ಕಮಲ್ ರಿಯಲ್ ಬದುಕೂ ರೀಲ್ ಬದುಕಾಯಿತೇ......?
ತೆರೆಯ ಮೇಲಿನ ಆದರ್ಶ ನಿಜ ಬದುಕಿನಲ್ಲೇಕಿಲ್ಲ?
ಕಮಲ್ಹಾಸನ್ ದಕ್ಷಿಣ ಭಾರತದ ಸಿನೆಮಾ ಜಗತ್ತಿನ ಮೇರುನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದೇಕೋ ಆತ ನಟನಾ ಕ್ಷೇತ್ರದಲ್ಲಿ ಯಶಸ್ವಿಯಾದಂತೆ ತನ್ನ ಖಾಸಗಿ ಜೀವನದಲ್ಲಿ ಮಾತ್ರ ಯಶಸ್ವಿಯಾಗಲೇ ಇಲ್ಲ. ಇಬ್ಬರು ಹೆಂಡತಿಯರಿಗೆ ವಿಚ್ಛೇದನ ನೀಡಿ, ಮೂರನೆಯವಳ ಜೊತೆ ಲಿವಿಂಗ್ ಟುಗೆದರ್ ಇದ್ದರೂ ಆಕೆಯನ್ನೂ ಈಗ ಕೈಬಿಡುತ್ತಿದ್ದಾರೆ. ವ್ಯಕ್ತಿ ಎಷ್ಟೇ ಶ್ರೀಮಂತನಾಗಿರಬಹುದು, ಬುದ್ಧಿವಂತನಾಗಿರಬಹುದು, ಉನ್ನತ ಸ್ಥಾನದಲ್ಲಿರಬಹುದು, ಆತನಿಗೆ ತನ್ನ ಖಾಸಗಿ ಜೀವನದ ನಡವಳಿಕೆಯೂ ಸಾರ್ವಜನಿಕ ವಲಯದಲ್ಲಿ ಪರಿಗಣಿತವಾಗುತ್ತದೆ ಎನ್ನುವ ಎಚ್ಚರದ ಪ್ರಜ್ಞೆಯೂ ಅಗತ್ಯ. ಸಾರ್ವಜನಿಕ ಕ್ಷೇತ್ರದಲ್ಲಿರುವವರ ವ್ಯಕ್ತಿತ್ವ ಕೂಡ ನಿರಭ್ರ-ಶುಭ್ರ ಬಿಳಿಬಟ್ಟೆಯಂತೆ ಶೋಭಿಸುತ್ತಿರಬೇಕು. ಈ ನಿಟ್ಟಿನಲ್ಲಿ ಕಮಲ್ ಅವರನ್ನು ನೋಡಿದಾಗ ಕೌಟುಂಬಿಕ ಜೀವನದಲ್ಲಿ ಅವರು ಎಡವಿರುವುದು ಅಕ್ಷರಶಃ ದಿಟ.
ಮದುವೆ ಎನ್ನುವುದು ಒಂದು ಹೆಣ್ಣು ಮತ್ತು ಗಂಡಿನ ಹೃದಯವನ್ನು ಬಂಧಿಸುವ ಸುಂದರ ಸಂಕೋಲೆ. ಮದುವೆಯಾದವರು ಕುಟುಂಬದವರ, ನೆಂಟರಿಷ್ಟರ ಮತ್ತು ಮಿತ್ರವೃಂದದ ಮಧ್ಯೆ ಆನಂದಮಯವಾಗಿ, ಸಡಗರದಿಂದ, ಹಬ್ಬದ ವಾತಾವರಣದಲ್ಲಿ ಕಾಲಕಳೆಯುತ್ತಾರೆ. ಹಾಗಂತ ಎಲ್ಲ ಮದುವೆಗಳು ಜೀವನಪರ್ಯಂತ ಇರುವುದಿಲ್ಲ. ಎಲ್ಲ ಮದುವೆಗಳು ಸಂತಸದಿಂದ ಅಂತ್ಯಗೊಳ್ಳುವುದೂ ಇಲ್ಲ. ಕೆಲವು ವಿಚ್ಛೇದನದಿಂದ ಅಂತ್ಯವಾಗಿ ದುಃಖಕರವಾಗಿ ಪರಿಣಮಿಸುತ್ತವೆ. ಈ ವಿಚ್ಛೇದಿತರು ಇನ್ನೊಬ್ಬರನ್ನು ಅಥವಾ ಇನ್ನೊಬ್ಬರಿಂದ ವಿಚ್ಛೇದನಗೊಂಡವರನ್ನೋ ಮತ್ತೆ ಮದುವೆಯಾಗುತ್ತಾರೆ. ಸಿನಿಮಾರಂಗದಲ್ಲಂತೂ ಇದು ಸರ್ವೇಸಾಮಾನ್ಯವಾಗಿಬಿಟ್ಟಿದೆ.
