Monday, 30 January 2017

  ಕೃಷ್ಣ ರಾಜಿನಾಮೆಗೆ ಅಸಮಾಧಾನ ಕಾರಣವೆ? 



 ಕೃಷ್ಣ ಅವರಿಗೆ ವಯಸ್ಸು ಮತ್ತು ಕೈಕೊಟ್ಟ ಆರೋಗ್ಯ ರಾಜಕೀಯದಲ್ಲಿ ಇರಲು ಬಿಡಲಿಲ್ಲ. ಆ ಕಾರಣದಿಂದ ಅಧಿಕಾರದಿಂದ ದೂರವುಳಿಯುವಂತಾಯಿತು. ಸಚಿವರಾಗಿ, ವಿಧಾನಸಭೆಯ ಅಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ, ರಾಜ್ಯಪಾಲರಾಗಿ, ವಿದೇಶಾಂಗ ಸಚಿವರಾಗಿ, ರಾಜ್ಯಸಭೆ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಇದನ್ನು ಗಮನಿಸಿ ಅವರು ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ನೀಡಿರುವ ಹೇಳಿಕೆಯನ್ನು ವಿಶ್ಲೇಷಿಸಿದರೆ, ಅಧಿಕಾರದ ದಾಹ, ಮತ್ತೆ ರಾಜ್ಯಸಭೆ ಸದಸ್ಯರಾಗಬೇಕೆಂಬ ಹಂಬಲ ಇತ್ತೆನ್ನುವುದು ಗೊತ್ತಾಗುತ್ತಿದೆ. ಉತ್ತಮ ಕೆಲಸ ಮಾಡುತ್ತಿದ್ದ ವೇಳೆ ಕೈ ಬಿಟ್ಟಿದ್ದರೆ ಅವರ ಮಾತನ್ನು ಒಪ್ಪಬಹುದಿತ್ತು. ಆದರೆ ಈಗ ಆಡುತ್ತಿರುವ ಅವರ ಮಾತು ಭ್ರಮನಿರಸನದ ಪ್ರತೀಕ ಎಂದು ಹೇಳಬಹುದಾಗಿದೆ. ಪಕ್ಷ ಬಿಡುವಾಗ ಏನಾದರೊಂದು ಕಾರಣ ಹೇಳಬೇಕಾಗುತ್ತದೆ. ಅದಕ್ಕೆ ಕೃಷ್ಣ  ಜನಸಮುದಾಯದ ನಾಯಕರಿಲ್ಲ ಎಂಬ ಮಾತನ್ನಾಡಿದ್ದಾಗಿ ವಿಶ್ಲೇಷಿಸಲಾಗುತ್ತಿದೆ. 



ಕಾಂಗ್ರೆಸ್‌ಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ರಾಜಿನಾಮೆ ನೀಡಿದ್ದಾರೆ. ತಮ್ಮ ರಾಜಿನಾಮೆಗೆ ಸ್ಪಷ್ಟ ಕಾರಣವನ್ನು ಅವರು ಹೇಳಿದ್ದರೂ ಎಲ್ಲೋ ಒಂದು ಮೂಲೆಯಲ್ಲಿ ಅವರಿಗೆ ಅಸಮಾಧಾನ ಇತ್ತೆನ್ನುವದು ಗೊತ್ತಾಗುತ್ತಿದೆ. ಆದರೆ ಕಾಂಗ್ರೆಸ್‌ನಿಂದ ಎಲ್ಲಾ ರೀತಿಯ ಅಧಿಕಾರವನ್ನು ಅನುಭವಿಸಿದವರೊಬ್ಬರು ಆಡುವ ಮಾತನ್ನು ಹೇಳದೆ, ಜನಸಮುದಾಯದ ನಾಯಕರು ಯಾವ ಪಕ್ಷದಲ್ಲೂ ಇಲ್ಲ. ಕೇವಲ ಪರಿಸ್ಥಿತಿ ನಿಭಾಯಿಸುವ ಮ್ಯಾನೇಜರ್‌ಗಳಿದ್ದಾರೆ ಎನ್ನುವ ಮೂಲಕ ಇದನ್ನು ಹೊರಹಾಕಿದ್ದಾರೆ.
