ಆತ್ಮವಿಶ್ವಾಸದಲ್ಲಿರುವ ಸ್ಪರ್ಧಾಕಾಂಕ್ಷಿಗಳು ಈಗಾಗಲೇ  ಕ್ಷೇತ್ರದಾದ್ಯಂತ ಮತದಾರರ ಮನವೊಲಿಸುವ ಕೆಲಸಗಳನ್ನು ಮಾಡಲಾರಂಭಿಸಿದ್ದಾರೆ. ವಿವಿಧ ಸಮುದಾಯಗಳ ಹಬ್ಬ ಹರಿದಿನ, ಜಾತ್ರಾ ಮಹೋತ್ಸವ, ಧಾರ್ಮಿಕ ಸಭೆ ಮತ್ತಿತರ ಕಾರ್ಯಕ್ರಮಗಳಿಗೆ ಹೇರಳ ಧನ ಸಹಾಯದ ಕೊಡುಗೆ ನೀಡುತ್ತಿರುವ ಮಾಹಿತಿಗಳು ಕೇಳಿಬರುತ್ತಿವೆ.
-----------------------------------

No comments:

Post a Comment