Friday, 6 January 2017

ಜೀವಬಲಿಗಾಗಿ ಕಾದಿವೆ ಕೆರೆ ಏರಿ ರಸ್ತೆಗಳು







ನಮ್ಮ ಇಂದಿನ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಾಗಬೇಕಾದರೂ ಅದಕ್ಕೆ ಒಂದಿಷ್ಟು ಸಾವು-ನೋವುಗಳು ಸಂಭವಿಸಬೇಕು. ನಾಗರಿಕರು ಬೀದಿಗಿಳಿದು ಹೋರಾಟ ನಡೆಸಬೇಕು. ಇಲ್ಲವೇ ನ್ಯಾಯಾಲಯಗಳು ನಿರ್ದೇಶನ ನೀಡಬೇಕು. ಆಗ ಮಾತ್ರ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಂಡು ಸಮಸ್ಯೆ ಪರಿಹಾರಕ್ಕೆ ಮುಂದಾಗುವಂತಹ ಸ್ಥಿತಿ ನೆಲೆಸಿದೆ. ಇಲ್ಲದಿದ್ದರೆ ನಮ್ಮ ಕಣ್ಮುಂದೆಯೇ ಅವ್ಯವಸ್ಥೆ ರಾರಾಜಿಸುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳುವ ಗೋಜಿಗೆ ಆಡಳಿತ ವ್ಯವಸ್ಥೆ ಹೋಗುತ್ತಿಲ್ಲ. ಇದಕ್ಕೆ ಇಚ್ಛಾಶಕ್ತಿಯ ಕೊರತೆ ಎನ್ನಬೇಕೋ, ಬೇಜವಾಬ್ದಾರಿತನ ಎನ್ನಬೇಕೋ ತಿಳಿಯುತ್ತಿಲ್ಲ.

