Friday, 6 January 2017


ಜೀವಹಾನಿಯಾಗುತ್ತಿದ್ದರೂ ಹೋರಿ ಸ್ಪರ್ಧೆಗೆ ಇಲ್ಲ ತಡೆ

 ಹೋರಿ ಬೆದರಿಸುವ ಸ್ಪರ್ಧೆಗಳಲ್ಲಿ ನಡೆಯುವ ಅನಾಹುತಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಬೇಕಾಗಿದೆ. ಏಕೆಂದರೆ, ಈ ವರ್ಷ ಮೂವರು ಬಲಿ: 15ಕ್ಕೂ ಹೆಚ್ಚು ಜನರಿಗೆ ಇರಿತದಿಂದ ಗಾಯಗೊಂಡಿದ್ದಾರೆ. ಈ ಹಿಂದೆ ಜಿಲ್ಲಾಡಳಿತ ಸ್ಪರ್ಧೆ ಆಯೋಜಿಸುವವರಿಗೆ ವಿಧಿಸಿದ್ದ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬೇಕಾಗಿದೆ. ನಿಯಮ ಪಾಲನೆ ಮಾಡದವರ ವಿರುದ್ದ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸಬೇಕಿದೆ. 


ಶಿವಮೊಗ್ಗ ಜಿಲ್ಲೆಯಲ್ಲಿ  ಹೋರಿ ಬೆದರಿಸುವ ಸ್ಪರ್ಧೆಯ ಕ್ರೇಜ್ ಹೆಚ್ಚುತ್ತಿದೆ. ಇದರೊಟ್ಟಿಗೆ ಅಲ್ಲಿ ಸಾವು-ನೋವು ಸಹ ಸಂಭವಿಸುತ್ತಿದೆ. ಇದು ಜಾನಪದರಿಂದ ಬೆಳೆದುಬಂದಿದ್ದರೂ  ಜೀವಹಾನಿ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಅಪಾಯಕಾರಿ. ಹಾಗಾಗಿ ನಿಷೇಧಿಸಬೇಕೆಂಬ ಕೂಗೆದ್ದಿದೆ. ಆದರೆ ಇನ್ನೂ ಅಧಿಕೃತವಾಗಿ ನಿಷೇಧಿಸಿಲ್ಲ. ಆದ್ದರಿಂದ ಈ ಕ್ರೀಡೆ ನಡೆಸುವವರು  ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆಯಬೇಕಿದೆ.
ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಎರಡು ಸಂದರ್ದಲ್ಲಿ ನಡೆಯುತ್ತದೆ. ದೀಪಾವಳಿ ಹಬ್ಬದ ನಂತರ ಜಿಲ್ಲೆಯ ವಿವಿಧೆಡೆ ಇದನ್ನು ಮೊದಲ ಬಾರಿಗೆ ಆಯೋಜಿಸಲಾಗುತ್ತದೆ.  ಎರಡನೆಯ ಬಾರಿ ಸಂಕ್ರಾಂತಿ ಹಬ್ಬದ ಸುತ್ತಮುತ್ತ ನಡೆಯುತ್ತದೆ. ಇದನ್ನು ಎರಡನೆಯ ಹಟ್ಟಿಹಬ್ಬ ಎಂದು ಕರೆಯಲಾಗುತ್ತದೆ. ಹೋರಿ ಬೆದರಿಸುವ ಸ್ಪರ್ಧೆಗಳು ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಸ್ಪರ್ಧೆಗಳಲ್ಲಿ ಭಾಗವಹಿಸುವವರ ಪ್ರಮಾಣ ಏರಿಕೆಯಾಗುತ್ತಿದೆ.  ಇಷ್ಟೇ ಏಕೆ, ಇದರ ಬಹುಮಾನವಾಗಿ ಕಾರು, ಬೈಕುಗಳನ್ನು ನೀಡಲಾಗುತ್ತದೆ.
ಇದರಿಂದ ಈ ಸ್ಪರ್ಧೆ ಅಂತರ್‌ಜಿಲ್ಲಾ ಮಟ್ಟದಲ್ಲಿ ನಡೆಯಲಾರಂಭಿಸಿದೆ. ಶಿವಮೊಗ್ಗ ಗ್ರಾಮಾಂತರ, ಸೊರಬ, ಶಿಕಾರಿಪುರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಇದಕ್ಕೆ ಅಕ್ಕಪಕ್ಕದ ಹಾವೇರಿ, ದಾವಣಗೆರೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯ ಹೋರಿಗಳನ್ನು ಸ್ಪರ್ಧೆಗೆ ತರಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಇದು ರಂಗೇರುತ್ತಿದೆ.
ಕಳೆದ ದೀಪಾವಳಿಯಿಂದೀಚೆ ಮೂವರು ಈ ಕ್ರೀಡೆಗೆ ಬಲಿಯಾಗಿದ್ದಾರೆ  ಶಿಕಾರಿಪುರದ ಚುರ್ಚುಗುಂಡಿಯಲ್ಲಿ ಹೋರಿಯಡಿ ವ್ಯಕ್ತಿಯೊಬ್ಬ ಸಿಲುಕಿ ಗಾಯಗೊಂಡ ಘಟನೆ ಸಹ ಸಂಭವಿಸಿದೆ. ಶಿವಮೊಗ್ಗ ತಾಲೂಕಿನ ಕುಂಸಿ ಹಾಗೂ ಹಾರ‌್ನಳ್ಳಿ ಗ್ರಾಮಗಳಲ್ಲಿ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿತದಿಂದ ಐದರಿಂದ ಆರು ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಗಾಯಾಳುಗಳನ್ನು ಆಯನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.  