Tuesday, 19 July 2016

ನ್ಯಾಯಪಾಲನೆಗೆ ಇಷ್ಟು ದಿನ ಬೇಕಿತ್ತೆ?
 ಜಾರ್ಜ್ ರಾಜಿನಾಮೆ


ಚಿಕ್ಕಮಗಳೂರು ಡಿಎಸ್ಪಿಯಾಗಿದ್ದ ಕಲ್ಲಪ್ಪ ಹಂಡೀಭಾಗ 10 ಲಕ್ಷ ರೂ ಪಡೆದಿದ್ದಾರೆಂಬ ಆರೋಪದಿಂದ ಮನನೊಂದು ಮಾವನ ಮನೆಯಲ್ಲಿ ನೇಣಿಗೆ ಶರಣಾದರು. ಈ ಬಗ್ಗೆ ಯಾವ ಪಕ್ಷದವರೂ ತಲೆಕೆಡಿಸಿಕೊಳ್ಳಲಿಲ್ಲ. ಸಿಓಡಿ ತನಿಖೆ ನಡೆಯುತ್ತಿದೆ. ಆದರೆ ಗಣಪತಿ ಪ್ರಕರಣಕ್ಕೆ ಮಾತ್ರ ಬೇಡದಷ್ಟು ಪ್ರಚಾರ. ಎಂತಹ ವೈಚಿತ್ರ್ಯ ನೋಡಿ. ಕಲ್ಲಪ್ಪ ಅತಿ ಬಡಕುಟುಂಬದ ವ್ಯಕ್ತಿ. ಗಣಪತಿ ಅಂತಹವರಲ್ಲ. ಕೊಡಗಿನಲ್ಲಿ ಬಿಜೆಪಿ ನೆಲೆಯಿದೆ. ಅದನ್ನು ಗಟ್ಟಿಮಾಡಿಕೊಳುವ ದೃಷ್ಟಿಯಿಂದ ಬಿಜೆಪಿಯವರು ಹೋರಾಟ ಮಾಡಿದರು. ಆದರೆ ಕಲ್ಲಪ್ಪ ಪ್ರಕರಣದಲ್ಲಿ ಬಿಜೆಪಿ ತುಟಿಬಿಚ್ಚಲಿಲ್ಲ.  ಈ ಪ್ರಕರಣದಲ್ಲಿ ಮುಖ್ಯ ಆರೋಪಿಗಳೆಲ್ಲ ಹಿಂದೂ ಸಂಘಟನೆಯವರು. ಜೊತೆಗೆ ಇದರಲ್ಲಿ ಅಲ್ಲಿನ ಮಾಜಿ ಸಚಿವರೊಬ್ಬರ ಪಾತ್ರವೂ ಇದೆ ಎನ್ನುವ ಮಾಹಿತಿ ಇದೆ. ಇದನ್ನು ಮುಚ್ಚಿಕೊಳ್ಳಲು ಬಿಜೆಪಿ ಗಣಪತಿ ಪ್ರಕರಣವನ್ನು ಅತಿರಂಜಿತವಾಗಿ ಬಿಂಬಿಸಿದ್ದು ಸುಳ್ಳಲ್ಲ. ಟಿವಿ ಚಾನೆಲ್‌ನವರೂ ಸಹ ಈ ಘಟನೆಯನ್ನು ವೈಭವೀಕರಿಸಲಿಲ್ಲ.


