Friday, 8 July 2016

ಮಂಡಗದ್ದೆ: ಮೂಕಹಕ್ಕಿಗಳಿಗೆ ಶಾಪವೇ?
  ಈ ವರ್ಷವೂ ಆತಂಕದಲ್ಲಿ ಬೆಳ್ಳಕ್ಕಿಗಳ ಹಿಂಡು





ಶಿವಮೊಗ್ಗ: ಎಂತಹ ದುರಂತ ನೋಡಿ. ಪ್ರತಿ ವರ್ಷ ಎಲ್ಲಿಂದಲೋ  ಸಂತಾನಕ್ಕೆಂದೇ ಹಾರಿ ಬಂದು ಇಲ್ಲಿ ಆತಂಕದ ಕ್ಷಣವನ್ನು ಎದುರಿಸುವುದು. ಕೆಲವೊಮ್ಮೆ ಮೊಟ್ಟೆ ಸಹಿತ ನದಿ ಪಾಲಾಗುವುದು. ಯಾರ ಶಾಪವೋ ಈ ಬಾನಾಡಿಗಳಿಗೆ.
ಮಂಡಗದ್ದೆ ಎಂದಾಕ್ಷಣ ನೆನಪಾಗುವುದೇ ಪಕ್ಷಿಧಾಮ. ಪಕ್ಷಿಧಾಮಕ್ಕೆ ಹೇಳಿ ಮಾಡಿಸಿದ ಸ್ಥಳ ಇದು. ಎತ್ತಣ ಮಾಮರ, ಎತ್ತಣ ಕೋಗಿಲೆ ಎನ್ನುವಂತೆ ಯಾವುದೋ ದೇಶದಿಂದ ಹಾರಿ ಬಂದು ಇಲ್ಲಿನ ತುಂಗಾನದಿ ತೀರದಲ್ಲಿ  ಬೆಳ್ಳಕ್ಕಿಗಳು (ಬಾನಾಡಿಗಳು) ಸಂತಾನ ನಡೆಸುತ್ತವೆ. ಆದರೆ ಪ್ರವಾಹ ಎದುರಾಗುತ್ತದೆ, ಸಂತಾನ ನಾಶವಾಗಬಹುದು ಎನ್ನುವುದು ಅವುಗಳಿಗೆ ಹೇಗೆ ಗೊತ್ತಾಗಬೇಕು.
ಪ್ರತಿ ವರ್ಷ ಈ ಬಾನಾಡಿಗಳ ಗೋಳು ಇದು. ಮುಂಗಾರು ಆರಂಭವಾಗುವ ವೇಳೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತವೆ. ಕೆಲವೇ ತಿಂಗಳಲ್ಲಿ  ಸಂತಾನ ಮುಗಿಸಿ ಮತ್ತೆ ಸ್ವದೇಶಕ್ಕೆ ಮರಳುತ್ತವೆ. ಆದರೆ ಇಲ್ಲಿ ಅವು ಸುಖ ಸಂತಾನ ಕಾಣುವುದಕ್ಕಿಂತ ಆತಂಕದ ಕ್ಷಣ ಎದುರಿಸುವುದೇ ಹೆಚ್ಚು.
ನದಿಯಲ್ಲಿ ನಿರಿನ ಪ್ರವಾಹ ಏರುತ್ತಿರುವಂತೆ ಪಕ್ಷಿಗಳು ಸಹ ಮರದ ತುದಿ ಏರುತ್ತವೆ. ಮೂಕಪಕ್ಷಿಗಳಿಗೆ ತಾವು ಅಪಾಯಕ್ಕೆ ಸಿಲುಕುವುದು ಖಚಿತವಾಗುತ್ತದೆ. ಆದರೆ ತಾವೇ ನೇಯ್ದ ಗೂಡನ್ನು, ಅದರಲ್ಲಿರುವ ಮೊಟ್ಟೆಯನ್ನೋ, ಮರಿಯನ್ನೋ ತುಂಗೆ ಆಪೋಶನ ತೆಗೆದುಕೊಳ್ಳುವುದನ್ನು ಕಂಡು ಮಮ್ಮಲ ಮರುಗುತ್ತವೆ, ಮೂಕರಾಗಿ ರೋಧಿಸುತ್ತವೆ. ಈ ವರ್ಷವೂ ಕಳೆದೆರಡು ದಿನದಿಂದ ಬಾನಾಡಿಗಳು ಆತಂಕದ ಕ್ಷಣದಲ್ಲಿವೆ. ಯಾವಾಗ ಪ್ರವಾಹ ಎದುರಾಗುತ್ತದೆಯೊ ಎಂಬ ಭಯದಿಂದ ಅವು ನಡುಗುತ್ತಿವೆ.
