Tuesday, 26 July 2016

ಬೇಡಿಕೆ ಈಡೇರಿಕೆಗೆ ಬಸ್ ಬಂದ್ ಪರಿಹಾರವೇ?


* ನೌಕರರ ಬೇಡಿಕೆಗನುಗುಣವಾಗಿ ಶೇ. 12.5ರಷ್ಟು ವೇತನ ಏರಿಕೆಗೆ ಸರ್ಕಾರ ಚಿಂತನೆ.
* 2000ರಲ್ಲಿ ನೌಕರರಿಗೆ ಶೇ 11ರಷ್ಟು, 2004ರಲ್ಲಿ ಶೇ 5ರಷ್ಟು, 2008ರಲ್ಲಿ ಶೇ. 6ರಷ್ಟು, 2012ರಲ್ಲಿ ಶೇ 10ರಷ್ಟು ವೇತನ ಏರಿಕೆಯಾಗಿದೆ. 
* ಕೆಎಸ್ಸಾರ್ಟಿಸಿ ಮುಷ್ಕರದಿಂದ ಒಂದು ದಿನಕ್ಕೆ ನಷ್ಟವಾಗುತ್ತಿರುವುದುದ 17 ಕೋಟಿ ರೂ. ಆದಾಯ
* ಬೇಡಿಕೆ ಈಡೇರಿಕೆಗೆ ಒತ್ತಡ, ಹಠಮಾರಿತನ ಸಲ್ಲದು, ಮಾತುಕತೆಯೊಂದೇ ದಾರಿ.ಮುಷ್ಕರವೇ ಅಂತಿಮ ಮಾರ್ಗವಲ್ಲ.
* 19 ಜಿಲ್ಲೆಗಳಲ್ಲಿ ಶಾಲಾ- ಕಾಲೇಜುಗಳಿಗೆ ಎರಡನೆಯ ದಿನವಾದ ಇಂದೂ ರಜ


ಇತ್ತೀಚೆಗೆ ವಿವಿಧ ಇಲಾಖೆಗಳ ನೌಕರರ ಮುಷ್ಕರ ಅಧಿಕವಾಗುತ್ತಿದೆ. ಮುಷ್ಕರದ ಜೊತೆಗೆ ಸಾರ್ವಜನಿಕ ಜನಜೀವನಕ್ಕೂ ತೊಂದರೆಯಾಗುತ್ತಿದೆ. ಎಲ್ಲ ನೌಕರರದ್ದೂ ಒಂದೇ ಬೇಡಿಕೆ. ಅದೆಂದರೆ ವೇತನ ಪರಿಷ್ಕರಣೆ. ನೌಕರರ ವೇತನ ಕಾಲಕಾಲಕ್ಕೆ ಪರಿಷ್ಕರಣೆಯಾಗುತ್ತಿದೆ. ಆದರೂ ತಾವು ಹೇಳಿದಷ್ಟು ಪ್ರಮಾಣದಲ್ಲೇ ವೇತನ ಏರಿಕೆಯಾಗಬೇಕು ಎನ್ನುತ್ತಾ ಜನಸಾಮಾನ್ಯರಿಗೆ ತೊಂದರೆಯಾಗುವಂತೆ ಪ್ರತಿಭಟನೆ, ಮುಷ್ಕರ ಹೂಡುತ್ತಿರುವುದು ಸರಿಯಲ್ಲ.
