Wednesday, 25 January 2017

ಈಶ್ವರಪ್ಪಗೆ  ಟಿಕೆಟ್  ತಪ್ಪಿಸಲು  ಮಾಸ್ಟರ್ ಪ್ಲ್ಯಾನ್




 ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಟಿಕೆಟನ್ನು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ. ಎಸ್. ಈಶ್ವರಪ್ಪ ಅವರಿಗೆ ತಪ್ಪಿಸಲು ಬಿಎಸ್‌ವೈ ಸಕಲ ಸಿದ್ಧತೆ ನಡೆಸುತ್ತಿದೆ. ಇದಕ್ಕ್ಕಾಗಿ ರಾಜ್ಯಸಭಾ ಮಾಜಿ ಸದಸ್ಯ ಆಯನೂರು ಮಂಜುನಾಥ ಅವರ ಬಾಯಿಯಿಂದಲೇ ಹೇಳಿಕೆ ಕೊಡಿಸುವ ಕೆಲಸವನ್ನು ಮಾಡಲಾಗುತ್ತಿದೆ.
 ಶಿವಮೊಗ್ಗ ನಗರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಚರ್ಚೆ ಕೂಡ ಮುನ್ನೆಲೆಗೆ ಬಂದಿದೆ. ಕಳೆದ ಹಲವು ವರ್ಷಗಳಿಂದ ಈ ಕ್ಷೇತ್ರ ಪ್ರತಿನಿಧಿಸಿಕೊಂಡು ಬರುತ್ತಿರುವ ಕೆ.ಎಸ್.ಈಶ್ವರಪ್ಪ ಅವರಿಗೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪಕ್ಷದಲ್ಲಿಯೇ ಪ್ರತಿಸ್ಪರ್ಧಿಗಳು ಹುಟ್ಟಿಕೊಂಡಿದ್ದಾರೆ. ಇವರು ಟಿಕೆಟ್ ತಪ್ಪಿಸಲೆಂಬ ಉದ್ದೇಶದಿಂದಲೇ ತಾನು ಕೂಡ ಅಭ್ಯರ್ಥಿ ಎಂದು ಹೇಳಿಕೊಳ್ಳಲಾರಂಭಿಸಿದ್ದಾರೆ.
ವಿಶೇಷವಾಗಿ  ಯಡಿಯೂರಪ್ಪ ಪಾಳೇಯದಲ್ಲಿ ಗುರುತಿಸಿಕೊಂಡಿರುವ ಆಯನೂರು ಮಂಜುನಾಥ್ ಕ್ಷೇತ್ರದ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೆನೆ ಎಂದು ಘೋಷಿಸಿದ್ದಾರೆ. ಈ ಮೂಲಕ ಕೆ.ಎಸ್.ಇ.ಗೆ ನೇರಾನೇರವಾಗಿ ಟಿಕೆಟ್ ತಪ್ಪಿಸುವ ಕೆಲಸ ಮಾಡಿದ್ದಾರೆ. ಈ ಬಣ ಇನ್ನೂ ಹಲವರನ್ನು ಇದೇ ರೀತಿ ಹುಟ್ಟು ಹಾಕಿ ಈಶ್ವರಪ್ಪ ಅವರಿಗೆ ಟಿಕೆಟ್ ತಪ್ಪಿಸುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಸ್ವತಃ ಬಿಎಸ್‌ವೈ ಹೆಸರು ಚಾಲ್ತಿಯಲಿದೆ, ಮತ್ತೊಮ್ಮೆ ರುದ್ರೇಗೌಡ ಹೆಸರು ತೇಲಿಬರುತ್ತಿದೆ. ಮೊನ್ನೆ ಆಯನೂರು, ನಾಳೆ ಮತ್ತೊಬ್ಬ ನಾಯಕರಿದಂ ತಾನು ಆಕಾಂಕ್ಷಿ ಎಂದು ಹೇಳಿಸುವ ಕೆಲಸವನ್ನು ಮಾಡುವುದು ನಿಶ್ಚಿತ. ಇಂತಹ ಯೋಜನಾಬದ್ಧ ರಾಜಕೀಯವನ್ನು ಬಿಎಸ್‌ವೈ ಬಣದ ಶಿಕಾರಿಪುರದ ವ್ಯಕ್ತಿಯೊಬ್ಬರು ಕುಳಿತಲ್ಲೇ ಮಾಡಿಸುತ್ತಿರುವುದು ಸುಳ್ಳಲ್ಲ.
