Wednesday, 20 July 2016

ಉ.ಪ್ರ.: ಶೀಲಾ ದೀಕ್ಷಿತ್ ಕಾಂಗ್ರೆಸ್ ಸಿಎಂ ಅಭ್ಯರ್ಥಿ
ಬ್ರಾಹ್ಮಣರ ಮತದ ಮೇಲೆ ಕಾಂಗ್ರೆಸ್ ಕಣ್ಣು* ಇನ್ನೂ ಸಿದ್ಧವಾಗದ ಬಿಜೆಪಿ ಪಡೆ

ದೇಶದ ರಾಜಕೀಯದಲ್ಲಿ ಬಹುಮುಖ್ಯ ಪಾತ್ರ ವಹಿಸುವ ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷದ ಫೆಬ್ರುವರಿ ವೇಳೆ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕಾಗಿ  ಎಲ್ಲ ಪಕ್ಷಗಳೂ ತಯಾರಿ ಆರಂಭಿಸಿವೆ. ದೇಶದ ದೊಡ್ಡ ರಾಜ್ಯವಾದ ಇಲ್ಲಿ ಅಧಿಕಾರ ಹಿಡಿಯುವುದು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಈ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳ ಕಾರುಬಾರು ಜಾಸ್ತಿ. ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷ ( ಎಸ್‌ಪಿ) ಹಾಲಿ ಅಧಿಕಾರದಲ್ಲಿರುವ ಪಕ್ಷದ ಮಧ್ಯೆ ಕಾಳಗವೇ ಇತ್ತೀಚಿನ ನಾಲ್ಕಾರು ಚುನಾವಣೆಯಲ್ಲಿ ಜಾಸ್ತಿ. ಆದರೂ ಬಹುಪಕ್ಷಗಳ ರಾಜಕೀಯ ಇಲ್ಲಿದೆ. ಕಾಂಗ್ರೆಸ್, ಬಿಜೆಪಿ, ರಾಷ್ಟ್ರೀಯ ಲೋಕದಳ ಮತ್ತು ಕಮ್ಯೂನಿಸ್ಟ್ ಪಕ್ಷಗಳ ಅಸ್ತಿತ್ವವೂ ಇಲ್ಲಿದೆ.
ಇಲ್ಲಿಯವರೆಗಿನ  ರಾಜಕೀಯವನ್ನು ಗಮನಿಸಿದಾಗ ಈ ರಾಜ್ಯದ ರಾಜಕೀಯದಲ್ಲಿ ಜಾತಿ ಮತ್ತು ಧರ್ಮವೇ ಬಹುಮುಖ್ಯ ಪಾತ್ರ ವಹಿಸುತ್ತಿರುವುದು ಕಂಡುಬರುತ್ತಿದೆ. ಅದರಲ್ಲೂ ಬಿಎಸ್‌ಪಿ ಮತ್ತು ಎಸ್‌ಪಿ ಇದನ್ನು ಸಮರ್ಥವಾಗಿ ಬಳಸಿಕೊಂಡು ವಿಭಜಿಸಿ ಆಳು ನೀತಿಯನ್ನು ಅನುಸರಿಸುತ್ತಿವೆ. ಇದರಿಂದಾಗಿಯೇ ಮಾಯಾವತಿ ದೇಶದ ಶ್ರೀಮಂತ ಮುಖ್ಯಮಂತ್ರಿ ಎಂದು ಹೆಸರಾದರು. ಮುಂದಿನ ಚುನಾವಣೆಗೂ ದಲಿತರ ಮತಬ್ಯಾಂಕಿನ ಮೇಲೆಯೇ ಕಣ್ಣಿಟ್ಟು ಕಾರ್ಯತಂತ್ರ ಆರಂಭಿಸಿದ್ದಾರೆ. ಇದರಿಂದ ಮುಲಾಯಂ ಸಹ ಹೊರತಾಗಿಲ್ಲ.  
