Thursday, 28 July 2016

ಮತ್ತೆ  ಎದ್ದಿದೆ ಮಹದಾಯಿ ಜ್ವಾಲೆ 



ಕನ್ನಡ ನೆಲ, ಜಲ, ಗಡಿ, ಭಾಷೆಗಳ ಸಮಸ್ಯೆಗಳಿಗೆ ಕನ್ನಡಿಗರು ಯಾವ ರೀತಿ ಸ್ಪಂದಿಸಿದ್ದಾರೆ, ಸ್ಪಂದಿಸುತ್ತಿದ್ದಾರೆ ಎನ್ನುವುದನ್ನು ಈ ಹಿಂದಿನಿಂದಲೂ ನಾವು ವಿವಿಧ ಹೋರಾಟಗಳಲ್ಲಿ ಕಾಣುತ್ತಿದ್ದೇವೆ. ಮಹದಾಯಿ ವಿಚಾರದಲ್ಲೂ ಅದೇ ಮತ್ತೆ ಮರುಕಳಿಸಿದೆ. ರಾಜಕೀಯ ಪಕ್ಷಗಳ ಮೇಲಾಟ ಮತ್ತು ರೈತರಲ್ಲಿ ಒಗ್ಗಟ್ಟಿಲ್ಲದ ಕಾರಣ ಈ ವಿವಾದ ಬಗೆಹರಿಯದಂತಾಗಿದೆ. ಜೊತೆಗೆ, ಕರ್ನಾಟಕದಲ್ಲಿ  ಸಮಸ್ಯೆಗಳನ್ನು ತೀಯವಾಗಿ ಕಾಣಲಾಗುತ್ತಿದೆ. ಕಾವೇರಿ ಸಮಸ್ಯೆಯನ್ನು ಮೈಸೂರು ಭಾಗಕ್ಕೆ, ಕೃಷ್ಣೆ ವಿವಾದ ವಿಜಯಪುರ ಭಾಗಕ್ಕೆ, ರೈಲು ವಲಯ ಹುಬ್ಬಳ್ಳಿ ಭಾಗಕ್ಕೆ, ಬೆಳಗಾವಿ ಗಡಿ ವಿವಾದ ಆ ಜಿಲ್ಲೆಗೆ ಮಾತ್ರ ಸಂಬಂಧಿಸಿದ್ದು ಎಂಬ ಭಾವನೆಯನ್ನು ಬಿಡಬೇಕಿದೆ. ವಿಶಾಲ ಕರ್ನಾಟಕ ಎಂಬ ಮನೋಭಾವವಿಲ್ಲದಿರುವುದು ಇದಕ್ಕೆ ಕಾರಣವಾಗಿದೆ.


 ಮಹದಾಯಿ ನದಿಯ ನೀರನ್ನು ಕರ್ನಾಟಕ ಬಳಸಿಕೊಳ್ಳುವುದಕ್ಕೆ ಗೋವಾ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಧೀಕರಣದ ಮೊರೆ ಹೋದ ಹಿನ್ನೆಲೆಯಲ್ಲಿ ನಿನ್ನೆ ಪ್ರಕಟವಾದ ತೀರ್ಪಿನಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಕ್ಕಿಲ್ಲ.  ಇದರಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಹದಾಯಿ ಮತ್ತೆ ಕಿಚ್ಚನ್ನು ಹೊತ್ತಿಸಿದೆ.
ಧಾರವಾಡ, ಬೆಳಗಾವಿ ಮತ್ತು ಗದಗ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಕಳಸಾ ಬಂಡೂರಿ ನಾಲಾ ಯೋಜನೆಯನ್ವಯ ಮಲಪ್ರಭಾ ನದಿಗೆ 7.56 ಟಿಎಂಸಿ ನೀರನ್ನು  ಪಡೆಯಲು ಕರ್ನಾಟಕ ಸರ್ಕಾರ ಮುಂದಾಗಿ ಈ ಯೋಜನೆಯನ್ನು ರೂಪಿಸಿತ್ತು. ಆದರೆ 2002ರಲ್ಲಿ  ಇದು ಹುಟ್ಟಿದಾರಭ್ಯದಿಂದ ವಿವಾದಕ್ಕೆಡೆಯಾದ್ದ್ದು ಮಾತ್ರ ನಿಜಕ್ಕೂ ವಿಷಾದನೀಯ.    ಅಂದು ಎಸ್.ಎಂ. ಕೃಷ್ಣ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಗೋವಾದಲ್ಲಿ ಬಿಜೆಪಿಯ ಮನೋಹರ್ ಪರಿಕ್ಕರ್ (ಈಗಿನ ಕೇಂದ್ರ ರಕ್ಷಣಾ ಸಚಿವ) ಮುಖ್ಯಮಂತ್ರಿಯಾಗಿದ್ದರು.  ಈ ಯೋಜನೆ ಜಾರಿಯಾದರೆ ತಮಗೆ ಇದರಿಂದ ತೊಂದರೆಯಾಗುತ್ತದೆ ಎಂದು ಹೇಳಿ ಗೋವಾ ಕಲ್ಲು ಹಾಕಿತು. ಆಗ ಕೇಂದ್ರದಲ್ಲೂ ಎನ್‌ಡಿಎ ಸರ್ಕಾರ ಇದ್ದುದರಿಂದ ಅದು ಗೋವಾ ಪರ ನಿಂತಿತು. ಇದರಿಂದ ಯೋಜನೆಗೆ ಅದು ಹಣ ಬಿಡುಗಡೆೆ ಮಾಡಲೇ ಇಲ್ಲ.  ಆಗ ಯೋಜನೆ ಸ್ಥಗಿತಗೊಂಡಿತ್ತು.