ಶಿಕಾರಿಪುರ ಹಾಗೂ ಶಿವಮೊಗ್ಗ ತಾಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಓರ್ವ ಮೃತಪಟ್ಟು, ಐದಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಜನವರಿ 2ರಂದು ಆನವಟ್ಟಿ ಸಮೀಪದ ತತ್ತೂರಿನಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಒಬ್ಬ ಬಾಲಕ ಮತ್ತು ಒಬ್ಬ ಯುವಕ ಪ್ರಾಣ ತೆತ್ತಿದ್ದಾರೆ.  9 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಕೆಲವರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕ್ರೀಡೆ ಆಯೋಜಿಸುವವರಿಗೆ ಪೊಲೀಸ್ ಇಲಾಖೆ ಅನುಮತಿ ಕೊಡುತ್ತಿಲ್ಲ. ಆದ್ದರಿಂದ ಹೇಳಕೇಳದೆಯೇ ಕ್ರೀಡೆ ನಡೆಸುತ್ತಾರೆ. ಪೊಲೀಸರು ನೋಟೀಸ್ ನೀಡಿದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ತತ್ತೂರು ಘಟನೆಯೇ ಇದಕ್ಕೆ ಸಾಕ್ಷಿ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು  ಆಯೋಜಕರು ಕೈಗೊಳ್ಳುತ್ತಿಲ್ಲ.
ಅನುಮತಿ ಕಡ್ಡಾಯ:
ಇತ್ತೀಚಿನ ವರ್ಷಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆಗಳು ಅಪಾಯಕಾರಿಯಾಗಿ ಪರಿಣಮಿಸುತ್ತಿರುವುದು ಹಾಗೂ ಸಾವು-ನೋವುಗಳು ಹೆಚ್ಚುತ್ತಿರುವುದನ್ನು ಮನಗಂಡಿದ್ದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು, ಸ್ಪರ್ಧೆ ಆಯೋಜನೆ ಮಾಡುವವರು ಕಡ್ಡಾಯವಾಗಿ ಸ್ಥಳೀಯ ಪೊಲೀಸ್ ಠಾಣೆಯಿಂದ ಅನುಮತಿ ಪಡೆದುಕೊಳ್ಳಬೇಕೆಂದು ಆದೇಶಿಸಿತ್ತು. ಹಾಗೆಯೇ ಅನಾಹುತಕ್ಕೆ ಆಸ್ಪದವಾಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಮಾಡುವಂತೆ ಆಯೋಜಕರಿಗೆ ಸೂಚಿಸಿತ್ತು. ಸ್ಪರ್ಧೆಗಳ ಬಗ್ಗೆ ಗಮನಹರಿಸುವಂತೆ ತಾಲೂಕು ಆಡಳಿತಗಳಿಗೂ ನಿರ್ದೇಶನ ನೀಡಲಾಗಿತ್ತು. ಮತ್ತೊಂದೆಡೆ, ಸ್ಥಳೀಯ ಪೊಲೀಸರಾಗಲಿ, ತಾಲೂಕು ಆಡಳಿತದ ಅಧಿಕಾರಿಗಳಾಗಲಿ ಅನುಮತಿ ಪಡೆಯದೆ ಆಯೋಜಿಸುವ ಸ್ಪರ್ಧೆಗಳನ್ನು ತಡೆಯುವ ಗೋಜಿಗೆ ಹೋಗುತ್ತಿಲ್ಲ. ಎಲ್ಲಿ ಜನರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆಯೋ ಎಂಬ ಆತಂಕದಿಂದ ಸುಮ್ಮನಾಗುತ್ತಿದ್ದಾರೆ.
ತಾವು ಹಲವು ದಶಕಗಳಿಂದ ಸ್ಪರ್ಧೆ ಆಯೋಜಿಸಿಕೊಂಡು ಬರುತ್ತಿದ್ದೇವೆ. ಈಗೇಕೆ ಪೊಲೀಸರ ಅನುಮತಿ ಪಡೆದುಕೊಳ್ಳಬೇಕು ಎನ್ನುವುದು ಆಯೋಜಕರ ಪ್ರಶ್ನೆ.
ನಿಷೇಧಿಸಲಿ:
ಹೋರಿಗಳು ಓಡುವಾಗ ಗಾಬರಿಯಿಂದ ಜನರ ಮೈಮೇಲೆ ನುಗ್ಗುವುದರಿಂದ ಸರ್ವೇಸಾಮಾನ್ಯವಾಗಿ ನೂಕುನುಗ್ಗಲು, ಕಾಲ್ತುಳಿತ, ಸಾವು ಉಂಟಾಗುತ್ತದೆ. ಸಾವು-ನೋವುಗಳು ಸಂಭವಿಸುತ್ತ್ತಿವೆ. ಇನ್ನೂ ಎಷ್ಟು ಸಾವು ಸಂಭವಿಸಬೇಕು ಇದನ್ನು ನಿಲ್ಲಿಸಲು? ಈ ಹಿನ್ನೆಲೆಯಲ್ಲಿ ಆಯೋಜಕರಿಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ಹಾಗೂ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಬೇಕಾಗುತ್ತದೆ. ಇದು ಅನಿವಾರ್ಯ ಕೂಡ.
ಜನರ ಜೀವದ ಜೊತೆ ಆಡುವ ಇಂತಹ ಸ್ಪರ್ಧೆ ನಿಷೇಧವಾಗಬೇಕಿದೆ. ಆಯೋಜಕರಿಗೆ ಯಾವ ಕಾರಣಕ್ಕೂ ಸ್ಪರ್ಧೆ ನಡೆಸದಂತೆ ಸೂಚಿಸಬೇಕು. ಜಿಲ್ಲೆಯ ಮಟ್ಟಿಗೆ ಈ ಸಮಸ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಪ್ರತಿ ವರ್ಷ ಅಮಾಯಕರು ಇದಕ್ಕೆ ಬಲಿಯಾಗುತ್ತಿರುವುದರಿಂದ ನಿಲ್ಲಿಸುವತ್ತ ಕ್ರಮ ಜರುಗಿಸಲೇಬೇಕಿದೆ.