ಮಂಗಳೂರಿನಲ್ಲಿ ಡಿವೈಎಸ್‌ಪಿಯಾಗಿದ್ದ ಎಂ. ಕೆ. ಗಣಪತಿ ಆತ್ಮಹತ್ಯೆ ಮಾಡಿಕೊಂಡು 12 ದಿನವಾದ ನಂತರ ಕೊನೆಗೂ ಸಚಿವ ಕೆ. ಜೆ. ಜಾರ್ಜ್ ರಾಜೀನಾಮೆ ಸಲ್ಲಿಸಿದ್ದಾರೆ. ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನಗೇನಾದರೂ ಸಂಭವಿಸಿದಲ್ಲಿ ಅದಕ್ಕೆ ಮಾಜಿ ಗೃಹ ಸಚಿವ ಕೆ. ಜೆ. ಜಾರ್ಜ್  ಮತ್ತು ಗುಪ್ತಚರ ವಿಭಾಗ ಡಿಜಿಪಿ ಎ. ಎಂ. ಪ್ರಸಾದ್ ಹಾಗೂ ಲೋಕಾಯುಕ್ತ ಡಿಜಿಪಿ ಪ್ರಣಬ್ ಮೊಹಂತಿ ಕಾರಣರೆಂದು ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಗಣಪತಿಗೆ ಇವರೇ ಕಿರುಕುಳ ನೀಡಿದ್ದರು. ಇದನ್ನು  ಸಹಿಸಿಕೊಳ್ಳಲಾಗದೆ ಗಣಪತಿ ಆತ್ಮಹತ್ಯೆ ಮಾಡಿಕೊಂಡರೆನ್ನವುದು, ನಂತರ ನಡೆದ ಹೋರಾಟ, ವಿಧಾಸಭೆ ಕಲಾಪದಲ್ಲಿ ಪ್ರತಿಭಟನೆ... ಇವೆಲ್ಲ ಈಗ ಇತಿಹಾಸ.
ಗಣಪತಿ ಸಾವಿನ ಹಿನ್ನೆಲೆಯಲ್ಲಿ ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ 12 ದಿನದಿಂದಲೂ ಒಂದಲ್ಲ ಒಂದು ರೀತಿಯ ಹೋರಾಟ ನಡೆದೇ ಇತ್ತು.  ಕೊಡಗು ಸಹಿತ ಕೆಲವೆಡೆ ಬಂದ್ ಆಚರಿಸಲಾಯಿತು. ಗಣಪತಿ ಕುಟುಂಬಸ್ಥರು ಮಡಿಕೇರಿ ನಗರ ಠಾಣೆಗೆ ದೂರು ನೀಡಿದ್ದರೂ ಅವರು ಸ್ವೀಕರಿಸಿರಲಿಲ್ಲ ಎನ್ನುವ ಆರೋಪ ಇತ್ತು. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ಮಡಿಕೇರಿ  ಜೆಎಂಎಫ್‌ಸಿ ನ್ಯಾಯಾಲಯಕ್ಕೆಗಣಪತಿ ಅವರ ಪುತ್ರ ನೇಹಾಲ್ ವಕಿಲರ ಮೂಲಕ  ಅರ್ಜಿ ಸಲ್ಲಿಸಿ, ಜಾರ್ಜ್ ಮತ್ತು  ಅಧಿಕಾರಿಗಳಿಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿ ಸೂಚಿಸಬೇಕೆಂದು ಕೋರಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ನಡೆದ ವಿಚಾರಣೆಯಲ್ಲಿ ಕೋರ್ಟ್ ನೇಹಾಲ್ ಕೋರಿಕೆಯಂತೆ ಎಫ್‌ಐಆರ್ ದಾಖಲಿಸಿ ಆಗಸ್ಟ್ 5ರೊಳಗೆ ವರದಿ ಸಲ್ಲಿಸುವಂತೆ ಠಾಣಾಧಿಕಾರಿಗೆ ಸೂಚಿಸಿದೆ.