ಕಳೆದ ಹಲವು ವರ್ಷಗಳಿಂದ ಪಕ್ಷದ ಸಂಘಟನೆಗೆ ಶ್ರಮಿಸಿದ್ದೇನೆ. ಎಂಪಿಯಾದ ಮತ್ತು ಎಂಎಲ್‌ಎ ಆದ ಅನುಭವವಿದೆ. ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ ಎಂದು ಆಯನೂರು ತಮ್ಮ ಬಯೊಡೇಟಾ ವಿವರಿಸಿದ್ದಾರೆ. ಇದನ್ನು ರಾಜ್ಯ ಸಮಿತಿಗೆ ಅಥವಾ ಹೈಕಮಾಂಡ್‌ಗೆ ಅವರು ಕಳುಹಿಸಬೇಕಿತ್ತೇ ವಿನಾ ಶಿವಮೊಗ್ಗದಲ್ಲಿ ವಿವರಿಸುವ ಅವಶ್ಯಕತೆ ಇಲ್ಲವಾಗಿತ್ತು. ಬಿಎಸ್‌ವೈ ಪರ ಮಾತನಾಡಲು ಆಯನೂರು ಮುಂದಾಗುತ್ತಿದ್ದಂತೆಯೇ ವಿವಾದದ ಕಿಡಿ ಇನ್ನಷ್ಟು ಜೋರಾಗುವ ಹಂತ ಕಂಡುಬಂದಿದ್ದರಿಂದ ಹೈಕಮಾಂಡ್ ಮೂಗುದಾರ ಹಾಕಿ ಬಾಯಿಗೆ ಬೀಗ ಹಾಕಿಕುಳಿತುಕೊಳ್ಳಿ ಎಂದು ಇತ್ತಂಡದವರಿಗೂ ಎಚ್ಚರಿಸಿದೆ. ಇದರಿಂದ ಟಿಕೆಟ್ ಆಕಾಂಕ್ಷಿಗಳು ಮೌನಧರಿಸುವಂತಾಗಿದೆ. ಇದರಿಂದ ಈಶ್ವರಪ್ಪಗೆ ಶಿವಮೊಗ್ಗ ಟಿಕೆಟ್ ಕೈ ತಪ್ಪಿಸಲು ಬಿ.ಎಸ್.ವೈ ಪಾಳೇಯ ಮಾಡುತ್ತಿರುವ ಮಾಸ್ಟರ್ ಪ್ಲ್ಯಾನ್‌ಗೆ ಸ್ವಲ್ಪ ತಡೆಬಿದ್ದಿದೆ.
