Saturday, 2 July 2016

 
ಜಿಲ್ಲಾ ಬಿಜೆಪಿಯಲ್ಲಿ ಉಲ್ಬಣಿಸಿದ ಕಲಹ
  ನೂತನ ಅಧ್ಯಕ್ಷರ ಪದಗ್ರಹಣಕ್ಕೆ ಈಶ್ವರಪ್ಪ ಬಣದ ನಾಯಕರು ಗೈರು* ಪ್ರಾಬಲ್ಯಕ್ಕೆ ಇಬ್ಬಣಗಳ ಮೇಲಾಟ


ಒಂದು ರಾಜಕೀಯ ಪಕ್ಷಕ್ಕೆ ಕಾರ್ಯಕರ್ತರೇ ಆಧಾರ ಸ್ಥಂಭ. ಹಂತಹಂತವಾಗಿ ನಾಯಕರಾಗಿ ವಿಕಾಸಗೊಳ್ಳಬೇಕು. ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ. ‘‘ ನಾಯಕತ್ವ ಒಂದು ಹುದ್ದೆಯಲ್ಲ, ಅದೊಂದು ಕಾರ್ಯತತ್ಪರತೆ’’ ಈ ರೀತಿ ಕಾರ್ಯದಿಂದ ರೂಪುಗೊಂಡಾಗ ಮಾತ್ರ ವ್ಯಕ್ತಿ ಪರಿಪೂರ್ಣ ನಾಯಕನಾಗಲು ಸಾಧ್ಯ. ಇಂತಹ ಅನುಭವಿಗಳು, ತಳಮಟ್ಟದ ಹೋರಾಟದಿಂದ ಮೇಲೆ ಬಂದವರು ಜಿಲ್ಲಾ ಬಿಜೆಪಿಯಲ್ಲಿ ಸಾಕಷ್ಟಿದ್ದಾರೆ. ನಾಯಕತ್ವ ಕಾರ್ಖಾನೆಯಲ್ಲಿ ತಯಾರಾಗುವ ವಸ್ತು ಅಲ್ಲ. ಇದನ್ನು ಅರಿತು ಜಿಲ್ಲಾ ಬಿಜೆಪಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕಿಯೆ ನಡೆಯಬೇಕಿತ್ತು. ಅದು ನಡೆಯದ ಬಗ್ಗೆ ಈಗ ವಿವಾದ ಸೃಷ್ಟಿಯಾಗಿದೆ. ಮೊದಲಿನಿಂದಲೂ ಇದ್ದ ಬಣ ರಾಜಕೀಯ ಪಕ್ಷವನ್ನು ತಮ್ಮ ಪ್ರಾಬಲ್ಯಕ್ಕೆ ತೆಗೆದುಕೊಳ್ಳಲು ನಡೆಸಿರುವ ಹೋರಾಟ ಇದು.  


  ಶಿವಮೊಗ್ಗ ಜಿಲ್ಲೆ ಬಿಜೆಪಿಯ ಶಕ್ತಿಕೇಂದ್ರ. ಜನಸಂಘ ಪ್ರಬಲವಾಗಿದ್ದಾಗಲೂ ಇಲ್ಲಿಂದ ಬಿಜೆಪಿ ಉಮೇದುವಾರರೇ ಆಯ್ಕೆಯಾಗಿ ಹೋಗುತ್ತಿದ್ದರು. ಇಂತಹ ಬಿಜೆಪಿ ನೆಲದಲ್ಲಿ ಈಗ ಕಲಹ ಉಲ್ಬಣಿಸಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮಧ್ಯೆ ಕಳೆದೊಂದು ವಾರದಿಂದ ಭುಗಿಲೆದ್ದಿರುವ ಅಸಮಾಧಾನ ನಿನ್ನೆ ಇನ್ನಷ್ಟು ಕಾವು ಪಡೆದುಕೊಂಡಿದೆ.
ಇಲ್ಲಿನ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಜರುಗಿದ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಸಮಾರಂಭಕ್ಕೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮತ್ತು ಅವರ ಕೆಲವು ನಿಷ್ಠರು ಗೈರು ಹಾಜರಾಗುವ ಮೂಲಕ ಯಡಿಯೂರಪ್ಪಗೆ ತವರೂರಲ್ಲಿಯೇ ಟಾಂಗ್ ನೀಡುವ ಕೆಲಸ ಮಾಡಿದ್ದಾರೆ.