ಕೆಎಸ್ಸಾರ್ಟಿಸಿ ನೌಕರರು ನಿನ್ನೆಯಿಂದ  ಮುಷ್ಕರ ಆರಂಭಿಸಿದ್ದಾರೆ. ಕೆಎಸ್ಸಾರ್ಟಿಸಿ ಸೇವೆಗೆ ಸಂಬಂಧಿಸಿದ್ದು. ಇಲ್ಲಿ ಜನರೇ ಜೀವಾಳ. ಹೀಗಿರುವಾಗ ಲಕ್ಷಾಂತರ ಜನರಿಗೆ ತೊಂದರೆ ಕೊಟ್ಟು  ಅನಿರ್ದಿಷ್ಟ ಮುಷ್ಕರಕ್ಕೆ ಕರೆಕೊಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಅವಶ್ಯಕ ವಸ್ತುಗಳ ಕಾಯ್ದೆ (ಎಸ್ಮಾ) ವ್ಯಾಪ್ತಿಯಲ್ಲಿ ಸಾರಿಗೆ ಇಲಾಖೆ ಸೇರುತ್ತದೆ. ಆದ್ದರಿಂದ ಮನಬಂದಂತೆ ಇದರ ನೌಕರರು ಮುಷ್ಕರ ಹೂಡುವಂತಿಲ್ಲ.
ಹೀಗೆ ವಿವಿಧ ಇಲಾಖೆಯವರು ತಮ್ಮ ಬೇಡಿಕೆ ಈಡೇರಿಕೆಗೆ ಸಾರ್ವಜನಿಕರಿಗೆ ತೊಂದರೆ ಕೊಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಈಗ ಪ್ರತಿಯೊಬ್ಬರ ಪ್ರಶ್ನೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರತಿಭಟಿಸಲು ಅಥವಾ ಮುಷ್ಕರ ಹೂಡಲು ಬರುವುದಿಲ್ಲವೇ, ಪ್ರತಿಭಟನೆಗೆ ಸಾಕಷ್ಟು ಮಾರ್ಗಗಳಿದ್ದರೂ ಜನಸಾಮಾನ್ಯರಿಗೆ ತೊಂದರೆ ಕೊಟ್ಟರೆ ಮಾತ್ರ ಸರ್ಕಾರ ಗಮನಹರಿಸುತ್ತದೆ ಅಥವಾ ತಮ್ಮ ಮುಷ್ಕರಕ್ಕೆ ಪ್ರಚಾರ ಸಿಕ್ಕು ಬೇಗ ಇತ್ಯರ್ಥವಾಗುತ್ತದೆ ಎನ್ನುವ ಭಾವನೆಯೂ ಪ್ರತಿಭಟನೆ ಹೂಡುವವರಲ್ಲಿದೆಯೇ. ಕಾರ್ಮಿಕ ಸಂಘಟನೆಗಳ ಅಡಿ ಕೆಎಸ್ಸಾರ್ಟಿಸಿ ನೌಕರರು ಬರುವುದರಿಂದ ಇಲ್ಲಿ ಸಂಘಟನೆಗಳದ್ದೇ ಆಟ. ಅವರ ಹಠವೇ ಮುಖ್ಯ. ಒಂದು ದಿನ ಬಸ್ ಬಂದ್ ಮಾಡಿದರೆ ಅದರಿಂದಾಗುವ ಪರಿಣಾಮಗಳ ಬಗ್ಗೆ ಬಂದ್ ಕರೆಕೊಡುವವರು ಮೊದಲು ಯೋಚಿಸಬೇಕು. ಜೊತೆಗೆ ತಮಗೆ ಅನ್ನ ಕೊಡುವ ದುಡಿಮೆಗೆ ತಾವೇ ಕಲ್ಲು ಹಾಕಿಕೊಳ್ಳುವುದರ ಬಗ್ಗೆಯೂ ಯೋಚಿಸಬೇಕು. ಇದೇ ರೀತಿ ಮನಬಂದಂತೆ ಮುಷ್ಕರ ಹೂಡಿದ್ದರ ಪರಿಣಾಮವಾಗಿ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳು ಬಾಗಿಲು ಹಾಕಿರುವ ಉದಾಹರಣೆ ನಮ್ಮ ಕಣ್ಮುಂದೆ ಇರುವಾಗ ಮುಂದೆ ತಮಗೂ ಇದೇ ಗತಿ ಎದುರಾಗಬಹುದು (ಖಾಸಗೀಕರಣವಾಗಬಹುದು) ಎನ್ನುವುದರ ಅರಿವೂ, ಆತಂಕವೂ ಇರಬೇಕು.
