Monday, 19 December 2016


ಹೆದ್ದಾರಿ ಮದ್ಯದಂಗಡಿ ಬಂದ್ ಆದೇಶ: 
ರಾಜ್ಯ ಸರ್ಕಾರಗಳಿಗೆ ಮರ್ಮಾಘಾತ 

ಈಗ ಸುಪ್ರೀಂ ಖಡಕ್ಕಾಗಿ ಈ ಆದೇಶ ಜಾರಿಗೊಳಿಸಲು ಸೂಚಿಸಿದೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯ 500 ಮೀಟರ್ ವ್ಯಾಪ್ತಿಯೊಳಗೆ ಇರುವ ಮದ್ಯದಂಗಡಿ ಬಂದ್ ಮಾಡಿಸಿ ಎಂದಿದೆ. ಇದನ್ನು ಜೀರ್ಣಿಸಿಕೊಳ್ಳಲಾಗದ ಸರಕಾರಗಳು ಒದ್ದಾಡಲಾರಂಭಿಸಿವೆ. ಸಾವಿರಾರು ಮದ್ಯದಂಗಡಿಗಳು ರಾಜ್ಯದಲ್ಲಿ 500 ಮೀ ಗಿಂತ ಒಳಗಿವೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ  ಸದ್ಯ ಅಬಕಾರಿ ಇಲಾಖೆ ಬಳಿ ನಿಖರ ಲೆಕ್ಕವಿಲ್ಲ. ಸಮೀಕ್ಷೆ ನಡೆಸಿ ಎಷ್ಟಿವೆ ಎಂದು ಲೆಕ್ಕಾಚಾರಕ್ಕೆ ಮುಂದಾಗಿದೆ.


ಹೆೆದ್ದಾರಿ  ಅಂಚಿನಲ್ಲಿರುವ ಮದ್ಯದಂಗಡಿಗಳನ್ನು  ಮಾರ್ಚ್ 31ರೊಳಗೆ ಬಂದ್ ಮಾಡಬೇಕೆಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಬಹುತೇಕ ಎಲ್ಲ ರಾಜ್ಯ ಸರ್ಕಾರಗಳಿಗೆ ಮರ್ಮಾಘಾತ ನೀಡಿದೆ. ಏಕೆಂದರೆ, ಅಬಕಾರಿಯೇ ರಾಜ್ಯ ಸರ್ಕಾರಗಳಿಗೆ ಆದಾಯದ ಬಹುದೊಡ್ಡ ಮೂಲ. ಹಾಗಾಗಿ ಯಾವ ಸರ್ಕಾರವೂ ಅದನ್ನು ನಿಷೇಧಿಸಿರಲಿಲ್ಲ. ಮದ್ಯದಂಗಡಿಗೆ ಪರವಾನಿಗೆ ನೀಡಬೇಡಿ ಎಂದು ಗ್ರಾಮಸ್ಥರು, ಸುತ್ತಮುತ್ತಲ ವಾಸಿಗಳು ಗೋಗರೆದಿದ್ದರೂ ಆಡಳಿತ ವ್ಯವಸ್ಥೆ  ತಲೆಕೆಡಿಸಿಕೊಂಡಿರಲಿಲ್ಲ. ಈಗ ಸುಪ್ರೀಂ ಕೋರ್ಟು ಸರಿಯಾಗಿ ಚಾಟಿ ಬೀಸಿದೆ. ಈ ಆದೇಶವನ್ನು ಸರಕಾರಗಳು ಎಷ್ಟರಮಟ್ಟಿಗೆ ಚಾಲ್ತಿಗೆ ತರಲಿವೆ ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ. ಆದರೆ ಜಾರಿಗೊಳಿಸದಿದ್ದರೆ ಸುಪ್ರೀಂನ ಕೆಂಗಣ್ಣಿಗೆ ಅಧಿಕಾರಿಗಳು ತುತ್ತಾಗಬೇಕಾಗುತ್ತದೆ.