  ಬಿ.ಎಸ್.ವೈ. ರಾಜ್ಯಾಧ್ಯಕ್ಷರಾದ ನಂತರ  ಕೆ.ಎಸ್.ಇ.ಗೆ ಟಿಕೆಟ್ ಕೈ ತಪ್ಪಿಸಬೇಕೆಂಬ ತಂತ್ರಗಾರಿಕೆ ಹೆಚ್ಚಿತ್ತು. ಬಿಜೆಪಿ ಪಾಳೇಯದಲ್ಲಿ ಇದಕ್ಕೆ  ವಿರೋಧವೂ ವ್ಯಕ್ತವಾಗತೊಡಗಿತ್ತು. ಬಿ.ಎಸ್.ವೈ. ಬಲಗೈ ಭಂಟ ಎಸ್.ರುದ್ರೇಗೌಡರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ ಎಂಬ ಮಾತು ಹರಿದಾಡಲಾರಂಭಿಸಿತ್ತು ಅಥವಾ ಆ ಪಾಳೆಯದವರೇ ಹಬ್ಬಿಸಲಾರಂಭಿಸಿದ್ದರೆನ್ನಬಹುದು. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ನಿಯೋಜನೆ ಮಾಡಿದ್ದು ಗುಟ್ಟಾಗಿ ಉಳಿದಿಲ್ಲ. ಬಳಿಕ  ಬಿ.ಎಸ್.ವೈ.ರವರೇ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಕಳೆದೊಂದು ತಿಂಗಳಿನಿಂದ ದಟ್ಟವಾಗಿ ಹಬ್ಬಿದ್ದವು. ಅವರು ಶಿವಮೊಗ್ಗ ನಗರದಲ್ಲಿ ಭರ್ಜರಿಯಾಗಿಯೇ ಸುತ್ತಾಡಲಾರಂಭಿಸಿದ್ದು, ಈ ವದಂತಿಗಳಿಗೆ ಪುಷ್ಠಿ ನೀಡುವಂತಾಗಿತ್ತು.
ಮುಂದಿನ ಚುನಾವಣೆಯಲ್ಲಿ ತಮಗೆ ಟಿಕೆಟ್ ಕೈ ತಪ್ಪಿಸುವ ತಂತ್ರಗಾರಿಕೆಯನ್ನು ವಿರೋಧಿ ಪಾಳೇಯ ನಡೆಸುತ್ತಿರುವುದರ ಮಾಹಿತಿಯನ್ನು ಚೆನ್ನಾಗಿಯೇ ತಿಳಿದುಕೊಂಡಿದ್ದ ಕೆ.ಎಸ್.ಇ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅಸ್ತಿತ್ವಕ್ಕೆ ತಂದು, ಬಿ.ಎಸ್.ವೈ. ವಿರುದ್ದ ತಿರುಗಿ ಬಿದ್ದಿದ್ದರು. ಇದೀಗ ಬ್ರಿಗೇಡ್ ವಿಷಯವು ಇಡೀ ಬಿಜೆಪಿ ಪಾಳೇಯವನ್ನೇ ಹೊತ್ತಿ ಉರಿಯುವಂತೆ ಮಾಡಿದೆ.
ಅಭಯ: ಮತ್ತೊಂದೆಡೆ ಪಕ್ಷದ ಕೆಲವು ಹಿರಿಯ ನಾಯಕರು ಹಾಗೂ ಸ್ಥಳೀಯ ಸಂಘಪರಿವಾರದ ಮುಖಂಡರು ಶಿವಮೊಗ್ಗದಿಂದ ಕಣಕ್ಕಿಳಿಯುವ ಕೆ.ಎಸ್.ಇ. ನಿರ್ಧಾರಕ್ಕೆ ಬೆಂಬಲವಾಗಿ ನಿಂತುಕೊಂಡಿದ್ದಾರೆ. ಅಷ್ಟು ಸುಲಭವಾಗಿ ಈಶ್ವರಪ್ಪ ಅವರಿಗೆ ಟಿಕೆಟ್ ನಿರಾಕರಣೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಅವರು.
ಒಟ್ಟಾರೆ ’ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲೆಸಿದರು’ ಎಂಬ ಮಾತಿನಂತೆ ವಿಧಾನಸಭೆ ಚುನಾವಣೆಗೆ ಇನ್ನೂ ವರ್ಷವಿರುವಂತೆ ಬಿಜೆಪಿಯಲ್ಲಿ ಟಿಕೆಟ್ ಕಲಹ ಆರಂಭವಾಗಿದೆ.
.................................

No comments:

Post a Comment