ಕೆಎಸ್ಸಾರ್ಟಿಸಿ ನೌಕರರಿಗೆ ವೇತನ ಆಯೋಗದ ಶಿಫಾರಸುಗಳು ಅನ್ವಯಿಸುವುದಿಲ್ಲ. ಸರ್ಕಾರವೇ ಕಾಲಕಾಲಕ್ಕೆ ವೇತನ ನಿಗದಿ ಮಾಡುತ್ತದೆ. ಈಗ ಈ ನೌಕರರು ಶೇ. 30ರಷ್ಟು ವೇತನ ಏರಿಸಬೇಕೆಂದು ಹಠ ಹಿಡಿದಿದ್ದಾರೆ. ಆದರೆ ಮಾತುಕತೆ ವೇಳೆ ಸರ್ಕಾರ ಶೇ. 10ರಷ್ಟು ಮಾತ್ರ ಏರಿಸಲು ಸಿದ್ಧವಿರುವುದಾಗಿ ಹೇಳಿದೆ. ಮೊಲದೇ ಸತತ ನಷ್ಟದಲ್ಲಿರುವ ನಿಗಮ ಇದು.  ಶೇ. 10ರಷ್ಟು ಏರಿಸಿದರೂ  4650 ಕೋಟಿ ರೂ. ಸರಕಾರದ ಬೊಕ್ಕಸಕ್ಕೆ ಅಧಿಕ ಖರ್ಚು ತಗಲುತ್ತದೆ. ಇದಕ್ಕೊಪ್ಪದ ಕಾರ್ಮಿಕ ಸಂಘಟನೆಗಳ ಸದಸ್ಯರು ಮುಷ್ಕರ ಆರಂಭಿಸಿದ್ದಾರೆ. 2012ರ ಸೆಪ್ಟೆಂಬರ್‌ನಲ್ಲಿ ನಿಗಮದ ನೌಕರರ ವೇತನವನ್ನು ಸರ್ಕಾರ ಶೇ. 15ರಷ್ಟು ಏರಿಸಿತ್ತು. ಇದಕ್ಕೆ ಕನಿಷ್ಠ 4 ವರ್ಷವಾದರೂ ಆದ ನಂತರ ಮತ್ತೆ ವೇತನ ಏರಿಕೆ ಅನ್ವಯವಾಗುತ್ತದೆ. ಆದರೆ ನೌಕರರು ಯಾರದ್ದೊ ಚಿತಾವಣೆಗೆ ಒಳಗಾದವರಂತೆ ಇನ್ನೂ 2 ತಿಂಗಳು ಬಾಕಿ ಇರುವಂತೆಯೇ ಮುಷ್ಕರ ಆರಂಭಿಸಿದ್ದಾರೆ.
ನೌಕರರ ವೇತನ ಕಡಿಮೆ ಇರಬಹುದು ನಿಜ, ಆದರೆ ಮರ್ಯಾದೆಯಿಂದ ಬದುಕಲಿಕ್ಕೆ ಏನೂ ಇದರಿಂದ ತೊಂದರೆ ಇಲ್ಲ. ನಮ್ಮ ದೇಶದಲ್ಲಿ ಇದಕ್ಕೂ ಕಡಿಮೆ ಸಂಬಳದಲ್ಲಿ ದುಡಿಯುವವರಿದ್ದಾರೆ ಎನ್ನುವುದನ್ನು ಗಮನಿಸಬೇಕು. ನಮಗಿಂತ ಮೇಲಿನವರನ್ನು ನೋಡಿ ಅದರಂತೆ ತಮಗೂ ಬೇಕೆನ್ನುವವರೇ ಜಾಸ್ತಿ ಇದ್ದಾರೆಯೇ ವಿನಾ ತಮಗಿಂತ ಕೆಳಗೆ ಇದ್ದು ಕನಿಷ್ಠ ವೇತನವೂ ಇಲ್ಲದೆ ಬದುಕುತ್ತಿರುವವರನ್ನು ಕಂಡು ಮರುಗುವವರಿಲ್ಲ. ಇದೇ ನಮ್ಮ ಸಮಾಜದ ದೊಡ್ಡ ದುರಂತ.
