Wednesday, 25 January 2017

ಕಣ್ಣುತೆರೆಯುವ ಮುನ್ನವೇ ಮಣ್ಣುಪಾಲಾದವು
 ಹೃದಯ ಕಲಕಿದ ತಾಯಿನಾಯಿಯ ಮೂಕರೋದನ



ಅಲ್ಲಿ ಸೇರಿದ್ದವರೆಲ್ಲ ಮೌನವಾಗಿದ್ದರು. ಅವರಲ್ಲಿ ದುಃಖ ತುಂಬಿತ್ತು. ಏಕೆಂದರೆ ತಾಯಿಯ ಮಡಿಲಲ್ಲಿ ಕುಂಯ್‌ಕುಂಯ್ ಗುಡುತ್ತ, ಲೋಕವನ್ನೇ ನೋಡದೆ ಅಮ್ಮನ ಬಿಸಿಯಪ್ಪುಗೆಯಲ್ಲಿದ್ದ  6 ನಾಯಿಮರಿಗಳು ನಾಗರಹಾವಿನ ಬಾಯಿಗೆ ಸಿಲುಕಿ  ಕಣ್ಣುಮುಚ್ಚಿದ್ದವು. ತದೇಕಚಿತ್ತದಿಂದ ಅವರೆಲ್ಲ ಮೃತ ಮರಿಗಳನ್ನು, ತಾಯಿಯ ಆಕ್ರಂದನವನ್ನು ಗಮನಿಸುತ್ತಿದ್ದರು.
ತಾಯಿ ನಾಯಿಯ ಮೂಕರೋದನ ಒಂದೆಡೆಯಾದರೆ, ಇನ್ನೊಂದೆಡೆ ನೆರೆದಿದ್ದವರು ಹಾವಿನ ಮೇಲೆ ದ್ವೇಷ ಕಾರುತ್ತಿದ್ದರು. ತಾಯಿಯ ಕಣ್ಣು ಮಕ್ಕಳನ್ನು ನೋಡುತ್ತ ನೀರುತುಂಬಿಕೊಂಡಿತ್ತು. ಮಕ್ಕಳನ್ನು ಮುಸಿಮೂಸಿ ನೋಡುತ್ತ ಅವರನ್ನು ಲಲ್ಲೆಗರೆಯುತ್ತಿತ್ತು. ಆದರೆ  ಮರಿಗಳು ಆಗಲೇ ಮರಳಿ ಬಾರದ ಲೋಕ ಸೇರಿದ್ದವು.
ಇದು ನಡೆದಿದ್ದು ನಗರದ ಮಾಡರ್ನ್ ಟಾಕೀಸ್ ಪಕ್ಕದಲ್ಲಿರುವ ಪಂಚವಟಿ ಕಾಲನಿಯ ಪಂಚವಟಿ ನಿವಾಸದ ಹಿತ್ತಿಲ್ಲಲ್ಲಿ.
ನಾಲ್ಕಾರು ದಿನದ ಹಿಂದೆಯಷ್ಟೇ 9 ಮರಿಗಳನ್ನು ಹೆತ್ತಿದ್ದ ತಾಯಿ ಆಹಾರ ಅರಸುತ್ತ ಸುತ್ತಮುತ್ತಲೆಲ್ಲೋ ತೆರಳಿದ್ದ ವೇಳೆಯೇ ನಾಗರಾಜನ ಆಗಮನವಾಗಿತ್ತು.  ಚಿಕ್ಕ ಮರಿಗಳಾಗಿದ್ದರಿಂದ ನಾಗರಾಜ ಅವುಗಳನ್ನು ನುಂಗಲು ಯತ್ನ ನಡೆಸಿದ್ದ. ಆದರೆ ಹಾವಿನ ಬಾಯಿಗೆ ಅಷ್ಟು ಸುಲಭದಲ್ಲಿ ಪ್ರವೇಶ ಅಸಾಧ್ಯವಾಗಿತ್ತು. ಏಕೆಂದರೆ ಬಾಯಿಗಿಂತ ಸ್ವಲ್ಪ ಗಾತ್ರದಲ್ಲಿದ್ದವು. ಒಂದು ಮರಿಯನ್ನು ನುಂಗಲು ಹಾವು ಇನ್ನಿಲ್ಲದ ಯತ್ನ ನಡೆಸುತ್ತಿರುವಾಗಲೇ ತಾಯಿ ಧಾವಿಸಿ, ಮಕ್ಕಳು ಸಂಕಟಕ್ಕೆ ಸಿಲುಕಿರುವುದನ್ನು ಕಂಡು ಅರಚಲಾರಂಭಿಸಿತ್ತು. ಎಂದೂ ಕೇಳದ  ವಿಚಿತ್ರ ಧ್ವನಿಯಲ್ಲಿ ನಾಯಿ ಕೂಗುತ್ತಿರುವುದನ್ನು ಕೇಳಿದ ಮನೆಯವರು ಅಲ್ಲಿಗಾಗಮಿಸಿದಾಗ ಮಧ್ಯಮ ಗಾತ್ರದ  ನಾಗರ ಇನ್ನೂ ನುಂಗುವ ಯತ್ನ ನಡೆಸಿಯೇ ಇತ್ತು. ಆದರೆ, ತನ್ನಿಂದ ಇನ್ನು ನುಂಗಲು ಸಾಧ್ಯವಿಲ್ಲ ಎಂದರಿತಾಗ ತಾಯಿ ನಾಯಿಯನ್ನೂ ಹೆದರಿಸಲು