ದಕ್ಷಿಣ ಭಾರತ ಚಿತ್ರರಂಗದಲ್ಲಿ ಪ್ರಖ್ಯಾತ ತಾರೆಯರಾಗಿದ್ದ ಕಮಲ್ಹಾಸನ್ ಮತ್ತು ಗೌತಮಿ ದಂಪತಿ ಬೇರೆಬೇರೆಯಾಗುತ್ತಿದ್ದಾರೆ. ಸತತ 13 ವರ್ಷಗಳ ಸಂಬಂಧವನ್ನು ಅವರು ಕೊನೆಗೊಳಿಸಿಕೊಳ್ಳುತ್ತಿರುವುದಾಗಿ ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ. ಪ್ರತಿಷ್ಠಿತ ಸಿನಿಮಾನಟರು ಹೀಗೇಕೆ ವಿಚ್ಛೇದನಕ್ಕೆ ಮೊರೆಹೋಗುತ್ತಿದ್ದಾರೆ, ಬಣ್ಣದ ಬದುಕಿನವರೇ ಏಕೆ ಈ ರೀತಿ ವಿಚ್ಛೇದನದ ಮೂಲಕ ಸುದ್ದಿಯಾಗುತ್ತಿದ್ದಾರೆ ಎನ್ನುವ ಪ್ರಶ್ನೆ ಎಲ್ಲರನ್ನೂ ಸಹಜವಾಗಿಯೇ ಕಾಡುತ್ತಿದೆ.
ಕಮಲ್ಗೆ ಗೌತಮಿ ಮೂರನೆಯ ಪತ್ನಿ. 1978ರಲ್ಲಿ ನೃತ್ಯಗಾರ್ತಿ ವಾಣಿ ಗಣಪತಿ ಅವರನ್ನು ಮದುವೆಯಾಗಿದ್ದರು. ಹತ್ತೇ ವರ್ಷದಲ್ಲಿ ಅವರಿಂದ ವಿಚ್ಛೇದನ ಪಡೆದರು. ಇದಾದ ಬಳಿಕ ನಟಿ ಸಾರಿಕಾ ಅವರನ್ನು 1988ರಲ್ಲಿ ವಿವಾಹವಾದರು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಜನಿಸಿದ್ದಾಗ್ಯೂ 2004ರಲ್ಲಿ ಬೇರೆಬೇರೆಯಾದರು. ಅಲ್ಲಿಂದ ನಟಿ ಗೌತಮಿ ಜೊತೆ (ಲಿವಿಂಗ್ ಟುಗೆದರ್) ಸಾಂಗತ್ಯದಲ್ಲಿದ್ದರು. ಗೌತಮಿ ಸಹ ಈ ಮೊದಲು ಉದ್ಯಮಿಯೊಬ್ಬರನ್ನು ವಿವಾಹವಾಗಿ ಅವರಿಂದ ಬೇರೆಯಾಗಿದ್ದರು. ಈಗ ಕಮಲ್ ಅವರಿಂದಲೂ ಬೇರೆಯಾಗುತ್ತಿರುವುದಕ್ಕೆ ಯಾವುದೇ ಕಾರಣವನ್ನು ನೀಡಿಲ್ಲವಾದರೂ, ಇಬ್ಬರು ಸಮ್ಮತಿಯ ಮೂಲಕವೇ ಬೇರೆಯಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಸಿನಿಮಾನಟ -ನಟಿಯರ ಜೀವನದಲ್ಲೇ ಏಕೆ ಈ ರೀತಿ ಘಟನೆಗಳು ಉಳಿದವರ ಜೀವನಕ್ಕಿಂತ ಹೆಚ್ಚು ನಡೆಯುತ್ತವೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಸೂಕ್ಷ್ಮವಾಗಿ ಈ ವಿಚಾರವನ್ನು ಅವಲೋಕಿಸಿದಾಗ ಮೊದಲನೆಯದಾಗಿ, ಸಾಮಾನ್ಯವಾಗಿ ಇಂತಹ ಸೆಲೆಬ್ರೆಟಿಗಳು ಮನೆಗಿಂತ ಹೊರಗಡೆಯೇ ಇರುವುದು ಅಧಿಕ. ಇಂತಹ ಸಂದರ್ಭದಲ್ಲಿ ಬೇರೆ ಕ್ಷೇತ್ರದ, ಅಂತಸ್ತಿನ ಜನರ ಪರಿಚಯವಾಗುತ್ತದೆ. ಅದರಲ್ಲೂ ಗೌರವಾನ್ವಿತ, ಅಧಿಕಾರಸ್ಥರ, ಶ್ರೀಮಂತರ ಪರಿಚಯವಾಗುವುದು ಅಧಿಕ. ಇಲ್ಲಿನ ಪರಿಚಯವೇ ಕೆಲವೊಮ್ಮೆ ಸೆಳೆತ-ಎಳೆತಗಳಾಗಿ ಅವರ ಕೌಟುಂಬಿಕ ಜೀವನವನ್ನು ಪಲ್ಲಟಗೊಳಿಸುತ್ತದೆ. ಇಲ್ಲಿ ಪರಿಚಯವಾಗುವ ಕೆಲವು ಮಹಿಳೆಯರು ಅಥವಾ ಯುವತಿಯರು ಅವರ ಜೀವನದಲ್ಲಿ ಪ್ರವೇಶಿಸುತ್ತಾರೆ.
ಎರಡನೆಯದಾಗಿ, ನಟ-ನಟಿಯರು ಸಹನಟಿಯರು, ಮತ್ತಿತರರ ಜೊತೆ ಕೆಲಸ ಮಾಡಬೇಕಾಗುತ್ತದೆ. ಕೆಲವೊಮ್ಮೆ ಇವರ ಜೊತೆ ತೀರಾ ರೊಮ್ಯಾಂಟಿಕ್ ಆಗಿ ನಟಿಸಬೇಕಾಗುತ್ತದೆ. ಕೆಲವೊಮ್ಮೆ ಈ ರೊಮ್ಯಾಂಟಿಕ್ ನಟನೆಯೇ ಸಿನಿಮಾದಾಚೆಯ ಸಂಬಂಧಕ್ಕೆ ಕಾರಣವಾಗುತ್ತದೆ. ಮೂರನೆಯದಾಗಿ, ಹಣದ ಅಮಲು. ಕೆಲವೊಮ್ಮೆ ಸಾಕಷ್ಟು ಸಂಪತ್ತು ಹೊಂದಿರುವ ನಟ-ನಟಿಯರಿಗೆ ತನ್ನಂತೆ ಶ್ರೀಮಂತನಿರುವ ಇನ್ನೊಬ್ಬ ವ್ಯಕ್ತಿ ಅಥವಾ ಮಹಿಳೆಯ ಸಂಪರ್ಕ ಬೆಳೆದರೆ ಅವರ ಜೊತೆ ಗೊತ್ತಿಲ್ಲದಂತೆ ಸಂಬಂಧ ಬೆಳೆಯುತ್ತದೆ. ನೋಡಲು ಸುಂದರವಾಗಿರುವವರೂ ಇದೇ ರೀತಿ ಎಡವುದಿದೆ.