 ಕಾಂಗ್ರೆಸ್ ಈಗ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವುದರಿಂದ ಮತ್ತು ಬಿಜೆಪಿಯು ಕಾಂಗ್ರೆಸ್ ಮುಕ್ತ ಎನ್ನುವ ಘೋಷಣೆಯೊಂದಿಗೆ ಹೆಜ್ಜೆ ಇಟ್ಟಿರುವುದರಿಂದ ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರ ಹಿಡಿಯಬೇಕೆಂದು ಈಗಿನಿಂದಲೇ ಕಾಂಗ್ರೆಸ್ ಯೋಜನೆ ರೂಪಿಸುತ್ತಿದೆ. ಚುನಾವಣೆ ಘೋಷಿತವಾದರೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡದೆ ಕೊನೆ ಕ್ಷಣದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದ ಕಾಂಗ್ರೆಸ್ ಈಗ ಆಧುನಿಕ ಪದ್ದತಿಗೆ ಕಾಲಿಡುತ್ತಿರುವಂತಿದೆ. ಬಿಜೆಪಿ ಆಧುನಿಕ ಪ್ರಚಾರ ತಂತ್ರಗಳನ್ನು ಸಮರ್ಪಕವಾಗಿ ಬಳಸಿಕೊಂಡಿರುವುದರಿಂದ ಈ ಬಾರಿ ಕಾಂಗ್ರೆಸ್ ಸಹ  ಇದೇ ಮಾರ್ಗದಲ್ಲಿ ಸಾಗಲು ರಾಜಕೀಯ ತಂತ್ರದಾರರ ಸಹಾಯ ಪಡೆಯುತ್ತಿದೆ.
ಹೆಸರಾಂತ ರಾಜಕೀಯ ತಂತ್ರದಾರ ಪ್ರಶಾಂತ್ ಕಿಶೋರ್ ಈ ಬಾರಿ ಕಾಂಗ್ರೆಸ್‌ಗೆ ಎಲ್ಲ ತಂತ್ರಗಳನ್ನು ಹೇಳಿಕೊಡುತ್ತಿದ್ದಾರೆ. ಆ ಪ್ರಕಾರ ಮುಂದಡಿ ಇಟ್ಟಿರುವ ಪಕ್ಷ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ಉತ್ತರ ಪ್ರದೇಶದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. ಕಾಂಗ್ರೆಸ್‌ನ 130 ವರ್ಷದ ಇತಿಹಾಸಲ್ಲಿ ಚುನಾವಣೆಗೂ ಸುಮಾರು ನಾಲ್ಕಾರು ತಿಂಗಳ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ್ದು ಇದೇ ಮೊದಲಾಗಿದೆ.
ಉತ್ತರ ಪ್ರದೇಶದ ರಾಜಕೀಯ ಗಮನಿಸುವುದಾದರೆ, ಇಲ್ಲಿ ಹಿಂದೂಗಳೇ ಅಧಿಕ. ಶೇ. 78.50ರಷ್ಟು ಹಿಂದೂಗಳು, ಶೇ. 19ರಷ್ಟು ಮುಸ್ಲೀಮರು ಮತ್ತು ಶೇ. 2.5ರಷ್ಟು ಇತರೇ ಧರ್ಮೀಯರಿದ್ದಾರೆ. ರಾಜ್ಯದಲ್ಲಿ ಬ್ರಾಹ್ಮಣ ಮತದಾರರನ್ನು  ಸೆಳೆಯುವ ಕಾರಣಕ್ಕೆ ಈ ಬಾರಿ ಶೀಲಾ ದೀಕ್ಷಿತ್ ಅವರನ್ನು ಕಣಕ್ಕಿಳಿಸಲು ಹೈಕಮಾಂಡ್ ನಿರ್ಧರಿಸಿದೆ. ಪ್ರಶಾಂತ್ ಕಿಶೋರ್ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಪ್ರಿಯಾಂಕಾ ಗಾಂಧಿ ಅಥವಾ ರಾಹುಲ್ ಗಾಂಧಿ ಅವರನ್ನು ಬಿಂಬಿಸಲು ಸೂಚಿಸಿದ್ದರು. ಶೀಲಾ ದೀಕ್ಷಿತ್ ಅವರ ಹೆಸರು ಮೂರನೆಯದಾಗಿತ್ತು. ಆದರೆ ಹೈಕಮಾಂಡ್ ನೆಹರೂ ಕುಟುಂಬದ ಮೊದಲಿನಿಬ್ಬರನ್ನೂ ಪ್ರಾದೇಶಿಕ ನಾಯಕರನ್ನಾಗಿ ಮಾಡಲು ಒಪ್ಪಿಲ್ಲ. ಏಕೆಂದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ನ್ನು ಅ ಧಿಕಾರಕ್ಕೇರಿಸಲು ಇವರೇ ಸಾರಥ್ಯ ವಹಿಸಬೇಕಾಗುತ್ತದೆ ಎನ್ನುವುದು ಆ ಪಕ್ಷದ ಲೆಕ್ಕಾಚಾರ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ 1999ರಿಂದ 2013ರವರೆಗೆ 3 ಬಾರಿ ನಿರಂತರವಾಗಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿರುವ ಶೀಲಾ ದೀಕ್ಷಿತ್ ಅವರನ್ನು ಘೋಷಿಸಲಾಗಿದೆ. ಶೀಲಾ ಮೂಲತಃ ಪಂಜಾಬಿನ ಖತ್ರಿ ಕುಟುಂಬದವರು. ಮಾಜಿ ಕೇಂದ್ರ ಸಚಿವ ಮತ್ತು ಕರ್ನಾಟಕದ ಮಾಜಿ ರಾಜ್ಯಪಾಲ ಉಮಾಶಂಕರ್ ದೀಕ್ಷಿತ್ ಅವರ ಸೊಸೆ.
