Monday, 23 January 2017

ಶಿವಮೊಗ್ಗ - ಹರಿಹರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕೇಂದ್ರ, ರಾಜ್ಯ ನಿರಾಸಕ್ತಿ
 ಎಚ್ಚೆತ್ತುಕೊಳ್ಳಲಿದ್ದಾರೆಯೇ ಶಿವಮೊಗ್ಗ, ದಾವಣಗೆರೆ ಸಂಸದರು?

  ಸ್ಮಾರ್ಟ್ ಸಿಟಿ ಯೋಜನೆಯಡಿ ಶಿವಮೊಗ್ಗ ಹಾಗೂ ದಾವಣಗೆರೆ ನಗರಗಳು ಆಯ್ಕೆಯಾಗಿವೆ. ಈ ಎರಡು ’ಸ್ಮಾರ್ಟ್ ಸಿಟಿ’ಗಳ ನಡುವೆ ರೈಲ್ವೆ ಸಂಪರ್ಕ ವ್ಯವಸ್ಥೆ ಅತ್ಯವಶ್ಯಕ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾಡಳಿತ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ’ಸ್ಮಾರ್ಟ್ ಸಿಟಿ’ ಯೋಜನೆಯಡಿ ಕೈಗೊಳ್ಳಬಹುದಾದ ಅಭಿವೃದ್ದಿ ಯೋಜನೆಗಳ ಪ್ರಸ್ತಾವನೆಯಲ್ಲಿ ’ಶಿವಮೊಗ್ಗ - ಹರಿಹರ’ ರೈಲ್ವೆ ಮಾರ್ಗ ನಿರ್ಮಾಣದ ಬಗ್ಗೆಯೂ ಪ್ರಸ್ತಾವನೆ ಮಾಡಿದೆಎಂಬ ಅಂಶ ಬೆಳಕಿಗೆ ಬಂದಿದೆ. ಈ ಮಾರ್ಗ ನಿರ್ಮಾಣದಿಂದ ಎರಡು ನಗರಗಳ ನಡುವೆ ಆರ್ಥಿಕಾಭಿವೃದ್ದಿ, ಕೈಗಾರಿಕಾಭಿವೃದ್ದಿಗೆ ಪೂರಕವಾಗಲಿದೆ. ಆದರೆ ಈ ರೈಲು ಯೋಜನೆಗೆ ಬಡಿದಿರುವ ಬಾಲಗ್ರಹಪೀಡೆ ಅಂತ್ಯವಾಗುವುದೇ ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದುಕೊಂಡಿದೆ.  



ಶಿವಮೊಗ್ಗ: ಮಲೆನಾಡು ಹಾಗೂ ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಭಾಗದ ರೈಲ್ವೆ ಸಂಪರ್ಕ ವ್ಯವಸ್ಥೆಗೆ ಹೊಸ ದಿಕ್ಕು ನೀಡಲಿರುವ, ಆರ್ಥಿಕಾಭಿವೃದ್ದಿಗೆ ಪೂರಕವಾಗಿರುವ ಶಿವಮೊಗ್ಗ - ಹರಿಹರ ನಡುವೆ ಹೊಸದಾಗಿ ರೈಲ್ವೆ ಮಾರ್ಗ ನಿರ್ಮಾಣ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರಾಸಕ್ತಿಯಿಂದ ನೆನೆಗುದಿಗೆ ಬಿದ್ದಿದೆ. ಸದ್ಯದ ಮಟ್ಟಿಗೆ ಈ ಯೋಜನೆ ಅನುಷ್ಠಾನವಾಗುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ.
ಕೇಂದ್ರ - ರಾಜ್ಯ ಸರ್ಕಾರ ಶೇ. 50 - 50 ರ ವೆಚ್ಚ ಭರಿಸುವ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನ ಮಾಡಬೇಕಿತ್ತು. ಮಾರ್ಗ ಹಾದು ಹೋಗುವ ಸ್ಥಳ ಗುರುತಿಸಲಾಗಿದೆ. ಕಳೆದೆರೆಡು ರೈಲ್ವೆ ಬಜೆಟ್‌ನಲ್ಲಿ ಈ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುದಾನ ಮೀಸಲಿರಿಸಿಕೊಂಡು ಬರುತ್ತಿದ್ದು, ಪ್ರಸ್ತುತ ಭೂ ಸ್ವಾಧೀನ ಪ್ರಕ್ರಿಯೆ ಹಂತದಲ್ಲಿದೆ.
  ಒಂದೆಡೆ, ರಾಜ್ಯ ಸರ್ಕಾರವು ಸಹಭಾಗಿತ್ವದ ರೈಲ್ವೆ ಯೋಜನೆಗಳಿಗೆ ತನ್ನ ಪಾಲಿನ ಅನುದಾನ ನೀಡಲು ಮೀನಾಮೇಷ ಎಣಿಸುತ್ತಿದೆ. ಇನ್ನೊಂದೆಡೆ, ಕೇಂದ್ರ ರೈಲ್ವೆ ಇಲಾಖೆಯು ತಾನೇ ಘೋಷಿಸಿ ಅನುಮತಿಯಿತ್ತಿರುವ ಈ ಯೋಜನೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಿಕೊಂಡು ಬರುತ್ತಿದ್ದು, ತನಗೂ ಈ ಯೋಜನೆಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದೆ.
ಮತ್ತೊಂದೆಡೆ, ಶಿವಮೊಗ್ಗ ಹಾಗೂ ದಾವಣಗೆರೆ ಭಾಗದ ಜನಪ್ರತಿನಿಧಿಗಳಿಗೂ ಈ ಯೋಜನೆಯ ಕಾರ್ಯಗತದ ಬಗ್ಗೆ ಮೊದಲಿನಷ್ಟು ಆಸಕ್ತಿ ಪ್ರಸ್ತುತ ಇಲ್ಲ. ಈ ಎಲ್ಲ ಕಾರಣಗಳಿಂದ ಮಹತ್ವದ ಯೋಜನೆಯು ನೆನೆಗುದಿಗೆ ಬಿದ್ದಿದ್ದು, ಕಳೆದ ಹಲವು ವರ್ಷಗಳಿಂದ ಭೂ ಸ್ವಾಧೀನ ಪ್ರಕ್ರಿಯೆಯೇ ಪೂರ್ಣಗೊಳ್ಳದಂತಾಗಿದೆ. ಈ ಯೋಜನೆಗೆ ಸಂಬಂಧಿಸಿದ ಕಡತಗಳು ಧೂಳು ಹಿಡಿಯುತ್ತಿವೆ.
 ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಶಿವಮೊಗ್ಗ - ಹರಿಹರ ನಡುವೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕ್ರಮಕೈಗೊಳ್ಳುವಂತೆ ಅಂದು ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರಿಗೆ ಮನವಿ ಮಾಡಿದ್ದರು. ಯೋಜನೆಗೆ ತಗಲುವ ವೆಚ್ಚದಲ್ಲಿ ಶೇ. 