ಕೃಷ್ಣ ಅವರಿಗೆ ಸಕ್ರಿಯ ರಾಜಕಾರಣದಲ್ಲಿ ಇರಲು ಅವರ ವಯಸ್ಸು 84 ಸಹಕರಿಸಲಿಲ್ಲ. ಇದರೊಟ್ಟಿಗೆ ರಾಜಕೀಯಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆನ್ನುವ ಮಾತು ಇತ್ತೀಚಿನ ವರ್ಷಗಳಲ್ಲಿ ಎಲ್ಲ ಪಕ್ಷಗಳಲ್ಲೂ ಕೇಳಿಬರುತ್ತಿದೆ. ಕಾಂಗ್ರೆಸ್‌ನಲ್ಲಂತೂ ರಾಹುಲ್ ಗಾಂಧಿ ಯುವಕರಿಗೆ ಸಾಕಷ್ಟು ಮಣೆ ಹಾಕುತ್ತಿದ್ದಾರೆ. ಇದಕ್ಕೆ ಸರಿಯಾಗಿ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಸಕ್ರಿಯರಾಗಿದದಾರೆ. ಇವೆಲ್ಲವೂ ಹಲವು ಹಳಬರು ನಿವೃತ್ತಿಯಾಗುವಂತೆ ಮಾಡುತ್ತಿವೆ.
ಕರ್ನಾಟಕದಲ್ಲಿ ಕೃಷ್ಣ ಒಕ್ಕಲಿಗ ಸಮುದಾಯದ ನಾಯಕ ಎನ್ನುವುದಕ್ಕಿಂತಲೂ ಉತ್ತಮ ಆಡಳಿತಗಾರರಾಗಿ, ಸಕಾರಾತ್ಮಕ ರಾಜಕೀಯ ನಿಲುವಿನಿಂದ ರಾಜಕೀಯದ ಘನತೆಯನ್ನು ಎತ್ತಿಹಿಡಿದವರು. ಕ್ರಿಯಾಶೀಲ ಮತ್ತು ಎಲ್ಲೂ ಹೆಸರುಕೆಡಿಸಿಕೊಳ್ಳದ ವ್ಯಕ್ತಿಯಾಗಿದ್ದರು. ಮುಖ್ಯಮಂತ್ರಿಯಾದ ಹುದ್ದೆಯ ನಂತರ ಅಧಿಕಾರದ ವಿವಿಧ ಮಜಲುಗಳನ್ನು ಏರುತ್ತಾ ಹೋದವರು. ಇಳಿವಯಸ್ಸು ರಾಜಕೀಯ ನಿವೃತ್ತಿಗೆ ಕಾರಣವಾಗುವಂತೆ ಮಾಡಿದ್ದು ಸುಳ್ಳೇನಲ್ಲ. ಈ ಸಂದರ್ದಲ್ಲಿ ಹಿರಿಯ ನಾಯಕನಾಗಿ ಕೊಟ್ಟಂತಹ ಜವಾಬ್ದಾರಿಯನ್ನು ನಿಭಾಯಿಸುತ್ತ ಸಲಹೆ-ಸೂಚನೆ ಕೊಡುತ್ತಾ ಗಳಿಸಿದ ಹೆಸರನ್ನು ಉಳಿಸಿಕೊಳ್ಳುವ ಕೆಲಸವನ್ನು ಮಾಡಿದ್ದರು.
ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಹಿಂದುಳಿದ ವರ್ಗದ ಇನ್ನೊಬ್ಬ ನಾಯಕ ಮುಖ್ಯಮಂತ್ರಿಯಾಗಿರುವುದು ಅವರಿಂದ ಸಹಿಸಿಕೊಳ್ಳಲಾಗಲಿಲ್ಲ.ಇನ್ನೊಂದೆಡೆ ತನಗೂ ಅಧಿಕಾರವಿರಲಿಲ್ಲ. ರಾಜ್ಯಸಭೆ ಸದಸ್ಯ ಮಾತ್ರವಾಗಿದ್ದರು. ಸಿದ್ದು ಜನಪ್ರಿಯವಾಗುವುದನ್ನು ಸಹಿಸದೆ ಹೈಕಮಾಂಡ್ ಅಂಗಳಕ್ಕೆ ಹಲವು ಬಾರಿ ಗುಟ್ಟಾಗಿ ದೂರು ಒಯ್ದಿದ್ದನ್ನು ಯಾರೂ ಮರೆತಿಲ್ಲ.
ಇಂತಹ ಸನ್ನಡತೆಯ, ಸದ್ವಿಚಾರದ ರಾಜಕಾರಣಿಗೆ ಅಧಿಕಾರದ ಆಸೆ ಏಕೆ ಬೆನ್ನುಹತ್ತಿತು ಎನ್ನುವುದು ಅರ್ಥವಾಗದ ವಿಚಾರ. ರಾಜಕೀಯದಲ್ಲಿ ನಿವೃತ್ತಿ ವಯಸ್ಸು ಎನ್ನುವುದು ಇಲ್ಲದಿರುವುದು ಇಂತಹ ಅವಘಡಕ್ಕೆ ಕಾರಣವಾಗುತ್ತಿದೆ. ಪ್ರಸ್ತುತ ಸಂದರ್ಭವನ್ನು ಗಮನಿಸಿದಾಗ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಒಂದೂವರೆ ವರ್ಷವಿದೆ. ಈಗ ಪಕ್ಷಕ್ಕೆ ರಾಜಿನಾಮೆ ನೀಡಿ ಹಾನಿ ಮಾಡುವುದರ ಹಿಂದೆ ಏನೋ ಉದ್ದೇಶವಿದೆ ಎಂದೇ ಭಾವಿಸಬೇಕಾಗುತ್ತದೆ. ಕಾಂಗ್ರೆಸ್‌ನಲ್ಲಿ ಒಕ್ಕಲಿಗ ಸಮುದಾಯಕ್ಕೆ ಹೇಳಿಕೊಳ್ಳುವಂತಹ ನಾಯಕರಿಲ್ಲ. (ಡಿ. ಕೆ. ಶಿವಕುಮಾರ್ ಹೊರತುಪಡಿಸಿ)  ಇದ್ದಕ್ಕಿದ್ದಂತೆ ರಾಜಕೀಯದ ಮೇಲೆ ವೈರಾಗ್ಯ ಬಂದವರಂತೆ ಕಾಂಗ್ರೆಸ್‌ಗೆ ರಾಜಿನಾಮೆ ಕೊಟ್ಟು ಸುಮ್ಮನಿರಬಹುದಿತ್ತು. ಅದನ್ನು ಬಿಟ್ಟು ಸಕ್ರಿಯವಾಗಿರುತ್ತೇನೆ ಎಂದಿದ್ದಾರೆ ಕೃಷ್ಣ. ಕಾಂಗ್ರೆಸ್‌ನಲ್ಲಿ ಅವರು ಸಕ್ರಿಯರಾಗಲು ಸಾಧ್ಯವಿಲ್ಲ, ಇನ್ನೊಂದು ಪಕ್ಷ ಸೇರುತ್ತೇನೆ ಎಂಬ ಸಂದೇಶವಿರಬಹುದೇ? ಆದರೆ ಯಾವ ಪಕ್ಷದವರೂ ಇಳಿವಯಸ್ಸಿನಲ್ಲಿ ಇವರಿಂದ ಲಾಭ ನಿರೀಕ್ಷಿಸಲು ಸಾಧ್ಯವಿಲ್ಲ.