ಈ ಎಲ್ಲ ಬೆಳವಣಿಗೆಯ ನಂತರ ಜಾರ್ಜ್ ನಿನ್ನೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಸರಕಾರ ಉಳಿದಿಬ್ಬರೂ ಅಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿದೆ. ಈ ಮಧ್ಯೆ ಪ್ರಣಬ್ ಮೊಹಂತಿ ಮಡಿಕೇರಿ ನ್ಯಾಯಾಲಯದ ಆದೇಶವನ್ನು ಪಶ್ನಿಸುವುದಾಗಿ ಹೇಳಿದ್ದಾರೆ. ಈಗ ಗಣಪತಿ ಕುಟುಂಬದವರ ಒಂದು ಹಂತದ ಹೋರಾಟಕ್ಕೆ ಜಯ ಸಿಕ್ಕದಂತಾಗಿದೆ. ಜಾರ್ಜ್ ತಮ್ಮ ಮೇಲೆ ಆರೋಪ ಬಂದಾಕ್ಷಣ ರಾಜಿನಾಮೆ ಕೊಟ್ಟಿದ್ದರೆ ಇಷ್ಟೆಲ್ಲ ಪ್ರಚಾರ ಸಿಗುತ್ತಿರಲಿಲ್ಲ. ಜೊತೆಗೆ ಸರಕಾರಕ್ಕೆ ಮುಜುಗುರ, ಅವರನ್ನು ರಕ್ಷಿಸಲು ಪರದಾಟ. ವಿಧಾನಸಭೆಯಲ್ಲೂ ಗದ್ದಲ, ವಾಕ್ಸಮರ ನಡೆಯುತ್ತಿರಲಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಸಹೋದ್ಯೋಗಿಯನ್ನು ರಕ್ಷಿಸಿಕೊಳ್ಳಲು ಏನೆಲ್ಲ ಕಸರತ್ತು ಮಾಡಿದ್ದರು. ಇದರಿಂದ ಪಕ್ಷಕ್ಕೆ ಮತ್ತು ಸರಕಾರದ ಘನತೆಗೆ ಧಕ್ಕೆಯಾಗಿದೆ ಎಂದೇ ಹೇಳಬಹುದು.  ನ್ಯಾಯಾಲಯದವರೆಗೆ ಹೋಗಲು ಬಿಡದೆ ಸಚಿವರು ರಾಜಿನಾಮೆ ನೀಡಿದ್ದರೆ ಅವರೂ ಸಹ ಜನಮನ ಗೆಲ್ಲಬಹುದಿತ್ತು. ಉಳಿದ ರಾಜಕಾರಣಿಗಳಿಗೆ ಒಂದು ಮೇಲ್ಪಂಕ್ತಿ ಹಾಕಿಕೊಟ್ಟಂತಾಗುತ್ತಿತ್ತು. ನ್ಯಾಯಪಾಲನೆಯನ್ನೂ  ಮಾಡಿದಂತಾಗುತ್ತಿತ್ತು.  ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಹರತಾಳು ಹಾಲಪ್ಪ ವಿರುದ್ದ ಅಕ್ರಮ ಸಂಬಂಧದ ಕುರಿತೆ  ಪ್ರಕರಣ ಹೊರಬಂದಾಗ ಅಂದೇ ಹಾಲಪ್ಪ ರಾಜಿನಾಮೆ ಕೊಟ್ಟು ಸತ್ಸಂಪ್ರದಾಯ  ಪಾಲಿಸಿದ್ದರು.
ಆದರೆ ಜಾರ್ಜ್ ತಾನು ತಪ್ಪೇ ಎಸಗಿಲ್ಲ ಎಂದು ವಾದಿಸುತ್ತಾ ನ್ಯಾಯಾಲಯ ಎಫ್‌ಐಆರ್ ಹಾಕಲು ಸೂಚಿಸಿದ ನಂತರವೇ ರಾಜಿನಾಮೆ ಕೊಟ್ಟಿದ್ದಾರೆ. ಜಾರ್ಜ್ ರಾಜಿನಾಮೆ ಕೊಡದಂತೆ ಸರ್ಕಾರ ಅವರನ್ನು ರಕ್ಷಿಸಿತ್ತು. ಜಾರ್ಜ್ ಗೆ ಹೈಕಮಾಂಡ್  ಬೆಂಬಲವೂ ಇದ್ದಿದ್ದರಿದಂ ಇಷ್ಟೆಲ್ಲ ಬೆಳವಣಿಗೆ ಕಾಣಬೇಕಾಯಿತು.  ಪ್ರಭಾವಿ ಅಥವಾ ಪ್ರಬಲ ಸಚಿವನಲ್ಲದಿದ್ದರೆ ಘಟನೆಯಾದ ದಿನವೇ ರಾಜಿನಾಮೆ ಕೊಡಬೇಕದ ಸ್ಥಿತಿ ಎ ದುರಾಗುತ್ತಿತ್ತು. ಹಾಲಪ್ಪ ಅವರಿಗೆ ಆದದ್ದೂ ಇದೇ.