 ನಂತರ 2006ರಲ್ಲಿ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಯೋಜನೆ ಜಾರಿಗೆ ಮತ್ತೆ ಮುಂದಾದರು. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿ ಎಂಬಲ್ಲಿ ಕಳಸಾ ಬಂಡೂರಿ ಯೋಜನೆಗೆ ಶಿಲಾನ್ಯಾಸ ಮಾಡಿದರು. ಆದರೆ ನ್ಯಾಯಾಧೀಕರಣದಿಂದ ಗೋವಾ ತಡೆಯಾಜ್ಞೆ ತಂದು ಕಾಮಗಾರಿ ನಡೆಯದಂತೆ ಮಾಡಿದ್ದರಿಂದ ಎರಡನೆ ಬಾರಿಯೂ ಜಾರಿಯಾಗಲಿಲ್ಲ. ಇಂದಿಗೂ ಈ ಯೋಜನೆ ಜಾರಿಯಾಗದಂತೆ ಮಾಡುವಲ್ಲಿ ಅದು ಯಶಸ್ವಿಯಾಗಿದೆ.
ಮಹದಾಯಿ ಅರ್ಥಾತ್ ಮಾಂಡೊವಿ ನದಿ ಗೋವಾದ ಜೀವನದಿಯಾಗಿದೆ. ಇದು ಹುಟ್ಟುವುದು ಪಶ್ಚಿಮ ಘಟ್ಟದ ಮಡಿಲಲ್ಲಿರುವ ಬೆಳಗಾವಿ ತಾಲೂಕಿನ ಭೀಮಘಡ್ ಎನ್ನುವಲ್ಲಿ. ಅಲ್ಲಿಂದ  ನದಿಯು ಉತ್ತರ ಕನ್ನಡ ಜಿಲ್ಲೆಯ ಜೊಯಡಾ, ಕ್ಯಾಸಲ್‌ರಾಕ್ ಮೂಲಕ ಗೋವಾ ಸೇರುತ್ತದೆ. ದೂದ್‌ಸಾಗರ್ ಜಲಪಾತ ಇದೇ ನದಿಯಿಂದಾದದ್ದು. ಅಂದರೆ ಕರ್ನಾಟಕದಲ್ಲಿ ಹುಟ್ಟಿ ಸುಮಾರು 29 ಕಿ. ಮೀ ಹರಿದು, ಗೋವಾ ಪ್ರವೇಶಿಸಿ ಅಲ್ಲಿಯೂ 52 ಕಿ. ಮೀ ಹರಿಯುತ್ತದೆ.
ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ ಬೆಳಗಾವಿ, ಧಾರವಾಡ ಮತ್ತು ಗದಗ್ ಜಿಲ್ಲೆಗಳಲಿ ಕುಡಿಯುವ ನೀರಿನ ಅಭಾವ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಈ ಯೋಜನೆಯನ್ನು ಜಾರಿಗೊಳಿಸಬೇಕೆಂದು ಹಠ ಹಿಡಿದಿದ್ದಾರೆ. ಆದರೆ ನ್ಯಾಯಾಧಿಕರಣದಲ್ಲಿ ಪ್ರಕರಣ ಇರುವುದರಿಂದ ಸರ್ಕಾರ ಏನೂ ಮಾಡದಂತಾಗಿದೆ. ಈ ಮಧ್ಯೆ ನಿನ್ನೆ ಬಂದ ತೀರ್ಪು ಸಹ ಕರ್ನಾಟಕಕ್ಕೆ ಮಾರಕವಾಗಿರುವದುರಿಂದ ರೈತರು ಮತ್ತು ಪ್ರತಿಭಟನೆಗಿಳಿದಿದ್ದಾರೆ.
