ನೆನೆಗುದಿಗೆ ಬಿದ್ದ ಪ್ರಮುಖ ರಸ್ತೆಗಳ ಅಗಲೀಕರಣ ಎಂದು?
’ಶಿವಮೊಗ್ಗ ನಗರವು ಕೇಂದ್ರ ಸರ್ಕಾರದ ಪ್ರತಿಷ್ಠಿತ ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆಯಾಗಿದೆ. ಆದರೆ ನಗರದ ಸದ್ಯದ ಟ್ರಾಫಿಕ್ ಸ್ಥಿತಿಗತಿ ಗಮನಿಸಿದರೆ ಇನ್ಯಾವ ರೀತಿಯಲ್ಲಿ ಸ್ಮಾರ್ಟ್ ಸಿಟಿಯಾಗಿ ನಗರ ಅಭಿವೃದ್ದಿಗೊಳ್ಳಲಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ನಿಜವಾಗಿಯೂ ನಗರವನ್ನು ಸ್ಮಾರ್ಟ್ ಸಿಟಿಯಾಗಿ ರೂಪಿಸುವ ಇಚ್ಛಾಶಕ್ತಿ ಆಡಳಿತಗಾರರಿಗಿದ್ದರೆ ಮೊದಲು ಜನಸಂಖ್ಯೆ - ವಾಹನಗಳಿಗೆ ಅನುಗುಣವಾಗಿ ಮೂಲಸೌಕರ್ಯ ಕಲ್ಪಿಸುವುದರತ್ತ ಗಮನಹರಿಸಬೇಕು. ಭವಿಷ್ಯದ ಜನಸಂಖ್ಯೆ, ವಾಹನಗಳಿಗೆ ಅನುಗುಣವಾಗಿ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ಮಾಡಲಿ. ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಬದಿಗಿಟ್ಟು ನಗರದ ಸರ್ವಾಂಗೀಣ ಅಭಿವೃದ್ದಿಯತ್ತ ಜನನಾಯಕರು ಗಮನಹರಿಸಬೇಕು. ವ್ಯವಸ್ಥಿತವಾಗಿ ನಗರದ ಬೆಳವಣಿಗೆಗೆ ಗಮನಹರಿಸಬೇಕು.
ಶಿವಮೊಗ್ಗ, ಜ. 3: ರಾಜ್ಯದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಎರಡನೆಥಿ ಹಂತದ ನಗರಗಳಲ್ಲಿ ಶಿವಮೊಗ್ಗವೂ ಕೂಡ ಒಂದಾಗಿದೆ. ನಗರದ ಜನಸಂಖ್ಯೆ, ವಾಹನ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಆದರೆ ಇದಕ್ಕೆ ಅನುಗುಣವಾಗಿ ಮೂಲಸೌಕರ್ಯಗಳ ಅಭಿವೃದ್ದಿಯಾಗುತ್ತಿಲ್ಲ. ಅದರಲ್ಲಿಯೂ ವಿಶೇಷವಾಗಿ ರಸ್ತೆಗಳ ವಿಷಯದಲ್ಲಂತೂ ನಗರದ ಸ್ಥಿತಿ ಶೋಚನೀಯವಾಗಿದ್ದು, ಇದರಿಂದ ದಿನದಿಂದ ದಿನಕ್ಕೆ ಕೆಲ ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆಯೇ ಅಸಾಧ್ಯವೆನ್ನುವ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ.
ನಗರದ ಜನಸಂಖ್ಯೆ ಹಾಗೂ ವಾಹನ ದಟ್ಟಣೆಗೆ ಅನುಗುಣವಾಗಿ, ಕೆಲ ಪ್ರಮುಖ ರಸ್ತೆಗಳ ಅಭಿವೃದ್ದಿಗೆ ಕಳೆದ ಹಲವು ವರ್ಷಗಳ ಹಿಂದೆಯೇ ಜಿಲ್ಲಾಡಳಿತ ರೂಪುರೇಷೆ ಸಿದ್ದಪಡಿಸಿತ್ತು. ಕೆಲ ಪ್ರಮುಖ ರಸ್ತೆಗಳನ್ನು ಅಗಲೀಕರಣ ಮಾಡುವುದರ ಜೊತೆಗೆ ಮೇಲ್ದರ್ಜೆಗೇರಿಸಲು ನಿರ್ಧರಿಸಿತ್ತು. ಆದರೆ ಸ್ಥಳೀಯ ಜನಪ್ರತಿನಿಧಿಗಳ ಅಸಹಕಾರ, ಅನುದಾನದ ಕೊರತೆ, ರಾಜಕೀಯ ಮೇಲಾಟ ಮತ್ತೀತರ ಕಾರಣಗಳಿಂದ ಅಭಿವೃದ್ದಿ ಪ್ರಸ್ತಾಪ ಅಕ್ಷರಶಃ ನೆನೆಗುದಿಗೆ ಬೀಳುವಂತಾಗಿದೆ.