ಜಾರ್ಜ್ ರಾಜಿನಾಮೆ ಕೊಡದೆ ಉಳಿಯಲು ಹಲವು ಕಾರಣಗಳಿವೆ. ಮೇಲೆ ಹೇಳಿದಂತೆ ಹೈಕಮಾಂಡ್‌ನಲ್ಲಿ ಪ್ರಭಾವ ಹೊಂದಿರುವುದರ ಜೊತೆಗೆ ಸಿದ್ದರಾಮಯ್ಯ ಅವರ ಹಠವೂ ಕಾರಣ.  ಇಲ್ಲಿ ಗೃಹ ಇಲಾಖೆಯ ಸಲಹೆಗಾರರಾದ ಮಾಜಿ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರ ಪಾತ್ರವೂ ಇದೆ ಎಂಬ ಮಾತು ಕೇಳಿಬರುತ್ತಿದೆ. ಏಕೆಂದರೆ, ಆ ಇಲಾಖೆಯ ಸಲಹೆಗಾರನಾದ ಮೇಲೆ ಸಂಬಂಧಿತ ಪ್ರಕರಣಗಳಲ್ಲಿ ಹೇಗೆ ವರ್ತಿಸಬೇಕು, ಹೇಗೆ ನಿಭಾಯಿಸಬೇಕು ಎನ್ನುವ ಸಲಹೆಯನ್ನು ಅವರು ಕೊಡಬೇಕಾಗುತ್ತದೆ. ಜೊತೆಗೆ ಅವರೂ ಸಹ ಐಪಿಎಸ್ ಆಗಿರುವುದರಿಂದ ಜಾರ್ಜ್ ಅವರನ್ನು ಉಳಿಸಲು ಯತ್ನ ಮಾಡಿಬರಬಹುದೆಂಬ ಶಂಕೆ ಪ್ರಬಲವಾಗಿದೆ. ಇದನ್ನೆಲ್ಲ ಗಮನಿಸಿದಾಗ ದುರ್ಯೋಧನನ್ನು ಶಕುನಿ ಹಾಳುಮಾಡಿದ ಹಾಗೆ ಸಿದ್ದರಾಮಯ್ಯ ಅವರನ್ನು ಕೆಂಪಯ್ಯ ದಾರಿತಪ್ಪಿಸಿದರೇ ಎನ್ನುವ ಪಶ್ನೆ ಉದ್ಭವವಾಗುತ್ತದೆ.
ಜಾರ್ಜ್ ರಾಜಿನಾಮೆ ನಂತರ ರಾಜ್ಯದಲ್ಲಿ ಪ್ರತಿಪಕ್ಷಗಳು ಸುಮ್ಮನಾಗಬಹುದು. ಪ್ರಕರಣ ಕೆಲವೇ ದಿನಗಳಲ್ಲಿ  ಸದ್ದುಗದ್ದಲವಿಲ್ಲದೆ ತೆರೆಗೆ ಸರಿಯಬಹದು. ಏಕೆಂದರೆ ಸಿಓಡಿ ತನಿಖೆ ನಡೆಸುತ್ತಿದೆ, ಸೆ. 1ರೊಳಗೆ ವರದಿ ನೀಡಲು ಅದಕ್ಕೆ ಸೂಚಿಸಲಾಗಿದೆ. ಈ ಮಧ್ಯೆ ಸಿಂಎಂ ನಿವೃತ್ತ ನ್ಯಾಯಮೂರ್ತಿ ಕೇಶವ ನಾರಾಯಣ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ. ಇನ್ನೆನಿದ್ದರೂ ತನಿಖೆಗಳದ್ದೇ ದಾರಿ. ಸತ್ಯ ಯಾವುದು, ಮಿಥ್ಯ ಯಾವುದು ಎನ್ನುವುದು ತನಿಖೆಯಿಂದ ಗೊತ್ತಾಗುತ್ತದೆ.
.........................................

No comments:

Post a Comment