ಕುಡುಕ ಚಾಲಕರಿಂದ ವಾಹನಗಳ ಅಪಘಾತಗಳು ಹೆಚ್ಚುತ್ತಿವೆ. ಈ ಚಾಲಕರು ಕುಡಿಯುವುದೇ ರಸ್ತೆ ಬದಿಯಲ್ಲಿರುವ ಬಾರ್‌ಗಳಲ್ಲಿ. ಇದನ್ನೇ ನಿಷೇಧಿಸಿದರೆ ಎಷ್ಟೋ ಅಪಘಾತ ತಪ್ಪಿಸಬಹುದು, ಎಷ್ಟೋ ಜೀವ ಉಳಿಸಬಹುದೆನ್ನುವ ಸುಪ್ರೀಂ ನಿರ್ಧಾರ ಒಪ್ಪತಕ್ಕದ್ದು. ಒಂದು ಅಂದಾಜಿನ ಪ್ರಕಾರ, ಪ್ರತಿವರ್ಷ 1.5 ಲಕ್ಷ ಜನ ಹೆದ್ದಾರಿ ಅಪಘಾತದಿಂದ ಸಾಯುತ್ತಿದ್ದಾರೆ. ಇದು ಸರಕಾರಗಳಿಗೆ ಗೊತ್ತಿದ್ದರೂ ಏನೂ ಕ್ರಮ ಜರುಗಿಸಿರಲಿಲ್ಲ. ಜೊತೆಗೆ ಅಪಘಾತದಿಂದ ಸತ್ತ ವ್ಯಕ್ತಿಗೆ ಒಂದು ಅಥವಾ 2 ಲಕ್ಷ ರೂ. ಪರಿಹಾರ ನೀಡಿ ಕೈ ತೊಳೆದುಕೊಳ್ಳುವ ಕೆಲಸವನ್ನು ಮಾತ್ರ ಅಧಿಕಾರಿಗಳು ಅಥವಾ ಸಂಬಂಧಿತ ಮೋಟಾರು ಸಂಸ್ಥೆ ಮಾಡುತ್ತಿದೆ.
ಈಗ ಸುಪ್ರೀಂ ಖಡಕ್ಕಾಗಿ ಈ ಆದೇಶ ಜಾರಿಗೊಳಿಸಲು ಸೂಚಿಸಿದೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯ 500 ಮೀಟರ್ ವ್ಯಾಪ್ತಿಯೊಳಗೆ ಇರುವ ಮದ್ಯದಂಗಡಿ ಬಂದ್ ಮಾಡಿಸಿ ಎಂದಿದೆ. ಇದನ್ನು ಜೀರ್ಣಿಸಿಕೊಳ್ಳಲಾಗದ ಸರಕಾರಗಳು ಒದ್ದಾಡಲಾರಂಭಿಸಿವೆ. ಮದ್ಯದ ಲಾಬಿ ಪ್ರತಿ ರಾಜ್ಯದಲ್ಲೂ ಪ್ರಭಾವಶಾಲಿಯಾಗಿದೆ. ಜೊತೆಗೆ ಮದ್ಯದ ದೊರೆಗಳೇ ಸರಕಾರವನ್ನು ನಿಯಂತ್ರಿಸುವ ಮಟ್ಟದಲ್ಲಿದ್ದಾರೆ. ಇದು ಎಲ್ಲ ಜನಪ್ರತಿನಿಧಿಗಳಿಗೂ ಖುಷಿ ಕೊಡುತ್ತಿದೆ. ಆದರೆ ಮದ್ಯದಿಂದ ಆಗುತ್ತಿರುವ ಹಾನಿ ಬಗ್ಗೆ ಇವುಗಳಿಗೆ ಗೊತ್ತಿದ್ದರೂ ಜಾಣ ಮೌನ ಮೆರೆದಿದ್ದಾರೆ. ಇದು ತಮ್ಮ ಸಾಂವಿಧಾನಿಕ ಹೊಣೆ ಎನ್ನುವುದನ್ನೇ ಮರೆತುಬಿಟ್ಟಿವೆ.
ಒಂದು ಅಂಕಿ ಅಂಶದ ಪ್ರಕಾರ, ಕರ್ನಾಟಕದಲ್ಲಿ ಹೆದ್ದಾರಿಯ 220  ಮೀಟರ್ ವ್ಯಾಪ್ತಿಯಲ್ಲಿ 280 ಮದ್ಯದಂಗಡಿಗಳಿವೆ. ಇವುಗಳನ್ನು ಒಂದೋ ಸ್ಥಳಾಂತರಗೊಳಿಸಬೇಕು, ಇಲ್ಲವೇ ಮುಚ್ಚಿಸಬೇಕು. ಇನ್ನೂ ಒಂದು ಸಂಕಷ್ಟವೆಂದರೆ, ರಾಜ್ಯದಲ್ಲಿ ಅಬಕಾರಿ ಪರವಾನಿಗೆ ನವೀಕರಣ ಜೂನ್‌ನಲ್ಲಿ ಮಾತ್ರ. ಈಗಿರುವ ಮದ್ಯದಂಗಡಿಗಳ ಪರವಾನಿಗೆ ರದ್ದು ಮಾಡುವುದಾದರೆ ಅದು ಜೂನ್  ಮುಗಿದ ನಂತರವೆ. ಇಲ್ಲವಾದಲ್ಲಿ ಅವರೇ ಸ್ಥಳಾಂತರಗೊಳಿಸಿಕೊಳ್ಳಬೇಕು. ಆದರೆ, ಸುಪ್ರೀಂ ಕೋರ್ಟ್ ಮಾರ್ಚ್ ಅಂತ್ಯದವರೆಗೆ ಮಾತ್ರ ಅನುಮತಿ ಕೊಟ್ಟಿದೆ. ಹಾಗಂತ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಕೈಚೆಲ್ಲಿದರೆ ಸುಪ್ರೀಂ ತಪರಾಕಿ ನೀಡುವುದು ಖಚಿತ.
ಸಾವಿರಾರು ಮದ್ಯದಂಗಡಿಗಳು ರಾಜ್ಯದಲ್ಲಿ 500 ಮೀ ಗಿಂತ ಒಳಗಿವೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ  ಸದ್ಯ ಅಬಕಾರಿ ಇಲಾಖೆ ಬಳಿ ನಿಖರ ಲೆಕ್ಕವಿಲ್ಲ. ಸಮೀಕ್ಷೆ ನಡೆಸಿ ಎಷ್ಟಿವೆ ಎಂದು ಲೆಕ್ಕಾಚಾರಕ್ಕೆ ಮುಂದಾಗಿದೆ. ರಾಜ್ಯದಲ್ಲಿ ಹೆದ್ದಾರಿಯಿಂದ 220 ಮೀಟರ್ ಅಂತರದಲ್ಲಿ  ಮದ್ಯದಂಗಡಿ ತೆರೆಯಬಹುದು ಎಂಬ ನಿಯಮ ಈವರೆಗೆ ಇತ್ತು. ಇದರ ಪ್ರಕಾರ ಪರವಾನಿಗೆ ಕೊಡಲಾಗುತ್ತಿತ್ತು. ಈ ಅಂತರದೊಳಗೆ ಇರುವ ಹಲವು ಮದ್ಯದಂಗಡಿಗಳಿಗೆ ತೆರವುಗೊಳಿಸುವಂತೆ ನೋಟೀಸ್ ನೀಡಿದ್ದರೂ ಅವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿವೆ. ಆದರೆ ಈಗ ಅನಿವಾರ್ಯವಾಗಿ ಸ್ಥಳಾಂತರಗೊಳ್ಳಲೇಬೇಕಿದೆ ಎನ್ನುತ್ತಾರೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.