ಕೆಲ ಪ್ರಮುಖ ರಸ್ತೆಗಳಲ್ಲಿ ವಾಹನಗಳಿರಲಿ ಜನ ಕೂಡ ಓಡಾಡಲು ಸಾಧ್ಯವಾಗದ ಮಟ್ಟಕ್ಕಿವೆ. ಮತ್ತೆ ಕೆಲ ರಸ್ತೆಗಳಲ್ಲಿ ವಾಹನ ದಟ್ಟಣೆ ವಿಪರೀತ ಮಟ್ಟಕ್ಕೆ ತಲುಪಿದ್ದು, ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಇನ್ನೂ ಕೆಲ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳೇ ಇಲ್ಲವಾಗಿವೆ. ಇದರಿಂದ ನಾಗರೀಕರು ರಸ್ತೆಯ ಮೇಲೆಯೇ ಓಡಾಡುವಂತಹ ದುಃಸ್ಥಿತಿಯಿದೆ.
ಮಹಾನಗರ ಪಾಲಿಕೆ ಆಡಳಿತವಾಗಲಿ, ಜಿಲ್ಲಾಡಳಿತವಾಗಲಿ ಅಥವಾ ಸಂಬಂಧಿಸಿದ ಇಲಾಖೆಗಳು ಪ್ರಮುಖ ರಸ್ತೆಗಳ ಅಗಲೀಕರಣದ ಬಗ್ಗೆ ಗಮನಹರಿಸುವ ಗೋಜಿಗೆ ಹೋಗುತ್ತಿಲ್ಲ. ಮತ್ತೊಂದೆಡೆ, ಎಲ್ಲಿ ನಾಗರಿಕರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆಯೋ ಎಂಬ ಕಾರಣದಿಂದ ಜನಪ್ರತಿನಿಧಿಗಳೂ ಕೂಡ ರಸ್ತೆ ಅಗಲೀಕರಣದ ಬಗ್ಗೆ ಯಾವುದೇ ಚಕಾರ ಎತ್ತುತ್ತಿಲ್ಲ. ಇದರಿಂದ ನಗರದ ಅದೆಷ್ಟೋ ರಸ್ತೆಗಳು ಇಂದಿಗೂ 20 - 3.0 ವರ್ಷಗಳ ಹಿಂದೆ ಹೇಗಿದ್ದವೋ ಈಗಲೂ ಅದೇ ಸ್ಥಿತಿಯಲ್ಲಿವೆ. ಆಗಾಗ ಡಾಂಬರು, ತೇಪೆ ಹಾಕುವ ಕೆಲಸವನ್ನಷ್ಟೇ ಮಾಡಲಾಗುತ್ತಿದೆ.
ಕಳೆದ ವರ್ಷ ನಗರದ ಪ್ರಮುಖ ರಸ್ತೆಗಳಲ್ಲೊಂದಾದ, ಅತ್ಯಧಿಕ ಜನ-ವಾಹನ ದಟ್ಟಣೆಯಿರುವ ಕುವೆಂಪು ರಸ್ತೆಯ ಅಗಲೀಕರಣಗೊಳಿಸಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿಯೇ ಪಿಡಬ್ಲ್ಯೂಡಿ ಇಲಾಖೆಯಿಂದ ಪ್ರಸ್ತಾವನೆ ಸಿದ್ಧಪಡಿಸಿ, ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಭೂ ಸ್ವಾದೀನ ಪ್ರಕ್ರಿಯೆ, ರಸ್ತೆ ಅಭಿವೃದ್ದಿಗೆ ಸರಿಸುಮಾರು 80 ಕೋಟಿ ರೂ. ಅನುದಾನ ಕೋರಲಾಗಿತ್ತು. ಆದರೆ ಇಲ್ಲಿವರೆಗೂ ಈ ರಸ್ತೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಅನುಮತಿ ಸಿಗುವುದಿರಲಿ, ನಯಾಪೈಸೆ ಕೂಡ ಬಿಡುಗಡೆಯಾಗಿಲ್ಲ.
ಈ ಬಗ್ಗೆ ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳ ಬಳಿ ಮಾಹಿತಿ ಕೇಳಿದರೆ, ’ಈ ರಸ್ತೆ ನಮ್ಮ ಇಲಾಖೆಗೆ ಸೇರಿದ್ದಲ್ಲ. ಆದರೆ ಈ ರಸ್ತೆಯನ್ನು ತಮ್ಮ ಇಲಾಖೆಯ ಮೂಲಕ ಅಗಲೀಕರಣ ಹಾಗೂ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ನಡೆಸಲು ಪಾಲಿಕೆ ಆಡಳಿತ ನಿರ್ಧರಿಸಿತ್ತು. ಈ ರಸ್ತೆಯಲ್ಲಿ ತೆರವಾಗುವ ಕಟ್ಟಡಗಳ ಮಾಹಿತಿ, ಭೂ ಸ್ವಾಧೀನಕ್ಕೆ ಅಗತ್ಯವಾದ ಅನುದಾನ, ದ್ವಿ ಪಥ ಮಾರ್ಗ ನಿರ್ಮಾಣಕ್ಕೆ ತಗಲುವ ವೆಚ್ಚದ ಬಗ್ಗೆ ವರದಿ ಸಿದ್ದಪಡಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು. ರಸ್ತೆ ಅಭಿವೃದ್ದಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದ್ದಂತೆ ಭೂ ಸ್ವಾಧೀನ ಪ್ರಕ್ರಿಯೆ ನಡೆಸಿ, ಕಾಮಗಾರಿ ಆರಂಭಿಸಲಾಗುವುದು’ ಎಂದು ಹೇಳುತ್ತಾರೆ.
ಆದರೆ ಕಿರಿದಾಗಿರುವ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಅಸಾಧ್ಯ ಎಂಬಂತಾಗಿದೆ. ಪಾದಚಾರಿ ಮಾರ್ಗವಂತೂ ಇಲ್ಲವಾಗಿದ್ದು, ರಸ್ತೆಯೇ ಮೇಲೆಯೇ ಜನರು ಓಡಾಡುವಂತಾಗಿದೆ. ಹಲವೆಡೆ ರಸ್ತೆಯ ಜಾಗ ಒತ್ತುವರಿ ಮಾಡಿಕೊಂಡು ಬೃಹದಾಕಾರದ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ರಸ್ತೆ ಅಗಲೀಕರಣ ಮಾಡುವುದಾಗಿ ಹೇಳುತ್ತಲೇ ಬರಲಾಗುತ್ತಿದೆ. ಆದರೆ ಇಲ್ಲಿಯವರೆಗೂ ಈ ಪ್ರಕ್ರಿಯೆ ನಡೆಸಿಲ್ಲ.
ಗಮನಹರಿಸಲಿ:
ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳ ಅಗಲೀಕರಣದ ಬಗ್ಗೆ ಗಮನಹರಿಸಬೇಕಾಗಿದೆ. ಜಿಲ್ಲಾಡಳಿತದೊಂದಿಗೆ ಸಮಾಲೋಚನೆ ನಡೆಸಿ, ಸರ್ಕಾರದಿಂದ ಸೂಕ್ತ ಅನುದಾನ ದೊರಕಿಸಿ ಕೊಡಬೇಕಾಗಿದೆ. ಇಲ್ಲದಿದ್ದರೆ ಭವಿಷ್ಯದ ದಿನಗಳಲ್ಲಿ ನಗರದ ಹಲವು ರಸ್ತೆಗಳಲ್ಲಿ ವಾಹನಗಳಿರಲಿ, ಜನರೇ ಓಡಾಡಲು ತೊಂದರೆ ಪಡುವಂತಹ ಸ್ಥಿತಿ ಸೃಷ್ಟಿಯಾಗಲಿದೆ ಎಂದು ನಾಗರಿಕರು ಹೇಳುತ್ತಿದ್ದಾರೆ.
ಪೊನ್ನುರಾಜ್ ಜಿಲ್ಲಾಧಿಕಾರಿಯಾಗಿದ್ದ ವೇಳೆ ನಗರದ ಕುವೆಂಪು ರಸ್ತೆ, ಎನ್.ಟಿ.ರಸ್ತೆ, ದುರ್ಗಿಗುಡಿ ರಸ್ತೆ, ಜೈಲ್ ರಸ್ತೆ, ಸವಾರ್ಲೈನ್ ರಸ್ತೆ ಸೇರಿದಂತೆ ಅತ್ಯದಿಕ ಜನ-ವಾಹನ ಸಂಚಾರವಿದ್ದ ಏಳೆಂಟು ರಸ್ತೆ ಹಾಗೂ ಪ್ರಮುಖ ವೃತ್ತಗಳನ್ನು ಅಗಲೀಕರಣಗೊಳಿಸಿ, ಅಭಿವೃದ್ದಿಗೊಳಿಸುವ ಯೋಜನೆ ಸಿದ್ದಪಡಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಿದ್ದರು. ಡಿ.ಸಿ.ಯವರ ಪ್ರಸ್ತಾಪಕ್ಕೆ ಕೆಲವು ರಾಜಕಾರಣಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ವಿ. ಪೊನ್ನುರಾಜ್ ಅವರನ್ನೂ ಕೂಡ ಶಿವಮೊಗ್ಗದಿಂದ ಎತ್ತಂಗಡಿ ಮಾಡಲಾಗಿತ್ತು.
-----------------------------------------------
No comments:
Post a Comment