ಸೃಜನಶೀಲತೆ ಮತ್ತು ಆಲೋಚನಾ ಕ್ರಮದ ಮಧ್ಯೆ ಅದೇನೋ ಗಾಢವಾದ ಸಂಬಂಧವಿದೆ. ವ್ಯಕ್ತಿ ತನ್ನಂತೆಯೇ ಇರುವ ಇಂತಹ ವ್ಯಕ್ತಿಯನ್ನು ಸ್ವಾಭಾವಿಕವಾಗಿಯೇ ಇಷ್ಟಪಡುತ್ತಾನೆ. ಸಿನಿಮಾರಂಗದಲ್ಲಿ ಇದು ಅತಿ ಹೆಚ್ಚಾಗಿ ಕಾಣಸಿಗುತ್ತದೆ. ಇದು ದೀರ್ಘವಾಗಿ ಬಿಟ್ಟಿರಲಾಗದ ಸಂಬಂಧವನ್ನು ಕಲ್ಪಿಸುತ್ತದೆ. ಇದರಿಂದ ಕೌಟುಂಬಿಕ ಜೀವನ ಶಿಥಿಲವಾಗುತ್ತದೆ. ಅರಿವಿಲ್ಲದಂತೆಯೇ ವ್ಯಕ್ತಿಗಳಲ್ಲಿ ಪ್ರೀತಿ-ಪ್ರೇಮ, ಸಂಬಂಧ ಬೆಳೆಯುತ್ತದೆ. ಆದರೆ ವ್ಯಕ್ತಿಯ ನಾಡಿಮಿಡಿತವನ್ನು ಅರಿಯದೆ ಈ ರೀತಿ ಸಂಬಂಧವನ್ನು ಬೆಳೆಸಿಕೊಂಡಲ್ಲಿ ಅದು ಜೀವನದ ಅನಿಶ್ಚಿತತಗೆ ಕಾರಣವಾಗುತ್ತದೆ.
ನಟರು ತಮ್ಮ ಶ್ರೀಮಂತಿಕೆಯ ಮೂಲಕವೇ ಹೆಚ್ಚು ಮೆರೆದಾಡುತ್ತಾರೆ. ಇದು ಹಲವರನ್ನು ಆಕರ್ಷಿಸುತ್ತದೆ. ಪಾರ್ಟಿ, ಸಭೆ, ಸಮಾರಂಭಗಳಲ್ಲಿ ಪರಿಚಯವಾಗುವ ಮೂಲಕ ಕೆಲವು ಆಕರ್ಷಕ ವ್ಯಕ್ತಿತ್ವದವರು, ಸುಂದರ, ಸುಂದರಿಯರು, ನಟ-ನಟಿಯರ ಬಲೆಗೆ ಬೀಳುತ್ತಾರೆ. ಇದು ಸಹ ಮದುವೆಯ ಹಂತದವರೆಗೆ ತಲುಪುವುದನ್ನು ಕಾಣುತ್ತೇವೆ. ಆದರೆ ವ್ಯಕ್ತಿಯ ಹಿನ್ನೆಲೆ ಅರಿಯದೆ, ಆತನ, ಅವಳ ಜೀವನದ ಸಾಧಕ-ಬಾಧಕಗಳ ಬಗ್ಗೆ ಅರಿಯದೆ ಕೇವಲ ಬಾಹ್ಯ ಸೌಂದರ್ಯ, ಅಂತಸ್ತನ್ನಷ್ಟೇ ಗಮನಿಸಿ ವಿವಾಹವಾದರೆ ಅವರ ಬಾಳು ಗೋಳಾಗುವುದರಲ್ಲಿ ಎರಡು ಮಾತಿಲ್ಲ.
