Friday, 30 December 2016


 ಮರಳಿನ ಹಾಹಾಕಾರ ಮುಗಿಯುವುದೆಂದು?

ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಬಡ - ಮಧ್ಯಮ ವರ್ಗದ ನಾಗರಿಕರಿಗೆ ಸುಲಭವಾಗಿ ಮರಳ ಲಭ್ಯವಾಗುವ ವ್ಯವಸ್ಥೆ ಜಾರಿಗೊಳಿಸಬೇಕು. ಹೊಸ ಮರಳು ನೀತಿಯನ್ನು ಜಿಲ್ಲೆಯಲ್ಲಿ ಕೂಡಲೇ ಜಾರಿಗೊಳಿಸಬೇಕು. ಕಾಳಸಂತೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಮರಳು ವಿತರಣೆಯಲ್ಲಿ ಈ ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಕಾನೂನುಬಾಹಿರ ಮಾರ್ಗಗಳಿಗೆ ಬ್ರೇಕ್ ಹಾಕಬೇಕಿದೆ.

ಶಿವಮೊಗ್ಗ, ಡಿ. 23: ’ದೀಪದ ಬುಡದಲ್ಲಿ ಕತ್ತಲು’ ಎಂಬ ಮಾತಿನಂತೆ ರಾಜ್ಯದಲ್ಲಿ ಅತಿ ಹೆಚ್ಚು ಮರಳು ಲಭ್ಯವಾಗುವ ಜಿಲ್ಲೆಗಳಲ್ಲೊಂದಾದ ಶಿವಮೊಗ್ಗದಲ್ಲಿ ಮರಳಿನ ತೀವ್ರ ಅಭಾವ ತಲೆದೋರಿದೆ. ಇದರಿಂದ ಮನೆ, ಇತರೆ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಬಡ - ಮಧ್ಯಮ ವರ್ಗದವರ ಪಾಡು ಹೇಳತೀರದಾಗಿದೆ. ಕೆಲವರು ಅರ್ಧಕ್ಕೆ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿದ್ದಾರೆ.
ಡಿಸೆಂಬರ್ ತಿಂಗಳು ಅಂತ್ಯಗೊಂಡು ಹೊಸ ವರ್ಷದ ಆಗಮನಕ್ಕೆ ದಿನಗಣನೆ ಆರಂಭವಾಗಿದೆ. ಆದಾಗ್ಯೂ ಜಿಲ್ಲಾಡಳಿತದಿಂದ ಮರಳು ವಿತರಣೆ ಪ್ರಕ್ರಿಯೆ ಆರಂಭವಾಗಿಲ್ಲ. ಸದ್ಯದ ಸ್ಥಿತಿಗತಿ ಗಮನಿಸಿದರೆ ಸಾರ್ವಜನಿಕರಿಂದ ಜಿಲ್ಲಾಡಳಿತದಿಂದ ಮರಳು ಲಭ್ಯವಾಗುವ ಸಾಧ್ಯತೆಯೂ ಇಲ್ಲವಾಗಿದೆ. ಮತ್ತೊಂದೆಡೆ, ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಕೆಲವು ಬಡ, ಮಧ್ಯಮ ವರ್ಗದವರು ಜಿಲ್ಲಾಡಳಿತದಿಂದ ವಿತರಣೆಯಾಗುವ ಮರಳು ಪಡೆಯಲು ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ.