ಬಾಕ್ಸ್
ಎಷ್ಟೋ ಕಡೆ ಸ್ಪರ್ಧೆ ಆಯೋಜಕರು ಅನುಮತಿ ಪಡೆಯುವುದಿರಲಿ, ಕನಿಷ್ಠ ಸುರಕ್ಷತಾ ಕ್ರಮಗಳ ಪಾಲನೆ ಕೂಡ ಮಾಡುತ್ತಿಲ್ಲವೆಂಬ ಮಾಹಿತಿ ಸ್ವತಃ ಅಧಿಕಾರಿಗಳ ವಲಯದಿಂದಲೇ ಕೇಳಿಬರುತ್ತ್ತಿದೆ. ಕೆಲವೊಮ್ಮೆ ಈ ಬಗ್ಗೆ ಸಂಬಂಧಿಸಿದವರಿಗೆ ತಿಳಿಹೇಳಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ತಲತಲಾಂತರದಿಂದ ಸ್ಪರ್ಧೆ ಆಯೋಜನೆ ಮಾಡಿಕೊಂಡು ಬರುತ್ತಿದ್ದೇವೆ. ಈಗೇಕೆ ಅನುಮತಿ ಪಡೆಯಬೇಕು ಎಂದು ಕೆಲವರು ಪ್ರಶ್ನಿಸುತ್ತಾರೆ.  ಅನುಮತಿ  ಕುರಿತಂತೆ ತಹಶೀಲ್ದಾರ್‌ಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿ, ಸ್ಪರ್ಧೆಗಳಲ್ಲಿ ಕಟ್ಟುನಿಟ್ಟಿನ ಸುರಕ್ಷಾ ಕ್ರಮಗಳ ಪಾಲನೆ ಮಾಡುವಂತೆಯೂ ಜಿಲ್ಲಾಡಳಿತ ಆದೇಶಿಸಿದೆ. ನಿಯಮ ಉಲ್ಲಂಘಿಸುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆಯೂ ಸೂಚಿಸಿದೆ. ಆದರೂ ಇದು ಪಾಲನೆಯಾಗುತ್ತಿಲ್ಲ. ನಿಯಮ ಪಾಲನೆ ಮಾಡುವಂತೆ ಆಯೋಜಕರ ಮನವೊಲಿಸುವುದು ದೊಡ್ಡ ಸವಾಲಿನ ಕೆಲಸವಾಗಿದ್ದು, ಕಿರಿಕಿರಿಯಾಗಿ ಪರಿಣಮಿಸುತ್ತಿದೆ ಎನ್ನುತ್ತಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು.
---------------------------------------------

No comments:

Post a Comment