ಉತ್ತರ ಪ್ರದೇಶದಲ್ಲಿ ಘಟಾನುಘಟಿ ನಾಯಕರು ಮುಖ್ಯಮಂತ್ರಿಯಾಗಿ ಆ ಪೈಕಿ ಕೆಲವರು ಪ್ರಧಾನಿ, ಉಪಪ್ರಧಾನಿ ಕೇಂದ್ರದ ಸಚಿವರೂ ಆಗಿದ್ದಾರೆ.  ಗೋವಿಂದ ವಲ್ಲಭ್ ಪಂತ್ ಆ ರಾಜ್ಯದ ಮೊದಲ ಮುಖ್ಯಮಂತ್ರಿ. ವಿ.ಪಿ.ಸಿಂಗ್, ಚರಣ್ ಸಿಂಗ್, ಸುಚೇತಾ ಕೃಪಲಾನಿ, ರಾಜನಾಥ ಸಿಂಗ್, ಎನ್.ಡಿ. ತಿವಾರಿ ಪ್ರಮುಖ ಸಿಎಂಗಳು. ಆದರೆ ವಿ.ಪಿ. ಸಿಂಗ್ ಪ್ರದಾನಿಯಾಗಿದ್ದ ಕಾಲದಲ್ಲಿ ಜಾರಿಗೊಳಿಸಲಾದ ಮಂಡಲ್ ವರದಿಯಿಂದ ಉತ್ತರ ಪ್ರದೇಶದ ಬ್ರಾಹ್ಮಣರು ಕಾಂಗ್ರೆಸ್‌ನಿಂದ ದೂರವಾಗಿದ್ದಾರೆ. ಈಗ ಮತ್ತೆ ಬ್ರಾಹ್ಮಣನ್ನು ಒಲಿಸಿಕೊಳ್ಳುವ ಯತ್ನ ಸಾಗಿದೆ.
ಬಿಜೆಪಿ ಕಳೆದ 3 ಚುನಾವಣೆಗಳಲ್ಲೂ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ. ಅಯೋಧ್ಯೆಯ ರಾಮಜನ್ಮಭೂಮಿ ವಿವಾದದಿಂದ ಹೊತ್ತಿಕೊಂಡ ಬೆಂಕಿಯ ಪರಿಣಾಮ ಅಧಿಕಾರವನ್ನು 1996ರಲ್ಲಿ ಹಿಡಿದಿತ್ತು. ಹಿಂದುಳಿದ ವರ್ಗಗಳ ನಾಯಕ ಕಲ್ಯಾಣ್ ಸಿಂಗ್ ಆಗ ಮುಖ್ಯಮಂತ್ರಿಯಾದರು. ನಂತರ 1997 ಮತ್ತರಿಂದ 2002ರವೆರೆಗೆ ಮತ್ತೆ ಅಧಿಕಾರಕ್ಕೇರಿತ್ತು. ಕಾಂಗ್ರೆಸ್ 1989ರಲ್ಲಿ ಅಧಿಕಾರ ಮುಗಿಸಿದ ನಂತರ ಮತ್ತೆ ಗದ್ದುಗೆ ಹಿಡಿದಿಲ್ಲ.  ಕಳೆದ ಲೋಕಸಭೆ ಚುನಾವಣೆಯಲ್ಲಿ 80ರಲ್ಲಿ 71 ಸೀಟುಗಳನ್ನು ಗೆದ್ದುಕೊಂಡಿತು. ಇದಕ್ಕೆ ಮೋದಿ ಮೇನಿಯಾ ಅಥವಾ ತ್ಸುನಾಮಿ ಏನಾದರೂ ಅನ್ನಿ. ರಾಮಜನ್ಮಭೂಮಿ, ಬಾಬ್ರಿ ಮಸೀದಿ ವಿವಾದದ ನಂತರವೂ ಇಷ್ಟೊಂದು ಸ್ಥಾನವನ್ನೂ ಬಿಜೆಪಿ ಗೆದ್ದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಅಲ್ಲಿನ ವಿಧಾನಸಭೆಯ ಮೇಲೆ ಕಣ್ಣಿಟ್ಟಿದೆ. ಗೆಲುವು ತನ್ನದೇ ಎಂಬ ಹೇಳಿಕೆಯನ್ನು ಈಗಲೇ ತೇಲಿಬಿಡಲಾರಂಭಿಸಿದೆ.  