 ರೆಕ್ಕೆಯನ್ನು ಪಟಪಟನೆ ಬಡಿದು ತನ್ನ ಸಂಗಡಿಗರನ್ನು ಎಚ್ಚರಿಸುವುದು, ಅತ್ತಿಂದಿತ್ತ, ಮೇಲೆ- ಕೆಳಗೆ ಹಾರುವುದು ಕಂಡುಬರುತ್ತಿದೆ. ಒಂದು ಪಕ್ಷಿಗೆ ಆಪತ್ತು ಎದುರಾದರೂ ಅಲ್ಲಿರುವ ಸಾವಿರಾರು ಬಾನಾಡಿಗಳುು ಒಂದುಗೂಡುತ್ತವೆ, ಶೋಕಿಸುತ್ತವೆ. ಯಾರಿಗೂ ತೊಂದರೆ ನೀಡದೆ, ಬಾನಿನಲ್ಲಿ ಹಾರಾಡುವಾಗ ಚಿತ್ತಾರ ಬಿಡಿಸಿದಂತೆ ಜನರ ಮನ ತಣಿಸುವ, ಪ್ರವಾಸಿಗರನ್ನು ತಮ್ಮ ಹಾಲಿನಂತಹ ಬಣ್ಣದಿಂದ ಆಕರ್ಷಿಸುತ್ತ, ಬಳುಕುವ ನಡಿಗೆಯಿಂದ ಮುದಗೊಳಿಸುವ ಈ ಪಕ್ಷಿಗಳ ಮರಿ, ಗೂಡು ನೀರುಪಾಲಾಗುವಾಗ ಸ್ಥಳೀಯರೂ ಸಹ ಅವುಗಳಿಗೆ ಎದುರಾಗುವ ಸಂಕಟವನ್ನು ನೋಡಲಾಗದೆ ವ್ಯಥೆ ಪಡುತ್ತಾರೆ.
ಪಕ್ಷಿ ತಜ್ಞರ ಪ್ರಕಾರ, ಇಲ್ಲಿಗೆ ಆಸ್ಟ್ರೇಲಿಯಾ, ಸೈಬೀರಿಯಾ, ಶ್ರೀಲಂಕಾ ಮೊದಲಾದ ದೇಶಗಳಿಂದ ಬಾನಾಡಿಗಳು ಅರ್ಥಾತ್ ಬೆಳ್ಕಕ್ಕಿಗಳು ಹಾರಿಬರುತ್ತವೆ. ಇಲ್ಲಿನ ವಾತಾವರಣ ಸಂತಾನೋತ್ಪತ್ತಿಗೆ ಅನುಕೂಲ ಎನ್ನುವ ಅಂಶವೂ ಇದಕ್ಕೆ ಕಾರಣವಿರಬಹುದು. ಪ್ರತಿವರ್ಷ ಇಲ್ಲಿಗೆ ಬರುವ ಬೆಳ್ಳಕ್ಕಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇಲ್ಲಿನ ನದಿ ದಡದಲ್ಲಿ ಬೃಹತ್ ಮರಗಳಿರುವುದು, ಅವು ಬೀಸು ಬೀಸಾಗಿ ಹರಡಿಕೊಂಡಿರುವುದು ಗೂಡು ಕಟ್ಟಲು ಅನುಕೂಲವಾಗಿದೆ. ಇದರಿಂದ ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಅವು ಬರುತ್ತಿವೆ ಎನ್ನುತ್ತಾರೆ.
..................................  

No comments:

Post a Comment