ಈಗ ಎದುರಾಗುವ ದೊಡ್ಡ ಸಮಸ್ಯೆ ಎಂದರೆ ಸ್ಥಳಾಂತರದ್ದು. ಮದ್ಯದಂಗಡಿಗಳು ತಾಲೂಕಿನೊಳಗೆ ಮಾತ್ರ ಸ್ಥಳಾಂತರಗೊಳ್ಳಬಹುದು, ಪಕ್ಕದ ತಾಲೂಕಿಗೆ ಹೋಗುವಂತಿಲ್ಲ.  ಆದರೆ ಹೊಸದಾಗಿ ಹೋಗುವ ಜಾಗಕ್ಕೆ ಸಾರ್ವಜನಿಕರ ವಿರೋಧ ಜಾಸ್ತ್ತಿಯಾಗುವ ಸಂಭವವಿದೆ. ಈಗಾಗಲೆ ಸಾಕಷ್ಟು ಜಾಗೃತಿಯನ್ನು ಸ್ತ್ರೀಶಕ್ತಿ ಮತ್ತು ಹಲವು ಮಹಿಳಾ ಸಂಘಟನೆಗಳು, ಮತ್ತಿತರ ಸಂಘಗಳು ಮೂಡಿಸುತ್ತಿರುವುದರಿಂದ ಸ್ಥಳಾಂತರಕ್ಕೂ ಗಂಡಾಂತರ ಎದುರಾಗುವ ಸಮಸ್ಯೆಯೇ ಹೆಚ್ಚಿದೆ. ಜೊತೆಗೆ ಏಕಾಏಕಿ ಸ್ಥಳಾಂತರ ಸಾಧ್ಯವಿಲ್ಲ ಇದಕ್ಕೆ ಕನಿಷ್ಠ 3 ತಿಂಗಳಾದರೂ ಬೇಕಾಗಬಹುದು.
ಈಗಾಗಲೇ ಬಹಿರಂಗವಾಗಿ ಕಾನೂನು ಉಲ್ಲಂಘಿಸಿ ಅಧಿಕಾರಿಗಳು ಯಾವುದೋ ಪ್ರಭಾವ ಅಥವಾ ಮುಲಾಜಿಗೆ ಒಳಗಾಗಿ ಧಾರ್ಮಿಕ ಸ್ಥಳ, ಶೈಕ್ಷಣಿಕ ವಲಯ, ವಸತಿ ಪ್ರದೇಶಗಳಲ್ಲಿ ಪರವಾನಿಗೆ ಕೊಟ್ಟಿದ್ದಾರೆ. ಇದು ಕಾನೂನುಬಾಹಿರ ಎಂದು ಗೊತ್ತಿದ್ದೂ ಈ ಕೆಲಸ ಮಾಡಿದ್ದಾರೆ. ಈಗ ಸಾರ್ವಜನಿಕರೇ ಮದ್ಯದಂಗಡಿಗಳನ್ನು ತಮ್ಮ ಭಾಗಕ್ಕೆ  ಸ್ಥಳಾಂತರ ಮಾಡದಂತೆ ಹೋರಾಟ ರೂಪಿಸಲು ಮುಂದಾಗಬಹುದು. ಏಕೆಂದರೆ ಸುಪ್ರೀಂನ ಆದೇಶ ಪ್ರತಿ ಎಲ್ಲರ ಕೈಲೂ ಓಡಾಡತೊಡಗಿದೆ. ಮದ್ಯಪ್ರಿಯರಿಗೆ ಅಮಲೇರದಂತೆ ಮಾಡಲು ಹಲವರು ಜಾಗೃತರಾಗುತ್ತಿದ್ದಾರೆ. ಆದರೆ ಅನುಷ್ಠಾನಗೊಳಿಸುವ ಬಗ್ಗೆ ಸರ್ಕಾರಗಳಿಗೆ ಇಚ್ಛಾಶಕ್ತಿ ಬೇಕಿದೆ. ಕಾನೂನನ್ನು ಮೀರುವುದೇ  ಮದ್ಯದಂಗಡಿಗಳ ಗುರಿಯಾಗಿರುವಾಗ ಸುಪ್ರೀಂ ಆದೇಶ ಎಷ್ಟರ ಮಟ್ಟಿಗೆ ಪಾಲನೆಯಾದೀತು ಎನ್ನುವುದನ್ನು ಎಲ್ಲರೂ ಕಾಯುತ್ತಿದ್ದಾರೆ.  
 ......................................

No comments:

Post a Comment