ಇತ್ತೀಚೆಗೆ ಶಿವಮೊಗ್ಗ-ಹೊನ್ನಾಳಿ ರಸ್ತೆಯ ಗೊಂಧಿಚಟ್ನಳ್ಳಿ ಗ್ರಾಮದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್‌ವೊಂದು ರಸ್ತೆ ಬದಿಯ ಕೆರೆಗೆ ಉರುಳಿ ಬಿದ್ದಿತ್ತು. ಕೆರೆಯಲ್ಲಿ ನೀರು ತುಂಬಿರದಿದ್ದ ಕಾರಣ ಪ್ರಯಾಣಿಕರೆಲ್ಲ ಅಪಾಯದಿಂ ಪಾರಾಗಿದ್ದರು. ಜ. 4ರಂದು ನಗರದ ಹೊರವಲಯ ಪುರಲೆ ಗ್ರಾಮದ ಬಳಿ ಕಾರೊಂದು ರಸ್ತೆ ಬದಿಯ ಕೆರೆಗೆ ಉರುಳಿ ಬಿದ್ದಿದೆ. ಇಲ್ಲೂ ಕೂಡ ಕೆರೆಯಲ್ಲಿ ನೀರಿನ ಸಂಗ್ರಹ ಸಾಕಷ್ಟು ಕಡಿಮೆಯಿತ್ತು. ಈ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದವರು ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಈ ಕೆರೆಯಲ್ಲಿ ವರ್ಷಕ್ಕೆರಡಾದರೂ ಇಂತಹ ಘಟನೆ ಸಂಭವಿಸುತ್ತಲೇ ಇರುತ್ತದೆ.
ಇವು ಎರಡು ಉದಾಹರಣೆಯಷ್ಟೆ. ಜಿಲ್ಲೆಯಲ್ಲಿ ಅಪಾರ ಸಂಖ್ಯೆಯ ಕೆರೆಗಳಿವೆ. ಯಾವ ಕೆರೆಗೂ ಸುರಕ್ಷಿತ ತಡೆಗೋಡೆಗಳಿಲ್ಲ. ಈ ಕೆರೆ ದಂಡೆಗಳ ಮೇಲೆಯೇ  ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಅಥವಾ ಗ್ರಾಮದ ಮುಖ್ಯ ರಸ್ತೆ ಇದೆ. ಆದರೆ ಇವುಗಳಿಗೆ ಸುರಕ್ಷಿತ ತಡೆಗೋಡೆಗಳಿಲ್ಲ. ಇದು ಅಪಾಯಕ್ಕೆ ಆಹ್ವಾನ ನೀಡಿದಂತಿದೆ. ಹಲವು ಜನರು ಪ್ರಾಣ ಕಳೆದುಕೊಂಡಿದ್ದರೂ, ಬಿದ್ದೆದ್ದಿದ್ದರೂ ಸಂಬಂಧಿತ ಅಧಿಕಾರಿಗಳು ಇನ್ನೂ ಎಚ್ಚೆತ್ತಿಲ್ಲ.
ಶಿವಮೊಗ್ಗ ನಗರದೊಳಗೆ ನವುಲೆ ಕೆರೆ ಇದೆ. ಅಲ್ಲಿಯೂ ಯಾವುದೇ ತಡೆಗೋಡೆ ಇಲ್ಲ. ಇದರಂತೆ ಸಾಗರ ಮತ್ತು ಸೊರಬ ತಾಲೂಕಿನ ಅರ್ಧದಷ್ಟು ರಸ್ತಗೆಳು ಕೆರೆ ದಂಡೆಯಲ್ಲೇ ಇವೆ. ಏನಾದರೂ ಅನಾಹುತವಾಗಿ  ಜೀವಹಾನಿಯಾದಾಗ ಮಾತ್ರ  ಅಥವಾ  ದೊಡ್ಡ ಅನಾಹುತ ಸಂಭವಿಸಿದ ನಂತರವಷ್ಟೆ ಇಲಾಖೆಯವರು ಎಚ್ಚೆತ್ತುಕೊಳ್ಳಲು ಕಾದು ಕುಳಿತಿರುವಂತೆ ಭಾಸವಾಗುತ್ತಿದೆ. ಸಂಬಂಧಿಸಿದವರ ನಿರ್ಲಕ್ಷ್ಯ ಇದೇ ರೀತಿ ಮುಂದುವರೆದರೆ ಅನಾಹುತ ಕಟ್ಟಿಟ್ಟ ಬುತ್ತಿಯಾಗಿದ್ದು, ಅಮಾಯಕರು ಸಾವು-ನೋವಿಗೆ ತುತ್ತಾಗುವುದು ನಿಶ್ಚಿತ.
ಮೊನ್ನೆ ಸಂಭವಿಸಿದ ಎರಡು ಅನಾಹುತಗಳು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಬಹುತೇಕ ಸ್ಥಳಗಳು ವಾಹನ ಸವಾರರ ಪಾಲಿಗೆ ಅಪಾಯಕಾರಿಯಾಗಿವೆ.  ಚಾಲನೆಯಲ್ಲಿ ಸ್ವಲ್ಪ ಹೆಚ್ಚು-ಕಡಿಮೆಯಾದರೂ ವಾಹನಗಳು ನೇರವಾಗಿ ಕೆರೆಗೆ ಧುಮುಕುವಂತಹ ಸ್ಥಿತಿಯಲ್ಲಿವೆ. ಇಂತಹ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ, ತಡೆಗೋಡೆ ನಿರ್ಮಾಣ ಮಾಡಲು ಸಂಬಂಧಿಸಿದ ಇಲಾಖೆಗಳಿಗೆ ಆಗುತ್ತಿಲ್ಲ. ಇದಕ್ಕೆ ಅನುದಾನದ ಕೊರತೆಯ ನೆಪವೊಡ್ಡುತ್ತವೆ.  ಹಾಗಾದರೆ ಅಪಾಯ ಸಂಭವಿಸಿ ಅಮಾಯಕರು ಬಲಿಯಾಗಬೇಕೇ, ಸರ್ಕಾರಗಳೇಕೆ ಇಂತಹ ಕೆರೆ ಏರಿಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಜನರು ಪ್ರಶ್ನಿಸುತ್ತಾರೆ.
 ರಸ್ತೆಯಂಚಿನಿಂದ ಕೆರೆಗಳಿಗೆ ವಾಹನಗಳು ಉರುಳಿ ಬಿದ್ದು ಅಮಾಯಕರ ಸಾವು-ನೋವುಗಳು ಸಂಭವಿಸಿದಾಗ ಅಧಿಕಾರಸ್ಥರು ರಾಜ್ಯದಲ್ಲಿರುವ ಅಪಾಯಕಾರಿ ಕೆರೆ ಏರಿ ರಸ್ತೆಗಳ ದುರಸ್ತಿಗೆ ಕ್ರಮಕೈಗೊಳ್ಳಲಾಗುವುದು. ಕೆರೆಯ ಪಕ್ಕದಲ್ಲಿ ತಡೆಗೋಡೆ ನಿರ್ಮಿಸಲಾಗುವುದು. ರಸ್ತೆಗಳ ವಿಸ್ತರಣೆ ಮಾಡಲಾಗುವುದು. ಸೂಚನಾ ಫಲಕ ಅಳವಡಿಸಲಾಗುವುದು ಸೇರಿದಂತೆ ಅನಾಹುತಕ್ಕೆ ಆಸ್ಪದವಾಗದಂತೆ ಎಚ್ಚರವಹಿಸಲಾಗುವುದು ಎಂಬ ಭರವಸೆ ನೀಡುತ್ತಾರೆ. ಆದರೆ ಕ್ರಮೇಣ ಈ ಭರವಸೆಗಳು ಮರೆಯಾಗುತ್ತವೆ. ಮತ್ತೆ ಎಲ್ಲೋ ಕೆರೆಗಳಿಗೆ ವಾಹನಗಳು ಉರುಳಿಬಿದ್ದು ಅಮಾಯಕರು ಬಲಿಯಾದಾಗ ಮತ್ತೆ ಈ ಭರವಸೆಗಳು ನೆನಪಾಗುತ್ತವೆ. ಹಾಗೆಯೇ ಸಂಬಂಧಿಸಿದ ಇಲಾಖೆಗಳು ಕೂಡ ಇತ್ತ ಗಮನಹರಿಸುವುದಿಲ್ಲ.  
ಇನ್ನಾದರೂ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಎಚ್ಚೆತ್ತುಕೊಳ್ಳಬೇಕು. ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ವಿವಿಧೆಡೆ ಅಪಾಯಕಾರಿ ಸ್ಥಿತಿಯಲ್ಲಿರುವ ಕೆರೆ ಏರಿ ರಸ್ತೆಗಳಿಗೆ ಕಾಯಕಲ್ಪ ಕಲ್ಪಿಸಲು ಮುಂದಾಗಬೇಕು. ತಡೆಗೋಡೆ ನಿರ್ಮಾಣ ಸೇರಿದಂತೆ ಕನಿಷ್ಠ ಸುರಕ್ಷಾ ಕ್ರಮಗಳನ್ನು ಅನುಸರಿಸುವ ಮೂಲಕ ಅಮಾಯಕರು ಬಲಿಯಾಗುವುದನ್ನು ತಪ್ಪಿಸಲು ಕಾರ್ಯೋನ್ಮುಖವಾಗಬೇಕಿದೆ.
--------------------------------------

No comments:

Post a Comment