50 ರಷ್ಟನ್ನು ರಾಜ್ಯ ಸರ್ಕಾರದವತಿಯಿಂದ ಭರಿಸುವುದರ ಜೊತೆಗೆ ಅಗತ್ಯವಾದ ಭೂಮಿಯನ್ನು ಒದಗಿಸಿ ಕೊಡುವುದಾಗಿ ಭರವಸೆಯಿತ್ತಿದ್ದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ್ದ ಮಮತಾ, ತಾವು ಮಂಡಿಸಿದ ರೈಲ್ವೆ ಬಜೆಟ್‌ನಲ್ಲಿ ಶಿವಮೊಗ್ಗ - ಹರಿಹರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿ, ಸರ್ವೇಗೆ ಆದೇಶಿಸಿದ್ದರು.
 ಅಂದು ಶಿವಮೊಗ್ಗ ನಗರದಿಂದ ಹೊಳಲೂರು, ಹೊನ್ನಾಳಿ, ಮಲೇಬೆನ್ನೂರು ಮಾರ್ಗದ ಸರ್ವೇ ನಡೆದು ಇದಕ್ಕೆ ಕೇಂದ್ರ ರೈಲ್ವೆ ಇಲಾಖೆ ಕೂಡ ಅನುಮೋದನೆ ನೀಡಿತ್ತು. ಇನ್ನೇನು ಮಾರ್ಗ ನಿರ್ಮಾಣ ಕಾರ್ಯ ಆರಂಭವಾಗಬೇಕು ಎನ್ನುವಷ್ಟರಲ್ಲಿಯೇ ಹೊಳಲೂರು ಸುತ್ತಮುತ್ತಲಿನ ಭಾಗದ ನಾಗರಿಕರು ತಮ್ಮ ಭಾಗದಲ್ಲಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಬೀದಿಗಿಳಿದು ಹೋರಾಟ ನಡೆಸಿದ್ದರು. ಇದರಿಂದ ರೈಲ್ವೆ ಇಲಾಖೆಯು ಈ ಮಾರ್ಗ ಕೈಬಿಟ್ಟು ಶಿವಮೊಗ್ಗ ನಗರದ ಸೋಮಿನಕೊಪ್ಪ, ಬಸವಗಂಗೂರು, ಕೊಮ್ಮನಾಳು ಮಾರ್ಗವಾಗಿ ಹರಿಹರಕ್ಕೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸಮೀಕ್ಷೆ ನಡೆಸಿತ್ತು. ಈ ಮಾರ್ಗ ಕಾರ್ಯಸಾಧುವಾಗಲಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಹೊಸ ಮಾರ್ಗ ನಿರ್ಮಾಣಕ್ಕೆ ಅನುಮತಿಯಿತ್ತು, ಅನುದಾನ ಕೂಡ ಬಿಡುಗಡೆ ಮಾಡಿತ್ತು. ಭೂ ಸ್ವಾಧೀನ ಪ್ರಕ್ರಿಯೆಗೆ ಕ್ರಮಕೈಗೊಳ್ಳಲಾಗಿತ್ತು.
  ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಜಿಲ್ಲಾಡಳಿತಗಳು ಈಗಾಗಲೇ ಗುರುತಿಸಿವೆ. ಭೂ ಸ್ವಾಧೀನ ಪ್ರಕ್ರಿಯೆ ಕೂಡ ಆರಂಭಿಸಿತ್ತು., ಇದು ಆರಂಭವಾಗಿ ಸುಮಾರು ಎರಡ್ಮೂರು ವರ್ಷ ಕಳೆಯುತ್ತಾ ಬಂದರೂ ಇಲ್ಲಿಯವರೆಗೂ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಜಮೀನು ಮಾಲಕರಿಗೆ ದರ ನಿಗದಿ ಮಾಡಿಲ್ಲ. ಮತ್ತೊಂದೆಡೆ, ಈ ಯೋಜನೆ ಅನುಷ್ಠಾನವಾಗಲಿದೆಯೇ ಎಂಬ ಅನುಮಾನ ಕೂಡ ಈಗ ಕಾಡಲಾರಂಭಿಸಿದೆ. ಏಕೆಂದರೆ, ರೈಲ್ವೆ ಮಾರ್ಗ ಹಾದು ಹೋಗಲಿದೆ ಎಂಬ ಕಾರಣದಿಂದ ಸಂಬಂಧಿಸಿದ ಭೂ ಮಾಲಕರು ತಮ್ಮ ಜಮೀನು ಪರಭಾರೆ ಮಾಡಲು, ಆಸ್ತಿ ಹಂಚಿಕೆ ಸೇರಿದಂತೆ ಮತ್ತಿತರ ಜಮೀನು ಸಂಬಂಧಿತ ಕೆಲಸ ಕಾರ್ಯ ಮಾಡಿಕೊಳ್ಳಲು ಅಡ್ಡಿಯಾಗಿದೆ. ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ

No comments:

Post a Comment