ಯತ್ನಿಸಿತು. ಆದರೆ ತಾಯಿ ಹೆದರುವ ಸ್ಥಿತಿಯಲ್ಲಿರದೆ, ಹೆದರಿಸುವ ಆರ್ಭಟದಲ್ಲೇ ಮುನ್ನುಗ್ಗುತ್ತಿತ್ತು. ಏಕೆಂದರೆ ತನ್ನ ಹಸುಳೆಗಳನ್ನು ಅದು ಬಿಟ್ಟುಕೊಡಂತಹ ಸ್ಥಿತಿಯಲ್ಲಿರಲಿಲ್ಲ. ಮಾತೃ ಕರುಳು ಚುರುಕ್ ಎನ್ನುತ್ತಿದ್ದುದ್ದರಿಂದ ಅವುಗಳ ರಕ್ಷಣೆ ಮಾಡುವ ಧೈರ್ಯವನ್ನು ಪ್ರದರ್ಶಿಸುತ್ತಿತ್ತು.
ತಾಯಿನಾಯಿಯ ಪ್ರತಿರೋಧದಿಂದ ಸಿಟ್ಟಿಗೆದ್ದ ನಾಗರಹಾವು 9 ಮರಿಗಳ  ಪೈಕಿ 6 ಮರಿಗಳಿಗೆ ಹೆಡೆಯಿಂದ ಹೊಡೆದು ಸಾಯಿಸಿ, ಅಲ್ಲಿಂದ ತೆರಳಿದೆ.
 ನಂತರ ತಾಯಿ ನಾಯಿಯ  ಸಂಕಟ ನೋಡುಗರ ಕಣ್ಣನ್ನು ತೇವಗೊಳಿಸಿತ್ತು. ಮೃತ ಮಕ್ಕಳನ್ನು ಸುತ್ತುತ್ತ, ಒಮ್ಮೊಮ್ಮೆ ಮುದ್ದಿಸುತ್ತ, ಮಗದೊಮ್ಮೆ ಅವುಗಳ ಪಕ್ಕದಲ್ಲೇ ಮಲಗುತ್ತಿತ್ತು. ಅಲ್ಲಿಯವರೆಗೂ ಮರಿಗಳು ಸಾವಿಗೀಡಾಗಿರುವುದು ಅದರ ಗಮನಕ್ಕೆ ಬಂದಂತಿರಲಿಲ್ಲ.  ಎಷ್ಟು ಮುದ್ದಿಸಿದರು ಯಾವ ಮರಿಯೂ ಚಲಿಸದೆ, ಕುಂಯ್‌ಗುಡದೆ ಮಲಗಿದ್ದವೋ ಆಗ ಬಹುಶಃ ಹೆತ್ತ ಕರುಳು ಚುರುಕ್ ಎಂದಿರಬೇಕು.
ಏಕಾಏಕಿ ಮಕ್ಕಳಿಂದ ದೂರಬಂದು ಬೊಗಳಲಾರಂಭಿಸಿತು. ತನ್ನ ನೆರವಿಗೆ ಯಾರಾದರೂ ಬರುವರೇನೋ ಎಂಬಂತೆ ಕರೆಯುತ್ತಿತ್ತು. ಸ್ವಲ್ಪ ದೂರ ಹೋಗಿ ತನ್ನಷ್ಟಕ್ಕೆ ತಾನೇ ಮುಲುಗುತ್ತಿತ್ತು. ಮತ್ತೆ ಒಂದೇ ನಿಮಿಷದೊಳಗೆ ಎದ್ದು ಬಂದು ಮಕ್ಕಳನ್ನು ಮತ್ತೆ ಮೂಸಿ ನೋಡುತ್ತಿತ್ತು. ಕಣ್ಣೆದುರೇ ಹೆತ್ತ ಮಕ್ಕಳು ವಾರದೊಳಗೆ ಹಾವಿನ ದಾಳಿಗೊಳಗಾಗಿ ಜೀವಬಿಟ್ಟಿದ್ದನ್ನು ಕಂಡು ಆ ತಾಯಿ ಹೃದಯ ಮಮ್ಮಲ ಮರುಗುವ ದೃಶ್ಯ ನೋಡುಗರನ್ನೂ ಮೌನಿಯನ್ನಾಗಿಸಿತ್ತು.
ಹೆತ್ತವರೆದು ಮಕ್ಕಲು ಸಾಯಬಾರದು ಎಂಬ ಮಾತಿದೆ. ಅದರ ಪರಿಣಾಮ ಹೆತ್ತವರ ಮೇಲೆ ಹೇಗಾಗುತ್ತದೆ ಎನ್ನುವದುನ್ನು ಇಲ್ಲಿಯವರೆಗೆ ಮನುಷ್ಯರಲ್ಲಿ ಮಾತ್ರ ಕಂಡಿದ್ದ ನೆರೆದವರಿಗೆ ಮೂಕಪ್ರಣಿಗಳು ಅನುಭವಿಸುವ ನೋವಿನ ಅರಿವಾಗಿತ್ತು. ಅಲ್ಲಿಂದ ಹೊರಡುವಾಗ ಪ್ರತಿಯೊಬ್ಬರ ಮನಸ್ಸೂ ಕಲಕಿ,ಮೃತ ನಾಯಿಮರಿಗಳ ಚಿತ್ರ ಕಣ್ಣಮುಂದೆ ಬರುತ್ತಿತ್ತು.  
................................

No comments:

Post a Comment