ಸಾರಿಗೆ ನೌಕರರ ಮುಷ್ಕರದ ಬಗ್ಗೆ ಸರ್ಕಾರ ಮತ್ತು ಕಾರ್ಮಿಕ ಸಂಗಟನೆಗಳ ಮಾತುಕತೆ ವಿಫಲವಾಗಿದೆ. ಮತ್ತೆ ಮಾತುಕತೆ ನಡೆಯಲಿದೆ. ಆದರ  ಇಬ್ಬರೂ ತಮ್ಮ ಹಠಮಾರಿ ಧೋರನೆಯನ್ನು ಕೈಬಿಡಬೇಕಿದೆ. ರಾಜ್ಯದ ಶೇ. 60ರಷ್ಟು ಆದಾಯ ಸರ್ಕಾರಿ ನೌಕರರ ಆದಾಯಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಅಭಿವೃದ್ಧಿ ಎನ್ನುವುದು ಕನಸಿನ ಮಾತಾಗುತ್ತಿದೆ. ಇನ್ನು ಮುಂದೆ ಹೀಗೆ ಪ್ರತಿ ನೌಕರರೂ ಇದೇ ಮಾರ್ಗದಲ್ಲಿ ಸಾಗಿದರೆ  ಪರಿಸ್ಥಿತಿ ಏನಾಗಬಹುದು  ಎನ್ನುವುದನ್ನು ಎಲ್ಲರೂ ರಾಜಕೀಯರಹಿತವಾಗಿ ಯೋಚಿಸಬೇಕಿದೆ. ನೌಕರರು ಮಷ್ಕರ ಮಾಡಬಾರದು, ವೇತನ ಏರಿಕೆ ಕೇಳಬಾರದು ಎನ್ನುವುದು ಇದರ ಅರ್ಥವಲ್ಲ. ಮುಷ್ಕರಕ್ಕೂ ಮಾರ್ಗವಿದೆ. ಆದರೆ ಜನಸಾಮಾನ್ಯರಿಗೆ ತೊಂದರೆ ಮಾಡಿ ಅಲ್ಲ. ತೊಂದರೆ ಆಗದಂತೆ ಮುಷ್ಕರ ಮಡಬೇಕಿದೆ. ನಿಗದಿತಕ್ಕಿಂತ ಒಂದು ಗಂಟೆ ಹೆಚ್ಚು ಕೆಲಸ ಮಾಡದ ಇವರು ಸಕಲ ಸೌಲಭ್ಯಗಳನ್ನೆಲ್ಲ ಬಯಸುತ್ತಾರೆ. ಪ್ರತಿಭಟನಾರ್ಥವಾಗಿ ಹೆಚ್ಚು ಕೆಲಸ ಮಾಡಲಿ, ಪಾಳಿಯಂತೆ ಮುಷ್ಕರದಲ್ಲಿ ಭಾಗವಹಿಸಲಿ,  ಹೀಗೆ ಹೊಸ ಮಾರ್ಗದ ಮೂಲಕ ಹೋರಾಡಲಿ. ಇದನ್ನು ಬಿಟ್ಟು ಬಸ್ ಬಂದ್ ಮಾಡಿದರ ಸಾರಿಗೆ ನಿಗಮಕ್ಕೆ ನಷ್ಟ. ನಿಗಮಕ್ಕೆ ನಷ್ಟವಾದರೆ ತಮಗೇ ನಷ್ಟ ಎನ್ನುವುದನ್ನು ಪ್ರತಿಭಟಿಸುತ್ತಿರುವ ಪ್ರತಿಯೊಬ್ಬ ನೌಕರ ಅರಿಯಬೇಕಿದೆ.


No comments:

Post a Comment