Friday, 2 December 2016



ತೀವ್ರ ಚಳಿ, ಬಿಸಿಲಿನ ಹೊಡೆತಕ್ಕೆ ಮಲೆನಾಡು ತತ್ತರ
ಶಿವಮೊಗ್ಗ : ಕಳೆದ ಒಂದು ವಾರದಿಂದ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಚಳಿಯ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ನಾಗರಿಕರು ಗಡಗಡ ನಡುಗುವಂತೆ ಮಾಡಿದೆ. ಮತ್ತೊಂದೆಡೆ, ಬಿಸಿಲ ಬೇಗೆ ಕೂಡ ಏರುಗತಿಯಲ್ಲಿದ್ದು, ಏದುಸಿರುವ ಬಿಡುವಂತಾಗಿದೆ. ಚಳಿ - ಬಿಸಿಲಿನ ಹೊಡೆತಕ್ಕೆ ಮಲೆನಾಡಿಗರು ತತ್ತರಿಸಿ ಹೋಗುವಂತಾಗಿದ್ದು, ಆತಂಕಿತರನ್ನಾಗಿಸಿದೆ.
 ಸಂಜೆಯಾಗುತ್ತಿದ್ದಂತೆ ತಾಪಮಾನದಲ್ಲಿ ದಿಢೀರ್ ಕುಸಿತವಾಗುತ್ತಿದ್ದು, ತಣ್ಣನೆಯ ವಾತಾವರಣ ಆವರಿಸುತ್ತಿದೆ. ಮಧ್ಯರಾತ್ರಿ ಹಾಗೂ ಮುಂಜಾನೆಯ ವೇಳೆಯಂತೂ ಮನೆಯಿಂದ ಹೊರಬರಲು ಸಾಧ್ಯವಾಗದಷ್ಟು ಚಳಿ ಬಿದ್ದಿರುತ್ತದೆ. ಹಲವೆಡೆ ಚಳಿಯ ಜೊತೆಗೆ ಕುಳಿರ್ಗಾಳಿ ಕೂಡ ಬೀಸುತ್ತಿದ್ದು, ಇದು ನಾಗರಿಕರ ನಿದ್ದೆಗೆಡಿಸಿದೆ.  ನಗರದಲ್ಲಿ ಮುಂಜಾನೆಯ ವೇಳೆ ಕನಿಷ್ಠ ತಾಪಮಾನ 15 ರಿಂದ 18 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ದಾಖಲಾಗುತ್ತಿದೆ. ಕಳೆದ  ನವೆಂಬರ್‌ಗೆ ಹೋಲಿಕೆ ಮಾಡಿದರೆ ಪ್ರಸ್ತುತ ವರ್ಷ ಬೀಳುತ್ತಿರುವ ಚಳಿಯ ಪ್ರಮಾಣ ಅತ್ಯಧಿಕವಾಗಿದೆ. ಮುಂದಿನ ದಿನಗಳಲ್ಲಿ ಚಳಿಯ ಪ್ರಮಾಣದಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆಯ ಮೂಲಗಳು ಹೇಳುತ್ತಿವೆ.
ಮುಂಜಾನೆಯ ವೇಳೆ ಚಳಿಯ ಪ್ರಮಾಣ ಹೆಚ್ಚಿರುವುದರಿಂದ ನಗರದ ವಿವಿಧ ರಸ್ತೆ, ಪಾರ್ಕ್, ಕ್ರೀಡಾಂಗಣಗಳಲ್ಲಿ ಜಾಗಿಂಗ್, ವಾಕಿಂಗ್ ಹೋಗುವವರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಕೆಲವರು ಮುಂಜಾನೆಗೆ ಬದಲಾಗಿ ಸಂಜೆಯ ವೇಳೆ ವಾಯುವಿಹಾರ ನಡೆಸಲಾರಂಭಿಸಿದ್ದಾರೆ. ಮತ್ತೆ ಕೆಲವರು ಮಫ್ಲರ್, ಟೋಪಿ, ಸ್ವೆಟರ್ ತೊಟ್ಟು ಮುಂಜಾನೆಯ ಚಳಿಯಲ್ಲಿಯೇ ಎಂದಿನಂತೆ ವಾಕಿಂಗ್-ಜಾಗಿಂಗ್ ನಡೆಸುತ್ತಿದ್ದಾರೆ.