ಬಿಜೆಪಿ ಜಿಲ್ಲಾ ಅಧ್ಯಕ್ಷರನ್ನಾಗಿ ಜೂನ್ 14ರಂದು ತಮ್ಮ ನಿಷ್ಠ ಎಸ್.ರುದ್ರೇಗೌಡರನ್ನು ನೇಮಕ ಮಾಡಿರುವ ಬಿಎಸ್‌ವೈ ಕ್ರಮಕ್ಕೆ ಈಶ್ವರಪ್ಪ ಸೇರಿದಂತೆ ಕೆಲವು ಮುಖಂಡರು ಅಸಮಾಧಾನಗೊಂಡಿದ್ದರು. ಈ ಹಿನ್ನೆಲೆಯಲ್ಲಿ ರುದ್ರೇಗೌಡರ ಪದಗ್ರಹಣ ಸಮಾರಂಭದಿಂದ ಈ ಮುಖಂಡರು ದೂರ ಉಳಿಯುವ ಮೂಲಕ ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.  ರುದ್ರೇಗೌಡ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕೆಪಿಎಸ್‌ಸಿ ಸದಸ್ಯರಾಗಿದ್ದರು. ನಂತರ ಕೆಜೆಪಿ ಕಟ್ಟಿದಾಗ ಅದರ ಜಿಲ್ಲಾಧ್ಯಕ್ಷರಾಗಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸ್ವಲ್ಪ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. ಈ ಚುನಾವಣೆಯಲ್ಲಿ ಈಶ್ವರಪ್ಪ ಬಿಜೆಪಿ ಅಭ್ಯರ್ಥಿಯಾಗಿ ಮೂರನೆಯ ಸ್ಥಾನ ಕಂಡಿದ್ದರು.
ಮೂಲತಃ ಉದ್ಯಮಿಯಾಗಿರುವ ರುದ್ರೇಗೌಡರು ರಾಜಕೀಯದಿಂದ ದೂರವಿದ್ದವರು. ಆದರೆ ಯಡಿಯೂರಪ್ಪ ಅವರ ಸ್ವಜಾತಿಬಾಂಧವರೂ ಆಗಿರುವುದರಿಂದ ರುದ್ರೇಗೌಡರನ್ನು ಕಣಕ್ಕಿಳಿಸಿದರು. ಯಡಿಯೂರಪ್ಪ ಹೆಸರಲ್ಲಿ ಅವರಿಗೆ ಚುನಾವಣೆಯಲ್ಲಿ ಸಾಕಷ್ಟು ಮತಗಳು ಬಂದವೇ ವಿನಾ ಅವರ ವೈಯಕ್ತಿಕ ವರ್ಚಸ್ಸಿನಿಂದಲ್ಲ. ಏಕೆಂದರೆ, ಶಿವಮೊಗ್ಗ ನಗರದ ಸಾಮಾನ್ಯ ಜನರ ಮಟ್ಟಿಗೆ ರುದ್ರೇಗೌಡರು ಅಪರಿಚಿತರು. ಉದ್ಯಮ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಮಾತ್ರ ಅವರ ಹೆಸರು ಗೊತ್ತಿತ್ತು. ಆದರೆ ಜನಸಾಮಾನ್ಯರನ್ನು ಎಂದೂ ಹತ್ತಿರದಿಂದ ಕಂಡವರಲ್ಲ, ಪಕ್ಷದ ಕಾರ್ಯಕರ್ತರ ಪರಿಚಯವೂ ಇಲ್ಲ ಎನ್ನುವ ಬಲವಾದ ಆರೋಪ ಅವರ ಮೇಲಿದೆ. ಹಾಗಾಗಿ ಮೂಲ  ಬಿಜೆಪಿಯವರು ರುದ್ರೇಗೌಡರನ್ನು ನಾಯಕರೆಂದು ಒಪ್ಪಿಕೊಳ್ಳಲು ಇಂದಿಗೂ ಸಿದ್ಧರಿಲ್ಲ. ಯಾರನ್ನೂ ಕೇಳದೆಯೇ ಏಕಾಏಕಿ ರುದ್ರೇಗೌಡರನ್ನು ಜಿಲ್ಲಾಧ್ಯಕ್ಷರನ್ನಾಗಿಸುವ ಮೂಲಕ ಬಿಎಸ್‌ವೈ ಮೈಮೇಲೆ ವಿವಾದ ಎಳೆದುಕೊಂಡಿದ್ದಾರೆನ್ನು ಮಾತು ಬಿಜೆಪಿ ವಲಯದಲ್ಲಿ ಈಗ ಕೇಳಿಬರುತ್ತಿದೆ. ಜಿಲ್ಲಾ ಮಟ್ಟದ ನಾಯಕರ ಅಭಿಪ್ರಾಯ ಪಡೆದು ಅದ್ಯಕ್ಷರ ಆಯ್ಕೆ ಮಾಡುವ ಕ್ರಮ ಪಕ್ಷದಲ್ಲಿದ್ದರೂ ಅದನ್ನು ಪಾಲಿಸದಿರುವ ಬಗ್ಗೆ ನಾಯಕರಲ್ಲಿ ಆಕ್ರೋಶವಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಬಿಎಸ್‌ವೈ ಕೆಜೆಪಿಗೆ ಹೋದ ನಂತರ ಈಶ್ವರಪ್ಪ ಪ್ರಾಬಲ್ಯ ಹೆಚ್ಚಾಗಿತ್ತು. ಮರಳಿ ಕೆಜೆಪಿಯಿಂದ ಬಿಎಸ್‌ವೈ ಬಿಜೆಪಿಗೆ ಬಂದರೂ ಪ್ರಾಬಲ್ಯವನ್ನು ಮತ್ತೆ ತಮ್ಮ ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಮುಸುಕಿನ ಗುದ್ದಾಟ ನಡೆದೇ ಇತ್ತು. ಬೆರಳೆಣಿಕೆಯಷ್ಟು ಕೆಜೆಪಿಗರನ್ನು ಮಾತ್ರ ಬಿಜೆಪಿ ಪದಾಧಿಕಾರಿಗಳ ಪಟ್ಟಿಯಲ್ಲಿ ಸೇರಿಸಿಕೊಳ್ಳಲಾಗಿತ್ತು. ಇದರಿಂದ ಬೂದಿ ಮುಚ್ಚಿದ ಕೆಂಡದಂತೆ ಪರಿಸ್ಥಿತಿ ಇತ್ತು.
ಯಾವಾಗ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿಎಸ್‌ವೈ ನೇಮಕಗೊಂಡರೋ ತಮ್ಮ  ಪ್ರಾಬಲ್ಯವನ್ನು ಜಿಲ್ಲೆಯಲ್ಲಿ ಹೆಚ್ಚಿಸಿಕೊಳ್ಳಲು ಯತ್ನಿಸಿದರು. ಮೊದಲ ಯತ್ನವೇ ಜಿಲ್ಲಾಧ್ಯಕರ ಬದಲಾವಣೆ. ಜಿಲ್ಲೆಯಲ್ಲಿ ಸಂಘಟನೆ ಮಾಡಿ ಪಕ್ಷ ಕಟ್ಟಿದ ಮತ್ತು ಪಕ್ಷದ ಹೋರಾಟದಲ್ಲಿ ಸಕ್ರಿಯವಾಗಿರುವ ನಾಯಕರಿದ್ದರೂ ಅವರನ್ನು ಕಡೆಗಣಿಸಿ ರುದ್ರೇಗೌಡರನ್ನು ಅಧ್ಯಕ್ಷರನ್ನಾಗಿಸಿದ್ದು ಇವರನ್ನು ಕೆಣಕಿದಂತಾಗಿತ್ತು. ಇದರಿಂದ ತಿರುಗಿ ಬಿದ್ದಿದೆ ಈಶ್ವರಪ್ಪ ಬಣ. ಇದು ಜಿಲ್ಲಾ ಬಿಜೆಪಿಯ ಸದ್ಯದ ವಿವಾದದ ಒಂದು ಚಿತ್ರಣ.
ರಾಜ್ಯ ಪದಾಧಿಕಾರಿಗಳ ಪಟ್ಟಿ ವಿವಾದ:
  ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಟ್ಟಿಯೂ ವಿವಾದಕ್ಕೆ ಕಾರಣವಾಗಿದೆ. ಕೇವಲ ತಮ್ಮ ನಿಷ್ಠರಿಗೆ ಮತ್ತು ಬೆಂಬಲಿಗರಿಗೆ ಮಾತ್ರ ಬಿಎಸ್‌ವೈ ಮಣೆ ಹಾಕಿದ್ದರೆನ್ನುವುದು ಭಿನ್ನಮತೀಯ ನಾಯಕರ ವಾದ. ಇದನ್ನು ಸರಿಪಡಿಸಲೇಬೇಕು ಎನ್ನುವುದು ಅವರ ಆಗ್ರಹ. ಆದರೆ ಇದಕ್ಕೆ ಬಿಎಸ್‌ವೈ ಒಪ್ಪಿಲ್ಲ. ಪಟ್ಟಿ ಬದಲಾವಣೆ ಸಾಧ್ಯವಿಲ್ಲ ಎಂದು ಕಡ್ಡಿಮುರಿದಂತೆ ಹೇಳುವ ಮೂಲಕ ಭಿನ್ನಮತೀಯರಿಗೆ ಸವಾಲು ಹಾಕಿದ್ದಾರೆ. ಇನ್ನೊಂದೆಡೆ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಎಲ್ಲ ವಿಚಾರಗಳಲ್ಲೂ ಮೂಗು ತೂರಿಸುತ್ತಿರುವುದೂ ಸಹ ಭಿನ್ನಬಣದ ಸಿಟ್ಟಿಗೆ ಕಾರಣವಾಗಿದೆ.