ಕಳೆದ ವರ್ಷದಿಂದ ಈ ಬಗ್ಗೆ ಹೋರಾಟ ಮತ್ತಷ್ಟು ಹೆಚ್ಚಿದೆ. ಸುಮಾರು 265 ದಿನದಿಂದ ಈ ಸಂಬಂಧ ನಿರಂತರ ಪ್ರತಿಭಟನೆ, ಧರಣಿ ನಡೆಯುತ್ತಿದೆ. ಜೊತೆಗೆ ಕರ್ನಾಟಕ ಬಂದ್‌ಗೂ ಕಳೆದ ಸೆಪ್ಟೆಂಬರ್‌ನಲ್ಲಿ ಕರೆಕೊಡಲಾಗಿತ್ತು. ಆದರೆ ರಾಜಕೀಯ ಪಕ್ಷಗಳ ಮೇಲಾಟ ಮತ್ತು ರೈತರಲ್ಲಿ ಒಗ್ಗಟ್ಟಿಲ್ಲದ ಕಾರಣ ಈ ವಿವಾದ ಬಗೆಹರಿಯದಂತಾಗಿದೆ. ಗೋವಾ ಮತ್ತು ಕರ್ನಟಕದಲ್ಲಿ ಬೇರೆಬೇರೆ ಪಕ್ಷಗಳು ಅಧಿಕಾರದಲ್ಲಿರುವುದರಿಂದ ವಿವಾದ ಬಗೆಹರಿಯುತ್ತಿಲ್ಲ. ಕೇಂದ್ರದ ಮಧ್ಯಪ್ರವೇಶವೂ ಇದಕ್ಕೆ ಅನಿವಾರ್ಯವಾಗಿತ್ತು. ಆದರೆ ಅದೂ ಸಹ ಏಕೋ ಈ ಕಾಮಗಾರಿಗೆ ಪೂರಕವಾದ ಆಸಕ್ತಿಯನ್ನು ತೋರುತ್ತಿಲ್ಲ. ಇದರಿಂದ ವಿವಾದ ಕಗ್ಗಂಟಾಗಿದ್ದು ಜನ ಮತ್ತೆ ಪ್ರತಿಭಟನೆ, ರಸ್ತೆ ತಡೆ, ಬಂದ್‌ಗೆ ಮುಂದಾಗುವಂತಾಗಿದೆ.
   ಕನ್ನಡಿಗರ ದೌರ್ಬಲ್ಯ:
      ಎಲ್ಲ ಸಮಸ್ಯೆಗಳಿಗೂ ಕನ್ನಡಿಗರಲ್ಲಿ ಒಗ್ಗಟ್ಟಿಲ್ಲದಿರುವುದು ಕಾರಣ ಎನ್ನುವುದು ಕಟುಸತ್ಯ.. ನಮ್ಮ ವೈಯಕ್ತಿಕಕ್ಕಾದರೆ  ಅನ್ಯಾಯದ ವಿರುದ್ದ ಎಷ್ಟೊಂದು ಹೋರಾಟ ಪ್ರದರ್ಶಿಸುತ್ತೇವೆ. ರಾಜ್ಯದ ವಿಚಾರದಲ್ಲಿ ಅಷ್ಟೇ ಹಿಂದೆ ಬೀಳುತ್ತೇವೆ. ಈ ಸಂದರ್ಭದಲ್ಲಿ ‘‘ ಪ್ರತಿಭಟನೆ, ಹೋರಾಟ, ನಮ್ಮ ಜನ್ಮಸಿದ್ಧ ಹಕ್ಕು, ಅನ್ಯಾಯವನ್ನು ಪ್ರತಿಭಟಿಸದೆ , ಪ್ರಶ್ನಿಸದೆ ಹೋದರೆ ಯಾವ ಕೆಲಸಗಳೂ ನಡೆಯುವುದಿಲ್ಲ. ಪ್ರಶ್ನಿಸುವುದು, ಪ್ರತಿಭಟಿಸುವುದು ನಮ್ಮ ಮೂಲಭೂತ ಹಕ್ಕು ಎಂಬ ಬುದ್ಧ ವಾಣಿ ಅತ್ಯಂತ ಸಕಾಲಿಕವಾಗಿ ಕಾಣುತ್ತದೆ.