ಮುಂಜಾನೆಯ ವೇಳೆ ಕೆಲಸಕ್ಕೆ ಹೋಗುವವರ ಸ್ಥಿತಿಯಂತೂ ಹೇಳತೀರದಾಗಿದೆ. ಹಾಗೆಯೇ ವಾಹನ ಚಾಲಕರು ಕೂಡ ಮೈ ನಡುಗಿಸುವ ಚಳಿಯಲ್ಲಿಯೇ ವಾಹನ ಚಲಾಯಿಸುವಂತಾಗಿದೆ. ರಾತ್ರಿ ಹಾಗೂ ಮುಂಜಾನೆಯ ವೇಳೆ ಚಾಲನೆ ಮಾಡಲಾಗದಂತಹ ಸ್ಥಿತಿಯಿದೆ. ತಣ್ಣನೆಯ ಕುಳಿರ್ಗಾಳಿ ಮುಖ, ಮೈಗೆ ರಾಚುತ್ತಿರುತ್ತದೆ. ಎಷ್ಟೆ ಬೆಚ್ಚನೆಯ ಹೊದಿಗೆ ಹೊದ್ದುಕೊಂಡರೂ ಚಳಿಯ ಹೊಡೆತದಿಂದ ಪಾರಾಗಲು ಸಾಧ್ಯವಾಗದಂತಾಗಿದೆ ಎಂದು ಚಾಲಕರು ಚಳಿಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
 ರಾತ್ರಿ ಮತ್ತು ಮುಂಜಾನೆ ಚಳಿಯ ತೀವ್ರತೆ ಹೆಚ್ಚಿದ್ದರೆ, ಮಧ್ಯಾಹ್ನದ ವೇಳೆ ಬಿಸಿಲ ತಾಪ ತೀವ್ರವಾಗಿರುವುದು ಕಂಡುಬರುತ್ತಿದೆ. ನಗರದಲ್ಲಿ ಇತ್ತೀಚೆಗೆ ಮಧ್ಯಾಹ್ನದ ವೇಳೆ ದಾಖಲಾಗುವ ಉಷ್ಣಾಂಶದ ಪ್ರಮಾಣ 35 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕವಾಗಿರುತ್ತದೆ. ಬೇಸಿಗೆಯ ಏಪ್ರಿಲ್, ಮೇ ತಿಂಗಳಲ್ಲಿ ದಾಖಲಾಗುವ ಉಷ್ಣಾಂಶ ಈಗಲೇ ಕಂಡುಬರುತ್ತಿದ್ದು, ಬಿಸಿಲು ನಾಗರಿಕರ ನೆತ್ತಿ ಸುಡುತ್ತಿದೆ. ಮಧ್ಯಾಹ್ನದ ವೇಳೆ ಮನೆಯಿಂದ ಹೊರಬರಲು ಆಗದಷ್ಟು ಬಿಸಿಲು ಬೀಳುತ್ತಿರುತ್ತದೆ. ಬೇಸಿಗೆಯ ಅವಧಿಯಲ್ಲಿಯೂ ಕಂಡುಬರದಷ್ಟು ಬಿಸಿಲು ಬೀಳುತ್ತಿದೆ. ಸಂಜೆ-ಮುಂಜಾನೆ ಚಳಿಯಿಂದ ನಡುಗುವಂತಾಗಿದ್ದರೆ, ಮಧ್ಯಾಹ್ನದ ವೇಳೆ ಸುಡು ಬಿಸಿಲಿಗೆ ಬಸವಳಿಯುವಂತಾಗಿದೆ. 24 ಗಂಟೆಯ ಅವಧಿಯಲ್ಲಿಯೇ ಕಂಡುಬರುತ್ತಿರುವ ತೀವ್ರ ಚಳಿ - ಬಿಸಿಲಿನ ಹವಮಾನದ ವೈಪರೀತ್ಯದಿಂದ ಜನರು ನಾನಾ ರೀತಿಯ ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುವಂತಾಗಿದೆ. ವಯೋವೃದ್ದರು, ಮಕ್ಕಳು, ಅನಾರೋಗ್ಯದಿಂದ ಬಳಲುತ್ತಿರುವವರಂತೂ ಬಿಸಿಲು - ಚಳಿಯ ಹೊಡೆತಕ್ಕೆ ಥರಗುಟ್ಟುವಂತಾಗಿದೆ.
ಒಟ್ಟಾರೆ ತೀವ್ರ ಪ್ರಮಾಣದಲ್ಲಿ ದಾಖಲಾಗುತ್ತಿರುವ ಚಳಿ - ಬಿಸಿಲು ಮಲೆನಾಡಿಗರನ್ನು ಹೈರಾಣಾಗಿಸಿದೆ., ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುವಂತಾಗಿದೆ.
 ------------------------------

No comments:

Post a Comment