 ಒಂದೆಡೆ ಜಿಲ್ಲಾಡಳಿತ ಇಲ್ಲಿಯವರೆಗೂ ಮರಳು ವಿತರಣೆ ಪ್ರಕ್ರಿಯೆ ಆರಂಭಿಸಿಲ್ಲ. ಆದರೆ ಇನ್ನೊಂದೆಡೆ ಜಿಲ್ಲೆಯ ವಿವಿಧೆಡೆ ನದಿ ಪಾತ್ರಗಳಿಂದ ಯದ್ವತದ್ವಾ ಪ್ರಮಾಣದಲ್ಲಿ ಮರಳು ಲೂಟಿಯಾಗುತ್ತಿರುವ ಮಾಹಿತಿಗಳು ಕೇಳಿಬರುತ್ತಿವೆ. ಕೆಲ ದಂಧೆಕೋರರು ರಾತ್ರಿ-ಹಗಲುಗಳ ಪರಿವೆಯೇ ಇಲ್ಲದೆ ನದಿ ಪಾತ್ರಗಳಿಂದ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ, ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಶಿವಮೊಗ್ಗ ನಗರದಲ್ಲಿ 6 ರಿಂದ 8 ಗಜದ ಲೋಡ್ ಮರಳಿಗೆ 35 ರಿಂದ 45 ಸಾವಿರಕ್ಕೆ ಕಾಳಸಂತೆಕೋರರು ಮಾರಾಟ ಮಾಡುತ್ತಿದ್ದಾರೆ. ಕಟ್ಟಡ ನಿರ್ಮಾಣ ಮಾಡುತ್ತಿರುವವರು ಇದೇ ಮೊತ್ತ ಪಾವತಿಸಿ ಮರಳು ಖರೀದಿಸುತ್ತಿದ್ದಾರೆ. ಇಷ್ಟೊಂದು ಮೊತ್ತ ಪಾವತಿಸಿ ಮರಳು ಖರೀದಿಸಲಾಗದವರು ಎಂ ಸ್ಯಾಂಡ್ ಮತ್ತೀತರ ಪರ್ಯಾಯ ಮಾರ್ಗಗಳತ್ತ ಗಮನಹರಿಸುತ್ತಿದ್ದಾರೆ. ಇನ್ನೂ ಕೆಲವರು ಜಿಲ್ಲಾಡಳಿತ ವಿತರಣೆ ಮಾಡುವ ಮರಳಿಗಾಗಿ ಕಾದು ಕುಳಿತಿದ್ದಾರೆ.
  ಮಳೆಗಾಲ ಮುಗಿದು ಚಳಿಗಾಲದ ಅವಧಿ ಪೂರ್ಣಗೊಳ್ಳುವ ಹಂತದಲ್ಲಿದೆ. ಆದಾಗ್ಯೂ ಇಲ್ಲಿಯವರೆಗೂ ಜಿಲ್ಲಾಡಳಿತದಿಂದ ಮರಳು ವಿತರಣೆ ಕಾರ್ಯ ಆರಂಭವಾಗಿಲ್ಲ. ಇನ್ನೊಂದೆಡೆ ಎಂ ಸ್ಯಾಂಡ್‌ನ ಬೆಲೆ ಕೂಡ ದುಬಾರಿಯಾಗಿದೆ. ಕಾಳಸಂತೆಯಲ್ಲಿ ದುಬಾರಿ ದರ ತೆತ್ತು ಮರಳು ಖರೀದಿಸಲು ಬಡವರ ಕೈಯಲ್ಲಿ ಸಾಧ್ಯವಿಲ್ಲ. ಇದರಿಂದ ಮನೆ ನಿರ್ಮಾಣ ಮಾಡುವುದೇ ಕಷ್ಟವಾಗಿದೆ.
ಕಾಳಸಂತೆಯಲ್ಲಿ ಬೇಕಾದಷ್ಟು ಮರಳು ಸಿಗುತ್ತಿದೆ. ನಿಯಮಾನುಸಾರ ಮರಳು ಸಿಗುತ್ತಿಲ್ಲ. ಜಿಲ್ಲಾಡಳಿತದಿಂದ ರಿಯಾಯ್ತಿ ದರದಲ್ಲಿ ಮರಳು ಲಭ್ಯವಾಗುವುದರಿಂದ ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಬಡ, ಮಧ್ಯಮ ವರ್ಗದವರು ಮರಳಿಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಮರಳು ವಿತರಣೆಯಲ್ಲಿ ಸಾಕಷ್ಟು ವಿಳಂಬವಾಗಿದ್ದು, ಇನ್ನಾದರೂ ಜಿಲ್ಲಾಡಳಿತ ನಾಗರಿಕರಿಗೆ ಕಾಲಮಿತಿಯಲ್ಲಿ ಮರಳು ವಿತರಣೆಗೆ ಸೂಕ್ತ ಕ್ರಮಕೈಗೊಳ್ಳಬೇಕಿದೆ.

  

No comments:

Post a Comment