ಒಂದೆಡೆ, ಹರಿದು ಹಂಚಿ ಹೋಗಿದ್ದ ಕನ್ನಡದ ಭಾಗಗಳನ್ನು ಏಕೀಕರಣಗೊಳಿಸಿದ ನಂತರ ಪ್ರತ್ಯೇಕ ರಾಜ್ಯಗಳಾಗಬೇಕೆಂದು ಕೂಗೇಳುತ್ತಿದೆ. ಇನ್ನೊಂದೆಡೆ, ಕಾವೇರಿ ನೀರಿಗಾಗಿ ಚಳವಳಿ ನಡೆಯುವುದು ಬಹುತೇಕ ಬೆಂಗಳೂರು, ಮಂಡ್ಯ, ಮೈಸೂರುಗಳಲ್ಲಿ ಮಾತ್ರ, ಉಳಿದ ಪ್ರದೇಶದ ಜನ ಈ ಸಮಸ್ಯೆ ನಮ್ಮದಲ್ಲ ಎಂದು ಉಳಿದುಬಿಡುತ್ತಾರೆ. ಮತ್ತೊಂದೆಡೆ, ಹುಬ್ಬಳ್ಳಿ ರೈಲ್ವೆ ವಲಯ ರಚನೆಯ ಹೋರಾಟದಲ್ಲಿ ಬೆಂಗಳೂರು, ಮೈಸೂರು ಭಾಗದವರು ಸುಮ್ಮನಾಗುತ್ತಾರೆ. ಮಗದೊಂದೆಡೆ, ಬಚಾವತ್ ತೀರ್ಪಿನ ಪ್ರಕಾರ, ಕೃಷ್ಣಾ ಕೊಳ್ಳದಲ್ಲಿ ನಮ್ಮ ರಾಜ್ಯಕ್ಕೆ ಹಂಚಿರುವ ನೀರನ್ನು ಬಳಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಇದೇ ನೆಪ ಒಡ್ಡಿ ನೀರು ಹಂಚಿಕೆಯನ್ನು ನಿಲ್ಲಿಸಿದರೂ ಆಶ್ಚರ್ಯವೇನಿಲ್ಲ.
ನಮ್ಮ ಗಡಿ, ಭಾಷೆ, ನೆಲ, ಜಲದ ರಕ್ಷಣೆ ಕೇವಲ ಕರ್ನಾಟಕ ಒಂದು ಭಾಗಕ್ಕೆ ಸೀಮಿತವಲ್ಲ. ಅದು ಸಮಗ್ರ ಕರ್ನಾಟಕದ ಜನತೆಗೆ ಸಂಬಂಧಿಸಿದ್ದು ಎನ್ನುವುದನ್ನು ತಿಳಿದುಕೊಳ್ಳುವ ಅಗತ್ಯವಿದೆ. ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಮಸ್ತ ಕನ್ನಡಿಗರು ಒಗ್ಗಟ್ಟಿನಿಂದ ಚಿಂತಿಸುವ ಅಗತ್ಯವಿದೆ. ಗಡಿ, ಭಾಷೆ ಸಮಸ್ಯೆಗಳನ್ನು ಪರಿಹರಿಸುವುದೇನೋ ಸರ್ಕಾರದ ಕರ್ತವ್ಯವಾದರೂ, ನೀರಿನ ಪ್ರಶ್ನೆ ಬಂದಾಗ ರಾಜಕಾರಣಿಗಳ ಅಗತ್ಯವಿಲ್ಲ. ಈ ಪ್ರಶ್ನೆ ಬಗೆಹರಿಸಿಕೊಳ್ಳಬೇಕಾದುದು ರೈತರು ಮತ್ತು ನೀರಾವರಿ ತಜ್ಞರು ಮಾತ್ರ.
ಹೀಗಾಗಿ ಕನ್ನಡ ನಾಡಿನ ರೈತರೆಲ್ಲ ಒಗ್ಗಟ್ಟಾಗಬೇಕಿದೆ. ನಮ್ಮ ಹೋರಾಟದ ಮೂಲಕ ನಮ್ಮ ದೌರ್ಬಲ್ಯವನ್ನು ಕೊನೆಗಾಣಿಸಬೇಕಾಗಿದೆ. ರಾಜಕೀಯ ಪಕ್ಷಗಳು ತಮ್ಮ ಮೂಗಿನ ನೇರಕ್ಕೆ, ತಮಗೆ ಸಾಧಕವಾಗುವ ರೀತಿಯಲ್ಲಿ ನಡೆದುಕೊಳ್ಳುವುದು ಸಹಜವೇ. ಆದರೆ ಕರ್ನಾಟಕದ ಜನ ತಮ್ಮ ನೆಲ, ಜಲ, ಗಡಿ, ಭಾಷೆ ಎಲ್ಲದರ ಕುರಿತು ಚಿಂತಿಸುವವರಾಗಬೇಕಿದೆ.
........................................  

No comments:

Post a Comment