ಕೃಷ್ಣ ಅಸಮಾಧಾನಕ್ಕೆ ಹಲವು ಕಾರಣಗಳು:
ಕಳೆದ ರಾಜ್ಯಸಭೆ ಚುನಾವಣೆಯಲ್ಲಿ ಕೃಷ್ಣ ಅವರಿಗೆ ಪಕ್ಷ ಟಿಕೆಟ್ ಕೊಟ್ಟು ಮುಂದುವರೆಸಲಿಲ್ಲ. ಅವರ ಬದಲಿಗೆ ಪ್ರೊ. ರಾಜೀವ್ ಗೌಡ ಅವರನ್ನು ಗೆಲ್ಲಿಸಲಾಯಿತು.  ರಾಜ್ಯ ಕಾಂಗ್ರೆಸ್‌ನಲ್ಲಿ ಅವರು ಹಿರಿಯ ನಾಯಕರಾಗಿದ್ದರು. ಆದರೆ ಯಾವುದೇ ಹುದ್ದೆ ಇರಲಿಲ್ಲ. ವಿದೇಶಾಂಗ ಸಚಿವರಾದಾಗ ಹಠಾತ್ ಆ ಸ್ಥಾನದಿಂದ ಇಳಿಸಲಾಯಿತೆಂಬ ಬೇಸರ ಅವರಲ್ಲಿದೆ. ಕಾರ್ಯ ಕಾರಿಣಿ ಸದಸ್ಯರಾದರೂ ತನಗೆ ಮನ್ನಣೆ ಇಲ್ಲ, ನಿರ್ಲಕ್ಷಿಸಲಾಗುತ್ತಿದೆ ಎಂಬ ಭಾವನೆ ಅವರಲ್ಲಿ ಮನೆ ಮಾಡಿತ್ತು. ಆದರೆ ಇದನ್ನು ಎಲ್ಲೂ ಬಹಿರಂಗಗೊಳಿಸಿರಲಿಲ್ಲ ಅಥವಾ ಬಂಡಾಯ ಮನೋಭಾವ ತಾಳಲಿಲ್ಲ. ಈಗ ಪ್ರಬಲವಾಗಿ ಕೇಳಿಬರುತ್ತಿರುವ ಅಂಶವೆಂದರೆ, ಉಪರಾಷ್ಟ್ರಪತಿ ಹುದ್ದೆಗೆ ಕೃಷ್ಣ ಅವರನ್ನು ನೇಮಿಸುವ ಚಿಂತನೆ ನಡೆದಿದೆ ಎನ್ನುವುದು. ಆದರೆ ಇದನ್ನು ಒಪ್ಪುವುದು ತುಸು ಕಷ್ಟ ಎನ್ನಬಹುದು. ಏಕೆಂದರೆ ಸಜ್ಜನ ಮತ್ತು ಸಚ್ಚಾರಿತ್ರ್ಯದ ರಾಜಕಾರಣ ಮಾಡಿ ಹೆಸರುಗಳಿಸಿರುವ ಕೃಷ್ಣ, ಈ ವಯಸ್ಸಿನಲ್ಲಿ ಅಧಿಕಾರದ ಆಸೆಗೆ ಪಕ್ಷ ತ್ಯಜಿಸುವರೇ ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕಿದೆ. ಅವರ ಇಲ್ಲಿಯವರೆಗಿನ ನಡೆ-ನುಡಿ  ಇದನ್ನು ಒಪ್ಪುವಂತೆ ಮಾಡುತ್ತಿಲ್ಲ.