ಮಾಧ್ಯಮಗಳಲ್ಲಿ ನಟರ ಮತ್ತು ನಟಿಮಣಿಯರ ಬಗ್ಗೆ ಸದಾ ಸುದ್ದಿ ಹರಿದಾಡುತ್ತಲೇ ಇರುತ್ತದೆ. ನಟ- ನಟಿಯರ ಖಾಸಗಿ ಜೀವನ, ಖಾಸಗಿ ಪಾರ್ಟಿಗಳಲ್ಲಿ ವರ್ತಿಸುವ ಅಸಭ್ಯ, ಅಶ್ಲೀಲ ರೀತಿ ಎಲ್ಲವೂ ಬಿತ್ತರವಾಗುತ್ತವೆ. ಇದು ಸಹ ನಟರ ಜೀವನದಲ್ಲಿ ದಾಂಪತ್ಯ ಮುರಿಯಲು ಕಾರಣವಾದ ಉದಾಹರಣೆ ನಮ್ಮ ಮುಂದೆ ಸಾಕಷ್ಟಿದೆ. ನಟ-ನಟಿಯರು ಸಾಕಷ್ಟು ಆಸ್ತಿ-ಪಾಸ್ತಿ ಗಳಿಸಿಕೊಂಡರೂ ಜೀವನದಲ್ಲಿ ಭದ್ರತೆ, ನೆಮ್ಮದಿಯನ್ನು ಕಾಣುತ್ತಿಲ್ಲ. ಕೆಲವು ನಟ-ನಟಿಯರು ಇದೇ ಕಾರಣಕ್ಕೆ ಏಕಾಂಗಿತನ ಅನುಭವಿಸಿ ಸಾವಿಗೆ ಶರಣಾದ ನಿದರ್ಶನಗಳೂ ನಮ್ಮ ಮುಂದಿವೆ.
ಇಂತಹ ದಂಪತಿಗಳ ಮಧ್ಯೆ ತಾನು ಹೆಚ್ಚು ಎನ್ನುವ ಶ್ರೇಷ್ಠತೆಯ ಮನೋಭಾವವೂ ದಾಂಪತ್ಯ ವಿರಸಕ್ಕೆ ಕಾರಣವಾಗುತ್ತಿದೆ. ಕೆಲವೊಮ್ಮೆ ಆತ್ಮಾರಾಧನೆಯೇ ಮುಖ್ಯವಾದರೂ ಇದೇ ಪರಿಸ್ಥಿತಿ ಎದುರಾಗುತ್ತದೆ. ಈ ಸೆಲೆಬ್ರೆಟಿಗಳು ತಮ್ಮ ಕುಟುಂಬದ ಜೊತೆ ಹೆಚ್ಚಿನ ದಿನವನ್ನು ಕಳೆಯಲು ಸಾಧ್ಯವಾಗುವುದಿಲ್ಲ. ಇದರಿಂದ ಕುಟುಂಬದಲ್ಲಿ ಕಿರಿಕಿರಿ ಉಂಟಾಗುತ್ತದೆ. ಮಕ್ಕಳ ಸಲುವಾಗಿ ಪತಿ-ಪತ್ನಿ ಮಧ್ಯೆ ಗಲಾಟೆ ಶುರುವಾಗುತ್ತದೆ. ಇದು ವಿಚ್ಛೇದನಕ್ಕೂ ಮುಂದೆ ಹೇತುವಾಗುತ್ತದೆ. ಪತಿ-ಪತ್ನಿಯರಿಬ್ಬರೂ ನಟರಾದರೆ ಇನ್ನೊಂದು ಅನಾಹುತ ಕೆಲವೊಮ್ಮೆ ಸಂಭವಿಸುತ್ತದೆ. ಅದೆಂದರೆ, ಯಾರಾದರೊಬ್ಬರ ನಟನಾ ಜೀವನ ಕುಸಿತವಾದರೆ, ಜನಪ್ರಿಯತೆಯಿಂದ ವಿಮುಖಗೊಂಡರೆ ಅವರಿಬ್ಬರ ಮಧ್ಯೆ ಅಸೂಯೆ ಎದುರಾಗುತ್ತದೆ. ಇದೂ ಸಹ ಕೌಟುಂಬಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ಬಣ್ಣದ ಲೋಕದ ನಟ-ನಟಿಯಯರನ್ನೇ ತಮ್ಮ ಆದರ್ಶವೆಂದು ಭ್ರಮಿಸುವ ನಮ್ಮ ಯುವಪೀಳಿಗೆಗೆ ಸಿನೆಮಾ ಜಗತ್ತಿನವರ ಖಾಸಗಿ ಬದುಕು ಆದರ್ಶವಾಗದಿರಲಿ ಎಂದು ಆಶಿಸೋಣವೇ...?
.................................

No comments:
Post a Comment