ಇಲ್ಲಿ ಬ್ರಾಹ್ಮಣರು, ಬನಿಯಾಗಳು ಮತ್ತು ವೈಶ್ಯರು ಬಿಜೆಪಿಯ ವೋಟ್ ಬ್ಯಾಂಕ್ ಆಗಿದದ್ರು. ಆದರೆ ಕಳೆದ 3-4 ಚುನಾವಣೆಯಿಂದ ಇವರು ಬಿಜೆೆಯಿಂದ ದೂರ ಸರಿದಿದ್ದಾರೆ. ಪಕ್ಷ ಅದಿಕಾರಕ್ಕೆ ಬರುವ ಸಂಭವವಿದ್ದರೆ ಮಾತ್ರ ಅವರು ಬಿಜೆಪಿಗೆ ಮತ ಹಾಕುತ್ತಾರೆ. ಇಲ್ಲವಾದರೆ ಗೆಲ್ಲುವ ಅಭ್ಯರ್ಥಿಗಳಿಗೆ ಮತ ಹಾಕುತ್ತಿದ್ದಾರೆ. ಇದರಿಂದ ಎಸ್‌ಪಿ ಕಳೆದ ಬಾರಿ ಜಯಗಳಿಸಿದೆ.          
ಕೇಂದ್ರ ಸಚಿವೆ ಸ್ಮತಿ ಇರಾನಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕೆಂಬ ನಿಲುವು ಪಕ್ಷದಲ್ಲಿದೆ. ಆದರೆ ಅವರು ಎಸಗಿಕೊಂಡ ಕೆಲವು ಎಡವಟ್ಟುಗಳೇ ಅವರನ್ನು ಆ ಹಾದಿಯಿಂದ ಹಿಂದೆ ಸರಿಸಿವೆ.  ಜೊತೆಗೆ ಅವರು ಸಿಂಧಿ ಜನಾಂಗದವರು. ಆ ಜನಾಂಗದ ಮತಗಳೇ ಇಲ್ಲ. ಇತ್ತೀಚೆಗೆ ಕೇಶವ ಪ್ರಸಾದ್ ಮೌರ್ಯ ಎಂಬ ಹಿಂದುಳಿದ ವರ್ಗದ ನಾಯಕನನ್ನು ರಾಜ್ಯ ಬಿಜೆಪಿ ಅದ್ಯಕ್ಷರನ್ನಾಗಿ ನೇಮಿಸಲಾಗಿದೆ.
 ಬ್ರಾಹ್ಮಣರನ್ನು, ಓಬಿಸಿ ಮತ್ತು ದಲಿತರ ಮತ ಸೆಳೆಯುವುದು ಈಗ ಬಿಜೆಪಿ ಮುಂದಿರುವ ಗುರಿಯಾಗಿದೆ. ಬಿಎಸ್ಪಿ ದಲಿತರ ವಿಶ್ವಾಸವನ್ನು ಕಳೆದುಕೊಂಡಿದೆ. ಅದೇ ಹಾದಿಯಲ್ಲಿ ಈಗ ಮುಖ್ಯಮಂತ್ರಿ ಅಖಿಲೇಶ್ ಸಹ ಸಾಗುತ್ತಿದ್ದಾರೆ. ಕೇವಲ ಅಲ್ಪಸಂಖ್ಯಾತರ ಓಲೈಕೆಗೆ ಅಖಿಲೇಶ್ ಎಲ್ಲ ಯತ್ನ ಮಾಡುತ್ತಿದ್ದಾರೆ. ಇ ಎಲ್ಲ ಅಂಶಗಳು ಮುಂದಿನ ಚುನಾವಣೆಯಲ್ಲಿ ಎಸ್‌ಪಿ, ಬಿಎಸ್‌ಪಿಗೆ ಮಾರಕವಾಗುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿ ಆರೆಸ್ಸೆಸ್ ಜೊತೆ ಉತ್ತಮ ಸಂಬಂಧವನ್ನು ಬೆಳೆಸಿಕೊಂಡುು ಅಸ್ಸಾಂನಲ್ಲಿ ಜಯಿಸಿದಂತೆ ಇಲ್ಲಿಯೂ ಗೆಲುವು ಸಾಧಿಸಬೇಕೆನ್ನುವುದು ಅಲ್ಲಿನ ಬಿಜೆಪಿ ನಾಯಕರ ಮಾತು.