ತಮ್ಮ ಸುದೀರ್ಘ ರಾಜಕೀಯ ಅನುಭವದಿಂದ ಬೌದ್ಧಿಕ ಸಂಪನ್ಮೂಲದ ವ್ಯಕ್ತಿಯಾಗಿ ಅವರು ದೇಶದಲ್ಲಿ ಮಿಂಚಬಹುದಿತ್ತು. ಆದರೆ ಇಳಿವಯಸ್ಸಿನಲ್ಲೂ ಅಧಿಕಾಎ ಸಿಕ್ಕಿದ್ದರಿಂದಲೋ ಏನೋ ಕೃಷ್ಣ ಅದಕ್ಕೆ ಮುಂದಾಗಲಿಲ್ಲ. ಹೋಗಲಿ, ತಮಗೆ ಏನೂ ಅಧಿಕಾರ ಸಿಗಲಿಲ್ಲ ಎಂದರೆ ಸುಮ್ಮನಿರಬಹುದಿತ್ತು. ಸಿದ್ದರಾಮಯ್ಯ ಸಿಎಂ ಆದ ನಂತರ ಸುಮ್ಮನಿದ್ದವರು ಅಧಿಕಾರಾವಧಿ ಮುಗಿಯುತ್ತಾ ಬಂದಹಾಗೆ ರಾಜಿನಾಮೆ ನೀಡುತ್ತಿರುವ ರಹಸ್ಯ ಏನೆನ್ನುವುದು ಗೊತ್ತಾಗುತ್ತಿಲ್ಲ.
ಕಾಂಗೆಸ್‌ಗೆ ಸಹಜವಾಗಿಯೇ ಕೃಷ್ಣ ರಾಜಿನಾಮೆ ಸುದ್ದಿ ಶಾಕ್ ನೀಡಿದೆ. ಏಕೆಂದರೆ ಇಂತಹ ಹಿರಿಯ ನಾಯಕ ಪಕ್ಷಕ್ಕೆ ಮಾರ್ಗದರ್ಶನ ಮಾಡುತ್ತ ಇರುತ್ತಾರೆ ಎಂದು ಎಲ್ಲರೂ ತಿಳಿದಿದ್ದರು.  ಆದರೆ ರಾಜಿನಾಮೆ ಪರಿಣಾಮ ಆಗಲಿದೆಯೇ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕು. ಇನ್ನೊಂದೆಡೆ, ಪಕ್ಷ ತನಗೆ ಎಲ್ಲವನ್ನೂ ಕೊಟ್ಟಿದೆ ಎನ್ನುತ್ತಾರಾದರೂ ತನ್ನ ರಾಜಿನಾಮೆಯಿಂದ ಮತ್ತೆ ಹಾನಿ ಆಗುತ್ತದೆ ಎನ್ನುವುದನ್ನು ಅವರು ಮರೆತಿದ್ದೇಕೆ? ಅಧಿಕಾರ ಪಡೆದ ಪಕ್ಷಕ್ಕೆ ನಷ್ಟವಾಗುತ್ತದೆ ಎನ್ನುವುದಾದರೆ ಸುಮ್ಮನಿರಬಹುದಿತ್ತಲ್ಲವೇ ? ಇವೆಲ್ಲ ಕೃಷ್ಣ ಅವರು ಸೂಕ್ಷ್ಮ  ಸಂವೇದನೆಯನ್ನು ಕಳೆದುಕೊಂಡಂತೆ ತೋರಿಸುತ್ತವೆ.
ಒಟ್ಟಿನಲ್ಲಿ, ಸಂಘಟನೆ ದೃಷ್ಟಿಯಿಂದ ಕೃಷ್ಣ ರಾಜಿನಾಮೆಯಿಂದ ಕಾಂಗ್ರೆಸ್‌ಗೆ ತೊಂದರೆಯಾಗದು, ಆದರೆ ಪಕ್ಷದ ವರ್ಚಸ್ಸಿಗೆ ಹಾನಿ ಆಗಲಿದೆ.
..................................



No comments:

Post a Comment