ಈ ಎಲ್ಲ ವಿವಾದದ ಹಿನ್ನೆಲೆಯಲ್ಲಿಯೇ ಬಿಎಸ್‌ವೈ ಭಾಗವಹಿಸಿದ್ದ ಸಮಾರಂಭದಲ್ಲಿ ಕೆ.ಎಸ್.ಈಶ್ವರಪ್ಪ ಭಾಗವಹಿಸುತ್ತಿರಲಿಲ್ಲ. ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಬಿಜೆಪಿಯ 2ನೆಯ ವರ್ಷದ ಸಾಧನಾ ಸಮಾವೇಶದಲ್ಲಿ ಈಶ್ವರಪ್ಪ ಭಾಗವಹಿಸದೆ ತಮ್ಮ ಅಸಮಾಧಾನ ಹೊರಹಾಕಿದ್ದರು. ನೂತನ ಜಿಲ್ಲಾಧ್ಯಕ್ಷರ ಅಧಿಕಾರ ಹಸ್ತಾಂತರ ಸಮಾರಂಭಕ್ಕೆ  ವಿಧಾನಪರಿಷತ್ ಸದಸ್ಯ ಎಂ.ಬಿ.ಭಾನುಪ್ರಕಾಶ್, ಮಾಜಿ ಜಿಲ್ಲಾಧ್ಯಕ್ಷ ಗಿರಿಶ್ ಪಟೇಲ್  ಸಹಿತ ಕೆಲವು ಸ್ಥಳೀಯ ಮುಖಂಡರು ಆಗಮಿಸಿರಲಿಲ್ಲ. ಈಶ್ವರಪ್ಪ ಗುರುವಾರ ರಾತ್ರಿಯೇ ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣಿಸಿದ್ದರು. ಅವರ ಕೆಲವು ಬೆಂಬಲಿಗರು ಶಿವಮೊಗ್ಗದಲ್ಲಿದ್ದರೂ ಸಭೆಗೆ ಆಗಮಿಸಿರಲಿಲ್ಲ.
ಆದರೆ ಈ ಮುಖಂಡರು ಸಭೆಗೆ ಗೈರು ಹಾಜರಾಗಿದ್ದಕ್ಕೆ ಸಮಾರಂಭದಲ್ಲಿ ಕಾರಣ ನೀಡುವ ಗೋಜಿಗೆ ಯಾವೊಬ್ಬ ಮುಖಂಡರೂ ಹೋಗಲಿಲ್ಲ. ಬಿಎಸ್‌ವೈ ಕೂಡ ತಮ್ಮ ಭಾಷಣದಲ್ಲಿ ಕೆಎಸ್‌ಇ ಬಗ್ಗೆಯಾಗಲಿ, ಅವರ ಗೈರು ಹಾಜರಿಯ ಕುರಿತಾಗಲಿ ಏನನ್ನೂ ಮಾತನಾಡಲಿಲ್ಲ.
ಇದೇ ಮೊದಲ ಬಾರಿಗೆ ಜಿಲ್ಲಾಧ್ಯಕ್ಷರೋರ್ವರ ಪದಗ್ರಹಣ ಸಮಾರಂಭಕ್ಕೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಲಾಗಿತ್ತು. ಶಿಕಾರಿಪುರ ತಾಲೂಕಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕರೆ ತರತಂದಿದ್ದು ಕಂಡುಬಂದಿತು. ಬಿಎಸ್‌ವೈ ಪುತ್ರ ಶಾಸಕ ಬಿ.ವೈ.ರಾಘವೇಂದ್ರ ಅವರೇ ಕಾರ್ಯಕ್ರಮದ ಮೇಲುಸ್ತುವಾರಿ ನೋಡಿಕೊಂಡಿದ್ದರು. ಕೆಎಸ್‌ಇಗೆ ಅವರ ಸ್ವಕ್ಷೇತ್ರ ಶಿವಮೊಗ್ಗದಲ್ಲಿ ತಮ್ಮ ಶಕ್ತಿ ಪ್ರದರ್ಶನ ತೋರುವ ಮೂಲಕ ಬಿಎಸ್‌ವೈ ಪರೋಕ್ಷವಾಗಿ ತೊಡೆತಟ್ಟಿದ್ದಾರೆ.
.................................

No comments:

Post a Comment