ಆದರೆ, ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ನಿರ್ಧಾರವೇ ಪ್ರಧಾನವಾಗುತ್ತಿರುವುದರಿಂದ ಯಾವ ಜಾತಿಯವರಿಗೆ ಮಣೆ ಹಾಕಬೇಕೆನ್ನುವುದು ಇನ್ನೂ ಇತ್ಯರ್ಥವಾಗಿಲ್ಲ. ಬಿಜೆಪಿ ಲೋಕಸಭೆಯ ಫಲಿತಾಂಶ ಮರುಕಳಿಸಬಹುದೆನ್ನುವ ಲೆಕ್ಕಾಚಾರದಲ್ಲಿದೆ. ಆದರೆ ಬ್ರಾಹ್ಮಣ ಸಮುದಾಯದ ಶೀಲಾ ದೀಕ್ಷಿತ್  ಸಿಎಂ ಅಭ್ಯರ್ಥಿಯಾಗಿರುವುದರಿಂದ ಬ್ರಾಹ್ಮಣರು ಯಾವ ನಿರ್ಧಾರ ಕೈಗೊಳ್ಳಬಹುದೆನ್ನುವುದರ ಮೇಲೆ ಬಿಜೆಪಿ ಭವಿಷ್ಯ ತಿಳಿಯಲಿದೆ. ಬ್ರಾಹ್ಮಣ  ಸಮುದಾಯದ ಓಲೈಕೆ ಮಾಡಲು ಆ ವರ್ಗದವರನ್ನೇ ಸಿಎಂ ಕ್ಯಾಂಡಿಡೇಟ್ ಎಂದು ಘೋಷಸಿಬೇಕೆಂದು ರಾಜಕೀಯ ತಂತ್ರಜ್ಞರು ಸೂಚಿಸಿದ್ದರ ಮೇರೆಗೆ  ಕಾಂಗ್ರೆಸ್ ಹಾಗೆಯೇ ಮಾಡಿ ಬಹುಬೇಗ ಕಣಕ್ಕಿಲಿಯುವ ಸೂಚನೆ ನೀಡಿದೆ. ಇದು ಆ ಪಕ್ಷಕ್ಕೆ ವರವಾಗಬಹುದೇ, ಸತತ ಸೋಲಿನಲ್ಲಿರುವ ಕಾಂಗ್ರೆಸ್‌ಗೆ ಬ್ರಾಹ್ಮಣರು ಮತ್ತೆ ಚೈತನ್ಯ ನೀಡುವರೇ ಎನ್ನುವುದು ಚುನಾವಣೆ  ನಂತರವಷ್ಟೇ ಗೊತ್ತಾಗಬೇಕಿದೆ.  ಆದರೆ ಪ್ಲಾನ್ ಮಾಡುವುದರಲ್ಲಿ  ಸದಾ ಮುಂದಿರುತ್ತಿದ್ದ ಬಿಜೆಪಿ ಇನ್ನೂ ತನ್ನ ಯೋಚನೆ ಏನೆನ್ನುವುದನ್ನು ಪ್ರಕಟಿಸಿಲ್ಲ. ಹಾಗಂತ ಅದು ತಯಾರಿ ನಡೆಸಿಲ್ಲ ಎಂದರ್ಥವಲ್ಲ. ಆದರೆ ಬ್ರಾಹ್ಮಣರು ಮಾಡಿದ ನಿರ್ಧಾರ ಉತ್ತರ ಪ್ರದೇಶದ ರಾಜಕೀಯದ ದಿಕ್ಸೂಚಿಯಾಗಿರುತ್ತದೆ.  

No comments:

Post a Comment